ದರುವು

ವರ ಚಿತ್ರಾಂಗದ ತನಯಾ  ಶೂರ ಕರ್ಣಜರನ್ನೂ
ಧುರವೀರ ಅನಿರುದ್ಧ  ಮಾರ ಸಾತ್ಯಕಿಯರನೂ ॥ನೋಡೈಯ್ಯ        ॥

ಮೂಢ ತಾಮ್ರಧ್ವಜನಾ  ಕೂಡೆ ಕೊಳುಗುಳವನ್ನೂ
ಮಾಡಿ ಬಳಲಿ ಈಗಾ  ಪೊಡವೀಗೊರಗಿರುವುದನೂ  ನೋಡೈಯ್ಯ    ॥

ಅರ್ಜುನ: ಹೇ ರುಕ್ಮಿಣೀಪ್ರಿಯಾ – ದೇವಕೀತನಯಾ ! ಮೂಢ ಅರುಣಧ್ವಜನೊಡನೆ ಸಮರವನ್ನು ಗೈದು ಮೂರ್ಛಿತರಾಗಿ ಧರಣಿಗೊರಗಿರುವ ಧುರ ಪರಾಕ್ರಮಿಗಳಾದ ಬಭೃವಾಹನ, ವೃಷಕೇತು, ಪ್ರದ್ಯುಮ್ನ, ಅನಿರುದ್ಧ ಮೊದಲಾದ ಯಾದವ ಸೈನ್ಯದ ಪಾಡನ್ನು ನೋಡಿದೆಯೇನಯ್ಯ ರುಕ್ಮಿಣಿಪತಿ – ಮುಂದೇನು ಗತಿ ॥

ದರುವು

ಹಿರಿಯ ಬಳ್ಳಾಪುರದ  ವರದ ಸೋಮೇಶ್ವರಗೇ
ಶರಣು ಮಾಡುವ ತೆರದೀ  ಮರವೇಗೊಂಡಿರುವರು ॥ನೋಡೈಯ್ಯ ನೀನೂ॥        ॥

ಅರ್ಜುನ: ಹೇ ನಂದ ನಂದನ ! ದುರುಳನನ್ನು ಸದೆ ಬಡಿದು ತುರಗವಂ ತರುವೆವೆಂದು ಬಂದ ಸೇನಾ ನಾಯಕರೆಲ್ಲರ ಕರಗಳಲ್ಲಿ ಪಿಡಿದ ವರ ಸರಳ ಸಮೇತ ಹಿರಿಯ ಬಳ್ಳಾಪುರ ವಾಸ
ಶ್ರೀ ಸೋಮೇಶ್ವರನಿಗೆ ಶರಣು ಮಾಡುವ ರೀತಿಯಲ್ಲಿ ಕರಗಳನ್ನು ಚಾಚಿಕೊಂಡು ಶಿರಬಾಗಿ ಧರೆಯ ಮೇಲೆ ಮರವೆಗೊಂಡಿರುವ ಪರಿಯನ್ನು ನೋಡಿದೆಯೇನೈಯ್ಯ ಹಯವದನಾ – ಮುಂದೇನು ಹದನಾ ॥

ದರುವು

ದುರದ ಮೊದಲೇ ಅರುಹಲಿಲ್ಲವೇ
ದುರಪರಾಕ್ರಮಿ ಈತನೆಂಬುದಾ
ತುರಗ ಬಿಡಿಸಲು ಸುರರಿಗಸದಳಾ  ನರನೇ ನೀನೀಗಾ॥ ॥

ಶ್ರೀಕೃಷ್ಣ: ಹೇ ಪಾರ್ಥ ! ಈ ತಾಮ್ರಧ್ವಜನು ಬಹುಶೂರನೆಂತಲೂ, ದುರಪರಾಕ್ರಮಿಯೆಂತಲೂ, ಅಲ್ಲದೇ ಈತನನ್ನು ಜೈಸಿ ತುರಗವನ್ನು ಬಿಡಿಸುವುದು ಸುರರಿಗೂ ಅಸಾಧ್ಯವೆಂದು ನಾನು ಮೊದಲೇ ಹೇಳಲಿಲ್ಲವೇ ಪಾರ್ಥ – ತ್ರಿಲೋಕ ಸಮರ್ಥ ॥

ದರುವುತ್ರಿವುಡೆ

ಯಾಕೆ ಮಾಡುತಲಿರುವೆ ಯೋಚನೇ
ವಿಕಳಮತಿಯಂದದೊಳು ರಣದೀ
ಸಾಕುತೇಜಿಯ ರಥಕೆ ಬಿಗಿಸಿ  ನ್ನೇಕೆ ಕಳವಳಿಪೆ॥ ॥

ಶ್ರೀಕೃಷ್ಣ: ಹೇ ವಿಜಯ ವಿಕಳಮತಿಯುಳ್ಳವನಂತೆ ರಣಭೂಮಿಯಲ್ಲಿ ಈ ಪರಿ ಯೋಚನೆ ಮಾಡಬಹುದೇ ಧನಂಜಯಾ ! ಇನ್ನು ಯೋಚನೆಯನ್ನು ಬಿಟ್ಟು ಮಣಿರಥಾರೂಢನಾಗಿ ಗಾನವಾದ್ಯ ಭೇರಿ ರವಗಳಿಂದ ಕೂಡಿ ಮಂದಹಾಸದಿಂದ ರಣೋನ್ಮುಖನಾಗೈಯ್ಯ ಧನಂಜಯನೇ – ಬಿಡು ಇನ್ನು ಮನದ ಯೋಚನೆ ॥

ದರುವು

ಹಿರಿಯ ಬಳ್ಳಾಪುರದಿ ಗಿರಿಜೆಯ
ಸೇರಿ ನಲಿಯುವ ಸೋಮನಾಥನಾ
ಕರುಣದಿಂದಲಿ ಧುರವ ಜೈಸೀ  ತುರಗ ಬಿಡಿಸೈಯ್ಯ ॥

