ಭಾಗವತರದರುವು ತ್ರಿವುಡೆ

ಕೇಳು ಜನಮೇಜಯ ಮಹೀಶನೇ
ಹೇಳಿ ಕಳುಹಲು ಸಕಲ ಸೈನ್ಯಕೇ
ಇಳೆಯು ಕಂಪಿಸೇ ಬಂದಿತರಿಯೆದೆ  ಸೀಳುವಂದದಲೀ ॥

ಇಂದುಧರ ಶ್ರೀ ಸೋಮನಾಥನಾ
ಅಂದು ಸ್ಮರಿಸೀ ಕೃಷ್ಣಮೂರ್ತಿಯು
ಚಂದದಿಂ ರಚಿಸಿದನು ಸೇನೆಯ  ಗೃಧ್ರ ರೂಪಿನಲೀ ॥

ಭಾಗವತರ ಕಂದ

ಕೇಳು ಜನಮೇಜಯ ಕ್ಷಿತಿಪತಿಯೇ
ಅಂದಖಿಳ ಸೇನೆಯಂ  ಗೃಧ್ರದಾಕಾರಕ್ಕೆ
ತಂದು ನಿಲಿಸಿದನಸುರಮರ್ದನಂ  ಮೇಣ್
ಅದರ ಮುಂದೆಶೆಯ  ಕೊರಳೊಳನು ಸಾಲ್ವನಂ
ಕಂಗಳೋಳ್ನೀಲ  ಹಂಸಧ್ವಜರನೂ ॥
ಕಂದರ್ಪ ಕಾನಿರುದ್ಧರನು  ಉಭಯ
ಪಕ್ಷದೆಡೆ ಗಂದದಿಂದಡಿಗಳ್ಗೆ  ಭೋಜ
ಸಾತ್ಯಕಿಗಳಂ  ಹಿಂದಣ ಗರಿಗೆ ಮೇಘ
ನಾದನಂ  ಕಲಿ ಯೌವನಾಶ್ವನಂ ಜೋಡಿಸಿದನೂ ॥ ॥

ವ್ಯೆಹ ಚಂಚು ಸ್ಥಾನಕಿರಿಸಿದ  ಕಲಿ ಬಭೃವಾಹನ
ವೃಷಧ್ವಜರನುಳಿದ  ಭಟರಂ ಗೃಧ್ರದೇಹದ
ವಯವದೆಡೆಗೆ  ನೆಲೆಗೊಳಿಸಿ ಬಳಿಕಾ
ಅದರ ಹೃದಯದೋಳ್ ಫಲ್ಗುಣನನೂ ॥
ವಾಹಿನಿ ಸಹಿತ ನಿಲಿಸಿ  ದಾರುಕನೆಸಗೆ
ರಥಾರೋಹಣಂ ಗೈದು  ಮುರ ಮಥನಂ
ಪಿಡಿದನಾ  ಮಹಾಹವಕೆ  ವರಪಾಂಚಜನ್ಯಮಂ
ಘೋರ ರವದಿಂದ ಹಿತರೆದೆಗಳೊಡೆಯೇ ॥

ಭಾಗವತರ ಮಾತು: ಕೇಳಿದರೇನಯ್ಯ ಭಾಗವತರೇ  ಈ ಪ್ರಕಾರವಾಗಿ ಅರ್ಜುನನು ಯುದ್ಧ ಸನ್ನದ್ಧನಾಗಲೂ, ಶ್ರೀ ಕೃಷ್ಣನು ತಮ್ಮ ಸೇನೆಯನ್ನು ಗೃಧ್ರದ ಆಕಾರವಾಗಿ ನಿಲ್ಲಿಸಿ, ಅದರ ಕೊರಳಿನಲ್ಲಿ ಅನುಸಾಲ್ವನನ್ನೂ, ನೇತ್ರಂಗಳಲ್ಲಿ ನೀಲಧ್ವಜ ಹಂಸಧ್ವಜರನ್ನೂ, ರೆಕ್ಕೆಗಳಲ್ಲಿ ಪ್ರದ್ಯುಮ್ನ ಅನಿರುದ್ಧರನ್ನೂ, ಪಾದಗಳಲ್ಲಿ ಭೋಜ ಸಾತ್ಯಕಿಯರನ್ನೂ, ಹಿಂದಣ ಗರಿಗಳಲ್ಲಿ ಮೇಘನಾದ ಯೌವನಾಶ್ವರನ್ನೂ ನಿಲ್ಲಿಸಿ, ಕೊಕ್ಕಿನ ಭಾಗದಲ್ಲಿ ವೃಷಕೇತು ಬಭೃವಾಹನರನ್ನೂ, ಹೃದಯ ಭಾಗದಲ್ಲಿ ಪಾರ್ಥನನ್ನೂ ನೆಲೆಗೊಳಿಸಿ, ತಾನು ರಥಾರೋಹಣಂಗೈದು ಶತ್ರು ಯದೆ ಬಿರಿಯುವಂತೆ ಪಾಂಚಜನ್ಯವನ್ನು ಊದಿದನೈಯ್ಯ ಭಾಗವತರೇ ॥

(ವೃಷಕೇತು ; ಬಭೃವಾಹನ ಬರುವಿಕೆ)

ತೆರೆದರುವು

ಭರತಕುಲ ಘನ ಸಾರ್ವಭೌಮರೂ
ಧರಣಿ ಪಾಲಕ ಪಾಂಡು ಪೌತ್ರರೂ ॥
ಧುರಪರಾಕ್ರಮಿ ಬಭೃವಾಹನ  ವೀರ ವೃಷಕೇತು ॥

ಮಂಡಲಾಧಿಪರ್ ಗರ್ವಗಳ ಕೋ
ದಂಡದಿಂದಲಿ ಖಂಡಿಸುವ ಪ್ರ
ಚಂಡ ಶರಗಳ ಕೊಂಡು ಬಂದರು  ದ್ಧಂಡ ಶೌರಿಗಳೂ ॥

ಧರೆಗೆ ರತ್ನ ಕಿರೀಟವೆನಿಸುವ
ಹಿರಿಯ ಬಳ್ಳಾಪುರದಿ ನೆಲೆಸಿದಾ
ಗಿರಿಜೆಯರಸನು ಸೋಮನಾಥನ  ಚರಣ ಭಜಿಸುತ್ತಾ ॥

ವೃಷಕೇತು: ಯಲಾ ಚಾರ ಹೀಗೆ ಬಾ ಮತ್ತೂ ಹೀಗೆ ಬಾ. ಭಲಾ ಚಾರ ಘುಡಿಘುಡಿಸಿ ಝೇಂಕರಿಸುವ ಕೂರ್ಗಣೆಗಳಿಂದ ಕೊಳುಗುಳದಲ್ಲಿ ಕೆಡುನುಡಿಯಾಡುವ ಖೂಳ ವೈರಿಗಳ ತಲೆ ಚೆಂಡಾಡುವ ಯನ್ನನ್ನು ತಡೆಬಡೆ ಇಲ್ಲದೇ ಕಡುದೀನತೆಯಿಂದ ಮಾತನಾಡಿಸುವ ಸುಭಟ ನೀ ಧಾರೋ ಯನ್ನೊಳು ಸಾರೋ॥

