ದರುವು

ಭ್ರಷ್ಠ ತಾಮ್ರಧ್ವಜನ ಶರಘಾತಿನಿಂದಾ
ಕಷ್ಠವು ಬಂದೊದಗಿತು ಯನಗೆ ಹಾ ಕೃಷ್ಣಾ ಮುಕುಂದಾ ॥
ಸೃಷ್ಠಿಯೊಳೆನ್ನಂ ರಕ್ಷಿಸಿ ಕಾಯೋ
ದೃಷ್ಠಿ ಮೂರುಳ್ಳ ಗಿರಿಜೆಯರಸಾ  ಶ್ರೀ ಸೋಮೇಶಾ ॥

ಬಭೃವಾಹನ: ಅಯ್ಯೋ ಜಗಧೀಶ್ವರಾ ತ್ರಿಪುರ ಸಂಹಾರ ! ಹಿಂದಿನ ಸಮರಾಂಗಣದಲ್ಲಿ ಜಯಶೀಲನಾಗಿ ಖ್ಯಾತಿಯನ್ನು ಹೊಂದಿದ ನಾನು ಈಗ ಈ ತರಳನ ಶರಘಾತಿಗೆ ಬಹಳ ನೊಂದವನಾಗಿ ಶರೀರವು ಕುಂದಿ ನಿತ್ರಾಣವಾಗಿದೆಯೆಲ್ಲೋ ಮನಸಿಜಾಂತಕಾ ! ಅಕಟಕಟಾ ! ಈ ಧರೆಗೆ ಅಧಿಕವಾಗಿ ರಾರಾಜಿಸುವ ಹಿರಿಯ ಬಳ್ಳಾಪುರವಾಸನಾದ ಸೋಮನಾಥನೇ, ಈ ಸಮಯದಲ್ಲಿ ನಿನ್ನ ಕೃಪಾಕಟಾಕ್ಷವನ್ನು ಯನ್ನಲ್ಲಿ ಬೀರಿ ಯನ್ನನ್ನು ಸಲಹಬೇಕೋ ಗಿರಿಜೇಶಾ – ಶ್ರೀ ಸೋಮೇಶಾ ॥

(ಬಭೃವಾಹನನ ಮೂರ್ಛೆ)

ಸಾರಥಿ: ಹೇ ಸ್ವಾಮಿ ರೂಢಿಪಾಲ ! ಅರ್ಜುನ ಭೂಪಾಲ  ಕೂಡಿದ ಪಡೆಯಲ್ಲಿ ಕಾಡಾನೆಯು ಕದಳೀತರುಗಳನ್ನು ಮುರಿಯುವಂತೆ ತಾಮ್ರಧ್ವಜನು ಬಹು ರೋಷಾವೇಶದಿಂದ ಕಾದಾಡಿ ನಿಮ್ಮ ಮೋಹದ ಸುಕುಮಾರನಾದ ಬಭೃವಾಹನ ಯುವರಾಜರನ್ನೂ ಸಹ ದುರದಲ್ಲಿ ಪರಾಭವಗೊಳಿಸಿದನೈಯ್ಯ ಅರ್ಜುನ ಭೂಪಕೀರ್ತಿ ಕಲಾಪ ॥

ಅರ್ಜುನ: ಭಲಾ ಸಾರಥಿ ! ಈ ಧಾತ್ರಿಯಲ್ಲಿ ಧುರವೀರನಾದ ಬಭೃವಾಹನನೂ ಸಹ ದುರುಳನೊಡನೆ ಸೆಣಸಿ ರಣಧಾತ್ರಿಯೋಳ್ ಪರಾಭವ ಹೊಂದಿ ಮಲಗಿದನೇ, ಅಯ್ಯೋ ಕಷ್ಠ ವದಗಿದಂತಾಯಿತೇ ಇಷ್ಠಕ್ಕೂ ದೃಷ್ಠಿ ಮೂರುಳ್ಳ ಸೋಮನಾಥನು ಈಗಿನ ವೇಳೆಯಲ್ಲಿ ಯಮ್ಮನ್ನು ಕೈಬಿಟ್ಟು ಇರುವನು. ಇನ್ನು ಚಿಂತಿಸಿ ಫಲವಿಲ್ಲಾ, ಈಗಲೇ ಉಳಿದ ಸೇನಾ ನಾಯಕರನ್ನು ಕಳುಹಿಸಿ ಆ ತಾಮ್ರ ಧ್ವಜನನ್ನು ಕುಟ್ಟಿ ಕುಟ್ಟಿ ಕೋಲಾಹಲವಂ ಮಾಡುವೆನೈಯ್ಯ ಚಾರ ಬರಹೇಳು ಸೇನಾಧಿಪರಾ ॥

(ನೀಲಧ್ವಜ ಯುದ್ಧಕ್ಕೆ ಬರುವಿಕೆ)

ನೀಲಧ್ವಜ: ಯಲವೋ ತಾಮ್ರಧ್ವಜ ! ದುರುಳ ಬುದ್ಧಿಯಿಂದ ಮೆರೆಯುವುದು ನಿನಗೆ ಸರಿಯಲ್ಲಾ. ಸಮರದಲ್ಲಿ ಹೋರಾಡಲು ಶೌರ‌್ಯವಂತನೂ ನೀನಲ್ಲಾ ! ಆದಕಾರಣ ಯಾಗದ ಕುದುರೆಯನ್ನು ತಡೆಯದೆ ವಿನಯದಿಂದ ತಂದು ನಮ್ಮೊಡೆಯನಿಗೆ ಒಪ್ಪಿಸಿ ಶರಣಾಗತನಾಗೋ ದುರುಳಾ – ಸಿಗಿಯುವೇ ಕರುಳಾ ॥

