ಕವಿ: ಎಚ್.ಎಸ್. ಸುಬ್ಬರಾಯಪ್ಪ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಜವಳಿ ವ್ಯಾಪಾರಿಗಳಾದ
ಹಣಬೆ ಶ್ರೀಕಂಠಪ್ಪನವರ ಕುಮಾರ ಬಿ.ಎಸ್‌ಸಿ., ಪದವೀಧರರಾದ
ಶ್ರೀ ಎಚ್.ಎಸ್. ಸುಬ್ಬರಾಯಪ್ಪನವರು ಶಾರ್ವರೀ ವರುಷ ಕಾರ್ತೀಕ
ಬಹುಳ ಸಪ್ತಮಿ ಗುರುವಾರದಂದು ರಚಿಸಿದ್ದು (12.03.1965)

 

ವಿಘ್ನೇಶ್ವರ ಪ್ರಾರ್ಥನೆ

ಶ್ರೀ ಕಾಂತೋ ಮಾತುಲೋ ಯಸ್ಯ  ಜನನೀ ಸರ್ವಮಂಗಳಾ
ಜನಕಃ ಶಂಕರೋ ದೇವಃ  ತ್ವಂ ವಂದೇ ಕುಂಜರಾನನಂ ॥ ॥

ಗಜಾನನಂ ಭೂತಗಣಾಧಿ ಸೇವಿತಂ  ಕಪಿತ್ಥ ಜಂಬೂ ಫಲಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶ ಕಾರಣಂ  ನಮಾಮಿ ವಿಘ್ನೇಶ್ವರ ಪಾದ ಪಂಕಜಂ    ॥

ಶಾರದಾ ಸ್ತುತಿ

ಯಾ ಕುಂದೇಂದು ತುಷಾರ ಹಾರ ಧವಲಾ  ಯಾ ಶುಭ್ರ ವಸ್ತ್ರಾನ್ವಿತ
ಯಾ ವೀಣಾ ವರ ದಂಡ ಮಂಡಿತಕರ  ಯಾ ಶ್ವೇತ ಪದ್ಮಾಸನಾ
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿರ್ದೇವೈ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತಿ ಭಗವತೀ ನಿಶ್ಯೇಷ ಜಾಡ್ಯಾಪಹಾ

ಗುರು ಸ್ತುತಿ

ಗುರುರ್ಬ್ರಹ್ಮಾ ಗುರುರ್ವಿಷ್ಣುಃ  ಗುರುರ್ದೇವೋ ಮಹೇಶ್ವರಃ ॥
ಗುರು ಸಾಕ್ಷಾತ್ಪರಬ್ರಹ್ಮ  ತಸ್ಮೈ ಶ್ರೀ ಗುರುವೇ ನಮಃ ॥

ದೇವ ಸ್ತುತಿ

ರಜೋ ಜುಕ್ಷೇ ಜನ್ಮನಿ ಸತ್ವ ವೃತ್ತಯೇ
ಸ್ಥಿತಾ ಪ್ರಜಾನಾಂ ಪ್ರಲಯೇ ತಮೋಸ್ಪಶೇ ॥
ಅಜಾಯ ಸರ್ಗ ಸ್ಥಿತಿ ನಾಶ ಹೇತವೇ
ತ್ರಯೀ ಮಯಾಯ ತ್ರಿಗುಣಾತ್ಮನೇ ನಮಃ ॥

ಗಣಸ್ತುತಿದರುವು

ಅಂಬಿಕಾ ವರಪುತ್ರಾ  ಕಂಭೋದ್ಭವನ ಪೌತ್ರಾ
ಇಂಬುಗೊಡು ಮನ ನಿನ್ನೊಳು  ದೇವಾ ಹೇ ದೇವಾ ॥

ನಾರದಾ ಮುನಿ ವಂದ್ಯಾ  ಎರಗೀ ಪೂಜಿಪೆ ನಿಮ್ಮಾ
ಹರುಷಾಮತಿ ಯನಗಿತ್ತು  ಸಲಹೋ ಗಣನಾಥಾ ವಿಘ್ನನಾಥಾ ॥

ವೇದಾಗಮಗಳಿಗೆಲ್ಲಾ  ಆದಿದೇವನು ನೀನೇ
ಮೋದದಿಂದೀ ಕೃತಿಗೆ  ಪಾಲಿಸು ಮಂಗಳವಾ ಸಂಪದವಾ ॥

ಧರೆಗಧಿಕಾ ಹಿರಿಬಳ್ಳಾ  ಪುರದಾ ಸೋಮೇಶ್ವರನಾ
ವರಪುತ್ರ ಸುಚರಿತ್ರಾ  ಪಾಹಿ ಗಣನಾಥಾ ಗುಣಭರಿತಾ ॥

ಭಾಗವತರ ಮಾತು: ಧರಣಿಗತಿಶಯನಾದ ಹಿರಿಯ ಬಳ್ಳಾಪುರದೊಡೆಯ ಮೃಢ ಮೃತ್ಯುಂಜಯ ಮಾರವೈರೀ ಪರಶಿವ ವರ ಸೋಮೇಶನ ಮೋಹದ ಪುತ್ರನಾದ ಹೇ ಸ್ವಾಮೀ ಗಜಾನನಾ, ರತ್ನ ಖಚಿತವಾದ ಈ ಸಭಾಸ್ಥಾನಕ್ಕೆ ತಾವು ದಯಮಾಡಿಸಿದ್ದರಿಂದ ಕಣ್ಣಿನಿಂ ನೋಡಿ ಕರ್ಣಂಗಳಿಂ ಕೇಳಿ ನಲಿಯುವ ಮಹಾಜನಗಳಿಗೆಲ್ಲಾ ಪರಮಾನಂದವಾಯಿತು. ಈಗ ನಾವು ಅಭಿನಯಿಸುವ ಯಕ್ಷಗಾನ ತಾಮ್ರಧ್ವಜನ ಕಾಳಗವೆಂಬ ನಾಟಕಕ್ಕೆ ಯಾವ ವಿಘ್ನವೂ ಬಾರದಂತೆ ನಿರ್ವಿಘ್ನವನ್ನು ದಯಪಾಲಿಸಿ ತಾವು ರಜತಾದ್ರಿಗೆ ತೆರಳಬಹುದೈ ಸ್ವಾಮೀ ಗಣಾಧಿಪಾ – ಸಕಲ ವಿಘ್ನಾಧಿಪಾ ॥

