ಅಧ್ಯಾಪಕರು : ಒಂದು ಕೈಯಲ್ಲಿ ಮಂಜುಗಡ್ಡೆ ಹಿಡಿದು, ಇನ್ನೊಂದು ಕೈಯನ್ನು ನೀರಿರುವ ಪಾತ್ರೆಯಲ್ಲಿ ಅದ್ದಿದರೆ ನೀರು ಬಿಸಿಯಾಗಿ ಕಾಣುತ್ತದೆ. ಮಂಜುಗಡ್ಡೆ ಹಿಡಿದ ಕೈಯಿಂದ ಮಂಜುಗಡ್ಡೆ ಬಿಸಾಡಿ ಉಗುರು ಬೆಚ್ಚಗಿನ ನೀರಿನಲ್ಲಿ ಇರಿಸಿ ಈ ಮೊದಲು ಬಿಸಿಯೆನಿಸಿದ ನೀರು ತಂಪಾಗಿರುವಂತೆ ಅನಿಸುತ್ತದೆ.

ಜಗತ್ತಿನ ಎಲ್ಲ ವಸ್ತುಗಳೂ ನಿರಂತರವಾಗಿ ಉಷ್ಣವನ್ನು ಹೊರಸೂಸುತ್ತಲೂ ಇರುತ್ತವೆ; ಸ್ವೀಕರಿಸುತ್ತಲೂ ಇರುತ್ತವೆ. ಬೆಳಕಿನ ಹಾಗೆಯೇ ಉಷ್ಣವೂ ಇರುವುದರಿಂದ ಈ ಬಗೆಯ ನಿರಂತರ ವಿನಿಮಯ ನಡೆದೇ ಇರುತ್ತದೆ.

A ಮತ್ತು B ಎರಡು ವಸ್ತುಗಳನ್ನು ಅಕ್ಕಪಕ್ಕ ಸಂಪರ್ಕಿಸಿ ಇರಿಸಿದಾಗ ಈ ವಿನಿಮಯ ಕ್ರಿಯೆ ನಡೆಯಲು ಅವಕಾಶ ನೀಡಿದ ಹಾಗಾಗುತ್ತದೆ. ಈಗ ಮೂರು ಬಗೆಯ ಸಂದರ್ಭಗಳು ಸಾಧ್ಯ. ಉಷ್ಣದ ಹರಿವನ್ನು ಬಾಣದ ಗುರ್ತಿನ ಸಂಖ್ಯೆಯಿಂದ ಸೂಚಿಸೋಣ.

ಸಂದರ್ಭ 1

ಇಲ್ಲಿ Aಯಿಂದ Bಗೆ ಎಂಟು ಬಾಣದ ಗುರ್ತುಗಳಿವೆ. Bಯಿಂದ Aಗೆ ಸಾಗುವ ಎರಡು ಬಾಣದ ಗುರುತುಗಳಿವೆ. ಅಂದ ಮೇಲೆ ನಿವ್ವಳವಾಗಿ Aಯಿಂದ ಉಷ್ಣವು Bಗೆ ಸಾಗಿದೆ. ಹೀಗಾಗಿ Aಯ ತಾಪ Bಯ ತಾಪಕ್ಕಿಂತ ಹೆಚ್ಚು.

 

ಸಂದರ್ಭ 2

ಇಲ್ಲಿ Aಯಿಂದ Bಗೆ ಎರಡು ಬಾಣದ ಗುರುತುಗಳು ಹಾಗೂ Bಯಿಂದ Aಗೆ ನಾಲ್ಕು ಬಾಣದ ಗುರುತುಗಳೂ ಇವೆ. ಹೀಗಾಗಿ Bಯ ತಾಪ Aಯ ತಾಪಕ್ಕಿಂತ ಹೆಚ್ಚು.