ತಾಮ್ರಧ್ವಜ: ಭಲಾ ಎಂಥಾ ತಿರಸ್ಕಾರದ ಮಾತನಾಡಿದೆಯೋ ಧರಣಿಪಾಧಮನೇ “ಗುಢಪರ್ವತ ಮಧ್ಯಸ್ತಂ ನಿಂಬ ಬೀಜ ಪ್ರತಿಷ್ಠಿತಃ  ಕ್ಷೀರ ಕುಂಭ ಸಹಸ್ರಾಣಿ ನಿಂಬಕಂ ಮಧುರಾಯಂತೇ’ ಎಂಬ ಹಾಗೆ ಅರಿಗಳಿಗೆ ಶರಣಾಗತರಾಗುವುದಕ್ಕೆ ನಾವೇನು ಧುರಹೇಡಿಗಳಲ್ಲ. ಧುರಕ್ಕನುವಾಗಿ ಪಾರ್ಥನೆಂಬ ಸಾಮಜವೇ ಬರಲಿ. ಸ್ತೋಮವಾದ ಕೇಸರಿಯಂತೆ ನಿಂತು ಬಾಣಮುಖದಿಂದ ಗೋಣ ತರಿವೆನೋ ಅಧಮಾ ನೋಡೆನ್ನ ಪರಾಕ್ರಮಾ ॥

ದರುವು

ಭಳಿರೇ ದುರುಳ ಬಾರೋ  ಕೊಳು
ಗುಳಕೆ ಬೇಗ ಸಾರೋ
ಭಾಲಾ ಭಲರೇ ಭ್ರಷ್ಠ ನಿನ್ನನೂ
ಘಳಿಲನಿಳೆಗೆ ತುಳಿವೆನೀಗಾ ॥ಹೇ ಬಾರೋ ॥

ನೀಲಧ್ವಜ: ಯಲಾ ದುರುಳನಾದ ತಾಮ್ರಧ್ವಜನೇ ಕೇಳು ನಮ್ಮೊಡನೆ ಸರಿಸರಿ ಕಾದುವ ಸಾಮರ್ಥ್ಯ ನಿನಗಿದ್ದರೆ ಅತಿ ಜಾಗ್ರತೆ ದುರಕ್ಕೆ ನಿಲ್ಲು. ಘುಡಿ ಘುಡಿಸುವ ಕಡು ರೌದ್ರಮಾದ ನಾರಾಚಗಳನ್ನು ಬಿಟ್ಟು ಇಳೆಗೆ ಘಳಿಲನೇ ತುಳಿವೆನು ಬಾರೋ ಖೂಳಾ – ನಂತರ ನೋಡು ಗೋಳಾ ॥

ದರುವು

ಬಿಡುವೆ ಬಾಣವನ್ನಾ  ಇದ
ತಡೆದುಕೊಳ್ಳೋ ಮುನ್ನಾ ॥
ಜಡಮಲೆ ನಿನ್ನೊಡಲ ಸೀಳಿ
ಪೊಡವಿ ದೇವಿಗೆ ಬಲಿಯ ಕೊಡುವೇ ॥ಹೇ ಬಾರೋ॥ ॥

ತಾಮ್ರಧ್ವಜ: ಯಲಾ ಕಡು ದುರುಳಾ ಈ ಪೊಡವಿಯಲ್ಲಿ ಕಡು ಭಯಂಕರವಾಗಿ ಕಿಡಿಯಿಡುವ ಶರಗಢಣವನ್ನು ಬಿಟ್ಟು ಜಡಮತಿಯಾದ ನಿನ್ನೊಡಲ ಸೀಳಿ ಈ ಪೊಡವಿದೇವಿಗೆ ಆಹುತಿ ಕೊಡುವೆನೋ ಭ್ರಷ್ಠಾ ಪರಮ ಪಾಪಿಷ್ಠಾ ॥

ದರುವು

ಭ್ರಷ್ಠನೇ ತುರಗವನೂ  ನೀ
ಕಟ್ಟಿಸಿರುವೆ ಇದನೂ ॥
ಸೃಷ್ಠಿಕರ್ತ ನಿದಿರು ಬರಲೂ
ದುಷ್ಠ ನಿನ್ನ ನಷ್ಠಗೊಳಿಪೇ ॥ಬಾರೋ ॥

ನೀಲಧ್ವಜ: ಯಲಾ ದುಷ್ಠ ತಾಮ್ರಧ್ವಜಾ, ಕುದುರೆಯನ್ನು ಬಿಡದೆ ಕಟ್ಟಿ ಇಷ್ಠು ತುಚ್ಛವಾದ ಮಾತುಗಳನ್ನಾಡಲು ನಿನ್ನನ್ನು ಬಿಟ್ಟು ಹೋಗುವೆನೇ  ಸೃಷ್ಠಿಕರ್ತನಾದ ಜ್ಯೇಷ್ಠನು ನಿನಗೆ ಯುದ್ಧದಲ್ಲಿ ಬೆಂಬಲವಾಗಿ ಬಂದಾಗ್ಯೂ ಕರಮುಷ್ಠಿಗಳಿಂದ ಪೆಟ್ಟುಗಳನ್ನಿಟ್ಟು ದುಷ್ಠನಾದ ನಿನ್ನನ್ನು ಹುಟ್ಟಡಗಿಸಿ ನಷ್ಠಗೊಳಿಸುವೆನೋ ಭಂಡಾ – ನಾ ನಿನ್ನ ಮಿಂಡ ॥

