ಸತ್ಯವತಿ : ಛೇ, ನನ್ನನ್ನು ಮುಟ್ಟಬೇಡಿರಿ, ನನ್ನ ಬಳಿ ಬರಬೇಡಿರಿ.

ತಿರುನೀಲಕಂಠ : ನಾನು ಕೇಳಲಾರೆ.ನಿನ್ನನ್ನು ಬಲವಂತದಿಂದ ಮುಟ್ಟುವೆ. ಏನು ಮಾಡುವೆ ನೋಡು.

ಸತ್ಯವತಿ : ಮುಟ್ಟಬೇಡಿರಿ. ದೂರ ಸರಿದು ನಿಲ್ಲಿರಿ. ಎಷ್ಟು ಹೇಳಿದರೂ ದುರಾಗ್ರಹದಿಂದ ಬರುತ್ತಿರುವಿರಿ.ನೀವು ಮುಟ್ಟಿದರೆ ಶಿವನಾಣೆಯಾಗಿದೆ !

(ಒಳಗೆ ಹೋಗಿ ಬಿಡುವಳು).

ತಿರುನೀಲಕಂಠ : (ಬೆರಗಾಗಿ) ಶಿವಶಿವಾ, ಇದೇನು ?ಸತ್ಯವತಿಯು ನನಗೆ ಶಿವನಾಣೆ ಹಾಕಿ ಹೋದಳಲ್ಲ! ಎಂಥ ಕಠೋರ ಪರಿಸ್ಥಿತಿಯಿದು.ನಾನು ಪಾತರದವಳ ಸಂಗ ಮಾಡಿದವನಲ್ಲ.ಮಹಾಶರಣನೆಂದು ನಾಡಿನಲ್ಲಿ ಪ್ರಖ್ಯಾತನಾಗಿರುವೆ.ನನ್ನ ಮಾತಿನ ಮೇಲೆ ಸತ್ಯವತಿಗೆ ಶ್ರದ್ಧೆಯೆ ಉಳಿಯದಂತಾಯಿತಲ್ಲ ! ಇಲ್ಲಿಯವರೆಗೆ ಅವಳು ನನ್ನ ಅರ್ಧಾಂಗಿಯೆಂದು ನಂಬಿ ನನ್ನ ಸರ್ವಸ್ವವನ್ನೆ ಒಪ್ಪಿಸಿದ್ದೆ.ಇಂದಿನ ಪರಿಸ್ಥಿತಿಯೇ ಬದಲಾಯಿತು.ಇರಲಿ ಇನ್ನು ತೀರ್ಥಯಾತ್ರೆಯ ನೆವದಲ್ಲಿ ನಾನು ದೇಶಾಂತರ ಹೋಗುವದೇ ಉತ್ತಮ !!

(ಉದಾಸೀನ ಭಾವದಿಂದ ಹೊರಗೆ ಬಂದು)

ಅವ್ವ ದೂತಿ, ಮಲಗಿಕೊಂಡಿರುವಿಯೇನು ?

ದೂತಿ : ಶರಣರೆ, ಯಾಕೆ ಕರೆದಿರಿ ?

ತಿರುನೀಲಕಂಠ :

ಪದ :

ನಿಶ್ಚಿಂತನಾದೆ ಸ್ವಾತಂತ್ರ್ಯವಿಂದು ದೊರಕಿದುದು ॥ಪಲ್ಲವಿ ॥

ಶಿವನ ಅನಿವಾರ್ಯ ದಯೆ ಇಂದೆನ್ನ
ಮೇಲೆ ತಾನಾದುದು ಸಂಪೂರ್ಣ
ಹೀಗೆ ಆಕಸ್ಮಿಕವಾಯಿತು ತಾನು
ಅಂತಾದ ಬಗೆಯ ತಿಳಿಯೇನು ನಾನು ॥

ವಿಧಿವಿಲಾಸದ ಬಗೆಯನ್ನು
ದೇವಾದಿಗಳು ಅರಿಯರಿನ್ನು
ಮಿಕ್ಕ ಮಾನವರ ಪಾಡೇನು
ಇನ್ನು ನಡೆಯುವದು ಏನೇನೊ ॥

ಮಲಪ್ರಭಾ ನದಿತೀರದಲ್ಲಿ
ಮೆರೆವ ಕಾದರೊಳ್ಳಿ ಕ್ಷೇತ್ರದಲ್ಲಿ
ನೆಲಸಿದ ಶಿವಾಕ್ಷಜನಲ್ಲಿ
ಘನಭಕ್ತಿ ಅಜಸ್ರ ಎನ್ನದಿರಲಿ ॥

ಅವ್ವ ದೂತೆ, ನಾನು ಇಲ್ಲಿಯವರೆಗೆ ಸತ್ಯವತಿಯು ಮಹಾಸೂಜ್ಞಳೆಂದು ತಿಳಿದಿದ್ದೆ.ಪಂಚಪತಿವ್ರತೆಯರಾದ ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರಿಯರ ಮಾಲಿಕೆಯಲ್ಲಿ ಇವಳೂ ಬರುವಳೆಂದು ನಂಬಿದ್ದೆ.ಅದು ಇಂದು ತಪ್ಪಿಹೋಯಿತು.ಏನು ಮಾಡುವದು ! ಮೋಸವಾಯಿತು !

ದೂತಿ : ಅಪ್ಪಾ, ಅದು ಹೇಗೆ ? ಅವ್ವನವರೆಂದರೆ ಸಾಕ್ಷಾತ್ ಗೌರೀದೇವಿಯರ ಅವತಾರವೆಂದು ಊರ ಜನರೆಲ್ಲ ಭಕ್ತಿಯಿಂದ ನಡೆದುಕೊಳ್ಳುತ್ತಾರೆ.ಈಗ ನಡೆದ ವ್ಯತ್ಯಾಸವೇನು ?

ತಿರುನೀಲಕಂಠ :  ಕೇಳು.

ಪದ :

ಅಲ್ಲದಂಥ ಅಪವಾದವ ಎನಗ್ಹೊರಿಸಿ ಇವಳು
ಕಂಡಂತೆ ನಿಷ್ಠುರದಿಂದ ನುಡಿದಳು ॥ಪಲ್ಲವಿ ॥

ಗಂಡಹೆಂಡಿರೆಂಬ ಮರ್ಯಾದೆ ನೋಡಲಿಲ್ಲ
ಎನ್ನ ಮಾತನ್ನು ತುಸು ನಂಬಲಿಲ್ಲ
ಎನ್ನ ಮಾನ ಕಳೆದಳು ಇವಳು ಹೆಂಗಸಲ್ಲ ॥

ಬೆಳಗುವದೆನ್ನ ಕೀರ್ತಿ ಅವಿಚ್ಛಿನ್ನವಾಗಿ
ನಾಡೊಳೆಲ್ಲೆಲ್ಲಿಯೂ ಸರಸಾಗಿ
ಇಂದೇ ಕಲಂಕ ತಟ್ಟೀತದಕೆ ನಿಜವಾಗಿ ॥

ದೂತೆ, ನಾನಾರೆಂಬುದು ನನಗೂ ಗೊತ್ತಿದೆ.ಸತ್ಯವತಿಯು ನನಗೆ ಪಾತರದವಳೊಡನೆ ಬೆರೆತು ಬಂದಿರುವೆನೆಂದು ಕಂಡಕಂಡಂತೆ ಮಾತಾಡಬೇಕೆ ? ಶರಣನಾಗಿ ವರ್ತಿಸುವ ನಾನು ಘೋರ ನರಕಕ್ಕೆ ಗುರಿಯಾಗುವ ನೀಚಕೃತ್ಯ ಮಾಡುವೆನೆ ? ನಿಷ್ಕಳಂಕನಾದ ನನಗೆ ಸಿಕ್ಕಂತೆ ಮತಾನಾಡಿದಳು ತನ್ನನ್ನು ಮುಟ್ಟಿದರೆ ಶಿವನಾಣೆ ಎಂದಳು.ಅದರಿಂದ ಗಂಡಹೆಂಡಿರೆಂಬ ನಮ್ಮಿಬ್ಬರ ನಡುವಿನ ಸಂಬಂಧ ಇಂದು ಹರಿದು ಹೋಯಿತು.

