ತಾಳ್ಳಪಾಕ ಅನ್ನಮಾಚಾರ್ಯ ಶ್ರೇಷ್ಟ ಭಕ್ತರು, ಹಿರಿಯ ವಾಗ್ಗೇಯಕಾರರು. ತಿರುಪತಿ ವೆಂಕಟೇಶ್ವರನಿಗೆ ತಮ್ಮ ಬಾಳನ್ನೇ ಸಮರ್ಪಿಸಿದರು. ಸುಮಾರು ಮೂವತ್ತು ಸಾವಿರ ಹಾಡುಗಳಿಂದ ಅವನನ್ನು ಅರ್ಚಿಸಿದರು. ಭಗವ ತೋತ್ತಮರು.

 ತಾಳ್ಳಪಾಕ ಅನ್ನಮಾಚಾರ್ಯ

 

‘ಜೋ ಅಚ್ಯುತಾನಂದ ಜೋ ಜೋ ಮುಕುಂದ
ಲಾಲಿ ಪರಮಾನಂದ ರಾಮ ಗೋವಿಂದ’

ಎಂಬ ಓ ಜೋಗುಳವನ್ನು ಹಾಡದ ತಾಯಂದಿರು, ಕೇಳದ ಹಸುಳೆಗಳು ತಲುಗು ದೇಶದಲ್ಲಿ ಇಲ್ಲ. ಈ ಹಾಡನ್ನು ಕಟ್ಟಿದಾತ ತಾಳ್ಳಪಾಕ ಅನ್ನಮಾಚಾರ್ಯ. ಇವರು ತೆಲುಗು ದೇಶದ ಶ್ರೇಷ್ಟ ಕವಿಗಳಲ್ಲಿ ಒಬ್ಬರು. ತೆಲುಗಿನಲ್ಲಿ ಎಷ್ಟೋ ಶತಕಗಳನ್ನು, ಕಾವ್ಯಗಳನ್ನೂ ಬರೆದಿರುವುದೇ ಅಲ್ಲದೆ, ತಿರುಮಲೆ ತಿರುಪತಿ ವೆಂಕಟೇಶ್ವರನ ಮೇಲೆ ಸಾವಿರಾರು ಹೃದ್ಯವಾದ ಸಂಕೀರ್ತನೆಗಳನ್ನು ರಚಿಸಿದ ಭಾಗವತರು, ವಾಗ್ಗೇಯಕಾರರು, ಆದರೆ ಐವತ್ತು ವರ್ಷಗಳಿಗೆ ಮುಂಚೆ ಆತನ ಹೆಸರು ತೆಲುಗು ದೇಶದಲ್ಲೇ ಯಾರಿಗೂ ತಿಳಿದಿರಲಿಲ್ಲ. ಇದು ನಂಬುವುದು ಕಷ್ಟವಲ್ಲವೇ? ಆದರೂ ನಿಜ. ನಮ್ಮ ದೇಶದ ಚರಿತ್ರೆಯ ಅನೇಕ ವಿಚಿತ್ರಗಳಲ್ಲಿ ಇದೂ ಒಂದು. ಇಂತಹ ವ್ಯಕ್ತಿಯ ವಿಷಯದಲ್ಲಿ ನಮ್ಮ ಕುತೂಹಲ ಕೆರಳುವುದು ಸಹಜ. ಆದರೆ ಆತನನ್ನು ಕುರಿತು ನಿಮಗೆ ತಿಳಿದು ಬಂದಿರುವುದು ಸ್ವಲ್ಪ. ಅನ್ನಮಾಚಾರ್ಯರಿಗೆ ಚಿನ ತಿರುವೆಂಗಳನಾಥ ಅಥವಾ ಚಿನ್ನನ್ನ ಎಂಬ ಮೊಮ್ಮಗ. ಆತನೂ ಕವಿಯೇ. ತನ್ನ ತಾತನ ಜೀವನಚರಿತ್ರೆಯನ್ನು ಪದ್ಯಕಾವ್ಯವಾಗಿ ಬರೆದಿದ್ದಾನೆ. ಅದರ ಹೆಸರು ‘ಅನ್ನಮಾಚಾರ್ಯ ಚರಿತ್ರಮು.’ ಅದೇ ನಮಗೆ ಅನ್ನಮಯ್ಯನನ್ನು ಕುರಿತು ತಿಳಿದುಕೊಳ್ಳುವುದಕ್ಕೆ ಮುಖ್ಯವಾದ ಆಧಾರ. ಆದರೆ ಅದು ಇಂದಿನ ಜೀವನಚರಿತ್ರೆಗಳಂತಹ ಗ್ರಂಥವಲ್ಲ. ಚಿನ್ನನ್ನನ ದೃಷ್ಟಿಯಲ್ಲಿ ಅವನ ತಾತ ಕವಿ, ಸಂಕೀರ್ತನಕಾರ, ಗಾನವಿಶಾರದ ಮಾತ್ರವೇ ಅಲ್ಲ, ಮಿಗಿಲಾಗಿ ಮಹಿಮಾಪುರುಷ. ಆದ್ದರಿಂದ ತನ್ನ ಕಾವ್ಯದಲ್ಲಿ ಚಿನ್ನನ್ನ ತನ್ನ ತಾತನ ನಿತ್ಯಜೀವನದ ವಿಷಯಗಳನ್ನು, ವೃತ್ತಾಂತಗಳನ್ನು ಅಷ್ಟಾಗಿ ಪ್ರಸ್ತಾಪಮಾಡಿಲ್ಲ. ಹಲವು ಸಂದರ್ಭಗಳಲ್ಲಿ ಚಿನ್ನನ್ನನ ಕಾವ್ಯದ ಆಧಾರದ ಮೇಲೆ ‘ಹೀಗೆ ನಡೆದಿರಬಹುದು’ ಎಂದು ನಾವೇ ಊಹಿಸ ಬೇಕಾಗುತ್ತದೆ.

ಭಕ್ತಿಯುಗ

ಅನ್ನಮಯ್ಯನ ಜೀವನಚರಿತ್ರೆಯನ್ನು, ಆತನ ವ್ಯಕ್ತಿತ್ವವನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ಆತನ ಹಿನ್ನೆಲೆಯನ್ನು ಕುರಿತು ಸ್ವಲ್ಪಮಟ್ಟಿಗಾದರೂ ನಾವು ತಿಳಿದುಕೊಳ್ಳಬೇಕು.

ಕ್ರಿಸ್ತಶಕ ಹದಿನೈದನೆಯ ಶತಮಾನ ಅನ್ನಮಾಚಾರ್ಯ ನ ಕಾಲ. ತೆಲುಗಿನಲ್ಲಿ ‘ಮಹಾಭಾಗವತ’ವನ್ನು ಬರೆದು ಲೋಕಪ್ರಸಿದ್ಧನಾದ ಬಮ್ಮೆರ ಪೋತನ ಈ ಕಾಲದವನೇ. ದಕ್ಷಿಣ ಭಾರತದಲ್ಲಿ ವಿವಿಧವಾದ ಭಕ್ತಿಯ ರೂಪಗಳು, ಮುಖ್ಯವಾಗಿ ವೈಷ್ಣವ ಭಕ್ತಿ, ಪ್ರಚಾರಕ್ಕೆ ಬಂದ ಕಾಲವದು. ನಮ್ಮ ದೇಶದಲ್ಲಿ ಬಹಳ ಹಿಂದಿನಿಂದಲೂ ಆಧ್ಯಾತ್ಮಿಕ ಶ್ರದ್ಧೆ ಇತರ ವಿಷಯಗಳಿಗಿಂತ ಸ್ವಲ್ಪ ಹೆಚ್ಚು. ಇಹಕ್ಕಿಂತ ಪರವೇ ಶ್ರೇಷ್ಟ. ಮೋಕ್ಷ ಪಡೆಯುವುದೇ ಬಾಳಿನ ಗುರಿ ಎಂದು ನಮ್ಮ ಪೂರ್ವಿಕರ ನಂಬಿಕೆ. ಅದ್ದರಿಂದ ಮೋಕ್ಷಸಾಧನೆಗೆ ದಾರಿಗಳು ಯಾವುವು ಎಂಬ ವಿವೇಚನೆ, ಚರ್ಚೆ ಸಹಜವಾಗಿ ಹಿಂದೆಯೇ ಮೊದಲಾಯಿತು. ಕರ್ಮ, ಜ್ಞಾನ, ಭಕ್ತಿ ಎಂಬ ಮೂರು ಮುಖ್ಯವಾದ ಮಾರ್ಗಗಳು ಎದ್ದು ನಿಂತವು. ಭಕ್ತಿಪಂಥ ಹುಟ್ಟಿ ಕ್ರಮೇಣ ಎಷ್ಟೋ ರೂಪಗಳನ್ನು ಹೊಂದಿತು. ದಕ್ಷಿಣದೇಶದಲ್ಲಿ ಮುಖ್ಯವಾಗಿ ಶಿವಭಕ್ತಿ ಮತ್ತು ವಿಷ್ಣುಭಕ್ತಿಯ ರೂಪಗಳನ್ನು ತಾಳಿತು. ತಮಿಳುನಾಡಿನಲ್ಲಿ ಶಿವಭಕ್ತರಾದ ನಾಯನಾರರು, ವಿಷ್ಣುಭಕ್ತರಾದ ಆಳ್ವಾರರು, ಕನ್ನಡನಾಡಿನಲ್ಲಿ ಶಿವಶರಣರು, ಹರಿದಾಸರೇ ಮುಂತಾದ ಭಕ್ತರು, ಭಾಗವತರು ಜನಜೀವನದಲ್ಲಿ ಹೊಸ ಹುರುಪನ್ನು, ಚೈತನ್ಯವನ್ನು ಉಂಟುಮಾಡಿದರು. ಎಲ್ಲರಿಗೂ ದೈವಭಕ್ತಿ, ಧರ್ಮ, ನೀತಿ ಬೋಧಿಸಿದರು. ಇವರ ಪ್ರಭಾವ ಇಡೀ ದಕ್ಷಿಣ ಭಾರತದಲ್ಲೆಲ್ಲಾ ವ್ಯಾಪಿಸಿತು. ಅನ್ನಮಯ್ಯನ ಜೀವನಕ್ಕೆ ಅದೇ ಹಿನ್ನೆಲೆ. ಆತ ಹುಟ್ಟಿ ಬೆಳೆದ ಪ್ರಾಂತದಲ್ಲಿ ಶ್ರೀವೈಷ್ಣವ ಭಕ್ತಿ ಹೆಚ್ಚು ಪ್ರಚಾರವನ್ನು, ಪ್ರಭಾವವನ್ನೂ ಸಂಪಾದಿಸಿಕೊಂಡಿತ್ತು. ಆದ್ದರಿಂದ ಆತ ವಿಷ್ಣುಭಕ್ತನಾಗಲು ಅವಕಾಶವಾಯಿತು.

ತಪಸ್ಸಿನ ವರ

ಅನ್ನಮಾಚಾರ್ಯನ ಜನನ ಕ್ರಿಸ್ತಶಕ ೧೪೦೮ನೆಯ ಇಸವಿಯಲ್ಲಿ, ವಿರೋಧಿ ಸಂವತ್ಸರದ ವೈಶಾಖ ಶುದ್ಧ ಪೌರ್ಣಮಿಯ ದಿನ. ಆತನ ಜನ್ಮಸ್ಥಳ ತಾಳ್ಳಪಾಕ ಎಂಬ ಗ್ರಾಮ. ಅದು ಕಡಪ ಜಿಲ್ಲೆಯ ರಾಜಂಪೇಟೆ ತಾಲ್ಲೂಕಿನಲ್ಲಿದೆ. ಕಾಲಕ್ರಮದಲ್ಲಿ ತಾಳ್ಳಪಾಕ ಎನ್ನುವುದು ಆತನಿಗೆ, ಆತನ ಸಂತತಿಯವರಿಗೆ ಮನೆಹೆಸರಾಯಿತು. ಅನ್ನಮಯ್ಯನ ತಂದೆ ನಾರಾಯಣಸೂರಿ. ತಾಯಿ ಲಕ್ಕಮಾಂಬೆ. ಆತನ ತಂದೆ, ತಾತ, ಮುತ್ತಾತಂದಿರು ವೇದ ಪಾರಂಗತರು, ಭಕ್ತಿ ಪರಾಯಣರು. ಈ ವಾತಾವರಣದಲ್ಲಿ ಹುಟ್ಟಿ ಬೆಳೆದ ಅನ್ನಮಯ್ಯನಿಗೆ ಕಿರಿವಯಸ್ಸಿನಲ್ಲಿಯೇ ದೈವಭಕ್ತಿ ಸಹಜವಾಗಿ ಉಂಟಾಯಿತು. ಆತನ ತಂದೆ ತಾಯಿಗಳಿಗೆ ಬಹುಕಾಲ ಮಕ್ಕಳೇ ಇರಲಿಲ್ಲವಂತೆ. ಆ ದಂಪತಿಗಳು ತಿರುಮಲೆಗೆ ಯಾತ್ರೆ ಬಂದು, ಗುಡಿಯಲ್ಲಿನ ಗರುಡಗಂಬಕ್ಕೆ ಹಲವು ಸಲ ನಮಸ್ಕರಿಸಿ, ‘ಯೋಗ್ಯನಾದ ಮಗನನ್ನು ಅನುಗ್ರಹಿಸು’ ಎಂದು ವೆಂಕಟೇಶ್ವರನನ್ನು ಬೇಡಿಕೊಂಡರಂತೆ. ಅಂದಿನ ರಾತ್ರಿ ಅವರಿಗೆ ಕನಸಿನಲ್ಲಿ ದೇವರ ‘ನಂದಕ’ (ಕತ್ತಿ) ಕಾಲಿನ ಅಂದಿಗೆಗಳು ಕಂಡುಬಂದವಂತೆ. ‘ನಮ್ಮ ತಪಸ್ಸು ಫಲಿಸಿತು. ತಪ್ಪದೆ ನಮ್ಮ ಕೋರಿಕೆ ಈಡೇರುತ್ತದೆ’ ಎಂದು ಅವರು ಸಂತೋಷದಿಂದ ಹಿಂತಿರುಗಿದರು. ಕಾಲಕ್ರಮದಲ್ಲಿ ಆ ಪುಣ್ಯ ದಂಪತಿಗಳಿಗೆ ವೆಂಕಟೇಶ್ವರನ ವರಪುತ್ರವಾಗಿ ಒಬ್ಬ ಮಗು ಹುಟ್ಟಿದ. ಮಗನಿಗೆ ‘ಅನ್ನಮಯ್ಯ’ ಎಂದು ಹೆಸರಿಟ್ಟರು. ತಿರುಮಲೆ ದೇವರ ಖಡ್ಗದ ಅಂಶದಲ್ಲಿ ತಮ್ಮ ಮಗ ಹುಟ್ಟಿದನೆಂದು ಅವರು ನಂಬಿದರು. ಈ ರೀತಿ ಹುಟ್ಟಿದ ಮಗುವಿನಲ್ಲಿ ತೊಟ್ಟಿಲ ಮಗುವಾಗಿದ್ದಾಗಲೇ ವೆಂಕಟೇಶ್ವರನ ಮೇಲೆ ಭಕ್ತಿ ಮೊಳೆಯಿತೆಂದರೆ ಆಶ್ಚರ್ಯವೇನಿದೆ? ಆ ದೇವರ ಮೇಲಿನ ಜೋಗುಳ ಹಾಡಿದ ಹೊರತು ನಿದ್ರಿಸುತ್ತಿರಲಿಲ್ಲವಂತೆ ಈ ಮಗು. ಅಷ್ಟೇ ಅಲ್ಲ, ‘ತಿರುಮಲಪ್ಪನ ಪ್ರಸಾದ’ ಎಂದು ಹೇಳಿದ ಹೊರತು ಹಾಲನ್ನೂ ಕುಡಿಯುತ್ತಿರಲಿಲ್ಲವಂತೆ.

