ಬೇಸಾಯಕ್ಕೆ ಅತಿ ಮುಖ್ಯವಾಗಿ ಬೇಕಾದ ಅಂಶಗಳಲ್ಲಿ ಗೊಬ್ಬರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ನಮ್ಮ ಹಿರಿಯರು ಬೇಸಾಯಕ್ಕೆ ಮಣ್ಣು, ನೀರು, ಬೀಜಗಳಿಗೆ ಎಷ್ಟು ಮಹತ್ವ ನೀಡಿದ್ದರೋ ಗೊಬ್ಬರಕ್ಕೂ ಅಷ್ಟೇ ಪ್ರಾಮುಖ್ಯ ನೀಡಿದ್ದರು. ಗೊಬ್ಬರ ಎಂದರೆ ಈಗ ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಎಂದು ಎರಡು ವಿಧಗಳಿವೆ, ಆದರೆ ನಮ್ಮ ಹಿರಿಯರಿಗೆ ಗೊಬ್ಬರ ಎಂದರೆ ಅದು ತಿಪ್ಪೆ ಗೊಬ್ಬರ ಅರ್ಥಾತ್ ಸಗಣಿ ಗೊಬ್ಬರ. ಮಲೆನಾಡಿನಲ್ಲಿ ಇದನ್ನೇ ಹಟ್ಟಿ ಗೊಬ್ಬರ ಎನ್ನುವರು.

ಬೇಸಾಯದ ಅಂಗಗಳಾದ ಮಣ್ಣು, ನೀರು, ಬೀಜ ಮುಂತಾದವುಗಳಿಗೆ ಯಾವ ರೀತಿ ವಿವಿಧ ಆಚರಣೆಗಳ ಮೂಲಕ ಧನ್ಯವಾದ ಅರ್ಪಿಸಲಾಗುತ್ತದೆಯೋ ಅದೇರೀತಿ ತಿಪ್ಪೆಗೂ ಸಹ ಹಲವಾರು ವಿಧಾನಗಳ ಮೂಲಕ ಗೌರವ ಸಲ್ಲಿಸಲಾಗುತ್ತದೆ. ಗಮನಿಸಬೇಕಾದ ವಿಷಯವೆಂದರೆ ಪ್ರತಿಯೊಂದು ಕೆಲಸದ ಆರಂಭಕ್ಕೆ ಬೆನಕನನ್ನು ಪೂಜಿಸುವುದು ರೈತರ ಸಂಪ್ರದಾಯ. ಆ ಬೆನಕನನ್ನು ತಯಾರಿಸುವುದು ಸಗಣಿಯಲ್ಲಿ, ಸಗಣಿ  ಫಲವತ್ತತೆಯ ಸಂಕೇತ. ಅಂದರೆ ಈ ರೀತಿ ಸಗಣಿಯಲ್ಲಿ ಬೆನಕನನ್ನು ಮಾಡಿ ಪೂಜಿಸುವ ಮೂಲಕ ತಮ್ಮ ಗೌರವವನ್ನು ಸೂಚಿಸುತ್ತಾರೆ.

ಇನ್ನು ತಿಪ್ಪೆಯನ್ನೇ ಪೂಜಿಸುವ ವಿಶಿಷ್ಟ ಆಚರಣೆಗಳು ನಮ್ಮ ನಾಡಿನಲ್ಲಿವೆ. ಕೆಲವುಗಳ ವಿವರ ಇಲ್ಲಿದೆ.

ದೀಪಾವಳಿಯಂದು ತಿಪ್ಪೆ ಪೂಜೆ

ಮಲೆನಾಡಲ್ಲಿ ದೀಪಾವಳಿ ತಿಂಗಳು ಬಂತೆಂದರೆ ಎಲ್ಲೆಲ್ಲೂ ಹಸಿರೇ ಹಸಿರು.  ಅದರ ಜೊತೆಗೆ, ಬಿರುಸಾಗಿ ಅಲ್ಲದಿದ್ದರೂ ಸಹ ಬಿಟ್ಟೂ ಬಿಡದಂತೆ  ಸುರಿಯುವ ಮಳೆ, ಸಾವಧಾನವಾಗಿ ಹರಿಯುವ, ಎಳೆನೀರಿನಂತಹ ನೀರು. ಇಂತಹ ಶುಭ್ರ ವಾತಾವರಣದಲ್ಲಿ ನಡೆಯುವ ಸಂಭ್ರಮ, ಸಡಗರದದ ಭೂಮಿ ಹುಣ್ಣಿಮೆಯ ಬಗ್ಗೆ ಈಗಾಗಲೇ ಪ್ರಸ್ತಾಪಿಸಲಾಗಿದೆ. ಅದರ ಜೊತೆಗೆ ಮಲೆನಾಡಿಗರು ಆಚರಿಸುವ ಮತ್ತೊಂದು ವಿಶೇಷ ಆಚರಣೆ ತಿಪ್ಪೆಪೂಜೆ. ದೀಪಾವಳಿಯಂದು ಇಲ್ಲಿ ತಿಪ್ಪೆಗಳಿಗೂ ಸಂಭ್ರಮ

