ರವಿ ಅಮ್ಮನ ಸೂಚನೆ ಮೇರೆಗೆ ಫ್ಲೋರ್‌ಮಿಲ್‌ಗೆ ಹೋಗಿ ಅಕ್ಕಿ, ಗೋಧಿ ಹಿಟ್ಟು ಮಾಡಿಸಿದ. ಪಾತ್ರೆ ಸುಡುತ್ತಿದ್ದುದನ್ನು ಗಮನಿಸಿ, ಉಷ್ಣವನ್ನು ಹಿಟ್ಟು ಪಾತ್ರೆಗೆ ನೀಡಿ ಪಾತ್ರೆಯ ತಾಪ ಕೈನ ತಾಪಕ್ಕಿಂತಲೂ ಹೆಚ್ಚು ಬಿಸಿ ಆಗಿರುವುದನ್ನು ಗಮನಿಸಿದ. ಹಿಟ್ಟಿಗೆ ಬಿಸಿ ಬಂದದ್ದು ಹೇಗೆ ಎಂಬ ಆಲೋಚನೆ ಬಂದಿತು. ಬೀಸುವ ಕಲ್ಲು ಉಜ್ಜಿ ಘರ್ಷಣೆಯಿಂದ ಹಿಟ್ಟು ಬಿಸಿಯಾಗಿರಬೇಕು. ಅಂದರೆ ಯಾಂತ್ರಿಕ ಚಲನಶಕ್ತಿ ಉಷ್ಣಶಕ್ತಿಯಾಗಿದೆ. ಯಾಂತ್ರಿಕ ಶಕ್ತಿಯಾದರೂ ಎಲ್ಲಿ ಬಂತು – ಎಂದು ಆಲೋಚನೆ ಮುಂದುವರಿಯಿತು. ವಿದ್ಯುಚ್ಛಕ್ತಿಯು ಬೀಸುಕಲ್ಲನ್ನು ತಿರುಗಿಸಿದೆ. ಅಂದರೆ ವಿದುಚ್ಛಕ್ತಿಯು ಯಾಂತ್ರಿಕಶಕ್ತಿ ಆಯಿತು. ವಿದುಚ್ಛಕ್ತಿಯು ಜೋಗದ ಜಲಪಾತದಲ್ಲಿ ನೀರು ಬಿದ್ದ ಕಾರಣದಿಂದಾಯಿತು. ಅಂದರೆ ಚಲನಶಕ್ತಿಯು ವಿದ್ಯುಚ್ಛಕ್ತಿಯಾಗಿ ಮಾರ್ಪಟ್ಟಿತು. ಈ ಚಲನಶಕ್ತಿ ನೀರಿಗೆ ಬಂದದ್ದು ಸೂರ್ಯನ ಕಿರಣ ನೀರನ್ನು ಆವಿರೂಪದಲ್ಲಿ ಮೇಲೊಯ್ದು ಆ ಆವಿಗೆ ಪ್ರಚ್ಛನ್ನ ಶಕ್ತಿ ಒದಗಿಸಿದ್ದರಿಂದ. ಅಂತೂ ಸೂರ್ಯನಿಂದಾಗಿಯೇ ಗಿರಣಿ ತಿರುಗುತ್ತದೆ.

ತನ್ನ ಸಂಶೋಧನೆಗೆ ತನಗೇ ನಗೆ ಬಂದಿತು. ಶಾಲೆಯ ಪತ್ರಿಕೆಗೆ ಲೇಖನ ಬರೆಯಬೇಕೆಂದುಕೊಂಡ. ಅಷ್ಟರಲ್ಲಿ ಅವನು ಮನೆಗ ತಲುಪಿದ್ದ. ತನ್ನ ಅನಿಸಿಕೆಯನ್ನು ಸಂಕ್ಷೇಪವಾಗಿ ಹೀಗೆ ದಾಖಲಿಸಿಕೊಂಡ. ಮುಂದೆ ಲೇಖನ ಬರೆಯಲು ಸಹಾಯಕವಾಗಲಿ ಎಂದವನ ಉದ್ದೇಶ.

