ಕೊಬ್ಬರಿಗೆ ಹೆಸರುವಾಸಿಯಾದ ಈ ತಿಪಟೂರು ಉಪವಿಭಾಗ ಕೇಂದ್ರವಾಗಿದ್ದು, ಪ್ರಮುಖ ಶೈಕ್ಷಣಿಕ ಕೇಂದ್ರವು ಆಗಿದೆ. ತಿಪಟ್ಟೂರು ಅಂದರೆ ತ್ರಿ+ಪಟ್ಟೆ+ಊರು. ತ್ರಿಪಟ್ಟೂರು ಅಂದರೆ ಗಂಗರು, ನೊಳಂಬರು ಮತ್ತು ಕದಂಬರಿಗೆ ಸೇರಿದ, ರಾಜ್ಯಗಳ ಗಡಿಯಲ್ಲಿರುವ ಊರು. ಆದ್ದರಿಂದ ತ್ರಿಪಟ್ಟದ ಊರು, ತ್ರಿಪಟ್ಟೂರು, ಕ್ರಮೇಣ ತಿಪಟೂರು ಎಂದಾಗಿದೆ.

ಕಲ್ಲೇಶ್ವರ ದೇವಾಲಯ ಅರಳಗಪ್ಪೆ

ದೂರ ಎಷ್ಟು?
ತಾಲ್ಲೂಕ್ : ತಿಪಟೂರು
ತಾಲ್ಲೂಕು ಕೇಂದ್ರದಿಂದ : ೧೪ ಕಿ.ಮೀ.
ಜಿಲ್ಲಾ ಕೇಂದ್ರದಿಂದ : ೬೫ ಕಿ.ಮೀ

ತಿಪಟೂರು ತಾಲ್ಲೂಕಿನ ಅತ್ಯಂತ ಪ್ರಾಚೀನತಮ ವಾಸ್ತುಶಿಲ್ಪ ರಚನೆ ಅರಳಗುಪ್ಪೆಯ ಕಲ್ಲೇಶ್ವರ ದೇವಾಲಯ. ಇದು ೯ನೇ ಶತಮಾನದ ಗಂಗ ನೊಳಂಬರ ಕಾಲದ್ದು. ಇದರ ನವರಂಗದ ದ್ವಾರಬಂಧವು ಅತ್ಯಂತ ಕಲಾತ್ಮಕ ರಚನೆಯಾಗಿದೆ. ನವರಂಗದ ಮಾಢಿನಲ್ಲಿ ಅಷ್ಟದಿಕ್ಪಾಲಕರ ನಡುವೆ ರಾರಾಜಿಸುತ್ತಿರುವ ತಾಂಡವ ನಟರಾಜನ ಅತ್ಯದ್ಭುತ ಅಪೂರ್ವವಾದ ಶಿಲ್ಪವಿದೆ. ಭಾರತದ ಅತ್ಯಂತ ಸುಂದರವಾದ ಕೆಲವೇ ಶಿಲ್ಪಗಳಲ್ಲಿ ಇದೂ ಒಂದು ಕಲ್ಲೇಶ್ವರ ದೇವಾಲಯದ ಸುತ್ತಲೂ ಸಣ್ಣ ಸಣ್ಣ ಶಿವಲಿಂಗಗಳ ದೇಗುಲಗಳಿವೆ. ಇವುಗಳ ಮಧ್ಯೆ ಭಾಗದಲ್ಲಿ ದೊಡ್ಡದಾದ ಬಸವ ಮೂರ್ತಿ ಇದೆ.

 

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ವಿಘ್ನಸಂತೆ

ದೂರ ಎಷ್ಟು?
ತಾಲ್ಲೂಕು : ತಿಪಟೂರು
ತಾಲ್ಲೂಕು ಕೇಂದ್ರದಿಂದ: ೧೭ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬೫ ಕಿ.ಮೀ

