ಇನಜ ಸಂಭವನೂ ನೀ  ನಾದರೆ ಹಿರಿದಲ್ಲ
ಮನದೊಳಗೆ ತಿಳಿಯೋ ನೀ  ಸೂತ ಸಂಭವನೂ ಉದ್ಭವನು
ಪನ್ನಗಾ ಭೂಷಣನು  ಇನ್ನು ಬೆಂಬಲವಾಗಿ
ನಿನ್ನ ಸಲಹಲು ಬರಲು  ರಣದಿ ಜೈಸುವೆನೂ  ನಾ ಬಿಡೆನೂ ॥

ತಾಮ್ರಧ್ವಜ: ಯಲಾ ವೃಷಕೇತು ! ನೀನು ಸೂತ ಕುಲದ ಅಂಬಿಗರ ವಂಶದಲ್ಲಿ ಉದ್ಭವಿಸಿ, ತಾನು ಸೂರ‌್ಯ ವಂಶದವನೆಂದೂ, ದಾನ ಶೂರ ಕರ್ಣನ ಮಗನೆಂದೂ, ರಣರಂಗಧೀರನೆಂದೂ, ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ಲವೇ ! ಈ ರಣದಲ್ಲಿ ನಿಂತು ಕುಣಿ ಕುಣಿದು ಅಣಕವಾಡಿದರೆ ಪನ್ನಗ ಭೂಷಣನು ಬೆಂಬಲವಾಗಿ ಬಂದರೂ ಬಿಡದೆ, ಅಣಿಯಾದ ಬಾಣದಿಂದ ನಿನ್ನ ಗೋಣ ತರಿವೆನೋ ಮೂಢ-ಕೊಡು ಕಾಳಗವ ಗಾಢ ॥

ದರುವು

ಜರಿಯಾದೀರೆಲೋ ದುರುಳಾ  ಸರಿಯಲ್ಲವೋ ನಿನಗೆ
ಸರಿದೊರೆಗಳ ಮುಂದೆ  ಸರಸವಾಡುವರೇ ನುಡಿಯುವರೇ
ಹಿರಿಯ ಬಳ್ಳಾಪುರದ  ವರದ ಸೋಮೇಶ್ವರನಾ
ಕರುಣದಿಂದಲಿ ನಿನ್ನ  ದುರದಿ ಜೈಸುವೆನೂ ನಾ ಬಿಡೆನೂ ॥

ವೃಷಕೇತು: ಯಲೋ ತಾಮ್ರಧ್ವಜಾ ! ಎಂಥಾ ತಿರಸ್ಕಾರದ ಮಾತನಾಡಿದೆಯೋ, ಧರಣಿಪಾಧಮನೇ, ಸರಿದೊರೆಗಳ ಮುಂದೆ ನಿಂತು, ಸೂತ ಸಂಜಾತನೆಂದೂ, ಹೀನ ಕುಲದವನೆಂದೂ ಪರಿಪರಿಯಾಗಿ ಜರಿದು ಬೊಗುಳಿದ್ದೇ ಆದರೇ, ಈ ಧರಣಿಗಧಿಕ ಹಿರಿಯ ಬಳ್ಳಾಪುರ ವಾಸ ಶ್ರೀ ಸೋಮೇಶ್ವರನ ಕರುಣ ಕಟಾಕ್ಷದಿಂದ ನಿನ್ನನ್ನು ಈ ರಣಮಾರಿಗೆ ಬಲಿಯನ್ನು ಕೊಡುತ್ತೇನಲಾ ಭಂಡಾ ಅಡಗಿಸುವೆ ನಿನ್ನಯ ಪುಂಡ ॥

ದರುವು

ಹಿಂದೆ ರಣದೊಳು ನಿನ್ನ  ತಂದೆ ರಾಧೇಯನಾ
ಕೊಂದು ಪಾರ್ಥನು ಈಗಾ  ನಿನ್ನ ಕೊಲ್ಲಿಸಲೂ, ಕೊಲ್ಲಿಸಲೂ ॥

ಇಂದು ದುರುಳನು ನಿನ್ನ  ಚಂದದಿಂದಲಿ ಕರೆದು
ತಂದು ಇರುವನು ಕೇಳೋ  ಕರ್ಣನ ಕುವರಾ, ಬಿಡು ಬವರಾ ॥

ಚಂದ್ರನ ಶಿರದೊಳಗೆ  ಅಂದದಿಂ ಧರಿಸಿರುವ
ಕಂದ ಕಾಯ್ದವನಾಣೆ  ಇಂದು ನಿನ್ನ ಬಿಡೆನೂ, ನಾ ಬಿಡೆನೂ             ॥

ತಾಮ್ರಧ್ವಜ: ಯಲಾ ವೃಷಕೇತು ! ಹಿಂದೆ ಭಾರತ ಯುದ್ಧದಲ್ಲಿ ನಿನ್ನ ತಂದೆಯಾದ ಕರ್ಣನನ್ನು ಪಾರ್ಥನು ಕೊಂದು ಬಿಟ್ಟು, ಈಗ ಯನ್ನ ಕೈಯಿಂದ ನಿನ್ನ ಕೊಲ್ಲಿಸಲು ಕಳುಹಿಸಿರುವುದನ್ನು ನೀನು ತಿಳಿಯದೇ ಹೋದೆಯೇನಲಾ ಮರುಳೇ, ಗುರು ಬಂಧು ವಧಾ ಮಾಡಿದ ಪಾಂಡವರು ನಿನ್ನನ್ನು ಕೊಲ್ಲಿಸದೇ ಬಿಡುವರೇ, ವೃಥಾ ಯನ್ನಯ ಶರಕ್ಕೆ ಏತಕ್ಕೆ ಆಹುತಿಯಾಗುವೆಯೋ ಕರ್ಣಜಾ ಹೇ ಸೂತ ಕುಲಜಾ ॥

ದರುವು

ಮೂಢಾ ಕೇಳೆಲೋ ಹಿಂದೆ  ನಡೆದ ಕಥನಗಳ್ಯಾಕೋ ॥
ಬಡಿವಾರ ಪಡಬೇಡಾ  ಕಡಿವೆ ನಿನ್ನ ಶಿರವಾ, ಕಂಧರವಾ ॥
ಕಡುಜವದಿ ನಿನ್ನನ್ನೂ  ಕೆಡಹುವೆನು ಗಿರಿಗೊಡೆಯ
ಮೃಡನಾಣೆ ಜಡಮತಿಯೇ  ನಿನ್ನ ಕೊಲ್ಲುವೆನೂ, ನಾ ಬಿಡೆನೂ ॥

ವೃಷಕೇತು: ಭಲಾ ಮೂಢ ! ಈ ಸಂಗ್ರಾಮ ಭೂಮಿಯಲ್ಲಿ ನಿಂತು ಹಿಂದಣ ಸುದ್ಧಿಗಳನ್ನು ಹುಚ್ಚು ನಾಯಿಯಂತೆ ಏಕೆ ಉಚ್ಛರಿಸುತ್ತೀಯೋ ಮೂರ್ಖ ! ಈ ಪೊಡವಿಯಲ್ಲಿ ಜಡಮತಿಯಾದ ನಿನ್ನನ್ನು ಕಡು ಜವದಿ ಘುಡಿಘುಡಿಸಿ ಕಿಡಿಯಿಡುವ ರೌದ್ರಾಸ್ತ್ರಗಳನ್ನು ಬಿಟ್ಟು ರಜತಗಿರಿ ಗೊಡೆಯ ಮೃಡ ಮೃತ್ಯುಂಜಯನಾಣೆ ಪೊಡವಿಗೊರಗಿಸುವೆನೋ ದುರುಳಾ – ಹೊರ ತೆಗೆಯುವೆ ಕರುಳಾ ॥

ದರುವು

ಭ್ರಷ್ಠ ವೃಷಧ್ವಜ ಕೇಳೆಲೋ  ನಿನ್ನ
ಕುಟ್ಟಿ ಕೆಡಹುವೆನು ನೋಡೆಲೋ ॥
ದುಷ್ಠನೇ ನಿನ್ನನು ಧುರದಿ ಸಂಹರಿಸಿ
ಕಷ್ಠವ ಪಡಿಸುವೆ ಸೃಷ್ಠಿಗೊರಗಿಸೀ ಭ್ರಷ್ಟ ॥

ತಾಮ್ರಧ್ವಜ: ಯಲಾ ಭ್ರಷ್ಠ ವೃಷಕೇತು  ದುಷ್ಠನಾದ ನಿನ್ನನ್ನು ಸೃಷ್ಠಿಗೀಶನಾಣೆಯೂ ಕುಟ್ಟಿ ಕೆಡಹಿ ಪೆಟ್ಟುಗಳನ್ನಿಡುವೆನಲ್ಲದೇ ಅಸ್ತ್ರಶಸ್ತ್ರಗಳಿಂದ ತಿವಿದು ಜವನ ಪಟ್ಟಣಕ್ಕೆ ಕಳುಹಿಸುವೆನೋ ಖೂಳಾ ನಂತರ ನೋಡು ಗೋಳಾ ॥

ದರುವು

ಶುದ್ಧ ಭ್ರಷ್ಠನೇ ಕೇಳೆಲೋ  ಈಗ
ಯುದ್ಧ ಮುಖದಿ ನೀ ನೋಡೆಲೋ ॥
ಬದ್ಧದಿ ತುರಗವ ಬಿಡದಿರೆ ನಿನ್ನನೂ
ಗುದ್ದಿ ಕೊಂದು ರಣಹದ್ದಿಗೆ ಬಿಸುಡುವೆ ಶುದ್ಧ  ॥

ವೃಷಕೇತು: ಯಲಾ ಶುದ್ಧ ಭ್ರಷ್ಠನಾದ ತಾಮ್ರಧ್ವಜನೇ  ಕೇಳು ! ಬದ್ಧದಿ ನೀನೆಮ್ಮ ತುರಗವನ್ನು ಬಿಡದೆ ಬುದ್ಧಿ ಶೂನ್ಯವಾಗಿ ನೀನೋರ್ವನು ಯಮ್ಮೊಡನೆ ಯುದ್ಧಕ್ಕೆ ಸಿದ್ಧವಾಗಿ ಬಂದಿರುವೆ ಯಾದ್ದರಿಂದ ಕೂರ್ಗಣೆಗಳಿಂದ ನಿನ್ನನ್ನು ಗುದ್ದಿ ಗುದ್ದಿ ಕೊಂದು ರಣಹದ್ದಿಗೆ ಬಿಸುಡುವೆನೋ ಶುದ್ಧ ದುರುಳನೇ – ಅವಿವೇಕದವನೇ ॥

ಕಂದಕೇದಾರಗೌಳ

ತುರಗವ ನಿದನು ಬಿಡಲಿಕೇ
ಧಾರುಣಿಯೋಳ್ ಮಯೂರ ಧ್ವಜನಣುಗನೋ ॥
ಪಾರುವರ ಪುತ್ರನಲ್ಲವೋ
ಹೇ ರಣಹೇಡಿಯೇ ಪೇಳಬೇಡ ಯನಗಂ ॥

ದರುವು

ಹಿರಿಯ ಬಳ್ಳಾಪುರ ವಾಸನಾ  ಶ್ರೀ
ಚರಣದಾಣೆ ಶರದಿಂದ ನಾ ॥
ದುರುಳನೆ ನಿನ್ನಯ ಶಿರವನು ರಣದೊಳು ॥
ಗರಿಗರಿಯೆನುತಾ  ತರಿದೀಡಾಡುವೇ ॥

ತಾಮ್ರಧ್ವಜ: ಯಲೌ ವೃಷಕೇತು ! ಕಟ್ಟಿದಂಥ ಕುದುರೆಯನ್ನು ಬಿಡುವುದಕ್ಕೆ ನಾನು ಕ್ಷತ್ರಿಯಾಧಮನೇ, ಅಥವಾ ಬಡಹಾರುವರ ಪುತ್ರನೇ, ಭೂತಲದಲ್ಲಿ ಕ್ಷತ್ರಿಯನೆಂದೆನಿಸಿ ನಿನ್ನ ಬಣಗು ಮಾತುಗಳಿಗೆ ಅಳುಕುವೆನೇ ಭ್ರಷ್ಠಾ. ಈ ಪೊಡವಿಗಧಿಕವಾದ ಹಿರಿಯ ಬಳ್ಳಾಪುರವಾಸ ಶ್ರೀ ಸೋಮೇಶನ ಅಡಿದಾವರೆಗಳಾಣೆಯೂ ನಿನ್ನಯ ಶಿರವನ್ನು ತರಿದೀಡಾಡುವೆನು. ಜಾಗ್ರತೆ ರಣಾಗ್ರಕ್ಕೆ ನಿಲ್ಲೋ ಅಧಮಾ – ನೋಡೆನ್ನ ಪರಾಕ್ರಮಾ ॥

