೧೯೦೨ನೇ ಇಸವಿ ನವೆಂಬರ್ ೨೪ರಂದು ಮೈಸೂರಿನ ಸಂಗೀತ ಮನೆತನದಲ್ಲಿ ಕೃಷ್ಣಅಯ್ಯಂಗಾರ್ಯರು ಜನಿಸಿದರು. ಕೃಷ್ಣಯ್ಯಂಗಾರ್ಯರ ತಂದೆ ತಿಟ್ಟೆ ನಾರಾಯಣ ಅಯ್ಯಂಗಾರ್, ತಾತ ರಂಗಾಚಾರ್ಯರು  ಇಬ್ಬರೂ ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮಗ ನಾರಾಯಣ ಅಯ್ಯಂಗಾರ್ ಆಸ್ಥಾನ ವಿದ್ವಾಂಸರಾದರು. ಅಂದಿನ ದಿನಗಳಲ್ಲಿ ಮೈಸೂರು ಸಂಸ್ಥಾನವು ಲಲಿತ ಕಲೆಗಳಿಗೆ ಆಶ್ರಯತಾಣವೆಂದು ಪ್ರಖ್ಯಾತಿ ಪಡೆದಿತ್ತು. ಅನೇಕಾನೇಕ ಪ್ರಖ್ಯಾತ ವಿದ್ವಾಂಸರಿಗೆ ಆಶ್ರಯ, ಪೋಷಣೆ ನೀಡಿದುದಲ್ಲದೆ ಅನೇಕ ಶ್ರೇಷ್ಠ ಕಲಾವಿದರನ್ನು ಕಲಾದೇವಿಗೆ ಅರ್ಪಿಸಿದ ಕೀರ್ತಿ ಮೈಸೂರಿನದಾಗಿದೆ. ಕೃಷ್ಣಯ್ಯಂಗಾರ್ಯರ ಬಾಲ್ಯವು ಹೀಗೆ ಅರಮನೆಯ ಶ್ರೇಷ್ಠ ವಿದ್ವಾಂಸರ ಒಡನಾಟದಲ್ಲಿ ಲಾಲಿತ್ಯವನ್ನು ಉಂಡು ಬೆಳೆಯಲು ಅವಕಾಶ ಕಲ್ಪಿಸಿಕೊಟ್ಟಿತು.

ಕಲಿಕೆ ಹಾಗೂ ಸಾಧನೆ: ಕೃಷ್ಣಅಯ್ಯಂಗಾರ್ಯರಿಗೆ ಸಂಗೀತದ ಮೊದಲ ಪಾಠ ತಂದೆಯವರಿಂದಲೇ. ತಮ್ಮ ಒಂಬತ್ತನೇ ವಯಸ್ಸಿನ ಎಳೆತನದಲ್ಲೇ ಅಪಾರ ಸ್ವರಜ್ಞಾನ ಪಡೆದ ಅಯ್ಯಂಗಾರ್ಯರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದ ದಿಗ್ಗಜಗಳಾಗಿದ್ದ ಹಾಗೂ ಅರಮನೆಯ ಸಂಗೀತ ಶಾಲೆಯ ಹಿರಿಯ ಅಧ್ಯಾಪಕರುಗಳಾಗಿದ್ದ ಶೇಷಣ್ಣ, ಸುಬ್ಬಣ್ಣ, ಕೃಷ್ಣಪ್ಪನವರ ಮಾರ್ಗದರ್ಶನ ದೊರೆತು ೧೧ನೇ ವಯಸ್ಸಿನಲ್ಲೇ ತಿರುವಯ್ಯಾರ್ನಲ್ಲಿ ಅಂದಿನ ಹಿರಿಯ ವಿದ್ವಾಂಸರುಗಳೆಂದು ಖ್ಯಾತರಾಗಿದ್ದ ಪಾಪಾ ವೆಂಕಟರಾಮಯ್ಯ ಮತ್ತು ತಂಜಾವೂರು ವೈದ್ಯನಾಥ ಅಯ್ಯರ್ರ, ಪಿಟೀಲು ಮೃದಂಗಗಳೊಡನೆ ಒಂದು ಘಂಟೆಯ ಕಾಲ ಸೊಗಸಾದ ಕಚೇರಿಯನ್ನು ತೂಗಿಸಿದವರೆಂಬ ಕೀರ್ತಿಗೆ ಭಾಜನರಾದರು. ತಮ್ಮ ಹದಿನೇಳನೇ ವಯಸ್ಸಿನಲ್ಲೇ (೧-೯-೧೯೧೯) ಆಸ್ಥಾನ ವಿದ್ವಾಂಸರಾದರು. ಹೀಗೆ ‘ತಿಟ್ಟೆ’ ವಂಶದವರಲ್ಲಿ ಮೂರು ತಲೆಮಾರುಗಳ (ತಾತ, ಮಗ, ಮೊಮ್ಮಗ) ಮೂರು ಜನ ಕಲಾವಿದರುಗಳು ಮೈಸೂರು ಸಂಸ್ಥಾನಕ್ಕೆ ಆಸ್ಥಾನ ವಿದ್ವಾಂಸರುಗಳಾಗಿ ಸೇವೆ ಸಲ್ಲಿಸಿರುವ ವಿಶೇಷತೆ ಗಮನಾರ್ಹವಾದುದು. ೧೯೨೪ರಲ್ಲಿ ಬೆಳಗಾಂನಲ್ಲಿ ನಡೆದ ಕಾಂಗ್ರೆಸ್‌ ಮಹಾ ಅಧಿವೇಶನದಲ್ಲಿ ಮೈಸೂರು ವಿದ್ವತ್‌ ಗೋಷ್ಠಿಯೊಡನೆ ಭಾಗವಹಿಸಿ, ಮಹಾತ್ಮಗಾಂಧೀ ಅವರ ಸನಿಹದಲ್ಲಿ ಹಾಡಿ “ಭೇಷ್‌” ಎಂಬ ಮೆಚ್ಚುಗೆ ಪಡೆದ ಖ್ಯಾತಿ ಅಯ್ಯಂಗಾರ್ಯರದು. ೧೯೪೭ ನೇ ಸಾಲಿನಲ್ಲಿ ಜಯಚಾಮರಾಜ ಒಡೆಯರಿಂದ ಗಾನವಿಶಾರದ ಬಿರುದು ಪಡೆದರು. ೧೯೬೫ರ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರಾದರು. ಬಿಡಾರಂ ಕೃಷ್ಣಪ್ಪನವರ ಮಹದಾಸೆಯಿಂದ ಸ್ಥಾಪಿತವಾದ ಮೈಸೂರಿನ ಪ್ರಸನ್ನ ಸೀತಾರಾಮ ಮಂದಿರದ ಎಂಟನೇ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ, ಗಾನಕಲಾಸಿಂಧು ಬಿರುದಿಗೆ ಪಾತ್ರರಾದರು.

