ಇದು ಹಸಿಯಿರಲಿ, ಒಣಗಿರಲಿ, ಸಿಪ್ಪೆ ಸಹಿತವಾಗಿರಲಿ, ಸಿಪ್ಪೆರಹಿತವಾಗಿರಲಿ, ಬೇರೆ ಅಡಿಕೆಯೊಂದಿಗೆ ಹೋಲಿಸಿದರೆ ಯಾವುದೇ ವ್ಯತ್ಯಾಸ ಕಾಣದು.  ಮರವಾಗಲಿ, ಕೊನೆಯಾಗಲಿ ಯಾವ ವಿಶೇಷದಿಂದ ಕೂಡಿಲ್ಲ.  ತಿರುಳು ಅಚ್ಚ ಬಿಳಿ, ತೆಂಗಿನಕಾಯಿ ತಿಂದಷ್ಟು ರುಚಿ.

ಇದೇ ಸಿಹಿ ಅಡಿಕೆ. “ಸ್ವಲ್ಪವೂ ಒಗರಿಲ್ಲ. ತಿನ್ನುತ್ತಾ ಕುಳಿತರೆ ಇಡೀ ಗೊನೆ ಬರಿದಾಗಿದ್ದೇ ತಿಳಿಯದು” ಎನ್ನುತ್ತಾರೆ ಬೇಳೂರಿನ ಬಿ.ಟಿ. ನರೇಂದ್ರ.

ಅಲ್ಲೇ ಪಕ್ಕದ ರಾಮಚಂದ್ರರವರ ತೋಟದ ಸಿಹಿ ಅಡಿಕೆಗೆ ಸುಮಾರು ಎರಡು ತಲೆಮಾರಿನ ಇತಿಹಾಸವಿದೆ.  ಅನೇಕರಿಗೆ ಸಸಿ ಮಾಡಿಕೊಟ್ಟಿದ್ದಾರೆ.  ಆದರೆ ಇವರ ತೋಟದಲ್ಲಿ ಮಾತ್ರ ಮೂರೇ ಸಿಹಿ ಅಡಿಕೆ ಮರಗಳು.  ತೋಟದ ತುಂಬಾ ಏಕಿಲ್ಲವೆಂದರೆ “ಈ ಸಿಹಿ ಅಡಿಕೆಗಿರುವ ಕಹಿಗುಣ” ಎನ್ನುತ್ತಾರೆ ರಾಮಚಂದ್ರ.

ಈ ಸಿಹಿ ಅಡಿಕೆ ಗೊನೆ ಹಣ್ಣಾದಾಗ ಶೇ.೫೦ರಷ್ಟು ಅಡಿಕೆ ಜಬ್ಬಾಗಿರುತ್ತದೆ.  ಕೇವಲ ಎರಡು ಅಡಿಕೆ ತಿಂದರೂ ಸಾಕು ಭೇದಿ ಶುರುವಾಗುತ್ತದೆ ಎನ್ನುತ್ತಾರೆ.

ಬೇಳೂರಿನ ಬಿ.ಟಿ. ನರೇಂದ್ರ, ಹೆಗಡೆ ಸುಬ್ರಾಯ ಹಾಗೂ ಕವಲಗೋಡು ಶ್ರೀಧರ ದೀಕ್ಷಿತ ಇವರುಗಳ ತೋಟದಲ್ಲಿರುವ ಸಿಹಿ ಅಡಿಕೆ ಇದಕ್ಕಿಂತ ಭಿನ್ನವಾಗಿದೆ.  ಹಸಿಯಿದ್ದಾಗ ಮುರುಟುವ ಪ್ರಮಾಣ ತುಂಬಾ ಕಡಿಮೆ. ಎಷ್ಟು ಅಡಿಕೆ ತಿಂದರೂ ಅಡ್ಡ ಪರಿಣಾಮವಿಲ್ಲ.

ಬಿ.ಟಿ. ನರೇಂದ್ರರವರ ತೋಟದಲ್ಲಿ ಎರಡು ಜಾತಿಯ ಸಿಹಿ ಅಡಿಕೆಯಿದೆ.  ಒಂದು ಜಾತಿ ಉರುಟಾಗಿ ದಪ್ಪವಿದೆ.  ಮತ್ತೊಂದು ತೆಳ್ಳಗೆ ಉದ್ದವಿದೆ.  ವರ್ಷಕ್ಕೆ ೨೦೦ ಅಡಿಕೆ ಸಿಗುತ್ತದೆ.  ಇವರು ಈ ಮರಗಳಲ್ಲಿ ಬಿಡುವ ಗೊನೆಗಳು, ಅಡಿಕೆ ಪ್ರಮಾಣ, ಗುಣಮಟ್ಟ ಮುಂತಾದ ಹಲವು ದಾಖಲೆಯಿಟ್ಟಿದ್ದಾರೆ.  ಇವರ ಪ್ರಕಾರ ಸಿಹಿ ಅಡಿಕೆ ಹಸಿಯಾಗಿರುವಾಗ ಮಾತ್ರ ತಿನ್ನಲು ಯೋಗ್ಯ.  ಮಾರುಕಟ್ಟೆಯಲ್ಲಿ ಇವುಗಳನ್ನು ಕೇಳುವವರಿಲ್ಲ ಎನ್ನುತ್ತಾರೆ.