ಅಯ್ಯ ಸಾರಥೀ  ಹಾಗಾದರೆ ಯಮ್ಮ ವೃತ್ತಾಂತವನ್ನು ಬಿತ್ತರಿಸುತ್ತೇನೆ ಚಿತ್ತವಿಟ್ಟು ಕೇಳೋ ಸಾರಥೀ – ಸಂಧಾನಮತಿ ॥

ಭಳಿರೇ ಸಾರಥೀ, ಭಾನು ಮಂಡಲವನ್ನು ಮುಟ್ಟಿರುವ ಕೋಟೆಗಳಿಂದಲೂ, ಪಚ್ಚೆಗಳಿಂದ ಕೆತ್ತಲ್ಪಟ್ಟಿರುವ ಕೋಟೆ ತೆನೆಗಳಿಂದಲೂ, ಮರಕತಶಿಲೆಯ ಸೋಪಾನಗಳಿಂದಲೂ, ಇಂದ್ರನೀಲ ಮಣಿಯ ಗೋಡೆಗಳಿಂದಲೂ, ವಜ್ರದ ಕಂಭಗಳಿಂದಲೂ, ಕಂಗೊಳಿಸುವ ನಾನಾ ಪುಷ್ಪಫಲ ಜಲಪಕ್ಷಿಗಳಿಂದಲೂ, ಕೂಡಿದ ವನ ಸರಸ್ಸುಗಳಿಂದಲೂ, ಶೋಭಾಯಮಾನವಾಗಿ ಅತಿ ರಮಣೀಯವಾದ ಹಸ್ತಿನಾವತೀ ಪಟ್ಟಣವನ್ನು ಚಿತ್ತಜಾರಿಯ ಮನವೊಪ್ಪುವಂತೆ, ಅತಿ ವೈಭವದಿಂದ ಪರಿಪಾಲಿಸಿದ ಪಾಂಡು ಮಹಾರಾಯರ ಅರ್ಧಾಂಗಿನಿ ನಾರಿ ಶಿರೋಮಣಿ ಕುಂತೀದೇವಿ ಗರ್ಭಸಂಜಾತ, ಸಹಸ್ರಾರ್ಕಸುತ, ದುರಧೀರ, ದಾನಶೂರನೆಂದೆನಿಸಿ ವೀರಸ್ವರ್ಗವನ್ನಡರಿದ ಕರ್ಣ ಭೂಪಾಲನ ಕುಮಾರ ಕಂಠೀರವ ವೀರ ವೃಷಕೇತು ಬಂದು ಇದ್ದಾನೆಂದು ಈ ಧರಣಿಯೊಳ್ ಒಂದೆರಡು ಬಾರಿ ಜಯಭೇರಿ ಬಾರಿಸೋ ದೂತ – ರಾಜ ಸಂಪ್ರೀತ ॥

ಅಯ್ಯ ಸಾರಥೀ ! ರತ್ನ ಖಚಿತವಾದ ಈ ವರ ಸಭಾಸ್ಥಾನಕ್ಕೆ ಆಗಮಿಸಿದ ಪರಿಯಾಯವೇನೆಂದರೆ ಧರ್ಮರಾಯರು ನಡೆಸುವ ಅಶ್ವಮೇಧಯಾಗದ ಕುದುರೆಯ ಬೆಂಬಲವಾಗಿ ಯನ್ನ ಚಿಕ್ಕ ತಂದೆಯವರಾದ ಅರ್ಜುನ ಭೂಪಾಲರೊಡನೆ ಬಾಹೋಣವಾಯ್ತು. ಈಗ ನಮ್ಮ ಚಿಕ್ಕ ತಂದೆಯವರು ಧಾವಲ್ಲಿರುವರೋ ಅತಿ ಜಾಗ್ರತೆ ತೋರಿಸೋ ಚಾರಕಾ – ಯನ್ನ ಆಜ್ಞಾಧಾರಕಾ ॥

ನಮೋನ್ನಮೋ ಹೇ ಜನಕಾ – ಸೋಮಕುಲತಿಲಕಾ ॥

ಅರ್ಜುನ: ಧೀರ್ಘಾಯುಷ್ಯಮಸ್ತು ಬಾರೈ ವೃಷಕೇತು – ಯನ್ನ ಮನ ಹರ್ಷಹೇತು ॥

ವೃಷಕೇತು: ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನೋ ಪೇಳಬೇಕೈ ಜನಕಾ – ಕ್ಷೋಣಿ ಜನ ಪಾಲಕಾ ॥

ಅರ್ಜುನ: ಪೇಳುತ್ತೇನೆ. ರತ್ನಮಣಿಮಯವಾದ ಈ ಸಿಂಹಾಸನವನ್ನು ಅಲಂಕರಿಸೈಯ್ಯ ಬಾಲ – ನಯಗುಣಶೀಲ ॥

ಬಭೃವಾಹನ: ಭಳಿರೇ ಚಾರ ! ಹೀಗೆ ಬಾ ಮತ್ತೂ ಹೀಗೆ ನಿಲ್ಲು. ಕರಿ ತುರಗ ರಥ ಪಾಯ್ದಳ ಸಮೇತ ಭರಾಟೆಯಂತೆ ಮೆರೆಯುತ್ತಾ ಕರಾಗ್ರದೋಳ್ ಸರ್ವ ಆಯುಧಗಳಂ ಪಿಡಿದು ಬಂದಿರುವ ಯನ್ನನ್ನು ಪರಿಪರಿವಿಧವಾಗಿ ರೀತಿನೀತಿಗಳಿಂದ ಮಾತನಾಡಿಸುವ ಚದುರ ನೀ ಧಾರು ? ನಿನ್ನಯ ನಾಮಾಂಕಿತವೇನು ? ಸ್ವಾಭಿಲಾಷೆಯಿಂದ ಪೇಳೋ ಮಂದಿರಾ ಚರನೇ ॥

ಭಲಾ, ಸಾರಥೀ, ಹಾಗಾದರೆ  ಯಮ್ಮಯ ವಿದ್ಯಮಾನವನ್ನು ಅರುಹುತ್ತೇನೆ. ಸ್ವಸ್ಥಿರದಿಂದ ಕೇಳೋ ಸಾರಥೀ – ಸಂಧಾನಮತಿ ॥