ದರುವು

ಹಿರಿಯ ಬಳ್ಳಾಪುರದಾ  ವರ
ಗೌರಿಯರಸನಾದಾ ॥
ಪರಮಶಿವನಾ ದಯವು ನಿನಗೇ
ದುರದಿ ಇಲ್ಲ ಒರಗು ಧರೆಗೇ  ಬಾರೋ ॥

ತಾಮ್ರಧ್ವಜ: ಯಲವೋ ನೀಲಧ್ವಜಾ ! ಈ ಧರೆಯಲ್ಲಿ ಅತಿಶಯವಾಗಿ ಮೆರೆಯುವ ಹಿರಿಯ ಬಳ್ಳಾಪುರ ನಿವಾಸ ಶ್ರೀ ಸೋಮೇಶನ ದಯವು ಈ ದಿನದ ಸಂಗ್ರಾಮದಲ್ಲಿ ನಿನಗಿಲ್ಲವಾದ್ದರಿಂದ ಇನ್ನೇನು ಮುಖಗೆಟ್ಟು ಹೋದೆ. ಈಗ ಶರ ಸಂಧಾನ ಮಾಡಿರುವ ಕೂರ್ಗಣೆಗಳನ್ನು ಉದರದ ಮೇಲೆ ತಾಗಿಸಿಕೊಂಡು ಧರೆಗೊರಗೋ ಮೂರ್ಖ – ಬಿಡು ಯನ್ನೊಳು ತರ್ಕ ॥

(ಉಭಯರ ಯುದ್ಧನೀಲಧ್ವಜನ ಪರಾಭವೆ)

ದರುವು

ಕರುಣಾಕರ ಪರಶಿವನೇ  ದುರುಳ ತಾಮ್ರಧ್ವಜನಾ
ಶರವು ದೇಹದೊಳಗೆ ತಾಕಿ  ಸುರಿಯುತಿದೆ ಹಾ ರುಧಿರಾ ॥

ಹಿರಿಯ ಬಳ್ಳಾಪುರವ ಪೊರೆವ  ಹರನೆ ಸೋಮೇಶ್ವರನೇ
ಮರವೆ ತಾಳಿ ಧರೆಗೊರಗಿದೆ  ಪೊರೆಯೋ ಯನ್ನನು ಶಿವನೇ          ॥

ನೀಲಧ್ವಜ: ಅಯ್ಯೋ, ಶಿವ ಶಿವಾ ! ಗಿರಿಜಾ ಮನೋಹರಾ ! ಈ ದುಷ್ಠ ಬಾಲಕನು ನೆಟ್ಟನೇ ಬಿಟ್ಟ ಕೆಟ್ಟ ಶರಗಳ ಪೆಟ್ಟಿನಿಂದ ಕೆಟ್ಟಿನೆಲ್ಲೋ ಬೆಟ್ಟದೊಡೆಯ. ಹೇ, ಹಿರಿಯ ಬಳ್ಳಾಪುರ ನಿವಾಸ ಕಾಯಬೇಕೋ ಸೋಮೇಶಾ ॥

(ನೀಲಧ್ವಜನ ಮೂರ್ಛೆ)

(ಯೌವನಾಶ್ವ ಯುದ್ಧಕ್ಕೆ ಬರುವಿಕೆ)

ಯೌವನಾಶ್ವ: ಯಲೌ ತರಳಾ ಈ ರಣ ಭೂಮಿಯಲ್ಲಿ ಕಾಲರುದ್ರನಂತೆ ಸರಳ ಸುರಿಸಿ ನಿನ್ನನ್ನು ಘಾತಿಸಿ ಧರಣಿಗೊರಗಿಸುವೆನು ನಿಲ್ಲೋ ಅಧಮಾ. ನೋಡೆನ್ನ ಪರಾಕ್ರಮಾ॥

ದರುವು

ಬಾರೋ ಬಾರೋ ತರಳ ನಿನ್ನಾ
ಧುರದಿ ಯನ್ನ ಬಲ್ಮೆ ತೋರಿ
ಪೋರನಡಗಿಸುವೆನು ಬಾರೋ  ತಾಮ್ರಕೇತು ॥ ॥

ಯೌವನಾಶ್ವ: ಯಲಾ ತಾಮ್ರಧ್ವಜಾ ! ತರತರವಾದ ಕರಶರಗಳೆಲ್ಲವನ್ನೂ  ಸುರಿಸಿ ಯುದ್ಧದಲ್ಲಿ ಗರಗರಯೆಂದು ತರಿದು ನಿನ್ನ ಪೋರನಡಗಿಸಿ ಧರಣಿಯ ಮೇಲೆ ಉರುಳಿಸುವೆನು ಬಾರೋ – ಶೌರ‌್ಯ ತೋರೋ ॥

