ಸತ್ಯವತಿ : ಹೆಂಗಸರು ಬಹಳ ಕೆಟ್ಟ ಏನ್ರಿ ?

ತಿರುನೀಲಕಂಠ :  ಹೌದು, ಬಹಳ ಕೆಟ್ಟ.

ತಿರುನೀಲಕಂಠ :  ಅಹಲ್ಯಾ, ದ್ರೌಪತಿ, ಸೀತಾ, ತಾರಾ, ಮಂಡೋದರಿ : ಈ ಐದು ಮಂದಿಯನ್ನು ಧ್ಯಾನಿಸಿದವರಿಗೆ ಮುಕ್ತಿ ಆಗುವದೆಂದು ಪಂಡಿತರು ಹೇಳುತ್ತಾರೆ.ಹೆಂಗಸರಿಂದಲೇ ಗಂಡಸರಿಗೆ ಬರುವದಾಗಿದ್ದರೆ ಅವರನ್ನು ಧ್ಯಾನ ಮಾಡಿದವರಿಗೆ ಪುಣ್ಯ ಯಾಕೆ ಬರಬೇಕು ಸ್ವಾಮಿ ?

ತಿರುನೀಲಕಂಠ :  ಏನೇ, ಆ ಐದು ಮಂದಿ ಪತಿವ್ರತೆಯರು ಸುದ್ದವೆಂದು ಬಗೆದೆಯಾ ?ಅಹಲ್ಯಾ ಅನ್ನುವಾಕೆ ಗಂಡನ ಶಾಪದಿಂದ ಕಲ್ಲಾಗಿ ಬಿದ್ದಳು.ದ್ರೌಪದಿ ತನಗೆ ಐದು ಮಂದಿ ಗಂಡಂದಿರಿದ್ದರೂ ಆರನೆಯವನಾದ ಕರ್ಣನ ಮೇಲೆ ಮನಸ್ಸು ಇಟ್ಟಳು.ಸೀತಾದೇವಿ ರಾವಣನ ಅಶೋಕ ವನದೊಳಗೆ ವಾಸ ಮಾಡಿದ ಮೇಲೆ ಸುದ್ದ ಇರಬಹುದೆ ? ಇನ್ನು ತಾರಾ ಅನ್ನುವಾಕೆ ಚಂದ್ರನ ಬೆನ್ನು ಹತ್ತಿ ಓಡಿಹೋದವಳು.ಅಂದಮೇಲೆ ಇವರೇನು ಸುದ್ದ ? ಕಸಬರಿಗೆಯಂತಹ ಹೆಂಗಸರು ಸಂಸಾರ ಮಾಡಿ ಹಾಳಾಗಿ ಹೋದರು.ಮತ್ತೂ ಹೇಳುತ್ತೇನೆ ಕೇಳು.

ಪದ :

ಬಲು ಕಡಿಮೆ ಹೆಣ್ಣ ಜಾತಿ
ಹೇಳಬ್ಯಾಡ ನಿಮ್ಮ ನಡತಿ
ನಿಮಗೆಲ್ಲ ಸದ್ಗತಿ ಎನ್ನ ಕೂಡ ಮಾಡಿ
ಪಂಥ ಹೇಳಬ್ಯಾಡ ಒಣ ಮಾತ
ಸಿಂಹನ ಮರಿ ನಾಯಿಯಾಗುವದೇ
ಹೊಲಸು ಕತ್ತೆ ಕುದುರೆ ಹೋಲುವದೇ
ಅದರಂತೆ ಹೆಂಗಸರು ಗಂಡಸರ ಸರಿ ಆಗುವರೇ ?
ನೋಡು ಪ್ರೇಮದೆ ಹೆಂಗಸರು ಹೆಚ್ಚಂತ
ವಾದ ಮಾಡುವಿ ವ್ಯರ್ಥ, ಬಿಡು ನಿನ್ನ ಧಿಮಾಕ
ಮಾಡಬ್ಯಾಡ ತರ್ಕ.

ಏನೆ, ಹೆಂಗಸು ಹೆಚ್ಚು ಎಂದು ಸುಮ್ಮನೆ ವಾದ ಮಾಡುವಿ ನಾಯಿ ಸಿಂಹನ ಸರಿ ಆಗಬೇಕೆಂದು ಬೇಕಾದಷ್ಟು ಜಿಗಿದಾಡಿದರೂ ಅದರ ಸರಿ ಆದೀತೇನು ? ಸುಮ್ಮನೆ ನಾಯಿ ಬೊಗಳಿದಂತೆ ಒಂದೇಸವನೆ ಬೊಗಳಬೇಡ. ಸುಮ್ಮನಿರು

ಪದ :

ಬಾ ಬೇಗನೆ ಕಾಮಸುರತಕ್ಕೆ ಫಣಿವೇಣಿ
ಕಾಮಬಾಣದಿ ಬೆಂದು ಬಳಲಿದೆನು
ಬೇಗ ಚುಂಬನ ಕೊಡು ಬಂದು ಜಾಣೆ
ಪಟ್ಟಮಣಿಮಂಚಕ್ಕೇರ ಜಾಣಿ
ಎನ್ನ ರಮಣಿ ಹುಲಿಯಾಗಬೇಕೆಂದು ನರಿ
ಮೈಸುಟ್ಟುಕೊಂಡಂತೆ ಹೆಂಗಸರು
ನಿಮ್ಮ ಲೆಕ್ಕ ಇರುವದು ಲೆಕ್ಕ.

ಏನೆ, ಹೆಂಗಸರು ಹೆಚ್ಚು ಅಂದರೆ ಹುಲಿಯಾಗಬೇಕೆಂದು ನರಿ ತನ್ನ ಮೈಗೆ ಉರಿ ಹಚ್ಚಿಕೊಂಡು ಸತ್ತಹಾಗೆ.ಅದರಂತೆ ನೀ ಮಾಡಬೇಡ.ನಿನ್ನ ಒಣ ಸಿಫಾರಸು ಬಿಟ್ಟು, ಎನಗೊಮ್ಮೆ ಚುಂಬನಕೊಟ್ಟು ರತಿಸುಖಕ್ಕೆ ಅನುಕೂಲಳಾಗು ; ನಡೆ. ಹೆಂಗಸರಾದ ನಾವೇ ಶ್ರೇಷ್ಠರೆಂಬ ಭಾವನೆ ನಿನ್ನಲ್ಲಿದ್ದರೆಮತ್ತೂ ಹೇಳುತ್ತೇನೆ ಕೇಳು.