ಸೂರ್ಯಶಕ್ತಿ, ನೀರಿಗೆ ಪ್ರಚ್ಛನಶಕ್ತಿ, ನೀರಿನ ಚಲನಶಕ್ತಿ, ವಿದ್ಯುಚ್ಛಕ್ತಿ, ಯಾಂತ್ರಚಲನಶಕ್ತಿ, ಉಷ್ಣಶಕ್ತಿ, ಹಿಟ್ಟಿನ ತಾಪದ ಹೆಚ್ಚಳ.

ಈ ಸರಪಳಿಯನ್ನು ಅಧ್ಯಾಪಕರಿಗೆ ತೋರಿಸಲು ಅದನ್ನು ತನ್ನ ಚೀಲದಲ್ಲಿ ಜೋಪಾನವಾಗಿರಿಸಿದ.

‘ತಿಂಡಿ ತಿನ್ನು ಬಾರೋ’ ಎಂದು ಅಮ್ಮ ಕರೆದರು. ಶಾಲೆಗೆ ತಡವಾಗುವುದೆಂದು ಬೇಗ ತಿಂಡಿ ತಿನ್ನಲು ಹೋಗಿ ಬಿಸಿರೊಟ್ಟಿ ನಾಲಿಗೆಯನ್ನು ಸುಟ್ಟಿತು. ತಾಪದ ಗುಟ್ಟು ಬಯಲು ಮಾಡಿದ್ದಕ್ಕೆ ಕೋಪಿಸಿಕೊಂಡು ತನ್ನ ನಾಲಗೆಯನ್ನು ರೊಟ್ಟಿಯ ತಾಪ ಸುಟ್ಟಿತು ಎಂದುಕೊಂಡ. ತನ್ನ ನಗೆಹನಿಗೆ ತನಗೇ ನಗು ಬಂದು ಮುಗುಳ್ನಕ್ಕ.

ಅಧ್ಯಾಪಕರು: ಉಷ್ಣವು ಶಕ್ತಿಯ ರೂಪ ಆಗಿರುವ ಕಾರಣ ಅದರ ಉತ್ಪಾದನೆ ಸಾಧ್ಯವೇ ಇಲ್ಲ. ನಾವು ಉಷ್ಣವನ್ನು ಪಡೆಯಬೇಕಾದರೆ, ಬೇರೊಂದು ಶಕ್ತಿ ರೂಪವನ್ನು ಉಷ್ಣವಾಗಿಸಿ ಹೆಚ್ಚು ತಾಪವುಂಟು ಮಾಡುವ ಉಷ್ಣದ ಆಕರ ಬೇಕು. ಉಷ್ಣದ ಆಕರವು ಅಧಿಕ ತಾಪದಲ್ಲಿ ಇರುವ ಕಾರಣ ಉಷ್ಣವನ್ನು ಅದಕ್ಕಿಂತ ಕಡಿಮೆ ತಾಪದಲ್ಲಿರುವ ವಸ್ತುವಿಗೆ ನೀಡುವದು. ಹೀಗಾಗಿ ಉಷ್ಣದ ಆಕರದ ಉಷ್ಣ ನೀಡಿಕೆಯ ಸಾಮರ್ಥ್ಯ ಆ ಆಕರದ ಉಷ್ಣ ನೀಡಿಕೆಯ ಸಾಮರ್ಥ್ಯ ಆ ಆಕರದ ತಾಪವನ್ನು ಅವಲಂಬಿಸಿರುತ್ತದೆ.

ಉಷ್ಣದ ಆಕರದಲ್ಲಿ ಹೆಚ್ಚು ತಾಪ ಉಂಟಾಗುವುದು ಭೌತಿಕ ಬದಲಾವಣೆಯಿಂದಾಗಿರಬಹುದು ಇಲ್ಲವೆ ರಾಸಾಯನಿಕ ಬದಲಾವಣೆಯಿಂದಲೂ ಆಗಿರಬಹುದು.