(ಉಭಯರ ಯುದ್ಧವೃಷಕೇತು ಪರಾಭವ)

ಭಾಗವತರ ಕಂದ

ಎಳೆದಳಿರು ತರಣಿ ಕಿರಣದಿಂ
ಬಳಲಿದ ವೋಲ್ ಕುವರನ ಶರಘಾತಿಯಿಂದ ವೃಕ್ಷ ಧ್ವಜಂ ॥
ಕಳೆಗುಂದಿ ತಲ್ಲಣಿಸುತಲೀ
ಘಳಿಲನೇ ಮೈಮರೆದು ಮೆಲ್ಲನೊರಗಿದ ರಥದೋಳ್ ॥

ವೃಷಕೇತು: ಅಯ್ಯೋ ಪರಮೇಶ್ವರಾ  ಗಿರಿಜಾ ಮನೋಹರಾ  ಈ ದುರುಳನು ಬಿಟ್ಟ ಶರಗಳಿಂದ ನಾನು ಕೆಟ್ಟೆನಲ್ಲಾ  ಹಾ, ಹಿರಿಯ ಬಳ್ಳಾಪುರವಾಸ ಶ್ರೀ ಸೋಮೇಶಾ ನೀನೇ ಕಾಯಬೇಕೋ ಗೌರೀಶಾ॥

(ವೃಷಕೇತು ಮೂರ್ಛೆ)

ಸಾರಥಿ: ಹೇ ಸ್ವಾಮೀ ಅರ್ಜುನ ಭೂಪಾಲರೇ  ಚರನಾದ ಯನ್ನ ಬಿನ್ನಪವನ್ನು ಚೆನ್ನಾಗಿ ಲಾಲಿಸಿ, ರತ್ನಪುರಿಯ ರಾಜಕುಮಾರನಾದ ತಾಮ್ರಧ್ವಜನು ಶ್ಯಾಮಲಾವತಿಯರಸನಂತೆ ಮುಳಿದು ಸಮರದಲ್ಲಿ ಭೀಮ ವಿಕ್ರಮನಂತೆ ಮೆರೆಯುವ ನಿಮ್ಮ ಕುಮಾರ ವೃಷಕೇತುವನ್ನೂ ಸಹಾ ಹೊಡೆದು ಕೆಡಹಿದ ನೈಯ್ಯ ರಾಜ – ರವಿಸಮತೇಜ ॥

ಕಂದತೋಡಿ

ಹಾ ವೃಷಕೇತು, ಯನ್ನ ಮನ ಹರ್ಷ ಹೇತು
ಕ್ಷೋಣಿಯೋಳ್ ಬಹು ಶೂರನೆಂದೆನಿಸೀ
ರಣದೊಳಗೀಗಂ ॥ದುರುಳನಂ ಕೆಣಕಿ
ಬಳಲಿದೆಯಾ ಮಗನೇ  ಪಾಲಿಸುವರಾರೆನ್ನಾ
ಹಾ  ಶಿವನೇ ತಂದು ತೋರೋ ಕಂದನೆನ್ನಾ ॥

ಅರ್ಜುನ: ಅಯ್ಯೋ ಅಕಟಕಟಾ  ಯಾಗ ಕಾರ‌್ಯ ನಿರ್ವಾಹಕನಾದ ಹೇ ವೃಷಕೇತು  ರಣರಂಗದಲ್ಲಿ ದುರುಳನೊಡನೆ ಮಲೆತು ಯುದ್ಧವಂ ಮಾಡಿ ರಣಧಾತ್ರಿಯಲ್ಲಿ ಮಲಗಿದೆಯೇನಪ್ಪಾ ಪುತ್ರಾ. ನಿಟಿಲಾಂಬಕನಂತೆ ಮೆರೆದಂಥ ನಿನ್ನ ಪಟುತರ ಶಕ್ತಿಯು ಯೇನಾಯಿತೋ ಬಾಲ ! ಧುರವೀರನಾದ ವೃಷಧ್ವಜನನ್ನುಳಿದು ನಾನು ಹೇಗೆ ಬಾಳಲಪ್ಪಾ ಬಭೃವಾಹನಾ – ಬಹು ಸುಂದರಾನನಾ ॥

ಬಭೃವಾಹನ: ಹೇ ತಂದೆ, ಚಾರಕನ ನುಡಿಕೇಳಿ ಈ ರೀತಿ ದುಃಖಿಸಬಹುದೇ, ಹರ ವಿರಂಚಿ ಸುರಪ ದಿಕ್ಪಾಲಕರಾದರೂ ಪರಿಭಂಗಗೊಳಿಸಿ ತಾಮ್ರಧ್ವಜನನ್ನು ಸೆರೆ ಪಿಡಿದು ತರುವ ಧುರ ವಿಜಯನಾದ ಬಭೃವಾಹನನು ನಾನಿರ್ದ ಬಳಿಕಾ. ನೀ ಮರುಗಲೇತಕ್ಕೇ  ಬಿಡು ಬಿಡೈ ತಂದೇ – ಕಳುಹೆನ್ನ ಮುಂದೇ॥