ಪದ :

ಕವಡಿಯ ಕಿಮ್ಮತ್ತಿಲ್ಲ ಹೆಂಗಸರು ನೀವೆಲ್ಲ
ಗಂಡಸರ ಆಶ್ರಯದಿಂದ ನಿಮ್ಮ ಪ್ರಾಣ
ರಕ್ಷಣೆಯಾಗುವದು ಸತ್ಯ ಇದು ತಿಳಿ ನೀನ
ಕಡೆಗೆ ನಮ್ಮಿಂದ ಮುಕ್ತಿ ನಿಮಗಿನ್ನು ಕೇಳು ವಚನ
ದೇಶದೊಳು ಜಾಹೀರ ಕಾದರಳ್ಳಿ ಎಂಬ ಊರ
ವೀರಭದ್ರದೇವರ ದಯ ನಮಗೆ ಪೂರಾ

ಏನೆ, ಗಂಡಸರ ಆಶ್ರಯದಲ್ಲಿಯೇ ನಿಮ್ಮ ಪ್ರಾಣ ಸಂರಕ್ಷಣೆ. ಗಂಡನ ಸೇವೆಯಿಂದ ನಿಮಗೆ ಸದ್ಗತಿ.ನಿಮಗೆ ದುಗ್ಗಾಣಿ ಕಿಮ್ಮತ್ತು ಸಹ ಇಲ್ಲ.ನೀವು ಗಾಳಿಗೆ ಗಂಟು ಹಾಕಿ ಒಬ್ಬರಿಗೊಬ್ಬರಿಗೆ ಜಗಳಾಹಚ್ಚಿ ಮೋಜು ನೋಡುತ್ತೀರಿ.ಆದ್ದರಿಂದ ಹೆಂಗಸು ಜಾತಿಯೇ ಬಹಳ ಕೆಟ್ಟ : ನೋಡು.

ಸತ್ಯವತಿ : ಏನ್ರಿ, ಗಂಡಸರು ಹೆಚ್ಚೆಂದು ಬಡಬಡಿಸುತ್ತೀರಿ.ಗಂಡಸರು ಉಳಿದಿರುವುದೇ ಹೆಂಗಸರಿಂದ.

ತಿರುನೀಲಕಂಠ :  ಏನೇ, ಗಂಡಸರನ್ನು ಉಳಿಸುವ ಕಿಮ್ಮತ್ತು ನಿಮ್ಮಲ್ಲಿದ್ದರೆ ಅಡಗಿ ಮನೆಯೊಳಗೇಕೆ ಗಡಗಿ ತೊಳೆಯುತ್ತಿದ್ದಿರಿ ?

ಸತ್ಯವತಿ : ಹೆಂಗಸರಿಂದ ಗಂಡಸರು ಉಳಿದಿಲ್ಲೇನ್ರಿ ?

ತಿರುನೀಲಕಂಠ :  ಯಾರೂ ಉಳಿದಿಲ್ಲ ನೋಡು.

ಸತ್ಯವತಿ : ಯಾರೂ ಉಳಿದಿಲ್ಲವೆ ? ಹಾಗಾದರೆ ಹೇಳುತ್ತೇನೆ ಕೇಳುವಂಥವರಾಗಿರಿ.

ಪದ :

ಉಳಿಯದಿದ್ದರೆ ದಶರಥರಾಜ ಸರ್ಗ ಯುದ್ಧ ಮಾಡುವಾಗ
ಯಾರಿಂದ ಉಳಿದ ಹೇಳ್ರಿ ನೀವು ಈ ಕ್ಷಣ
ರಥದ ಅಚ್ಚು ಮುರಿದ ಕಾಲಕ ತಾನು
ಹೋಗುತ್ತಿದ್ದ ತಾನು ಸತ್ತು ವೈರಿಯ ಕೈಯೊಳಗೆ
ವ್ಯರ್ಥ ಯಾರಿಂದ ಉಳಿದ ಹೇಳ್ರಿ
ಸ್ತ್ರೀಯರು ಹ್ಯಾಂಗ ಸುಮಾರು.
ತನ್ನ ಹೆಂಡತಿ ಕೈಕಾದೇವಿ ಎಂಬುವಾಕಿ
ಮಾಡಿದ ಸಾಹಸಕ್ಕೆ ಉಳಿದು ಬಂದನು ತನ್ನ ಪಟ್ಟಣಕ್ಕೆ
ಹೆಂಗಸರು ಕಡಿಮೆ ಅಂತ ಒಣ ಧಿಮಾಕ
ಹೇಳತೀರಿ ನನ್ನ ಮುಂದೆ ದಶರಥ ಹ್ಯಾಂಗ
ಉಳಿದನು ನೋಡ್ರಿ ಎಲ್ಲಾ ತಿಳಿದು ನೀವು
ಮಾತಾಡತೀರಿ ಯಾಕ ಸುಳ್ಳ ಮಾತ.

ಏನ್ರಿ, ಹೆಂಗಸರಿಂದ ಗಂಡಸರು ಉಳಿದಿಲ್ಲ ಅನ್ನುತ್ತೀರಿ, ಹಾಗಾದರೆ ದಶರಥ ರಾಜನು ದಾನವರ ಸಂಗಡ ಯುದ್ಧಕ್ಕೆ ಹೋದಾಗ್ಗೆ ಅವನ ರಥದ ಗಾಲಿಯ ಕೀಲು ಮುರಿಯಿತು.ಆಗ ಅವನು ವೈರಿಯ ಕೈಯೊಳಗೆ ಸಿಕ್ಕು ಸತ್ತು ಹೋಗುತ್ತಿದ್ದನು.ಆ ಪ್ರಸಂಗದಲ್ಲಿ ಕೈಕೆದೇವಿಯು ತನ್ನ ಕೈಬೆರಳನ್ನ ಕೀಲವನ್ನಾಗಿ ಮಾಡಿ, ರಥವನ್ನು ನಡೆಸಿ ಗಂಡನ ಜೀವ ಉಳಿಸಿದಳು. ಅಂದ ಮೇಲೆ ಆಕೆಯ ಕೂವತ್ತು ಗಂಡಸರಿಗೆ ಹೇಗೆಬಂದೀತು ? ಆ ವೇಳೆಗೆ ಆಕೆಯಿಂದ ಅವನ ಜೀವ ಉಳಿಯಿತೋ ಇಲ್ಲವೊ ?

