ಶಾಲೆಯಿಂದ ಮನೆಗೆ ಬಂದ ಶೀತಲ್‌ಗೆ ಏನಾದರೂ ಸಿಹಿ ತಿನ್ನುವ ಚಪಲವಾಯಿತು. ಅಡುಗೆ ಮನೆಗೆ ಹೋಗಿ ಸಿಹಿಗಾಗಿ ಹುಡುಕತೊಡಗಿದಳು; ಏನೂ ಸಿಗಲಿಲ್ಲ. ಕೊನೆಗೆ ಗ್ಲೂಕೋಸ್ ಪೊಟ್ಟಣ ಸಿಕ್ಕಿತು. ಅದರಲ್ಲಿದ್ದ ಗ್ಲೂಕೋಸ್ ಅನ್ನು ಬಾಯಿಗೆ ಹಾಕಿಕೊಂಡಳು. ಅಚ್ಚರಿ ಉಂಟುಮಾಡಿದ ಸಂಗತಿ ಎಂದರೆ ಸಿಹಿಯ ಅನುಭವ ಜೊತೆಗೆ ತಂಪಿನ ಅನುಭವವೂ ಆಯಿತು. ಆ ವೇಳೆಗೆ ಶೀತಲ್ ಅವರ ತಾಯಿ ಅಡುಗೆ ಮನೆಗೆ ಬಂದರು. `ಗ್ಲೂಕೋಸ್ ತಿನ್ನುತ್ತಿದ್ದೀಯೆ‘ ಎಂದು ಬೆರಗಾಗಿ ಹೇಳಿದರು. “ಅದೇಕಮ್ಮಾ ಗ್ಲೂಕೋಸ್ ತಿಂದರೆ ಬಾಯಿ ಎಲ್ಲ ತಂಪಾಗುತ್ತದೆ?’’ ಎಂದು ಶೀತಲ್ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಕೇಳಿದಳು. “ಅದೇನೋ, ನನಗೇನೂ ತಿಳಿಯದು. ಹರಳು ಸಕ್ಕರೆ ಬಾಯಿಗೆ ಹಾಕಿಕೊಂಡರೆ ತಂಪಿನ ಅನುಭವ ಆಗುವುದಿಲ್ಲ. ಆದರೆ ಪುಡಿಮಾಡಿದ ಸಕ್ಕರೆ ತಿಂದರೆ ಮಾತ್ರ ತಂಪಿನ ಅನುಭವ ಆಗುತ್ತೆ. ಗ್ಲೂಕೋಸ್ ಪುಡಿಯಾಗಿರುವುದೇ ತಂಪಿಗೆ ಕಾರಣ ಎಂದು ತೋರುತ್ತದೆ. ನನಗೆ ಇಷ್ಟುಮಾತ್ರ ಗೊತ್ತು, ಪುಡಿಯಾಗಿರುವುದಕ್ಕೂ ತಂಪಿಗೂ ಏನು ಸಂಬಂಧವೆಂದು ನಿನಗೂ ತಿಳಿಯುವ ಆಸೆ. ಆದರೆ ನಾನೇನೂ ವಿಜ್ಞಾನ ಓದಿದವಳಲ್ಲ‘’ ಎಂದರು ಶೀತಲ್‌ಳ ಅಮ್ಮ.

ಅಂತೂ ತಾಪವನ್ನು ಕಡಿಮೆ ಮಾಡುವ ಮನೆಮಟ್ಟಿಗಿನ ಉಪಾಯ ತಿಳಿಯಿತಲ್ಲಾ ಎಂದು ಶೀತಲ್‌ಗೆ ಸಂತಸವಾಯಿತು. ಬೇಸಗೆಯಲ್ಲಿ ಪಾನಕ ನೀಡುವುದು ಕೇವಲ ಬಾಯಿ ಸಿಹಿಗೆ ಮಾತ್ರವಲ್ಲ – ದೇಹದ ತಂಪಿಗೆ ಕೂಡಾ ಇರಬೇಕು ಎಂದುಕೊಂಡಳು.