ಇಲ್ಲಿ Aಯಿಂದ Bಗೆ 3 ಬಾಣದ ಗುರುತುಗಳು ಮತ್ತು Bಯಿಂದ Aಗೆ 3 ಬಾಣದ ಗುರುತುಗಳು ಇವೆ. ಈಗ A ಆಗಲಿ B ಆಗಲಿ ಉಷ್ಣ ನಷ್ಟ ಮಾಡಿಕೊಳ್ಳುವುದಿಲ್ಲ. ಈ ಸಂದರ್ಭದಲ್ಲಿ A ಹಾಗೂ Bಯ ತಾಪ ಒಂದೇ. ಒಂದೇ ತಾಪದ ಎರಡು ವಸ್ತುಗಳನ್ನು ಪಕ್ಕ ಪಕ್ಕ ಇರಿಸಿದರೂ ಸಮಪ್ರಮಾಣದಲ್ಲಿ ಉಷ್ಣ ವಿನಿಮಯ ಆಗುವ ಕಾರಣ ನಿವ್ವಳ ಉಷ್ಣ ವರ್ಗಾವಣೆ ಆಗುವುದಿಲ್ಲ.

(i) ಅಂದ ಮೇಲೆ ತಾಪವೆಂದರೆ ಉಷ್ಣ ಸೋರಿಕೆಯ ಪರಿಮಾಣವನ್ನು ನಿರ್ಧರಿಸುವ ಬೆಲೆ.

(ii) ಎರಡು ವಸ್ತುಗಳನ್ನು ಪಕ್ಕದಲ್ಲಿರಿಸಿ ಉಷ್ಣ ವಿನಿಮಯಕ್ಕೆ ಆಸ್ಪದ ನೀಡಿದರೆ ಉಂಟಾಗುವ ವಿನಿಮಯ ತಾಪದ ಅಂತರವನ್ನು ಆಧರಿಸಿರುತ್ತದೆ.

(iii) ತಾಪದ ಅಂತರ ಇರದೆ ಹೋದಲ್ಲಿ ಉಷ್ಣದ ನಿವ್ವಳ ಲಾಭವಾಗಲಿ ನಷ್ಟವಾಗಲಿ ಇರುವುದಿಲ್ಲ.

ಉಷ್ಣದ ವಿನಿಮಯದ ಪರಿಣಾಮವನ್ನು ತಾಪವೇ ನಿರ್ಧರಿಸುವುದಲ್ಲದೆ ಉಷ್ಣ ಅಲ್ಲ. ತಾಪವನ್ನು ಉಷ್ಣ ನೀಡಿ ಹೆಚ್ಚಿಸಬಹುದು. ಆದರೆ; ಹೆಚ್ಚು ತಾಪ ಇರುವ ಕಡಿಮೆ ಉಷ್ಣ ಇರುವ ವಸ್ತುವಿನಿಂದ ಉಷ್ಣವು ಕಡಿಮೆ ತಾಪ ಇರುವ ಆದರೆ ಹೆಚ್ಚು ಉಷ್ಣ ಇರುವ ವಸ್ತುವಿನ ಕಡೆಗೆ ಹರಿಯುತ್ತದೆ. ಇದನ್ನು ಸಮಾನ ಸಂದರ್ಭದಿಂದ ತಿಳಿಯೋಣ.

A ಮತ್ತು B ಎಂಬ ಎರಡು ಪಾತ್ರೆಗಳಿವೆ ಎನ್ನಿ. ನೀರಿನ ಮಟ್ಟ X ಮತ್ತು Y ಇದೆ ಎನ್ನಿ. A ಪಾತ್ರೆಯಲ್ಲಿ ಕಡಿಮೆ ನೀರು ಇದೆ. B ಪಾತ್ರೆಯಲ್ಲಿ ಹೆಚ್ಚು ನೀರು ಇದೆ. ಆದಾಗ್ಯೂ `ಸೈಫನ್‘ ಮೂಲಕ ಸಂಪರ್ಕಿಸಿದಾಗ ಇಲ್ಲವೆ ಸೂಕ್ತಕಡೆ ರಂಧ್ರ ಕೊರೆದು Aಯಿಂದ Bಗೆ ನೀರು ಹಾಯಿಸಬಹುದೇ ವಿನಾ Bಯಿಂದ Aಗೆ ನೀರು ಹಾಯಿಸಲು ಸಾಧ್ಯವಿಲ್ಲ. ಏಕೆಂದರೆ Aಯ ನೀರಿನ ಮಟ್ಟ Bಯ ಮಟ್ಟಕ್ಕಿಂತಲೂ ಹೆಚ್ಚು.