ತಿರುನೀಲಕಂಠ : ಹೌದು.

ಸತ್ಯವತಿ : ಹಾಗಾದರೆ ಇಲ್ಲಿ ಯಾರು ಹೆಚ್ಚು ಆದಂಗಾಯಿತು.

ತಿರುನೀಲಕಂಠ :  ಏನೆ, ಆ ತಾಟಕಿಯ ಸುದ್ದಿಯನ್ನು ಏನು ಹೇಳುತ್ತಿ ? ಗಾಲಿಯ ಕೀಲವನ್ನು ಮೊದಲು ಕಿತ್ತೊಗೆದು ತನ್ನ ಗಂಡನ ಎದೆ ಜಲ್ಲೆನ್ನುವಂತೆ ಮಾಡಿದಳು ಆ ಕೈಕೆಯಿ. ಆಮೇಲೆ ರಥದ ಗಾಲಿಯಲ್ಲಿ ತನ್ನ ಬೆರಳನ್ನಿಟ್ಟು ಅವನಿಂದ ವರ ಪಡೆದುಕೊಂಡಳು.ಅಂಥ ವಿಶ್ವಾಸಘಾತಕಿಯ ಪೌರುಷವನ್ನು ನನ್ನ ಮುಂದೆ ಹೇಳಬೇಡ.

ಸತ್ಯವತಿ : ಏನ್ರಿ, ಕೈಕಾದೇವಿ ಗಂಡನಿಗೆ ವಿಶ್ವಾಸಘಾತ ಮಾಡಿದಳೆ ?

ತಿರುನೀಲಕಂಠ :  ಹೌದು, ಆ ದಶರಥರಾಜನು ರಾಮಚಂದ್ರನಿಗೆ ಪಟ್ಟಗಟ್ಟಬೇಕೆಂದು ಸರ್ವಸಾಮಗ್ರಿಗಳನ್ನು ತಯಾರ ಮಾಡಿದ ಕೂಡಲೇ ಕೈಕಾದೇವಿಯು ಸವತಿಮತ್ಸರದಿಂದ ರಾಮಚಂದ್ರನಿಗೆ ಪಟ್ಟವಾಗಬಾರದೆಂದು ದಶರಥರಾಜನಲ್ಲಿ ತಾನು ಮೊದಲು ಪಡೆದ ವರಗಳನ್ನು ತಿರುಗಿ ಪಡೆದಳು. ಒಂದು ವರದಿಂದ ರಾಮನು ವನವಾಸಕ್ಕೆ ಹೋಗಬೇಕು, ಎರಡನೆಯ ವರದಿಂದ ತನ್ನ ಮಗನಾದ ಭರತನಿಗೆ ಪಟ್ಟವಾಗಬೇಕೆಂದು ಕೇಳಿಕೊಂಡಳು. ಹೀಗೆ ದಶರಥ ರಾಜನಿಗೆ ಗೋಳು ಹಾಕಿಬಿಟ್ಟಳು.

ಸತ್ಯವತಿ : ಏನ್ರಿ,ಮೊದಲು ವಚನ ಕೊಡಲಿಕ್ಕೆ ದಶರಥನಿಗೆ ತಿಳಿಯಲಿಲ್ಲೇನ್ರಿ ?

ತಿರುನೀಲಕಂಠ :  ಏನೆ, ನಿಮ್ಮಂಥ ಹೊಯ್ಮಲಿ ಹೆಂಗಸರ ಮಾತು ಹ್ಯಾಗೆ ತಿಳಿಯಬೇಕು ?ದಶರಥರಾಜನು ಉಭಯ ಸಂಕಟದಲ್ಲಿ ಬಿದ್ದು ಗೋಳಾಡತೊಡಗಿದನು. ತಂದೆಕೊಟ್ಟ ವಚನವನ್ನು ಪಾಲಿಸುವದಕ್ಕಾಗಿ ರಾಮಚಂದ್ರನು ಅಡವಿಗೆ ಹೋದನು. ಇತ್ತ ದಶರಥ ಮಹಾರಾಜನು ಮಗನ ವ್ಯಸನದಿಂದ ಪ್ರಾಣಬಿಟ್ಟನು.ಅಂದಮೇಲೆ ಇಷ್ಟೆಲ್ಲ ಗೋಳು ಆಕೆಯಿಂದಲೆ ಆಯಿತೊ ಇಲ್ಲವೊ ? ಅದಕ್ಕೆ ನಿಮ್ಮಂಥ ಹೆಂಗಸರ ನಡತೆಯೇ ಕಾರಣ.

ಸತ್ಯವತಿ : ಏನ್ರಿ, ಇಷ್ಟರಿಂದಲೆ ಹೆಂಗಸರು ಕೆಟ್ಟವರಾದರೇನ್ರಿ ?

ತಿರುನೀಲಕಂಠ :  ಮತ್ತೇನು ? ಗಂಡನಾದ ರಾಮಚಂದ್ರನು ಕೊಟ್ಟ ವಚನವನ್ನು ತಪ್ಪುವದಿಲ್ಲೆಂದು ನಂಬಿದ ಜನರು ಅವನನ್ನು ದೇವರೆಂದು ಪೂಜಿಸತೊಡಗಿದರು.ಅವನನ್ನು ರಾಮ ರಾಮ ಎಂಬ ಸ್ಮರಣೆ ಮಾಡಹತ್ತಿದರು.

ಸತ್ಯವತಿ : ಏನು, ರಾಮಚಂದ್ರ ಯಾರಿಗೂ ಕೊಟ್ಟ ವಚನ ತಪ್ಪಿಸಿಲ್ಲವೇನ್ರಿ ?

