ಮೊಣಕಾಲುದ್ದದ ಖಾದಿ ಪಂಚೆ ಹೆಗಲಿಗೊಂದು ಖಾದಿ ಚೀಲ, ಕೈಯಲ್ಲೊಂದು ನೂಲುವ ತಕಲಿ ತೇಜಃಪುಂಜವಾದ ಈ ವ್ಯಕ್ತಿಯನ್ನು ಯಾರಾದರೂ ಸಾವಿರಾರು ಜನರ ಮಧ್ಯದಲ್ಲೂ ಗುರುತಿಸಬಹುದು ಇವರೇ ತಿಮ್ಮಪ್ಪ  ಮಾಸ್ತರರು!

’ಕರ್ನಾಟಕ ಗಾಂಧಿ’ ಎಂದು ಹೆಸರು ಪಡೆದ ತಿಮ್ಮಪ್ಪ ನಾಯಕ ಮಾಸ್ತರು ತುಂಬ ಸರಳ ಜೀವಿ.  ದೇಶಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು ಗಾಂಧಿತತ್ವದ ದೀಕ್ಷೆಯನ್ನು ಕೈಗೊಂಡ ತ್ಯಾಗಿ.

ದೇಶಸೇವೆಗಾಗಿ, ದೀನ ದಲಿತರ ಪರಿಹಾರಕ್ಕಾಗಿ, ಹರಿಜನರ ಉನ್ನತಿಗಾಗಿ ತಮ್ಮ ದೇಹವನ್ನು ಗಂಧದ ಕೊರಡಿನಂತೆ ತೇದು ಸವೆಸಿದವರು. ತಿಮ್ಮಪ್ಪ ಮಾಸ್ತರರು ದೇಶಕ್ಕಾಗಿ ದುಡಿದ ಅಸಂಖ್ಯರಲ್ಲಿ ಅಗ್ರಗಣ್ಯರು.

ಕರ್ನಾಟಕಕ್ಕೇ ಹೆಸರು ತಂದ ಪುಣ್ಯ ಪುರುಷ!

ಬಾಲ್ಯ

ತಿಮ್ಮಪ್ಪ ಮಾಸ್ತರರ ಜನ್ಮ ಸಿದ್ಧಾಪುರದಲ್ಲಿ ೧೮೯೭ರಲ್ಲಾಯಿತು. ತಂದೆ ಶ್ರೀನಿವಾಸನಾಯಕರು ತುಂಬಾ ಧರ್ಮಿಷ್ಠರು. ಅವರದು ಸಂಪ್ರದಾಯ ಶೀಲ ಮನೆತನ. ದೇವರಲ್ಲಿ ಅಪಾರ ಭಕ್ತಿ. ವ್ಯವಹಾರದಲ್ಲಿ ಸರಳರು ಹಾಗೂ ಪ್ರಾಮಾಣಿಕರು. ತಾಯಿಗೆ ಓದು ಬರಹ ಬಾರದಿದ್ದರೂ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿದ್ದರು.

ತಿಮ್ಮಪ್ಪ ಮನೆಯಲ್ಲಿ ಎಲ್ಲರಿಗಿಂತ ಚಿಕ್ಕವನಾಗಿ, ತಂದೆ-ತಾಯಿಯ ಪ್ರೀತಿಯ ಜೊತೆಗೆ, ಅಣ್ಣಂದಿರಿಬ್ಬರ ಪ್ರೀತಿಯಲ್ಲಿ ಮುದ್ದಿನಿಂದ ಬೆಳೆದರು.

ತಿಮ್ಮಪ್ಪನ ಮನೆತನಕ್ಕೆ ಬಡತನ ಹೊಸದಲ್ಲದಿದ್ದರೂ ಎಲ್ಲರ ಮನಸ್ಸು ಶ್ರೀಮಂತವಾಗಿತ್ತು. ತಿಮ್ಮಪ್ಪನಿಗೆ ವಿದ್ಯಾರ್ಜನೆಯ ಹಸಿವು ಬಾಲ್ಯದಿಂದಲೂ ಇತ್ತು. ಪ್ರತಿ ಪರೀಕ್ಷೆಯಲ್ಲೂ ಅವನಿಗೆ ಮೊದಲ ಸ್ಥಾನ ಕಟ್ಟಿಟ್ಟಿದ್ದೇ.

ತಿಮ್ಮಪ್ಪನಲ್ಲಿ ವಿದ್ಯೆಯ ಆಸಕ್ತಿ ಒಂದೇ ಅಲ್ಲ ಜೊತೆಗೆ ಧಾರ್ಮಿಕ ಮನೋಭಾವನೆ ಇತ್ತು. ಭಕ್ತಿಯಲ್ಲೂ ಮನಸ್ಸು ಒಲಿದಿತ್ತು. ಅವನಿಗೆ ಓದಿನ ಹಸಿವು ಹೆಚ್ಚಂದೇ ಆ ಚಿಕ್ಕ ಪ್ರಾಯದಲ್ಲೇ ರಾಮಾಯಣ, ಮಹಾಭಾರತ, ಹರಿಶ್ಚಂದ್ರ ಕಾವ್ಯ, ನಳಚರಿತ್ರೆ, ಧ್ರುವ ಚರಿತ್ರೆಯಂಥ ಗ್ರಂಥಗಳನ್ನು ಓದಿ ಮುಗಿಸಿದ್ದರು. ಕೈಯಲ್ಲಿ ಪುಸ್ತಕ ಸಿಕ್ಕರೆ ಸಾಕು, ಹಸಿವು – ನಿದ್ದೆಯ ನೆನಪೂ ಬರುತ್ತಿರಲಿಲ್ಲ.

ಶಿಕ್ಷಣ

ಕನ್ನಡ ಏಳನೆಯ ತರಗತಿಯವರೆಗೆ ಸಿ‌ದ್ಧಾಪುರದಲ್ಲಿ ಓದು ಸಾಗಿತು. ಮುಂದೆ ಓದುವುದಕ್ಕೆ ಆ ಊರಿನಲ್ಲಿ ಆಸ್ಪದವಿರಲಿಲ್ಲ. ಕುಮಟೆಗೆ ಹೋಗಿ ಓದಲು ಹಣದ ಅನುಕೂಲತೆಯೂ ಇರಲಿಲ್ಲ. ಇನ್ನು ಓದು ನಿಲ್ಲಿಸಬೇಕು ಎನ್ನುವ ಪ್ರಸಂಗ ಬಂದಾಗ, ದೈವಾನುಕೂಲ ಒದಗಿ ಬಂತು. ನೆರೆಯ ಶ್ರೀಮಂತ ವಿದ್ಯಾರ್ಥಿಯೊಡನೆ ಸಿದ್ಧಾಪುರದಲ್ಲೇ ಮತ್ತೆರಡು ವರ್ಷಗಳ ಶಿಕ್ಷಣವನ್ನು ಪೂರೈಸಿ ಮುಂದೆ, ಪ್ರೌಢಶಾಲಾ ಶಿಕ್ಷಣಕ್ಕಾಗಿ ಕುಮಟೆಯ ನ್ಯೂ ಇಂಗ್ಲಿಷ್ ಸ್ಕೂಲು (ಈಗಿನ ಗಿಬ್ ಹೈಸ್ಕೂಲ್) ಸೇರಿದರು. ಅಲ್ಲಿ ಮೆಟ್ರಿಕ್ ಮುಗಿಯಿತು.

ತಿಮ್ಮಪ್ಪ ಮುಂದಿನ ಶಿಕ್ಷಣಕ್ಕಾಗಿ ಪುಣೆಗೆ ಬಂದರು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿ.ಎ. ಮುಗಿಸಿ, ಎಂ.ಎ.ಗಾಗಿ ಮುಂಬಯಿಗೆ ಹೋದರು. ಆದರೆ ಅನಾರೋಗ್ಯದಿಂದಾಗಿ ಆಸೆ ಪೂರೈಸಿಕೊಳ್ಳಲು ಮತ್ತೆ ಮನೆಗೆ ಮರಳಬೇಕಾಯಿತು.

ತಿಮ್ಮಪ್ಪ ಕುಮಟೆಯ ಶಾಲೆಯಲ್ಲಿ ಇರುವಾಗಲೇ ದೇಶದಲ್ಲಿ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಪ್ರಾರಂಭವಾಗಿತ್ತು. ಅನೇಕ ಮಂದಿ ಹಿರಿಯರು ಹೋರಾಟಕ್ಕೆ ಧುಮುಕಿದ್ದರು.

ಪುಣೆಯಿಂದ ಹೊರಡುತ್ತಿದ್ದ ಮರಾಠಿ ಪತ್ರಿಕೆ ’ಕೇಸರಿ’ ಯಲ್ಲಿ ಪ್ರಕಟವಾಗುತ್ತಿದ್ದ ಲೋಕಮಾನ್ಯ ತಿಲಕರ ಲೇಖನಗಳು ಜನರಲ್ಲಿ ದೇಶಪ್ರೇಮ ಹುಟ್ಟಿಸುತ್ತಿತ್ತು. ಬಾಲಕ ತಿಮ್ಮಪ್ಪನಿಗೆ ಇವುಗಳಲ್ಲೆಲ್ಲ ಆಸಕ್ತಿ, ಕುತೂಹಲ, ’ಸ್ವಾತಂತ್ರ‍್ಯ ನಮ್ಮ ಜನ್ಮಸಿದ್ಧ ಹಕ್ಕು’ ಎಂಬ ತಿಲಕರ ನುಡಿ ಬಾಲಕ ತಿಮ್ಮಪ್ಪನ ನರನರಗಳಲ್ಲಿ ಸ್ವದೇಶಾಭಿಮಾನ ಹುಟ್ಟಿಸುತ್ತಿತ್ತು. ಅವರಲ್ಲೂ ದೇಶಕ್ಕಾಗಿ ತಾನು ದುಡಿಯಬೇಕು ಎನ್ನುವ ಆಸೆ ಮೊಳಕೆಯೊಡೆದಾಗ, ಅದಕ್ಕೆ ನೀರೆರೆದು ಪೋಷಿಸಿದರು ಅವರ ಶಾಲೆಯ ಮುಖ್ಯೋಪಾಧ್ಯಾಯ ನಾರಾಯಣ ಕಾಮತರು ಹಾಗೂ ಅಧ್ಯಾಪಕ ಮಾಧವ ಶ್ಯಾನುಭಾಗರು.

ತಿಮ್ಮಪ್ಪ ಪುಣೆಯಲ್ಲಿ ಬಿ.ಎ. ವ್ಯಾಸಂಗ ಮಾಡುತ್ತಿದ್ದಾಗ ತಿಲಕ ಹಾಗೂ ಗೋಖಲೆಯವರ ಭಾಷಣದಿಂದಲೂ ಅವರ ಚಟುವಟಿಕೆಗಳಿಂದಲೂ ಹೆಚ್ಚು ಪ್ರಭಾವಿತರಾಗಿದ್ದರು. ಇದೇ ಸಮಯದಲ್ಲಿ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ಬಗ್ಗೆ ಹೆಚ್ಚು ಓದಿ ಅವರು ಆಧ್ಯಾತ್ಮವತ್ತಲೂ ಒಲವು ಹೆಚ್ಚಿಸಿಕೊಂಡರು.

ಶಿಕ್ಷಕರಾಗಿ

೧೯೨೦ರಲ್ಲಿ ಅನಾರೋಗ್ಯದ ಮೂಲಕ ಎಂ.ಎ. ವ್ಯಾಸಂಗ ಅರ್ಧಕ್ಕೆ ಬಿಟ್ಟು ಊರು ಸೇರಿದ ತಿಮ್ಮಪ್ಪನಾಯಕರು ಚೇತರಿಸಿಕೊಂಡ ನಂತರ ಸಿರಸಿಯ ಆಂಗ್ಲೊ ವರ್ನಾಕ್ಯುಲರ್ ಶಾಲೆಯ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡರು. ಇದೇ ಕಾಲಕ್ಕೆ ಸ್ವಾತಂತ್ರ‍್ಯ ಹೋರಾಟದ ಮುಂದಾಳತ್ವವನ್ನು ಗಾಂಧೀಜಿಯವರು ವಹಿಸಿಕೊಂಡಿದ್ದರು. ಎಲ್ಲ ಕಡೆಯಲ್ಲೂ ಅಸಹಕಾರ ಚಳವಳಿ ಬ್ರಿಟಿಷರನ್ನು ಅಲ್ಲಾಡಿಸುತ್ತಿತ್ತು.

’ವಕೀಲರು, ವಿದ್ಯಾರ್ಥಿಗಳು, ಅಧಿಕಾರಿಗಳು ನ್ಯಾಯಾಲಯಗಳನ್ನು, ಶಾಲೆಗಳನ್ನು, ಕಚೇರಿಗಳನ್ನು ಬಿಟ್ಟು ಬನ್ನಿ, ದೇಶಕ್ಕಾಗಿ ಹೋರಾಡಿ’ ಎಂದು ಗಾಂಧೀಜಿ ಕರೆ ನೀಡಿದರು. ಸಾವಿರಾರು ಜನರು ಅವರನ್ನು ನಾಯಕರನ್ನಾಗಿ ಒಪ್ಪಿ ಆಂದೋಳನದಲ್ಲಿ ಭಾಗವಹಿಸುತ್ತಿದ್ದರು.

