ದರುವು

ಧರಣಿ ಪಾಲಕ ವಿಜಯ  ಕೊಡು
ಭರದಿ ಯನಗೆ ಅಭಯ ॥
ದುರುಳತನದಿ ಹಯವ ಪಿಡಿದ
ತುರಗ ಚೋರನ ವಧಿಸಿ ಬರುವೇ ॥

ಅನಿರುದ್ಧ: ಎಲೈ ಧರಣಿ ಪಾಲಕನಾದ ಪಾರ್ಥ ಭೂಪಾಲರೇ ಲಾಲಿಸಿ, ಜಡಮತಿ ಭ್ರಷ್ಠನಾದ ತಾಮ್ರಧ್ವಜನು ಯನಗೆ ಲಕ್ಷ್ಯವೇ, ಕಡುಜವದಿಂದ ನೇಮವನ್ನು ದಯಪಾಲಿಸಿದ್ದಾದರೇ ದುಡುಕುತನದಿಂದ ನಮ್ಮ ಹಯವ ಕಟ್ಟಿರುವ ಮೂಢ ಅರುಣಕೇತುವನ್ನು ಕಾಲನ ಆಲಯಕ್ಕೆ ಕಳುಹಿಸಿ ಬರುವೇನೋ ತಾತ – ಲೋಕ ಪ್ರಖ್ಯಾತ ॥

ದರುವು

ಬಂದು ನಿಲ್ಲಲಿ ಅಜನೂ  ಸುರ
ವೃಂದ ನೆರೆದರೇನೂ ॥
ಇಂದು ಅವನ ಶಿರವ ತರಿದೂ
ಚಂದದಿಂದ ಬರುವೆ ನಾನೂ ಭಳಿರೇ॥ ॥

ಅನಿರುದ್ಧ: ಹೇ ತಾತ ವಂದಿಸುವೆನು, ದಯದಿಂದ ಲಾಲಿಸಬೇಕೋ ಮಾಧವ ಪ್ರೀತ ॥ಇಂದಿನ ದಿನ ನಂದಿವಾಹನ ಅಜದೇವ, ನಿರ್ಜರಾಧಿಪರೊಂದಾಗಿ ಬಂದು ನಿಂತಾಗ್ಯೂ ಅವರಂದಗೆಡಿಸಿ ಬಂದ ಪಥವಿಡಿದು ಹಿಂದಕ್ಕೆ ಓಡುವಂತೆ ಮಾಡುವೆ. ಮುಂದಾಗಿ ಕಳುಹಿಸಿ ಕೊಡೈ ಚಿತ್ರಾಂಗದ ಪ್ರಿಯಾ – ಕುಂತೀ ತನಯಾ ॥

ದರುವು

ಧರಣಿಗಧಿಕ ಹಿರಿಯಾ  ಬಳ್ಳಾ
ಪುರವ ಪಾಲಿಸುವಂಥ ॥
ವರದ ಸೋಮನಾಥನಾಣೆ
ದುರವ ಜೈಸಿ ತುರಗ ತರುವೇ ಭಳಿರೇ॥ ॥

ಅನಿರುದ್ಧ: ಹೇ ಪಿತಾಮಹ, ಈ ಧರಣಿಯಲ್ಲಿ ಅಧಿಕವಾಗಿ ಶೋಭಿಸುವ ಹಿರಿಯ ಬಳ್ಳಾಪುರವನ್ನು ಪ್ರೇಮದಿಂದ ಪರಿಪಾಲಿಸುವ ಶ್ರೀ ಸೋಮನಾಥನೇ ಈ ದುರುಳ ಅರುಣ ಕೇತುವಿಗೆ ಸಹಾಯವಾಗಿ ಬಂದಾಗ್ಯೂ ಸರಕುಗೊಳ್ಳದೆ ರಣವನ್ನು ಜೈಸಿ ಅಶ್ವವನ್ನು ತರುತ್ತೇನೆ. ಅತಿ ಜಾಗ್ರತೆ ಯನಗೆ ನೇಮವನ್ನು ದಯಪಾಲಿಸೈಯ್ಯ ತಾತಾ – ಭುವನ ಪ್ರಖ್ಯಾತ ॥

ದರುವು

ಮುರಹರನಾ ಪೌತ್ರನೇ  ವೈರಿ ತಾಮ್ರಧ್ವಜನಾ
ಧುರದಿ ಜೈಸಲು ನೀನು  ಪೋಗಿ ಬಾರೈಯಾ ॥

ಅಸುರ ಬಾಣನ ಪುತ್ರೀ  ಉಷಾದೇವಿಯ ರಮಣಾ
ಮುಸುಕೀ ಧೂರ್ತನ ರಣದೀ  ಜೈಸಿ ಬಾರೈಯ್ಯ ॥

ಧರೆಗಧಿಕಾ ಹಿರಿಬಳ್ಳಾ  ಪುರದಾ ಸೋಮೇಶ್ವರನಾ
ಚರಣವ ಸ್ಮರಿಸುತ್ತಾ  ತೆರಳೈಯ್ಯ ಮಗುವೇ ॥

ಅರ್ಜುನ: ಹೇ ಕದನ ಕೋವಿದನಾದ ಚದುರ ಅನಿರುದ್ಧನೇ ಲಾಲಿಸು, ಕಾಳಗದೊಳು ಧೂರ್ತನಾದ ತಾಮ್ರಧ್ವಜನನ್ನು ಜೈಸಿ ತುರಗವನ್ನು ಬಿಡಿಸಿ ಮೇದಿನಿಯೋಳ್ ಕೀರ್ತಿ ಪಡೆಯೈಯ್ಯ ಅನಿರುದ್ಧಾ – ಸಮರ ನಿರುದ್ಧಾ॥

(ಅನಿರುದ್ಧ ಯುದ್ಧಕ್ಕೆ ಬರುವಿಕೆ)

