ದರುವು

ಧರೆಯೊಳಗಧಿಕಾ  ಹಿರಿಯಬಳ್ಳಾಪುರ
ವರದ ಸೋಮೇಶನ  ಕರುಣದಿ ನಾವೂ  ತುರಗಾ ಬಿಡಬಾರದು ॥    ॥

ತಾಮ್ರಧ್ವಜ: ಅಯ್ಯ, ಮಂತ್ರೀ ! ಈ ಧರೆಯೊಳಗೆ ಅಧಿಕವಾಗಿ ರಂಜಿಸುವ ಹಿರಿಯ ಬಳ್ಳಾಪುರದ ಪರಶಿವ ಮೂರ್ತಿ ಪಾರ್ವತೀ ರಮಣ ಶ್ರೀ ಸೋಮೇಶನ ಕರುಣ ಕಟಾಕ್ಷದಿಂದ ತುರಗವನ್ನು ಬಿಡದೆ ಅದರ ಬೆಂಗಾವಲಾಗಿ ಬಂದಿರುವ ಪಾಂಡು ಸುಕುಮಾರರೊಡನೆ ಯುದ್ಧವಂ ಮಾಡಿ ಜೈಸಿ ಈ ಧಾತ್ರಿಯಲ್ಲಿ ಕೀರ್ತಿಯನ್ನು ಹೊಂದಬೇಕು. ಇಲ್ಲವಾದರೆ ಅಪಕೀರ್ತಿಗೆ ಕಾರಣವಾದೀತು ? ಆದಕಾರಣ ನಮ್ಮ ಚತುರಂಗ ಬಲ ಯಾವತ್ತೂ ಸಿದ್ಧಪಡಿಸಿಕೊಂಡು ಹೊರಡಬೇಕಯ್ಯ ಮಂತ್ರಿಶೇಖರಾ – ರಾಜಕಾರ‌್ಯ ದುರಂಧರಾ ॥

ಮಂತ್ರಿ: ಅದೇ ಪ್ರಕಾರ ಸಕಲ ಸಮರ ಸನ್ನಾಹರಾಗಿ ಸಮರಾಂಗಣಕ್ಕೆ ಹೊರಡಬಹುದೈ
ಭೂಭುಜಾ – ತಾಮ್ರಧ್ವಜಾ ॥

ತಾಮ್ರಧ್ವಜ: ಭಲಾ ಸಾರಥೀ ! ಆ ಧೂರ್ತನಾದ ಪಾರ್ಥನಿಗೆ ಧೀರ ತಾಮ್ರಧ್ವಜನು ಕುದುರೆಯನ್ನು ಕಟ್ಟಿ ಯುದ್ಧ ಸನ್ನಾಹನಾಗಿ ಬರುತ್ತಿರುವನೆಂಬ ವಾರ್ತೆಯನ್ನು ಅತಿ ಜಾಗ್ರತೆ ಅರುಹಿ ಬಾರೋ ದೂತ-ರಾಜ ಸಂಪ್ರೀತ ॥

ಭಾಗವತರ ದರುವು

ರಣದ ಭೇರಿಯ ಕಹಳೆ ವಾದ್ಯದ
ಧ್ವನಿಗೆ ವನಗಿರಿ ವುದಧಿ ಕಂಪಿಸೇ
ಕ್ಷೋಣಿ ನಡುಗಲು ಶಿರವ ತೂಗಿದ  ಫಣಿಗಳಾ ರಾಜ ॥

ಧೀರ ತಾಮ್ರಧ್ವಜನು ಸಮರಕೇ
ಹಿರಿಯ ಬಳ್ಳಾಪುರ ನಿವಾಸನಾ
ಸ್ಮರಿಸುತಾತ್ಮದಿ ಹೊರಟ ನಿಜಪರಿ  ವಾರ ಸಹಿತಾ ॥

ಭಾಗವತರ ಕಂದಕೇದಾರಗೌಳ

ಮೇದಿನೀ ಪತಿ ಜನಮೇಜಯ ರಾಯನೇ ಕೇಳ್
ಕುದುರೆಯಂ ಕಟ್ಟಿ  ಪಡೆ ಸಹಿತ ತಾಮ್ರಧ್ವಜಂ
ಕದನಕಿದಿರಾಗಲ್  ಅಸುರಾಂತಕಂ ಕಂಡು
ತೋರಿದನರ್ಜುನಂಗಿವಂ  ಬರ್ಹಿಧ್ವಜನ
ತನುಜನನಸೂಯಕಂ ಧೀರನೂ ॥
ಉದಿತಕಾಮಂ ಸತ್ಯವಾದಿ ಶುಚಿ ವೈ
ಷ್ಣವಂ  ಸದರಮಲ್ಲಿವನೊಡನೆ ಕಾಳಗಂ
ನರ್ಮದಾ ನದಿಯ  ತೀರದೊಳಿವನ ತಂದೆ
ದೀಕ್ಷಿತನಾಗಿಹಂ ಗೆಲ್ವುದರಿದೆಂದನೂ ॥

ಭಾಗವತರ ಮಾತು: ಕೇಳಿದರೇನಯ್ಯ ಭಾಗವತರೇ  ಈ ಪ್ರಕಾರವಾಗಿ ತಾಮ್ರಧ್ವಜನು ಧರ್ಮರಾಯರ ಯಾಗದ ಕುದುರೆಯಂ ಕಟ್ಟಿ, ರಣಭೇರಿ ಕಹಳೆ, ವಾದ್ಯ ಘೋಷಗಳು ಮೊಳಗುತ್ತಿರಲು ಪಡೆ ಸಹಿತ ಕದನಕ್ಕಿದಿರಾಗಲೂ, ಇತ್ತಕಡೆ ಶ್ರೀ ಕೃಷ್ಣನು ಅರ್ಜುನನೊಡನೆ “ತುರಗವಂ ಕಟ್ಟಿದವನು, ತಾಮ್ರಧ್ವಜನೆಂತಲೂ, ಈತನ ತಂದೆ ನರ್ಮದಾ ತೀರದಲ್ಲಿ ಯಾಗ ದೀಕ್ಷಿತನಾಗಿರುವನೆಂದೂ, ಈತನು ಬಹು ಸತ್ಯಸಂಧನೆಂದೂ ಪರಾಕ್ರಮಿಯಾಗಿಯೂ, ಕಾಮವರ್ಜಿತನಾಗಿಯೂ ಇರುವನಲ್ಲದೇ ಪರಮ ವೈಷ್ಣವ ಶಿಖಾಮಣಿಯಾಗಿರುವುದರಿಂದ ಈತನೊಡನೆ ಕಾಳಗವಂ ಮಾಡಿ ಜೈಸುವುದು ಅಸಾಧ್ಯ ವೆಂದರುಹುತ್ತಿರ್ದನಯ್ಯಿ ಭಾಗವತರೇ ॥