ಮೊದಮೊದಲು ತಿಮ್ಮಪ್ಪ ಮಾಸ್ತರರಿಗೆ ವಿದ್ಯಾರ್ಥಿಗಳು ಶಾಲೆ ಬಿಟ್ಟು ರಾಜಕೀಯದಲ್ಲಿ ಭಾಗವಹಿಸುವುದು ಸರಿಯಲ್ಲ ಎನ್ನಿಸಿತು. ರಾಜಕೀಯಕ್ಕೂ ವಿದ್ಯಾರ್ಥಿಗಳಿಗೂ ಏನು ಸಂಬಂಧ ಎಂದುಕೊಂಡು ತಮ್ಮ ಪಾಡಿಗೆ ಶಾಲೆಯಲ್ಲಿ ಪಾಠ ಹೇಳುತ್ತಿದ್ದರು. ಅವರೊಬ್ಬ ದಕ್ಷ ಶಿಕ್ಷಕರಾಗಿದ್ದರು.

ಆದರೆ ಅವರ ಈ ಧೋರಣೆ ಬಹುಕಾಲ ಉಳಿಯಲಿಲ್ಲ. ’ಯಂಗ್ ಇಂಡಿಯಾ;’ ಪತ್ರಿಕೆಯಲ್ಲಿ ಪ್ರಕಟವಾದ ಗಾಂಧೀಜಿಯವರ ಒಂದು ಲೇಖನ ತಿಮ್ಮಪ್ಪ ಮಾಸ್ತರರ ಮೇಲೆ ಅತ್ಯಂತ ಪ್ರಭಾವ ಬೀರಿತು. ಅವರಿಗೆ ಸರ್ಕಾರಿ ನೌಕರಿ ದೊರೆತು ಒಂದೇ ವರ್ಷವಾಗಿತ್ತು. ಸ್ವಾತಂತ್ರ‍್ಯ ಹೋರಾಟದಲ್ಲಿ ದೇಶದಲ್ಲೆಲ್ಲ ಕಾವೇರುತ್ತಿರುವಾಗ, ತಾನು ಸರ್ಕಾರಿ ಶಾಲೆಯಲ್ಲಿ ದುಡಿಯುತ್ತಿರುವುದು ತಪ್ಪಲ್ಲವೆ ಎನ್ನಿಸಿತು. ಅವರು ಅಂದೇ ತಮ್ಮ ನೌಕರಿಗೆ ರಾಜೀನಾಮೆ ಇತ್ತರು. ಉಸಿರಿರುವವರೆಗೆ ದೇಶಕ್ಕಾಗಿ ಈ ದೇಹ ಮೀಸಲು ಎಂದು ತಮ್ಮಲ್ಲೇ ಪ್ರತಿಜ್ಞೆ ಮಾಡಿಕೊಂಡರು. ತ್ಯಾಗದ ಹೆಜ್ಜೆಯಲ್ಲಿ ಅದು ಅವರ ಮೊದಲನೆಯ ಮೆಟ್ಟಿಲು !

ತಿಮ್ಮಪ್ಪ ಮಾಸ್ತರರು ಶಾಲೆ ಬಿಟ್ಟು ಹೊರ ಬರುವಾಗ ಅವರೊಡನೆ ಅನೇಕ ವಿದ್ಯಾರ್ಥಿಗಳು ಶಾಲೆಗೆ ಶರಣು ಹೊಡೆದರು. ಈ ವಿದ್ಯಾರ್ಥಿಗಳನ್ನೆಲ್ಲ ತಿಮ್ಮಪ್ಪ ಮಾಸ್ತರರು ತಮ್ಮ ಸ್ನೇಹಿತನ ಮಾಳಿಗೆಗೆ ಕರೆದೊಯ್ದರು.

ಸಿರಸಿಯ ಹೊದಿಕೆ ಮಾಸ್ತರರು ರಾಷ್ಟ್ರೀಯ ಶಾಲೆಯೊಂದನ್ನು ಅದಾಗಲೇ ಪ್ರಾರಂಭಿಸಿದ್ದರು. ಹೊದಿಕೆ ಮಾಸ್ತರರು ತಿಮ್ಮಪ್ಪ ಮಾಸ್ತರರನ್ನು ’ನಮ್ಮ ಶಾಲೆಗೆ ಬನ್ನಿ’ ಎಂದು ಆಮಂತ್ರಿಸಿದರು. ಅವರು ತಮ್ಮೊಡನೆ ಬಂದ ವಿದ್ಯಾರ್ಥಿಗಳನ್ನೂ ಅದೇ ಶಾಲೆಯಲ್ಲಿ ಸೇರಿಸಿಕೊಂಡು ಸಂತೋಷದಿಂದ ಪಾಠ ಹೇಳಲು ಮುಂದಾದರು. ತಿಮ್ಮಪ್ಪ ಮಾಸ್ತರರು ಲೇಖನಗಳ ಮೂಲಕ ಚಳವಳಿ ಸೇರಿದವರು ಈಗ  ನೇರವಾಗಿ ಭಾಗವಹಿಸಲಾರಂಭಿಸಿದರು.

ಶಾಲೆಯ ಉಳಿದ ಅಧ್ಯಾಪಕರಂತೆ ತಿಮ್ಮಪ್ಪ ಮಾಸ್ತರರೂ ಶಾಲೆಯ ರಜಾ ದಿನಗಳಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಜನರಲ್ಲಿ ರಾಷ್ಟ್ರೀಯ ವಿಚಾರಗಳನ್ನು ಮನಮುಟ್ಟುವಂತೆ ಭಾಷಣ ಮಾಡಲಾರಂಭಿಸಿದರು. ಸರ್ಕಾರದ ಕಣ್ಣು ಕೆಂಪಾಯಿತು. ಅವರಿಗೆ ಆಗಾಗ ಎಚ್ಚರಿಕೆ ಕೊಟ್ಟಿತು. ಆದರೆ ತಿಮ್ಮಪ್ಪ ಮಾಸ್ತರರು ಅದಕ್ಕೆ ಕಿವಿಗೊಡಲಿಲ್ಲ. ದೇಶಭಕ್ತಿಯ ಹಾಡುಗಳು, ಮೆರವಣಿಗೆ ಎಂದಿನಂತೆ ಸಾಗಿದ್ದವು.

ಸೆರೆಮನೆಯಲ್ಲಿ

ಇದೇ ಸಮಯದಲ್ಲಿ ಸ್ವಾಮಿ ಧರ್ಮಾನಂದ ಎಂಬುವರು ಜನರಲ್ಲಿ ಜಾಗೃತಿ ಉಂಟು ಮಾಡಲೆಂದು ಸಿರಸಿಗೆ ಬಂದರು. ಅವರ ಭಾಷಣದ ನಂತರ ತಿಮ್ಮಪ್ಪ ಮಾಸ್ತರರ ಭಾಷಣವಿತ್ತು. ಕೆಲವು ದಿನಗಳ ಆನಂತರ ಸರ್ಕಾರದ ಆಜ್ಞೆ ಬಂತು. ತಿಮ್ಮಪ್ಪ ಮಾಸ್ತರರಿಗೆ ಒಂದು ವರ್ಷ ಸಶ್ರಮ ಶಿಕ್ಷೆಯಾಯ್ತು. ಇದು ನಡೆದದ್ದೂ ೧೯೨೨ರಲ್ಲಿ. ಅವರನ್ನು ಕಾರವಾರದ ಕಾರಾಗೃಹದಲ್ಲಿ ಇಡಲಾಯಿತು.

ಆ ಕಾಲದಲ್ಲಿ ರಾಜಕೀಯ ಖೈದಿಗಳನ್ನು ತುಂಬ ಹೀನವಾಗಿ, ಕ್ರೂರವಾಗಿ ಕಾಣಲಾಗುತ್ತಿತ್ತು. ಅವರಿಂದ  ಕಷ್ಟವಾದ ಕೆಲಸಗಳನ್ನು ಮಾಡಿಸುತ್ತಿದ್ದರು. ಕುಟ್ಟುವುದು, ಬೀಸುವುದು, ಕಲ್ಲು ಕುಟ್ಟಿ ಜಲ್ಲಿ ಮಾಡುವುದು – ಇಂಥ ಹಲವಾರು ಕೆಲಸಗಳು ಖೈದಿಗಳಿಗಾಗಿ ಕಾದಿರುತ್ತಿದ್ದವು. ತಿಮ್ಮಪ್ಪ ಮಾಸ್ತರರ ಮನಸ್ಸು ದೃಢವಾದದ್ದೆ. ಆದರೆ ಅವರ ಆರೋಗ್ಯ ತುಂಬ ಸೂಕ್ಷ್ಮವಾಗಿತ್ತು. ಅವರು  ಇಂಥ ಕಷ್ಟದ ಕೆಲಸಗಳನ್ನು ಮಾಡಬೇಕಾಯಿತು. ಗೋಧಿ ಬೀಸಿ ಬೀಸಿ ಕೈಗಳಲ್ಲಿ ಗುಳ್ಳೆಗಳು ಏಳುತ್ತಿದ್ದವು. ಗುಳ್ಳೆ ಒಡೆದು ನೀರು ಸೋರುತ್ತಿತ್ತು. ನೋವಾಗುತ್ತಿತ್ತು. ಆದರೂ ಅವರು ಬೀಸುವ ಕೆಲಸ ಮಾಡಲೇಬೇಕಾಗಿತ್ತು. ತಮಗೆ ಎಷ್ಟೇ ತೊಂದರೆಯಾದರೂ ಯಾರಿಗೂ ಹೇಳದೆ, ಮುಖದಲ್ಲಿ ನೋವನ್ನು ತೋರ್ಪಡಿಸದೆ ಕೈಹಿಡಿದ ಕೆಲಸ ಪೂರ್ಣ ಮಾಡುತ್ತಿದ್ದರು. ಕಕ್ಕಸನ್ನು ಸ್ವಚ್ಛ ಮಾಡುವ ಕೆಲಸವನ್ನೂ ಮಾಡಿದರು !

ಗಾಂಧೀಜಿಯ ಆಶ್ರಮದಲ್ಲಿ

ಒಂದು ವರ್ಷದ ಕಾರಾಗೃಹವಾಸ ಮುಗಿಸಿ ತಿಮ್ಮಪ್ಪ ಮಾಸ್ತರರು ಹೊರಗೆ ಬಂದಾಗ ಚಳವಳಿಯ ಕಾವು ಸ್ವಲ್ಪ ತಣ್ಣಗಾಗಿತ್ತು. ರಾಷ್ಟ್ರೀಯ ಶಾಲೆಯ ಪ್ರಾಥಮಿಕ ವರ್ಗಗಳನ್ನು ಮುಚ್ಚಲಾಗಿತ್ತು. ಶಾಲೆಯ ಪಾಠಗಳ ಜೊತೆಯಲ್ಲಿ ಮಕ್ಕಳಿಗೆ ತರಕಾರಿ ಬೆಳೆಸುವುದನ್ನು  ಕಲಿಸಿ ಕೊಡಲಾಗುತ್ತಿತ್ತು. ಇದು ಎಷ್ಟೋ ಪಾಲಕರಿಗೆ ಹಿಡಿಸದೇ ಇದ್ದುದರಿಂದ, ವಿದ್ಯಾರ್ಥಿಗಳ ಸಂಖ್ಯೆ ಮತ್ತೂ ಕಡಿಮೆಯಾದುದರಿಂದ, ಕೆಲ ಸಮಯದವರೆಗೆ ಶಾಲೆ ಮುಚ್ಚಲೇಬೇಕಾಯಿತು.

ಆನಂತರ ಗಾಂಧೀಜಿಯವರ ಸಾಬರಮತಿ ಆಶ್ರಮಕ್ಕೆ ಯಾಕೆ ಹೋಗಬಾರದು ಎಂದು ತಿಮ್ಮಪ್ಪ ಮಾಸ್ತರರು ಯೋಚಿಸಿದರು. ಗಾಂಧೀಜಿಯವರ ಸನ್ನಿಧಿಯಲ್ಲಿ, ಅವರ ತರಬೇತಿಯಲ್ಲಿ ಹೆಚ್ಚಿನ ಶಕ್ತಿ ತನಗೆ ಖಂಡಿತ ಸಿಗುತ್ತದೆ ಎನ್ನುವ ಭರವಸೆ ಮಾಸ್ತರರಲ್ಲಿ ಮೂಡಿತ್ತು.

೧೯೨೪ರಲ್ಲಿ ಮಾಸ್ತರರು ಸಾಬರಮತಿ ಆಶ್ರಮಕ್ಕೆ ಪ್ರಯಾಣ ಬೆಳೆಸಿದರು. ಒಂದು ವರ್ಷ ಕಾಲ ಅವರು ಅಲ್ಲಿಯೇ ಇದ್ದು ನೂಲುವುದು, ನೇಯುವುದನ್ನು ಕಲಿತರು. ಅದೇ ಸಮಯದಲ್ಲಿ ಗಾಂಧೀಜಿಯವರು ಖಾದಿ ಕಾರ್ಯದ ಸಂಘಟನೆಗಾಗಿ ದೇಶದ ತುಂಬ ಸಂಚಾರ ಕೈಗೊಂಡಿದ್ದರು. ಆಗಾಗ ಆಶ್ರಮಕ್ಕೂ ಬಂದು ಹೋಗುತ್ತಿದ್ದರು.

ಸೆರೆಮನೆಯಲ್ಲಿ ತಿಮ್ಮಪ್ಪ ನಾಯಕರು ಗೋಧಿ ಬೀಸುತ್ತಿರುವುದು

ಗಾಂಧೀಜಿಯವರ ವ್ಯಕ್ತಿತ್ವ, ನಡೆ-ನುಡಿ, ಅವರ ಆಧ್ಯಾತ್ಮಿಕ ಜೀವನ ತಿಮ್ಮಪ್ಪ ಮಾಸ್ತರರ ಮೇಲೆ ತುಂಬ ಪ್ರಭಾವ ಬೀರಿತು. ಮೊದಲೇ ಗಾಂಧೀವಾದಿಗಳಾಗಿದ್ದ ತಿಮ್ಮಪ್ಪ ಮಾಸ್ತರರು ಈಗ ಪೂರ್ಣ ಗಾಂಧೀ ಭಕ್ತರಾಗಿ ಬಿಟ್ಟರು. ಸಾಬರಮತಿಯಲ್ಲಿ ಮಾಸ್ತರರು ನೂಲುವುದು, ನೇಯುವುದನ್ನು ಕಲಿತರಾದರೂ ಅದರಲ್ಲಿ ಅವರಿಗೆ ಸಾಕಷ್ಟು ಪ್ರಗತಿ ಸಾಧಿಸಲಾಗಲಿಲ್ಲ. ಅವರನ್ನು ಹೆಚ್ಚು ಆಕರ್ಷಿಸಿದ್ದು ಸಾಬರಮತಿಯ ಪುಸ್ತಕ ಭಂಡಾರ. ಮಾಸ್ತರರ ಓದಿನ ಹಸಿವೆಗೆ ಪುಸ್ತಕ ಆಹಾರವಾಯಿತು. ಅವರ ಜ್ಞಾನ ಹೆಚ್ಚಾದಂತೆ ಆಧ್ಯಾತ್ಮ ಮತ್ತು ದೇಶಸೇವೆಯತ್ತ ಅವರ ಒಲವು ಹೆಚ್ಚಾಯಿತು. ಸಾಬರಮತಿ ಆಶ್ರಮದಲ್ಲಿದ್ದ ಶಿಸ್ತು, ಸಂಯಮ, ನಿಯಮ ತಿಮ್ಮಪ್ಪ ಮಾಸ್ತರರ ಜೀವನಕ್ಕೊಂದು ಸ್ಫುಟವಾದ ರೂಪ ಕೊಟ್ಟವು. ಆಶ್ರಮದಿಂದ ಹೊರ ಬರುವಾಗ ಮಾಸ್ತರರ ಮನಸ್ಸು ಪುಟಕ್ಕಿಟ್ಟ ಚಿನ್ನದಂತಾಗಿತ್ತು.

ಕುಮರಿ ಆಶ್ರಮ

೧೯೨೬ರಲ್ಲಿ ಸಾಬರಮತಿ ಆಶ್ರಮದಿಂದ ಶಿಕ್ಷಣ ಪಡೆದು ಹೊರಬಂದ ತಿಮ್ಮಪ್ಪ ಮಾಸ್ತರರು, ಬೆಳಗಾವಿ ಜಿಲ್ಲೆಯ ಹುದಲಿಯ ಬಳಿಯ ಕುಮರಿ ಆಶ್ರಮಕ್ಕೆ ಬಂದರು.

ಸಾಬರಮತಿ ಆಶ್ರಮದ ನಿಯಮದ ಪ್ರಕಾರ ಅಲ್ಲಿ ತರಬೇತಿ ಹೊಂದಿದವರು ಬೇರೆ ಆಶ್ರಮದಲ್ಲಿ ಸೇವೆ ಸಲ್ಲಿಸಬೇಕು. ಈ ಹುದಲಿ ಆಶ್ರಮವು ’ಕರ್ನಾಟಕದ ಹುಲಿ’ ಎನ್ನಿಸಿಕೊಂಡಿದ್ದ ಗಂಗಾಧರರಾವ್ ದೇಶಪಾಂಡೆ ಅವರಿಂದ ಸ್ಥಾಪಿಸಲ್ಪಟ್ಟಿತ್ತು. ಕೆಲಕಾಲ ತಿಮ್ಮಪ್ಪ ಮಾಸ್ತರರು ಹುದಲಿಯಲ್ಲಿ ರಾಷ್ಟ್ರೀಯ ಶಾಲೆ ನಡೆಸಿದರು. ಮುಂದೆ ಒಂದು ವರ್ಷ ಕುಮರಿ ಆಶ್ರಮದ ಆಶ್ರಯ ವಾಸಿಗಳಿಗೆ ಗಾಂಧಿ ವಿಚಾರದಲ್ಲಿ ಶಿಕ್ಷಣ ಕೊಟ್ಟರು.

ಹೀಗೆ ಎರಡು ವರ್ಷ ಸೇವೆಗೈದ ತಿಮ್ಮಪ್ಪ ಮಾಸ್ತರರು ೧೯೨೮ರಲ್ಲಿ ಪುನಃ ತಮ್ಮ ಜಿಲ್ಲೆಗೆ ಬಂದು ಸಿರಸಿಯಲ್ಲಿ ನಿಂತು ಖಾದಿ ಪ್ರಚಾರ ಆರಂಭಿಸಿದರು.

ಖಾದಿ ಪ್ರಚಾರಕ್ಕಾಗಿ ಅವರು ಖಾದಿಯ ದೊಡ್ಡ ದೊಡ್ಡ ಗಂಟುಗಳನ್ನು ಹೊತ್ತುಕೊಂಡು ಹಳ್ಳಿ ಹಳ್ಳಿಗೆ ಹೋಗಿ ಬರುತ್ತಿದ್ದರು. ಚರಕವನ್ನು ಉಪಯೋಗಿಸುವುದು ಹೇಗೆ, ನೂಲುವುದು ಹೇಗೆಂದು ಜನತೆಗೆ ಮನದಟ್ಟಾಗುವಂತೆ ಹೇಳಿಕೊಡುತ್ತಿದ್ದರು.

ಮತ್ತೆ ಅವರು ಹರಿಜನರ ಉನ್ನತಿಗಾಗಿ ತಾನು ಏನಾದರೂ ಅಲ್ಪ ಸೇವೆ ಸಲ್ಲಿಸಬೇಕೆಂದು ನಿರ್ಧಾರ ಮಾಡಿದರು.

ಮೊಗಟಾದ ಹರಿಜನ ಕೇರಿಯಲ್ಲಿ

ಕೆಲಕಾಲ ಸಿರಸಿಯಲ್ಲಿ ಕಳೆದ ತಿಮ್ಮಪ್ಪ ಮಾಸ್ತರರು ಆನಂತರ ಅಂಕೋಲಾ ತಾಲೂಕಿನ ಮೊಗಟಾ ಎನ್ನುವ ಗ್ರಾಮಕ್ಕೆ ಬಂದರು. ಅಲ್ಲಿಯ ಹರಿಜನರ ಕಷ್ಟದ ಜೀವನ ಕಂಡು ತುಂಬ ಸಂಕಟಪಟ್ಟರು. ಅವರ ಅಸಹಾಯಕತೆ, ಅನಾನುಕೂಲತೆ, ದಾರಿದ್ರ‍್ಯ, ಅಜ್ಞಾನ ಕಂಡಾಗಲಂತೂ ತಿಮ್ಮಪ್ಪ ಮಾಸ್ತರರು ತಮ್ಮಲ್ಲೇ ನೊಂದುಕೊಂಡರು.

ಅಲ್ಲಿಯ ಹರಿಜನರಿಗೆ ಅವರದೇ ಆದ ಸ್ಥಳವಿರಲಿಲ್ಲ. ತಮ್ಮ ಒಡೆಯರ ಭೂಮಿಯಲ್ಲೇ ಮನೆಕಟ್ಟಿ ಅವರ ಜೀತದಾಳುಗಳಾಗಿ ಅವರ ಗುಲಾಮರಂತಿದ್ದರು. ಈ ಹರಿಜನರಿಗೆ ಸ್ವಚ್ಛತೆಯ ಕಲ್ಪನೆ ಇರಲಿಲ್ಲ. ಎಲ್ಲೆಲ್ಲೂ ಕಸ, ಕೊಳಕು, ಅವರ ದುಡಿತದ ಹಣವೆಲ್ಲ ಕುಡಿತದ ದುಶ್ಚಟದಲ್ಲಿ ಪೋಲಾಗುತ್ತಿತ್ತು. ಕುಡಿತದ ಅಮಲಿನಲ್ಲಿ ಹೆಂಗಸರನ್ನು, ಮಕ್ಕಳನ್ನು ದನಕ್ಕೆ ಬಡಿದಂತೆ ಬಡಿಯುತ್ತಿದ್ದರು.

ಮೈ ಮುಚ್ಚಲು ಬಟ್ಟೆ ಇಲ್ಲದ, ಹೊಟ್ಟೆಗೆ ಹಿಟ್ಟಿಲ್ಲದ ಹೆಂಗಸರು, ಮಕ್ಕಳ ಗೋಳು ತಿಮ್ಮಪ್ಪ ಮಾಸ್ತರರ ಕಣ್ಣಲ್ಲಿ ಕೋಡಿ ಹರಿಸಿತು.

ಇವೆಲ್ಲದರ ನಿವಾರಣೆಗಾಗಿ ತಿಮ್ಮಪ್ಪ ಮಾಸ್ತರರು ಮೊದಲು ತಾವೇ ಹೋಗಿ ಈ ಹರಿಜನರ ಕೇರಿಯಲ್ಲಿ ನೆಲೆಸಿದರು. ಅವರು ಕೈಗೊಂಡ ಮೊದಲ ಕೆಲಸವೆಂದರೆ ಹರಿಜನರಿಗಾಗಿ ಬೇರೆ ಸ್ಥಳ ತೆಗೆದುಕೊಂಡುದು. ಅಲ್ಲಿದ್ದವರ ಸಹಾಯದಿಂದ ಗುಡಿಸಲು ಕಟ್ಟಿ ಕೊಟ್ಟರು. ಅಲ್ಲಿಯೇ ತಮಗೊಂದು ಗುಡಿಸಲನ್ನು ಕಟ್ಟಿ ಕೊಂಡರು.

ಹರಿಜನರ ಆರೋಗ್ಯ ಸುಧಾರಿಸಲು ಮೊದಲು ಅವರಿಗೆ ಶುಚಿಯಾಗಿರುವುದನ್ನು ಕಲಿಸಬೇಕಾಯಿತು. ಹೇಗೆ ಕಲಿಸುವುದು? ತಾವೇ ಸ್ವತಃ ಕೈಯಲ್ಲಿ ಕಸಬರಿಕೆ ಹಿಡಿದು ಕಸಕಡ್ಡಿಯನ್ನು ಗುಡಿಸಿದರು. ಮನೆಯ ಒಳಗಿನ ಭಾಗವನ್ನು ಹೇಗೆ ಸ್ವಚ್ಛವಾಗಿಡುವುದು ಎಂದು ಹೇಳಿಕೊಟ್ಟರು. ಮಗುವಿಗೆ ಹೇಳಿಕೊಟ್ಟಂತೆ ಪ್ರೀತಿಯಿಂದ, ತಾಳ್ಮೆಯಿಂದ ಸ್ನಾನದ ಮಹತ್ವ, ಕ್ಷೌರದ ಅಗತ್ಯಗಳನ್ನು ಹೇಳಿಕೊಟ್ಟರು. ಹರಿಜನರಿಗೆ ತಾವೇ ಕ್ಷೌರ ಮಾಡಿದರು. ಅದನ್ನು ಮಾಡುವ ಬಗ್ಗೆ ಕಲಿಸಿ ಕೊಟ್ಟರು. ಹರಿಜನರ ಜೊತೆಯಲ್ಲಿ ಕೊಡಲಿ ಹಿಡಿದು ಕಾಡಿಗೆ ಹೋಗಿ ಕಟ್ಟೆಗೆ ಕಡಿದು ಅದನ್ನು ಮಾರಿ ತಮ್ಮ ಸ್ವಂತ ಸಂಪಾದನೆಯಿಂದ ಹೇಗೆ ಬದುಕಬೇಕು ಎನ್ನುವುದನ್ನು ಕಲಿಸಿಕೊಟ್ಟರು.

ಹರಿಜನರಿಗಾಗಿ ಶಾಲೆ ತೆರೆದರು. ಓದು, ಬರಹ, ಪ್ರಾರ್ಥನೆ, ನೂಲುವುದನ್ನು ತಿಳಿಸಿಕೊಟ್ಟರು.

