ಏಕ ಪುರಾತನ ಪುರುಷ ನಿರಂಜನ
ಪಾದದಿ ಚಿತ್ತವ ನಿಲಿಸೋ.
ಆದಿಸತ್ಯನವ, ಕಾರಣ ಕಾರಣ
ಚರಾಚರದೊಳಗು ಪ್ರಾಣಮಯ.

ನಿತ್ಯ ಅತೀಂದ್ರಿಯ ಚೈತನ್ಯ ಸ್ವರೂಪ
ಹೃದಿ ಕಂದರದೊಳು ವಿರಾಜಿತ.
ಜ್ಞಾನ ಪ್ರೇಮ ಪುಣ್ಯಾದಿ ಭೂಷಿತ
ಪ್ರಶಾಂತ ಮೂರುತಿ, ಅನಂತಗುಣಭೂತ.

ಚಿರಕ್ಷಮಶೀಲ, ಮಂಗಳದಾತ,
ಭವಸಾಗರದೊಳು ನಿಕಟ ಸಹಾಯ.
ಜೀವರೂಪನವ, ಜ್ಯೋತಿರ್ಮಯನು
ಸರ್ವಾಶ್ರಯ ಸಂತಾಪಹರ.

ಪಾಪಪುಣ್ಯಗಳ ಪರಮ ನ್ಯಾಯವಾನ್,
ದಯಾ ಸಿಂಧು ಮೇಣ್ ಕೃಪಾಮಯ.
ಆತನ ಮಹಿಮೆಯ ನೆನೆವ ತೃಷಿತ ಮನ
ಕರೆಯುವುದೊಲವಿನ ಕಂಬನಿಯ.

ಅಂಥ ಶ್ರೀ ಮುಖವ ನೋಡಿ ನಲಿಯೊ ಮನ,
ನಿರಂತರವು ಎದೆ ಹಸಿದಿರಲಿ.
ಧ್ಯಾನ ಪೂಜೆ ಪ್ರಾರ್ಥನೆಯ ರೂಪದಲಿ
ತಿರುಕನಂತೆ ಇರು ಬಾಗಿಲಲಿ !