ತಿರುಪತಿಗೆ ಹೊರಟ ಹಸುಗೂಸು

ಅನ್ನಮಯ್ಯನಿಗೆ ಐದನೆಯ ವರ್ಷದಲ್ಲೇ ಉಪನಯನ ವಾಯಿತು. ವಿದ್ಯಾಭ್ಯಾಸ ಮೊದಲಾಯಿತು. ಶ್ರಮವಿಲ್ಲದೆಯೇ ಗುರುಗಳು ಕಲಿಸಿದ ವಿದ್ಯೆಗಳನ್ನೆಲ್ಲ ಕಲಿತ. ದೈವಕೃಪೆ, ಪೂರ್ವಜನ್ಮದ ಸುಕೃತ ಎಂದು ಗುರುಗಳು, ಹಿರಿಯರು ಭಾವಿಸಿದರು. ಹುಡುಗನನ್ನು ಮೆಚ್ಚಿಕೊಂಡರು. ಆದರೆ ಈ ಹುಡುಗ ಎಲ್ಲ ಮಕ್ಕಳ ಹಾಗಿರಲಿಲ್ಲ. ಇವನಿಗೆ ಆಟಪಾಟಗಳಿಗಿಂತ ದೇವರ ಚಿಂತೆಯಲ್ಲಿ ಶ್ರದ್ಧೆ ಹೆಚ್ಚು. ಕಿರುವಯಸ್ಸಿನಲ್ಲೇ ವೆಂಕಟಪತಿಯ ಮೇಲೆ ಹಾಡುಗಳನ್ನು ಕಟ್ಟಿ, ಭಕ್ತಿಪರವಶನಾಗಿ ಹಾಡುತ್ತಾ, ನರ್ತಿಸುತ್ತ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದನಂತೆ. ದಿನಗಳು ಕಳೆದ ಹಾಗೆಲ್ಲಾ ಬಾಲಕ ಅನ್ನಮಯ್ಯನಿಗೆ ದೈವಭಕ್ತಿ, ದೈವಚಿಂತನೆ ಹೆಚ್ಚಾಯಿತು. ಆದ್ದರಿಂದ ಮನೆಯಲ್ಲಿ ಹಿರಿಯರು ಮನೆಗೆಲಸ ಏನಾದರೂ ಹಚ್ಚಿದರೆ ಬಹಳ ಬೇಸರಪಡುತ್ತಿದ್ದನಂತೆ. ಹೀಗಿರುವಾಗ ಅನ್ನಮಯ್ಯನಿಗೆ ಒಂದು ದಿನ ಮುಂಚಾನೆ ಅದ್ಭುತವಾದ ಒಂದು ಕನಸು ಕಂಡಿತು. ಅದರಲ್ಲಿ ವೆಂಕಟೇಶ್ವರ ದೇವಾಲಯ, ಗೋಪುರ, ಬಂಗಾರದ ಬಾಗಿಲುಗಳು, ಗರ್ಭಗ್ರಹ, ಅಲ್ಲಿ ‘ಶತಕೋಟಿ ಸೂರ್ಯರ ತೇಜಸ್ಸಿನಿಂದ ಬೆಳಗುವ ತಿರುವೆಂಕಟಾಚಲಾಧಿಪನ ಮೂರ್ತಿ’ ಕಂಡು ಬಂದುವಂತೆ.

ತನ್ನನ್ನು ತಿರುಮಲೆಗೆ ಕರೆಸಿಕೊಳ್ಳುವುದಕ್ಕೆ ಈ ಕನಸು ಎಂದು ಬಾಲಕ ಭಾವಿಸಿದ. ಕೂಡಲೆ ಯಾರಿಗೂ ತಿಳಿಸದೆ ಮನೆಯಿಂದ ಹೊರಬಿದ್ದ. ದೈವವಶಾತ್ ಕಾಲ್ನಡಿಗೆಯಲ್ಲಿ ತಿರುಮಲೆಗೆ ಹೋಗುತ್ತಿದ್ದ ಯಾತ್ತಿಕರ ತಂಡವೊಂದು ಅವನಿಗೆ ಜತೆಯಾಯಿತು. ಕೆಲವು ದಿನಗಳ ಪ್ರಯಾಣದ ತರುವಾಯ ತಿರುಪತಿಯನ್ನು ಸೇರಿ, ಬೆಳಗಿನಜಾವ ತಿರುಮಲೆ ಬೆಟ್ಟ ಹತ್ತಲು ಮೊದಲುಮಾಡಿದ.

‘ಮೊಣಕಾಲ್ಮೂರಿ’ ಸೇರುವ ವೇಳೆಗೆ ಮಧ್ಯಾಹ್ನ ವಾಯಿತು. ಬಿಸಿಲಿನ ತಾಪ ಬೇರೆ. ಬಹಳವಾಗಿ ದಣಿದಿದ್ದ ಅನ್ನಮಯ್ಯನಿಗೆ ಕಣ್ಣು ಮಂಜಾಯಿತು. ಪಕ್ಕದಲ್ಲೇ ಇದ್ದ ಬಿದಿರಿನ ಮೆಳೆಯ ಕೆಳಗೆ ಬಂಡೆಯ ಮೇಲೆ ಮಲಗಿದ. ಆಗ ಕನಸಿನಲ್ಲಿ ಜಗನ್ಮಾತೆ ಅಲಮೇಲುಮಂಗಮ್ಮ ಹಿರಿಯ ಮುತ್ತೈದೆಯ ರೂಪದಲ್ಲಿ ಕಂಡುಬಂದಳು ಎಂದು ಹೇಳುತ್ತಾರೆ. ಚೆನ್ನಾಗಿ ಹಸಿದಿದ್ದ ಬಾಲಕನಿಗೆ ದೇವರ ಪ್ರಸಾದವನ್ನು ತೃಪ್ತಿಯಾಗುವಂತೆ ತಿನ್ನಿಸಿ, ‘ದೇವದೇವ ತಿರುಮಲಪ್ಪನನ್ನು ಸೇವಿಸಲು ಹೋಗು ಎಂದು ಆ ತಾಯಿ ಹೇಳಿದಳಂತೆ.

ಮಂಪರದಿಂದ ಅನ್ನಮಯ್ಯನಿಗೆ ಎಚ್ಚರವಾಯಿತು. ಕ್ಷಣಕಾಲ ತಾನು ಕಂಡದ್ದು ಕನಸೋ ನನಸೋ ತಿಳಿಯಲಿಲ್ಲ. ಕೂಡಲೆ ಜಗದಂಬೆಯ ಮೇಲೆ ಒಂದು ಶತಕವನ್ನು ಆಶುಧಾರೆಯಾಗಿ ಹೇಳಿದ. ಉತ್ಸಾಹ ಇವ್ಮ್ಮಡಿಯಾಯಿತು. ಮುಂದಕ್ಕೆ ನಡೆದ. ಯಾವಾಗ ತನಗೆ ಸ್ವಾಮೀಜಿ ದರ್ಶನವಾದೀತು ಎಂದು ಹುಡುಗನ ಮನಸ್ಸು ಉತ್ಸುಕತೆಯಿಂದ  ತುಂಬಿತ್ತು.

ಸ್ವಾಮಿಯ ದರ್ಶನ

ತಿರುಮಲೆಯನ್ನು ಸೇರಿ ಸ್ವಾಮಿಯ ಪುಷ್ಕರಿಣಿಯಲ್ಲಿ ಮಿಂದು, ಶುಚಿಯಾಗಿ ದೇವಸ್ಥಾನಕ್ಕೆ ಹೋದ. ಆದರೆ ಗರ್ಭಗುಡಿಯ ಬಾಗಿಲುಗಳಿಗೆ ಬೀಗ ಹಾಕಿತ್ತು. ಬಹಳ ನಿರಾಶೆಯಾಯಿತು. ಆಗ ಅನ್ನಮಯ್ಯ ವೆಂಕಟೇಶ್ವರನನ್ನು ನೆನೆದು ಒಂದು ಶತಕದ ರೂಪದಲ್ಲಿ ದೇವರನ್ನು ಸ್ತುತಿಸಿದ. ತಕ್ಷಣವೇ ಬೀಗಗಳು ತಾವಾಗಿಯೇ ಕಳಚಿಕೊಂಡು, ಬಾಗಿಲುಗಳು ತೆರೆದುಕೊಂಡುವಂತೆ. ಈ ಬಾಲಕನ ಮಹಿಮೆಯನ್ನು ಕಂಡ ಅರ್ಚಕರಿಗೆ ಅತ್ಯಾಶ್ಚರ್ಯ ವಾಯಿತು. ಅವರು ಮೆಚ್ಚಿ ಅನ್ನಮಯ್ಯನಿಗೆ ದೇವರ ದರ್ಶನ ಮಾಡಿಸಿ, ಚಂದನ, ತೀರ್ಥ, ಪ್ರಸಾದ ಮುಂತಾದವುಗಳನ್ನು ಕೊಟ್ಟು ಗೌರವಿಸಿದರಂತೆ. ಈ ಬಗೆಯ ಕಥೆಗಳು ಹಲವರು ಭಕ್ತರ ವಿಷಯದಲ್ಲೂ ಪ್ರಚಾರದಲ್ಲಿವೆ.

ಸ್ವಾಮಿಯ ದರ್ಶನವಾದ ಮೇಲೆ ಕೆಲವು ವರ್ಷಗಳ ಕಾಲ ಅನ್ನಮಯ್ಯ ತಿರುಮಲೆಯಲ್ಲೇ ಇದ್ದ. ಈ ಸಮಯದಲ್ಲೇ ‘ವಿಷ್ಣು’ ಎಂಬ ಯತಿಯಿಂದ ಶ್ರೀ ವೈಷ್ಣವ ದೀಕ್ಷೆಯನ್ನು ಪಡೆದ. ಅಂದಿನಿಂದ ಅನ್ನಮಯ್ಯ ‘ಅನ್ನಮಾಚಾರ್ಯ’ನಾದ. ಇಷ್ಟರಲ್ಲಿ ಹೇಳದೆ ಕೇಳದೆ ಮನೆಯನ್ನು ಬಿಟ್ಟುಹೋದ ಮಗನನ್ನು ಹುಡುಕುತ್ತಾ ಆತನ ತಾಯಿ ತಿರುಮಲೆಗೆ ಬಂದರು. ಅಲ್ಲಿ ಮಗನನ್ನು ಕಂಡು ಮನೆಗೆ ಹಿಂದಿರುಗಬೇಕೆಂದು ಒತ್ತಾಯಪಡಿಸಿದರು. ಮೊದಲು ಅನ್ನಮಯ್ಯ ಇಷ್ಟಪಡಲಿಲ್ಲ. ಆದರೆ ತನಗೆ ವೈಷ್ಣವದೀಕ್ಷೆಯನ್ನು ಕೊಟ್ಟ ಗುರುವಿನ ಆಜ್ಞೆಗೆ ಎದುರು ಹೇಳಲಾರದೆ, ತಾಯಿಯೊಡನೆ ಹಿಂತಿರುಗಿದ.

ಗೃಹಸ್ಥನಾದರೂ ಆಧ್ಯಾತ್ಮಿಕ ಜೀವನ

ನವ ಯೌವನದಲ್ಲಿದ್ದ ಆತನಿಗೆ ತಿರುಮಲಕ್ಕ ಮತ್ತು ಅಕ್ಕಲಮ್ಮ ಎಂಬ ಇಬ್ಬರು ಕನ್ಯೆಯರೊಡನೆ ಮದುವೆ ಯಾಯಿತು.

