ಒಂದು ಸುಂದರ ಹೂವನರಳಿಸಿದ ಲತೆಯಂತೆ
ನೀನಿರುವೆ ನಸುನಗುವ ಕಂದನೊಡನೆ
ಒಂದೆ ಬೆಳ್ಮುಗಿಲನ್ನು ಮಡಿಲಲ್ಲಿ ಹಿಡಿದಿರುವ
ಗಿರಿಕನ್ಯೆಯಂದದಲಿ ತೋರುತಿರುವೆ !

‘ನನ ಚಿನ್ನ ಬಂಗಾರಿ ಅಪರಂಜಿ ಕಟ್ಟಾಣಿ’
ಎಂದು ಮಗುವನು ಕರೆದುದೆನಿತು ಸಲವೊ !
ಎದೆಯ ಸಿರಿಯನ್ನೆಲ್ಲ ಸವಿ ಮುತ್ತಿನಲಿ ತುಂಬಿ
ಎರೆದನಿತು ತಣಿವಿಲ್ಲ : ಏನು ಒಲವೊ !

ತನ್ನಿಷ್ಟ ದೇವತೆಗೆ ಪೂಜೆಗೈಯುತ ದಿನವು
ತನ್ನ ತಾನೇ ಮರೆವ ಭಕ್ತನಂತೆ,
ಅದರ ಸಿಂಗಾರದಲಿ ನಿನ್ನ ನೀನೇ ಮರೆತೆ
ಬೊಂಬೆಯಾಟದೊಳಿರುವ ಹಸುಳೆಯಂತೆ !

ನಿನ್ನ ಕಣ್ಣೊಳು ಹೊಳೆವ ವಾತ್ಸಲ್ಯ ಚಂದ್ರಿಕೆಯೊ-
ಳದ್ದಿ ಶಿಶು ನಗುತಲಿದೆ ಚಿಕ್ಕಿಯಂತೆ !
ಜಗವನಾಳುವ ಒಲವು ಮೈದೋರಿದೀ ಪರಿಗೆ
ಬೆರಗುಮೌನದೊಳಿರುವೆ ಬಾನಿನಂತೆ !