ಆ ದಿನ ಡಿಸೆಂಬರ್ ತಿಂಗಳ ಒಂದು ಶನಿವಾರ. ಬೆಳಗಿನ ಜಾವ ಸವಿಕನಸಿನಲ್ಲಿ ಮುಳುಗಿ ತೇಲುತ್ತಿದ್ದ ರವಿಪ್ರತಾಪನಿಗೆ ದಿಗ್ಗನೆ ಎಚ್ಚರ ಆಯಿತು. ಶಾಲೆಗೆ ತಡವಾಗಿರಬಹುದೆಂದು ಗಾಬರಿಯಾಗಿ ಎಚ್ಚರ ಮಾಡಿಕೊಂಡವನೇ ವೇಗವಾಗಿ ಕೈ ಮಸೆಯುತ್ತ “ಕರಾಗ್ರೇ ವಸತೇ ಲಕ್ಷ್ಮಿ ….‘’ – ಪ್ರಾರಂಭಿಸಿದ. ಕೈ ಬಿಸಿಯಾದುದನ್ನು ಕಂಡು ಅಚ್ಚರಿ ಆಯಿತು. ಚಳಿಗೆ ಹಾಯೆನಿಸಿತು. ಬೆನ್ನಲ್ಲೇ ಆಲೋಚನೆಯೊಂದು ತೂರಿಬಂದಿತು. “ಕೈ ಉಜ್ಜಿದರೆ ಅದೇ ಕೈಗಳು ಬಿಸಿಯಾದುದೇಕೆ?’’1. ಉತ್ತರ ಹುಡುಕಲು ವ್ಯವಧಾನವಿಲ್ಲದೆ ಎದ್ದು ಹಾಸಿಗೆ ಸುತ್ತಿ ಪ್ರಾತರ್ವಿಧಿಗಳನ್ನು ಮುಗಿಸಿದ. ಸ್ನಾನಮಾಡುವಾಗಲೂ ಮತ್ತೆ ಅದೇ ಆಲೋಚನೆ! “ಹಲ್ಲುಜ್ಜುವಾಗ, ಮೈಗೆ ಸೋಪು ಹಾಕಿ ತಿಕ್ಕುವಾಗ ಮಾತ್ರ ಮೈ ಬಿಸಿಯಾಗುವುದಿಲ್ಲ. ಕೈ ಮಸೆದಾಗ ಬಿಸಿ ಏಕೆ?’’2 ಬಿಸಿ ಬಿಸಿ ತಿಂಡಿ ತಿಂದು ಶಾಲೆಗೆ ಓಡಿದ.

ಶಾಲೆಯಲ್ಲಿ ಆ ದಿನ ಅಧ್ಯಾಪಕರು ವಿಶ್ವದ ರಚನೆಯ ಬಗ್ಗೆ ತಿಳಿಸಿದರು. ಇಡಿ ವಿಶ್ವವನ್ನು ದ್ರವ್ಯ ಹಾಗೂ ಶಕ್ತಿ ಎಂದು ಸ್ಥೂಲವಾಗಿ ವರ್ಗೀಕರಿಸಬಹುದೆಂದು ತಿಳಿಸಿದರು. ದ್ರವ್ಯಕ್ಕೆ ಸ್ಥಳ ಆಕ್ರಮಿಸುವ ಗುಣ, ಭಾರ ಇರುವುದಾಗಿ ಹೇಳಿ – ಮಣ್ಣು ದ್ರವ್ಯವೆಂದು ಹೇಳಿದರು. ಶಕ್ತಿಗೆ ನಿರಂತರ ಚಲನೆ ಇರುವುದಾಗಿಯೂ ಸ್ಥಳ ಆಕ್ರಮಿಸುವ ಗುಣ ಇಲ್ಲವೆಂದೂ ತಿಳಿಸಿ – ಬೆಳಕನ್ನೂ ಉದಾಹರಿಸಿದರು.