ಶಾರದಾಸ್ತುತಿ

ಅಜನ ರಾಣಿ  ಭುಜಗ ವೇಣಿ  ಭಜಿಪೆ ನಿಮ್ಮನೂ
ತ್ರಿಜಗವಂದಿತೆ  ಸುಜನ ವಿನುತೆ  ನಿಜದಿ ನುತಿಪೆನೂ ॥

ಶರಣು ಶರಣು  ದೇವಿ ಶಾರದೇ  ಸ್ಮರಿಪೆ ನಿಮ್ಮನೂ
ಚರಣ ನೀರಜ ಭರದಿ ಪಿಡಿದೂ  ಎರಗುತಿರುವೆನೂ ॥

ಜಯತು ಜಯತು  ಜಗನ್ಮಾತೆ  ಜಯ ಸುವಿಖ್ಯಾತೆ
ದಯಮಾಡು  ಧವಳ ಗೀತೆ  ಜಯ ಸುಚರಿತ್ರೇ  ॥

ಪೊಡವಿ ಹಿರಿಯಾ  ಬಳ್ಳಾಪುರದಿಂ  ಮೃಡ ಗಿರೀಶನಾ
ಅಡಿ ಸರೋಜವ  ಸ್ಮರಿಪ ಯನ್ನ  ಬಿಡದೆ ಪಾಲಿಸು ॥

ಪೀಠಿಕೆ: ಅಯ್ಯ ಚಾರಕುಲ ಶಿಖಾಮಣಿ ಈಗ ಬಂದವರು ಧಾರೆಂದು ಕರ ಸರೋಜ ಯುಗಳವಂ ಮುಗಿದು ವಿಧ ವಿಧವಾಗಿ ಅಂಜಲಿಬದ್ಧನಾಗಿ ಭೀತಿಯಂ ಪಟ್ಟು ನೀತಿಯಂ ಬಿಡದೆ ನಯ ವಿನಯಗಳಿಂದ ಮಾತನಾಡಿಸುವ ಸುಭಟ ನೀ ಧಾರೋ ಬದಲುತ್ತರವ ಸಾರೋ ॥

ಅಯ್ಯ ಸಾರಥೀ, “ವಿಷ್ಣುರ‌್ನಾರಾಯಣಃ ಕೃಷ್ಣೋ ವೈಕುಂಠೋ ವಿಷ್ಠರ ಶ್ರವಾಃ “ಇಂತಪ್ಪ ನಾಮಗಳಿಂದ ಅಂಡಜ ಪಿಂಡಜ ಸ್ವೇದಜ, ಜರಾಯುಜವೇ ಮೊದಲಾದ ಸ್ಥಾವರ ಜಂಗಮಗಳ ಸೃಷ್ಠಿ ಸ್ಥಿತಿ ಲಯಕ್ಕೆ ಕಾರಣಕರ್ತನಾಗಿರುವ ದೇವಕೀ ತನಯ ದೇವಪುರ ನಿಲಯ ವಾಸುದೇವನಿಗೆ  ಸುಪುತ್ರನೆಂದೆನಿಸಿದ ಸತ್ಯಲೋಕಕ್ಕಧಿಪತಿಯಾದ ಚತುರ್ಮುಖನಿಗೆ ಅರ್ಧಾಂಗಿನಿಯೆನಿಸಿ ವರ ಭರತ ಶಾಸ್ತ್ರಗಳ ಕೋವಿದೆಯಾದ ಭಾರತಿಯೆಂದು ತಿಳಿಯಪ್ಪಾ ಸಾರಥೀ ॥

ಈ ವರ ಸಭಾಸ್ಥಾನಕ್ಕೆ ಆಗಮಿಸಿದ ಪರಿಯಾಯವೇನೆಂದರೆ ನೀನು ಪರಿಪರಿಯಾಗಿ ಯನ್ನನ್ನು ಪ್ರಾರ್ಥಿಸಿದೆಯಾದ ಕಾರಣ ಸಂತೋಷಭರಿತಳಾಗಿ ಬಂದು ಇರುತ್ತೇನೆ. ಇನ್ನು ನಿನ್ನ ಇಷ್ಠಾರ್ಥವೇನೋ ಬೇಡಿಕೊಳ್ಳಬಹುದೈಯ್ಯ ಸಾರಥಿ – ಸುಜ್ಞಾನಮತಿ ॥

ಸಾರಥಿ: ಅಮ್ಮಾ, ಶಾರದೆ ತಾವು ಈ ವರ ಸಭಾಸ್ಥಾನಕ್ಕೆ ದಯ ಮಾಡಿಸಿದ್ದರಿಂದ ಇಲ್ಲಿ ನೆರೆದಿರುವ ಸಭಿಕರೆಲ್ಲರಿಗೂ ಸಂತೋಷವಾಯಿತು. ಅಲ್ಲದೆ ಈಗ ನಾವು ಅಭಿನಯಿಸುವ ಯಕ್ಷಗಾನ ತಾಮ್ರಧ್ವಜನ ಕಾಳಗವೆಂಬ ನಾಟಕಕ್ಕೆ ಯಾವ ವಿಘ್ನವೂ ಬಾರದಂತೆ ನಿರ್ವಿಘ್ನವನ್ನು ದಯಪಾಲಿಸಬೇಕಮ್ಮಾ ತಾಯೇ ವರವನ್ನೀಯೇ ॥