ತಿಮ್ಮಪ್ಪ ಮಾಸ್ತರರ ನಿಸ್ವಾರ್ಥ ಸೇವೆಯನ್ನು ಕಂಡು ಅಲ್ಲಿಯ ಶ್ರೀಮಂತರಾಗಿದ್ದ ವೆಂಕಟರಮಣ ನಾಯಕ ಎನ್ನುವವರು ಹರಿಜನರಿಗಾಗಿ ತಮ್ಮ ಆಸ್ತಿಯನ್ನು ದಾನವಿತ್ತರು.

ಹರಿಜನರ ಸೇವೆಯಲ್ಲಿ ದೇವರ ಪೂಜೆಯಷ್ಟು ಪ್ರೀತಿ ತಿಮ್ಮಪ್ಪ ಮಾಸ್ತರರಿಗಿತ್ತು. ಅವರು ಆಗಿನ ಕಾಲದಲ್ಲೇ ಹರಿಜನರೊಂದಿಗೆ ಸಹ ಭೋಜನ ಮಾಡುತ್ತಿದ್ದರು. ಮೊಗಟಾದಲ್ಲಿ ಇರುವಾಗಲೇ ತಿಮ್ಮಪ್ಪ ಮಾಸ್ತರರು ’ಗ್ರಾಮಸೇವಕ’ ಎನ್ನುವ ಪತ್ರಿಕೆಯನ್ನು ಹೊರಡಿಸುತ್ತಿದ್ದರು.

ಅಂಕೋಲೆ ಸತ್ಯಾಗ್ರಹ

೧೯೩೦ರ ವರೆಗೂ ಆಶ್ರಮವಾಸಿಗಳಾಗಿ ಹರಿಜನರ ಸೇವೆ ಮಾಡುತ್ತಿದ್ದ ತಿಮ್ಮಪ್ಪ ಮಾಸ್ತರರು ಮತ್ತೆ ಚಳವಳಿಗೆ ಸೇರಿದರು. ಕಾರಣ ಗಾಂಧೀಜಿಯವರು ಕಾಯಿದೆ ಭಂಗ ಚಳವಳಿಗೆ ಕರೆ ಇತ್ತದ್ದು.

ದೇಶಭಕ್ತರೆಲ್ಲ ಮತ್ತೆ ಚುರುಕಾದರು. ನಮ್ಮನ್ನು ಅಳುತ್ತ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರದ ಕಾಯಿದೆಗಳನ್ನೆಲ್ಲ ಧಿಕ್ಕರಿಸಿ ಬ್ರಿಟಿಷರ ಆಡಳಿತ ಭಾರತೀಯರಿಗೆ ಬೇಕಿಲ್ಲ ಎಂದು ಸಾರುವುದೇ ಗಾಂಧೀಜಿಯವರ ಮುಖ್ಯ ಉದ್ದೇಶವಾಗಿತ್ತು. ಕಾಯಿದೆ ಭಂಗ ಚಳವಳಿಯ ಮೊದಲ ಹೆಜ್ಜೆ ಉಪ್ಪಿನ ಸತ್ಯಾಗ್ರಹ.

ಇವರ ಮೊದಲ ಪ್ರಯೋಗ ಗಾಂಧೀಜಿಯವರ ಮುಂದಾಳತ್ವದಲ್ಲಿ ದಂಡಿಯಲ್ಲಿ ಯಶಸ್ವಿಯಾಗಿ ನೆರವೇರಿತು. ಸಹಸ್ರಾರು ಜನರು ಈ ಚಳವಳಿಯಲ್ಲಿ ಪಾಲುಗೊಂಡರು. ದೇಶದಲ್ಲೆಲ್ಲ ಉಪ್ಪಿನ ಸತ್ಯಾಗ್ರಹ ಕೈಗೊಂಡಾಗ ಇಡೀ ಕರ್ನಾಟಕಕ್ಕೇ ಅಂಕೋಲೆ ಸತ್ಯಾಗ್ರಹದ ಕೇಂದ್ರವಾಗಿ ಆರಿಸಲ್ಪಟ್ಟಿತು.

ತಿಮ್ಮಪ್ಪ ನಾಯಕರು, ಹನುಮಂತರಾವ್ ಕೌಜಲಗಿ, ಕಾಕಾ ಕಾರಖಾನೀಸ್ ಮುಂತಾದವರ ನೇತೃತ್ವದಲ್ಲಿ ಕನ್ನಡನಾಡಿನಲ್ಲೆಲ್ಲ ಪ್ರಸಾರ ಕಾರ್ಯ ಪ್ರಾರಂಭವಾಯಿತು.

೧೯೩೦ರ ಏಪ್ರಿಲ್ ೧೩ ರಂದು ಸತ್ಯಾಗ್ರಹ ಪ್ರಾರಂಭವಾಯಿತು. ಅಂಕೋಲೆಯಲ್ಲಿ ಸತ್ಯಾಗ್ರಹಿಗಳು ಉತ್ಸಾಹದಿಂದ ಬಂದು ಸೇರಿದರು. ಅಂದಿನ ಜನದಟ್ಟಣೆ, ಅವರ ಚಟುವಟಿಕೆ ಅಂಕೋಲೆಗೆ ಹೊಸ ಕಳೆ ತಂದು ಕೊಟ್ಟವು.

ಸತ್ಯಾಗ್ರಹಿಗಳು ಏರ್ಪಡಿಸಿದ್ದ ಶಿಬಿರದ ಮಟ್ಟ ಊರ ಮಧ್ಯದಲ್ಲಿತ್ತು. ಸತ್ಯಾಗ್ರಹ ಪ್ರಾರಂಭವಾಗುತಿದ್ದಂತೆ ಕಟ್ಟಡ ಖಾಲಿ ಮಾಡಲು ಸರ್ಕಾರ ಅಪ್ಪಣೆ ಪತ್ರ ಕಳುಹಿಸಿತು. ಮುಖಂಡರು ಅದನ್ನು ಉಲ್ಲಂಘಿಸಿದರು. ಅದಕ್ಕಾಗಿ ತಿಮ್ಮಪ್ಪ ಮಾಸ್ತರರಿಗೂ ಉಳಿದ ಮುಖಂಡರಿಗೂ ಮೂರು ತಿಂಗಳ ಸಾದಾ ಶಿಕ್ಷೆಯಾಯಿತು.

ಸತ್ಯಾಗ್ರಹ ಸುಮಾರು ಒಂದೂವರೆ ತಿಂಗಳು ತುಂಬಾ ಯಶಸ್ವಿಯಾಗಿ ನಡೆಯಿತು. ಶಿಕ್ಷೆ ಅನುಭವಿಸಿ ತಿಮ್ಮಪ್ಪ ಮಾಸ್ತರರು ಹೊರ ಬಂದಾಗ ಉಪ್ಪಿನ ಸತ್ಯಾಗ್ರಹ ಕೊನೆಗೊಂಡಿತ್ತು. ಆದರೆ ಜಂಗಲ್ ಸತ್ಯಾಗ್ರಹ ಪ್ರಾರಂಭವಾಗಿತ್ತು.

ಜಂಗಲ್ ಸತ್ಯಾಗ್ರಹ

ಸರ್ಕಾರದ ಕಾಡಿನ ಕೆಲವು ಪ್ರದೇಶಗಳನ್ನು ಕಾದಿರಿಸಲಾಗಿತ್ತು. ಅಲ್ಲಿ ಸರ್ಕಾರದ ಒಪ್ಪಿಗೆ ಇಲ್ಲದೆ ಕಟ್ಟಿಗೆ ಕಡಿಯುವುದಾಗಲೀ, ಹುಲ್ಲು – ಸೊಪ್ಪು ತರುವುದಾಗಲೀ ಅಪರಾಧವಾಗಿತ್ತು. ಇಂಥ ಕಾಯಿದೆಯಿಂದ ಹಳ್ಳಿಯ ಜನಕ್ಕೆ ತುಂಬ ತೊಂದರೆಯಾಗಿತ್ತು. ಸರ್ಕಾರದ ಈ ಕಾಯಿದೆ ಉಲ್ಲಂಘಿಸುವುದಕ್ಕೆಂದೇ ಈ ಸತ್ಯಾಗ್ರಹ ನಡೆಯಿತು.

ರಾಜ್ಯದಲ್ಲೆಲ್ಲ ಸತ್ಯಾಗ್ರಹದ ಸಿದ್ಧತೆಯು ಭರದಿಂದ ಸಾಗಿತ್ತು. ತಿಮ್ಮಪ್ಪ ಮಾಸ್ತರರು ಬನವಾಸಿಯಲ್ಲಿ ಜಂಗಲ್ ಸತ್ಯಾಗ್ರಹ ಹೊತ್ತುಕೊಂಡು ನಡೆಸಿದಾಗ ಒಬ್ಬ ವಿವಾಹಿತ ತರುಣಿ ಕೊಡಲಿ ಹೊತ್ತುಕೊಂಡು ಬಂದು, ಕಾಡಿಗೆ ಹೋಗಿ ಸರ್ಕಾರದ ಮರ ಕಡಿದಳು. ಸರ್ಕಾರ ಕೂಡಲೇ ಈ  ತರುಣಿಯನ್ನು ಬಂಧಿಸಿತು. ಆದರೂ ಸತ್ಯಾಗ್ರಹ ಯಶಸ್ವಿಯಾಯಿತು.

ಜಂಗಲ್ ಸತ್ಯಗ್ರಹ ತಿಮ್ಮಪ್ಪ ನಾಯಕರು ಹರಿಜನ ಕೇರಿಯಲ್ಲಿ

ತಿಮ್ಮಪ್ಪ ಮಾಸ್ತರರು ಮುಂದೆ ಸಿರಸಿಯಲ್ಲಿ ’ಸತ್ಯಾಗ್ರಹ’ ಕರಪತ್ರಿಕೆ ಹೊರಡಿಸಲಾರಂಭಿಸಿದರು. ಕರಪತ್ರವನ್ನು ಗುಟ್ಟಾಗಿ ಹಳ್ಳಿಹಳ್ಳಿಗೆ ಸಾಗಿಸಲಾಗುತ್ತಿತ್ತು. ಅವುಗಳಲ್ಲಿ ಸತ್ಯಾಗ್ರಹದ ವಿವರಗಳನ್ನು ಕೊಡಲಾಗುತ್ತಿತ್ತು. ಇದನ್ನು ಓದಿದವರಲ್ಲಿ ಜನ ಜಾಗೃತಿಯಾಗುತ್ತಿತ್ತು. ಎಷ್ಟೋ ಗ್ರಾಮಗಳಲ್ಲಿ ಗ್ರಾಮಾಧಿಕಾರಿಗಳು ತಮ್ಮ ಅಸಹಕಾರ ಸರ್ಕಾರಕ್ಕೆ ತೋರಿಸಲು ಕೆಲಸಕ್ಕೆ ರಾಜೀನಾಮೆಯಿತ್ತರು. ತಮ್ಮ ಕಡೆಗಿದ್ದ ದಫ್ತರುಗಳನ್ನು ಮೆರವಣಿಗೆಯಲ್ಲಿ ಹೊತ್ತುಕೊಂಡು ಹೋಗಿ ಮಾಮಲೇದಾರರಿಗೆ ಒಪ್ಪಿಸಿದರು.

ಈ ಅಸಹಕಾರ ಅಂದೋಲನದಲ್ಲಿ ಎಷ್ಟೋ ಮುಂದಾಳುಗಳ ಬಂಧನವಾಯಿತು. ಈ ಆಂದೋಲನದ ಅಂಗವಾಗಿಯೇ ಅದೇ ವರ್ಷ ’ಹುಲ್ಲು ಬನ್ನಿ ಸತ್ಯಾಗ್ರಹ’ ವೂ ಆಯಿತು.

೧೯೩೨ರಲ್ಲಿ ಎಲ್ಲೆಡೆಯಲ್ಲೂ ಕರ ನಿರಾಕರಣೆ ಚಳವಳಿ ಆರಂಭವಾಯಿತು. ಸರ್ಕಾರಕ್ಕೆ ಕೊಡಬೇಕಾಗಿದ್ದ ಭೂ ಕಂದಾಯ, ತೆರಿಗೆಯನ್ನು ಕೊಡದಿರುವುದೇ ಈ ಸತ್ಯಾಗ್ರಹದ ರೂಪ.

ತಿಮ್ಮಪ್ಪ ಮಾಸ್ತರರು, ಅವರ ಸಂಗಡಿಗರು ಸಿರಸಿ, ಸಿದ್ಧಾಪುರದ ಎಲ್ಲ ಹಳ್ಳಿಗಳಿಗೂ ಹೋಗಿ ಬಂದರು. ಅಲ್ಲಿಯ ಜನರು ಯಾವ ಕಷ್ಟಕ್ಕೂ ಸಿದ್ಧರಾಗಿಯೇ ಇದ್ದರು. ಇದೇ ಸಮಯಕ್ಕೆ ತಿಮ್ಮಪ್ಪ ಮಾಸ್ತರರು  ಮುಂಡಗೇಸರದಲ್ಲಿ ಸುಮಾರು ಹದಿನೈದು ಮಂದಿ  ಸ್ವಯಂ ಸೇವಕರ ಶಿಬಿರ ನಡೆಸುತ್ತಿದ್ದರು.

