ಬ್ರಾಹ್ಮಣ: ಹೇ ರಾಜ ತನ್ನ ಸಂಕಟವನ್ನು ಬಿನ್ನವಿಸಲು ಬಂದವನು ಮುಂಚೆ ಆಶೀರ್ವಾದ ಮಾಡಿ ತನ್ನ ಸಂಕಟವನ್ನು ತಿಳಿಸುವುದು ಉಚಿತ. ನಾನು ಆರ್ತನಾಗಿ ನಿನ್ನಲ್ಲಿಗೆ ಬಂದೆನಾದ್ದರಿಂದ ಇದರಲ್ಲಿ ದೋಷವಿಲ್ಲವಯ್ಯ ರಾಜೇಂದ್ರಾ – ಸದ್ಗುಣಸಾಂದ್ರ ॥

ಮಯೂರಧ್ವಜ: ಹೇ ವಿಪ್ರೋತ್ತಮಾ, ಹಾಗಾದರೆ ತಮ್ಮ ಸಂಕಟವೇನಿದ್ದರೂ ತಿಳಿಸಿದರೆ ಆ ದುಃಖವನ್ನು ಪರಿಹರಿಸಲು ಯತ್ನಿಸುವೆನೈ ವಿಪ್ರನೇ – ಬ್ರಾಹ್ಮಣ ಶ್ರೇಷ್ಟನೇ

ದರುವು

ಓಡಿ ಬಂದೆನೋ  ದೊರೆಯೇ  ಓಡಿಬಂದೆನೋ ॥ ॥

ಕೂಡಿ ಸುತನು ಸಹಿತ ನಾನು
ಅಡವಿಯೊಳಗೆ ಬರುತಲಿರಲೂ ॥
ಘುಡಿಘುಡಿಸುತ ಸಿಂಹವೊಂದು
ತಡೆದು ನಮ್ಮ ಅಡ್ಡಗಟ್ಟಲೂ ॥ಓಡಿಬಂದೆನೋ॥ ॥

ಬ್ರಾಹ್ಮಣ: ಹೇ ದೊರೆಯೇ  ನನ್ನ ಹೆಸರು ಕೃಷ್ಣಶರ್ಮ. ಧರ್ಮಪುರವು ನನ್ನ ವಾಸಸ್ಥಳ  ನನಗೊಬ್ಬನೇ ಮಗನಿರುವನು  ಆತನ ವಿವಾಹಕ್ಕೆ ನಿನ್ನ ಪುರೋಹಿತನಾದ ಸತ್ಯಶೀಲನ ಮಗಳನ್ನು ಕೇಳಲು ಆ ಮಗನೊಡನೆ ಅರಣ್ಯ ಮಾರ್ಗವಾಗಿ ಬರುತ್ತಿದ್ದೆನು. ಆಗ ದಾರಿಯಲ್ಲಿ ಒಂದು ಸಿಂಹವು ಯಮ್ಮನ್ನು ಅಡ್ಡಗಟ್ಟಿ ಯನ್ನ ಕುಮಾರನನ್ನು ಹಿಡಿಯಿತೈಯ್ಯ ಮಹೀಪತಿ – ಮುಂದೇನು ಗತಿ ॥

ದರುವು

ಬಂದು ಸಿಂಹವೂ  ಯನ್ನ  ಕಂದನಾ ಪಿಡಿದೂ ॥
ಇಂದು ನಿನ್ನ ಸುತನ ನಾನು
ಕೊಂದು ದೇಹ ಸೀಳಿ ಸಿಗಿದೂ
ತಿಂದು ತೇಗಿ ನುಸುಳಿ ಪೋಪೆ
ನೆಂದು ಹೇಳಿ ತಡೆದು ಬಿಡಲೂ  ಓಡಿಬಂದೆನೂ ॥ ॥

ಬ್ರಾಹ್ಮಣ: ಹೇ, ಭೂಪತಿಯೇ ! ಆಗ ನಾನು ಮಗನ ಮರಣಕ್ಕೆ ಮರುಗಿ ಗೋಳಿಡಲು  ಆ ಸಿಂಹವು ಆಶ್ಚರ್ಯವಾಗುವಂತೆ ಮನುಷ್ಯ ವಚನದಿಂದ “ಓ, ವಿಪ್ರಾ, ಸುಮ್ಮನೆ ಏಕೆ ಹಲಬುತ್ತೀಯೇ ಪುತ್ರರಿಲ್ಲದವರಿಗೆ ಸದ್ಗತಿ ಯಿಲ್ಲವೆಂಬುದು ನಿಜ  ನನ್ನ ಕೈಗೆ ಸಿಕ್ಕಿದ ನಿನ್ನ ಮಗನನ್ನು ಯಾರು ತಾನೇ ಬಿಡಿಸಿಕೊಳ್ಳಬಲ್ಲರು  ಸುಮ್ಮನೆ ಉಳಿದ ಶಿಷ್ಯರೊಡನೆ ಮಕ್ಕಳೊಡನೆ ಸುಖವಾಗಿರು  ಈತನನ್ನು ಕೊಂದು ಸೀಳಿ ತಿಂದು ಬಿಡುವೆನು ಎಂದಿತೈಯ್ಯ ರಾಜನೇ ಮುಂದೇನು ಯೋಚನೇ ॥