ತಿರುನೀಲಕಂಠ :  ಅವನು ಯಾರಿಗೂ ವಚನಕೊಟ್ಟು ತಪ್ಪಿಸಿಲ್ಲ : ನೋಡು.

ಸತ್ಯವತಿ : ಅವನೊಬ್ಬ ; ಮಹಾಸುಳ್ಳ !

ತಿರುನೀಲಕಂಠ :  ಸುಳ್ಳುಗಾರನಲ್ಲ ; ಸತ್ಯವ್ರತ.

ಸತ್ಯವತಿ : ಹಾಗಿದ್ದರೆ ಕೇಳಿ.

ಪದ :

ಸುಳ್ಳು ಮಾಡದಿದ್ದರೆ ಮತ್ತೆ ಐರಾವಣನ
ಹೆಂಡತಿಗ್ಯಾಕ ಆಶೆ ತೋರಿ ವಚನ ಭ್ರಷ್ಟ ಮಾಡಿದ
ಭರವಸೆ ಹೇಳಿ ತನ್ನ ಕೆಲಸ ಸಾಧಿಸಿ
ವಚನವನೆನಸಿಕೊಂಡು ಅವಳಿಗೆ ಅಡ್ಡ ಬಂದ
ಇದು ಎಂಥಾ ಅವನ ವಚನ ಮಾಡಿದ ತುಡುಗುತನ ॥

ಐರಾವಣ ಮೈರಾವಣರು ಸಾಯುವ ಹುಚ್ಚು ಹಚ್ಚಿ
ತಿಳಿಯಲಿಕ್ಕೆ ಐರಾವಣನ ಸತಿಗೆ ಹುಚ್ಚು ಹಚ್ಚಿ
ನಿನ್ನ ಆಶೆ ಪೂರ್ಣ ಮಾಡುತ್ತೇನಂತ ಅಂದ
ಆಶೆ ತೋರಿ ಎಲ್ಲಾ ಬೇತು ತಿಳಿದ ನಂತರ
ತಪ್ಪಿಸಿ ಬಿಟ್ಟ ವಚನ ರಾಮನು ಎಂಥ ಸತ್ಯವಂತ ! ॥

ಏನ್ರಿ, ರಾಮಚಂದ್ರನು ಸತ್ಯವಂತ ಎಂದು ಅನ್ನುತ್ತೀರಿ.ಹಾಗಿದ್ದರೆ ಅವನು ಐರಾವಣ ಮೈರಾವಣರ ಕಾಳಗದಲ್ಲಿ ಐರಾವಣನನ್ನು ಕೊಲ್ಲಲು ಮೈರಾವಣನ ಸತಿಗೆ ವಚನ ಕೊಟ್ಟು ಯಾಕೆ ತಪ್ಪಿಸಿದ ? ಮೈರಾವಣನ ಸತಿಗೆ ಏನೋ ವಚನ ಕೊಟ್ಟು ಐರಾವಣ ಮೈರಾವಣ ಸತ್ತಮೇಲೆ ರಾಮಚಂದ್ರನು, ಅವಳಿಗೆ ಕೊಟ್ಟ ವಚನವನ್ನು ನಡಿಸಬೇಕೋ ನಡಿಸಬಾರದೋ : ನೀವೇ ಹೇಳ್ರಿ.

ತಿರುನೀಲಕಂಠ : ಹೌದು, ನಡಿಸಬೇಕು.

ಸತ್ಯವತಿ : ಹಾಗಿದ್ದರೆ ಯಾಕೆ ತಪ್ಪಿಸಿದ ? ಆಕೆಗೆ ಆಶೆಯನ್ನು ತೋರಿಸಿ ಆಕೆಯ ಗಂಡನನ್ನು ಕೊಂದು ಹಿಂದುಗಡೆ ನಿರಾಶೆಯನ್ನು ಮಾಡಿದ.ಇದು ಚಲೋದೇನ್ರಿ ?ಇದರ ಮೇಲಿಂದ ರಾಮಚಂದ್ರನು ವಚನಕ್ಕೆ ಸರಿಯಾಗಿ ನಡೆದನೆಂದು ಹೇಗೆ ಹೇಳುತ್ತೀರಿ?

ತಿರುನೀಲಕಂಠ : ಏನೆ, ಮೈರಾವಣನ ಹೆಂಡತಿ ಏನು ಆಶೆ ಮಾಡಿದ್ದಳು ?

ಸತ್ಯವತಿ :

ಪದ :

ರತಿಸುಖ ಬಯಸಿದಳಾ ಬಾಲೆ
ರಾಮಚಂದ್ರನ ನೋಡಿ ಗುಣಶೀಲೆ ॥ಪಲ್ಲವಿ ॥
ರಾಮನ ಚೆಲ್ವಿಕೆ ವೈಯಾರವ
ಕಾಮವೇರಿ ಕೆಟ್ಟ ಕಲ್ಪನ ಮಾಡಿ ಕಾಮಿಸಿದಳು
ರತಿ ರಾಹುವನ್ನು ನೋಡಿ ಕ್ಷೇಮದಿಂದ
ಕೂಡುವೆ ಖಿನ್ನ ರಮಣಿ ॥
ಮಿಂಡಿಯು ತನ್ನಯ ಗಂಡನ ನೋಡದೆ
ಚಂಡ ತುಂಡರಿಸಿದಳಾ ಪ್ರೇಮದಿ
ಮಿಂಡತನ ಆಶಿಸಿ ಗಂಡನ ಕೊಲ್ಲಿಸಿ
ರಂಡಿಯು ಕೆಟ್ಟು ಹೋದಳು ॥

ಏನ್ರಿ, ಮೈರಾವಣನ ಸತಿ ರಾಮನ ಹತ್ತಿರ ಬಂದು ತನ್ನ ಮಂಚಕ್ಕೆ ಬಂದು ಸಂಭೋಗಸುಖವನ್ನಿತ್ತು ತೃಪ್ತಿಗೊಳಿಸಬೇಕೆಂದು ಬೇಡಿಕೊಂಡಳು. ಅದರ ಸಲುವಾಗಿ ತನ್ನ ಗಂಡನನ್ನು ಕೊಲ್ಲಿಸಿದಳು. ಅಂದಮೇಲೆ ರಾಮಚಂದ್ರನು ಆಕೆಯ ವಚನವನ್ನು ನಡಿಸಬೇಕೋ ನಡೆಸಬಾರದೋ ?

