ಕನ್ನಡಿಗರಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಹೆಚ್ಚಿಸಲು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸಲು 1980ರಲ್ಲಿ ಆರಂಭವಾದ ಸಂಸ್ಥೆಯೇ “ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು‘’ (ಕರಾವಿಪ). ವಿಜ್ಞಾನದಿಂದ ಜನ ಸಮುದಾಯದ ಸಮಗ್ರ ಪ್ರಗತಿ ಸಾಧ್ಯವೆಂಬ ದೃಢ ವಿಶ್ವಾಸ ಪರಿಷತ್ತಿಗಿದೆ.

ಕಳೆದ 28 ವರ್ಷಗಳಲ್ಲಿ ಸಹಸ್ರಾರು ವಿಜ್ಞಾನ ವಸ್ತು ಪ್ರದರ್ಶನಗಳನ್ನೂ ವಿಜ್ಞಾನಿಗಳೊಡನೆ ಸಂವಾದ ಮತ್ತು ಉಪನ್ಯಾಸಗಳನ್ನೂ ಕರಾವಿಪ ಏರ್ಪಡಿಸಿದೆ. “ವಿಚಾರಕ್ರಾಂತಿಗೆ ಕುವೆಂಪು ಕರೆ‘’, “ವೈಜ್ಞಾನಿಕ ಮನೋಭಾವ‘’ ಮತ್ತು “ಮೂಢನಂಬಿಕೆ‘’ಗಳಂಥ ಆಕರ್ಷಕ ವಸ್ತು ಮತ್ತು ಶೀರ್ಷಿಕೆಗಳಿರುವ 108ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದೆ. ಭಾನಾಮತಿ ನಿರ್ಮೂಲನ ಆಂದೋಲನ, ಪವಾಡ ರಹಸ್ಯ ಬಯಲು, ಭಾರತ ಜನ ವಿಜ್ಞಾನ ಜಾಥ, ವಿಜ್ಞಾನ ಕಲಾ ಜಾಥ, ಭಾರತ ಜ್ಞಾನ ವಿಜ್ಞಾನ ಜಾಥ, ವಿಜ್ಞಾನ ಸಮ್ಮೇಳನ, ಮಕ್ಕಳ ವಿಜ್ಞಾನ ಸಮಾವೇಶ, ಅಧ್ಯಾಪಕ ವಿಜ್ಞಾನ ಸಮ್ಮೇಳನಗಳಂಥ ಸಮೂಹ ಕಾರ್ಯಕ್ರಮಗಳಿಂದ ಜನರನ್ನು ಎಚ್ಚರಿಸುವ ಪ್ರಯತ್ನವನ್ನು ಕರಾವಿಪ ನಡೆಸುತ್ತಿದೆ. ಪರಿಸರ, ವಿಜ್ಞಾನ ಬರಹ, ವಿಜ್ಞಾನ ಆಟಿಕೆ, ದೂರದರ್ಶಕ ರಚನೆಗಳಂಥ ಪ್ರಮೇಯಗಳನ್ನಿಟ್ಟುಕೊಂಡು ಹಲವು ಕಮ್ಮಟಗಳನ್ನು ರಾಜ್ಯದ ವಿವಿಧೆಡೆಗಳಲ್ಲಿ ಸಂಘಟಿಸಿದೆ.

ನಮ್ಮದು ಐಟಿ-ಬಿಟಿಗಳ ರಾಜ್ಯ. ಭಾರತದ ಸಿಲಿಕಾನ್ ಸಿಟಿ ಎಂದು ರಾಜಧಾನಿಯಾದ ಬೆಂಗಳೂರು ಹೆಸರಾಗಿದೆ. ಆದರೆ ಪ್ರಾಣಿ ಬಲಿ ಕೊಡುವ, ಮಂತ್ರ-ತಂತ್ರಗಳಿಗೆ ಮೊರೆಹೋಗುವ, ಭಾನಾಮತಿಯಂಥ ಮೌಢ್ಯಕ್ಕೆ ಬಲಿಬೀಳುವ ಬೃಹತ್ ಜನವರ್ಗ ಇನ್ನೂ ಇದೆ. ಸಾಮಾಜಿಕ ಬಾಧ್ಯತೆ, ನಾಗರಿಕ ಪ್ರಜ್ಞೆ, ಪ್ರಕೃತಿದತ್ತ ಸಂಪನ್ಮೂಲಗಳ ಪ್ರಶಸ್ತ ಬಳಕೆಗಳಿಗೆ ಆಧಾರವಾದ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಗಳು ಇನ್ನೂ ಆಳವಾಗಿ ಬೇರೂರಬೇಕಾಗಿವೆ. ವಿಜ್ಞಾನದ ಅರಿವಿಗೂ ತಂತ್ರಜ್ಞಾನದ ಅನ್ವಯದೊಂದಿಗೆ ಹರಡುತ್ತಿರುವ ಅತಿಬಳಕೆಯ ಮೋಹಕ್ಕೂ ಅಂತರ ಹೆಚ್ಚುತ್ತಿದೆ. ಇದರಿಂದಾಗಿಯೇ ಜನಸಮುದಾಯದಲ್ಲಿ ಅಸಮಾನತೆಯ ಕಂದರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅರಿವಿನ ಕಂದರವೂ ಇದಕ್ಕೆ ಒಂದು ಕಾರಣವಾಗಿದೆ.

ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಕನ್ನಡಿಗರಲ್ಲಿ ಪುಸ್ತಕ ಪ್ರಕಟಣೆ ಮೂಲಕ ಅರಿವಿನ ಕಂದರವನ್ನು ಕಡಿಮೆಗೊಳಿಸುವ ಹಾಗೂ ವಿಜ್ಞಾನದ ಮುಂಚೂಣಿ ಕ್ಷೇತ್ರಗಳ ಪರಿಚಯಮಾಡಿಕೊಡುವ ಬಗ್ಗೆ ಕರಾವಿಪ ಯೋಚಿಸಿತು. ಅಗತ್ಯ ಶೀರ್ಷಿಕೆಗಳನ್ನು ಗುರುತಿಸಿ ರಾಜ್ಯದ ವಿವಿಧ ಭಾಗಗಳ ಪ್ರಮುಖ ವಿಜ್ಞಾನ ಲೇಖಕರನ್ನು ತೊಡಗಿಸಿಕೊಳ್ಳುವುದಕ್ಕಾಗಿ ಮೂರು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿತು. (28-30, ಮೇ 2007). ಅಲ್ಲಿ ಮೂಡಿದ ಅಭಿಪ್ರಾಯಕ್ಕನುಗುಣವಾಗಿ “ಸುವರ್ಣ ಕರ್ನಾಟಕ – ವಿಜ್ಞಾನ ಬಾಗಿನ‘’ ಎಂಬ ಮಾಲಿಕೆಯಲ್ಲಿ ಒಂದು ನೂರು ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯನ್ನು ಕರಾವಿಪ ಕೈಗೆತ್ತಿಕೊಂಡಿದೆ. ಸರಳ ಭಾಷೆ ಮತ್ತು ಸಮಗ್ರ ನಿರೂಪಣೆಗಳನ್ನೊಳಗೊಂಡ ಈ ಮಾಲಿಕೆಯ ಕೃತಿಗಳು ರಾಜ್ಯದ ಎಲ್ಲ ಮನೆಗಳನ್ನೂ, ಶಾಲೆ – ಕಾಲೇಜುಗಳನ್ನೂ ತಲಪಬೇಕೆಂಬುದು ನಮ್ಮ ಮಹದಾಸೆ.

ಈ ದಿಸೆಯಲ್ಲಿ ಹೆಸರಾಂತ ಬರಹಗಾರರಾದ, ವಿಜ್ಞಾನ ಕಾರ್ಯಕರ್ತರಾದ ಮತ್ತು ಪ್ರಾಧ್ಯಾಪಕರಾದ ಪ್ರೊ. ಎಮ್. ಆರ್. ನಾಗರಾಜು ಅವರು ಬರೆದುಕೊಟ್ಟ “ತಾಪ – ಪ್ರತಾಪ‘’ ಎಂಬ ಪುಸ್ತಕವನ್ನು ಕರಾವಿಪ ಹೊರತರುತ್ತಿರುವುದು ಹೆಮ್ಮೆಯೆನಿಸಿದೆ ಹಾಗೂ ಅವರಿಗೆ ಕೃತಜ್ಞತೆಗಳು.

 

ಡಾ. ಎಚ್. ಎಸ್. ನಿರಂಜನ ಆರಾಧ್ಯ
ಪ್ರೊ. ಅಡ್ಯನಡ್ಕ ಕೃಷ್ಣಭಟ್
ಶ್ರೀ ಕೊಳ್ಳೆಗಾಲ ಶರ್ಮ
“ಸುವರ್ಣ ಕರ್ನಾಟಕ – ವಿಜ್ಞಾನ ಬಾಗಿನ‘’ ಸಂಪಾದಕ ಸಮಿತಿ
ಬೆಂಗಳೂರು
ಮಾರ್ಚ್ 2008