ದರುವು

ತರಣಿ ಸುತನು ಕರ್ಣಾ  ದಧೀಚಿ
ಧರಣಿ ಪಾಲಕ ಶಿಬಿಯೂ ॥
ಪರಹಿತಕೇ ತಮ್ಮ  ಶರೀರವನೊಪ್ಪಿಸೀ
ಧಾರುಣಿಯೊಳು ಬಹು  ಕೀರ್ತಿಯ ಪಡೆದರೂ ॥ಇನಿತು ಚಿಂತೆ        ॥

ಮಯೂರಧ್ವಜ: ಹೇ, ಪ್ರಾಣಕಾಂತೆ ! ಹಿಂದೆ ರವಿ ತನಯನಾದ ಕರ್ಣನು ತನ್ನ ದೇಹಕ್ಕೆ ಅಂಟಿಕೊಂಡಿದ್ದ ಕವಚ ಕುಂಡಲಗಳನ್ನೂ, ದಧೀಚಿ ಋಷಿಯು ತನ್ನಯ ಬೆನ್ನು ಮೂಳೆಯನ್ನೂ, ಶಿಬಿ ಚಕ್ರವರ್ತಿಯು ತನ್ನ ಕೈ ಕಾಲುಗಳನ್ನೂ ಪರಹಿತಾರ್ಥವಾಗಿ ಕೊಟ್ಟು ಮೇದಿನಿಯೋಳ್ ಕೀರ್ತಿ ಪಡೆದಿರುವುದು ನೀ ತಿಳಿದವಳಾಗಿ ಈ ತೆರನಾಗಿ ದುಃಖಿಸುವುದು ರೀತಿಯಲ್ಲಾ ರಾಜೀವಲೋಚನೇ ಬಿಡು ಮನದ ಯೋಚನೇ॥

ದರುವು

ಕೊಡುವೇ  ಯನ್ನ ಶರೀರ  ಕೊಡುವೇ ॥

ಪೊಡವಿ ಪಾಲಕನಿಗೆ  ಧೃಡ ವಾಮಾಂಗಿಯು ನಾನು
ಕೊಡುವೆ ಯನ್ನಯ ದೇಹ  ಅಡವಿ ಕೇಸರಿಗೀಗಾ  ಕೊಡುವೇ  ॥

ಕುಮಧ್ವತಿ: ಹೇ ಪ್ರಾಣ ನಾಯಕಾ ! ಆ ಸಿಂಹವು ಕೇಳಿದುದು ನಿಮ್ಮ ದೇಹದ ಅರ್ಧ ಭಾಗವನ್ನು. “ಪತಿಗೆ ಸತಿಯು ಅರ್ಧಾಂಗಿ’ ಎಂದು ಶಾಸ್ತ್ರವಿರುವುದರಿಂದ ನನ್ನನ್ನು ಆ ಸಿಂಹವು ಕೇಳಿದಂತಾಯಿತು. ಭ್ರಾಂತಿಯಿಂದ ನಿಮ್ಮನ್ನು ಕೊಯ್ಸಿಕೊಳ್ಳದೆ ಯನ್ನನ್ನು ಕಳುಹಿಸಿರಿ. ವಿಪ್ರಪುತ್ರನ ರಕ್ಷಣೆಯಾಗಲೈ ಪತಿಯೇ ನಿಮಗಿದು ಸರಿಯೇ ॥

ದರುವು

ಕೊಡುವೇ  ಯನ್ನಯ ದೇಹ  ಕೊಡುವೇ ॥

ತಂದೆ ಮಾತನು ನಡೆಸೀ  ಕಂದ ಭೀಷ್ಮನು ರಾಮ
ಚಂದದಿಂ ಕೀರ್ತಿಯಾ  ಅಂದು ಪಡೆದಿಹರೈಯ್ಯ ಕೊಡುವೇ ॥

ತಾಮ್ರಧ್ವಜ: ಹೇ ಜನಕಾ ! ಹಿಂದೆ ಶ್ರೀ ರಾಮಚಂದ್ರಮೂರ್ತಿಯು ಪಿತೃವಾಕ್ಯ ಪರಿಪಾಲನಾರ್ಥವಾಗಿ ರಾಜ್ಯವನ್ನು ತೊರೆದು ಅಡವಿ ಪಾಲಾಗಲಿಲ್ಲವೇ  ಅಲ್ಲದೇ ಇಚ್ಛಾ ಮರಣಿಯಾದ ಭೀಷ್ಮನು ತನ್ನ ತಂದೆಯ ಮನೋಭಿಲಾಷೆಯನ್ನು ಸಫಲಗೊಳಿಸುವ ಪ್ರತಿಜ್ಞೆಯುಳ್ಳವನಾಗಿ ಅಜೀವ ಪರ‌್ಯಂತರ ಬ್ರಹ್ಮಚಾರಿಯಾಗಿರಲಿಲ್ಲವೇ  ಇದ ನೀವು ಅರಿಯದವರೇ, ಆದಕಾರಣ ಅಡವೀ ಸಿಂಹಕ್ಕೆ, ಯನ್ನ ದೇಹವನ್ನು ಅರ್ಪಿಸಿ, ಪಿತೃ ವಾಕ್ಯವನ್ನು ನಡೆಸಿ, ಕೃತಾರ್ಥನಾಗುವೆನೈಯ್ಯ ತಾತ-ಲಾಲಿಸೆನ್ನ ಮಾತ॥

