ಆ ದಿನ ಶನಿವಾರ. ಬೆಳಗಿನ ತರಗತಿ ಮುಗಿಸಿಕೊಂಡು ಮನೆಗೆ ಬಂದ ರವಿ ಪುಸ್ತಕದ ಬ್ಯಾಗು ಎಸೆದು ಯೂನಿಫಾರಮ್ ಕಳಚಿ ನೇರವಾಗಿ ಬಚ್ಚಲಮನೆಗೆ ಓಡಿದ. ಸೆಖೆಯ ಸಲುವಾಗಿ ತಣ್ಣೀರು ಸ್ನಾನ ಮಾಡುವುದು ಅವನ ಉದ್ದೇಶ.

ಬಚ್ಚಲು ಮನೆಯಲ್ಲಿ ಬಕೆಟ್ಟಿನಲ್ಲಿದ್ದ ನೀರಿನ ಮೇಲೆ ಬಿಸಿಲು ನೇರವಾಗಿ ಬೀಳುತ್ತಿತ್ತು. ಬಕೆಟ್‌ನ ನೀರು ಬಿಸಿ ಇರಬೇಕೆಂದು ಭಾವಿಸಿ ನಲ್ಲಿ ತಿರುಗಿಸಿದ. ನಲ್ಲಿಯಲ್ಲಿ ಬಂದ ನೀರು ಬಿಸಿಯಾಗಿತ್ತು. ಬಕೆಟ್‌ನ ನೀರು ತಣ್ಣಗೇ ಇತ್ತು. ನೇರವಾಗಿ ಬಿಸಿಲಿಗೊಡ್ಡಿಕೊಂಡ ನೀರಿಗಿಂತ ಮಣ್ಣಿನ ಮರೆಯಲ್ಲಿನ ಕೊಳವೆಯ ಮೂಲಕ ಹರಿದುಬರುವ ಕೊಳಾಯಿ ನೀರು ಬಿಸಿಯಾಗಿದೆ. ಅದೇ ಸೂರ್ಯ; ಅದೇ ಬಿಸಿಲು; ಆದರೆ ಬಿಸಿಯಾಗುವಿಕೆಯ ಪರಿಣಾಮ ಮಾತ್ರ ಬೇರೆ! ಅಮ್ಮನನ್ನು ಕೇಳೋಣವೆಂದುಕೊಂಡ. ಬೈದುಬಿಟ್ಟರೆ…. ಎನಿಸಿ ಸುಮ್ಮನಾದ.

ಉಷ್ಣ ಆಕರವನ್ನು ಸುಧಾರಣೆ ಮಾಡಿ ತಾಪ ಹೆಚ್ಚಳ ಮಾಡಿದ ಹಾಗೆಯೇ ಉಷ್ಣ ಸ್ವೀಕಾರ ಮಾಡುವ ವ್ಯವಸ್ಥೆಯನ್ನು ಬದಲಾಯಿಸಿ ತಾಪದ ಹೆಚ್ಚಳ ಮಾಡಬಹುದೆಂದಾಯಿತು. ಈ ವಿಧಾನವನ್ನು ಎಲ್ಲಿಯಾದರೂ ಅಳವಡಿಸಿರಬಹುದೇ ಎಂದು ಆಲೋಚಿಸಿದ. ಪಕ್ಕದ ಮನೆಯ ಮೇಲೆ ಇರಿಸಿದ ಸೋಲಾರ್ ಹೀಟರ್ ವ್ಯವಸ್ಥೆ ಅವನ ಗಮನಕ್ಕೆ ಬಂದಿತು. ಇದೇ ಬಿಸಿಲಿನ ಬಳಕೆಯಿಂದಲೇ ಸೌರತಪ್ತಕ ಅರ್ಥಾತ್ ಸೋಲಾರ್ ಹೀಟರ್ ಕೊಳಾಯಿಯಿಂದ ಬರುವ ಬಿಸಿನೀರಿಗೆ ಬದಲಾಗಿ ಕುದಿಯುವ ನೀರನ್ನು ನೀಡುವುದು. ಸೋಲಾರ್ ಹೀಟರ್ ಬಳಕೆ ಮಾಡಿ ಅಡುಗೆ ಮಾಡಲು ಸಾಧ್ಯ ಎಂದರೆ ಉಷ್ಣದ ಆಕರವಾದ ಬಿಸಿಲನ್ನು ಬದಲಾವಣೆ ಮಾಡದೆ ಆ ಬಿಸಿಲಿನ ಉಷ್ಣವನ್ನು ಸ್ವೀಕರಿಸುವ ಕ್ರಮ ಸುಧಾರಣೆ ಆದ ಹಾಗೆ ಅಲ್ಲವೇ? ಎಂದವನಿಗನಿಸಿತು. `ನಾಳೆ, ಹಾಳು ಭಾನುವಾರ ಬೇರೆ. ಸೋಮವಾರದವರೆಗೆ ಕಾಯಬೇಕು ಈ ಅಧ್ಯಾಪಕರಿಗಾಗಿ‘ ಎಂದು ಮನದಲ್ಲೇ ಗೊಣಗಿಕೊಂಡ.