ಈ ಭೂಮಂಡಲದೋಳ್ ಮೇಘಮಂಡಲವನ್ನು ಆಕ್ರಮಿಸಿರುವ ನವರತ್ನ ಖಚಿತಮಾದ ಕೋಟೆಗಳಿಂದಲೂ ಕನಕಮಯವಾದ ಕೊತ್ತಲುಗಳಿಂದಲೂ, ಚಂದ್ರಮಂಡಲವನ್ನು ಭೇದಿಸುವ ಆಳ್ವೇರಿಗಳಿಂದಲೂ, ಆಕ್ರಮಿಸಿಕೊಂಡು ಥಳಥಳಾಯಮಾನವಾದ, ಮೇರು ಶಿಖರದ ಹಾಗೆ ರಾಜಿಸುತ್ತಾ, ರತ್ನ ಕಲಶಗಳಿಂದಲೂ ವಪ್ಪುತ್ತಾ ಅಮರಾವತಿಯನ್ನು ಜರೆವಂತೆ ರಂಜಿಸುತ್ತಿರುವ ಇಂದ್ರಪ್ರಸ್ತಪುರವನ್ನು ದೇವೇಂದ್ರನಿಗಿಮ್ಮಿಗಿಲಾದ ವೈಭವದಿಂದ ಪರಿಪಾಲಿಸುತ್ತಿರುವ ಧರ್ಮರಾಯರ ಅನುಜ ಭಾಸ್ಕರ ತೇಜ. ಪುರುಹೂತಾತ್ಮಜನೆಂದೆನಿಸಿ.. ಮದನಾರಿಯೊಡನೆ ಮಲೆತು ಯುದ್ಧವಂ ಮಾಡಿ ಪಾಶುಪತಾಸ್ತ್ರವನ್ನು ಪಡೆದು ಮೂರು ಲೋಕದ ಗಂಡನೆಂಬ ಖ್ಯಾತಿಯನ್ನು ಪಡೆದು ಕುರುಕುಲ ಧ್ವಂಸಕನಾದ ಅರ್ಜುನ ಭೂಪಾಲರ ಮುದ್ದು ಕುಮಾರ ಮದನ ಸುಂದರಾಕಾರ ಶತೃ ಜನ ಕುಠಾರ ರಣರಂಗ ವೀರನಾದ ಬಭೃವಾಹನನು ಬಂದು ಇದ್ದಾನೆಂದು ಈ ಪೊಡವಿಯೋಳ್ ಒಂದೆರಡು ಬಾರಿ ಜಯಭೇರಿ ಹೊಡೆಸೋ ದೂತಾ ದೂತರೊಳು ಪ್ರಖ್ಯಾತ ॥

ಈ ವರ ಸಭಾಸ್ಥಾನಕ್ಕೆ ಆಗಮಿಸಿದ ಕಾರಣವೇನೆಂದರೆ ಯಮ್ಮ ಹಿರಿಯ ತಂದೆಯವರಾದ ಧರ್ಮರಾಯರು ನಡೆಸುವ ಅಶ್ವಮೇಧಯಾಗದ ಕುದುರೆಯ ಬೆಂಬಲವಾಗಿ ಯನ್ನ ಜನಕನಾದ ಅರ್ಜುನ ಭೂಪಾಲರೊಡನೆ ಬಾಹೋಣವಾಯ್ತು. ಈಗ ಯನ್ನ ತಂದೆಯವರು ಧಾವಲ್ಲಿರುವರೋ ಅತಿ ಜಾಗ್ರತೆ ತೋರಿಸೋ ಚಾರ – ಯನ್ನ ಆಜ್ಞಾಧಾರ ॥

ನಮೋನ್ನಮೋ ಹೇ ತಂದೆ – ಸಲಹೆನ್ನ ಮುಂದೇ ॥

ಅರ್ಜುನ: ರಣ ವಿಜಯೀ ಭವತು ಬಾರೈ ಬಭೃವಾಹನಾ ಬಹು ಸುಂದರಾನನ ॥

ಬಭೃವಾಹನ: ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನೋ ಪೇಳಬೇಕೈ ಜನಕಾ – ಭರತ ಕುಲತಿಲಕಾ ॥

ಅರ್ಜುನ: ಪೇಳುತ್ತೇನೆ. ಈ ಸಿಂಹ ಪೀಠವನ್ನು ಅಲಂಕರಿಸೈ ಬಾಲ – ಸುಜ್ಞಾನ ಶೀಲ ॥

(ಪ್ರದ್ಯುಮ್ನಅನಿರುದ್ಧ ಬರುವಿಕೆ)

ತೆರೆ ದರುವು

ಧರಣಿ ಹಿರಿಯ ಬಳ್ಳಾಪುರವನಾ  ಪರಿಪಾಲಿಸುವಾ
ಗಿರಿಜೆಯರಸ ಸೋಮನಾಥನಾ ॥

ಭಂಗಮಾಡಿ ತಪವನಾಕ್ಷಣಾ  ಅನಂಗನಾದ
ಮಂಗಳಾತ್ಮ ಕೃಷ್ಣ ತನುಜನೂ ॥

ಧೀರವೀರ ಪಾರ್ಥನಾಜ್ಞೆಯಾ  ಶಿರದೊಳಾಂತು
ಧುರಕೆ ಪುತ್ರನೊಡನೆ ಬಂದನೂ ॥

ಪ್ರದ್ಯುಮ್ನ: ಹೇ ಚಾರ, ಹೀಗೆ ಬಾ, ಮತ್ತೂ ಹೀಗೆ ನಿಲ್ಲು, ಭಲಾ, ಚಾರ ! ಡೇರಿ ಡಕ್ಕ ಕಹಳೆ ಮೃದಂಗಾದಿ ರವಗಳಿಂದ ಭೋರಿಡುತ್ತಾ ಚತುರಂಗ ಬಲಸಮೇತ ಭೂರಿ ಭುಜ ಬಲದಿಂದ ಕ್ರೂರ ಧನುರ್ಬಾಣಗಳನ್ನು ಧರಿಸಿ ಸಾರಿ ಸಂಗ್ರಾಮಕ್ಕೆ ಸಿದ್ಧವಾಗಿ ಬರುತ್ತಿರುವ ಯನ್ನನ್ನು ನೀ ಧಾರೆಂದು ವಿಚಾರಿಸುವ ಮಾನುಷ್ಯ ನೀ ಧಾರೋ – ಯನ್ನೊಳು ಸಾರೋ ॥

ಅಯ್ಯ ಸಾರಥೀ  ಹಾಗಾದರೆ ಯಮ್ಮ ವೃತ್ತಾಂತವನ್ನು ಬಿತ್ತರಿಸುತ್ತೇನೆ. ಚಿತ್ತವಿಟ್ಟು ಕೇಳೋ ಸಾರಥೀ – ಸುಜ್ಞಾನಮತಿ ॥

