ರವಿ ಸ್ನಾನ ಮಾಡಿ ಬಟ್ಟೆ ಧರಿಸಿ ಅಡುಗೆ ಮನೆಗೆ ಬಂದ. ಅವರಮ್ಮ ಒಲೆ ಹೊತ್ತಿಸುತ್ತಿದ್ದರು. ತಾನೇ ಒಲೆ ಹೊತ್ತಿಸಿಕೊಡುವ ಆಸೆಯಾಯಿತು. “ಅಮ್ಮಾ ನಿನಗೆ ಸಹಾಯ ಮಾಡುತ್ತೇನೆ – ನಾನು ಒಲೆ ಹೊತ್ತಿಸಿಕೊಡುತ್ತೇನೆ‘’ ಎಂದು ರವಿ ಹೇಳಿದ.

“ನೀನು ಪಾಠ ಓದುಹೋಗು. ಸೌದೆ ಒಲೆಯಾಗಿದ್ದರೆ ಹೊತ್ತಿಸುವುದು ಕಷ್ಟ. ಮೊದಲೆ ಗ್ಯಾಸ್ ಒಲೆ. ನೀನೂ ರೂಢಿಯಿಲ್ಲದವನು. ಮಾಡಿದ ಆಡುಗೆ ಖಾಲಿ ಮಾಡಲು ನಿನ್ನ ಸಹಾಯ ನೀಡಿದರೆ ಆದೀತು. ನೀನು ಸದ್ದಿಲ್ಲದೆ ಓದಿಕೊಂಡರೆ ಅದೇ ಸಹಾಯ‘’ – ಅಮ್ಮನ ಗಾಬರಿಯ ಪ್ರತಿಕ್ರಿಯೆ ಇದು. ಕಲಿಯುವುದೆಂದರೆ ಓದು ಮಾತ್ರ ಎಂದು ಎಲ್ಲರೂ ಭಾವಿಸಿದ್ದಾರೆ. ನೋಡಿ ಕಲಿಯಲು, ಮಾಡಿ ತಿಳಿಯಲು ಅವಕಾಶವನ್ನೇ ಯಾರೂ ನೀಡುವುದಿಲ್ಲ ಎಂದು ಮನದಲ್ಲೇ ಗೊಣಗಿಕೊಂಡ. ಒಲೆಯು ಹೊತ್ತಿಕೊಂಡ ಶಬ್ದ ಕೇಳಿ ಎಚ್ಚರಗೊಂಡ. ಸೌದೆ ಹೊತ್ತಿಸಿದಾಗ ಹೀಗೆ ಶಬ್ದವಾಗುವುದಿಲ್ಲ. ಆದರೆ ಗ್ಯಾಸ್ ಒಲೆ ಹೊತ್ತಿಕೊಂಡಾಗ ಏಕೆ ಶಬ್ದ – ಎಂಬ ಅಚ್ಚರಿ ಅವನನ್ನು ಕಾಡಿತು. ತನ್ನ ಕೊಠಡಿಗೆ ಹೋಗಿ ಲೆಕ್ಕ ಮಾಡುವುದರಲ್ಲಿ ತನ್ಮಯನಾದ.

“ತಿಂಡಿ ತಿನ್ನು ಬಾರೋ. ಸ್ಕೂಲಿಗೆ ಲೇಟಾಯ್ತು‘’ ಎಂದು ಅಮ್ಮ ಕೂಗಿದಾಗಲೆ ಎಚ್ಚರ. ಪುಸ್ತಕಗಳನ್ನು ಆತುರಾತುರವಾಗಿ ಬ್ಯಾಗಿಗೆ ತುರುಕಿದ. ಅಡುಗೆ ಮನೆಗೆ ಬಂದು ತಾನು ಲೆಕ್ಕ ಮಾಡುವುದರಲ್ಲಿ ತಲ್ಲೀನವಾಗಿರುವುದಾಗಿ ಹೇಳಿದ. “ಲೆಕ್ಕ ಮಾಡುವುದನ್ನು ಆಸೆಯಾಗಿ ಮಾಡು, ತಲೆ ಬಿಸಿಮಾಡಿಕೊಳ್ಳಬೇಡ. ಅದು ಹೋಗಲಿ ಬಿಸಿ ಬಿಸಿ ಇಡ್ಲಿ ಮಾಡಿದ್ದೇನೆ. ತಿಂದು ಶಾಲೆಗೆ ಹೊರಡು‘’, ಎಂದು ಅಮ್ಮ ಹೇಳಿದರು.

ಶಾಲೆಗೆ ಹೊರಟ. ದೂರದಲ್ಲಿ ಇಟ್ಟಿಗೆ ಗೂಡಿನಲ್ಲಿ ಇಟ್ಟಿಗೆ ಸುಡುತ್ತಿದ್ದ ಕಾರಣ ಹೊಗೆ ಏಳುತ್ತಿತ್ತು. ಇಟ್ಟಿಗೆಯನ್ನೂ ಗ್ಯಾಸ್ ಉರಿಯಿಂದ ಸುಡುವುದಿಲ್ಲವೇಕೆ? ಅವನ ವಿಚಿತ್ರ ಆಲೋಚನೆಗೆ ಅವನಿಗೇ ನಗು ಬಂದಿತು. ಶಾಲೆಗೆ ಆ ವೇಳೆಗಾಗಲೇ ತಲಪಿದ್ದ.

