ನಕುಲಧ್ವಜ: ಹೇ ರಾಜ ! ನಮ್ಮ ಯಾಗದ ಕುದುರೆಯು ಉತ್ಸವ ಹೊರಟಿರುವಂಥ ಕಾಲದಲ್ಲಿ ಬೇರೆ ಯಾವುದೋ ಒಂದು ಅಶ್ವವು ನಮ್ಮ ಕುದುರೆಯನ್ನು ನೋಡಿ ಮಹೋತ್ಸಾಹದಿಂದ ಕೆನೆಯುತ್ತಾ ಓಡಿ ಬರಲು, ಆಗ ಎರಡು ಕುದುರೆಗಳು ಒಂದನ್ನೊಂದು ಕಚ್ಚುತ್ತಾ ಒದೆಯುತ್ತಾ ಕುಣಿದಾಡಲಾರಂಭಿಸಿವೆ. ಅಲ್ಲದೇ ಅವು ಧರಿಸಿದ್ದ ಮಾಣಿಕ್ಯ ಮುಕ್ತಾಳಿಗಳ ಭೂಷಣಂಗಳು ಹರಿದು ಭೂತಳಕ್ಕೆ ಉದುರುತ್ತಿವೆ. ನೀವು ಕ್ಷಿಪ್ರದಿಂ ನೋಡೈಯ್ಯ ರಾಜ – ಸಹಸ್ರಾರ್ಕ ತೇಜ ॥

ದರುವು

ಧರೆಯೊಳದಿಕವು ಹಿರಿಯ ಬಳ್ಳಾ
ಪುರದ ಒಡೆಯನು ಸೋಮನಾಥನ
ಕರುಣದಿಂದಲಿ ಚರರ ಕಳುಹಿಸಿ  ತರಿಸು ತುರಗವನೂ ॥

ತಾಮ್ರಧ್ವಜ: ಅಯ್ಯ ಮಂತ್ರಿ ನೀನು ಹೇಳುತ್ತಿರುವ ಮಾತು ನಿಜವಾಗಿ ಕಾಣುತ್ತಿದೆ. ಯಾವುದೇ ಆಗಲೀ ಪ್ರತ್ಯಕ್ಷವಾಗಿದ್ದರೂ ಪ್ರಮಾಣಿಸಿ ನೋಡಬೇಕೆಂಬ ಶೃತಿ ಪ್ರಮಾಣವಿರುವುದರಿಂದ ಈ ಕುದುರೆಯು ಯಾವ ದೇಶದಿಂದ ಇಲ್ಲಿಗೆ ಬಂದಿದೆಯೋ ಅತಿ ಜಾಗ್ರತೆ ತಿಳಿಯಬೇಕಾಗಿರುತ್ತದೆ. ಆದ ಕಾರಣ ಚರರನ್ನು ಕಳುಹಿಸಿ ಶೀಘ್ರದಿಂದ ತುರಗವನ್ನು ಹಿಡಿದು ತರಿಸೈಯ್ಯ ಮಂತ್ರೀ – ಕಾರ‌್ಯೇಷು ತಂತ್ರೀ ॥

ನಕುಲಧ್ವಜ: ಅದೇ ಪ್ರಕಾರ ಮಾಡುತ್ತೇನೈಯ್ಯ ಸ್ವಾಮೀ ಭಕ್ತ ಜನ ಪ್ರೇಮೀ ॥

ಅಯ್ಯ ಸಾರಥೀ  ಪರಮಂಡಲದ ಧಾವುದೋ ಒಂದು ಕುದುರೆಯು ನಮ್ಮ ಪುರಕ್ಕೆ ಆಗಮಿಸಿದೆಯಾದ್ದರಿಂದ ಅದನ್ನು ಹಿಡಿದು ತರಲು ವನಪಾಲಕರಾದ ನಮ್ಮಯ ಚರಕುಲ ಶಿಖಾಮಣಿಗಳನ್ನು ಅತಿ ಜಾಗ್ರತೆಯಿಂದ ಕರೆಸೈಯ್ಯ ದೂತ – ರಾಜ ಸಂಪ್ರೀತ ॥

ಸಾರಥಿ: ಹೇ, ಸ್ವಾಮೀ ತಮ್ಮ ಅಪ್ಪಣೆಯಂತೆ ಚರರನ್ನು ಅತಿ ಶೀಘ್ರದಿಂದ ಇಲ್ಲಿಗೆ ಕರೆದು ತರುವೆನೈಯ್ಯ ದೇವಾ – ಮಹಾನುಭಾವ ॥

(ಚರರು ಬರುವಿಕೆ)

ಚರರು: ಭಲಾ, ಸಾರಥೀ ಯಮ್ಮ ವೃತ್ತಾಂತವನ್ನು ಪೇಳುತ್ತೇವೆ ಚಿತ್ತವಿಟ್ಟು ಕೇಳೋ ಸಾರಥೀ- ಸಂಧಾನ ಮತಿ ॥ಭಳಿರೇ ಸಾರಥೀ, ಈ ಅಖಂಡ ಬ್ರಹ್ಮಾಂಡದೋಳ್ ಅತಿಶಯದಿಂದೊಪ್ಪುವ ಅತಿ ಮನೋಹರವಾದ ಭೂರಮಣಿಯ ಬೈತಲೆ ಮಣಿಯಂತೆ ಪ್ರಕಾಶಿಸುವ ರತ್ನಪುರಿಯನ್ನು ನಿಷ್ಠೆಯಿಂದ ಪರಿಪಾಲಿಸುವ ಮಯೂರಧ್ವಜ ಭೂಪಾಲರ ಕುಮಾರ ಕಂಠೀರವ ತಾಮ್ರಧ್ವಜ ಭೂಪಾಲರ ಸಮ್ಮುಖದೋಳ್ ಸೇವಾವೃತ್ತಿಯಲ್ಲಿರುವ ವನಪಾಲಕರಾದ ಚರರುಗಳೆಂದು ತಿಳಿಯೋ ಸಾರಥೀ- ಸುಜ್ಞಾನಮತಿ ॥

ಅಯ್ಯ ಸಾರಥಿ ಮುತ್ತಿನ ತೋರಣಗಳಿಂದ ರಂಜಿಸುವ ಈ ವರ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಯಮ್ಮ ಮಂತ್ರಿವರ‌್ಯರು ಕರೆಸಿದ ಕಾರಣ ಬಾಹೋಣವಾಯ್ತು, ಈಗ ಮಂತ್ರಿ ಭೂಪಾಲರು ಧಾವಲ್ಲಿ ಇದ್ದಾರೋ ತೋರಿಸೋ ದೂತ-ರಾಜ ಸಂಪ್ರೀತ ॥

ನಮೋನ್ನಮೋ ಹೇ ಮಂತ್ರಿವರ‌್ಯಾ – ಬಹುಕೀರ್ತಿವರ‌್ಯಾ ॥

ಮಂತ್ರಿ: ಸುಖೀಭವತು ಬನ್ನಿರೈಯ್ಯಿ ಚರರೇ – ಅಸಹಾಯ ಶೂರರೇ ॥

ಚರರು: ಯಮ್ಮನ್ನಿಷ್ಟು ಜಾಗ್ರತೆಯಿಂದ ಕರೆಸಿದ ಕಾರಣವೇನೋ ಪೇಳಬೇಕೈ ಮಂತ್ರಿಭೂಪಾಲ – ಕ್ಷೋಣಿ ಜನಪಾಲ ॥