(ಶ್ರೀಕೃಷ್ಣಾರ್ಜುನರು ಮತ್ತು ಸೈನ್ಯ ಬರುವಿಕೆ)

ತೆರೆ ದರುವುತ್ರಿವುಡೆ

ಸೋಮ ವಂಶ ಕುಲ ಪ್ರದೀಪನೂ
ಕಾಮ ಜನಕನ ಭಾವ ಮೈದುನಾ
ಭೂಮಿ ಪಾಲಕ ಧರ್ಮರಾಯನ  ಪ್ರೇಮದಾ ಅನುಜ ॥

ಬಂದನಾಕ್ಷಣ ವೀರ ಫಲುಗುಣ
ಇಂದಿರೇ ವರ ಸುತರು ಸಹಿತಲೀ
ಇಂದು ಯಮ್ಮಯ ಯಾಗದಶ್ವವ  ಬಂಧಿಸಿದರಾರೂ ॥

ಎಂದು ಪಾರ್ಥನು ಹಲ್ಲು ಕಡಿಯುತಾ
ಇಂದುಧರ ಶ್ರೀ ಸೋಮನಾಥನಾ
ಚಂದದಿಂ ಮನದೊಳಗೆ ಧ್ಯಾನಿಸಿ  ಬಂದ ಪಡೆವೆರಸೀ ॥

ಅರ್ಜುನ: ಯಲಾ ಚಾರ ! ಹೀಗೆ ಬಾ ಮತ್ತೂ ಒಂದು ಸಾರಿ ಹೀಗೆ ಬಾ. ಯಲಾ, ಭಟ ಕುಲೋತ್ತಮಾ. ನಿಟಿಲಾಂಬಕನ ತಟಗ್ರೋಟಿಸುವ ಚಟುವಾರಣ ಸ್ಪುಟಕೋಟಿ ಬಿಂಬೋಜ್ವಲ ಸೌರಂಭನಾದೆನ್ನ ಜಂಬದಿಂದೀ ವರ ಸಭೆಗೆ ಇಂಬಾಗಿ ಬಂದು ನಿಂತು ಗಂಭೀರ ವಚನದಿಂದ ವಿಚಾರಿಸುವವ ನೀ ಧಾರು ? ನಿನ್ನ ತಾತ ಮಾತೆಯರು ಜಾತನಾದ ನಿನ್ನನ್ನು ಪ್ರೀತಿಯಿಂದ ಕರೆವ ಜಾತಕದ ಪೆಸರೇನು ಪೇಳೋ ಸುಭಟಾ – ನೋಡೆನ್ನಧಟಾ ॥

ಭಲಾ ಸಾರಥೀ, ಹಾಗಾದರೇ ಯಮ್ಮ ವಿದ್ಯಮಾನವನ್ನು ವಿಸ್ತರಿಸುತ್ತೇನೆ. ಸ್ವಸ್ಥಿರದಿಂದ ಕೇಳೋ ಸಾರಥೀ – ಸಂಧಾನಮತಿ ॥

ಭಳಿರೇ ಸಾರಥೀ ಈ ಭುವನ ಬ್ರಹ್ಮಾಂಡದೊಳ್ ಧರಣೀ ದೇವಿಗೆ ಶಿರೋರತ್ನವೆನಿಸಿ ಬಂಗಾರದ ಜಗುಲಿಗಳಿಂದಲೂ ಪಚ್ಚೆ ಮುಂತಾದ ರತ್ನ ನಿಚಯಗಳಿಂದ ಕಟ್ಟಲ್ಪಟ್ಟ ನೆಲಕಟ್ಟುಗಳಿಂದಲೂ, ಕಂಗೊಳಿಸುವ ಮಾಣಿಕ್ಯದಿ ರತ್ನಗಳಿಂದ ರಚಿಸಿರುವ ತೋರಣಗಳಿಂದಲೂ ಪ್ರಕಾಶಿಸುವ ವಜ್ರಮಣಿಮಯವಾದ ರತ್ನಸ್ತಂಭಗಳಿಂದ ದೇದಿಪ್ಯ ಮಾನವಾದ ಇಂದ್ರನಮರಾವತೀ ಪಟ್ಟಣವನ್ನು ಧಿಕ್ಕರಿಸುವ ಇಂದ್ರಪ್ರಸ್ತಪುರವನ್ನು ಸಾಂದ್ರವೈಭವದಿಂದ ಪರಿಪಾಲಿಸುವ ಪಾಂಡುರಾಯರ ತನುಜ ಧರ್ಮರಾಯರ ಅನುಜ, ದಿವಸಕರತೇಜ, ಆಶ್ರಿತ ಕಲ್ಪಭೋಜನೆಂದೆನಿಸಿ “ಅರ್ಜುನಃ ಫಲ್ಗುಣ ಪಾರ್ಥ ಕಿರೀಟಿ ಶ್ವೇತವಾಹನಃ  ಭೀಬತ್ಸು ವಿಜಯಃ ಕೃಷ್ಣ ಸವ್ಯಸಾಚಿ ಧನಂಜಯಃ ॥ಇಂತಪ್ಪ ದಶನಾಮಗಳನ್ನು ಹಿತದಿಂ ಹೊಗಳಿಸಿಕೊಳ್ಳುವ ಶತಯಾಗನ ಸುತ ಗಂಡುಗಲಿಯಾದ ಗಾಂಢೀವಿಯೆಂದು ಈ ಭೂಮಂಡಲದೋಳ್ ನಮ್ಮ ವೈರಿಗಳ ಎದೆಯು ಜರ್ಝರಪಡುವಂತೆ ಭರ್ಜರಿಯಿಂದ ಜಯಭೇರಿ ಹೊಡೆಯಿಸೋ ದೂತ-ರಾಜ ಸಂಪ್ರೀತ ॥