ತಿಪ್ಪೆಗುಂಡಿ ಎಂದರೆ ನಗರವಾಸಿಗಳು ಮೂಗು ಮುಚ್ಚಿಕೊಳ್ಳುತ್ತಾರೆ. ಆದರೆ ಕೃಷಿಕರು ಕೈಮುಗಿಯುತ್ತಾರೆ. ಏಕೆಂದರೆ ಬೆಳೆಗೆ ಜೀವಾಳವಾದ ತಿಪ್ಪೆಗಳನ್ನು ಗೌರವದಿಂದ ಕಾಣುವ ಮತ್ತು ಪೂಜಿಸುವ ಸಂಪ್ರದಾಯ ಅವರದು.

ದೀಪಾವಳಿಯಂದು ಸಾಮಾನ್ಯವಾಗಿ  ಹಳ್ಳಿ ಪಟ್ಟಣವೆನ್ನದೆ ಎಲ್ಲೆಲ್ಲೂ ಪಟಾಕಿಗಳ ಸದ್ದು, ಕಮಟು ಹೊಗೆ ಮತ್ತು ಕಾಗದದ ಚೂರುಗಳದೇ ಕಾರುಬಾರು.  ಆದರೆ ರಾಜ್ಯದ ಹಾಸನ, ಮಲ್ಲಿಪಟ್ಟಣ, ಸೋಮವಾರ ಪೇಟೆ ಭಾಗಗಳ ಕಡೆ ಹೋದರೆ ಇದಕ್ಕಿಂತ ತುಸು ಭಿನ್ನ ದೃಶ್ಯ ನೋಡಬಹುದು.  ಅಲ್ಲಿಯೂ ಸಹ ಪಟಾಕಿ ಸದ್ದಿರುತ್ತದೆ.  ಅದರ ಜೊತೆಗೆ ಸಾಮೂಹಿಕ ತಿಪ್ಪೆ ಪೂಜೆಯಂತಹ ವಿಶಿಷ್ಟ ಆಚರಣೆಯೂ ಇರುತ್ತದೆ.

ನಮ್ಮ ಹಿರಿಯರಿಗೆ ಸಗಣಿ, ಗೊಬ್ಬರ ಎಂದರೆ ಮಹಾ ಗೌರವ.  ಎಲ್ಲಿಯಾದರೂ ಒಂದು ಗುಡ್ಡೆ ಸಗಣಿ ಕಂಡರೂ ತಂದು ಹೊಲಕ್ಕೆ ಹಾಕುತ್ತಾರೆ. ಮನೆಗೆ ಹತ್ತಿರದಲ್ಲಿ ಇಲ್ಲವೇ ಊರಿಗೆ ಸಮೀಪದಲ್ಲಿಯೇ ತಿಪ್ಪೆ ಇರುತ್ತವೆ. ತಿಪ್ಪೆಗೆ ಯಾವುದೇ ಕಾರಣಕ್ಕೂ ಗಾಜು, ಕಬ್ಬಿಣಗಳು ಸೇರದಂತೆ ಎಚ್ಚರಿಕೆ ವಹಿಸುತ್ತಾರೆ.  ವರ್ಷಕ್ಕೆರಡು ಬಾರಿಯಾದರೂ ತಿಪ್ಪೆಗೆ ಕಾಡು ಸೊಪ್ಪು ಹಾಕುವುದು, ತಿಪ್ಪೆಯನ್ನು ಮಗುಚಿ ಹಾಕುವುದು ಮಾಡುತ್ತಾರೆ. ತಿಪ್ಪೆ ಚೆನ್ನಾಗಿ ಕಳಿಯಲಿ, ಮಾಗಾಲಿ, ಫಲವತ್ತಾಗಲಿ ಎಂಬುದು ಇದರ ಹಿಂದಿನ ಉದ್ದೇಶ.

