ಶ್ರೀಕೃಷ್ಣ ತಾಮ್ರಧ್ವಜರ ಯುದ್ಧಶ್ರೀಕೃಷ್ಣನ ಮೂರ್ಛೆ

ಭಾಗವತರ ಕಂದ ಕೇದಾರ ಗೌಳ

ಧರಣೀಂದ್ರ  ಕೇಳ್ ಚಕ್ರಪಾಣಿಯಾಗಿರ್ದ
ಮುರಹರನಂ ರಣಾಗ್ರದೊಳ್ಮೇಲ್ವಾಯ್ದು
ತುಡುಕಿ ನಿಜಕರ ವೊಂದರಿಂದೆರಡು ಕೈಗಳಂ
ಮತ್ತೊಂದು ಹಸ್ತದಿಂ ಪದಯುಗವನೂ ॥
ಹಿರಿದು ಸತ್ವದೊಳೆತ್ತಿ ಪಿಡಿದೊಂದುಗೂಡಿ
ಹರಿಚರಣಮಂ  ನೊಸಲೆಡೆಯೊಳಿಟ್ಟು
ತಾಮ್ರಧ್ವಜಂ  ಪರಿದನರ್ಜುನನಿದ್ದ ಬಳಿಗಾಗಿ
ಸಾಹಸಕೆ ಮೂಜಗಮಂ ಬೆರಗಾಗಲೂ ॥

ಭಾಗವತರು: ಕೇಳಿದರೇನಯ್ಯ ಭಾಗವತರೇ  ಈ ಪ್ರಕಾರವಾಗಿ ತಾಮ್ರಧ್ವಜನು ರೋಷಾರುಣಲೋಚನನಾಗಿ ಕೃಷ್ಣನ ಮೇಲೆ ನುಗ್ಗಿ, ಒಂದು ಕೈಯಿಂದ ಆತನ ಕೈಗಳನ್ನೂ, ಇನ್ನೊಂದು ಕೈಯಿಂದ ಆತನ ಪಾದಗಳನ್ನೂ ಹಿಡಿದೆತ್ತಿ, ಬೆನ್ನಿನ ಮೇಲೆ ಹಾಕಿಕೊಂಡು ಮೂಜಗವು ಬೆರಗಾಗುವಂತೆ ಅರ್ಜುನನಿದ್ದಲ್ಲಿಗೆ ಧಾವಿಸಲು, ಅವನ ಕೈ ಹಿಡಿಯಲ್ಲಿ ಸಿಕ್ಕಿದ್ದ ಕೃಷ್ಣನು ಮಹಾಸ್ತ್ರವನ್ನು ಹೂಡಿ ಹೊಡೆಯುವಂತೆ ಚೇತರಿಸಿಕೊಳ್ಳುತ್ತಿದ್ದ ಅರ್ಜುನನಿಗೆ ಸೂಚನೆ ಕೊಡಲು ಅದನ್ನರಿತು ಪಾರ್ಥನು, ಗಾಂಢೀವವನ್ನು ಕೈಗೆ ತೆಗೆದುಕೊಳ್ಳುತ್ತಿರಲು, ಅದನ್ನು ನೋಡಿ ಅರುಣ ಧ್ವಜನು ಓಡಿ ಬಂದು ವಿಜಯನನ್ನು ಕಾಲಿನಿಂದೊದ್ದು ಉರುಳಿಸಿ, ಆತನನ್ನೂ ಸಹ ತನ್ನ ಕಂಕುಳಲ್ಲಿರುಕಿಸಿಕೊಂಡು ಓಡುತ್ತಿರಲೂ, ಆಗ ಚಕ್ರಪಾಣಿಯಾಗಿರ್ದ ಕೃಷ್ಣನು ಒಂದು ಒದೆ ಕೊಡಲು, ತಾಮ್ರಧ್ವಜನು ಅವರಿಬ್ಬರನ್ನೂ ಕೆಡವಿಕೊಂಡು, ಕೆಳಗೆ ಬಿದ್ದು ಮೂವರೂ ಮೂರ್ಛೆಯನ್ನೈದಲೂ, ತದನಂತರ ತಾಮ್ರಧ್ವಜನು ಬೇಗನೆ ಮೂರ್ಛೆ ತಿಳಿದೆದ್ದು ನೋಡಿ ತನ್ನೊಡನೆ ಸೆಣಸಲು ಯಾವ ಭಟನೂ ಇಲ್ಲದುದನ್ನು ತಿಳಿದು ತನ್ನ ಮಂತ್ರಿಯಾದ ನಕುಲ ಧ್ವಜನೊಡನೆ ಇಂತೆಂದನೈಯ್ಯ ಭಾಗವತರೇ ॥

ದರುವು

ನೋಡೈಯ್ಯ ಮಂತ್ರಿಯೇ  ಕಡುಪರಾಕ್ರಮಿಗಳೂ
ಪೊಡವಿಯೊಳಗೆ ಮೂರ್ಛೆ  ಗೂಡಿ ಮಲಗಿಹರೂ ॥

ಧುರದೊಳಗೆ ಯನ್ನೊಡನೇ  ಸರಿಸಮವ ಕಾದುವಾ
ವೀರಭಟರಿನ್ನಿಲ್ಲಾ  ಪುರಕೆ ಹಿಂದಿರುಗೈ ॥

ತಾಮ್ರಧ್ವಜ: ಅಯ್ಯ ಸಚಿವ ಶಿಖಾಮಣಿ, ನೋಡಿದೆಯಾ ಅರ್ಜುನನ ಚತುರಂಗ ಬಲವೆಲ್ಲವೂ ಪುಡಿ ಪುಡಿಯಾಗಿ ದೇಹಂಗಳೆಲ್ಲಾ ಕಡಿದು ಕಂಡವಾಗಿ ರುಧಿರವು ಧಾರಾಕಾರವಾಗಿ ಧರಣಿಯ ಮೇಲೆ ಹರಿದು ಹೋಗುತ್ತಾ ಇದೆ. ಅಲ್ಲದೇ, ಸಮಸ್ತ ವೀರರೂ ಪೊಡವಿಯಲ್ಲಿ ಬಿದ್ದು ಮರವೆಯನ್ನು ತಾಳಿರುವರು. ಇನ್ನು ಸಮರಕ್ಕೆ ಬರುವಂಥವರು ಯಾರೂ ಇಲ್ಲ. ಇನ್ನು ಈ ಯುದ್ಧ ಭೂಮಿಯಲ್ಲಿ ಯಾತಕ್ಕೆ ಇರೋಣ. ಯಾಗಾಶ್ವಗಳನ್ನು ಹಿಂದಿರುಗಿಸಿಕೊಂಡು ನಗರಕ್ಕೆ ಹೋಗೋಣ ನಡಿಯೈಯ್ಯ ಪ್ರಧಾನಿ – ನೀತಿಜ್ಞಾನಿ ॥