ದೂತಿ : ಅಪ್ಪನವರೆ, ಅವ್ವನವರು ಶಿವನಾಣೆ ಹಾಕಬಾರದಿತ್ತು.ಮನಸ್ಸನ್ನು ಕಲ್ಲು ಮಾಡಿಕೊಳ್ಳಬೇಡಿರಿ.ಅವ್ವನವರಿಗೆ ಚೆನ್ನಾಗಿ ತಿಳಿಸಿ ಹೇಳುತ್ತೇನೆ.ಸ್ವಲ್ಪ ಸಮಾಧಾನ ತಾಳ್ರಿ.

ತಿರುನೀಲಕಂಠ :  ದೂತೆ, ಇನ್ನು ಎಲ್ಲವೂ ವ್ಯರ್ಥ.ಅವಳಿಗೆ ಏನನ್ನೋ ಹೇಳುವ ಕಾರಣವಿಲ್ಲ.ಆ ಪಾತರದ ರಂಭಾತಾಯಿಗೆ ಈ ಪೋಷಾಕನ್ನು ಕೊಟ್ಟು ಬಾ.ನಾನಿನ್ನು ಆ ಪರಶಿವನ ಧ್ಯಾನಾನಂದದಲ್ಲಿ ಮಗ್ನನಾಗುತ್ತೇನೆ.

ದೂತಿ : ಆಗಲಿ ತಂದೆ ! ಇನ್ನೂ ರಾತ್ರಿ ಬಹಳವಿದೆ.ತುಸು ವಿಶ್ರಾಂತಿ ತೆಗೆದು ಕೊಳ್ರಿ.ನಾನೂ ತುಸು ನಿದ್ದೆ ಮಾಡುತ್ತೇನೆ.

ತಿರುನೀಲಕಂಠ :  ಹೋಗು, ಮಲಗಿಕೊ, (ಇಬ್ಬರೂ ಹೋಗುವರು).

***

 ಪ್ರವೇಶ : 4
(ಪರಮಾತ್ಮನು ಸನ್ಯಾಸಿಯ ವೇಷದಲ್ಲಿ ಆಗಮಿಸುವನು)

ಸನ್ಯಾಸಿ :

 ಪದ :

ಬಂದ ಶ್ರೀಶಂಕರ ನರಲೋಕಕೆ ॥ಪಲ್ಲವಿ ॥

ಚಂಡಾರಿ ಭಕ್ತರ ಮಾಡಲುದ್ಧಾರ
ಪೂರ್ವದಿ ಬಂದ ತೆರ ಶರಣ ಪರಿಕರ ॥

ಶರಣರ ಸತ್ವವ ಧರೆಯೊಳು ಪ್ರಚುರವ
ಮಾಡಲೆಂದು ನೆವವ ಯೋಚಿಸಿ ತಂತ್ರವ ॥

ದಂಪತಿಗಳಿಗತಿ ಕಠಿಣ ಪ್ರಸಂಗ ಬಂತು
ಅದರಿಂದವರ ಧೃತಿ ಹರಿಸಲು ಆಗಿ ಮತಿ ॥

ಓಹೋ, ಶರಣಪುಂಗವನಾದ ತಿರುನೀಲಕಂಠನು ತನ್ನ ಸತಿ ಸತ್ಯವತಿಯು ಮುಟ್ಟಿದರೆ ಶಿವನಾಣೆ ಎಂದು ಆಣೆ ಹಾಕಿದ ನಿಮಿತ್ತ ಇದುವರೆಗೂ ನನ್ನ ಅರ್ಚನೆ ಧ್ಯಾನಾನಂದದಲ್ಲಿಯೆ ತಲ್ಲೀನನಾಗಿದ್ದಾನೆ.ಸತ್ಯವತಿಯು ಲಿಂಗಪೂಜೆ, ಜಂಗಮ ದಾಸೋಹದಿಂದ ತೃಪ್ತಿ ಹೊಂದುತ್ತಿದ್ದಾಳೆ.ಆ ದಂಪತಿಗಳಿಬ್ಬರಿಗೂ ಈಗ ನೂರು ತುಂಬಿದ ಮುಪ್ಪು ಆವರಿಸಿದೆ.ಅವರ ಜಗಳವಾದಾಗ ತಿರುನೀಲಕಂಠನ ವಯಸ್ಸು 22, ಸತ್ಯವತಿಯ ವಯಸ್ಸು 16 ಇತ್ತು.ಇಂಥ ಯೌವನದಲ್ಲಾದ ವಿಷನಿಮಿಷದಿಂದ ಇದೂವರೆಗೂ ನನ್ನ ಸೇವೆಯಲ್ಲಿಯೇ ಉಳಿದಿದ್ದಾರೆ.ಭಕ್ತ ಪ್ರಾಣೋ ಮಮ ಎಂದು ಬಿರುದು ಧರಿಸಿದ ನಾನು ಅವರನ್ನು ಇದುವರೆಗೂ ಹೊರಳಿ ಸಹ ನೋಡಲಿಲ್ಲ.ಅಂಥ ಮಹಾಶರಣರ ಬಾಳುವೆ ನಿರರ್ಥಕವಾಗಬಾರದು. ಅವರನ್ನು ಸತ್ವಪರೀಕ್ಷೆಗೆ ಗುರಿಪಡಿಸುವೆ.ಮತ್ತೆ ಆಶೀರ್ವಾದಿಸಿ ಅವರಿಗೆ ನವಯೌವನವಿತ್ತು.ಸಂಸಾರ ಸುಖವನ್ನು ಕೊಟ್ಟು, ಕೊನೆಗೆ ಶಿವಸಾಯುಜ್ಯ ಪದವನ್ನು ಕರುಣಿಸುತ್ತೇನೆ.ಈಗಲೇ ಪೊನ್ನಾಂಬಲೇಶ್ವರ ನಗರಕ್ಕೆ ಹೋಗುವೆ. (ಹೋಗುವನು).

ದೂತಿ : ಯಾಕ್ರೀ ತಾಯಿ, ಬಹಳ ಚಿಂತೆಯೊಳಗೆ ಕೂತಿದ್ದೀರಿ ; ಏನು ಅಂಥ ಪ್ರಸಂಗ ಬಂದೈತ್ರಿ?

ಸತ್ಯವತಿ : ದೂತೆ, ಈ ನನ್ನ ಜನ್ಮವೇ ಬೇಸರವಾಗಿ ಹೋಯಿತು.ನಮ್ಮ ಹಣೆಬರದಲ್ಲಿ ಇನ್ನೂ ಎಂತೆಂಥ ವಿಪತ್ತು ಬರದಿದೆಯೋ ! ಆ ಪರಮಾತ್ಮನಿಗೇ ಗೊತ್ತು.

