ಅಂದುಕೊಂಡಿದ್ದೆ, ನನ್ನ ಮಗ ಅವರಪ್ಪನಂತೆ
ಬಲು ದೊಡ್ಡ ಬಿಲ್ಗಾರನಾಗುತ್ತಾನೆ, ಸುಖ-
ವಾಗಿ ಬೇಡರ ಪಡೆಯ ದೊರೆಯಾಗಿ ಮೆರೆಯು-
ತ್ತಾನೆ ಎಂದು. ನೋಡಿದರೆ ಯಾರೋ ಗಡ್ಡದ ಮುದುಕ

ಅದೆಲ್ಲಿಂದಲೋ ಒಂದು ದಿನ ಬಂದ ; ಬಂದು ಇ-
ದ್ದಷ್ಟು ಹೊತ್ತಿನಲ್ಲಿ ಏನೋ ಮಾಡಿ ಹೆಬ್ಬೆರಳು
ಕೊಯ್ದ ; ಹೊರಟೇ ಹೋದ. ಏನಾಗಿತ್ತೊ ಈ
ನನ್ನ ಮಗನಿಗೆ. ಅದೇನು ಕವಿಯಿತೊ ಮರುಳು.

ಯಾಕಪ್ಪ ಹೀಗಾಯ್ತು ಎಂದು ಹೇಳಿದರೆ, ಏ-
ನೇನೂ ಆಗಿಲ್ಲವೆಂಬಂತೆ ಸುಮ್ಮನೆ ನಗುತ್ತಾನೆ.
ಬೇಟೆಗೆ ಬಾಣ ಹೂಡುವುದಕ್ಕೆ ಈಗ ಇರು-
ವಷ್ಟು ಬೆರಳು ಸಾಲದೇನಮ್ಮ ಅನ್ನುತ್ತಾನೆ.

ನಾನು ಮುಪ್ಪಿನ ಮುದುಕಿ, ಕವಿಯುತ್ತಿರುವ
ಕತ್ತಲಿನೊಳಗೆ ಕುಳಿತು ಕೊರಗುತ್ತೇನೆ.
ಈ ಕಾಡು, ಈ ನನ್ನ ಮಕ್ಕಳು, ಈ ದಾಳಿ-
ಗೆದೆಯೊಡ್ಡಿ ಬಾಳಿ ಬದುಕುವುದು ಹೇಗೆ?