ಈ ಧರಣಿ ಮಧ್ಯದೋಳ್ ಅನೇಕ ವಿಧವಾದ ರಾಮಣೀಯಕಗಳಿಂದ ಕೂಡಿ ರಂಜಿಸುತ್ತಾ, ಭೂಕಾಂತೆಯ ಭೂಷಣದಂತೆ ಸಂಪೂರ್ಣ ವಸ್ತುಗಳಿಂದ ಕೂಡಿದ್ದಾಗಿ ವಜ್ರ ನಿರ್ಮಿತವಾದ  ಕೋಟೆ ಕೊತ್ತಲುಗಳಿಂದಲೂ ನವರತ್ನಾಲಂಕೃತಗಳಾದ ಉಪ್ಪರಿಗೆಗಳಿಂದ ರಮ್ಯವಾದ ಮನೆಗಳಿಂದಲೂ, ಸಂಪದ್ಯುಕ್ತವಾದ ದ್ವಾರಕಾವತಿಗೆ ಅಧ್ಯಕ್ಷ ದುಷ್ಠ ಶಿಕ್ಷ, ಶಿಷ್ಠ ರಕ್ಷ, ಕರುಣಾಪೇಕ್ಷ, ನೀರಜಾಕ್ಷ, ಫಾಲಾಕ್ಷನ ಸಖ ಶ್ರೀ ಕೃಷ್ಣಮೂರ್ತಿಯ ಮನೋಪ್ರೀತೆ, ಭೀಷ್ಮಕನ ಸಂಜಾತೆ, ರುಕ್ಮಿಯ ಸಹಜಾತೆ, ರುಕ್ಮಿಣೀ ದೇವಿಯ ಗರ್ಭಾಂಬುಧಿಯೋಳ್ ಉದ್ಭವಿಸಿ “ಮದನೋ ಮನ್ಮಥೋ ಮಾರಃ  ಪ್ರದ್ಯುಮ್ನೊ ಮೀನ ಕೇತನಃ  ಕಂದರ‌್ಪೋ ದರ್ಪಕೋ ನಂಗಃ  ಕಾಮಃ ಪಂಚಶರಃ ಸ್ಮರಃ ॥ಇಂತಪ್ಪ ನಾಮಗಳಿಂದ ಮೆರೆಯುತ್ತಿರುವ ಪ್ರದ್ಯುಮ್ನನು ಬಂದು ಇದ್ದಾನೆಂದು ಈ ಮೇದಿನಿಯೋಳ್ ಒಂದೆರಡು ಬಾರಿ ಜಯಭೇರಿ ಹೊಡೆಯಿಸೋ ದೂತ-ರಾಜ ಸಂಪ್ರೀತ ॥

ಅಯ್ಯ, ಸಾರಥೀ ! ಮಣಿಮಯವಾದ ಈ ಸಭಾಮಂಟಪಕ್ಕೆ ಬಂದ ಕಾರಣವೇನೆಂದರೇ ಗಜಪುರವನ್ನಾಳುವಂಥ ಧರ್ಮರಾಯರ ಅಶ್ವಮೇಧ ಯಾಗದ ಕುದುರೆಯ ಬೆಂಬಲವಾಗಿ ಯಮ್ಮ ಮಾವಯ್ಯನವರಾದ ಅರ್ಜುನ ಭೂಪಾಲರೊಡನೆ ಬಾಹೋಣವಾಯ್ತು. ಈಗ ಯಮ್ಮ ಮಾವಯ್ಯನವರು ಧಾವಲ್ಲಿರುವರೋ ತೋರಿಸೋ ಚಾರಕಾ – ದ್ವಾರಪಾಲಕಾ ॥

ನಮೋನ್ನಮೋ ಹೇ ಮಾವ – ಪ್ರಾಣ ಸಂಜೀವ ॥

ಅರ್ಜುನ: ಸುಖೀಭವತು ಬಾರೈ ಮಾರನೇ – ಸುಂದರಾಕಾರನೇ ॥

ಅನಿರುದ್ಧ: ಯಲಾ ದ್ವಾರಪಾಲಕಾ ಹೀಗೆ ಬಾ. ಮತ್ತೊಂದು ಸಾರಿ ಹೀಗೆ ನಿಲ್ಲು, ಈಗ ಬಂದವರು ಧಾರೆಂದು ಯಮ್ಮನ್ನು ಪರಿಪರಿ ವಿಧದಿಂದ ಮಾತು ಮಾತಿಗೂ ಭೀತಿಯಂಪಟ್ಟು ನೀತಿಯಂ ಬಿಡದೆ ಮಾತನಾಡಿಸುವ ಸುಭಟ ನೀ ಧಾರು ? ನಿನ್ನ ತಾತಾ ಮಾತೆಯರು ನಿನ್ನನ್ನು ಪ್ರೀತಿಸಿ ಕರೆಯುವ ಪ್ರಖ್ಯಾತಿ ನಾಮಾಂಕಿತವೇನು ? ತಟತಟನೇ ಪೇಳೋ ಸುಭಟಾ ನೋಡೆನ್ನಧಟಾ ॥

ಅಯ್ಯ ಸಾರಥೀ, ಹಾಗಾದರೇ ಯಮ್ಮಯ ನಾಮಾಂಕಿತವನ್ನು ಪೇಳುತ್ತೇನೆ. ಸ್ವಸ್ಥಿರದಿಂದ ಕೇಳೋ ಸಾರಥೀ – ಚಮತ್ಕಾರಮತಿ ॥

ಭಲಾ ಸಾರಥೀ, ಜಡೆಮುಡಿಯಲ್ಲಿ ಧರಿಸಿದ ಗಂಗೆಯಿಂದಲೂ, ಹಣೆಯಲ್ಲಿ ತೋರುತ್ತಿರುವ ಫಾಲಲೋಚನದಿಂದಲೂ, ಸರ್ಪಗಳ ಕುಂಡಲಗಳಿಂದಲೂ, ಶಿಖೆಯಲ್ಲಿ ಧರಿಸಿದ ಚಂದ್ರಕಲೆಯಿಂದಲೂ, ಗಜಚರ್ಮ ಧಾರಣದಿಂದಲೂ, ಮೆರೆಯುತ್ತಿರುವ ಹಿರಿಯ ಬಳ್ಳಾಪುರ ನಿಲಯ ಶ್ರೀ ಸೋಮೇಶ್ವರನು ದಾಕ್ಷಾಯಿಣಿಯ ವಿಯೋಗದಿಂದ ವೈರಾಗ್ಯವಂ ತಾಳಿ ಹೇಮಕೂಟದಲ್ಲಿ ತಪೋನಿರತನಾಗಿರಲೂ, ಅಮರರೆಲ್ಲರೂ ತಾರಾಕಾಸುರನ ಉಪಟಳವನ್ನು ತಾಳಲಾರದೆ ಶಿವನನ್ನು ತಪದಿಂದೆಚ್ಚರಿಸಲು, ಅಸಾಧ್ಯರಾದಂಥ ಸಮಯದಲ್ಲಿ, ತನುವಿನಾಶೆಯನ್ನು ತೊರೆದು, ತನ್ನ ಪುಷ್ಪಬಾಣಗಳಿಂದ ಹರನ ತಪೋಭಂಗವಂ ಮಾಡಿ, ಕುಮಾರಸ್ವಾಮಿಯ ಜನನದಿಂದ ಲೋಕ ಕಲ್ಯಾಣವನ್ನೆಸಗಿದ “ಶಂಬರಾರಿರ‌್ಮನಸಿಜಃ, ಕುಸುಮೇ ಶರೋನನ್ಯಜಃ॥ಇಂತಪ್ಪ ನಾಮಗಳಿಂದ ಶೋಭಿಸುತ್ತಿರುವ ಮನ್ಮಥನ ಸುತ, ರತಿಸಂಜಾತ, ಬೃಂದಾರಕಹಿತ, ಬಾಣಾಸುರಹತ, ಅನಿರುದ್ಧನು ಬಂದು ಇದ್ದಾನೆಂದು ಈ ಕ್ಷಿತಿಯೋಳ್ ಒಂದೆರಡು ಬಾರಿ ಜಯಭೇರಿ ಬಾರಿಸೋ ದೂತ ರಾಜ ಸಂಪ್ರೀತ ॥