ದರುವುತ್ರಿವುಡೆ

ಸುತನೆ ವಚನದಿ ಕಪಟವಿಲ್ಲವೋ
ಸತಿಯ ಸುತರನು ಕೇಳ್ದುದಿಲ್ಲವೋ
ಕ್ಷಿತಿಪ ದೇಹಾರ್ಧವನು ಕೊಡದಿರೆ  ಮತ್ತೆ ಪೋಗುವೆನೂ॥ ॥

ಬ್ರಾಹ್ಮಣ: ಹೇ ರಾಜ ! ಆ ಪಾಪಿ ಕೇಸರಿಯು ನಿನ್ನ ವಾಮಾಂಗವನ್ನು ಬಯಸಲಿಲ್ಲ. ಸತೀ ಸುತರನ್ನು ಬಯಸಲಿಲ್ಲ. ನಿನ್ನ ದೇಹದ ಬಲಭಾಗದ ಅರ್ಧವನ್ನು ಬಯಸಿತು. ಕೊಡಲು ನೀನು ಹಿಂದೆಗೆಯುವುದಾದರೆ. ನಾನು ಹೊರಟು ಹೋಗುವೆನೈ ದೊರೆಯೇ ಭಾಷೆ ತಪ್ಪುವುದು ಸರಿಯೇ॥

ಕಂದ ಸಾವೇರಿ ರಾಗ

ರಾಣಿಯಂ ಕೊಡುವುದಿಲ್ಲಾತ್ಮಜನ  ನೀವುದಿ
ಲ್ಲೂಣೆಯಂ  ತನ್ನ ಭಾಷೆಗೆ ಬಾರದಂತಬ್ಜ,
ಪಾಣಿ ಮೆಚ್ಚುವೋಲರ್ಧ ದೇಹಮಂ  ಕೊಯ್ದು
ಕೊಟ್ಟೆಪೆನೀಗ  ಸೈರಿಸು ವಿಪ್ರೋತ್ತಮ ನಿನಗೆ ವಂದಿಪೆ ॥

ಮಯೂರಧ್ವಜ: ಹೇ ಭೂಸುರೋತ್ತಮಾ, ತಡೆ ತಡೆ, ರಾಣಿಯನ್ನಾಗಲೀ, ಸುತನನ್ನಾಗಲೀ ಕೊಡುವುದಿಲ್ಲ. ಯನ್ನ ಭಾಷೆಗೆ ಲೋಪಬಾರದಂತೆ ನಿನ್ನ ವಂಶೋದ್ಧಾರಕ್ಕಾಗಿ, ಶ್ರೀಕೃಷ್ಣಪರಮಾತ್ಮನ ಪ್ರೀತ್ಯರ್ಥವಾಗಿ ಯನ್ನ ದೇಹದ ಅರ್ಧ ಭಾಗವನ್ನು ಕೊಯ್ದು ಕೊಡುವೆನು. ಸೈರಿಸೈಯ್ಯ ಬ್ರಾಹ್ಮಣನೇ- ದ್ವಿಜ ಕುಲೋತ್ತಮನೇ ॥

ಭಾಗವತರು: ಕೇಳಿದರೇನಯ್ಯ ಭಾಗವತರೇ  ಈ ಪ್ರಕಾರವಾಗಿ ಮಯೂರಧ್ವಜ ಭೂಪಾಲನು ತನ್ನ ಭಾಷೆಯನ್ನು ಉಳಿಸಿಕೊಳ್ಳುವವನಾಗಿ ತನ್ನ ಸತೀ ಸುತರಿಬ್ಬರಿಗೂ ಗರಗಸವನ್ನು ಒಂದೊಂದು ಕಡೆ ಹಿಡಿದು ತನ್ನಯ ದೇಹವನ್ನು ತಲೆಯ ಮೇಲಿಂದ ಕೊಯ್ಯುವಂತೆ ಹೇಳಲು ಅವರಿಬ್ಬರೂ ಶ್ರೀ ಹರಿಯನ್ನು ನೆನೆಯುತ್ತಾ ಎಳ್ಳಷ್ಟು ಅಳುಕದೆ ರಾಜನ ತಲೆಯ ಮೇಲೆ ಗರಗಸವನ್ನು ಸೆಳೆಯುತ್ತಿರಲು ಅವರ ಧೈರ‌್ಯ ತ್ಯಾಗಗಳನ್ನು ಕಂಡು ಕೃಷ್ಣಾರ್ಜುನರು ಬೆರಗಾದರೈಯ್ಯ ಭಾಗವತರೇ ॥

(ಶಿರದ ಮೇಲೆ ಗರಗಸ ಸೆಳೆಯುವಿಕೆ)

ದರುವು

ಹರಿಯೇ ಮೊರೆಯ ಲಾಲಿಸೀಗಾ  ಪಾಲಿಸೀಗಾ ॥

ಪತಿಯ  ಶಿರವ ಕೊಯ್ವೆವು ಈಗಾ  ಕೃಪೆ ತೋರೋ ಬೇಗಾ ॥

ವರಕಾಂತನ ದೇಹವನ್ನೂ  ಶರೀರವನ್ನೂ  ಈಗಾ
ಹರಿವ ಕರಪತ್ರದೀ  ತರಿವುದೇಗಿನ್ನೂ ॥
ವಾರಣಾಧಿಪ ಪ್ರಾಣವನ್ನೂ  ಹರಣವನ್ನೂ  ಅಂದು
ತ್ವರಿತಾದಿಂ ಸಲಹಿದಾ  ತೆರದಿ ಸಲಹಿನ್ನೂ  ಹರಿಯೇ ॥ ॥