ಮೇಲಿನ ಉದಾಹರಣೆಯನ್ನು ಉಷ್ಣ-ತಾಪಗಳಿಗೆ ವಿಸ್ತರಿಸುವುದಾದರೆ ನೀರು – ದ್ರವ್ಯದಲ್ಲಿರುವ ಉಷ್ಣಶಕ್ತಿಗೆ ಸಮಾಂತರವಾದದ್ದು. ನೀರಿನ ಮಟ್ಟ – ತಾಪಕ್ಕೆ ಸಮಾಂತರವಾದದ್ದು. ನೀರಿನ ಪ್ರಮಾಣ ಹಾಗೂ ತಾಪದ ಸಂಬಂಧವನ್ನು ನೀರಿನ ಪಾತ್ರೆಯ ಆಕಾರ ನಿರ್ಧರಿಸುವ ಹಾಗೆಯೇ ಉಷ್ಣ ಹಾಗೂ ತಾಪದ ಸಂಬಂಧವನ್ನು ಉಷ್ಣಗ್ರಾಹಕ (ಉಷ್ಣವನ್ನು ಸಂಗ್ರಹಿಸಿಟ್ಟುಕೊಳ್ಳುವ ದ್ರವ್ಯದ ಪ್ರಮಾಣ) ಗುಣ ನಿರ್ಧರಿಸುತ್ತದೆ.

ಒಂದೇ ಪಾತ್ರೆಯನ್ನು ಗಮನಿಸಿ ಹೇಳುವುದಾದರೆ ಆ ಪಾತ್ರೆಯ ನೀರಿನಮಟ್ಟವನ್ನು ಆ ಪಾತ್ರೆಯಲ್ಲಿರುವ ನೀರಿನ ಪ್ರಮಾಣ ನಿರ್ಧರಿಸುತ್ತದೆ. ಹಾಗೆಯೇ ಒಂದು ದ್ರವ್ಯದ ತಾಪವನ್ನು ಆ ದ್ರವ್ಯದಲ್ಲಿರುವ ಉಷ್ಣದ ಪ್ರಮಾಣ ನಿರ್ಧರಿಸುತ್ತದೆ. ದ್ರವ್ಯಕ್ಕೆ ಉಷ್ಣವನ್ನು ಸೇರಿಸಿದರೆ ಅದಕ್ಕನುಗುಣವಾಗಿ ತಾಪ ಹೆಚ್ಚುತ್ತದೆ; ಉಷ್ಣವನ್ನು ಹೀರಿದರೆ ಅದಕ್ಕನುಗುಣವಾಗಿ ತಾಪ ತಗ್ಗುತ್ತದೆ!

ಬೇಸಗೆಯ ಬಿರುಬಿಸಿಲ ಬೇಗೆಯಲ್ಲಿ ಜನಸಂಚಾರ, ಪಶುಪಕ್ಷಿ ಸಂಚಾರ ಸ್ತಬ್ದಗೊಂಡು ಮೌನ ಆವರಿಸಿದ ಹಾಗೆ ತರಗತಿಯು ನೀರವವಾಗಿತ್ತು. ಅಧ್ಯಾಪಕರು ಇದನ್ನು ಗಮನಿಸಿ ಮೌನ ಮುರಿಯುವ ಯತ್ನಕ್ಕೆ ಕೈಹಾಕಿದರು.

ಅಧ್ಯಾಪಕರು : ಬೇಸಗೆಯ ಹಗಲಿನಲ್ಲಿ ಸೆಖೆ ಏಕೆ?

ತೇಜಸ್ : ಬಿಸಿಲಿನ ತಾಪಕ್ಕೆ.