ಶಾರದೆ: ಅಯ್ಯ ಸಾರಥೀ, ಈಗ ನೀನು ಅಭಿನಯಿಸುವ ತಾಮ್ರಧ್ವಜನ ನಾಟಕಕ್ಕೆ ಯಾವ ವಿಘ್ನವೂ ಬಾರದಂತೆ ಸರ್ವ ವಿಘ್ನೋಪ ಶಾಂತಿಯಾಗಲೆಂದು ಆಶೀರ್ವಾದವನ್ನು ದಯಪಾಲಿಸಿರುತ್ತೇನೆ. ನಾನು ಬಂದು ಹೇರಳ ಹೊತ್ತಾಯಿತು. ಇನ್ನು ಅಜಪುರಿಗೆ ಹೋಗಿ ಬರುತ್ತೇನೈ ಸೂತ್ರಧಾರಾ – ಮುಂದೆ ನಡೆಯಲಿ ಕಥಾನುಸಾರ ॥

ವಂದನೆ ಕಂದ

ಮೊಗಮಾವ ಲೀಲೆಯಿಂದೆಸೆವುದಾ ಭಾವಮಂ
ಮಗುಳೆ ತೋರುವುದಲ್ಲದನ್ಯ ಪ್ರಕಾರದಿಂ
ಸೊಗಯಿಪುದೆ ರನ್ನಗನ್ನಡಿ ಧರೆಯೊಳಾ
ರಾಜಿಸುವ ಕನ್ನಡದ ನುಡಿಗಳಾ ॥
ಬಗೆಯರಿದ ಕಾವ್ಯ ಲಕ್ಷಣದಿಂದ ಮುನ್ನ
ಕಬ್ಬಗಳನುಸುರಿದರದೇ ಲಕ್ಷ್ಯಮಲ್ಲದೇ
ಪೆರತೆನಗೆ ಸಲ್ಲದದರಿಂದ ಪೂರ್ವ ಸತ್ಕವಿ
ಗಳ್ಗೆ ನಮಿಸಿ ನಾಂ ಕೃತಿ ಪೇಳ್ವೆನೂ ॥

ವಿನಂತಿದರುವುತ್ರಿವುಡೆ

ದೇವಗಜ ಮುಖಗೆರಗಿ ನಿರುತದೀ
ದೇವಿವಾಣಿಯ ಸ್ಮರಿಸಿ ಮುದದೀ
ಭಾವಿಸುವೆ ಲಕ್ಷ್ಮೀಶ ಕವಿಯಾ  ದೇವಪುರ ಪತಿಯಾ ॥

ಭಾರತದ ಕಥೆಯೊಳಗೆ ಅಸಮಾ
ವೀರ ತಾಮ್ರಧ್ವಜನ ಚರಿತೆಯಾ
ಹರನ ದಯದಿಂ ಪೇಳ್ವೆ ಬುಧಜನ  ರರಿತು ತಿದ್ದಿಪುದೂ ॥

ಧರಣಿಗತಿಶಯ ಹಿರಿಯ ಬಳ್ಳಾ
ಪುರದ ಹಣಬೆ ಶ್ರೀಕಂಠಪ್ಪನ
ವರ ಸುಪುತ್ರನು ಸುಬ್ಬರಾಯಪ್ಪನು ಬರೆದಿಹನೂ ॥

ವಸುಧೆಯೊಳು ಶ್ರೀ ತುಲಸೀರಾಮ
ದಾಸರಾವರ ಶಿಷ್ಯರೆಂದೂ
ಎಸೆವ ಕವಿವರ ರಾಮದಾಸರು  ಬೆಸಸಿದಾರೆನಗೇ ॥

ಕೃತಿ ರಚನೆ ಗೈಯುವ ವಿಧಾನವು
ಕ್ಷಿತಿಯೊಳಗೆ ಗುರುಹಿರಿಯ ಚರಣವ
ಸತತ ಸೇವಿಸಿ ಪಡೆದೆನವರಿಂ  ದತಿಶಯದ ಮತಿಯಾ ॥

ಹಿರಿಯ ಬಳ್ಳಾಪುರದ ಅಂತ್ಯದಿ
ಸ್ಥಿರದಿ ನೆಲೆಸಿದ ಸೋಮನಾಥನಾ
ಸ್ಮರಿಸಿ ಬರೆದಿಹ ಕಥೆಯ ಲಾಲಿಸಿ  ಧಾರುಣೀ ಜನರೂ ॥

ಬಿನ್ನಪಕಂದ

ಆದಿಯೊಳು ಗಜಮುಖನಿಗೆರಗಿ ನಮಿಸುತ್ತಾ
ಮೋದದೊಳು ಶಾರದೆಯ ಮನದಿ ಭಜಿಸುತ್ತಾ
ಆದಿಕವಿ ವಾಲ್ಮೀಕಿ, ವ್ಯಾಸ ಮಹಾ ಮುನಿಯಾ
ಉದಧಿ ಶಯನ ಮದನಾರಿಯರ ಸ್ಮರಿಸೀ
ಬುಧಜನರ ಚರಣಕ್ಕೆ ಶಿರಬಾಗಿ ನಮಿಸೀ
ವಿಧವರಿತು ಪೇಳ್ವೆ ತಾಮ್ರಧ್ವಜನ ಚರಿತೆಯನೂ ॥ ॥

ಧರೆಯೊಳಮರಾವತಿಯಂತೆ ವಪ್ಪುವಾ
ಹಿರಿಯ ಬಳ್ಳಾಪುರದೊಳಗೆ ವಾಸಿಸುವಾ
ಸಿರಿ ಹಣಬೆ ಶ್ರೀಕಂಠಪ್ಪನ ವರ ತನೂಭವಾ
ಚಾರು ಗುಣಯುತ ಸುಬ್ಬರಾಯಪ್ಪನೆಂಬುವಾ
ವರ ಬಾಲಕನು ಸೋಮೇಶನಂಕಿತದಿಂ ಬರೆದಿರುವ
ಚರಿತೆಯನು ಬುಧ ಜನರು ಅರಿತು ತಿದ್ದುವುದೂ ॥