ಕುಮುದ್ವತಿ: ಅಯ್ಯೋ ಶ್ರೀ ಹರೀ, ಮಲ್ಲಿಕಾ ಪುಷ್ಪಗಳ ಹಾರಗಳನ್ನು ಅರ್ಪಿಸುತ್ತಿದ್ದ ಪತಿಯ ಶಿರದಲ್ಲಿ ಈ ಗರಗಸವನ್ನು ಹೇಗೆ ಸೆಳೆಯಲೋ ಮುರಹರೀ  ಹೇ, ಪರಂಧಾಮ. ಹೇ ಪರಾತ್ಪರ ವಸ್ತುವೇ, ನಿನ್ನ ಪ್ರೀತ್ಯರ್ಥವಾಗಿ ದೇಹವನ್ನು ಕೊಡಲು ಸಿದ್ಧರಾಗಿರುವ ಪತಿಯ ಶಿರವನ್ನು  ಗರಗಸದಿಂದ ತರಿಯುವೆವು  ಅಂದು ಮೊಸಳೆಯನ್ನು ಸಂಹರಿಸಿ ಗಜರಾಜನನ್ನು ಸಂರಕ್ಷಿಸಿದಂತೆ ಯನ್ನ ಪ್ರಾಣವಲ್ಲಭನನ್ನುದ್ಧರಿಸಿ ಕಾಯೋ ನರಹರೀ – ಮುಂದೇನು ದಾರಿ ॥

ದರುವು

ಮುರಳಿಯ ಲೋಲನೆ ಪೊರೆಯೋ  ನೀನು ಪೊರೆಯೋ
ಪಿತನ ಶಿರವ ಕೊಯ್ವೆವು ಬಾರೈ  ಕರುಣೆಯ ತೋರೈ ॥
ದ್ವಾರಕಾವತಿಯೊಳು ನೆಲಸೀ  ನೀನು ನೆಲಸೀ ॥ಅಂದು
ತರುಣಿ ದ್ರೌಪದಿ ಮಾನ  ಭಂಗವನಳಿಸೀ ॥
ಕುರುಕುಲವನು ಸಂಹರಿಸೀ  ಸಂಹರಿಸೀ  ಬೇಗಾ
ತರಣಿ ಸಂಭವ ಸುತಗೇ  ದೊರೆತನ ನಿಲಿಸೀ ॥ಮುರಳಿಯ ॥          ॥

ತಾಮ್ರಧ್ವಜ: ಹೇ, ಮುರಹರಾ ! ಯನ್ನ ಪಿತನ ಶಿರವನ್ನು ಕರಪತ್ರದಿಂದ ಸೆಳೆಯುತ್ತಲಿದ್ದೇವೆ. ಇಂದು ನೀನೇ ರಕ್ಷಿಸಬೇಕೋ ಮುಕುಂದಾ. ಅಂದು ದ್ವಾರಕಾವತಿಯಲ್ಲಿ ನೀನು ನೆಲೆಸಿದ್ದು  ಪತಿವ್ರತೆ ದ್ರೌಪದೀ ದೇವಿಯ ವಸ್ತ್ರಾಪಹರಣ ಕಾಲದಲ್ಲಿ ಆಕೆಯ ಮಾನವನ್ನುಳಿಸಿ ಅಕ್ಷಯ ವಸ್ತ್ರವನ್ನು ಇತ್ತು ಸಲಹಿದೆಯಲ್ಲದೇ, ಕುರುಕುಲವನ್ನೇ ನಾಶಮಾಡಿ ಧರ್ಮತನಯನಿಗೆ ದೊರೆತನವನ್ನು ಇರಿಸಿ ರಕ್ಷಿಸಿದಂತೆ ಇಂದೆನ್ನ ಪಿತನನ್ನು ರಕ್ಷಿಸಿ ಕಾಯೋ ದೇವಾ – ಮಹಾನುಭಾವ ॥

ದರುವು

ಧರಣಿಯೊಳತಿ ಸೊಬಗುಳ್ಳಾ  ಹಿರಿಯ ಬಳ್ಳಾ  ಪುರದ
ಹರಿಜಾತೆ ಗಂಗೆಯಾ  ಗಿರಿಜೆಯ ನಲ್ಲಾ ॥
ದುರಿತವಿತ್ತಿಹ ಪರಿಯಲ್ಲಾ  ಇದು ಸಲ್ಲಾ ॥ಈಗಾ
ಕರುಣವಿಟ್ಟು ಕಾಯೋ  ಲಾಲಿಸಿ ಸೊಲ್ಲಾ ॥ಹರಿಯೇ ॥ ॥

ಕುಮುದ್ವತಿ: ಅಯ್ಯೋ ದೈವವೇ ! ನಾನು ನಿನಗೆ ಏನು ಅಪರಾಧವನ್ನು ಮಾಡಿದೆನು. ಈ ಭೂಮಂಡಲದಲ್ಲಿ ನನ್ನನ್ನೇ ಹುಡುಕಿಕೊಂಡು ಬಂದಿರುವೆಯಲ್ಲಾ, ವಿವಾಹವಾದಂದಿನಿಂದಲೂ ಯನ್ನನ್ನೇ ನಂಬಿ ಪ್ರೀತಿಸುತ್ತಿದ್ದ ಪತಿಯನ್ನು ನಾನೇ ಸಂಹರಿಸಬೇಕೆಂದು ನಿನ್ನ ಸಂಕಲ್ಪವಿದ್ದಿತೇ      ಈ ಧರೆಯೊಳಗೆ ಅತಿ ಮನೋಹರವಾಗಿ ರಂಜಿಸುವ ಹಿರಿಯ ಬಳ್ಳಾಪುರ ನಿಲಯ ಶ್ರೀ ಗಿರಿಜಾ ಮನೋಹರನಾದ ಶ್ರೀ ಸೋಮನಾಥನೇ ಈಗ ಬಂದಿರುವ ವಿಪತ್ತನ್ನು ಪರಿಹರಿಸಿ ಕಾಯಬೇಕೋ ಜಗಧೀಶ್ವರಾ – ದುರಿತ ಸಂಹಾರ ॥