ಪದ :

ಶಿವನು ಶಂಕರನು ಇಟ್ಟಂತೆ ಇರುವೆನು ನಾನು ॥ಪಲ್ಲವಿ ॥

ಕರುಣೆ ಆತನದಿರಲಿ ಬರುವದೆಲ್ಲ ಬರಲಿ
ಯಾರಿಂದೇನಾಗುವದಿಲ್ಲಿ ಮೊರೆಹೊಕ್ಕೆ ನಾಥನಲ್ಲಿ ॥

ಈ ಸಂಸಾರ ಹೇಯ ಇದರಿಂದ ಬಹು ಭಯ
ಬಂದಿದೆನಗೆ ಮಾಯಾವಶದಿ ತಾಪತ್ರಯ ॥

ಪತಿದೇವ ಭಾಷಣ ಬಿಟ್ಟನೆನ್ನೊಡನೆ ತಾನು
ಅದರಿಂದ ಎನ್ನ ಪ್ರಾಣ ಉಳಿಯದು ಕೇಳಿನ್ನ ॥

ಅವ್ವಾ ದೂತೆ, ಎಂದೊ ಜಗಳವಾಡಿದ ಮಾತು ! ಈಗ ವೃದ್ಧಾಪ್ಯ ಆವರಿಸಿದೆ. ಪತಿದೇವರು ಇದುವರೆಗೆ ನನ್ನ ಸಂಬಂಧವನ್ನೇ ಕಡಿದುಕೊಂಡಿದ್ದಾರೆ.ಮಾತು ಸಹ ಆಡಲೊಲ್ಲರು !! ಎಷ್ಟು ಕ್ಷಮೆ ಬೇಡಿದರೂ ಮನ್ನಿಸರು.ಮುಂದೆ ನನ್ನ ಗತಿಯೇನವ್ವ ?

ದೂತಿ : ಏನು ಮಾಡುವದು ತಾಯಿ ! ನೀವು ಆ ಕೆಟ್ಟ ಗಳಿಗೆಯಲ್ಲಿ ಕಂಡಂತೆ ಮಾತಾಡಿ ಆರೋಪ ಹೊರಿಸಿದಿರಿ.ಅಷ್ಟೇ ಅಲ್ಲದೆ ಶಿವನಾಣೆ ಹಾಕಿದಿರಿ.ಈಗ ಆ ಶರಣರು ಶಿವಧ್ಯಾನ ಮಾಡುತ್ತ ಮನೆಯಲ್ಲಿದ್ದುದೇ ಹೆಚ್ಚಿನದು.

(ಸನ್ಯಾಸಿ ವೇಷದ ಶಿವ ಬರುವನು)

ಸನ್ಯಾಸಿ : ಜೈ ಶಂಕರ ! ಜೈ ಶಂಕರ !!

ದೂತಿ : ಯಾರ‌್ರಿ ನೀವು ?

ಸನ್ಯಾಸಿ : ನಾನು ಸನ್ಯಾಸಿ.

ದೂತಿ : ಸನ್ಯಾಸಿಯಾದರೆ ಇಲ್ಲಿ ಯಾತಕ್ಕೆ ಬಂದಿರಿ ?ನಿಮಗೆ ಹಿಟ್ಟು ನೀಡಬೇಕೇನು ?

ಸನ್ಯಾಸಿ : ಮಹಾಶರಣರಾದ ತಿರುನೀಲಕಂಠರ ಹತ್ತಿರ ಬಂದಿದ್ದೇನೆ. ಅವರು ಎಲ್ಲಿದ್ದಾರೆ ?

ದೂತಿ : ಅವರು ಒಳಗೆ ಇದ್ದಾರೆ.

ಸನ್ಯಾಸಿ : ಅವರನ್ನು ಕರೆಯಿರಿ.ಅಯ್ಯ ಮಹಾಶರಣರೆ, ನಾನೊಬ್ಬ ಸನ್ಯಾಸಿ ಬಂದಿರುವೆ, ಭೆಟ್ಟಿಯಾಗುವಿರಾ ?

ತಿರುನೀಲಕಂಠ : (ಬಂದು ನೋಡಿ) ಬರಬೇಕು ಸ್ವಾಮಿ, ನಿಮ್ಮ ಪಾದಕ್ಕೆ ನಮಸ್ಕರಿಸುತ್ತೇನೆ.

ಸನ್ಯಾಸಿ : ಓಹೊ, ನಿಮ್ಮಂಥ ಮಹಾಶರಣರು ನನ್ನಂಥ ಹರಕು ಸನ್ಯಾಸಿಗೆ ನಮಸ್ಕಾರ ಮಾಡಬೇಕೆ? ಕಲ್ಯಾಣಮಸ್ತು ! ಏಳು.

ಸತ್ಯವತಿ : ಸ್ವಾಮಿ, ತಮ್ಮ ಪಾದಕ್ಕೆ ಈ ಬಡದಾಸಿಯು ನಮಸ್ಕರಿಸುತ್ತಾಳೆ.

ಸನ್ಯಾಸಿ : ತಂಗಿ, ಪುತ್ರವತೀ ಭವ !

ತಿರುನೀಲಕಂಠ :  ಸ್ವಾಮಿ, ನೀವು ಎತ್ತಣಿಂದ ಬಂದಿರಿ ?ಮಹಾತ್ಮರೆ, ನಿಮ್ಮ ಜೀವನವನ್ನೆ ಪರಮಾತ್ಮನಿಗೆ ಸಮರ್ಪಣೆ ಮಾಡಿ ಆ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡವರು ನೀವು.ಆ ಶಿವನ ಸಾಮರಸ್ಯವನ್ನು ಪಡೆದ ನೀವು ತೀರ್ಥಯಾತ್ರೆ ಮಾಡುತ್ತ ನಮ್ಮಲ್ಲಿಗೆ ಬಂದಿದ್ದೀರಿ.ಕಾರಣ ಇಂದು ಬಡವನ ಮನೆಗೆ ಭಾಗ್ಯಲಕ್ಷ್ಮಿಯೇ ಬಂದಂತಾಗಿದೆ.ಇರಲಿ, ಈ ಬಡ ದಾಸನ ಮೇಲೆ ಅಂತಃಕರಣ ತೋರಿ ಸೇವೆಯನ್ನು ಸ್ವೀಕರಿಸಿ ಉದ್ಧರಿಸಬೇಕು.

ಸನ್ಯಾಸಿ : ಶರಣ, ನಿನ್ನ ಸೇವೆಗಾಗಿ ನಾನು ಬಂದಿಲ್ಲ.ನೀನು ಬಹುದೊಡ್ಡ ಮಹಾತ್ಮನೆಂಬ ಖ್ಯಾತಿಯನ್ನು ಕೇಳಿ, ನೋಡಿ ಕೃತಾರ್ಥನಾಗಬೇಕೆಂದು ಬಂದಿದ್ದೇನೆ.ದರ್ಶನವಾಯಿತು ಸಾಕು.ಇನ್ನು ಹೋಗುತ್ತೇನೆ.

ತಿರುನೀಲಕಂಠ :  ಪ್ರಭೊ, ಈಗಲೇ ಹೋಗುತ್ತೇನೆಂದರೆ ಹೇಗೆ ಅಪ್ಪಣೆ ಕೊಡಲಿ ? ತಮ್ಮ ದಾರಿಯ ದಣಿವನ್ನು ನಿವಾರಿಸಿಕೊಂಡು ಪ್ರಸಾದವನ್ನು ಸ್ವೀಕರಿಸಿ. ಇಂದು ನಮ್ಮಲ್ಲಿದ್ದು, ಅವಸರವಿದ್ದರೆ ನಾಳಿಗೆ ಹೋಗಬಹುದು.ಅವಸರವಿಲ್ಲದಿದ್ದರೆ ನಾಲ್ಕು ದಿವಸ ಇಲ್ಲಿಯೆ ಇದ್ದು, ಶಿವತತ್ವ ರಹಸ್ಯವನ್ನು ತಿಳುಹಿ, ನಮ್ಮನ್ನು ಕೃತಾರ್ಥರನ್ನಾಗಿ ಮಾಡಬೇಕು.ಇದೇ ನನ್ನ ಪ್ರಾರ್ಥನೆ.