ಮಂತ್ರಿ: ಅದೇ ಪ್ರಕಾರ ಹೋಗೋಣ ನಡಿಯೈಯ್ಯ ತಾಮ್ರಧ್ವಜ ಭೂಪ – ಕೀರ್ತಿ ಕಲಾಪ ॥

ದರುವು

ಧುರದೊಳರಿಗಳ ಗೆದ್ದೆನೆನುತಲೀ
ಪರಮ ವಿಭವದಿ ತಾಮ್ರಕೇತುವು
ಎರಡು ಅಶ್ವಗಳ್ಪಡೆಯ ಸಹಿತಾ  ಹೊರಟ ನಿಜಪುರಕೇ ॥

ಹಿರಿಯ ಬಳ್ಳಾಪುರ ನಿವಾಸನಾ
ಸ್ಮರಿಸಿ ಕುವರನು ಪಿತನ ಚರಣಕೆ
ಎರಗಿ ಪೇಳ್ದನು ಹರುಷದಿಂದಲಿ  ಧುರವಿಚಾರವನೂ ॥

ಭಾಗವತರು: ಕೇಳಿದರೇನಯ್ಯ ಭಾಗವತರೇ, ಈ ಪ್ರಕಾರವಾಗಿ ತಾಮ್ರಧ್ವಜನು ಯುದ್ಧ ಭೂಮಿಯಲ್ಲಿ ತನ್ನೊಡನೆ ಸೆಣಸಲು ಯಾವ ಭಟನೂ ಇಲ್ಲದುದನ್ನು ತಿಳಿದು ತನ್ನ ಅಳಿದುಳಿದ ಸೇನೆಯೊಡನೆ ಜಯೋತ್ಸಾಹದಿಂದ ಯಾಗಾಶ್ವಗಳನ್ನು ಹಿಂದಿರುಗಿಸಿಕೊಂಡು ನಿಜ ನಗರಿಗೈತಂದು ಯಾಗದೀಕ್ಷಿತರಾಗಿದ್ದ ತನ್ನ ತಂದೆಯನ್ನು ಕಂಡು ಸಾಷ್ಟಾಂಗ ನಮಸ್ಕಾರವಂ ಮಾಡಿ ಯುದ್ಧ ವೃತ್ತಾಂತವನ್ನು ಅರುಹುತ್ತಿರಲು, ಇತ್ತ ಕಡೆ ರಣಭೂಮಿಯಲ್ಲಿ ಕೃಷ್ಣಾರ್ಜುನರು ಮರವೆ ತಿಳಿದೆದ್ದು ತಮ್ಮೊಳು ತಾವೇ, ಆಲೋಚಿಸಿದರೈಯ್ಯ ಭಾಗವತರೇ ॥

(ಕೃಷ್ಣಾರ್ಜುನರ ಮಂತ್ರಾಲೋಚನೆ)

ದರುವು

ಭಾವ ವಾಸು  ದೇವ ಕೇಳೈಯ್ಯ
ದೇವಕೀ ತನಯಾ
ಧಾವ ಪರಿಯೂ  ತೋರದೆನಗಯ್ಯ ॥

ಧುರದೊಳೆನ್ನ  ಸೇನಾ ನಾಯಕರೂ
ಅರುಣಧ್ವಜನಿಂದ
ಮರವೆ ತಾಳೀ ಧರೆಗೆ ಒರಗಿದರೂ ॥

ಅರ್ಜುನ: ಹೇ ದೇವ ! ಕೃಷ್ಣಮೂರ್ತಿ ಯನ್ನ ಹೀನ ಪ್ರಾಪ್ತಿಯನ್ನು ನಿನ್ನೊಡನೆ ಏನೆಂದು ಹೇಳಲಯ್ಯ ಭಾವ. ತಾಮ್ರಧ್ವಜನು ಕಟ್ಟಿರುವ ಕುದುರೆಯನ್ನು ತರುವೆವೆಂದು ಸೇನೆ ಸಹಿತವಾಗಿ ಪೋದ ಸೇನಾ ನಾಯಕರೆಲ್ಲರೂ ಸಮರದಲ್ಲಿ ಗಾಸಿಪಟ್ಟು ಧಾತ್ರಿಯ ಮೇಲೆ ಮಲಗಿರುವರು. ಈಗ ಯನಗೆ ಯಾವ ದಾರಿಯೂ ತೋಚದಂತೆ ನಿತ್ರಾಣನಾಗಿರುವೆನೈ ದೇವಕೀ ಜಾತನೇ – ಮುಂದೇನು ಯೋಚನೆ ॥

ದರುವು

ದುಷ್ಠನೊಡನೇ  ಕಾದು ರಣದೊಳಗೇ
ಶ್ರೀಕೃಷ್ಣ ಮೂರ್ತಿ
ಕಷ್ಠ ಬಂದೂ  ವದಗಿತೇ ನಮಗೇ ॥

ಹಿರಿಯ ಬಳ್ಳಾಪುರದಿ ನೆಲೆಸಿರುವಾ
ಶ್ರೀ ಗೌರಿವರನಾ
ಕರುಣ ತಪ್ಪೀ, ಇಹುದೋ ಕೇಶವಾ ॥

ಅರ್ಜುನ: ಹೇ ಭಾವನಾದ ವಾಸುದೇವನೇ ಕೇಳು  ದುರುಳ ಅರುಣಕೇತುವಿನೊಡನೆ ರಣವನ್ನು ಕಾದು ನಮಗೆ ಕಷ್ಠ ವದಗಿತಲ್ಲೋ ಮುರಹರೀ ! ಇಷ್ಠಕ್ಕೂ ದೃಷ್ಠಿ ಮೂರುಳ್ಳ ಹಿರಿಯ ಬಳ್ಳಾಪುರ ವಾಸ ಶ್ರೀ ಸೋಮನಾಥನು ಈಗಿನ ವೇಳೆಯಲ್ಲಿ ಯಮ್ಮನ್ನು ಕೈಬಿಟ್ಟು ಇರುವನಪ್ಪಾ ಕೃಷ್ಣ ಮೂರುತಿ – ಮುಂದೇನು ಗತಿ ॥