ಆ ದಿನ ಸಂಜೆ ಅವರಪ್ಪನೊಡನೆ ವಾಕಿಂಗ್ ಹೋಗುವಾಗ ಅಧ್ಯಾಪಕರು ಎದುರು ಸಿಕ್ಕರು. `ನಮಸ್ಕಾರ ಸರ್‘ ಎಂದು ನಾಚಿಕೊಳ್ಳುತ್ತಾ ರವಿ ನುಡಿದ. ರವಿಯ ತಂದೆ ಅಧ್ಯಾಪಕರನ್ನು ಮಗನ ವಿದ್ಯಾಭ್ಯಾಸ ಕುರಿತಂತೆ ವಿಚಾರಿಸಿದರು. ಅಲ್ಲಿಯೇ ಸಮೀಪದ ಬಂಡೆಯ ಮೇಲೆ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಾಗ ರವಿ ತನ್ನ ಪ್ರಶ್ನೆಯ ಬಾಣವನ್ನು ಮೆಲ್ಲಗೆ ಬತ್ತಳಿಕೆಯಿಂದ ಹೊರತೆಗೆದ. `ಮಾಸ್ತರರಿಗೆ ಭಾನುವಾರವೂ ಬಿಡುವು ಕೊಡುವುದಿಲ್ಲವೇನೋ?’ ಎಂದು ರವಿಯ ತಂದೆ ಹೇಳಿದರು. “ಭಾನುವಾರವೆಂದರೆ ರವಿಯದೇ ವಾರ. ಪಾಠವೆಂದರೆ ಆಟ, ನನಗೇನೂ ಕಾಟವಲ್ಲ ಕೇಳುಮರಿ‘’ – ಎಂದು ಅಧ್ಯಾಪಕರು ಪುಸಲಾಯಿಸಿದರು. ಆಗ ರವಿಗೆ ಧೈರ್ಯ ಬಂದಿತು. “ಅದೇ ಬಿಸಿಲನ್ನು ಬಳಕೆ ಮಾಡಿದರೂ ಸೌರ ಒಲೆಯಲ್ಲಿ ಅಡುಗೆ ಮಾಡುವ ತಾಪ ಬರಲು ಕಾರಣ ಏನು ಸಾರ್?’’ – ಕೇಳಿಯೇ ಬಿಟ್ಟ ರವಿ.

ಅಧ್ಯಾಪಕರು : ನೋಡು ಮರಿ. ಕಾರಣ ಒಂದಲ್ಲ; ಹಲವಾರು ಕಾರಣಗಳಿವೆ. ನೀರು ಉಷ್ಣವನ್ನು ನೇರವಾಗಿ ಹೀರುವುದಿಲ್ಲ. ಆದ್ದರಿಂದ ಲೋಹದ ಕೊಳವೆಯ ಮೂಲಕ ನೀರು ಹಾಯಿಸಲಾಗುತ್ತದೆ. ಆ ಕೊಳವೆಗಳಿಗೆ ಹಾಗೂ ಹಿನ್ನೆಲೆಗೆ ಕಪ್ಪು ಬಣ್ಣ ಬಳಿದು ಉಷ್ಣದ ಹೀರಿಕೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ. ಹೀರಿಕೆ ಆದ ಉಷ್ಣ ಹೊರಹೋಗದೆ ಇರುವ ಹಾಗೆ ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ. ಬಿಸಿಲನ್ನು ತನ್ನ ಮೂಲಕ ಹಾದು ಹೋಗಲು ಬಿಡುವ ಗಾಜು ಉಷ್ಣದ ವಿಕಿರಣಗಳಿಗೆ ಹಾದುಹೋಗಲು ಬಿಡದಂತೆ ಸೆರೆಹಿಡಿಯುತ್ತದೆ. ಹೀರಿಕೆ ದಕ್ಷತೆಯಿಂದ ಆಗಬೇಕು. ಹೀರಿಕೆಯಾದ ಉಷ್ಣಸೋರಿಕೆ ಆಗದಂತೆ ತಡೆಯಬೇಕು. ಈ ಎಲ್ಲ ಕ್ರಮಗಳಿಂದಾಗಿ ಸೌರ ಒಲೆಯಲ್ಲಿ ಉಷ್ಣ ಸೋರಿಕೆ ಆಗದಂತೆ ತಡೆಯಬೇಕು. ಈ ಎಲ್ಲ ಕ್ರಮಗಳಿಂದಾಗಿ ಸೌರ ಒಲೆಯಲ್ಲಿ ಹೆಚ್ಚಿನ ತಾಪ ಉಂಟಾಗುತ್ತದೆ. ಅದರಿಂದ ಧಾನ್ಯ ಬೇಯಿಸಲೂ ಶಕ್ಯವಾಗುತ್ತದೆ. ಈ ವಿಧಾನದ ವಿಶೇಷವೆಂದರೆ ಉಷ್ಣದ ಆಕರವನ್ನು ಬದಲಾಯಿಸುವುದರ ಬದಲಿಗೆ ಹೀರುವಿಕೆಯ ದಕ್ಷತೆಯನ್ನು ಬದಲಾಯಿಸಿರುವುದು.