ಸನ್ಯಾಸಿ : ಶರಣ, ಈಗ ನನಗೆ ನಿಲ್ಲುವಷ್ಟು ಸಮಯವಿಲ್ಲ.ನಿನ್ನ ಆಸೆ ಇದ್ದರೆ ನಾಳೆ ಬರುವೆ. ಈಗ ನನಗೆ ಹೋಗಲು ಅಪ್ಪಣೆ ಕೊಡು.

ತಿರುನೀಲಕಂಠ :  ಸ್ವಾಮಿ, ನಿಮಗೆ ನಿಲ್ಲುವಷ್ಟು ಸವಡು ಇಲ್ಲದಿದ್ದರೆ ಊಟ ಮಾಡಿ ಹೋಗಿರಿ.ಈಗ ತುಸು ವಿಶ್ರಮಿಸಿಕೊಳ್ಳಿರಿ.

ಸನ್ಯಾಸಿ : ಆಗಲಿ, ನಿನಗೆ ಅಷ್ಟೊಂದು ಆಸೆಯಿದ್ದರೆ ಊಟ ಮಾಡಿಯೇ ಹೋಗುತ್ತೇನೆ.

ತಿರುನೀಲಕಂಠ :  ದೂತೆ, ಈ ಅತಿಥಿಗಳನ್ನು ಪನ್ನೀರಿನಿಂದ ಸ್ನಾನ ಮಾಡಿಸಬೇಕು.ಇವರ ಊಟಕ್ಕೆ ಪಂಚಪಕ್ವಾನ್ನ ತಯಾರಿಸೆಂದು ಸತ್ಯವತಿಗೆ ಹೇಳು.ಅಡಿಗೆ ಬೇಗನೆ ಸಿದ್ಧವಾಗಲಿ.ಇವರ ಪೂಜೆಗಾಗಿ ಹೂ : ಪತ್ರಿ ತರಲು ನಾನು ಹೋಗುತ್ತೇನೆ.(ಹೋಗುವನು, ಸತ್ಯವತಿಯು ಅಡಿಗೆಯನ್ನು ಸಿದ್ಧಗೊಳಿಸುವಳು).

ಸತ್ಯವತಿ : ದೂತೆ, ಪ್ರಾಣಕಾಂತರು ಇನ್ನೂ ಯಾಕೆ ಬರಲಿಲ್ಲ ?

ದೂತಿ : ತಾಯಿ, ಶರಣರು ಅತಿಥಿಗಳ ಪೂಜೆಗೆಂದು ಹೂ ಪತ್ರಿ ತರಲಿಕ್ಕೆ ಹೋದವರು ಅಲ್ಲಿ ಬರುತ್ತಿದ್ದಾರೆ ನೋಡು.

ತಿರುನೀಲಕಂಠ :

ಪದ :

ಆದೆವು ನಾವು ಧನ್ಯ.ಇಂದಿಗೆ ಜಗಮಾನ್ಯ
ನಿಜಸುಖ ಸಂಪನ್ನ ॥ಪಲ್ಲವಿ ॥

ಪೂರ್ವದ ಪುಣ್ಯದಿಂದ ದರ್ಶನವಿತ್ತರಿಂದು
ಸುಕೃತಲತೆಯು ಫಲಿಸಿತು ತಾನಿಂದು
ಮುಕ್ತಿ ಸಾಮ್ರಾಜ್ಯ ಪಡೆದೆ ನಾನಿಂದು
ಪರಮಾತ್ಮನೇ ನೀನು ಮುದದಳೆದು ಕರುಣಿಸಿಂದು
ಮೊರೆಹೊಕ್ಕು ಪ್ರಾರ್ಥಿಸುವೆವಿನ್ನು ತವ ಪಾದಯುಗಲವನು
ಕೃಪೆ ಮಾಡು ಎಮ್ಮನ್ನು ಚಿರಮೋಕ್ಷ ಸದನ ॥

(ಪಾದಕ್ಕೆರಗುವರು)

ಸನ್ಯಾಸಿ : ಧನ್ಯ ಧನ್ಯ ಶಿವಶರಣಾ, ಧನ್ಯ ಧನ್ಯ ! ನಿನ್ನಂತೆ ಅತಿಥಿ ಸತ್ಕಾರ ಮಾಡುವವರನ್ನು ನಾನೆಲ್ಲಿಯೂ ನೋಡಲಿಲ್ಲ.ಅಂತೆಯೆ ನಿನ್ನ ಕೀರ್ತಿಯು ಭಾರತದ ತುಂಬೆಲ್ಲ ದೇದೀಪ್ಯಮಾನವಾಗಿ ಬೆಳಗುತ್ತಿರುವದು ಕಂಡೆಯಾ ?

ತಿರುನೀಲಕಂಠ :  ಸ್ವಾಮಿ, ನನ್ನಂಥ ಪಾಮರನ ಕೀರ್ತಿ ಅದೆಷ್ಟರದು ?

ಸನ್ಯಾಸಿ : ಛೇ, ಏನು ಮಾತಾಡುವಿ ! ನಿನ್ನಂಥ ಮಹಾಶರಣನು ಈ ಜಗತ್ತಿನಲ್ಲಿಯೆ ಇಲ್ಲ.ನಿನ್ನ ಸತಿ ಸತ್ಯವತಿಯು ಮಹಾಪತಿವ್ರತೆ.ನೀವಿಬ್ಬರೂ ಶಿವಜ್ಞಾನವೆಂಬ ಸಂಪತ್ತನ್ನು ಪಡೆದು ಶಿವಾನಂದಮೃತಶರಧಿಯಲ್ಲಿ ಲೋಲಾಡುತ್ತಿರುವಿರಿ.ನೀವೇ ಧನ್ಯರು ಇರಲಿ, ಶರಣಶ್ರೇಷ್ಠನೆ, ನಾನು ಬೇರೊಂದು ಕಾರ್ಯದ ನಿಮಿತ್ತ ಅವಶ್ಯಕವಾಗಿ ಹೋಗಬೇಕಾಗಿದೆ.ನಾನು ಹೋಗಬೇಕಾದ ಹಾದಿಯಲ್ಲಿ ತುಡುಗರ ಕಾಟ ಬಹಳವೆಂದು ಕೇಳಿದ್ದೇನೆ.ಕಾರಣ ನನ್ನ ಹತ್ತಿರವಿದ್ದ ಒಂದು ಅಪರೂಪ ಸಾಮಾನನ್ನು ನಿನ್ನ ಹತ್ತಿರ ಇಟ್ಟುಹೋಗಬೇಕೆಂದಿದ್ದೇನೆ. ಅದನ್ನು ನೀನು ನಾಳೆ ಅಥವಾ ನಾಡದು ನಾನು ಬಂದ ಕೂಡಲೇ ಕೊಡಬೇಕು.ನೀನು ವಿಶ್ವಾಸಿಕನೆಂದು ನಂಬಿ, ನನ್ನ ವಸ್ತುವನ್ನು ನಿನ್ನಲ್ಲಿಟ್ಟರೆ ಅಂಜಿಕೆ ಇಲ್ಲವೆಂಬ ಭರವಸೆಯಿಂದ ಹೇಳುತ್ತಿದ್ದೇನೆ.ನನ್ನ ಆಶೆಯನ್ನು ಪೂರ್ಣಮಾಡು ತಿಳಿಯಿತೆ !