ಭಾಗವತರು: ಕೇಳಿದರೇನಯ್ಯ ಭಾಗವತರೇ, ಈ ಪ್ರಕಾರವಾಗಿ ರಾಜನ ಶಿರವನ್ನು ಸತಿ ಸುತರು ಗರಗಸದಿಂದ ಸೆಳೆಯುತ್ತಿರಲು ಇದ್ದಕ್ಕಿದ್ದಂತೆ ಮಯೂರಧ್ವಜನ ಎಡಗಣ್ಣಿನಲ್ಲಿ ಕಣ್ಣೀರು ಒಸರುತ್ತಿರು ವುದನ್ನು ನೋಡಿ ಆ ಮಾಯಾ ವಿಪ್ರನು ಇಂತೆಂದನೈಯ್ಯ ಭಾಗವತರೇ ॥

ಬ್ರಾಹ್ಮಣ: ಹೇ ರಾಜೇಂದ್ರಾ  ತಡೆ. ತಡೆ ಅಳುತ್ತಳುತ್ತ ಕೊಡುವ ದಾನವನ್ನು ಬೇಡುವವನು ಭಂಡನು ಈ ಅಳುಮೋರೆಯ ದಾನ ನನಗೆ ಬೇಡ  ನನ್ನ ಮಗನನ್ನು ಸಿಂಹವು ತಿಂದರೆ ತಿನ್ನಲಿ. ಇನ್ನು ನಾನು ಹೊರಡುವೆನೈಯ್ಯ ಚಕ್ರವರ್ತಿ – ನಿನಗೆ ಬಂದಿತು ಅಪಕೀರ್ತಿ ॥

ಮಯೂರಧ್ವಜ: ಅಯ್ಯ, ಭೂಸುರೋತ್ತಮಾ  ನಿಲ್ಲು ನಿಲ್ಲು, ನಾನು ದಾನಕೊಡಬೇಕೆಂದಾಗಲೀ, ಗರಗಸದ ಘಾತಿಗಾಗಲೀ ಅತ್ತವನಲ್ಲ. “ಯನ್ನ ಬಲಭಾಗವೇನೋ ಪರೋಪಕಾರಕ್ಕಾಯಿತು  ಎಡ ಭಾಗವು ವ್ಯರ್ಥವಾಯಿತಲ್ಲಾ’. ಎಂದು ಕಣ್ಣಿನಲ್ಲಿ ನೀರು ಬಂದಿತೇ ಹೊರತು ಮತ್ತೆ ಬೇರಿಲ್ಲವೈಯ್ಯ ದ್ವಿಜನೇ – ಭೂಸುರೋತ್ತಮನೇ ॥

(ಭೂಸುರರು ತಮ್ಮ ನಿಜರೂಪನ್ನು ತೋರುವಿಕೆ)

ದರುವು

ಪೊಡವೀಶನೆ ಮೆಚ್ಚಿದೆ  ನಿನ್ನಯ ಸತ್ಯಕೇ
ಪೊಡವೀಶನೆ ಮೆಚ್ಚಿದೆ ॥

ಪೊಡವಿಪಾಲಕ ನಿನ್ನ ಸತ್ಯದ
ಧೃಡ ಪರೀಕ್ಷೆಯ ಮಾಡಲೋಸುಗಾ
ಅಡವಿ ಸಿಂಹದ ನೆಪವ ತಾಳಿ
ಎಡೆಗೆ ಬಂದೆನು ವೇಷ ತಾಳಿ ॥

ಶ್ರೀಕೃಷ್ಣ: ಹೇ ನೃಪಕುಲೋತ್ತಮನೇ, ನಿನ್ನ ಸತ್ಯಸಂಧತೆಗೆ ನಾನು ಮೆಚ್ಚಿದೆನು. ನಿನ್ನಯ ಸತ್ಯವನ್ನು ಪರೀಕ್ಷಿಸುವುದಕ್ಕಾಗಿ ಅಡವೀ ಸಿಂಹದ ನೆಪವನ್ನು ಹೂಡಿ  ಈ ಬ್ರಾಹ್ಮಣ ವೇಷವನ್ನು ತಾಳಿ ನಿನ್ನ ಸಮೀಪಕ್ಕೆ ಬಂದೆನು  ಮಹಾತ್ಮನಾದ ನೀನು  ಮಹತ್ತಾದ ವಿಪತ್ತಿನಲ್ಲಿಯೂ ಕೂಡ ಸತ್ಯ ಧರ್ಮಗಳನ್ನು ಬಿಡಲಿಲ್ಲ  ಅದನ್ನು ಚೆನ್ನಾಗಿ ಪರೀಕ್ಷಿಸಿ ಸಕಲ ದೇವತೆಗಳೂ ಸಂತುಷ್ಠರಾದರೈಯ್ಯ ರಾಜನೇ – ಬಿಡು ಮನದ ವೇದನೇ ॥