ಅಧ್ಯಾಪಕರು : ಬಿಸಿಲಿಗೆ ತಾಪವೇ ಇಲ್ಲ. ನಮಗೆ ತಾಪದ ಅನುಭವವಾಗಲು ನಾವು ಬಿಸಿಲನ್ನು ಹೀರಬೇಕು ಇಲ್ಲವೆ ಭೂಮಿ ಸೂರ್ಯಕಿರಣಗಳನ್ನು ಹೀರಿ ಬಿಸಿಯಾಗಿ ವಿಕಿರಣ ಹೊರಸೂಸಬೇಕು.

ಭೂಮಿಯಿಂದ ನಾವು ದೂರ ಸಾಗತೊಡಗಿದೆವೆನ್ನೋಣ. ಆಗ ನಾವು ಸೂರ್ಯನನ್ನು ಸಮೀಪಿಸುವ ಕಾರಣ ತಾಪ ಹೆಚ್ಚಾಗುವುದು ಎನಿಸುವುದಲ್ಲವೆ? ಹಾಗೇನಿಲ್ಲ. ಸೂರ್ಯನ ಬಿಸಿಲಿನಿಂದ ಬಿಸಿಯಾದ ಭೂಮಿಯಿಂದ ದೂರಸರಿಯುವ ಕಾರಣ ತಾಪ ಕಡಿಮೆ ಆಗುವುದು. ಕೇಳಿಲ್ಲವೆ `Higher we go cooler we feel’ – ಎಂಬ ನಾಣ್ಣುಡಿ ಇದೆ.

ಬೇಸಗೆಯ ಬಿಸಿಲಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೀರಿ ಎಂದು ಭಾವಿಸಿ. ಆಗ ಬಸ್ ಬರುತ್ತದೆ. ನೀವು ಬಸ್ಸನ್ನೇರಿ ನಿಲ್ಲುತ್ತೀರಿ. ಬಸ್‌ನ ಕವಚದ ನೆರಳು ಇದೆ. ಆಗ ಸೆಖೆ ಕಡಿಮೆ ಆಗುತ್ತದೋ, ಹೆಚ್ಚುತ್ತದೊ?

ವಿನೋದ : ಸೆಖೆ ಕಡಿಮೆಯಾಗುತ್ತದೆ. ಏಕೆಂದರೆ ಬಸ್ ಕೊಡೆಯಾಗುತ್ತದೆ.

ರವಿ : ಸೆಖೆ ಹೆಚ್ಚಾಗುತ್ತದೆ. ಸೂರ್ಯನ ಬಿಸಿಲಿಗೆ ಬಸ್‌ನ ತಗಡು ಬೇಗ ಬಿಸಿಯಾಗುತ್ತದೆ. ಅದು ಭೂಮಿಗಿಂತ ಹೆಚ್ಚು ವಿಕಿರಣ ಹೊರಸೂಸುತ್ತದೆ.

ಅಧ್ಯಾಪಕರು : ರವಿ ಹೇಳಿದ್ದು ಸರಿ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಬಸ್ಸಿನ ತಗಡು ಉಷ್ಣದ ವಾಹಕವಾದ ಕಾರಣ ಸುಲಭವಾಗಿ ಉಷ್ಣ ಹೀರುತ್ತದೆ. ಭೂಮಿಗೆ ಹೋಲಿಸಿದರೆ ತಗಡಿನ ದ್ರವ್ಯರಾಶಿ ಕಡಿಮೆ ಇರುವ ಕಾರಣ ಭೂಮಿಗಿಂತಲೂ ಬೇಗ ತಾಪ ಹೆಚ್ಚಿಸಿಕೊಳ್ಳುತ್ತದೆ. ತಾಪದ ಹೆಚ್ಚಳವಾದ ಹಾಗೆಲ್ಲಾ ಉಷ್ಣವನ್ನು ಹೊರಹಾಕುವಿಕೆಯೂ ತೀವ್ರವಾಗಿ ಸೆಖೆ ಹೆಚ್ಚಾಗುತ್ತದೆ. ಬಿಸಿಲಿಗಿಂತಲೂ ಲೋಹದ ತಗಡಿನ ನೆರಳೇ ಹೆಚ್ಚು ತ್ರಾಸದಾಯಕ.