ಭಾಗವತರ ಮಾತು: ಕೇಳಿದರೇನಯ್ಯ ಸಭಾಜನರೆ, ಈ ಪ್ರಕಾರವಾಗಿ ಆದಿಯೊಳು ಇಷ್ಠದೇವತೆಯಾದ ವರ ಸೋಮೇಶನನ್ನು ಪ್ರಾರ್ಥಿಸಿ, ಕವಿ ಕುಲಗುರುಗಳಾದ ವ್ಯಾಸ ವಾಲ್ಮೀಕಿ, ಜೈಮಿನಿ ಮಹಾಮುನಿಗಳಿಗೆ ವಂದಿಸೀ, ಗುರುಹಿರಿಯರಿಗೆ ಶಿರಬಾಗಿ ನಮಿಸೀ, ಭಾರತದ ಕಥೆಯೊಳಗೆ ಅಶ್ವಮೇಧಿಕ ಪರ್ವದಲ್ಲಿ ವರ್ಣಿತವಾಗಿರುವ ವೀರ ತಾಮ್ರಧ್ವಜನ ಚರಿತೆಯನೂ, ಧಾರುಣಿ ಜನರು ಅರಿವಂತೆ ಹೇಳುವೆನಾದರೂ ಹಸ್ತದೋಷದಿಂದಾದ ಲೋಪಗಳಿದ್ದಲ್ಲೀ, ಬುಧ ಜನರು “ಹಂಸಕ್ಷೀರ” ನ್ಯಾಯದಂತೆ ಗುಣ ಗ್ರಹಣ ಮಾಡಿ ತಪ್ಪುತಿದ್ದಿ ರಕ್ಷಿಸಬೇಕೈ ಸಭಾಸದರೇ ॥

ಪೂರ್ವಕಥಾ ಸೂಚನೆ

ಭಾಗವತರದರುವುತ್ರಿವುಡೆ

ಅಶ್ವಮೇಧಿಕ ಪರ್ವದೊಳಗೇ
ಅಶ್ವಮೇಧವ ಮಾಡಲೋಸುಗ
ಅಶ್ವಪೂಜೆಯ ಗೈದು ಧರ್ಮಜ  ಕೇಶವಾಜ್ಞೆಯಲೀ ॥

ಕುದುರೆ ಬಿಡಲು ಭುವನ ಮಧ್ಯದೀ
ಉದಧಿಯಂತೆ ಸಕಲ ಸೈನ್ಯವಾ
ಹೊದ್ದಿ ನರ ಪ್ರದ್ಯುಮ್ನ ಮೇಘ  ನಾದ ಮೊದಲಾಗೀ ॥

ಹಿಂದೆ ಬರುತಾಲಿರಲು ತುರಗವು
ಮುಂದೆ ಹೊರಟಿತು ಅಖಿಲ ದೇಶದಿ
ಅಂದು ಗಿರಿನದಿ ವನವ ದಾಟುತ  ಮುಂದೆ ಸಾಗುತಿರೇ ॥

ಪಥದಿ ನೀಲಧ್ವಜನ ಗೆಲಿದು
ಮಥಿಸಿ ಭೀಷಣನೆನಿಪ ಅಸುರನಾ
ಪೃಥೆಯ ಸುತ ಪರಿಣಯವಗೊಂಡನು  ಸತಿ ಪ್ರಮೀಳೆಯನು           ॥

ಧರೆಯೊಳಧಿಕವಾದ ಚಂಪಕಾ
ಪುರದ ಅರಸು ಹಂಸಕೇತುವೂ
ತುರಗವನ್ನು ಕಟ್ಟಲಾತನ  ಧುರದಿ ಗೆಲ್ಲುತಲೀ ॥

ಮುಂದೆ ಹೊರಡಲು ಯಾಗದಶ್ವವೂ
ಬಂದು ಹೊಕ್ಕಿತು ಆಗ ಮಣಿಪುರಾ
ಇಂದ್ರ ಪೌತ್ರನು ಬಭೃವಾಹನ  ಬಂಧಿಸಿದ ಕುದುರೇ ॥

ಧುರವು ಪುಟ್ಟಲು ತಂದೆ ಸುತರಿಗೇ
ನರನು ಮಡಿಯಲು ಸೈನ್ಯ ಸಹಿತಲೀ
ಮರಳಿ ಜೀವವ ಪಡೆದು ಯೆದ್ದರು ಹರಿಕರುಣದಿಂದಾ ॥

ಭರತ ಕುಲಜನೆ ಕೇಳು ಪೇಳುವೆ
ನರನೊಡನೆ ಹರಿಪಾರ್ಥಿ ಹೊರಡಲು
ತುರಗ ಹೊಕ್ಕಿತು ಧರೆಗೆ ರತ್ನಾ  ಪುರದವರ್ತಿಯಲೀ ॥