ಶ್ರೀಕೃಷ್ಣ: ಹೇ ಫಲುಗುಣ ! ಈ ಧರಣಿಗಧಿಕವಾದ ಹಿರಿಯ ಬಳ್ಳಾಪುರ ವರಾಧೀಶ ಶ್ರೀ ಸೋಮೇಶನ ಕರುಣ ಸಹಾಯದಿಂದ ಕಾಳಗದಲ್ಲಿ ಆ ದುರುಳ ತಾಮ್ರಧ್ವಜನನ್ನು ಜೈಸಿ ತುರಗವನ್ನು ಬಿಡಿಸಿ ಕೀರ್ತಿಪಡೆಯಬೇಕೈಯ್ಯ ಕಿರೀಟಿ – ನಿನಗಾರು ಸಾಟಿ ॥

ಅರ್ಜುನ: ಅದೇ ಪ್ರಕಾರ ಆಗಬಹುದೈಯ್ಯ ವಾಸುದೇವಾ – ತಿಳಿಯಿತು ನಿಮ್ಮ ಮನೋಭಾವ॥

ಯಲಾ ಸಾರಥೀ ! ಯಮ್ಮ ಸೇನಾ ನಾಯಕರೆಲ್ಲರನ್ನೂ ರಣದಲ್ಲಿ ಪರಾಭವ ಗೊಳಿಸಿರುವೆನೆಂದು ಗರ್ವಪಡುತ್ತಿರುವ ಮೂರ್ಖನಾದ ಆ ತಾಮ್ರಧ್ವಜನಲ್ಲಿಗೆ ಅತಿ ಜಾಗ್ರತೆ ಹೋಗಿ ಕೃಷ್ಣಾರ್ಜುನರು ಯುದ್ಧಕ್ಕೆ ಬರುತ್ತಿರುವರೆಂಬ ವಾರ್ತೆಯನ್ನು ತಿಳಿಸಿ ಬಾರೈಯ್ಯ ಚಾರಕಾ – ಯನ್ನ ಆಜ್ಞಾಧಾರಕ ॥

ಭಾಗವತರ ದರುವು

ಪಾಂಡುನಂದನ ಸವ್ಯಸಾಚಿ ಪ್ರ
ಚಂಡ ಶರ ಟೇಂಕಾರದಿಂದಲೀ
ತಾಂಡವದ ಮೃಢನಂತೆ ತಾನು  ದ್ಧಂಡತೆಯಿಂದಾ ॥

ಕದನ ಉನ್ಮುಖನಾದ ನಾಕ್ಷಣಾ
ಮಾಧವನ ಸಾರಥ್ವದಿಂದಲೀ
ಕೆದರಿ ಮುಳಿದಾ ಸುರಪ ತನ್ನಿದಿ  ರಾದ ತೆರನಂತೇ ॥

ಭಾಗವತರ ಕಂದಕೇದಾರ ಗೌಳ

ಗಾಂಢೀವಮಂ ತುಡುಕಿ, ಟಂಕಾರ ಮಂಬುಜ
ಭವಾಂಡಮಂ  ತುಂಬದಿರದೆಂಬಿನಂ  ಜೇಗೈದು
ತಾಂಡವದ ಮೃಡನ ಸಾರೂಪ್ಯಮಂ
ಕೈಗೊಂಡು  ರೋಷ ತಾಮ್ರಾಕ್ಷನಾಗೀ ॥
ಪಾಂಡವಂ ಮಣಿರಥದೊಳೆಸೆವ  ನಡು
ವಗಲ  ಮಾರ್ತಾಂಡನಂತೆ  ಉಜ್ವಲಿಸುತೈದಿದಂ
ಕಾಳಗಕೆ  ಖಾಂಡವ ದಹನದಂದು  ತನ್ನ
ಮೇಲಮರಪತಿ  ಮುಳಿದು ಕದನಕೆ ಬಹವೊಲು॥ ॥

ಭಾಗವತ: ಈ ಪ್ರಕಾರವಾಗಿ ತನ್ನ ಸೇನೆಯೆಲ್ಲಾ ಪರಾಜಿತವಾಗಿ ಮೂರ್ಛೆಯನ್ನೈದಲೂ, ಅರ್ಜುನನು ತಾಂಡವ ಮೂರ್ತಿಯಂತೆ ರೋಷ ತಾಮ್ರಾಕ್ಷನಾಗಿ, ಮಧ್ಯಾಹ್ನ ಮಾರ್ತಾಂಡನೋಪಾದಿಯಲ್ಲಿ ಪ್ರಜ್ವಲಿಸುತ್ತಾ ಖಾಂಡವ ದಹನ ಕಾಲದಲ್ಲಿ ಇಂದ್ರನು ತನ್ನಿದಿರಾಗಿ ಮುಳಿದು ಬಂದಂತೆ ಗಾಂಢೀವವಂ ಜೇಂಗೈದು ಕೃಷ್ಣನೊಡಗೂಡಿ ಕಾಳಗಕ್ಕೆ ಬಂದನೈಯ್ಯ ಭಾಗವತರೇ ॥

(ಶ್ರೀ ಕೃಷ್ಣಾರ್ಜುನರು ಯುದ್ಧಕ್ಕೆ ಬರುವಿಕೆ)

ಅರ್ಜುನ: ಯಲಾ ಸಾರಥೀ, ಕೃಷ್ಣಾರ್ಜುನರು ಕಾಳಗಕ್ಕೆ ಬಂದು ಇದ್ದಾರೆಂದು ಖೂಳ ತಾಮ್ರಧ್ವಜನಿಗೆ ತಿಳಿಸೋ ಸಾರಥೀ – ಸಂಧಾನಮತಿ ॥

ತಾಮ್ರಧ್ವಜ: ಯಲಾ ಸಾರಥೀ ! ತನ್ನ ಕಡೆಯವರಿಗೆಲ್ಲಾ ಅಪಜಯವಾದದ್ದು ಸಹ ಅರಿಯದೆ ತನ್ನೆದುರಾಗಿ  ಬಂದು ನಿಂತಿರುವ ಆ ಶಿಖಂಡಿಯ ಎದೆಯ ಕೆಚ್ಚನ್ನು ಮುರಿಯುವೆನು. ನೀನು ನೋಡುತ್ತಿರುವವನಾಗೈಯ್ಯಿ ಚಾರ – ವರ ಫಣಿಹಾರ ॥