ಗೃಹಸ್ಥನಾದಮೇಲೂ ಅನ್ನಮಯ್ಯನ ಭಕ್ತಿ ಅಧ್ಯಾತ್ಮಿಕ ಶ್ರದ್ಧೆಗಳು ಕುಂದಲಿಲ್ಲ. ಬದಲಾಗಿ ಇನ್ನೂ ಚೆನ್ನಾಗಿ ಬೆಳೆದು ಬೇರೂರಿದವು. ಆತ ಅಹೋಬಲ ಮಠದ ಪೀಠಾಧಿಪತಿ ಗಳಾದ ಶಠಕೋಪಯತಿಗಳ ಶಿಷ್ಯನಾದರು. ಶಠಕೋಪರು ಬಹಳ ದೊಡ್ಡ ವಿದ್ವಾಂಸರು. ರಾಜರ್ಷಿಗಳು, ತುಂಬು ಮನಸ್ಸಿನಿಂದ, ವಾತ್ಯಲ್ಯದಿಂದ ಶಿಷ್ಯನಿಗೆ ಪಾಠ ಹೇಳಿಕೊಟ್ಟರು. ಅವರ ಬಳಿ ಅನ್ನಮಯ್ಯ ಸಕಲ ವೇದಾಂತಶಾಸ್ತಗಳನ್ನೂ ಶ್ರೀ ವೈಷ್ಣವಗ್ರಂಥಗಳನ್ನೂ ಸಮಗ್ರವಾಗಿ ವ್ಯಾಂಸಂಗ ಮಾಡಿದರು. ಅನ್ನಮಯ್ಯನಿಗೆ ತನ್ನ ಎಲ್ಲ ಗುರುಗಳ ವಿಷಯದಲ್ಲೂ ತುಂಬ ಭಕ್ತಿ. ಎಷ್ಟೋ ಸಂಕೀರ್ತನೆಗಳಲ್ಲಿ ತನ್ನ ಗುರುಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಶಠಕೋಪಯತಿಗಳನ್ನು ಕುರಿತ ಒಂದು ಹಾಡಿನಲ್ಲಿ ಅವರನ್ನು ‘ಕೈವಲ್ಯವನ್ನು ಸೇರುವುದಕ್ಕೆ ಬಂಗಾರದ ಮೆಟ್ಟಿಲು’ ಎಂದು ವರ್ಣಿಸುತ್ತಾರೆ.

ಆಧ್ಯಾತ್ಮಿಕ ಜೀವನದಲ್ಲಿ ದಿನೇದಿನೇ ಬೆಳೆಯುತ್ತಿದ್ದ ಅನ್ನಮಯ್ಯನಿಗೆ ಹರಿಯ ಪೂಜೆ, ಹರಿಯ ಕೀರ್ತನೆ, ಹರಿಯ ಮನನ ಮತ್ತು ಧ್ಯಾನ – ಇವು ನಿತ್ಯ ಕಾರ್ಯಕ್ರಮಗಳಾದವು. ವೆಂಕಟೇಶ್ವರನಲ್ಲಿ ಆಳವಾದ, ನಿಶ್ಚಲವಾದ ಭಕ್ತಿ ಆತನ ಬಾಳಿಗೆ ಗಟ್ಟಿಯಾದ ಬುನಾದಿಯಾಯಿತು. ಆ ದೇವರ ಮೇಲೆ ಅನೇಕ ಸಂಕೀರ್ಣತೆಗಳನ್ನು ಮಾಡಿದರು. ಸಂಕೀರ್ತನೆಗಳ ರೂಪದಲ್ಲಿ ರಚಿಸಿ ಭಕ್ತಿಪರವಶನಾಗಿ ಅನ್ನಮಯ್ಯ ಹಾಡುತ್ತಿದ್ದರೆ, ಕೇಳಿದವರು ಮುಕ್ತಕಂಠದಿಂದ ಹೊಗಳುತ್ತಿದ್ದರಂತೆ.

ಅರಸನ ಗೆಳೆತನ

ಹರಿಭಕ್ತ, ಸಂಕೀರ್ತನಕಾರ ಅನ್ನಮಯ್ಯನ ಕೀರ್ತಿ ಸಹಜವಾಗಿ ನಾಲ್ಕೂ ಕಡೆಯಲ್ಲೂ ಹರಡಿತು. ಆ ಕಾಲದಲ್ಲಿ ಕಡಪ ಜಿಲ್ಲೆಯ ಟಿಟಂಗುಟೂರು ಎಂಬ ಊರಿನಲ್ಲಿ ಸಾಳುವ ನರಸಿಂಹರಾಯ ಎಂಬ ದೊರೆ ಆಳುತ್ತಿದ್ದ. ತನ್ನ ಆಸ್ಥಾನಕ್ಕೆ ಬರಬೇಕೆಂದು ಅನ್ನಮಯ್ಯನಿಗೆ ಆಹ್ವಾನ ಕಳಿಸಿದ. ರಾಯನೂ ದೈವಭಕ್ತ. ಆದ್ದರಿಂದ ಅನ್ನಮಯ್ಯ ದೊರೆಯ ಆಹ್ವಾನವನ್ನು ಒಪ್ಪಿಕೊಂಡರು. ರಾಯನು ಆತನಿಂದ ಎಷ್ಟೋ ಸಂಕೀರ್ತನೆಗಳನ್ನು ಹಾಡಿಸಿ ಕೇಳಿದ. ಆತನ ಗಾನ ಮಾಧುರ್ಯಕ್ಕೆ ಮನಸೋತ. ಸಂಕೀರ್ತನೆಗಳ ಅರ್ಥ ಭಾವಗಳೂ ಅವನಿಗೆ ಬಹಳ ಮೆಚ್ಚಿಗೆಯಾಯಿತು. ಅನ್ನಮಯ್ಯನನ್ನು ಬಹಳವಾಗಿ ಸತ್ಕರಿಸಿ, ಗೌರವಿಸಿ ತನ್ನ ಬಳಿಯಲ್ಲಿಯೇ ಉಳಿಸಿಕೊಂಡ.

ದಿನೇ ದಿನೇ ಅವರಿಬ್ಬರ ಸ್ನೇಹ ಬೆಳೆಯಿತು. ಅನ್ನಮಯ್ಯನೇ ತನ್ನ ಪಾಲಿಗೆ ಬಂಧು, ಮಿತ್ರ, ಗುರು ಎಂದು ರಾಯನು ನಂಬಿದ. ಒಳಜಗಳಗಳಿಂದ ವಿಜಯನಗರ ಸಾಮ್ರಾಜ್ಯ ದುರ್ಬಲವಾಗುತ್ತಿದ್ದ ಆ ಸಮಯದಲ್ಲಿ ನರಸಿಂಹರಾಯ ತನ್ನ ಶಕ್ತಿ ಸಾಮರ್ಥ್ಯಗಳಿಂದ ತನ್ನ ರಾಜ್ಯವನ್ನು ವಿಸ್ತರಿಸಿದ. ತನ್ನ ಗೆಳೆಯ, ಭಾಗವತ ಅನ್ನಮಯ್ಯನ ಅರ್ಶೀರ್ವಾದ ಬಲದಿಂದ ಇದು ಸಾಧ್ಯ ವಾಯಿತು ಎಂದು ನಂಬಿದ. ತಾನು ಇದ್ದ ಎಡೆಗಳಿಗೆಲ್ಲಾ ಆತನನ್ನು ಕರೆಸಿಕೊಂಡು ಗೌರವಿಸುತ್ತಿದ್ದನಂತೆ. ಇದರಿಂದ ಅನ್ನಮಯ್ಯನಿಗೆ ವಿಜಯನಗರ ಸಾಮ್ರಾಜ್ಯದ ಅನೇಕ ಭಾಗಗಳಲ್ಲಿ ಸಂಚರಿಸುವ ಅವಕಾಶ ಉಂಟಾಯಿತು. ರಾಜಾಶ್ರಯದಲ್ಲಿ ಆತ ಎಲ್ಲ ವಿಧವಾದ ಭೋಗಭಾಗ್ಯಗಳನ್ನು ಐಶ್ವರ್ಯ ಸೌಖ್ಯಗಳನ್ನೂ ಚೆನ್ನಾಗಿ ಅನುಭವಿಸಿದರು.

ವಿಷಮ ಪರೀಕ್ಷೆ

ಆದರೆ ರಾಯನ ಗೆಳೆತನ ಅನ್ನಮಯ್ಯನಿಗೆ ಅನಿರೀಕ್ಷಿತವಾಗಿ ಅತ್ಯಂತ ವಿಷಮವಾದ ಪರೀಕ್ಷೆಯನ್ನು ತಂದೊಡ್ಡಿತು.

ಒಂದು ಸಲ ನರಸಿಂಹರಾಯನ ಓಲಗದಲ್ಲಿ ಅನ್ನಮಯ್ಯ ವೆಂಕಟೇಶ್ವರನ ಮೇಲೆ ತಾನು ರಚಿಸಿದ ಒಂದು ಮಧುರವಾದ ಸಂಕೀರ್ತನೆಯನ್ನು ಹಾಡಿದರು. ರಾಯನು ಕೇಳಿ ಸಂತೋಷದಿಂದ ಪುಲಕಿತನಾಗಿ. ಮತ್ತೇ ಮತ್ತೇ ಅದೇ ಹಾಡನ್ನು ಹಾಡಿಸಿ ಕೇಳಿದ. ಆಷ್ಟರಲ್ಲೇ ಅವನಿಗೆ ದುರ್ಬುದ್ಧಿ ಹುಟ್ಟಿತು. ಗರ್ವದಿಂದ ಅಧಿಕಾರ ಮದದಿಂದ, “ಅನ್ನಮಯ್ಯ, ನನ್ನ ಮೇಲೂ ಈ ತೆರನಾದ ಪದವೊಂದನ್ನು ರಚಿಸು’ ಎಂದನಂತೆ.

ಅನ್ನಮಯ್ಯನಿಗೆ ವಿಸ್ಮಯವಾಯಿತು. ಎರಡು ಕಿವಿಗಳನ್ನು ಮುಚ್ಚಿಕೊಡು, “ಹರಿ! ಹರಿ! ಇಂತಹ ನೀಚವಾದ ಮಾತನ್ನು ಆಡುವುದಕ್ಕೆ ನಿನಗೆ ಬಾಯಿ ಹೇಗೆ ಬಂದೀತು? ಹರಿಮುಕುಂದನ್ನು ಕೊಂಡಾಡುವ ನನ್ನ ನಾಲಿಗೆ ನಿನ್ನನ್ನು ಹೊಗಳಬಲ್ಲುದೇ! ಇನ್ನು ಇಲ್ಲಿರುವುದಿಲ್ಲ. ವೆಂಕಟೇಶ್ವರನ ಸೇವೆಗಾಗಿ ಹೋಗುತ್ತೇನೆ’ ಎಂದು ಧಿಗ್ಗನೆ ಎದ್ದು ಹೊರಟರು.

ರಾಜಾಜ್ಞೆಯನ್ನು ಅನ್ನಮಯ್ಯ ಧಿಕ್ಕರಿಸಿದ್ದಕ್ಕಾಗಿ ರಾಯನಿಗೆ ಬಹಳ ಕೋಪ ಬಂದಿತು. ಕಣ್ಣಿನಲ್ಲಿ ಕೆಂಡ ಕಾರುತ್ತಾ, ’ಈ ಕೃತಘ್ನನನ್ನು ಬಂಧಿಸಿರಿ” ಎಂದು ತನ್ನ ಊಳಿಗದವರಿಗೆ ಆಜ್ಞಾಪಿಸಿದ.

ಅನ್ನಮಯ್ಯನನ್ನು ಕಂಡರೆ ಅವರಿಗೆ ಬಹಳ ಭಕ್ತಿ, ಗೌರವ. ಇಷ್ಟವಿಲ್ಲದಿದ್ದರೂ, ಅವರು ಅಂಜುತ್ತಾ ಆತನನ್ನು ತಡೆದು ಬೇಡಿಯನ್ನು ಹಾಕಿ ಮೊಗಸಾಲೆಯಲ್ಲಿ ಇರಿಸಿದರಂತೆ.

ಆಗ ಅನ್ನಮಯ್ಯ ಹಿಂದೆ ಭಕ್ತ ಪ್ರಹ್ಲಾದ ಕಷ್ಟಕಾಲದಲ್ಲಿ ಮುರವೈರಿಯನ್ನು ಪ್ರಾರ್ಥಿಸಿದಂತೆ, ‘ಎಲ್ಲ ಆಪತ್ಕಾಲ ಗಳಲ್ಲಿಯೂ ವೆಂಕಟೇಶ್ವರ ನಾಮವೇ ಶರಣು,  ಮತ್ತೊಂದಿಲ್ಲ’ ಎಂಬರ್ಥದ ಸಂಕೀರ್ತನೆಯನ್ನು ಹಾಡಿದರು. ಒಡನೆಯೇ ಸಂಕೋಲೆಗಳೂ ತಮಗೆ ತಾವಾಗಿಯೇ ಕಳಚಿಕೊಂಡವಂತೆ. ಇದನ್ನು ನೋಡಿದ ರಾಯನಿಗೆ ದಿಗ್ರ್ಬಮೆಯಾಯಿತು. ತನ್ನ ಅವಿವೇಕಕ್ಕೆ ಪಶ್ಚಾತ್ತಾಪಪಟ್ಟ್ಟ. ಕೂಡಲೇ ಅನ್ನಮಯ್ಯನ ಕಾಲಿಗೆರಗಿ, “ಮಹಾಪರಾಧ ವಾಯಿತು. ದಯೆಯಿಟ್ಟು ಕ್ಷಮಿಸಬೇಕು, ನಮ್ಮ ಪಾಲಿಗೆ ನೀವೇ ವೆಂಕಟೇಶ್ವರ” ಎಂದು ಶರಣು ಬೇಡಿದನಂತೆ.