ಈ ವರ ಸಭಾಸ್ಥಾನಕ್ಕೆ ಬಂದ ಪರಿಯಾಯವೇನೆಂದರೆ, ಧರ್ಮರಾಯರು ನಡೆಸುವ ಅಶ್ವಮೇಧ ಯಾಗದ ಕುದುರೆಯ ಬೆಂಬಲವಾಗಿ ಪಿತಾಮಹರಾದ ಅರ್ಜುನ ಭೂಪಾಲರೊಡನೆ ಬಾಹೋಣವಾಯ್ತು, ಈಗ ವಿಜಯ ಭೂಪಾಲರು ಧಾವಲ್ಲಿರುವರೋ ಅತಿ ಜಾಗ್ರತೆ ತೋರಿಸೋ ಚಾರಕಾ – ಯನ್ನ ಆಜ್ಞಾಧಾರಕಾ ॥

ನಮೋನ್ನಮೋ ಪಾರ್ಥ ಭೂಪಾಲ – ನಿರ್ಜರಾಧಿಪನ ಬಾಲ ॥

ಅರ್ಜುನ: ಧೀರ್ಘಾಯುಷ್ಯಮಸ್ತು ಬಾರೈ ಅನಿರುದ್ಧ ಸಮರನಿರುದ್ಧ ॥

(ನೀಲಕೇತು ; ಯೌವನಾಶ್ವ ಬರುವಿಕೆ)

ತೆರೆದರುವು

ಕ್ಷಿತಿಗೆ ವಜ್ರಕಿರೀಟ ಮಾಹೀ
ಷ್ಮತಿಯ ಅರಸು ನೀಲಕೇತುವು
ಅತುಳ ಭುಜಬಲಶೌರ‌್ಯ ಭದ್ರಾ  ವತಿಯ ಭೂಪಾಲ ॥

ಯೌವನಾಶ್ವನು ಎಂಬ ನೃಪರೂ
ದಿವಿಜ ವಂದ್ಯ ಕೃಷ್ಣ ಮೂರ್ತಿಯಾ
ಭಾವನಾಜ್ಞೆಯ ನಡೆಸಲೆಂದೂ  ತವಕದಿಂದಾಗ  ॥

ಹಿರಿಯ ಬಳ್ಳಾ ಪುರದಿ ನೆಲೆಸಿದಾ
ಉರಗ ಭೂಷಣ ಸೋಮನಾಥನಾ
ಚರಣ ಕಮಲವ ಸ್ಮರಿಸಿ ಬಂದರು  ದುರದಪೇಕ್ಷೆಯಲೀ ॥

ನೀಲಕೇತು: ಯಲಾ ಮಾನುಷ್ಯನೇ, ವೈಶ್ರವಣನ ಆಸ್ಥಾನ ಮಂಟಪಕ್ಕಿಂತ ಅತಿಶಯವಾಗಿ ಶೋಭಿಸುತ್ತಿರುವ ಈ ಸಭಾಮಂದಿರದಲ್ಲಿ ಧಟಧಟನೆ ನಿಂತು, ಬಂದವರು ಧಾರೆಂದು ಕೇಳುವ ಸುಭಟ ನೀ ಧಾರು ? ನಿನ್ನಯ ನಾಮಾಂಕಿತವೇನು ? ತಟತಟನೇ ಪೇಳೋ ಚಾರ – ಗುಣಮಣಿ ಹಾರ ॥

ಭಲಾ ಸಾರಥೀ, ಹಾಗಾದರೆ ಯಮ್ಮ ವಿದ್ಯಮಾನವನ್ನು ಪೇಳುತ್ತೇನೆ. ಚಿತ್ತವಿಟ್ಟು ಕೇಳೋ ಸಾರಥೀ – ಸಂಧಾನಮತಿ ॥

ಭಳಿರೇ ಸಾರಥೀ, ಹಿಂದೆ ದಹನ ಶಕ್ತಿಯುಳ್ಳ ವೈಶ್ವಾನರನು ವಿಪ್ರವೇಷದಿಂದ ಬಂದು, ಅರ್ಜುನನನ್ನು ಅನ್ನದಾನ ಬೇಡಿ ತಥಾಸ್ತುಯೆನ್ನಿಸಿಕೊಳ್ಳಲು, ಇದನರಿತ ಕೃಷ್ಣನು “ಹೇ ಪಾರ್ಥ, ಈತನು ಬ್ರಾಹ್ಮಣನಲ್ಲ, ಸಾಕ್ಷಾತ್ ಅಗ್ನಿದೇವನು, ಖಾಂಡವವನ ದಹನಕ್ಕೆ ಮನಸ್ಸು ಮಾಡಿರುವನ’. ಎಂದು ಹೇಳಲು, ಆಗ ಪಾರ್ಥನು “ಮಾತು ತಪ್ಪಲಾಗದು, ನಿಮ್ಮ ಅನುಗ್ರಹವಿದ್ದರೆ ಈ ಕಾರ‌್ಯ ತೃಣ ಸಮಾನವೆಂದು ಹೇಳಿ, ಪಾವಕನಿಗೆ ಖಾಂಡವ ವನವನ್ನು ದಹಿಸುವಂತೆ ಅಳವಡಿಸಿಕೊಟ್ಟು ತಾವು ರಕ್ಷಕರಾಗಿರಲು, ಈ ಪ್ರಕಾರವಾಗಿ ತೃಪ್ತಿಪಡಿಸಿದ ಪಾರ್ಥನಿಗೆ ಕಪಿಧ್ವಜವನ್ನೂ, ಗಾಂಢೀವ ಧನುಸ್ಸನ್ನೂ, ಶ್ರೀ ಕೃಷ್ಣನಿಗೆ ಗರುಡ ಧ್ವಜವನ್ನೂ, ಕೌಮೋದಕೀ ಗಧೆಯನ್ನೂ ಕೊಟ್ಟು ಕೃತಾರ್ಥನಾದಂಥ ಯಜ್ಞೇಶ್ವರನಿಗೇ, ಸಮುದ್ರ ರಾಜನು ಲಕ್ಷ್ಮಿಯನ್ನು ವಿಷ್ಣುವಿಗೂ, ಪರ್ವತರಾಜನು ಗಿರಿಜೆಯನ್ನು ಶಿವನಿಗೂ ಕೊಟ್ಟಂತೆ, ಯನ್ನ ಮಗಳಾದ ಸ್ವಾಹಾ ದೇವಿಯನ್ನು ಪರಿಣಯ ಮಾಡಿಕೊಟ್ಟು, ಸತ್ಕೀರ್ತಿ ಪಡೆದಿರುವಂಥ ಮಾಹಿಷ್ಮತಿಯ ರಾಜನಾದ ನೀಲಕೇತುವು ಬಂದು ಇದ್ದಾನೆಂದು ಈ ಭುವನದೋಳ್ ಒಂದೆರಡು ಬಾರಿ ಜಯಭೇರಿ ಬಾರಿಸೋ ದೂತ – ರಾಜ ಸಂಪ್ರೀತ ॥