“ಫ್ರೀ ಪ್ರೆಸ್ ಜರ್ನಲ್’ ಎಂಬ ಪತ್ರಿಕೆಯಲ್ಲಿ ಶೀಘ್ರವೇ ಕಾಂಗ್ರೆಸ್ ನಾಯಕರ ಬಂಧನವಾಗುವುದೆನ್ನುವ ವಾರ್ತೆ ಪ್ರಕಟವಾಯಿತು. ತಿಮ್ಮಪ್ಪ ಮಾಸ್ತರರು ಶಿಬಿರಾರ್ಥಿಗಳಿಗೆ ಮುಂದಿನ ಕಾರ್ಯದ ಸೂಚನೆ ನೀಡಿ ಶಿಬಿರವನ್ನು ಮುಕ್ತಾಯ ಮಾಡಿದರು. ಸಾಮಾನ್ಯ ರೈತರೂ ಕೂಡ ಈ ಸತ್ಯಾಗ್ರಹದಲ್ಲಿ ಭಾಗವಹಿಸಿದರು.

ಎಷ್ಟೋ ಜನರ ಬಂಧನವಾಯಿತು. ಆಸ್ತಿ ಜಪ್ತಿಯಾಯಿತು. ಉಳುವುದಕ್ಕೆ ನೆಲ, ಇರುವುದಕ್ಕೆ ಮನೆ ಇಲ್ಲದಂತಾಗಿ ಮರದ ನೆರಳಲ್ಲಿ ಸಂಸಾರ ನಡೆಸುವ ಪ್ರಸಂಗ ಬಂತು.

ಆದರೂ ಜನರು ಹಿಂಜರಿಯಲಿಲ್ಲ!

೧೯೩೨ರ ಆರಂಭದಲ್ಲಿ ತಿಮ್ಮಪ್ಪ ಮಾಸ್ತರರು ಸಿರಸಿಯಲ್ಲಿ ಜಂಗಲ್ ಸತ್ಯಾಗ್ರಹ ಮಾಡಿ ಬಂಧಿತರಾದರು. ಸರ್ಕಾರ ಅವರಿಗೆ ಹದಿನೈದು ತಿಂಗಳ ಸೆರೆಮನೆವಾಸವನ್ನು ವಿಧಿಸಿತು. ಅವರು ಈ ಶಿಕ್ಷೆಯನ್ನು ಕಾರವಾರದಲ್ಲಿಯೂ ವಿಸಾಪುರದಲ್ಲಿಯೂ ಅನುಭವಿಸಿದರು.

ತಿಮ್ಮಪ್ಪ ಮಾಸ್ತರ ಬಿಡುಗಡೆ ಆಯಿತು. ಅವರು ಮತ್ತೆ ಹೋರಾಟಕ್ಕೆ ಇಳಿಯುವವರು ಎಂದು ಸರ್ಕಾರಕ್ಕೆ ಗೊತ್ತು. ಆದುದರಿಂದ ಅವರು ಉತ್ತರ ಕನ್ನಡ ಜಿಲ್ಲೆಯ ಸೂಪಾ  ಎಂಬ ಒಂದು ಊರಿನಲ್ಲಿ ಇದ್ದು ಪ್ರತಿದಿನ ಪೊಲೀಸರಿಗೆ ಹಾಜರಿ ಕೊಡಬೇಕೆಂದು ತಿಳಿಸಿದ್ದರು. (ಇದಕ್ಕೆ “ಪರೋಲ್’ ಎನ್ನುತ್ತಾರೆ)

ಆದರೆ ತಿಮ್ಮಪ್ಪ ಮಾಸ್ತರರು ಇದನ್ನು ಮನ್ನಿಸಲಿಲ್ಲ. ಹೀಗಾಗಿ ಅವರಿಗೆ ಮತ್ತೆ ಹದಿನೈದು ತಿಂಗಳ ಶಿಕ್ಷೆಯಾಯಿತು. ಅವರು ಸೆರೆಮನೆಗೆ ಹೋದದ್ದು ನಾಲ್ಕನೆಯ ಬಾರಿ. ಮತ್ತೆ ಅವರು ಕಾರವಾರದ ಸೆರೆಮನೆಯನ್ನು ಸೇರಬೇಕಾಯಿತು. ಅವರ ಆರೋಗ್ಯ ಬಂದೀಖಾನೆಯಲ್ಲಿ  ತುಂಬ ಕೆಟ್ಟಿತು. ಅವರಿಗೆ ಅದರ ಬಗ್ಗೆ ಲಕ್ಷ್ಯವಿರಲಿಲ್ಲ. ಅಧ್ಯಯನ ಹಾಗು ಆಧ್ಯಾತ್ಮಿಕ ವಿಚಾರಗಳಲ್ಲಿ ಯಾವಾಗಲೂ ತೊಡಗಿರುತ್ತ, ತಮ್ಮ ಜೊತೆಯ ಖೈದಿಗಳಿಗೂ ಸ್ಫೂರ್ತಿ ಕೊಡುತ್ತಿದ್ದರು.

ಪ್ರಯೋಗಶೀಲ ತಿಮ್ಮಪ್ಪ ಮಾಸ್ತರ

೧೯೩೫ರವರೆಗೂ ಜೈಲಿನಲ್ಲಿದ್ದ ತಿಮ್ಮಪ್ಪ ಮಾಸ್ತರರು ಹೊರಬಂದಾಗ ಗಾಂಧೀಜಿಯವರು ಸಾಮುದಾಯಿಕ ಸತ್ಯಾಗ್ರಹ ನಿಲ್ಲಿಸಿದ್ದರು. ಮಾಸ್ತರರು ತಾವು ಏಕೆ ಸ್ವಾವಲಂಬನ ಜೀವನ ನಡೆಸಬಾರದು ಎಂದು ಯೋಚಿಸಿದರು.

ವಾಮನ ಹೊದಿಕೆ, ಶ್ರೀಧರ ಕಿಣಿ ಮುಂತಾದವರ ಜೊತೆಗೂಡಿ ಸಿರಸಿ ತಾಲೂಕಿನ ತರಕೋಡಿ ಎಂಬ ಗ್ರಾಮದಲ್ಲಿ ಒಂದು ತೋಟವನ್ನು ಕೊಂಡುಕೊಂಡು ಅಲ್ಲಿ ಸ್ವತಃ ದುಡಿಯಲಾರಂಭಿಸಿದರು.

ತೋಟದಲ್ಲಿ ತರಕಾರಿ – ಹಣ್ಣು ಮುಂತಾದವನ್ನು ಬೆಳೆಸಲಾಗುತ್ತಿತ್ತು. ಬೆಳೆದ ತರಕಾರಿ ಹಾಗೂ ಇನ್ನಿತರ ವಸ್ತುಗಳನ್ನು ಮಾರಿ ಬಂದ ಹಣದಲ್ಲೇ ಜೀವನ ನಿರ್ವಹಿಸತೊಡಗಿದರು.

ಮಾಸ್ತರರಿಗೆ ಮತ್ತು ಅವರ ಜೊತೆಗಾರರಿಗೆ ತೋಟಗಾರಿಕೆಯ ವಿಷಯ ತಿಳಿಯದು. ಅವರಿಗೆ ಲಾಭದ ಬದಲು ಶ್ರಮವೇ ಹೆಚ್ಚಾಯಿತು. ಅಲ್ಲದೆ ಅವರ ಹೆಚ್ಚಿನ ಸಮಯವೆಲ್ಲಾ ತೋಟದಲ್ಲಿ ಕಳೆದುದರಿಂದ ದೇಶ ಸೇವೆಗೆ, ಗ್ರಾಮ ಸೇವೆಗೆ ಸಮಯವೇ ಉಳಿಯದಂತಾಯಿತು.

ಎರಡು ವರ್ಷಗಳ ತಮ್ಮ ತೋಟಗಾರಿಕೆಯ ಕೆಲಸದಿಂದ ಹೆಚ್ಚಿನ ಪ್ರಗತಿ ಸಾಧಿಸಲಿಲ್ಲ ಎಂದು ತಿಳಿದುಕೊಂಡ ತಿಮ್ಮಪ್ಪ ಮಾಸ್ತರರು ಆ ಪ್ರಯೋಗವನ್ನು ಅಲ್ಲಿಗೇ ಕೈಬಿಟ್ಟರು.

ಜನತೆಗೆ ಶಿಕ್ಷಣ

೧೯೩೭ರ ಚುನಾವಣೆಯಲ್ಲಿ ಮುಂಬಯಿ ಪ್ರಾಂತದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆಗ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜನತೆಗೆ ಹೆಚ್ಚು ಲಾಭದಾಯಕವಾಗುವಂತೆ ಶ್ರಮಿಸಲು ತಿಮ್ಮಪ್ಪ ಮಾಸ್ತರರು ಮತ್ತು ಹೊದಿಕೆ ಮಾಸ್ತರರು ಪ್ರಯತ್ನಿಸಿದರು.

ಆಗ ಉತ್ತರ ಕನ್ನಡ ಜಿಲ್ಲೆಯು ಮುಂಬಯಿ ಪ್ರಾಂತದಲ್ಲಿತ್ತು. ಹೊದಿಕೆ ಮಾಸ್ತರರು ಹಳ್ಳಿಹಳ್ಳಿಗೆ ಹೋಗಿ ಶಾಲೆ ಪ್ರಾರಂಭಿಸಿದರು. ಜನತೆಯಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿಯನ್ನು ಉಂಟು ಮಾಡಿದರು. ತಿಮ್ಮಪ್ಪ ಮಾಸ್ತರರು ರೈತರ ಕಷ್ಟಸುಖಗಳತ್ತ ಗಮನವಿತ್ತರು.

ಬಡವರ ಒಂದು ಪೀಡೆ ಎಂದರೆ ಮದ್ಯಪಾನ. ಅವರಿಗೆ ಬರುವ ಹಣವೇ ಬಹು ಕಡಿಮೆ. ಅದರಲ್ಲಿ ಬಹು ಭಾಗವನ್ನು ಹೆಂಡಕ್ಕೆ ಹಾಕಿ ತಾವೂ ಸಂಸಾರದವರೂ ಕಷ್ಟ ಪಡುವುದುಂಟು. ಇದನ್ನು ತಪ್ಪಿಸಲು ಕಾಂಗ್ರೆಸ್ ಸರ್ಕಾರ ಪಾನ ನಿರೋಧ ಕಾನೂನು ಮಾಡಿತು. ಮಾಸ್ತರರು  ಹಳ್ಳಿಹಳ್ಳಿ  ತಿರುಗಿ ಕುಡಿತದಿಂದಾಗುವ ಕೆಟ್ಟ ಪರಿಣಾಮ ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಿ ಹೇಳಿದರು.

೧೯೩೯ರಲ್ಲಿ ಎರಡನೆಯ ವಿಶ್ವಯುದ್ಧ ಪ್ರಾರಂಭವಾದಾಗ ಬ್ರಿಟಿಷ್ ಸರ್ಕಾರ ಭಾರತೀಯರ ಅನುಮತಿ ಇಲ್ಲದೆ ಭಾರತವನ್ನು ಯುದ್ಧದಲ್ಲಿ ತೊಡಗಿಸಿತು. ಈ ಅನ್ಯಾಯದ ವಿರುದ್ಧ ಗಾಂಧೀಜಿಯವರು ಮತ್ತೆ ಸತ್ಯಾಗ್ರಹ ಮಾಡಬೇಕಾಯಿತು.  ತಿಮ್ಮಪ್ಪ ಮಾಸ್ತರರರು ಇದಕ್ಕೆ ಬೆಂಬಲ ಕೊಡುವುದಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಜನತೆಯನ್ನು ಸಂಘಟಿಸಿ ಸತ್ಯಾಗ್ರಹದ ಯಶಸ್ಸಿಗೆ ಕಾರಣರಾದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಡವರ ಸಂಖ್ಯೆ ಹೆಚ್ಚಾಗಿತ್ತು. ನಿರುದ್ಯೋಗ ಆವರಿಸಿತು. ಉಳುವ ಭೂಮಿ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ತಿಮ್ಮಪ್ಪ ಮಾಸ್ತರರು ಸಿದ್ಧಾಪುರ, ಬೀಳಗಿಯಲ್ಲಿ ಖಾದಿ ವಸ್ತ್ರ ಸ್ವಾವಲಂಬನ ಕಾರ್ಯಕ್ರಮಗಳನ್ನು ಆರಂಭಿಸಿದರು.