ಇನ್ನೂ ಕೆಲವು ಪವಾಡಗಳು ಅನ್ನಮಯ್ಯನಿಗೆ ಎಷ್ಟು ಬೇಸರವಾಗಿರಬಹುದು ಎಂಬುದನ್ನು ಸೂಚಿಸುವ ಆತನ ಹಾಡುಗಳು ಕೆಲವು ಇವೆ. ಒಂದು ಹಾಡಿನಲ್ಲಿ ಹೀಗೆ ಹೇಳುತ್ತಾರೆ, ‘ಛೀ, ನರರದೆಂಥಾ ಜೀವನ! ಕಂಡ ಕಂಡವರನ್ನು ಆಶ್ರಯಿಸಿ ಅವರನ್ನು ಹೊಗಳಿ, ಅವರ ಗುಲಾಮರಾಗಿ ಬಾಳುವುದಕ್ಕಿಂತ, ಪಶುವಾಗಿ, ಪಕ್ಷಿಯಾಗಿ, ಅಡವಿಯ ಮೃಗವಾಗಿ, ಕೊನೆಗೆ ಮರವಾಗಿಯಾದರೂ ಸ್ವತಂತ್ರವಾಗಿ ಬಾಳುವುದು ಲೇಸು. ಶ್ರೀ ಹರಿಯೇ ಕರುಣಿಸಿ ಕಾಪಾಡಬೇಕು” ಮತ್ತೊಂದರಲ್ಲಿ ಹೀಗೆ ಬೋಧಿಸುತ್ತಾರೆ – “ಮನುಜನಾಗಿ ಹುಟ್ಟಿ, ಮನುಜನನ್ನು ಸೇವಿಸಿ, ಅನುದಿನವೂ ದುಃಖ ಪಡುವುದೇಕೆ? ಗೇಣುದ್ದದ ಹೊಟ್ಟೆ ಹೊರೆಯುವುದಕ್ಕಾಗಿ, ಒಂದು ಹಿಡಿ ಕೂಳಿಗಾಗಿ ಹೋಗಬಾರದ ಎಡೆಗಳಿಗೆಲ್ಲಾ ಹೋಗುವುದೇಕೆ? ಅವರಿವರನ್ನು ಅಂಗಲಾಚುವುದೇಕೆ? ಎಲ್ಲೆಲ್ಲೂ, ಎಲ್ಲರಲ್ಲಿಯೂ ಇರುವ ಶ್ರೀ ವೆಂಕಟಾದ್ರೀಶನನ್ನು ಸೇವಿಸಿ ಪರಮಪದವನ್ನು ಹೊಂದಬಾರದೆ?

ನರಸಿಂಹರಾಯನೊಡನೆ ಇದ್ದಾಗ ಅನ್ನಮಯ್ಯನಿಗೆ ಇನ್ನೂ ಕೆಲವು ವಿಷಯಗಳು ಅನುಭವಕ್ಕೆ ಬಂದವು. ರಾಜ್ಯದ ಮೇಲೆ ಆಸೆಯಿಂದ ಅಂದಿನ ರಾಜಪುತ್ರರು ಮಾಡುತ್ತಿದ್ದ ಅನೇಕ ಘಾತುಕ ಕಾರ್ಯಗಳನ್ನು ಕಣ್ಣಾರೆ ನೋಡ ಬೇಕಾಯಿತು. ದುರಾಶೆಯಿಂದ ತಂದೆ, ತಾಯಿ, ಒಡ ಹುಟ್ಟಿದವರು ಎಂಬ ವಿವೇಚನೆಯೇ ಇಲ್ಲದೆ ಒಬ್ಬರನ್ನೊಬ್ಬರು ಹತ್ಯೆ ಮಾಡುವುದಕ್ಕೂ ಹೇಸದಿರುವುದನ್ನು ಕಂಡು ಬಹಳ ನೊಂದಿದ್ದರು.

ನಾನು ಹರಿದಾಸ

ಸಂಕೋಲೆಗಳ ಅನುಭವವಾದ ಮೇಲೆ ಅನ್ನಮಯ್ಯನಿಗೆ ಕಣ್ಣುಗಳು ತೆರೆದಂತಾಯಿತು. ಭಕ್ತಿಯಿಂದ ನಿತ್ಯವೂ ವೆಂಕಟೇಶ್ವರನನ್ನು ತಾನು ಪೂಜಿಸುತ್ತಿದ್ದರೂ, ಮಾನವ ಸಹಜವಾದ ಕಕ್ಕುಲತೆಗಳಿಗೆ ಒಳಗಾಗಿ ತನ್ನ ಬಾಳಿನ ಗುರಿಯನ್ನು, ಮುಖ್ಯ ಕರ್ತವ್ಯವನ್ನು ಮರೆತಿದ್ದರು. ‘ನಾನು ಜನ್ಮತಃ ಹರಿದಾಸ. ನನಗೆ ತಾಯಿ ಮಹಾಲಕ್ಷ್ಮಿ. ಪ್ರಪಂಚದ ಸಿರಿಯೆಲ್ಲ ಆಕೆಯ ವಿಲಾಸ. ಆಕೆಯ ಗಂಡನೇ ನನಗೆ ದಣಿ, ದೊರೆ, ನಾನು ನಂಬಿದ ದೈವ. ಎಲ್ಲ ಭೋಗಭಾಗ್ಯಗಳನ್ನು ಕೊಡುವ ಆತನಿರುವಾಗ ನನಗೆ ಹೆರರ ಗೋಜೇಕೆ?’ ಈ ಅರಿವು, ಆತ್ಮವಿಶ್ವಾಸ ಉಂಟಾಯಿತು ಅನ್ಮಮಯ್ಯನಿಗೆ. ಅಂದಿನಿಂದ ತನ್ನ ಸರ್ವಸ್ವವನ್ನೂ ವೆಂಕಟೇಶ್ವರನ ಸೇವೆಗಾಗಿ ಅಂಕಿತ ಮಾಡಿದರು. ಹೆಚ್ಚಾಗಿ ತನ್ನ ಕಾಲವನ್ನು ತಿರುಮಲೆಯಲ್ಲಿ ಆಗಾಗ ಸ್ವಗ್ರಾಮವಾದ ತಾಳ್ಳಪಾಕದಲ್ಲೂ ಕಳೆದರು.

ಪುರಂದರದಾಸರೊಂದಿಗೆ

ದಿನೇ ದಿನೇ ಅನ್ನಮಯ್ಯನ ಸಂಕೀರ್ತನೆಗಳಿಗೆ ವ್ಯಾಪ್ತಿ ಲಭಿಸಿತು. ಹಾಗೆಯೇ ಆತನ ಕೀರ್ತಿಯೂ ಅತ್ಯಧಿಕವಾಗಿ ಬೆಳೆಯಿತು. ಈ ಭಾಗವತೋತ್ತಮನನ್ನು ನೋಡುವ ಸಲುವಾಗಿ ಎಷ್ಟೋ ಜನ ಆತನಿದ್ದೆಡೆಗೆ ಬರಲಾರಂಭಿಸಿದರು. ಅವರಲ್ಲಿ ಮುಖ್ಯರು ಹರಿದಾಸ ಶ್ರೇಷ್ಠ ಶ್ರೀ ಪುರಂದರ ದಾಸರು ಇವರಿಬ್ಬರ ಸಮಾಗಮವನ್ನು ಚಿನ್ನನ್ನ ಸಂಗ್ರಹವಾಗಿ ಮಾತ್ರ ತಿಳಿಸಿದ್ದಾನೆ. ದಾಸಪುರಂದರರು ಅನ್ನಮಯ್ಯನ ಸಂಕೀರ್ತನೆ ಗಳನ್ನೇ ಅಲ್ಲದೆ ಆತನ ಪವಾಡಗಳನ್ನು ಕುರಿತು ಕೇಳಿದ್ದರಂತೆ. ಆತನನ್ನು ಕಂಡಾಗ ಮಹಾವಿಷ್ಣುವಿನ ಅಪರಾವತಾರವೇ ಎಂದು ಪುರಂದರರು ಭಾವಿಸಿದರೆ, ಅನ್ನಮಯ್ಯ, ದಾಸರು ತನಗಿಂತ ವಯಸ್ಸಿನಲ್ಲಿ ಬಹಳ ಕಿರಿಯವರಾದರೂ, ಅವರನ್ನು ಸಾಕ್ಷಾತ್ ಪಾಂಡುರಂಗ ವಿಠ್ಠಲನೇ ಎಂದು ಗೌರವಿಸಿದರಂತೆ. ಈ ಹೃದ್ಯವಾದ ಸನ್ನಿವೇಶದ ವಿವರಗಳನ್ನು ಇನ್ನಷ್ಟಾದರೂ ಚಿನ್ನನ್ನ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸುತ್ತದೆ.

ಹೃದಯ ಗೆದ್ದ ದೇವರು

ಅನ್ನಮಾಚಾರ್ಯ ದಕ್ಷಿಣದೇಶದಲ್ಲಿ ಅಂದು ಪ್ರಸಿದ್ಧವಾದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದರು. ಅಲ್ಲಿಯ ದೇವರುಗಳ ಮೇಲೆ ಸಂಕೀರ್ತನೆಗಳನ್ನು ಹಾಡಿದರು. ಅಹೋಬಲದ ನರಸಿಂಹ, ಕಳಸಾಪುರದ ಹನುಮಂತ, ವಿಜಯನಗರದ ವಿಠಲ, ಕಾಂಚೀಪುರದ ವರದರಾಜ, ಶ್ರೀರಂಗದ ರಂಗನಾಥ ಮುಂತಾದವರನ್ನು ಕೀರ್ತಿಸುವ ಹಾಡುಗಳು ಹಲವಾರಿವೆ. ಹಾಗೆಯೇ ರಾಮ, ಕೃಷ್ಣ, ಶಿವ, ಕೇಶವರನ್ನೂ ತನ್ನ ಸಂಕೀರ್ತನೆಗಳಲ್ಲಿ ಅನ್ನಮಾಚಾರ್ಯ ಕೊಂಡಾಡುತ್ತಾರೆ.

ಆದರೆ ಆತನ ಮನಸ್ಸನ್ನು ಪೂರ್ತಿ ಸೆರೆ ಹಿಡಿದುದು ತಿರುಮಲೆಯ ವೆಂಕಟೇಶ್ವರನ ಮೂರ್ತಿಯೇ. ಈ ದೇವರನ್ನು ಎಷ್ಟು ಹೊಗಳಿದರೂ ಆತನಿಗೆ ತೃಪ್ತಿಯಿಲ್ಲ. ಅದಕ್ಕೆ ಕಾರಣವಿಷ್ಟೆ. ಆತನಿಗೆ ವೆಂಕಟೇಶ್ವರ ಭಕ್ತ ಸುಲಭನಾದ ಇಷ್ಟ ದೈವ ಮಾತ್ರವೇ ಅಲ್ಲ. ಸಾಕಾರನಾದ ಪರಬ್ರಹ್ಮ, ಪರಮಾತ್ಮ. ಸಕಲ ಚರಾಚರಗಳಿಗೆ ಸೃಷ್ಟಿಕರ್ತ. ಆದಿ, ಅಂತ್ಯ, ಬಾಳಿನ ಗೊತ್ತು, ಗುರಿ ಎಲ್ಲವೂ ಆತನೇ. ಈ ಪರಮಾತ್ಮನ ಸ್ವರೂಪವನ್ನು ತಿಳಿಸುವುದೇ ನಿಜವಾದ ವಿದ್ಯೆ, ಅದೇ ನಿಜವಾದ ಜ್ಞಾನ. ಈ ದೃಢವಾದ ತಿಳಿವಳಿಕೆ, ನಂಬಿಕೆ ಆ ದೇವರ ಕೃಪೆಯಿಂದಲೇ ತನಗೆ ಉಂಟಾಯಿತೆಂದು ಅನ್ನಮಯ್ಯ ಭಾವಿಸಿದರು. ಎಲ್ಲಾ ದೇವರುಗಳಲ್ಲೂ ವೆಂಕಟೇಶ್ವರನನ್ನೇ ಕಂಡರು. ಒಂದು ಸಂಕೀರ್ತನೆಯಲ್ಲಿ ತಾವೇ ಸ್ಪಷ್ಟವಾಗಿ ಹೇಳುತ್ತಾರೆ, ‘ಶ್ರೀ ಹರಿಯ ರೂಪವಲ್ಲದ ದೇವರೇ ಇಲ್ಲ. ಈ ತಿಳಿವಳಿಕೆ ಇದ್ದರೆ ಯಾವ ದೇವರನ್ನು ಪೂಜಿಸಿದರೆ ಏನು?’

ಅನ್ನಮಯ್ಯನವರಿಗೆ ವೆಂಕಟೇಶ್ವರನ ಮೇಲಿದ್ದ ನಿಶ್ಚಲವಾದ ಭಕ್ತಿಯೇ ಅವರ ದೃಷ್ಟಿ ವಿಶಾಲವಾಗುವುದಕ್ಕೆ ಮುಖ್ಯವಾದ ಕಾರಣ. ಅನ್ನಮಯ್ಯ ಒಂದು ಹಾಡಿನಲ್ಲಿ ವಿವರಿಸುತ್ತಾರೆ, ‘ಯಾರು ಹೇಗೆ ನಿನ್ನನ್ನು (ವೆಂಕಟೇಶ್ವರನನ್ನು) ಭಾವಿಸಿಕೊಂಡರೆ ಹಾಗೆ ಅವರಿಗೆ ನೀನು ಕಂಡು ಬರುವೆ  ಹಿಟ್ಟಿಗೆ ತಕ್ಕ ರೊಟ್ಟಿಯ ಹಾಗೆ. ವೈಷ್ಣವರು ನಿನ್ನನ್ನು ಪ್ರೀತಿಯಿಂದ ವಿಷ್ಣುವೆಂದು ಹೊಗಳುತ್ತಾರೆ. ವೇದಾಂತಿಗಳು ಪರಬ್ರಹ್ಮವೆಂದು ಕರೆಯುತ್ತಾರೆ.