ದರುವು

ಕುಂತೀ ತನಯಾ  ಕೇಳೋ ನೀನಿಂದೂ
ಸಮರಕ್ಕೆ ಮೊದಲೇ
ಯೆಂತು ನಾವೂ  ಜೈಸೂವುದೆಂದೂ ॥

ಅಂತರಂಗದ  ವಿಷಯ ತಿಳಿಸುವೆನೂ
ನಿನಗೊಂದುಪಾಯ
ಕಂತು ಹರನ  ದಯದೀ ಪೇಳುವೆನೂ ॥

ಶ್ರೀಕೃಷ್ಣ: ಹೇ, ಕುಂತೀಜಾತನೇ ಕೇಳು ! ತಾಮ್ರಧ್ವಜನು ಕುದುರೆ ಕಟ್ಟಿದಾಗಲೇ, ಈತನು ಬಹಳ ಶೂರನೆಂದು ನಿನಗೆ ತಿಳಿಸಲಿಲ್ಲವೇ, ಈಗ ಸಮರವನ್ನು ಕಾದದ್ದಾಯಿತು. ಆದದ್ದು ಆಗಿ ಹೋಯಿತು. ಇನ್ನು ಚಿಂತಿಸಿ ಫಲವಿಲ್ಲ. ಈಗ ನಿನಗೆ ಅಂತರಂಗವಾಗಿ ಒಂದು ಉಪಾಯವನ್ನು ಹೇಳುವೆನು. ಚಿತ್ತವ್ಯಾಕುಲವನ್ನು ಬಿಟ್ಟು ಕೇಳೈಯ್ಯ ಕುಂತೀಜಾತನೇ – ಬಿಡು ಮನದ ಯೋಚನೆ ॥

ದರುವು

ಪುರದೊಳಿರುವಾ  ದೊರೆಯ ಬಳಿಗಿನ್ನೂ
ತೆರಳೀಗ ನಾವು
ಪರಿಕಿಸುವುದೂ  ಸತ್ಯ ಧರ್ಮವನೂ ॥

ಧರೆಯೊಳಧಿಕಾ  ವಾಗಿ ರಂಜಿಸುವಾ
ಶ್ರೀ ಹರಿಯ ಬಳ್ಳಾ
ಪುರದ ಶಿವನಿಂ  ಪಡೆದು ಕರುಣವಾ ॥

ಶ್ರೀಕೃಷ್ಣ: ಹೇ, ಭರತ ಕುಲಜನೇ ಕೇಳು. ನಾವುಗಳು ಈ ನಮ್ಮ ನಿಜರೂಪವನ್ನು ಮರೆಸಿ, ವಿಪ್ರ ವೇಷವನ್ನು ಧರಿಸಿ ರತ್ನಪುರಿಯಲ್ಲಿ ಯಾಗ ದೀಕ್ಷಿತನಾಗಿರುವ ಮಯೂರ ಧ್ವಜನ ಬಳಿಗೈದು ಆ ರಾಜನ ಸತ್ಯ ಸಂಧತೆ ನೀತಿ ಧರ್ಮ ದಾನದ ಪರಾಕಾಷ್ಠತೆಯನ್ನು ಪರೀಕ್ಷಿಸಿ ನೋಡೋಣ. ಇನ್ನು ಈ ರಣಭೂಮಿಯಲ್ಲಿ ಮರವೆಗೂಡಿ ಮಲಗಿರುವ ಸಕಲಸೇನೆ ಪರಿವಾರವೆಲ್ಲವೂ ಶ್ರೀ ಗೌರೀವಲ್ಲಭನ ಕೃಪಾಕಟಾಕ್ಷದಿಂದ ಮರವೆ ತಿಳಿದೆದ್ದು ನಮ್ಮ ಹಿಂದೆ ಬರುತ್ತಿರಲಿ, ನಾವಿಬ್ಬರೂ ಮುಂದಾಗಿ ಹೋಗೋಣ ನಡಿಯೈಯ್ಯ ಅರ್ಜುನ ಭೂಪ – ಭರತಕುಲ ಪ್ರದೀಪ ॥

ಅರ್ಜುನ: ಅದೇ ಪ್ರಕಾರ ತ್ವರಿತದಿಂದ ಹೋಗೋಣ ನಡಿಯೈಯ್ಯ ಸತ್ಯಭಾಮ ಪ್ರೀತಾ – ವಸುದೇವ ಜಾತ ॥

ಭಾಗವತರ ದರುವುತ್ರಿವುಡೆ

ಹಿರಿಯ ಬಳ್ಳಾಪುರ ನಿವಾಸನಾ
ಸ್ಮರಿಸುತಾತ್ಮದಿ ಸಕಲ ಸೇನೆಯು
ಮರವೆ ತಿಳಿದು ಭರದಿ ಯೆದ್ದುದು  ಹರಿಯ ಕರುಣದಲೀ ॥

(ಸಕಲ ಸೈನ್ಯವೂ ಮೂರ್ಛೆ ತಿಳಿದೇಳುವಿಕೆ)

ಭಾಗವತರ ಕಂದಸಾವೇರಿ

ಸೋಮಕುಲತಿಲಕ ಜನಮೇಜಯ ಭೂಪನೇ ಕೇಳ್
ಆ ಹರಿಯ ನುಡಿಗೇಳ್ದು  ಫಲುಗುಣಂ ಸೇನಾ
ಸಮೂಹವಂ ಪಿಂದುಳುಪಿ  ರತ್ನ ನಗರಿಗೆ
ಪಕ್ಷಿವಾಹನನ ಕೂಡೆ  ನಡೆತಂದನವರೀರ್ವ
ರುಂ  ಮಾತಾಡಿಕೊಂಡು ಬಳಿಕಾ ॥
ರೂಹುಗಾಣಿಸದಂತೆ ವಿಪ್ರ ವೇಷವನಾಂತು
ದೇಹಿಕರ ತೆರದಿಂದ  ವೃದ್ಧನಾದಂ ಶೌರೀ
ಮೋಹದಿಂ ತನಗೆ  ಕೈ ಗುಡುವ  ಬಾಲಕ
ಶಿಷ್ಯನಾದನಮರೇಂದ್ರ ಸೂನೂ ॥