ದರುವು

ನಿಲ್ಲೋ ನಿಲ್ಲೋ ದುರುಳ ಭೂಪ
ಖುಲ್ಲ ವಚನ ಪೇಳ್ವೆ ಯಾಕೆ
ಹಲ್ಲು ಮುರಿವೆ ರಣಕೆ ನಿಲ್ಲೋ  ಯೌವನಾಶ್ವ ॥ ॥

ತಾಮ್ರಧ್ವಜ: ಯಲಾ ಯೌವನಾಶ್ವ ! ಖುಲ್ಲ ವಚನಗಳಿಂದಲಿ ಪಲ್ಕಿರಿದು ಪರಿಪರಿಯಾಗಿ ಮಾತನಾಡಿದೆ ಯಾದರೆ ಪುಲ್ಲ ಶರವೈರಿಯ ಪಾದಪಲ್ಲವದಾಣೆಯಾಗಿಯೂ ನಿನ್ನಯ ಹಲ್ಲು ಮುರಿದು ರಣಭೂಮಿಗೆ ಚಲ್ಲು ಬಿಡುತ್ತೇನೆ  ಕಡುಗಲಿಯಾದರೆ ನಿನ್ನ ಪರಾಕ್ರಮವನ್ನು ತೋರೋ ಖುಲ್ಲ – ಅಡಗಿಸುವೆ ನಿನ್ನ ಸೊಲ್ಲ ॥

ದರುವು

ಯಾತಕಿಂತು ಬೊಗಳುತಿರುವೇ
ಖ್ಯಾತಿಯಿಂದಾ ಶರವನೆಸೆದೂ
ಘಾತಿಸುವೆನೋ ಸಮರದೊಳಗೆ  ತಾಮ್ರಕೇತು॥ ॥

ಯೌವನಾಶ್ವ: ಯಲಾ ತಾಮ್ರಧ್ವಜಾ ! ಈ ರಣ ಧಾರುಣಿಯಲ್ಲಿ ಶಸ್ತ್ರಧಾರಿಯಾಗಿ ನಿಂತು ಸುರಪದಿಕ್ಪಾಲಕರು ಮೆಚ್ಚುವಂತೆ ಬಿಂಕದಿಂದ ನುಡಿಯುತ್ತಾ ಇದ್ದೀಯಾ ॥ಇಂಥಾ ತುಚ್ಛ ಮಾತುಗಳನ್ನು ಬೊಗಳಿದ್ದೇ ಆದರೇ ಚಿಟಿಲಾರ್ಭಟಿಸುವ ಬಾಣಗಳನ್ನು ಬಿಟ್ಟು ಖ್ಯಾತಿಯಿಂದಲಿ ಘಾತಿಸುವೆನು. ತಡೆದುಕೊಳ್ಳೆಲೋ ತಾಮ್ರಕೇತು – ನಿಲ್ಲಿಸು ತುಚ್ಛಮಾತು ॥

ದರುವು

ಧರೆಗೆ ಹಿರಿಯಾ ಬಳ್ಳಾಪುರದೀ
ಗರಳ ಧರಿಸೀ ಸುರರ ಸಲಹೀ ॥
ಮೆರೆವ ಹರನಾ ದಯದಿ ತರಿವೇ  ಯೌವನಾಶ್ವ ॥ ॥

ತಾಮ್ರಧ್ವಜ: ಯಲಾ ಯೌವನಾಶ್ವ, ಹಿಂದೆ ಕ್ಷೀರ ಸಾಗರ ಮಥನಕಾಲದಲ್ಲಿ ಗರಳವು ಪುಟ್ಟಿ ಲೋಕವಂ ಸುಡುತ್ತಿರಲು, ಗರಳವಂ ಪಾನ ಮಾಡಿ ಸುರರನ್ನು ಸಲಹಿದ ಹಿರಿಯ ಬಳ್ಳಾಪುರವಾಸ ಶ್ರೀ ಸೋಮೇಶನ ಕರುಣದಿಂದ ಅರಿಗಳ ಅಸುಗಳನ್ನು ಅಂತಕನಿಗೆ ವಶವರ್ತಿ ಮಾಡಿದ ಅಸಮಶರವನ್ನು ಬಿಟ್ಟು ಇದ್ದೇನೆ. ಇನ್ನು ನೀನು ಉಸುರುಳಿಸಿಕೊಂಡು ವಸುಧೆಯ ಮೇಲೆ ಹೇಗೆ ಜೀವಿಸುವೆಯೋ ನೋಡುವೆನು ಭ್ರಷ್ಠನೇ – ಪರಮ ಪಾಪಿಷ್ಠನೇ ॥

ಭಾಗವತರ ದರುವು

ನಿಂದು ಅಮರರು ಶಿರವ ತೂಗಲೂ
ಚಂದದಿಂ ಶರ ತರಳ ಬಿಡಲೂ
ಅಂದು ಭದ್ರಾವತಿಯ ರಾಜನು  ನೊಂದು ಮೂರ್ಛೆಯೊಳೂ ॥