ಒಬ್ಬ ತುಂಟ ಹುಡುಗನಿದ್ದ. ಗ್ರಾಮೀಣ ಶಾಲೆಯಲ್ಲಿ ಬೇಸಗೆ ದಿನ ಅಧ್ಯಾಪಕರು ಪಾಠ ಹೇಳುತ್ತಿದ್ದಾಗ ತನ್ನ ಪಕ್ಕದಲ್ಲಿ ಕುಳಿತಿದ್ದ ವಿದ್ಯಾರ್ಥಿಯೊಡನೆ ಮಾತನಾಡಲು ಹೋದ. ಅಧ್ಯಾಪಕರಿಗೆ ಕೋಪ ಬಂತು. ಮೊದಲೇ ಬೇಸಗೆ; ಒಳಗೂ ಹೊರಗೂ ಬಿಸಿ. ಬೆಂಚಿನ ಮೇಲೆ ನಿಲ್ಲುವಂತೆ ವಿದ್ಯಾರ್ಥಿಗೆ ಶಿಕ್ಷೆ ನೀಡಿದರು. ಆಗ ವಿದ್ಯಾರ್ಥಿ ಬೆಂಚಿನ ಮೇಲೆ ನಿಂತು `ಥ್ಯಾಂಕ್ಸ್ ಸರ್‘ ಎಂದ. ಅಧ್ಯಾಪಕರು ಕಕ್ಕಾಬಿಕ್ಕಿಯಾದರು. ನನಗೇಕೋ ಥ್ಯಾಂಕ್ಸ್ ಎನ್ನುತ್ತೀಯೆ ಎಂದರು. `ಹೇಗೂ ಬೇಸಗೆ, Higher we go cooler we feel’ ಎಂದು ತುಂಟ ಉತ್ತರಿಸಿದ.

ವಿದ್ಯಾರ್ಥಿಗಳೆಲ್ಲಾ ನಕ್ಕರು.

ಅನಂತರ ಪ್ರಶ್ನೆಯೊಂದು ಕಾದಿತ್ತು.

ಅಧ್ಯಾಪಕರು : ಬೆಂಚಿನ ಮೇಲೆ ನಿಂತರೆ ಕುಳಿತದ್ದಕ್ಕಿಂತಲೂ ತಂಪಿನ ಅನುಭವವಾಗುವುದೇ?

`ಏಕಿಲ್ಲ ಸರ್‘ – ಎಂದಳು ಮಂಜುಳಾ.

ಅಧ್ಯಾಪಕರು : ಭೂಮಿಯಿಂದ ಕಿಲೋಮೀಟರ್‌ಗಟ್ಟಲೆ ಎತ್ತರ ಸಾಗಿದರೆ ಮಾತ್ರ ತಂಪಿನ ಅನುಭವ ಆಗುವುದು. ಬೆಂಚಿನಲ್ಲಿ ಕುಳಿತಾಗ ಬೆಂಚಿನ ಮೇಲೆ ನಿಂತಾಗ ಆಗುವ ಎತ್ತರದ ವ್ಯತ್ಯಾಸ ಕೆಲವು ಮೀಟರ್‌ಗಳು ಮಾತ್ರ. ಹೀಗಾಗಿ ತಂಪಿನ ಅನುಭವ ಆಗಲು ಸಾಧ್ಯವೇ ಇಲ್ಲ.

ಬದಲಿಗೆ ಸೆಖೆಯ ಅನುಭವ ಆಗುವುದುಂಟು. ಶಾಲೆಯ ಹೆಂಚಿನ ಸೂರು ನೆಲಕ್ಕಿಂತಲೂ ವೇಗವಾಗಿ ಬಿಸಿಯಾಗುವ ಕಾರಣ ಕಾದ ಸೂರಿನಿಂದ ಬರುವ ಝಳದಿಂದ ಬಿಸಿಲ ಬೇಗೆ ಹೆಚ್ಚಾಗುತ್ತದೆ – ಬಸ್ಸಿನೊಳಗೆ ಆಗುವ ಸೆಖೆ ನೇರ ಬಿಸಿಲಿಗೆ ಒಡ್ಡಿಕೊಂಡಿದ್ದಕ್ಕಿಂತ ಹೆಚ್ಚು ಆದ ಹಾಗೆ.