ನಮ್ಮ ನಾಡಿನ ಎಲ್ಲಾ ಭಾಗದ ರೈತರೂ ಸಹ ಒಂದಲ್ಲಾ ಒಂದು ಸಲ ತಿಪ್ಪೆಯನ್ನು ಪೂಜಿಸುತ್ತಾರೆ.  ಕೆಲವರು ತಿಪ್ಪೆಯಿಂದ ಮೊದಲ ಬಾರಿ ಗೊಬ್ಬರ ತುಂಬುವಾಗ ಪೂಜಿಸಿದರೆ ಮತ್ತೆ ಕೆಲವರು ಗೊಬ್ಬರವೆಲ್ಲಾ ಖಾಲಿಯಾದ ತಿಪ್ಪೆಗೆ ಪೂಜಿಸುವುದನ್ನು ಕಾಣುತ್ತೇವೆ.  ಆದರೆ ಇವೆಲ್ಲವುಗಳಿಗಿಂತ ಹಾಸನ ಪ್ರದೇಶದ ಜನರು ದೀಪಾವಳಿಯಂದು ಮಾಡುವ ಸಾಮೂಹಿಕ ತಿಪ್ಪೆ ಪೂಜೆ ಅತ್ಯಂತ ವಿಶಿಷ್ಟವಾದುದು. ಅದರ ವಿವರವನ್ನು ಇಲ್ಲಿ ನೀಡಲಾಗಿದೆ.

ಹಬ್ಬದ ಹಿಂದಿನ ದಿನವೇ ಗಂಡಸರು ತಮ್ಮ-ತಮ್ಮ ತಿಪ್ಪೆಗಳನ್ನು ಅಚ್ಚುಕಟ್ಟಾಗಿ ಕೆತ್ತಿ, ಏರು ಹಾಕಿ, ಮೇಲೆ ಒಂದು ಪದರ ಮಣ್ಣು ಹಾಕಿ ಒಪ್ಪ ಮಾಡುತ್ತಾರೆ. ಕೆಲವರು ಇಡೀ ತಿಪ್ಪೆಯನ್ನು ಬೆಲ್ಲದ ಅಚ್ಚಿನಂತೆ ಆಕಾರ ನೀಡುತ್ತಾರೆ.  ಹಬ್ಬದ ದಿನ ಹೆಂಗಸರು ತಿಪ್ಪೆಯ ಮೇಲೆ ಹಸಿ ಸಗಣಿಯಲ್ಲಿ ಗದ್ದಿಗೆ (ಚೌಕಾಕಾರದ ದಿಂಡು) ಮಾಡಿ ಚೆಂಡು ಹೂ, ಸೇವಂತಿಗೆ ಮುಂತಾದವುಗಳಿಂದ ಸಿಂಗರಿಸುತ್ತಾರೆ.  ನಡೂ ಮಧ್ಯಕ್ಕೆ ಸರಿಯಾಗಿ ಕೇದಿಗೆ, ಮುತ್ತುಗ, ತುಳಸಿ ಮುಂತಾದ ಹೂವು, ಗರಿ ಹಾಗೂ ಸೊಪ್ಪುಗಳನ್ನು ನಿಲ್ಲಿಸುತ್ತಾರೆ.  ಇದಿಷ್ಟು ಬೆಳಗಿನ ಕಾರ್ಯಕ್ರಮ. ಅದೇ ದಿನ  ಸಂಜೆ ಎಲ್ಲಾ ಮನೆಯವರೂ ತಿಪ್ಪೆ ಹಾಳಕ್ಕೆ (ಸಾಮೂಹಿಕ ತಿಪ್ಪೆಗಳಿರುವ ಜಾಗ) ತಲುಪಿ ತಮ್ಮ-ತಮ್ಮ ತಿಪ್ಪೆಗಳಿಗೆ ಎಡೆ ಹಾಕಿ ಹಾಲು ತುಪ್ಪ ಬಿಟ್ಟು ತಿಪ್ಪೆ ಸಮೃದ್ಧವಾಗಿ ಬೆಳೆಯಲು ಬೇಡಿಕೊಳ್ಳುತ್ತಾರೆ.  ಹಿಂದೆ ಈ ಆಚರಣೆ ಹೀಗಿರಲಿಲ್ಲವಂತೆ.  ಇಡೀ ಗ್ರಾಮದವರು ತಿಪ್ಪೆಯನ್ನು ಬೆಲ್ಲದ ಅಚ್ಚಿನಂತೆ ಮಾಡಿ, ಚಪ್ಪರ ಹಾಕಿ ಆಚರಿಸುತ್ತಿದ್ದರೆಂದು ಮಲ್ಲಿಪಟ್ಟಣದ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ತಿಪ್ಪೆಯೂ ನಮ್ಮಂತೆ ಹೆಣ್ಣು, ವರ್ಷಕ್ಕೊಮ್ಮೆ ಅವಳ ಉಡಿ ತುಂಬಿ ಪೂಜಿಸಿದರೆ ನಮಗೆಲ್ಲಾ ಒಳ್ಳೆಯದು ಎಂಬುದು ಹೆಂಗಸರ ಅಭಿಪ್ರಾಯವಾದರೆ, ಗಂಡಸರು `ಸುಮ್ಮನೆ ತಿಪ್ಪೆಗೆ ಮಣ್ಣು, ಸೊಪ್ಪು ಹಾಕಿ ತಿರುವಿ ಹಾಕಿ ಎಂದರೆ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.  ಅದನ್ನೇ ಒಂದು ಹಬ್ಬದ ರೀತಿ ಆಚರಿಸಿದರೆ ಅದಕ್ಕೊಂದು ಮೌಲ್ಯ ಇರುತ್ತದೆ ಎಂಬ ನಂಬಿಕೆಯಿಂದ ಹಿರಿಯರು ಈ ರೀತಿ ತಂತ್ರ ಹೂಡಿರಬಹುದು’ ಎನ್ನುತ್ತಾರೆ.