ದ್ರವ್ಯವನ್ನು ಮತ್ತೂ ವರ್ಗೀಕರಿಸಿ ಘನ ಮತ್ತು ವಾಹಿಗಳೆಂದು ತಿಳಿಸಿದರು. ಘನವು ಸ್ವಯಂಚಲನೆ ಇಲ್ಲದ, ಖಚಿತ ಆಕೃತಿಯನ್ನು ಆ ಕಾರಣದಿಂದಾಗಿಯೇ ಪಡೆದಿರುವ ದ್ರವ್ಯ ಎಂದು ವಿವರಿಸಿ ಮರದ ತುಂಡನ್ನು ಘನವೆಂದು ತಿಳಿಸಿದರು. ವಾಹಿಗಳು ಸ್ವಯಂ ಚಲಿಸಬಲ್ಲವು. ಪದರಗಳಲ್ಲಿ ಚಲಿಸುವ ಗೋಚರ ದ್ರವ್ಯವೇ ದ್ರವ ಎಂದು ಹೇಳಿ, ನೀರು ದ್ರವವೆಂದು ವಿವರಿಸಿದರು. ದ್ರವಕ್ಕೆ ಆಕಾರವಿಲ್ಲದೇ ಹೋದರೂ ಖಚಿತ ಗಾತ್ರವಿದೆ. ಅದು ತಾನಿರುವ ಪಾತ್ರೆಯನ್ನನುಸರಿಸಿ ಆಕಾರ ತಳೆಯುತ್ತದೆ ಎಂದು ಹೇಳಿದರು. ದ್ರವದ ರೀತಿಯಲ್ಲಿಯೇ ಇನ್ನೊಂದು ವಾಹಿ ಎಂದರೆ ಅನಿಲ. ಅನಿಲಕ್ಕೆ ಖಚಿತ ಆಕಾರವೂ ಇಲ್ಲ; ಖಚಿತ ಗಾತ್ರವೂ ಇಲ್ಲ. ಒತ್ತಡಕ್ಕನುಗುಣವಾಗಿ ಗಾತ್ರ ಬದಲಾಗುವುದೆಂದು ತಿಳಿಸಿದರು. ಅನಿಲವು ಅಗೋಚರ ದ್ರವ್ಯ ಎಂದು ತಿಳಿಸಿದರು. ಕೆಲವೊಂದು ವರ್ಣಮಯ ಅನಿಲಗಳು ತಮ್ಮ ವರ್ಣದಿಂದಾಗಿ ಗೋಚರ ಎಂದು ಹೇಳಿದರು.

“ಕೆಸರು ಯಾವ ಸ್ಥಿತಿ ಸರ್?’’ – ಎಂದು ಮೃಣ್ಮಯ ಕೇಳಿದ.

ಅಧ್ಯಾಪಕರು ನಕ್ಕು ಹೇಳಿದರು “ಅದು ಘನ (ಮಣ್ಣು) ಹಾಗೂ ದ್ರವ (ನೀರು) – ಇವುಗಳ ಮಿಶ್ರಣ. ಹಾಗೆಯೇ ಹೊಗೆ, ಘನ ಕಣಗಳು (ಮಸಿ) ಹಾಗೂ ಅನಿಲ (ಗಾಳಿ) – ಇವುಗಳ ಮಿಶ್ರಣ!

ಅಧ್ಯಾಪಕರು ಪಾಠ ಮುಂದುವರಿಸಿದರು. ಒಂದೇ ವಸ್ತು ಘನ, ದ್ರವ ಹಾಗೂ ಅನಿಲ ಸ್ಥಿತಿಯಲ್ಲಿ ಇರಲು ಸಾಧ್ಯವೆಂದು ವಿವರಿಸಿದರು. ಮಂಜುಗಡ್ಡೆ ಘನ. ಕಾಸಿದಾಗ ಬರುವ ನೀರು ದ್ರವ. ನೀರನ್ನು ಕುದಿಸಿದಾಗ ಬರುವ ಹಬೆ ಅನಿಲ.

ಹಾಗೆಯೇ ಹಬೆಯನ್ನು ತಂಪುಗೊಳಿಸಿ ನೀರನ್ನು, ಮತ್ತೂ ತಣಿಸಿ ಮಂಜುಗಡ್ಡೆಯನ್ನೂ ತಯಾರಿಸಬಹುದು. ಹೀಗಾಗಿ ದ್ರವ್ಯವು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಸ್ಥಿತಿಯನ್ನು ತಲಪುತ್ತದೆ.