ಅನಿರುದ್ಧ: ಎಲೈ ಚಾರ ! ಮದನ ಪುತ್ರನಾದ ವೀರ ಅನಿರುದ್ಧನು ಯುದ್ಧರಂಗಕ್ಕೆ ಬಂದು ಇದ್ದಾನೆಂದು ಆ ಖೂಳನಾದ ತಾಮ್ರಧ್ವಜನಿಗೆ ನೀನು ಅತಿ ಜಾಗ್ರತೆ ಹೋಗಿ ತಿಳಿಸಿ ಬಾರೈಯ್ಯ ಚಾರಕಾ – ಯನ್ನ ಆಜ್ಞಾಧಾರಕ ॥

ತಾಮ್ರಧ್ವಜ: ಯಲಾ ಚಾರ ! ಹರಿಹರ ಬ್ರಹ್ಮಾದಿಗಳು ಬಂದಾಗ್ಯೂ ಸರಕುಗೊಳ್ಳದ ಈ ವೀರ ತಾಮ್ರಧ್ವಜನು ಈ ತರಳನಿಗೆ ಬೆದರುವನೇ. ಈತನು ಧಾರೋ  ಇವನ ಪೆಸರೇನೋ  ಧಾರೋ ಮಗನೋ ? ಅತಿ ಜಾಗ್ರತೆ ತಿಳಿದು ಬಾರೈಯ್ಯ ಚಾರ – ಗುಣಮಣಿ ಹಾರ ॥

ದರುವು

ಸೃಷ್ಠಿಗೊಡೆಯ ಶ್ರೀ  ಕೃಷ್ಣಮೂರ್ತಿಯಾ
ಇಷ್ಠ ಪೌತ್ರನೋ  ಭ್ರಷ್ಠ ಕೇಳೆಲಾ ॥

ಅನಿರುದ್ಧ: ಯಲವೋ ತಾಮ್ರಧ್ವಜಾ ! ನಾನು ಧಾರಾದೊಡೇನು ? ನಮ್ಮ ಕರಣೀಕ, ಗುರುತು ನೆಲೆ ವಿಚಾರಿಸುವ ಪಾರುಪತ್ಯ ನಿನಗೇತಕ್ಕೆ ? ಆದರೂ ಹೇಳುವೆನು ಕೇಳು ! ಸೃಷ್ಠಿಕರ್ತನಾದ ಜ್ಯೇಷ್ಠಪಿತನ ಸುತನಾದ ಮದನನ ಇಷ್ಠಪುತ್ರನೆಂದು ತಿಳಿಯೋ ಭ್ರಷ್ಠಾ – ಪರಮ ಪಾಪಿಷ್ಠಾ ॥

ದರುವು

ಮದನ ಪುತ್ರನೂ ನೀ  ನಾದರೊಳ್ಳಿತೂ
ವದಗೋ ಕದನಕೇ  ಸದೆಯ ಬಡಿಯುವೇ ॥

ತಾಮ್ರಧ್ವಜ: ಯಲವೋ ಅನಿರುದ್ಧಾ ! ಮದನನ ಚದುರ ಸುತನಾದರೆ ಯನಗೇನೂ ಹೆಚ್ಚಲ್ಲ. ತ್ರಿದಶಾಧೀಶ್ವರರ ಮರೆಹೊಕ್ಕರೂ ನಿನ್ನನ್ನು ಬಿಡುವವನಲ್ಲಾ  ಜಾಗ್ರತೆ ಕದನಕ್ಕೆದುರಾಗಿ ಬಾರೋ ಅಧಮಾ – ನೋಡೆನ್ನ ಪರಾಕ್ರಮಾ॥

ದರುವು

ಹರಿಯ ಪೌತ್ರನೂ  ಎಂದು  ಚರಣಕೆರಗದೇ
ಪರಿ ಪರಿಯಲೀ  ಜರಿಯುತಿರ್ಪೆಯಾ ॥

ಅನಿರುದ್ಧ: ಯಲವೋ ದುರುಳಾ, ಶ್ರೀ ಕೃಷ್ಣಮೂರ್ತಿಯ ಪೌತ್ರನೆಂದು ಯನ್ನ ಚರಣಕ್ಕೆರಗದೆ ದುರಹಂಕಾರದಿಂದ ಜರಿಯುತ್ತಿರುವೆಯಾ ಧೂರ್ತ, ಈ ತರಳನ ಪರಾಕ್ರಮವನ್ನು ನೀನರಿತಿರುವೆಯಾ, ಶರಮುಖದಿಂದ ಪರಾಭವಗೊಳಿಸಿ ನಿನ್ನಯ ಶರೀರವನ್ನು ಪರಿಭಂಗಿಸುವೆನೋ ದುರುಳಾ – ಕತ್ತರಿಸುವೆನೋ ಕೊರಳಾ ॥

ದರುವು

ಕೃಷ್ಣ ಪೌತ್ರನೂ  ಎಂದು  ಪೂಜೆಗೈವೆನೂ
ರಣಕೆ ನಿಲ್ಲಲೂ  ಈಗಾ  ನಿನ್ನ ಕೊಲ್ವೆನೂ ॥

ತಾಮ್ರಧ್ವಜ: ಯಲಾ ಮೂರ್ಖ, ಶ್ರೀ ಕೃಷ್ಣಮೂರ್ತಿಯ ಪೌತ್ರನೆಂದು ವಂದಿಸಿ ಇದುವರೆವಿಗೂ ಸುಮ್ಮನಿದ್ದೆ. ಇನ್ನು ನಾನು ಸೈರಿಸುವವನಲ್ಲ, ಗರ್ವದ ಮಾತುಗಳನ್ನಾಡುವ ನಿನ್ನನ್ನು ರಣಾಗ್ರದಲ್ಲಿ ಕೆಡಹುವೆನೋ ಮೂರ್ಖ – ಬಿಡು ಯನ್ನೊಳು ತರ್ಕ ॥

