ಹೆತ್ತು ಮೊಲೆಯಿತ್ತವಳು ತಾಯಿ ನೀನು
ನಿನ್ನ ಕಣ್ ಬೆಳಕಿನಲಿ ಬೆಳೆದಿದ್ದೆ ನಾನು.
ಬೆಳಕು ಆರಿತು ನನಗೆ
ಯಾವುದೋ ಒಂದು ಬಗೆ
ಬದುಕಿ ಬೆಳೆದೆನು ನಾನು ನಿನ್ನ ನೆನೆದು
ಸಿಹಿಗಿಂತ ಕಹಿಯನೇ ಹೆಚ್ಚಾಗಿ ಸವಿದು.

ನಿನ್ನಂಕದಲಿ ಮಲಗಿ ನಿನ್ನ ಕಣ್ಣಾಳದಲಿ
ನನ್ನ ಹೃದಯವ ಕಂಡ ಸಂತೋಷದಲ್ಲಿ
ನಲಿದು ಕೇಕೆಯ ಹಾಕಿ
ಸೆರಗಿನಲಿ ಮೊಗವಿಕ್ಕಿ
ನಿನ್ನೆದೆಯ ಮಾಧುರದ ಎದೆಹಾಲ ಸವಿದು
ನಲಿದ ಬೆಳಕಿನ ಕಾಲವತ್ಯಂತ ಕಿರಿದು.

ಇದ್ದಕ್ಕಿದ್ದಂತೆಯೇ ನೀ ಹಾರಿ ಹೋದೆ.
ಬುವಿಯ ಪಂಜರದಿಂದ ಬಿಡುಗಡೆಯ ಪಡೆದೆ.
ನಾನೊಬ್ಬನೇ ಉಳಿದೆ
ನಾನೊಬ್ಬನೇ ಬೆಳೆದೆ
ಬಾಳ ಬಿರುಗಾಳಿಯಲಿ ಎದೆಯನೊಡ್ಡಿ
ಕಳೆದ ಸಾಲಕೆ ಇನ್ನು ತೀರದಿದೆ ಬಡ್ಡಿ.
ನೀ ಸತ್ತು ಹೋಗಿರುವೆ ಎಂಬುದನು ಕೇಳಿ
ನಾನು ನಂಬಲೆ ಇಲ್ಲ ನನ್ನೆಳವೆಯಲ್ಲಿ
ನೀನೆಲ್ಲೊ ಹೋಗಿರುವೆ
ಮತ್ತೆ ಬಳಿಗೈತರುವೆ
ಎಂಬ ನಂಬುಗೆಯಲ್ಲಿ ಹಲವು ದಿನ ಕಾದೆ
ಕಡೆಗೆ ನಂಬಿದೆ ನಾನು – ‘ನೀ ತೊರೆದು ಹೋದೆ’
ದಿನ ದಿನವು ಆಗಸದ ಬಯಲನ್ನೆ ನೋಡಿ
ತೇಲುತಿಹೆ ನಿಶ್ಚಿಂತ ಮೋಡಗಳ ನೋಡಿ
ನೀನಲ್ಲಿ ಮುಗಿಲಾಗಿ
ತೇಲುತ್ತ ಸುಖವಾಗಿ
ಇರಬಹುದು ಎನ್ನುತ್ತ ಊಹಿಸಿದ್ದೆ
ಹಸುಳೆಗನಸನು ಎದೆಗೆ ತುಂಬುತ್ತಿದ್ದೆ.
ರಾತ್ರಿಯಾಕಾಶದಲಿ ತಾರೆಗಳ ಮೇಳ
ಮೌನದಲಿ ಆಲಿಸಿತು ನನ್ನೆದೆಯ ಗೋಳ.
ನಿನ್ನ ಕಣ್ಣುಗಳಂತೆ
ಆ ಚಿಕ್ಕೆಗಳ ಸಂತೆ
ಮಿಣುಮಿಣುಕಿ ನನ್ನೆದೆಗೆ ಶಾಂತಿಯನ್ನಿತ್ತು
ಅವ್ಯಕ್ತ ಗೀತೆಯಲಿ ಸಂತೈಸುತ್ತಿತ್ತು.
ಬೇರೆ ತಾಯಂದಿರನು ನೀನೆಂದು ಭ್ರಮಿಸಿ
ಕೂಗಿ ನಿಷ್ಫಲನಾಗಿ ನಿನಗಾಗಿ ತಪಿಸಿ
ನೀ ತೋರದಿರಲಾಗಿ
ಕಣ್ಣೀರಿನಲಿ ಮಲಗಿ
ಕನಸಿನಲಿ ನಾನಿನ್ನ ಕಂಡುದುಂಟು ;
ಕನಸೊಡೆಯೆ ಕಾದಿತ್ತು ಜಗದ ನಂಟು.