ತಾಮ್ರಧ್ವಜ: ಯಲಾ ಧರಣಿಪಾಧಮನೇ ! ಈ ನಿಶಿತ ನಾರಾಚದಿಂದ ನಿನ್ನ ಗರ್ವವನ್ನು ಮುರಿದು ಈ ರಣಭೂಮಿಯಲ್ಲಿರುವ ಹಿಂಡು ಭೂತಂಗಳು ಉಂಡು ಸಂತೋಷಪಡುವಂತೆ ಮಾಡದೆ ಹೋದರೆ ತಾಮ್ರಧ್ವಜನೆಂಬ ಪೆಸರು ಇನ್ಯಾಕೆ ? ಅತಿ ಜಾಗ್ರತೆ ಸಮರಕ್ಕೆ ನಿಲ್ಲೋ ದುರುಳಾ – ಕತ್ತರಿಸುವೆ ಕೊರಳಾ ॥

(ಉಭಯರ ಯುದ್ಧಯೌವನಾಶ್ವ ಪರಾಭವ)

ದರುವು

ಕೆಟ್ಟೆನೂ ಶಿವನೇ ನಾ ರಣದೀ  ಆಹಾ ಧುರದೀ ॥ ॥

ದುಷ್ಟ ತರಳನ ಬಾಣ  ನೆಟ್ಟು ದೇಹದೊಳಿನ್ನೂ
ತೊಟ್ಟಿಡುತಿದೆ ರುಧಿರಾ  ಎಷ್ಠು ತಡೆಯಲಿನ್ನೂ ॥ಕೆಟ್ಟೆನೂ ಶಿವನೇ     ॥

ದಿಟ್ಟ ತಾನಾಗಿರಲೂ  ಭ್ರಷ್ಠ ಅರುಣಧ್ವಜನೂ
ಕಷ್ಠಾಪಡಿಸಿದನೆನ್ನಾ  ಸೃಷ್ಠಿಗೀಶನೇ ಕಾಯೋ ॥ಕೆಟ್ಟೆನೂ ಶಿವನೇ     ॥

ಯೌವನಾಶ್ವ: ಅಯ್ಯೋ ಹರಹರಾ ! ದುಷ್ಟ ತಾಮ್ರಧ್ವಜನ ಶರಘಾತಿಯಿಂದ ನಾನು ಕೆಟ್ಟೆನೆಲ್ಲೊ ತ್ರಿಪುರ ಹರಾ, ಹೇ ಹಿರಿಯ ಬಳ್ಳಾಪುರವರಾಧೀಶ್ವರಾ  ಗಿರಿಸುತೇ ಪ್ರಾಣೇಶ್ವರಾ  ಪರಶಿವನಾದ ಶ್ರೀ ಸೋಮೇಶ್ವರಾ  ಈ ಸಮಯದಲ್ಲಿ ಯನಗೆ ದೊರಕಿರುವ ಕಷ್ಠವನ್ನು ನೀನೇ ಪರಿಹರಿಸಿ ಕಾಯಬೇಕೋ ಹರನೇ – ಭಸ್ಮಾಂಗಧರನೇ ॥

(ಯೌವನಾಶ್ವನ ಮೂರ್ಛೆ)

(ಹಂಸಧ್ವಜ ಯುದ್ಧಕ್ಕೆ ಬರುವಿಕೆ)

ಹಂಸಧ್ವಜ: ಎಲೈ ಖೂಳನಾದ ತಾಮ್ರಧ್ವಜನೇ ನಿಲ್ಲು ನಿಲ್ಲು

ದರುವು

ಭ್ರಷ್ಠಾ ತಾಮ್ರಧ್ವಜನೇ  ನಷ್ಠಾಪಡಿಸುವೆ ನಿನ್ನಾ
ಸೃಷ್ಠೀಗೀಶನ ದಯದೀ  ಕುಟ್ಟುವೆನೋ ಮೂರ್ಖ ॥ ॥

ಹಂಸಧ್ವಜ: ಯಲಾ ಭ್ರಷ್ಠಾ  ನಿನಗಿಷ್ಠು ಅಹಂಕಾರವು ಬಂತೇ, ಭಲಾ ಭಲಾ, ಸೃಷ್ಠಿಗೀಶನ ದಯದಿಂದ ಥಟ್ಟನೇ ಬಾಣವನ್ನು ಬಿಟ್ಟು ನಿನ್ನನ್ನು ನಷ್ಠಪಡಿಸಿ ಕುಟ್ಟಿ ತರುಬುವೆನೋ ಮೂರ್ಖ – ಬಿಡು ಯನ್ನೊಳು ತರ್ಕ ॥

ದರುವು

ಅಂದು ನಾಲ್ವರು ಸುತರ  ಚಂದದಿಂ ಸಂಹರಿಸೀ
ಬಂದವರ ಜೊತೆ ನಿನಗೇ  ಅಂದವೇ ಮೂರ್ಖ॥ ॥

ತಾಮ್ರಧ್ವಜ: ಯಲಾ ಹಂಸಧ್ವಜಾ, ಹಿಂದಿನ ಸಮರದಲ್ಲಿ ನಿನ್ನ ಮೋಹದ ಸುಕುಮಾರರ ಶಿರಗಳನು ತರಿದು ಧರೆಗೀಡಾಡಿದಂಥವರ ಜೊತೆಯಲ್ಲಿ ಬಂದಿರುವ ನೀನು ಮೂರ್ಖನೋ ಅಥವಾ ನಾನೋ, ಚೆನ್ನಾಗಿ ತಿಳಿದು ನೋಡೋ ಭಂಡಾ – ಅಡಗಿಸುವೆ ನಿನ್ನ ಪುಂಡಾ ॥