ಶೈವರು, ಶಿವಭಕ್ತರು ನಿನ್ನನ್ನು ಶಿವನೆಂದು ನೆನೆಯುತ್ತಾರೆ. ಕಾಪಾಲಿಕರು ಆದಿಭೈರವನೆಂದು ಹೊಗಳುತ್ತಾರೆ. ಶಕ್ತಿಯ ರೂಪವೇ ನೀನು ಎಂದು ಶಾಕ್ತೇಯರು ಭಾವಿಸುತ್ತಾರೆ. ದರ್ಶನಗಳು ಅನೇಕ ವಿಧವಾಗಿ ನಿನ್ನನ್ನು ಭಜಿಸುತ್ತವೆ. ಐಶ್ವರ್ಯಮದದಿಂದ ನಿನ್ನನ್ನು ನಿರ್ಲಕ್ಷ್ಯ ಮಾಡುವವರಿಗೆ ಅಲ್ಪನಾಗಿ, ದೊಡ್ಡ ಮನಸ್ಸಿನಿಂದ ನೋಡುವವರಿಗೆ ಘನವಾಗಿ ಕಂಡು ಬರುತ್ತೀಯೆ.”

ವಾಗ್ಗೇಯಕಾರರು

ಅನ್ನಮಯ್ಯನ ಕವಿತಾಶಕ್ತಿ, ಸಂಗೀತಜ್ಞಾನ, ಗಾನಕೌಶಲ ಅವರ ಆಧ್ಯಾತ್ಮಿಕ ಜೀವನಕ್ಕೆ, ತಪಸ್ಸಿಗೆ ಸಾಧಕಗಳಾದುವು. ಆತ ಒಟ್ಟು ಮೂವತ್ತೆರಡು ಸಾವಿರ ಸಂಕೀರ್ತನೆಗಳನ್ನು ಮಾಡಿದರೆಂದು ಅವರ ಮೊಮ್ಮಗ ಹೇಳುತ್ತಾನೆ. ತನ್ನ ಹದಿನಾರನೆಯ ವರ್ಷದಲ್ಲಿ ಮೊದಲು ಮಾಡಿ ದಿನಕ್ಕೆ ಒಂದು ಹಾಡಿಗೆ ಕಡಮೆಯಿಲ್ಲದಂತೆ ತಾನು ದಿವಂಗತನಾಗುವವರೆಗೆ ಹಾಡುಗಳನ್ನು ಕಟ್ಟಿದರಂತೆ. ಅವುಗಳನ್ನು ಓಲೆಗರಿಗಳ ಮೇಲೆ ಬರೆಸಿ ಭದ್ರಪಡಿಸುವ ಪ್ರಯತ್ನ ಆತನ ಕಾಲದಲ್ಲೇ ನಡೆಯಿತು. ಆಮೇಲೆ ಆತನ ಹಿರಿಯ ಮಗನಾದ ಪೆದತಿರುಮಲಾ ಚಾರ್ಯ ಅವುಗಳನ್ನೆಲ್ಲಾ ದಪ್ಪನೆಯ ತಾಮ್ರದ ತಗಡುಗಳ ಮೇಲೆ ಅಂದವಾಗಿ ಬರೆಸಿದ. ಆ ತಗಡುಗಳನ್ನು ತಿರುಮಲೆ ದೇವಾಲಯದ ಒಳ ಪ್ರಾಕಾರದಲ್ಲಿರುವ ‘ಸಂಕೀರ್ತನ ಭಂಡಾರ’ ಎಂಬ ಗೂಡಿನಲ್ಲಿ ಭದ್ರಪಡಿಸಿದ. ಈ ಗೂಡನ್ನು ಇಂದಿಗೂ ನಾವು ನೋಡಬಹುದು. ಕೆಲವು ಹಾಡುಗಳ ನಕಲುಗಳನ್ನು ಈ ರೀತಿಯಲ್ಲಿಯೇ ಅಹೋಬಲದಲ್ಲೂ ಕಾಪಾಡುವ ಏರ್ಪಾಡು ಮಾಡಲಾಯಿತು. ತಾಮ್ರದ ಹಲಗೆಗಳ ಮೇಲೆ ಬರೆಸಿಡುವುದಕ್ಕಾಗಿ ಪಟ್ಟ ಶ್ರಮ, ಆದ ವೆಚ್ಚ ಊಹಿಸಿಕೊಂಡರೆ ಆಶ್ಚರ್ಯವಾಗುತ್ತದೆ.

ಯಾವ ಕಾರಣದಿಂದಲೋ ಏನೋ ಭಂಡಾರದಲ್ಲಿರಿಸಿದ ತಾಮ್ರದ ತಗಡುಗಳಲ್ಲಿ ಅರ್ಧಕ್ಕೆ ಅರ್ಧ ಯಾವಾಗಲೋ ಮಾಯವಾದವು. ಉಳಿದವು ಐವತ್ತು ವರ್ಷಗಳ ಹಿಂದೆ ಬೆಳಕನ್ನು ಕಂಡವು. ಅಲ್ಲಿಯವರೆಗೆ ಅವು ಭಂಡಾರ ದಲ್ಲಿರುವುದು ತಿಳಿದಿದ್ದರೂ ಕೂಡ ಹಿಂದಿನ ದೇವಸ್ಥಾನದ ಅಧಿಕಾರಿಗಳು ಅವುಗಳ ಕಡೆ ತಮ್ಮ ಗಮನ ಕೊಡಲಿಲ್ಲ. ಏಕೆ ನಿರ್ಲ್ಯಕ್ಷಸಿ ಮಾಡಿದರೋ ಹೇಳುವುದು ಕಷ್ಟ.

ಅನ್ನಮಯ್ಯ ರಚಿಸಿದ ಮೂವತ್ತೆರಡು ಸಾವಿರ ಹಾಡುಗಳ ಪೈಕಿ ಈಗ ಹತ್ತಿರ ಹದಿನಾಲ್ಕು ಸಾವಿರ ಮಾತ್ರವೇ ನಷ್ಟವಾಗದೆ ಉಳಿದಿವೆ. ಅಷ್ಟಾದರೂ ಉಳಿದಿವೆಯಲ್ಲಾ ಎಂದು ನಾವು ತೃಪ್ತಿಪಡಬೇಕು. ಈಗ ಅವು ತಿರುಮಲೆ ತಿರುಪತಿ ದೇವಸ್ಥಾನಗಳ ಅಧಿಕಾರಿಗಳ ಅಧೀನದಲ್ಲಿವೆ. ಉಳಿದಿರುವ ಹಾಡುಗಳನ್ನಷ್ಟನ್ನೇ ಲೆಕ್ಕಕ್ಕೆ ತೆಗೆದುಕೊಂಡರೂ ಹೀಗೆ ಸುರಕ್ಷಿತವಾದ ಒಬ್ಬ ವ್ಯಕ್ತಿಯ ಗ್ರಂಥರಾಶಿ ಪ್ರಪಂಚದಲ್ಲಿ ಬೇರೊಂದು ಇಲ್ಲವೇನೋ. ಅಪರೂಪ ಎನ್ನುವುದು ಖಂಡಿತ.

ಪೂಜಾಪುಷ್ಪಗಳು

ಅನ್ನಮಯ್ಯನ ದೃಷ್ಟಿಯಲ್ಲಿ ತನ್ನ ಸಂಕೀರ್ತನೆಗಳು ವೆಂಕಟೇಶ್ವರನಿಗೆ ತಾನು ಮಾಡಿದ ಪೂಜೆಯ ಒಂದು ರೂಪ. ಒಂದು ಹಾಡಿನಲ್ಲಿ ದೇವರನ್ನು ಸಂಬೋಧಿಸಿ ನಮ್ರತೆಯಿದ, ಭಕ್ತಿಯಿಂದ ಹೇಳುತ್ತಾರೆ, ‘ನಿನ್ನ ಪಾದಗಳ ಪೂಜೆಗಾಗಿ ಮಾಡಿದ ಹಾಡುಗಳು ಇವು. ಈ ಪೂಜಾಪುಷ್ಪಗಳನ್ನು ಬಾಡದ ಹಾಗೆ ನೀನೇ ಭದ್ರವಾಗಿ ಇರಿಸಿಕೋ. ನೀನೇ ನನ್ನ ದಿಕ್ಕು, ನನ್ನ ಧನ. ನಿಜವಾಗಿ ನೋಡಿದರೆ, ನೀನೇ ನನ್ನ ನಾಲಿಗೆಯ ಮೇಲೆ ನಿಂತು ನನ್ನಿಂದ ಈ ಸಂಕೀರ್ತನೆಗಳನ್ನು ಮಾಡಿಸಿದೆ. ಇಲ್ಲದೆ ಹೋದರೆ, ಸಾವಿರ ನಾಮದ ವಿಷ್ಣುವೇ! ನಿನ್ನನ್ನು ಕೊಂಡಾಡುವುದಕ್ಕೆ ನಾನು ಯಾರು? ಆ ಯೋಗ್ಯತೆ ನನಗುಂಟೆ? ನೀನೇ ನನಗೆ ಆ ಪುಣ್ಯವನ್ನು ಕಟ್ಟಿದೆ. ನನಗೆ ಬಂದ ಹಾಗೆ ಹಾಡುವವನು ನಾನು. ಶ್ರದ್ಧೆಗೆ ಲೋಪವಿಲ್ಲ. ಹೇ ಮಾಧವ, ಹೇ ವೆಂಕಟೇಶ, ತಪ್ಪುಗಳನ್ನು ಎಣಿಸಬೇಡ, ನಾನು ನಿನ್ನ ದಾಸ.’

ಅನ್ನಮಯ್ಯನ ಸಂಕೀರ್ತನೆಗಳು ಬಹಳ ಮಟ್ಟಿಗೆ ಭಕ್ತಿಭಾವದ ಆವೇಶಗಳಲ್ಲಿ ನಿಂತಲ್ಲೇ ಅಥವಾ ಎಲ್ಲಿದ್ದರೆ ಅಲ್ಲಿ ಆತನ ಬಾಯಿಂದ ಹೊರಹೊಮ್ಮಿದ ಹಾಡುಗಳು. ಕನ್ನಡದಲ್ಲಿ ಹರಿದಾಸರ ಸಾವಿರಾರು ದೇವರನಾಮಗಳ ಹಾಗೆ. ಇತರ ಕವಿಗಳ ರಚನೆಗಳ ಹಾಗೆ ಒಂದು ಕಡೆ ನಿಷ್ಠೆಯಿಂದ ಕುಳಿತು ಬರೆದವಲ್ಲ. ತೆಲುಗಿನಲ್ಲಿ ಈತನಿಗಿಂತ ಮುಂಚೆ ಈ ತೆರನೆಯ ಸಂಕೀರ್ತನೆಗಳನ್ನು ಅಥವಾ ಪದಗಳನ್ನು ರಚಿಸಿದವರು ಯಾರಿದ್ದರೋ ಕಂಡು ಬಂದಿಲ್ಲ. ಆದ್ದರಿಂದ ಅನ್ನಮಾಚಾರ್ಯರ ತರುವಾಯ ಬಂದವರು ಅವರನ್ನು ‘ಪದಕವಿತಾ ಪಿತಾಮಹ’ ‘ಪದಕವಿತಾ ಮಾರ್ಗದರ್ಶಿ’ ಎಂದು ಕರೆದರು. ಆದರೆ ತಮಿಳಿನಲ್ಲಿ, ಕನ್ನಡದಲ್ಲಿ ಈ ಪದಗಳನ್ನು ಹೋಲುವ ರಚನೆಗಳು ಅದುವರೆಗಾಗಲೇ ಬೇಕಾದಷ್ಟು ಇದ್ದುವು. ಅವುಗಳ ಪ್ರಭಾವ ಅನ್ನಮಯ್ಯನ ಮೇಲೆ ಖಂಡಿತವಾಗಿ ಇತ್ತು. ವಿಷ್ಣುಭಕ್ತರಾದ ಆಳ್ವಾರರ ತಮಿಳು ದಿವ್ಯಪ್ರಂಬಂಧಗಳು ಆತನಿಗೆ ಚೆನ್ನಾಗಿ ತಿಳಿದಿದ್ದುವು. ಹಾಗೆಯೇ ಮುಳಬಾಗಿಲು ಮಠದ ಪೀಠಾದೀಪತಿಗಳಾದ ಶ್ರೀಪಾದರಾಯರ ಕನ್ನಡ ಸಂಕೀರ್ತನೆಗಳೂ ತಿಳಿದಿದ್ದುವು. ಇವರಿಬ್ಬರೂ ಒಂದೇ ಕಾಲದವರು, ಪ್ರಾಯಶಃ ಒಂದೇ ವಯಸ್ಸಿನವರು. ಅಷ್ಟೇ ಅಲ್ಲದೆ ಸಾಳುವ ನರಸಿಂಹರಾಯನಿಗೆ ಶ್ರೀಪಾದರು ಗುರುಗಳು. ದೇವರನಾಮಗಳ ಮೂಲಕ ಸಾಮಾನ್ಯ ಜನರ ಮನಸ್ಸನ್ನು ಸೆಳೆದು, ಅವರಲ್ಲಿ ವಿಷ್ಣುಭಕ್ತಿಯನ್ನೂ, ಧರ್ಮ ಶ್ರದ್ಧೆಯನ್ನೂ ಉಂಟುಮಾಡುವ ಪ್ರಯತ್ನವನ್ನು ಅವರು ಮಾಡಿದ್ದರು. ಅದನ್ನೇ ಅವರ ಶಿಷ್ಯರಾದ ವ್ಯಾಸತೀರ್ಥರು ಇನ್ನೂ ವಿಸ್ತರಿಸಿದರು.