ತಿರುನೀಲಕಂಠ : ಹೌದು ಆಕೆಯ ವಚನ ನಡಿಸಬೇಕು.

ಸತ್ಯವತಿ : ಹಾಗಾದರೆ ಹೇಳುವೆನು ಕೇಳ್ರಿ.

ಪದ :

ಮೋಸ ಮಾಡೀನಂತ ಅವನ್ಯಾಕ ಓಡಿದ
ಆಕೆಯ ತೋರಿಸಿ ರಾಮನು ಅಂಥಾ ದೋಷಕ್ಕೆ
ಹೇಸದೆ ಮಾಡಿದಾ ಈ ಪರಿ
ಹೇಸಿ ರಾಮನ ಒಣ ಪೌರುಷ ಹೇಳಬ್ಯಾಡ್ರಿ
ಬರುವೆನಂತ ಮುಂಚೆ ಕೆಲಸ ಸಾಧಿಸಿದ
ಪೂರ್ಣವಾಗಿ ಹೀಗೆ ಮೋಸ ಮಾಡಿದ
ಗೊತ್ತೇ ಇದ್ದಿಲ್ಲ ಇಂಥಾ ರಾಮನ ನಡತೆ

ಏನ್ರಿ, ರಾಮಚಂದ್ರನು ಆಕೆಯಿಂದ ಪಾರಾಗಿ ಆಕೆಯ ಉಪಕಾರ ತೀರಿಸಿದ. ಉಂಡ ಸುಳಿಗಳ ಉಣ್ಣದ ಹಾಗೆ ಮಾಡಿಬಿಟ್ಟ ; ಆಕೆಯ ಮನೆತನಕ ಹೋಗಿ ಮಂಚ ಮುರೀತಂತ ನೆವ ತೆಗೆದು ತಪ್ಪಿಸಿ ಓಡಿ ಬಂದ.ಇಂಥಾದೇನ್ರಿ ರಾಮನ ವಚನ ?

ತಿರುನೀಲಕಂಠ : ಏನೆ, ಐರಾವಣನ ಹೆಂಡತಿಗೆ ಬರುತ್ತೇನಂತ ವಚನ ಕೊಟ್ಟದ್ದು.ಇದೇ ವಚನ ಕೊಡುವಾಗ ಹನುವಂತನ ಕಡೆಯಿಂದ ಆಕೆಗೆ ಏನೆಂದು ಹೇಳಿಕಳಿಸಿದ ಗೊತ್ತೆ ? ನಾನು ಅಲ್ಲಿಗೆ ಬಂದ ವೇಳೆಗೆ ಅಪಶಕುನ ಆಗಬಾರದು. ಒಂದುವೇಳೆ ಅಪಶಕುನ ಆದರೆ, ನಿನ್ನ ಮಾತು ನಿನಗೆ ಮುಟ್ಟಿಸಿ ಹಾಗೆಯೆ ಹೊರಟು ಬರುವೆನಂತ ಹೇಳಿ ಕಳುಹಿದನು.ಆ ಮಾತಿಗೆ ಆಕೆಯೂ ಕಬೂಲ ಆದಳು.ಅದರಂತೆ ಆಕೆಯ ಮನಿಗೆ ಹೋಗಿ ಮಂಚದ ಮೇಲೆ ಕೂಡ್ರುವಷ್ಟರಲ್ಲಿ ಮಂಚ ಮುರಿದು ಬಿತ್ತು.ಹೀಗೆ ಅಪಶಕುನ ಆದ ಕೂಡಲೆ ರಾಮಚಂದ್ರನು ಹಾಗೆಯೆ ಹಿಂದಕ್ಕೆ ತಿರುಗಿ ಬಂದನು.ಅಂದಮೇಲೆ ಅವನ ತಪ್ಪು ಎಳ್ಳಷ್ಟೂ ಇಲ್ಲ.

ಸತ್ಯವತಿ : ಏನ್ರಿ, ರಾಮಚಂದ್ರನ ಕಡೆಗೆ ಎಳ್ಳಷ್ಟು ತಪ್ಪಿಲ್ಲಾ ಅಂತೀರಿ.ಹಾಗಾದರೆ ಆ ಮಂಚ ಮುರಿಯುವ ಹಾಗೆ ಯಾರು ಮಾಡಿದರು ?

ತಿರುನೀಲಕಂಠ : ಏನೆ, ಅದು ಹಳೆಯದಾಗಿದ್ದು ಮುರಿದಿರಬೇಕು.

ಸತ್ಯವತಿ : ಹಾಗಲ್ಲ, ಅದು ಯಾಕೆ ಮುರಿಯಿತು ?ಅಂದರೆ ರಾಮಚಂದ್ರನು ಹನುಮಂತನನ್ನು ಕಳುಹಿಸಿ ಮಂಚ ಪೊಳ್ಳು ಮಾಡಿಸಿದನು.ಅಂತೆಯೆ ಮುರಿಯಿತು.ಹೀಗೆ ಮಾಡಿದ ಮೇಲೆ ಗಂಡಸರೆಲ್ಲ ಘಾತಕರು ಅನ್ನುವದು ಸತ್ಯವೊ ಸುಳ್ಳೊ ?

ತಿರುನೀಲಕಂಠ : ಏನೆ, ಶ್ರೀ ರಾಮಚಂದ್ರನು ಅಷ್ಟಾವತಾರಗಳಲ್ಲಿ ಸತೀವ್ರತನಾಗಿ ಇದ್ದ.ಮುಂದೆ ಕೃಷ್ಣಾವತಾರದಲ್ಲಿ ಆಕೆಗೆ ಕೊಟ್ಟ ವಚನವನ್ನು ಪೂರೈಸಿ ವಚನಪಾಲಕನೆನಿಸಿದ.ಗಂಡಸತು ಕೊಟ್ಟ ವಚನವನ್ನು ಎಂದೂ ತಪ್ಪಿಸುವದಿಲ್ಲ. ಹೆಂಗಸರು ಮಾತ್ರ ಬಲ್ಲಂಗ ಮಾಡಿ ಅನಿಸಿಕೊಳ್ಳುವರು ನೋಡು.