ದರುವು

ಹಿಂದಣದ ಮಾತ್ಯಾಕೇ  ಇಂದು ನಿಲ್ಲಲೋ ಧುರಕೇ
ಇಂದುಧರ ಬರೆ ನಿನ್ನಾ  ಕೊಂದು ಬಿಸುಡುವೆನೂ ॥

ತಾಮ್ರಧ್ವಜ: ಯಲಾ ತರಳಾ ! ಇಂದು ಸಮರವನ್ನು ಮಾಡುವುದು ಬಿಟ್ಟು ಹಿಂದಿನ ಪ್ರಸಂಗಗಳು ನಿನಗ್ಯಾತಕ್ಕೋ ಷಂಡಾ ! ಈ ವಸುಧೆಗೆ ಪೊಸತೆನಿಸಿ ಎಸೆಯುವ ಹಿರಿಯ ಬಳ್ಳಾಪುರವಾಸ ಶ್ರೀ ಸೋಮನಾಥನು ನಿನಗೆ ಸಹಾಯವಾಗಿ ಬಂದರೂ ಬಿಡದೇ ನಿನ್ನನ್ನು ಸಂಹರಿಸುವೆನೋ ತರಳಾ – ಕತ್ತರಿಸುವೆನು ಕೊರಳಾ ॥

ದರುವು

ದುರುಳಾ ಕ್ಷಿತಿ ಪಾಲಕನೇ  ದುರದೊಳಗೆ ನಿನ್ನನ್ನೂ
ಶಿರವಾ ತರಿದೂ ಧರೆಗೆ  ಒರಗಿಸುವೆ ನಿನ್ನಾ ॥

ತಾಮ್ರಧ್ವಜ: ಯಲಾ ಧರಣಿಪಾಧಮ ! ಬರಿಯ ಮಾತುಗಳನ್ನಾಡಿ ಬಳಲುವೆ ಯಾಕೋ ಭ್ರಷ್ಠಾ, ಈಗಲೇ ಶರ ಸಂಧಾನವನ್ನು ಮಾಡಿ ಶಿರವನ್ನು ತರಿದು ನಿನ್ನನ್ನು ಧರೆಗೆ ಒರಗಿಸುವೆನು. ಜಾಗ್ರತೆ ಯುದ್ಧಕ್ಕೆ ನಿಲ್ಲೋ ಅಧಮಾ – ನೋಡೆನ್ನ ಪರಾಕ್ರಮಾ ॥

(ಉಭಯರ ಯುದ್ಧಹಂಸಧ್ವಜ ಪರಾಭವ)

ಹಂಸಧ್ವಜ: ಅಯ್ಯೋ ಅಕಟಕಟಾ  ಈ ಭ್ರಷ್ಠ ತಾಮ್ರಧ್ವಜನು ಬಿಟ್ಟ ಬಾಣವು ಯನ್ನ ಹೊಟ್ಟೆಗೆ ನಾಟಿ ರುಧಿರವು ತೊಟ್ಟಿಡುತ್ತಿದೆಯೆಲ್ಲೋ ಶಿವ ಶಿವಾ. ಈ ಸಮಯದಲ್ಲಿ ಯನ್ನ ಕಷ್ಠವನ್ನು ನೀನೇ ಪರಿಹರಿಸಿ ಕಾಯಬೇಕೋ ಶಿವನೇ – ಕಂದನ ಕಾಯ್ದವನೇ ॥

(ಹಂಸಧ್ವಜನ ಮೂರ್ಛೆ)

(ಅನುಸಾಲ್ವ ಯುದ್ಧಕ್ಕೆ ಬರುವಿಕೆ)

ಅನುಸಾಲ್ವ: ಎಲೈ, ಖೂಳನಾದ ತಾಮ್ರಧ್ವಜನೇ ನಿನ್ನಯ ಮದಗರ್ವವನ್ನು ಮುರಿಯುತ್ತೇನೆ. ಯುದ್ಧಕ್ಕೆ ನಿಲ್ಲೋ ಮೂಢ ॥

ದರುವು

ಸಾಲ್ವನನುಜನೆ ಯನ್ನನೀಗಲೇ
ಸುಲಭವಲ್ಲವೋ ಧುರದಿ ಗೆಲ್ಲಲು
ಕಾಲ ಬಂದರೂ ಸೋಲುವೆನೆ ನಾ  ಜಾಳು ಮಾತ್ಯಾಕೇ॥ ॥

ಅನುಸಾಲ್ವ: ಯಲಾ ತರಳಾ  ಸಾಲ್ವನ ಸಹೋದರನಾದ ಯನ್ನ ಸಂಗಡ ಸಮರವನ್ನಪೇಕ್ಷಿಸಿ, ಕಾಲನು ಬಂದರೂ ಅಸಾಧ್ಯವಾಗಿರುವಲ್ಲೀ, ಬಾಲಕನಾದ ನಿನ್ನ ಪರಾಕ್ರಮವು ಏನು ನಡೆದೀತು ? ಆದಕಾರಣ ತುರಗವನ್ನು ಬಿಟ್ಟು ಯನಗೆ ಶರಣಾಗತನಾಗಬಾರದೇನೋ ತರಳ ಮುರಿಯುವೆ ನಿನ್ನ ಕೊರಳಾ ॥