`ಕಾಸಿದಾಗ ಘನ, ದ್ರವವಾಗಿ, ಅನಿಲವಾಗಿ ಪರಿವರ್ತನೆಯಾಗುವುದೇಕೆ?’ ಎಂದು ವಿನಯ ಪ್ರಶ್ನಿಸಿದ.

ಕಾಸುವುದೆಂದರೆ ಉಷ್ಣ ಒದಗಿಸುವುದು. ಘನದಲ್ಲಿ ಇರುವ ಕಣಗಳು ಉಷ್ಣವನ್ನು ಹೀರಿ ಚಲನೆಯನ್ನು ಹೆಚ್ಚಿಸಿಕೊಳ್ಳುವುವು. ಕಣಗಳ ಸ್ವತಂತ್ರ ಚಲನೆಗೆ ಅಡ್ಡಿಯಾಗಿರುವ ಅಂಶ – ಕಣಗಳ ನಡುವಣ ಆಕರ್ಷಣೆ. ಅದು ಕಣಗಳ ನಡುವಣ ಆಕರ್ಷಣೆಯನ್ನು ಮೀರುವಷ್ಟು ಬಿಸಿಯಾದರೆ – ಘನವು ದ್ರವವೆನಿಸುವುದು. ದ್ರವಕ್ಕೆ ಮತ್ತಷ್ಟು ಚಲನೆ ನೀಡಿದರೆ, ಅಂದರೆ ಬಿಸಿ ಮಾಡಿದರೆ, ಆಗ ಕಣಗಳು ಅಡ್ಡಾದಿಡ್ಡಿಯಾಗಿ ಚಲಿಸುವವು – ಅದೇ ಅನಿಲ ಸ್ಥಿತಿ. ಆದರೆ ಕಣಗಳು ಚಲಿಸುವುದನ್ನು ಕಾಣಲು ಸಾಧ್ಯವಿಲ್ಲದಷ್ಟು ಚಿಕ್ಕವು. ಕಾಣದ ಕಣಗಳು; ಕಾಣದ ಚಲನೆ – ಇದು ಅನಿಲಗಳ ವೈಚಿತ್ರ್ಯ.

ಕಾಣುವ ವಸ್ತು ಕಾಣದ ಕಣಗಳಿಂದಾಗಿದೆ. ಕಾಣದ ಕಣಗಳು ಒತ್ತಟ್ಟಿಗೆ ಇರುವ ಕಾರಣ ಘನ ಹಾಗೂ ದ್ರವಗಳು ಗೋಚರ! ಆದರೆ ಅನಿಲಗಳಲ್ಲಿ ಕಣಗಳು ಪ್ರತ್ಯೇಕನಗೊಂಡು ಬಿಡಿಬಿಡಿಯಾಗಿರುವ ಕಾರಣ ಅಗೋಚರ.

`ಚಿನ್ನವನ್ನು ಕಾಸಿದರೆ ದ್ರವ ಆಗುತ್ತದೆ. ಅಲ್ವಾ ಸಾರ್?’’ ಎಂದ ಮುಕುಂದ. ಅಧ್ಯಾಪಕರು ಮುಂದುವರಿಸಿದರು – “ಚಿನ್ನವನ್ನು ಕಾಸಿದರೆ ದ್ರವ ಆಗುವುದೇ ಮಾತ್ರವಲ್ಲ, ಇನ್ನೂ ಕಾಸಿದರೆ ಅನಿಲವೂ ಆಗುತ್ತದೆ. ಹಾಗೆಯೇ ಪಾದರಸವನ್ನು ತಂಪುಗೊಳಿಸಿದರೆ ಘನವೂ ಆಗುತ್ತದೆ.