ಆದರೆ ಸುಟ್ಟ ಸುಣ್ಣಕ್ಕೆ ನೀರು ಸೇರಿಸಿದಾಗ, ನೀರು ತಂಪಾಗದಿದ್ದರೆ ಹೋಗಲಿ, ಕುದಿಯತೊಡಗುವಷ್ಟು ಉಷ್ಣ ಬಿಡುಗಡೆ ಆಗುವ ಬಗ್ಗೆ ನೆನಪಾಯಿತು. ಅಂತೂ ವಿಲೀನ ಪ್ರಕ್ರಿಯೆ ಅಂತರುಷ್ಣಕ ಹಾಗೂ ಬಹಿರುಷ್ಣಕ ಎರಡೂ ಬಗೆಯ ದ್ರವ್ಯ ಇರಬೇಕು. ಅಂತರುಷ್ಣಕ ವಸ್ತು ವಿಲೀನವಾದಾಗ ದ್ರಾವಣ ಬಿಸಿಯಾಗುವುದು ಎಂದು ತೋರುತ್ತದೆ ಎಂದುಕೊಂಡಳು.

ಶಾಲೆಗೆ ಹೋದಾಗ ಈ ಬಗ್ಗೆ ತಿಳಿದೀತು ಎಂದುಕೊಂಡು ಮಲಗಿದ ಶೀತಲ್‌ಗೆ ಅದ್ಯಾವ ವೇಳೆಗೆ ನಿದ್ರೆ ಬಂದಿತೋ ತಿಳಿಯದು. “ಬೆಳಗಾಯಿತು ಏಳಮ್ಮಾ‘’ – ಎಂಬ ತಂದೆಯ ದನಿ ಕೇಳಿ ಎದ್ದ ಶೀತಲ್ ಶಾಲೆಗೆ ಹೋಗುವ ತಯಾರಿ ನಡೆಸಿದಳು.

ಅಧ್ಯಾಪಕರು : ಮಾನವನಿಗೆ ನಿಸರ್ಗದತ್ತವಾಗಿ ಲಭ್ಯವಿದ್ದ ತಂಪಿನ ಪ್ರತಿನಿಧಿ ಎಂದರೆ ಮಂಜುಗಡ್ಡೆ. ಹೀಗಾಗಿ ಅವನು ತಾಪದ ಕನಿಷ್ಠ ಬಿಂದುವಿಗೆ ಮಂಜುಗಡ್ಡೆ ಬಳಕೆ ಮಾಡಿದ್ದು ಅತ್ಯಂತ ಸಹಜವೇ ಆಗಿದೆ. ಈ ಬಗ್ಗೆ ಈಗಾಗಲೇ ಹೇಳಿಯಾಗಿದೆ. ಒಣಮಂಜುಗಡ್ಡೆ ಇಲ್ಲವೆ ಶುಷ್ಕ ಬರ್ಫದ ಬಗ್ಗೆ ಕೇಳಿದ್ದೀರಾ.

ವಿನೋದ : `ಶುಷ್ಕ ಬರ್ಫಿ‘ ಬಗ್ಗೆ ಗೊತ್ತು ಸಾರ್.

ಅಧ್ಯಾಪಕರು : ಬರ್ಫಿ ಎಂದು ಹೇಳಲು ಕಾರಣ ಅದು ಮಂಜುಗಡ್ಡೆ ಫಲಕವನ್ನು ಹೋಲುವುದಿರಬಹುದು; ಅದರಲ್ಲಿ ಪುಡಿ ರೂಪದ ಸಿಹಿ ಇದ್ದು ಅದನ್ನು ಬಾಯಿಗೆ ಹಾಕಿಕೊಂಡಾಗ ತಂಪಾದ ಅನುಭವ ಇರಬಹುದು.

ಶೀತಲ್ : ಗ್ಲೂಕೋಸ್ ಪುಡಿ ಹಾಕಿಕೊಂಡಾಗಲೂ ತಂಪಿನ ಅನುಭವ ಆಗುತ್ತದೆ. ಸಿಹಿಯ ಪುಡಿ ಬಾಯಿಗೆ ಹಾಕಿಕೊಂಡರೆ ತಂಪಿನ ಅನುಭವ ಏಕೆ ಸರ್?