ಈ ವರ ಸಭಾಸ್ಥಾನಕ್ಕೆ ಬಂದ ಪರಿಯಾಯವೇನೆಂದರೆ ನಮ್ಮ ಅಣ್ಣಂದಿರಾದ ಧರ್ಮರಾಯರು ಗುರು ಬಂಧು ವಧಾ ದೋಷ ಪರಿಹಾರಾರ್ಥವಾಗಿ ವೇದವ್ಯಾಸ ಮುನಿಗಳ ಉಪದೇಶದಂತೆ ಅಶ್ವಮೇಧ ಯಾಗವಂ ಕೈಗೊಂಡು ಯಾಗದೀಕ್ಷೆಯಂ ತೊಟ್ಟು ದ್ರೌಪದೀ ಸಮೇತರಾಗಿ ಕಂಕಣಬದ್ಧರಾಗಿ ಕುಳಿತು ಇದ್ದಾರೆ. ತಮ್ಮ ಕೀರ್ತಿ ಪತ್ರಿಕೆಯನ್ನು ಯಾಗದ ಕುದುರೆ ಫಣೆಗೆ ಕಟ್ಟಿ ದೇಶದ ಮೇಲೆ ಬಿಟ್ಟಿರಲು ಅದರ ಹಿಂಬಲವಾಗಿ ಯನ್ನನ್ನು ಕಳುಹಲು, ಶ್ರೀಕೃಷ್ಣನೊಡಗೂಡಿ ನಾನು ಸಕಲ ಸೈನ್ಯ ಸಮೇತನಾಗಿ ಬಂದು ಇರುತ್ತೇನೆ. ಈಗ ಕೃಷ್ಣಮೂರ್ತಿಯು ಧಾವಲ್ಲಿರುವರೋ ಭೇಟಿ ಮಾಡಿಸೋ ಚಾರ-ಯನ್ನ ಆಜ್ಞಾಧಾರ ॥

(ಶ್ರೀಕೃಷ್ಣಮೂರ್ತಿ ಬರುವಿಕೆ)

ತೆರೆದರುವು
ದಂಡಧರ ಕುಮಾರ ಬಂದನೂ

ನಂದ ಕಂದ ಶ್ರೀ ಮುಕುಂದನೂ  ಇಂದಿರೇ ವರನೂ
ಅಂದು ಪಾರ್ಥನೊಡನೆ ಬಂದನೂ ॥

ಫಾಲಾಕ್ಷ ಸತಿಯ ಜನಕನೂ  ಪಾಲ್ಗಡಲ ಶಯನಾ
ಪಾಲಿಸುತ್ತಾ ಪಾಂಡು ಸುತರನೂ ॥

ತುಲಸಿ ಮಾಲೆ ಧರಿಸಿದಾತನೂ  ಜಲಜಾಕ್ಷ ಶ್ರೀ
ಲೋಲದೇವ ಪುರದ ಒಡೆಯನೂ ॥

ಹಿರಿಯ ಬಳ್ಳಾಪುರನಿವಾಸನೂ  ಶ್ರೀ ಸೋಮಧರನಾ
ಪರಮ ಸಖ ಶ್ರೀಕೃಷ್ಣ ಬಂದನೂ ॥

ಕೃಷ್ಣ: ಯಲಾ ಚಾರ ಹೀಗೆ ಬಾ ಮತ್ತೂ ಹೀಗೆ ಬಾ. ಭಲಾ ಚಾರ ಈಗ ಬಂದವರು ಧಾರೆಂದು ಕರಕಂಜಾತವಂ ಮುಗಿದು ಭೀತಿಯಂ ಪಟ್ಟು ನೀತಿಯಂ ಬಿಡದೆ ಮೃದು ಮಧುರೋಕ್ತಿಯಿಂದ ಮಾತನಾಡಿಸುವ ಸುಭಟ ನೀ ಧಾರೋ – ಯನ್ನೊಳು ಸಾರೋ ॥

ಎಲೈ ಸಾರಥೀ ! ಹಾಗಾದರೆ ಯಮ್ಮ ವಿದ್ಯಮಾನವನ್ನು ಪೇಳುತ್ತೇನೆ ಚಿತ್ತವಿಟ್ಟು ಕೇಳೋ ಸಾರಥೀ – ಸಂಧಾನಮತಿ ॥

ಭಳಿರೇ ಸಾರಥೀ ! “ಮತ್ಸ್ಯಃ ಕೂರ್ಮಃ ವರಾಹಶ್ಚ ನಾರಸಿಂಹಶ್ಚ ವಾಮನಾ  ರಾಮೋರಾಮಶ್ಚ ಕೃಷ್ಣ ಬೌದ್ಧಃ ಕಲ್ಕಿಮೇವಚ ’ ಇಂತಪ್ಪ ದಶಾವತಾರಗಳನ್ನೆತ್ತಿ ಈ ಧಾರುಣಿಗೆ ಸುರಚಿರಮಾದ ದ್ವಾರಕಾವತಿಯಲ್ಲಿ ನೀರಜ ರೂಪಮಾದ ವೇದಾಗಮಗಳಿಗೆ ಅಗೋಚರನಾಗಿ ಜಗತ್ಕಾರಣ ಮಾದ ಅಧಿಕಾರ ಮೂರರಲ್ಲಿ ಮೈದೋರಿ, ಕ್ರೂರ ವಿಷಯಂಗಳಳಿದು ಅತುಳಾ ನಂದಮಯನಾಗಿ, “ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ’ ಎಂದು ನಂಬಿ ಧ್ಯಾನಿಸುವ ಭಕ್ತರಿಗೆ ಮುಕ್ತಿಯಂ ಕೊಡುವ ಪರಾಪರ ವಸ್ತುವೆಂದೆನಿಸಿರುವ, ಮಾಯಾಮಯ, ಚಿನ್ಮಯ ಸುಂದರಕಾಯ, ದೇವನೂರು ನಿಲಯ, ವಸುದೇವ ತನಯ, ಸತ್ಯಭಾಮ ಇನಯ, ಶ್ರೀ ರುಕ್ಮಿಣೀಪ್ರಿಯನೆಂದೆನಿಸಿ “ದೈತ್ಯಾರಿ ಪುಂಡರೀಕಾಕ್ಷೋ, ಗೋವಿಂದೋ ಗರುಡಧ್ವಜಃ” ಇಂತಪ್ಪ ಅಭಿದಾನಗಳಿಂದ ಮೆರೆಯುತ್ತಿರುವ ಶ್ರೀ ಕೃಷ್ಣಮೂರ್ತಿಯು ಬಂದು ಇದ್ದಾನೆಂದು ಈ ಮೇದಿನಿಯೊಳ್ ಜಯಭೇರಿ ಹೊಡೆಯಿಸೋ ಚಾರ-ವರಪಣಿ ಹಾರ ॥