ಮಂತ್ರಿ: ಅಯ್ಯ ಚರರೇ, ನಮ್ಮ ಯಾಗದ ಕುದುರೆಯು ಪುರಮಧ್ಯದೋಳ್ ಉತ್ಸವ ಹೊರಟಿರಲು ಧಾವುದೋ ಒಂದು ಕುದುರೆಯು ಎದುರಿನಿಂದಲಿ ಬಂದು ಒಂದರೊಡನೆ ಮತ್ತೊಂದು ಕಚ್ಚುತ್ತಾ ಒದೆಯುತ್ತಾ ಕುಣಿದಾಡುತ್ತಿವೆ. ನೀವು ಜಾಗ್ರತೆ ಹೋಗಿ ಆ ಕುದುರೆಯನ್ನು ಕಟ್ಟಿ ಹಿಡಿದುಕೊಂಡು ಬನ್ನಿರೈಯ್ಯಿ ಚರರೇ – ಕದನದಿ ಶೂರರೇ ॥

ಚರರು: ಅದೇ ಪ್ರಕಾರವಾಗಿ ಹೋಗಿ ಕುದುರೆಯನ್ನು ಹಿಡಿದು ತರುತ್ತೇವಯ್ಯ ದೇವಾ – ಕರುಣ ಪ್ರಭಾವ ॥

ದರುವು

ಸೃಷ್ಠಿ ಮೂರೊಳೂ  ಧಾವ  ಶ್ರೇಷ್ಠರಾಜನೋ
ದಿಟ್ಟತನದೊಳೂ  ಕುದುರೇ  ಬಿಟ್ಟು ಇರುವನೋ ॥

ಚರರು: ಅಯ್ಯ ಸಾರಥೀ, ಸೃಷ್ಠಿಯೊಳಗಿನ ಯಾವನೋ ಶ್ರೇಷ್ಠ ರಾಜನು ಈ ಕುದುರೆಯನ್ನು ದಿಟ್ಟತನದಿಂದ ಬಿಟ್ಟಿರುವ ಹಾಗೆ ಕಾಣುತ್ತಿರುವುದು. ಇದರ ಪರಿಯಾಯವನ್ನು ಪರಶಿವನೇ ಬಲ್ಲಾ. ಅಯ್ಯ ಸಾರಥಿ ಈ ತುರಗಗಳು ತಮ್ಮ ಮುಂಗಾಲುಗಳನ್ನೆತ್ತಿ ಹಿಂದಣ ಗೊರಸುಗಳಲ್ಲಿ ನಿಂತು ಒಂದನ್ನೊಂದು ಕಚ್ಚುತ್ತಾ ಕುಣಿದಾಡುತ್ತಿರುವುದನ್ನು ನೋಡಿದೆಯೇನೈಯ್ಯ ಸಾರಥೀ – ಸಂಧಾನಮತಿ॥

ದರುವು

ಮುತ್ತು ರತ್ನದೀ  ಕುದುರೇ  ಮೊತ್ತವಾಗಿದೇ
ನೆತ್ತಿಯೊಳಗೆ  ಹೇಮಬಿರುದು  ಚಿತ್ರವಾಗಿದೇ ॥

ಚರರು: ಭಲಾ ಸಾರಥೀ, ಈ ಕುದುರೆಯನ್ನು ನೋಡಿದರೆ ರಾಜನ ಯಾಗದ ಕುದುರೆಯಾಗಿ ಕಾಣುತ್ತಿದೆ ಮತ್ತು ಈ ಕುದುರೆಯು ಮುತ್ತು ರತ್ನಗಳಿಂದ ಅಲಂಕೃತವಾಗಿರುವುದಲ್ಲದೆ ಇದರ ಮಸ್ತಕದಲ್ಲಿ ಬಂಗಾರದ ಪತ್ರದಲ್ಲಿ ಲಿಖಿತವನ್ನು ಬರೆದು ಕಟ್ಟಿರುವ ರಾಜ ಬಿರುದು ವಿಚಿತ್ರವಾಗಿ ತೋರುತ್ತಿದೆಯೈಯ್ಯಿ ಚಾರ – ಗುಣಮಣಿ ಹಾರ ॥

ದರುವು

ವರ್ಣ ಬಿಳಿಯದೂ  ಏಕ  ಕರ್ಣದಾಗಿದೇ
ಬಣ್ಣಿಸಲೂ  ಪುಚ್ಛಪೀತ  ವರ್ಣದಾಗಿದೇ  ॥

ಚರರು: ಭಳಿರೇ ಸಾರಥೀ ! ಬಂಗಾರದ ತಡಿಗಳು ರತ್ನಖಚಿತವಾದ ಜೀನುಗಳು, ಮುತ್ತಿನ ಮೊಗವಾಡಗಳು ಪಾರ್ಶ್ವಗಳಲ್ಲಿ ಕಂಗೊಳಿಸುತ್ತಿರುವ ಜಾಲರಿಗಳಿಂದಲೂ ಚಾಮರಗಳಿಂದಲೂ ಶೋಭಿಸುತ್ತಿರುವ ಈ ಕುದುರೆಯ ಸೊಬಗನ್ನು ನೋಡಿದ್ದೇ ಆದರೆ ಶ್ವೇತವರ್ಣದ್ದಾಗಿ ಏಕಕರ್ಣವುಳ್ಳದ್ದಾಗಿ ಕಾಣುತ್ತಿದೆಯೈಯ್ಯಿ ಚಾರ – ಸರಸಗುಣ ವಿಚಾರ ॥

ದರುವು

ಧಾರುಣಿ ಹಿರಿಯಾ  ಬಳ್ಳಾ  ಪುರ ನಿವಾಸನಾ
ಕರುಣದಿಂದ  ಹಯವ ಪಿಡಿದು  ತೆರಳಿ ಪೋಪೆನಾ ॥

ಚರರು: ಅಯ್ಯ, ಸಾರಥೀ ಧರಣಿಗೆ ಹಿರಿದೆನಿಸಿ ಮೆರೆಯುವ ಸರಸತರ ಹಿರಿಯ ಬಳ್ಳಾಪುರದೊಡೆಯ ಗಿರಿಜಾರಮಣನಾದ ಶ್ರೀ ಸೋಮೇಶನ ಕರುಣದಿಂದ ತುರಗವನ್ನು ಕಟ್ಟಿ ರಾಜರ ಬಳಿಗೆ ತೆಗೆದುಕೊಂಡು ಹೋಗಬೇಕು. ರಾಜಾಜ್ಞೆಯಾದ ಬಳಿಕ ಬಿಡಬಾರದು ಬಿಟ್ಟರೆ ಶಿಕ್ಷೆಯಾದೀತು ? ಆದಕಾರಣ ಬಹು ಎಚ್ಚರಿಕೆಯಿಂದ ಕುದುರೆಯು ತಪ್ಪಿಸಿಕೊಂಡು ಹೋಗದಂತೆ ಭದ್ರವಾಗಿ ಕಟ್ಟಿ ನಮ್ಮ ರಾಜರಾದ ತಾಮ್ರಧ್ವಜ ಭೂಪಾಲರ ಸಮ್ಮುಖಕ್ಕೆ ತೆಗೆದುಕೊಂಡು ಹೋಗೋಣ ಬಾರೈಯ್ಯ ಚಾರ – ನೀತಿ ವಿಚಾರ ॥