ತಿರುನೀಲಕಂಠ :  ಒಳ್ಳೆಯದು ಸ್ವಾಮಿ, ನಿಮ್ಮ ಸಾಮಾನನ್ನು ನಿಮಗೆ ತಿರುಗಿ ಕೊಡಲಿಕ್ಕೆ ನನಗೇನು ತೊಂದರೆ.ಅವಶ್ಯಕವಾಗಿ ಇಡಿರಿ.ನೀವು ತಿರುಗಿ ಬಂದು ಬೇಡಿದೊಡನೆಯೆ ಕೊಡುವೆ.ಎಳ್ಳಷ್ಟೂ ಸಂದೇಹ ಪಡಬೇಡಿರಿ ತಿಳಿಯಿತೆ.ಆ ನಿಮ್ಮ ಸಾಮಾನು ಯಾವುದು ?

ಸನ್ಯಾಸಿ : ಯಾವುದೆಂದರೆ (ತನ್ನ ಚೀಲದೊಳಗಿಂದ ತೆಗೆದ) ಶರಣ ಇದೇ ನೋಡು ಆ ಸಾಮಾನು.

ಪದ :

ಸುವರ್ಣ ಬಟ್ಟಲ ಹಿಡಿ ನೀನು ಗುಣಶೀಲ
ಹೇಳುವೆನಿದರ ಮೂಲ ॥ಪಲ್ಲ ॥

ಬೇಡಿದ ವಸ್ತುವೆಲ್ಲ ಕೊಡುವದೀ ಬಟ್ಟಲ

ಸಾಟಿ ಇದಕೊಂದು ಇಲ್ಲ ರೂಢಿಯೋಳ್ ಸುಳ್ಳಲ್ಲ ॥
ಬಲು ಕಷ್ಟದಿಂದ ನಾನು ಇದನ್ನು ಪಡೆದಿರುವೆನು
ಇದೇ ನನ್ನ ರಕ್ಷಣವೆಂದು ತಿಳಿಯೈ ನೀನು ॥

ಅದರಿಂದ ನಾನಿದನು ಬಹು ಕಾಯುತಿರುವೆನು
ಇದು ಇಲ್ಲದಿರೆ ನಾನು ಇಡೆ ನನ್ನ ಪ್ರಾಣವನು ॥

ಶಿವಶರಣ, ಇದೆ ಆ ಬಂಗಾರದ ಬಟ್ಟಲು.ಕಾಮಧೇನು ಕಲ್ಪವೃಕ್ಷಗಳು ಹೇಗೆ ಬೇಡಿದುದನ್ನು ಕೊಡುವುವೋ ಅದರಂತೆ ಈ ಬಟ್ಟಲು ನಾನು ಇಚ್ಛೆಸಿದುದನ್ನು ಕೊಟ್ಟು ರಕ್ಷಿಸುತ್ತಿರುವುದು. ಇದನ್ನು ಪಡೆಯಬೇಕಾದರೆ ನಾನು ಅನೇಕ ವರ್ಷಗಳವರೆಗೆ ಉಗ್ರ ತಪಸ್ಸನ್ನು ಮಾಡಿ, ಶಿವನೊಲಿಮೆ ಗಳಿಸಿ ಪಡೆದುಕೊಂಡಿದ್ದೇನೆ ಕಾರಣ, ನನ್ನ ಪಂಚಪ್ರಾಣವಾದ ಈ ಬಟ್ಟಲನ್ನು ನಿನ್ನ ಹತ್ತಿರ ಇಟ್ಟುಕೊ.ಹಾದಿಯಲ್ಲಿ ತುಡುಗರು ಗಂಟುಬಿದ್ದು ಅಪಹರಿಸಬಹುದೆಂದು ಹೆದರಿ ಸತ್ಪುರುಷನಾದ ನಿನ್ನ ಹತ್ತಿರ ಇದನ್ನು ಇಡುವೆ.ಕಂಡ ಕಂಡವರ ಕೈಯಲ್ಲಿ ಕೊಟ್ಟರೆ, ನನಗದು ತಿರುಗಿ ಬಂದೀತೆಂಬ ಭರವಸೆಯಿಲ್ಲ.ಬಹಳ ಹೇಳುವದೇನು ? ನಿನ್ನ ಹತ್ತಿರ ಇಟ್ಟುಕೊ, ನಾಳೆ ಬಂದೊಡನೆಯೆ ಕೊಡು. ತಿಳಿಯಿತೆ ?

ತಿರುನೀಲಕಂಠ : ಪ್ರಭು.

ಪದ :

ಚಿಂತೆಯ ಬಿಡಿರಿನ್ನು ಕಾಯುವೆ ಬಟ್ಟಲನು
ಪೆಟ್ಟಿಗೆಯೊಳಗಿಟ್ಟು ಕೀಲಿ ಹಾಕುವೆನು
ಆ ಕೀಲಿ ಕೈ ನಿಮಗೆ ಕೊಡುವೆನು
ಅದರ ಹತ್ತಿರ ಕುಳಿತುಕೊಳ್ಳುವೆನು
ನಿಮ್ಮಯ ದಾರಿಯನು, ನೋಡುತಲಿರುವೆನು
ಒಂದೊಡನೆ ನಾನದನು ನಿಮಗೊಪ್ಪಿಸುವೆನು ॥

ಸ್ವಾಮಿ, ನಿಮ್ಮ ಸಾಮನನ್ನು ನಿಮ್ಮ ಕಣ್ಮುಂದೆ ಒಂದು ಪೆಟ್ಟಿಗೆಯಲ್ಲಿಟ್ಟು, ಅದಕ್ಕೆ ಕೀಲಿ ಹಾಕಿ, ಆ ಕೀಲಿಕೈಯನ್ನು ನಿಮಗೆ ಕೊಟ್ಟು ಬಿಡುವೆ.ತೆಗೆದುಕೊಂಡು ಹೋಗಿರಿ.ನಾಳೆ ನೀವೇ ಬಂದು ಪಟ್ಟಿಗೆ ತೆಗೆದು, ನಿಮ್ಮ ಸಾಮಾನನ್ನು ನೀವೆ ತೆಗೆದುಕೊಂಡು ಹೋಗಿರಿ.ದೂತೆ, ಒಳಗೆ ಕಪಾಟಿನಲ್ಲಿ ಒಂದು ಸಣ್ಣ ಪೆಟ್ಟಿಗೆಯಿದೆ.ಅದನ್ನು ತೆಗೆದುಕೊಂಡುಬಾ.

(ದೂತಿ ತೆಗೆದುಕೊಂಡು ಬರುವಳು.ತಿರುನೀಲಕಂಠರು ಆ ಪೆಟ್ಟಿಗೆಯಲ್ಲಿ ಬಟ್ಟಲನ್ನಿಟ್ಟು ಕೀಲಿ ಹಾಕಿ ಕೀಲಿಕೈಯನ್ನು ಸನ್ಯಾಸಿಗೆ ಕೊಡುತ್ತ) ಸ್ವಾಮಿ, ಈ ಕೀಲಿಕೈ ತೆಗೆದುಕೊಳ್ಳಿರಿ.

