ತಿರುನೀಲಕಂಠ : ಏನೆ, ಶೀಲವಿಲ್ಲದವರ ಜಾತಿ ಕೀಳಜಾತಿ. ಅಂಥವರಲ್ಲಿ ನಾನು ಉಂಡು ಬರಬಹುದೆ ?

ಸತ್ಯವತಿ : ಹಾಗಾದರೆ, ಹೊಲೆಯರ ಮನೆಯಲ್ಲುಂಡ ಶಿವನ ಕುಲ ಕೆಟ್ಟಿತೋ ಇಲ್ಲೋ ಹೇಳ್ರಿ?

ತಿರುನೀಲಕಂಠ :  ಏನೆ, ಆ ಪರಮಾತ್ಮನಿಗೆ ಕುಲವಿಲ್ಲ.ಶುದ್ಧಮನದ ಭಕ್ತರು ಕರೆದರೆ ಅವರಲ್ಲಿ ಊಟ ಮಾಡುವರು.

ಸತ್ಯವತಿ : ಏನ್ರಿ, ಅದಿರಲಿ. ಎಂಜಲ ಅಂದರೆ ಎಲ್ಲರಿಗೂ ಹೇಸಿಕೆ ಬರುವಂತಹದು.ಇದು ಸುಳ್ಳೋ ? ಖರೇನೊ ?

ತಿರುನೀಲಕಂಠ :  ಖರೆ

ಸತ್ಯವತಿ : ಹಾಗಾದರೆ ಚೋಳಕ್ಕೆಎಂಬವಳು ಒಂದು ದಿವಸ ಹೋಳಿಗೆ ಮಾಡಿ ತಿನ್ನುತ್ತಿದ್ದಳು.ಅವಳು ಉಣ್ಣುವ ಹೋಳಿಗೆಯ ಸವಿಗೆ ಮರುಳಾಗಿ ನಿಮ್ಮ ಶಿವ ಆ ಎಂಜಲ ಹೋಳಿಗೆಯನ್ನೇ ತಿಂದನು.ಅಂದಮೇಲೆ ಶಿವನಿಗೆ ಎಂಜಲಮೂಳ ಏಕೆ ಅನಬಾರದು?

ತಿರುನೀಲಕಂಠ :  ಏನೆ, ಆ ಚೋಳಕ್ಕ ಸಾಮಾನ್ಯ ಸ್ತ್ರೀಯಲ್ಲ ಮಹಾಭಕ್ತಳು.ಆದ್ದರಿಂದಲೇ ಶಿವನು ಅವಳೊಡನೆ ಹೋಳಿಗೆ ತಿಂದುಬಿಟ್ಟನು.ಶಿವನ ಕಡೆ ಎಳ್ಳಷ್ಟೂ ತಪ್ಪಿಲ್ಲ !

ಸತ್ಯವತಿ : ಶಿವನ ಕಡೆ ಎಳ್ಳಷ್ಟೂ ತಪ್ಪು ಇಲ್ಲ ಅಂತೀರಾ ?

ತಿರುನೀಲಕಂಠ :  ನಿಜವಾಗಿ ಅವನಲ್ಲಿ ಏನೇನೂ ತಪ್ಪು ಇಲ್ಲ.ಅವನೊಬ್ಬ ಅವತಾರಿ ಪುರುಷ.ಅನೇಕ ಲೀಲೆಗಳಿಂದ ಈ ಲೋಕವನ್ನೇ ಉದ್ಧಾರ ಮಾಡಿದ ಮಹಾಪುಣ್ಯವಂತ !

ಸತ್ಯವತಿ : ಯಾವ ಯಾವ ಕಾಲದಲ್ಲಿ ಏನೇನ ಅವತಾರಮಾಡಿ ಈ ಲೋಕದ ಉದ್ಧಾರಮಾಡ್ಯಾನ ? ನಿಜವನ್ನು ಹೇಳ್ರಿ.

ತಿರುನೀಲಕಂಠ :  ಏನೆ, ಶಿವನು ಇಪ್ಪತ್ತೈದು ಲೀಲೆಗಳನ್ನು ಮಾಡಿದ್ದಾನೆ.

ಸತ್ಯವತಿ : ಆ ಲೀಲೆಗಳಲ್ಲಿ ಮುಖ್ಯವಾದ ಲೀಲೆ ಯಾವುದು ?

ತಿರುನೀಲಕಂಠ :  ಹಾಗಾದರೆ ಕೇಳು.