ದರುವು

ದೊರೆಯೆ ನಿಮ್ಮಯಾ  ಶ  ರೀರವರ್ಧವಾ ॥
ಭರದಿ ತಂದು ಕೊಡಲು ಯನಗೆ
ವರ ಸುತನನು ಬಿಡುವೆನೆನಲೂ ॥
ಧರಣಿಪತಿಯೆ ನಾನು ನಿಮ್ಮ
ಚರಣದೆಡೆಗೆ ತ್ವರಿತದಿಂದಾ  ಓಡಿಬಂದೆನು ॥ ॥

ಬ್ರಾಹ್ಮಣ: ಹೇ ನೃಪತಿಯೇ  ನಾನು ಪುತ್ರ ವ್ಯಾಮೋಹದಿಂದ, ಮೃಗರಾಜ ನಾನು ವೃದ್ಧ  ಇನ್ನೆಷ್ಠು ದಿನ ಬಾಳಬಲ್ಲೆನು  ಪುತ್ರನಿಲ್ಲದೆ ಬಾಳುವ ನನ್ನನ್ನು ತಿಂದು  ನನಗೆ ಸದ್ಗತಿ ದೊರಕಿಸುವ ಆ ಮಗನನ್ನು ಬಿಡು ಎನ್ನಲು  ಆಗ ಸಿಂಹವು “ಸಾಯಲು ಬಯಸುವವನಿಗೆ ಸರ್ವಪಾತಕಗಳೂ ಬರುವುದು  ಆದ್ದರಿಂದ ನೀನು ನನಗೆ ಬೇಡ  ಸುಪುಷ್ಠವಾದ ಮಯೂರಧ್ವಜನ ದೇಹದಲ್ಲಿ ಅರ್ಧವನ್ನು ಕೊಟ್ಟರೇ, ನಿನ್ನ ಮಗನ ದೇಹವನ್ನು ಬಿಡುವೆನು. ನೀನು ಬರುವವರೆವಿಗೂ ನಿನ್ನ ಸುತನನ್ನು ಕೊಲ್ಲೆನು’. ಎಂದು ಹೇಳಲು ತಮ್ಮ ಬಳಿಗೆ ಭರದಿಂದ ಬಂದಿರುವೆನು. ಯನ್ನ ವಂಶವನ್ನುದ್ಧರಿಸಿ ಸಲಹಬೇಕಯ್ಯ ರಾಯ ಪಾಲಿಸೆನಗಭಯ ॥

ದರುವು

ಶೋಕಿಸಲೇತಕೆ  ಬಿಡು ದುಃಖವಾ
ಏಕಮನದೊಳೂ  ಕೊಡುವೆನೀ ತನುವಾ ॥

ಎಷ್ಠು ದಿನವಿರಲೂ  ದೇಹಾ ಸ್ಥಿರವಲ್ಲಾ
ಸೃಷ್ಠಿಯೊಳು ನಿನಗೆ  ಕಷ್ಠ ಬಂತಲ್ಲಾ ॥

ನೆಲೆಯೆಂದು ತಿಳಿವೆನೇ  ನೆಲದೊಳು ಜೀವಾ
ಕುಲವುಳಿಯಲು ನಿನಗೆ  ಈವೆ ದೇಹವಾ ॥

ಮರುಗಲೇಕಯ್ಯ  ಮರುಳೇ ನೀನೀಗಾ
ಭರದಿ ಕೊಡುವೆನೂ  ಶರೀರ ಕೊಯ್ದೀಗಾ ॥

ಮಯೂರಧ್ವಜ: ಅಯ್ಯ, ಭೂಸುರೋತ್ತಮಾ ! ನಿನ್ನ ಮನಸ್ಸಿನ ಯೋಚನೆಯನ್ನು ಬಿಡು  ನನ್ನ ಮನೋರಥವು ಇಂದಿಗೆ ಸಫಲವಾಯಿತು. ಈಗ ನಾನೇ ಧನ್ಯನು.  “ಜಾತಸ್ಯಾಹಿ ಧೃವೋ ಮೃತ್ಯುಃ ಧೃವಂ  ಜನ್ಮ ಮೃತಸ್ಯಚ ॥ತಸ್ಮಾದ ಪರಿಹಾರ‌್ಯಾರ್ಥೇ ನ ತ್ವಂ ಶೋಚಿತು ಮರ್ಹಸೀ ॥ಎಂಬಂತೇ, ಈ ದೇಹವು ನೆಲದೊಳಗೆ ನೆಲೆಯೆಂದು ತಿಳಿಯುವೆನೇ  ಹುಟ್ಟಿದವನಿಗೆ ಮರಣವು ನಿಶ್ಚಯವು  ಮೃತನಾದವನಿಗೆ ಜನ್ಮವು ನಿಶ್ಚಯವು, ಆದ್ದರಿಂದ ಮಣ್ಣುಗೂಡುವ ಈ ದೇಹದಿಂದ ಭೂತ ತೃಪ್ತಿಯುಂಟಾದರೆ ಇದೇ ನನಗೆ ಸಾಕು. ಹೇ ವಿಪ್ರನೇ, ಇನ್ನು ಶೋಕವನ್ನು ಬಿಡು  ಯನ್ನ ದೇಹವನ್ನು ನಿನ್ನಯ ವಂಶವೃದ್ಧಿಗಾಗಿ  ಕೇಸರಿಯ ಆತ್ಮ ತೃಪ್ತಿಗಾಗಿ ಅರ್ಪಿಸುವೆನಯ್ಯ ವಿಪ್ರನೇ ದ್ವಿಜ ಕುಲೋತ್ತಮನೇ॥