ದರುವು

ಧರಣಿಗೆ ಹಿರಿಯಾ  ಬಳ್ಳಾ  ಪುರ ನಿವಾಸನಾ
ಕರುಣದಿಂದಲೀ  ಶಿರವ  ತರಿವೆನೀಕ್ಷಣಾ ॥

ಅನಿರುದ್ಧ: ಹೇ ದುರುಳಾ, ಈ ಧರೆಯೋಳ್ ಹಿರಿದೆನಿಸಿ ರಾಜಿಸುತ್ತಿರುವ ಹಿರಿಯ ಬಳ್ಳಾಪುರದ ವರ ಸೋಮನಾಥನ ಕರುಣದಿಂದ ಯನ್ನ ಶರಸಮೂಹವನ್ನು ಎಸೆದು ನಿನ್ನ ಶಿರವಂ ತರಿಯುವೆನೋ ಭ್ರಷ್ಠಾ ॥

ದರುವು

ಪೊಡವಿಯೊಳಗೆ ಶ್ರೀ  ಮೃಡಗಿರೀಶನಾ
ಅಡಿಗಳಾಣೆಯೂ  ಹೊಡೆವೆ ತಕ್ಷಣಾ ॥

ತಾಮ್ರಧ್ವಜ: ಯಲವೋ ಧೂರ್ತ ! ಪೊಡವಿಗೆ ಶ್ರೇಷ್ಠಮಾದ ಹಿರಿಯ ಬಳ್ಳಾಪುರದೊಡೆಯ ಮೃಡ ಸೋಮನಾಥನ ಅಡಿದಾವರೆಗಳಾಣೆಯೂ ನಿನಗೆ ಕಡೆಗಾಲ ವದಗಿತೆಂದು ಧೃಢಕರಿಸಿ ನಿಂತು ಕಡು ರೌದ್ರಮಾದ ಯನ್ನ ಶರಗಳನ್ನು ತಡೆದುಕೊಳ್ಳೆಲೋ ತರಳಾ ಕತ್ತರಿಸುವೆ ಕೊರಳಾ ॥

ಕಂದಕೇದಾರ ಗೌಳ

ಯಲವೆಲವೋ ತಾಮ್ರಧ್ವಜ  ವಿಚಾರಿಸದೆ
ಕೆಚ್ಚೆದೆಯೊಳಿದಿರಾದೆ  ಮುರಹರನ
ಮೊಮ್ಮಗನಾಂ, ಬೆಚ್ಚುವೊಡೆ ಬಿಡು ಹಯವ
ನಲ್ಲದೊಡೆ ನೋಡೆನ್ನ ಬಾಣ ಜಾತವ ತರಳಾ ॥

ಕಂದಕೇದಾರ ಗೌಳ

ಬಾಣ ಜಾತವನೀಗ  ನೋಡಲಿರ್ದ್ದಪುದೇ
ನೀಂ ಬಾಣ ಜಾತೆಯ  ರಮಣನಂತು ಮಲ್ಲದೇ
ಪುಷ್ಪಬಾಣಜಾತಂ  ಮೇಲೆ ತನ್ನ ಮಗುಳುಷೆಗೆ
ನೀಂ ಪ್ರಾಣೇಶನೆಂದು ರಣದೆ  ಬಾಣ ನುಳು
ಹಿದನೆಂದು  ಕೈಗಾಯ್ವುವಲ್ಲೆಮ್ಮ  ಬಾಣಂ
ಗಳೀಕ್ಷಿಸೈ  ಮುರಹರ ಸುತನ ಸುತನೇ ॥

ದರುವು

ಬಾಣಗಡಣದಿಂದ ಲಾಕ್ಷಣಾ
ಬಾಣಾಸುರನ  ಗೋಣ ತರಿದೆ ಕೇಳೋ ತಕ್ಷಣಾ ॥

ಅನಿರುದ್ಧ: ಯಲವೋ ತಾಮ್ರಧ್ವಜ ! ಹಿಂದೆ ಬಾಣಾಸುರನನ್ನು ಸಂಹರಿಸಿ ಖ್ಯಾತಿ ಪಡೆದಿರುವ ಅಸಮ ಸಾಹಸವಂತನಾದ ನಾನು ಬಾಲನಾದ ನಿನ್ನಯ ಪೊಳ್ಳು ಬೆದರಿಕೆಗೆ ಹೆದರುವೆನೇನೋ ದುರುಳಾ – ಹೊರ ತೆಗೆಯುವೆ ಕರುಳಾ ॥

ದರುವು

ಬಾಣ ಜಾತೆ ರಮಣನೂ ಯೆಂದೂ
ಬಾಣಾಸುರನು  ಪ್ರಾಣವನ್ನು ವುಳುಹಿದಾನಂದೂ ॥

ತಾಮ್ರಧ್ವಜ: ಯಲವೋ ಅನಿರುದ್ಧ ! ರೀತಿಯರಿಯದೆ ಕಾತುರದಿಂದ ಯಾತರ ಮಾತನಾಡುವೆಯೋ ಭ್ರಷ್ಠಾ, ಬಾಣಾಸುರನು ತನ್ನ ಮಗಳಾದ ಉಷಾದೇವಿಯ ಮನೋಪ್ರೀತನೆಂದು ತಿಳಿದು ಘಾತಿಸಲು ಕರಗಳು ಬಾರದೆ ಸೋತು ಪ್ರೀತಿ ಪುಟ್ಟಿದ ಕಾರಣ ಕರಾಯುಧವನ್ನು ಭೂತಳಕ್ಕಿಳುಹಿ ನಿನ್ನ ಪ್ರಾಣವನ್ನು ಉಳಿಸಿದನಲ್ಲದೇ ಮತ್ತೆ ಬೇರಿಲ್ಲವೋ ಬಾಲ – ನಿನಗೊದಗಿತು ಕಡೆಗಾಲ ॥