ಮೊದಲು ಅಲ್ಲಿ ನೂಲುವುದನ್ನು ಮಾತ್ರ ಕಲಿಸಲಾಗುತ್ತಿತ್ತು. ಆನಂತರ ನೇಯುವುದನ್ನೂ ತಿಳಿಸಿಕೊಡಲಾಯಿತು. ತಿಮ್ಮಪ್ಪ ಮಾಸ್ತರರು ತಾವೊಬ್ಬರೇ ಸ್ವಾವಲಂಬಿಯಾಗಿ ಬದುಕುವುದಲ್ಲದೆ, ಎಲ್ಲ ಜನರಿಗೂ ಸ್ವಾವಲಂಬಿಯಾಗಬೇಕೆಂದು ಬೋಧಿಸುತ್ತಿದ್ದರು.

ಕುಮಟೆಯಲ್ಲಿ ಮಗ್ಗಗಳನ್ನು ಹಾಕಿಸಿ ಬಟ್ಟೆ ನೇಯುವ ಏರ್ಪಾಟು ಮಾಡಲಾಗಿತ್ತು. ಇಲ್ಲಿ ನೇಯ್ದ ಬಟ್ಟೆಗಳನ್ನು ಮಾರಿ ಜನರು ತಮ್ಮ ಬದುಕಿಗೆ ಒಂದು ದಾರಿ ಮಾಡಿಕೊಂಡರು.

ಚಲೇಜಾವ್ ಹೋರಾಟ

೧೯೪೨ರಲ್ಲಿ ಗಾಂಧೀಜಿಯವರು ’ಚಲೇ ಜಾವ್’(ಬ್ರಿಟಿಷರೆ, ಭಾರತ ಬಿಟ್ಟು ಹೊರಡಿ) ಚಳವಳಿ ಪ್ರಾರಂಭಿಸಿದರು. ಅವರನ್ನೂ ಇತರ ನಾಯಕರನ್ನೂ ಸರ್ಕಾರ ಬಂಧಿಸಿತು. ದೇಶದಲ್ಲೆಲ್ಲ ಚಳವಳಿ ಪ್ರಾರಂಭವಾಯಿತು. ತಿಮ್ಮಪ್ಪ ಮಾಸ್ತರರು ಕುಮಟೆಯಲ್ಲೇ  ಇದ್ದು ಚಲೇಜಾವ್ ಚಳವಳಿಯಲ್ಲಿ ತಾವೂ ಪಾಲ್ಗೊಂಡಿದ್ದರು. ದೇಶದ ನಾಯಕರ ಬಂಧನ ಸುದ್ದಿ ತಿಳಿದಾಗ ತಿಮ್ಮಪ್ಪ ಮಾಸ್ತರರಿಗೆ ಇನ್ನು ತನ್ನ ಬಂಧನವೂ ಆಗುತ್ತದೆಂದು ಎನಿಸಿತು. ಅವರು ಕೂಡಲೇ ಖಾದಿ ಮಗ್ಗದವರಿಗೆ ಮುನ್ಸೂಚನೆ ಕೊಟ್ಟು ಅದೇ ಸಂಜೆ ಒಂದು ಸಾರ್ವಜನಿಕ ಸಭೆ ಕರೆದರು.

ಸಭೆಯ ಪ್ರಾರಂಭದಲ್ಲೇ ತಿಮ್ಮಪ್ಪ ಮಾಸ್ತರರು ನೆರೆದ ನಾಗರಿಕರಿಗೆ ಹೇಳಿದರು. ಇದು ಕಾನೂನಿಗೆ ವಿರೋಧವಾದ ಸಭೆ. ಇದರಲ್ಲಿ ಭಾಗವಹಿಸಿದ ನಿಮ್ಮ ಮೇಲೆ ಲಾಠಿ ಚಾರ್ಚು ಆಗಬಹುದು, ಅಥವಾ ಬೇರೆ ಶಿಕ್ಷೆಯಾದೀತು! ಯಾರಿಗೆ ಎದ್ದುಹೋಗುವ ಮನಸ್ಸಿದೆಯೋ ಅವರು ಹೋಗಬಹುದು’. ಆದರೆ ಜನರು ಅಲ್ಲಿಂದ ಚದುರಲಿಲ್ಲ. ಬಂದುದನ್ನು ಧೈರ್ಯವಾಗಿ ಎದುರಿಸುತ್ತೇವೆ ಎನ್ನುವ ಕೆಚ್ಚಿನಲ್ಲಿ ನಿಂತುಬಿಟ್ಟರು. ಜನರ ಬೆಂಬಲ ಸಂಪೂರ್ಣವಾಗಿ ಮಾಸ್ತರರ ಕಡೆಗಿತ್ತು. ತಿಮ್ಮಪ್ಪ ಮಾಸ್ತರರು ಗಾಂಧೀಜಿಯವರ ಬಂಧನ ಬಗ್ಗೆ ಸರ್ಕಾರವನ್ನು ಕಟವಾಗಿ ಟೀಕಿಸಿದರು. ಅವರ ಧೋರಣೆಯನ್ನು ಖಂಡಿಸಿದರು.

ಇದರ ಪರಿಣಾಮ ಸಭೆ ಮುಗಿದ ಸ್ವಲ್ಪ ಸಮಯಕ್ಕೆ ತಿಮ್ಮಪ್ಪ ಮಾಸ್ತರರ ಬಂಧನವಾಯಿತು. ಅವರನ್ನು ಹಿಂಡಲಗಿ ಸೆರೆಮನೆಯಲ್ಲಿ ಇಪ್ಪತ್ತು ತಿಂಗಳವರೆಗೆ ಇಡಲಾಯಿತು. ಮತ್ತೆ ಅವರ ಬಿಡುಗಡೆ ಆದದ್ದು ೧೯೪೪ರಲ್ಲಿ.

ಸೇವಾ ಸಮಿತಿ

ಸೆರೆಮನೆಯಿಂದ ಹೊರಬಂದ ತಿಮ್ಮಪ್ಪ ಮಾಸ್ತರರು ತಾವು ಜನತೆಗೆ ಪ್ರಯೋಜನವಾಗುವಂಥ ಯಾವುದಾದರೊಂದು ಕೆಲಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ತಾವು ಹಾಗೂ ತಮ್ಮ ಸಂಗಡಿಗರಾದ ಹರಿ ಪೈ, ಮಡಗಾಂವಕರ್ ಮುಂತಾದವರ ಸಹಕಾರದಿಂದ ಅಂಕೋಲೆಯಲ್ಲಿ ’ಉತ್ತರ ಕನ್ನಡ ಜಿಲ್ಲಾ ಗ್ರಾಮಸೇವಾ ಸಮಿತಿ’ ಯನ್ನು ಸ್ಥಾಪಿಸಿದರು.

ಪಾದಯಾತ್ರೆಯ ಕಾಲದಲ್ಲಿ ತಿಮ್ಮಪ್ಪ ನಾಯಕರು ವಿನೋಬಾಜಿಯವರ ಭಾಷಣ ಭಾಷಾಂತರಿಸುತ್ತಿರುವುದು.

ಲಾಭದ ದೃಷ್ಟಿಯಿಂದ ಈ ಸಮಿತಿ ಸ್ಥಾಪನೆಯಾದದ್ದಲ್ಲ. ಜನರ ಹಿತದೃಷ್ಟಿಯೇ ಇದರ ಮೂಲ ಗುರಿಯಾಗಿತ್ತು. ಹಲವಾರು ವರ್ಷಗಳಿಂದ ಈ ದೇಶದಲ್ಲಿ ನಿರುದ್ಯೋಗ ಒಂದು ಭೂತದಂತಹ ಸಮಸ್ಯೆಯಾಗಿದೆ. ಜನರು ಸ್ವಾವಲಂಬಿಗಳಾಗುವುದನ್ನು ಕಲಿಯಬೇಕು. ಈ ದೃಷ್ಟಿಯಿಂದ ಸ್ಥಾಪಿತವಾದ ಈ ಸೇವಾಸಮಿತಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಟ್ಟು, ಕೈಗಾರಿಕೆ ಗ್ರಾಮೋದ್ಯೋಗಗಳಿಗೆ ಉತ್ತೇಜನ ಕೊಡುವುದೇ ಮುಖ್ಯವಾಗಿತ್ತು. ತಿಮ್ಮಪ್ಪ ಮಾಸ್ತರರು ಸಮಿತಿಯ ಏಳಿಗೆಗಾಗಿ ತುಂಬ ಶ್ರಮವಹಿಸಿದರು.

ಇಲ್ಲಿ ನೂಲುವುದು, ನೇಯುವುದು, ಜೇನುತುಪ್ಪ ತೆಗೆಯುವುದು, ಚರ್ಮಗಾರಿಕೆ, ಕುಶಲ ಕೈಗಾರಿಕೆಗಳಿಗೆ ಹೆಚ್ಚಿನ ಅವಕಾಶವಿತ್ತು. ಇದರಿಂದ ಎಷ್ಟೋ ಬಡಜನರಿಗೆ ಬದುಕುವುದಕ್ಕೆ ಒಂದು ದಾರಿಯಾಯಿತು. ತಿಮ್ಮಪ್ಪ ಮಾಸ್ತರರು ತಮ್ಮ ಜೀವನದ ಕೊನೆಯವರೆಗೂ ಈ ಸಂಸ್ಥೆಗಾಗಿ ದುಡಿದರು.

೧೯೪೮ರಲ್ಲಿ ಅಂಕೋಲೆಯಲ್ಲಿ ಸರ್ವೋದಯ ಸಮಾಜ ರಚನೆಯಾಯಿತು. ತಿಮ್ಮಪ್ಪ ಮಾಸ್ತರರು ಸರ್ವೋದಯ ಸಮಿತಿಯ ಸದಸ್ಯರಾಗಿದ್ದರು. ಸರ್ವೋದಯ ಕಾರ್ಯ ನಲವತ್ತು ಹಳ್ಳಿಗಳನ್ನು ಒಳಗೊಂಡಿತ್ತು. ಪ್ರತಿ ಹಳ್ಳಿ ಸ್ವಾವಲಂಬಿಯಾಗಬೇಕು ಎಂದು ಮಾಸ್ತರರಿಗೆ ಆಸೆಯಿತ್ತು. ಅದಕ್ಕಾಗಿ ಅವರು ಹಳ್ಳಿಹಳ್ಳಿಗಳಿಗೆ ನಡೆದುಹೋದರು. ಮನೆ ಮನೆಗೆ ಹೋಗಿ ಸರ್ವೋದಯದ ವಿಚಾರದಲ್ಲಿ ತಿಳಿಸಿ ಹೇಳುತ್ತಿದ್ದರು.

ಭೂದಾನ ಚಳವಳಿಯಲ್ಲಿ ಪಾದಯಾತ್ರೆ ಕೈಗೊಂಡು ಅವರು ಮಾಡಿದ ಸೇವೆ ಅಪಾರ. ವಿನೋಬಾಜಿಯವರೊಡನೆ ನಡೆದರು, ಅವರ ಮಾತುಗಳನ್ನು ತಿಳಿಗನ್ನಡದಲ್ಲಿ ಜನರಿಗೆ ತಿಳಿಸಿಕೊಟ್ಟರು. ಅದಕ್ಕಾಗಿ ಅವರ ದೇಹ ತುಂಬ ದಣಿದಿತ್ತು. ಅನಾರೋಗ್ಯದಿಂದ ಆಗಾಗ ಅವರು ಬಳಲುತ್ತಿದ್ದರೂ  ಕೈಹಿಡಿದ ಕೆಲಸವನ್ನು ಮಾಡಿ ಬಿಡುವ ಛಲವಿತ್ತು. ಮುಖದಲ್ಲಿ ಸದಾ ನಗು, ಕೆಲಸ ಕಾರ್ಯದಲ್ಲಿ ಎಲ್ಲಿಲ್ಲದ ಉತ್ಸಾಹ !

ಬಡವರ ಬಂಧು

ಪರರ ದಾಸ್ಯದಿಂದ ನಮ್ಮದೇಶ ವಿಮೋಚನೆ ಆಯಿತು. ಸಂಭ್ರಮದ ಗಾಳಿ ದೇಶದುದ್ದಕ್ಕೂ ಓಡಾಡಿತು. ಸ್ವಾತಂತ್ರ‍್ಯ ಬಂದುದನ್ನು ಹಣ ಮತ್ತು ಅಧಿಕಾರ ಗಳಿಸಲು ಬಳಸಿಕೊಂಡವರೂ ಇದ್ದರು.

ಆದರೆ ತಿಮ್ಮಪ್ಪ ಮಾಸ್ತರರು ಅಂಥ ಯಾವ ಆಸೆಗೂ ಬಲಿ ಬೀಳಲಿಲ್ಲ. ಅಧಿಕಾರದಲ್ಲಿ ಇದ್ದುಕೊಂಡೇ ದೇಶದ, ಜನರ ಸೇವೆ ಮಾಡಬೇಕೆಂದಿಲ್ಲ – ತಾನು ಕೆಲಸ ಮಾಡಬಹುದು ಎಂದು ನಂಬಿದವರು ಅವರು. ಹಾಗೆಯೇ ಕೊನೆಯವರೆಗೂ ಬಾಳಿದವರು ತಿಮ್ಮಪ್ಪ ಮಾಸ್ತರರು.