ಭಲಾ, ಸಾರಥೀ ! ಈ ರತ್ನ ಖಚಿತಮಾದ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಹಸ್ತಿನಾಪುರ ವನ್ನಾಳುವಂಥ ಧರ್ಮರಾಯರು ಅಶ್ವಮೇಧಯಾಗವನ್ನು ಕೈಗೊಂಡು, ಯಾಗದ ಕುದುರೆಯನ್ನು ಧರಣಿಯ ಮೇಲೆ ಬಿಟ್ಟು, ಅದರ ಬೆಂಗಾವಲಿಗಾಗಿ ಅರ್ಜುನನನ್ನು ಸಕಲ ಸೈನ್ಯದೊಡನೆ ಕಳಿಸಿರುವಂಥ ಕಾಲದಲ್ಲಿ ಆತನ ಸುತನಾದ ಬಭೃವಾಹನನು ಕುದುರೆಯನ್ನು ಕಟ್ಟಿ, ಕಾದಲು, ಅರ್ಜುನನು ಸೈನ್ಯ ಸಮೇತನಾಗಿ ಗಂಗಾಶಾಪದಿಂದ ಮೃತಿಯನ್ನೈದಲೂ ಇದನರಿತ ನಾನು ಮಣಿಪುರಕ್ಕೆ ಬಂದು ಆದಿಶೇಷನಲ್ಲಿರುವ ಜೀವರತ್ನವನ್ನು ತರಿಸಿ, ಮೃತರ ಹರಣವನ್ನುಳಿಸಿ, ಕುದುರೆಯನ್ನು ಬಿಡಿಸಿಕೊಂಡು ಸುತ ಸಹಿತನಾದ ಪಾರ್ಥನೊಡನೆ ಯಾಗಾಶ್ವದ ಬೆಂಬಲವಾಗಿ ಹೊರಟು ಬಂದಿರುತ್ತೇನೆ. ಈಗ ಯನ್ನ ಭಾವ ಮೈದುನನಾದ  ಧನಂಜಯನು ಧಾವಲ್ಲಿರುವನೋ ಅತಿ ಜಾಗ್ರತೆ ತೋರಿಸೋ
ದೂತ – ರಾಜ ಸಂಪ್ರೀತ ॥

ಅರ್ಜುನ: ನಮೋನ್ನಮೋ ಹೇ ಭಾವ – ವಾಸುದೇವ ॥

ಶ್ರೀಕೃಷ್ಣ: ಧೀರ್ಘಾಯುಷ್ಯವಂತನಾಗಿ ಬಾರಪ್ಪಾ ಫಲುಗುಣಾ ನೀ ಬಹುಸುಗುಣಾ ॥

ದರುವು

ವರ ಸುಭದ್ರಾರಮಣಾ  ಭರದಿಂದ ಯನ್ನನೂ
ಕರೆಸೀದ ಪರಿ ಪೇಳಯ್ಯ  ದೊರೆ ಪಾಂಡು ತನಯಾ ॥
ಹರುಷದಿಂದಲಿ ನಾ  ವೀರ್ವರು ಪಡೆ ಸಹಿತಾ
ಬರುತಾಲಿರಲು ಈಗಾ  ಪರಮಾಶ್ಚರ‌್ಯವೈ  ಯನಗದು ಪೇಳೈ ॥

ಶ್ರೀಕೃಷ್ಣ: ಹೇ ಅರ್ಜುನಾ ! ಈ ಭೂತಲದೊಳಗೆ ಅತಿ ಪರಾಕ್ರಮಿಯಾದ ನಿನ್ನ ಸುತ ಬಭೃವಾಹನನ ಪಟ್ಟಣದಿಂದ ಕುದುರೆಯನ್ನು ಬಿಡಿಸಿಕೊಂಡು ನಾವುಗಳು ಬರುವಂಥ ಕಾಲದಲ್ಲಿ ನೀನು ಯನ್ನನ್ನು ಅಪೇಕ್ಷಿಸಿ ಕರೆಸಿದ ಕಾರಣವೇನು ? ನನಗೆ ಆಶ್ಚರ‌್ಯವಾಗಿ ಕಾಣುತ್ತಾ ಇದೆ. ವೃತ್ತಾಂತವೇನಿದ್ದರೂ ಅತಿ ಜಾಗ್ರತೆ ಯನ್ನೊಳು ಬಿತ್ತರಿಸುವನಾಗೈಯ್ಯ ಸುಭದ್ರಾ ಮನೋಹರಾ – ಶತೃ ಜನ ಭಯಂಕರಾ ॥

ದರುವು

ಸ್ಮರನ ಜನಕನೇ ಕೇಳೋ  ಭರದಿಂದ ಕರೆಸಿರುವ
ಪರಿಯ ಪೇಳುವೆ ಶ್ರೀ ಹರಿಯೇ  ನೀ ಕೇಳೋ ಹರಿಯೇ ॥
ಧರಣಿ ಮಣಿಪುರದಿಂದಾ  ಹೊರಟ ತುರಗವುಯತ್ತ
ಚರಿಸಿ ತಾ ಪೋಗಿರ್ಪುದೋ  ಶ್ರೀ ಹರಿಯೆ ಪೇಳೈ ಪೇಳುವೆ ಕೇಳೈ    ॥

ಅರ್ಜುನ: ಹೇ ಸ್ವಾಮಿ, ಕೃಷ್ಣಮೂರ್ತಿಯೇ ! ನಿನ್ನನ್ನು ಅತಿಜಾಗ್ರತೆ ಕರೆಸಿದ ಕಾರಣವನ್ನು ಪೇಳುತ್ತೇನೆ ಚಿತ್ತವಿಟ್ಟು ಲಾಲಿಸೈಯ್ಯ ದೇವಾ ! ಧರಣಿ ಶಿರೋ ರತ್ನವೆನಿಸಿದ ಮಣಿಪುರದಿಂದ ಹೊರಟ ಯಾಗದ ಕುದುರೆಯು ಈಗ ಯಮ್ಮ ಕಣ್ಣಿಗೆ ಗೋಚರಿಸದಂತೆ ಹೋಗಿರುತ್ತದೆ. ಆ ತುರಗವು ಧಾವ ಮಾರ್ಗವಾಗಿ ಚರಿಸಿ ಪೋಗಿದೆಯೋ, ಅಲ್ಲದೇ ಧಾರಾದರೂ ಬಂಧಿಸಿರುವರೋ ಏನೋ ! ಯನಗರುಹಯ್ಯ ಮಾರ ಜನಕಾ ದಾನವ ಧ್ವಂಸಕಾ ॥