‘ಪದ’ಗಳು

ಅನ್ನಮಯ್ಯ ವಿಸ್ತಾರವಾಗಿ ಬಳಸಿದ ‘ಪದ’ದ ರೂಪ ಚೌಕಟ್ಟು, ಮಾದರಿ ಆತನ ಕಾಲಕ್ಕೆ ಸ್ವಲ್ಪ ಮುಂಚೆಯೇ ಸಿದ್ಧವಾಗಿತ್ತು. ಇತರ ಹರಿದಾಸರಂತೆ ಅನ್ನಮಯ್ಯ ಅದನ್ನೇ ಉಪಯೋಗಿಸಿ ತನ್ನ ಭಕ್ತಜೀವನದ ಅನುಭವಗಳನ್ನು ಹಾಡುಗಳ ಮೂಲಕ ವ್ಯಕ್ತಪಡಿಸಿದರು. ಅವರಂತೆಯೇ ಆತ್ಮಾರ್ಥವಾಗಿಯೂ, ಇತರರಲ್ಲಿ ದೈವಭಕ್ತಿ, ಧರ್ಮಶ್ರದ್ಧೆ ಉಂಟುಮಾಡುವುದಕ್ಕಾಗಿಯೂ ತನ್ನ ಪದಗಳನ್ನು ರಚಿಸಿದರು. ‘ಪದ’ ಎಂದರೆ ಹಾಡು ಎಂದು ಸಾಮಾನ್ಯವಾದ ಅರ್ಥವನ್ನು ಹೇಳಬಹುದು. ‘ರಾಗದ ಅಂದ ತಾಳದ ಬಿಗಿ ಇರುವ ಸಾಹಿತ್ಯ ಕೃತಿ ಪದ’ ಎಂದು ತಿಳಿದವರು ಹೇಳುತ್ತಾರೆ. ಅನ್ನಮಯ್ಯನ ಪದಗಳಲ್ಲಿ ಸಾಮಾನ್ಯವಾಗಿ ಎರಡು ಭಾಗಗಳಿರುತ್ತವೆ; ಪಲ್ಲವಿ ಮತ್ತು ಮೂರು ಅಥವಾ ನಾಲ್ಕು ಚರಣಗಳು. ಒಂದೊಂದು ಸಲ ಅನುಪಲ್ಲವಿಯೂ ಇರುವುದುಂಟು. ಪಲ್ಲವಿ ಹಾಡಿನ ಮುಖ್ಯಾಂಶವನ್ನು ತಿಳಿಸುತ್ತದೆ. ಚರಣಗಳು ಅದನ್ನು ಬೆಳೆಸಿ, ಸೂಕ್ತವಾದ ಉಪಮಾನ, ಉದಾಹರಣೆಗಳೊಂದಿಗೆ ವಿವರಿಸುತ್ತವೆ. ಉದಾಹರಣೆಗೆ, ‘ಬ್ರಹ್ಮ ಕಡಗಿನ ಪಾದಮು – ಬ್ರಹ್ಮಮು ತಾನೇ ನೀ ಪಾದಮು’ (ಬ್ರಹ್ಮ ತೊಳೆದ ಪಾದವಿದು – ಪರಬ್ರಹ್ಮನೇ ಈ ಪಾದ) ಎನ್ನುವುದು ಪಲ್ಲವಿ. ಈ ಪಾದಗಳ ಮಹಿಮೆಯೇನು, ಇವುಗಳನ್ನು ಯಾರು ಯಾರು ಪೂಜಿಸಿ ಪುಣ್ಯಕಟ್ಟಿಕೊಂಡರು ಎನ್ನುವುದನ್ನು ಚರಣಗಳು ತಿಳಿಸುತ್ತವೆ. ಆನ್ನಮಯ್ಯ ಆ ಕಾಲದಲ್ಲಿ ಎಲ್ಲರಿಗೂ ತಿಳಿದಿದ್ದ ರಾಗತಾಳಗಳಲ್ಲಿ ತನ್ನ ಪದಗಳನ್ನು ಅಳವಡಿಸಿದರು. ಭಕ್ತಿಯಿಂದ ಯಾರಾದರೂ ಸರಿಯೇ ಹಾಡಿಕೊಳ್ಳಲು ಅನುಕೂಲವಾಗುವ ಹಾಗೆ ಅವುಗಳನ್ನು ರಚಿಸಿದರು. ಹೀಗೆ, ತರುವಾಯ ಬಂದ ವಾಗ್ಗೇಯಕಾರರಿಗೆ ಮಾದರಿ, ಮಾರ್ಗದರ್ಶಕರಾದರು.

ಅಧ್ಯಾತ್ಮ ಮತ್ತು ಶೃಂಗಾರ

ಅನ್ನಮಯ್ಯನ ಸಂಕೀರ್ತನೆಗಳು ‘ಅಧ್ಯಾತ್ಮ’ ಮತ್ತು ‘ಶೃಂಗಾರ’ ಎಂದು ಎರಡು ಬಗೆ. ಈಗ ದೊರೆತಿರುವ ಹಾಡುಗಳಲ್ಲಿ ಶೃಂಗಾರ ಸಂಕೀರ್ತನೆಗಳೇ ಸಂಖ್ಯೆಯಲ್ಲಿ ಹೆಚ್ಚು. ಈ ಎರಡು ಬಗೆಯ ಹಾಡುಗಳಲ್ಲೂ ವಸ್ತು ಒಂದೇ: ವೆಂಕಟೇಶ್ವರನನ್ನು ಪೂಜಿಸಿ ಶರಣು ಹೋಗುವುದು. ಅವು ಅನ್ನಮಯ್ಯ ದೇವರನ್ನು ಪೂಜಿಸಿದ ಎರಡು ಮಾರ್ಗಗಳನ್ನು ಅಥವ ರೀತಿಗಳನ್ನೂ ತಿಳಿಸುತ್ತವೆ ಎನ್ನಬಹುದು. ಅವುಗಳನ್ನು ಆತ ತನ್ನ ಇಷ್ಟದೈವದೊಡನೆ ನಡೆಸಿದ ಸಂಭಾಷಣೆಗಳು ಎಂದು ಕರೆಯಬಹುದು.

ಶೃಂಗಾರ ಪದಗಳಲ್ಲಿ ದೇವರನ್ನು ಪುರುಷೋತ್ತಮ, ಶೃಂಗಾರನಾಯಕ ಎಂದು ಭಾವಿಸಿಕೊಳ್ಳುತ್ತಾರೆ ಅನ್ನಮಯ್ಯ. ತನ್ನನ್ನು ಆ ನಾಯಕನನ್ನು ವರಿಸಿ ಹೊಂದಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಹೆಣ್ಣೆಂದು ಭಾವಿಸಿ, ದೇವರಿಗೆ ತನ್ನನ್ನು ಅರ್ಪಿಸಿಕೊಳ್ಳುತ್ತಾರೆ. ಈ ಶೃಂಗಾರಭಕ್ತಿಯನ್ನು ‘ಮಧುರಭಕ್ತಿ’ ಎಂದೂ ಕರೆಯುತ್ತಾರೆ. ಅನ್ನಮಾಚಾರ್ಯರಿಗಿಂತ ಹಿಂದಿನವರಾದ ಆಳ್ವಾರರ ಹಾಡುಗಳಲ್ಲಿ, ಜಯದೇವನ ’ಗೀತಗೋವಿಂದ’ದಲ್ಲಿ ಲೀಲಾಶುಕನ ರಚನೆಗಳಲ್ಲಿ ಈ ವಿಧವಾದ ಭಕ್ತಿಯನ್ನು ಕಾಣುತ್ತೇವೆ. ಕನ್ನಡ ಹರಿದಾಸರ ದೇವರ ನಾಮಗಳಲ್ಲಿ, ಶಿವಶರಣರ ವಚನಗಳಲ್ಲಿ ಈ ಭಕ್ತಿಯ ಪರಿಮಳ ಇದೆ. ಅನ್ನಮಯ್ಯನ ಹಲವು ಪದಗಳು ಅಕ್ಕಮಹಾದೇವಿ ಶ್ರೀಶೈಲ ಮಲ್ಲಿಕಾರ್ಜುನನನ್ನು ಒಲಿದು ಒಲಿಸಿಕೊಂಡುದನ್ನು ನೆನಪಿಗೆ ತರುತ್ತವೆ. ಭಾಗವತ ಪುರಾಣದಲ್ಲಿ ಗೋಪಿಕೆಯರು ಶ್ರೀ ಕೃಷ್ಣಪರಮಾತ್ಮನನ್ನು ಹೀಗೆಯೇ ವರಿಸಿ ಸೇರುತ್ತಾರೆ.

ಅಧ್ಯಾತ್ಮ ಸಂಕೀರ್ತನೆಗಳಲ್ಲಿ ಅನ್ನಮಯ್ಯ ವೆಂಕಟೇಶ್ವರ ನನ್ನು ಪರಮಾತ್ಮನೆಂದು ಭಾವಿಸಿ, ಅನುಭವಿಸಿ, ದಾಸಭಾವದಿಂದ ಪೂಜಿಸಿ ಶರಣುಹೋಗುತ್ತಾರೆ. ಹಾಗೆಯೇ ಎಲ್ಲರನ್ನೂ ಶರಣುಹೋಗಿರಿ ಎಂದು ಕರೆಯುತ್ತಾರೆ. ತಾನು ದೊಡ್ಡ ವೇದಾಂತಿ, ತತ್ವಜ್ಞಾನಿ ಎಂದು ಅನ್ನಮಯ್ಯ ಯಾವಾಗಲೂ ಅಂದುಕೊಳ್ಳಲಿಲ್ಲ. ಹಿರಿಯರು ತೋರಿಸಿದ ದಾರಿಯಲ್ಲೇ ನಡೆದರು.

ಅಧ್ಯಾತ್ಮ ಸಂಕೀರ್ತನೆಗಳು ಅನ್ನಮಾಚಾರ್ಯರ ಅಧ್ಯಾತ್ಮಿಕ ದೃಷ್ಟಿಯನ್ನು ತಿಳಿಸುತ್ತವೆ. ಅವುಗಳಲ್ಲಿ ಪರಮಾತ್ಮನ ಗುಣಗಳನ್ನು ಕೊಂಡಾಡುವುದಲ್ಲದೆ, ನಿಶ್ಚಲವಾದ ಭಕ್ತಿ ಮತ್ತು ವಿರಕ್ತಿಗಳ ಪ್ರಾಮುಖ್ಯತೆಯನ್ನು ಆತ ಬೋಧಿಸುತ್ತಾರೆ. ಭಕ್ತಿ ಎಂದರೆ ಕುರುಡು ನಂಬಿಕೆಯಲ್ಲ. ಭಕ್ತನಿಗೆ ವಿದ್ಯೆ, ವಿಜ್ಞಾನ, ಶಾಸ್ತ್ರ ಜ್ಞಾನ ಇವೆಲ್ಲ ಖಂಡಿತವಾಗಿ ಬೇಕು. ಆದರೆ ಭಕ್ತಿ ಇವೆಲ್ಲಕ್ಕಿಂತ ಮಿಗಿಲಾದುದು. ಅದೇ ಭಗವಂತನ ಸ್ವರೂಪವನ್ನು ತಿಳಿದುಕೊಳ್ಳುವುದಕ್ಕೆ ಮಾರ್ಗ; ಮುಕ್ತಿಗೆ ಸೋಪಾನ. ಒಂದು ಸಂಕೀರ್ತನೆಯಲ್ಲಿ ಅನ್ನಮಯ್ಯ ಹೇಳುತ್ತಾರೆ : ನಮ್ಮ ಭಕ್ತಿಗೆ ತಕ್ಕ ಹಾಗೆ ಭಗವಂತ. ನಿಜವಾದ ಭಕ್ತರಿಗೆ ಪರಮಾತ್ಮ ಎಷ್ಟು ಸುಲಭನೆಂದರೆ ಅವರ ಪಾಲಿಗೆ ಆತ ಎತ್ತಿದವರ ಕೈಗೂಸು, ಎಲ್ಲಿ ಕೈಯಿಟ್ಟರೆ ಅಲ್ಲಿ ಸಿಗುವ ನಿಧಿ, ಹಗಲಿನ ಬೆಳಕು. ಸದಾ ನಮ್ಮ ಎದುರಿಗೆ ಇರುತ್ತಾನೆ. ಆತ ಸ್ವತಃ ಸುಂದರ. ಪ್ರಪಂಚದ ಬೆಲೆ ಏನು ಎಂದು ತಿಳಿಯುವುದಕ್ಕೆ ಆತನೇ ಸರಿಯಾದ ಒರೆಗಲ್ಲು. ತನ್ನ ಶಕ್ತಿಯಿಂದ ಪ್ರೇಮದಿಂದ ಎಲ್ಲ ಜೀವಿಗಳನ್ನು ಕಾಪಾಡುತ್ತಾನೆ.’

ಪೂಜೆ – ವಿರಕ್ತಿ

ನಿಜವಾದ ಪೂಜೆ ಯಾವುದು? ಭಕ್ತನಲ್ಲಿ ಇರಬೇಕಾದ ಮುಖ್ಯವಾದ ಲಕ್ಷಣಗಳೇನು? ಈ ಪ್ರಶ್ನೆಗಳಿಗೆ ಒಂದು ಪದದಲ್ಲಿ ಅನ್ನಮಯ್ಯ ಸಂಗ್ರಹವಾಗಿ ಉತ್ತರ ಕೊಡುತ್ತಾರೆ : ‘ತುಂಬು ಮನಸ್ಸಿನಿಂದ ನಿನ್ನನ್ನು (ದೇವರನ್ನು) ನೆನೆಸಿಕೊಂಡರೆ ಅದೇ ಶ್ರೇಷ್ಠವಾದ ಪೂಜೆ. (ಹೊರಗಿನ ಆಡಂಬರ ಯಾವುದೂ ಬೇಕಿಲ್ಲ ; ತುಂಬಿದ ಮನಸ್ಸಿನಿಂದ ಧ್ಯಾನಿಸಿದರೆ ದೇವರು ತೃಪ್ತನಾಗುತ್ತಾನೆ, ಭಕ್ತ ಕೃತಾರ್ಥನಾಗುತ್ತಾನೆ ಎಂದು ತಾತ್ಪರ್ಯ). ಎಲ್ಲಿ ನೋಡಿದರೆ ಅಲ್ಲಿ ಶ್ರೀ ಹರಿ ಇದ್ದಾನೆ ಎಂಬ ತಿಳಿವಳಿಕೆ ನಿಜವಾದ ಪೂಜೆ. ಕೆಲವರು ನೆಂಟರು, ಕೆಲವರು ಹಗೆಗಳು ಎಂಬ ಭೇದಭಾವವಿಲ್ಲದೇ ಇರುವುದು, ಹಾಗೆಯೇ ಹೊನ್ನು, ಹೆಂಚು, ಕಬ್ಬಿಣ ಮುಂತಾದುವೆಲ್ಲವನ್ನೂ ಸಮದೃಷ್ಟಿಯಿಂದ ನೋಡುವುದೂ ನಿನ್ನ ಪೂಜೆ. ಸರ್ವಸ್ವವೂ ನೀನೆ, ನಾನು ಸ್ವತಂತ್ರನಲ್ಲ, ನಿನ್ನ ದಾಸ ಮಾತ್ರ ಎಂಬ ಬುದ್ಧಿಯೂ ನಿನ್ನ ಪೂಜೆ’.