ಸನ್ಯಾಸಿ : ಈ ಕೀಲಿಕೈ ನನಗೇಕೆ ಬೇಕು ?ಬಟ್ಟಲನ್ನು ನೀನೇ ಅಪಹರಿಸಿಕೊಂಡು ನಿಮ್ಮ ಸಮಕ್ಷಮದಲ್ಲಿ ಬಟ್ಟಲನ್ನು ಪೆಟ್ಟಿಗೆಯಲ್ಲಿಟ್ಟಿದ್ದೇನೆ.ಕೀಲಿಕೈಯನ್ನು ನಿಮ್ಮ ಕೈಯಲ್ಲಿಯೆ ಕೊಟ್ಟಿದ್ದೇನೆ.ನಾನೇನು ಮಾಡಲಿ ?ಅಂದರೆ ನನ್ನ ಗತಿಯೇನು ?ಹಾಗೆ ಅನ್ನುವದಾದರೆ ಬೇಡ.ನನ್ನ ಬಟ್ಟಲನ್ನು ತಾ. ನಾನು ಮತ್ತೆಲ್ಲಿಯಾದರೂ ಇಟ್ಟು ಹೋಗುತ್ತೇನೆ.

ತಿರುನೀಲಕಂಠ : ಮಹಾತ್ಮರೆ, ನೀವು ಹಾಗೆ ತಿಳಿಯಬೇಡಿರಿ.ನಿಮ್ಮ ಬಟ್ಟಲ ಚಿಂತೆಯನ್ನು ಬಿಟ್ಟು ಬಿಡಿರಿ.ಈ ಕೀಲಿಕೈಯನ್ನು ತೆಗೆದುಕೊಳ್ಳಿರಿ.

ಸನ್ಯಾಸಿ : ಅಷ್ಟಾದರೆ ತಾ. (ಕೀಲಿಕೈಯನ್ನು ತಕ್ಕೊಂಡು) ನಾನು ನಾಳೆ ಅಥವಾ ನಾಡದು ಬರುವೆನು.ನಾನು ಬಂದ ಕೂಡಲೆ ನನ್ನ ಬಟ್ಟಲನ್ನು ನನಗೆ ಕೊಡು.ಅದು ಇಲ್ಲ ಎಲ್ಲಿಯೊ ಹೋಯಿತು.ನಾನೇನು ಮಾಡಲಿ ಅಂದೀ.ಹಾಗೆ ಅಂದರೆ ನಾನು ನನ್ನನ್ನು ಬಿಡುವದಿಲ್ಲ.ತಿಳಿಯಿತೆ ?ಇನ್ನು ಹೋಗಲೇ ?

ತಿರುನೀಲಕಂಠ :  ಹೋಗಿ ಬನ್ನಿರಿ. (ಸನ್ಯಾಸಿ ಹೋಗುವನು)

(ತಿರುನೀಲಕಂಠರು ಆ ಪೆಟ್ಟಿಗೆಯನ್ನು ಕಪಾಟದೊಳಗಿಟ್ಟು ಕೀಲಿ ಹಾಕುವರು)
(ಸನ್ಯಾಸಿಯು ಮರುದಿವಸ ಬರುವನು)

ಸನ್ಯಾಸಿ : (ಸ್ವಗತ) ಓಹೋ, ನಾನು ಶರಣನ ಹತ್ತಿರ ಇಟ್ಟ ಬಟ್ಟಲನ್ನು ಮಾಯಮಾಡಿಬಿಟ್ಟೆನು.ಇನ್ನು ಅವನಲ್ಲಿಗೆ ಹೋಗಿ ಬಟ್ಟಲನ್ನು ಕೊಡಿರೆಂದು ಗಂಡಹೆಂಡಿರಿಬ್ಬರಿಗೂ ರಿಕ್ಕು ಹಾಕಿ, ಅವರಿಗೆ ಕಠಿಣ ಪ್ರಸಂಗವನ್ನು ತರುವೆ.ಅವರು ಏನು ಮಾಡುವರೊ ನೋಡುವೆನು.(ಪ್ರ) ಏನು ಮಹಾಶಿವಶರಣ, ಒಳಗೆ ಏನು ಮಾಡುತ್ತಿರುವಿ ?

ತಿರುನೀಲಕಂಠ : ಬನ್ನಿರಿ ಮಹಾತ್ಮರೆ,

 ಪದ :

ನೀವು ಹೋದ ಕೆಲಸವೆಲ್ಲ
ಸ್ವಾಮಿ ನಿಮಗೆ ಆನಂದವಾಯ್ತೆ
ಸುಸೂತ್ರವೆನಿಸಿತೆ, ಘೋರವಾಯ್ತೆ ॥

ಬರ‌್ರಿ ಇತ್ತ ಕೂಡ್ರ ಬರ‌್ರಿ ನೀವು ಮೊದಲು
ತಿಕ್ಕುವೆನು ನಾನು ನಿಮ್ಮ ಕೈಕಾಲು
ಕಳಕೊಳ್ರಿ ದಣಿವೆಲ್ಲ ನೀವು ಇನ್ನು ಮೇಲೆ ॥

ಸಂತರೆ ನಿಮ್ಮ ದಿವ್ಯ ಮೂರ್ತಿ ನೋಡಿ
ಧನ್ಯನಾದೆನತ್ಯಂತ ಸುಖಗೂಡಿ
ಸ್ತುತಿಸುವೆ ನಿಮ್ಮನು ಪಾಡಿ, ಭಕ್ತಿಯಿಂ ಲೋಲಾಡಿ ॥

ಮಹಾತ್ಮರೆ, ನೀವು ಹೋದ ಕೆಲಸವೆಲ್ಲ ನಿಮ್ಮಿಷ್ಟದಂತೆ ಕೈಗೂಡಿತೆ ?

ಸನ್ಯಾಸಿ : ಶರಣ, ನಾವು ಹೋದ ಕೆಲಸವು ಬಹು ಸರಳ ರೀತಿಯಿಂದ ನೆರವೇರಿತು.

ತಿರುನೀಲಕಂಠ :  ಬಹಳ ನೆಟ್ಟಗಾಯಿತು.ಈ ಆಸನದ ಮೇಲೆ ಕುಳಿತುಕೊಳ್ಳಿರಿ.

ಸನ್ಯಾಸಿ : ಕೂಡ್ರುವದೇತಕ್ಕೆ ? ನಾನು ಈಗಿಂದೀಗಲೆ ಮತ್ತೊಂದು ಕಡೆಗೆ ಹೋಗಬೇಕಾಗಿದೆ.ಇಲ್ಲಿ ಕುಳಿತುಕೊಳ್ಳುವಷ್ಟು ಸಮಯವಿಲ್ಲ.ನನ್ನ ಬಟ್ಟಲನ್ನು ಕೊಡು ; ಈಗಲೆ ಹೋಗುವೆನು.

ತಿರುನೀಲಕಂಠ : ಪೂಜ್ಯರೆ, ಊಟ ಮಾಡಿ ಹೋಗಿರಿ, ಹಾಗೆಯೆ ಹೋಗಬಾರದು.

ಸನ್ಯಾಸಿ : ಛೇ, ನಾನಿಲ್ಲಿ ನಿಲ್ಲುವ ಹಾಗಿಲ್ಲ.ನನ್ನ ಕೆಲಸವು ಅಷ್ಟು ನಾಜೂಕಿನದಿದೆ.ಈಗಲೇ ಹೋಗಬೇಕು.ಬೇಗನೆ ಬಟ್ಟಲನ್ನು ಕೊಡು.