“ಯಾವುದೇ ಘನವನ್ನು ಕಾಸಿದರೂ ಅದು ದ್ರವವಾಗಿಯೇ ಅನಿಲವಾಗುತ್ತದೆಯೇ?’’ Uತ ಪ್ರಶ್ನಿಸಿದಳು. ಅಧ್ಯಾಪಕರೆಂದರು, “ಹಾಗೆ ಹೇಳಲು ಬರುವುದಿಲ್ಲ. ಅನೇಕ ಘನಗಳು ದ್ರವರೂಪಕ್ಕೆ ಬರುವ ಮೊದಲೇ ರಾಸಾಯನಿಕ ಕ್ರಿಯೆಗೆ ಒಳಪಡುವುದೂ ಉಂಟು. ಇನ್ನೊಂದು ವಿಚಿತ್ರವೂ ಇದೆ. ಕೆಲವು ಘನಗಳನ್ನು ಕಾಸಿದರೆ ಅವು ನೇರವಾಗಿ ಅನಿಲರೂಪಕ್ಕೆ ಬರುವವು. ಈ ಕ್ರಿಯೆಗೆ ಕರ್ಪೂರಿಕರಣ ಅಥವಾ ಉತ್ಪತನ ಎನ್ನಲಾಗುತ್ತದೆ. ಕರ್ಪೂರಕ್ಕೆ ಈ ಗುಣ ಉಂಟು. ಅದಕ್ಕೆಂದೇ ಕರ್ಪೂರಿಕರಣ ಎನ್ನುವರು. `ಉತ್ಪತನ‘ ಎಂದರೆ ಮೇಲೆ ಸಾಗಿ ಬೀಳುವುದೂ ಎಂದರ್ಥ. ಉತ್ಪತಕ ವಸ್ತುವನ್ನು ಕಾಸಿದಾಗ ಅದು ಅನಿಲ ರೂಪದಲ್ಲಿ ಮೇಲೆ ಸಾಗಿ ತಂಪುಗೊಂಡು ಮತ್ತೆ ಘನವಾಗುವುದು. ಕರ್ಪೂರ ಕಾಸಿದಾಗ ದ್ರವ ಆಗುವುದಿಲ್ಲವೆಂದಲ್ಲ. ದ್ರವ ಸ್ಥಿತಿ ತಲುಪದೆ ಅನಿಲ ಸ್ಥಿತಿ ತಲುಪಬಲ್ಲವು ಎಂದರ್ಥ.

ಒಟ್ಟಿನಲ್ಲಿ ಹೇಳುವುದಾದರೆ ಯಾವುದೇ ಘನವನ್ನು ದ್ರವವಾಗಿಸುವ, ದ್ರವವನ್ನು ಅನಿಲವಾಗಿಸುವ ಗುಣ ಬಿಸಿ ಅಥವಾ ಉಷ್ಣಕ್ಕಿದೆಯೆಂದು ಹೇಳಬಹುದೇ?’’ – ಈ ಬಾರಿಯ ಪ್ರಶ್ನೆ ಕೇಳುವುದು ಚೇತನನ ಸರದಿ.

ಅಧ್ಯಾಪಕರೆಂದರು, “ತಾತ್ತ್ವಿಕವಾಗಿ ನೀನು ಹೇಳುವುದು ಸರಿ. ಆದರೆ ಅನೇಕ ವಸ್ತುಗಳು ತಮ್ಮ ಭೌತಿಕ ಸ್ಥಿತಿಯನ್ನು ಬದಲಾಯಿಸುವ ಮೊದಲೆ ರಾಸಾಯನಿಕ ಪರಿವರ್ತನೆ ಆಗುವುದುಂಟು. ಉದಾಹರಣೆಗೆ ಹೇಳುವುದಾದರೆ, ಲೆಡ್‌ನೈಟ್ರೇಟನ್ನು ಕಾಸಿದರೆ ಅದು ದ್ರವವಾಗುವ ಮೊದಲೇ ರಾಸಾಯನಿಕ ವಿಭಜನೆಗೆ ಒಳಪಡುವುದು.