ಚಳಿ ಎನಿಸಿದಾಗ ನೀವು ಕೈ ಉಜ್ಜಿಕೊಳ್ಳುವುದು ನೆನಪು ಮಾಡಿಕೊಳ್ಳಿ. ಇಲ್ಲಿ ಯಾಂತ್ರಿಕ ಚಲನೆ ಉಷ್ಣವಾಗಿ ಪರಿಣಮಿಸಿದೆ. ಉಜ್ಜುವಿಕೆಯ ಕ್ರಿಯೆ ಉಷ್ಣವನ್ನು ಉತ್ಪಾದಿಸಿದೆ. ಇಲ್ಲಿ ಯಾಂತ್ರಿಕ ಚಲನೆ ಉಷ್ಣವಾಗಿ ಪರಿವರ್ತನೆ ಆಯಿತು. ಯಾಂತ್ರಿಕ ಚಲನ ಭೌತಿಕ ಬದಲಾವಣೆ ತಾನೆ? ಕೇವಲ ಯಾಂತ್ರಿಕ ಚಲನೆಯಿಂದಲೇ ತಾಪವನ್ನು ಗಣನೀಯವಾಗಿ ಹೆಚ್ಚಿಸಲು ಸಾಧ್ಯವಿಲ್ಲ. ಹೀಗಾಗಿ ಯಾಂತ್ರಿಕ ಚಲನೆಯ ಉಷ್ಣ ಆಕರಗಳ ಬಳಕೆ ಕಡಿಮೆ ಭಾರವಾದ ವಸ್ತುವನ್ನು ಘರ್ಷಣೆಯ ಅಡ್ಡಿಯಲ್ಲಿ ವೇಗವಾಗಿ ಚಲಿಸುವಂತೆ ಮಾಡಲು ಕಠಿಣ. ಅತ್ಯಂತ ಹಗುರವಾದ ಕಣವನ್ನು ತೆಗೆದುಕೊಂಡರೆ ಘರ್ಷಣೆ ಉಂಟು ಮಾಡುವುದು ಸಾಧ್ಯವಿಲ್ಲ.

ವಿನೀತ್ : ಹಾಗಿದ್ದ ಮೇಲೆ ಭೌತಿಕ ವಿಧಾನದಿಂದ ಉಷ್ಣ ಉತ್ಪಾದನೆ ಸಾಧ್ಯವಿಲ್ಲ ಎಂದಾಯಿತು.

ಅಧ್ಯಾಪಕರು : ಹಾಗಿಲ್ಲ. ವಿದ್ಯುಚ್ಛಕ್ತಿ ಹಾಯಿಸಿದಾಗ ಇಸ್ತ್ರಿ ಪೆಟ್ಟಿಗೆಯಲ್ಲಿ ಉಷ್ಣ ಉಂಟಾಗಿ ತಾಪ ಹೆಚ್ಚಳವಾಗುವುದಿಲ್ಲವೇ? ತಂತಿಯ ಮೂಲಕ ವಿದ್ಯುತ್ ಪ್ರವಾಹ ಉಂಟಾದಾಗ ತಂತಿಯು ರಾಸಾಯನಿಕ ಪರಿವರ್ತನೆ ಆಗುವುದಿಲ್ಲ. ಆದ್ದರಿಂದ ವಿದ್ಯುದ್ವಹನ ಭೌತಿಕ ಬದಲಾವಣೆ. ಭೌತಿಕ ಬದಲಾವಣೆಯಿಂದ ಅಧಿಕ ತಾಪವನ್ನುಂಟು ಮಾಡುವುದು ಕೇವಲ ಇಸ್ತ್ರಿ ಪೆಟ್ಟಿಗೆಯಲ್ಲಿ ಮಾತ್ರವಲ್ಲ, ವಿದ್ಯುತ್ ಸ್ಟೌವ್ ಮಾತ್ರವಲ್ಲ, ಅತ್ಯಧಿಕ ತಾಪವನ್ನುಂಟು ಮಾಡುವ ವಿದ್ಯುತ್ ಕುಲುಮೆಗಳೂ ಉಂಟು. ಲೋಹೋತ್ಪಾದನ ಪ್ರಕ್ರಿಯೆಯಲ್ಲಿ ಈ ಕುಲುಮೆಗಳನ್ನು ಬಳಕೆ ಮಾಡಲಾಗುವುದು.