ಈ ವರ ಸಭಾಸ್ಥಾನಕ್ಕೆ ಬಂದ ಪರಿಯಾಯವೇನೆಂದರೆ, ಧರ್ಮರಾಯರು ನಡೆಸುವ ಅಶ್ವಮೇಧ ಯಾಗದ ಕುದುರೆಯ ಬೆಂಬಲವಾಗಿ ಧನಂಜಯನೊಡನೆ ಬಾಹೋಣವಾಯ್ತು. ಈಗ ಅರ್ಜುನ ಭೂಪಾಲರು ಧಾವಲ್ಲಿರುವರೋ ಅತಿ ಜಾಗ್ರತೆ ತೋರಿಸೋ ಚಾರ-ಯನ್ನ ಆಜ್ಞಾಧಾರ ॥

ನಮೋನ್ನಮೋ ಅರ್ಜುನ ಭೂಪಾಲ – ಕ್ಷೋಣಿ ಜನಪಾಲ ॥

ಅರ್ಜುನ: ನೀಲಕೇತು ಮಹಾರಾಜೇಂದ್ರಾ  ನಿನಗೆ ಮಂಗಳವಾಗಲಿ ॥

ಯೌವನಾಶ್ವ: ಯಲಾ ಚಾರ ಹೀಗೆ ಬಾ ಮತ್ತೊಂದು ಸಾರಿ ಹೀಗೆ ನಿಲ್ಲು. ಈಗ ಬಂದವರು          ಧಾರೆಂದು ಪರಿಪರಿಯಿಂದ ಕರವೆರಡಂ ಮುಗಿದು ವಿಚಾರಿಸುವ ನರ ನೀ ಧಾರು ? ನಿನ್ನ ಪೆಸರೇನು? ತುಸು ಮಾತ್ರ ಭಯವಿಲ್ಲದೆ ಉಸುರುವನಾಗೋ ಭಟನೇ – ಭಟರೋಳ್ ಶ್ರೇಷ್ಠನೇ ॥

ಭಲಾ ಸಾರಥೀ ಸೌರಾಷ್ಟ್ರದೇಶದೋಳ್ ಸಾರಸ್ವತ ನಗರದ ರಾಜನಾದ ವೀರವರ್ಮನು ತನ್ನ ಸುತೆಯಾದ ಮಾಲಿನಿಗೆ ಸ್ವಯಂವರವನ್ನು ನಿಶ್ಚಯಿಸಲು “ಆಗ ಮಾಲಿನಿಯು, ಹೇ ತಂದೆ, ಮನುಷ್ಯರಿಗೇ ಮರಣವು ತಪ್ಪಿದ್ದಲ್ಲ, ಮಾನವರನ್ನು ಮದುವೆಯಾದವಳು ಪತಿಯು ಸತ್ತರೆ ಜೊತೆಯಲ್ಲಿಯೇ ಸಹಗಮನ ಮಾಡಬೇಕು ಅಥವಾ ವಿಧವೆಯಾಗಿರಬೇಕು. ಆದ್ದರಿಂದ ಮಾನವರ ಧರ್ಮಾ ಧರ್ಮಗಳನ್ನು ವಿಚಾರಿಸುವ ಧರ್ಮ ಸ್ವರೂಪನಾದ ಯಮಧರ್ಮನನ್ನೇ ನಾನು ವರಿಸುತ್ತೇನೆ ಎಂದು ಹೇಳಿ ಆ ತರುಣೀಮಣಿಯು ತನ್ನ ಜಪ ತಪ ವ್ರತಾದಿಗಳಿಂದ ದಂಡಧರನನ್ನು ಮೆಚ್ಚಿಸಲು ಪ್ರಸನ್ನನಾದ ಅಂತಕನು ಮಾಲಿನಿಯ ಮನೋಗತದಂತೆ ಆಕೆಯೊಡನೆ ವೈವಾಹವಂ ಬೆಳೆಯಿಸಿ, ತನ್ನ ಮಾವನಾದ ವೀರವರ್ಮನಿಗೆ ಕೊಟ್ಟ ವಚನದ ಪ್ರಕಾರ ಸಾರಸ್ವತ ಪುರದಲ್ಲಿಯೇ ಉಳಿದ ಶ್ಯಾಮಲಾ ದೇವಿಯರಸ ಯಮಧರ್ಮರಾಯನ ವರದಿಂದ ಉದ್ಭವಿಸಿದ ಧರ್ಮರಾಯರಿಗೆ ಅಶ್ವಮೇಧಯಾಗವನ್ನು ಮಾಡಲು ಯಾಗಾಶ್ವವನ್ನು ಕೊಟ್ಟು ಖ್ಯಾತಿಯಂ ಗಳಿಸಿರುವ ಭದ್ರಾವತಿ ಪಟ್ಟಣದ ಅರಸನಾದ ಯೌವನಾಶ್ವನು ಬಂದು ಇದ್ದಾನೆಂದು ಈ ಅವನಿಯೋಳ್ ಒಂದೆರಡು ಬಾರಿ ಜಯಭೇರಿ ಹೊಡೆಯಿಸೋ ದೂತಾ – ರಾಜ ಸಂಪ್ರೀತ ॥ಈ ವರ ಸಭಾ ಮಂಟಪಕ್ಕೆ ಬಂದ ಕಾರಣವೇನೆಂದರೆ ಧರ್ಮರಾಯರು ನಡೆಸುವ ಯಾಗದ ಕುದುರೆಯ ಬೆಂಬಲವಾಗಿ ಪಾರ್ಥನೊಡನೆ ಬಾಹೋಣವಾಯ್ತು. ಈಗ ಅರ್ಜುನ ಭೂಪಾಲರು ಧಾವಲ್ಲಿರುವರೋ ತೋರಿಸೋ ಸಾರಥೀ ॥

ನಮೋನ್ನಮೋ ಅರ್ಜುನ ಭೂಪ – ಕೀರ್ತಿ ಕಲಾಪ ॥

ಅರ್ಜುನ: ಅಷ್ಟೈಶ್ವರ‌್ಯ ಸಿದ್ಧಿರಸ್ತು ಬಾರೈ ಯೌವನಾಶ್ವ ರಾಜೇಂದ್ರಾ ॥

ಯೌವನಾಶ್ವ: ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರ‌್ಯಾರ್ಥವೇನೋ ಪೇಳಬೇಕೈ ವಿಜಯ –
ಧನಂಜಯಾ ॥