ದರುವು

ಧರಣಿಪಾಲಕ ಧರ್ಮಜನಾ  ಅನುಜನು ಈತ
ಸುರಪನಾತ್ಮಜ ಪಾರ್ಥನಾ ॥
ನೆರೆ ಕೂಡಿ ಬಂದಿಹ ತಾನು ದೇವಕೀ
ವರ ಸುತನು ಶ್ರೀ ಕೃಷ್ಣ ಮೂರುತೀ ॥
ಧಾರುಣಿಯೊಳು ನಿನ್ನ ಕೀರ್ತಿ ಪ್ರ
ಚಾರ ಮಾಡಲು ಬಂದೆವೈಯ್ಯ  ಪೊಡವೀ ॥ ॥

ಶ್ರೀಕೃಷ್ಣ: ಹೇ ಭೂಪಾಲ ! ಮುಚ್ಚು ಮರೆ ಇನ್ಯಾತಕ್ಕೆ ? ವಸುದೇವ ದೇವಕಿಯರ ಆತ್ಮಸಂಭವನೆನಿಸಿದ ನಾನು ಧರ್ಮಭೂಪಾಲನ ಅನುಜನಾದ ಈ ಪಾರ್ಥನನ್ನು ಒಡಗೂಡಿ ನಮ್ಮ ನಿಜ ರೂಪನ್ನು ಮರೆಸಿ ನಿನ್ನ ಸತ್ಯ ಧರ್ಮದ ಪರಾಕಾಷ್ಠತೆಯ ನೈಜತ್ವವನ್ನು ಈ ಧಾರುಣಿಯಲ್ಲಿ ಪ್ರಚುರಪಡಿಸಲು ಬಂದಿಹೆವೈಯ್ಯ ದೊರೆಯೇ – ನಿನಗಾರು ಸರಿಯೇ ॥

ದರುವು

ಧರಣಿಗೆ ಅಧಿಕವಾದ  ಹಿರಿಯಾಬಳ್ಳಾ
ಪುರಕೆ ಅಂತ್ಯದಿ ನೆಲೆಸಿದಾ ॥
ಹರನು ಗೌರೀ ವರನ ಕರುಣದೀ
ಹರಿದ ನಿನ್ನಯ ಶಿರವು ಕೂಡೀ ॥
ಭರದಿ ಮೆರೆಯಲಿ ಮೊದಲಿನಾ ಪರಿ
ಇರಲಿಯೆಂದು ವರವ ಕೊಟ್ಟಿಹೆ ॥

ಶ್ರೀಕೃಷ್ಣ: ಹೇ ನೃಪಕುಲ ಶಿರೋಮಣಿಯೇ, ಕೇಳು. ಕರಪತ್ರದಿಂದ ಹರಿದಿರುವ ನಿನ್ನಯ ಶಿರವು ಈ ಭೂತಳಕಧಿಕವೆನಿಸಿ ಮೆರೆಯುವ ಶ್ರೀ ಹಿರಿಯ ಬಳ್ಳಾಪುರವನ್ನು ಪ್ರೀತಿಯಿಂದ ಪರಿಪಾಲಿಸುವ ಶ್ರೀ ಸೋಮೇಶ್ವರನ ಕೃಪಾಕಟಾಕ್ಷದಿಂದ ಒಂದುಗೂಡಿ ಮೊದಲಿನಂತೆಯೇ ಉಜ್ವಲ ಕಾಂತಿಯಿಂದ ಮೆರೆಯಲೈಯ್ಯ ಚಕ್ರವರ್ತಿ – ಧರೆಯಲ್ಲಿ ನಿನ್ನ ಕೀರ್ತಿ ॥

ಭಾಗವತರು: ಕೇಳಿದರೇನಯ್ಯ ಭಾಗವತರೇ  ಈ ಪ್ರಕಾರವಾಗಿ ಮಯೂರಧ್ವಜನ ಮಾತಿಗೆ ಮುರಹರನು ಮೆಚ್ಚಿ ಕೂಡಲೇ ತನ್ನ ಮಾಯಾ ವಿಪ್ರತ್ವವನ್ನು ಬಿಟ್ಟು ತನ್ನ ನಿಜ ಸ್ವರೂಪವನ್ನು ತೋರಿ ತಾನು ಕೃಷ್ಣನೆಂದೂ, ಶಿಷ್ಯನಾಗಿದ್ದವನು ಅರ್ಜುನನೆಂದು ಹೇಳಿ, ಅನಂತರ ಆತನ ತಲೆಯ ಹೋಳುಗಳನ್ನು ಜೋಡಿಸಿ ಮೈ ತಡವಲು ರಾಜನು ಎಂದಿನಂತಾಗಲೂ, ಮಯೂರ ಧ್ವಜನು ನಿಗಮ ವೇದ್ಯನಾದ ಪರಾತ್ಪರ ಮೂರ್ತಿಯನ್ನು ಕಣ್ಣು ದಣಿಯುವಂತೆ ನೋಡಿ, ಮುಂಗಾರು ಮೇಘವನ್ನು ಕಂಡ ಮಯೂರದಂತೆ ಆನಂದಿಸಿ, ಆ ಭವ್ಯ ಮೂರ್ತಿಯನ್ನು ಮನ ಮೆಚ್ಚುವಂತೆ ಸ್ತೋತ್ರ ಮಾಡಿದನೈಯ್ಯ ಭಾಗವತರೇ ॥

ಪ್ರಾರ್ಥನೆ

ಕಂದಸಾವೇರಿ ರಾಗ

ಜಯ ಜಯ ಜಗನ್ನಾಥ  ವರ ಸುಪರ್ಣ ವರೂಥ
ಜಯ ಜಯ ರಮಾಕಾಂತ  ಶಮಿತ ದುರಿತ
ಧ್ವಾಂತ  ಜಯ ಜಯ ಸುರಾಧೀಶ  ನಿಗಮ
ನಿರ್ಮಲ ಕೋಶ  ಕೋಟಿ ಸೂರ‌್ಯ ಪ್ರಕಾಶ ॥