ಚೇತನ್ : ವಿದ್ಯುಚ್ಛಕ್ತಿ ತಂತಿಯ ಮೂಲಕ ಹರಿಯುವಾಗ ಇಸ್ತ್ರಿಪೆಟ್ಟಿಗೆ ತಂತಿ ಬಿಸಿಯಾಗುತ್ತದೆ. ಆದರೆ ವಿದ್ಯುತ್ ತಂತಿ ಬಿಸಿಯಾಗುವುದಿಲ್ಲ. ಹೀಗೇಕೆ?

ಅಧಾಪಕರು: ವಿದ್ಯುತ್ ಪ್ರವಾಹ ಎಂದರೆ ವಿದ್ಯುದಂಶ ಕಣಗಳಾದ ಇಲೆಕ್ಟ್ರಾನುಗಳು ತಂತಿಯ ಮೂಲಕ ಸಾಗಬೇಕು ತಾನೆ! ಹಾಗೆ ಅವು ಸಾಗುವಾಗ ಉಂಟಾಗುವ ಒಂದು ಬಗೆಯ ಘರ್ಷಣೆಗೆ ‘ವಿದ್ಯುತ್‌ರೋಧ’ ಎಂದು ಹೆಸರು.

ತೇಜಸ್ : ಅದೇಕೆ ಸರ್ ‘ಒಂದು ಬಗೆಯ ಘರ್ಷಣೆ ಎಂದಿರಿ?’

ಅಧ್ಯಾಪಕರು: ಸಾಮಾನ್ಯ ಘರ್ಷಣೆಯಲ್ಲಿ ತಡೆ ಉಂಟಾಗುವುದು ವಸ್ತುವಿನ ಹೊರಮೈನ ಏರುಪೇರಿನಿಂದಾಗಿ ಆದರೆ ಇಲ್ಲಿ ಇಲೆಕ್ಟ್ರಾನುಗಳು ಚಲನೆಗೆ ಅಡ್ಡಿಯಾಗುವುದು ಮೇಲ್ಮೈ ಏರುಪೇರಿನಿಂದಲ್ಲ. ಪರಮಾಣುವಿನಲ್ಲಿನ ಧನವಿದ್ಯುದಂಶದ ನ್ಯೂಕ್ಲಿಯಸ್‌ಗಳು ಇಲೆಕ್ಟ್ರಾನನ್ನು ಆಕರ್ಷಿಸಿದ್ದರಿಂದಾಗಿ. ಕಾರಣ ಬೇರೆಯೇ ಆಗಿರುವುದರಿಂದ ‘ಒಂದು ಬಗೆಯ ಘರ್ಷಣೆ’ ಎಂದು ವಿವರಿಸಿದೆ.

ಚೇತನ್ : ಸರ್, ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ!

ಅಧ್ಯಾಪಕರು: ಏನು ಮಾಡಲಿ, ತೇಜಸ್ ‘ರೋಧ’ ಉಂಟು ಮಾಡಿದವನಲ್ಲಾ! (ಎಲ್ಲರೂ ನಗುವರು). ಈಗ ಹೇಳುತ್ತೇನೆ. ವಿದ್ಯುತ್ ರೋಧ ತೀರಾ ಕಡಿಮೆ ಇದ್ದಾಗ ಇಲೆಕ್ಟ್ರಾನುಗಳು ಅತ್ಯಂತ ವೇಗವಾಗಿ ಚಲಿಸುತ್ತವೆ. ಆದರೆ ಬಿಸಿ ಉಂಟು ಮಾಡುವುದಿಲ್ಲ.