ಕಂದಸಾವೇರಿ

ಈ ಮಹಾಸ್ಥಾನದೊಳ್ನೆರೆದಖಿಳ  ಭೂಸುರ
ಸ್ತೋಮಂ  ನಿರೀಕ್ಷಿಸುವುದಂದು  ಬಲಿಯ
ಧ್ವರಕೆ ವಾಮನಂ ಬಂದಂತೆ  ತನ್ನ ಮಖಕೀ
ದ್ವಿಜಂ ತಾನೇ ಬಿಜಯಂಗೈದನೂ ॥
ಶ್ರೀ ಮಾಧವ ಸ್ವರೂಪದೊಳೀಗಳರಿದು
ತನ್ನೀ ಮೈಯೊಳರ್ಧಮಂ  ಕೊಯ್ದು
ಕೊಟ್ಟಿಪೆನತಿ ಪ್ರೇಮದಿಂದೀ ತಂಗೆ  ಬದುಕ
ಲೀತನ ಸುತಂ  ಪೊಸತಾಗಲಿಳೆಗೆ  ಶ್ರೀಹರಿ ಪ್ರೀತಿಯಾಗಿ ॥

ಮಯೂರಧ್ವಜ: ಈ ಸಭಾ ಮಂದಿರದೋಳ್ ನೆರೆದಿರುವ ಅಖಿಳ ಭೂಸುರೋತ್ತಮರೇ ಲಾಲಿಸಿ. ನನ್ನ ರಾಜ್ಯದಲ್ಲಿ ನಾರಸಿಂಹನ ಸ್ತುತಿಯ ಹೊರತು ಸಿಂಹದ ಭೀತಿಯು ಕಾಣದು  ವಿಪ್ರನು ಹೇಳುತ್ತಿರುವುದು ತುಂಬಾ ಆಶ್ಚರ್ಯಕರವಾಗಿದೆ  ಮನುಷ್ಯನ ಬಾಳು ಶಾಶ್ವತವಲ್ಲ. ಆದ್ದರಿಂದ ಆತನಿಷ್ಠದಂತೆ ’ಬಲಿಚಕ್ರವರ್ತಿಯ ಯಾಗ ಮಂಟಪಕ್ಕೆ ಬಂದ ವಾಮನ ಮೂರ್ತಿಯಂತೆ  ತನ್ನ ಯಜ್ಞಕ್ಕೆ ಬಂದ ಈ ವಿಪ್ರನಿಗೆ ಆತನ ಪುತ್ರ ರಕ್ಷಣಾರ್ಥವಾಗಿ ನನ್ನ ದೇಹದಲ್ಲಿ ಅರ್ಧವನ್ನು ಕೊಡುತ್ತಿದ್ದೇನೆ. ಇದರಿಂದ ಆತನು ಸುಖಿಯಾಗಿ ಬಾಳಲೈ ಸಭಾಸದರೇ ॥

ಹೇ ಕುಮಾರ ! ಈ ಭೂಸುರೋತ್ತಮನ ಕುಲವೃದ್ಧಿಗಾಗಿ ಯನ್ನ ದೇಹದ ಅರ್ಧಭಾಗವನ್ನು ಕೊಯ್ದು ಕೊಡಲು ಸಿದ್ಧನಾಗಿರುತ್ತೇನೆ. ಆದಕಾರಣ ನೀನು ಗರಗಸವನ್ನು ತರಿಸಿ ಕಂಭಗಳನ್ನು ನೆಡಿಸಿ ಯನ್ನ ದೇಹವನ್ನು ಕೊಯ್ಯುವುದಕ್ಕೆ ಸಿದ್ಧಪಡಿಸುವುದಲ್ಲದೇ, ನಿನ್ನ ಮಾತೆ ಯನ್ನ ಪ್ರೀತೆಯಾದ ಕುಮುದ್ವತೀ ದೇವಿಗೆ ಈ ವಿಷಯವನ್ನು ತಿಳಿಸಿ ಇಲ್ಲಿಗೆ ಅತಿಜಾಗ್ರತೆ ಕರೆದುಕೊಂಡು ಬಾರೈ ಹೇ ಮಗೂ ನೀ ಬೇಗ ಹೋಗು ॥

ತಾಮ್ರಧ್ವಜ: ಅದೇ ಪ್ರಕಾರವಾಗಿ ಹೋಗಿ ಬರುತ್ತೇನೈ ತಾತ – ಲೋಕವಿಖ್ಯಾತ ॥

(ಕುಮುದ್ವತೀದೇವಿ ಬರುವಿಕೆ)

ದ್ವಿಪದೆಕಾಂಭೋಧಿ ರಾಗ

ಶ್ರೀ ಸಾಂಬ ಶಂಕರನ ಮನದಿ ಸ್ಮರಿಸುತಲೀ
ಶಿವನೆ ಗತಿಯೆಂದೆನುತ ಶಿಸ್ತು ಮಾಡುತಲೀ॥
ಉಟ್ಟ ಪಟ್ಟಾವಳಿಯ ನೆರಿಗೆ ಚಿಮ್ಮುತಲೀ
ತೊಟ್ಟ ಪೈಠಣೆಯ ಕುಪ್ಪಸವು ತೋಳಿನಲೀ ॥
ಇಟ್ಟ ಮೂಗುತಿ ಕಂಠಮಾಲೆ ವಪ್ಪುತಲೀ
ಕಟಿ ಮಧ್ಯದೊಳು ವಡ್ಯಾಣ ಧರಿಸುತಲೀ ॥
ಮೇಲಾದ ಹಸ್ತಕಡಗವು  ತಾ ಮೆರೆಯುತಲೀ
ಕಾಲು ಅಂದಿಗೆ ಗೆಜ್ಜೆಪಿಲ್ಲಿಯಂ ಧರಿಸುತಲೀ ॥
ಸೃಷ್ಠಿ ಕರ್ತನ ರಾಣಿಯಂತೆ ತೋರುತಲೀ
ರತ್ನಪುರಿಯರಸು ಮಯೂರಧ್ವಜನ ಪಟ್ಟದರಸೀ
ಕುಮುದ್ವತೀ ದೇವಿ ಹಿರಿಯಬಳ್ಳಾಪುರೀಶನ ಸ್ಮರಿಸಿ
ಹರುಷದಿಂದಲಿ ಬಂದು ತೆರೆಯೊಳಗೆ ನಿಂದೂ ॥