ಅರಳಗುಪ್ಪೆಯ ಚನ್ನಕೇಶವ ದೇವಾಲಯದ ನಂತರ ತಾಲ್ಲೂಕಿನಲ್ಲಿ ಕುಸುರಿ ಕೆಲಸಕ್ಕೆ ಖ್ಯಾತವಾದ ಮತ್ತೊಂದು ಸುಂದರ ದೇಗುಲ, ವಿಘ್ನಸಂತೆಯ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಇದರ ಪೂರ್ವ ಹೆಸರು ಇಗಳಸಂತೆ ಇಲ್ಲಿನ ಈ ದೇಗುಲವನ್ನು ಹೊಯ್ಸಳರ ಅರಸನಾದ ೩ ನೇ ನರಸಿಂಹನ ಕಾಲದಲ್ಲಿ, ಕ್ರಿ.ಶ, ೧೨೮೬ ರಲ್ಲಿ ಮೂವರು ಸಹೋದರರು ಸೇರಿ ಕಟ್ಟಿಸಿದರು. ಆದ್ದರಿಂದ ೩ ಗರ್ಭಗುಡಿ ಹೊಂದಿದೆ ಎಂಬ ಐತಿಹ್ಯ. ಇದು ತ್ರಿಕೂಟಾಚಲ ದೇಗುಲವಾಗಿದೆ. ಈ ದೇಗುಲದ ಕಂಬಗಳನ್ನು ಚಿತ್ತಾಕರ್ಷಕವಾಗಿ ಕಡೆದು ಕೆತ್ತಲಾಗಿದೆ. ಇದರ ಶಿಖರವು ಚೆಲುವಿನ ಆಗರವಾಗಿದ್ದು ಶಿಲ್ಪ ಸಂಪತ್ತಿನಿಂದ ಕಂಗೊಳಿಸುತ್ತಿದೆ.

 

ಈಚನೂರು ಕೆರೆ

ದೂರ ಎಷ್ಟು?
ತಾಲ್ಲೂಕು : ತಿಪಟೂರು
ತಾಲ್ಲೂಕು ಕೇಂದ್ರದಿಂದ: ೧೭ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬೫ ಕಿ.ಮೀ

ತಾಲ್ಲೂಕಿನ ಅತಿ ದೊಡ್ಡಕೆರೆಗಳಲ್ಲೊಂದಾದ ಈಚನೂರು ಕೆರೆಗೆ, ಸರ್ಕಾರವು ತಾಳೆಕೆರೆ ಸುಬ್ರಮಣ್ಯನಾಲೆ ಮೂಲಕ ಹೇಮಾವತಿ ನದಿ ನೀರನ್ನು ಹರಿಸಿ, ಆನಂತರ ಶುದ್ಧಿಕರಿಸಿದ ನೀರನ್ನು ತಿಪಟೂರು ಮತ್ತು ಅರಸೀಕೆರೆ ತಾಲ್ಲೂಕುಗಳಿಗೆ ಸರಬರಾಜು ಮಾಡುವ ವ್ಯವಸ್ಥೆಯನ್ನು ಕಾಣಬಹುದು.

 

ಶ್ರೀ. ಮುನಿಯಪ್ಪನ ಆಲದ ಮರ (ಬಾಗುವಾಳ)

ದೂರ ಎಷ್ಟು?
ತಾಲ್ಲೂಕು : ತಿಪಟೂರು
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೭೫ ಕಿ.ಮೀ

ಸುಮಾರು ಆರು ನೂರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ. ಮುನಿಯಪ್ಪನ ಆಲದ ಮರವು, ಆಲದ ಮರದ ದೇಗುಲ ವೆಂದೇ ಪ್ರಸಿದ್ಧಿ ಇಲ್ಲಿ ಮುನಿಸಂಚಾರದ ಗದ್ದಿಗೆಯಿದೆ. ಅಮಾವಾಸ್ಯೆ ಮತ್ತು ಪೂರ್ಣಿಮೆಯಂದು ಕಟ್ಟಳೆಗೆ ಸಾವಿರಾರು ಜನ ಜಂಗುಳೀಯೇ ಸೇರುತ್ತದೆ. ಇಲ್ಲಿ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯ ಕಟ್ಟಾಳೆಯೊಂದು ಇದೆ. ಇದರ ನಿರ್ವಹಣೆಯನ್ನು ರಂಗಾಪುರಮಠದ ಶ್ರೀಗಳು ಇಂದಿಗೂ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವಾರ್ಷದ ಡಿಸೆಂಬರ್ ಮಾಹೆಯಲ್ಲಿ ೧೫ ದಿವಸಗಳ ಭಾರಿ ದನಗಾಳ ಜಾತ್ರೆ ನಡೆಯುತ್ತದೆ. ಈ ಆಲದ ಮರವು ಸುಮಾರು ೬-೮ ಎಕರೆ ವಿಸ್ತೀರ್ಣದಲ್ಲಿ ತನ್ನ ಬಿಳಿಲುಗಳಿಂದ ಹರಡಿ ಹೆಮ್ಮರವಾಗಿ ಹಲವಾರು ಪ್ರಾಣಿ ಪಶುಪಕ್ಷಿ ಜೀವಿಗಳಿಗೆ ಆಶ್ರಯ ತಾಣವಾಗಿದೆ. ಮರಗಳನ್ನು ದೇವರೆಂದು ಪೂಜಿಸುತ್ತಿದ್ದ ಹಿರಿಯರ ಆದರ್ಶ ನಾಡಿನ ಹೆಮ್ಮೆಯಾಗಿದೆ.