ಕವಲಗೋಡು ಶ್ರೀಧರ ದೀಕ್ಷಿತರ ತೋಟದಲ್ಲಿ ಪ್ರತಿವರ್ಷ ಮೂರು ಗೊನೆ ಸಿಗುತ್ತದೆ.  ಸಿಹಿ ಅಡಿಕೆ ಸ್ವಲ್ಪ ಉದ್ದವಿದ್ದು ದಪ್ಪವಿದೆ.  ೧೦೦ ಬೀಜ ನೆಟ್ಟರೆ ೬೦ ಗಿಡ ಸಿಗುತ್ತದೆ ಎನ್ನುತ್ತಾರೆ ದೀಕ್ಷಿತರು.

ಹೆಗಡೆ ಸುಬ್ರಾಯರ ತೋಟದ ಸಿಹಿ ಅಡಿಕೆಯು ಪ್ರಗತಿಪರ ಕೃಷಿಕ ಕೆಳದಿ ಕೃಷ್ಣಮೂರ್ತಿ ಅವರ ಮೂಲಕ ೧೯೭೮ರಲ್ಲಿ ವಿಟ್ಲ ಅಡಿಕೆ ಸಂಶೋಧನಾ ಕೇಂದ್ರಕ್ಕೆ ತಲುಪಿತು.  ಸಂಶೋಧನಾ ಕೇಂದ್ರದ ಮುಖ್ಯಸ್ಥ ಶ್ಯಾಮಭಟ್‌ ಹಾಗೂ ನರಸಿಂಹಮೂರ್ತಿ ಸಿಹಿ ಅಡಿಕೆಮರ ಹುಡುಕಿಕೊಂಡು ಹೆಗಡೆ ಸುಬ್ರಾಯರ ಮನೆಗೆ ಬಂದರು.  ಸಿಹಿ ಅಡಿಕೆ ಮರದಲ್ಲಿ ಆಗಷ್ಟೇ ಅರಳಿರುವ ಹಿಂಗಾರಕ್ಕೆ (ಅಡಿಕೆ ಹೂಗೊಂಚಲು) ಪ್ಲಾಸ್ಟಿಕ್‌ ಕೊಟ್ಟೆ ಕಟ್ಟಿಸಿದರು.  ಅಲ್ಲಿಯೇ ಸ್ವ-ಪರಾಗಸ್ಪರ್ಶ ಆಯಿತು.  ಬಂದ ಗಿಡಗಳನ್ನು ಒಯ್ದು ಗಿಡ ಮಾಡಿದರಂತೆ. “ನಾನು ಒಂದಷ್ಟು ಗಿಡಗಳನ್ನು ಮಾಡಿ ಅನೇಕರಿಗೆ ಕೊಟ್ಟೆ. ವಿಟ್ಲ ಸಂಶೋಧನಾ ಕೇಂದ್ರದಿಂದ ಆಮೇಲೆ ಯಾವ ಸುದ್ದಿಯೂ ಇಲ್ಲ” ಎನ್ನುತ್ತಾರೆ ಸುಬ್ರಾಯರು.

ಏಕಿಂಥಾ ಅನಾದರ?

ಸಿಹಿ ಅಡಿಕೆಯನ್ನು ಬೇಯಿಸಿ, ಒಣಗಿಸಿ ಇಟ್ಟುಕೊಳ್ಳಬಹುದು.  ಹಣ್ಣಾದ ಅಡಿಕೆಯನ್ನು ಒಣಗಿಸಿ ಇಟ್ಟುಕೊಂಡು ಆಗಾಗ ಬಳಸಬಹುದು. ತಿನ್ನಲು ಒಣಗಿದ ಅಡಿಕೆ ಜಿಗುಟಾಗಿರುತ್ತದೆ. ಹಸಿರು ಇರುವಾಗಲೇ ಸಣ್ಣ ಚೂರು ಮಾಡಿ, ಸಕ್ಕರೆಯೊಂದಿಗೆ ಲವಂಗ, ಕಾಳುಮೆಣಸು ಮುಂತಾದ ಮಸಾಲೆ ಬಳಸಿ, ಮಸಾಲೆ ಅಡಿಕೆ ಮಾಡಿಕೊಳ್ಳಬಹುದು.  ಆದರೆ ಇವನ್ನೆಲ್ಲಾ ಗಾಳಿಯಾಡದಂತೆ ಭದ್ರವಾಗಿಡಬೇಕು.