ತಿಪ್ಪೆ ಪೂಜೆಯಿಂದ ಹಲವಾರು ಅನುಕೂಲಗಳಿವೆ.  ಇಡೀ ತಿಪ್ಪೆಯನ್ನು ಮಗುಚಿ ಹಾಕುವುದರಿಂದ ಮೇಲಿನ ಭಾಗ ಕೆಳಗೆ ಹೋಗಿ ಪರಿಪೂರ್ಣವಾಗಿ ಮಾಗಲು ಅನುಕೂಲವಾಗುತ್ತದೆ.  ಪೂಜೆಯ ನೆಪದಲ್ಲಿ ತಿಪ್ಪೆಯ ಮೇಲೆ ಸೊಪ್ಪಿನ ಚಪ್ಪರ ಹಾಕುವುದರಿಂದ ಗೊಬ್ಬರವನ್ನು ಬಿಸಿಲಿನಿಂದ ರಕ್ಷಿಸಿದಂತಾಗುತ್ತದೆ. ನೈವೇದ್ಯ ಮಾಡುವಾಗ ಬಿಡುವ ಹಾಲು, ತುಪ್ಪ, ಎಳನೀರು ಮುಂತಾದುವು ಅಪಾರ ಸೂಕ್ಷ್ಮಾಣು ಜೀವಿಗಳನ್ನು ಆಕರ್ಷಿಸಿ, ದ್ವಿಗುಣಗೊಳಿಸಿ ಅವುಗಳ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತವೆ. 

ಭೂಮಿ, ನೀರು, ಗಾಳಿಯನ್ನು ದೈವವೆಂದು ಪೂಜಿಸುವ ನಮ್ಮ ರೈತರು ತಿಪ್ಪೆಗೂ ಅಷ್ಟೇ ಗೌರವ ನೀಡಿರುವುದು ಅವರ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿ.