ಅರ್ಜುನ:ಪೇಳುತ್ತೇನೆ ಈ ಸಿಂಹಪೀಠವನ್ನು ಅಲಂಕರಿಸಬಹುದೈ ಭೂಪಾಲ – ಅವನೀಂದ್ರ ಪಾಲ ॥

(ಹಂಸಧ್ವಜ ; ಅನುಸಾಲ್ವ ಬರುವಿಕೆ)

ತೆರೆ ದರುವು

ಧರಣಿ ಕಾಂತೆ ಭೂಷಣಂದದೀ  ರಾರಾಜಿಸುತ್ತಾ
ಮೆರೆಯುತಿರುವ ಚಂಪಕಾಪುರಾ ॥

ಧಾತ್ರಿನಾಥ ಹಂಸಕೇತುವೂ  ಆ ಪಾರ್ಥನೊಡನೇ
ಪುತ್ರಶೋಕ ತ್ಯಜಿಸಿ ಬಂದನೂ ॥

ಅನುವರದೀ ಚಂಡ ಶೌರ‌್ಯನೂ  ಅನುಸಾಲ್ವರಾಜ
ರಣಕೆ ರೌದ್ರದಿಂದ ಬಂದನೂ ॥

ಹಿರಿಯ ಬಳ್ಳಾಪುರ ನಿವಾಸನು  ಶರವನ್ನು ಇತ್ತ
ನರನ ಬಳಿಗೆ ನೃಪರು ಬಂದರೂ ॥

ಹಂಸಧ್ವಜ: ಯಲಾ ಚಾರ ಹೀಗೆ ಬಾ ಮತ್ತೂ ಒಂದು ಸಾರಿ ಹೀಗೆ ನಿಲ್ಲು, ಭಲಾ ಚಾರ ಈ ಪೊಡವಿಗೆ ಅಧಿಕವಾದ ಹಿರಿಯ ಬಳ್ಳಾಪುರದೊಡೆಯನಾದ ಮೃಢ ಸೋಮನಾಥನ ಅಡಿದಾವರೆಯನ್ನು ಭಜಿಸುತ್ತಾ ಧೃಢವಾದ ಯನ್ನ ಕರದೋಳ್ ಖಡ್ಗ ಶರಂಗಳನ್ನು ಪಿಡಿದು  ಬಂದಿರುವ ಚಂಡ ಪ್ರಚಂಡ ದೋರ್ದಂಡನಾದ ಯನ್ನನ್ನು ಧಾರೆಂದು ಕೇಳುವ ಮಾನುಷ್ಯ ನೀ ಧಾರೋ – ಬದಲುತ್ತರವ ಸಾರೋ ॥

ಭಲಾ ಸಾರಥೀ, ಈ ವಸುಧೆಯೋಳ್ ಅತಿ ರಮ್ಯವಾಗಿಯೂ, ವೇದ ವಾದ್ಯ ಘೋಷಗಳಿಂದಲೂ ಮೃದಂಗ ಕಹಳೆ ತಾಳಧ್ವನಿಗಳಿಂದಲೂ, ಲೋಲಾಕ್ಷಿಯರಾದ ನಾಟ್ಯ ಗಾರ್ತಿಯರ ನರ್ತನ ವೀಣಾನಾದದಿಂದಲೂ, ಕೋಗಿಲೆ ಗಿಳಿಗಳ ಇಂಪಾದ ಗಾನದಿಂದಲೂ, ಮಲ್ಲಿಗೆ ಮಾಲತಿ ಜಾಜಿ ಸಂಪಿಗೆ ಮೊದಲಾದ ಪುಷ್ಪಗಳ ಸೌರಭದಿಂದಲೂ, ಭೂರಮಣಿಯ  ಭೂಷಣದಂತೆ ರಾರಾಜಿಸುತ್ತಿರುವ ಚಂಪಕಾಪುರದ ಅರಸು ಹಂಸಧ್ವಜ ಭೂಪಾಲನು ಬಂದು ಇದ್ದಾನೆಂದು ಈ ಧರಿತ್ರಿಯೋಳ್ ಒಂದೆರಡು ಬಾರಿ ಜಯಭೇರಿ ಬಾರಿಸೋ ದೂತ ರಾಜ ಸಂಪ್ರೀತ ॥

ಈ ವರ ಸಭಾಸ್ಥಾನಕ್ಕೆ ಆಗಮಿಸಿದ ಪರಿಯಾಯವೇನೆಂದರೆ ಇಭಪುರಿಯನ್ನಾಳುವಂಥ ಧರ್ಮರಾಯರು ನಡೆಸುವ ಅಶ್ವಮೇಧ ಯಾಗದ ಕುದುರೆಯ ಬೆಂಬಲವಾಗಿ ಧನಂಜಯನೊಡನೆ ಬಾಹೋಣವಾಯ್ತು. ಈಗ ಅರ್ಜುನ ಭೂಪಾಲರು ಧಾವಲ್ಲಿ ಇರುವರೋ ತೋರಿಸೋ ಚಾರ – ಯನ್ನ ಆಜ್ಞಾಧಾರ ॥

ನಮೋನ್ನಮೋ ಹೇ ಪಾರ್ಥ – ಧೈರ‌್ಯದಲ್ಲಿ ಸಮರ್ಥ ॥

ಅರ್ಜುನ: ಶುಭಮಸ್ತು ಶೀಘ್ರದಿಂ ಬಾರೈ ಹಂಸಧ್ವಜ ಭೂಪಾಲ – ಕ್ಷೋಣಿ ಜನಪಾಲ ॥

ಅನುಸಾಲ್ವ: ಯಲಾ ಮಾನುಷ್ಯನೇ, ದುರುಳ ಅರಿಕುಲವನ್ನು ತೋರ ಗಧೆಯಿಂದ ಪರಿಭಂಗಿಸಿ ಪರಾಭವಗೊಳಿಸಲು ದುರಕ್ಕನುವಾಗಿ ಧೃಢಕರಿಸಿ ಕಡುರೌದ್ರದಿಂದ ಬಂದು ನಿಂತಿರುವ ಯನ್ನನ್ನು ಧಾರೆಂದು ಕೇಳುವ ಪಾಮರ ನೀ ಧಾರೋ – ಯನ್ನೊಳು ಸಾರೋ ॥

ಭಲಾ, ಸಾರಥೀ, ಹಾಗಾದರೆ ನಮ್ಮ ವೃತ್ತಾಂತವನ್ನು ಪೇಳುತ್ತೇನೆ ಚಿತ್ತವಿಟ್ಟು ಕೇಳೋ ಸಾರಥೀ ॥ಶ್ರೀಮನ್ ಮಹೀಮಂಡಲ ಮಂಡಲಾಯ ಮಾನ ಹಿಮದ ಮಂಡಲೇಶ್ವರ ಮಣಿ ಮಕುಟ ತಟಘಟಿತ ಕರ್ಣಕುಂಡಲ ವಿಭ್ರಾಜಿತ, ಕರ್ಬುರ ಕುಲವಂಶ ಪಾರಾವಾರ, ಧೀರ ಸಾಲ್ವರಾಜರ ಸಹೋದರಾ, ಅರಿಭಯಂಕರ, ರಣಾಗ್ರವೀರ, ಶ್ರೀ ಮನೋಹರ ಶರಣ ಅನುಸಾಲ್ವ ರಾಜೇಂದ್ರನು ಬಂದು ಇದ್ದಾನೆಂದು ಈ ವಸುಮತಿಯೋಳ್ ಒಂದೆರಡು ಬಾರಿ ಜಯಭೇರಿ ಬಾರಿಸೋ ದೂತ-ರಾಜ ಸಂಪ್ರೀತ ॥