ದರುವು

ಶೂರ ರಾಧೇಯಾ  ತರಳನೇ ನಿನ್ನಾ
ಮರೆಯಲಾರೆನೋ  ಕರುಣಾ ಸಂಪನ್ನಾ ॥

ಮೂರು ಲೋಕದೋಳ್  ಧೀರಾನೆಂದೆನಿಸೀ
ಧುರದೀ ಅರಿಗಳಾ  ಕುಲವಾ ಸಂಹರಿಸೀ ॥

ಚಾರು ತುರಗ ಕೋ  ಸುಗ ಯುದ್ಧ ಬೆಳಸೀ
ಧಾರುಣಿಗೆ ಮಲಗಿದೆ  ಮೂರ್ಛೆ ವಹಿಸೀ ॥

ಅರ್ಜುನ: ಅಯ್ಯೋ ಮಗನೇ ವೃಷಕೇತು ! ಹಿಂದೆ ಭಾರತ ಯುದ್ಧದಲ್ಲಿ ನಿನ್ನ ತಂದೆಯಾದ ಕರ್ಣ ಭೂಪಾಲನನ್ನು, ಯನ್ನಯ ಸೋದನೆಂದು ತಿಳಿಯದೆ, ಕೈಯ್ಯರೆ ಕೊಂದು ನಿನ್ನನ್ನು ಈಗ ಇಲ್ಲಿಗೆ ಕರೆತಂದು ಕಷ್ಠಕ್ಕೀಡು ಮಾಡಿದೆನಲ್ಲೋ  ಬಾಲ, ಮೂರು ಲೋಕದೊಳಗೆಲ್ಲಾ ನೀನೇ ಪರಾಕ್ರಮಶಾಲಿ ಯೆಂದು ಬಿರುದನ್ನು ವಹಿಸಿ, ಧರಣಿಯೋಳ್ ಶತೃಗಳ ಕುಲವನ್ನು ಸಂಹರಿಸಿ, ಯಾಗತುರಗಕ್ಕೋಸುಗ ಯುದ್ಧ ಬೆಳೆಸಿ, ದುರುಳನಿಂದ ಮರವೆಯನ್ನು ವಹಿಸೀ, ಧಾತ್ರಿಯ ಮೇಲೆ ಮಲಗಿದೆಯೇನಪ್ಪಾ ಮಗನೇ – ಹೇಗೆ ಸಹಿಸಲೋ ಈ ವೇದನೆ ॥

ದರುವು

ಹಿಂದೆ ರಣದೊಳೂ  ಯನಗಾಗಿ ಬಹಳಾ
ನೊಂದು ಗೆಲಿದೆಯೋ  ಸರ್ವಕಾರ್ಯಗಳಾ ॥

ಒಂದು ಮರೆಯಲಾರೆನು ಸಾಹಸಗಳಾ
ಕಂದಾ ನಡೆಸೀದೆ  ಸಕಲ ತಂತ್ರಗಳಾ ॥

ಅರ್ಜುನ: ಅಯ್ಯೋ ಕಂದರ್ಪ ಸಮರೂಪನಾದ ಹೇ ಕಂದಾ ಹಿಂದೆ ಭದ್ರಾವತಿಯ ರಾಜನಾದ ಯೌವನಾಶ್ವನನ್ನು ಜೈಸಿ ಕುದುರೆಯನ್ನು ತಂದು ಯಾಗ ಮಾಡಲು ಸಹಾಯಕನಾದೆ ಯೆಲ್ಲೋ ಬಾಲ ! ಅಲ್ಲದೇ ತುರಗ ಬೆಂಬಲಿಗನಾಗಿ ಯನಗೋಸ್ಕರವಾಗಿ ಬಹಳ ಬಳಲಿ ಬಂದು ಸಮರದಲ್ಲಿ ಅನುಸಾಲ್ವ, ನೀಲಧ್ವಜ, ಭೀಷಣ ಮೊದಲಾದವರನ್ನು ಗೆದ್ದು ಬಂದ ನಿನ್ನಯ ಸಾಹಸವನ್ನು ಒಂದಿಷ್ಟು ಮರೆಯಲಾರೆನೋ ಕಂದಾ ! ಮುಂದೆ ಕುದುರೆಯನ್ನು ಬಿಡಿಸಿ ಯಾಗವನ್ನು ನಡೆಸುವರ‌್ಯಾರಪ್ಪಾ ಪುತ್ರಾ – ಸೌಂದರ‌್ಯಗಾತ್ರ ॥

ದರುವು

ನಿನ್ನ ಮುಖ ಕಮ  ಲವನೆಂತು ಮರೆವೇ
ಇನ್ನು ಮರೆಯಲಾ  ರೆನು ಕಲ್ಪತರುವೇ ॥

ಯನ್ನ ಜನನಿಗೇ  ಯೇನೆಂದು ಪೇಳ್ವೆ
ಚನ್ನ ಸೋಮೇಶನ  ಒಲುಮೆ ತಪ್ಪಿರುವೇ ॥

ಅರ್ಜುನ: ಅಯ್ಯ ಪುತ್ರಾ ! ನಿನ್ನ ಮುಖ ಕಮಲವನ್ನು ಕಾಣದೆ ಹೇಗೆ ಬಾಳಲಿ  ಯನ್ನ ತನುಜನೇ ಬಾಯೆಂದು ಪ್ರೀತಿಯಿಂದ ಧಾರನ್ನು ಕರೆಯಲಿ. ಅಯ್ಯೋ ಯನ್ನ ಇಷ್ಠಾರ್ಥ ಸಿದ್ಧಿಯಾದ  ಕಲ್ಪತರುವೇ ! ನಿನ್ನನ್ನು ಮರೆತು ಅನ್ಯರನ್ನು ಆಶ್ರಯಿಸಿ ನಾನೆಂತು ಬದುಕಲಿ ಕಂದಾ ! ನಿನ್ನನ್ನು ಅಕ್ಕರೆಯಿಂದ ಸಲಹುತ್ತಿದ್ದ ಯನ್ನ ಮಾತೆ ಕುಂತಿದೇವಿಗೆ ಏನೆಂದು ಹೇಳಲೋ ಮಾರಸಮ ರೂಪಾ! ಅಲ್ಲದೇ ಹಿಂದೆ ಚಕ್ರವ್ಯೆಹದಲ್ಲಿ ಅಭಿಮನ್ಯುವು ಮಡಿದ ನಂತರ ನಮ್ಮ ವಂಶೋದ್ಧಾರಕನೆಂದು ಬಹಳವಾಗಿ ನಿನ್ನನ್ನೇ ನಂಬಿ ಪ್ರೀತಿಸುತ್ತಿದ್ದ ದ್ರೌಪದೀ, ಸುಭದ್ರೆಯರಿಗೆ ಹೇಗೆ ಮುಖ ತೋರಿಸಲೋ ಮಗುವೇ, ಅಯ್ಯೋ, ಗಿರಿಜಾ ಮನೋಹರಾ ! ಈ ಧರೆಗೆ ಅಧಿಕವಾಗಿ ಮೆರೆಯುವ ಹಿರಿಯ ಬಳ್ಳಾಪುರವಾಸ, ಗಿರಿಜಾ ಪ್ರಾಣನಾಥ ! ಶ್ರೀ ಸೋಮನಾಥನೇ, ನಿನ್ನಯ ಕರುಣಕಟಾಕ್ಷವು ಈ ವೇಳೆಯಲ್ಲಿ ಇಲ್ಲವಾಯಿತೇ ಕುಸುಮ ಶರವೈರೀ – ತ್ರಿಪುರ ಸಂಹಾರಿ ॥