ಅಧ್ಯಾಪಕರು : ಕಾಳ್ಗಿಚ್ಚು ಎಂದರೇನು?

ವನಜ : ಒಣಮರಗಳು ಒಂದನ್ನೊಂದು ತಿಕ್ಕಿ ಉಂಟಾದ ಬೆಂಕಿ ಕಾಡಿನ ಗಿಡಮರಗಳನ್ನು ಸುಡುವುದು.

ಅಧ್ಯಾಪಕರು : ಅದೆಂತಹ ಬದಲಾವಣೆ?

ಪ್ರಥಮ್ : ಭೌತಿಕ ಬದಲಾವಣೆ.

ಅನಂತ್ : ರಾಸಾಯನಿಕ ಬದಲಾವಣೆ.

ಅಧ್ಯಾಪಕರು : ಜಗತ್ತಿನಲ್ಲಿ ದ್ರವ್ಯಗಳು ವಿವಿಧವಾಗಿದ್ದರೂ ಬದಲಾವಣೆ ಎರಡೇ. ಆ ಎರಡೂ ಬದಲಾವಣೆಗಳನ್ನು ಹೇಳಿದ್ದೀರಿ. ವಿಚಿತ್ರ ಎಂದರೆ ಇಬ್ಬರೂ ಭಾಗಶಃ ಸರಿ.

ಮರಗಳು ಉಜ್ಜಿ ಬಿಸಿಯಾಗುವುದು ಭೌತಿಕ ಬದಲಾವಣೆ. ಅನಂತರ ಮರಗಿಡಗಳು ಹೊತ್ತಿಕೊಂಡು ಉರಿಯುವುದು ರಾಸಾಯನಿಕ ಬದಲಾವಣೆ. ಇಲ್ಲಿ ಭೌತಿಕ ಬದಲಾವಣೆ ರಾಸಾಯನಿಕ ಬದಲಾವಣೆಗೆ ದಾರಿಯಾಗಿದೆ. ಉಷ್ಣ ಉತ್ಪಾದನೆಯನ್ನು ಸಾಮಾನ್ಯವಾಗಿ ಪ್ರಾರಂಭ ಮಾಡುವುದು ಘರ್ಷಣೆಯ ಮೂಲಕವೆ. ಆದರೆ ಅದನ್ನು ನಿರಂತರಗೊಳಿಸುವುದು ರಾಸಾಯನಿಕ ಬದಲಾವಣೆಯಿಂದ. ಅದು ಹಾಗಿರಲಿ ಒಣ ಮರಗಳು ತಿಕ್ಕಿದಾಗಲೇ ಕಾಳ್ಗಿಚ್ಚು ಏಕೆ ಉಂಟಾಗಬೇಕು?

ಲಲಿತ : ಒಣಮರಗಳು ಹಗುರವಾಗಿರುವ ಕಾರಣ ವೇಗವಾಗಿ ಪರಸ್ಪರ ಉಜ್ಜಲು ಅನುಕೂಲ.

ಅಧ್ಯಾಪಕರು : ಅದು ಭಾಗಶಃ ಸರಿ. ಇನ್ನೊಂದು ಪ್ರಮುಖ ಕಾರಣ ಇದೆ. ಒಣಗಿದ ಮರದ ತಾಪ. ಆ ಮರದ ತುಂಡು ಹೊತ್ತಿಕೊಳ್ಳುವಷ್ಟು ಹೆಚ್ಚಾಗಬಲ್ಲದು. ಹೊತ್ತಿಕೊಳ್ಳುವ ತಾಪವನ್ನು ಜ್ವಲನಬಿಂದು ಎನ್ನುತ್ತಾರೆ. ಹಸಿಮರದ ತಾಪ 100ºCಗಿಂತ ಮೇಲೇರಲಾರದು. ಹೀಗಾಗಿ ವೇಗವಾಗಿ ಉಜ್ಜಿದರೂ ಹಸಿ ಕಟ್ಟಿಗೆ ಹೊತ್ತಿಕೊಳ್ಳುವುದಿಲ್ಲ.