ಕಲೆಗಾಗಿ ಕಲೆ: ಜೀವನ ನಿರ್ವಹಣೆಗಾಗಿ, ಹೊಟ್ಟೆಪಾಡಿಗಾಗಿ ಅಯ್ಯಂಗಾರ್ಯರು ಕಲೆಯನ್ನು ಅವಲಂಬಿಸಿದವರಲ್ಲ. ಉಣ್ಣಲು, ಉಡಲು ಪಿತ್ರಾರ್ಜಿತ ಆಸ್ತಿ, ಅರಮನೆಯ ನೆರವೂ ಇದ್ದುದರಿಂದ ಕಲೆಗಾಗಿ ಕಲೆಯನ್ನು ವರಿಸಿ ಕಲೆಗೆ ನಿಷ್ಠರಾಗಿದ್ದರು. ಹಿರಿಯ ವಿದ್ವಾಂಸರಾದ ವೀಣೆಶೇಷ್ಣ್ಣ, ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ, ಚಿಕ್ಕರಾಮರಾಯರು, ಅರಿಯಕ್ಕುಡಿ ರಾಮಾನುಜಯ್ಯಂಗಾರ್, ಚೆಂಬೈ ವೈದ್ಯನಾಥ ಭಾಗವತರ್ ತಿರುಕ್ಕೋಡಿ ಕಾವಲ್‌ ಕೃಷ್ಣಅಯ್ಯಂರ್, ಪಳನಿಸುಬ್ರಹ್ಮಣ್ಯ ಪಿಳ್ಳೆ, ನಾಮಕ್ಕಲ್‌ ನರಸಿಂಹ ಅಯ್ಯಂಗಾರ್ ಮೊದಲಾದವರು ಸಂಗೀತ ವೈವಿಧ್ಯತೆಯನ್ನು ನೇರವಾಗಿ ಸವಿದು ಅವುಗಳಲ್ಲಿದ್ದ ವಿಶೇಷತೆಗೆ ಆಕರ್ಷಿತರಾಗಿ, ಅದರಿಂದ ಪ್ರಭಾವಿತರಾಗಿ, ಉತ್ತಮಾಂಶಗಳನ್ನು ತಮ್ಮ ಗಾಯನದಲ್ಲಿ ಮೈಗೂಡಿಸಿಕೊಂಡಿದ್ದರು.

ಉತ್ತಮ ಬೋಧಕರು: ಕೃಷ್ಣ ಅಯ್ಯಂಗಾರ್ಯರು ಶ್ರೇಷ್ಠ ದರ್ಜೆಯ ಗಾಯಕರಾಗಿದ್ದುದು ಮಾತ್ರವಲ್ಲದೆ ಉತ್ತಮ ಬೋಧಕರಾಗಿದ್ದರು. ಪರಂಪರೆಯ ಭದ್ರಬುನಾದಿಗೆ ಬಹಳ ಗೌರವ, ಬೆಲೆಯನ್ನು ಕೊಡುತ್ತಿದ್ದರು. ಆದ್ದರಿಂದ ಸಂಪ್ರದಾಯಕ್ಕೆ ಧಕ್ಕೆ ಬರುವ ಏನೇ ಅಂಶ ಕಂಡುಬಂದರೂ ಕೆಚ್ಚದೆಯಿಂದ ಎದುರಿಸಿ ತಮ್ಮ ನಿಲುವನ್ನು ಸಮರ್ಥಿಸುತ್ತಿದ್ದರು. ತಮ್ಮ ವಿನಿಕೆಯಲ್ಲೂ ಕಲಿಸುವಿಕೆಯಲ್ಲೂ ಇದನ್ನು ಬಹಳ ನಿಷ್ಠರಾಗಿ ಕಾಪಾಡಿಕೊಂಡು ಬಂದವರು. ‘ತಾನ’ದ ಬಗ್ಗೆ ವಿಶೇಷವಾಗಿ ಸಾಧನೆ ಮಾಡಿ, ಅನೇಕ ಪ್ರಾತ್ಯಕ್ಷಿಕೆಗಳನ್ನು ನೀಡಿರುವ ಖ್ಯಾತಿ ಇವರದಾಗಿದೆ. ತಿರುವಾಂಕೂರ್ ಸಂಸ್ಥಾನದಲ್ಲಿ ‘ತಾನ’ಕ್ಕೆ ತಾಳವನ್ನು ಅಳವಡಿಸಿ ವಿನಿಕೆ ಮಾಡುವ ಕ್ರಮ ಉಂಟು. ಇವರನ್ನು ಈ ಬಗ್ಗೆ ಪ್ರಶ್ನಿಸಿದಾಗ ಅವರು ತಮ್ಮ ಅಭಿಪ್ರಾಯನ್ನು ವ್ಯಕ್ತಪಡಿಸುತ್ತಾ “ತಾನಕ್ಕೆ ತಾಳ ಅಥವಾ ಮೃದಂಗದ ಅವಶ್ಯಕತೆ ಇಲ್ಲ. ಅದರಿಂದ ಮನೋಧರ್ಮ ಕುಂಠಿತವಗುತ್ತದೆ, ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಗುರುಮುಖೇನ ಕಲಿವ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದವರಾದರೂ, ಶಾಲಾಕಾಲೇಜುಗಳಲ್ಲಿ ಸಂಗೀತವನ್ನು ಕಲಿವ ಕಲಿಸುವ ಬಗ್ಗೆ ಇವರಿಗೆ ಸದಭಿಪ್ರಾಯವಿತ್ತು. ಸಂಗೀತವನ್ನು ಶಾಲಾ ಕಾಲೇಜಿನಲ್ಲಿ ಕಲಿಸುವ ಕ್ರಮಕ್ಕೆ ಇವರೂ ಕಾರಣರು. ಇವರು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಸಂಗೀತ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವು ನಡೆಸುವ ವಿಶೇಷ ಸಂಗೀತ ಪರೀಕ್ಷಾಮಂಡಳಿಯಲ್ಲಿಯೂ ಪರೀಕ್ಷಕರಾಗಿ ಸೇವೆ ಸಲ್ಲಿಸಿರುವರು. ಅಲ್ಲದೆ ವಿದ್ವತ್‌ ಪರೀಕ್ಷೆಗೆ ಇವರು ಬರೆದಿರುವ “ಕರ್ನಾಟಕ ಸಂಗೀತ ಲಕ್ಷ್ಯ-ಲಕ್ಷಣ ಪದ್ಧತಿ” ಪುಸ್ತಕವು ಪಠ್ಯಪುಸ್ತಕವಾಗಿ ಪ್ರಕಟವಾಗಿದೆ. ಅಯ್ಯಂಗಾರ್ಯರಲ್ಲಿ ಅನೇಕ ಶಿಷ್ಯರು ಅಭ್ಯಾಸಮಾಡಿದ್ದಾರೆ. ಡಾ. ಪದ್ಮಾಮೂರ್ತಿ (ಗಾಯನ), ಡಾ. ವೇದವಲ್ಲಿ, ಎಂ.ಎಸ್‌. ಜಯಮ್ಮ (ವೀಣೆ), ರುಕ್ಮಿಣಿಯಮ್ಮ (ಗಾಯಕಿ ಮತ್ತು ದಕ್ಷ ವಿದ್ಯಾ ಇಲಾಖಾ ಅಧಿಕಾರಿ) ಮತ್ತು ಸಹೋದರಿಯರು, ರಾಜಲಕ್ಷ್ಮಿ ಮತ್ತು ಇತರರು ಇವರ ಶಿಷ್ಯರಲ್ಲಿ ಪ್ರಮುಖರು. ಕಲಿಕೆಯ ವೇಳೆಯಲ್ಲಿ ಶಿಕ್ಷಣ ಒಬ್ಬರ ಹತ್ತಿರವೇ ಇರಬೇಕು. ಅಂತೆಯೇ ಸ್ಮರಣ-ಮನನಗಳು ಪ್ರಮುಖವಾದುದು. ಪರಂಪರೆಯನ್ನು ಉಳಿಸಿ-ಬೆಳೆಸಲು ಆಸ್ಥೆ ಇರಬೇಕು” ಎಂಬುದು ಇವರ ನಿಲುವು.