ತಿರುನೀಲಕಂಠ :  ಹಾಗಾದರೆ ನಿರ್ವಾಹವಿಲ್ಲ. ಕೊಡುತ್ತೇನೆ.ದೂತೆ, ಆ ಕಪಾಟಿನೊಳಗಿನ ಪೆಟ್ಟಿಗೆಯನ್ನು ತೆಗೆದುಕೊಂಡು ಬಾ. ಆ ಕಪಾಟಿನ ಕೀಲಿ ಹಿಡಿ.(ಕೀಲಿ ಕೊಡುವನು.ಅವಳು ಪೆಟ್ಟಿಗೆಯನ್ನು ತರುವಳು) ಸ್ವಾಮಿ, ಕೀಲಿಕೈ ಕೊಡಿರಿ.ಕೀಲಿ ತೆಗೆದುಕೊಡುವೆನು.

ಸನ್ಯಾಸಿ : ತೆಗೆದುಕೊ (ಕೊಡುವನು)

ತಿರುನೀಲಕಂಠ : (ಕೀಲಿ ತೆಗೆದು) ಹಾಂ, ಇದೇನು ?ಇದರೊಳಗಿಟ್ಟು ಬಟ್ಟಲವೇ ಇಲ್ಲವಲ್ಲ !ಎಲ್ಲಿ ಹೋಗಿದ್ದೀತು ?ಹಾಕಿದ ಕೀಲಿ ಹಾಕಿದಂತೆಯೇ ಇದೆ.ಇಂಥ ಕೀಲಿಕೈ ಮತ್ತಾರ ಹತ್ತಿರವೂ ಇಲ್ಲ.ಅಂದಮೇಲೆ ಇದರೊಳಗಿನ ಸಾಮಾನು ಎಲ್ಲಿ ಹೋಗಿರಬಹುದು? ದೂತೆ, ಈ ಪೆಟ್ಟಿಗೆಯೊಳಗೆ ಬಟ್ಟಲವೆ ಇಲ್ಲ.ನೀನಾದರೂ ತೆಗೆದುಕೊಂಡಿರುವಿಯೇನು ?

ದೂತಿ : ಅಪ್ಪಾ, ನಾನೇಕೆ ತೆಗೆದುಕೊಳ್ಳಲಿ, ನನ್ನ ಗುಣ ನಿಮಗೆ ಗೊತ್ತಿಲ್ಲವೆ ?

ತಿರುನೀಲಕಂಠ :  ಹಾಗಾದರೆ, ಪೆಟ್ಟಿಗೆಯೊಳಗಿಟ್ಟು ಕೀಲಿ ಹಾಕಿದ ಸಾಮಾನು ಹೇಗೆ ಹೋಗಿರಬೇಕು.

ದೂತಿ : ಅಪ್ಪನವರೆ, ನನಗೆ ತಿಳಿಯುವ ಮಾತಲ್ಲ.ನಾನೇನು ಹೇಳಲಿ ?

ತಿರುನೀಲಕಂಠ : (ಸ್ವಗತ) ಶಿವಶಿವಾ ಇದೇನು ಬಂತು ?ಈಗ ನಾನು ತುಡುಗನೆನ್ನಿಸಿಕೊಳ್ಳುವಂಥ ಪ್ರಸಂಗ ಒದಗಿತಲ್ಲ ! ಇನ್ನು ಸನ್ಯಾಸಿಗೆ ಏನೆಂದು ಹೇಳಲಿ ?ಬಟ್ಟಲು ಹೇಗೆ ಹೋಗಿರಬೇಕು ?(ಚಿಂತಿಸುವೆನು)

ಸನ್ಯಾಸಿ : ಯಾಕೋ ಶಿವಶರಣ, ನನ್ನ ಬಟ್ಟಲನ್ನು ಕೊಡು. ನನಗೆ ಬೇಗನೆ ಹೋಗುವದಿದೆ ಎಂದರೂ ನಿನಗೆ ಎಚ್ಚರವಿಲ್ಲವೆ ?

ತಿರುನೀಲಕಂಠ :  ಸ್ವಾಮಿ, ನಿಮಗೀಗ ನಾನೇನು ಹೇಳಲಿ ?

ಸನ್ಯಾಸಿ : ಹೇಳುವದೇನಿದೆ ಈಗ ?ನನ್ನ ಬಟ್ಟಲನ್ನು ಕೊಟ್ಟು ಮಾತಾಡು.

ತಿರುನೀಲಕಂಠ :  ಯತಿವರ, ನನಗೆ ಮಾತಾಡಲು ದುಸ್ತರವೇ ಬಂದಿತು ;

ಯಾಕೆಂದರೆ :

ಪದ :

ಪೆಟ್ಟಿಗೆಯೊಳಗಿಲ್ಲ ಬಂಗಾರ ಬಟ್ಟಲ
ತಿಳಿ ನೀನು ಗುಣಶೀಲ ॥ಪಲ್ಲವಿ ॥
ಹಾಕಿದ ಕೀಲಿಯು ಹಾಕಿದಂತಿರುವದು
ಬಟ್ಟಲವೆಲ್ಲಿ ಹೋಯಿತೆಂಬುದು ಸೋಜಿಗವಾದುದು ॥
ತಿಳಿಯದು ಸಂಗತಿ ಅದರಿಂದಾದೆನು ಭ್ರಾಂತಿ
ನೀನು ಎನಗಿಟ್ಟ ಮತಿ ಇದಕ್ಕೇನ್ಹೇಳ್ರಿ ಯುಕ್ತಿ ॥

ಸ್ವಾಮಿ, ಹಾಕಿದ ಕೀಲಿ ಹಾಕಿದಂತೆಯೆ ಇದೆ.ಒಳಗೆ ಇಟ್ಟ ಬಟ್ಟಲವೇ ಇಲ್ಲ.ಇನ್ನೇನು ಮಾಡಲಿ ? ನನಗೆ ಬಹು ಕಠಿಣ ಬಂತು.ಬೇರೆ ಯಾರಾದರೂ ತೆಗೆದುಕೊಂಡು ಹೋಗಿರುವರೆನ್ನಬೇಕೆ ? ಇಂಥ ಕೀಲಿ ಯಾರ ಹತ್ತಿರವೂ ಇಲ್ಲ.ಅಂದಮೇಲೆ ಯಾರ ಮೇಲೆ ಸಂಶಯ ಪಡಬೇಕು.ನನ್ನ ಮೇಲೆಯೇ ಬಂದಂತಾಯಿತು.ಯತಿಶ್ರೇಷ್ಠ ನಿಮ್ಮ ಪಾದಕ್ಕೆ ಬಿದ್ದು ಬೇಡಿಕೊಳ್ಳುತ್ತೇನೆ. ನೀವು ನನ್ನನ್ನು ಬೇಕಾದಂತೆ ಪರೀಕ್ಷಿಸಬಹುದು.

ಸನ್ಯಾಸಿ : (ಸಿಟ್ಟಿಗೆದ್ದು) ಭ್ರಷ್ಟ, ನಿನ್ನಂಥ ಕೆಟ್ಟ ತುಡುಗನನ್ನು ಈ ಜಗತ್ತಿನಲ್ಲಿ ನಾನೆಲ್ಲಿಯೂ ಕಾಣಲಿಲ್ಲ.ಆ ನನ್ನ ಬಟ್ಟಲವನ್ನು ತೆಗೆದುಕೊಂಡು ಬೇರೆಕಡೆಗೆ ಮುಚ್ಚಿಟ್ಟು ಎನಗೆ ಪಂಟು ಹೇಳಿ, ಅದನ್ನು ಅಪಹರಿಸಬೇಕೆಂದು ಮಾಡಿರುವೆಯಾ ? ನಿನ್ನ ಜೀವವನ್ನೆ ಬಿಡಲಿಕ್ಕಿಲ್ಲ ಈಗಲೇ ನನ್ನ ಬಟ್ಟಲವನ್ನು ಚಲ್ಲಿ ಮಾತಾಡು.