ಯಾವುದೇ ವಸ್ತು ಹೊತ್ತಿಕೊಳ್ಳಬೇಕಾದರೆ ಕಟ್ಟಿಗೆ ಅರ್ಥಾತ್ ಇಂಧನ ಬೇಕು (ತೇವಾಂಶ ಇರಬಾರದು). ಆಕ್ಸಿಜನ್ ಇರಬೇಕು ಹಾಗೂ ಸಾಕಷ್ಟು ಉಷ್ಣ ಇರಬೇಕು. ಇಂಧನ, ಆಕ್ಸಿಜನ್ ಹಾಗೂ ಉಷ್ಣದ ಮಿಶ್ರಣವನ್ನು ದಹನ ತ್ರಿಕೋನ ಎನ್ನಲಾಗುತ್ತದೆ. ಈ ಮೂರು ಅಂಶಗಳಲ್ಲಿ ಯಾವುದು ಇಲ್ಲವಾದರೂ ದಹನಕ್ರಿಯೆ ಸಾಗದು. ಒಮ್ಮೆ ಕಟ್ಟಿಗೆ ಹೊತ್ತಿಕೊಂಡಿತೆಂದರೆ ಅಲ್ಲಿ ಬಿಡುಗಡೆ ಆಗುವ ಉಷ್ಣವೇ ದಹನ ಮುಂದುವರಿಸಲು ಸಾಕು. ಆದರೆ ಇಂಧನ ಹಾಗೂ ಆಕ್ಸಿಜನ್‌ಗಳು ನಿರಂತರ ಪೂರೈಕೆ ಆಗಬೇಕು. ಈ ದಹನ ಕ್ರಿಯೆ ಬಹಿರುಷ್ಣಕ ಕ್ರಿಯೆ. ಅಂದರೆ ಉಷ್ಣ ಬಿಡುಗಡೆ ಮಾಡುವ ಕ್ರಿಯೆ. ಎಲ್ಲ ರಾಸಾಯನಿಕ ಕ್ರಿಯೆಗಳೂ ಬಹಿರುಷ್ಣಕವಲ್ಲ. ಉಷ್ಣವನ್ನು ಹೀರುವ ಅಂತರುಷ್ಣಕ ಕ್ರಿಯೆಯೂ ಉಂಟು.

ಈಗ ಬೆಂಕಿಕಡ್ಡಿ ಗೀರುತ್ತೇನೆನ್ನೋಣ. ಅದು ಉರಿಯತೊಡಗುತ್ತದೆ. ಅದು ಬಹಿರುಷ್ಣಕವೊ, ಅಂತರುಷ್ಣಕವೊ?

ತೇಜಸ್ : ಪ್ರಾರಂಭದಲ್ಲಿ ಅಂತರುಷ್ಣಕ, ಆದರೆ ಅಂತ್ಯದಲ್ಲಿ ಬಹಿರುಷ್ಣಕ.

ಅಧ್ಯಾಪಕರು : ಹಾಗಲ್ಲ. ಒಟ್ಟಾರೆಯಾಗಿ ಹೀರಿದ ಉಷ್ಣಕ್ಕಿಂತಲೂ ಬಿಡುಗಡೆ ಆಗಿರುವ ಉಷ್ಣವೇ ಅಧಿಕವಾಗಿರುವ ಕಾರಣ ಇದು ಬಹಿರುಷ್ಣಕ ಕ್ರಿಯೆ. ಇನ್ನೂ ಅನೇಕ ಬಹಿರುಷ್ಣಕ ಕ್ರಿಯೆಗಳಿವೆ. ಆದರೆ ಎಲ್ಲವನ್ನೂ ಉಷ್ಣದ ಆಕರವಾಗಿಸಲು ಸಾಧ್ಯವಿಲ್ಲ. ಉಷ್ಣದ ಆಕರವಾಗಿ ಬಳಕೆ ಮಾಡುವ ಬಹಿರುಷ್ಣಕ ಕ್ರಿಯೆಗಳಿಗೆ ಈ ಲಕ್ಷಣಗಳು ಇರಬೇಕು.

1. ಇಂಧನ ಸುಲಭವಾಗಿ ಲಭ್ಯವಾಗಬೇಕು.

2. ದಹನಕ್ರಿಯೆ ಅತಿವೇಗವಾಗಿ ನಡೆದು ಅನಿಲ ಉತ್ಪನ್ನಗಳುಂಟಾಗಿ ಆಸೊಟಕ್ಕೆ ದಾರಿ ಮಾಡಬಾರದು.

3. ದಹನಕ್ರಿಯೆ ಅತ್ಯಂತ ನಿಧಾನಗತಿಯಿಂದಲೂ ಸಾಗಬಾರದು.

4. ಬಿಡುಗಡೆ ಆಗುವ ಉಷ್ಣಕ್ಕೂ ಹೀರಿಕೆಯಾಗುವ ಉಷ್ಣಕ್ಕೂ ಹೊಂದಾಣಿಕೆ ಆಗಬೇಕು.