ವಿನೋದ ಎದ್ದು ನಿಂತು ರವಿಯ ಕಡೆಗೆ ನೋಡಿ ನಗುತ್ತಾ ಹೀಗೆ ಹೇಳಿದ “ತಾಪದ ಬಗ್ಗೆಯಾಗಲಿ ಸೂರ್ಯನ ಪ್ರತಾಪ ಅಂದರೆ ರವಿಪ್ರತಾಪದ ಬಗ್ಗೆಯಾಗಲಿ ನಮಗೆ ಏನೇನೂ ತಿಳಿದಿರಲಿಲ್ಲವಲ್ಲಾ ಎಂದು ನಮಗೆಲ್ಲಾ ಪರಿತಾಪ ಹಾಗೂ ಪಶ್ಚಾತಾಪ ಆಗುತ್ತಿದೆ‘’.

ಎಲ್ಲರೂ ಗೊಳ್ಳೆಂದು ನಕ್ಕರು.

ರವಿಪ್ರತಾಪನ ಮುಖ ಮಾತ್ರ ಉದಯರವಿಯಂತೆ ಕೆಂಪಗಾಯಿತು.

ತೇಜಸ್ ಎದ್ದು ನಿಂತು “ಸರ್, ಹೆಚ್ಚಿನ ತಾಪದಲ್ಲಿರುವ ಇಲ್ಲವೆ ಸಾಧಾರಣ ತಾಪದಲ್ಲಿರುವ ಕಣಗಳು ಉಷ್ಣದಿಂದಾಗಿ ಚಲಿಸುತ್ತವೆ. ಚಲನೆಯಿಂದಾಗಿ ತಾಪ ಎಂದು ಹೇಳಿದಿರಿ. ಬಹಳ ಕಾಲ ಹೀಗೆ ಚಲಿಸಿದ ಮೇಲೆ ಅವುಗಳ ವೇಗ ಕಡಿಮೆ ಆಗಿ ತಾಪವು ತಂತಾನೆ ಕಡಿಮೆ ಆಗುವುದಿಲ್ಲವೇ?’’ ಎಂದ.

ಅಧ್ಯಾಪಕರು : ಅಣುವಿನ ಮಟ್ಟದಲ್ಲಿ ಚಲಿಸುವ ಕಣಗಳು ಎಷ್ಟು ಕಾಲ ಚಲಿಸಿದರೂ ಅವುಗಳ ವೇಗ ಕಡಿಮೆ ಆಗುವುದಿಲ್ಲ. ಏಕೆಂದರೆ ಚಲನೆಗೆ ಯಾವುದೇ ಅಡ್ಡಿಯುಂಟು ಮಾಡುವ ಬಲ ಇರುವುದಿಲ್ಲ. ನಾನೀಗ ಚಾಕ್‌ಪೀಸ್ ಅನ್ನು ಉರುಳಿ ಬಿಟ್ಟರೆ ಕೊಂಚ ದೂರ ಸಾಗಿ ಅದು ನಿಂತುಹೋಗುವುದು. ಏಕೆಂದರೆ ಸೀಮೆಸುಣ್ಣದ ಚೂರಿಗೂ ನೆಲಕ್ಕೂ ಘರ್ಷಣೆ ಉಂಟಾಗುವುದು. ಘರ್ಷಣೆಯು ಚಲನೆಗೆ ಅಡ್ಡಿ ಮಾಡುವುದು ಅಣುಗಳು ಚಲಿಸುವಾಗ ಯಾವುದೇ ಅಡ್ಡಿಯಿಲ್ಲದ ಕಾರಣ ಅವುಗಳ ವೇಗ ಕಡಿಮೆಯಾಗುವುದಿಲ್ಲ; ತಾಪವೂ ಸ್ಥಿರವಾಗಿರುತ್ತದೆ.

