ನನ್ನ ಎದೆಯ ಬಳಿ ಉಸಿರನಾಡುತಿಹ ನನ್ನ ಕಿರಿಯ ಕಂದ
ನನ್ನ ನಿನ್ನೆದೆಯ ಬೆಸೆಯಿತಾವುದೋ ಕಾಣದಿರುವ ಬಂಧ
ನನ್ನ ಗರ್ಭದಲಿ ಮೂಡಿ ಬಂದೆ ನೀನಾವ ಲೋಕದಿಂದ ?
ಇಂದು ನಮ್ಮವನು, ನಮ್ಮ ಲೋಕದವನೈದುದಿನಗಳಿಂದ.

ಬೇರೆ ಗತಿಯೆ ಇಲ್ಲೆಂಬ ತೆರದಿ ನನ್ನೆದೆಯ ಬಾಗಿಲಲ್ಲಿ
ಮಲಗಿ ಬೇಡುತಿಹೆ ಪ್ರೇಮಭಿಕ್ಷೆಯನು ಕಿರಿಯ ರೂಪದಲ್ಲಿ
ನನ್ನೆದೆಯ ಮುಗುಳು ತಾನಾಗಿ ಅರಳಿ ಹೂವಾಗಿ ಹೊಮ್ಮಿದಂತೆ
ನೀನರಳಿಬಂದೆ ನನ್ನೆದೆಯ ಬಳಿಗೆ ಕಿರಿದೊಂದು ಕೂಸಿನಂತೆ.

ಹೂಹೂಗಳೆದೆಯ ನವುರನ್ನೆ ತೆಗೆದು ಮಾಡಿಟ್ಟ ಗೊಂಬೆಯಂತೆ
ಹೊಸತಳಿರ ಜೊಂಪ ತಂಗದಿರ ತಂಪ ಕುಡಿದು ಮಲಗಿದಂತೆ
ಮಲಗಿರುವೆ ನೀನು ಎದೆಹಾಲನುಂಡು ನನ್ನ ಪಕ್ಕದಲ್ಲಿ
ನಿಸ್ತರಂಗ ಕಾಸಾರದಂತೆ ಬೆಳುದಿಂಗಳಿರುಳಿನಲ್ಲಿ !

ಯಾವ ಚಿತ್ರಗಳು ಮೂಡುತಿರುವುವೋ ಕಿರಿಯ ಎದೆಯ ಒಳಗೆ
ಕಳೆದ ಜನ್ಮಗಳೊ, ಬರುವ ಜನ್ಮಗಳೊ, ನೂರು ಜೀವಯಾತ್ರೆ
ತೋರುತಿರುವುದೋ ; ಅರಿಯೆನೊಂದನೂ, ನಿನ್ನ ಉಸಿರಿನೊಳಗೆ
ಕೇಳುತಿರುವೆ ನಾ- “ಜೀವರೆಲ್ಲರೂ ಪ್ರೇಮದೊಂದು ಪಾತ್ರೆ !”

ನೀನಾರೊ ಏನೊ, ಏಕೆ ಬಂದೆಯೋ ನನ್ನ ಒಡಲಿನೊಳಗೆ
ಬಂದ ಮೇಲೆ ನೀನಾದೆ ನನ್ನ ಅಕ್ಕರೆಯ ಬಂಧದೊಳಗೆ.
ಯಾರೊ ಏನೊ ಬಂದಿಂತು ನಮ್ಮ ಒಲವ ಸೆಳೆದು ಬೆಳೆದು
‘ನೀನು ನನ್ನವನು’- ಎನಿಸಿಕೊಳ್ಳುವಚ್ಚರಿಯದೊಂದು ಹಿರಿದು !

ನನ್ನ ಗರ್ಭದಲಿ ಮೂಡಿಬರುವ ಮೊದಲೆಲ್ಲಿ ಇದ್ದೆ ಮಗುವೆ ?
ಯಾವ ರೂಪದಲಿ, ಯಾವ ದೇಶದಲಿ, ಯಾವ ಹೆಸರಿನಲ್ಲಿ ?
ಎಷ್ಟು ಜನ್ಮದಲಿ, ಎಷ್ಟು ಯುಗಗಳಲಿ, ತಾರೆ ಗ್ರಹಗಳಲ್ಲಿ
ಸುತ್ತಿ ಬಂದೆಯೋ ; ಏನು ತಿಳಿಯದೊಲು ಬರಿದೆ ನಟಿಸುತಿರುವೆ !

ಎಲ್ಲ ಬಲ್ಲರೂ ಶಕ್ತಿಯಿದ್ದರೂ ನಿಶ್ಶಕ್ತಮುಗ್ಧನಂತೆ,
ನಟಿಸಿ ನನ್ನೆದೆಯ ಹಾಲನುಣ್ಣುವಾ ಬಯಕೆಯೇನೊ ನಿನಗೆ ?
ನಾನೆಲ್ಲ ಬಲ್ಲೆ ; ಈಗಲಾದರೂ ಬಂದೆಯಲ್ಲ ಬಳಿಗೆ.
ಭಕ್ತನೆಡೆಗೆ ತಾನಾಗಿ ಬರುವ ಮಾದೇವ ಕರುಣೆಯಂತೆ !