ಈ ಎಲ್ಲ ಅಗತ್ಯಗಳನ್ನು ಪೂರೈಕೆ ಮಾಡುವ ಬಹಿರುಷ್ಣಕ ಕ್ರಿಯೆ ಎಂದರೆ ವಾಯುಮಂಡಲದ ಆಕ್ಸಿಜನ್ ಬಳಕೆ ಮಾಡುವ ಇಂಧನ ದಹನ (ಇತರೆ ಅನಿಲಗಳಲ್ಲೂ ದಹನ ಕ್ರಿಯೆ ಉಂಟು). ಇಂಧನವು ಉರಿಯುವ ಮುನ್ನ ಯಾವ ಭೌತಿಕ ಸ್ಥಿತಿಯಲ್ಲಿ ಇರುವುದೋ ಅದನ್ನಾಧರಿಸಿ ಘನ, ದ್ರವ ಹಾಗೂ ಅನಿಲ ಇಂಧನ ಎನ್ನಲಾಗುತ್ತದೆ. ಕಟ್ಟಿಗೆ ಘನ ಇಂಧನ, ಸೀಮೆ‌ಎಣ್ಣೆ ದ್ರವ ಇಂಧನ, ಎಲ್‌ಪಿಜಿ (ಲಿಕ್ವಿಫೈಡ್ ಪೆಟ್ರೋಲಿಯಮ್ ಗ್ಯಾಸ್) ದ್ರಕೃತವಾಗಿಸಿದ ಪೆಟ್ರೋಲಿಯಮ್ ಅನಿಲ. ಆದರೂ ಅದನ್ನು ಅನಿಲ ರೂಪದಲ್ಲೇ ಬಳಕೆ ಮಾಡುವುದರಿಂದ ಅನಿಲ ಇಂಧನ ಎನ್ನಬಹುದು.

ರವಿಗೆ ಈ ಹಂತದಲ್ಲಿ ಅಮ್ಮ ಹೇಳಿದ್ದು ನೆನಪಾಯಿತು. ಸೌದೆ ಒಲೆ ಹೊತ್ತಿಸುವುದು ಕಷ್ಟ; ಅದಕ್ಕೆ ಸಹಾಯ ಬೇಕು. ಅನಿಲದ ಒಲೆ ಹೊತ್ತಿಸುವುದು ಸುಲಭ; ಆದರೆ ಅಪಾಯಕಾರಿ. ಹೀಗೇಕೆಂದು ಕೇಳಬೇಕೆಂದುಕೊಂಡ. ಆದರೂ ಸುಮ್ಮನಾದ.

ಲಕ್ಷ್ಮೀಶ : ಈ ಪೈಕಿ ಯಾವುದು ಲಾಭದಾಯಕ?

ಅಧ್ಯಾಪಕರು : ಲಾಭವೆನ್ನುವುದು ಲಭ್ಯತೆಯನ್ನವಲಂಬಿಸಿದೆ. ಕಾಡಿನ ಮಧ್ಯೆ ಎಲ್.ಪಿ.ಜಿ ಲಭ್ಯವಿಲ್ಲದಾಗ, ದೂರದಿಂದ ಸಾಗಿಸಬೇಕಾದಾಗ ಕಟ್ಟಿಗೆ ಸುಲಭವಾಗಿ ದೊರೆಯುವಾಗ ಅದೇ ಲಾಭದಾಯಕ. ಆದರೆ, ಮುಂಬಯಿಯಲ್ಲಿ ಕಟ್ಟಿಗೆ ಲಭ್ಯವಿದ್ದರೂ ದುಬಾರಿಯಾಗಿರುವ ಕಾರಣ ಎಲ್.ಪಿ.ಜಿ.ಯೇ ಲಾಭದಾಯಕ.

ಹಣದ ದೃಷ್ಟಿಯಿಲ್ಲದೆ ಉಷ್ಣದ ದೃಷ್ಟಿ ಹಾಗೂ ತಾಪದ ದೃಷ್ಟಿಯಿಂದ ತಿಳಿಯಲು `ಕೆಲೊರಿಕ ಮೌಲ್ಯ‘ ಎಂಬುದೊಂದಿದೆ. ರಾಶಿಯ ಒಂದು ಮಾನದ (ಗ್ರಾಮ್ ಇಲ್ಲವೆ ಕಿಲೋಗ್ರಾಮ್) ಇಂಧನ ಅತ್ಯಧಿಕ ಗಾಳಳಿಯಲ್ಲಿ ಉರಿದಾಗ ಎಷ್ಟು ಕೆಲೊರಿ ಉಷ್ಣ ಬಿಡುಗಡೆ ಮಾಡುವುದೆಂಬುದೇ `ಕೆಲೊರಿಕ ಮೌಲ್ಯ‘. ಕೆಲೊರಿಕ ಮೌಲ್ಯ ಅಧಿಕವಾಗಿದ್ದಷ್ಟೂ ಉಂಟಾಗುವ ತಾಪವೂ ಅಧಿಕ.

ವಿಕಾಸ : ಹಾಗೇಕೆ ಸರ್?