ದರುವು

ಬಿಡು ಬಿಡು ಬಿಡು ಚಿಂತೆಯಾ  ಕೇಳೈಯ್ಯ ಜನಕಾ
ಕೊಡು ಬೇಗ ಯನಗೆ ಅಭಯಾ ॥

ಪೊಡವಿಪಾಲ ಮಯೂರ ಕೇತುವು
ಪಡೆದ ಸುಕುಮಾರಕನ ದುರುಳನಾ ॥
ಕಡುಜವದಿ ಸಂಹರಿಸಿ ನಾನೂ
ಸಡಗರದಿ ಯಾಗಾಶ್ವ ತರುವೆನೂ
ಬಿಡು ಬಿಡು ಬಿಡು ಚಿಂತೆಯಾ ॥

ಬಭೃವಾಹನ: ಅಹೋ ! ಪೊಡವಿಗೊಡೆಯನಾದ ಜಡ ಜಾಯತಾಕ್ಷನ ಭಾವನವರಾದ ಹೇ ತಂದೆಯೇ ಲಾಲಿಸಿ. ದುಡುಕುತನದಿಂದ ನಮ್ಮಯ ತುರಗವನ್ನು ಪಿಡಿದು ಕಟ್ಟಿ ನಮ್ಮ ಸೇನೆಯನ್ನು ಪರಾಭವ ಮಾಡಿರುವ ಆ ಪೊಡವಿಪ ಮಯೂರಧ್ವಜನ ಸುತನಾದ ಜಡಮತಿ ತಾಮ್ರಧ್ವಜನನ್ನು ಸಮರದಲ್ಲಿ ಶರಗಢಣಗಳಿಂದ ಪೊಡವಿಗೆ ಕೆಡಹಿ ಯಾಗಾಶ್ವವನ್ನು ಗಢಣಿಸಿ, ಪಿಡಿದು ತಡ ಮಾಡದೆ ತಂದು ನಿಮ್ಮ ಅಡಿದಾವರೆಗೆ ಒಪ್ಪಿಸುವೆನು. ಕಡು ಜವದಿಂದ ಯನಗೆ ಅಪ್ಪಣೆಯನ್ನು ದಯಪಾಲಿಸಬೇಕೈಯ್ಯ ಜನಕಾ – ಸೋಮಕುಲತಿಲಕಾ ॥

ದರುವು

ಸೃಷ್ಠಿಗೊಡೆಯನಾಗಿಹ
ಭ್ರಷ್ಠನೂ  ಮಯೂರ ಧ್ವಜನ ಪುತ್ರನಾ ॥
ನಿಟ್ಟು ಸಮರದಿ ಸೂರೆಗೊಂಬೆನೂ ॥
ಜ್ಯೇಷ್ಠ ಹರಿಹರ ಬರಲು ನಾನೂ
ದುಷ್ಠ ತಾಮ್ರಧ್ವಜನ ಬಿಡೆನೂ  ಬಿಡು ಬಿಡು ಬಿಡು ಚಿಂತೆಯಾ ॥        ॥

ಬಭೃವಾಹನ: ಹೇ ಜನಕಾ ! ಸೃಷ್ಠಿಪಾಲಕನಾದ ಭ್ರಷ್ಠ ಮಯೂರಧ್ವಜನು ದಿಟ್ಟತನದಿಂದ ಪಾಲಿಸುವ ರತ್ನಪುರಿ ಪಟ್ಟಣವನ್ನು ಕ್ರೂರ ನಾರಾಚಗಳಿಂದ ಸುಟ್ಟು, ಕರಿ ತುರಗ ಪದಾತಿ ಮೊದಲಾದ ಸೇನೆ ಸಮೂಹದಿಂದ ಧಾಳಿಯನಿಟ್ಟು ಸೂರೆಗೊಳ್ಳುವೆನಲ್ಲದೇ, ರಣರಂಗದಲ್ಲಿ ಆ ದುಷ್ಠ ತಾಮ್ರಧ್ವಜನ ಬೆಂಬಲಕ್ಕೆ ದೃಷ್ಠಿ ಮೂರುಳ್ಳವನೇ ಆಗಲೀ, ಜ್ಯೇಷ್ಠಪಿತ, ಪರಮೇಷ್ಠಿಗಳು ಬಂದರೂ ಬಿಡದೆ ಕೆಟ್ಟ ಶರಗಳನ್ನು ತೊಟ್ಟು ಆ ಭ್ರಷ್ಠನನ್ನು ಬಹು ಕಷ್ಠಪಡಿಸಿ ಸೃಷ್ಠಿಗೊರಗಿಸುವೆನು ಸೃಷ್ಠಿಪತಿಯೇ ಯನ್ನ ದಿಟ್ಟ ಪೌರುಷ ನೀ ತಿಳಿಯೇ ॥

ದರುವು

ಹಿರಿಯ ಬಳ್ಳಾಪುರದಾ  ಅಂತ್ಯದಿ ನೆಲೆ
ಸಿರುವ ಶ್ರೀ ಸೋಮೇಶನಾ ॥
ಕರುಣದಿಂದಲಿ ದುರುಳನವನನೂ
ಶರಗಳಿಂದಲಿ ತರಿದು ಶಿರವನೂ
ಪರಮ ಹರುಷದಿ ಬಂದು ನಿಮ್ಮಯಾ
ಚರಣಕೆರಗುವೆನೈಯ್ಯ ಜನಕಾ
ಬಿಡು ಬಿಡು ಬಿಡು ಚಿಂತೆಯಾ ॥ ॥