ಅಧ್ಯಾಪಕರು : ಸಿಹಿಯನ್ನಷ್ಟೇ ಅಲ್ಲ ಉಪ್ಪನ್ನು ನುಣ್ಣಗೆ ಪುಡಿ ಮಾಡಿ ಅರ್ಧಲೋಟ ನೀರಿಗೆ ಹಾಕಿ ಚಮಚದಿಂದ ವೇಗವಾಗಿ ಕಲಕಿದಾಗ ಲೋಟವು ತಣ್ಣಗಾಗುವುದನ್ನು ಗಮನಿಸಬಹುದು. ಸಕ್ಕರೆಯಾಗಲಿ, ಉಪ್ಪಾಗಲಿ ನೀರಿನಲ್ಲಿ ವಿಲೀನವಾಗುವ ಮುಂಚೆ ನಿಶ್ಚಲವಾಗಿ ಕುಳಿತಿರುವ ಕಣಗಳಿಂದಾದವು. (ಕಣ : ಅಣು (ಗ್ಲೂಕೋಸ್), ಕಣ = ಅಯಾನು (ಉಪ್ಪು)) ನೀರಿಗೆ ಹಾಕುತ್ತಿದ್ದಂತೆಯೇ ಈ ಕಣಗಳು ಚಲಿಸತೊಡಗುವುವು. ದ್ರಾವಣವಿಡೀ ಚಲಿಸುವ ಈ ಕ್ರಿಯೆಗೆ ಶಕ್ತಿ ಎಲ್ಲಿ ಬರಬೇಕು? ಅದು ಲೋಟದಿಂದಲೇ ಪೂರೈಕೆ ಆಗುವುದು.

ದ್ರಾವಣವನ್ನು ತಯಾರಿಸುವುದು ಕಡಿಮೆ ತಾಪ ಪಡೆಯುವ ಅತ್ಯಂತ ಪ್ರಾಚೀನ ಹಾಗೂ ಸರಳ ತಂತ್ರನ. ಈಗ ಕ್ರಯೋಜೆನಿಕ್ಸ್ ಎಂಬ ವಿಶೇಷ ಶಾಖೆಯಾಗಿಯೇ ಈ ತಂತ್ರಜ್ಞಾನ ಬೆಳೆದಿದೆ.

ಅದು ಹಾಗಿರಲಿ `ಡ್ರೈ ಐಸ್‘ ಎಂದರೇನು? ಯಾರಾದರೂ ನೋಡಿದ್ದೀರಾ?

ಗಂಗಾ : ಮಂಜುಗಡ್ಡೆಯನ್ನು ಬಿಸಿಲಿಗಿಟ್ಟು ಒಣಗಿಸುತ್ತಾರಾ ಸರ್?

ಅಧ್ಯಾಪಕರು : ಹಾಗೆ ಮಾಡಿದರೆ ಮಂಜುಗಡ್ಡೆ ಮತ್ತಷ್ಟು ಒದ್ದೆ ಆದೀತು. `ಡ್ರೈ ಐಸ್‘ ಎಂದರೆ ಘನರೂಪದ ಕಾರ್ಬನ್ ಡೈ ಆಕ್ಸೈಡು. ಸಾಮಾನ್ಯ ತಾಪದಲ್ಲಿ ಅನಿಲರೂಪದಲ್ಲಿರುವ ಕಾರ್ಬನ್ ಡೈ ಆಕ್ಸೈಡನ್ನು ತಂಪುಗೊಳಿಸಿ ಘನರೂಪಕ್ಕೆ ತರಿಸಿದ್ದು. ಮಂಜುಗಡ್ಡೆಯಂತೇ ತಣ್ಣಗಿರುವ ಘನ. ಆದರೆ ಮಂಜುಗಡ್ಡೆಯ ಹಾಗೆ ಒದ್ದೆ ಇರುವುದಿಲ್ಲ. ಘನಕಾರ್ಬನ್ ಡೈ ಆಕ್ಸೈಡು ನೇರವಾಗಿ ಅನಿಲ ರೂಪಕ್ಕೆ ಬರುವ ಕಾರಣ (ದ್ರವರೂಪ ಉಂಟಾಗದೆ ಅನಿಲರೂಪಕ್ಕೆ ಬರುವ ಇಂತಹ ವಸ್ತುಗಳನ್ನು ಉತ್ಪತನವಸ್ತು ಎನ್ನುವಿರಲ್ಲವೆ) ಇದು ಶುಷ್ಕ ಬರ್ಫ.

ಕಿರಣ : ನಾವಿದನ್ನು ತಿಳಿದಿಲ್ಲವೆಂದ ಮೇಲೆ ನೋಡುವುದೆಲ್ಲಿ ಬಂತು?

