“ಅಮ್ಮಾ ಹಸಿವು. ಶಾಲೆಗೆ ಲೇಟಾಯ್ತು‘’ – ಎಂದು ಅಡುಗೆ ಮನೆಗೆ ಧಾವಿಸಿದ ರವಿ ಪ್ರತಾಪ್ “ಹಸಿವೆ, ಊಟದ್ದೋ, ಪಾಠದ್ದೋ?’’ – ಎಂದು ನಗೆಯಾಡಿದ ಅಮ್ಮ ತಮ್ಮ ಮಗನಿಗೆ ದೋಸೆ ಮಾಡಲು ತೊಡಗಿದರು.

“ಅಮ್ಮಾ, ದೋಸೆ ಏಕೆ ಬಿಸಿಯಾಗುತ್ತಿದೆ?’’ – ಎಂದ ರವಿ.

“ಬಿಸಿ ಕಾವಲಿಯಿಂದ ದೋಸೆ ಉಷ್ಣವನ್ನು ಹೀರಿಕೊಳ್ಳುತ್ತಿದೆ‘’ – ಅಮ್ಮ ಎಂದರು. “ಕಾವಲಿ ಏಕೆ ಬಿಸಿ?’’ – ಮರು ಪ್ರಶ್ನೆ.

“ಒಲೆಯ ಜ್ವಾಲೆಯಿಂದ ಕಾವಲಿ ಉಷ್ಣ ಹೀರಿಕೊಳ್ಳುತ್ತಿದೆ‘’ – ಅಮ್ಮನ ಉತ್ತರ.

“ಕಾವಲಿ ಒಲೆಯಿಂದಲೇ ಯಾಕೆ ಬಿಸಿ ಹೀರಬೇಕು? ದೋಸೆಗೆ ಯಾಕೆ ಹಿಂತಿರುಗಿಸಬೇಕು? ದೋಸೆಯಿಂದ ಬಿಸಿ ಹೀರಿ ಕಾದ ಕಾವಲಿ ಒಲೆಗೇ ಬಿಸಿ ಹಿಂತಿರುಗಿಸಬಾರದೇಕೆ?’’ – ರವಿಯ ಪ್ರತಿಕ್ರಿಯೆ.

ಅಮ್ಮ ಕಂಗಾಲಾದರು. “ದೋಸೆ ತಿನ್ನುವುದನ್ನು ಬಿಟ್ಟು, ನಿನಗೇಕೆ ಈ ಪ್ರಶ್ನೆಗಳ ಗೋಜಲು? ನಾನು ಹೇಳಿದ್ದು ನಿಜವಾಗಿಯೇ ಇದೆ. ನಿನಗೆ ಪಾಠದ ಹಸಿವು; ದೋಸೆಯ ಹಸಿವಲ್ಲ.

ಜ್ವಾಲೆಯಲ್ಲಿ ಹೆಚ್ಚು ಬಿಸಿ ಇದೆ. ಅದಕ್ಕೇ ಅದು ಕಾವಲಿಗೆ ನೀಡುತ್ತದೆ. ಕಾವಲಿ ದೋಸೆಗಿಂತ ಹೆಚ್ಚು ಬಿಸಿ. ಆದ್ದರಿಂದ ಕಾವಲಿಯಿಂದ ಉಷ್ಣವು ದೋಸೆಗೆ ಹರಿಯುತ್ತದೆ. ನನಗೆ ತಿಳಿದಿರುವುದಿಷ್ಟು. ಹೆಚ್ಚು ಪ್ರಶ್ನೆ ಏನಿದ್ದರೂ ನೀನು ನಿನ್ನ ಮಾಸ್ತರರನ್ನು ಕೇಳು. ಈಗ ದೋಸೆ ತಿಂದು ಹೊರಡು‘’ – ಎಂದರು ರವಿಪ್ರತಾಪನ ತಾಯಿ.

ರವಿಪ್ರತಾಪ ದೋಸೆ ತಿಂದು, ಪುಸ್ತಕಗಳನ್ನು ಜೋಡಿಸಿಕೊಂಡು ಶಾಲೆಗೆ ಹೊರಡುವ ವೇಳೆಗೆ ಅವನ ಗೆಳೆಯ ಮಾನಸ ಬಂದ. ಇಬ್ಬರೂ ಶಾಲೆಗೆ ಹೊರಟರು.