ತಿಮ್ಮಪ್ಪ ಮಾಸ್ತರರು ತುಂಬ ಸರಳ ಜೀವಿಯೆಂದು ಈ ಮೊದಲೇ ಹೇಳಿದೆಯಲ್ಲ ! ಅವರಲ್ಲಿ ಒಂದಿಷ್ಟೂ ಗರ್ವವೆನ್ನುವುದೇ ಇರಲಿಲ್ಲ. ಸಮುದ್ರದಂತೆ ಆಳ, ಗಂಭೀರ ಅವರ ನಡೆ-ನುಡಿ, ಆದರೆ ಅವರ ಅನಾರೋಗ್ಯದಿಂದಾಗಿ, ಅವರು ಬಳಲುತ್ತಿದ್ದ ಮೂಲ ವ್ಯಾಧಿಯ ತೊಂದರೆಯಿಂದಾಗಿ ಸಿಟ್ಟು ತಟ್ಟನೆ ಇಣಿಕಿ ಹಾಕುತ್ತಿತ್ತು. ಅಷ್ಟೇ ಬೇಗ ಸಿಟ್ಟಿನಲ್ಲಿ ತಿಳಿಯದೆ ಆಡಿದ ಒರಟು ಮಾತಿಗಾಗಿ ಕ್ಷಮೆ ಕೇಳುವ ದೊಡ್ಡ ಮನಸ್ಸು ತಿಮ್ಮಪ್ಪ ಮಾಸ್ತರರಲ್ಲಿತ್ತು.

ತಾವು ಓದಿಕೊಂಡವರು, ಪದವೀಧರರು ಎಂದು ಯಾರಲ್ಲೂ ದರ್ಪ ತೋರಿದವರಲ್ಲ, ಬಡವರೊಡನೆ, ಬಡವರಂತೆ ಅತಿ ವಿನಯದಲ್ಲಿ ಬಾಳಿದವರು.

ಒಂದು ಪ್ರಸಂಗ

ಒಮ್ಮೆ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದರು ಕುಮಟೆಗೆ ಬಂದರು. ಸ್ವತಂತ್ರ ಭಾರತದ ಮೊದಲನೆಯ ರಾಷ್ಟ್ರಪತಿ ಅವರು, ದೇಶಸೇವೆಯ ವ್ರತ ತೊಟ್ಟಿದ್ದ ಹಿರಿಯರ, ಜನರ ಸಂಭ್ರಮ ಕೇಳಬೇಕೆ? ರಾಷ್ಟ್ರಪತಿಯವರನ್ನು ಕಾಣಲು, ಅವರ ಸಾರ್ವಜನಿಕ ಭಾಷಣ ಕೇಳಲು ಸಹಸ್ರಾರು ಜನರು ಬಂದು ಸೇರಿದರು. ತಿಮ್ಮಪ್ಪ ಮಾಸ್ತರರು ತಮ್ಮ ಮಿತ್ರರೊಡನೆ ಭಾಷಣ ಕೇಳಲು ಹೋದರು. ತಿಮ್ಮಪ್ಪನವರಿಗೆ ರಾಜೇಂದ್ರ ಪ್ರಸಾದರ ಪರಿಚಯವಿತ್ತು.  ರಾಜೇಂದ್ರ ಪ್ರಸಾದರಿಗೆ ತಿಮ್ಮಪ್ಪ ಮಾಸ್ತರರಲ್ಲಿ ತುಂಬಾ ಗೌರವ. ತಿಮ್ಮಪ್ಪ ಮಾಸ್ತರರು ಅವರನ್ನು ಕಂಡು ಮಾತನಾಡಿಸಬಹುದಾಗಿತ್ತು.

ಆದರೆ ಅವರು ಹಾಗೆ ಮಾಡದೆ ಒಬ್ಬ ಸಾಮಾನ್ಯನಂತೆ ಜನರ ಮಧ್ಯೆ ಕುಳಿತುಬಿಟ್ಟರು.

ರಾಜೇಂದ್ರ ಪ್ರಸಾದರು ಸಭೆಗೆ ಬಂದರು. ನೆರೆದ ಆ ದೊಡ್ಡ ಜನಸಮುದಾಯದ ಮಧ್ಯದಲ್ಲಿಯೂ ನಿಷ್ಕಾಮ ಕರ್ಮಿ ತಿಮ್ಮಪ್ಪ ಮಾಸ್ತರರನ್ನು ಗುರುತಿಸಿದರು. ತಮ್ಮ ಸಮೀಪದಲ್ಲಿ ಕುಳಿತವರನ್ನು ಕರೆದು, ’ಅವರು ತಿಮ್ಮಪ್ಪ ನಾಯಕರಲ್ಲವೆ? ಇಲ್ಲಿಗೇ ಕರೆದುಕೊಂಡು ಬನ್ನಿ’ ಎಂದು ಹೇಳಿದರು. ತಿಮ್ಮಪ್ಪ ಮಾಸ್ತರರನ್ನು ವೇದಿಕೆಯ ಮೇಲೆ ಕರೆಸಿಕೊಂಡರು.

ತಿಮ್ಮಪ್ಪ ಮಾಸ್ತರರ ವ್ಯಕ್ತಿತ್ವವೇ ಅಂಥದ್ದು. ಆ ತೇಜಃಪುಂಜವಾದ ಮುಖ, ಸರಳ ವ್ಯಕ್ತಿತ್ವ, ನಮ್ರ ಭಾವ ಎಂತಹರಲ್ಲೂ ಗೌರವ ಹುಟ್ಟಿಸುತ್ತಿತ್ತು.

ಗಾಂಧೀಜಿಯ ದಾರಿಯಲ್ಲಿ

ರಾಜಕೀಯ ವಿಷಯದಲ್ಲಿ ಅವರಿಗೆ ಯಾವುದೇ ತೊಡಕು – ತೊಂದರೆಗಳು ಬಂದರೂ ಅದನ್ನು ಗಾಂಧೀಜಿಯವರಿಗೆ ಕಾಗದದ ಮೂಲಕ ತಿಳಿಸಿ ಸಲಹೆ ಕೇಳುತ್ತಿದ್ದರು. ಭಾರತದ ಪಿತಾಮಹ ಗಾಂಧೀಜಿಯವರೊಡನೆ ತಿಮ್ಮಪ್ಪ ಮಾಸ್ತರರಿಗೆ ನೇರ ಸಂಪರ್ಕವಿತ್ತು. ತಿಮ್ಮಪ್ಪ ಮಾಸ್ತರರು ಗಾಂಧೀಜಿಯವರ ನೆರಳಿನಂತೆ ಬದುಕಿದವರು. ಭಾರತದ ಸ್ವಾತಂತ್ರ‍್ಯ ಹೋರಾಟದ ಕಾಲದಲ್ಲಿ ಗಾಂಧೀಜಿಯವರ ಶ್ರಮದ ಫಲವಾಗಿ, ಭಾರತದ ಉದ್ದಗಲ್ಲಕೂ ಅನರ್ಘ್ಯ ರತ್ನಗಳನೇಕ ಹೊರಬಂದವು.

ದೇಶಕ್ಕಾಗಿ ತಮ್ಮ  ಪ್ರಾಣವನ್ನೇ ಕೊಡಲು ಸಿದ್ಧರಾದಂಥ ಇಂಥ ರತ್ನಗಳಲ್ಲಿ ತಿಮ್ಮಪ್ಪ ಮಾಸ್ತರರು ಒಬ್ಬರು. ಭಗವದ್ಗೀತೆ, ’ನಿನ್ನ ಕೆಲಸವನ್ನು ನೀನು ಶ್ರದ್ದೆಯಿಂದ ಮಾಡು, ಅದರ ಫಲದ ಯೋಚನೆ ಮಾಡಬೇಡ, ಫಲಕ್ಕೆ ಆಸೆ ಪಡಬೇಡ’ ಎಂದು ಉಪದೇಶಿಸುತ್ತದೆ. ಈ ಮಾತಿನಂತೆ ಬದುಕಿನುದ್ದಕ್ಕೂ ನಡೆದು ತೋರಿಸಿದವರು ತಿಮ್ಮಪ್ಪನಾಯಕರು. ಪ್ರಸಿದ್ಧಿಯ ಹುಚ್ಚು ಅವರಿಗೆ ಅಂಟಿಕೊಂಡಿರಲಿಲ್ಲ.

ತಿಮ್ಮಪ್ಪ ಮಾಸ್ತರರು ಕೇವಲ ಸ್ವಾತಂತ್ರ‍್ಯ  ಹೋರಾಟಗಾರರಷ್ಟೇ ಅಲ್ಲ. ಒಬ್ಬ ಒಳ್ಳೆಯ ಲೇಖಕರೂ ಆಗಿದ್ದರು. ತಮ್ಮ ವಿಚಾರಗಳನ್ನು ಲೇಖನದ ರೂಪದಲ್ಲಿ ಪ್ರಕಟಿಸಿದ್ದಾರೆ. ಗಾಂಧೀಜಿಯವರ ಕುರಿತು ಪುಸ್ತಕ ಪ್ರಕಟಿಸಿದ್ದಲ್ಲದೆ, ಧಾರ್ಮಿಕ ಕೃತಿಗಳನ್ನು ರಚಿಸಿದ್ದಾರೆ. ಮದ್ಯಪಾನ ಪ್ರತಿಬಂಧ (೧೯೬೫), ಭಾರತ ನವನಿರ್ಮಾಣ ಗಾಂಧೀಜಿ (೧೯೬೭), ಗಾಂಧೀಜಿಯವರ ಆಧ್ಯಾತ್ಮಿಕ ಜೀವನ (೧೯೬೭), ಧರ್ಮ ಸಮನ್ವಯ ದರ್ಶನ (೧೯೭೨), ಮತ್ತು ಶಿವ ಶರಣರ ಸಾಧನಾ ಪಥ (೧೯೭೪) ಇವು ಅವರು ಬರೆದ ಅಮೂಲ್ಯ ಕೃತಿಗಳು.

ಮಾದನಗೇರಿ ಆಶ್ರಮದಲ್ಲಿ

ತಿಮ್ಮಪ್ಪ ಮಾಸ್ತರರು ತಮ್ಮ ಕೊನೆಯ ದಿನಗಳನ್ನು ಹೆಚ್ಚಾಗಿ ಮಾದನಗೇರಿ ಆಶ್ರಮದಲ್ಲಿ ಕಳೆದರು ಎನ್ನಬಹುದು. ಮಾದನಗೇರಿ ಕುಮಟಾ ತಾಲೂಕಿನ ಒಂದು ಚಿಕ್ಕ ಹಳ್ಳಿ.ಹಳ್ಳಿಯ ಶಾಂತ ಪರಿಸರದಲ್ಲಿ ಅವರ ಮನಸ್ಸು ನೆಮ್ಮದಿ ಕಂಡಿತ್ತು. ಅವರ ಲೇಖನ ವ್ಯವಸಾಯಕ್ಕೂ ಇಲ್ಲಿ ಹೆಚ್ಚು ಅನುಕೂಲವಾಗಿತ್ತು.

ತಿಮ್ಮಪ್ಪ ಮಾಸ್ತರರ ಹರಿಜನರು ಕೇರಿಯ ಸಮೀಪದಲ್ಲಿಯೇ ಒಂದು ಆಶ್ರಮ ತೆರೆದು ಅಲ್ಲಿ ಇರಲಾರಂಭಿಸಿದರು. ಹರಿಜನರ ಹಾಗೂ ಬಡಜನರ ಸೇವೆಯಲ್ಲೇ ತಮ್ಮ ಆಯುಷ್ಯ ಕಳೆಯುವ ಆಸೆಯಲ್ಲೇ ಅವರು ಅಲ್ಲಿ ಬಂದು ನೆಲೆಸಿದ್ದು.

ತಿಮ್ಮಪ್ಪ ಮಾಸ್ತರರ ಜೊತೆಯಲ್ಲಿ ಕೆಲಸ ಮಾಡಲು ಕೆಲವರು ಸಿದ್ಧರಾದರು. ಇವರೆಲ್ಲ ಬಡವರಿಗೂ ಹರಿಜನರಿಗೂ ಹಲವು ರೀತಿಗಳಲ್ಲಿ ತಿಳುವಳಿಕೆ ಕೊಡುತ್ತಿದ್ದರು. ಮನೆ – ದೇಹಗಳನ್ನು ಸ್ವಚ್ಛವಾಗಿಡುವುದು, ಏಕೆ ಹೇಗೆ? ಕುಡಿತದಿಂದಾಗುವ ಕೆಟ್ಟ ಪರಿಣಾಮಗಳೇನು, ಸಾಮಾನ್ಯ ಕಾಯಿಲೆಗಳಿಗೆ ಸುಲಭವಾದ ಚಿಕಿತ್ಸೆ ಏನು – ಇಂತಹ ಅತ್ಯಂತ ಉಪಯುಕ್ತ ವಿಷಯಗಳನ್ನು ವಿವರಿಸುತ್ತಿದ್ದರು. ಹರಿಜನ ಹೆಂಗಸರ ಹೆರಿಗೆಗೆ ಕಷ್ಟವಿತ್ತು. ಅವರಿಗೆ ವೈದ್ಯರ ಮತ್ತು ದಾದಿಯರ ನೆರವು ಸಿಕ್ಕುತ್ತಿರಲಿಲ್ಲ. ತಿಮ್ಮಪ್ಪ ಮಾಸ್ತರರು ಅವರ ಹೆರಿಗೆಗೆ ಮತ್ತು ಹತ್ತು ದಿನ ಅವರನ್ನು ನೋಡಿಕೊಳ್ಳಲು ವ್ಯವಸ್ಥೆ ಮಾಡಿದರು.