ಅಧ್ಯಾಪಕರು : ಘನ ಇಂಧನವಾಗಲಿ, ದ್ರವ ಇಂಧನವಾಗಲಿ ಜ್ವಾಲೆಯಲ್ಲಿ ಉರಿಯುವ ಸಂದರ್ಭದಲ್ಲಿ ಅನಿಲ ರೂಪಕ್ಕೇ ಬರಬೇಕು. ಅನಿಲರೂಪಕ್ಕೆ ಇಂಧನವನ್ನು ತರಲು ಸಾಕಷ್ಟು ಶಕ್ತಿ ವ್ಯಯ ಆಗುತ್ತದೆ. ಆದರೆ ಈಗಾಗಲೆ ಅನಿಲ ರೂಪದಲ್ಲಿರುವ ಇಂಧನ ಸುಲಭವಾಗಿ ಹೊತ್ತಿಕೊಳ್ಳಲು, ಆಕ್ಸಿಜನ್‌ನೊಂದಿಗೆ ಮಿಳಿತವಾಗಲು ಈಗಾಗಲೇ ಸಜ್ಜಾಗಿದೆ. ಹೀಗಾಗಿ ಅನಿಲ ಇಂಧನ ಹೆಚ್ಚು ತಾಪ ಹಾಗೂ ಉಷ್ಣವನ್ನು ಶೀಘ್ರವಾಗಿ ನೀಡಲು ಸಾಧ್ಯವಾಗುವುದು ಇಂಧನದ ಪೂರ್ಣ, ದಕ್ಷ ದಹನದಿಂದ. ಒಂದೇ ಅಪಾಯವೆಂದರೆ – ಅನಿಲ ಇಂಧನ ಆಸೊಟವಾಗುವ ಅಪಾಯ ಹೆಚ್ಚು.

ಘನ ಇಂಧನವನ್ನು ಹೊತ್ತಿಸುವುದೆಂದರೆ ಆ ಇಂಧನದ ಕೆಲವು ಎಳೆಗಳು ಸೀದುಹೋಗಿ ಉರಿಯನ್ನುಂಟು ಮಾಡಿ ಉಳಿದ ಇಂಧನವನ್ನು ಅನಿಲ ರೂಪಕ್ಕೆ ತರಬೇಕು. ಆಗ ಮಾತ್ರ ದಹನ ಸುಗಮ. ಕಟ್ಟಿಗೆ ಹಸಿಯಾಗಿದ್ದರಂತೂ ತೀರಿತು. ನೀರಿನಂಶ ಆವಿಯಾಗುವವರೆಗೆ ಕಟ್ಟಿಗೆ ಹೊತ್ತಿ ಉರಿಯುವುದೇ ಇಲ್ಲ.

ಇದ್ದಿಲು ರಂಧ್ರಮಯ ಹಾಗೂ ಹಗುರ. ಅದನ್ನು ಹೊತ್ತಿಸುವುದು ಸುಲಭ. ಆದರೆ ಕಲ್ಲಿದ್ದಲು ಅತ್ಯಂತ ಸಾಂದ್ರವಾದ ಕಾರಣ ಹೊತ್ತಿಸುವುದು ಕಠಿಣ. ಈ ಮೊದಲು ರೈಲುಗಳಲ್ಲಿ ಕಲ್ಲಿದ್ದಲು ಉಪಯೋಗ ಮಾಡುತ್ತಿದ್ದರಲ್ಲವೆ! ಆಗ ರೈಲು ಚಾಲನೆಯಲ್ಲಿ ಇಲ್ಲದಿದ್ದರೂ ಕಲ್ಲಿದ್ದಲನ್ನು ಜ್ವಲಂತ ಇರಿಸಿರುತ್ತಿದ್ದರು. ಏಕೆಂದರೆ, ಒಮ್ಮೆ ಆರಿದರೆ ಹೊತ್ತಿಸಲು ಬಹಳ ಕಷ್ಟವಾಗುತ್ತಿತ್ತು. ಈಗಲೂ ಅನೇಕ ಕೈಗಾರಿಕೆಗಳಲ್ಲಿ ಕುಲುಮೆಗಳಲ್ಲಿ ಕಲ್ಲಿದ್ದಲನ್ನು ಇಂಧನವಾಗಿ ಬಳಕೆ ಮಾಡಲಾಗುತ್ತಿದೆ. ಆ ಒಲೆಯನ್ನು ಆರಗೊಡುವುದೇ ಇಲ್ಲ.

ತೇಜಸ್ : ಅನಿಲ ಇಂಧನದ ಪೈಕಿ ಯಾವುದು ಅಧಿಕ ತಾಪವನ್ನು ನೀಡಬಲ್ಲದು?

ಅಧ್ಯಾಪಕರು : ಆಕ್ಸಿ‌ಅಸಿಟಲೀನ್ ಎಂಬ ಅನಿಲ ಮಿಶ್ರಣ ಉಂಟು. ಲೆಕ್ಕಾಚಾರ ಮಾಡಿದ ಅನುಪಾತದಲ್ಲಿ ಆಕ್ಸಿಜನ್ ಹಾಗೂ ಅಸಿಟಲೀನ್ ಅನಿಲವನ್ನು ಬೆರೆಸಲಾಗಿರುತ್ತದೆ. ಅಸಿಟಲಿನ್ ತ್ರಿಬಂಧವಿರುವ ಅಸ್ಥಿರ ರಚನೆಯ ಅಣು H – C Üð ð C – H ಹೀಗಾಗಿ ಅದು ಉಂಟುಮಾಡುವ ತಾಪ ಅಧಿಕ. ಲೋಹಗಳನ್ನು ಬೆಸೆಯಲು ಅದರ ಜ್ವಾಲೆ ಬಳಕೆಮಾಡುತ್ತಾರೆ.