ಮಾನಸ ಹೇಳಿದ “ನಿನ್ನೆ ಬೆಳಗಿನ ಜಾವ ನನಗೊಂದು ಕನಸು ಬಿದ್ದಿತು. ಆ ಕನಸಿನ ಲೋಕದಲ್ಲಿ ಅಗೋಚರ ಕಣಗಳು ಕಾಣತೊಡಗಿದವು. ಘನ ವಸ್ತುವಾದ ನನ್ನ ಹೊದಿಕೆಯ ಕಣಗಳು ಲೋಲಕದ ಗುಂಡಿನಂತೆ ಅತ್ತಿಂದಿತ್ತ ಸುತ್ತಿದ್ದವು. ನನ್ನ ಮೈ ಬಿಸಿಗೆ ಇನ್ನೂ ವೇಗವಾಗಿ ಕಂಪಿಸತೊಡಗಿದವು. ನಿದ್ದೆಯಿಂದ ಬಂದ ಜೊಲ್ಲಿನ ಕಣಗಳು ಇನ್ನೂ ವೇಗದ ಚಲನೆ ಮಾಡತೊಡಗಿದ್ದವು. ಜೊಲ್ಲಿನ ಮೇಲ್ಪದರದಲ್ಲಿ ಜೊಲ್ಲಿನ ಕಣಗಳು ಜೋರಾಗಿ ಚಲಿಸಿ ಗಾಳಿಯ ಕಣಗಳೊಡನೆ ಓಡಿಹೋದವು. ಆಗ ಜೊಲ್ಲಿನ ದ್ರವದಲ್ಲಿ ಕಣಗಳು ಮತ್ತಷ್ಟು ಬಂದು ಆ ಜಾಗವನ್ನು ಆಕ್ರಮಿಸಿದವು. ಎಲ್ಲ ಕಣಗಳೂ ಹೀಗೆ ನಿರಂತರ ಚಲಿಸುವಾಗ ನಾನು ಮಾತ್ರ ನಿದ್ದೆ ಮಾಡುತ್ತ ಜಡವಾಗಿ ಬಿದ್ದಿರುವ ಸೋಮಾರಿ ಎಂದು ನನಗೆ ನಾಚಿಕೆಯಾಯಿತು. ಎಚ್ಚರಿಕೆಯಾಗಿ ಎದ್ದುಬಿಟ್ಟೆ.‘’

ರವಿಪ್ರತಾಪ ಮುಗುಳು ನಕ್ಕ. “ಯಾಕೋ ನಗ್ತಿದ್ದೀಯಾ?’’ – ಎಂದು ಗೋಗರೆದ ಮಾನಸ.

“ನಗು ಬಂದಿದ್ದು ಯಾಕೇಂತ ಹೇಳ್ತೀನಿ ಕೇಳು. ನೀನು ಎಂದರೆ ನಿನ್ನ ದೇಹ ತಾನೆ? ನಿನ್ನ ದೇಹವೂ ಘನ, ದ್ರವ ಮತ್ತು ಅನಿಲಗಳಿಂದ ಆಗಿದೆ ತಾನೆ? ಆ ಕಣಗಳೂ ಚಲಿಸುತ್ತಿವೆ ತಾನೆ? ಚಳಿಗಾಲದಲ್ಲಿ ನಿನ್ನ ದೇಹ ಹೊರಗಿಗಿಂತ ಹೆಚ್ಚು ಬೆಚ್ಚಗಿರುವಾಗ ದೇಹದ ಕಣಗಳು ಹೊರಗಿನ ಕಣಗಳಿಗಿಂತ ವೇಗವಾಗಿ ಚಲಿಸುತ್ತಿರಬೇಕು ತಾನೆ?’’ ಎಂದ ರವಿ.