ವಿರಕ್ತಿ ಎಂದರೆ ಅನ್ನಮಯ್ಯನ ಅಭಿಪ್ರಾಯದಲ್ಲಿ ಮನೆ ಮಠ ಬಿಟ್ಟು ಓಡಿ ಹೋಗುವುದಲ್ಲ. ಸನ್ಯಾಸಿಯಾಗುವುದು ಅಲ್ಲವೇ ಅಲ್ಲ. ಈ ಪ್ರಪಂಚದಲ್ಲಿದ್ದು ಅದರ ಚಿಂತೆಯನ್ನು ಬಿಟ್ಟು ಪರಮಾತ್ಮನನ್ನು ನೆನೆಯುತ್ತಾ ಮೋಕ್ಷ ಪಡೆಯುವುದಕ್ಕೆ ಪ್ರಯತ್ನಿಸುವುದು. ಆದ್ದರಿಂದಲೇ ಅನ್ನಮಯ್ಯ ಸಂಸಾರದಲ್ಲಿ ತನ್ನ ಜವಾಬ್ದಾರಿಯನ್ನು ಮರೆಯದೆ, ತ್ಯಾಗ ಬುದ್ಧಿಯನ್ನೂ ವಿರಕ್ತನ ದೃಷ್ಟಿಯನ್ನೂ ಕ್ರಮವಾಗಿ ಬೆಳೆಸಿಕೊಂಡರು. ಭಕ್ತಿ, ವಿರಕ್ತಿ ಇವೆರಡನ್ನು ಸಾಧಿಸುವುದು ಎಷ್ಟು ಕಷ್ಟ ಎಂಬುದು ಆತನಿಗೆ ಚೆನ್ನಾಗಿ ಗೊತ್ತು. ಅದಕ್ಕಾಗಿಯೇ ಆತ ಅಡಿಗಡಿಗೆ ಆತ್ಮ ಪರೀಕ್ಷೆ ಮಾಡಿಕೊಳ್ಳುತ್ತಾರೆ. ತನ್ನ ಲೋಪ ದೋಷಗಳನ್ನು ನಿಸ್ಸಂಕೋಚವಾಗಿ ಎತ್ತಿ ತೋರಿಸುತ್ತಾರೆ.

ಅನ್ನಮಯ್ಯನದು ಮುಚ್ಚುಮರೆ ಇಲ್ಲದ ಸ್ವಭಾವ. ತನ್ನ ಮನಸ್ಸಿಗೆ ಸರಿ ಎಂದು ತೋರಿದುದನ್ನು ಒಡನೆಯೇ ಹೇಳುವುದು ಆತನ ವಾಡಿಕೆ. ಆದ್ದರಿಂದಲೇ ತನ್ನ ದಣಿ ನರಸಿಂಹರಾಯನ ಕೋರಿಕೆಯನ್ನು ತಳ್ಳಿಹಾಕುವುದಕ್ಕೂ ಹಿಂಜರಿಯಲಿಲ್ಲ. ಇದೇ ಗುಣ ಆತನ ಸಂಕೀರ್ತನೆಗಳಲ್ಲಿದೆ. ಭಕ್ತನಾಗಿ ತನ್ನಲ್ಲಿ ಉಂಟಾದ ಸಂತೋಷ, ಆನಂದ, ತೃಪ್ತಿ, ದುಃಖ, ನೋವು, ಬೇಸರ, ಸಂದೇಹ, ಜಿಗುಪ್ಸೆ. ಇವೆಲ್ಲವನ್ನೂ ದೇವರ ಮುಂದೆ ಹೇಳಿಕೊಳ್ಳುತ್ತಾರೆ. ಕೊನೆಗೆ ‘ನೀನೇ ಗತಿ’ ಎಂದು ಶರಣಾತರಾಗುತ್ತಾರೆ.

ಹಾಸ್ಯದ ಅಂಶ

ದೇವರೊಡನೆ ನಡೆಸುವ ಸಂಭಾಷಣೆಯಲ್ಲಿ ಒಂದೊಂದು ಸಲ ಅನ್ನಮಯ್ಯ ದೇವರನ್ನು ಸಲಿಗೆಯಿಂದ ಹಾಸ್ಯ ಮಾಡುವುದೂ ಉಂಟು. ‘ದೇವ, ನಿನ್ನ ಸೃಷ್ಟಿ ಬಹಳ ವಿಚಿತ್ರ. ನಿನ್ನ ಮಾಯೆಗಳಿಗೆ ತಲೆಯಿಲ್ಲ, ಬಾಲವಿಲ್ಲ’ ಎನ್ನುತ್ತಾರೆ ಒಂದು ಸಲ. ಮತ್ತೊಂದು ಸಲ ’ನನ್ನಂಥ ಪಾಪಿಯೇ ಇಲ್ಲದೆ ಹೋದರೆ ನಿನ್ನ ಕೃಪೆಗೆ ಪಾತ್ರರು ಯಾರು? ನನ್ನಲ್ಲಿ ಕೃಪೆ ತೋರಿದ್ದರಿಂದಲೇ ನಿನಗೆ ಕೀರ್ತಿ. ನನ್ನಿಂದ ನಿನಗೆ ಒಳ್ಳೆಯ ಹೆಸರು. ನಿನ್ನ ಕೃಪೆಯಿಂದ ನಾನು ಬದುಕುತ್ತೇನೆ’ ಎನ್ನುತ್ತಾರೆ. ಇನ್ನೊಂದು ಕಡೆ ‘ವೆಂಕಟಗಿರಿವಾಸ’ನನ್ನೂ ಆತನ ಲೀಲೆಗಳನ್ನೂ ಈ ರೀತಿ ಗೇಲಿಮಾಡುತ್ತಾರೆ, ‘ಪೂರ್ವ ಜನ್ಮದಲ್ಲಿ ಸಂಪಾದಿಸಿದ ಕರ್ಮಫಲ ಸಾಮಾನ್ಯವೇ? ಅದನ್ನು ತಪ್ಪಿಸಿಕೊಳ್ಳಲು ಯಾರಿಗಾದರೂ ಸಾಧ್ಯವೇ? ಅದು ನಿಯಮ ತಪ್ಪದೆ ಎಲ್ಲರನ್ನೂ ಕಾಡುತ್ತದೆ. ನೀನೂ ತಪ್ಪಿಸಿಕೊಳ್ಳಲಾರೆ. ಲೋಕದಲ್ಲಿ ಜೀವಿಗಳನ್ನು ಸಂಸಾರಬಂಧದಲ್ಲಿ ಕಟ್ಟಿದೆ. ಅದರ ಫಲವಾಗಿ ಯಾರೋ ಸಾಹಸಮಾಡಿ ನೀನು ದೇವರು ಎಂಬ ಗೌರವ ಕೂಡ ಇಲ್ಲದೆ, ನಿನಗೂ ಒಂದು ಹೆಣ್ಣನ್ನು (ಲಕ್ಷ್ಮಿ) ಕಟ್ಟಿದರು. ನೀನೂ ಸಂಸಾರಿಯಾದೆ. ನಿನಗೆ ಮಾಡುವುದಕ್ಕೆ ಬೇರ ಕೆಲಸ ಇರಲಿಲ್ಲವೇನೋ, ಜೀವಿಗಳನ್ನು ಸಂಸಾರ ಸಾಗರದಲ್ಲಿ ಮುಳುಗಿ ತೇಲುವಂತೆ ಮಾಡಿದೆ. ಅದಕ್ಕೆ ಪ್ರತಿಫಲವಾಗಿ, ಹಿಂದೆಯೇ ಯಾರೋ ನಿನ್ನನ್ನು, ಆದಿದೇವನೆಂದೂ ಲೆಕ್ಕಿಸದೆ, ಹಿಡಿದು ಕಟ್ಟಿ ಹಾಲುಗಡಲಲ್ಲಿ ಮಲಗಿಸಿದರು. ನಮ್ಮನ್ನು ಒಂದು ಕಡೆ ಇರಿಸದೆ, ಜೀವನೋಪಾಯಕ್ಕಾಗಿ ಬೆಟ್ಟಗಳಲ್ಲಿ ಗುಹೆಗಳಲ್ಲಿ ತಿರುಗುವಂತೆ ಮಾಡಿದೆ. ಆದ್ದರಿಂದ ಬೆಟ್ಟದ ಮೇಲೆಯೇ (ತಿರುಮಲೆ) ಸಂಸಾರ ಮಾಡಬೇಕಾದ ಗತಿ ನಿನಗೂ ಬಂದಿದೆ. ಇದರಿಂದ ನೀನು ತಪ್ಪಿಸಿಕೊಳ್ಳಲಾರೆ.’

ಸುತ್ತಲಿನ ಕತ್ತಲು

ದೇವರ ಸೇವೆಯಲ್ಲಿ ಎಷ್ಟೇ ಮಗ್ನನಾಗಿದ್ದರೂ ಅನ್ನಮಯ್ಯ ಆಗಿನ ಕಾಲದ ರಾಜಕೀಯ ಕಲ್ಲೋಲಗಳನ್ನು ಗಮನಿಸದೆ ಬಿಡಲಿಲ್ಲ. ಅನ್ಯಮತೀಯರ ಮತ್ತು ಇತರರ ಧಾಳಿಯಿಂದ ಆಗುತ್ತಿದ್ದ ಅನಾಹುತಗಳನ್ನು ಅನ್ಯಾಯಗಳನ್ನು ಕಂಡು ಬಹಳ ಖೇದಗೊಂಡಿದ್ದರು. ಹೆಂಗಸರು, ಮಕ್ಕಳು, ನಿರಪರಾಧಿಗಳು ಎಂಬ ವಿವೇಚನೆಯೇ ಇಲ್ಲದೆ ಮಾಡುತ್ತಿದ್ದ ಕೊಲೆಗಳು, ಮಾನಭಂಗಗಳು, ಗೋಹತ್ಯೆಗಳು, ದೇವಾಲಯ ಗಳ ವಿಧ್ವಂಸನೆ ಮುಂತಾದುವನ್ನು ಕಂಡು ತುಂಬ ವ್ಯಥೆಪಟ್ಟಿದ್ದರು. ‘ಎಲ್ಲೆಲ್ಲೂ ಮದ, ಮಾತ್ಸರ್ಯ ಹೆಚ್ಚಾಯಿತು. ಈ ದೌರ್ಜನ್ಯಗಳನ್ನು ನೋಡಿಯೂ ಧರ್ಮದೇವತೆಗಳು ಹೀಗೆ ಸುಮ್ಮನಿದ್ದಾರೆ. ಇದೇನು ಕಲಿಗಾಲಮಹಿಮೆಯೇ ಅಥವಾ ನಿನ್ನ ಲೀಲೆಯೇ?’ ಎಂದು ವೆಂಕಟೇಶ್ವರನನ್ನು ಪ್ರಶ್ನಿಸುತ್ತಾರೆ.

ಅನ್ನಮಯ್ಯನಿಗೆ ದೇವರುಗಳ ಹೆಸರಿನಲ್ಲಿ ನಡೆಯುತ್ತಿದ್ದ ಜಗಳಗಳು ಹೇಗೆ ಹಿಡಿಸಲಿಲ್ಲವೋ ಹಾಗೆಯೇ ಜಾತಿ, ಕುಲಗಳ ಹೆಸರಿನಲ್ಲಿ ಜನಗಳು ತೋರಿಸುತ್ತಿದ್ದ ಭೇದ ಭಾವ, ದ್ವೇಷವೂ ಹಿಡಿಸಲಿಲ್ಲ. ಅದಕ್ಕೇ ಹೇಳುತ್ತಾರೆ : ‘ಯಾರಾದರೇನೂ, ಯಾವ ಕುಲದವರಾದರೇನು,  ಶ್ರೀ ಹರಿಯನ್ನು ಬಲ್ಲನೇ, ಗುಣವಂತನೇ ಎನ್ನುವುದು ಮುಖ್ಯ. ಹರಿಯನ್ನು ಬಲ್ಲವರು ಯಾರು ಎಂದರೆ ಸತ್ಯ ಸಂಪನ್ನನಾದವನು, ಪರನಿಂದೆ ಮಾಡದವನು, ಎಲ್ಲರೂ ತನ್ನಂತೆಯೇ ಎಂದು ಭಾವಿಸುವವನು, ಪ್ರಾಣಿಗಳಲ್ಲಿ ದಯೆ ಉಳ್ಳವನು, ಆತ್ಮನಿಗ್ರಹವುಳ್ಳವನು, ಕರ್ಮಮಾರ್ಗವನ್ನು ಬಿಡದವನು, ಜಗತ್ತಿನಲ್ಲಿ ಎಲ್ಲರಿಗೂ ಹಿತವಾಗುವಂತೆ ನಡೆದು ಕೊಳ್ಳುವವನು, ಹಗೆ ಎನ್ನುವುದೇ ತಿಳಿಯದವನು, ಮಿಗಿಲಾಗಿ ವೆಂಕಟೇಶ್ವರನನ್ನು ಸೇರಿ ಆತನ ದಾಸನಾದವನು;.