ಜಯ ಜಯ ಕ್ರತುಪಾಲ  ತರುಣ ತುಲಸೀ
ಮಾಲ  ಜಯ ಜಯ ಕ್ಷ್ಮಾಪೇಂದ್ರ  ಸಕಲ
ಸದ್ಗುಣ ಸಾಂದ್ರ  ಜಯತು ಜಯ ಯದು ರಾಜ
ಭಕ್ತ ಸುಮನೋ ಭೂಜ  ಜಯತು ದೇವಕೀತನಯ ॥

ದರುವು

ಜಯ ಜಯ ಗೋವಿಂದಾ  ಜಯ ಯಶೋದಾನಂದ
ಶ್ರೀನಿವಾಸ  ದೇವಕೀ ಕಂದ  ಶ್ರೀನಿವಾಸ
ಜಯನಂದ ನಂದನಾ  ಜಯ ಚಿದಾನಂದನಾ ॥ಶ್ರೀನಿವಾಸ ॥

ತನುಮನವೆಲ್ಲವಾ  ನಿನಗರ್ಪಿಸಿರುವೆನೋ
ಶ್ರೀನಿವಾಸ  ಜನಾರ್ಧನಾ  ಶ್ರೀನಿವಾಸ
ಧನಕನ ಸಿರಿಯೆಲ್ಲಾ  ನಿನಗೊಪ್ಪಿಸಿದೆನೈಯ್ಯಿ ॥ಶ್ರೀನಿವಾಸ ॥

ಹಿರಿಯ ಬಳ್ಳಾಪುರದ  ಹರನ ಪರಮ ಸಖನೇ
ಶ್ರೀನಿವಾಸ  ಶತಪತ್ರನೇತ್ರ  ಶ್ರೀನಿವಾಸ
ಶಿರಬಾಗಿ ನಮಿಸುವೆ  ಚರಣ ಪಂಕಜಗಳಿಗೆ  ಶ್ರೀನಿವಾಸ ॥

ಮಯೂರಧ್ವಜ: ಹೇ ದೇವಾ ! ವಾಸುದೇವ  ನಾನು ಏಳು ಮಹಾ ಯಾಗಗಳನ್ನು ಮಾಡಿದಾಗ್ಯೂ ಮೈದೋರದ ನೀನು ಈಗ ಧರ್ಮಜನ ಯಾಗಾಶ್ವದ ರಕ್ಷಣೆಯ ನೆಪದಿಂದ ಬಂದು ಯನಗೆ ದಿವ್ಯ ದರ್ಶನವನ್ನಿತ್ತೆಯಾ ದೇವಾ, ಹೇ ನಂದ ನಂದನಾ ! ಯನ್ನ ತನು ಮನ ಧನವೆಲ್ಲವನ್ನೂ ನಿನಗೆ ಅರ್ಪಿಸಿರುವೆನು. ಇನ್ನು ನಿನ್ನಯ ಚರಣ ಪಂಕಜದಲ್ಲಿ ಒಂದು ಭ್ರಮರವಾಗಿ ನಲಿದಾಡುವಂಥ ಭಾಗ್ಯವನ್ನು ಅನುಗ್ರಹಿಸೈ ದೇವಾ – ಮಹಾನುಭಾವ ॥

ಕುಮುದ್ವತೀ: ಹೇ ದೇವ ದೇವೋತ್ತಮಾ ! ಯನ್ನ ಕುಮಾರನು ಬಾಲ ಬುದ್ಧಿಯಿಂದ ನಿನ್ನೊಡನೆ ಸೆಣಸಿ ಶರಘಾತಿನಿಂದ ಬಳಲಿಸಿದ ಮಹಾಪರಾಧವನ್ನು ಸರ್ವಜ್ಞನಾದ ನೀನು ಮನಸ್ಸಿಗೆ ತಂದುಕೊಳ್ಳದೆ ಮನ್ನಿಸಿ ಕಾಪಾಡಬೇಕೈ ರುಕ್ಮಿಣೀಪ್ರಿಯನೇ – ದೇವಕೀ ತನಯನೇ ॥

ತಾಮ್ರಧ್ವಜ: ಹೇ ಸ್ವಾಮಿ ! ಕೃಷ್ಣ ಮೂರುತಿಯೇ. ಅಜ್ಞಾನದಿಂದ ನಿನ್ನನ್ನು ಮರೆತು ಧುರದೊಳಗೆ ಬಹು ಘಾತಿಪಡಿಸಿ ನಿನ್ನನ್ನು ಮೂರ್ಛೆ ಕೆಡಹಿದ ಯನ್ನ ಸರ್ವಾಪರಾಧವನ್ನು ಮನ್ನಿಸಿ ರಕ್ಷಿಸಬೇಕೋ ಮುಕುಂದಾ – ದೇವಕೀ ಕಂದಾ ॥

ಶ್ರೀಕೃಷ್ಣ: ಹೇ, ರಾಜೇಂದ್ರಾ ನಿನ್ನಯ ಭಕ್ತಿ ತ್ಯಾಗಗಳಿಗೆ ಮೆಚ್ಚಿದೆ. ನಿನ್ನ ಕುಮಾರನು ನಮ್ಮನ್ನು ಜಯಿಸಿದಾಗಲೇ ಆನಂದಿಸಿದೆ. ಇದೋ ಧರ್ಮಜನ ಯಜ್ಞಾಶ್ವವಿದೆ. ನಿನ್ನದೂ ಇದೆ. ಈಗ ಯಜ್ಞವನ್ನು ನೆರವೇರಿಸೈಯ್ಯ ಭೂಪ – ಕೀರ್ತಿ ಕಲಾಪ ॥