ತೆರೆದರುವು

ವಾರಿಜಾ ನೇತ್ರೆ ನೀನೂ
ತೋರಿಸೆನ್ನ ಪುತ್ರನನ್ನೂ ॥
ತುರಗದೊಡನೇ  ಪೋದ ಸುತನೂ
ತಿರುಗಿ ಪುರಕೇ  ಬಂದಿಹನಂತೇ ॥

ಕುಮುಧ್ವತೀದೇವಿ: ಅಪ್ಪಾ ಸಾರಥೀ ಹೀಗೆ ಬಾ ಮತ್ತೂ ಒಂದು ಸಾರಿ ಹೀಗೆ ಬಾ  ಅಯ್ಯ ಚಾರ ಸರಸಗುಣ ವಿಚಾರ ಪೇಳುವೆನು ಕೇಳೋ ನಮ್ಮ ವಿಚಾರ.

ಶ್ರೀಮನ್ ಧರಾಮಂಡಲದೋಳ್ ತರಣಿ ತೇಜದಂತೆ ವಿರಾಜಿಸುವ ಪುರ ರತ್ನನಗರವನ್ನು ಚಂದದಿಂ ಪರಿಪಾಲಿಸುವ ಕರುಣ ವಿಭೂಷಣ ಮಯೂರಧ್ವಜ ಭೂಪಾಲರಿಗೆ ಪ್ರಾಣ ಪತ್ನಿಯಾದ ಏಣಾಂಕ ವದನೆ ಜಾಣೆಯರ ಜಾಣೆ ನಾರಿ ಶಿರೋಮಣಿಯಾದಂಥ ಕುಮುದ್ವತೀ ದೇವಿಯೆಂಬ ನಾಮಾಂಕಿತವಲ್ಲವೇನಪ್ಪಾ ಸಾರಥೀ ॥

ಈ ವರ ಸಭಾಸ್ಥಾನಕ್ಕೆ ಅಗಮಿಸಿದ ಪರಿಯಾಯವೇನೆಂದರೇ ಯಾಗಾಶ್ವದ ಬೆಂಬಲವಾಗಿ ಹೊರಟಿದ್ದ ಯನ್ನ ಮೋಹದ ಕುಮಾರನಾದ ತಾಮ್ರಧ್ವಜನು ಹಿಂತಿರುಗಿ ಬಂದಿರುವನೆಂಬ ವರ್ತಮಾನವನ್ನು ತಿಳಿದು ಬಂದು ಇದ್ದೇನಪ್ಪಾ ಸಾರಥೀ ॥

ತಾಮ್ರಧ್ವಜ: ನಮೋನ್ನಮೋ ಹೇ ಜನನೀ – ಜಗನ್ಮೋಹಿನಿ ॥

ಕುಮುದ್ವತಿ: ಧೀರ್ಘಾಯುಷ್ಯಮಸ್ತು ಬಾರಪ್ಪಾ ಕಂದಾ – ಸಕಲ ಗುಣವೃಂದ ॥

ದರುವು

ಜನನಿ ಬಿನ್ನ  ಪವನು ಕೇಳಮ್ಮಾ  ಕರೆತರಲು ನಿಮ್ಮ
ಜನಕನೆನ್ನಾ  ಕಳುಹಿದಾನಮ್ಮಾ ॥

ತಾಮ್ರಧ್ವಜ: ತಾಯೇ, ಪನ್ನಗವೇಣಿಯೇ, ಮಾನ್ಯರೊಳತಿ ಸಂಪನ್ನರಾದ ತಂದೆಯವರು ನಿಮ್ಮನ್ನು ಕರೆತರಲು ಯನಗೆ ಅಪ್ಪಣೆಯನ್ನು ಕೊಟ್ಟಿರುವರಾದ ಕಾರಣ ಅಮ್ಮಾ, ಸನ್ನುತಾಂಗಿಯೇ, ಇನ್ನೇತಕ್ಕೆ ಆಲಸ್ಯ ಮಾಡುವಿರಿ  ಜಾಗ್ರತೆಯಿಂದ ರಾಜಾಸ್ಥಾನಕ್ಕೆ ತೆರಳಮ್ಮಾ ತಾಯೇ – ಜನಕನ ಪ್ರಿಯೇ ॥