“ಪ್ರಶರ್ ಕುಕ್ಕರೂ ಹಾಗೆಯೇ ಅದೇ ಒಲೆ ಬಳಕೆ ಮಾಡಿ ಶೀಘ್ರ ಅಡುಗೆ ಮಾಡಲು ಈ ಸಾಧನ ಸಹಾಯಕ. ಇಲ್ಲೂ ಹೀರಿಕೆಯ ದಕ್ಷತೆಯನ್ನು ವಿಶೇಷವಾಗಿ ಹೆಚ್ಚಿಸಲಾಗಿದೆ ಅಲ್ವೆ?’’ – ಎಂದು ರವಿಯ ತಂದೆ ಬಾಯಿಹಾಕಿದರು.

ಅಧ್ಯಾಪಕರು : ಈ ಬಗ್ಗೆ ನೀವು ತಂದೆ ಮಕ್ಕಳಿಗೆ ನಾನು ಕತೆಯೊಂದನ್ನು ಹೇಳಿ ಅನಂತರ ಪ್ರಷರ್ ಕುಕ್ಕರ್ ಬಗೆಗೆ ತಿಳಿಸುತ್ತೇನೆ. ಕತೆ ಎನ್ನುತ್ತಿದ್ದ ಹಾಗೆಯೇ ರವಿಯ ಕಿವಿ ಚುರುಕಾಯಿತು.

ಇದು ಕತೆಯಲ್ಲ; ನಡೆದ ಸಂಗತಿ. ಚಾರ್ಲ್ಸ್ ಡಾರ್ವಿನ್ – ವಿಕಾಸವಾದ ಕರ್ತೃ, ಜೀವಿಶಾಸ್ತ್ರಜ್ಞ. ಒಮ್ಮೆ ಬೀಗಲ್ ಎಂಬ ಹಡಗಿನಲ್ಲಿ ಪ್ರಯಾಣ ಬೆಳೆಸಿ ಸಾಗಿ ಪರ್ವತದ ಎತ್ತರ ಪ್ರದೇಶಕ್ಕೆ ಸಹಾಯಕರೊಂದಿಗೆ ಬಂದರು. ಬೆಟ್ಟದ ತುದಿಯಲ್ಲಿಯೇ ಉಳಿದಾಗ, ಆಲೂಗಡ್ಡೆ ಬೇಯಿಸ ಹೋದ ಅವರ ಸಹಾಯಕರು ಬಂದು ದೂರಿದರು. “ಈ ಆಲೂಗಡ್ಡೆಗೇನೋ ಭೂತ ಹೊಕ್ಕಿದೆ. ಏನೂ ಮಾಡಿದರೂ ಬೇಯುತ್ತಿಲ್ಲ‘’.

ಆಗ ಡಾರ್ವಿನ್ ಕೊಟ್ಟ ವಿವರಣೆ ಹೀಗಿದೆ “ಎತ್ತರ ಪ್ರದೇಶದಲ್ಲಿ ಗಾಳಿಯ ಒತ್ತಡ ಕಡಿಮೆ. ಆದ್ದರಿಂದ ನೀರು ಕಡಿಮೆ ತಾಪದಲ್ಲಿ ಕುದಿಯುತ್ತದೆ. ನೀರು ಬೇಗ ಕುದಿಯುವುದಾದರೂ ತಾಪದ ವರ್ಗಾವಣೆ ಕಠಿಣ. ಏಕೆಂದರೆ ಕುದಿಯುವ ನೀರಿನ ತಾಪವೇ ಕಡಿಮೆ.