ತಿರುನೀಲಕಂಠ :  ಸ್ವಾಮಿ, ನೀವೀಗ ನನಗೆ ಏನೆಂದರೂ ಸಲ್ಲುತ್ತದೆ. ನಿಮ್ಮ ಬಟ್ಟಲು ಎಲ್ಲಿ ಹೋಯಿತೆಂಬುದು ತಿಳಿಯದಂತಾಗಿ ಹುಚ್ಚಾಗಿ ನಿಂತಿದ್ದೇನೆ. ಏನು ಮಾಡಲಿ ?ಆ ಬಟ್ಟಲಕ್ಕೆ ಪ್ರತಿಯಾಗಿ ನನ್ನ ಮನೆಮಾರನ್ನೆಲ್ಲ ನಿನಗೆ ಒಪ್ಪಿಸುತ್ತೇನೆ. ನಾನು ಕೂಡ ಆಮರಣ ಪರಿಯಂತೆ ನಿಮಗೆ ಆಳಾಗಿ ದುಡಿಯುತ್ತೇನೆ.ಇದರ ಹೊರತು ಏನೆಂದು ಹೇಳಲಿ?

ಸನ್ಯಾಸಿ : (ಸಿಟ್ಟಿನಿಂದ) ಥೂ ಥೂ, ಮೆತ್ತಗೆ ಮಾತನಾಡುವಂಥ ಮೆತ್ತನ್ನ ಕಳ್ಳನೆ, ನಿನ್ನ ಮನೆಮಾರು ತಕ್ಕೊಂಡು ನಾನೇನು ಮಾಡಲಿ? ನಿನ್ನ ಮನೆಯೊಳಗೆಹೊಕ್ಕು ಆ ಬಟ್ಟಲನ್ನು ಇನ್ನೊಬ್ಬರು ಹೇಗೆಒಯ್ಯುವರು? ನನ್ನ ಬಟ್ಟಲುವನ್ನು ಕೊಟ್ಟು ಮಾತಾಡು : ತಿಳಿಯಿತೆ ?

ತಿರುನೀಲಕಂಠ :  ದೂತೆ, ಬಟ್ಟಲ ಸಲುವಾಗಿ ಬಹು ಕಠಿಣ ಪ್ರಸಂಗ ಬಂತು.ಅದನ್ನು ಯಾರು ತೆಗೆದುಕೊಂಡಿರಬೇಕು? ಈ ಸಾಧು ಆ ಬಟ್ಟಲನ್ನು ಬಿಟ್ಟು ಹೋಗಲಾರೆನೆಂದು ಕೂತೇ ಬಿಟ್ಟಿದ್ದಾನೆ.ಇನ್ನೇನು ಮಾಡಬೇಕು ?

ದೂತಿ : ಶರಣರೆ, ನೀವು ಆ ಬಟ್ಟಲನ್ನು ನಿಮ್ಮ ಹತ್ತಿರ ಮೊದಲೇ ಇಟ್ಟುಕೊಳ್ಳಬಾರದಾಗಿತ್ತು.ನೀವು ಬೋಳೇ ಸ್ವಭಾವದವರು.ಅಂದಲ್ಲೆ ನಿಮಗೆ ಒಣ ಪಿಡುಗು ಮೇಲಿಂದ ಮೇಲೆ ಬರುತ್ತದೆ.ನಿಮ್ಮ ಸಾಧುತನವನ್ನು ಯಾರು ನೋಡುವರು? ಇದಕ್ಕೆ ಮುಂದಿನ ಹಾದಿಯನ್ನು ನೀವೇ ನೋಡಬೇಕು ಹೊರತು.ನನಗೆ ತಿಳಿಯುವ ಮಾತಲ್ಲ.

ತಿರುನೀಲಕಂಠ :  ಹಾಗಾದರೆ ಸತ್ಯವತಿಯನ್ನಾದರೂ ಕೇಳು.ಅವಳೇನು ಹೇಳುವಳೊ ನೋಡೋಣ.

ದೂತಿ : ಅವ್ವನವರೆ, ಆ ಸಾಧುಮಹಾರಾಜರ ಬಟ್ಟಲ ಹೋಗಿದೆಯಂತೆ, ನೀವೇನಾದರೂ ತಕ್ಕೊಂಡಿರುವಿರೇನು ?

ಸತ್ಯವತಿ : ಏನೇ ನಾನೇತಕ್ಕೆ ತೆಗೆದುಕೊಳ್ಳಲಿ ?ಇದರ ಸಮೀಪಕ್ಕೆ ಸಹ ನಾನು ಹೋಗಿಲ್ಲ ನೋಡು.

ದೂತಿ : ಹಾಗಾದರೆ, ಪೆಟ್ಟಿಗಿಯೊಳಗಿಟ್ಟು ಕೀಲೀ ಹಾಕಿದ ಸಾಮಾನು ಏಕಾಏಕಿ ಹ್ಯಾಗೆಹೋಗಬೇಕವ್ವ ? ಆ ಸಾಧು ಬಾಗಿಲಕ್ಕೆ ಕೂತಿದ್ದಾನೆ ನೋಡ್ರಿ.ಹ್ಯಾಗೆ ಮಾಡುವಿರಿ.

ಸತ್ಯವತಿ : ಅವ್ವಾ ದೂತೆ, ನಾನು ನಿನಗೆ ಮೊದಲೇ ಹೇಳಲಿಲ್ಲವೆ ?ಈ ಸನ್ಯಾಸಿಯು ಶ್ರೇಷ್ಠ ಮಾತುಗಾರಿಕೆಯಿಂದ, ಈ ಬಟ್ಟಲ ಸಂಬಂಧವಾಗಿ ಏನೊ ಒಂದು ಬಿಕ್ಕಟ್ಟಿನ ಪ್ರಸಂಗಬರಬಹುದು ಎನಿಸಿತ್ತು. ಗಾರುಡಿಗನಾದ ಈ ಸನ್ಯಾಸಿಯದು ಯಾರಿಗೂ ಅಂತು ಹತ್ತುವ ಮಾತಲ್ಲ. ಶಿವನೇ ಬಲ್ಲ.ಏನು ನಡೆಯುವದೋ ನಡೆಯಲಿ !

ದೂತಿ : (ಸ್ವಗತ) ನಾನಷ್ಟು ಹೇಳಿ ನೋಡುವೆ, (ಪ್ರಕಟವಾಗಿ) ಸ್ವಾಮಿ, ನಿಮ್ಮ ಬಟ್ಟಲ, ಇವರಿಬ್ಬರೂ ತಕ್ಕೊಂಡಿಲ್ಲ.ಇದು ನಿಜವಾದ ಸಂಗತಿ.ಈಗ ನೀವು ಬಾಗಿಲಿಗೆ ಕೂತರಾಗುವದೇನು?ಸುಮ್ಮನೆ ಮನೆ ಹಾದಿ ಹಿಡಿಯಿರಿ.

ಸನ್ಯಾಸಿ : ಎಲೆ, ಹಾಗಾದರೆ ನೀನೇ ನನ್ನ ಬಟ್ಟಲವನ್ನು ತೆಗೆದುಕೊಂಡಿರುವಿ (ಗದ್ದರಿಸುವನು)