ಎಂದು ಹರುಷದಿ ಜೈಮಿನೀ ಮುನೀ
ಇಂದುಧರ ಶಂಕರನ ಕರುಣದಿ
ಅಂದು ಜನಮೇಜಯಗೆ ಪೇಳ್ದನು  ಮುಂದಣಾಗಮವಾ ॥

ಭಾಗವತರ ಮಾತು: ಕೇಳಿದರೇನಯ್ಯ ಭಾಗವತರೇ ಈ ಪ್ರಕಾರವಾಗಿ ಹಸ್ತಿನಾಪುರವನ್ನು ಪರಿಪಾಲಿಸುವಂಥಾ ಧರ್ಮರಾಯರು ಗುರು ಬಂಧು ವಧಾ ದೋಷ ಪರಿಹಾರ ನಿಮಿತ್ಯವಾಗಿ ಅಶ್ವಮೇಧಯಾಗವನ್ನು ಕೈಗೊಂಡು ಅಶ್ವವಂ ಪೂಜೆಗೈದು “ಧರೆಯ ಮೇಲೆ ಧಾರಾದರೂ ಧೀರರಿದ್ದರೆ ಈ ತುರಗವನ್ನು ಕಟ್ಟಿ ಹಿಂದೆ ಬರುವ ಸೈನ್ಯದೊಡನೆ ಕಾದಬಹುದು’ ಎಂದು ಬರೆದ ಲಿಖಿತವನ್ನು ಕುದುರೆಯ ಫಣೆಗೆ ಕಟ್ಟಿ ದೇಶದ ಮೇಲೆ ಬಿಡಲು ಆ ಕುದುರೆಯ ಸಂರಕ್ಷಣಾರ್ಥವಾಗಿ ಅರ್ಜುನನು ಸಕಲ ಸೈನ್ಯದೊಂದಿಗೆ ಅನುಸಾಲ್ವ ಯೌವನಾಶ್ವ ವೃಷಕೇತು ಪ್ರದ್ಯುಮ್ನ ಕೃತವರ್ಮ ಮೇಘನಾದ ಸಾಂಬ ಅನಿರುದ್ಧನೇ ಮೊದಲಾದ ವೀರರು ಸಹಿತ ಆ ಕುದುರೆಯ ಹಿಂದೆ ಬರುತ್ತಿರಲೂ, ಮಾರ್ಗದಲ್ಲಿ ನೀಲಧ್ವಜ ಹಂಸಧ್ವಜರನ್ನು ಜೈಸಿ ಆ ನೃಪರನ್ನೊಡಗೂಡಿ ಬರುತ್ತಿರಲು ಮಣಿಪುರದ ರಾಜನಾದ ಬಭೃವಾಹನನು ಕುದುರೆಯಂ ಕಟ್ಟಲು, ಪಾರ್ಥನು ತನ್ನ ಸುತನೆಂದರಿಯದೆ ಬಭೃವಾಹನನೊಡನೆ ಕಾದಾಡಿ ಸೈನ್ಯ ಸಹಿತ ಮಡಿಯಲೂ ಶ್ರೀ ಕೃಷ್ಣಾನುಗ್ರಹದಿಂದ ಮರಳಿ ಜೀವವ ಪಡೆದು, ಅರ್ಜುನನು ಶ್ರೀ ಕೃಷ್ಣನನ್ನೂ ತನ್ನ ಸುತರನ್ನೂ ಕೂಡಿ ಮುಂದೆ ಸಾಗುತ್ತಿರಲು ಕುದುರೆಯು ರತ್ನಪುರಿಯನ್ನು ಹೊಕ್ಕಿತಂತೈಯ್ಯಿ ಭಾಗವತರೇ ॥

ಭಾಗವತರಕಂದ

ಧರೆಯೊಳತಿಶಯ ರತ್ನಪುರಿಯ
ಅರಸು ಮಯೂರಧ್ವಜನ ಸುತ ತಾಮ್ರಧ್ವಜನು ॥
ಪರಮಾತ್ಮನಂ ಮನದಿ ಸ್ಮರಿಸೀ
ತುರಗವಂ ರಕ್ಷಿಸಲು ತವಕದಿಂ ಬಂದನಾಗ ॥

ಕಥಾ ಪ್ರಾರಂಭ

(ತಾಮ್ರಧ್ವಜ ಬರುವಿಕೆ)

ತೆರೆ ದರುವುತ್ರಿವುಡೆ

ಮಾನವಾಧಿಪ ರತ್ನಪುರಿಯಾ
ಸೂನು ತಾಮ್ರಧ್ವಜನು ಬಂದನು
ಜನಪರೆದೆ ಬಿರಿವಂತೆ ನಡುಗೇ  ಕ್ಷೋಣಿ ತಲ್ಲಣಿಸೇ ॥

ಕನಕಮಯದ ಕಿರೀಟ ಧರಿಸುತಾ
ದಿನಕರನ ಪ್ರಭೆಯಂತೆ ಹೊಳೆಯುತಾ
ಜನಕನಾಜ್ಞೆಯ ಶಿರಸಾ ವಹಿಸೀ  ಘನದಿ ನಡೆತಂದಾ ॥

ಹಿರಿಯ ಬಳ್ಳಾಪುರದಿ ಗಿರಿಜೆಯ
ಸೇರಿ ಸುಖಿಸುವ ಸೋಮನಾಥನ
ಸ್ಮರಿಸಿ ಮನದಲಿ ಧೀರ ಬಂದನು  ಧುರವ ಬಯಸುತಲೀ ॥

ಪೀಠಿಕೆ: ಯಲಾ ಚಾರ ಹೀಗೆ ಬಾ, ಮತ್ತೂ ಒಂದು ಸಾರಿ ಹೀಗೆ ಬಾ. ಯಲೋ ಮಾನುಷ್ಯನೇ ದಿನಕರನ ತೇಜದಿಂದ ಈ ಕನಕಮಯ ಸಭಾಸ್ಥಾನಕ್ಕೆ ಧನುಃ ಖಡ್ಗ ತೂಣೀರ ಗಧಾ ದಂಡವೇ ಮೊದಲಾದ ಕಾರ್ಮುಕಂಗಳನ್ನುಗಳನ್ನು ಹಸ್ತದೋಳ್ ಬಹು ಶಿಸ್ತಿನಿಂದ ಧರಿಸಿ ಮಿತ್ರರಂ ಮನ್ನಿಸಿ ಅರಿಕುಲಕ್ಕೆ ಕೇಸರಿಯಂತೊಪ್ಪುವ ಯನ್ನನ್ನು ವಿಧವಿಧವಾಗಿ ಮಾತನಾಡಿಸುವ ಚದುರ ನೀ ಧಾರೋ ಯನ್ನೊಳು ಸಾರೋ ॥

