ಎಂದಾದರೂ ಗೆಣಸು ಸುಟ್ಟು ತಿಂದಿದ್ದೀರಾ? ಅದನ್ಯಾರು ತಿಂತಾರೆ? ಅನ್ನಬೇಡಿ. ಅದರಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ತಿಳಿದಮೇಲೆ ಪಶ್ಚಾತ್ತಾಪ ಪಡಬೇಕಾದೀತು. ‘ಐಪೋಮಿಯ ಬಟಾಟಾಸ್’ ಎಂಬ ಸಸ್ಯಶಾಸ್ತ್ರೀಯ ಹೆಸರಿನ ಗೆಡ್ಡೆಗೆ, ‘ಸ್ವೀಟ್ ಪೊಟೇಟೊ’ ಎಂಬ ಆತ್ಮೀಯ ಹೆಸರು. ಕನ್ನಡದ ಈ ಗೆಣಸಿಗೆ ತಮಿಳಿನಲ್ಲಿ ಚಕ್ಕರೈ ಕಳಂಗು, ಹಿಂದಿಯಲ್ಲಿ ಶಕ್ಕರ್ ಖಂಡ್ ಎಂಬ ಹೆಸರು.

ದ್ವಿದಳ ಗುಂಪಿಗೆ ಸೇರಿದ ಸಸ್ಯ. ಹೆಚ್ಚು ಪಿಷ್ಟ ಇರುವ ಸಿಹಿಯಾದ ಬೇರು ಗೆಡ್ಡೆ. ಹೆಚ್ಚಾಗಿ ಗೆಡ್ಡೆ ಬಳಸುವುದು ವಾಡಿಕೆ ಆದರೂ, ಈ ಗಿಡದ ಎಳೆಯ ಕುಡಿಗಳನ್ನೂ, ಎಲೆಗಳನ್ನೂ ಸೊಪ್ಪಿನ ತರಕಾರಿಯಂತೆ ಉಪಯೋಗಿಸುವವರೂ ಇದ್ದಾರೆ. ಸ್ವೀಟ್ ಪೊಟೇಟೊ ಎಂದು ಹೆಸರಿದ್ದರೂ ಪೊಟೇಟೊ(ಆಲೂಗೆಡ್ಡೆ)ಗೆ ದೂರದ ಸಂಬಂಧ ಸಹ ಇಲ್ಲ. ಸೀಳಿದ ಹೃದಯಾಕಾರದ  ದಟ್ಟ ಹಸಿರಿನ ಎಲೆಗಳು, ಸಿಕ್ಕಲ್ಲಿ ಹಬ್ಬುವ ಗಿಡ. ಗೆಡ್ಡೆಯ ಮೇಲೆ ತಿಳಿ ಗುಲಾಬಿ ಬಣ್ಣದ ತೆಳುವಾದ ಸಿಪ್ಪೆ, ಒಳಗೆ ಬಿಳಿ ಬಣ್ಣದ ಸಿಹಿಯಾದ ಗೆಡ್ಡೆ.

ಗೆಡ್ಡೆಗಳಿಂದಲೇ ಸಸ್ಯಾಭಿವೃದ್ಧಿ ಆದರೂ ಕಾಂಡದ ತುಂಡುಗಳಿಂದ ಹೊಸ ಗಿಡ ಮಾಡುವುದು ಒಳ್ಳೆಯದು. ನೀರಾವರಿ ವಸತಿ ಇರುವ ಎಲ್ಲ ಪ್ರದೇಶಗಳಲ್ಲೂ ಬೆಳೆಯ ಬಹುದು. ದಟ್ಟವಾದ ಮಂಜು ಬೀಳುವ  ಸ್ಥಳಗಳಲ್ಲಿ  ಬೆಳೆಯುವುದು ಕಷ್ಟ. ಸಾಕಷ್ಟು ಬಿಸಿಲು, ರಾತ್ರೆಯ ತಾಪಮಾನ ತುಂಬ ಕಡಿಮೆ ಆಗದೇ ಇರುವ ಸ್ಥಳಗಳಲ್ಲಿ ಚೆನ್ನಾಗಿ ಬೆಳೆಯ ಬಹುದು. ಈ ಬೆಳೆಗೆ ೫೦೦ಮಿ.ಮೀ ಮಳೆ ಬಂದರೂ ಸಾಕು. ಮೂರೂ  ಹಂಗಾಮುಗಳಲ್ಲಿ (ಜನವರಿ-ಫೆಬ್ರವರಿ, ಜೂನ್- ಜುಲೈ, ಅಕ್ಟೋಬರ್- ನವೆಂಬರ್) ಬೆಳೆಯ ಬಹುದು. ನಾಟಿ ಮಾಡಿ ಬೆಳೆಯುವ ಹಂತದಲ್ಲಿ ೫೦-೬೦ದಿನದವರೆಗೆ ನೀರಿನ ಆವಶ್ಯಕತೆ ಇರುತ್ತೆ. ಹಾಗೆಂದು ಹೆಚ್ಚು ನೀರು ನಿಂತ ಜಾಗದಲ್ಲಿ  ಗಿಡ ಬೆಳೆಯುವುದಿಲ್ಲ. ೮-೯ತಿಂಗಳಲ್ಲಿ ಈ ಗೆಡ್ಡೆ ಕೀಳುವ ಹಂತಕ್ಕೆ ಬರುತ್ತದೆ. ಯಾವ ಕೀಟ ರೋಗ ಬಾಧೆಗಳೂ ಈ ಗಿಡಕ್ಕಿಲ್ಲ. ಹೆಚ್ಚು ಗೊಬ್ಬರ ಸಹ ಈ ಗಿಡಕ್ಕೆ ಬೇಡ.