ಭಾಗವತರು: ಕೇಳಿದರೇನಯ್ಯ ಭಾಗವತರೇ  ಈ ಪ್ರಕಾರವಾಗಿ ವಸುಮತಿಗೆ ರತ್ನ ಕಿರೀಟದಂತೆ ರಂಜಿಸುವ ಹಿರಿಯ ಬಳ್ಳಾಪುರವಾಸ ಶ್ರೀ ಗೌರೀ ಮನೋಪ್ರೀತನಾದ ಶ್ರೀ ಸೋಮೇಶ್ವರನ ಕೃಪಾಕಟಾಕ್ಷದಿಂದ ಅರ್ಜುನನ ಸೇನಾಪರಿವಾರವೆಲ್ಲವೂ ಮೂರ್ಛೆ ತಿಳಿದೇಳಲೂ ನರನಾರಾಯಣರೀರ್ವರೂ ಮಯೂರಧ್ವಜನ ಸತ್ವ ಪರೀಕ್ಷೆಯನ್ನು ಮಾಡಲೋಸುಗ ತಮ್ಮೋಳ್ ಆಲೋಚನೆ ಗೈದು ತಮ್ಮ ನಿಜ ರೂಪುಗಾಣಿಸದಂತೆ ಕೃಷ್ಣನು ವೃದ್ಧ ಬ್ರಾಹ್ಮಣನಾಗಿಯೂ ಅರ್ಜುನನು ಆತನಿಗೆ ಸಹಾಯಕನಾಗುವ ಶಿಷ್ಯನಂತೆಯೂ ವೇಷಗಳನ್ನು ಧರಿಸಿ ಮಯೂರಧ್ವಜ ಭೂಪಾಲನ ಬಳಿಗೆ ಬಂದರೈಯ್ಯ ಭಾಗವತರೇ ॥

(ಮಯೂರಧ್ವಜ ಬರುವಿಕೆ)

ತೆರೆ ದರುವು
ಬಂದನು ರಾಜ  ಸುಂದರ ತೇಜ
ಮಂದರೋದ್ಧರ ಮುಚು  ಕುಂದನ ಭಜಿಸುತಾ ಬಂದನು ರಾಜ ॥

ನರ್ಮದಾ ತೀರದಿ  ನಿರ್ಮಲ ತ್ಯಾಗದೀ
ಧರ್ಮದಿ ಯಾಗದ  ಕರ್ಮವಾ ಗೈಯಲೂ ಬಂದನು ರಾಜ ॥

ಧರೆಯೊಳಗತಿಶಯಾ  ಹಿರಿಯ ಬಳ್ಳಾಪುರ
ವರದ ಸೋಮೇಶ ಶ್ರೀ  ಹರನ ಕಾರುಣ್ಯದೀ ಬಂದನು ರಾಜ  ॥

ಮಯೂರಧ್ವಜ: ಯಲಾ ಚಾರ ಹೀಗೆ ಬಾ ಮತ್ತೂ ಒಂದು ಸಾರಿ ಹೀಗೆ ನಿಲ್ಲು, ಭಲಾ ಚಾರ. ಚಟುಲತರ ಮಾದ ನಟಣೆಯಿಂದ ವೃದ್ಭಿಟೆಯಂ ಮಾಡಿ ಧಟಾಧಟನೇ ಜಟಾಜೂಟಿಯಿಂದ ಮಾತನಾಡಿಸುವುದಕ್ಕೆ ನೀನ್ಯಾರು ? ನಿನ್ನ ನಾಮಾಂಕಿತವೇನು ? ಸ್ವಾಭಿಲಾಷೆಯಿಂದ ಪೇಳೋ ಚಾರ – ವರ ಫಣಿಹಾರ ॥

ಭಳಿರೇ ಸಾರಥೀ, ಹಾಗಾದರೇ ಯಮ್ಮ ವಿದ್ಯಮಾನವನ್ನು ಬಿತ್ತರಿಸುತ್ತೇನೆ ಚಿತ್ತವಿಟ್ಟು ಕೇಳೈಯ್ಯ ಸಾರಥೀ – ಸಂಧಾನಮತಿ ॥

ಈ ಭರತ ವರ್ಷದ ಮಧ್ಯದಲ್ಲಿ ಭೂಕಾಂತೆಯ ಭೂಷಣದಂತೆ ಸಂಪೂರ್ಣ ವಸ್ತುಗಳಿಂದ ಕೂಡಿದ್ದಾಗಿ ನವರತ್ನಾಲಂಕೃತಗಳಾದ ಉಪ್ಪರಿಗೆಗಳಿಂದ ರಮ್ಯವಾದ ಮನೆಗಳಿಂದಲೂ ಸುರಪನಗರಿಯಂತೆ ದೇದಿಪ್ಯಮಾನವಾಗಿ ಲೋಕೈಕ ಲಕ್ಷ್ಯವಾದ ರಾಜಪದ್ಧತಿಯುಳ್ಳದ್ದಾಗಿ ಆಶ್ರಿತ ಜನಗಳಿಂದ ಕೂಡಿ ಸಂಪದ್ಯುಕ್ತವಾದ ರತ್ನಪುರೀ ಸಂಸ್ಥಾನವನ್ನು ನಿಷ್ಠೆಯಿಂದ ಪರಿಪಾಲಿಸುವ ಮಯೂರಧ್ವಜ ಭೂಪಾಲನು ಬಂದು ಇದ್ದಾನೆಂದು ಜಯಭೇರಿ ಬಾರಿಸೋ ದೂತ – ರಾಜ ಸಂಪ್ರೀತ ॥