ದರುವು

ನಿಲ್ಲೋ ನಿಲ್ಲೋ ನಿಲ್ಲೊ ನಿಲ್ಲೆಲೋ
ಖುಲ್ಲ ಮನುಜ  ಹಲ್ಲು ಮುರಿವೆನೀಗ ನೋಡೆಲೋ  ॥

ಅನಿರುದ್ಧ: ಯಲವೋ ತರಳಾ, ನಾನು ನಿನ್ನ ಸಾಹಸವನ್ನು ಬಲ್ಲೆನು. ಅಂಥಾ ಬಲ್ಲಿದನೇ ನೀನಾದರೇ ರಣಾಗ್ರದಲ್ಲಿ ನಿಂತು ನಿನ್ನ ಶೌರ‌್ಯವನ್ನು ತೋರಿಸೋ ಅಧಮಾ – ನೋಡೆನ್ನ ಪರಾಕ್ರಮ॥

ದರುವು

ಬಾರೋ ಬಾರೋ ಬಾರೋ ಬಾರೆಲೋ
ದುರುಳಾತ್ಮ ನಿನ್ನ  ಶಿರವ ತರಿವೆ ನಿಲ್ಲೋ ನಿಲ್ಲೆಲೋ ॥

ತಾಮ್ರಧ್ವಜ: ಹೇ ಖೂಳ ! ಯುದ್ಧದಲ್ಲಿ ಯಮ್ಮನ್ನು ಗೆದ್ದು ಪೋಗುವುದಕ್ಕೆ ಬುದ್ಧಿಯಿಲ್ಲದೆ ಸಿದ್ಧವಾಗಿ ಬಂದೆಯಾ, ಇನ್ನು ಮುದ್ದು ಬಾಲಕನಾದ ಯನ್ನ ಶರಗಳಿಂದ ನಿನ್ನ ಶಿರವನ್ನು ತರಿದು ಸದ್ದಡಗಿಸಿ ಬಿಡುವೆನೋ ಬುದ್ಧಿ ಶೂನ್ಯನೇ ॥

(ಉಭಯರ ಯುದ್ಧಅನಿರುದ್ಧ ಪರಾಭವ)

(ಪ್ರದ್ಯುಮ್ನ ಯುದ್ಧಕ್ಕೆ ಬರುವಿಕೆ)

ಪ್ರದ್ಯುಮ್ನ: ಹೇ ಧೂರ್ತ ! ಹಾಲುಗಲ್ಲದ ಚಿಕ್ಕ ಹಸುಳೆಯಾದ ಯನ್ನ ಮುದ್ದು ಕುಮಾರ ಅನಿರುದ್ಧನನ್ನು ಪರಾಭವಗೊಳಿಸಿದೆನೆಂದು ಹೆಮ್ಮೆಪಡುತ್ತಿರುವೆಯಾ ಮೂರ್ಖ ! ಯುದ್ಧಮುಖದೊಳು ಯನ್ನಯ ಪರಾಕ್ರಮವನ್ನು ಬೀರುವೆನು. ಜಾಗ್ರತೆ ನಿಲ್ಲೋ ಅಧಮಾ – ನೋಡೆನ್ನ ಪರಾಕ್ರಮ ॥

ದರುವು

ಬಾಣ ವಿದ್ಯದಿ ಬಹು  ಜಾಣನು ನಾನೈ
ಮಾಣದೆ ಪೇಳುವೆನೂ  ಕೇಳ್ ನೀನೂ ॥
ಕ್ಷೋಣಿಯೊಳೆನ್ನನೂ  ಜೈಸುವ  ವೀರರಾ
ಕಾಣೆನು ಜಗದೊಳಗೇ  ಕ್ಷಿತಿಯೊಳಗೇ ॥

ಪ್ರದ್ಯು,ಮ್ನ: ಯಲವೋ ತಾಮ್ರಧ್ವಜಾ, ಈ ಲೋಕದೋಳ್ ಬಾಣ ವಿದ್ಯೆಯಲ್ಲಿ ಯನ್ನನ್ನು ಜೈಸುವವರನ್ನು ಎಲ್ಲಿಯಾದರೂ ನೋಡಿರುವೆಯಾ ? ಮುರಾಂತಕನಾದ ಶ್ರೀಕೃಷ್ಣನ ಸುತ ಪ್ರದ್ಯುಮ್ನನ ಮುಂದೆ ನಿನ್ನ ಆಟಗಳು ಒಂದೂ ಸಾಗದು. ನಿನ್ನ ತರಳ ಭಾಷೆಯನ್ನು ಬಿಟ್ಟು ದುರಕ್ಕನುವಾಗೋ ದುರುಳಾ ॥

ದರುವು

ಕುಸುಮ ಬಾಣದೊಳು  ಅಸಮ ವೀರನು ಎಂದು
ವಸುಧೆಯು ಕಂಡಿಹುದೂ  ತಿಳಿದಿಹುದೂ ॥
ಬಿಸರುಹಾಕ್ಷಿಗ  ಲ್ಲದೆ ನಿನ್ನ ಶರವು
ಅಸಮ ವೀರರಿಗಹುದೇ  ಕೇಳಿಹುದೇ ॥

ತಾಮ್ರಧ್ವಜ: ಯಲವೋ ಪ್ರದ್ಯುಮ್ನ ! ಪರಶಿವನ ಫಾಲನೇತ್ರದಿಂದ ಸುಟ್ಟು ಅನಂಗನಾದ ಮೀನಕೇತನನೇ ಕೇಳು ! ನೀನು ಪುಷ್ಪ ಬಾಣದಲ್ಲಿ ಅಸಮ ಶೂರನೆಂದು ಈ ಲೋಕವೇ ತಿಳಿದಿಹುದು. ನಿನ್ನಯ ಬಾಣಗಳು ನಾರಿಯರ ಮೇಲೆ ಹೊರತು ನಮ್ಮ ಮೇಲೆ ಸಾಗುವುದಿಲ್ಲ. ಅಲ್ಲದೇ ವಿರಹ ತಾಪದಿಂದ ಬಳಲುವಂಥ ಬಾಲಕಿಯರ ಮೇಲೆ ಪ್ರಯೋಗಿಸುವಂಥ ನಿನ್ನ ಬಾಣಗಳಿಗೆ ನಾನು ಅಂಜುವವನಲ್ಲ. ತೀವ್ರದಿಂದ ರಣರಂಗಕ್ಕೆ ನಿಲ್ಲೋ ಮೂರ್ಖ – ಬಿಡು ಯನ್ನೊಳು ತರ್ಕ ॥