ದರುವು

ರಣವ ನಿನ್ನೊಳು ಜೈಸದಿರ್ದರೇ
ಅಣುಗನೆಂದೆನಿಸುವೆನೆ ಪಿತನಿಗೇ
ಕಣೆಯನೆಸೆಯುತ ಬಲಿಯ ಕೊಡುವೆನು  ಗೋಣನು ತರಿದೂ ॥

ತಾಮ್ರಧ್ವಜ: ಯಲೌ ಅನುಸಾಲ್ವ, ಹಿಂದೆ ಯನ್ನೊಡನೆ ಸೆಣಸಲು ಬಂದವರ ಪಾಡೆಲ್ಲಾ ಏನಾಯಿತು ಎಂಬುದು ತಿಳಿಯದೆ ಕಾಳಗಕ್ಕೆ ಬಂದಿರುವೆಯಾ ಮೂರ್ಖ. ಈ ದಿನದ ರಣರಂಗದಲ್ಲಿ ಯನ್ನಯ ಶರ ಸಮೂಹಕ್ಕೆ ನಿನ್ನ ಗೋಣ ತರಿದು ಬಲಿಯ ಕೊಡದಿರ್ದರೇ ನಾನು ಕ್ಷತ್ರಿಯನೆನಿಸಬೇಕೆ ? ಅಲ್ಲದೇ ಮಯೂರಧ್ವಜಸುತ ವೀರ ತಾಮ್ರಧ್ವಜನೆನಿಸಬೇಕೆ ? ಅತಿ ಜಾಗ್ರತೆ ಧುರಕ್ಕೆ ನಿಲ್ಲೋ ಭ್ರಷ್ಠಾ – ಪರಮ ಪಾಪಿಷ್ಠ ॥

ದರುವುತ್ರಿವುಡೆ

ತುಚ್ಛ ಮಾತುಗಳ್ಯಾಕೆ ಬೊಗಳುವೇ
ಕೊಚ್ಚಿ ಬಿಸುಡುವೆ ಸಮರದೊಳಗೇ
ಹುಚ್ಚ ಕುದುರೆಯ ಚೋರ ನಿನ್ನನು  ಮೆಚ್ಚನಾ ಹರನೂ ॥

ಅನುಸಾಲ್ವ: ಯಲೌ ಕುದುರೆಯ ಚೋರನಾದ ತುಚ್ಛ ತಾಮ್ರಧ್ವಜನೇ ಕೇಳು ! ಹಿರಿಯ ಬಳ್ಳಾಪುರ ವಾಸನು ಮೆಚ್ಚುವಂತೆ ನಿನ್ನನ್ನು ರಣದಲ್ಲಿ ಕೊಚ್ಚಿ ನುಚ್ಚು ನೂರಾಗಿ ಮಾಡಿ ಭೂತಗಣಂಗಳು ಉಂಡು ಸಂತೋಷಪಡುವಂತೆ ಮಾಡುವೆನು ಸಮರಕ್ಕೆ ನಿಲ್ಲೋ ಹೋರಾ – ಕುದುರೆಯ ಚೋರ ॥

ದರುವು

ಕುಂತಿ ತನಯರ ಯಾಗದಶ್ವವಾ
ಪಿಂತೆ ನೀ ಕದ್ದೊಯ್ದ ಚೋರನೇ
ಕಂತು ವೈರಿಯ ದಯದಿ ಪೇಳಲೋ  ಎಂತು ನಾ ಚೋರಾ॥ ॥

ಹಿರಿಯ ಬಳ್ಳಾಪುರದಿ ನೆಲೆಸಿದಾ
ಗರಳ ಕಂಧರ ಸೋಮಧರನಾ
ಕರುಣದಿಂದಲೀ ಶರವನೆಸೆಯುವೆ  ಒರಗು ಧಾರುಣಿಗೇ॥ ॥

ತಾಮ್ರಧ್ವಜ: ಯಲವೋ ರಾಕ್ಷಸಾಧಮಾ, ಹಿಂದೆ ಪಾಂಡವರು ಯಾಗಾಶ್ವವನ್ನು ಪೂಜೆಗೈಯುತ್ತಿರುವ ವೇಳೆಯಲ್ಲಿ ಮೋಸದಿಂದ ತುರಗವನ್ನು ಅಪಹರಿಸಿದ ಚೋರನು ನೀನಾಗಿರುವಲ್ಲಿ, ಕ್ಷಾತ್ರ ಧರ್ಮದಂತೆ ಕುದುರೆಯನ್ನು ಕಟ್ಟಿ ಕಾದುವ ನಾನು ಚೋರನೇನೋ ದುರುಳಾ. ಹಿರಿಯ ಬಳ್ಳಾಪುರವಾಸ ಗರಳ ಕಂಧರ ಸೋಮಧರನ ಕರುಣ ಕಟಾಕ್ಷದಿಂದ ಶರಸಂಧಾನವನ್ನು ಮಾಡಿ ಬಿಡುವೆನು. ಇನ್ನು ಪ್ರಾಣವನ್ನು ನೀಗಿ ಧರೆಗೆ ಒರಗುವಂಥವನಾಗೋ ದಾನವಾ – ಕತ್ತರಿಸುವೆ ನಿನ್ನ ದೇಹವಾ ॥

