ತಾಯಿಯ ಎದೆಹಾಲನು ಹೀರುತ್ತಿದೆ
ಮೋಹದ ಮುದ್ದಿನ ಮಗುವೊಂದು-
ಬಾನನ್ನಪ್ಪಿದ ಮೃದುಮೋಡದವೋಲ್
ಭಗವಂತನನಪ್ಪಿದ ಭಕ್ತನವೋಲ್
ಕಾವ್ಯಸಮಾಧಿಯ ರಸಾನುಭೂತಿಯ
ಕಾವಿನೊಳದ್ದಿಹ ಕಬ್ಬಿಗನೋಲ್
ತಾಯೆದೆಹಾಲನು ಹೀರುವ ಸುಖದಲಿ
ತನ್ಮಯವಾಗಿದೆ ಶಿಶುವೊಂದು.

ತನ್ನೆದೆಗೊರಗಿದ ಮುದ್ದಿನ ಮಗುವನು
ಅರ್ಧನಿಮೀಲಿತ ನಯನಸ್ಥೆ
ಪ್ರೇಮದ ನೋಟದಿ ರಕ್ಷಿಸುವಂದದಿ
ದಿಟ್ಟಿಸುತಿರುವಳು ಆ ತಾಯಿ !

ಮಗುವಿನ ಮೇಗಡೆ ತಾಯಿಯ ಸೆರಗಿದೆ
ಶ್ಯಾಮಲ ಪೃಥುವಿಗೆ ಶರ್ವರಿಯೋಲ್,
ಅಲ್ಲಲ್ಲಿಯೆ ಶಿಶುದೇಹವು ಇಣುಕಿದೆ
ಸುಂದರ ಶಾರದ ನೀರದದೋಲ್.

ಹಾಲೂಡುತ್ತಿಹ ತಾಯಿಯ ಮನಸು
ಮಗನಭ್ಯುದಯದ ಕನಸಿನಲಿ
ಕಾಮನ ಬಿಲ್ಲಿನ ನಾಕವ ನೆಯ್ದಿರೆ
ಶಿಶು ತಾನದ್ದಿದೆ ಹಾಲಿನಲಿ !
ತನ್ನಯ ತಾಯೊಲವನೆ ಹೀರುತ್ತಿದೆ
ಎದೆಹಾಲಿನ ಮಧುರೂಪದಲಿ !
ಸದ್ಯಕೆ ಶಿಶು ಹಾಲಾಗುತ್ತಿದೆ
ಸುಮಧುರ ಸ್ತನ್ಯ ಸಮಾಧಿಯಲಿ !
ಹಾಲೊಂದೇ ಅದಕಿಂದಿಗೆ ಸತ್ಯ
ಮಿಕ್ಕುದು ಏನಿದ್ದರು ಮಿಥ್ಯ !