ದರುವು

ಧರಣಿಯೊಳು ತುರಗವನು  ಅರುಣ ಕೇತುವು ತಾನು
ಭರದಿಂದ ಕಟ್ಟಿಹನೂ  ಕೇಳೈಯ್ಯ ನೀನೂ ॥
ಧುರದೊಳಾತನ ಜೈಸೀ  ತುರಗವ ಬಿಡಿಸಲೂ
ಸುರರಿಗಸಾಧ್ಯವೂ  ನರನೇ ನೀ ಕೇಳೈಯ್ಯ ॥ಪೇಳುವೆ ಪರಿಯಾ     ॥

ಶ್ರೀಕೃಷ್ಣ: ಹೇ ಪಾರ್ಥ ! ನಮ್ಮ ಯಾಗಾಶ್ವವು ಅತಿಭರದಿಂದ ಚರಿಸುತ್ತಾ ಮುಂದೆ ಕೋರ್ಗಾಣಿಸುವ ಈ ಪುರವನ್ನು ಪ್ರವೇಶಿಸಲು ಆ ನಗರದ ರಾಜ ತನಯನಾದ ಅರುಣಕೇತುವು ಕುದುರೆಯನ್ನು ಪಿಡಿದು ಕಟ್ಟಿರುವನು  ಆತನೊಳು ಸಮರವನ್ನು ಜೈಸುವುದು ಅಮರರಿಗೂ ಸಾಧ್ಯವಿಲ್ಲದೇ ಇರುವಾಗ ನಾವು ಕುದುರೆಯನ್ನು ಬಿಡಿಸಿ ತರುವುದು ಅಸಾಧ್ಯವಾಗಿ ತೋರುವುದಯ್ಯ ಕುಂತೀ ಕುಮಾರ – ಅರಿವಂಶ ಕುಠಾರ ॥

ದರುವು

ತುರಗವನು ಬಂಧಿಸಿದ  ದುರುಳನ್ಯಾರೋ ಅವನ
ಪರಿಯನ್ನು ತಿಳಿಸೋ  ಈಗಾ  ಮುರಹರನೆ ಬೇಗಾ ॥
ತುರಗ ತಸ್ಕರನವನಾ  ಶಿರವನ್ನು ಸಮರದೀ
ಶರದಿಂದ ತರಿಯುವೆನೂ  ಹರಿನೋಡು ನೀನೂ ॥ತರಿಯುವೆ ನಾನೂ ॥

ಅರ್ಜುನ: ಹೇ ಮುರಹರಾ ! ಚಾರುತರಮಾದ ನಮ್ಮ ತುರಗವನ್ನು ಮೇರೆದಪ್ಪಿ ಬಂದು ಮೀರಿ ಕಟ್ಟಿದ ಆ ತುರಗ ಚೋರನು ಧಾರೋ ಪೇಳಿದ್ದೇ ಆದರೇ ಆ ನರಾಧಮನನ್ನು ತರಿದು ಚೆಂಡಾಡುವೆನೈಯ್ಯ ಮುಕುಂದಾ – ದೇವಕೀ ಕಂದಾ ॥

ದರುವು

ಪುರಂದರ ಸುತನೇ ಕೇಳೋ  ಪೇಳುವೆನೀಗಾ
ವರ ಮಯೂರಧ್ವಜನೂ ॥
ಧರೆ ರತ್ನನಗರವ  ಪಾಲಿಸುವನು ಆತ
ಚಾರು ಸಂಪನ್ನನವನೂ ॥

ಶ್ರೀಕೃಷ್ಣ: ನೃಪವರ್ಗದೋಳ್ ಗಂಡುಗಲಿ ಪ್ರಚಂಡನಾದ ಹೇ ಪಾರ್ಥನೇ ಕೇಳು. ಈ ಸೃಷ್ಠಿಯೊಳಗೆ ಅಧಿಕವಾಗಿ ಕಂಗೊಳಿಸುತ್ತಿರುವ ಅಪಾರ ಮಹಿಮಳಾದ ಭೂಕಾಂತೆಯ ಸೀಮಂತ ರತ್ನದೋಪಾದಿಯಲ್ಲಿ ರಂಜಿಸುತ್ತಿರುವ ರತ್ನಪುರಿಯನ್ನು ಶಿವ ಪಾದಾರದಿಂದ ಸೇವಾ ತತ್ಪರನಾದ ಮಯೂರಧ್ವಜನೆಂಬ ರಾಜನು ಮನ್ಮಥನ ಸೌಂದರ್ಯವನ್ನು ಮೀರಿಸುತ್ತಾ ಸದಾಚಾರ ಸಂಪನ್ನನಾಗಿ ಬಹು ನಿಷ್ಠೆಯಿಂದ ಪರಿಪಾಲಿಸುತ್ತಿರುವನೈಯ್ಯಿ ಪಾರ್ಥ – ತ್ರಿಲೋಕ ಸಮರ್ಥ ॥

ದರುವು

ಸುಗುಣಶೀಲನು ವಿಖ್ಯಾತಿ  ನೀತಿ ಚತುರಾ
ಭೋಗ ಸಂಪ್ರೀತಿ ಹಿತನೂ ॥
ಯಾಗ ಏಳನು ಮಾಡಿ  ಬೇಗದಿಂ ಅಷ್ಠ ಮಹಾ
ಯಾಗ ಮಾಡುತಿಹನೂ ॥

ಶ್ರೀಕೃಷ್ಣ: ಧರಣಿಪಾಗ್ರಣಿಯಾದ ಧನಂಜಯನೇ ಕೇಳು  ’ವಜ್ರಾದಪಿ ಕಠೋರಾಣಿ  ಮೃದೂನಿ ಕುಸುಮಾದಪಿ ಲೋಕೋತ್ತರಾಣಾಂ ಚೇತಾಂಸಿ  ಕೋಹಿ ವಿಜ್ಞಾತು ಮರ್ಹಸೀ’ ॥ಎಂಬಂತೆ ಮಯೂರಧ್ವಜನು ಪೊಡವಿಪಾಲಕರಲ್ಲಿ ಅಗ್ರಗಣ್ಯನಾಗಿ, ವಾಯುವು ತನ್ನ ಶಕ್ತಿಯಿಂದ ಕಸ್ತೂರಿ ಮುಂತಾದವುಗಳ ಧೂಳಿಯನ್ನು ವುದುರಿಸುವಂತೆ, ತನ್ನ ಸತ್ಯದಿಂದ ಉದುರಿಸಲ್ಪಟ್ಟ ಅಧಿರಾಜ ಯುಕ್ತನೂ ಸತ್ಯಶೀಲನೂ ಪರಮ ಧಾರ್ಮಿಕನೂ ಆಗಿರುವನಲ್ಲದೇ ಸಪ್ತ ಅಶ್ವಮೇಧಯಾಗಗಳನ್ನು ಮಾಡಿ ಈಗ ಅಷ್ಠ ಮಹಾ ಅಶ್ವಮೇಧ ಯಾಗವನ್ನು ಮಾಡಲು ನರ್ಮದಾ ನದಿ ತೀರದಲ್ಲಿ ಯಾಗ ದೀಕ್ಷಾ ಬದ್ಧನಾಗಿರುವನೈಯ್ಯ ಭೂಪಾ – ಭರತವಂಶ ಪ್ರದೀಪ ॥