ಅಬ್ಬಾ, ಪ್ರಶ್ನೆಗಳ ಸುರಿಮಳೆ ಹಾಕಿ ನನ್ನನ್ನು ಕಟ್ಟಿಹಾಕಿಬಿಟ್ಟೆ. ಜಗತ್ತೇ ಜಡವಾಗಿ ಕಾಣುವುದು ನಮ್ಮ ತೋರಿಕೆ. `ಎಲ್ಲೆಲ್ಲೂ ಸಂUತವೇ‘ ಎಂದು ಸಿನಿಮಾ ಹಾಡಿದೆ. `ಎಲ್ಲೆಲ್ಲೂ ಚಲನೆಯೇ?’ ಎಂದು ಬರೆದಿದ್ದರೆ ಚೆನ್ನಾಗಿತ್ತು‘’ ಎಂದ ಮಾನಸ. ಇಬ್ಬರೂ ನಕ್ಕರು.

“ಉಷ್ಣ ಜ್ವಾಲೆಯಿಂದ ಕಾವಲಿಗೆ, ಕಾವಲಿಯಿಂದ ದೋಸೆಗೆ ಏಕೆ ವರ್ಗಾವಣೆ ಆಗಬೇಕು? ದೋಸೆಯಿಂದ ಕಾವಲಿಗೆ, ಕಾವಲಿಯಿಂದ ಜ್ವಾಲೆಗೆ ಏಕೆ ವರ್ಗಾವಣೆ ಆಗಬಾರದು? – ಎಂದು ಕೇಳಿ ನಮ್ಮಮ್ಮ ಕೋಪಿಸಿಕೊಳ್ಳುವಂತೆ ಮಾಡಿದೆ‘’ ಎಂದು ಪಶ್ಚಾತ್ತಾಪದ ದ್ವನಿಯಲ್ಲಿ ರವಿ ಹೇಳಿದ.

“ಹೋಗಲಿ ಬಿಡೊ; ಮಾಸ್ತರರು ಇದ್ದಾರೆ; ನಮಗೇಕೆ ಚಿಂತೆ; ಅವರನ್ನು ಕೇಳಿದರಾಯಿತು. ಇಲ್ಲವೆ, ಅವರೇ ಹೇಳಬಹುದು. ಅನೇಕ ವೇಳೆ ನಾವು ಕೇಳಬೇಕೆಂದಿರುವುದನ್ನು ಅವರೇ ಹೇಳಿಬಿಡುತ್ತಾರೆ, ಪಾಠದ ನೆಪದಲ್ಲಿ‘’ – ಎಂದು ಸಾಂತ್ವನದ ದನಿಯಲ್ಲಿ ಮಾನಸ ಹೇಳಿದ. ಆ ವೇಳೆಗಾಗಲೆ ಅವರು ಶಾಲೆ ತಲಪಿಯಾಗಿತ್ತು.

ಅಧ್ಯಾಪಕರು ಮುಗುಳುನಗುತ್ತಲೇ ತರಗತಿಗೆ ಪ್ರವೇಶಿಸಿದರು. “ ನಿಮ್ಮ ಕೈ ಮೇಲೆ ಮಂಜುಗಡ್ಡೆ ತುಂಡು ಇರಿಸಿಕೊಂಡಿದ್ದೀರಿ ಎಂದು ಭಾವಿಸಿ. ಆಗ ಆಗುವುದೇನು?’’ – ಅಧ್ಯಾಪಕರ ಪ್ರಶ್ನೆ.

ಶೀತಲ್ : ಕೈ ತಣ್ಣಗಾಗುತ್ತದೆ.

ಅಧ್ಯಾಪಕರು : ಅದೇಕೆ?

ಶೀತಲ್ : ತಂಪು ಮಂಜುಗಡ್ಡೆಯಿಂದ ಕೈಗೆ ಬರುತ್ತದೆ.

ಅಧ್ಯಾಪಕರು : ತಂಪು ವರ್ಗಾವಣೆ ಎಂಬುದೇ ಇಲ್ಲ. ಆಮೇಲೆ?

ತೇಜಸ್ : ಮಂಜು ಕರಗಿ ನೀರಾಗುತ್ತದೆ.

ಅಧ್ಯಾಪಕರು : ಮಂಜು ಕರಗಿದ್ದೇಕೆ?

ತೇಜಸ್ : ದೇಹದಿಂದ ಬಿಸಿಯು ಮಂಜನ್ನು ಪ್ರವೇಶಿಸಿ ಮಂಜು ಬಿಸಿಯಾಗಿದ್ದ ಕಾರಣ ಅದು ಕರಗಿತು.