ಅಧ್ಯಾಪಕರು : ನೋಡಿದ್ದೀರಿ. ಚಲನಚಿತ್ರಗಳಲ್ಲಿ ಕನಸಿನ ದೃಶ್ಯವೆಂದು ಮನವರಿಕೆ ಮಾಡಿಕೊಡಲು ಬಿಳಿ ಧೂಮ ಉಂಟಾಗುವಂತೆ ಮಾಡುವರಲ್ಲವೆ? ಒಣಮಂಜುಗಡ್ಡೆಗೆ ಬಿಸಿನೀರೆರಚಿದರೆ ಅದು ಶೀಘ್ರವಾಗಿ ಉತ್ಪತನಗೊಳ್ಳುವಾಗ ಈ ಬಗೆಯ ಬಿಳಿಯ ಧೂಮವಾಗುತ್ತದೆ!

ಗಾಳಿಯನ್ನು ದ್ರಕರಿಸಹೊರಟ ವಿಜ್ಞಾನಿಗಳು ಮೂರ್ಖರು ಎಂಬಂತೆ, `ಗಲಿವರನ ಯಾತ್ರೆಗಳು‘ ಕೃತಿಯಲ್ಲಿ ಜೊನಾಥನ್ ಸ್ವಿಫ್ಟ್ ನಗೆಯಾಡಿದ. ಅವನೊಂದಿಗೆ ಜನರೂ ನಕ್ಕರು. ಆದರೆ ಇಂದು! ಗಾಳಿಯ ಘಟಕವಾದ ಕಾರ್ಬನ್ ಡೈ ಆಕ್ಸೈಡನ್ನು ಘನರೂಪಕ್ಕೆ ತಂದು ಬಳಕೆ ಮಾಡಲಾಗಿದೆ. ಗಾಳಿಯ ಉಳಿದ ಘಟಕಗಳನ್ನೂ ದ್ರಕರಿಸಲಾಗಿದೆ. ಇವೆಲ್ಲಾ ಕ್ರಯೋಜನಿಕ್ ತಂತ್ರಜ್ಞಾನದ ಸಾಧನೆ.

ಉಷ್ಣವನ್ನು ಪೂರೈಕೆ ಮಾಡಿ ತಾಪವನ್ನು ಹೆಚ್ಚಳಗೊಳಿಸುವುದು ಸಹಜ. ತಾಪವನ್ನು ತಗ್ಗಿಸಬೇಕಾದರೆ ದ್ರವ್ಯದಲ್ಲಿ ಈಗಾಗಲೇ ಇರುವ ಉಷ್ಣವನ್ನು ಲೂಟಿ ಮಾಡಬೇಕು. ಇದಕ್ಕೆ ವಿಶೇಷ ಕೌಶಲ ಅಗತ್ಯ.

ತಾಪ ಹೆಚ್ಚಳ ಉಂಟು ಮಾಡುವುದೂ ಕಷ್ಟ. ಹೆಚ್ಚಳಗೊಂಡ ತಾಪ ಹಾಗೆಯೇ ಉಳಿಯುವಂತೆ ಉಷ್ಣ ಸೋರಿಕೆಯನ್ನು ತಡೆಗಟ್ಟುವುದೂ ಕಷ್ಟ. ಅಂತೆಯೇ ತಾಪ ತಗ್ಗಿಸುವುದೂ ಕಷ್ಟ. ಪರಿಸರದಿಂದ ಉಷ್ಣಹೀರಿಕೆಯನ್ನು ತಡೆದು ತಗ್ಗಿದ ತಾಪ ಹಾಗೆಯೇ ಉಳಿಯುವಂತೆ ನೋಡಿಕೊಳ್ಳುವುದೂ ಕಷ್ಟ.

ಕಡಿಮೆ ತಾಪದ ತಂತ್ರಜ್ಞಾನದ ವಿವರವನ್ನು ನೀವು ಹೆಚ್ಚಿನ ಓದಿನಿಂದಲೇ ತಿಳಿಯಬೇಕು. ಅಂತಹ ಕೆಲವು ತತ್ತ್ವಗಳ ಹಿಂದಿನ ಜಾಣ್ಮೆಯನ್ನು ಸರಳ ಉದಾಹರಣೆಯೊಂದಿಗೆ ವಿವರಿಸುವೆ.