ದರುವು

ಧುರಭಯಂಕರನವನೂ  ಆತನ ಪುತ್ರಾ
ವೀರ ತಾಮ್ರಧ್ವಜನೂ ॥
ಪರಮ ವೈಷ್ಣವ ಭಕ್ತನೂ ॥

ಶ್ರೀಕೃಷ್ಣ: ಹೇ, ಅರ್ಜುನಾ ! ಧುರಭಯಂಕರನಾದ ಆ ಮಯೂರಧ್ವಜನಿಗೆ ಅನೇಕ ರಾಜರು ಅಪಾರ ಕನಕವನ್ನು ಕಪ್ಪವಾಗಿ ಕೊಡುವರು. ಜಗತ್ರಯವನ್ನು ನಡುಗಿಸುವ ವಿಪುಲವೀರ್ಯವುಳ್ಳ  ಭೂಪಾಲನ ಮಗನೇ ನಿನ್ನ ಕುದುರೆಯನ್ನು ಕಟ್ಟಿದ ತಾಮ್ರಧ್ವಜನೆಂಬುವನು, ಈತನು ಶಮ ದಮ ದಾನ ದಾಕ್ಷಿಣ್ಯ, ನೀತಿ ಚತುರತೆ ಭಗವದ್ಭಕ್ತಿ ಮೊದಲಾದ ಸದ್ಗುಣಗಳಿಂದ ಕೂಡಿದವನಾಗಿ ತಂದೆಯಾಜ್ಞೆಯನ್ನು ಭಯ ಭಕ್ತಿಗಳಿಂದ ಪಾಲಿಸುತ್ತಾ ಇರುವನಲ್ಲದೇ ಪರಮ ವೈಷ್ಣವ ಶಿಖಾಮಣಿಯೆಂದೆನಿಸಿರುವನೈಯ್ಯ ಧರ್ಮಾನುಜಾ ಸುತ್ರಾಮ ತನುಜ ॥

ದರುವು

ಹಿರಿಯ ಬಳ್ಳಾಪುರದಾ  ಅಂತ್ಯದಿ ನೆಲೆ
ಸಿರುವ ಸೋಮೇಶ್ವರನೂ ॥
ಧುರಕೆ ಬಂದರೂ ಇವನ  ಜೈಸಲಸಾಧ್ಯವೂ
ಭರತ ವಂಶಜನೇ ಕೇಳೋ ॥

ಶ್ರೀಕೃಷ್ಣ: ಅಯ್ಯ, ಭಾವನಾದ ಅರ್ಜುನನೇ ಲಾಲಿಸು, ಈ ಧರಣಿಗಧಿಕಮಾದ ಹಿರಿಯ ಬಳ್ಳಾ ಪುರದೊಡೆಯ ಪರಶಿವ ಪಾರ್ವತೀರಮಣ ಸೋಮನಾಥನೇ ಸಂಗರಕ್ಕೆ ಶೃಂಗರಿಸಿ ನಿಂದಾಗ್ಯೂ ಪಾಲು ಮಾರದೆ ಸೋಲಿಸುವಂಥ ಈ ತಾಮ್ರಧ್ವಜನೊಳು ಧುರವ ಜೈಸಲು ಯಮಗೆ ಅಸಾಧ್ಯವಾಗುವುದೈಯ್ಯ ದ್ರೌಪದೀ ರಮಣಾ – ಕುರುಕುಲ ಸಂಹರಣಾ ॥

ದರುವು

ತುರಗ ಕಟ್ಟಿದವನಾ  ಈ
ಶರದಿ ಕೊಲ್ಲದೆ ಬಿಡೆ ನಾ ॥
ಹರನು ಅಜನು ಅಡ್ಡ ಬರಲೂ
ದುರವ ಜೈಸಿ ಬರುವೆ ನೀಗಾ ॥

ಅರ್ಜುನ: ಅಯ್ಯ ಭಾವನಾದ ವಾಸುದೇವನೇ ಕೇಳು  ಲಂಡು ಹೆಚ್ಚಿ ಕಂಡವರ ಕುದುರೆಯಂ ಕಟ್ಟಿ ನಾನೇ ಬಲು ಗಂಡುಗಲಿಯೆದು ಪುಂಡಾಟವಾಡುತ್ತಾ ಉದ್ಧಂಡತೆಯನ್ನು ತೋರಿಸುವ ಭಂಡನಾದ ತಾಮ್ರಧ್ವಜನ ಬೆಂಬಲಕ್ಕೆ ಖಂಡಪರಶು ಅಜದೇವರುಗಳು ಬಂದರೂ ಬಿಡದೆ, ಚಂಡ ಕೋದಂಡದಿಂದ ಆ ದುರುಳನ ರುಂಡವನ್ನು ಚೆಂಡಾಡುವೆನೈಯ್ಯ ರುಕ್ಮಿಣೀ ಇನಿಯಾ – ವಸುದೇವ ತನಯಾ ॥

ದರುವು

ಭ್ರಷ್ಠ ತಾಮ್ರಧ್ವಜನಾ  ಬಹು
ಕಷ್ಠ ಪಡಿಸದೆ ಬಿಡೆ ನಾ ॥
ದುಷ್ಠತನವ ಮಾಡಲವನಾ
ಕುಟ್ಟಿ ಅರೆದು ಅಟ್ಟಿ ಬಿಡುವೇ ಭಳಿರೇ॥ ॥