ಕಂದ

ಶ್ರೀ ರತ್ನಪುರ ಭೂಮಿವರಾ  ರಣರಂಗಧೀರಾ
ಅರಿಕುಲ ಕುಠಾರ  ಮಯೂರಧ್ವಜ ಭೂಪರ
ಮೋಹದ ಕುಮಾರ  ಮಾರ ಸುಂದರಾಕಾರ
ಚಾರುಗುಣ ಗಂಭೀರ  ತಾಮ್ರಧ್ವಜ ಭೂಪಾಲರೇ
ಭೃತ್ಯನ ಬಿನ್ನಪವ  ಲಾಲಿಸು ಜೀಯ್ಯ ॥

ಚರರು: ಶ್ರೀಮನ್ಮಹಾರಾಜಾಧಿರಾಜ ದಿನಮಣಿ ತೇಜೋನಿಧಿಯಾದ ತಾಮ್ರಧ್ವಜ ಭೂಪತಿಯೇ ಭೃತ್ಯನ ಬಿನ್ನಪವನ್ನು ಲಾಲಿಸಬೇಕಯ್ಯ ದೇವಾ – ಮಹಾನುಭಾವ ॥

ತಾಮ್ರಧ್ವಜ: ಅಯ್ಯ ಚರರೇ ಅನುಮಾನಿಸಬೇಡಿ ಇರುವ ಸಂಗತಿಯನ್ನು ಯಮ್ಮೊಳು ಮಾಜದೆ ಸವಿಸ್ತಾರವಾಗಿ ಪೇಳಿರೈಯ್ಯ ಚರರೇ – ಚರರೋಳ್ ಶೂರರೇ ॥

ದರುವು

ಯತ್ತಣಶ್ವವು ಇದು ಕಾಣೆ  ಪ್ರಭುವೇ
ಚಿತ್ತರ ಮಾಗಿಹುದು ಕುದುರೇ ॥
ಮುತ್ತು ರತ್ನಗಳಿಂದ ಹೊಳೆಯುತ್ತಲಿರುವುದೂ
ನೆತ್ತಿಲಿ ಚಿನ್ನದ ಪತ್ರಿಕೆ ಇಹುದೈಯ್ಯ ಯತ್ತಣ ॥ ॥

ಚರರು: ಹೇ ಪ್ರಭುವೇ, ಸೇವಕನ ಮೇಲೆ ಕೃಪೆ ಇಟ್ಟು ಭೃತ್ಯನ ಬಿನ್ನಹವನ್ನು ಲಾಲಿಸೈಯ್ಯ ಜೀಯಾ! ನಾವು ಕಟ್ಟಿ ಹಿಡಿದು ತಂದಿರುವ ಕುದುರೆಯು ಯತ್ತಣದೆಂಬುವಂಥದ್ದು ನಮಗೆ ತಿಳಿಯದು. ಮುತ್ತು ರತ್ನ ವಜ್ರ ವೈಢೂರ‌್ಯ ಮರಕತ ಮಾಣಿಕ್ಯ ಮಾಲೆಗಳಿಂದಲೂ ಇಂದ್ರನೀಲ ಮಣಿಮಯ ವಸ್ತ್ರಾಭರಣಗಳಿಂದಲೂ ಶೋಭಿಸುತ್ತಾ ಇದೆಯೈಯ್ಯ ರಾಜ ! ಅಲ್ಲದೆ ಈ ಕುದುರೆಯ ಫಣೆಯಲ್ಲಿ ಕನಕ ಪತ್ರವನ್ನು ಕಟ್ಟಿ ಇದೆ. ಆ ಪತ್ರದಲ್ಲಿ ತಮ್ಮ ಬಿರುದಿನ ಅಗ್ಗಳಿಕೆಯನ್ನು ಬರೆದ ಹಾಗೆ ಕಾಣುತ್ತಾ ಇದೆಯೈಯ್ಯ ಸ್ವಾಮೀ – ಶರಣಾಗತ್ರ ಪ್ರೇಮೀ ॥

ದರುವು

ಗಂಧಾಕ್ಷತೆ ಹೂವಿನಿಂದಾ  ಪೂಜೆ
ಹೊಂದಿರುವುದು ಬಹು ಚೆಂದಾ ॥
ಸುಂದರ ತುರಗವು ನಗರಕ್ಕೆ ಬಂದಿಹುದು
ಚೆಂದದಿಂದಲಿ ನೀನೂ ನೋಡೈಯ್ಯ ರಾಜೇಂದ್ರಾ ॥
ಯತ್ತಣಶ್ವವು ಇದು ॥

ಚರರು: ಹೇ ಸ್ವಾಮೀ, ತಾಮ್ರಧ್ವಜ ಭೂಪತಿಯೇ ! ಗಂಧಾಕ್ಷತೆಗಳಿಂದಲೂ ಹೂವಿನ ಮಾಲೆಗಳಿಂದಲೂ ಪೂಜೆಗೈದು ಬಿಟ್ಟಿರುವ ಹಾಗೆ ಕಾಣುತ್ತಾ ಇದೆ. ನಮ್ಮ ನಗರಕ್ಕೆ ಬಂದಿರುವ ಇಂಥ ಸುಂದರವಾದ ತುರಗವು ಸಾಮಾನ್ಯವಾಗಿ ಕಾಣುವುದಿಲ್ಲ. ಏನೋ ಬಹು ವಿಚಿತ್ರವಾಗಿ ತೋರುತ್ತಾ ಇದೆಯೈಯ್ಯ ರಾಜೇಂದ್ರಾ

ದರುವು

ಧರಣಿಯೊಳು ಹಿರಿಯ ಬಳ್ಳಾ  ಪುರ
ವರ ಶ್ರೀ ಸೋಮೇಶನೆ ಬಲ್ಲಾ ॥
ತುರಗವು ಧಾರದೋ ಅರಿಯೆವು ನಾವೀಗಾ
ಭರದಿಂ ಪರೀಕ್ಷಿಸಿ ನೋಡೈಯ್ಯ ರಾಜೇಂದ್ರಾ॥ಯತ್ತಣಶ್ವವು ಇದು॥ ॥