ಮನೆಯ ತುಂಬಿದಳಂದು ಮತ್ತೊಬ್ಬ ಮಾತೆ.
ಮನವ ತುಂಬಲೆ ಇಲ್ಲ – ಅವಳನ್ನದಾತೆ !
ನೀನಿತ್ತ ಒಲವನ್ನು
ಆ ದಿವ್ಯಸುಧೆಯನ್ನು
ಪರರಿಂದ ಕಡವಾಗಿ ಪಡೆಯಬಹುದೆ ?
ದೊರೆಯದಿರೆ ಅದಕಾಗಿ ಕೊರಗಬಹುದೆ ?

ನನ್ನ ಗೆಳೆಯರ ಹೆತ್ತತಾಯಿಯರ ಕಂಡು
ಅವರ ತಾಯ್ತನದೊಲವನಿನಿತು ಸವಿದುಂಡು
ನಾ ನಿನ್ನನೇ ನೆನೆದು
ಒಳಗೆ ಕಂಬನಿಗರೆದು
ಪ್ರೇಮದಾಹ್ವಾನಕ್ಕೆ ನನ್ನೆದೆಯ ತೆರೆದು
ಬಹುಕಾಲ ಕಾದರೂ ನನ್ನೆದೆಯು ಬರಿದು !

ಈ ಬಗೆಯ ನೋವಿನಲಿ ಏನೊ ಚೆಲುವುಂಟು
ಪರರ ನೋವಿನ ಬಗೆಗೆ ಅನುಕಂಪವುಂಟು.
ನೋವಿನಲಿ ನಲಿವುಂಟು
ನಲಿವಿನಲಿ ನೋವುಂಟು
ಎಂಬ ಅನುಭವವಾಗಿ ಬೆಳಕು ಮೂಡುತಿದೆ.
ನೋವು ಸೃಷ್ಟಿಯ ಮೂಲ ಎಂದು ತೋರುತಿದೆ.

ಇಂದಿಗೂ ಒಮ್ಮೊಮ್ಮೆ ತಾಯಿ ಮಕ್ಕಳ ಕಂಡು
ಕಳೆದ ಬಾಲ್ಯದ ಚೆಲುವ ಮನದಿ ಮೂಡಿಸಿಕೊಂಡು
ಸವಿಯುವೆನು ನಾನು,
ಮತ್ತೊಮ್ಮೆ ನೀನು
ನಿನ್ನ ತೊಡೆಯೊಳಗಿಟ್ಟು ಹಾಲೂಡುವಂತೆ
ಕನಸುಬೀಳುವುದೆನಗೆ – ಅತಿಮಧುರಚಿಂತೆ !
ತಾಯೊಲವೆ ತಾಯೊಲವು ಈ ಲೋಕದೊಳಗೆ
ಕಡಲಿಂಗೆ ಕಡಲಲ್ಲದುಂಟೆ ಹೋಲಿಕೆಗೆ !
ಓ ಅಮೃತಪ್ರೇಮವೇ
ಓ ಮಾತೃರೂಪವೇ
ತೀರಲಾರದ ತೃಷೆಗೆ ಮರುಜನ್ಮ ಬೇಕು
ಮತ್ತೊಮ್ಮೆ ಶಿಶುವಾಗಿ ನಾ ನಲಿಯಬೇಕು.