ಅರ್ಜುನ: ದೇವಕೀ ಕಂದನಾದ ಮುಕುಂದನೇ ಕೇಳು  ಆ ಭ್ರಷ್ಠನಾದ ತಾಮ್ರಧ್ವಜನು ಕುದುರೆಯನ್ನು ಬಿಡದೆ ದುಷ್ಠತನವ ತೋರಿಸಲು ಆತನನ್ನು ಶರಮುಖದಿಂದ ಬಹುಕಷ್ಠಪಡಿಸಿ, ಕುಟ್ಟಿ ಕುಟ್ಟಿ ಕೋಲಾಹಲವಂ ಮಾಡಿ ಅಟ್ಟಿ ತರುಬುವೆನೈಯ್ಯ ಭಾಮಾ ರಮಣಾ – ಮಂದರೋದ್ಧರಣಾ ॥

ದರುವು

ಹಿಡಿದು ಕುದುರೆ ಚೋರನಾ
ಕೊಡುವೆ ಬಲಿಯ ಶರಕೆ ನಾ ॥
ಕಡೆಯ ಮಾತು ಏತಕಿನ್ನೂ
ಬಿಡೆನು ನಿನ್ನಯ ಪಾದದಾಣೆ ಭಳಿರೇ॥ ॥

ಅರ್ಜುನ: ಮುರಳೀಧರನಾದ ಶ್ರೀ ಕೃಷ್ಣನೇ ಲಾಲಿಸು  ನಡತೆ ರೀತಿಗಳನರಿಯದೆ ದುಡುಕು ಬುದ್ಧಿಯಿಂದ ಯಮ್ಮ ತುರಗವನ್ನು ಅಪಹರಿಸಿರುವ ಆ ಮೂಢನನ್ನು ಸಿಡಿಲಿನಂತೆ ಆರ್ಭಟಿಸುವ ಯನ್ನಯ ಶರಗಢಣಕ್ಕೆ ನಿನ್ನ ಪಾದದಾಣೆಯೂ ಆಹುತಿಯನ್ನಾಗಿ ಕೊಡುವೆನೈಯ್ಯ ಗರುಡವಾಹನಾ – ಪಂಕಜದಳ ನಯನಾ ॥

ದರುವು

ಹಿರಿಯ ಬಳ್ಳಾಪುರದಾ  ವರ
ಗಿರಿಜೆ ರಮಣನಾದಾ
ಪರಶಿವನೇ ದುರುಳನಿಗೇ
ಬರಲು ವಹಿಸಿ ತರುವೆ ಕುದುರೇ ॥ಭಳಿರೇ ॥ ॥

ಅರ್ಜುನ: ಹೇ ಭಾವ ವಾಸುದೇವ ! ಈ ಧರಣಿಯಲ್ಲಿ ಹಿರಿದೆನಿಸಿ ಮೆರೆಯುವ ಹಿರಿಯಬಳ್ಳಾಪುರವನ್ನು ಪ್ರೇಮದಿಂದ ಪರಿಪಾಲಿಸುವ ಗಿರಿಸುತೆ ಪ್ರಾಣದೊಲ್ಲಭನಾದ ಶ್ರೀ ಸೋಮೇಶನೇ ಆ ದುರುಳ ತಾಮ್ರಧ್ವಜನಿಗೆ ಸಹಾಯವಾಗಿ ಬಂದಾಗ್ಯೂ ಹಿಂದೆಗೆಯದೇ ಸಮರವನ್ನು ಜೈಸಿ ತುರಗವನ್ನು ಬಿಡಿಸುತ್ತೇನಯ್ಯ ಪಂಕಜ ನಯನಾ – ಪನ್ನಗ ಶಯನಾ ॥

ದರುವು

ಧರಣಿಪರೆಲ್ಲರಾ  ಜೈಸುತಿರ್ಪನವ
ವೀರ ತಾಮ್ರ ಧ್ವಜನೂ  ಬಹು ಶೂರನೂ ॥
ದುರದೊಳಗಾತನ  ಜೈಸುವ ವೀರರಾ
ಧರೆಯೊಳು ನಾ ಕಾಣೆನೂ  ಕೇಳ್ ನೀನೂ ॥

ಶ್ರೀಕೃಷ್ಣ: ಎಲೈ ಪುರಂದರ ತನಯನಾದ ವಿಜಯನೇ ಕೇಳು ಮಯೂರಧ್ವಜನ ಸುತನಾದ ಆ ತಾಮ್ರಧ್ವಜನು ಧಾರುಣಿಯ ನರಾಧಿಪರೆಲ್ಲರನ್ನೂ ತನ್ನ ಪರಾಕ್ರಮದಿಂದ ಜೈಸಿದವನಾಗಿ ಧುರವೀರನೆನಿಸಿಕೊಂಡಿರುವನಲ್ಲದೇ ಈತನಿಗೆ ಸರಿ ಸಮಾನರು ಈ ಧರೆಯಲ್ಲಿ ಯಾರೂ ಇಲ್ಲವೈಯ್ಯ ಕುಂತೀ ಕುಮಾರ – ಅರಿಜನ ಭಯಂಕರಾ ॥

ದರುವು

ಬಿಡು ಬಿಡು ಯೋಚನೆ  ಜಲಜಾಕ್ಷನೇ ನೀ
ಕಡು ಜವದೊಳು ಈಗಾ  ಬೇಗಾ
ಪೊಡವಿಪ ತಾಮ್ರ  ಧ್ವಜನ ಸೈನ್ಯವನೂ
ಪುಡಿ ಪುಡಿ ಗೈಯುವೆನೂ  ನಾ ಬಿಡೆನೂ ॥

ಅರ್ಜುನ: ಹೇ ಜಲಜಾಕ್ಷನೇ  ನಿಮ್ಮ ಮನದ ಯೋಚನೆಯನ್ನು ಬಿಡಿ ಇನ್ನು ತಡ ಮಾಡದೆ ಕಡು ಜವದೊಳು ಘುಡಿಘುಡಿಸುವ ಕಡು ರೌದ್ರಮಾದ ಶರಗಳನ್ನು ಬಿಟ್ಟು ಜಡಮತಿ ತಾಮ್ರಧ್ವಜನನ್ನೂ ಆತನ ಸೈನ್ಯವನ್ನೂ ಪುಡಿ ಪುಡಿ ಮಾಡಿ ಕಡೆಗಾಲ ವದಗಿಸುವೆನೈಯ್ಯ ದೇವಕೀ ಪುತ್ರಾ – ಶ್ಯಾಮಲಗಾತ್ರ॥

ದರುವು

ಪಾತಾಳ ಲೋಕದೀ  ದೇವ ಪುರಾದೊಳೂ
ಭೂತಳ ದೊಳಗಿಂಥ  ಅವನಂಥ
ಖ್ಯಾತಿಯ ಪಡೆದಾ  ವೀರರು ಸುಭಟಾ
ವ್ರಾತದೊಳಗೆ ಇಲ್ಲಾ  ನೋಡಿಲ್ಲಾ ॥