ದರುವು

ದುರುಳ ಕೇಳೆಲಾ  ಅರುಣಕೇತುವೇ
ಧುರದಿ ನಿನ್ನಯಾ  ಶಿರವನರಿಯುವೇ ॥

ಭಾರತ ರಣವಾ  ಅರಿಯಲಿಲ್ಲವೇ
ಕುರುವಂಶವಾ  ತರಿಯಲಿಲ್ಲವೇ ॥

ಅರ್ಜುನ: ಯಲಾ ತಾಮ್ರಧ್ವಜಾ, ಹಿಂದೆ ನಡೆದ ಕುರುಕ್ಷೇತ್ರ ಯುದ್ಧವನ್ನು ಅರಿಯಲಿಲ್ಲವೇ, ದುರುಳಾ ಆ ರಣದಲ್ಲಿ ಕುರುವಂಶವನ್ನೇ ನಿರ್ಮೂಲ ಮಾಡಿ ಮಹಾರಥಿಕರಾದ ಭೀಷ್ಮ ದ್ರೋಣ ಕರ್ಣ ಶಲ್ಯ ಮೊದಲಾದವರ ಅಸುಗಳನ್ನು ಯನ್ನ ಶರಕ್ಕೆ ವಶವರ್ತಿ ಮಾಡಿದ ಅಸಮ ಸಾಹಸ ಧೀರನಾದ ಯನ್ನಯ ಸಂಗಡ ಯುದ್ಧವನ್ನು ಮಾಡಲು ಬಂದಿರುವೆಯಾ ! ಮೂಢ – ಕೊಡು ಕಾಳಗವಗಾಢ ॥

ದರುವು

ಮದನಜನಕನೂ  ಇದ್ದ ಕಾರಣಾ
ಕದನದೊಳಗೆ ನೀ  ಗೆದ್ದೆಯಾಕ್ಷಣಾ ॥

ತಾಮ್ರಧ್ವಜ: ಯಲಾ ಶಿಖಂಡಿ, ಹಿಂದೆ ಮದನಜನಕನಾದ ಶ್ರೀಕೃಷ್ಣನು ನಿನಗೆ ಸಾರಥಿಯಾಗಿದ್ದ ಕಾರಣ ಮಹಾರಥಿಕರನ್ನು ಗೆದ್ದೆಯಲ್ಲದೇ ! ನಿನ್ನ ಸ್ವಸಾಮರ್ಥ್ಯದಿಂದ ಮುನ್ನ ಯಾರನ್ನು ಗೆದ್ದಿರುವೆಯೋ ಅಧಮಾ ನೋಡೆನ್ನ ಪರಾಕ್ರಮಾ ॥

ದರುವು

ಮದನ ತಾತನೂ  ಇದ್ದೆ ಇರುವೆನೂ
ವದಗೊ ಸಮರಕೇ  ಸದೆಯ ಬಡಿವೆನೂ ॥

ಶ್ರೀಕೃಷ್ಣ: ಯಲಾ ತಾಮ್ರಧ್ವಜಾ, ಅಂದು ಅರ್ಜುನನಿಗೆ ಸಾರಥ್ವವನ್ನು ವಹಿಸಿದ ಮದನ ಜನಕನು ಇಂದು ಇದ್ದೇ ಇರುವೆನೂ, ಆತನನ್ನು ಬೆದರಿಸಿ ಬಲು ವದಗಿನಿಂದ ಮಾತನಾಡುತ್ತಿರುವ ನಿನ್ನನ್ನು ತ್ರಿದಶಾಧೀಶ್ವರರ ಮರೆಹೊಕ್ಕರೂ ಬಿಡುವವನಲ್ಲಾ ಜಾಗ್ರತೆ ಕದನಕ್ಕಿದಿರಾಗಿ ಬಾರೋ ತರಳಾ – ಕತ್ತರಿಸುವೆ ಕೊರಳಾ ॥

ಕಂದ

ಹೇ ದೇವಾ ! ಕಟ್ಟಿದೆನರ್ಜುನನ ಹಯವನೂ
ವಾಂಛೆಯುಳ್ಳೊಡೆ ಬಿಡಿಸು  ಪಾಲಿಸು ಕಿರೀಟಿಯಂ
ನೀಂ ಚಕ್ರಮಂ ತುಡುಕು  ಶಾರ್ಙ್ಗಮಂ ಪಿಡಿ
ರಣಕೆ ನಾ ಚಲಿಸೆನು  ಇದೆಯೆನ್ನ ವಾಜಿಯಂ ತಡೆ
ಸತ್ವಮುಳ್ಳೊಡೆ ತರು ಶೌರ‌್ಯವ ಮುಕುಂದಾ ॥

ದರುವು

ಹರಿಯ ಕಟ್ಟಿದೇ  ದುರುಳ ಪಾರ್ಥನಾ
ಹರಿಯೇ ಬಿಡಿಸೋ ನೀ  ಧುರದಿ ಈ ದಿನಾ ॥

ಮುರಹರನೇ ನೀ  ಧರಿಸೋ ಚಕ್ರವಾ
ತುರಗ ಬಂಧಿಸೋ  ತೋರಿ ಶೌರ‌್ಯವಾ ॥

ತಾಮ್ರಧ್ವಜ: ಹೇ ದೇವಾ ಕೃಷ್ಣ ಮೂರ್ತಿಯೇ, ಧೂರ್ತ ಪಾರ್ಥನ ಕುದುರೆಯನ್ನು ಧಾರುಣಿಯಲ್ಲಿ ಕ್ಷಾತ್ರ ಧರ್ಮದಂತೆ ಕಟ್ಟಿರುವೆನು. ನೀನಂಥ ಪರಾಕ್ರಮಿಯಾದರೆ ಚಕ್ರವನ್ನು ಧರಿಸಿ ರಣದಲ್ಲಿ ನಿಂತು ಯನ್ನನ್ನು ಜೈಸಿ ತುರಗವನ್ನು ಬಿಡಿಸಿ ಪಾರ್ಥನನ್ನು ಸಲಹುವುದಲ್ಲದೇ ಯನ್ನ ಯಾಗಾಶ್ವವನ್ನೂ ಸಹ ಕಟ್ಟುವಂಥವನಾಗೋ ಶೌರಿ – ದಾನವಾರಿ ॥