ಭಲಾ, ಸಾರಥೀ ಹಾಗಾದರೆ ಯಮ್ಮ ವಿದ್ಯಮಾನವನ್ನು ಪೇಳುತ್ತೇನೆ  ಸ್ವಸ್ಥಿರದಿಂದ ಕೇಳೋ ದೂತ – ರಾಜ ಸಂಪ್ರೀತ ॥

ಈ ಚಪ್ಪನ್ನೈವತ್ತಾರು ದೇಶದ ಮಧ್ಯದೋಳ್ ಅಧಿಕವಾಗಿ ಮೆರೆಯುವ ರತ್ನಪುರಿ ಸಂಸ್ಥಾನ ಮಣಿಮಯ ಸಿಂಹಾಸನ ಮಂಡಿತ ಚಂಡ ಪ್ರಚಂಡ ಭಂಡರಾದ ವೈರಿಗಳ ರುಂಡವಂ ಕೋದಂಡದಿಂದುರುಳಿಸಿದ ಹಿಂಡು ರಾಜರೋಳ್ ವಿಷಮಧರ ಧುರಿ ತುಂತುರಿ ಪೂಕ ಪುಂಕಾಯಮಾನ ಶಿರದಿನ ಮಣಿ ಫಣಿಃ ಫಣಾರ್ಭಟಿ ಘಟದಿಗ್ದೆಶೆಗಳ ಗದ್ಗದಪಡಿಸುವ ತೇಜಃಪುಂಜ ಅಂಬುಜಸರಸಮನಾದ ಮಯೂರಧ್ವಜರಾಜರ ಮೋಹದ ಪುತ್ರ, ನೀರಜನೇತ್ರ ಸುಂದರಗಾತ್ರ ತಾಮ್ರಧ್ವಜ ಭೂಪಾಲನು ಬಂದು ಇದ್ದಾನೆಂದು ಈ ಪೊಡವಿಯೋಳ್ ಒಂದೆರಡು ಬಾರಿ ಜಯಭೇರಿಯನ್ನು ಬಾರಿಸೋ ಸಾರಥೀ – ಸಂಧಾನಮತಿ ॥

ಈ ವರ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಯಮ್ಮ ತಂದೆಯವರಾದ ಮಯೂರ ಧ್ವಜಭೂಪಾಲರು ಅಶ್ವಮೇಧ ಯಾಗವಂ ಕೈಗೊಂಡು ಯಾಗದ ಕುದುರೆಯಂ ದೇಶದ ಮೇಲೆ ಬಿಡಲು ಅದರ ಬೆಂಗಾವಲಿಗಾಗಿ ಯನ್ನ ಜನಕನು ಯನ್ನನ್ನು ಕಳುಹಿಸಿರಲು ನಾನು ಬಂದಿರುತ್ತೇನೆ ಆಗ ಯನ್ನ ಪ್ರಧಾನರೋಳ್ ಶ್ರೇಷ್ಠನಾದ ನಕುಲಧ್ವಜನನ್ನು ಅತಿ ಜಾಗ್ರತೆ ಕರೆಸೋ ಚಾರಕಾ – ಯನ್ನ ಆಜ್ಞಾಧಾರಕಾ ॥

(ನಕುಲಧ್ವಜ ಬರುವಿಕೆ)

ನಕುಲಧ್ವಜ: ಯಲೋ ಚಾರ ಹೀಗೆ ಬಾ ಮತ್ತೂ ಒಂದು ಸಾರಿ ಹೀಗೆ ನಿಲ್ಲು, ಭಲಾ ಚಾರ ಈಗ ಬಂದವರು ಧಾರೆಂದು ಭಯಾರಸಚಿತ್ತನಾಗಿ ಯನ್ನನ್ನು ವಿಚಾರಿಸುವ ಮಾನುಷ್ಯ ನೀ ಧಾರು ? ನಿನ್ನಯ ಪೆಸರೇನು ಪೇಳೊ ಚಾರ – ಗುಣಮಣಿಹಾರ ॥

ಭಲಾ ಸಾರಥೀ ಹಾಗಾದರೆ ಯಮ್ಮ ವೃತ್ತಾಂತವನ್ನು ಪೇಳುತ್ತೇನೆ  ಚಿತ್ತವಿಟ್ಟು ಕೇಳೋ
ದೂತ – ರಾಜ ಸಂಪ್ರೀತ ॥

ಭಳಿರೇ ಸಾರಥೀ  ಈ ತ್ರಿಭುವನದೋಳ್ ಬಂಧುರವಾಗಿ ಚಂದದಿಂದೊಪ್ಪುವ ಅಖಿಲ ದೇಶಂಗಳಿಗೆ ಕಲಶಪ್ರಾಯವಾಗಿರುವ ರತ್ನಪುರಿಯನ್ನು ಪ್ರೇಮದಿಂ ಪರಿಪಾಲಿಸುವ ಮಯೂರಧ್ವಜ ರಾಜರ ಕುಮಾರ ವೀರ ತಾಮ್ರಧ್ವಜ ಯುವರಾಜರ ಸಮ್ಮುಖದೋಳ್ ಶ್ರೇಷ್ಠನಾದ ನಕುಲಧ್ವಜನೆಂಬ ಮಂತ್ರಿಶೇಖರನು ಬಂದು ಇದ್ದಾನೆಂದು ಈ ಧರಣಿಯೋಳ್ ಒಂದೆರಡು ಬಾರಿ ಜಯಭೇರಿ ಹೊಡೆಯಿಸೋ ಚಾರಕಾ ಯನ್ನ ಆಜ್ಞಾಧಾರಕಾ ॥

ಈ ವರ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಯಮ್ಮ ರಾಜರು ಅತಿ ತ್ವರಿತದಿಂದ ಕರೆಸಿದ ಕಾರಣ ಬಾಹೋಣವಾಯ್ತು. ಈಗ ತಾಮ್ರಧ್ವಜ ಭೂಪಾಲರು ಧಾವಲ್ಲಿ ಇದ್ದಾರೋ ತೋರಿಸೋ ಸಾರಥೀ – ಸದ್ಗುಣ ಪಾರಾವಾರುಧೀ ॥