ಶ್ರೀಕೃಷ್ಣ: ಕುರುಕುಲ ಧ್ವಂಸಕನಾದ ಹೇ ಪಾರ್ಥನೇ ಕೇಳು ! ಧಾರುಣಿಗೆ ಮೀರಿದ ಪರಾಕ್ರಮ ಶಾಲಿಯಾದ ಈ ಅರುಣ ಕೇತುವನ್ನು ಪರಿಭವಗೊಳಿಸುವಂಥ ಅಸಮಶೂರರು, ಭೂಲೋಕ ದೇವಲೋಕ, ಪಾತಾಳಲೋಕ ಈ ಮೂರು ಲೋಕಗಳಲ್ಲಿಯೂ ನಾನು ಕಾಣೆನಾದ್ದರಿಂದ ಮುಂದೇನು ವದಗುವುದೋ ತೋಚದಯ್ಯ ಪಾರ್ಥ – ತ್ರಿಲೋಕ ಸಮರ್ಥ ॥

ದರುವು

ಧರೆಯೊಳಗಧಿಕಾ  ಹಿರಿಯ ಬಳ್ಳಾಪುರ
ವರದ ಸೋಮೇಶ್ವರನಾ  ಈಶ್ವರನಾ
ಕರುಣದಿ ಸೈನ್ಯವಾ  ಕಳುಹಿಸಿ ಈ ಕ್ಷಣಾ
ಧುರದಿ ಗೆಲ್ವೆನವನಾ  ದುರ್ಜನನಾ ॥

ಅರ್ಜುನ: ಹೇ ಮುರಾಂತಕನೇ ಲಾಲಿಸು, ಈ ಧರಣಿಗಧಿಕವಾದ ಹಿರಿಯ ಬಳ್ಳಾಪುರ ನಿವಾಸ
ಶ್ರೀ ಸೋಮೇಶ್ವರನ ಪರಿಪೂರ್ಣವಾದ ಕೃಪಾಕಟಾಕ್ಷದಿಂದ ಈ ತಕ್ಷಣವೇ ಪಟು ಪರಾಕ್ರಮಿಗಳಾದ ಯಮ್ಮಯ ಪಟು ಭಟರನ್ನೂ ಸೇನಾ ನಾಯಕರನ್ನೂ ಕಳುಹಿಸಿ ಸಮರದಲ್ಲಿ ಆ ದುರ್ಜನನ ಕರಿಘಟೆಗಳನ್ನೂ ಚಟುಲ ವಾಜಿಗಳನ್ನೂ ಪಟುಭಟರನ್ನೂ ಲಟಲಟನೇ ತರಿದು ಹೊಡೆದು ಕೆಡಹಿ, ಚಟುವಟಿಕೆ ತಪ್ಪುವಂತೆ ಮಾಡದಿರ್ದರೇ, ಯನಗೆ ಗಂಡುಗಲಿ ಗಾಂಡೀವಿಯೆಂಬ ಪೆಸರು ಇನ್ಯಾತಕ್ಕೋ ಮುಕುಂದಾ – ದೇವಕೀ ಕಂದಾ ॥

ದರುವು

ಹಿರಿಯ ಬಳ್ಳಾಪುರ  ವರದ ಸೋಮೇಶನಾ
ಕರುಣದಿಂದಲಿ ಈಗಾ  ಕೇಳೀಗಾ ॥
ತ್ವರಿತದಿ ಕಳುಹಿಸಿ  ಪಟುಭಟರುಗಳನೂ
ಧುರವ ಜೈಸು ಈಗಾ  ಬೇಗಾ ॥

ಶ್ರೀಕೃಷ್ಣ: ಇಂದು ಕುಲಮಣಿ ವಿಜಯನೇ ಕೇಳು ! ಕಡು ಸಮರ್ಥರಾದ ಯಮ್ಮಯ ಪಟುಭಟರನ್ನೂ ಕಳುಹಿಸಿ ಸಮರಾಂಗಣದಲ್ಲಿ ಈ ಪೊಡವಿಗೆ ಸಡಗರಮಾದ ಹಿರಿಯ ಬಳ್ಳಾಪುರದೊಡೆಯ ಮೃಢ ಸೋಮೇಶ್ವರನ ಕರುಣ ಕಟಾಕ್ಷದಿಂದ ಧುರವ ಜೈಸೀ ತುರಗ ಬಿಡಿಸೈಯ್ಯ ವಿಜಯಾ – ಧನಂಜಯ॥

ಅರ್ಜುನ: ಅಯ್ಯ ಸಾರಥೀ, ನಮ್ಮ ಯಾಗದ ಕುದುರೆಯನ್ನು ಖೂಳ ತಾಮ್ರಧ್ವಜನು ಕಟ್ಟಿರುವನಾದ ಕಾರಣ. ಆತನೊಡನೆ ಕಾಳಗವಂ ಮಾಡಿ ಜೈಸಿ ಕುದುರೆಯನ್ನು ಬಿಡಿಸಬೇಕಾಗಿರುತ್ತದೆ. ಆದ್ದರಿಂದ ಯಮ್ಮ ಸೇನಾ ನಾಯಕರಾದ ಅನುಸಾಲ್ವ ನೀಲಧ್ವಜ, ಹಂಸಧ್ವಜ ಯೌವನಾಶ್ವ ವೃಷಕೇತು ಬಭೃವಾಹನ, ಪ್ರದ್ಯುಮ್ನ ಅನಿರುದ್ಧನೇ ಮೊದಲಾದ ಯಾದವ ಸೈನ್ಯವನ್ನು ಅತಿ ಜಾಗ್ರತೆ ಕರೆಸೈಯ್ಯ ಸಾರಥಿ  ಅಲ್ಲದೇ ಕೃಷ್ಣಾರ್ಜುನರು ಪಡೆ ಸಹಿತ ಯುದ್ಧ ಸನ್ನಾಹರಾಗಿ ಬರುತ್ತಿರುವರೆಂಬ ವಾರ್ತೆಯನ್ನು ಆ ದುರುಳ ತಾಮ್ರಧ್ವಜನಿಗೆ ಅತಿ ಬೇಗ ಹೋಗಿ ಅರುಹಿ ಬಾರೋ ಚಾರ – ಯನ್ನ ಆಜ್ಞಾಧಾರ ॥