ಚರರು: ಹೇ ಸ್ವಾಮಿ ರತ್ನಪುರವರಾಧೀಶ, ಈ ಧಾರುಣಿಯಲ್ಲಿ ಧಾವ ರಾಜರದೆಂಬುವಂಥದ್ದು ನಮಗೆ ತಿಳಿಯದು, ಹರನ ಕಾರುಣ್ಯದಿಂದ ಸುರನಗರಿಯಿಂದೇನಾದರೂ ಬಂದಿದೆಯೋ ಏನೋ ತೋಚದು. ಈ ಅಶ್ವದ ಶೃಂಗಾರವನ್ನು ನೋಡಿದ್ದೇ ಆದರೆ ಈ ವಸುಧೆಗೆ ಪೊಸತೆನಿಸಿ ಮೆರೆಯುವ ಹಿರಿಯ ಬಳ್ಳಾಪುರವನ್ನು ಕುಶಲದಿಂದ ಪರಿಪಾಲಿಸುವ ಅಸಮಾಕ್ಷನಾದ ಶ್ರೀ ಸೋಮೇಶ್ವರನೇ ಈ ತುರಗದ ವಿವರವನ್ನು ಬಲ್ಲನೇ ಹೊರತು ನಮಗೆ ತಿಳಿಯದೈಯ್ಯ ರಾಜ, ನೀವು ಚೆನ್ನಾಗಿ ನೋಡಿ ಪರೀಕ್ಷಿಸಬಹುದೈಯ್ಯ ರಾಜ- ಸಹಸ್ರಾರ್ಕ ತೇಜ ॥

ತಾಮ್ರಧ್ವಜ: ಅಯ್ಯ ಚರರೇ, ನಾವು ಕುದುರೆಯನ್ನು ಚೆನ್ನಾಗಿ ಪರಿಶೀಲಿಸಿ ನೋಡುತ್ತೇವೆ. ಇನ್ನು ನೀವು ತೆರಳಬಹುದೈಯ್ಯ ಚಾರಕರೇ-ಯನ್ನ ಆಜ್ಞಾಧಾರಕರೇ ॥

ದರುವು

ನೋಡು ಕುದುರೆಯ ಸಚಿವ ಶ್ರೇಷ್ಠನೇ
ನಾಡು ಯಾವುದರಿಂದ ಬಂದಿತೋ
ಗಾಢ ಕಟ್ಟಿಸಿ ಫಣಿಯ ಲಿಖಿತವ  ನೋಡು ಈ ಕ್ಷಣದೀ ॥

ತಾಮ್ರಧ್ವಜ: ಅಯ್ಯ ಸಚಿವ ಶಿಖಾಮಣಿ ! ದಿನಕರನ ಥಳಥಳಿಸುವ ಕಿರಣಗಳಿಂದ ಶೋಭಿಸುತ್ತಿರುವಂತೆ ಅನೇಕಾನೇಕ ರತ್ನ ಮಾಣಿಕ್ಯಾದಿ ಮಣಿ ನಿಚಯಗಳ ಕಾಂತಿಗಳಿಂದ ಕಂಗೊಳಿಸುತ್ತಿರುವ ಈ ಕುದುರೆಯನ್ನು ನೋಡಿದರೆ ಬಹಳ ವಿಚಿತ್ರವಾಗಿ ಕಾಣುತ್ತಾ ಇದೆ. ಯಾವ ನಾಡಿನ ರಾಜರದೆಂಬುವಂಥದ್ದು ಸಹಾ ತಿಳಿಯದು. ಅಲ್ಲದೆ ಈ ಅಶ್ವದ ಫಣೆಯಲ್ಲಿ ಬಂಗಾರದ ಪತ್ರವನ್ನು ಕಟ್ಟಿ ಇದೆ. ಆದಕಾರಣ ಇದನ್ನು ತಾತ್ಸಾರ ಮಾಡದ ಹಾಗೆ ಇದರ ಮಸ್ತಕದಲ್ಲಿರುವ ಕನಕ ಪತ್ರಿಕೆಯನ್ನು ಬಿಚ್ಚಿ ವಿಸ್ತಾರವಾಗಿ ಶೃತಪಡಿಸೈಯ್ಯ ಪ್ರಧಾನಿ ನೀತಿ ಜ್ಞಾನಿ ॥

ದರುವು

ಲಾಲಿಸೂ ರಾಜೇಂದ್ರಾ  ಲಿಖಿತವ ನೋಡುವೆನೂ
ಪಾಲಿಪುದೆನಗೆ ಅಭಯವನೂ  ಅಭಯವನೂ ॥

ಮಂತ್ರಿ: ಹೇ ರಾಜ  ಈ ಕುದುರೆಯು ಧಾವ ದೇಶದ ಧರಣಿಪಾಲನದೋ ತೋಚದು. ಆದಕಾರಣ ಇದರ ಮಸ್ತಕದಲ್ಲಿರುವ ಕನಕಪತ್ರವನ್ನು ಬಿಚ್ಚಿ ಓದಿ ಶೃತಪಡಿಸುತ್ತೇನೆ. ಸೇವಕಗೆ ಅಭಯವನ್ನು ಪಾಲಿಸಬೇಕಯ್ಯ ಸ್ವಾಮೀ – ಭಕ್ತಜನ ಪ್ರೇಮೀ ॥

ತಾಮ್ರಧ್ವಜ: ಅಯ್ಯ, ನಕುಲಧ್ವಜ  ಈ ಕನಕಪತ್ರವನ್ನು ಬಿಚ್ಚಿ ಓದುವುದಕ್ಕೆ ನೀನು ಅಭಯವನ್ನು ಕೇಳುವುದೇತಕ್ಕೆ ? ಅನುಮಾನಿಸದೆ ಶೀಘ್ರವಾಗಿ ಓದಿ ಶೃತಪಡಿಸಬೇಕಯ್ಯ ಮಂತ್ರಿಶೇಖರಾ – ರಾಜಕಾರ‌್ಯ ದುರಂಧರಾ ॥

ಕಂದಕೇದಾರ ಗೌಳ

ಕರಿಪುರವ ಪಾಲಿಪ ಸೋಮ ವಂಶಜಾ
ವರ ಕುಂತೀ ದೇವಿ ಸಂಭವ ಧರ್ಮರಾಯರಾ ॥
ತುರಗವಿದೆನ್ನದೂ ಧರಣಿಯೋಳ್
ಇರಬಲ್ಲ ನೃಪರಿದನು ಕಟ್ಟಬಹುದೀಕ್ಷಣದೋಳ್ ॥

ಮಂತ್ರಿ: ಹೇ ರಾಜ ! ಚಿತ್ತವಿಟ್ಟು ಲಾಲಿಸಬೇಕಯ್ಯ ಭೂಪ  ಭೂಕಾಂತೆಯ ಸೀಮಂತ ರತ್ನದೋಪಾದಿಯಲ್ಲಿ ಮೆರೆಯುತ್ತಿರುವ ಗಜಪುರವನ್ನು ಪರಿಪಾಲಿಸುವಂಥ ಸೋಮವಂಶಜ ಧರ್ಮರಾಯರ ಯಾಗದ ಕುದುರೆಯಂತೆ ಧರಣಿಯ ಮೇಲಣ ಅರಸರಿಗೆಲ್ಲಾ ತಾನೇ ಮಹಾ ಶಿಖಾಮಣಿಯಂತೆ. ವರ ಕುಂತಿದೇವಿಯ ಗರ್ಭ ಸಂಜಾತನಂತೆ, ಧಾರುಣಿಯ ಮೇಲೆ ಭುಜಬಲ ಪರಾಕ್ರಮಿಯೆನ್ನುವಂಥ ವೀರರಾದವರಿದ್ದರೆ ಈ ತುರಗವನ್ನು ಕಟ್ಟ ಬಹುದಂತೆ. ಆ ರೀತಿ ಕಟ್ಟಿದ ರಾಜರನ್ನು ಯುದ್ಧ ಮಾಡಿ ಜೈಸಿ ಕುದುರೆಯನ್ನು ಬಿಡಿಸಿಕೊಂಡು ಹೋಗುವುದಕ್ಕೆ ಮಹಾವೀರನಾದ ಅರ್ಜುನನನ್ನು ಸೈನ್ಯದೊಡನೆ ಕಳುಹಿಸಿ ಇದ್ದಾರೆಂತಲೂ ಬರೆದು ಇದೆ. ಇದ್ದ ಸಂಗತಿಯನ್ನು ಶೃತಪಡಿಸಿ ಇದ್ದೇನಯ್ಯ ರಾಜ – ಮಾರ್ತಾಂಡ ತೇಜ ॥