ಈ ವರ ಸಭಾಮಂದಿರಕ್ಕೆ ಬಿಜಯಂಗೈದ ಕಾರಣವೇನೆಂದರೇ, ಈ ಮೇದಿನಿಯೋಳ್ ಅತಿ ಮನೋಹರವಾದ ಹಿರಿಯ ಬಳ್ಳಾಪುರ ವಾಸ ಶ್ರೀ ಸೋಮೇಶ್ವರನ ಕೃಪಾಕಟಾಕ್ಷದಿಂದ ಏಳು ಅಶ್ವಮೇಧ ಮಹಾಯಾಗಗಳನ್ನು ಮಾಡಿದಾಗ್ಯೂ. ದೇವಪುರದೊಡೆಯ ಶ್ರೀಲಕ್ಷ್ಮೀಶನ ದರ್ಶನವಾಗದಿದ್ದ ಕಾರಣ, ಎಂಟನೇ ಅಶ್ವಮೇಧ ಮಹಾಯಾಗವನ್ನು ಮಾಡಲು ಯಾಗದೀಕ್ಷೆಯನ್ನು ತೊಟ್ಟು ತುರಗವಂ ಪೂಜೆಗೈದು ಯನ್ನ ಕುಮಾರನಾದ ವೀರ ತಾಮ್ರಧ್ವಜನ ಕಾಪಿನಿಂದ ದೇಶದ ಮೇಲೆ ಬಿಟ್ಟಿರುವಂಥ ಕಾಲದಲ್ಲಿ ಎಲ್ಲಿ ನೋಡಿದರೂ ನಮ್ಮ ನಗರದಲ್ಲಿ ಘಂಟೆ ಶಂಖು ಮೃದಂಗ ಸಂಗೀತ ನಾಟ್ಯವೇ ಕರ್ಣಾನಂದವಾಗಿದೆಯಲ್ಲದೇ ವಿಜಯೋತ್ಸಾಹದಿಂದ ಜಯಭೇರಿಯನ್ನೂ ಸಹ ಹೊಡೆಯುತ್ತಿದ್ದಾರೆ. ಆದಕಾರಣ ಅತಿ ಜಾಗ್ರತೆಯಿಂದ ನಮ್ಮ ನಗರದಲ್ಲಿ ನಡೆಯುತ್ತಿರುವ ಈ ಹೊಸಪರಿ ಧ್ವನಿಗಳನ್ನು ತಿಳಿದು ಹೇಳೈಯ್ಯ ಸಾರಥೀ – ಕೊಟ್ಟಿರುವೆನನುಮತಿ ॥

ಸಾರಥಿ: ಸ್ವಾಮೀ ಮಯೂರಧ್ವಜ ಭೂಪಾಲರೇ ! ತಮ್ಮ ಯಾಗಾಶ್ವದ ಬೆಂಗಾವಲಿಗೆ ಹೊರಟಿದ್ದ ನಿಮ್ಮ ಕುಮಾರ ಕಂಠೀರವನಾದ ತಾಮ್ರಧ್ವಜ ಯುವರಾಜರು ಪರ ರಾಯರ ಯಾಗದ ಕುದುರೆಯನ್ನು ಕಟ್ಟಿಕೊಂಡು ಆ ತುರಗದ ಬೆಂಗಾವಲಿಗೆ ಬಂದು ಇದ್ದಂತ್ತಾ ಸಮಸ್ತ ರಾಜರನ್ನೂ ಸಮರದಲ್ಲಿ ಪರಾಭವಗೊಳಿಸಿ ವಿಜಯೋತ್ಸಾಹದಿಂದ ಜಯಭೇರಿಯನ್ನು ಹೊಡೆಯಿಸಿಕೊಂಡು ನಗರಕ್ಕೆ ಆಗಮಿಸುತ್ತಿದ್ದಾನೈಯ್ಯಾ ದೊರೆಯೇ – ನೀವಿದನರಿಯೇ ॥

ತಾಮ್ರಧ್ವಜ: ನಮೋನ್ನಮೋ ಹೇ ತಂದೇ – ಸಲಹೆನ್ನ ಮುಂದೇ ॥

ಮಯೂರಧ್ವಜ: ಧೀರ್ಘಾಯುಷ್ಯಮಸ್ತು ಬಾರಪ್ಪಾ ಪುತ್ರ – ಚಾರು ಚರಿತ್ರ ॥

ದರುವು

ವರಸುತನೇ ಕೇಳು  ತುರಗದೊಡನೆ ನೀ
ಚರಿಸಲು ಪೋದವನೂ  ಹೋದವನೂ ॥
ಭರದಿಂದ ಇಲ್ಲಿಗೆ  ಬರಲು ಕಾರಣವೇನೂ ॥
ತ್ವರಿತದಿ ಪೇಳೆನಗೇ  ನೀನೆನಗೇ॥ ॥

ಮಯೂರಧ್ವಜ: ಹೇ ಕುಮಾರ ! ಯಾಗದ ಕುದುರೆಯ ಬೆಂಬಲವಾಗಿ ಸಕಲಸೇನಾ ಸಮೇತನಾಗಿ ಹೊರಟು ಇಷ್ಠು ಜಾಗ್ರತೆಯಿಂದ ಇಲ್ಲಿಗೆ ಬರಲು ಕಾರಣವೇನು ? ತ್ವರಿತದಿಂ ಪೇಳೈ ಕುಮಾರ – ನೀ ಬಹು ಶೂರ ॥

ದರುವು

ಧರೆಯೊಳಗಧಿಕವು  ಹಿರಿಯ ಬಳ್ಳಾಪುರ
ವರದ ಸೋಮೇಶ್ವರನಾ  ಈಶ್ವರನಾ ॥
ಕರುಣವು ತಪ್ಪಿ ನೀ  ತಿರುಗಿ ಬಂದಿರಲೇನು
ಕಾರಣ ತಿಳಿಸೆನಗೇ  ಪೇಳೆನಗೇ ॥

ಮಯೂರಧ್ವಜ: ಹೇ, ಮಗುವೇ ! ಈ ಧರೆಯೊಳಗಧಿಕವಾದ ಹಿರಿಯ ಬಳ್ಳಾಪುರವಾಸ ಶ್ರೀ ಸೋಮನಾಥನ ಕರುಣವು ತಪ್ಪಿ ಈ ಸೃಷ್ಠಿಯೊಳಗೆ ಕಷ್ಠವೇನಾದರೂ ವದಗಿ ಬಂದಿತೇನೋ ಬಾಲ  ದೃಷ್ಠಿ ಮೂರುಳ್ಳವನ ಪಾದದಾಣೆಯೂ ಮರೆಮಾಜದೆ ನೀನು ಹಿಂತಿರುಗಿಬಂದ ಕಾರಣ ತಿಳಿಸೈಯ್ಯ ಬಾಲ – ಸುಜ್ಞಾನಶೀಲ ॥