ಉದ್ದಿಮೆಗಳಲ್ಲಿ ಅಧಿಕ ತಾಪ ಹಾಗೂ ಅಧಿಕ ಉಷ್ಣ ಎರಡೂ ಬೇಕಾದಾಗ ಅಗತ್ಯ ಇಂಧನ ಹಾಗೂ ಆಕ್ಸಿಜನ್ನಿನ ಮಿಶ್ರಣ ತೆಗೆದುಕೊಂಡು ಈ ಕೆಲಸವನ್ನು ಸಾಧಿಸಲಾಗುವುದು.

ರಾಸಾಯನಿಕ ಕ್ರಿಯೆಯಿಂದ ಸಾಧಿಸಲಾಗುವ ತಾಪಕ್ಕಿಂತ ಅಧಿಕ ತಾಪವನ್ನು ನ್ಯೂಕ್ಲೀಯ ಕ್ರಿಯೆಗಳ ಮೂಲಕ ಸಾಧಿಸಲಾಗಿದೆ.

ನ್ಯೂಕ್ಲೀಯ ವಿದಳನದಲ್ಲಿ ದ್ರವ್ಯರಾಶಿಯು ಶಕ್ತಿಯಾಗಿ ಪರಿವರ್ತನೆ ಆಗುವುದಲ್ಲದೆ ಅದನ್ನು ನಿರಂತರಗೊಳಿಸುವ ಅವಕಾಶವಿದೆ. ಹೀಗಾಗಿ ಅಲಲ್ಲಿ ವಿಶೇಷವಾಗಿ ಉಷ್ಣ ಬಿಡುಗಡೆ ಆಗುವುದು. ಪರಮಾಣು ಬಾಂಬ್ ಎಂದು ಹೇಳಲಾಗುವ ಆಸೊಟದಲ್ಲಿ (ಅದು ನ್ಯೂಕ್ಲೀಯ ಬಾಂಬು ಎಂದು ಹೇಳುವುದೇ ಸಮಂಜಸ) ಅತ್ಯಧಿಕ ತಾಪವನ್ನು ಪಡೆಯಲಾಯಿತು. ಮೊದಲ ಪರೀಕ್ಷಾರ್ಥ ಆಸೊಟನೆ ನಡೆಸಿದಾಗ ಅತಿ ಹೆಚ್ಚು ತಾಪದಿಂದಾಗಿ ಇಡೀ ಭೂಮಿ, ಸಾಗರ ಹಾಗೂ ವಾಯುಮಂಡಲ ಅಲ್ಲೋಲಕಲ್ಲೋಲವಾಗುವುದನ್ನು ಮೊದಲ ಬಾರಿಗೆ ಕ್ಷಿಸಲಾಯಿತು. ಆ ಅನುಭವದಿಂದ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಜ್ಞಾನಿಗಳೆಲ್ಲರೂ ಮೂಕವಿಸ್ಮಿತರಾದರು. ಆಗ ಈ ಅನುಭವ ಹೇಗಿತ್ತೆಂಬ ಬಗ್ಗೆ ಪತ್ರಕರ್ತನೊಬ್ಬ ಓಪನ್‌ಹೀಮರ್ ಎಂಬ ವಿಜ್ಞಾನಿಯನ್ನು ವಿಚಾರಿಸಿದ. ಭಗವದ್ಗೀತೆಯಲ್ಲಿ “ಸಹಸ್ರ ಸೂರ್ಯರನ್ನು ಮೀರಿದ ಪ್ರಭೆ‘’ ಎಂದು ಬಣ್ಣಿಸಲಾಗಿದೆ. ಆ ಪ್ರಭೆಯನ್ನು ನೋಡಿದ ಅನುಭವ ತನಗಾಯಿತೆಂದು ಓಪನ್‌ಹೀಮರ್ ಬಣ್ಣಿಸಿದ. ಅದನ್ನು ಆಧರಿಸಿ “Brighter than thousand suns’’ ಎಂಬ ಪುಸ್ತಕ ಪ್ರಕಟವಾಗಿದೆ. ಅನಂತರ ಅದೇ ತತ್ತ್ವವನ್ನಾಧರಿಸಿದ ಬಾಂಬ್ ಅನ್ನು ಹಿರೋಷಿಮಾ – ನಾಗಸಾಕಿಗಳಲ್ಲಿ ಪ್ರಯೋಗ ಮಾಡಲಾಯಿತು. ಅದರ ಅನಾಹುತಗಳನ್ನು ಇಂದಿಗೂ ಮಾನವಕುಲ ಅನುಭವಿಸುತ್ತಲೇ ಇದೆ.

ತೇಜಸ್ : ಸರ್, ಆ ನ್ಯೂಕ್ಲೀಯ ವಿದಳನ ಉಷ್ಣದ ಆಕರವಲ್ಲ. ಏಕೆಂದರೆ ಒಮ್ಮೆ ಆಸೊಟಿಸಿತೆಂದರೆ ನಿರಂತರವಾಗಿ ಉಷ್ಣ ಒದಗಿಸಲಾರದು.