ಅಂದ ಮೇಲೆ, ಉಷ್ಣಕ್ಕೆ ಮೂರು ಬಗೆಯ ಸಾಮರ್ಥ್ಯವಿದೆ. ದ್ರವ್ಯವನ್ನು ಕಾಸಿದಾಗ ಆ ದ್ರವ್ಯ ಉಷ್ಣವನ್ನು ಹೀರಿ ತಾಪವು ಹೆಚ್ಚಳವಾಗುವುದು. (ಕಾವು ಏರಿತು ಎನ್ನುತ್ತೇವಲ್ಲವೆ?) ಮತ್ತೂ ಕಾಸಿದಾಗ ಆ ದ್ರವ್ಯವು ತನ್ನ ಭೌತಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳುವುದು. ಮತ್ತೆ ಕೆಲವು ದ್ರವ್ಯಗಳು ಭೌತಿಕ ಸ್ಥಿತಿ ಬದಲಾಯಿಸಿಕೊಳ್ಳುವ ಮೊದಲೇ ರಾಸಾಯನಿಕ ಕ್ರಿಯೆಗೆ ಒಳಗಾಗುವವು. ಅಂತೂ ಉಷ್ಣಕ್ಕೆ ಭೌತಿಕ ಬದಲಾವಣೆ ಹಾಗೂ ರಾಸಾಯನಿಕ ಬದಲಾವಣೆ ಉಂಟುಮಾಡಬಲ್ಲ ಸಾಮರ್ಥ್ಯವಿದೆ.

ಇಂತಹ ಬದಲಾವಣೆ ಉಂಟುಮಾಡಬಲ್ಲ ಉಷ್ಣವನ್ನು ಶಾಖ, ಬಿಸಿ, ಕಾವು ಮುಂತಾಗಿ ಹೇಳುವುದುಂಟು. ಬೆಳಕಿನ ಹಾಗೆಯೇ ಉಷ್ಣವೂ ಒಂದು ಶಕ್ತಿರೂಪ.

“ಉಷ್ಣ ಇದ್ದಲ್ಲಿ ಬೆಳಕು ಇರುತ್ತದೆ. ಅದಕ್ಕೇ ಇರಬೇಕು ಉಷ್ಣವನ್ನು ಶಕ್ತಿಯ ಒಂದು ರೂಪ ಎಂದು ಹೇಳುವರು. ಅಲ್ವಾ ಸಾರ್?’’ – ಎಂದ ಆನಂದ.

“ಹಾಗೇನಿಲ್ಲ. ಬೆಳಕು ಮತ್ತು ಉಷ್ಣ ಒಟ್ಟಿಗೆ ಇರುವುದಿಲ್ಲ. ಹಾಗೆ ನೋಡಿದರೆ ಟ್ಯೂಬ್‌ಲೈಟ್‌ನಲ್ಲಿ ಬೆಳಕು ಬರುತ್ತದೆ. ಆದರೆ ಟ್ಯೂಬು ಬಿಸಿಯಾಗುವುದಿಲ್ಲ. ಅದೂ ಹೋಗಲಿ, ಮಿಣುಕು ಹುಳು ಬೆಳಕು ಬೀರುವುದಾದರೂ ಬಿಸಿಯಾಗಿರುವುದಿಲ್ಲ.‘’

ಅಂತೂ ಘನಕ್ಕೂ ದ್ರವಕ್ಕೂ ಅನಿಲಕ್ಕೂ ಇರುವ ಅಂತರ ಎಂದರೆ, ದ್ರವ್ಯದಲ್ಲಿರುವ ಉಷ್ಣದ ಪರಿಮಾಣ ಮಾತ್ರ. ಉಷ್ಣದ ವಿಶೇಷ ಗುಣವೆಂದರೆ ಅದು ದ್ರವ್ಯದ ಆಂತರಿಕ ಚಲನೆಗೆ ಕಾರಣವಾದ ಶಕ್ತಿ. ಉಷ್ಣ ಅಧಿಕವಾಗಿದ್ದಷ್ಟೂ ಚಲನೆಯೂ ಚಲನೆಯಿಂದಾಗುವ ಅವ್ಯವಸ್ಥೆಯೂ ಅಧಿಕ.