ಖಾಲಿಯಾದ ತಿಪ್ಪೆಗೆ ಪೂಜೆ: ತುಂಬಿದ ತಿಪ್ಪೆಗೆ ಮಲೆನಾಡಿನಲ್ಲಿ ಈ ರೀತಿ ಪೂಜಿಸಿದರೆ ಬಯಲು ಸೀಮೆಯಲ್ಲಿ ನಡೆಯುವ ಪೂಜೆ ವಿಭಿನ್ನವಾಗಿರುತ್ತದೆ. ಆದರೆ ನಿರ್ಧಿಷ್ಟ ದಿನವೇ ಪೂಜೆ ಮಾಡಬೇಕೆಂಬ ನಿಯಮ ಇಲ್ಲಿಲ್ಲ. ಇಲ್ಲಿ ಹೊಲಕ್ಕೆ ತಿಪ್ಪೆಯಿಂದ ಗೊಬ್ಬರ ಸಾಗಿಸಿದ ನಂತರ-ಅಂದರೆ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ- ತಿಪ್ಪೆಯಲ್ಲಿ ಇನ್ನು ಸ್ವಲ್ಪ ಗೊಬ್ಬರ ಇರುವಾಗ ತಿಪ್ಪೆಯ ತಳಕ್ಕೆ ಒಂದು ಕಳ್ಳಿ ಗಿಡದ ಕೊಂಬೆಯನ್ನು ನೆಟ್ಟು ಗೌರವಪೂರ್ವಕವಾಗಿ ಪೂಜೆ ಸಲ್ಲಿಸುತ್ತಾರೆ. ಕಳ್ಳಿ ಕೊಂಬೆಯು ಚಿಗುರುವ ಗುಣ ಹೊಂದಿದ್ದು ಅದು ತಿಪ್ಪೆಯ ತಳದಲ್ಲಿ ಬೇರು ಬಿಟ್ಟು ಬೆಳೆದಂತೆಯೇ ತಿಪ್ಪೆಯೂ ಸಹ ಸಮೃದ್ಧವಾಗಿ ಬೆಳೆಯಲಿ ಎಂಬ ಉದ್ದೇಶ ಈ ಪೂಜೆಯ ಹಿಂದಿದೆ.  

ಗೊರೆ ಹಬ್ಬ; ಸಗಣಿಯೊಂದಿಗೆ ಗುದ್ದಾಟ!

ದೀಪಾವಳಿಯ ಸಂದರ್ಭದಲ್ಲಿಯೇ ನಡೆಯುವ ಮತ್ತೊಂದು ಕುತೂಹಲಕರ ಆಚರಣೆ ಈ ಗೊರೆ ಹಬ್ಬ. ಇದು ಎಲ್ಲ ಕಡೆ ಸಾರ್ವಜನಿಕವಾಗಿ ನಡೆಯುವುದಲ್ಲ. ಕೇವಲ ಒಂದು ಗ್ರಾಮದಲ್ಲಿ ನಡೆಯುವಂತಹುದು. ಗ್ರಾಮದ ಹಿರಿ-ಕಿರಿಯರಾದಿಯಾಗಿ ಪ್ರತಿಯೊಬ್ಬರೂ ಸಗಣಿ ರಾಶಿಯೊಂದಿಗೆ ಬಿದ್ದು ಗುದ್ದಾಡುವುದೇ ಇಲ್ಲಿನ ವಿಶೇಷ.

ದೀಪಾವಳಿ ಎಂದರೆ ನಾಡಿನೆಲ್ಲೆಡೆ ಕಣ್ಣು ಕೋರೈಸುವ ಮಿಂಚು, ಬೆಳಕಿನ ಚಿತ್ತಾರ, ಎದೆ ನಡುಗಿಸುವ ಶಬ್ದದ ಭರಾಟೆ. ಆದರೆ ಈ ಒಂದು ಗ್ರಾಮದಲ್ಲಿ ಮಾತ್ರ ವಿಭಿನ್ನ ಚಿತ್ರ. ಚಾಮರಾಜನಗರದ ಸಮೀಪ  ತಮಿಳುನಾಡಿನ ಗಡಿ ಭಾಗದಲ್ಲಿರುವ ಕನ್ನಡದ ಹಳ್ಳಿಯೊಂದರಲ್ಲಿ ತುಂಬು ಸಡಗರದಿಂದ ಈ ಸಗಣಿಯೊಂದಿಗೆ ಗುದ್ದಾಡುವ ಆಚರಣೆ ಪ್ರತಿ ವರ್ಷ ನಡೆಯುತ್ತದೆ.  ತಮಿಳು ನಾಡಿನ ಹಳ್ಳಿಯಾದರೂ ಸಹ ಕನ್ನಡಿಗರು ಹೆಚ್ಚಾಗಿರುವ ತಾಳವಾಡಿ ಸಮೀಪದ  ಗುಮಟಾಪುರ ಎಂಬ ಹಳ್ಳಿಯಲ್ಲಿ ಸಕಲರೂ ಸಗಣಿಯ ಗುದ್ದಾಟದಲ್ಲಿ ಭಾಗಿಯಾಗುತ್ತಾರೆ.