ಅಧ್ಯಾಪಕರು : ನೀನು ಹೇಳಿದ್ದು ಸರಿ. ಅದು ಅಧಿಕ ತಾಪದ ಅನುಭವ ನೀಡಿದ ಪ್ರಸಂಗವೆಂದಷ್ಟೇ ನಾನು ಅದನ್ನು ಹೇಳಿದೆ. ಅನಂತರದ ದಿನಗಳಲ್ಲಿ ನ್ಯೂಕ್ಲೀಯ ವಿದಳನದ ಅಧ್ಯಯನ ಮುಂದುವರಿಸಿದ ಎನ್ರಿಕೋ ಫರ್ಮಿ ಎಂಬ ವಿಜ್ಞಾನಿ ನಿರಂತರ ಉಷ್ಣ ನೀಡುವ, ಅಧಿಕ ತಾಪದ ಉಷ್ಣ ಆಕರವನ್ನು ನಿರ್ಮಿಸಿದ. ಅದೇ ನ್ಯೂಕ್ಲೀಯ ಸ್ಥಾವರ ಕರ್ನಾಟಕದ ಕೈಗಾದಲ್ಲಿ ಅಂತಹ ಸ್ಥಾವರ ಕಾರ್ಯನಿರತವಾಗಿದೆ.

ವಿಕಾಸ : ಇದಕ್ಕಿಂತಲೂ ಅಧಿಕ ತಾಪವನ್ನು ಪಡೆಯುವ ಪ್ರಯತ್ನ ಆಗಿಲ್ಲವೆ?

ಅಧ್ಯಾಪಕರು : ನಾನೂ ಈಗ ಅದನ್ನೇ ಹೇಳಹೊರಟಿದ್ದೆ. ನ್ಯೂಕ್ಲೀಯ ಸಮ್ಮಿಳನವೆಂಬ ಕ್ರಿಯೆ ಉಂಟು. ಸೂರ್ಯನಲ್ಲಿ ಅಧಿಕ ತಾಪ ಇರಲು ಈ ಕ್ರಿಯೆಯೇ ಕಾರಣ. ಆದರೆ ಈ ಕ್ರಿಯೆಯನ್ನು ಪ್ರಾರಂಭಿಸಲು ಅಧಿಕ ತಾಪಬೇಕು.

ವಿದಳನ ಆಧಾರಿತ ಬಾಂಬ್ ಆಸೊಟನೆಗೊಂಡಾಗ ಅಧಿಕ ತಾಪ ಉಂಟುಮಾಡಿ ನ್ಯೂಕ್ಲೀಯ ಸಮ್ಮಿಳನ ಕ್ರಿಯೆಯನ್ನು ಪ್ರಚೋದಿಸುವ FFF ಬಾಂಬ್ ತಯಾರಿಸಲಾಗಿದೆ. ಆದರೆ ನ್ಯೂಕ್ಲೀಯ ಸಮ್ಮಿಲನವನ್ನು ನಿರಂತರ ಶಕ್ತಿಯ ಆಕರವಾಗಿ ಬಳಕೆ ಮಾಡಿಕೊಳ್ಳಬೇಕಾದರೆ ಅಧಿಕ ತಾಪವನ್ನುಂಟುಮಾಡುವ ಕಲೆ ಬೇಕಾಗುತ್ತದೆ. ಈ ದಿಕ್ಕಿನಲ್ಲಿ ಪ್ರಯತ್ನ ಸಾಗಿದೆ.

ಅಂತೂ ಮಾನವಕುಲಗ ಸೂರ್ಯನಂತಹ ನಕ್ಷತ್ರಗಳು ಉತ್ಪಾದನೆ ಮಾಡುತ್ತಿರುವ ನ್ಯೂಕ್ಲೀಯ ಸಮ್ಮಿಳನವನ್ನು ಅನುಕರಿಸುವಸಲುವಾಗಿ ಅಧಿಕ ತಾಪವನ್ನು ಪಡೆಯುವ `ಕಿರುಸೂರ್ಯ‘ನನ್ನು ಪ್ರಯೋಗಾಲಯದಲ್ಲಿ ಕೈಗೊಳ್ಳಲು ಹವಣಿಸಿದ್ದಾನೆ.

ರವಿ : ನಕ್ಷತ್ರಗಳಲ್ಲೆಲ್ಲಾ ನ್ಯೂಕ್ಲೀಯ ಸಮ್ಮಿಲನ ನಡೆಯುತ್ತದೆ. ಅಂದ ಮೇಲೆ ಎಲ್ಲ ನಕ್ಷತ್ರಗಳಲ್ಲೂ ಬೇರೆ ಬೇರೆ ತಾಪವಿದೆ ಎಂದು ನೀವು ಹೇಳಿದ್ದಿರಿ. ಅದು ಹೇಗೆ?