 

ರಾಷ್ಟ್ರಪತಿ ಅಬ್ದುಲ್ ಕಲಾಂ ಉದ್ಯಾನವನ, ಮಂಜುನಾಥಪುರ.

 

ಶ್ರೀ.ಮುನಿಯಪ್ಪನ ಆಲದ ಮರ ದೇಗುಲದಿಂದ, ಸುಮಾರು ೪ ಕಿ.ಮೀ ವಾಯುವ್ಯ ಭಾಗಕ್ಕೆ ಬಂದರೆ ಪರಿಸರಪ್ರೇಮಿಗಳು ಖ್ಯಾತ ವಿಜ್ಞಾನಿಗಳು ಹಾಗೂ ರಾಷ್ಟ್ರಪತಿಗಳಲ್ಲಿ ಅತ್ಯುತ್ತಮರೆನ್ನಿಸಿದ ಎ.ಪಿ.ಜೆ.ಅಬ್ದುಲ್ ಕಲಾಂ ರವರು, ಈ ಸ್ಥಳಕ್ಕೆ ಭೇಟಿ ನೀಡಿ, ಈ ವನವನ್ನು ಉದ್ಘಾಟನೆ ಮಾಡಿದ್ದನ್ನು ಸ್ಮರಿಸಬಹುದು. ಸಸ್ಯರಾಶಿ ಬೆಳಸಿ ಪರಿಸರ ಉಳಿಸುವ ಕಾರ್ಯ ನಮ್ಮಿಂದ ಆಗಬೇಕಿದೆ.

 

ಕೆರೆ ಗೋಡಿ ರಂಗಾಪುರ

ದೂರ ಎಷ್ಟು?
ತಾಲ್ಲೂಕು : ತಿಪಟೂರು
ತಾಲ್ಲೂಕು ಕೇಂದ್ರದಿಂದ: ೬ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೦ ಕಿ.ಮೀ

ಕೆರಗೋಡಿ ರಂಗಾಪುರದ ಶ್ರೀಮಠವು ೩೦೦ ವರ್ಷಗಳ ಇತಿಹಾಸವನ್ನು ಹೊಂದಿದೆ. ಇದುವರೆಗೂ ಈ ಮಠದ ಪರಂಪರೆಯಲ್ಲಿ ೭ ಜನ ಶ್ರೀಗಳೂ ಅಧಿಪತಿಗಳಾಗಿದ್ದು ತಮ್ಮ ತಪೋ ಅನುಷ್ಟಾನ ಹಾಗೂ ನಿಸ್ವಾರ್ಥ ಸೇವೆಯಿಂದ ಈ ಕ್ಷೇತ್ರವನ್ನು ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರವನ್ನಾಗಿಸಿದ್ದಾರೆ.

ಇದು ಶೈವ-ವೈಷ್ಣವ ಧರ್ಮಗಳ ಸಮ್ಮಿಲನದ ಕ್ಷೇತ್ರವಾಗಿದೆ ’ತ್ರಿ-ವಿಧದ ದಾಸೋಹ’ ಕ್ಕೆ ಹೆಸರಾದ ಶ್ರೀ ಕ್ಷೇತ್ರದಲ್ಲಿ ವೇದ ಸಂಸ್ಕೃತಿ ಶಿಕ್ಷಣದಿಂದ ಹಿಡಿದು ಇಂದಿನ ಕಂಪ್ಯೂಟರ್ ಶಿಕ್ಷಣದವರೆಗೆ ಸುಮಾರು ೧೮ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮಜಲನ್ನು ಸೃಷ್ಟಿಸಿದೆ ಕ್ರಿ.ಶ. ೧೭೪೮ ರ ಕಾಲದ ಶಾಸನದ ಪ್ರಕಾರ ಮೊಟ್ಟಮೊದಲ ಮಠದ ಗುರು ಪರದೇಶಿ ಕೇಂದ್ರದ ಸ್ವಾಮೀಜಿಗಳೆಂದೆನಿಸಿ ಭಿಕ್ಷಾ ವೃತ್ತಿಯನ್ನು ಮಾಡಿ ದೀಪ ಕಂಬ ಸ್ಥಾಪಿಸಿದರು ಎಂಬ ಐತಿಹ್ಯವಿದೆ. ಅಂದಿನಿಂದ ಇಂದಿನವರೆಗೂ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕ ಸೇವೆ ಸಲ್ಲಿಸುತ್ತಿದೆ. ಶ್ರೀ ಕೆರಹೋಡಿ ರಂಗಾಪುರದ ಶ್ರೀ ಶಂಕರೇಶ್ವರ ದೇವಾಲಯವು ಪ್ರಾಚೀನವಾಗಿದ್ದು ಈಗಲೂ ಭಕ್ತರ ಬಳಗದಿಂದ ಕೂಡಿರುತ್ತದೆ.