ದರುವು

ವರ ತನುಜನೇ ಕೇಳೋ ನೀನಿನ್ನೂ  ಕರೆಸೀದ ಪರಿಯಾ
ಭರದಿ ಯನಗೇ ಪೇಳಬೇಕಿನ್ನೂ ॥

ಕುಮುದ್ವತಿ: ಅಪ್ಪಾ ಮಗುವೇ  ಯಾಗದೀಕ್ಷಿತರಾಗಿದ್ದ ಭೂಪಾಲರು ಯನ್ನನ್ನು ಆಸ್ಥಾನಕ್ಕೆ ಬರಹೇಳಲು ಕಾರಣವೇನು ? ಅಲ್ಲದೇ ಯಾಗಾಶ್ವದ ಬೆಂಬಲವಾಗಿ ಹೊರಟಿದ್ದ ನೀನು ಇಷ್ಠು ಜಾಗ್ರತೆಯಿಂದ ಇಲ್ಲಿಗೆ ಬರಲು ಕಾರಣವೇನು ? ಅದು ಎಲ್ಲವನ್ನೂ ಸವಿಸ್ತಾರವಾಗಿ ಯನಗೆ ವಿಶದಪಡಿಸೈಯ್ಯ ಪುತ್ರಾ ಸೌಂದರ‌್ಯಗಾತ್ರ ॥

ತಾಮ್ರಧ್ವಜ: ಹೇ ಜನನೀ, ಯಾಗಾಶ್ವದ ಬೆಂಬಲವಾಗಿ ನಾನು ಸಕಲ ಸೇನಾ ಪರಿವಾರ ಸಮೇತನಾಗಿ ಹೊರಟಿರಲು ದಾರಿಯಲ್ಲಿ ಹಸ್ತಿನಾಪುರವನ್ನು ಆಳುವಂಥ ಧರ್ಮರಾಯರ ಯಾಗದ ಕುದುರೆಯು ಕೃಷ್ಣಾರ್ಜುನರ ಬೆಂಗಾವಲಿನಿಂದ ಬರುತ್ತಿರಲು, ಆ ತುರಗವನ್ನು ಕಟ್ಟಿ, ಬೆಂಗಾವಲಿನ ಸೇನೆಯೊಡನೆ ಕಾದಿ, ಕೃಷ್ಣಾರ್ಜುನರನ್ನು ಮರವೆಗೊಳಿಸಿ ಬಂದು, ಕುದುರೆಗಳನ್ನು ತಂದೆಯ ಬಳಿಗೆ ತಂದಾ ಸಮಯದಲ್ಲಿ, ಒಬ್ಬ ವೃದ್ಧ ಬ್ರಾಹ್ಮಣನು ತನ್ನ ಶಿಷ್ಯನೊಡನೆ ಬಂದು, ಒಂದು ಸಿಂಹದ ತೃಪ್ತಿಗಾಗಿ ತಂದೆಯವರ ಅರ್ಧ ದೇಹವನ್ನು ದಾನವಾಗಿ ಬೇಡಲು, ಕೊಯ್ದು ಕೊಡಲೊಪ್ಪಿದ ಜನಕನು ಅತಿಜಾಗ್ರತೆಯಿಂದ ನಿಮ್ಮನ್ನು ಕರೆತರಲು ನೇಮವಿತ್ತಿಹರಾದ ಕಾರಣ ತಾವು ತ್ವರಿತದಿಂದ ತೆರಳಬೇಕಮ್ಮಾ ಮಾತೆ-ಲೋಕ ವಿಖ್ಯಾತೆ ॥

ದರುವು

ಸುತನೇ, ಅರುಣಧ್ವಜಾ  ಮತಿಯುತ ಪುತ್ರ ಕೇಳೋ ॥

ಕ್ಷಿತಿಯ ಪಾಲಕ ನಿಮ್ಮಾ  ಪಿತನು ಭೂಸುರನಿಗೇ
ಹಿತದೊಳು ಶರೀರವರ್ಧವನೂ  ಈಗ
ಮಥಿಸೀ ಕೊಡಲೇನೂ ಸುತನೇ॥ ॥

ಕುಮುದ್ವತಿ: ಅಪ್ಪಾ ಮಗನೇ, ನಿಮ್ಮ ತಂದೆಯವರು ಭೂಸುರನಿಗೆ ತಮ್ಮ ಅರ್ಧ ಶರೀರವನ್ನು ದಾನವಾಗಿ ಕೊಡಲು ಕಾರಣವೇನು ? ಕ್ಷಿತಿಯೊಳಗೆ ಇದು ಧರ್ಮ ಸಮ್ಮತವಾಗಿರುವುದೇ ಬಾಲ  ಏನು ವಿಪತ್ತು ಬಂದೊದಗಿತೋ ಮಗನೇ – ಮುಂದೇನು ಯೋಚನೆ ॥

ದರುವು

ಕರಿಪುರದ ಅರಸನಾ  ವರ ಯಾಗಾಶ್ವವ ಕಟ್ಟೀ
ನರನೊಡನೇ ಧುರಕೆ ನಿಲ್ಲಬಹುದೇ  ಈ
ಪರಿಯು ಸರಿಯಹುದೇ ಸುತನೇ॥ ॥

ಕುಮದ್ವತಿ: ಅಯ್ಯೋ ಕಂದಾ ! ಸತ್ಯಸಂಧರಾದಂಥ ಧರ್ಮರಾಯರ ಯಾಗದ ಕುದುರೆಯನ್ನು ಕಟ್ಟಿ ಅನುಜನಾದ ಪಾರ್ಥನೊಡನೆ ಯುದ್ಧವನ್ನು ಮಾಡಿ ಮರವೆಗೊಳಿಸಬಹುದೇ, ಇಂಥ ದುರುಳ ಕಾರ‌್ಯವನ್ನು ನೀನು ಮಾಡಬಹುದೇ  ಯಂಥಾ ಕೊರತೆಯನ್ನು ತಂದೊಡ್ಡಿದೆಯಪ್ಪಾ ಕುವರಾ – ಮಾಡಬಹುದೇ ಬವರಾ ॥