ದರುವುಜಂಪೆತಾಳ

ಕುಟ್ಟಿ ಬಿಸುಡುವೆನೀಗಾ  ಯಮಸುತನ ಗರ್ವವನೂ
ಅಷ್ಠ ಮೂರುತಿಯಾಣೆ  ನಷ್ಠವನು ಮಾಳ್ವೆ ನಾ
ಜ್ಯೇಷ್ಠ ಹರಿಹರ ಬರಲು  ಅಟ್ಟಿ ತರುಬುವೆ ಮಾಳ್ಪೆ ಇನ್ನೂ
ಭ್ರಷ್ಠಾ ಪಾಂಡವರನ್ನು  ಕುಟ್ಟಿ ಅರೆಯುವೆನೂ  ನಾ ಬಿಡೆನೂ ॥

ತಾಮ್ರಧ್ವಜ: ಅಯ್ಯ ಮಂತ್ರೀ ! ಈ ಸೃಷ್ಠಿಯೊಳಗೆ ಇಂದ್ರಪ್ರಸ್ತ ಪಟ್ಟಣವನ್ನು ದಿಟ್ಟತನದಿಂದ ಪಾಲಿಸುವ ಯುಧಿಷ್ಠಿರ ಚಕ್ರವರ್ತಿಯ ಯಾಗಾಶ್ವವೇ ಇದು.  ಈ ಧರಣಿಯಲ್ಲಿ ವೀರರಾದವರಿದ್ದರೆ ಕಟ್ಟಿ ಹಿಂದೆ ಬರುವ ಸೈನ್ಯದೊಡನೆ ಕಾದಬೇಕಂತಂೆಲ? “ವಿನಾಶಕಾಲೇ ವಿಪರೀತ ಬುದ್ಧಿಃ’ ಎಂಬಂತೆ ಆ ದುರುಳನಿಗಿಷ್ಠು ಪರಾಕ್ರಮವು ಬಂತೆ ಅಹಹಾ. ಆ ದುರುಳನಾದ ಯಮಸುತನ ಅಹಂಕಾರವನ್ನು ಕುಟ್ಟಿ ಬಿಸುಡದಿದ್ದರೆ ನಾನು ಕ್ಷತ್ರಿಯನೆನಿಸ ಬೇಕೆ ? ಜ್ಯೇಷ್ಠ ಮತ್ತು ದೃಷ್ಠಿ ಮೂರಾದ ಮುಕ್ಕಣ್ಣನಾದಿಯಾಗಿ,  ಆತನಿಗೆ ಬೆಂಬಲವಾಗಿ ಬಂದರೂ ಭ್ರಷ್ಠ ಪಾಂಡುಸುತರನ್ನು ಕಾಳಗದಲ್ಲಿ ಕುಟ್ಟಿ ಅರೆದು ಅಟ್ಟಿ ತರುಬುವೆನೈಯ್ಯ ಪ್ರಧಾನಿ – ನೀತಿಜ್ಞಾನಿ ॥

ದರುವು

ಧರಣಿ ಪಾಲಕ ಸುತನೆ ಲಾಲಿಸು ॥
ಪರಮ ಧಾರ್ಮಿಕ ಧರ್ಮರಾಯನು
ಕರಿಪುರವ ಪಾಲಿಸುವನವನು  ಹರಿಯ ಕರುಣದಲೀ ॥

ಮಂತ್ರಿ: ಭಲಾ, ಜಡಮತಿಗಳಾದ ಪೊಡವಿಪರ ಗಢಣಕ್ಕೆ ಕಡುಗಲಿಯಾದ ತಾಮ್ರಧ್ವಜ ಭೂಪತಿ ಕೇಳು, ಭೂರಮಣಿಯ ಸಿಂಧೂರಾಲಂಕೃತವಾದ ಬೈತಲೆ ಮಣಿಯಂತೆ ರಾಜಿಸುವ ಹಸ್ತಿನಾವತಿಯನ್ನು ಪಾಂಡುನಂದನ ಧರ್ಮರಾಯನು ನಿಷ್ಠೆಯಿಂದ ಪರಿಪಾಲಿಸುತ್ತಾ ಪರಮ ಧಾರ್ಮಿಕನಾಗಿರುತ್ತಾನೈಯ್ಯಾ ರಾಜ ಸಹಸ್ರಾರ್ಕತೇಜ ॥

ದರುವು

ಭೂವರರೊಳೂ ಶ್ರೇಷ್ಠನವನೂ
ಭಾವಿಸಲು ನಿಜ ಸತ್ಯಸಂಧನೂ
ದೇವಕೀಸುತ ಕೃಷ್ಣನವರಿಗೆ  ಭಾವ ಮೈದುನನೂ ॥

ನಕುಲಧ್ವಜ: ಹೇ ರಾಜ ! ಆ ಧರ್ಮನಂದನನು ಬಹು ಸಂತೋಷಯುತನೂ, ಗುಣಾನ್ವಿತನೂ, ಸತ್ಯ ಸಂಧನೂ ಯೆನಿಸಿ ಈ ಮೇದಿನಿ ರಾಯರಿಗೆಲ್ಲಾ ಶ್ರೇಷ್ಠನೆಂದೆನಿಸಿ ಬಹುಕೀರ್ತಿಯುತನಾಗಿ ಬಾಳುತ್ತಿರುವನಲ್ಲದೇ ಜರಾಸಂಧ ಶಿಶುಪಾಲ ದಂತವಕ್ರ, ಮೊದಲಾದ ದಾನವ ಧ್ವಂಸಕನಾದ ದೇವಕೀತನಯ ದೇವಪುರನಿಲಯ ದೇವಲಕ್ಷ್ಮೀರಮಣನು, ಆ ಪಾಂಡವರಿಗೆ ಭಾವ ಮೈದುನನೆಂಬ ನೆವದಿಂದ “ಮಮಪ್ರಾಣಾಹಿ ಪಾಂಡವಾಃ’ ಎಂಬ ಬಿರುದನ್ನು ಹೊತ್ತು ಸದಾ ರಕ್ಷಕನಾಗಿರುವನು. ಅಲ್ಲದೇ ಅವರಿಗೆ ಬೆಂಬಲವಾಗಿ ಬರುತ್ತಾನೈಯ್ಯಾ ದೊರೆಯೇ- ಅವರ ಪರಾಕ್ರಮವ ನೀನರಿಯೇ॥