ಮಯೂರ ಧ್ವಜ: ಹೇ ದೇವಾ ! ನಿನ್ನನ್ನು ಕಂಡಾಗಲೇ ಅದರ ಮರ್ಮವನ್ನು ಬಲ್ಲೆನು. ನಿನ್ನ ಶಾಶ್ವತ ಮೂರ್ತಿಯನ್ನು ಕಂಡಾಗಲೇ ಎಲ್ಲಾ ಯಜ್ಞಗಳನ್ನು ಮಾಡಿದಂತಾಯಿತು. ಬೆಂಕಿಯನ್ನು ಸಮೀಪದಲ್ಲೇ ಇರಿಸಿಕೊಂಡು ಹಿಮಕ್ಕೆ ಮದ್ದನ್ನು ಹುಡುಕುವ ಮೂರ್ಖರುಂಟೇ ಪ್ರಭೂ  ನೀನಾಗಿ ನಿನ್ನ ದರ್ಶನವನ್ನಿತ್ತು ಯನ್ನನ್ನು ಧನ್ಯನನ್ನಾಗಿ ಮಾಡಿರುವೆ  ನರ ನಾರಾಯಣರನ್ನು ಕಂಡುದಕ್ಕಿಂತ ಪುಣ್ಯ ಬೇರೊಂದುಂಟೇ ನನ್ನಯ ಯಜ್ಞೋಪಕರಣಗಳನ್ನೆಲ್ಲಾ ಸ್ವೀಕರಿಸಿ ಧರ್ಮರಾಯನು ಯಜ್ಞವನ್ನು ಸಾಂಗವಾಗಿ ನೆರವೇರಿಸಲೈಯ್ಯ ಜಗದೀಶಾ – ಕಾಯೆನ್ನನು ಸರ್ವೇಶಾ ॥

ಕೃಷ್ಣಾರ್ಜುನರು: ರಾಜೇಂದ್ರನೇ ತಥಾಸ್ತು

ಭಾಗವತರ ಕಂದಸಾವೇರಿ ರಾಗ

ಸೋಮಕುಲ ತಿಲಕ ಜನಮೇಜಯ ನರೇಂದ್ರ ಕೇಳ್
ಸುರನದಿಯ ತೋಯಮಿರೆ ನೀರಡಸಿ  ಹಿಮ
ಜಲಕೆ ಪರಿವಂತೆ  ನಿನ್ನ ದರ್ಶನಮಿರ್ದು  ಮೀ
ಮಹಾಧ್ವರಕೆಳಸುವವನಲ್ಲ  ತನ್ನುಮಂ
ತನ್ನ ಸತಿಸುತರುಮಂ ತನ್ನೊಳಿರ್ದ ॥
ತುರಗಂಗಳಂ  ತನ್ನ ಯಜ್ಞಮಂ  ಯಜ್ಞೋ
ಪಕರಣಂಗಳಂ  ತನ್ನ ರಾಜ್ಯಮಂ  ತನ್ನ
ಮಂದಿರದ ಸರ್ವಸ್ವಮಂ  ನಿನ್ನ ಪದ
ಕರ್ಪಿಸಿದೆನೆಂದವಂ ಕೈ ಮುಗಿದನೂ ॥

ಭಾಗವತರ ದರುವುತ್ರಿವುಡೆ

ಕಾಯದೊಳಗರ್ಧವನು ಇತ್ತ
ಮಯೂರ ಕೇತುಗೆ ಧರ್ಮಸಾರವ
ಆಯದಿಂದಲಿ ಪೇಳ್ದನಾಗಲೇ  ತೋಯಜಾಕ್ಷಹರೀ ॥

ಪೊಡವಿಗೀಶ ಮಯೂರಕೇತುವು
ಒಡನೆ ಸಿರಿ ಚತುರಂಗ ಬಲವನು
ಕಡು ಜವದೊಳೊಪ್ಪಿಸಿದನಾಗಲೇ  ಕಡಲಶಯನನಿಗೇ ॥

ಹರಿಯು ಪಾರ್ಥನು ಪಡೆಯು ಸಹಿತಲೀ
ಮೂರು ದಿನವಿರ್ದಾಗ ಹೊರಟರು
ದೊರೆಯು ರತ್ನಪುರೀಶನೊಡನೇ  ತುರಗದ್ವಯ ಸಹಿತಾ ॥

ಎಂದು ಜೈಮಿನಿ ಮುನಿಯು ಹರುಷದಿ
ಇಂದುಧರನಾ ಕರುಣದಿಂದಲೀ
ಅಂದು ಜನಮೇಜಯಗೆ ಪೇಳ್ದನು  ಚಂದದೀ ಕಥೆಯೂ ॥

ವರುಷ ಶಾರ್ವರೀ ಕಾರ್ತಿಕಾದೊಳು
ಇರುವ ಬಹುಳದ ಸಪ್ತಮೀ ಗುರು
ವಾರ ಕಥೆಯನು ಬರೆದು ಮುಗಿಸಿದ  ಸುಬ್ಬರಾಯಪ್ಪಾ ॥

ಹಿರಿಯ ಬಳ್ಳಾಪುರದ ಅಂತ್ಯದೀ
ಸ್ಥಿರದಿ ನೆಲೆಸಿದ ಹರನು ಸೋಮೇ
ಶ್ವರನ ಸ್ಮರಿಸುತ ಬರೆದ ಕಥೆಯನು  ಸರ್ವರಾಲಿಪುದು ॥