ದರುವು

ಚಂಡ ಶೌರ‌್ಯವಾ  ಭಂಡ ತೋರ್ಪೆನೂ
ಚಂಡಿ ಮಾಡಲೂ  ನಿನ್ನ  ಖಂಡಿಸುವೆನೂ ॥

ಅರ್ಜುನ: ಯಲೋ ಭಂಡಾ ! ಲಂಡು ಹೆಚ್ಚಿ ಕಂಡವರ ಕುದುರೆಯ ಕಟ್ಟಿ ನಾನೇ ಬಲು ಗಂಡುಗಲಿಯೆಂದು ಪುಂಡಾಟವಾಡುವುದು ಉದ್ಧಂಡತೆಯಲ್ಲಾ, ನಿನ್ನ ಮಂಡೆಯನ್ನು ಈ ಶರದಿಂದ ಖಂಡಿಸುವೆನೋ ಷಂಡ – ಅಡಗಿಸುವೆ ನಿನ್ನ ಪುಂಡಾ ॥

ದರುವು

ಬಾರೋ ದುರುಳನೇ  ತೋರೋ ಶೌರ‌್ಯವಾ
ಧುರದಿ ಬಿಡುವೆನೂ  ಕ್ರೂರ ಅಸ್ತ್ರವಾ ॥

ತಾಮ್ರಧ್ವಜ: ಯಲಾ ದುರುಳಾ ! ದೀಪವಂ ಹಾರಿಸುವ ಪತಂಗದ ಹುಳುವಿನಂತೆ ರಾಪು ಮಾಡುವುದು ನೋಡಿ ಪರಮ ಸಂತೋಷವಾಯಿತು. ಭಲಾ, ಚಾಪ ವಿದ್ಯೆಯಲ್ಲಿ ಬಲ್ಲಿದನಾದರೆ ಯನ್ನಿದಿರು ನಿಂತು ನಿನ್ನ ಶೌರ‌್ಯವನ್ನು ತೋರೋ ಖುಲ್ಲ – ಅಡಗಿಸುವೆ ನಿನ್ನ ಸೊಲ್ಲ ॥

ದರುವು

ದುಷ್ಠ ನಿನ್ನನೂ  ಕುಟ್ಟಿ ಕೆಡಹುವೆ
ದಿಟ್ಟತನದೊಳೂ  ಸೃಷ್ಠಿಗೊರಗಿಪೇ ॥

ಶ್ರೀಕೃಷ್ಣ: ಎಲಾ ದುಷ್ಠ ತಾಮ್ರಧ್ವಜಾ ಭ್ರಷ್ಠನಾದ ನಿನ್ನನ್ನು ರಣದೊಳಗೆ ದಿಟ್ಟತನದಿಂದ ಕುಟ್ಟಿ ಕುಟ್ಟಿ ಕೋಲಾಹಲವಂ ಮಾಡಿ ಸೃಷ್ಠಿಗೊರಗಿಸುವೆನೋ ಭ್ರಷ್ಠಾ – ಪರಮ ಪಾಪಿಷ್ಠ ॥

ದರುವು

ಶರವ ಬಿಡುವೆನೂ  ನಿನ್ನ  ಶಿರವ ನರಿವೆನೂ
ದುರುಳ ನಿನ್ನನೂ  ಧರೆಗೆ  ಒರಗಿಸುವೆನೂ ॥

ಅರ್ಜುನ: ಎಲಾ ತರಳಾ ! ಬಾಲಕನ ಮೇಲೆ ಕೈ ಮಾಡಬಾರದೆಂದು ಅರಿತು ಮರ‌್ಯಾದೆಯಿಂದ ಸುಮ್ಮನಿದ್ದರೆ ದುರ್ವಚನಗಳನ್ನಾಡುತ್ತಿರುವೆ. ಇನ್ನು ನಾನು ಸೈರಿಸುವವನಲ್ಲಾ, ಇಗೋ ಯನ್ನ ಕರಶರಗಳಿಂದ ನಿನ್ನ ಉದರವಂ ಕೊರೆದು ಹೊರಕ್ಕೆ ಕಂಡ ಮಾಂಸಗಳನ್ನು ಕಾಣಿಸುವೆನೋ ಬಾಲ – ವದಗಿತು ನಿನಗೆ ಕಡೆಗಾಲ ॥

(ಅರ್ಜುನ ತಾಮ್ರಧ್ವಜರ ಯುದ್ಧತಾಮ್ರಧ್ವಜನ ಪರಾಭವ)

ದರುವು

ನರನ ಬಳಿಗೇ ಕುವರ ಕೋಪದಿಂ
ಬರಲು ಮುರಹರ ಒದೆಯೆ ತವಕದಿ
ಧರೆಗೆ ಬೀಳುತ ಮರಳಿ ಎದ್ದನು  ತರಳನಾಕ್ಷಣದೀ ॥

ಭಾಗವತರು: ಕೇಳಿದರೇನಯ್ಯ ಭಾಗವತರೇ ಈ ಪ್ರಕಾರವಾಗಿ ಅರ್ಜುನನು ತಾಮ್ರಧ್ವಜನ ರಥವನ್ನು ಚೂರ್ಣ ಮಾಡಲು, ಕುವರನು ರೋಷ ಪೂರ್ಣಮುಖನಾಗಿ ಕಲಿ ಪಾರ್ಥನ ಸಮೀಪಕ್ಕೆ ತೂರ್ಣದಿಂದ ಪೋಗುವನಿತರೊಳು ಮುರಹರ ಪಾದಘಾತಿಯಿಂದ ಜೀರ್ಣತರು ಧರೆಗೆ ಬೀಳುವಂತೆ ತರಳನು ಬಿದ್ದು ಪುನಃ ಕೀರ್ಣ ಪ್ರತಾಪದಿಂದೆದ್ದು ಇಂತೆಂದನೈಯ್ಯ ಭಾಗವತರೇ ॥

ಕಂದಕೇದಾರ ಗೌಳ

ಲೇಸಾದುದೈ ಪಾರ್ಥ  ಕೃಷ್ಣನ ಸಹಾಯದಿಂ
ದೀಸು ದಿನಂ  ಆಹವದೊಳೆಲ್ಲರಂ ಗೆಲ್ದೆ ಬಿಡು
ವಾಸಿಯಂ ತನ್ನೊಡನೆ ಗೋತ್ರಹತ್ಯಾದೋಷಮಂ
ಕಳೆದು ಕೊಂಬ ಮಖಕೇ ॥
ಏಸು ಹರಿಗಳ್ಬೇಕು  ನಿನಗೈಸನೀವೆ ನಾ
ನೀ ಸರೋಜಾಕ್ಷನಿರಲೇತಕಲೆ ಮರುಳೇ  ಧನ
ದಾಶೆಯಿಂ ಧರ್ಮಮಂ  ಮಾಣ್ದನಂತಾದೆ
ಪೋಗೈ ಪಾಂಡು ಮಧ್ಯಮನೇ ॥