ವಿಚಾರಧಾರೆ: ಒಬ್ಬ ಕಲಾವಿದನನ್ನು ಶ್ರೇಷ್ಠ ಕಲಾವಿದನೆನ್ನಲು ಅಯ್ಯಂಗಾರ್ಯರ ನುಡಿಯಲ್ಲಿನ ವಿಚಾರಧಾರೆ ಹೀಗಿರುತ್ತಿತ್ತು.-ಶ್ರೇಷ್ಠ ಕಲಾವಿದನಾಗಬೇಕಾದರೆ ಉತ್ತಮ ವ್ಯಕ್ತಿತ್ವ, ಚಾರಿತ್ರಶುದ್ಧಿ, ದೈವ ಪ್ರೀತಿ- ಭಕ್ತಿಗಳು ಅತ್ಯವಶ್ಯಕ ಅಂಶಗಳು. ಮೊದಲಿಗೆ ಕಚೇರಿಯಲ್ಲಿ ಸಭಾಮರ್ಯಾದೆಯನ್ನು ಕಾಯ್ದುಕೊಳ್ಳಬೇಕು. ಮನರಂಜನೆಯ ನೆಪದಲ್ಲಿ ಉದ್ರೇಕಗೊಳ್ಳುವ ಕಳಪೆ ಬೆರಕೆಗಳನ್ನು ಸಂಗೀತದಲ್ಲಿ ತಳುಕು ಹಾಕಲು ಪ್ರಯತ್ನಿಸಬಾರದು. ಕೃತಿ ನಿರೂಪಣೆಯಲ್ಲಿ ಸಾಹಿತ್ಯದರ್ಥವನ್ನು ಅನುಭವಿಸಿಕೊಂಡು ಅದರ ಭಾಷೆಯು ಸ್ಫುರಿಸುವಂತೆ ರಾಗದ ಚಿತ್ರಣ ಬಿಡಿಸಬೇಕು. ಎಲ್ಲಿಯೇ ಆಗಲೀ ಕಲೆಯಲ್ಲಿ ಉತ್ತಮಾಂಶಗಳನ್ನು ಕಂಡರೆ ಮೆಚ್ಚಿ ಗೌರವಿಸಬೇಕು. ಅಹಂಕಾರಕ್ಕೆ ಒಳಗಾಗದೆ, ಕಲೆಗೆ ದ್ರೋಹ ಮಾಡದೆ ಸತತ ಸಂಗೀತ ಸಾಧಕನಾಗಿರಬೇಕು ಎನ್ನುತ್ತಿದ್ದರು. ಹೀಘೆ ತಾವು ಒಬ್ಬ ಉತ್ತಮ ಕಲಾವಿದನಲ್ಲಿ ಏನೇನು ಸದ್ಗುಣಗಳು ಇರಬೇಕೆಂದು ಅಪೇಕ್ಷಿಸಿದ್ದರೋ ಇವೆಲ್ಲವನ್ನೂ ಅಯ್ಯಂಗಾರ್ಯರು ಮೈಗೂಡಿಸಿಕೊಂಡಿದ್ದರಿಂದಲೇ ೯೦ ದಾಟಿದ ಇಳಿವಯಸ್ಸಿನಲ್ಲೂ ತರುಣರು ನಾಚುವಂತೆ ದಿಟ್ಟವಾಗಿ ನೆಟ್ಟ ನಡುವಿನಿಂಧ ಕುಳಿತು ೪-೫ ಗಂಟೆಗಳ ಕಾಲ ಲೀಲಾಜಾಲವಾಗಿ ವಿದ್ವತ್ಪೂರ್ಣ ಕಚೇರಿಗಳನ್ನೂ ಪ್ರಾತ್ಯಕ್ಷಿಕೆಗಳನ್ನೂ ನೀಡಿ ಹಿರಿಯ ಕಿರಿಯ ಸಹಕಲಾವಿದರನ್ನು ಬೆರಗುಗೊಳಿಸುತ್ತಿದ್ದರು. ದೇಶಾದ್ಯಂತ ಲೆಕ್ಕವಿಲ್ಲದ್ದಷ್ಟು ಕಚೇರಿಗಳು ಉಪನ್ಯಾಸಗಳನ್ನು ಇವರು ನೀಡಿದ್ದಾರೆ.