ದರುವು

ದುಡುಕು ವಚನ ಬಿಡು  ಜಡಮತಿ ದುರುಳನೇ
ಹೊಡೆದು ಬಿಡುವೆ ನಿನ್ನಾ  ನಾ ನಿನ್ನಾ ॥
ಕಡು ಜವದೊಳು ಯ  ನ್ನೊಡನೆ ಸೆಣಸಿದರೇ
ಬಡಿದು ಕೊಲ್ಲುವೆ ನಿನ್ನಾ  ಕೇಳ್ ನಿನ್ನಾ ॥

ಪ್ರದ್ಯುಮ್ನ: ಯಲಾ ಮೂಡ ತಾಮ್ರಧ್ವಜನೇ  ಧೀರ ಜನ ಗಂಭೀರನಾದ ಯನ್ನೊಡನೆ ನಾರಿಯರ ಶೌರ‌್ಯಕ್ಕೆ ಸರಿಯಾದ ಶೂರತ್ವವನ್ನು ತೋರಬೇಡ  ದುಡುಕು ವಚನಗಳನ್ನಾಡಿದ್ದೇ ಆದರೆ ಜಡಮತಿಯಾದ ನಿನ್ನನ್ನು ಕಡು ಜವದಿ ಶರ ಕೋದಂಡದಿಂದ ಬಡಿದು ಕೊಲ್ಲುವೆನೋ ತರಳಾ – ಕತ್ತರಿಸುವೆ ಕೊರಳಾ॥

ದರುವು

ಮಡಿಯಲೇತಕೆ ಈಗಾ  ಒಡೆಯನ ತುರಗಕೇ
ಬಿಡು ನಿನ್ನಯ ಶೌರ‌್ಯಾ  ಪುಡಿ ಶೌರ‌್ಯಾ ॥
ಬಿಡುವೆನು ಈಗಲೇ  ಘುಡಿ ಘುಡಿಸುವ ಶರ
ತಡೆದುಕೊಳ್ಳೋ  ಈಗಾ  ಬೇಗಾ ॥

ತಾಮ್ರಧ್ವಜ: ಯಲವೋ ಮದನಾ, ಮದಿಸಿದ ಗರ್ವದ ಮಾತುಗಳನ್ನಾಡಬೇಡ  ಕಡು ಪರಾಕ್ರಮಿಯಂತೆ ಒಡೆಯನ ಕುದುರೆಯನ್ನು ಬಿಡಿಸಲ್ಕೆ ಬಂದು ವೃಥಾ ಏಕೆ ಮಡಿದು ಹೋಗುವೆ ! ಘುಡಿ ಘುಡಿಸುವ ಕಡು ರೌದ್ರಾಸ್ತ್ರವನು ಝೇಂಗೈದು ಬಿಡುವೆನು  ಕಡುಗಲಿಯಾದರೆ ತಡೆದುಕೊಳ್ಳೆಲೋ ಮೂಢ – ಕೊಡು ಕಾಳಗವ ಗಾಢ ॥

ದರುವು

ಕೇಳು ಅರುಣಧ್ವಜನೆ ತಡೆಯುವೇ
ಜಾಳು ಮಾತುಗಳ್ಯಾಕೆ ಬೊಗುಳುವೇ
ಸೀಳಿ ಬಿಸುಡುವೆ ನಿನ್ನನೀಕ್ಷಣ  ತಾಳಿಕೋ ಭ್ರಷ್ಠಾ  ॥

ಪ್ರದ್ಯುಮ್ನ: ಯಲಾ ತಾಮ್ರಧ್ವಜ ! ಈ ಕಠೋರತರಮಾದಂಥ ನುಡಿಯನ್ನು ನುಡಿಯುತ್ತಿರುವೆ. ಹಿಂದೂ ಮುಂದೂ ವಿಚಾರವಿಲ್ಲದೇ ಬಾಲ ಭಾಷೆಗಳನ್ನಾಡುತ್ತಾ ಇದ್ದೀ. ಯಲಾ, ಪೋರಾ! ಇದುವರೆವಿಗೂ ಸೈರಿಸಿಕೊಂಡು ಇದ್ದೆ. ಇನ್ನು ನಾನು ಸೈರಿಸುವವನಲ್ಲ. ಈ ಸಮರ ಭೂಮಿಗೆ ಬಲಿಯನ್ನು ಕೊಡುತ್ತೇನೆ. ಯನ್ನ ಬಾಣಗಣಕ್ಕೆ ತಾಳಿಕೊಂಡು ನಿಲ್ಲೋ ಹೋರಾ ತುರಗದ ಚೋರ॥

ದರುವು

ತಾಳಿಕೊಳ್ಳುವೆ ಮೀನಕೇತನ
ಪೇಳ್ವೆ ನಿನ್ನಯ ಬಾಣ ಶೌರ‌್ಯವ
ಹಾಳು ಮಾಡುತ ಕೋಳುಗುಂಬೆನು  ಕಾಳಗಾದೊಳಗೇ ॥

ತಾಮ್ರಧ್ವಜ: ಯಲಾ ಪ್ರದ್ಯುಮ್ನ, ನಿನ್ನ ಒಳ್ಳೆ ಮಾತುಗಳಿಗೆ ನಾನು ಅಂಜುವವನಲ್ಲ. ನಿನ್ನಯ ಬೆದರಿಕೆಗೆ ವಿರಹ ತಾಪದಿಂದ ಬಳಲುವಂಥ ನಾರೀಮಣಿಯು ಬೆದರಿ ಅಂಜುವಳಲ್ಲದೆ ಸಮರ ವೀರನಾದ ಈ ತಾಮ್ರಧ್ವಜನು ಬೆದರಬಲ್ಲನೇ, ನಿನ್ನಯ ಬಾಣ ಸಮುದಾಯವನ್ನು ತಾಳಿಕೊಂಡು ನಿಲ್ಲುವೆನಲ್ಲದೆ ಹಾಳು ಮಾಡುತ ಕೋಳುಗುಂಬೆನೋ ಭಂಡಾ – ನಾ ನಿನ್ನ ಮಿಂಡಾ ॥