ನಮೋನ್ನಮೋ ಹೇ ರಾಜ – ಆಶ್ರಿತಕಲ್ಪಭೋಜ ॥

ತಾಮ್ರಧ್ವಜ: ಧೀರ್ಘಾಯುಷ್ಯಮಸ್ತು ಬಾರೈ ಮಂತ್ರೀ – ಕಾರ‌್ಯೇಷು ತಂತ್ರಿ

ಮಂತ್ರಿ: ಯನ್ನಿಷ್ಟು ಜಾಗ್ರತೆಯಿಂದ ಕರೆಸಿದ ಹದನವನ್ನು ಪೇಳಬೇಕೈ ಭೂಭುಜಾ – ತಾಮ್ರಧ್ವಜಾ ॥

ದರುವು

ವರ ಮಂತ್ರಿ ಕೇಳೈಯ್ಯ  ತುರಗಪೂಜೆಯ ಮಾಡಿ
ವರಪಿತನು ಕಾಪಿಡಲು  ಕಳಿಸಿರುವನೆನ್ನಾ ॥

ತಾಮ್ರಧ್ವಜ: ಅಯ್ಯ, ಮಂತ್ರೀ, ಯಮ್ಮ ತಂದೆಯವರಾದ ಮಯೂರ ಧ್ವಜ ಭೂಪಾಲರು ಅಶ್ವಮೇಧ ಯಾಗವನ್ನು ಕೈಗೊಂಡು ನರ್ಮದಾ ತೀರದಲ್ಲಿ ಯಾಗದೀಕ್ಷೆಯನ್ನು ವಹಿಸಿ ಅಶ್ವಪೂಜೆಯನ್ನು ಮಾಡಿ, ದೇಶದ ಮೇಲೆ ಬಿಟ್ಟಿರುತ್ತಾರಾದ ಕಾರಣ ಯನ್ನನ್ನು ಆ ಕುದುರೆಯ ಸಂರಕ್ಷಣಾರ್ಥವಾಗಿ ಕಳುಹಿಸಿರುತ್ತಾರೆ. ಆದ್ದರಿಂದ ನಮ್ಮ ಸಕಲ ಸೈನ್ಯವೂ ಬೆಂಗಾವಲಿಗೆ ಹೊರಡುವಂತೆ ಆಜ್ಞಾಪಿಸೈ ಪ್ರಧಾನಿ – ವಾರುಧಿ ಸಮಾನಿ ॥

ದರುವು

ಭೋಗಿಭೂಷನ ದಯದೀ  ಯಾಗ ಏಳನು ಮಾಡಿ
ಬೇಗದಿಂ ಅಷ್ಠ ಮಹಾ  ವಾಜಿ ಯಜ್ಞವನೂ ॥

ತಾಮ್ರಧ್ವಜ: ಅಯ್ಯ ಸಚಿವ ಶಿಖಾಮಣಿ ! “ಅರ್ಥೋ ಗೃಹೇ ನಿವರ್ತಂತೇ ಸ್ಮಶಾನೇ ಮಿತ್ರ ಬಾಂಧವಾಃ ಸುಕೃತಂ ದುಷ್ಕೃತಂ ಚೈವ, ಗಚ್ಛಂತಂ ಅನುಗಚ್ಛತಿ” ॥ಎಂಬಂತೆ, ಯಮ್ಮ ತಂದೆಯವರು ಸನ್ಮಾರ್ಗ ಪ್ರವರ್ತಕರಾಗಿ ಭೋಗಿಭೂಷನ ದಯದಿಂದ ಏಳು ಅಶ್ವಮೇಧ ಯಾಗಗಳನ್ನು ಸಂಪೂರ್ಣವಾಗಿ ನೆರವೇರಿಸಿ ಈ ಧರೆಯಲ್ಲಿ ಬಹು ಖ್ಯಾತಿವಂತರಾಗಿ ಬಾಳುತ್ತಿರುವರೈಯ್ಯಿ ಮಂತ್ರಿಶೇಖರಾ – ರಾಜಕಾರ‌್ಯ ದುರಂಧರಾ ॥

ದರುವು

ಧರೆಗಧಿಕಾ ಹಿರಿಬಳ್ಳಾ  ಪುರದ ಸೋಮೇಶ್ವರನಾ
ಕರುಣದಿಂ ಯಾಗ ನಿರ್ವಿಘ್ನಾ ॥

ತಾಮ್ರಧ್ವಜ: ಅಯ್ಯ ಪ್ರಧಾನಿ ! ಈಗ ಕೈಗೊಂಡಿರುವ ಅಷ್ಠ ಮಹಾ ಅಶ್ವಮೇಧಯಾಗವು ಈ ಸೃಷ್ಠಿಯೊಳತಿ ಶಯವಾದ ಹಿರಿಯ ಬಳ್ಳಾಪುರವಾಸ ಶ್ರೀ ಸೋಮೇಶ್ವರನ ಕರುಣದಿಂದ ನಿರ್ವಿಘ್ನವಾಗಿ ನಡೆಯಬೇಕೈಯ್ಯ ಮಂತ್ರೀ – ಕಾರ‌್ಯೇಷು ತಂತ್ರಿ ॥

ದರುವು

ಧರಣೀಶ ತನಯನೇ  ಅರಿಗಳ ಕುಲವೆಲ್ಲಾ
ಚರಣಕ್ಕೆ ಎರಗುತ್ತಲಿಹುದೂ  ಕೇಳ್ ಇಹುದೂ
ಧುರದೊಳಗೆ ಧೀರನೂ  ವರ ಮಯೂರ ಧ್ವಜನು
ಕರಿಗಳ ಕುಲಕೆ ತಾ  ಹರಿಯಂತೆ ಇಹನೂ  ತಾನಿಹನೂ ॥