ಅನಿಲವೊಂದನ್ನು ಚಲಿಸುವ ಪಿಸ್ಟನ್‌ವಿರುವ ಪಾತ್ರೆಯಲ್ಲಿ ತೆಗೆದುಕೊಂಡು ಕಾಸಿದೆವೆನ್ನೋಣ. ಆಗ ತಾಪವು ಹೆಚ್ಚಳಗೊಳ್ಳುವುದಲ್ಲದೆ ಅನಿಲವು ವ್ಯಾಕೋಚನಗೊಳ್ಳುತ್ತದೆ. ಈ ಎರಡೂ ಪರಿವರ್ತನೆಗಳಿಗೆ ಉಷ್ಣಶಕ್ತಿಯೇ ಕಾರಣ.

ಆದರೆ, ಉಷ್ಣವನ್ನೊದಗಿಸದೆ ಪಿಸ್ಟನ್ ಹೊರಭಾಗದಲ್ಲಿ ನಿರ್ವಾತ ಉಂಟುಮಾಡಿದರೆ ಆಗ ಒತ್ತಡ ಸರಿದೂಗಿಸುವ ಸಲುವಾಗಿ ಪಿಸ್ಟನ್ ಹೊರಕ್ಕೆ ಸಾಗಬೇಕು. ಹಾಗೆ ಸಾಗುವಾಗ ಉಷ್ಣವು ಹೊರಗಿನಿಂದ ಪೂರೈಕೆ ಆಗದಂತೆ ನೋಡಿಕೊಂಡರೆ ಏನಾಗಬಹುದು? ಆಗ ಅನಿಲವು ತನ್ನೊಳಗಿನ ಉಷ್ಣ ಸಂಗ್ರಹವನ್ನು ಉಪಯೋಗ ಮಾಡಿಕೊಳ್ಳುವುದು. ಉಷ್ಣಸಂಗ್ರಹ ಕಡಿಮೆ ಆದ ಪರಿಣಾಮವಾಗಿ ತಾಪವು ಕುಗ್ಗುವುದು. ಹೊರಗಿನ ಉಷ್ಣ ಒಳಹೋಗದಂತೆ ತಡೆಯುವ ವಿಧಾನವನ್ನು ಅಪಾರಣೀಯವೆನ್ನಲಾಗುವುದು. ಈ ಬಗೆಯ ತಂತ್ರಕ್ಕೆ ಅಪಾರಣೀಯ ವ್ಯಾಕೋಚನ (Adiabatic expansion) ಎಂದು ಹೆಸರು.

ಮುಂದಿನ ತಂತ್ರವನ್ನು ಗಮನಿಸೋಣ. ಈ ವಿಧಾನವೂ ಅನಿಲದಲ್ಲಿ ಚಲನೆಯನ್ನು ಅನಿವಾರ್ಯಗೊಳಿಸಿ ಚಲನೆಗೆ ಉಷ್ಣಶಕ್ತಿ ವ್ಯಯವಾಗುವಂತೆ ನೋಡಿಕೊಳ್ಳುವುದು.

ಕಾಂತೀಯ ಲಕ್ಷಣವಿರುವ ಅಣುಗಳನ್ನೊಳಗೊಂಡ ಅನಿಲಗಳಿಗೆ ಮಾತ್ರ ಈ ವಿಧಾನವನ್ನು ಅನ್ವಯಿಸಬಹುದು. ಪ್ರಬಲವಾದ ಕಾಂತಕ್ಷೇತ್ರಕ್ಕೆ ಅನಿಲವನ್ನು ಒಳಪಡಿಸಿದಾಗ ಆ ಅನಿಲದ ಅಣುಗಳು ಕಾಂತಕ್ಷೇತ್ರ ನಿರ್ದೇಶಿಸುವ ದಿಕ್ಕಿಗೆ ತಿರುಗಿರುವುವು. ಅಪಾರಣೀಯ ಧಾರಕದಲ್ಲಿ ತೆಗೆದುಕೊಂಡು ಕಾಂತಕ್ಷೇತ್ರದಿಂದಾಗಿ ನಿರ್ದಿಷ್ಟ ದಿಕ್ಕಿಗೆ ತಿರುಗಿದ ನಂತರ ಕಾಂತಕ್ಷೇತ್ರವನ್ನು ಇಲ್ಲವಾಗಿಸಿದರೆ ಕೂಡಲೇ ಮುನ್ನಿನಂತೆ ಅಣುಗಳು ಅಡ್ಡಾದಿಡ್ಡಿ ಜೋಡಣೆ ಆಗಲು ಶ್ರಮಪಡುವವು. ಆಗ ಉಷ್ಣಶಕ್ತಿ ವ್ಯಯವಾಗಿ ತಾಪವು ಕುಗ್ಗುವುದು. ಈ ವಿಧಾನಕ್ಕೆ ಆಡಿಯಬ್ಯಾಟಿಕ್ ಡೀಮ್ಯಾಗ್ನಟೈಸೇಷನ್ ಅಥವಾ ಅಪಾರಣೀಯ ವಿಕಾಂತೀಕರಣ ಎಂದು ಹೇಳಲಾಗುವುದು.