ಬಹು ಬೇಗ ಹಬ್ಬುವ ಗುಣ ಇರುವುದಲ್ಲದೆ ಕಳೆಗಳಿಗೆ ನೆರಳಾಗಿ ಹಬ್ಬಿ ಅವು ಹೆಚ್ಚು ಬೆಳೆಯದಂತೆ ಮಾಡುತ್ತವೆ. ಬೇಕೆಂದಾಗ ಕಿತ್ತು ಉಪಯೋಗಿಸ ಬಹುದು. ಸುಲಭವಾಗಿ, ಮುಚ್ಚಿಗೆಯಾಗಿ, ಬೆಳೆಯ ಬಹುದಾದ ಸಸ್ಯ. ಅತಿ ಹೆಚ್ಚು ‘ಬಯೋಮಾಸ್’ ಬರುವುದರಿಂದ, ಶೀಘ್ರ ಕಳೆಯುವಿಕೆಯಿಂದ  ಗೊಬ್ಬರಮಾಡಲು ಸೂಕ್ತ. ಈ ಗೆಡ್ಡೆಯಲ್ಲಿರುವ ನಾರಿನ ಅಂಶ, ಮತ್ತು ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ನಿಂದಾಗಿ ಮಧು ಮೇಹಿಗಳೂ ಸೇವಿಸ ಬಹುದು. ನಿಧಾನವಾಗಿ ಜೀರ್ಣವಾಗುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಮಾಡುವುದಿಲ್ಲ.  ಇದನ್ನು ತಿಂದಾಗ  ತುಂಬ ಹೊತ್ತು ಹೊಟ್ಟೆ ತುಂಬಿದಂತಿರುವುದರಿಂದ ಜೊತೆಯಲ್ಲಿ ತಿನ್ನುವ ಅನ್ನ ಅಥವ ರೊಟ್ಟಿಯ ಪ್ರಮಾಣ ಕಮ್ಮಿ ಮಾಡಬೇಕು.

ನಾಟಿಗೆ ಸಿದ್ಧವಾದ ಗೆಣಸು

ಹೆಚ್ಚು ಪೌಷ್ಟಿಕಾಂಶ ಇರುವದರಿಂದ ದೇಶದ ಆಹಾರ ಸುರಕ್ಷತೆಗೆ, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್)  ಜನಗಳ ಆಹಾರದ ಪೌಷ್ಟಿಕಾಂಶ ಹೆಚ್ಚಿಸಲು ಈ ಗೆಡ್ಡೆ ಸಹಕಾರಿಯಾಗ ಬಲ್ಲದು. ೧೦೦ ಗ್ರಾಂ ಗೆಡ್ಡೆಯಲ್ಲಿ ೪.೨ಗ್ರಾಂ ನಷ್ಟು ಸಕ್ಕರೆ ಅಂಶ, ಜೀವಸತ್ವಗಳಾದ ‘ಎ’ ‘ಸಿ’ ಮತ್ತು ಬಿ ೬, ಹೆಚ್ಚಾಗಿ ಇರುವುದೇ ಇದರ ಪ್ರಾಮುಖ್ಯತೆಗೆ ಕಾರಣ. ನಮ್ಮ ದೇಶದ ಒರಿಸ್ಸ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶಗಳಲ್ಲಿ ಬೆಳೆಯುತ್ತದೆ. ಸಾಧಾರಣ ಮಣ್ಣಿನಲ್ಲೂ, ಹವಾಮಾನಗಳಲ್ಲೂ ಬೆಳೆಯುವ ಈ ಗಿಡವನ್ನು  ಬೆಳೆಯ ಬಹುದು. ಬೆಳೆ ಶುರು ಮಾಡಲು ಜನವರಿ-ಫೆಬ್ರವರಿ, ಜೂನ್-ಜುಲೈ, ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳು ಸೂಕ್ತ. ಶಿವರಾತ್ರಿ, ಮತ್ತು ಉಪವಾಸದ ದಿನಗಳಲ್ಲಿ ಈ ಗೆಡ್ಡೆಗೆ ಬಹು ಬೇಡಿಕೆ. ಅನೇಕ ರೀತಿಯ ಅಡಿಗೆಗಳನ್ನು ಮಾಡಲು ಈ ಗೆಡ್ಡೆ ಉಪಯೋಗಿಸ ಬಹುದು. ಗೆಣಸಿನಿಂದ ಮಾಡುವ ಹಪ್ಪಳ ಮಳೆಯ ದಿನಗಳಲ್ಲಿ ತಿನ್ನಲು ರುಚಿಕರ. ಹಾಗೆಯೇ ಕೆಂಡದ ಮೇಲೆ ಸುಟ್ಟು ತಿಂದರೆ ಸಿಹಿ ಜಾಸ್ತಿಯಾಗುತ್ತದೆ. ಪಲ್ಯ, ಕೂಟು, ಸಿಹಿ ಪರಾಟ ಇತರೆ ಅಡಿಗೆಗಳು.