“ದ್ರವ್ಯದ ಮೂರು ಸ್ಥಿತಿಗೂ ಉಷ್ಣಕ್ಕೂ ಸಂಬಂಧವನ್ನು ಹೇಳಿದಿರಿ. ಪ್ಲಾಸ್ಮಾ ಸ್ಥಿತಿಗೂ ಉಷ್ಣಕ್ಕೂ ಸಂಬಂಧ ಉಂಟೇ? ಪ್ಲಾಸ್ಮಾ ಎನ್ನುವುದು ದ್ರವ್ಯವೋ ಶಕ್ತಿಯೋ?’’ – ಎಂದು ನನ ಪ್ರಶ್ನಿಸಿದ.

ಅನಿಲಕ್ಕೆ ಉಷ್ಣ ಒದಗಿಸಿದಾಗ ಅನಿಲದ ಅಣುಗಳು ಪರಮಾಣುಗಳಾಗುವುವು. ಇನ್ನೂ ಉಷ್ಣ ಒದಗಿಸಿದಾಗ ಪರಮಾಣುವಿನ ಘಟಕಗಳಾದ ಪ್ರೋ‌ಇಲೆಕ್ಟ್ರಾನ್‌ಗಳು ಪ್ರತ್ಯೇಕಗೊಳ್ಳುವವು. ಈ ಕಣಗಳು ವೇಗವಾಗಿ ಚಲಿಸತೊಡಗುವವು. ಆಗ ಈ ವಿದ್ಯುತ್ಕಣಗಳ ತೀವ್ರ ವೇಗದ ಚಲನೆಯಿಂದಾಗಿ ಬೆಳಕಿನ ಉತ್ಸರ್ಜನೆ ಆಗುವುದಲ್ಲದೆ ಆ ಕಣಗಳು ಪರಸ್ಪರ ದೂರ ಸರಿಯದ ರೀತಿಯಲ್ಲಿನ ವ್ಯವಸ್ಥೆ ಏರ್ಪಡುವುದು. ಅದರಿಂದಾಗಿ ಅನಿಲದ ಘಟಕಾಣುಗಳು ದೂರದೂರಕ್ಕೆ ವ್ಯಾಪನೆಯಾಗುವ ಹಾಗೆ ಪ್ಲಾಸ್ಮಾ ಕಣಗಳು ವ್ಯಾಪಿಸಲಾರವು. ಸೂರ್ಯನೂ ಸೇರಿದಂತೆ ಎಲ್ಲ ನಕ್ಷತ್ರಗಳೂ ಪ್ಲಾಸ್ಮಾಗಳೇ. ದ್ರವ್ಯವು ಅತ್ಯಧಿಕ ಪ್ರಮಾಣದ ಉಷ್ಣ ಹೀರಿಕೆಯ ಸ್ಥಿತಿಯದು. ಅಂದ ಮೇಲೆ ದ್ರವ್ಯದ ನಾಲ್ಕೂ ಸ್ಥಿತಿಗಳನ್ನು ನಿರ್ಧರಿಸುವುದು ಅದರಲ್ಲಿ ಅಂತರ್ಗತವಾಗಿರುವ ಚಲನೆಗಳಿಗೆ ಕಾರಣವಾದ ಉಷ್ಣ.

“ಭೂಮಿ ನಕ್ಷತ್ರವಲ್ಲ; ಕೇವಲ ಗ್ರಹ. ಇದು ಯಾವ ಭೌತಿಕ ಸ್ಥಿತಿಯದು?’’ – ಎಂದು ವಸುಧಾ ಕೇಳಿದಳು. “ಅಷ್ಟೂ ಗೊತ್ತಾಗಲ್ವೇನೆ? ಭೂಮಿ ಘನಸ್ಥಿತಿಯದು‘’ ಎಂದು ಮೂಗು ಮುರಿದಳು ಭವಾನಿ.

ಅಧ್ಯಾಪಕರು ಹೇಳಿದರು, “ಭೂಮಿಯಲ್ಲಿ ದ್ರವ್ಯದ ನಾಲ್ಕೂ ಸ್ಥಿತಿ ಇದೆ. ಭೂಮಿಯ ಮೇಲ್ಪದರದ ವಾಯುಗೋಲ – ಅನಿಲ. ಜಲಗೋಲದ ಸಾಗರ – ದ್ರವ, ಭೂಮಿ – ಘನ ಹಾಗೂ ಭೂಮಿಯ ಆಂತರ್ಯ – ಪ್ಲಾಸ್ಮಾ.