ಕೈಯನ್ನು ನೀರಿನಲ್ಲಿ ಅದ್ದಿದಾಗ ಪರಸ್ಪರ ಸೋಕಿಸಿ ವೇಗವಾಗಿ ಉಜ್ಜುವುದು ಸಾಧ್ಯವಾದರೂ ಉಷ್ಣ ಬಿಡುಗಡೆಯಾಗುವುದು ಕಡಿಮೆ. ನೀವೇ ಮಾಡಿ ನೋಡಿ! ಹೀಗಾಗಿ ವಿದ್ಯುತ್ ತಂತಿಯಲ್ಲಿ ವಿದ್ಯುತ್‌ಪ್ರವಾಹ ಉಂಟಾದರೂ ತಂತಿ ಬಿಸಿಯಾಗುವುದಿಲ್ಲ. ವಿದ್ಯುತ್ ರೋಧ ಹೆಚ್ಚು ಇದ್ದಾಗಲೇ ಘರ್ಷಣೆ ಹೆಚ್ಚು, ತಾಪವೂ ಹೆಚ್ಚು.

ವಿನೋದ : ಅದು ಸರಿ ಸರ್. ಘರ್ಷಣೆ ಜಾಸ್ತಿ ಇದ್ದಾಗಲೇ ಬಿಸಿಬಿಸಿ ಮಾತೂ ಹೆಚ್ಚು. ಹಾಗೆಯೇ ಮನಸ್ತಾಪವೂ ಹೆಚ್ಚು. ಜಗಳದ ವಿಷಯದಲ್ಲೂ ಇದು ನಿಜ.

ಅಧ್ಯಾಪಕರು: ಅವಾಹಕಕ್ಕೆ ರೋಧ ಅತಿ ಹೆಚ್ಚು. ಹಾಗೆಂದ ಮಾತ್ರಕ್ಕೆ ವಿದ್ಯುತ್ ಅವಾಹಕದ ಮೂಲಕ ವಿದ್ಯುತ್ ಪ್ರವಾಹ ಉಂಟು ಮಾಡಿದರೆ ಅವಾಹಕ ಬಿಸಿಯಾಗುವುದಿಲ್ಲ. ಏಕೆಂದರೆ ಅತಿಯಾದ ರೋಧದಿಂದಾಗಿ ವಿದ್ಯುತ್ ಪ್ರವಾಹವೇ ಉಂಟಾಗುವುದಿಲ್ಲ.

ವಿನೋದ : ನಿಜ ಸರ್. ತೀರಾ ಕೋಪಿಸಿಕೊಂಡು ಮಾತು ಬಿಟ್ಟರೆ ಜಗಳವೂ ಇಲ್ಲ. ಘರ್ಷಣೆಯೂ ಇಲ್ಲ, ಮನಸ್ತಾಪವೂ ಇಲ್ಲ.

ಅಧ್ಯಾಪಕರು : ವಿನೋದ್, ನೀನು ಜಗಳದ ಬಗ್ಗೆ ತಿಳಿದುಕೊಳ್ಳುತ್ತಿದ್ದೀಯೋ, ವಿದ್ಯುತ್ ಪ್ರವಾಹದಿಂದ ಉಷ್ಣ – ತಾಪ ಉಂಟಾಗುವ ಬಗ್ಗೆ ತಿಳಿದುಕೊಳ್ಳುತ್ತಿದ್ದೀಯೋ (ಎಲ್ಲ ನಗುವರು)

ಅಧ್ಯಾಪಕರು : ನಿರ್ದಿಷ್ಟ ವಿದ್ಯುತ್ ಪ್ರವಾಹ ಉಂಟಾದಾಗ ಬಿಡುಗಡೆ ಆಗುವ ಉಷ್ಣವೆಷ್ಟು ಹಾಗೂ ಪಡೆಯಬಹುದಾದ ತಾಪವೆಷ್ಟು – ಮುಂತಾದ ಸಂಗತಿಗಳನ್ನು ನೀವು ಹೆಚ್ಚಿನ ಅಧ್ಯಯನ ಕೈಗೊಂಡಾಗ ತಿಳಿದೀತು. ಹೆಚ್ಚಿನ ಓದಿಗೆ ಒತ್ತಾಸೆ ಮೂಡಿಸುವುದು ನನ್ನ ಕೆಲಸ.