ತಾಮ್ರಧ್ವಜ: ಹೇ ಪಾರ್ಥ ! ಹಿಂದಿನ ಸಮರಗಳಲ್ಲಿ ಶ್ರೀ ಕೃಷ್ಣನಸಹಾಯದಿಂದ ದುರಪರಾಕ್ರಮಿಗಳನ್ನು ಜೈಸಿರುವ ನಿನ್ನ ಪೌರುಷವನ್ನು ನಾನು ಬಲ್ಲೆ. ಇನ್ನು ಛಲವನ್ನು ಬಿಡು. ಮಲೆತು ನಿಂತರೇ ಬಲಿಯಂ ಕೊಡುತ್ತೇನೆ. ಗೋತ್ರಹತ್ಯಾದೋಷ ನಿವಾರಣಾರ್ಥವಾಗಿ ಮಾಡುವ ಯಾಗಕ್ಕೆ ಎಷ್ಠು ತುರಗಗಳು ಬೇಕು ತೆಗೆದುಕೋ ನಾನು ಕೊಡುವೆನು. ಅಯ್ಯೋ ಮರುಳೇ ಕೃಷ್ಣನಿರುವಾಗ ಧನದಾಶೆಯಿಂದ ಧರ್ಮವನ್ನರಿಯದವನಂತಾಗಿರುವೆಯಾ ಅರ್ಜುನ – ಅತಿ ದುರ್ಜನ ॥

ಕಂದಕೇದಾರಗೌಳ

ಯಲವೋ ತಾಮ್ರಧ್ವಜ  ಸುವಿತ್ತದಿಂ
ಧರ್ಮಮಂ ನಿಲಿಸಬೇಕಲ್ಲದೇ  ನಿರರ್ಥಕ
ದೊಳಾದಪುದೇ, ಜಲಜಾಕ್ಷನಂ ಬರಿದೇ  ಸಾಕ್ಷಾ
ತ್ಕರಿಸಬಹುದೇ  ವಿಧಿ ವಿಧಾನದೊಳಲ್ಲದೇ ॥
ಪಲವು ಮುಖದಿಂದ  ಪರಿಪೂರ್ಣನಾಗಿಹ
ಹರಿಯ ನೆಲೆಯ ನೀನೆಂತರಿವೆ ಮೂಢ
ಫಡ ತೊಲ ತೊಲಗು ಮರುಳಾಟ ಮೇತಕ
ಲ್ಲದಿರೇ  ಘಾತಿಸುವೆನೀಗ ರಣದೋಳ್ ನಿನ್ನಂ ॥

ಅರ್ಜುನ: ಎಲವೋ ತಾಮ್ರಧ್ವಜಾ ! ಅರ್ಥಮಿಲ್ಲದ ಧರ್ಮ ನಿರರ್ಥಕವೆಂಬುದನ್ನು ನೀನು ಅರಿತಿರುವೆಯಾ ಭ್ರಷ್ಠಾ. ಅಲ್ಲದೇ ಹಲವು ಯಾಗದಿಂ ಪರಿಪೂರ್ಣನಾಗಿಹ ಶ್ರೀ ಕೃಷ್ಣನ ಮಹಿಮೆಯು ನಿನಗೇನು ತಿಳಿದಿರುವುದೋ ಮೂರ್ಖ. ಜಾಗ್ರತೆ ಯಮ್ಮ ತುರಗವನ್ನು ಬಿಟ್ಟು ತೊಲಗು, ಇಲ್ಲವಾದರೇ ಯನ್ನ ಕ್ರೂರನಾರಾಚಗಳಿಗೆ ನಿನ್ನನ್ನು ಆಹುತಿಯನ್ನಾಗಿ ಕೊಡುತ್ತೇನಲಾ ತರಳಾ ಕತ್ತರಿಸುವೆ ಕೊರಳಾ॥

ದರುವು

ಜಡಮತಿ ದುರುಳನೇ  ಬಿಡದಿರೆ ತುರಗವಾ
ಜಡಿದು ಕೊಲ್ವೆ ನಿನ್ನಾ  ನಾ ನಿನ್ನಾ ॥
ಕಡು ಧೂರ್ತನೇ ನೀ  ದುಡುಕು ಮಾತಾಡಲು
ಹೊಡೆದು ಸೀಳ್ವೆ ನಿನ್ನಾ  ನಾ ಮುನ್ನಾ ॥

ಶ್ರೀಕೃಷ್ಣ: ಎಲಾ ದುರುಳಾ ! ಜಡಮತಿಯಿಂದ ದುಡುಕು ಮಾತನಾಡುತ್ತಾ ತುರಗವನ್ನು ಬಿಡದಿರಲು  ಕಡುದೂರ್ತನಾದ ನಿನ್ನನ್ನು ಜಡಿದು ಸೀಳುವೆನೋ ದುರುಳಾ – ಹೊರ ತೆಗೆಯುವೆ ಕರುಳಾ ॥

ದರುವು

ಉಬ್ಬಿ ನುಡಿಯದಿರು  ಕೊಬ್ಬಿದ ವಚನವ
ತಬ್ಬಲಿಗನೇ ನಿನ್ನಾ  ನಾ ನಿನ್ನಾ ॥
ಹೆಬ್ಬುಲಿಯಂತಾರ್ಭಟಿಸುತ ನಿನ್ನಯ
ಗರ್ಭವ ಸೀಳುವೆನೂ  ನಾ ಬಿಡೆನೂ ॥

ತಾಮ್ರಧ್ವಜ: ಎಲವೋ ಗೊಲ್ಲ ಕೃಷ್ಣಾ ! ಕೊಬ್ಬಿದ ಗರ್ವದಿಂದ ಉಬ್ಬಟೆಯ ನುಡಿಗಳನ್ನು ಆಡಬೇಡ ಕಂಡ್ಯಾ ನಿಮ್ಮ ಕುದುರೆಯನ್ನು ಬಿಡಲು ನಾನು ಕ್ಷತ್ರಿಯಾಧಮನಲ್ಲ. ಹೆಬ್ಬುಲಿಯಂತೆ ಬೊಬ್ಬೆಗೊಟ್ಟಬ್ಬರಿಸಿ ಅತಿ ನಿಬ್ಬರದ ಶಿಲೀ ಮುಖದಿಂದ ತಲೆ ಇಬ್ಭಾಗವಾಗುವಂತೆ ಮಾಡಿ ಗರ್ಭವ ಸೀಳುವೆನೋ ಹೋರಾ – ನವನೀತ ಚೋರ ॥