ಅಧ್ಯಾಪಕರು : ನ್ಯೂಕ್ಲೀಯ ಸಮ್ಮಿಲನದಲ್ಲೂ ವಿವಿಧ ಕ್ರಿಯೆಗಳು ಇವೆ. ನಕ್ಷತ್ರದ ದ್ರವ್ಯರಾಶಿಯನ್ನಾಧರಿಸಿ ವಿವಿಧ ಕ್ರಿಯೆಗಳು ನಡೆಯುತ್ತಿವೆ.

ನಕ್ಷತ್ರಗಳು ಸೊಟಗೊಂಡಾಗ ಅತ್ಯಧಿಕ ಉಷ್ಣ ಹಾಗೂ ತಾಪ ಒಮ್ಮೆಗೇ ಬಿಡುಗಡೆ ಆಗುತ್ತದೆ. ನಕ್ಷತ್ರ ಆಸೊಟಗಳ ಪೈಕಿ ನೋವಾ ಹಾಗೂ ಸೂಪರ್ನೋವಾ ಎಂಬ ಎರಡು ಬಗೆಗಳಿವೆ. ಆ ಪೈಕಿ ಸೂಪರ್ನೋವಾ ಅತ್ಯಧಿಕ ಉಷ್ಣ ಹಾಗೂ ಬೆಳಕನ್ನು ಉತ್ಸರ್ಜಿಸುತ್ತದೆ.

ಭೂಮಿಯಿಂದ ಬಹಳ ದೂರದಲ್ಲಿರುವ ನಕ್ಷತ್ರವೊಂದು ಕರ್ಕಾಟಕ ರಾಶಿಯಲ್ಲಿ ಆಸೊಟನಗೊಂಡಾಗ ಹಗಲಿನ ವೇಳೆಯಲ್ಲಿಯೇ ಉರಿಯುತ್ತಿರುವ ಬೆಳಕಿನ ಆಕರವಾಗಿ ಕಾಣಿಸಿಕೊಂಡಿತು. ಅಂದ ಮೇಲೆ ಆ ತಾಪ ನಕ್ಷತ್ರಗಳ ತಾಪಕ್ಕಿಂತಲೂ ಗಣನೀಯವಾಗಿ ಅಧಿಕವಾಗಿರಬೇಕಲ್ಲವೆ?

ಅಂತೂ ಅಧಿಕ ತಾಪದ ಅನುಭವ, ಅಧಿಕ ತಾಪ ಪಡೆಯುವ ಪ್ರಯತ್ನ ಹಾಗೂ ಅಧಿಕ ತಾಪವನ್ನು ಮಾಪನ ಮಾಡುವ ಮತ್ತು ಅನ್ವಯ ಮಾಡಿಕೊಳ್ಳುವ ಸವಾಲು ಈಗಲೂ ವಿಜ್ಞಾನಿಗಳನ್ನು ಕೆಣಕಿದೆ. ಹೀಗಾಗಿ ತಾಪದ ಪ್ರತಾಪವನ್ನು ಹತೋಟಿಯಲ್ಲಿರಿಸಿಕೊಳ್ಳುವ ಯತ್ನ ಜೀವಂತವಾಗಿದೆ.

ಸೂರ್ಯನನ್ನು ಕೆಂಡದ ಉಂಡೆ ಎನ್ನುವುದುಂಟು. ಆದರೆ ಗಮನಿಸಿ, ಸೂರ್ಯನಲ್ಲಿ ನಡೆಯುತ್ತಿರುವುದು ದಹನವಲ್ಲ. ನ್ಯೂಕ್ಲೀಯ ಸಮ್ಮಿಲನ.

ಈ ಕೆಲವು ವಿಚಿತ್ರಗಳನ್ನೂ ಗಮನಿಸಿ.

ಕೆಂಡ ಉರಿದಾಗ ಬರುವ ಉತ್ಪನ್ನಗಳು (ಹೊಗೆ, ಬೂದಿ) ಹೊರಸಾಗುತ್ತಿವೆ. ಆದರೆ ಸೂರ್ಯನಲ್ಲಿ ನಡೆವ ಸಮ್ಮಿಲನದ ಕ್ರಿಯೆಯ ಉತ್ಪನ್ನಗಳು ಭಾರವಾಗಿರುವ ಕಾರಣ ಸೂರ್ಯನ ಕೇಂದ್ರಕ್ಕೆ ತಲಪುತ್ತವೆ.

ಜ್ವಾಲೆಯ ತುದಿ ಅತಿ ಹೆಚ್ಚು ತಾಪದ್ದು. ಆದರೆ ಆಂತರ್ಯ, ಅಪೂರ್ಣ ದಹನದಿಂದಾಗಿ ತಂಪು.

ಸೂರ್ಯನಲ್ಲಿ ತಾಪದ ಏರಿಳಿತ ಬಹಳ ಗೋಜಲು. ಸೂರ್ಯನ ಹೊರಮೈ ತಾಪಕ್ಕಿಂತ ಮಧ್ಯಭಾಗದಲ್ಲಿಯೂ ತಾಪ ಅಧಿಕ ಹೊರಮೈನ ಕೊಂಚ ದೂರದಲ್ಲಿಯೂ ಅಧಿಕ!