ಪದ :

ಗರ್ಭಾವತಾರ ತಾಳಿ ಶಿವನು
ಉಗ್ರ ನರಸಿಂಹನನ್ನು ಕೊಂದು
ಅವನ ಚರ್ಮ ಸುಲಿದು ಧರಿಸಿದನು
ಅವನ ಕೊಂದು ಜಗವ ರಕ್ಷಿಸಿದನು
ಶಿವನ ಶಕ್ತಿಯೆಲ್ಲ ಮಾಡಿದ ಒಂದು ಲೀಲಾ
ಮತ್ತೊಂದು ಕೇಳು ಮಹಿಮಾ ಸಾಂಬನ ಲೀಲಾ
ಮತ್ತೊಂದು ಕಾಲದಲ್ಲಿ ಅರ್ಧನಾರೀಶ್ವರನ
ವೇಷ ತೊಟ್ಟು ಅರ್ಧನಾರೀಶ್ವರನೆನಿಸಿ
ಸರದಿಯ ವಿಷ್ಣು ಬ್ರಹ್ಮರ ಜಗಳದ
ಸಮಯದಲ್ಲಿ ಬಂದು ಅವರ
ನಡುವೆ ಶಾಂತಿ ಮಾಡಿ ಇನ್ನಾ
ಜಗದ ಸಂತಾಪವನ್ನು ನೀಗಿ ತಾ ಮಾಡಿ ಕರ್ಮ !

ಏನೆ, ಹಿರಣ್ಯಕಶ್ಯಪನ ಸಲುವಾಗಿ ಹರಿಯು ನಾರಸಿಂಹನ ಅವತಾರ ಮಾಡಿ ಹಿರಣ್ಯಕಶ್ಯಪನನ್ನು ಕೊಂದು ಪ್ರಲ್ಹಾದನಿಗೆ ಪಟ್ಟಿಗಟ್ಟಿದ.ಈ ನರಸಿಂಹ ಅವತಾರ ತಾಳಿದ ವಿಷ್ಣುವಿಗೆ ಬಹಳ ಗರ್ವ ಬಂತು.ಆಗ ಶಿವನು ಗರ್ಭಾವತಾರ ಮಾಡಿ ವಿಷ್ಣುವನ್ನು ಕೊಂದನು.ಮತ್ತೊಂದು ಬ್ರಹ್ಮ ವಿಷ್ಣು ಇಬ್ಬರೂ ಭಯಂಕರ ಬಡಿದಾಡಲಿಕ್ಕೆ ಹತ್ತಿದರು.ಆಗ ಶಿವನು ಅರ್ಧನಾರೀಶ್ವರನಾಗಿ ಅವರ ಜಗಳ ತೀರಿಸಿ ಲೋಕೋದ್ಧಾರ ಮಾಡಿದನು.

ಸತ್ಯವತಿ : ಶಿವನು ಬ್ರಹ್ಮ ವಿಷ್ಣುವಿನ ಜಗಳ ಶಾಂತ ಮಾಡಿದ ಅಂತಿರಿ. ಅವರಿಗೆ ಶಾಸನ ಮಾಡಲಿಲ್ಲೇನ್ರಿ ?

ತಿರುನೀಲಕಂಠ :  ಅವರು ಮೂವರೂ ತ್ರಿಮೂರ್ತಿಗಳಲ್ಲವೆ ?ಯಾರಿಗೂ ತೊಂದರೆಯಾಗದಂತೆ ಶಿವನು ಸಮಾಧಾನ ಪಡಿಸಿದನು.

ಸತ್ಯವತಿ : ಪರಮಾತ್ಮನು ಬ್ರಹ್ಮನಿಗೆ ಶಾಸನ ಮಾಡಿಲ್ಲೇನ್ರಿ ?

ತಿರುನೀಲಕಂಠ : ಹೌದು ; ಅವನಿಗೇನೂ ಕೆಟ್ಟ ಮಾಡಲಿಲ್ಲ.