ದರುವು

ದುಷ್ಠನೆ ನಿನ್ನಯ  ಕೆಟ್ಟ ವಚನ ಬಿಡು
ಕುಟ್ಟಿ ಕೆಡಹುವೆ ನಿನ್ನಾ  ನಾ ಮುನ್ನಾ ॥
ದಿಟ್ಟತನದಿ ನಾಂ  ಬಿಟ್ಟು ಶರವನು
ಕಷ್ಠಗೊಳಿಪೆ ನಾನೂ  ಕೇಳ್ ನೀನೂ ॥

ಅರ್ಜುನ: ಎಲಾ ದುಷ್ಠಾ ! ನೀನು ಬಿಟ್ಟಂಥ, ಕ್ರೂರಾಸ್ತ್ರಗಳನ್ನು ತಟ್ಟನೆ ಕುಟ್ಟಿ ತರಿದಿಟ್ಟವನಾಗಿ ಶ್ರೇಷ್ಠವಾದ ಅಸ್ತ್ರವನ್ನು ಗುರಿಯಿಟ್ಟು ಇದ್ದೇನೆ. ಗಟ್ಟಿಗನಾದರೆ ಎದೆಗೊಟ್ಟು ನಿಲ್ಲೋ ಮೂರ್ಖ ಬಿಡು ಯನ್ನೊಳು ತರ್ಕ ॥

ದರುವು

ಬಾರೆಲೊ ದುರುಳನೇ  ತೋರೆಲೊ ಪೌರುಷಾ
ಬೀರುವೆ ಶರಜಾಲ  ಕೇಳೋ ಬಾಲ ॥
ವೀರರ ಕೊಂದಿಹ  ಮೀರಿದ ಶೌರ‌್ಯವಾ
ತೋರೋ ಯನ್ನೊಳೀಗಾ  ಬೇಗಾ ॥

ಅರ್ಜುನ: ಎಲಾ ದುರುಳಾ, ಭೋರನೇ ಯುದ್ಧಕ್ಕೆ ಬಂದು ಸೇರುವಂಥವನಾಗು. ನಿನ್ನ ಮೋರೆ ಒಡೆಯುವಂತೆ ಕ್ರೂರಾಸ್ತ್ರಗಳನ್ನು ಬೀರಿ ನಿನ್ನ ಶರೀರದಲ್ಲಿ ತೂರಾಡಿಸಿ ಬಿಡುವೆನೋ ಖೂಳಾ  ಭಲಾ, ಸಮರಕ್ಕೆ ಬಂದ ವೀರಭಟರನ್ನು ಕೊಂದ ಪೌರುಷವನ್ನು ಯನ್ನ ಮುಂದೆ ತೋರೋ ತರಳಾ – ಕತ್ತರಿಸುವೆ ಕೊರಳಾ ॥

ದರುವು

ಧರೆಯೊಳಗಧಿಕಾ  ಹಿರಿಯ ಬಳ್ಳಾಪುರ
ಹರನ ಕರುಣದಿಂದಾ  ಈಗಾ ॥
ಗರಿಗರಿಯೆನುತಲಿ  ತರಿದು ನಿನ್ನಯ ಶಿರ
ಧರೆಗೆ ಬಲಿಯ ಕೊಡದೇ  ಬಿಡೆನೂ ॥

ತಾಮ್ರಧ್ವಜ: ಹೇ ಅರ್ಜುನಾ ! ಈ ರಣ ಧಾತ್ರಿಯೋಳ್ ಪ್ರಳಯ ರುದ್ರನಂತೆ ಉದ್ರೇಕದಿಂದ ಶರವನ್ನು ಹೂಡಿ ನಿನ್ನನ್ನು ಛಿದ್ರಿಸಿ ಧರೆಗೆ ಒರಗುವಂತೆ ಮಾಡುವೆನು. ಸಿದ್ಧವಾಗಿ ನಿಲ್ಲೋ ಅಧಮಾ – ನೋಡೆನ್ನ ಪರಾಕ್ರಮಾ ॥

(ಅರ್ಜುನ ತಾಮ್ರಧ್ವಜರ ಯುದ್ಧ)

(ಅರ್ಜುನನ ಮೂರ್ಛೆ)

ದರುವು

ನಿಲ್ಲು ನಿಲ್ಲೆಲೋ ದೇವಕೀತನಯಾ
ಫಲುಗುಣನಿಗಪಜಯಾ
ನಿಲ್ಲು ನಿಲ್ಲೆಲೋ ದೇವಕೀ ತನಯಾ ॥

ನಿಲ್ಲು ನಿಲ್ಲೆಲ್ಲೋ ದಾನವಾರಿ
ಕಲ್ಲು ಗುಡ್ಡವ ನೆತ್ತಿದಾಪರಿ
ಯಲ್ಲ ಮರುಳೇ ಜರಿವೆ ಪರಿಪರಿ
ಹಲ್ಲು ಮುರಿವೇ ಧುರದಿ ನರಹರಿ  ನಿಲ್ಲು ನಿಲ್ಲೆಲೋ ॥

ತಾಮ್ರಧ್ವಜ: ಪಾಲ್ಬೆಣ್ಣೆ ಕಳ್ಳನಾದ ಗೊಲ್ಲ ಕೃಷ್ಣನೇ ಕೇಳು  ಗೊಲ್ಲ ಭಾಮೆಯರ ಪಾಲ್ಮೊಸರು ಅರಿವೆಗಳನ್ನು ಹೊಡೆದು ಕಲ್ಲು ಗುಡ್ಡವನ್ನು ಎತ್ತಿದಾ ಪೌರುಷವನ್ನು ಯನ್ನಲ್ಲಿ ತೋರಿ ಪರಿಪರಿಯಾಗಿ ಜರಿದು ನುಡಿದದ್ದೇ ಆದರೆ, ಅರ್ಜುನನಿಗಾದ ಪರಿಭಂಗವೇ ನಿನಗೊದಗಿಸಿ ನಿನ್ನ ಹಲ್ಲು ಮುರಿಯುವೆನೋ ದಾನವಾರಿ – ಹಿಡಿ ಬಂದ ದಾರಿ ॥