ಕುದಿಯುವ ನೀರಿನ ಪಾತ್ರೆಯಲ್ಲಿ ಒತ್ತಡವನ್ನು ಹೆಚ್ಚುಮಾಡಿದರೆ ಏನಾಗಬಹುದು? ಆಗ ಕುದಿಬಿಂದು ಹೆಚ್ಚಾಗಿ ಅಡುಗೆ ಮತ್ತಷ್ಟು ಬೇಗ ಮುಗಿಯುತ್ತದೆ. ಅಲ್ಲವೆ? ಅಡುಗೆ ಮಾಡುವ ಪಾತ್ರೆ ಒಳಗಡೆ ವಾಯು ಒತ್ತಡ ಹೆಚ್ಚು ಮಾಡುವ ಪ್ರಯತ್ನ ಮಾಡಬೇಕು?

ಅಲ್ಲದೆ ಹಬೆಯೊಡನೆ ವಾಯುಮಂಡಲ ತಲುಪುತ್ತಿದ್ದ ಅನೇಕ ಪೌಷ್ಟಿಕ ಸಂಯುಕ್ತಗಳ ನಷ್ಟವೂ ತಪ್ಪುತ್ತದೆ. ಹೀಗಾಗಿ ಆಹಾರದ ದಕ್ಷ ಬಳಕೆಯೂ ಆಗುತ್ತದೆ.

ರವಿ, ಈ ದಿನ ನಿನಗೆ ನೆನಪಿನ ಪರೀಕ್ಷೆ. ಈಗ ನಾನು ನಿನಗೆ ಪ್ರೆಷರ್ ಕುಕರ್ ಬಗ್ಗೆ ಹೇಳಿದ್ದನ್ನು ನೀನು ನಿನ್ನಮ್ಮನಿಗೆ ವಿವರಿಸಬೇಕು. ನಿನಗೆ ಮರೆವಾದಾಗ ನಿನ್ನಪ್ಪ ಸಹಾಯಕ್ಕೆ ಬರ‍್ತಾರೆ.

ರವಿ : ಆಗಲಿ ಸರ್, ಪ್ರಯತ್ನಿಸುತ್ತೇನೆ. ನನಗಿನ್ನೊಂದು ಸಂದೇಹವಿದೆ. ದಯಮಾಡಿ ತಿಳಿಸಿ. ಅದೇನೆಂದರೆ, ಉಷ್ಣ ನೀಡುವ ವಸ್ತುವಿನ ತಾಪಕ್ಕಿಂತ ಹೆಚ್ಚಿನ ತಾಪವನ್ನು ಉಷ್ಣ ಪಡೆಯುವ ವಸ್ತು ತಲಪಲಾದೀತೆ?

ಅಧ್ಯಾಪಕರು : ಸಾಮಾನ್ಯ ಸಂದರ್ಭದಲ್ಲಿ ಸಾಧ್ಯವಿಲ್ಲ. ಆದರೆ ಈಗ ತಾನೆ ವಿವರಿಸಿದ ಉದಾಹರಣೆಯನ್ನೇ ತೆಗೆದುಕೊಂಡರೆ ಹಬೆಯಿಂದಾಗಿಯೇ ಹಬೆಯ ತಾಪಕ್ಕಿಂತ ಹೆಚ್ಚಿನ ತಾಪ ಸಾಧಿಸಿದ ಹಾಗಾಗಲಿಲ್ಲವೆ?

ರವಿ : ಹಾಗಲ್ಲ ಸಾರ್. ಅಲ್ಲಿ ಒಲೆಯ ತಾಪ ಅಧಿಕ ಇತ್ತಲ್ಲವೆ?

ಅಧ್ಯಾಪಕರು : ಅಡುಗೆ ಮಾಡುವಾಗಲೂ ಅದೇ ಒಲೆ ಇತ್ತು. ಆದರೆ ತಾಪ ನೀರಿನ ಕುದಿಬಿಂದುವನ್ನು ದಾಟಿರಲಿಲ್ಲ. ಇಲ್ಲಿ ತಾಪದ ಹೆಚ್ಚಳಕ್ಕೆ ಕಾರಣವಾದದ್ದು ಒಲೆ ಎನ್ನುವುದಕ್ಕಿಂತ ಹಬೆ ಎನ್ನುವುದೇ ಸರಿ.