ಭಾಗವತರು: ಕೇಳಿದರೇನಯ್ಯ ಭಾಗವತರೇ  ಈ ಪ್ರಕಾರವಾಗಿ ಧರಣಿಯೊಳು ಹಿರಿದೆನಿಸಿ. ಮೆರೆಯುವ ಹಿರಿಯ ಬಳ್ಳಾಪುರದೊಡೆಯ ಶ್ರೀ ಸೋಮೇಶ್ವರನ ಸಖನಾದಂಥ ದೇವಪುರವಾಸ ಶ್ರೀ ಲಕ್ಷ್ಮೀಶನು ಮಯೂರಧ್ವಜನ ಭಕ್ತಿ ತ್ಯಾಗಗಳಿಗೆ ಮೆಚ್ಚಿ ಆತನನ್ನು ಆಶೀರ್ವದಿಸಲು ಆ ರಾಜನು ತನ್ನ ಅಖಿಲಸೇನೆ, ಭೋಗ ಭಾಗ್ಯಗಳನ್ನೂ ಅಲ್ಲದೇ ತನ್ನ ರಾಜ್ಯವನ್ನೇ ಶ್ರೀ ಹರಿಯ ಪಾದಾರವಿಂದಕ್ಕೆ ಸಮರ್ಪಿಸಿ, ಅಷ್ಠವಿಧಾರ್ಚನೆಗಳಿಂದ ಪೂಜಿಸಲು, ನಂತರ ಆ ರಾಯನ ಬಿನ್ನಹದಂತೆ ನರ ನಾರಾಯಣರು ಆ ಪುರದಲ್ಲಿ ಪಡೆ ಸಹಿತ ಮೂರು ದಿನಗಳಿರ್ದು ಮಯೂರ ಧ್ವಜನ ಯಜ್ಞೋಪಕರಣ ಗಳೆಲ್ಲವನ್ನೂ ಹಸ್ತಿನಾವತಿಗೆ ಕಳುಹಿಸಿ ಯಾಗಾಶ್ವಗಳೆರಡನ್ನೂ ಮುಂದಕ್ಕೆ ಹೊರಡಿಸಿ ಕೃಷ್ಣಾರ್ಜುನರು ಪರಮ ಸಂತೋಷದಿಂದ ಮಯೂರಧ್ವಜನನ್ನೂ ಕೂಡಿಕೊಂಡು ಕುದುರೆಗಳ ಬೆಂಗಾವಲಿಗಾಗಿ ಮುಂದಕ್ಕೆ ಹೊರಟರೆಂಬುದಾಗಿ ಜನಮೇಜಯರಾಯನಿಗೆ ಜೈಮಿನೀ ಮಹರ್ಷಿಗಳು ಪೇಳಿದರೈಯ್ಯ ಭಾಗವತರೇ ॥

ಕಥೆ ಸಂಪೂರ್ಣಂ

* * *

ಮಂಗಳಾರತಿ

ಮಂಗಳಂ ಜಯ ಮಂಗಳಂ  ವಸುದೇವಸುತಗೆ
ಮಂಗಳಂ ಶುಭ ಮಂಗಳಂ ॥

ಮಂಗಳಂ ಜಯ ಮಂಗಳಂ ಶುಭ
ಮಂಗಳಂ ಶ್ರೀ ಕೃಷ್ಣಮೂರ್ತಿಗೆ ॥
ತುಂಗವಿಕ್ರಮ ಪಾಂಡು ಸುತರನು
ಹಿಂಗದೇ ಪೊರೆದಾತ ಹರಿಗೇ  ಮಂಗಳಂ ಜಯ ॥ ॥

ಧರಣಿಗಧಿಕವಾಗಿಹ  ಚಂಪಕಾಪುರ
ದರಸು ಹಂಸಧ್ವಜನ ॥
ವರಕುಮಾರಕರನ್ನು ಸಮರದಿ
ನರನ ಶರದಿಂ ಹರಿಸಿ ಶಿರಗಳ
ಮರಳಿ ಸಮರಕೆ ಬಂದ ನೃಪನಿಗೆ
ಪರಮ ಧರ್ಮವನರುಹಿದಾತಗೆ  ಮಂಗಳಂ ಜಯ ॥ ॥

ಧರಣಿಗೊಡೆಯನಾಗಿಹ  ರತ್ನಾಪುರಿಯ
ದೊರೆ ಮಯೂರಧ್ವಜನ ॥
ಪರಿಕಿಸಲು ವರ ಸತ್ಯ ಧರ್ಮವ
ಭರದಿ ಭೂಸುರ ವೇಷ ಧರಿಸೀ ॥
ವರ ಸತೀ ಸುತರಿಂದ ಶಿರವನು
ಗರಗಸದಿ ಕೊಯ್ಸಿದ ಮುಕುಂದಗೇ  ಮಂಗಳಂ ಜಯ ॥ ॥

ಸುರಲೋಕದಂತೆಸೆವ  ಹಿರಿಯ ಬಳ್ಳಾ
ಪುರದೊಳು ನೆಲೆಸಿರುವ ॥
ಉರಗ ಭೂಷಣ ವರದ ಸೋಮೇ
ಶ್ವರನ ಕಿಂಕರ ಸುಬ್ಬರಾರ್ಯನು ॥
ಪರಮ ಭಕ್ತಿಯಿಂದ ಎರಗುವ
ಸುರಪುರದ ಶ್ರೀ ಕೃಷ್ಣಮೂರ್ತಿಗೆ  ಮಂಗಳಂ ಜಯ ॥ ॥

* * *