ಅಧ್ಯಾಪಕರೆಂದರು “ಈಗ ನನ್ನ ವಿವರಣೆಯ ಸರದಿ. ನೀವು ಜನಜನಿತ ಉತ್ತರಗಳನ್ನು ಹೇಳಿದ್ದೀರಿ. ಈಗ ವಾಸ್ತವವನ್ನು ತಿಳಿಯಿರಿ‘. ಎಲ್ಲರೂ ಕಿವಿಯಾನಿಸಿ ಕೇಳಲು ತೊಡಗಿದರು.

ಅಧ್ಯಾಪಕರು : ಮಂಜುಗಡ್ಡೆಯನ್ನು ಕೈಯಲ್ಲಿ ಹಿಡಿದಾಗ ಕೈಯಿಂದ ಉಷ್ಣವು ಮಂಜುಗಡ್ಡೆಗೆ ವರ್ಗಾವಣೆ ಆಗುತ್ತದೆ. ಅಂತೆಯೇ ಮಂಜುಗಡ್ಡೆಯಿಂದಲೂ ಕೈಗೆ ಉಷ್ಣವೇ ವರ್ಗಾವಣೆ ಆಗುತ್ತದೆ! ಆದರೆ ಕೈಗೇಕೆ ತಂಪಿನ ಅನುಭವ ಎಂಬ ಪ್ರಶ್ನೆ ನಿಮಗೆ ಏಳುವುದು ಸಹಜ. ಸ್ವಲ್ಪ ತಾಳ್ಮೆಯಿಂದ ಕೇಳಿ ತಿಳಿಯಿರಿ.

ದೇಹದಿಂದ ಮಂಜುಗಡ್ಡೆಗೆ ವರ್ಗಾವಣೆ ಆಗುವ ಉಷ್ಣಕ್ಕೆ ಹೋಲಿಸಿದರೆ ಮಂಜುಗಡ್ಡೆಯಿಂದ ದೇಹಕ್ಕೆ ಆಗುವ ಉಷ್ಣದ ವರ್ಗಾವಣೆ ಕಡಿಮೆ. ಇದರ ಒಟ್ಟು ಪರಿಣಾಮವೆಂದರೆ, ಕಾಲ ಕಳೆದಂತೆಲ್ಲಾ ದೇಹವು ಉಷ್ಣವನ್ನು ನಷ್ಟಮಾಡಿಕೊಳ್ಳುತ್ತದೆ. ಈ ಉಷ್ಣನಷ್ಟದಿಂದ ನಮಗೆ ಆಗುವ ಅನುಭವವೇ ತಂಪಿನ ಅನುಭವ.

ರವಿ : ಉಷ್ಣ ಸೇರ್ಪಡೆಯಿಂದ ಆಗುವ ಅನುಭವವೇ ಸುಡುವ ಅನುಭವ.

ಅಧ್ಯಾಪಕರು : ಸುಡುವ ಅನುಭವ ಹಾಗೂ ತಂಪಿನ ಅನುಭವ ಜೀವಿಗಳಿಗೆ ಮಾತ್ರ. ಕಲ್ಲಿಗೆ ಸುಡುವ ಅನುಭವವೂ ಇಲ್ಲ; ತಂಪಿನ ಅನುಭವವೂ ಇಲ್ಲ!

`ಮಂಜುಗಡ್ಡೆ ಬಿಸಿಯಾಗಿದ್ದರಿಂದ ಕರಗಿತು‘ ಎಂಬ ತೇಜಸ್‌ನ ಹೇಳಿಕೆ ಸರಿಯಾದದ್ದಲ್ಲ. ಮಂಜುಗಡ್ಡೆ ಬಿಸಿಯಾಗಲೂ ಇಲ್ಲ. ಸುಡುವ ಅನುಭವ ಮಂಜುಗಡ್ಡೆಗೆ ಆಗಲೂ ಇಲ್ಲ!