ಬಭೃವಾಹನ: ಹೇ ತಂದೆಯೇ, ಈ ಧರಣಿಗಧಿಕವಾಗಿ ಮೆರೆಯುವ ಹಿರಿಯ ಬಳ್ಳಾಪುರವಾಸ ಶ್ರೀ ಸೋಮೇಶನ ಚರಣಾರವಿಂದದ ಕರುಣ ಸಹಾಯದಿಂದ ಧರಣಿ ಪಾಧಮನ ಸುತ ದುರ ಹೇಡಿ ತಾಮ್ರಧ್ವಜನ ಶಿರವನ್ನು ಸಮರಾಂಗಣದಲ್ಲಿ ಶರಸಂಧಾನದಿಂದ ಪರಿಭಂಗಿಸಿ ಭಂಗಪಡಿಸುವೆನಲ್ಲದೇ ನಾಲಿಗೆಯನ್ನು ಕಿತ್ತು ಅಂಗವಂ ಸಿಗಿದು, ಸಮರ ಭೂಮಿಯೋಳ್ ಓಡಾಡುತ್ತಿರುವ ಭೂತಗಣಂಗಳು ತಂಡೋಪತಂಡವಾಗಿ ಉಂಡು ಸಂತೋಷಪಡುವಂತೆ ಮಾಡಿ ಜಯೋತ್ಸಾಹದಿಂದ ಜಯಲಕ್ಷ್ಮಿಯ ಕರ ಪಿಡಿದು ಬರುವೆನಾದ ಕಾರಣ ಅತಿ ತ್ವರಿತದಿಂದ ಯನಗೆ ನೇಮವನ್ನು ದಯಪಾಲಿಸೈ ಜನಕನೇ – ಇನ್ನು ಬಿಡು ಮನದ ಯೋಚನೇ ॥

ಕಂದಾರ್ಧರೇಗುಪ್ತಿ ರಾಗ

ಉರಗ ರಾಜನ ಕುವರೀ  ಉಲೂಪಿಯ ಸುಕುಮಾರ
ಧುರದೊಳು ಅಸಮವೀರ  ನೀ ಬಹು ಶೂರಾ ॥
ನರನ ಮೋಹದ ಕುಮಾರ  ಅರಿಜನ ಭಯಂಕರಾ
ಅರುಣಧ್ವಜನ ಸಮರದಿ ಜೈಸಲೂ ॥
ಹೋಗಿಬಾರೈಯ್ಯ  ಸಮರಕೆ ನೀನೂ
ಪೋಗಿ ಬಾರೈಯ್ಯ ॥
ದುರುಳ ತಾಮ್ರಧ್ವಜನಾ  ಧುರದೊಳು ಜೈಸುತಾ
ಪರಮ ಸಂತೋಷದಿಂ  ತೆರಳಿ ಬಾರೈಯ್ಯ ಮಗುವೇ
ಪೋಗೈಯ್ಯ ನೀನೂ  ಅನುವರಕೀಗಾ
ಸುಕುಮಾರ ನೀನೂ ॥

ಅರ್ಜುನ: ಹೇ ಮಗುವೇ ! ಬಭೃವಾಹನ ! ಈ ದಿನದ ಸಮರದಲ್ಲಿ ಯನ್ನ ದುರವೀರ ತರಳನನ್ನು ಮರವೆಗೊಳಿಸಿರುವ ದುರುಳ ತಾಮ್ರಧ್ವಜನನ್ನು ಪರಿವಾರ ಸಮೇತ ನೀ ಪೋಗಿ ಪೊಸ ಮಸೆಯ ವಿಶಿಖಾಯುಧಂಗಳಂ ವಶವರ್ತಿಗೊಂಡು ನಸುನಗುತ ಪೋಗಿ ಆ ಭ್ರಷ್ಠ ವಸುಮತೀಶನ ಅಸುವಳಿಸಿ, ತುರಗವನ್ನು ಬಿಡಿಸಿಕೊಂಡು ವಿಜಯೋತ್ಸಾಹದಿಂದ ಬಾರಪ್ಪಾ ಕುವರಾ – ನೀ ಬಹು ಶೂರ ॥

(ಬಭೃವಾಹನ ಯುದ್ಧಕ್ಕೆ ಬರುವಿಕೆ)

ಬಭೃವಾಹನ: ಯಲೋ ದುರುಳ ತಾಮ್ರಧ್ವಜ ! ನಮ್ಮ ಯಾಗದ ಕುದುರೆಯನ್ನು ಬಂಧಿಸಿ, ಅರಿಯದ ಸಹೋದರ, ಭಾವಂದಿರನ್ನು ಮರವೆಗೊಳಿಸಿ ದುರಹಂಕಾರದಿಂದ ಮೆರೆಯುತ್ತಿರುವ ನಿನ್ನನ್ನು ತ್ರಿದಶಾಧೀಶ್ವರರ ಮರೆಹೊಕ್ಕರೂ ಬಿಡದೆ ಸಂಹರಿಸುವೆನು, ಜಾಗ್ರತೆ ಕದನಕ್ಕಿದಿರಾಗಿ ಬಾರೋ ತರಳಾ – ಸುರಿಸುವೆನೀಗ ಸರಳಾ

ದರುವು

ಧಾರು ಪೇಳೋ ತರಳನೇ ನೀನೂ  ನರಪಾಲನ್ಯಾರು
ಧರಣಿಯೊಳಗೆ ನಿನ್ನ ಪಡೆದನೂ॥ ॥

ತಾಮ್ರಧ್ವಜ:ಯಲಾ ತರಳಾ, ನೀನು ಧಾರು ? ನಿನ್ನ ಪೆಸರೇನು ? ಧಾರುಣಿಯೊಳು ನಿನ್ನ ಪಡೆದ ಭೂಪಾಲಕನ್ಯಾರು ? ಭರದಿಂದ ಯನ್ನೊಳು ಪೇಳೋ ತರಳಾ – ಕತ್ತರಿಸುವೆ ಕೊರಳಾ ॥