ಸತ್ಯವತಿ : ಹೆಂಗಸರು ಬಲ್ಲಂಗ ಏನು ಮಾಡುವರು ?

ತಿರುನೀಲಕಂಠ : ಮತ್ತೇನು ಮಾಡಬೇಕು, ಐರಾವಣನ ಹೆಂಡತಿ ರಾಮಚಂದ್ರನ ಮೇಲೆ ಮನಸಿಟ್ಟು ತನ್ನ ಗಂಡನನ್ನು ಕೊಲ್ಲಲು ಸಿದ್ಧಳಾದಳು.ಅಂದಮೇಲೆ ಇದು ಧರ್ಮವೇನು ?

ಸತ್ಯವತಿ : ಇದು ಧರ್ಮವಲ್ಲ.

ತಿರುನೀಲಕಂಠ : ಹಾಗಾದರೆ ಇಂಥಾದ್ದನ್ನೆಲ್ಲ ಮಾಡುತ್ತ, ನಾವು ಹೆಂಗಸರು ಹೆಚ್ಚು, ನಮ್ಮಿಂದ ಸಂಸಾರ ಅಂತಾ ನೀನು ಏನು ಸಿಫಾರಸು ಹೇಳುತ್ತಿ.ಗಂಡಸರ ಕಿಮ್ಮತ್ತು ನಿಮ್ಮಲ್ಲಿ ಇಲ್ಲ.ಅಂದಮೇಲೆ ಹೆಂಗಸರಿಂದ ಗಂಡಸರಿಗೆ ಸುಖ ಇಲ್ಲೆಂದು ತಿಳಿ.

ಸತ್ಯವತಿ : ಏನ್ರಿ, ಹೆಂಗಸರಿಂದ ಗಂಡಸರಿಗೆ ಸುಖ ಇಲ್ಲೇನ್ರಿ ?

ತಿರುನೀಲಕಂಠ : ಎಳ್ಳಷ್ಟು ಇಲ್ಲ.

ಸತ್ಯವತಿ : ಎಳ್ಳಷ್ಟು ಇಲ್ಲ ?

ಪದ :

ಇಲ್ಲದಿದ್ದರೆ ಸತಿಯ ಕೂಡಿಕೊಂಡು
ಸಂಸಾರ ಯಾಕ ಮಾಡುವರು ॥ಪಲ್ಲವಿ ॥

ಸತಿಯೆಂದೂ ಅಧಿಕ ಅಲ್ಲ
ಸತಿಯು ಭಾಗ್ಯದ ಮೂಲ
ಶ್ರುತಿಗಳೆಲ್ಲ ನುತಿಸಿವೆ ಸತಿಯೆನಿಸುವ
ಹೆಂಗಸರಲ್ಲೂ ಲಾಭವಿದೆ ಇಷ್ಟು ಲೋಭಾವಾಗೆ
ಇಷ್ಟು ಶೋಭನ ಇಲ್ಲವೇನ್ರಿ ಇಬ್ಬರ ಜೋಡಿಸಿ ॥

ಏನ್ರಿ, ಹೆಂಗಸರಿಂದ ಸುಖ ಎಲ್ಲ ಅನ್ನುವ ಮಾತು ನಿಮ್ಮದು ಯಾವ ದಂಡೆಗೂ ಹೆತ್ತುವದಿಲ್ಲ. ಈ ಪ್ರಪಂಚಕ್ಕೆ ಹೆಂಗಸರೆ ಆಧಾರ.ಹೆಂಗಸರಿಲ್ಲದಿದ್ದರೆ ಮಕ್ಕಳು ಎಲ್ಲಿ ಹುಟ್ಟುತ್ತಿದ್ದವು? ಮಕ್ಕಳು ಇಲ್ಲದಿದ್ದರೆ ಈ ಸಂಸಾರ ಎಲ್ಲಿ ಬೆಳೆಯುತ್ತಿತ್ತು ? ಅದಕ್ಕೆ ವಿಚಾರ ಮಾಡಿ ನೋಡಿದರೆ ಹೆಂಗಸರಿಂದ ಬೈಗು ಬೆಳಗು ಅಂತ ತಿಳಿದು ಬಿಡ್ರಿ.

ತಿರುನೀಲಕಂಠ : ಏನೆ, ಹೆಂಗಸರು ಇಲ್ಲದಿದ್ದರೆ ಮಕ್ಕಳು ಹುಟ್ಟುವುದಿಲ್ಲ ಅನ್ನುತ್ತಿ.ಮೊದಲು ಗಂಡಸರು ಬೀಜಾ ಬಿತ್ತದೆ ಸುಮ್ಮನೆ ಬಿಟ್ಟರೆ ಕೇವಲ ಹೆಂಗಸರು ಮಕ್ಕಳನ್ನು ಪಡೆವರೇನು? ಅದಕ್ಕೆ ಬೀಜಾ ಬಿತ್ತುವ ಗಂಡುಜನ್ಮವೇ ಹೆಚ್ಚಿನದು ನೋಡು.

ಸತ್ಯವತಿ : ಏನ್ರಿ, ಭೂಮಿ ಇಲ್ಲದೆ ಬೀಜಾ ತಕ್ಕೊಂಡು ಏನು ಮಾಡಬೇಕು ?ಅದರಂತೆ ಹೆಂಗಸರಿದ್ದರೆ ಗಂಡಸರಿಗೆ ಬೀಜಾ ಬಿತ್ತಲಿಕ್ಕೆ ಆಧಾರ.ಹೆಂಗಸರಿಲ್ಲದೆ ಕೇವಲ ಗಂಡಸರಿಗೆ ಸಂತತಿ ಆಗುವದೇನು ?ಇಲ್ಲ.ಅದಕ್ಕಾಗಿ ಗಂಡಸರ ಜನ್ಮಕ್ಕೆ ಹೆಂಗಸರೇ ಗತಿಯೆಂದು ತಿಳಿದು ಬಿಡ್ರಿ.

ತಿರುನೀಲಕಂಠ : ಏನೆ, ಹೆಂಗಸರಿಲ್ಲದಿದ್ದರೆ ಗಂಡಸರಿಗೆ ಮಕ್ಕಳು ಆಗುವದಿಲ್ಲವೇನು ?