ಇನ್ನೊಂದು ಸಂದರ್ಭದಲ್ಲಿ ಅನ್ನಮಾಚಾರ್ಯರು ಹೀಗೆ ಹೇಳುತ್ತಾರೆ, ‘ಜಾತಿಭೇದಗಳು ನಮ್ಮ ಶರೀರಕ್ಕೆ ಸಂಬಂಧಪಟ್ಟವು. ಆತ್ಮಕ್ಕೆ ಅಲ್ಲ. ಅದು ಅನಾದಿ, ಯಾವಾಗಲೂ ಪರಿಶುದ್ಧ. ಆದ್ದರಿಂದ ಇರುವುದು ಒಂದೇ ಜಾತಿ – ಹರಿಭಕ್ತರ ಹರಿದಾಸರ ಜಾತಿ. ಮಿಕ್ಕ ಎಲ್ಲ ಜಾತಿಗಳೂ ವ್ಯರ್ಥ.’ ಮತ್ತೊಂದು ಕಡೆ ಇನ್ನೂ ಸ್ಪಷ್ಟವಾಗಿ ಹೇಳುತ್ತಾರೆ : ‘ಯಾರಾದರೇನು, ಯಾವ ಕುಲದಲ್ಲಿ ಹುಟ್ಟಿದರೇನು, ಪರಮಸತ್ಯವನ್ನು ತಿಳಿದಾತನೇ ಶ್ರೇಷ್ಠ. ವೇದಗಳನ್ನು ಓದಿಯೂ ಹರಿಭಕ್ತಿಯನ್ನು ಆದರಿಸದ ಸೋಮಯಾಜಿಗಿಂತ (ಯಜ್ಞ್ಞ ಮಾಡಿದವನು) ಕುಲಹೀನನಾದರೂ ವಿಷ್ಣುವಿನ ಪಾದಗಳನ್ನು ಸೇವಿಸುವ ಭಕ್ತನೇ ಮೇಲು. ಹಾಗೆಯೇ ವೇದಾಂತವನ್ನು ಪಠಿಸುವ ಅವಕಾಶವಿದ್ದೂ ಹರಿಭಕ್ತಿ ಇಲ್ಲದ ಸನ್ಯಾಸಿಗಿಂತ ವಿಷ್ಣುವನ್ನು ಅರಸುವ ಅಂತ್ಯಜನೇ ದೊಡ್ಡವನು. ಶ್ರೀ ಹರಿಯನ್ನು ಕುರಿತು ಕೇಳಿ, ಓದಿಯೂ, ಆತನಿಗೆ ದಾಸನಾಗದೆ ಸುಮ್ಮನೆ ದೇಹವನ್ನು ದಂಡಿಸುವ ಒಣ ತಾಪಸಿಗಿಂತ ತಿರುವೆಂಕಟೇಶನ ಪ್ರಸಾದಾನ್ನವನ್ನು ತೃಪ್ತಿಯಾಗಿ ಅನುಭವಿಸುವಾತನೇ ಶ್ರೇಷ್ಠ.

ಇಂದು ಜಾತಿ, ಕುಲ, ಮತ ಮುಂತಾದವುಗಳ ಹೆಸರಿನಲ್ಲಿ ನಾವು ಅಡ್ಡ ಗೋಡೆಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ. ದ್ವೇಷಗಳನ್ನು ಬೆಳೆಸಿಕೊಳ್ಳುತ್ತಿದ್ದೇವೆ. ನಮ್ಮ ಮನಸ್ಸು ವಿಶಾಲವಾಗುವುದಕ್ಕೆ ಬದಲು ಸಂಕುಚಿತವಾಗುತ್ತಿದೆ. ಹೀಗಿರುವ ನಮಗೆ ಅನ್ನಮಯ್ಯನ ಮಾತುಗಳು ಅಮೂಲ್ಯ.

ಈ ಜಗತ್ತನ್ನು ಬಿಟ್ಟರು

ಹೀಗೆ ತಿರುಮಲೆಯ ತಿಮ್ಮಪ್ಪನ ಸೇವೆಯಲ್ಲಿ, ಧ್ಯಾನದಲ್ಲಿ, ಸಂಕೀರ್ತನೆಯಲ್ಲಿ, ಎಲ್ಲರಿಗೂ ದೈವಭಕ್ತಿಯನ್ನು, ಮುಕ್ತಿಮಾರ್ಗವನ್ನು ಬೋಧಿಸುವುದರಲ್ಲಿ, ತನ್ನ ಆನಂದವನ್ನು ಹಂಚುವುದರಲ್ಲಿ ಅನ್ನಮಾಚಾರ್ಯ ತನ್ನ ತುಂಬು ಜೀವನವನ್ನು ಕಳೆದರು. ತನ್ನ ಬದುಕನ್ನು ಸಾರ್ಥಕ ಮಾಡಿಕೊಂಡರು. ಕ್ರಿಸ್ತಶಕ ೧೫೦೩ನೆಯ ಇಸವಿ ದುಂದುಭಿ ಫಾಲ್ಗುಣ ಬಹುಳ ದ್ವಾದಶಿಯಂದು ಪರಮಪದವನ್ನು ಸೇರಿದರು.

ಇಂದಿನವರ ಗೌರವ

ಕೆಲವು ಶತಮಾನಗಳ ಕಾಲ ಅಜ್ಞಾತವಾಗಿದ್ದ ಅನ್ನಮಾಚಾರ್ಯರ ಸಂಕೀರ್ತನೆಗಳು ತಿರುಮಲೆ ತಿರುಪತಿ ದೇವಸ್ಥಾನದ ಈಗಿನ ಅಧಿಕಾರಿಗಳ ಶ್ರದ್ಧೆಯ ಫಲವಾಗಿ ಈಗ ಬೆಳಕನ್ನು ಕಾಣುತ್ತ್ತ್ತಿವೆ. ಹಿರಿಯ ವಿದ್ವಾಂಸರು ಅವುಗಳನ್ನು ಪರಿಶೋಧಿಸಿ ಪಾಠ ನಿರ್ಣಯ ಮಾಡುತ್ತಿದ್ದಾರೆ. ಸುಮಾರು ನಲವತ್ತು ವರ್ಷಗಳ ಹಿಂದೆ ಸಂಕೀರ್ತನೆಗಳ ಪ್ರಕಟಣೆ ಈಗಲೂ ಮುಂದುವರಿಯುತ್ತಿದೆ. ೧೯೪೮ರಿಂದ ಪ್ರತಿ ವರ್ಷವೂ ಫಾಲ್ಗುಣ ಬಹುಳ ದ್ವಾದಶಿಯಂದು ತಿರುಪತಿಯಲ್ಲಿ ತಿರುಮಲೆ ತಿರುಪತಿ ದೇವಸ್ಥಾನದವರು ಅನ್ನಮಾಚಾರ್ಯರ ಪುಣ್ಯತಿಥಿಯನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ. ನಾಲ್ಕುಕಡೆಯಿಂದ ಸಂಗೀತವಿದ್ವಾಂಸರನ್ನು ಕರೆಸಿ ಅವರಿಂದ ಆತನ ಸಂಕೀರ್ತನೆಗಳನ್ನು ಹಾಡಿಸುತ್ತಿದ್ದಾರೆ. ಅವುಗಳ ಪ್ರಕಟಣೆಗಾಗಿ, ಪ್ರಚಾರಕ್ಕಾಗಿ ಬಹಳ ಶ್ರಮಿಸುತ್ತಿದ್ದಾರೆ. ದೇವಸ್ಥಾನದ ಅಧಿಕಾರಿಗಳ ಶ್ರದ್ಧೆ, ಪ್ರಯತ್ನ ತುಂಬಾ ಶ್ಲಾಘನೀಯ.

ಅರ್ಪಿಸಿಕೊಂಡವರು ಪವಿತ್ರ ಉದ್ದೇಶಕ್ಕೆ 

ತಾಳ್ಳಪಾಕ ಅನ್ನಮಾಚಾರ್ಯರನ್ನು ಕುರಿತು ತಿಳಿದುಕೊಳ್ಳುವುದರಿಂದ ನಮಗೇನು ಪ್ರಯೋಜನ? ಇಂದು ನಾವು ನಾಗರೀಕತೆಯಲ್ಲಿ ಬಹಳ ಮುನ್ನಡೆದಿದ್ದೇವೆ. ನಮ್ಮ ಹಿರಿಯರಿಗೆ ಅಂದು ಅಸಾಧ್ಯ ಎನಿಸಿದವುಗಳಲ್ಲಿ ಎಷ್ಟೋ ಇಂದು ನಾವು ಸಾಧಿಸಿದ್ದೇವೆ. ಆದರೆ ಅವರಲ್ಲಿದ್ದ ಹಾಗೆ ಧಾರ್ಮಿಕದೃಷ್ಟಿ, ಧರ್ಮಶ್ರದ್ಧೆ, ದೃಢವಾದ ನಂಬಿಕೆ, ಮೌಲ್ಯಗಳು ನಮ್ಮಲ್ಲೂ ಇವೆಯೇ ಎಂದರೆ ಹೇಳುವುದು ಕಷ್ಟ. ಇವೆಲ್ಲ ನಮ್ಮಲ್ಲಿ ಬಹಳ ಸಡಿಲವಾಗಿವೆ. ಅನೇಕರಲ್ಲಿ ಕುರುಡು ನಂಬಿಕೆಗಳು ಬೆಳೆಯುತ್ತಿವೆ. ಬಾಳಿನಲ್ಲಿ ಗೊತ್ತು, ಗುರಿ ಇಲ್ಲದೆ ಹೋಗುತ್ತಿದೆ. ತರುಣರಲ್ಲಿ ಹೇಳಲಾರದ ಅತೃಪ್ತಿ ದಿನೇ ದಿನೇ ಬೆಳೆಯುತ್ತಿದೆ. ಅಷ್ಟೇ ಅಲ್ಲದೆ ಅವರಲ್ಲಿ ಒಂದು ಕಡೆ ಭಾರತೀಯ ಸಂಸ್ಕೃತಿಯ ಬಗ್ಗೆ ಆಸಡ್ಡೆ, ಮತ್ತೊಂದು ಕಡೆ ಇತರ ದೇಶಗಳ ಅಂಧಾನುಕರಣೆ ಪ್ರಬಲವಾಗುತ್ತಿದೆ. ಇದರಿಂದ ಜನತೆ ತನ್ನ ಆತ್ಮಗೌರವವನ್ನು, ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಹೀಗಾಗಬಾರದು. ನಮ್ಮ ಸಂಸ್ಕೃತಿ ಪುನರುಜ್ಜೀವನ ವಾಗಬೇಕಾದರೆ, ನಮ್ಮ ಹಿಂದಿನ ಹಿರಿಯ ಜೀವಿಗಳನ್ನು ಕುರಿತು ತಿಳಿದುಕೊಳ್ಳುವುದು, ಅವರಿಂದ ಸ್ಫೂರ್ತಿ ಪಡೆಯುವುದು ಅತ್ಯವಶ್ಯಕ.

ಅನ್ನಮಾಚಾರ್ಯರ ಹಿರಿಮೆ ಪವಾಡ ಪುರುಷರಾಗಿ ಅಲ್ಲ. ಆತ ಎಲ್ಲರಂತೆ ತಾನೂ ಸಂಸಾರದಲ್ಲಿ ತೊಳಲಿ ಸುಖದುಃಖಗಳನ್ನು ಅನುಭವಿಸಿ, ಕೋಪರೋಷಗಳಿಗೆ ಒಳಗಾದವರು. ಆದರೆ ಕ್ರಮ ಕ್ರಮವಾಗಿ ಇವೆಲ್ಲವನ್ನು ಗೆದ್ದು, ತನ್ನ ಸರ್ವಸ್ವವನ್ನು ವೆಂಕಟೇಶ್ವರರೂಪಿಯಾದ ಭಗವಂತನಲ್ಲಿ ಮುಡುಪಿಟ್ಟು ತನ್ನ ಜೀವನವನ್ನು ಸಾರ್ಥಕಗೊಳಿಸಿದ ಭಾಗವತೋತ್ತಮರು.  ಅವರ ಹಾಗೆ ತಮ್ಮ ಆಯುರ್ದಾ ಯವನ್ನೆಲ್ಲಾ ಒಂದು ಪವಿತ್ರವಾದ ಉದ್ದೇಶಕ್ಕಾಗಿ ಮೀಸಲಾಗಿಟ್ಟವರು ಬಹಳ ಕಡಮೆ. ಅವರ ಜೀವನಚರಿತ್ರೆ ನಮಗೆ ಮಾರ್ಗದರ್ಶಕವಾಗುವುದರಲ್ಲಿ ಸಂದೇಹವಿಲ್ಲ. ಹಾಡಲು ಬಲ್ಲವರು ಅವರ ಸಂಕೀರ್ತನೆಗಳನ್ನು ಹಾಡಿಕೊಂಡು ಸಂತೋಷ ಪಡಬಹುದು. ಇತರರು ಅವುಗಳನ್ನು ಓದಿ ಅರ್ಥವನ್ನು, ಕಾವ್ಯಗುಣವನ್ನು ಗ್ರಹಿಸಿ ಆನಂದಿಸಬಹುದು. ಅನ್ನಮಾಚಾರ್ಯರ ಪದಸಾಹಿತ್ಯವನ್ನು ‘ಸಾರಸ್ವತ ಕ್ಷೀರಸುಮದ್ರ’ ಎಂದು ವರ್ಣಿಸಿದ್ದಾರೆ. ಈ ಹಾಲುಗಡಲಲ್ಲಿ ಒಂದೆರಡು ಗುಟುಕುಗಳನ್ನಾದರೂ ನಾವು ಕುಡಿಯಬಲ್ಲವರಾದರೆ ನಮ್ಮ ಜೀವನ ಧನ್ಯ.