ಇನ್ನೂ ವಿಚಿತ್ರವೆಂದರೆ ಅನಿಲದ ಅಣುಗಳದ್ದು. ಅನಿಲದ ಅಣುಗಳು ಚಲಿಸುವಾಗ ಪರಸ್ಪರ ತಾಕಲಾಟವಾಗುವುದುಂಟು. ಹಾಗೆ ತಾಕಲಾಟವಾದಾಗ ಒಂದು ಕಣಕ್ಕಾಗುವ ಚಲನಶಕ್ತಿಯ ನಷ್ಟದಷ್ಟೇ ಲಾಭ ಇನ್ನೊಂದು ಕಣಕ್ಕೆ ಆಗುತ್ತದೆ. ಹೀಗಾಗಿ ಒಟ್ಟು ಶಕ್ತಿಯಲ್ಲಿ ಏರಿಕೆಯೂ ಆಗದು ಇಳಿಮುಖವೂ ಆಗದು. ಈ ಬಗೆಯ ತಾಕಲಾಟಕ್ಕೆ ಸ್ಥಿತಿಸ್ಥಾಪಕ ತಾಕಲಾಟ ಎಂದು ಹೆಸರು. ಈ ಬಗ್ಗೆ ಮುಂದಿನ ತರಗತಿಯಲ್ಲಿ ಓದುವಿರಿ.

“ವಿಜ್ಞಾನಿ ಮೊದಲು ಮಾಪನ ಮಾಡಿದ್ದು ತಾಪವನ್ನೋ ಉಷ್ಣವನ್ನೋ?’’ ಎಂದು ಪ್ರಶ್ನಿಸಿದ ಪ್ರಥಮ. ಆ ವೇಳೆಗೆ ಬೆಲ್ ಹೊಡೆಯಿತು. ಮುಂದಿನ ತರಗತಿಯಲ್ಲಿ ಉತ್ತರಿಸುವುದಾಗಿ ಹೇಳಿ ಅಧ್ಯಾಪಕರು ನಿರ್ಗಮಿಸಿದರು.

 

ಗಮನಿಸಿ :

ಪರಮಾಣುವಿನ ಆಂತರ್ಯದಲ್ಲೂ ಶೂನ್ಯವೇ ಇದೆ. ಇಲ್ಲದೆ ಹೋಗಿದ್ದರೆ ಪರಮಾಣುವಿನ ಘಟಕವಾದ ಇಲೆಕ್ಟ್ರಾನು ನ್ಲೂಕ್ಲಿಯಸ್ಸಿನ ಸುತ್ತಲೂ ಸುತ್ತುವುದು ಸಾಧ್ಯವೇ ಆಗುತ್ತಿರಲಿಲ್ಲ. ಇಲ್ಲವೆ ಇಲೆಕ್ಟ್ರಾನು ತನ್ನ ವೇಗವನ್ನು ಕಳೆದುಕೊಂಡು ನ್ಯೂಕ್ಲಿಯಸ್ ಅನ್ನು ಸಮೀಪಿಸಿ ಪರಮಾಣು ನಾಶವಾಗುತ್ತಿತ್ತು.

ಅಂತೂ ಪರಮಾಣುವಿನ ಒಳಗೂ ಅಂದರೆ ಪರಮಾಣುವಿನ ಘಟಕ ಕಣಗಳ ಆಸುಪಾಸಿನಲ್ಲೂ ಶೂನ್ಯ. ಹಾಗೆಯೇ ಪರಮಾಣುಗಳ ನಡುವೆಯೂ ಶೂನ್ಯ.

ಬೃಹತ್ ಜಗತ್ತನ್ನು ಗಮನಿಸಿದರೆ ತಾರೆಗಳ ನಡುವೆಯೂ ಶೂನ್ಯವಿದೆ! ಈ ಶೂನ್ಯವನ್ನೇ ಅವಕಾಶ (space) ಎನ್ನಲಾಗುವುದು!