ದರುವು

ಮಾತಿನಿಂದಲಿ ಏನು ಫಲವೋ
ಖ್ಯಾತಿಯಿಂದಲಿ ಶರವ ಯೆಸೆದು
ಘಾತಿಸುವೆನೋ ನಿನ್ನ ಪ್ರಾಣವ  ಭೂತಲಾದೊಳಗೇ॥ ॥

ಪ್ರದ್ಯುಮ್ನ: ಯಲಾ ಅರುಣಕೇತು ! ಈ ರಣ ಧಾರುಣಿಯಲ್ಲಿ ಹುಚ್ಚುನಾಯಿಯಂತೆ ಉಚ್ಚರಿಸಿದ್ದೇ ಆದರೆ, ರೊಚ್ಚಿಗೆದ್ದು ತುಚ್ಛನಾದ ನಿನ್ನನ್ನು ಕೊಚ್ಚಿ ಹಾಕುವೆನು. ನಿನ್ನ ತರಳತನದ ಚೇಷ್ಠೆಗಳನ್ನು ವಿಚಾರಿಸುವವರು ಧಾರೂ ಇಲ್ಲ. ಜಾಗ್ರತೆ ಸಮರಕ್ಕೆ ನಿಲ್ಲೋ ಅಧಮಾ ॥

ದರುವು

ಹಿರಿಯ ಬಳ್ಳಾಪುರದಿ ವಪ್ಪುವಾ
ಗಿರಿಜೆಯರಸನು ಸೋಮನಾಥನಾ
ಕರುಣದಿಂದಲಿ ಶರವನೆಸೆಯುತ  ಶಿರವ ಹಾರಿಸುವೇ ॥

ತಾಮ್ರಧ್ವಜ: ಯಲಾ ಮೀನಕೇತನ  ಈ ಧರಣಿಗಧಿಪತಿಯಾದ ಹಿರಿಯ ಬಳ್ಳಾಪುರವಾಸ
ಶ್ರೀ ಸೋಮನಾಥನೇ ನಿನಗೆ ಸಹಾಯಕ್ಕೆ ಬಂದರೂ ಬಿಡದೆ ಕಡೆಯಾಟವಾಡಿಸುವೆ. ಈ ಶರಹತಿಯನ್ನು ತಡೆದುಕೊಳ್ಳೆಲೋ ಮೂಢ – ಕೊಡು ಕಾಳಗವ ಗಾಢ ॥

(ಉಭಯರ ಯುದ್ಧಪ್ರದ್ಯುಮ್ನನ ಪರಾಭವ)

ದರುವು

ದುರುಳನು ಯೆಸೆದು ಇರುವಾ  ಶರಘಾತಿಗೆ
ಹೊರ ಬರುತಿದೆ ರುಧಿರಾ ॥
ದುರವ ಮಾಡಲು ಯನಗೇ  ಕರಚರಣ ಕುಂದಿದೇ
ಕರುಣಿಸಿ ಕಾಯೋ ಶಿವನೇ ॥

ಪ್ರದ್ಯುಮ್ನ: ಅಯ್ಯೋ, ಹರಹರಾ ! ಈ ದುರುಳನು ಬಿಟ್ಟ ಶರಜಾಲಗಳು ಯನ್ನ ದೇಹಕ್ಕೆ ನಾಂಟಿ ಕಾಲಾಗ್ನಿಯಂತೆ ಸುಡುತ್ತಿರುವುವು  ಯುದ್ಧ ಮಾಡುವೆನೆಂದರೆ ಶಕ್ತಿ ಸಾಲದೆ ಕರಚರಣಗಳು ಕುಸಿದು ಬೀಳುವುವು  ನೀನೇ ಕರುಣಿಸಿ ಕಾಯಬೇಕೋ ಹಿರಿಯ ಬಳ್ಳಾಪುರವರನೇ – ಭಸ್ಮಾಂಗಧರನೇ ॥

(ಪ್ರದ್ಯುಮ್ನನ ಮೂರ್ಛೆ)

ಸಾರಥಿ: ಸ್ವಾಮೀ ಅರ್ಜುನ ಭೂಪಾಲ ; ಉಡುರಾಜ ತೇಜನಾದ ತಾಮ್ರಧ್ವಜ ಕಡು ಸಮರ್ಥನಾದ ಕಾರಣ ಸೇನೆಯು ಅಡಿಗಡಿಗೆ ನಡುಗಿ ಕಂಪಿಸಿ ಅಡಗುವಂತೆ ಕಡು ಭಯಂಕರವಾದ ಶರಗಳನು ಹೊಡೆದು ಕಡುಗಲಿಯಾದ ಪ್ರದ್ಯುಮ್ನ ರಾಜರನ್ನೂ ಸಹ ಕೆಡಹಿದನೈಯ್ಯ ದೇವಾ – ಕರುಣ ಪ್ರಭಾವ ॥

ಅರ್ಜುನ: ಯಲಾ ಚಾರ ! ಸುಂದರ ಸುಗುಣ ವಿಶಾರದರಾದ ಅನಿರುದ್ಧ ಪ್ರದ್ಯುಮ್ನರನ್ನೂ ಇಂದಿನ ರಣಾಗ್ರದಲ್ಲಿ ತಾಮ್ರಧ್ವಜನು ಪರಾಭವಗೊಳಿಸಿದನೇ, ಭಲಾ, ನಾಳೆಯ ಸಮರದಲ್ಲಿ ಕರ್ಣನ ಮಗನಾದ ವೃಷಕೇತುವನ್ನು ಕಳುಹಿಸಿ ಆ ದುರುಳನ ಸಾಹಸವನ್ನು ಮುರಿಯುವೆನು  ಇನ್ನು ನೀನು ಹೊರಡೈಯ್ಯ ಚಾರ – ಗುಣಮಣಿ ಹಾರ ॥