“ಅಂತೂ ಪ್ಲಾಸ್ಮಾ ಸ್ಥಿತಿ ಅರಿಯಬೇಕಾದರೆ ಭೂಮಿಯ ಆಂತರ್ಯ ಪ್ರವೇಶಿಸಬೇಕು. ಇಲ್ಲವೆ ಸೂರ್ಯನನ್ನು ಸೇರಬೇಕು‘’ – ಎಂದಳು ತಾರ.

ಅಧ್ಯಾಪಕರು ಮತ್ತೊಂದು ಅಚ್ಚರಿ ತಿಳಿಸಿದರು. “ಬೆಂಕಿಯ ಜ್ವಾಲೆಯೂ ಒಂದರ್ಥದಲ್ಲಿ ಪ್ಲಾಸ್ಮಾ ಸ್ಥಿತಿಯ ಕರಡು ರೂಪವೇ. ಆದರ್ಶ ಪ್ಲಾಸ್ಮಾ ಅಲ್ಲದೆ ಹೋದರೂ ಅದು ಪ್ಲಾಸ್ಮಾದ ಅನೇಕ ಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಪ್ಲಾಸ್ಮಾವನ್ನು ಹೋಲುವ ಸ್ಥಿತಿಯನ್ನು ಅಧಿಕ ಉಷ್ಣ ಪೂರೈಕೆಯಿಂದ ಕೈಗೊಳ್ಳುವ ಪ್ರಯತ್ನಗಳು ನಡೆಯುತ್ತಲೇ ಇವೆ.

ಅದಕ್ಕಿಂತಲೂ ನೀವು ಗಮನಿಸಬೇಕಾದ ಮತ್ತೊಂದು ಅಂಶವಿದೆ. ಈಗ ಶಕ್ತಿ ಎಂದು ಪರಿಗಣಿಸಲಾಗಿರುವ ಉಷ್ಣವನ್ನು ಈ ಮುನ್ನ ವಿಜ್ಞಾನಿಗಳು ದ್ರವ ರೂಪದ ದ್ರವ್ಯ ಎಂದು ಭಾವಿಸಿದ್ದರು. ಆ ಬಗ್ಗೆ ಮುಂದಿನ ತರಗತಿಯಲ್ಲಿ ತಿಳಿಸುವೆ‘’.

ಹಾಗೆ ಹೇಳುವ ವೇಳೆಗಷ್ಟೇ ಬೆಲ್ ಆಯಿತು. ಅನಂತರವೇ ಹುಡುಗರಿಗೆ ತಮಗಾಗಿದ್ದ ಹಸಿವೆಯ ಪರಿವೆ ಉಂಟಾದದ್ದು.

 

ಗಮನಿಸಿ :

ಕರ್ಪೂರದಂತಹ ಉತ್ಪತಕ ವಸ್ತುಗಳು ಘನಸ್ಥಿತಿಯಿಂದ ಅನಿಲಸ್ಥಿತಿಗೆ ನೇರವಾಗಿ ತಲಪಬಲ್ಲವೆಂದಾಕ್ಷಣ ಯಾವಾಗಲೂ ಹಾಗೆಯೇ ತಲಪಬೇಕೆಂದಿಲ್ಲ.

ವೇಗವಾಗಿ ಕಾಸಿದಾಗ ಕರ್ಪೂರವು ಭಾಗಶಃ ಉತ್ಪತನಗೊಂಡರೂ ಭಾಗಶಃ ದ್ರವವಾಗಿಯೂ ಪರಿವರ್ತನೆಗೊಳ್ಳುವುದು.

ಕರ್ಪೂರಕ್ಕೂ ದ್ರವಬಿಂದು ಇದೆ. ಅದನ್ನೂ ದ್ರಕರಿಸಲು ಸಾಧ್ಯ!

ಪ್ರಶ್ನೆ 1 ಮತ್ತು 2 : ವಿವರಣೆ ಮುಂದಿನ ಪುಟಗಳಲ್ಲಿದೆ.