ನೀರಿನ ಹಬೆಯನ್ನು ಉಪ್ಪಿನ ದ್ರಾವಣಕ್ಕೆ ಹಾಯಿಸಿದಾಗ ಉಪ್ಪಿನ ದ್ರಾವಣ ನೀರಿನ ಹಬೆಗಿಂತಲೂ ಹೆಚ್ಚಿನ ತಾಪವನ್ನು ಪಡೆದು ಕುದಿಯುತ್ತದೆ. (ದ್ರಾವಣಗಳ ಕುದಿ ಬಿಂದು ನೀರಿನ ಕುದಿಬಿಂದುವಿಗಿಂತಲೂ ಅಧಿಕ). ಅಂದ ಮೇಲೆ ಹಬೆಯು ತನ್ನ ತಾಪಕ್ಕಿಂತಲೂ ಅಧಿಕ ತಾಪ ಸೃಷ್ಟಿಸಿದಂತಾಯಿತಲ್ಲವೆ? ಆಕಾರದ ತಾಪಕ್ಕಿಂತ ಸ್ವೀಕಾರದ ತಾಪ ಹೆಚ್ಚು.

ಥರ್ಮಾಸ್ ಫ್ಲಾಸ್ಕ್‌ನಲ್ಲೂ ಉಷ್ಣ ನಷ್ಟವಾಗದಂತೆ ನೋಡಿಕೊಳ್ಳಲು ಅನೇಕ ಕ್ರಮ ಅನುಸರಿಸಲಾಗುತ್ತದೆ. ಅಲ್ಲಿ ಸೋರಿಕೆ ತಡೆಯಲಾಗುವುದೇ ವಿನಾ ಹೀರಿಕೆಗೆ ಆಸ್ಪದವಿಲ್ಲ. ಹೀಗಾಗಿ ಅದು ಅಧಿಕ ತಾಪದ ಉಷ್ಣ ಆಕರ ಅಲ್ಲ.

“ನಿಮ್ಮಮ್ಮ ಕುಕ್ಕರ್ ಕೂಗಿಸಿ ಬಿಸಿ ಅಡುಗೆ ಮಾಡಿ ಕಾಯ್ತಿರ‍್ತಾಳೆ. ನಡಿ ಹೋಗೋಣ‘’ ಎಂದು ಹೇಳಿ ಮಗನೊಡನೆ ಮನೆಗೆ ಹೊರಟ ರವಿಯ ತಂದೆ ವಿನೀತರಾಗಿ ಅಧ್ಯಾಪಕರಿಗೆ ಧನ್ಯವಾದ ಹೇಳಿ ಮನೆಗೊಮ್ಮೆ ಬರುವಂತೆ ಆಮಂತ್ರಿಸುವುದನ್ನು ಮರೆಯಲಿಲ್ಲ.

ವಾಸ್ತವವಾಗಿ ಪ್ರೆಷರ್ ಕುಕ್ಕರ್‌ನ ವೈಜ್ಞಾನಿಕ ತತ್ತ್ವ ಇದೇ ಆಗಿದೆ. ಡಾರ್ವಿನ್ ಹೀಗೆ ಹೇಳಿದ ಅನೇಕ ದಶಕಗಳವರೆಗೆ ಈ ಬಗ್ಗೆ ಯಾರೂ ಗಮನ ಹರಿಸಲಿಲ್ಲ. 20ನೇ ಶತಮಾನದ ಆದಿಭಾಗದಲ್ಲಿ ಯೂರೋಪನಲ್ಲಿ ಪ್ರೆಷರ್ ಕುಕ್ಕರ್ ಬಳಕೆಗೆ ಬಂದಿತು. ಭಾರತದಲ್ಲಿ ಇದರ ಬಳಕೆ ವ್ಯಾಪಕವಾಗಿ ಆಗಿ ಸುಮಾರು ಐವತ್ತು ವರ್ಷ ಕಳೆದಿರಬಹುದು. ಅಷ್ಟು ಸ್ಪಷ್ಟವಾಗಿ ಜೀವಿ ವಿಜ್ಞಾನಿಯು ಭೌತಶಾಸ್ತ್ರದ ತತ್ತ್ವವನ್ನು ತನ್ನ ಸಹಾಯಕರಿಗೆ ವಿವರಿಸಿದ್ದು ಒಂದು ಅಚ್ಚರಿ. ಆ ಪರಿಕಲ್ಪನೆ ಜಾರಿಗೆ ಬರದೆ ನೂರಾರು ವರ್ಷ ನೆನೆಗುದಿಗೆ ಬಿದ್ದದ್ದು ಇನ್ನೊಂದು ವಿಚಿತ್ರ.