ದರುವು

ಏಳು ಅಧ್ವರ ಕೃಷ್ಣ ವರ್ಜಿತ
ಪೇಳಲೇನಿದು ಕೃಷ್ಣ ಸಂಯುಕ್ತ
ಕಾಳಗವು ಕೃಷ್ಣನೊಳು ದೊರಕಲು  ಕೊಳ್ವೆ ನೀಕ್ಷಣವೇ ॥

ತಾಮ್ರಧ್ವಜ: ಅಯ್ಯ, ಸಚಿವ ಶಿಖಾಮಣಿ ! ವಾಸುದೇವ ಸುತ ಶ್ರೀ ಕೃಷ್ಣನೊಡನೆ ಕಾಳಗವು ದೊರಕಿದ್ದೇ ಆದರೆ ಆತನೊಡನೆ ಯುದ್ಧವಂ ಮಾಡಿ, ಆತನನ್ನು ಹಿಡಿದೆಳತಂದು ಹಿಂದಿನ ಏಳು ಯಾಗಗಳೂ ಕೃಷ್ಣವರ್ಜಿತವಾದದ್ದರಿಂದ, ಇಂದಿನ ಅಷ್ಠ ಮಹಾ ಯಾಗವನ್ನು ಕೃಷ್ಣನೊಡಗೂಡಿ ಸಂಪೂರ್ತಿಗೊಳಿಸುವೆನೈಯ್ಯ ಪ್ರಧಾನಿ ನೀತಿಜ್ಞಾನಿ ॥

ದರುವು

ತಂದೆ ಯಾಗಕೆ ಕೃಷ್ಣ ಬರುವುದು
ಮುಂದೆ ಪಾಂಡವರೊಳಗೆ ಕಾಳಗ
ಬಂದು ವದಗಿತು ಯನ್ನ ಪುಣ್ಯದಿ  ಎಂದು ಬೊಬ್ಬಿರಿದಾ ॥

ತಾಮ್ರಧ್ವಜ: ಅಯ್ಯ ಪ್ರಧಾನಿ ! ನಮ್ಮ ತಂದೆಯವರಾದ ಮಯೂರಧ್ವಜ ಭೂಪಾಲರು ಮಾಡುವ ಅಧ್ವರಕ್ಕೆ ಪಂಕಜಪತ್ರನೇತ್ರ, ಸರಸೀರುಹಗಾತ್ರ, ಶಂಕರ ಮಿತ್ರ ಶ್ರೀ ಹರಿಯು ಬರುವುದೂ, ನೀನು ಪರಿಪರಿ ವಿಧವಾಗಿ ಹೊಗಳುವ ಪಾಂಡುಪುತ್ರರೊಡನೆ ಯನಗೆ ಕಾಳಗವು ಸಂಭವಿಸಿರುವುದೂ, ಈ ಎರಡೂ ಶ್ರೀ ಕೃಷ್ಣದರ್ಶನ ಮತ್ತು ಪಾಂಡವ ವೀರರೊಳಗೆ ಕಾಳಗವೂ ಏಕಕಾಲದಲ್ಲಿ ಉಂಟಾಗಿರುವುದಾದ್ದ ರಿಂದ ಯನ್ನ ಪುಣ್ಯಕ್ಕೆ ಯಾವುದೂ ಸಮನಿಲ್ಲವೈಯ್ಯ ಮಂತ್ರಿಶೇಖರಾ ರಾಜಕಾರ‌್ಯ ದುರಂಧರಾ ॥

ದರುವು

ಮಾತೆ ಕುಂತೀದೇವಿ ನೋಂಪಿಗೆ
ಶ್ವೇತಗಜ ಸುರಪುರದಿ ತರಿಸೀ
ಖ್ಯಾತಿಯನು ಪಡೆದಿರುವ ಪಾರ್ಥನು  ಭೂತಲಾದೊಳಗೇ ॥

ಹಿರಿಯ ಬಳ್ಳಾಪುರದಿ ಚಂದ್ರನ
ಧರಿಸಿ ಮೆರೆಯುವ ಸೋಮನಾಥನಾ
ಸ್ಮರಿಸಿ ಶರವನು ಪಡೆದವರೊಳೂ  ವೈರವವು ಬೇಡಾ ॥

ಮಂತ್ರಿ: ದುರುಳ ಅರಿಗಳ ಉರಗ ಕುಲಕ್ಕೆ ಗರುಡ ಪ್ರಾಯನಾದ ತಾಮ್ರಧ್ವಜ ಭೂಪನೇ ಕೇಳು ! ಹಿಂದೆ ಅರ್ಜುನನು ತನ್ನ ತಾಯಿ ಕುಂತೀದೇವಿಯ ಗಜಗೌರೀ ವ್ರತಕ್ಕೆ ಅಮರಾವತಿಯಿಂದ ಐರಾವತವನ್ನು ತರಿಸಿರುವನಲ್ಲದೇ, ಇಂದ್ರಕೀಲ ಪರ್ವತದಲ್ಲಿ ಕಠೋರತರಮಾದ ತಪವಂ ಆಚರಿಸಿ ಅಂಗಜಭವ ಭಸಿತಾಂಗಧರನಾದ ಶ್ರೀ ಹಿರಿಯ ಬಳ್ಳಾಪುರದ ಭಕ್ತಜನಸಂಗ ಭವಭಂಗನಾದ ಶ್ರೀ ಸೋಮೇಶ್ವರನನ್ನು ಮೆಚ್ಚಿಸಿ. “ಪಾಶುಪತ” ವೆಂಬ ದಿವ್ಯಾಸ್ತ್ರಗಳನ್ನು ಪಡೆದಿರುವ ಆ ಪಾಂಡು ಸುತರೊಡನೇ ನಿಮಗೆ ವೈರಿತನವು ಸಲ್ಲದೈಯ್ಯ ಭೂಪಾ – ಕೀರ್ತಿ ಕಲಾಪ ॥

ದರುವು

ಪರಮೇಷ್ಠಿ ಜನಕನಾ  ಕರುಣದಿಂದಲಿ ಅವರೂ
ಪರಮ ಧಾರ್ಮಿಕರೂ ವರ  ವೀರರಾಗಿರಲೂ ತಾವಿರಲ್ಕು
ಧರಣಿಗೆ ಹಿರಿಬಳ್ಳಾ  ಪುರನೆಲೆವಾಸನೂ
ಹರನಾ ಕಾರುಣ್ಯದೀ  ಧುರವ ಜೈಸುವೆನೂ ನಾ ಬಿಡೆನೂ ॥