ಬೆಂಗಳೂರಿನ ಅಮೃತ ಹಳ್ಳಿಯ ಶಾಲೆಯ ಆವರಣ ದಲ್ಲಿರುವ ಗಣಪತಿ ದೇವಸ್ಥಾನದ ಪಕ್ಕದಲ್ಲಿ ತಂದು ನೆಟ್ಟಿದ್ದ ಎರೆಡು ಗೆಣಸಿನ ಬಳ್ಳಿ ತುಂಬ ಚೆನ್ನಾಗಿ ಹಬ್ಬಿತ್ತು. ಯಾವದೇ ಗೊಬ್ಬರ ಗೋಡು ಇಲ್ಲದೆ ಹಬ್ಬಿದ ಬಳ್ಳಿ ಜನರ ಗಮನ ಸೆಳೆದಿತ್ತು. ಕೊಯಿಲಿನ ಸಮಯ ಬಂದಾಗ ಆಶ್ಚರ್ಯ ಕಾದಿತ್ತು. ಸುಮಾರು ೫೦-೬೦ ಗೆಡ್ಡೆಗಳು. ಪ್ರತಿಯೊಂದೂ ೫-೬ ಕೆಜಿ ತೂಕದ್ದು. ಒಟ್ಟು ೮೨ ಕೆ ಜಿ ತೂಗಿದ್ದು ಒಂದು ದಾಖಲೆ. (ಮೂರು ಚದರ ಅಡಿ ಜಾಗದಲ್ಲಿ ಹಬ್ಬಿದ ಎರೆಡು ಬಳ್ಳಿಗಳಿಂದ) ಇಷ್ಟು ಹೆಚ್ಚು ಇಳುವರಿಗೆ ಕಾರಣ  ಹುಡುಕಿಕೊಂಡು ಹೊರಟಾಗ ತಿಳಿದದ್ದು ಇಷ್ಟು. ಪ್ರತಿ ನಿತ್ಯ ಗಣಪತಿಗೆ ಪಂಚಾಮೃತ ಅಭಿಶೇಕ ಮಾಡುತ್ತಿದ್ದರು. ಅದು ತುಳಸಿ ನೀರಿನೊಡನೆ ಬೆರೆತು ಹತ್ತಿರದಲ್ಲಿದ್ದ ಬಾಳೆಗಿಡಕ್ಕೆ ಹರಿದು ಹೋಗುತ್ತಿತ್ತು. ಮಧ್ಯೆ ಬಂಡೆ ಬಂದಿದ್ದರಿಂದ ಅಲ್ಲೇ ನಿಂತ ಪಂಚಾಮೃತ ಗೆಡ್ಡೆಗಳು ದಪ್ಪವಾಗಲು ಕಾರಣ ವಾಯಿತು. ಇದೇ ಪ್ರಯತ್ನವನ್ನು ಬೇರೆಡೆ ಮಾಡಿದಾಗ ಸಹ ಇಳುವರಿ ಚೆನ್ನಾಗಿಯೇ ಬಂದಿದೆ. ಪಂಚಾಮೃತಕ್ಕೆ ಚೆನ್ನಾಗಿಯೇ ಸ್ಪಂದಿಸುತ್ತೆ ಗೆಣಸು,  ಎನ್ನುತ್ತಾರೆ ಶಾಲೆಯ ಮುಖ್ಯಸ್ಥೆ ಶ್ರೀಮತಿ ಸಂಧ್ಯ.

ಕೊನೆಹನಿ: ಗೆಣಸನ್ನು ಬೇಯಿಸಿ, ಉಪ್ಪು, ಎಳ್ಳು ಬೆರೆಸಿ ಚೆನ್ನಾಗಿ ನಾದು ಉಂಡೆ ಮಾಡಿಕೊಳ್ಳ ಬೇಕು. ತೆಳುವಾಗಿ ಹಪ್ಪಳ ಲಟ್ಟಿಸಿ, ಚಾಪೆಯ ಮೇಲೆ ಹರವಿ ಒಣಗಿಸ ಬೇಕು. ಕಟ್ಟು ಕಟ್ಟಿ ಗಾಳಿಯಾಡದ ಡಬ್ಬಿಗಳಲ್ಲಿ ತುಂಬಿಸಿಟ್ಟರೆ ಮಳೆಯ ದಿನದಲ್ಲಿ ಸುಟ್ಟು ಇಲ್ಲವೆ ಎಣ್ಣೆಯಲ್ಲಿ ಕರಿದು ತಿನ್ನಲು ಬಳಸ ಬಹುದು.