ದರುವು

ಧಾರು ಆದೊಡೇನು ? ಕೇಳೆಲಾ  ರಣರಂಗದೊಳಗೆ
ಧುರವಗೈದು ಯನ್ನ ನೋಡೆಲಾ॥ ॥

ಬಭೃವಾಹನ: ಯಲಾ ! ತಾಮ್ರಧ್ವಜಾ ! ಈ ಧಾತ್ರಿಯಲ್ಲಿ ಮೂರು ಲೋಕದ ಗಂಡನೆನಿಸಿಕೊಂಡ ಗಾಂಢೀವಿಯ ಸುತ ವೀರ ಬಭೃವಾಹನನಾದ ಯನ್ನನ್ನು ಧಾರೆಂದು ಪರಮಾಪ್ತನಂತೆ ಗುರುತು ನೆಲೆ ವಿಚಾರಿಸುವುದಕ್ಕೆ ನೀನ್ಯಾರು ? ದುರಕ್ಕನುವಾಗಿ ನಿಲ್ಲಲಾರದೆ ಯನ್ನೊಳು ಹಿತವನ್ನು ಬೆಳೆಸುವೆಯಾ ಅಧಮಾ – ನೋಡೆನ್ನ ಪರಾಕ್ರಮಾ ॥

ದರುವು

ಬಿಡು ಬಿಡೆಮ್ಮ ಜನಕನಶ್ವವಾ  ಇಲ್ಲದಿರೆ ನಂ
ಮ್ಮೊಡನೆ ಮಾಡು ಬೇಗ ಸಮರವಾ ॥

ಬಭೃವಾಹನ: ಯಲಾ, ಕಡು ಮೂರ್ಖ ! ದುಡುಕಿನಿಂದ ನೀನು ಪಿಡಿದು ಕಟ್ಟಿರುವ ಕುದುರೆಯನ್ನು ಕಡುಗಲಿಯಾದ ಯಮ್ಮ ಜನಕನಿಗೆ ತಂದೊಪ್ಪಿಸು. ಇಲ್ಲವಾದರೆ ಕಡು ಜವದಿ ಘುಡಿ ಘುಡಿಸುವ ಶರಗಳನ್ನು ಬಿಡುವೆನು. ಸಮರಕ್ಕೆ ನಿಲ್ಲೊ ಮೂಢ – ಕೊಡು ಕಾಳಗವ  ಗಾಢ ॥

ದರುವು

ಯಲವೋ ದುರುಳ ನೀನು ಕೇಳೆಲಾ
ಬಲವಂತರೊಳಗೇ
ಛಲವು ಯಾಕೆ ಹಿಂದೆ ಪೋಗೆಲಾ॥ ॥

ತಾಮ್ರಧ್ವಜ: ಯಲಾ ಬಭೃವಾಹನ ! ಲೇಶವಾದರೂ ಭಯವಿಲ್ಲದೇ ತರಳ ಭಾಷೆಗಳನ್ನಾಡುತ್ತಾ ಇದ್ದೀಯೇ ! ಬಲವಂತರೊಡನೇ ನಿನ್ನ ಪೌರುಷವೇನು ಸಾಗುತ್ತೆ. ಈ ಸಮರವು ನಿನಗೆ ಬೇಡ, ಸುಮ್ಮನೆ ಹಿಂದಕ್ಕೆ ಹೋಗುವಂಥವನಾಗೋ ಹೇಡಿ – ಕುಲಗೇಡಿ ॥

ದರುವು

ಪೋಗುವೆನೋ ಧೂರ್ತ ಈ ಕ್ಷಣಾ
ಸಂಗ್ರಾಮದೊಳಗೇ
ಸಿಗಿದು ನಿನ್ನ ಶರದಿ ತಕ್ಷಣಾ॥ ॥

ಬಭೃವಾಹನ: ಯಲಾ ಧೂರ್ತ. ಮದಕರಿ ಕುಲದ ಆರ್ಭಟಕ್ಕೆ ಕೇಸರಿಯು ತಾ ಬೆದರಬಲ್ಲದೇ, ನಿನ್ನಯ ಡಂಭಾಚಾರಕ್ಕೆ ಸಂಗ್ರಾಮ ಧುರೀಣನಾದ ಬಭೃವಾಹನ ಹೆದರುವನೇ. ಈಗ ಕಾಲಾಗ್ನಿಯಂತೆ ಕಿಡಿಗಳನ್ನು ಉಗುಳುವ ಬಾಣವನ್ನು ಬಿಟ್ಟು ನಿನ್ನನ್ನು ಸಿಗಿದು ಪ್ರಾಣಹರಣವನ್ನು ಮಾಡಿದ ಬಳಿಕಾ ಹೋಗುವೆನಲ್ಲದೇ ನಿನ್ನ ಅತ್ಯಲ್ಪವಾದ ಬೆದರಿಕೆಗೆ ನಾನು ಹೋಗುವೆನೇನಲಾ ಭಂಡಾ – ನಾ ನಿನ್ನ ಮಿಂಡಾ ॥

ದರುವು

ಸಿಗಿದು ಪ್ರಾಣ ಹರಣ ಮಾಡಲೂ
ದುರಾತ್ಮ ಯನ್ನ
ಸಾಗದು ಪರಮೇಶನೇ ಬರಲೂ ॥

ತಾಮ್ರಧ್ವಜ: ಯಲಾ ಮೂರ್ಖ, ತರಳನೆಂದು ಸುಮ್ಮನೆ ಕೈ ತಡೆದು ಇದ್ದರೆ ನನ್ನ ಪ್ರಾಣ ಹರಣ ಮಾಡುತ್ತೇನೆಂದು ಹೇಳುತ್ತೀಯಾ ಭ್ರಷ್ಠಾ ! ಈ ಸಮರ ಭೂಮಿಯೊಳಗೆ ಯನ್ನ ಪ್ರಾಣವನ್ನು ನೀಗಿಸಲು ನೀನೊಬ್ಬನಲ್ಲ, ಸೀರೆಯನುಟ್ಟು ಬಳೆಯನ್ನು ತೊಟ್ಟ ನಿಮ್ಮಪ್ಪನೇ ಬರಲೀ, ಕಪಾಲ ಧರಿಸಿ ಭಿಕ್ಷೆ ಬೇಡಿದ ಪರಶಿವನೇ ಬರಲೀ, ಅದು ನಿನ್ನಿಂದ ಸಾಗದೋ ಖೂಳಾ – ನಂತರ ನೋಡು ನಿನ್ನ ಗೋಳಾ ॥