ಗಂಗಾ : ‘ಹೈವೋಲ್ಟೇಜ್’ – ಅಪಾಯ ಎಂದು ಬರೆದಿರುವವರಲ್ಲಾ, ಹೆಚ್ಚಿನ ವೋಲ್ಟೇಜ್ ಹೆಚ್ಚು ತಾಪವನ್ನುಂಟು ಮಾಡುವುದೆ?

ಅಧ್ಯಾಪಕರು: ಕೇವಲ ಹೆಚ್ಚು ವೋಲ್ಟೇಜ್ ಇದ್ದರೆ ಸಾಲದು, ಆ ವೋಲ್ಟೇಜ್ ಉಂಟು ಮಾಡುವ ವಿದ್ಯುತ್ ಪ್ರವಾಹವೆಷ್ಟು ಎಂಬ ಸಂಗತಿಯೂ ಮುಖ್ಯ ಆಗುತ್ತದೆ. ಸ್ಥಾಯಿ ವಿದ್ಯುತ್ ಪ್ರಕ್ರಿಯೆ ಆಧರಿಸಿದ ಚಟುವಟಿಕೆ ನಿಮಗೆ ತಿಳಿದೇ ಇದೆ. ಪ್ಲಾಸ್ಟಿಕ್ ಬಾಚಣಿಗೆಯಲ್ಲಿ ಎಣ್ಣೆ ಹಚ್ಚದ ತಲೆಗೂದಲನ್ನು ಬಾಚಿಕೊಂಡ ನಂತರ ಆ ಬಾಚಣೆಗೆ ಕಾಗದದ ಚೂರುಗಳನ್ನು ಆಕರ್ಷಿಸುತ್ತದೆ. ಅಲ್ಲಿ ಸಾವಿರಗಟ್ಟಲೆ ವೋಲ್ಟೇಜ್ ಇದ್ದರೂ ಅದು ಅಪಾಯಕಾರಿ ಅಲ್ಲ. ಏಕೆಂದರೆ ವೋಲ್ಟೇಜ್ ಅಧಿಕ ಇದ್ದರೂ ಇಲೆಕ್ಟ್ರಾನು ಸಂಗ್ರಹ ಕಡಿಮೆ ಇರುವ ಕಾರಣ ಪ್ರಬಲ ವಿದ್ಯುತ್ಪ್ರವಾಹವೇನೂ ಉಂಟಾಗುವುದಿಲ್ಲ. ಆದರೆ ಮನೆಗೆ ಪೂರೈಕೆಯಾಗುವ ವಿದ್ಯುತ್ ಪ್ರವಾಹಕ್ಕೆ ಸಂಬಂಧಿಸಿ ಹೇಳುವುದಾದರೆ ೪೪೦ವಿ ಕೂಡಾ ಅಪಾಯಕಾರಿ.

ಹಾಗೆ ನೋಡಿದರೆ ಹೆಚ್ಚಿನ ತಾಪವೆಲ್ಲವೂ ಅಪಾಯಕಾರಿ ಅಲ್ಲ.

ತೇಜಸ್ : (ರವಿಯ ಮುಖ ನೋಡುತ್ತಾ) ರವಿಯ ಹೊರಮೈ ತಾಪ ಎಷ್ಟಿದ್ದರೇನು? ಅವನು ನನ್ನಿಂದ ದೂರ ಕುಳಿತಿದ್ದಾನೆ (ಎಲ್ಲರೂ ನಗುವರು).