ದರುವು

ತಾತ ನಿಮ್ಮ ಆಜ್ಞೆಯಂತೆ ನಾ  ಯಾಗಾಶ್ವದೊಡನೆ
ಕ್ಷಿತಿಯ ಚರಿಸಿ ಬರುವೆನೆನುತ ನಾ ॥

ಪೋಗುತಿರಲು ಅಶ್ವದೊಡನೆ ನಾ  ವರ ಪಾಂಡುಸುತನ
ಯಾಗದಶ್ವವನ್ನು ಕಂಡೆನಾ ॥

ತಾಮ್ರಧ್ವಜ: ಹೇ ಜನಕಾ ! ತಮ್ಮ ಅಪ್ಪಣೆಯನ್ನು ಶಿರಸಾವಹಿಸಿ ಯಾಗಾಶ್ವದ ಬೆಂಬಲವಾಗಿ ಅಖಿಲ ಸೇನಾ ಪರಿವಾರ ಸಹಿತನಾಗಿ ಪ್ರಯಾಣ ಮಾಡುವಂಥ ಕಾಲದಲ್ಲಿ ನಮ್ಮ ಪುರದ ಹೊರ ಭಾಗದಲ್ಲಿ ಗಜಪುರದ ಸೀಮೆಯನ್ನು ಪಾಲಿಸುವಂಥ ಧರ್ಮರಾಯರ ವರ ಯಾಗದ ಕುದುರೆಯು ನಮಗಿದಿರಾಗಿ ಬರುತ್ತಿರುವುದನ್ನು ಕಂಡೆನೈಯ್ಯ ಜನಕಾ ಕ್ಷೋಣಿ ಜನ ಪಾಲಕಾ ॥

ದರುವು

ಕುದುರೆ ಹಿಡಿದು ಕಟ್ಟಲಾಕ್ಷಣಾ
ಅರಿಸೇನೆಯೊಡನೇ
ಕದನ ವದಗಿತಾಗ ತಕ್ಷಣಾ ॥

ಮಾರ ಜನಕ ಪಾರ್ಥರನ್ನು ನಾ
ರಣರಂಗದೊಳಗೇ
ಮರವೆ ತಾಳುವಂತೆ ಮಾಡಿ ನಾ ॥

ತಾಮ್ರಧ್ವಜ: ಹೇ ತಂದೇ ಆ ಯಾಗದ ಕುದುರೆಯನ್ನು ಬಂಧಿಸೀ, ಅದರ ಬೆಂಬಲವಾಗಿ ಬಂದಿದ್ದ ಅರ್ಜುನನ ಸೈನ್ಯವೆಲ್ಲವನ್ನೂ ಸದೆ ಬಡಿದೆನಲ್ಲದೇ, ಕೃಷ್ಣಾರ್ಜುನರನ್ನೂ ಸಹ ಕಾಳಗದಲ್ಲಿ ಮರವೆ ತಾಳುವಂತೆ ಧರೆಗೆ ಬೀಳಿಸಿದೆನೈಯ್ಯ ಜನಕಾ ನೃಪಕುಲತಿಲಕಾ ॥

ದರುವು

ಹಿರಿಯ ಬಳ್ಳಾಪುರ ನಿವಾಸನಾ
ವರ ಕರುಣದಿಂದ
ತುರಗ ಪಿಡಿದು ಭರದಿ ತಂದೆನಾ ॥

ತಾಮ್ರಧ್ವಜ: ಹೇ ಜನಕಾ ! ಈ ಪೊಡವಿಗೆ ಅಧಿಕವಾದ ಹಿರಿಯ ಬಳ್ಳಾಪುರದೊಡೆಯ ಮೃಡ ಮೃತ್ಯುಂಜಯ ಶ್ರೀ ಸೋಮೇಶ್ವರನ ಕರುಣ ಸಹಾಯದಿಂದ ಸಮರವನ್ನು ಜೈಸಿ, ಪಾಂಡವರ ಯಾಗದ ಕುದುರೆಯನ್ನು ಪಿಡಿದು ತಂದಿರುವೆನೈ ತಾತನೇ – ಲೋಕವಿಖ್ಯಾತನೇ ॥

ದರುವು

ಯಲ ಯನ್ನಮಗನೇ ನೀ ಕೇಳೋ  ಇಂಥಾ
ಕೆಲಸ ಮಾಡಲು ಬಹುದೇ ಪೇಳೋ ॥
ಬಾಲ ಬುದ್ಧಿಗಳಿಂದ  ಪಿಡಿವರೆ ತುರಗವಾ
ಕಾಲ ಕಂಟಕ ಬಂದು  ವದಗಿತು ನಮಗೀಗಾ ॥ಯಲ ಯನ್ನ            ॥

ಮಯೂರಧ್ವಜ: ಎಂಥಾ ಕೆಲಸ ಮಾಡಿದೆಯೋ ದುರ್ಮಾರ್ಗ ಬಾಲಕನೇ, ಶ್ರೀ ಕೃಷ್ಣ ಪರಮಾತ್ಮನ ಪರಮ ಭಕ್ತನಾದ ಧರ್ಮರಾಯನ ಯಾಗದ ಕುದುರೆಯನ್ನು ಕಟ್ಟಿ ಅದರ ಹಿಂಬಲವಾಗಿ ಬಂದಿದ್ದ ಪಾಂಡವರ ಸೈನ್ಯದೊಡನೆ ಕಾದಿದ್ದಲ್ಲದೇ ಕೃಷ್ಣಾರ್ಜುನರನ್ನು ಮೂರ್ಛೆಗೊಳಿಸಲು ನಿನ್ನ ಮನಸ್ಸು ಹೇಗೆ ಬಂದಿತೋ ಮಗನೇ, ದುಡುಕುತನದ ಬಾಲಬುದ್ಧಿಯಿಂದ ನೀನು ಮಾಡಿರುವ ಮಹಾದೋಷಕ್ಕೆ ಮುಂದೆ ಯಾವ ಕಾಲ ಕಂಟಕಗಳು ಬಂದೊದಗುವುವೋ ತಿಳಿಯನಲ್ಲಾ ಪುತ್ರನೇ – ತಂದೆಯಾ ಈ ವೇದನೇ ॥