ತಿಮ್ಮಪ್ಪ ಮಾಸ್ತರರು ಹೊಲ ಹಾಗೂ ತೆಂಗಿನ ತೋಟ ಗೇಣಿಗೆ ತೆಗೆದುಕೊಂಡು ಅಲ್ಲಿ ತಮ್ಮ ಜೊತೆಗಾರರ ಸಹಾಯದಿಂದ ಉತ್ತು, ಬಿತ್ತು, ನೀರುಣಿಸಿ, ಬೆಳೆ ಬೆಳೆಸಿದರು.

ತಾವು ಬೆಳೆದ ಬೆಳೆಯನ್ನು ಸರಿಯಾದ ಬೆಲೆಗೆ ಮಾರಿ ಬಂದ ಹಣದಲ್ಲಿ  ಒಡೆಯನ ಗೇಣಿ ಕೊಟ್ಟು ಉಳಿದ ಹಣವನ್ನು ಹರಿಜನರ ಸೇವೆಗೂ ಗಾಂಧೀ ಸ್ಮಾರಕ ನಿಧಿಗೂ ಅರ್ಪಿಸುತ್ತಿದ್ದರು.

ಅವರು ತಮಗೆಂದು ಹಣವನ್ನು ಎಂದೂ ಇಟ್ಟುಕೊಳ್ಳುತ್ತಿರಲಿಲ್ಲ. ಅವರು ಕರ್ನಾಟಕ ಪ್ರಾಂತದ ಗಾಂಧೀ ಸ್ಮಾರಕ ನಿಧಿಯ ಸಂಚಾಲಕರಾಗಿದ್ದರು. ಆಗ ಅವರು ಪಡೆಯುತ್ತಿದ್ದ ಸಂಬಳ ತಿಂಗಳಿಗೆ ಮೂವತ್ತೈದು ರೂಪಾಯಿ; ಅವರ ಬಳಿ ಕೆಲಸ ಮಾಡುತ್ತಿದ್ದ ಗುಮಾಸ್ತೆಯ ಸಂಬಳ ತೊಂಬತ್ತು ರೂಪಾಯಿ! ಅವರ ಆಶ್ರಮದಲ್ಲಿ ನೂಲುವುದು, ನೇಯುವುದು, ಪ್ರಾರ್ಥನೆ ಹಾಗೂ ಓದುವುದನ್ನು ಹೇಳಿಕೊಡಲಾಗುತ್ತಿತ್ತು.

ಹರಿಜನ ಮಕ್ಕಳಿಗಾಗಿ ’ಬಾಲವಾಡಿ’ ತೆರೆದು ಅವರ ಪ್ರಗತಿಗಾಗಿ ಸಂಪೂರ್ಣ ಮನಸ್ಸು ತೊಡಗಿಸಿದರು ಮಾಸ್ತರರು.

ಆಶ್ರಮದಲ್ಲಿ ಕೆಲವು ಗೋವುಗಳನ್ನು ಸಾಕಿ ಗೋಸೇವೆ ಮಾಡಿದರು. ಬಡಬಗ್ಗರ ಸಂಸಾರಗಳಲ್ಲಿ ಮದುವೆಗಳಿಗೆ ಏರ್ಪಾಡು ಮಾಡಿದರು. ಇವೆಲ್ಲದರ ಜೊತೆಗೆ ಆಗಾಗ ’ಭೂದಾನ’ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು.

ಕಡೆಯ ದಿನಗಳು

ಮಾದನಗೇರಿಯಲ್ಲಿ ತಿಮ್ಮಪ್ಪನವರು ಇರುವಾಗಲೇ ನಮ್ಮ ಸರ್ಕಾರ ಮದ್ಯಪಾನ ಪ್ರತಿಬಂಧ ಸಡಲಿಸುವ ಕಾಯಿದೆ ತಂದಾಗ ತಿಮ್ಮಪ್ಪ ಮಾಸ್ತರರಿಗೆ ತುಂಬ ದುಃಖವಾಯಿತು.

ಗಾಂಧೀಜಿ ಕಟ್ಟಿದ ನಾಡಿನಲ್ಲಿ ಮದ್ಯಪಾನದಂಥ ಅನಿಷ್ಟಕ್ಕೆ ಸ್ಥಳ ಸಿಗಬಾರದು. ಅದು ಬಡಜನರ ಆರ್ಥಿಕ ಹಾಗೂ ನೈತಿಕ ಅಧೋಗತಿಗೆ ಕಾರಣವಾಗುತ್ತದೆ ಎಂದು ತಿಮ್ಮಪ್ಪನವರ ತೀವ್ರ ಭಾವನೆ. ಮದ್ಯಪಾನವನ್ನು ತಡೆಗಟ್ಟುವುದರ ಅಗತ್ಯದತ್ತ ಜನರ ಗಮನ ಸೆಳೆಯಲು  ಅವರು ೧೯೬೫ರ ನವೆಂಬರ‍್ರ ಹದಿಮೂರರಿಂದ ಹದಿನಾಲ್ಕು ದಿನಗಳ ಉಪವಾಸ ಕೈಗೊಂಡರು. ಉಪವಾಸದಲ್ಲಿ ಅವರು ಬರಿಯ ನೀರನ್ನಲ್ಲದೆ ಬೇರೆ ಏನನ್ನೂ ಮುಟ್ಟಲಿಲ್ಲ.

ತಿಮ್ಮಪ್ಪ ಮಾಸ್ತರರು ತಮ್ಮ ನಿರ್ಧಾರದಂತೆ ಹದಿನಾಲ್ಕು ದಿನಗಳ  ಉಪವಾಸವನ್ನೂ ಮಾಡಿ ಮುಗಿಸಿದರು.

ಈ ಉಪವಾಸದಿಂದ ಮಾಸ್ತರರ ಆರೋಗ್ಯ ಕೆಡಲು ಆರಂಭಿಸಿತು. ಇನ್ನು ಮಾದನಗೇರಿ ಆಶ್ರಮದಲ್ಲಿ ಇರಲು ತಮಗೆ ತೊಂದರೆಯಾಗುತ್ತದೆ ಎಂದುಕೊಂಡು ಇಲ್ಲಿಂದ ಅಂಕೋಲೆಗೆ ಹೊರಡಬೇಕೆಂದು ಕೊಂಡರು.

ಆದರ ಬಡವರಿಗಾಗಿ, ಹರಿಜನರ ಉಪಚಾರಕ್ಕಾಗಿ ದುಡಿಯುತ್ತಿದ್ದ ಅಮರಾವತಿ ಪೈ ಕಾಯಿಲೆಯಿಂದ ಹಾಸಿಗೆ ಹಿಡಿದರು. ಅವರ ಸಂಬಂಧಿಕರು ಯಾರೂ ಅವರನ್ನು ಮುಟ್ಟಿ ಆರೈಕೆ ಮಾಡಲು ಒಪ್ಪಲಿಲ್ಲ.  ಹೀಗಾಗಿ  ತಿಮ್ಮಪ್ಪ ಮಾಸ್ತರರೇ ತಮ್ಮ ಜೀರ್ಣವಾದ ದೇಹ ಹೊತ್ತುಕೊಂಡೇ ಅಮರಾವತಿ ಪೈಯವರ ಶುಶ್ರೂಷೆಗೆ ನಿಂತರು.

ತಮ್ಮ ದೇಹ ಕಾಯಿಲೆಯಲ್ಲಿ ಬಳಲುತ್ತಿದ್ದಾಗಲೇ ’ಶಿವಶರಣರ ಸಾಧನ ಪಥ’ ಎಂಬ ಪುಸ್ತಕ ಬರೆದು ಮುಗಿಸಿದರು. ಅದನ್ನು ಪ್ರಕಟಿಸಲು ತಾವೇ ಬಾಗಲಕೋಟೆಗೆ ಹೋಗಿ ಬಂದರು. ಬಾಗಲಕೋಟೆಯಲ್ಲಿ ಅವರ ಆರೋಗ್ಯ ತೀರ ಕೆಟ್ಟಿತು. ಅದಕ್ಕಾಗಿ ಅವರು ಬೆಳಗಾವಿಯಿಂದ ಹದಿನೆಂಟು ಮೈಲು ದೂರದಲ್ಲಿರುವ ನರಸಿಂಹಪುರದ ಆಶ್ರಮಕ್ಕೆ ಬಂದರು. ಅವರನ್ನು ನೋಡಿಕೊಳ್ಳಲು ಇಬ್ಬರು ಸ್ವಯಂ ಸೇವಕರನ್ನು ನೇಮಿಸಲಾಗಿತ್ತು.

ತಿಮ್ಮಪ್ಪ ಮಾಸ್ತರರು ಈಗ ತೀರ ಹಣ್ಣಾಗಿದ್ದರು. ಎಸಳು ಉದುರಿದ್ದ ಹೂವಿನಂತೆ ಎಲುಬು – ಚರ್ಮದ ಹೊದಿಕೆ ಹೊತ್ತ ದೇಹ ಅವರದಾಗಿತ್ತು. ಆದರೂ ಮನಸ್ಸು ಇನ್ನೂ ತಾನು ದೀನ ದಲಿತರ ಸೇವೆ ಮಾಡಬೇಕು. ಅವರಿಗಾಗಿ ದುಡಿಯಬೇಕು ಎನ್ನುವ ಆಸೆ ಹೊತ್ತು ನಿಂತಿತ್ತು.

೧೯೭೪ರ ಅಕ್ಟೋಬರ್ ೫ರ ರಾತ್ರಿ ತಿಮ್ಮಪ್ಪ ಮಾಸ್ತರರು ಬಿದ್ದು ಕಾಲಿನ ಎಲುಬು ಮುರಿಯಿತು. ಆಶ್ರಮದಲ್ಲೇ ಕೆಲವು ದಿನಗಳವರೆಗೆ ನಿಸರ್ಗ ಚಿಕಿತ್ಸೆ ಮಾಡಲಾಯಿತು. ಆದರೆ ಅದರಿಂದ ಹೆಚ್ಚಿನ ಗುಣ ಕಾಣದ್ದರಿಂದ ಅವರನ್ನು ಮೂವತ್ತರಂದು ಬೆಳಗಾವಿಯಲ್ಲಿ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಗುಣ ಕಾಣಲಿಲ್ಲ. ನವೆಂಬರ್ ೧೯ರಂದು ಅವರನ್ನು ಅಂಕೋಲೆಯ ಅವರೇ ನಿರ್ಮಿಸಿದ ’ಗ್ರಾಮಸೇವಾ ಸಮಿತಿಗೆ’ ತರಲಾಯಿತು.

ನವೆಂಬರ್ ೨೬ರ  ಮಧ್ಯಾಹ್ನ ೧೨-೨೫ಕ್ಕೆ ತಿಮ್ಮಪ್ಪ ಮಾಸ್ತರರು  ಕೊನೆಯುಸಿರೆಳೆದರು.

ತಿಮ್ಮಪ್ಪ ಮಾಸ್ತರರ ಕೊನೆಯ ಆಸೆಯಂತೆ ಮುಂಡುಗೋಡು ತಾಲೂಕಿನ ಕುಸೂರಿನಲ್ಲಿ ಗೋವಿಂದಧಾಮ ಎಂಬ ಆಶ್ರಮ ಅವರ ಸ್ನೇಹಿತ ಹರಿ ಪೈ ಮತ್ತು ಸಂಗಡಿಗರ ಸಹಾಯದಿಂದ ತಲೆ ಎತ್ತಿ ನಿಂತಿದೆ.

ತಿಮ್ಮಮ್ಮ ಮಾಸ್ತರರದು ಆದರ್ಶ ಜೀವನ, ಸಾರ್ಥಕ ಬದುಕು; ಅವರು ಮದುವೆಯಾಗಲಿಲ್ಲ. ಅವರದೆಂದು ಸಂಸಾರವಿಲ್ಲ. ದುಡಿದದ್ದೆಲ್ಲ ದೇಶಕ್ಕಾಗಿ, ಬಡವರಿಗಾಗಿ ತಿಮ್ಮಪ್ಪ ಮಾಸ್ತರರು ಈಗ ಇಲ್ಲದಿದ್ದರೂ ಅವರು ಬೆಳಗಿದ ದೀಪ ನಂದಾದೀಪದಂತೆ ನಮ್ಮೆದುರು ನಿರಂತರವಾಗಿ ಉರಿಯುತ್ತಿದೆ. ದಾರಿ ದೀಪವಾಗಿ ನಮ್ಮನ್ನು ಬೆಳಕಿನಡೆ ಮುನ್ನಡೆಸುತ್ತಿದೆ.