ಸಗಣಿಯನ್ನು ಮುಟ್ಟುವುದಿರಲಿ ಅದರ ವಾಸನೆಯನ್ನೇ ಸಹಿಸಿಕೊಳ್ಳದವರೇ ಹೆಚ್ಚಾಗಿರುವ ಈ ದಿನಗಳಲ್ಲಿ ಸಗಣಿಯ ರಾಶಿಯಲ್ಲಿ ಬಿದ್ದು ಹೊರಳಾಡಿ ಸಗಣಿಯ ಉಂಡೆಗಳನ್ನು ಒಬ್ಬರ ಮೇಲೊಬ್ಬರು ಎಸೆಯುವ ಈ ಆಚರಣೆಯನ್ನು `ಗೊರೆಹಬ್ಬ’ ಎಂದು ಕರೆಯಲಾಗುತ್ತದೆ.

ದೀಪಾವಳಿ ಹಬ್ಬದ ಮರುದಿನ ಪ್ರತಿ ವರ್ಷ ಈ ಇಲ್ಲಿ ಗ್ರಾಮದ ದೇವರ ಆಸೆಯಂತೆ ಗೊರೆಹಬ್ಬವನ್ನು ಆಚರಿಸಲಾಗುತ್ತದೆ.  ಸಗಣಿ ಗುದ್ದಾಟಕ್ಕೆ ಮೊದಲು ಮತ್ತು ನಂತರದಲ್ಲಿ ಮಾಡುವ ವಿಧಿ ವಿಧಾನಗಳು ಸ್ವಾರಸ್ಯಕರ.

ಬೆಳಿಗ್ಗೆಯಿಂದಲೇ ಮಕ್ಕಳಾದಿಯಾಗಿ ಗ್ರಾಮದ ಪುರುಷರು ಹಸುಗಳು, ಎಮ್ಮೆಗಳು ಹಾಕಿದ ಸಗಣಿಯನ್ನು ಸಂಗ್ರಹಿಸಿ ಊರಿನ ಬೀರಪ್ಪ ದೇವಸ್ಥಾನದ ಹಿಂಭಾಗ ತಂದು ಸುರಿಯುತ್ತಾರೆ.  ನಂತರ ಮಕ್ಕಳು ಅರೆ ಬೆತ್ತಲಾಗಿ ಮನೆ-ಮನೆಗೂ ಹೋಗಿ ದೇವಸ್ಥಾನಕ್ಕಾಗಿ `ಎಣ್ಣೆ – ಬೆಣ್ಣೆ’ ಸಂಗ್ರಹಿಸಿ ತರುತ್ತಾರೆ.

ಇದಾದ ಮೇಲೆ ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿರುವ ಕಾರಪ್ಪನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ವಾಪಸ್ ಬರುತ್ತಾರೆ. ಹಾಗೆ ಬರುವಾಗ ದಾರಿ ಮಧ್ಯೆ ಸಿಗುವ ಕೆರೆಯಲ್ಲಿ ಒಬ್ಬ ವ್ಯಕ್ತಿಗೆ ಕೊಂಡಿಗೆಕಾರನೆಂದು (ಚಾಡಿಕೋರ) ಕರೆದು ಅವನಿಗೆ ನಾಮ ಬಳಿದು ಒಂದು ಬಗೆಯ ಹುಲ್ಲಿನಿಂದ ಮೀಸೆ, ಗಡ್ಡ ಮಾಡಿ ಅವನಿಗೆ ಧರಿಸುತ್ತಾರೆ. ನಂತರ ಅವನನ್ನು ಕತ್ತೆಯ ಮೇಲೆ ಕೂರಿಸಿ ಗ್ರಾಮದ ಬೀರಪ್ಪನ ದೇವಸ್ಥಾನದ ಬಳಿ ಸಗಣಿ ರಾಶಿಯ ಬಳಿಗೆ ಕರೆತರುತ್ತಾರೆ.