ರವಿ : ಮಂಜುಗಡ್ಡೆಗೆ ಜೀವವಿಲ್ಲದ ಕಾರಣ ಅದಕ್ಕೆ ಬಿಸಿ ಅನುಭವ ಆಗದೆ ಇರುವುದೇನೋ ಸರಿ. ಆದರೆ ಉಷ್ಣ ನೀಡಿದರೂ ಮಂಜುಗಡ್ಡೆ ಬಿಸಿಯಾಗಲಿಲ್ಲವೇಕೆ? ಬಿಸಿಯಾಗದೆ ಅದು ನೀರಾಗಿದ್ದು ಹೇಗೆ?

ಅಧ್ಯಾಪಕರು : ಕೈಮೇಲೆ ಹಿಡಿದಾಗ ಕೈಯಿಂದ ಮಂಜುಗಡ್ಡೆಗೆ ವರ್ಗಾವಣೆ ಆದ ಉಷ್ಣ ಮಂಜುಗಡ್ಡೆಯನ್ನು ನೀರಾಗಿ ದ್ರವರೂಪಕ್ಕೆ ತರಲು ಬಳಕೆ ಆದ ಕಾರಣ ಬಿಸಿಯಾಗಲಿಲ್ಲ. ಯಾವುದೇ ಘನ, ದ್ರವ ರೂಪಕ್ಕೆ ಬರುವಾಗ, ದ್ರವ ಅನಿಲ ರೂಪಕ್ಕೆ ಬರುವಾಗ ಉಷ್ಣ ನೀಡಬೇಕು. ಹಾಗೆ ಉಷ್ಣ ನೀಡಿದರೂ ಅದು ತನ್ನ ಭೌತಿಕ ಸ್ಥಿತಿ ಬದಲಾಯಿಸಿಕೊಳ್ಳುವುದೇ ವಿನಾ ಬಿಸಿಯಾಗುವುದಿಲ್ಲ.

ಬಿಸಿಯಾಗುವುದೆಂದರೇನೆಂಬ ಬಗ್ಗೆ ನಾನು ನಿಮಗೆ ಈಗ ಸ್ಪಷ್ಟಪಡಿಸಿ ಹೇಳುತ್ತೇನೆ. `ಬಿಸಿಯಾಗುವುದು‘ ಎಂಬುದಕ್ಕೆ ತಾಪ ಹೆಚ್ಚಳ ಎಂಬ ಪದ ಹೇಳಲಾಗುತ್ತದೆ. ತಾಪ, ಉಷ್ಣಾಂಶ, ತಾಪಮಾನ ಎಂದೆಲ್ಲಾ ಹೇಳಲಾಗುವ ಈ ಲಕ್ಷಣ ಕುರಿತು ತಿಳಿಯಬೇಕಾದದ್ದಿದೆ. ತಾಪವೂ ಉಷ್ಣವೂ ಪರಸ್ಪರ ಸಂಬಂಧಿಗಳೇ ಆದರೂ ಬೇರೆ ಬೇರೆ ಪರಿಮಾಣಗಳು. ಉಷ್ಣವು ದ್ರವ್ಯವೋ ಅಥವಾ ಶಕ್ತಿಯೋ ಎಂಬ ಗೊಂದಲ ಇದ್ದ ಹಾಗೆಯೇ ಉಷ್ಣವೂ ತಾಪವೂ ಒಂದೇ ಎಂಬ ನಂಬಿಕೆ ಇದ್ದಿತು. ಆದರೆ ಈಗ ಆ ಎರಡೂ ಪರಸ್ಪರ ಸಂಬಂಧಿಗಳಾದರೂ ಪ್ರತ್ಯೇಕ ಎಂಬ ಬಗೆಗೆ ನಿಮಗೆ ಈಗ ತಿಳಿಸುವೆ.