ವಿಶೇಷವಾಗಿ ಬಳಕೆಯಾಗುವ ಇನ್ನೊಂದು ವಿಧಾನವೂ ಇದೆ. ಈ ವಿಧಾನದ ವಿಚಿತ್ರವೆಂದರೆ, ಈ ವಿಧಾನವನ್ನು ಕಡಿಮೆ ತಾಪದಲ್ಲಿ ಕೈಗೊಂಡಷ್ಟೂ ತಾಪ ತಗ್ಗುವಿಕೆಯೂ ಹೆಚ್ಚು. ಜೂಲ್ – ಥಾಮ್ಸನ್ ವಿಧಾನ ಎಂದು ಹೇಳಲಾಗುವ ಈ ಕ್ರಮ ಕುರಿತ ಮೂಲಾಂಶಗಳನ್ನು ತಿಳಿಯೋಣ.

ಉಳಿದ ಪರಿಮಾಪಕಗಳನ್ನು ಸ್ಥಿರವಾಗಿಸಿ, ಅನಿಲವೊಂದರ ಗಾತ್ರವನ್ನು ಹೆಚ್ಚಳಮಾಡಿದಾಗ ಅನಿಲದ ತಾಪದಲ್ಲಿ ಬದಲಾವಣೆ ಆಗುವುದಿಲ್ಲವೆಂದು ಕೆಲ್ವಿನ್ ಎಂಬ ವಿಜ್ಞಾನಿ ಸ್ವತಃ ಪ್ರಯೋಗದಿಂದ ಕಂಡುಕೊಂಡ.

ಆದರೆ ಅದೇ ಪ್ರಯೋಗವನ್ನು ಕೈಗೊಂಡು ಆ ಅನಿಲವನ್ನು ನಿರ್ಬಂಧಿತ ಇಲ್ಲವೆ ಅಡೆತಡೆಯೊಡ್ಡಿದ ರಂಧ್ರಗಳ ಮೂಲಕ ವಿಕಾಸಗೊಳಿಸಿದಾಗ ತಾಪದ ಏರುಪೇರು ಉಂಟಾಗುವುದು ಕಂಡಬಂದಿತು. ಇದನ್ನೇ ಜೂಲ್ – ಥಾಮ್ಸನ್ ಪರಿಣಾಮ ಎನ್ನಲಾಗುವುದು.

ಕಡಿಮೆ ತಾಪದಲ್ಲಿ ಜೂಲ್ – ಥಾಮ್ಸನ್ ಪರಿಣಾಮ ಕೈಗೊಂಡಾಗ – ಅಂದರೆ, ಅನಿಲವೊಂದನ್ನು ಹೆಚ್ಚು ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಇಕ್ಕಟ್ಟಾದ ರಂಧ್ರಗಳ ಮೂಲಕ ಹಾಯಿಸಿದಾಗ ಆ ಅನಿಲದ ತಾಪ ಗಣನೀಯವಾಗಿ ಕುಗ್ಗುತ್ತದೆ. ಅನಿಲಗಳ ದ್ರಕರಣ ತಂತ್ರನದಲ್ಲಿ ಇದರ ಬಳಕೆ ಇದೆ. ನನ ರಾಕೆಟ್‌ಗೆ ಬೇಕಾದ ಕ್ರಯೋಜನಿಕ್ ತಂತ್ರಜ್ಞಾನವನ್ನು ಭಾರತ ಅತ್ಯಲ್ಪ ಅವಧಿಯಲ್ಲಿಯೇ ಸ್ವತಂತ್ರವಾಗಿ ರೂಪಿಸಿದೆಯಂತೆ. ಆ ಬಗ್ಗೆ ಕೊಂಚ ತಿಳಿಸಿ ಸರ್.