ಅರ್ಜುನ: ಹೇ ಕುಮಾರ ವೃಷಕೇತು, ಧಾರುಣಿಗೆ ಮೀರಿದ ಪರಾಕ್ರಮಶಾಲಿಗಳಾದ ಅನಿರುದ್ಧ ಪ್ರದ್ಯುಮ್ನರನ್ನು ಪರಿಭವಗೊಳಿಸುವಂಥ ಶೂರರು ಈ ಮೂರು ಲೋಕಗಳಲ್ಲಿಯೂ ಇಲ್ಲ. ಹೀಗಿರುವಲ್ಲಿ ಅಂತಹ ರಣಧೀರರನ್ನು ಧುರಹೇಡಿ ತಾಮ್ರಧ್ವಜನು ಪರಾಜಯಗೊಳಿಸಿರುವುದು ಯನಗೆ ಚೋದ್ಯವಾಗಿ ಕಾಣುತ್ತಿದೆಯಪ್ಪಾ ಪುತ್ರಾ – ಸೌಂದರ‌್ಯಗಾತ್ರ ॥

ದರುವು

ಕೊಡು ಕೊಡೆನಗೆ  ಅಪ್ಪಣೆಯ  ಹೊಡೆವೆ ತಕ್ಷಣಾ
ಮೃಡನು ಅಡ್ಡ  ಬಂದರವನ  ಬಿಡೆನು ಈ ಕ್ಷಣಾ ॥

ವೃಷಕೇತು: ಹೇ ಜನಕಾ ! ಆ ಧೂರ್ತ ತಾಮ್ರಧ್ವಜನೊಡನೆ ಕಾಳಗವಂ ಮಾಡಲು ನೀವು ಯಾತಕ್ಕೆ ಯೋಚಿಸುತ್ತೀರಿ. ದೃಷ್ಠಿ ಮೂರುಳ್ಳ ಮೃಡ ಮಹೇಶನು ಆತನಿಗೆ ಸಹಾಯವಾಗಿ ಬಂದರೂ ಬಿಡದೆ, ಆ ಭ್ರಷ್ಠನನ್ನು ಕುಟ್ಟಿ ಕೋಲಾಹಲವಂ ಮಾಡಿ ಬರುತ್ತೇನೆ  ಶೀಘ್ರದಿಂದ ನೇಮವನ್ನು ದಯಪಾಲಿಸೈಯ್ಯ ಜನಕಾ – ಇಂದುಕುಲ ತಿಲಕ ॥

ದರುವು

ಪಗೆಗಳನ್ನು  ರಣದಿ ನಾನು  ಸಿಗಿದು ಬರುವೆನೂ
ಬೇಗ ಅಭಯ  ಕೊಟ್ಟರೆನಗೆ  ಪೋಗಿ ಬರುವೆನೂ ॥

ವೃಷಕೇತು: ಹೇ ತಂದೇ ನಾನು ಚಿಕ್ಕ ಮಗುವೆಂದು ತಿಳಿಯಬೇಡವೋ ಜನಕಾ, ನಾನು ಚಿಕ್ಕವನಾದರೆ ನನ್ನ ಕೈಯಲ್ಲಿರುವ ಬಿಲ್ಲು ಬಾಣಗಳು ಚಿಕ್ಕವೇ. ನಾನು ಕ್ಷತ್ರಿಯನಲ್ಲವೇ. ಈ ಅಲ್ಪ ಸಾಮರ್ಥ್ಯವುಳ್ಳ ನೀಚ ತಾಮ್ರಧ್ವಜನಿಗೆ ಸೋತರೆ ಕರ್ಣನ ಮಗ ವೀರ ವೃಷಕೇತು ಎಂಬ ಹೆಸರು ಇನ್ಯಾತಕ್ಕೋ ತಂದೆ – ಕಳುಹೆನ್ನ ಮುಂದೆ ॥

ದರುವು

ಹಿರಿಯ ಬಳ್ಳಾ  ಪುರದೊಳಿರುವ  ಗಿರಿಜೆಯರಸನಾ
ಕರುಣವಿರಲು  ದುರದಿ ಅರಿಯ  ಶಿರವ ತರಿವೆನಾ ॥ ॥

ವೃಷಕೇತು: ಹೇ ತಾತಾ, ಈ ದಿವಸ ಸಮರದಲ್ಲಿ ಆ ದುಷ್ಠನನ್ನು ಜೈಸುವೆನಲ್ಲದೇ ಹಿಂದೆಗೆಯುವನಲ್ಲಾ. ಈ ಧರಣಿಗಧಿಕವಾದ ಹಿರಿಯ ಬಳ್ಳಾಪುರನಿವಾಸ ಶ್ರೀ ಸೋಮೇಶ್ವರನ ಕೃಪಾಕಟಾಕ್ಷವು ಪರಿಪೂರ್ಣವಾಗಿ ನಮ್ಮ ಮೇಲೆ ಇದ್ದದ್ದೇ ಆದರೇ, ಆ ದುರುಳನನ್ನು ಗೆದ್ದು ತುರಗವನ್ನು ತೆರಳಿಸಿಕೊಂಡು ಬರುತ್ತೇನೆ. ತ್ವರಿತದಿಂದ ಸಂಗ್ರಾಮಕ್ಕೆ ಅಪ್ಪಣೆಯನ್ನು ದಯಪಾಲಿಸಬೇಕಯ್ಯ ತಾತ – ಬಿಡು ಮನದ ಘಾತ ॥

ದರುವು

ಪೋಗೋ ನೀನು ಬಾಲನೇ  ನಗೆಯ ಮುಖದ ವೀರನೇ
ಬಿಗಿದು ವೀರ ಪಳಿಯನೂ  ಸಿಗಿಯೋ ರಣದಿ ಪಗೆಯನೂ               ॥