ಸತ್ಯವತಿ : ಆಗುವದಿಲ್ಲ ಬಿಡ್ರಿ.

ತಿರುನೀಲಕಂಠ : ಆಗಿದ್ದರೆ ಹ್ಯಾಗೆ ?

ಸತ್ಯವತಿ : ಆಗಿದ್ದರೆ ಹೆಂಗಸು ಜನ್ಮ ಕಡಿಮೆಯೆಂದು ನಂಬುತ್ತೇನೆ.

ತಿರುನೀಲಕಂಠ : ನಂಬುತ್ತೀಯಾ ?

ಸತ್ಯವತಿ : ನಂಬುತ್ತೇನೆ.

ತಿರುನೀಲಕಂಠ : ಹಾಗಾದರೆ ಹೇಳುತ್ತೇನೆ ಕೇಳು.

ಪದ :

ವ್ಯಾಸನೆಂಬ ಋಷಿಗೆ ಶುಕ್ರನೆಂಬ ಪುತ್ರ ಹ್ಯಾಂಗ ಹುಟ್ಟಿದ
ಹೆಂಡತಿ ಎಲ್ಲಿ ಇದ್ದಳು ಅವಗ ಹೇಳು ತುರ್ತ
ಮೊದಲಿನಿಂದ ಇದ್ದ ಅವ ವಿರಕ್ತ
ಸತಿಯಿಲ್ಲದವಗ ಮಕ್ಕಳಿಲ್ಲೆಂದು ತನಗೆ
ತಿಳಿದದ್ದು ಹುಚ್ಚುತನವು ನಿನಗಿಲ್ಲ ಅನುಭವವು
ಇದು ಅಲ್ಲದೆ ಭಾರದ್ವಾಜ ಋಷಿ ದ್ರೋಣಾಚಾರ್ಯರೆಂಬ
ಪ್ರಸಿದ್ಧ ಮಗನ ಪಡೆದ ಸತಿಯು ಇಲ್ಲದೆ
ಅವನು ಮಗನ ಹ್ಯಾಂಗ ಪಡೆದ ಹೇಳೆ ಪ್ರೇಮದಿ
ಸತಿಯಿಂದ ಸುತರಂತ ಆಡುವಿ ನೀ ವ್ಯರ್ಥ
ಇದು ಹ್ಯಾಂಗ ವಿಪರೀತ ಆದೀತು ಹೇಳು ನೀ ತುರ್ತ

ಏನೆ, ಹೆಂಡರಿಲ್ಲದೆ ಗಂಡಸರಿಗೆ ಮಕ್ಕಳು ಆಗುವುದಿಲ್ಲ ಅಂತ ಅನ್ನುತ್ತಿ.ಹಾಗಾದರೆ ಜನ್ಮಜನ್ಮಾಂತರ ಹೆಂಗಸರನ್ನು ಮುಟ್ಟದ ವ್ಯಾಸ ಋಷಿಗೆ ಶುಕ್ರ ಋಷಿಯೆಂಬ ಮಗ ಹುಟ್ಟಿ ಲೋಕದಲ್ಲಿ ಪ್ರಸಿದ್ಧನಾಗಲಿಲ್ಲವೆ ?ಇದು ಅಲ್ಲದೆ ಭಾರದ್ವಾಜಋಷಿ ತನ್ನ ವೀರ್ಯವನ್ನು ದ್ರೋಣದೊಳಗೆ ಬಿಟ್ಟು ಕಡ್ಡಿಯಿಂದ ಮಥನ ಮಾಡಿ ಗಂಡು ಕೂಸನ್ನು ಮಾಡಿದ. ಆ ಕೂಸು ದ್ರೋಣದೊಳಗಿಂದ ಹುಟ್ಟಿದ ಕಾರಣ ದ್ರೋಣಾಚಾರ್ಯನೆಂಬ ಹೆಸರಿನಿಂದ ಜಗತ್ಪ್ರಸಿದ್ಧನಾದನು. ಅಂದಮೇಲೆ, ಹೆಂಗಸರಿಲ್ಲದೆ ಅವರು ಹೇಗೆ ಮಕ್ಕಳನ್ನು ಪಡೆದರು ?ಅವರಿಗೆ ಹೆಂಡರಿದ್ದರೇನು?  ಹೇಳು.

ಸತ್ಯವತಿ : ಇದ್ದಿದ್ದಿಲ್ಲ.

ತಿರುನೀಲಕಂಠ : ಹಾಗಾದರೆ ಹೆಂಡರಿಲ್ಲದೆ ಗಂಡಸರು ಮಕ್ಕಳನ್ನು ಪಡೆದರೆ ಹೆಂಗಸರ ಜನ್ಮ ಕಡಿಮೆ ಅಂತ ನಂಬುತ್ತೇನೆಂದು ಹೇಳಿದಿ.ಅದಕ್ಕೆ ಗಂಡಸರು ಕಡಿಮೆಯೋ ಅಥವಾ ಹೆಂಗಸರು ಕಡಿಮೆಯೋ : ಹೇಳು ?(ಸತ್ಯವತಿ ಸ್ತಬ್ಧಳಾಗುವಳು). ಯಾಕೆ ಸುಮ್ಮನಾದೆ ? ಮಾತಾಡು… ಮಾತಾಡುವದಿಲ್ಲವೆ ?ಪ್ರಿಯೆ, ಸುಮಾರು ಆಯಿತಂತ ನಾಚಿಕೆ ಪಟ್ಟರೆ ಆಗುವದೇನು ? ಈಗ ವಾದದಲ್ಲಿ ನಾನು ಗೆದ್ದದ್ದಕ್ಕೆ ನೀನು ನನಗೊಮ್ಮೆ ಚುಂಬನ ಕೊಡು.ರತಿ ಸುಖಕ್ಕೆ ಅನುಕೂಲಳಾಗು ನಡೆ.

ಸತ್ಯವತಿ : ಛೆ, ಮೈಮುಟ್ಟಲು ಬರಬೇಡಿರಿ, ಸರಿದು ನಿಂತು ಮಾತಾಡಿರಿ.