ತಾಮ್ರಧ್ವಜ: ಅಯ್ಯ ಮಂತ್ರಿ ಆ ಪಾಂಡವರು ಮಂದರ ಗಿರಿಧರ, ಗೋವರ್ಧನ ಗಿರಿಧರ, ಖ್ಯಾತ ಶಂಖು ಚಕ್ರಧರ, ಪೀತಾಂಬರಧರನಾದ ದೇವಪುರ ನಿಲಯ ಲಕ್ಷ್ಮೀಶನ ಕಾರುಣ್ಯದಿಂದ ಬಹು ಸತ್ಯಸಂಧರೆನಿಸಿ ಭುಜಬಲ ಪರಾಕ್ರಮಿಗಳಾಗಿದ್ದರೂ ಸಹ, ಈ ಧರಣಿಯಲ್ಲಿ ಸುರಪನಮರಾವತಿಗೆ ಸರಿಯೆನಿಸಿ ಮೆರೆಯುವ ಹಿರಿಯ ಬಳ್ಳಾಪುರವನ್ನು, ಕರುಣದಿಂದ ಪರಿಪಾಲಿಸುವ ಪರಶಿವ ಮೂರ್ತಿ ಪಾರ್ವತೀಪತಿಯಾದ ಶ್ರೀ ಸೋಮನಾಥನ ದಯದಿಂದ ಅರ್ಜುನನೊಡನೆ ಕಾಳಗವಂ ಮಾಡಿ ಜೈಸುವೆನೈಯ್ಯ ಮಂತ್ರಿಶೇಖರಾ – ರಾಜಕಾರ‌್ಯ ದುರಂಧರಾ ॥

ಕಂದ

ಚಪ್ಪನ್ನ ದೇಶದೋಳ್ನಿಮಗೇ  ಮಲೆತಿದಿರಾಗಿ
ಬಪ್ಪ ಭೂಮಿಪರಿಲ್ಲ  ನಿಮ್ಮಯ್ಯ ನರಮನೆಯೊ
ಳಪ್ಪಂ ಬಡೆದ  ನರ್ತಕೀ ಜನದ ನಿತ್ಯ
ಪುಷ್ಪಾಂಜಲಿಯ ಸಂಗ್ರಹಕ್ಕೇ ॥
ತಪ್ಪದೆಂದುಂ ತೆರುವ ಕಟ್ಟಳೆಯ ಮುತ್ತುಗಳ
ಕಪ್ಪವಂ ಕೊಂಡು ಬಂದನೋ ಬಭೃವಾಹನಂ
ಸಪ್ಪುಳಿದು ಪೊಸತೆತ್ತಣದೋ ಸೈನ್ಯಮಿದು
ಕೇಳ್ ಮಯೂರಧ್ವಜ ತನಯಾ ॥

ಮಂತ್ರಿ: ಹೇ ರಾಜೇಂದ್ರಾ  ಈ ಚಪ್ಪನ್ನೈವತ್ತಾರು ದೇಶದೋಳ್ ತಮ್ಮ ಧೈರ‌್ಯ ಸಾಹಸ ಗುಣ ಔದಾರ‌್ಯಕ್ಕೆ ಯಾರಾದರೂ ಸಮನೆನಿಸುವರೇ ಸ್ವಾಮೀ ॥ಅಲ್ಲದೇ ನಿಮಗೆ ಮಾರ‌್ಮಲೆತು ಇದಿರಾಗಿ ಬರುವ ಭುಜಬಲ ಪರಾಕ್ರಮಿಯೆನ್ನುವಂಥ ರಾಜರು ಈ ಧರೆಯಲ್ಲಿ ಧಾರು ಇಲ್ಲ. ಆದರೂ ಒಂದು ಮಾತು ಚಿತ್ತವಿಟ್ಟು ಲಾಲಿಸಬೇಕಯ್ಯ ಭೂಪ. ನಿಮ್ಮ ತಂದೆ ಮಯೂರಧ್ವಜ ಭೂಪಾಲರ ಅರಮನೆಯಲ್ಲಿ ಸಂಗೀತನಾಟ್ಯವೇ ಮೊದಲಾದ ಮನೋರಂಜನೆಗೆ ಮೀಸಲಾಗಿರುವ ನರ್ತಕೀ ಜನರ ನಿತ್ಯ ಪುಷ್ಪಾಂಜಲಿಗೆ ಕಟ್ಟಳೆ ಪ್ರಕಾರ ಮುತ್ತು ರತ್ನಗಳನ್ನು ತರುತ್ತಿರುವನೋ ಎಂಬಂತೆ ಬಭೃವಾಹನನ ಸೈನ್ಯವು ಅಪಾರವಾಗಿ ಕಾಣುತ್ತಾ ಇದೆಯೈಯ್ಯ ಭೂಪಾಲಕಾ – ಕ್ಷಿತಿಜನ ಪಾಲಕಾ ॥

ಕಂದ

ಧಾತ್ರಿಯೋಳ್ ವೀರರಿಲ್ಲೆನದಿರ್, ನಾರದಂ
ರಾತ್ರಿಯೋಳ್ ಬಂದು ಯನ್ನೊಳಾಡಿದಂ ಧರೆಗತಿ
ಕ್ಷಾತ್ರಪೌರುಷದಿಂದ ವರ್ತಿಪ ಬಭೃವಾಹನ ಕರ್ಣತನಯರಿಂದೂ ॥

ಗೋತ್ರಾರಿಪುತ್ರ ದಾನವ ಸೂದನರ‌್ಮನುಜ
ಮಾತ್ರರಲ್ಲೆಯ್ದೆ, ನರ ನಾರಾಯಣರ‌್ಕಮಲ
ನೇತ್ರ ಸಮರ ನಿರುದ್ಧ ಸಾತ್ಯಕಿ ಪ್ರದ್ಯುಮ್ನ  ಭೋಜಾದಿ ಯದುಗಳೆಂದೂ ॥

ತಾಮ್ರಧ್ವಜ: ಅಯ್ಯ ಮಂತ್ರಿ ! ಈ ಧಾರುಣಿಯಲ್ಲಿ ಧೀರರು ಧಾರೂ ಇಲ್ಲವೆನಬೇಡ. ಹಿಂದಿನ ರಾತ್ರಿಯೋಳ್ ಮುನಿವರ‌್ಯರಾದ ನಾರದರು ಯನ್ನಲ್ಲಿಗೆ ಬಂದು ಈ ಸೃಷ್ಠಿಯೊಳಗೆ ವೃಷಕೇತು ಬಭೃವಾಹನರು ಕ್ಷಾತ್ರ ಪೌರುಷದಿಂದ ಬಹು ಪರಾಕ್ರಮಿಗಳಾಗಿರುವರೆಂದೂ, ಕೃಷ್ಣಾರ್ಜುನರು ನರ ಮನುಜರಲ್ಲವೆಂತಲೂ, ಅವರ ನರ ನಾರಾಯಣರೆಂತಲೂ, ಅನಿರುದ್ಧ ಸಾತ್ಯಕಿ ಪ್ರದ್ಯುಮ್ನ ಮೊದಲಾದವರು ಯಾದವರಲ್ಲಿ ಸಮರ ಧುರೀಣರೆಂತಲೂ, ಯನಗೆ ಅರುಹಿ ಪೋದರಾದ್ದರಿಂದ, ಅಂಥ ಬಾಹುಬಲ ಪರಾಕ್ರಮಿಗಳೊಡನೆ ಯನಗೆ ಕಾಳಗವು ಸಂಭವಿಸುವುದು ಯನ್ನ ಪೂರ್ವಾರ್ಜಿತ ಸುಕೃತ ಫಲವಾಗಿ ಕಾಣುತ್ತಾ ಇದೆ. ಆದಕಾರಣ ಇನ್ನು ತಡಮಾಡದೆ ಯುದ್ಧ ಸನ್ನಾಹರಾಗಬೇಕಯ್ಯಾ ಮಂತ್ರೀ – ಕಾರ‌್ಯೇಷು ತಂತ್ರೀ ॥