ದರುವು

ಮಾರಜನಕನೇ ಪಿಡಿಯೋ ಚಕ್ರವನೂ
ನಕ್ರಾನ ಕೊಂದು
ಭರದಿ ಸಲಹಿದ ಮದಕರಿಯನ್ನೂ ॥
ಮಾರ ಜನಕನೆ ಪಿಡಿದು ಚಕ್ರವಾ
ಭರದಿ ಯನ್ನೊಳು ಗೈದು ಧುರವಾ
ದುರುಳ ಪಾರ್ಥನ ಯಾಗದಶ್ವವಾ
ಧರಣಿಯೊಳು ನೀ ಬಿಡಿಸು ಕೇಶವಾ ನಿಲ್ಲು ನಿಲ್ಲೆಲೋ ॥ ॥

ತಾಮ್ರಧ್ವಜ: ನಾರೀ ವಸನ ಚೋರನಾದ ಮಾರ ಜನಕನೇ ಕೇಳು. ಈಗ ಪಾರ್ಥನ ಕುದುರೆಯನ್ನು ಕಟ್ಟಿದ್ದೇನೆ ಪರಾಕ್ರಮಿಯೇ ನೀನಾದರೆ ಅದನ್ನು ಬಿಡಿಸಿಕೋ  ಚಕ್ರವನ್ನು ಕೈಯಲ್ಲಿ ಪಿಡಿದು ಧುರವನ್ನು ಜೈಸಿ ಕಿರೀಟಿಯ ಪ್ರಾಣವನ್ನುಳಿಸು, ಶಾರ್ಙ್ಗವನು ಹಿಡಿ ನಿನ್ನೊಡನೆ ಹೋರಲು ಹೆದರುವವನಲ್ಲವೋ ಕೇಶವಾ – ನಿಮಗಾಯಿತು ಪರಿಭವಾ ॥

ದರುವು

ಧಾರುಣಿಯೊಳು ಅಧಿಕವಾದಂಥ
ಹಿರಿಯ ಬಳ್ಳಾ
ಪುರದ ಒಡೆಯ ಗಿರಿಜೆಯ ನಾಥ
ಹರನು ಶ್ರೀ ಸೋಮಧರನೂ
ಬರಲು ವಹಿಸೀ ಈಗ ನಿನ್ನನೂ ॥
ಶರವ ಬಿಟ್ಟು ನಿನ್ನ ಶಿರವನೂ
ಧರೆಗೆ ತರಿದೀಡಾಡಿ ಬಿಡುವೆನೂ ॥

ತಾಮ್ರಧ್ವಜ: ಗೋಪಿಕಾ ಸ್ತ್ರೀಯರ ಮಾನಹರಣನಾದ ಮಾಧವನೇ ಕೇಳು  ಈ ಧಾರುಣಿಗೆ ಹಿರಿದೆನಿಸುವ ಶ್ರೀ ಹಿರಿಯ ಬಳ್ಳಾಪುರವನ್ನು ಪ್ರೇಮದಿಂದ ಪರಿಪಾಲಿಸುವ ಶ್ರೀ ಸೋಮನಾಥನೇ ನಿನಗೆ ಸಹಾಯವಾಗಿ ಬಂದಾಗ್ಯೂ ಸರಕುಗೊಳ್ಳದೆ ರಣಭೂಮಿಯಲ್ಲಿ ನಿನ್ನಯ ಶಿರವನ್ನು ತರಿದೀಡಾಡುವೆನೋ ಮುಕುಂದಾ – ಯುದ್ಧಕ್ಕೆ ನೀ ಬಂದ ॥

ದರುವು

ತುರುವ ಕಾಯಲು  ಗಿರಿಯನೆತ್ತಿ  ಕೊಡೆಯ ಹಿಡಿದೆನೂ
ದುರುಳ ಕಾ  ಳಿಂಗ ಫಣೆಯ  ಮೆಟ್ಟಿ ತುಳಿದೆನೂ ॥

ಶ್ರೀಕೃಷ್ಣ: ಹೇ ತಾಮ್ರಧ್ವಜಾ ! ಹಿಂದೆ ಗೋವುಗಳನ್ನು ಸಲಹಲು ಗೋವರ್ಧನ ಗಿರಿಯನ್ನು ಎತ್ತಿದೆನಲ್ಲದೇ, ಘೋರ ವಿಷಮಯನಾದ ಕಾಳಿಂಗನ ಫಣಿ ಮೆಟ್ಟಿ ತುಳಿದ ಯನ್ನ ಪೌರುಷವನ್ನು ನೀನು ಅರಿಯದೇ ಹೋದೆಯಾ ಮೂರ್ಖ – ಬಿಡು ಎನ್ನೊಳು ತರ್ಕ ॥

ದರುವು

ಅಣು ಮಾತ್ರ  ಗಿರಿಯನೆತ್ತಿ  ದೊಂದು ಪೌರುಷಾ
ಅಣುಗ ಶರವಾ  ನೆಸೆವೆ ನೋಡೋ  ಯನ್ನ ಪೌರುಷಾ ॥ ॥

ತಾಮ್ರಧ್ವಜ: ಹೇ ಕೃಷ್ಣಾ ! ಅಣು ಸಮಾನವಾದ ಗುಡ್ಡವನ್ನೆತ್ತಿದ ಪೌರುಷವನ್ನು ಯನ್ನಲ್ಲಿ ತೋರುವೆಯಾ ಮೂರ್ಖ, ಅಣುಗನಾದ ಯನ್ನಯ ಶರಘಾತವನ್ನು ತಾಳಿಕ್ಕೊಂಡು ನಿಲ್ಲೊ ಅಧಮ ನೋಡೆನ್ನ ಪರಾಕ್ರಮಾ ॥