ಅಲ್ಲಿ ಅವನ ಮೀಸೆಯನ್ನು ಕಿತ್ತು ಅದನ್ನು ಸಗಣಿ ರಾಶಿಯಲ್ಲಿ ಹೂಳಲಾಗುತ್ತದೆ.  ನಂತರ  ಸಗಣಿ ರಾಶಿ ನಡುವೆ ನಿಂತು ಪೂಜರಪ್ಪನು ಪೂಜೆ ಸಲ್ಲಿಸುತ್ತಾನೆ, ಹೀಗೆ ಪೂಜೆ ಮಾಡುವಾಗಲೇ  ಪೂಜಾರಿಯ ಮೈಮೇಲೆ ದೇವರು ಬಂದು ಸಗಣಿ ಎರಚಾಟಕ್ಕೆ ಚಾಲನೆ ದೊರೆಯುತ್ತದೆ.  ಗ್ರಾಮದ ಎಲ್ಲ ಮಕ್ಕಳು, ಯುವಕರು ಸಗಣಿ ರಾಶಿಯನ್ನು ದೊಡ್ಡ-ದೊಡ್ಡ ಉಂಡೆಗಳನ್ನಾಗಿ ಮಾಡಿ ಅದನ್ನು ಉರುಳಡಿಸುತ್ತಾರೆ.  ಹೀಗೆ ಸ್ವಲ್ಪ ಹೊತ್ತು ನಡೆದ ಮೇಲೆ ಭಾರಿ ಗಾತ್ರದ ಸಗಣಿ ಉಂಡೆಗಳನ್ನು ಮಾಡಿಕೊಂಡು ಒಬ್ಬರ ಮೇಲೊಬ್ಬರು ಎಸೆಯುವ ಕ್ರಿಯೆ ಆರಂಭ. ನಗು-ಕೇಕೆಗಳೊಂದಿಗೆ ಸಗಣಿ ಎಸೆದಾಟ ನಡೆಯುತ್ತದೆ.

ಉಳಿಕೆ ದಿನಗಳಲ್ಲಿ ಯಾರಾದರೂ ಹೀಗೆ ಸಗಣಿಯನ್ನು ಮೈಮೇಲೆ ಎಸೆದರೆ ಭಾರೀ ರಗಳೆಯಾಗುವುದಾದರೂ ಸಹ ಗೊರೆ ಹಬ್ಬದಂದು ಸಗಣಿಯಲಿ ಹೊಡೆಯುವುದು ಮತ್ತು ಹೊಡೆಸಿಕೊಳ್ಳುವುದೇ ಸಡಗರ.   ಈ ಸಗಣಿಯೊಂದಿಗಿನ ಸರಸವನ್ನು ಮಹಿಳೆಯರಾದಿಯಾಗಿ ಹಳ್ಳಿಯ ಎಲ್ಲರೂ ಸುತ್ತಲೂ ನಿಂತು ನೋಡಿ ನಗುತ್ತಾ, ಹುರಿದುಂಬಿಸುತ್ತಾ ಆನಂದಿಸುತ್ತಾರೆ.  ಈ ಸಗಣಿ ಎರಚಾಟದ ಸಂಭ್ರಮದ ಆಚರಣೆಯನ್ನು ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳ ಜನರೂ ಸಹ ಆಗಮಿಸುತ್ತಾರೆ. ಇತರೆ ಗ್ರಾಮದವರು ಸಗಣಿ ಎರಚಾಟದಲ್ಲಿ ಪಾಲ್ಗೊಳ್ಳೂವಂತಿಲ್ಲ, ಕೇವಲ ನೋಡಬಹುದಷ್ಟೇ.

ಗೊರೆ ಹಬ್ಬ ಎಂದು Pರೆಯಲ್ಪಡುವ ಈ ಸಗಣಿ ಎರಚುವ ಆಚರಣೆಯ ಹಿಂದೆ ಒಂದು ಕುತೂಹಲಕರ ಕತೆಯಿದೆ.