ದರುವು

ಸೃಷ್ಠಿಗೊಡೆಯನಾದ  ಜ್ಯೇಷ್ಠ ಜನಕನ ರಣದೀ
ಕಷ್ಠಕ್ಕೆ ಗುರಿಮಾಡಬಹುದೇ  ಇದೂ
ಶ್ರೇಷ್ಠವಾಗಿಹುದೇ ಸುತನೇ॥ ॥

ಕುಮದ್ವತಿ: ಅಯ್ಯೋ ದುರುಳ ಬಾಲಕನೇ, ಸೃಷ್ಠಿಪಾಲಕನಾದ ಜ್ಯೇಷ್ಠಪಿತ ಶ್ರೀಕೃಷ್ಣಮೂರ್ತಿಯ ಮೇಲೆ ಛಲವಹಿಸೀ  ಕಡುರೌದ್ರಮಾದ ಶರಗಳನ್ನು ಬಿಟ್ಟು ಕಷ್ಠಪಡಿಸಬಹುದೇ  ಇದು ನ್ಯಾಯವೇ  ಪೊಡವಿಯೊಳಗೆ ತುಂಬಾ ಅಪಕೀರ್ತಿಯುಂಟಾಗಲಿಲ್ಲವೇ  ದುಡುಕು ಬುದ್ಧಿಯನ್ನು ಮಾಡಿದೆಯೇನಪ್ಪಾ ಕಂದಾ – ನಿನಗಾಯಿತೆ ಆನಂದ ॥

ದರುವು

ಧರೆಯೊಳಧಿಕವಾದ  ಹಿರಿಯ ಬಳ್ಳಾಪುರದಾ
ವರ ಸೋಮನಾಥ ಮೆಚ್ಚುವನೇ  ಶ್ರೀ
ಹರಿಯು ಸಲಹುವನೇ ಸುತನೇ ॥ ॥

ಕುಮದ್ವತಿ: ಅಯ್ಯೋ ! ಕಡು ಮೂರ್ಖನೇ  ಈ ಧರಣಿಗೆ ಮಿಗಿಲೆನಿಸಿ ಸಡಗರದಿಂದೊಪ್ಪುವ ಕಡು ರಮಣೀಯವಾದ ಹಿರಿಯ ಬಳ್ಳಾಪುರದೊಡೆಯ ಮೃಢ ಸೋಮೇಶನು ನಿನ್ನ ನಡತೆಯನ್ನು ಸರ್ವಥಾ ಮೆಚ್ಚಲಾರನು. ಯಂಥಾ ದುಷ್ಕಾರ‌್ಯವನ್ನು ಮಾಡಿದೆಯಪ್ಪಾ ಮಗನೇ – ತಂದೆಯಾ ವೇದನೇ ॥

ದರುವು

ವರಮಾತೆ ಕೇಳಮ್ಮಾ  ತುರಗ ಬೆಂಗಾವಲಿಗೇ
ತ್ವರಿತದಿಂ ಹೊರಟು ನಾನೂ ॥

ದಾರಿಯೋಳ್ ಕರಿಪುರದಾ  ತುರಗ ಬರಲೂ ಎದಿರೂ
ಭರದಿಂದ ಕಟ್ಟೀ ಕಾದಿದೆನೂ  ಇದ
ಪರಿಹರಿಸಲೇನೂ ವರಮಾತೆ ॥ ॥

ತಾಮ್ರಧ್ವಜ: ಅಮ್ಮಾ ತಾಯೇ ! ವರಪಿತನಾಜ್ಞೆಯಂತೆ ಯಾಗದ ಕುದುರೆಯ ಬೆಂಬಲವಾಗಿ ಹೋಗುತ್ತಿರಲು, ಮಾರ್ಗದಲ್ಲಿ ಪಾಂಡವರ ಯಾಗಾಶ್ವವು ಬರಲು ಕ್ಷಾತ್ರ ಧರ್ಮದಂತೆ ಕಟ್ಟಿ ಕಾದಿದನೇ ಹೊರತು ಮತ್ತೆ ಬೇರಿಲ್ಲವಮ್ಮಾ ತಾಯೇ – ಕರುಣದಿಂ ಕಾಯೇ ॥

ದರುವು

ಹರಿಯ ಮೋಹದ ಪುತ್ರಾ  ಸುರರ ಪೊರೆಯಲು ತಾನು
ಹರಗೆ ಪ್ರಾಣವನೊಪ್ಪಿಸೀ ॥
ತರಣಿ ಶಶಿ ತಾರೆಗಳೂ  ಇರುವ ಪರ‌್ಯಂತರವು
ಧರಣಿಯೋಳ್ ಕೀರ್ತಿ ಪಡೆದಿಹನೂ  ಇದ
ನರಿಯೇ ನೀನಿನ್ನೂ ವರಮಾತೆ ॥ ॥

ತಾಮ್ರಧ್ವಜ: ಅಮ್ಮಾ ಜನನೀ ! ತಂದೆಯ ದೇಹಾರ್ಧವನ್ನು ಪರಹಿತಾರ್ಥವಾಗಿ ಕೊಡಲು ನೀವು ಚಿಂತಿಸಲೇಕೆ ? ಹಿಂದೆ ಮನ್ಮಥನು ತಾರಾಕಾಸುರನ ಉಪಟಳವನ್ನು ಪರಿಹರಿಸಲೋಸುಗ ತನ್ನ ದೇಹವನ್ನು ಶಿವನ ಉರಿಗಣ್ಣಿಗೆ ಆಹುತಿಯನ್ನಾಗಿ ಕೊಟ್ಟು ಲೋಕ ಕಲ್ಯಾಣವೆಸಗಿ ಕೀರ್ತಿ ಪಡೆಯಲಿಲ್ಲವೇ. ಇದ ನೀನು ಅರಿಯದವಳೇನಮ್ಮಾ ಮಾತೆ ಲೋಕ ವಿಖ್ಯಾತೆ ॥