ದರುವು

ಪರಶಿವನೂ ಶರವ ಕೊಟ್ಟಿಹಾ  ಯನ್ನಯ ಪಿತಗೇ
ದುರುಳನೇ ನೀ ಜರಿಯುತಿರುವೆ ಹಾ ॥

ಬಭೃವಾಹನ: ಯಲಾ ದುರುಳಾ ! ಹಿಂದೆ ಇಂದ್ರಕೀಲ ಪರ್ವತದಲ್ಲಿ ಕಠೋರತರಮಾದ ತಪವನ್ನಾಚರಿಸಿ, ಕುಸುಮ ಶರವೈರಿಯೊಡನೆ ಮಾರ‌್ಮಲೆತು ಯುದ್ಧವಂ ಮಾಡಿ ಆತನಂ ಮೆಚ್ಚಿಸಿ ಶಸ್ತ್ರಾಸ್ತ್ರಗಳನ್ನು ಪಡೆದಿರುವ ತ್ರೈಜಗದ್ಗಂಡ ಪಾರ್ಥನ ಕುಮಾರ ಕಂಠೀರವನಾದ ಯನ್ನನ್ನು ಜರಿಯುವ ನಿನ್ನ ನಾಲಿಗೆಯನ್ನು ಸೀಳಿ ಬಿಸುಡುವೆನೋ ಭ್ರಷ್ಠಾ ಪರಮ ಪಾಪಿಷ್ಠ ॥

ದರುವು

ಜರಿಯದೆ ನಿನ್ನ ಬಿಡುವೆನೇನಲಾ
ಧುರದೊಳಗೆ ತಂದೆ
ಶಿರವ ಹರಿದ ಪಾಪಿ ನೀನಲಾ ॥

ತಾಮ್ರಧ್ವಜ: ಯಲಾ ಖುಲ್ಲ, ದುರುಳ ಬುದ್ಧಿಯಿಂದ ಮೆರೆಯುವುದು ಸರ್ವಥಾ ನ್ಯಾಯವಲ್ಲ. ದುರದಲ್ಲಿ  ಹೋರಾಡಲು ಪರಮ ಶಕ್ತಿವಂತನೂ ನೀನಲ್ಲ, ಅಲ್ಲದೇ ಹಿಂದಿನ ಸಮರದಲ್ಲಿ ತಿಳಿದೂ ತಿಳಿದೂ, ನಿನ್ನ ತಂದೆಯ ಶಿರವನ್ನು ತರಿದಂಥ ಪಾಪಿಯಾದ ನಿನ್ನನ್ನು ಜರಿಯದೆ ಬಿಡುವೆನೇ, ಅತಿ ಜಾಗ್ರತೆ ಕಾಳಗಕ್ಕೆ ಬಿಲ್ಲೊ ದುರುಳಾ – ಸಿಗಿಯುವೆ ಕರುಳಾ ॥

ದರುವು

ಕೇಳು ಕೇಳು ತಾಮ್ರಧ್ವಜನೇ  ಬಿಡು
ಜಾಳು ಮಾತುಗಳ ಮೂರ್ಖನೇ ॥
ಖೂಳನೆ ನಿನ್ನಯ ತೋಳು ತೊಡೆಗಳಾ
ಕಾಳಗದೊಳು ನಾಂ  ಸೀಳಿ ಬಿಡುವೆನೂ  ಕೇಳು ಕೇಳು ॥               ॥

ಬಭೃವಾಹನ: ಯಲಾ ಭ್ರಷ್ಠನಾದ ತಾಮ್ರಧ್ವಜನೇ ಕೇಳು  ಜಾಳು ಮಾತುಗಳನ್ನಾಡುವುದು ತರವಲ್ಲ. ಇಳೆಯೊಳಗ್ಗಳೆಯನಾದ ಯನ್ನೊಡನೆ ಘಳಿಲನೆ ಕಾಳಗಕ್ಕೆ ಒದಗಿ ಬಾರೋ ದುರಾತ್ಮ ॥ಭಲಾ, ದಳವೆಲ್ಲಾ ಬಳಸಿ ಕವಿದು ನಿನ್ನ ತೋಳು ತೊಡೆಗಳನ್ನು ಮುರಿದು ಘಳಿಲನೇ ಇಳೆಗೆ ತುಳಿದು ಬಿಡುವೆನೋ ಭಂಡಾ – ನಾ ನಿನ್ನ ಮಿಂಡಾ ॥

ದರುವು

ಹೆಚ್ಚು ನುಡಿಯದಿರು ಮೂರ್ಖನೇ  ನಿನ್ನ
ಕೊಚ್ಚಿ ಕೆಡಹುವೆನು ಭ್ರಷ್ಠನೇ ॥
ತುಚ್ಛ ನಿನ್ನ ಶರ ಖಡ್ಗದಿ ಶಿರವನೂ
ನುಚ್ಚು ನೂರಾಗಿ ಕತ್ತರಿಸುವೆನೂ ॥

ತಾಮ್ರಧ್ವಜ: ಯಲಾ ಬಭೃವಾಹನ ! ಹೆಚ್ಚಿದ ರೋಷದಿಂ ಕಿಚ್ಚಿನಂತೆ ಕಿಡಿಗೆದರಿ ಹುಚ್ಚು ನಾಯಿಯಂತೆ ನಿನ್ನಿಚ್ಛಾನುಸಾರವಾಗಿ ಬೊಗುಳಿದ ಮಾತ್ರವೇ, ತುಚ್ಛನಾದ ನಿನ್ನ ಆರ್ಭಟಕ್ಕೆ ದುರವೀರನಾದ ಈ ತಾಮ್ರಧ್ವಜನು ಬೆದರುವನೇ, ಈ ಧರಣಿಗಧಿಕ ಹಿರಿಯ ಬಳ್ಳಾಪುರ ನಿವಾಸ ಶ್ರೀ ಸೋಮೇಶನ ಕರುಣ ಕಟಾಕ್ಷದಿಂದ ಚಿಟಿಲಾರ್ಭಟಿಸುವ ಶರಗಳಿಂದ ನಿನ್ನಯ ಶಿರವನ್ನು ನುಚ್ಚು ನೂರಾಗಿ ಕತ್ತರಿಸಿ ಕೊಚ್ಚಿ ಕೆಡಹುವೆನೋ ಮೂರ್ಖ ಇನ್ನು ಬಿಡು ಯನ್ನೊಳು ತರ್ಕ ॥

(ಉಭಯರ ಯುದ್ಧಬಭೃವಾಹನನ ಪರಾಭವ)