ಅಧ್ಯಾಪಕರು : ಸೂರ್ಯನ ಹೊರಮೈ ತಾಪ ಸುಮಾರು ೬೦೦೦K. ಆ ತಾಪದಲ್ಲಿ ಅನೇಕ ಲೋಹಗಳೂ ದ್ರವವಾಗುವುದಿರಲಿ, ಆವಿಯಾಗುತ್ತವೆ. ಆದರೆ ಭೂಮಿಯ ಮೇಲೆ ತರಗೆಲೆಯೂ ಹೊತ್ತಿಕೊಳ್ಳುವುದಿಲ್ಲ. ಅದು ಹೋಗಲಿ, ಮಿಂಚನ್ನು ಗಮನಿಸಿ. ಮಿಂಚು ಉಂಟಾದಾಗ ವಾಯುಮಂಡಲದಲ್ಲಿ ಉಂಟಾಗುವ ತಾಪ ಎಷ್ಟೆಂದು ಅಂದಾಜಿದೆಯೇ. ಸೂರ್ಯನ ಮೇಲ್ಮೈ ತಾಪ ಹೋಲುವ ತಾಪ ಅಲ್ಲಿ ಉಂಟಾಗುತ್ತದೆ. ಸೂರ್ಯನ ತಾಪ ಪರಿಣಾಮ ಬೀರದಿರಲು ದೂರ ಕಾರಣವೆನ್ನೋಣ. ಹಾಗಿದ್ದಲ್ಲಿ ಮಿಂಚು ಕೂಡಾ; ಕೆಲವೊಂದು ಸಂದರ್ಭಗಳಲ್ಲಿ ಅಪಾಯಕಾರಿಯಾದರೂ – ಭೂಮಿಗೆ ಉಷ್ಣವನ್ನು ವರ್ಗಾವಣೆ ಮಾಡಿ ತರಗೆಲೆ / ಕಾಗದ ಮೊದಲಾದವು ಹೊತ್ತಿಕೊಳ್ಳುವುದಿಲ್ಲ ಏಕೆ?

ಸುಹಾಸ್ : ಸರ್ ನಾವು ಪ್ರಶ್ನೆ ಕೇಳಿದರೆ ಚಂದ; ನೀವು ಉತ್ತರ ಹೇಳುವುದು ಸರಿ. ನೀವೇ ಪ್ರಶ್ನೆ ಕೇಳಿದರೂ ಉತ್ತರ ನೀವೇ ಹೇಳಬೇಕು.

ಅಧ್ಯಾಪಕರು : ಆಗಲಿ. ನಿಮ್ಮ ಕೌತುಕ ಕೆರಳಿಸಲು ಅಪರೂಪಕ್ಕೆ ನಾವೇ ಪ್ರಶ್ನೆ ಹಾಕಿದೆ. ಮಿಂಚಿನಿಂದ ಉಷ್ಣವು ವರ್ಗಾವಣೆ ಆಗದಿರಲು ಕೆಲವು ಕಾರಣಗಳಿವೆ.

೧)       ಮಿಂಚುಂಟಾಗುವುದು ಅತ್ಯಲ್ಪ ಅವಧಿಕೆ ಮಾತ್ರ. ಅಲ್ಲಿ ಹೆಚ್ಚು ತಾಪ ಇದೆಯೇ ವಿನಾ ಉಷ್ಣದ ಸಂಗ್ರಹವಿಲ್ಲ.

೨)       ಮಿಂಚಿಗೂ ಭೂಮಿಗೂ ನಡುವೆ ಇರುವ ಗಾಳಿ ಉಷ್ಣದ ಅವಾಹಕ ಮಾಧ್ಯಮ.

೩)       ಹೆಚ್ಚಿದ ತಾಪದ ಪರಿಣಾಮವಾಗಿ ಗಾಳಿ ಹಾಗೂ ಮೋಡಗಳು ಚದರಿಹೋಗುವುದು.

ಈ ಎಲ್ಲ ಕಾರಣಗಳಿಂದಾಗಿ ಮಿಂಚು ತಾಪಯುತವಾದರೂ ಭೂಮಿಯ ತಾಪವನ್ನು ಹೆಚ್ಚಿಸಲು ಅಸಮರ್ಥವಾಗಿದೆ.