ಅಧ್ಯಾಪಕರು : ಯಾವುದೇ ವಸ್ತುವನ್ನು ಕಡಿಮೆ ತಾಪಕ್ಕೆ ಒಯ್ದರೆ ಅದರ ಗಾತ್ರ ಕುಗ್ಗುತ್ತದೆ. ಆದ್ದರಿಂದ ರಾಕೆಟ್‌ನ ನೋದನಕಾರಿ (ಇಂಧನ ಹಾಗೂ ಆಕ್ಸಿಜನ್ ಆಕರ)ವನ್ನು ಕಡಿಮೆ ತಾಪದಲ್ಲಿ ಸಂಗ್ರಹಿಸಿದಾಗ, ಇರುವ ಗಾತ್ರದಲ್ಲಿ ಹೆಚ್ಚು ನೋದನಕಾರಿ ಒಯ್ಯಬಹುದು. ನೋದನಕಾರಿ ಬಹಳ ಇದ್ದಷ್ಟೂ ಬಹಳ ದೂರ ಸಾಗಲು ಸಾಧ್ಯ. ನೋದನಕಾರಿಯೂ ದ್ರವ ಹೈಡ್ರೊಜನ್ ಹಾಗೂ ದ್ರವ ಆಕ್ಸಿಜನ್ ಮಿಶ್ರಣ ಅಂದರೆ ಕಡಿಮೆ ತಾಪದ್ದು.

ಆದರೆ ಸಮಸ್ಯೆ ಕಡಿಮೆ ತಾಪವನ್ನು ಪಡೆಯುವುದಷ್ಟೇ ಅಲ್ಲ. ಆ ತಾಪವನ್ನು ರಾಕೆಟ್‌ನಲ್ಲಿ ನಿರ್ವಹಿಸುವುದೂ ಕಠಿಣವೆ. ಏಕೆಂದರೆ ಗಾಳಿಯಲ್ಲಿ ರಾಕೆಟ್ ವೇಗವಾಗಿ ಸಾಗುವಾಗ ಉಂಟಾಗುವ ಘರ್ಷಣೆಯಿಂದ ರಾಕೆಟ್ ಕವಚದ ತಾಪ ಹೆಚ್ಚಳವಾಗುತ್ತದೆ. ರಾಕೆಟ್‌ನ ಕವಚದ ತಾಪ ಹೆಚ್ಚಳಗೊಂಡಾಗ್ಯೂ ಕಡಿಮೆ ತಾಪದಲ್ಲಿರಿಸಿರುವ ನೋದನಕಾರಿಯ ತಾಪ ಹೆಚ್ಚಳವಾಗದಂತಹ ಅಪಾರಣೀಯ ಕವಚವನ್ನೂ ರೂಪಿಸಬೇಕು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರತ ಮುಂದುವರಿದ ದೇಶಗಳಿಗೂ ಬೆರಗಾಗುವ ರೀತಿಯಲ್ಲಿ ಸ್ವದೇಶೀಯವಾಗಿ ಕ್ರಯೋಜನಿಕ್ ತಂತ್ರಜ್ಞಾನ ರೂಪಿಸಿರುವುದು ನಾವೆಲ್ಲರೂ ಹೆಮ್ಮೆ ಪಡಬಹುದಾದ ಸಾಧನೆ. ಶಿಕ್ಷಣದ ಸಲುವಾಗಿ ಎರಡು ಉಪಗ್ರಹಗಳನ್ನು ಉಡ್ಡಯಿಸಿರುವ ಏಕೈಕ ದೇಶ ಭಾರತ. ಇದರಿಂದ ಭಾರತದಲ್ಲಿ ಶಿಕ್ಷಣ ಸುಧಾರಣೆಗೊಂಡು ಲೋಕಕಲ್ಯಾಣ ಆಗಲಿ ಎಂದು ಹಾರೈಸೋಣವೇ!

(ಬೆಲ್ ಆಗುವುದು)