ದರುವು

ತುರಗಾ ಬಿಡಬಾರದು ನಾವು ಇಂದೂ  ಕರಿಪುರದವರಾ
ತುರಗಾ ಬಿಡಬಾರದು ನಾವು ಇಂದೂ ॥

ತುರಗವ ಬಿಡದೇ  ವೀರರು ಯೆಲ್ಲಾ
ತ್ವರತದಿ ಧುರಕೇ  ಹೊರಡಬೇಕೆನುತಾ  ತುರಗಾ ಬಿಡಬಾರದು ॥

ತಾಮ್ರಧ್ವಜ: ಅಯ್ಯ, ಪ್ರಧಾನಿ ! “ವಿಪ್ರಾಣಾಂ ಜ್ಞಾನತೋ ಜ್ಯೇಷ್ಠಂ, ಕ್ಷತ್ರಿಯಾಣಂತು ವೀರ್ಯತಃ, ವೈಶ್ಯನಾಂ ಧಾನ್ಯ ಧನತಃ ಶೂದ್ರಾಣಾ ಮೇವ ಜನ್ಮತಃ ॥ಎಂಬಂತೆ, ಕ್ಷತ್ರಿಯನಾದವನಿಗೆ ರಣೋತ್ಸಾಹವೇ ಉತ್ಸಾಹವಲ್ಲದೆ ಹೇಡಿಯಾಗಿ ವಿರಾಟರಾಯನ ಪುತ್ರನಾದ ಉತ್ತರ ಕುಮಾರನಂತೆ ಅರಮನೆಯಲ್ಲಿ ಸೇರಿಕೊಂಡು ಜಂಬ ಕೊಚ್ಚಿಕೊಳ್ಳುವಂಥವನು ಕ್ಷತ್ರಿಯಾಧಮನಲ್ಲದೇ, ಕ್ಷತ್ರಿಯನೆನಿಸಿಕೊಳ್ಳುವುದಿಲ್ಲ. ಈಗ ಹಸ್ತಿನಾಪುರದ ರಾಜರುಗಳ ಯಾಗಾಶ್ವವನ್ನು ಬಿಡದೆ, ಸರಿಯಾದ ಸ್ಥಳದಲ್ಲಿ ಕಟ್ಟಿ, ಭದ್ರವಾದ ಕಾವಲಿಡಬೇಕಲ್ಲದೇ, ನಾವು ತ್ವರಿತದಿಂದ ಸಮರಾಂಗಣಕ್ಕೆ ಹೊರಡಬೇಕಯ್ಯ ಮಂತ್ರೀ – ಕಾರ‌್ಯೇಷು ತಂತ್ರೀ ॥

ದರುವು

ಶರಧನು ಕಾರ್ಮುಕ  ಅಸ್ತ್ರಗಳನೆಲ್ಲಾ
ನರನೊಳು ಸಮರಕೆ  ತುಂಬಿಸು ಬಂಡಿಲಿ  ತುರಗಾ ಬಿಡಬಾರದು ॥ ॥

ತಾಮ್ರಧ್ವಜ: ಅಯ್ಯ ಮಂತ್ರಿ, ಪರ ರಾಯರ ಕುದುರೆ ಕಟ್ಟಿಕೊಂಡು ಬಳಿಕ ಸುಮ್ಮನೆ ಇರಲಾಗದು. ನಾಳಿನ ಉದಯಕ್ಕೆ ವೀರರುಗಳೆಲ್ಲಾ ಹೊರಡುವಂತೆ ಆಜ್ಞಾಪಿಸುವುದಲ್ಲದೇ ಅನೇಕ ಬಂಡಿಗಳಲ್ಲಿ ಶಸ್ತ್ರಾಸ್ತ್ರ ಕಾರ್ಮುಕಂಗಳನ್ನು ಹೇರಿಸುವಂಥವನಾಗೈಯ್ಯ ಪ್ರಧಾನಿ ॥

ದರುವು

ವರಮಂತ್ರಿಯೆ ಕೇಳ್  ನಮ್ಮಯ ಪುರದೊಳು
ಭರದಿ ಡಂಗೂರವ  ಹೊಡಿಸೈಯ್ಯ ನೀನೂ ॥ತುರಗಾ ಬಿಡಬಾರದು  ॥

ತಾಮ್ರಧ್ವಜ: ಅಯ್ಯ ಸಚಿವಾ, ನಮ್ಮ ಪಟ್ಟಣದಲ್ಲಿರುವ ಪಟುಭಟಾದಿ ವೀರರೆಲ್ಲಾ ಯುದ್ಧಕ್ಕೆ ಹೆದರಿ ಓಡಿ ಹೋದಾರು? ನಮಗೆ ಅವಮಾನವಾದೀತು ? ಆದಕಾರಣ ನಾಳಿನ ಉದಯಕ್ಕೆ ಅರ್ಜುನನೊಡನೆ ಯುದ್ಧಕ್ಕೆ ಹೊರಡಬೇಕೆಂಬುದಾಗಿ ಸರ್ವರಿಗೂ ಕೇಳುವ ಹಾಗೆ ನಮ್ಮ ಪುರದಲ್ಲಿ ಡಂಗುರವನ್ನು ಹೊಡಿಸೈಯ್ಯ ಪ್ರಧಾನಿ – ನೀತಿಜ್ಞಾನಿ ॥

ಮಂತ್ರಿ: ಅದೇ ಪ್ರಕಾರ ಮಾಡುತ್ತೀನಯ್ಯ ಸ್ವಾಮೀ ಶರಣಾಗತ ಪ್ರೇಮೀ ॥ಯಲಾ, ಸಾರಥೀ, ನಮ್ಮ ರಾಜರು ಈ ದಿನ ಹಸ್ತಿನಾಪುರದರಸುಗಳ ಯಾಗದ ಕುದುರೆಯನ್ನು ಕಟ್ಟಿಕೊಂಡಿರುವರಲ್ಲದೆ, ಕುದುರೆಯ ಬೆಂಗಾವಲಾಗಿ ಬಂದಿರುವ ಸುತ್ರಾಮ ಪುತ್ರ ಪಾರ್ಥನೊಡನೆ ಯುದ್ಧ ಸನ್ನಾಹರಾಗಿರುವರಾದ ಕಾರಣ ನಮ್ಮ ಪುರದಲ್ಲಿರುವ ಪಟು ಭಟಾಳಿಗಳು ಭಯಗ್ರಸ್ತರಾಗಿ ಓಡಿ ಹೋದಾರು ? ನಮಗೆ ಅಪಜಯವಾದೀತು ? ಆದಕಾರಣ “ನಾಳಿನ ಉದಯಕ್ಕೆ ಅರ್ಜುನನೊಡನೆ ಯುದ್ಧಕ್ಕೆ ಹೋಗಬೇಕು ಎಂಬುದಾಗಿ ಸರ್ವರಿಗೂ ಕೇಳುವ ಹಾಗೆ ನಮ್ಮ ನಗರದಲ್ಲಿ ಡಂಗುರವನ್ನು ಹೊಡಿಸುವಂಥವನಾಗೈ ಸಾರಥೀ ॥