 

ಅಯ್ಯನ ಬಾವಿ

ದೂರ ಎಷ್ಟು?
ತಾಲ್ಲೂಕು : ತಿಪಟೂರು
ತಾಲ್ಲೂಕು ಕೇಂದ್ರದಿಂದ: ೬ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೦ ಕಿ.ಮೀ

ಸುಮಾರು ೩೦೦-೩೫೦ ವರ್ಷಗಳ ಇತಿಹಾಸವಿರುವ ಈ ಸ್ಥಳ ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ, ಅರಸೀಕೆರೆ ಮಾರ್ಗವಾಗಿ ೬ ಕಿ.ಮೀ. ಕ್ರಮಿಸಿದರೆ ಅಲ್ಲಿ ಬಲ ಭಾಗಕ್ಕೆ ತಿರುಗಿದರೆ ಒಂದು ದೊಡ್ಡ ಕಟ್ಟೆ, ಕಾಡುಕಲ್ಲಿನಿಂದ ಕಟ್ಟಲ್ಪಟ್ಟಿದೆ. ಪ್ರಯಾಣಿಕರಿಗೆ ಹಾಗೂ ದನಕರುಗಳಿಗೆ ಕುಡಿಯುವ ನೀರಿನ ಆಸರೆಯಾಗಿದೆ.

ನೀರಿನ ವ್ಯವಸ್ಥೆಗಾಗಿ ಅಂದಿನ ೫-೬ ನೇ ರಂಗಾಪುರದ ಶ್ರೀ ಗುರುಪರದೇಶಿ ಮಹಾಸ್ವಾಮಿಗಳು  ಕಟ್ಟಿಸಿದರು. ’ಐನೋರು’ ಕಟ್ಟಿಸಿದ ಬಾವಿಯಾದ್ದದಿಂದ, ಕ್ರಮೇಣ ’ಐನೋರ ಬಾವಿ’ ಎಂಬುದು, ಈಗ ’ಅಯ್ಯನ ಬಾವಿ’ ಆಗಿದೆ ಎಂಬುದು ಐತಿಹ್ಯ. ಅಯ್ಯನ ಬಾವಿಯಲ್ಲಿ ಯಾವಾಗಲೂ (ಸ್ವಲ್ಪ ಮಟ್ಟಿಗಾದರೂ) ನೀರು ಇರುವುದೊಂದು ವಿಶೇಷವಾದರೆ, ಪೂರ್ವ ಪಶ್ಚಿಮಾಭಿಮುಖವಾಗಿ ಬಾವಿಯ ಎದುರಿಗೆ ನಿಂತು, ಕಲ್ಲು ಹೊಡೆದರೆ ಅದು ಆಚೆಗೆ ಹೋಗದೆ ಬಾವಿಯೊಳಗೆ ಬೀಳುವುದು ಮತ್ತೊಂದು ವಿಶೇಷವಾಗಿದೆ. ಅದೇ ರೀತಿ ಬಾವಿಯ ಬದಿಯಲ್ಲಿ ಪೂರ್ವಾಭಿಮುಖವಾಗಿ ನಿಂತು ಕಲ್ಲು ಹೊಡೆದರೆ, ಅದು ಆಚೆಗೆ ಹೋಗುತ್ತದೆ. ಇದು ಈ ಸ್ಥಳದ ಮಹಿಮೆ, ಇದು ಆನಂದ ಮತ್ತು ಅಚ್ಚರಿಯನ್ನು ಉಂಟುಮಾಡುತ್ತದೆ.