ತುರಗ ಪಿಡಿದ ಚೋರನಾ  ದುರದೊಳವನ ಶಿರವನಾ
ಭರದಿ ಎಸೆದು ಶರವನಾ  ತರಿದು ಬಾರೋ ದುರುಳನಾ ॥

ಹಿರಿಯ ಬಳ್ಳಾಪುರದೊಳೂ  ಗಿರಿಜೆ ಸೇರಿ ಸುಖದೊಳೂ
ಇರುವ ಸೋಮನಾಥನೂ  ಕರುಣದಿಂದ ಕಾಯ್ವನೂ ॥

ಅರ್ಜುನ: ಹೋಗು ಮಗುವೇ ! ನಿನಗೆ ಮಂಗಳವಾಗಲಿ. ಈ ದಿವ್ಯಾಸ್ತ್ರಗಳನ್ನು ತೆಗೆದುಕೋ. ವೀರ ಪಳಿಯಂ ಬಿಗಿದು ಮಣಿಮಯವಾದ ರಥವನ್ನೇರಿ ಚತುರಂಗಬಲ ಸಮೇತನಾಗಿ ತೆರಳಿ ಮುರಾಂತಕನ ಪುತ್ರ ಪೌತ್ರರನ್ನು ಆಹವದಲ್ಲಿ ನೋಯಿಸಿದ ದುರುಳ ತಾಮ್ರಧ್ವಜನನ್ನು ಶ್ರೀ ಸೋಮನಾಥನ ಕೃಪಾಕಟಾಕ್ಷದಿಂದ ಜೈಸಿ ಜಯಶೀಲನಾಗಿ ಬಾರಪ್ಪಾ ಕುವರಾ – ಜಯವಾಗಲೀ ಭವರಾ ॥

(ವೃಷಕೇತು ಯುದ್ಧಕ್ಕೆ ಬರುವಿಕೆ)

ವೃಷಕೇತು: ಯಲಾ ಖುಲ್ಲ, ಈ ಧಾರುಣಿಯಲ್ಲಿ ಯನಗೆ ಸರಿ ಸಮಾನರಾದವರು ಯಾರೂ ಇಲ್ಲವೆಂದೂ ಮೀರಿ ಮೆರೆಯುತ್ತಿರುವೆ. ನಿನ್ನ ಗರ್ವವನ್ನು ಖಂಡಿಸುವೆನು ರಣಕೆ ನಿಲ್ಲೋ ಅಧಮಾ – ನೋಡೆನ್ನ ಪರಾಕ್ರಮಾ ॥

ದರುವು

ದುರುಳ ಬಾಲಕ ನೀನೂ  ಧಾರ ಪುತ್ರನು ಪೇಳೋ
ಧಾರುಣಿಯೊಳು ಪಡೆದ  ನಾರಿಮಣಿ ಯಾರೋ ಪಿತನಾರೋ ॥
ತ್ವರಿತಾದಿಂದಲಿ ಪೇಳೋ  ವಂಶವಾವುದು ಯನಗೆ
ತರಳ ನಿನ್ನಯ ಪೆಸರು  ಭರದಿ ಅರುಹಯ್ಯ ತಿಳಿಸೈಯ್ಯ ॥

ತಾಮ್ರಧ್ವಜ: ಯಲಾ ತರಳಾ ! ಈ ಧಾರುಣಿಯಲ್ಲಿ ನಿನ್ನ ಪುರವಾವುದು ? ನಿನ್ನನ್ನು ಪೆತ್ತ ಮಾತಾ ಪಿತೃಗಳ್ಯಾರು ? ನಿನ್ನಯ ಪೆಸರೇನು ? ಶೀಘ್ರದಿಂದ ಪೇಳೋ ತರಳಾ ಕತ್ತರಿಸುವೆ ನಿನ್ನ ಕೊರಳಾ ॥

ದರುವು

ಇನವಂಶ ಸಂಭವನು  ಕರ್ಣನ ಸುತ ನಾನು
ರಣರಂಗಧೀರ ವೃಷ  ಕೇತುವೆನ್ನುವರೂ ಧರೆ ಜನರು
ರಣದ ಭೂಮಿಯೊಳಗೆ  ವರ್ಣಭೇದಗಳ್ಯಾಕೆ
ಕಣೆ ಮುಖದಿ ಉತ್ತರವ  ಪೇಳುವೆನು ನಿನಗೇ ಕೇಳ್ ನಿನಗೇ            ॥

ವೃಷಕೇತು: ಯಲಾ ತಾಮ್ರಧ್ವಜಾ, ಇನತನಯ, ದಾನ ಶೂರ ಕರ್ಣನ ಮಗ ರಣರಂಗಧೀರ ವೀರ ವೃಷಕೇತು ಯೆನ್ನಿಸಿಕೊಳ್ಳುವ ಯನ್ನ ಸಮ್ಮುಖದಿ ನಿಂತು ಸರಿ ಸರಿ ಕಾದುವ ಸಾಮರ್ಥ್ಯ ತನಗಿಲ್ಲದೇ ಪರಿಚಯಗೊಂಡವನಂತೆ ರಣ ಭೂಮಿಯಲ್ಲಿ ಮರ‌್ಯಾದೆಯಂ ವಹಿಸಿ ನನ್ನ ಗುರುತು ನೆಲೆಗಳನ್ನು ವಿಚಾರಿಸುವ ಧುರಹೇಡಿ ನೀನ್ಯಾರು ? ಯನ್ನ ಕರದಲ್ಲಿರುವ ಶರಮುಖದಿಂದ ನಿನಗೆ ಗುರುತನ್ನು ತೋರಿಸಿ ಕೊರತೆಯನ್ನು ಪರಿಹರಿಸುತ್ತೇನೆ. ಶೀಘ್ರದಿಂದ ರಣಾಗ್ರಕ್ಕೆ ನಿಲ್ಲೋ ಮೂರ್ಖ – ಬಿಡು ಯನ್ನೊಳು ತರ್ಕ ॥