ಈಗೊಂದು ಪ್ರಯೋಗ ಕಲ್ಪಿಸಿಕೊಳ್ಳೋಣ. ಮೇಣದ ಬತ್ತಿಯನ್ನು ಉರಿಸಿ ಗುಂಡುಸೂಜಿಯನ್ನು ಕೆಂಪಗೆ, ನೀನು ಕಾಸಿದೆಯೆನ್ನೋಣ. ಆಗ ಉಷ್ಣ ನಿನ್ನ ದೇಹದಲ್ಲಿ ಹೆಚ್ಚಿರುತ್ತದೊ, ಗುಂಡುಸೂಜಿಯಲ್ಲೊ? ಸಹಜವಾಗಿಯೇ ನಿನ್ನ ದೇಹದಲ್ಲಿ ಹೆಚ್ಚು ಉಷ್ಣ. ಏಕೆಂದರೆ ನಿನ್ನ ದೇಹದಲ್ಲಿರುವ ಘನ, ದ್ರವ ಅನಿಲ ರೂಪದ ದ್ರವ್ಯದ ಅಣುಗಳ ಸಂಖ್ಯೆ ಹೆಚ್ಚು. ಅಂದ ಮೇಲೆ ಅವುಗಳಲ್ಲಿ ಅಡಗಿರುವ ಉಷ್ಣದ ಮೊತ್ತ ಹೆಚ್ಚು. ಗುಂಡುಸೂಜಿಯನ್ನು ಕಾಸಿದ್ದರೂ ಅದರಲ್ಲಿರುವ ಅಣು / ಪರಮಾಣುಗಳ ಸಂಖ್ಯೆಯೇ ಕಡಿಮೆ ಇರುವ ಕಾರಣ ಆ ಗುಂಡುಸೂಜಿಯಲ್ಲಿರುವ ಉಷ್ಣದ ಪರಿಮಾಣ ಕಡಿಮೆ. ಆದರೂ ಗುಂಡುಸೂಜಿಯು ಕೈಗೆ ಬರೆ ಎಳೆಯುತ್ತದೆ; ಚರ್ಮ ಸುಡುತ್ತದೆ. ಅಂದ ಮೇಲೆ ಉಷ್ಣವು ಗುಂಡುಸೂಜಿಯಿಂದ ಕೈಗೆ ಬಂದಿದ್ದು ಅಧಿಕವೆಂದಾಯಿತು.

ಅಷ್ಟೇ ಅಲ್ಲ. ಒಂದು ದ್ರವ್ಯದಲ್ಲಿರುವ ಉಷ್ಣದ ಪರಿಮಾಣ ತಿಳಿದು ಉಷ್ಣ ಹರಿಯುವ (ಉಷ್ಣ ದ್ರವ ಅಲ್ಲದಿದ್ದರೂ ಈ ಪ್ರಯೋಗ ಬಳಕೆಯಲ್ಲಿರುವುದನ್ನು ಗಮನಿಸಿ) ದಿಕ್ಕನ್ನು ನಿರ್ಧರಿಸುವುದಿಲ್ಲ.

ಅಂದಮೇಲೆ ಉಷ್ಣ ಯಾವ ದ್ರವ್ಯದಿಂದ ಯಾವ ದ್ರವ್ಯಕ್ಕೆ ಸಾಗುತ್ತದೆಂದು ನಿರ್ಧರಿಸುವುದು ಉಷ್ಣವಲ್ಲ, ತಾಪ.

ಉಷ್ಣಕ್ಕೂ, ತಾಪಕ್ಕೂ ಇರುವ ಅಂತರ ಹಾಗೂ ಸಂಬಂಧದ ಸ್ಪಷ್ಟ ಅರಿವು ಅಗತ್ಯ. ಉಷ್ಣ / ತಾಪಗಳ ಬಗೆಗೂ ವಿಜ್ಞಾನಿಗಳಿಗೂ ಗೊಂದಲವಿದ್ದಿತು. ಥರ್ಮ್ ಎಂದರೆ ಉಷ್ಣ. ಉಷ್ಣ ಶಕ್ತಿಯನ್ನು ತರ್ಮಲ್ ಎನರ್ಜಿ ಎನ್ನುತ್ತಾರೆ. ಆದರೆ ತರ್ಮಾಮೀಟರ್ – ಉಷ್ಣಮಾಪಕ. ತರ್ಮೋಸ್ಟಾಟ್ – ಸ್ಥಿರತಾಪಿ. ಈ ಪದಗಳಲ್ಲಿ Therm ಎಂಬ ಪದವನ್ನು ತಾಪ ಎಂಬರ್ಥದಲ್ಲಿ ಬಳಕೆ ಆಗಿರುವುದನ್ನು ಗಮನಿಸಿ.

ಈ ವೇಳೆಗೆ ಬೆಲ್ ಆಯಿತು.