ದರುವು

ಮತ್ತೆ ತುಲಸಿಯ ಹೂವು ಬಿಟ್ಟೂ  ಬಹು
ದತ್ತೂರ ಕುಸುಮ ತಂದಿಟ್ಟೂ ॥
ಉತ್ತಮ ಕೃಷ್ಣಾ  ರ್ಜುನರನ್ನು ನೀ ಬಿಟ್ಟೂ
ಇತ್ತೆಯ ಗಾರ್ಧಭಾಕಾರದ ಅಶ್ವಗಳಾ॥ಯಲಯನ್ನ॥ ॥

ಮಯೂರಧ್ವಜ: ಹೇ, ಮಗನೇ, ನೀನೆಂಥಾ ಅಕಾರ್ಯವನ್ನು ಮಾಡಿದೆಯೋ ಪುತ್ರನೇ. ನಿನ್ನ ಕೈಗೆ ಸಿಕ್ಕಿದ ಹರಿಯನ್ನು ಬಿಟ್ಟು ಕತ್ತೆಯಾಕಾರದ ಈ ಹರಿಯನ್ನು ಕಟ್ಟಿದೆಯಾ ! ಶ್ರೇಷ್ಠವಾದ ತುಲಸೀ ಪುಷ್ಪವನ್ನು ಬಿಟ್ಟು ಕೆಟ್ಟ ಪರಿಮಳವುಳ್ಳ ದತ್ತೂರಿ ಹೂವನ್ನು ಹಿಡಿದಂತೆ, ನರ ನಾರಾಯಣರಾದ ಕೃಷ್ಣಾರ್ಜುನರನ್ನು ಬಿಟ್ಟು, ಗಾರ್ಧಭಾಕಾರದ ಈ ಕುದುರೆಗಳನ್ನು ಯನಗೆ ತಂದಿತ್ತೆಯಾ ಬಾಲ – ದುರ್ವಿನಯ ಶೀಲಾ ॥

ದರುವು

ಹಿರಿಯ ಬಳ್ಳಾಪುರ ವಾಸಾ  ಸೋಮ
ಧರನು ಶ್ರೀ ಗಂಗಾಧರೇಶಾ ॥
ಕರುಣದಿಂದಲಿ ಕೃಷ್ಣಾ  ಅರ್ಜುನರೀರ್ವರೂ
ಇರುವಂಥ ನೆಲೆಯನ್ನು  ತೋರಿಸುವುದು ಬೇಗಾ ॥ಯಲ ಯನ್ನ॥    ॥

ಮಯೂರಧ್ವಜ: ಹೇ, ತರಳಾ  ಯನಗೆ ನೀನೇ ಶತೃವಾದೆಯೆಲ್ಲೋ ದುರುಳಾ  ಇದುವರೆಗೆ ಏಳು ಅಶ್ವಮೇಧ ಯಾಗಗಳನ್ನು ಮಾಡಿದಾಗ್ಯೂ ಅಗೋಚರನಾದ ಶ್ರೀ ಕೃಷ್ಣಪರಮಾತ್ಮನು ನರನೊಡನೆ ತಾನಾಗಿಯೇ ನಮ್ಮ ಪುರಕ್ಕೆ ಆಗಮಿಸಿರುವಂಥ ಕಾಲದಲ್ಲಿ, ನೀನು ಮದಾಂಧನಾಗಿ ಈ ಪರಿ ಕಾದು ಮರವೆಗೊಳಿಸಬಹುದೇ, ಈ ನಿನ್ನ ಕಾರ್ಯವನ್ನು ಹಿರಿಯ ಬಳ್ಳಾಪುರೀಶ ಶ್ರೀ ಸೋಮೇಶ್ವರನು ಮೆಚ್ಚುವನೇ, ನಮಗೀ ಯಜ್ಞವಿನ್ನೇಕೆ ? ಕೃಷ್ಣಾರ್ಜುನರನ್ನು ಕಣ್ಣಿಂದ ನೋಡಿ ನಲಿಯುವ ಭಾಗ್ಯ ಪಡೆದರೆ ಸಾಲದೇ. ಅವರು ಧಾವಲ್ಲಿ ಬಿದ್ದು ಇರುವರೋ ಅಲ್ಲಿಗೆ ಅತಿ ಜಾಗ್ರತೆ ಯನ್ನನ್ನು ಕರೆದುಕೊಂಡು ಹೋಗಿ ಅವರನ್ನು ತೋರಿಸೋ ಕುವರಾ – ಮಾಡಿದೆಯಾ ಬವರಾ॥

ದರುವು

ಕಂದನ ಬಿನ್ನಪ  ಲಾಲಿಸು ಜನಕನೇ
ಒಂದು ಮಾತು ಪೇಳ್ವೇ  ಹೇಳ್ವೆ ॥
ಇಂದು ಕ್ಷತ್ರಿಯ  ಧರ್ಮದಿ ತುರಗವ
ಚಂದದಿ ಕಟ್ಟಿದೆನೂ  ಇಹೆನೂ ॥

ತಾಮ್ರಧ್ವಜ: ಹೇ, ತಂದೆ, ಯನ್ನ ಬಿನ್ನಪವನ್ನು ಚಿತ್ತವಿಟ್ಟು ಲಾಲಿಸೈಯ್ಯ ಜನಕಾ, ಬಾಲಕನು ಮಾಡಿರುವಂಥ ಅಪರಾಧವನ್ನು ತಂದೆಯವರು ಕ್ಷಮಿಸದಿದ್ದರೇ ಮತ್ತಾರು ಕ್ಷಮಿಸುವರು ? “ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ‌್ಯ ದೇವೋ ಭವ’ ಎಂಬಂತೆ ದೈವ ಸ್ವರೂಪರಾದ ನೀವು ಇಷ್ಠು ಕೋಪಮಾನಸರಾದರೆ ಹೇಗೆ ತಂದೆಯೇ, ಈ ಭೂಮಿಯಲ್ಲಿ ಕ್ಷಾತ್ರ ಧರ್ಮದಂತೆ ಕುದುರೆಯನ್ನು ಕಟ್ಟಿ ಕಾದಿದೆನೇ ಹೊರತು ಮದೋನ್ಮತ್ತನಾಗಿ ಕಟ್ಟಲಿಲ್ಲವೈಯ್ಯ ತಾತ-ಲಾಲಿಸೆನ್ನ ಮಾತ ॥