ದರುವು

ಕಂದನಿಗೇ  ಮೊಲೆಯ ಕೊಡಲು ಬಂದ ಅಸುರೆಯ
ಕೊಂದು ಧೇನು  ಶಕಟರನ್ನು  ಅಂದು ತರಿದೆನೂ ॥

ಶ್ರೀಕೃಷ್ಣ: ಹೇ ದುರುಳಾ ! ಹಿಂದೆ ಬಾಲಕತನದಲ್ಲಿ ಯನ್ನನ್ನು ಸಂಹರಿಸಲು ಬಂದ ಪೂತನಿ, ಧೇನುಕಾಸುರ, ಶಕಟಾಸುರರನ್ನು ಯಮನಾಲಯಕ್ಕೆ ನಾನು ಕಳುಹಿದ ಪರಿಯನ್ನು ನೀನರಿಯದೆ ಯನ್ನಲ್ಲಿ ಸಮರಕ್ಕೆ ಬಂದಿರುವೆಯಾ ತರಳಾ – ಕತ್ತರಿಸುವೆ ಕೊರಳಾ ॥

ದರುವು

ನಾರಿ ಗೋವು  ಹತ್ಯಕಾರಿ  ಪಾಪಿಯಾದೆಲಾ
ಮುರುಕು ಬಂಡಿ  ಯನ್ನು ಮುರಿದ  ಧೀರ ನೀನಲಾ ॥

ತಾಮ್ರಧ್ವಜ: ಹೇ ಜಾರನಾದ ಕೃಷ್ಣನೇ ಕೇಳು ನಾರಿ ಹತ್ಯ ಗೋಹತ್ಯ ಮಾಡಿ ಪಾಪಿಯಾದ ನೀನು ಮುರುಕು ಬಂಡಿಯನ್ನು ಮುರಿದ ಶೂರತ್ವವನ್ನು ಯನ್ನಲ್ಲಿ ತೋರುವೆಯಾ ಮೂರ್ಖ – ಬಿಡು ಯನ್ನೊಳು ತರ್ಕ ॥

ದರುವು

ಹಿರಿಯ ಬಳ್ಳಾ  ಪುರದೊಳಿರುವಾ  ಗಿರಿಜೆಯರಸನಾ
ಕರುಣದಿಂದ  ಧುರದಿ ನಿನ್ನ  ಶಿರವನರಿವೆನಾ ॥

ಶ್ರೀಕೃಷ್ಣ: ಎಲವೋ ತರಳಾ ! ಈ ಧರಣಿಗಧಿಕವಾದ ಹಿರಿಯ ಬಳ್ಳಾಪುರ ನಿವಾಸ ಶ್ರೀ ಸೋಮೇಶನ ಪರಿಪೂರ್ಣವದ ಕೃಪಾಕಟಾಕ್ಷದಿಂದ ಯನ್ನ ಕರದಲ್ಲಿ ಪಿಡಿದಿರುವ ಚಕ್ರವನ್ನು ಎಸೆದು ನಕ್ರನ ಶಿರವರಿದಂತೆ ನಿನ್ನಯ ಶಿರವನ್ನಾರಿಸುವೆನು  ತಡೆದುಕೊಂಡು ನಿಲ್ಲೋ ಮೂಢ ಕೊಡು ಕಾಳಗವ ಗಾಢ ॥

ಕಂದ ಕೇದಾರ ಗೌಳ

ಹೇ ದೇವ ಸೈನ್ಯವಂ ತಡೆಗಡಿದೊಡೇ
ನಹುದು ಹಿಂದೆ ಪಾರ್ಥಂಗಾಗಿ  ನಿನ್ನ
ಪುಣ್ಯವನಿತ್ತಲಾ  ಕೊಡದಿರು ಧನಂಜಯ
ಗಾಗಿ  ತನಗೀಗ ನಿನ್ನೊಡಲ  ಇದು ನಿಶ್ಚಯಂ
ನಿನ್ನಂ ಕಿರೀಟಿಯಂ ಪಿಡಿದು  ತಾತನ ಮಖವ
ನಾಗಿಪೆಂ ನೋಡೈ ನರಕಾಂತಕ ಶ್ರೀ ಹರಿಯೇ ॥

ತಾಮ್ರಧ್ವಜ: ಹೇ ದೇವ ! ನನ್ನ ಸೈನ್ಯವನ್ನು ಕೊಂದರೇನುಪಯೋಗ ? ಹಿಂದೆ ಅರ್ಜುನನಿಗಾಗಿ ನಿನ್ನ ಪುಣ್ಯವನ್ನೆಲ್ಲಾ ಕಳೆದುಕೊಂಡೆಯಂತೆ. ಈಗ ನನಗೆ ನಿನ್ನ ದೇಹವನ್ನೊಪ್ಪಿಸುತ್ತಿರುವೆ. ಭಲಾ, ನಿನ್ನನ್ನೂ ಅರ್ಜುನನನ್ನೂ ಹಿಡಿದು ನನ್ನ ತಂದೆಯ ಯಾಗವನ್ನು ಸಾಂಗಗೊಳಿಸುವೆನು. ನೋಡುವಂಥವನಾಗೋ ಮುರಹರೀ – ಇನ್ನು ಹಿಡಿ ಬಂದ ದಾರಿ ॥

ದರುವು

ಧರೆಯೊಳಧಿಕಾ  ಹಿರಿಯಬಳ್ಳಾ  ಪುರನಿವಾಸನೂ
ಹರನ ಕರುಣ  ದಿಂದ ನಿನ್ನ  ಶಿರವ ನರಿವೆನೂ ॥

ತಾಮ್ರಧ್ವಜ: ಹೇ ಕೃಷ್ಣಾ, ಈ ಸೃಷ್ಠಿಗೆ ಶ್ರೇಷ್ಠತರಮಾದ ಪಟ್ಟಣ ಹಿರಿಯ ಬಳ್ಳಾಪುರವನ್ನು ನಿಷ್ಠೆಯಿಂ ಪರಿಪಾಲಿಸುವ ಅಷ್ಠಮೂರ್ತಿ ಶ್ರೀ ಸೋಮನಾಥನ ಕೃಪಾಕಟಾಕ್ಷದಿಂದ ಶ್ರೇಷ್ಠವಾದಂಥ ವಿಶಿಖವನ್ನು ಗುರಿಯಿಟ್ಟು ಬಿಟ್ಟಿರುತ್ತೇನೆ. ಇನ್ನು ಸೃಷ್ಠಿಗೊರಗುವಂಥವನಾಗೋ ಜಾರ – ನವನೀತ ಚೋರ ॥