(ಉಭಯರ ಯುದ್ಧಅನುಸಾಲ್ವ ಪರಾಭವ)

ಕಂದತೋಡಿ ರಾಗ

ಹರಹರಾ ಶಿವನೇ ನಾನೆಂತು ಸೈರಿಸಲೀ
ದುರುಳ ತಾಮ್ರಧ್ವಜನ ಬಾಣಘಾತಿನಲೀ
ಉರುತರದ ಬಾಧೆಯಿಂದ ನಾ ಬಳಲೀ
ಶರೀರವು ಕುಂದಿದೆ ಕರುಣಿಸಿ ಕಾಯೋ ಶೂಲೀ ॥ ॥

ಅನುಸಾಲ್ವ: ಅಯ್ಯೋ ಹರಹರಾ, ಈ ಮೂರ್ಖ ಬಾಲಕನ ಶರಘಾತಿಗೆ ಯನ್ನ ದೇಹವು ಕುಂದಿ, ಉರುತರದ ಬಾಧೆಯಿಂದ ಬಳಲುತ್ತಿರುವೆನಲ್ಲೋ ತ್ರಿಪುರಾಂತಕಾ ಹೇ ಹಿರಿಯ ಬಳ್ಳಾಪುರ ವರಾಧೀಶ, ಅಂಬಿಕಾ ಪ್ರಾಣೇಶ, ಈ ಸಮಯದಲ್ಲಿ ಯನಗೆ ಬಂದಿರುವ ಕಷ್ಠವನ್ನು ನೀನೆ ಪರಿಹರಿಸಿ ಕಾಯಬೇಕೋ ಜಗದೀಶ್ವರಾ – ಶ್ರೀ ಸೋಮೇಶ್ವರಾ॥

(ಅನುಸಾಲ್ವನ ಮೂರ್ಛೆ)

ಸಾರಥಿ: ಹೇ ಸ್ವಾಮಿ ಅರ್ಜುನ ಭೂಪಾಲನೇ ದುರುಳ ತಾಮ್ರಧ್ವಜನು ಸಮರದೊಳಗೆ ಅನುಸಾಲ್ವನನ್ನು ಕೆಡಹಿ ಶರವರ್ಷವಂಗರೆದು ಸೇನೆ ಪರಿವಾರವೆಲ್ಲವಂ ಬರಿಗೈದು ಬಿಟ್ಟನೈಯ್ಯ ದೊರೆಯೇ ಆ ತರಳನ ಪರಾಕ್ರಮವ ನೀನರಿಯೇ ॥

ಅರ್ಜುನ: ಯಲಾ ಚಾರ ! ದುರಪರಾಕ್ರಮಿಗಳಾದ ಯನ್ನ ಸೇನಾ ನಾಯಕರೆಲ್ಲರನ್ನೂ ಸಮರಾಂಗಣದಲ್ಲಿ ಆ ಖೂಳ ತಾಮ್ರಧ್ವಜನು ಪರಾಭವಗೊಳಿಸಿದನೇ ಭಲಾ ನಾಳಿನ ಯುದ್ಧದಲ್ಲಿ ಆ ತರಳನ ಸಾಹಸವನ್ನು ಮುರಿಯುವೆನು. ಇನ್ನು ನೀನು ಹೊರಡೈಯ್ಯ ಚಾರ – ಗುಣ ಮಣಿಹಾರ॥

ಅರ್ಜುನ: ಹೇ ಸ್ವಾಮಿ ಕೃಷ್ಣಮೂರ್ತಿಯೇ, ಆ ತರಳ ತಾಮ್ರಧ್ವಜನ ದುಷ್ಠತನವನ್ನು ನೋಡಿದೆಯೇನೈಯ್ಯ ಸ್ವಾಮೀ – ಭಕ್ತ ಜನ ಪ್ರೇಮೀ ॥

ದರುವು

ನೋಡೈಯ್ಯ ನೀನೂ  ರುಕ್ಮಿಣೀ ಪ್ರಿಯನೇ ॥
ನೋಡೈಯ್ಯ ನೀನೂ ॥

ನೋಡೈಯ್ಯ ನೀನೀಗಾ  ನಾಡಿನ ದೊರೆಗಳೂ
ಪೊಡವಿಯೊಳಗೆ ಮೂರ್ಛೆ  ಗೂಡಿ ಮಲಗಿರುವುದನೂ ॥ನೋಡೈಯ್ಯ॥    ॥

ಮಾತು: ಹೇ ಭಾವ ವಾಸುದೇವ  ತರಳ ತಾಮ್ರಧ್ವಜನೊಡನೆ ಕಾಳಗವನ್ನು ಮಾಡಿ, ಬಾಡಿ ಬಳಲಿ ಬಾಯಾರಿ ಮೂರ್ಛಿತರಾಗಿ ಪೊಡವಿಯಲ್ಲಿ ಮಲಗಿರುವ ನಾಡಾಡಿಯ ದೊರೆಗಳನ್ನೂ ಮತ್ತು ಸೈನ್ಯದ ಪಾಡನ್ನೂ ನೋಡಿದೆಯೇನಯ್ಯ ಶ್ರೀ ಕೃಷ್ಣನೇ ಮುಂದೇನು ಯೋಚನೇ