ಅತ್ಯಂತ ಹಿರಿಯ ಸಂಗೀತ ವಿದ್ವಾಂಸರ ಸಾಲಿಗೆ ಸೇರುವ ತಿಟ್ಟೆ ಕೃಷ್ಣ ಅಯ್ಯಂಗಾರ್ ಅವರ ಜನನ ೧೯೦೨ ನವೆಂಬರ್ ೨೪ ರಂದು ತಾತ ತಿಟ್ಟೆರಂಗಾಚಾರ್ಯ, ತಂದೆ ಆಸ್ಥಾನ ವಿದ್ವಾನ್‌ ತಿಟ್ಟೆ ನಾರಾಯಣ ಅಯ್ಯಂಗಾರ್. ಸಂಗೀತದ ಮನೆತನದಲ್ಲಿಯೇ ಜನಿಸಿದ ಕೃಷ್ಣ ಅಯ್ಯಂಗಾರ್ ಅವರಿಗೆ ತಂದೆಯವರಿಂದಲೇ ಸಂಗೀತ ಶಿಕ್ಷಣ ದೊರೆಯಿತು. ಹಾಡುವುದರೊಡನೆ ವೀಣೆ, ಜಲತರಂಗ ವಾದ್ಯವಾದನಗಳಲ್ಲೂ ಪರಿಶ್ರಮವಿತ್ತು.

ದೇಶದಾದ್ಯಂತ ಪ್ರತಿಷ್ಠಿತ ಸಂಗೀತ ಸಭೆ ಹಾಗೂ ಪ್ರಮುಖ ಉತ್ಸವಗಳಲ್ಲಿ ತಮ್ಮ ಕಛೇರಿ ನೀಡಿದ್ದರು. ಮದರಾಸಿನ ಮ್ಯೂಸಿಕ್‌ ಅಕಾಡೆಮಿ, ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್ತುಗಳಲ್ಲಿ ತಜ್ಞರ ಸಮಿತಿಯ ಸದಸ್ಯರಾಗಿದ್ದು ಹಲವಾರು ಸೋದಾಹರಣ ಭಾಷಣಗಳನ್ನು ನೀಡಿದ್ದರು. ಆಕಾಶವಾಣಿ-ದೂರದರ್ಶನಗಳಿಂದ ಇವರ ಸಂಗೀತ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.

ಮೈಸೂರು ಮಹಾರಾಜರಿಂದ ‘ಗಾನ ವಿಶಾರದ’ ಬಿರುದು ಗಳಿಸಿದ ಅಯ್ಯಂಗಾರ್ ಅವರು ಪ್ರಸನ್ನ ಸೀತಾರಾಮ ಮಂದಿರದ ಸಮ್ಮೇಳನಾಧ್ಯಕ್ಷರಾಗಿ ‘ಗಾನ ಕಲಾ ಸಿಂಧು’, ಗಾಯನ ಸಮಾಜದ ‘ಸಂಗೀತ ಕಲಾರತ್ನ’, ರಾಜ್ಯ ಅಕಾಡೆಮಿಯ ಪ್ರಶಸ್ತಿ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದರು. ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ಕನಕ-ಪುರಂದರ ಪ್ರಶಸ್ತಿಯ ಪ್ರಪ್ರಥಮ ವಿಜೇತರೂ ಆದ ಶ್ರೀಯುತರಿಂದ ಪ್ರಕಟವಾದ ಗ್ರಂಥಗಳಲ್ಲಿ ಕರ್ನಾಟಕ ಸಂಗೀತದ ಲಕ್ಷ್ಯ-ಲಕ್ಷಣ ಪದ್ಧತಿ ಮತ್ತು ವೀಣೆ ಸುಬ್ಬಣ್ಣನವರ ಅಪರೂಪದ ಕೃತಿಗಳು ಮುಖ್ಯವಾದುವು. ಇಂತಹ ದಿಗ್ಗಜರು ೧೬-೩-೧೯೯೭ರಂದು ನಾದದೇವಿಯ ಆಡಿದಾವರೆಗಳನ್ನು ಹೊಂದಿದರು.