ವಾದಕ ಮತ್ತು ವ್ಯವಸ್ಥಾಪಕ ಅಯ್ಯಂಗಾರ್ಯರು: ಕೃಷ್ಣ ಅಯ್ಯಂಗಾರ್ಯರು ಗಾಯನ, ಬೋಧನದೊಂದಿಗೆ ಅನೇಕ ವಾದ್ಯಗಳಲ್ಲಿ ಪರಿಶ್ರಮ ಹೊಂದಿದ್ದರು. ವೀಣೆ, ಜಲತರಂಗ್‌, ಹಾರ್ಮೋನಿಯಂ ವಾದ್ಯಗಳನ್ನು ನುಡಿಸುವ ಪರಿಶ್ರಮ ಪಡೆದಿದ್ದರು. ಕೃಷ್ಣರಾಜ ಒಡೆಯರ ಕಾಲದಲ್ಲಿ ಅನೇಕ ವಿದೇಶೀ ವಾದ್ಯಗಳ ಪರಿಚಯವು ಸ್ಥಳೀಯ ವಿದ್ವಾಂಸರಿಗೆ ಲಭ್ಯವಾಯಿತು. ಈ ದಿಸೆಯಲ್ಲಿ ಅಯ್ಯಂಗಾರ್ಯರಿಗೆ ಸರೋದ್‌ ಹೋಲುವ “ದಲ್‌ಜಿತ್‌” ವಾದ್ಯಗಳ ಪರಿಚಯವಾಯಿತು. ಹೀಗೆ ನಾಲ್ಕಾರು ವಾದ್ಯಗಳನ್ನು ನುಡಿಸಬಲ್ಲವರಾದರೂ ಗಾಯನವನ್ನೇ ಪ್ರಮುಖವಾಗಿಟ್ಟುಕೊಂಡಿದ್ದರು. “ಶ್ರೀ ತ್ಯಾಗರಾಜ ಸಂಗೀತ ವಿದ್ವತ್‌ಸಭೆ’ಯ ಅಧ್ಯಕ್ಷರು, ವ್ಯವಸ್ಥಾಪಕರೂ ಆಗಿದ್ದರು. ಅನೇಕ ವರುಷಗಳು ತ್ಯಾಗರಾಜರ ಆರಾಧನೆಯನ್ನು ಸಂಗೀತೋತ್ಸವವನ್ನು ನಡೆಸಿದರಲ್ಲದೆ, ೨೫ ವರುಷಗಳ ಕಾಲ ಈ ಸಭೆಯನ್ನು ಅತ್ಯಂತ ವಾತ್ಸಲ್ಯ, ದಕ್ಷತೆಯಿಂದ ಬೆಳೆಸಿ ೧೯೬೬ರಲ್ಲಿ ವಿಜೃಂಭಣೆಯಿಂದ ಬೆಳ್ಳಿ ಹಬ್ಬವನ್ನು ಆಚರಿಸಿದರು.

ಲೇಖಕರಾಗಿ ಇವರು ಬರೆದಿರುವ ತ್ಯಾಗರಾಜ ಹೃದಯ ದರ್ಪಣ, ಕರ್ನಾಟಕ ಸಂಗೀತ ಲಕ್ಷ್ಯ-ಲಕ್ಷಣ ಪದ್ಧತಿ, ವೀಣೆ ಸುಬ್ಬಣ್ಣನವರ ಅಪರೂಪ ಕೃತಿಗಳು. ಇವು ಸಂಗೀತ ಪ್ರಪಂಚಕ್ಕೆ ಅಮೂಲ್ಯ ಕೊಡುಗೆಯಾಗಿದೆ.

ಇವರು ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯಲ್ಲಿ ತಜ್ಞರ ಸಮಿತಿಯ ಸದಸ್ಯರಾಗಿ ಅನೇಕ ಕಾಲ ತಮ್ಮ ಸೇವೆ ಸಲ್ಲಿಸಿದ್ದಾರೆ. ಕೇಳ್ಮೆ, ಕಲಿಕೆ, ಸಾಧನೆ, ಮನನ ಸ್ಮರಣದಿಂದಾಗಿ ಹೃದಯಾಂತರಾಳದಿಂದ ಬಂದ ಭಾವನೆಗೆ ಕೃತಿಯ ರೂಪ ನೀಡಿ ಹಲವು ಕೃತಿಗಳನ್ನು ರಚಿಸಿದ್ದಾರೆ.