ಈ ವರ ಸಭಾಸ್ಥಾನಕ್ಕೆ ಆಗಮಿಸಿದ ಪರಿಯಾಯವೇನೆಂದರೇ ಧರ್ಮರಾಯರು ನಡೆಸುವ ಅಶ್ವಮೇಧ ಯಾಗದ ಕುದುರೆಯ ಬೆಂಬಲವಾಗಿ ಪಾರ್ಥನೊಡನೆ ಬಾಹೋಣವಾಯ್ತು. ಈಗ ಅರ್ಜುನ ಭೂಪಾಲರು ಧಾವಲ್ಲಿರುವರೋ ಅತಿ ಜಾಗ್ರತೆ ತೋರಿಸೋ ಚಾರಕಾ – ದ್ವಾರಪಾಲಕಾ ॥

ನಮೋನ್ನಮೋ ಹೇ ರಾಜ – ಸಹಸ್ರಾರ್ಕ ತೇಜ ॥

ಅರ್ಜುನ: ಸುಖೀಭವತು ಬಾರೈ ಅನುಸಾಲ್ವ ರಾಜೇಂದ್ರಾ ॥

ಅನುಸಾಲ್ವ: ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನೋ ಪೇಳಬೇಕೈ ದೊರೆಯೋ – ಧೈರ‌್ಯದಲ್ಲಿ ಕೇಸರಿಯೇ ॥

ಅರ್ಜುನ: ಪೇಳುತ್ತೇನೆ, ಲಾಲಿಸಿರೈಯ್ಯ ಸೇನಾ ನಾಯಕರೇ – ಅಸಹಾಯ ಶೂರರೇ ॥

ದರುವು

ಸೇನಾಧಿಪತಿಗಳೇ ಕೇಳೀ  ಈಗಾ
ಮಾನವಾಧಿಪ ರತ್ನಪುರಿಯಾ ॥
ಸೂನು ಅರುಣಧ್ವಜನೂ  ಯಾಗದ ತುರಗವನೂ
ಕ್ಷೋಣಿಯೋಳ್ ಬಂಧಿಸಿ  ಕಟ್ಟಿಹನಾತನೂ  ಸೇನಾಧಿಪತಿಗಳೇ       ॥

ಅರ್ಜುನ: ಅಯ್ಯ ನೀಲಧ್ವಜ, ಯೌವನಾಶ್ವ, ಅನುಸಾಲ್ವ, ವೃಷಕೇತು, ಬಭೃವಾಹನ, ಪ್ರದ್ಯುಮ್ನ ಅನಿರುದ್ಧ, ಹಂಸಧ್ವಜ ಮೊದಲಾದ ವೀರಾಧಿವೀರರೇ, ಈ ರತ್ನಪುರಿಯನ್ನು ಪರಿಪಾಲಿಸುವ ಮಯೂರ ಧ್ವಜನ ಕುಮಾರ ತಾಮ್ರಧ್ವಜನು ನಮ್ಮ ಯಾಗದ ಕುದುರೆಯನ್ನು ಬಂಧಿಸಿರುವನೈಯ್ಯ ಶೂರರೇ – ಸೇನಾ ನಾಯಕರೇ ॥

ದರುವು

ರಣರಂಗದೊಳು ಧೀರನೆಂದೂ  ಚಕ್ರ
ಪಾಣಿ ಪೇಳಿದನು ಯನಗಿಂದೂ ॥
ಗಣನೆಯಿಲ್ಲದ ಸೇನೆ  ಕೂಡಿಹನವನಿಂದೂ
ರಣಕೆ ನಾವೀಗಲೇ ತೆರಳಬೇಕೆಂದೂ  ಸೇನಾಧಿಪತಿಗಳೇ ॥ ॥

ಅರ್ಜುನ: ಅಯ್ಯ ಸಮರ ಧೀರರೇ  ಈ ತಾಮ್ರಧ್ವಜನು ಗಣನೆಯಿಲ್ಲದ ಸೇನಾ ಸಮೂಹವನ್ನು ಹೊಂದಿ ಜಗತ್ರಯವನ್ನು ನಡುಗಿಸುವ ವಿಪುಲ ವೀರ್ಯವುಳ್ಳವನೆಂದೂ, ತಂದೆಯಾಜ್ಞೆಯನ್ನು ಭಯಭಕ್ತಿಗಳಿಂದ ಪಾಲಿಸುತ್ತಿರುವುದರಿಂದಲೂ, ಪರಮ ವೈಷ್ಣವ ಭಕ್ತನಾಗಿರುವುದರಿಂದಲೂ ಬ್ರಹ್ಮಾದಿ ದೇವತೆಗಳಿಗೂ ಯುದ್ಧದಲ್ಲಿ ಸೋಲುವವನಲ್ಲವೆಂದೂ ಶ್ರೀ ಕೃಷ್ಣನು ಯನಗೆ ಪೇಳಿದನೈಯ್ಯ ಸೇನಾಧಿಪತಿಗಳೇ – ಕ್ಷೋಣಿಪತಿಗಳೇ ॥

ದರುವು

ಹಿರಿಯ ಬಳ್ಳಾಪುರವಾಸ  ಸೋಮ
ಧರನ ಕಾರುಣ್ಯದಿಂದೀಗಾ ॥
ದುರುಳ ತಾಮ್ರಧ್ವಜನ  ಸಮರದಿ ಜೈಸುತಾ
ತುರಗದ ಬಂಧನ  ತ್ವರಿತದಿ ಬಿಡಿಸುತಾ ॥ಸೇನಾಧಿಪತಿಗಳೇ ॥      ॥

ಅರ್ಜುನ: ಅಯ್ಯ ಸೇನಾಧಿಪತಿಗಳೇ, ಈ ವಸುಧೆಯೋಳ್ ಅಧಿಕವಾದ ಹಿರಿಯ ಬಳ್ಳಾಪುರವಾಸ ಶ್ರೀ ಸೋಮೇಶ್ವರನ ಕೃಪಾಕಟಾಕ್ಷದಿಂದ ಆ ದುರುಳನಾದ ತಾಮ್ರಧ್ವಜನೊಡನೆ ಮಲೆತು ಯುದ್ಧವಂ ಮಾಡಿ ಯಾಗದ ಕುದುರೆಯನ್ನು ಬಂಧಮುಕ್ತವನ್ನಾಗಿ ಮಾಡಬೇಕಯ್ಯ ಸೇನಾ ನಾಯಕರೇ – ಸಮರ ಸಮರ್ಥರೇ ॥