ಪ್ರೆಷರ್ ಕುಕ್ಕರ್‌ನ ಕಾರ್ಯವಿಧಾನವನ್ನು ಈಗ ತಿಳಿಯುವಾ. ಪಾತ್ರೆಯೊಂದರಲ್ಲಿ ಅಡುಗೆಯನ್ನು ಮಾಡುವ ಸಲುವಾಗಿ ನೀರನ್ನು ಕಾಯಿಸಿದಾಗ ಆ ನೀರು ಉಷ್ಣವನ್ನು ಹೀರಿಕೊಂಡು ಆವಿಯಾಗಿ ಅನಿಲ ರೂಪ ತಳೆಯುತ್ತದೆ. ನೀರು ಕುದಿಯತೊಡಗಿದಾಗ ಆ ಆವಿ ಹಬೆ ಎನಿಸಿಕೊಳ್ಳುತ್ತದೆ. ಆ ಹಬೆಯು ಪಾತ್ರೆಯ ಮೇಲ್ಪದರದ ಗಾಳಿಯನ್ನು ಭೇದಿಸಿಕೊಂಡು ಬೇರೆಲ್ಲೊ ಆ ಉಷ್ಣವನ್ನು ವಾಯುಮಂಡಲಕ್ಕೆ ಬಿಟ್ಟುಕೊಡುತ್ತದೆ.

ಪ್ರೆಷರ್ ಕುಕ್ಕರ್‌ನಲ್ಲಿ ಹಾಗಾಗುವುದಿಲ್ಲ. ಹಬೆಯು ಆ ಪಾತ್ರೆಯಲ್ಲೇ ಉಳಿಯುವ ಕಾರಣ ಉಷ್ಣದ ನಷ್ಟ ಆಗುವುದಿಲ್ಲ. ಆದ್ದರಿಂದಲೇ ಅಡುಗೆ ಬೇಗ ಆಗುತ್ತದೆ.

ಇನ್ನಷ್ಟು ವಿಸ್ತಾರವಾಗಿ ಈ ಬಗ್ಗೆ ತಿಳಿಯುವಾ. ನೀರು ಹಬೆಯಾದಾಗ ಪ್ರತಿ ಲೀಟರ್ ನೀರಿಗೆ ಸುಮಾರು ಏಳು ಸಾವಿರ ಲೀಟರ್ ಹಬೆ ಉಂಟಾಗುತ್ತದೆ. ಆ ಹಬೆಯನ್ನು ಹೊರಗೆ ಹೋಗಗೊಡದಿರುವ ಕಾರಣ ಗಾತ್ರ ಅಷ್ಟೇ ಉಳಿದು ಪಾತ್ರೆಯೊಳಗೆ ಒತ್ತಡ ಅನೇಕ ಪಟ್ಟು ಹೆಚ್ಚಳವಾಗುತ್ತದೆ. ಅದಕ್ಕನುಗುಣವಾಗಿ ನೀರಿನ ಕುದಿಬಿಂದು ಹೆಚ್ಚಳವಾಗುತ್ತದೆ. ಹಬೆಯ ಒತ್ತಡ ಹಾಗೂ ನೀರಿನ ಕುದಿಬಿಂದು ಹೆಚ್ಚಿದ ಪರಿಣಾಮವಾಗಿ ಆಗುವ ಅಧಿಕ ತಾಪ – ಈ ಎರಡೂ ಕಾರಣಗಳಿಂದ ಅಡುಗೆ ಶೀಘ್ರವಾಗಿ ಆಗುತ್ತದೆ. ಒತ್ತಡಕ್ಕೆ ಮೀರಿ ಹೋಗಿ ಆಸೊಟ ಆಗದಂತೆ ಒತ್ತಡವನ್ನು ನಿಯಂತ್ರಿಸಲು ಸುರಕ್ಷಾ ವಾಲ್ವ್ ವ್ಯವಸ್ಥೆ ಇದೆ.

ಪ್ರೆಷರ್ ಕುಕ್ಕರ್‌ನಿಂದ ಉಷ್ಣದ ನಷ್ಟ ತಪ್ಪುವುದೇ – ಆಲೋಚಿಸಿ?