ದರುವು

ಹಿರಿಯ ಬಳ್ಳಾಪುರದೀ  ಸ್ಥಿರವಾಗಿ ನೆಲೆಸಿರ್ಪಾ
ವರ ಸೋಮನಾಥನನೂ ॥
ಸ್ಮರಿಸುತ್ತಾ ಮನದೊಳೂ  ತೆರಳೋಣ ಬಾರಮ್ಮಾ
ವರಜನಕನೆಡೆಗೆ ನಾವಿನ್ನೂ  ಇದಕೆ
ಮರುಗಲೇಕಿನ್ನೂ ವರಮಾತೆ॥ ॥

ತಾಮ್ರಧ್ವಜ: ಹೇ ತಾಯೇ ! ನಿಮ್ಮ ಮನದ ಚಿಂತೆಯನ್ನು ಬಿಡಿ  ಅಲ್ಲದೇ ಧಾರುಣಿಗತಿಶಯವಾದ ಹಿರಿಯ ಬಳ್ಳಾಪುರದಲ್ಲಿ ಸ್ಥಿರವಾಗಿ ನೆಲೆಸಿರ್ದಾ, ಪರಮ ಪರಶಿವ, ಪಾರ್ವತೀಶನಾದ ಶ್ರೀ ಸೋಮನಾಥನ ಚರಣಾರವಿಂದಗಳಂ ಸ್ಮರಿಸಿದವರಾಗಿ ಜನಕನೆಡೆಗೆ ಪೋಗೋಣ ಬಾರಮ್ಮಾ ತಾಯೇ ಹಿಮಾಂಶು ಮುಖಛಾಯೇ॥

ಕುಮುದ್ವತಿ: ಅದೇ ಪ್ರಕಾರ ಹೋಗೋಣ ಬಾರಪ್ಪಾ ಬಾಲ – ಸುಗುಣ ವಿಶಾಲ ॥

(ರಾಜನ ಬಳಿಗೆ ಸತಿಸುತರು ಬರುವಿಕೆ)

ಕುಮುದ್ವತಿ: ನಮೋ ನಮಸ್ಕಾರಂಗಳೈಯ್ಯಾ ರಮಣಾ – ಸದ್ಗುಣಾಭರಣ ॥

ಮಯೂರಧ್ವಜ: ಧೀರ್ಘ ಸುಮಂಗಲಿಯಾಗಿ ಬಾಳು ರಮಣೀ – ಕಾಂತಿ ದ್ಯುಮಣಿ ॥

ಕುಮುದ್ವತಿ: ಯನ್ನಿಷ್ಠು ತವಕದಿಂ ಕರೆಸಿದ ಪರಿಯೇನೋ ಪೇಳಬೇಕೈ ಕಾಂತ – ಸರಸ ಧೀಮಂತಾ॥

ಕಂದ ಸಾವೇರಿ ರಾಗ

ಬಾಲಲೀಲೆಗಳಿಂದ ನಂದನಂ  ತರುಣಿ
ರತಿಕಾಲದೋಳ್ನಖದಿಂದ  ಸೀಳಲ್ಕೆ
ನೋವುದೇ ವಿಶಾಲಾಕ್ಷಿ ತನಗಿದು ವಿನೋದಂ
ಅಸಿಪತ್ರದಿಂ ಸೂನು ಸಹಿತೀಗ ನೀನೂ ॥
ಆಲಸ್ಯ ಮಾಡದರಿವುದೀ ಮಸ್ತಕದ
ಮೇಲಿಣಿಂದಿಳಿಯೇ  ಮುಂತಾಗಿ
ತನ್ನಂಗಮಂ  ಪಾಲೆರಡು ಸಮಮಾಗೆ
ಗರುಡ ಹನುಮಂತರ್ಗೆ ಚಕ್ರಿ ಪಣ್ಪಂಚಿದಂತೆ ॥ ॥

ಮಯೂರಧ್ವಜ: ಹೇ ಕಾಂತೆ ! ಯನ್ನ ದೇಹವನ್ನು ಭೂತ ತೃಪ್ತಿಗಾಗಿ ಕೊಡಲು ಬ್ರಾಹ್ಮಣನಿಗೆ ಅಭಯವಿತ್ತಿಹೆ ನಾದ ಕಾರಣ ಇನ್ನು ನೀನು ಆಲಸ್ಯ ಮಾಡದೆ ಸುತನೊಂದಿಗೆ ಕೂಡಿ  ವಿಷ್ಣುವು ಹಣ್ಣನ್ನು ಸಮವಾಗಿ ಸೀಳಿ ಗರುಡ ಹನುಮಂತರಿಗೆ ಹಂಚಿದಂತೆ ಯನ್ನ ಮಸ್ತಕವನ್ನು ಕರಪತ್ರದಿಂದ ಇಬ್ಭಾಗವಾಗಿ ಸೀಳಿ ಭೂಸುರನ ವಂಶವನ್ನುಳಿಸೇ ಕಾಂತೆ – ಸರಸ ಧೀಮಂತೆ ॥

ದರುವು

ದೊರೆಯೇ  ಪರಿಯೇನಿದೂ  ನಿಮ್ಮ
ಶರೀರ ಕೊಯ್ಯುವುದೂ ॥

ವರ ವಿಪ್ರೋತ್ತಮನಿಗೇ  ಶರೀರವರ್ಧವ ಕೊಡಲು ॥
ಅರಸ ನೀನಿಂತು ಒಪ್ಪುವರೇ  ಈ
ಧರೆಯೊಳಗಿಹರೇ ದೊರೆಯೇ ॥ ॥

ಕುಮುದ್ವತಿ: ಹೇ ದೊರೆಯೇ ! ಏನೂ ಅರಿಯದ ಅಜ್ಞಾನಿಯಂತೆ  ಭ್ರಾಂತುಗೊಂಡು ಭೂಸುರೋತ್ತಮನಿಗೆ ಶರೀರಾರ್ಧವನ್ನು ಕೊಡಲು ಒಪ್ಪಿರುವ ಹದನಾವುದಕಟಾ  ನೀವೇ ಈ ರೀತಿಯಾಗಿ ಪಂಥ ಹಿಡಿದರೆ ನಾನು ಮಾಡುವುದೇನು ? ಸರ್ವ ಜನ ಪಾಲಕರಾದ ನಿಮಗಿದು ಸರ್ವಥಾ ನ್ಯಾಯವಲ್ಲವೈ ಕಾಂತ – ಇದು ಏನು ಪಂಥ ॥

ದರುವು

ವರಪುತ್ರ ಸತಿಸೇರಿ  ಹರಿವ ಗರಗಸ ಪಿಡಿದೂ
ಶರೀರಾವ ಕೊಯ್ವುದು ಹೇಗೆ  ಇದ
ನರಿಯಲು ಬೇಗೇ  ದೊರೆಯೇ ॥ ॥

ಕುಮುದ್ವತಿ: ಹೇ ಸರ್ವ ಜನ ಶರಣ್ಯ ! ವೇದಗಳು ಸಾರುತ್ತಿರುವಂತೆ ಪತಿಯೇ ದೈವವೆಂದು ನಂಬಿರುವ ನಾನು ಸುತನೊಂದಿಗೆ ಕೂಡಿ, ಕೈ ಹಿಡಿದ ನಿಮ್ಮಯ ಶಿರವನ್ನು ಜಡವಸ್ತುವನ್ನು ತರಿದಂತೆ ಗರಗಸದಿಂದ ಹೇಗೆ ಕೊಯ್ಯಲೋ ರಮಣಾ  ಈ ಕಾರ‌್ಯಗತ ಮಾಡುವ ಎನಗೆ ಭವ ಭವಾಂತರಕ್ಕೂ ದೋಷ ತಪ್ಪುವುದಿಲ್ಲವೈ ದೊರೆಯೇ – ನಿಮಗಿದು ಸರಿಯೇ ॥

ದರುವು

ಹಿರಿಬಳ್ಳಾಪುರ ಗೌರೀ  ವರಗಂಗೆಯರಸನೇ
ಕರುಣದಿ ಕಾಯೋ ಶಂಕರನೇ  ಸೋಮ
ಧರ ಮೃತ್ಯುಂಜಯನೇ ದೊರೆಯೇ ॥ ॥

ಕುಮುದ್ವತಿ: ಅಯ್ಯೋ ಹರ ಹರಾ ! ಈ ಧರೆಗೆ ಹಿರಿದೆನಿಸಿ ಮೆರೆಯುವ ಹಿರಿಯ ಬಳ್ಳಾಪುರದೊಡೆಯ ವರ ಸೋಮೇಶ್ವರನೇ  ನಿನ್ನಯ ಪರಮ ಭಕ್ತರಿಗೆ ಬಂದಡಸಿರುವ ಎಡರನ್ನು ಪರಾಭವಗೊಳಿಸಿ ಸಡಗರದಿಂದ ಕಾಯಬೇಕೋ ಮೃತ್ಯುಂಜಯಾ ನಿನ್ನ ಭಕ್ತರಿಗೆ ನೀನೇ ಸಹಾಯ ॥

ದರುವು

ಇನಿತು ಚಿಂತೆಯೇಕೇ  ಬಿಡು ಬಿಡು
ವನಜಾಕ್ಷಿಯೇ ಮನಕೇ ॥

ತನುವಿದು ಶಾಶ್ವತ  ವಲ್ಲವು ತಿಳಿ ನೀ
ಅನುಮಾನಿಸದಿರು  ವನಜಗಂಧಿನೀ  ಇನಿತು ಚಿಂತೆ ॥

ಮಯೂರಧ್ವಜ: ಹೇ ಯನ್ನ ಮನೋಪ್ರೀತೆ  ಭೂತಳಕ್ಕೆ ಶಿರವನ್ನು ತಗ್ಗಿಸಿಕೊಂಡು ಏತಕ್ಕೆ ರೋಧಿಸುತ್ತಿರುವೆ. ಅಶಾಶ್ವತವಾದ ಈ ದೇಹವನ್ನು ಸ್ಥಿರವೆಂದು ನಂಬಿ ದೈವವನ್ನು ಮರೆತು ವಿಧವಿಧವಾದ ಕಷ್ಠಗಳನ್ನು ಅನುಭವಿಸುವುದಕ್ಕಿಂಥ ಬ್ರಾಹ್ಮಣ ಕುವರನ ಪ್ರಾಣವನ್ನುಳಿಸುವುದಕ್ಕಾಗಿ ಕೇಸರಿಗೆ ತನುವನೀಯುವುದು ನೀತವಾಗಿ ತೋರುವುದೇ ರಮಣೀ ಕಾಂತಿ ದ್ಯುಮಣಿ ॥