ದರುವು

ಇಂದ್ರಸೂನು ಮು  ಕುಂದನ ಮಹಿಮೆಯು
ಇಂದು ನಾನು ಅರಿಯೇ  ತಿಳಿಯೇ ॥
ಅಂದು ರಣದೊಳು  ನೊಂದು ಮಲಗಿಹ
ನಂದನ ಕಂದನನಾ  ತೋರ್ಪೆ ॥

ತಾಮ್ರಧ್ವಜ: ಹೇ ಜನಕಾ ! ನರ ನಾರಾಯಣ ಸ್ವರೂಪರಾದ ಕೃಷ್ಣಾರ್ಜುನರ ಮಹಿಮೆಯನ್ನು ನಾನು ಅರಿಯದೇ ಹೋದೆನೈ ತಾತಾ  ಅಲ್ಲದೇ ಹಿಂದೆ ತಾವಾದರೂ ಯನಗೆ ತಿಳಿಸಿರಲಿಲ್ಲಾ. ಕಾರ‌್ಯ ಮಿಂಚಿದ ಮೇಲೆ ಚಿಂತಿಸಿ ಫಲವೇನು ತಂದೆಯೇ ? ಈಗ ಕೃಷ್ಣಾರ್ಜುನರು ಧಾವಲ್ಲಿ ಬಿದ್ದು ಇದ್ದಾರೋ ಆ ರಣ ಭೂಮಿಗೆ ತಮ್ಮನ್ನು ಕರೆದೊಯ್ದು ತೋರಿಸುವೆನು ಹೋಗೋಣ ಬಾರೈ ಜನಕಾ – ನೃಪಕುಲ ತಿಲಕಾ ॥

ಭಾಗವತರ ಕಂದ ಸಾವೇರಿ

ಕೇಳು ಜನಮೇಜಯ ಧರಿತ್ರೀ ಪಾಲ
ಅನ್ನೆಗಂ ವೃದ್ಧ ವಿಪ್ರಾಕಾರಮಂ ತಳೆದ
ಪನ್ನಗಾರಿಧ್ವಜಂ ನಿಜ ಶಿಷ್ಯ ಪಾರ್ಥನಂ
ತನ್ನೊಡನೆ ಕೂಡಿ ಕೊಂಡೊಯ್ಯನೊಯ್ಯನೇ
ಹಯದ್ವಯದಿಂದ ಪುತ್ರ ಸಹಿತ ॥
ರನ್ನದೊಡವುಗಳ  ಕತ್ತುರಿಯ ತಿಲಕದ ನೊಸಲ
ಮನ್ನೆಯರ ಗಡಣದಿಂ  ದ್ವಿಜನಿಕರದಿಂದ
ಸಂಪನ್ನ ದೀಕ್ಷೆಯೊಳೆಸೆವ  ಭೂಪನೆಡೆಗೈಯ್ದಿ
ಕೇಳ್ “ಸ್ವಸ್ತ್ಯಸ್ತು’ ನಿನಗೆಂದನೂ ॥

ಭಾಗವತರು: ಕೇಳಿದರೇನಯ್ಯ ಭಾಗವತರೇ, ಈ ಪ್ರಕಾರವಾಗಿ ಮಯೂರ ಧ್ವಜನು ಕೃಷ್ಣನನ್ನು ಕಾಣಲು ಹೊರಡುವ ಪ್ರಯತ್ನದಲ್ಲಿರಲು, ಬ್ರಾಹ್ಮಣ ವೇಷಧಾರಿಗಳಾದ ಕೃಷ್ಣಾರ್ಜುನರು ರಾಜನ ಬಳಿಗೆ ಬಂದು ಆಶೀರ್ವಾದ ವಚನದಿಂದ ಅಭಿವಂದಿಸಿದರೈಯ್ಯ ಭಾಗವತರೇ ॥

(ಕೃಷ್ಣಾರ್ಜುನರು ಬ್ರಾಹ್ಮಣ ವೇಷಧಾರಿಗಳಾಗಿ ಬರುವಿಕೆ)

ದರುವು

ಕ್ಷೇಮವೇ ಭೂಮಿಪತಿ  ಕ್ಷತ್ರಿಯ ನೃಪತಿ
ಪ್ರೇಮದಿ ಸಲಹಲೀ  ನಿನ್ನನು ಶ್ರೀಪತಿ ॥

ಕ್ಷಿತಿಪನೆ ನಿನ್ನಯಾ  ಸತಿಸುತರೆಲ್ಲರೂ
ಹಿತದಿಂದಲಿರುವರೇ  ಅತಿಶಯದಿ ಪೇಳೂ ॥ ॥

ಶ್ಲೋಕ

ಆಯುಷ್ಯ ವೃದ್ಧೀ ಕರಂಚೈವ
ಪುತ್ರಪೌತ್ರಃ ಪ್ರವರ್ಧನಂ ॥
ಸಂತೋಷಂ ಸರ್ವ ಕಾಲೇಷು
ಸಿದ್ಧಿರ್ಭವತು ಮಹೀಪತಿಃ ॥

ಬ್ರಾಹ್ಮಣ: ಹೇ ರಾಜ ! ಪತ್ನೀ ಪುತ್ರರಿಂದೊಡಗೂಡಿದ ನಿನಗೆ ಪರಮಾತ್ಮನು ಸಕಲ ಸನ್ಮಂಗಳವನ್ನುಂಟು ಮಾಡಲೈಯ್ಯ ದೊರೆಯೇ – ನಿಮಗಾರು ಸರಿಯೇ ॥

ಮಯೂರಧ್ವಜ: ಹೇ ಬ್ರಾಹ್ಮಣೋತ್ತಮಾ  ನಾನು ವಂದಿಸುವುದಕ್ಕೆ ಮುಂಚೆ ತಾವು ಆಶೀರ್ವಾದ ಮಾಡುವುದು ನ್ಯಾಯವಲ್ಲ. ಅಲ್ಲದೇ ಅದು ಶ್ರೇಯಸ್ಕರವಲ್ಲವೈ ವಿಪ್ರವರ‌್ಯನೇ – ದ್ವಿಜಕುಲೋತ್ತಮನೇ॥