ಗ್ರಾಮದ ಹಿರಿಯರ ಹೇಳಿಕೆ ಪ್ರಕಾರ; ನೂರು ವರ್ಷಗಳಿಗೂ ಹಿಂದೆ ಇದೇ ಗುಮಟಾಪುರ ಗ್ರಾಮದ ಕಾಳೇಗೌಡ ಎಂಬುವವರ ಮನೆಯಲ್ಲಿ ಉತ್ತರ ದೇಶದಿಂದ ಬಂದ ದೇವರಗುಡ್ಡನೊಬ್ಬ ಆಳು ಮಗನಾಗಿ ಇದ್ದನಂತೆ.  ಕಾಲಾನಂತರ ಅವನು ಸತ್ತ ಮೇಲೆ ಅವನ ಜೋಳಿಗೆ, ಬೆತ್ತ ಮುಂತದುವೆಲ್ಲವನ್ನೂ  ತಿಪ್ಪೆಗುಂಡಿಗೆ ಬಿಸಾಕಿದರಂತೆ.  ಕೆಲವು ದಿನಗಳ ನಂತರ ಆ ತಿಪ್ಪೆಗುಂಡಿಯ ಬಳಿಗೆ ಒಬ್ಬರು ಎತ್ತಿನ ಗಾಡಿಯನ್ನು ಹೊಡೆದುಕೊಂಡು ಹೋದಾಗ ಅಲ್ಲಿ ಲಿಂಗವೊಂದು ಕಾಣಿಸಿಕೊಂಡಿತಂತೆ. ಗಾಡಿ ಹೊಡೆಯುವಾತ ಅದನ್ನು ಹೆಚ್ಚು ಗಮನಿಸದೆ ಅದರ ಮೇಲೆಯೇ ಗಾಡಿ ಹೊಡೆದುಕೊಂಡು ಹೋಗುತ್ತಾನೆ.  ಗಾಡಿಯ ಚಕ್ರವೊಂದು ಲಿಂಗದ ಮೇಲೆ ಹರಿದಾಗ ಆ ಲಿಂಗದಿಂದ ರಕ್ತ ಬಂದಿತಂತೆ. ಆಗ ಆತ ಹೆದರಿ ಗ್ರಾಮದ ಮುಖಂಡರಿಗೆ ಈ ವಿಷಯ ತಿಳಿಸಿದನಂತೆ.

ವಿಷಯ ತಿಳಿದು ಆತಂಕಗೊಂಡ ಗ್ರಾಮದ ಮುಖಂಡರ ಕನಸಿನಲ್ಲಿ ಕಾಣಿಸಿಕೊಂಡ ಕಾಳೇಗೌಡರ ಮನೆಯಲ್ಲಿ ಜೀತಕ್ಕಿದ್ದ ದೇವರಗುಡ್ಡನು, ದೀಪಾವಳಿ ಹಬ್ಬದ ಮರುದಿನ ಗೊರೆ ಹಬ್ಬ ಮಾಡಿದರೆ ಈ ಅಪಚಾರಕ್ಕೆ  ಪರಿಹಾರ ಲಭ್ಯವಾಗುವುದು ಎಂದು ಹೇಳಿದನಂತೆ. ಅದರಂತೆ ನಡೆಯಲು ಒಪ್ಪಿಕೊಂಡ ಗ್ರಾಮಸ್ಥರು ಆ  ಲಿಂಗ ಕಾಣಿಸಿಕೊಂಡ ತಿಪ್ಪೇಗುಂಡಿಯ ಜಾಗದಲ್ಲಿ ಬೀರಪ್ಪ ದೇವರ ಗುಡಿಯನ್ನು ಕಟ್ಟುತ್ತಾರೆ. ಹಾಗೆಯೇ ಗ್ರಾಮಸ್ಥರು ಪ್ರತಿ ವರ್ಷ ಶ್ರದ್ಧೆಯಿಂದ ಗೊರೆ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.

ಇದು ಈ ಆಚರಣೆಯ ಹಿಂದಿರುವ ಕತೆ. ಇಲ್ಲಿ ಜೀತಗಾರನೊಬ್ಬನ ಪ್ರತಿಭಟನೆಯ ಸ್ವರೂಪವನ್ನು ಕಾಣಬಹುದು.  ಅಲ್ಲದೆ ಸಗಣಿ ಗುದ್ದಾಟದಲ್ಲಿ ಪಾಲ್ಗೊಂಡರೆ ಗಾಯ, ನೋವು ಎಲ್ಲ ವಾಸಿಯಾಗುತ್ತದೆ ಎಂಬ ನಂಬಿಕೆಯನ್ನೂ ಕಾಣಬಹುದು. ಹಾಗೂ ಪೂರ್ವಿಕರು ಮಾಡಿಕೊಂಡು ಬಂದ ಹಬ್ಬವನ್ನು ಬಿಡಬಾರದೆಂಬ ಭಾವನೆಗಳು ಈ ವಿಶಿಷ್ಟ ಆಚರಣೆಯನ್ನು ಜೀವಂತವಾಗಿರಿಸಿವೆ.