ಪರಂಪರೆಯ ಉತ್ತಮ ಪಾಠಾಂತರ ಮತ್ತು ತಾನಕ್ಕಾಗಿ ಹೆಚ್ಚು ಶ್ರಮ ಪಟ್ಟ ಅಯ್ಯಂಗಾರ್ಯರು ಈ ಬಗ್ಗೆ ಅನೇಕ ಧ್ವನಿ ಮುದ್ರಣಗಳನ್ನು ನೀಡಿದ್ದಾರೆ. ಆಕಾಶವಾಣಿ ಮಾನ್ಯತೆ ಪಡೆದ ಕಲಾವಿದರಾಗಿ ಹಲವಾರು ವರುಷ ಕಾರ್ಯಕ್ರಮಗಳನ್ನು ನೀಡಿರುವರಲ್ಲದೆ, ಆಕಾಶವಾಣಿಗಾಗಿ ವಿಶೇಷ ಕಾರ್ಯಕ್ರಮವನ್ನೂ ಪ್ರಸ್ತುತಪಡಿಸಿದ್ದಾರೆ.

ಹರಿಕಥಾಕ್ಷೇತ್ರದಲ್ಲಿ ಪರಿಶ್ರಮ: ಗಾಯಕ, ಬೋಧಕ, ವಾದಕ, ಲೇಖಕ, ವ್ಯವಸ್ಥಾಪಕ, ಕೃತಿ ರಚನ ಕಾರರೆಂದೆಲ್ಲಾ ಪ್ರಸಿದ್ಧರಾಗಿದ್ದ ತಿಟ್ಟೆ ಕೃಷ್ಣ ಅಯಂಗಾರ್ಯರು ಹರಿಕಥಾ ಕ್ಷೇತ್ರದಲ್ಲೂ ಹೆಸರುಗಳಿಸಿದ್ದರು. ಗಾನಕಥಾಸುಧಾಕರ, ಕೀರ್ತನಭೂಷಣ, ಹರಿಕಥಾವಿಶಾರದ, ಹರಿಕಥಾ ವಿದ್ವಾನ್‌ ಎಂಬೀ ಬಿರುದುಗಳು ತ್ಯಾಗರಾಜ ಹೃದಯ ದರ್ಪಣದಲ್ಲಿ ಗಮನಸೆಳೆಯುವುದರೊಂದಿಗೆ ಹರಿಕಥಾ ಕ್ಷೇತ್ರದಲ್ಲಿ ಉತ್ತಮ ಕೀರ್ತನ ಪಟುವಾಗಿದ್ದರೆಂಬುದನ್ನು ದೃಢಪಡಿಸುತ್ತದೆ.

ಇವರಿಗೆ ಆರ್ಥಿಕ ಅಡಚಣೆ ಇರಲಿಲ್ಲವಾದರೂ ಮನುಷ್ಯರೆಂದಲ್ಲಿ ಇದ್ದಿರಬಹುದಾದ ಸಣ್ಣ-ಪುಟ್ಟ ಕೌಟುಂಬಿಕ ಮನೋ ವ್ಯಾಕುಲತೆಗೆ ಹೆಚ್ಚಾಗಿ ನಲುಗದೆ, ೯೦ರ ನಂತರದ ಇಳಿ ವಯಸ್ಸಿನಲ್ಲಿ ತಮ್ಮ ವ್ಯಕ್ತಿತ್ವವನ್ನು ಒಂದೇ ಮಟ್ಟದಲ್ಲಿ ಕಾಪಾಡಿಕೊಂಡು ಬಂದು “ಕಂಚಿನ ಕಂಠದ ತಿಟ್ಟೆ ಕೃಷ್ಣ ಅಯ್ಯಂಗಾರ್ಯ”ರೆಂದೇ ಗುರುತಿಸಲ್ಪಡುತ್ತಿದ್ದರು. ಅಂತ್ಯ ಕಾಲದವರೆಗೂ ಯಾರಲ್ಲೂ ಯಾವುದನ್ನೂ ಯಾಚಿಸದ ಜಾಯಮಾನ ಅಯ್ಯಂಗಾರ್ಯರದು. “ಕಲೆಯು ಎಲ್ಲರನ್ನೂ ಕೈ ಬೀಸಿ ಕರೆದರೂ ಕೆಲವರನ್ನು ಮಾತ್ರ ಆರಿಸಿಕೊಳ್ಳುವುದು” ಎಂಬ ಲೋಕೋಕ್ತಿಯನ್ನು ಸಾಬೀತು ಪಡೆಸುವಂತೆ ಅನೇಕ ಪ್ರಶಸ್ತಿಗಳು, ಸನ್ಮಾನಗಳು ಇವರು ಯಾಚಿಸದಿದ್ದರೂ, ತಂತಾನೇ ಬಂದು ಇವರನ್ನು ಅಲಂಕರಿಸಿದೆವು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೭೨, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೧೯೮೯, ಸಂಗೀತ ಕಲಾರತ್ನ ಬಿರುದು (ಬೆಂಗಳೂರು ಗಾಯನ ಸಮಾಜ), ಕನಕಪುರಂದರ ಪ್ರಶಸ್ತಿ ೧೯೯೧ (ಕರ್ನಾಟಕ ಸರ್ಕಾರದ ಉನ್ನತ ಪ್ರಶಸ್ತಿ) ಮೊದಲಾದುವುಗಳು ಇವರಿಗೆ ಲಭ್ಯವಾಗಿರುವ ಪ್ರಶಸ್ತಿಗಳಲ್ಲಿ ಪ್ರಮುಖವಾದುವು.

ಅಯ್ಯಂಗಾರ್ಯರಿಗೆ ಹಿರಿಯರಲ್ಲಿ ಗೌರವ-ಭಕ್ತಿ ಇದ್ದಂತೆ, ಕಿರಿಯರಲ್ಲಿ ಒಲವು-ಪ್ರೀತಿ ಇದ್ದು ಅರ್ಹತೆ ಇದ್ದ ಕಿರಿಯರು ಯಾರೇ ಆಗಲಿ ಭೇದವೆಣಿಸದೆ ಪ್ರೋತ್ಸಾಹಿಸಿ ಶುಭಕೋರುವ ಹೃದಯವಂತಿಕೆಯನ್ನು ಹೊಂದಿದ್ದರು. ಅಂತೆಯೇ ಸಹ ಕಲಾವಿದರಲ್ಲಿ, ಮಿತ್ರರಲ್ಲಿ ಮಧುರ ವಿಶ್ವಾಸವನ್ನೂ ಇಟ್ಟಿದ್ದರು.

ತಾಯ್ನಾಡಿನ ಮೇಲೆ, ಸಂಪ್ರದಾಯ ಮತ್ತು ಪರಂಪರೆಯ ಬಗ್ಗೆ ಅತೀವ ಕಾಳಜಿ ಆಸ್ಥೆ ಹೊಂದಿದ್ದು, ಹಿರಿಯ-ಕಿರಿಯರಾದಿಯಾಗಿ ಕಲಾಪ್ರಪಂಚದಲ್ಲಿ ಸರ್ವರಿಗೂ ಅತ್ಯಂತ ಆಪ್ತರೆನಿಸಿದ್ದ “ತಿಟ್ಟೆ ಕೃಷ್ಣ ಅಯ್ಯಂಗಾರ್ಯರು” ೧೬ನೇ ಮಾರ್ಚಿ ೧೯೯೭ ರಂದು ತಾವು ಹುಟ್ಟಿದ ಮೈಸೂರಿನಲ್ಲೇ ೯೫ ವರುಷಗಳ ತುಂಬು ಜೀವನ ನಡೆಸಿ ಕಲಾಸರಸ್ವತಿಯ ಪಾದದಡಿ ಚಿರ ನಾದದನಂತದಲ್ಲಿ ಲೀನವಾದರು .