ತಿರುನೀಲಕಂಠ :  ಕೇಳಲಾರೆ ; ಇಚ್ಛೆಗನುಸಾರವಾಗಿ ಈಗ ಮಂಚಕ್ಕೆ ಬರುವಿಯೋ ಇಲ್ಲವೊ ?

ಸತ್ಯವತಿ : ಪ್ರಿಯತಮ, ಹೀಗೆ ಹುಚ್ಚರಂತೆ ಮಾಡಬಾರದು.ನಾನು ಹೇಳಿದ ಹಾಗೆ ಕೇಳಿದರೆ ನಿಮ್ಮ ಮಂಚಕ್ಕೆ ಬರುತ್ತೇನೆ.

ತಿರುನೀಲಕಂಠ :  ಕೇಳುವದೇನಿದೆ ಹೇಳು ?

ಸತ್ಯವತಿ : ನನ್ನ ಮಾತನ್ನು ನಡೆಸುತ್ತೀರಾ ?

ತಿರುನೀಲಕಂಠ :  ಹೌದು ನಡೆಸುತ್ತೇನೆ.

ಸತ್ಯವತಿ : ನಿಜವಾಗಿ ನಡೆಸುತ್ತೀರಾ ?

ತಿರುನೀಲಕಂಠ :  ಹೌದು, ನಿಜವಾಗಿ ನಡೆಸುತ್ತೇನೆ.

ಸತ್ಯವತಿ : ನೋಡಿರಿ, ಹೋಳಿಗಿ, ತುಪ್ಪಾ, ಸಕ್ಕರಿ ಊಟ ಮಾಡು ಅಂತ ಹೇಳಿ ಬಡಿಸಿದರೆ ಅದರೊಳಗೆ ಒಂದು ಹನಿ ವಿಷ ಬಿಟ್ಟರೆ ಅದನ್ನು ಉಣ್ಣಬೇಕೋ ಅಥವಾ ಬಿಟ್ಟುಬಿಡಬೇಕೊ ?

ತಿರುನೀಲಕಂಠ :  ವಿಷವನ್ನು ಬಿಟ್ಟು ಒಳ್ಳೆಯದನ್ನು ಊಟಾ ಮಾಡಬೇಕು.

ಸತ್ಯವತಿ : ಹಾಗಾದರೆ, ಅದರಂತೆ ನೀವು ಆ ಪಾತರದವರ ಮನೆಗೆ ಹೋಗಿ ವಿಷಾ ತಕ್ಕೊಂಡು ಬಂದೀರಿ ; ಅದನ್ನು ಚಲ್ಲಿ ಬರ‌್ರಿ.ಅಂದರೆನಿಮ್ಮ ಕೂಡ ನಾನು ಕಾಮವಿಲಾಸಕ್ಕೆ ತಯಾರಾಗುವೆ.

ತಿರುನೀಲಕಂಠ :  ಏನೆ, ನಾನು ವಿಷವನ್ನು ತಂದಿರುವೆನೆ ?

ಸತ್ಯವತಿ : ಪಾಪರೂಪವಾದಂಥ ಜರತಾರಿ ಪೋಷಾಕ ತಂದಿರುತ್ತೀರಿ.

ತಿರುನೀಲಕಂಠ : ಏನೆ, ನಾನು ಜರತಾರಿ ಪೋಷಾಕ ಹಾಕಿಕೊಂಡು ಬಂದದ್ದು ನಿನ್ನ ಮನಸ್ಸಿಗೆ ಬರಲಿಲ್ಲವೇನು ?

ಸತ್ಯವತಿ : ನನ್ನ ಮನಸ್ಸಿಗೆ ಬರಲಿಲ್ಲ ನೋಡ್ರಿ.

ತಿರುನೀಲಕಂಠ :  ಆಗಲೇ ಅವನ್ನು ಚಲ್ಲಿಬಿಟ್ಟಿರುವೆನಲ್ಲ !

ಸತ್ಯವತಿ : ಅಷ್ಟೇ ಅಲ್ಲ.ನೀವು ಪಾತರದವಳೊಡನೆ ಸರಿಸವಾಡಿದುದರಿಂದ ನಿಮ್ಮ ಶರೀರ ಪಾಪಮಯವಾಗಿದೆ.ಅದನ್ನಷ್ಟು ಕಳೆದಿಡಿರಿ.ಅಂದರೆ ನೀವು ಹೇಳಿದಂತೆ ಕೇಳುತ್ತೇನೆ.

ತಿರುನೀಲಕಂಠ :  ಏನೆ, ಕುಚೇಷ್ಟೆ ಮಾಡಬೇಡ.ಪಾತರದವಳೊಡನೆ ನಾನು ಸರಸ ವಾಡಿಲ್ಲ.ತಿಳಿಸಿ ಹೇಳುತ್ತೇನೆ ಕೇಳು.

ಪದ :

ಸಖಿ ಬೇಗ ಮಣಿ ಮಂಚಕ್ಕೇರಿ
ರತಿಸುಖವನ್ನು ಕೊಟ್ಟು ಮಾಡ ಮನಶಾಂತಿ ॥ಪಲ್ಲವಿ ॥
ಹಂಬಲಿಸುವೆ ನೀನೆಂಥ ವೈಯಾರಿ
ಬಂದು ಚುಂಬನ ಕೊಡು ನೀ ಎನಗೊಂದು
ಕಂಬುಗ್ರೀವಳೆ ಬಂದು ಕೂಡೆ ॥
ಕಾಮನ ಅರಗಿಳಿ ಕಾಮಿನಿ ಮಣಿ
ನೇಮಿಸಿದಂಥ ನಿನ್ನ ಪಣವೇನು
ಕಾಮಸುಖದ ಭ್ರಾಂತಿ ಮಾನಿನಿ ॥

ಏನೆ, ನನಗೀಗ ಕಾಮತಾಪ ಹೆಚ್ಚಾಗಿದೆ.ಅದನ್ನು ತಡೆಯುವದು ನನ್ನಿಂದ ಆಗದಾಗಿದೆ.ಇನ್ನಾದರೂ ಮಂಚಕ್ಕೆ ಬರುವಿಯೋ ಇಲ್ಲವೊ ?