ಈ ಎಲ್ಲಾ ಬೆಳೆಗಾರರ ಅನುಭವದಂತೆ ಸಿಹಿ ಅಡಿಕೆಯಲ್ಲಿ ಇರುವ ಕೊಬ್ಬರಿ ಅಂಶದಿಂದಾಗಿಯೇ ತುಂಬಾ ದಿನ ಇಡಲಾಗದು.  ಫಂಗಸ್‌ ಬರುತ್ತದೆ.  ಒಣಗಿದ ಅಡಿಕೆ (ಬೇಯಿಸಿದ್ದಾಗಲಿ, ಚಾಲಿಯಾಗಲಿ) ಸುಕ್ಕಾಗುತ್ತದೆ, ಮುರುಟುತ್ತದೆ, ಹಗುರವಾಗುತ್ತದೆ.  ಲೋಕಲ್‌ ಅಡಿಕೆಯ ಅರ್ಧದಷ್ಟು ತೂಕವೂ ಬರುವುದಿಲ್ಲ.  ಚೊಗರಿನ (ಒಗರಿನ) ಅಂಶವೇ ಇರುವುದಿಲ್ಲ. ಪಾನ್‌ಗೆ ಯೋಗ್ಯದಾಯಕವಲ್ಲ. ಇದಕ್ಕೆಂದೇ ಯಾವ ಗಿರಾಕಿಯೂ ಇಲ್ಲ.  ಉತ್ತಮ ಬಣ್ಣ ಬರದೇ ಬಿಳಿಯಾಗುತ್ತದೆ, ಬಣ್ಣಗೆಡುತ್ತದೆ, ಹುಳ ಹಿಡಿಯುತ್ತದೆ.  ಬೆಟ್ಟೆ, ಆಪಿ, ಚಿಕಣಿ ಮುಂತಾದ ಯಾವ ವರ್ಗಕ್ಕೂ ಸೇರುವುದಿಲ್ಲ.  ಮಾರುಕಟ್ಟೆಯಲ್ಲಿ ಕೊನೆಯ ಸ್ಥಾನ ಪಡೆಯುತ್ತದೆ ಎನ್ನುತ್ತಾರೆ.

ಇಷ್ಟೆಲ್ಲಾ ಹೇಳಿದರೂ ರಾಶಿಯೊಂದಿಗೆ ಈ ಸಿಹಿ ಅಡಿಕೆಯನ್ನು ಸೇರಿಸಿದರೆ ಖಂಡಿತ ಕಂಡುಹಿಡಿಯಲು ಯಾರಿಂದಲೂ ಆಗದು.  ತಂದೇ ಕಂಡುಹಿಡಿಯಬೇಕು ಎನ್ನುವುದನ್ನು ಇವರುಗಳೇ ಹೇಳುತ್ತಾರೆ.

ಪಾಪ! ಸಿಹಿ ಅಡಿಕೆಮರ ಸದಾ ಒಂಟಿ.  ಎಲ್ಲಾ ಬೆಳೆಗಾರರ ತೋಟದ ಮೂಲೆಯಲ್ಲಿ ತನ್ನ ಪಾಡಿಗೆ ತಾನು ಪ್ರತಿವರ್ಷ ಫಸಲು ನೀಡುತ್ತದೆ.  ಗೊನೆ ಕೊಯ್ಯುವಾಗ ತೋಟದ ಯಜಮಾನರಿಗೆ ಮರ ನೆನಪಿದ್ದರೆ ಪ್ರತ್ಯೇಕ ಇಳಿಸಿ ತರುತ್ತಾರೆ.  ಆಗ ಎಲ್ಲರಿಗೂ ತಿನ್ನಲು ಸಿಗುತ್ತದೆ.  ಇಲ್ಲದಿದ್ದರೆ ಇದನ್ನೇ ಹುಡುಕಿ ಬಂದವರು ಮತ್ತೊಂದು ವರ್ಷ ಕಾಯಬೇಕಾಗುತ್ತದೆ.  ಎಷ್ಟು ವಿಶಿಷ್ಟ ಗುಣಗಳಿದ್ದರೇನು?  ಆದರಿಸುವವರು ಇಲ್ಲದ್ದಕ್ಕೆ ಬ್ರಹ್ಮನೇ ಮೂಲೆಗುಂಪಾದ.  ಹಾಗೆಯೇ ಸಿಹಿ ಅಡಿಕೆಯೂ ಮೂಲೆ ಸೇರಿದೆ.

[ಸಿಹಿ ಅಡಿಕೆ ಹೆಚ್ಚಿನ ಮಾಹಿತಿಗೆ – ಬಿ.ಟಿ. ನರೇಂದ್ರ, ಬೇಳೂರು, ದೂರವಾಣಿ : ೦೮೧೮೩-೨೬೦೧೩೫ ಕರಾವಳಿಯಲ್ಲಿ ಇದಕ್ಕೆ ಚಪ್ಪೆ ಅಡಿಕೆ ಎಂದೂ ಹೇಳುತ್ತಾರೆ.]