ಓದುವುದರಲ್ಲೇ ಮಗ್ನವಾಗಿ ಆನಂದಿಸುತ್ತಿದ್ದ ನನಗೆ ಭಾಷಣ ಮಾಡಿ ಆನಂದಿಸಲು ಅವಕಾಶ ಮಾಡಿಕೊಟ್ಟದ್ದು ಕರಾವಿಪ; ಪ್ರೋಬೆನ್ನುತಟ್ಟಿದವರು ಕರ್ನಾಟಕದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಾರ್ವಜನಿಕರು. ಎಲ್ಲ ಅಭಿಮಾನಿಗಳೂ ಕುಣಿಸಿದಂತೆ ಕುಣಿದು ತಣಿದಿದ್ದರೂ, ದಣಿದಿದ್ದರೂ ಈಗಲೂ ಮೂಲ ಆನಂದ ಅಧ್ಯಯನವೆ.

ಕಹಿಮದ್ದನ್ನು ಸಿಹಿಸಕ್ಕರೆಯ ಪಾಕ (syrup) ಮಾಧ್ಯಮದಲ್ಲಿ ನೀಡುವಂತೆ ಇಲ್ಲಿ ವಿಜ್ಞಾನ ಮಾಹಿತಿಗಳನ್ನು – ವಿದ್ಯಾರ್ಥಿಗಳ ಆಲೋಚನಾಕ್ರಮದಲ್ಲಿ, ಅಧ್ಯಾಪಕರು ಹಾಗೂ ಪೋಷಕರ ಮಾರ್ಗದರ್ಶನದಲ್ಲಿ, ತರಗತಿಯ ತಿಳಿನಗೆಯ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಸರಸಸಲ್ಲಾಪದಲ್ಲಿ, ನಗೆ ಹನಿಗಳಲ್ಲಿ ವಿಜ್ಞಾನದ ಇತಿಹಾಸದಲ್ಲಿ, ವಿಜ್ಞಾನಿಗಳ ಪ್ರಸಂಗದಲ್ಲಿ, ವಿಲೀನಗೊಳಿಸಲು ಪ್ರಯತ್ನಿಸಿದ್ದೇನೆ. ನಿರೂಪಣೆ ರೋಚಕವಾಗಿಸಲು ಈ ಎಲ್ಲ ಪ್ರಯತ್ನಗಳನ್ನು ಕೈಗೊಂಡಿದ್ದೇನೆ.

ಸುವರ್ಣ ಕರ್ನಾಟಕ ವರ್ಷದ ಈ ಸಂದರ್ಭದಲ್ಲಿ ಕನ್ನಡ ಜನತೆಗೆ ವಿಜ್ಞಾನದ ಕೃತಿಪುಷ್ಪವನ್ನು ಸಮರ್ಪಿಸುತ್ತಿದ್ದೇನೆ. ಪೂಜೆಗೆ ನೇರವಾಗಿ ಮತ್ತು ಪರೋಕ್ಷವಾಗಿ ಕಾರಣರಾದ ಎಲ್ಲರನ್ನೂ ಗೌರವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ.

 

ಜನಪ್ರಿಯ ವಿಜ್ಞಾನ ಕಾರ್ಯಕರ್ತ
ಎಮ್.ಆರ್. ನಾಗರಾಜು
ಬೆಂಗಳೂರು
ಮಾರ್ಚ್ 2008