ನಕುಲ ಧ್ವಜ: ಹೇ ರಾಜ ॥ಈ ಧಾರುಣಿಯೊಳಗೆ ಭುಜಬಲ ಪರಾಕ್ರಮ ಯೆನ್ನುವಂಥ ಅರಿರಾಯರೆಲ್ಲಾ ತಮ್ಮ ತಂದೆಯವರ ಸತ್ಯ ಸಾಹಸ ಪರಾಕ್ರಮಕ್ಕೆ ತಲ್ಲಣಿಸಿ ಶಿರಬಾಗಿಸುವರಲ್ಲದೇ ಮತ್ತೆ ಬೇರಿಲ್ಲಾ. ಅಲ್ಲದೆ ಕರಿಗಳ ಕುಲಕೆ ಕೇಸರಿಯಂತೊಪ್ಪುವ ನಿಮ್ಮ ತಂದೆಯವರೊಡನೆ ಕಾಳಗವಂ ಮಾಡಿ ಜೈಸುವ ಶೂರರನ್ನು ಈ ಮೂರು ಲೋಕದಲ್ಲಿಯೂ ಕಾಣಲಿಲ್ಲವೈಯ್ಯ ರಾಜ – ರವಿಸಮತೇಜ ॥

ದರುವು

ಇಂತಿರುತಿಹ ಭೂಮಿ  ಕಾಂತನ ಸುತನ ಧೀ
ಮಂತನೂ ಶೌರ‌್ಯನೂ  ಸಕಲ ಸದ್ಗುಣನೂ ಗುಣಯುತನೂ
ಕಂತು ವೈರಿಯ ದಯದಿ  ಕುದುರೆಯ ಧರಣಿ ಪ
ರ‌್ಯಂತರ ವರೆವಿಗೂ  ಕಾಪಿಡು ಬೇಗಾ ಕೇಳೀಗಾ ॥

ನಕುಲ ಧ್ವಜ: ಹೇ, ರಾಜ  ಈ ತೆರನಾಗಿ ಬಾಹುಬಲ ಶೂರನಾಗಿ ಖ್ಯಾತಿಯುತರಾಗಿರುವ ಮಯೂರ ಧ್ವಜ ಭೂಪಾಲರ ಸುತರು ನೀವಾಗಿರುವಲ್ಲಿ, ನಿಮ್ಮಯ ಶೌರ‌್ಯ ಸಾಹಸ ಗುಣ ಗಾಂಭೀರ‌್ಯಕ್ಕೆ ಈ ಧರೆಯಲ್ಲಿ ಯಾರಾದರೂ ಸಮನೆನಿಸುವರೇ ಸ್ವಾಮೀ ! ಅಲ್ಲದೆ “ಅನಿತ್ಯಾಣಿ ಶರೀರಾಣಿ ವಿಭವೋ ನೈವ ಶಾಶ್ವತಃ  ನಿತ್ಯಂ ಸನ್ನಿಹಿತೋ ಮೃತ್ಯುಃ ಕರ್ತವ್ಯೋ ಧರ್ಮ ಸಂಗ್ರಹಃ ॥ಎಂಬ ನಿಮ್ಮ ತಂದೆಯವರ ಮತಾನುಸಾರವಾಗಿ ಅಧರ್ಮ ಅಸತ್ಯಕ್ಕೆಡೆಗೊಡದೆ ಕ್ಷಾತ್ರ ಧರ್ಮದಂತೆ ಧರಣಿ ಪರ‌್ಯಂತರವರೆವಿಗೂ ಕುದುರೆಯ ಸಂರಕ್ಷಣಾರ್ಥವಾಗಿ ಹೊರಟು ಯಾಗವು ನಿರ್ವಿಘ್ನವಾಗಿ ನಡೆಯುವಂತೆ ವರ್ತಿಸಿ ಕೃತಾರ್ಥನಾಗಬೇಕೈಯ್ಯ ಭೂಪಾ-ಕೀರ್ತಿಕಲಾಪ ॥

ದರುವುತ್ರಿವುಡೆ

ಸುಗುಣ ನಕುಲಧ್ವಜನೆ ನೋಡೈ
ಯಾಗದಶ್ವವು ಪುರದ ಮಧ್ಯದಿ
ವೇಗದಿಂ ನಡೆಯುತ್ತಲಿಹುದೂ  ಬೇಗ ನಡಿಯೈಯ್ಯ ॥

ತಾಮ್ರಧ್ವಜ: ಅಯ್ಯ ಮಂತ್ರೀ ! ನಮ್ಮ ಯಾಗದ ಕುದುರೆಯು ರತ್ನಮಣಿಮಯವಾದ ವಸ್ತ್ರಗಳಿಂದ ಅಲಂಕರಿಸಿ ದಿವ್ಯ ಗಂಧಾಕ್ಷತೆ ಹೂವುಗಳಿಂದ ಪೂಜಿಸಲ್ಪಟ್ಟು ಈ ನಮ್ಮ ನಗರದ ಬೀದಿಗಳಲ್ಲಿ ಬಹು ವಿಜೃಂಭಣೆಯಿಂದ ಮೆರವಣಿಗೆಯು ಹೊರಟಿರುತ್ತಾದ್ದರಿಂದ ಅದರ ಬೆಂಗಾವಲಿಗಾಗಿ ನಾವು ಜಾಗ್ರತೆ ಹೋಗೋಣ ನಡಿಯೈಯ್ಯ ಪ್ರಧಾನಿ ॥

ದರುವು

ಬರುತಲಿದೆ ಬೇರೊಂದು ಅಶ್ವವು
ಇರದೆ ಯಮ್ಮಯ ತುರಗ ವೀಕ್ಷಿಸಿ
ಚಾರುತರ ಹೇಷಾರವವನೂ  ಭರದಿ ಮಾಡುವುದು ॥