ಸತ್ಯವತಿ :

ಪದ :

ಮಾಡದಿದ್ದರೆ ಕಾಲಭೈರವ ವೇಷಧರಿಸಿ
ಬ್ರಹ್ಮನ ತಲೆಗಡಿದು ಚಲ್ಲಿದ್ದ್ಯಾಕ
ಅವನು ತಲೆಬುರುಡೆ ಭಿಕ್ಷಾಪಾತ್ರೆ ಮಾಡಿದನು
ಬುರುಡೆಯ ಹಿಡಕೊಂಡು ಮನೆ ಮನೆ ತಿರಿದುಂಡು
ಬ್ರಹ್ಮನ ಹೊಡೆದು ಬಂಡು ಮಾಡಿದ ಹೇಳಿದನು
ಹರಿಯ ಮೇಲೆ ಪ್ರೇಮ ಇದ್ದರೆ ಹರಿಯ ಮನೆಗೆ
ಹೋಗಿ ತಾನು ರಕ್ತ ಭಿಕ್ಷೆ ಬೇಡಿದನ್ಯಾಕ
ಹೇಳಿರಿ ರಮಣಾ ; ಅವನ ರಕ್ತವೆಲ್ಲಾ ಹೀರಿ
ನಿತ್ರಾಣ ಮಾಡಿದ ನಿಮ್ಮ ಶಿವನು
ಕರುಣವಿಲ್ಲದೆ ತಾನು ಬಲು ಕೆಟ್ಟ ಆಗಿ ಅವನು
ಹರಿಯನ್ನು ಬಲು ಕಾಡಿದನು

ಏನ್ರಿ, ಪರಮಾತ್ಮನು ಅವರ ಮೇಲೆ ಕಾಳಜಿಯಿದ್ದರೆ ಭೈರವರೂಪ ತಾಳಿ ಬ್ರಹ್ಮನ ತಲೆ ಕತ್ತರಿಸಿ, ಆ ತಲೆಯನ್ನೇ ಕಪಾಲ ಮಾಡಿ, ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿದ ಮತ್ತು ವಿಷ್ಣುವಿನ ಹತ್ತಿರ ಹೋಗಿ ರಕ್ತವನ್ನು ಭಿಕ್ಷೆ ಬೇಡಲಾಗಿ, ಅವನು ತನ್ನ ಹಣೆಯನ್ನು ಸೀಳಿ ರಕ್ತ ಕೊಟ್ಟನು.ಆಗ ಹರಿಯು ನಿತ್ರಾಣನಾಗಿ ನೆಲಕ್ಕೆ ಬಿದ್ದದ್ದು ನೋಡಿ ಶಿವನಿಗೆ ಸಮಾಧಾನವಾಯಿತೆ ?

ತಿರುನೀಲಕಂಠ : ಏನೆ, ಆ ಬ್ರಹ್ಮನಿಗೆ ಗರ್ವ ಬಂದಿತ್ತು.ಅದಕ್ಕೆಂದೇ ಅವನ ತಲೆಯನ್ನು ಕಡಿದು ಕಪಾಲ ಮಾಡಿಕೊಂಡ.ಆ ಬ್ರಹ್ಮನ ಕಪಾಲವು ರಕ್ತಹಾರ ಬೇಡಲಾಗಿ ಶಿವನು ವಿಷ್ಣುವಿನ ಹತ್ತಿರ ಹೋಗಿ ಇಷ್ಟು ಲೀಲೆ ತೋರಿದ.

ಸತ್ಯವತಿ : ಸ್ವಾಮಿ, ಬ್ರಹ್ಮಕಪಾಲ ರಕ್ತಬೇಡಿದರೆ ಶಿವನು ತನ್ನ ತಲೆಯೊಳಗಿನ ರಕ್ತ ಕೊಡಬಹುದಾಗಿತ್ತಲ್ಲ ?ಅವನ ರಕ್ತದಿಂದ ತನ್ನ ಕಪಾಲ ತುಂಬಿಸಿಕೊಂಡಲ್ಲಿ ಶಿವನಿಗೆ ಯಾವ ದೊಡ್ಡಸ್ತನ ಬಂತ್ರಿ ?

ತಿರುನೀಲಕಂಠ : ಏನೆ, ಶಿವನು ವಿಷ್ಣುವಿನ ಹತ್ತಿರ ಹೋದುದು ಅಷ್ಟದಿಕ್ಪಾಲಕರ ಪರೀಕ್ಷೆ ಮಾಡುವದಕ್ಕಾಗಿ,ಅದಕ್ಕಾಗಿ ಭಿಕ್ಷೆ ಬೇಡಿ ತನ್ನ ಲೀಲಾ ತೋರಿದ.

ಸತ್ಯವತಿ : ಶಿವನು ಮತ್ತ್ಯಾವ ಅವತಾರ ಮಾಡಿದನ್ರಿ ಸ್ವಾಮಿ ?

ತಿರುನೀಲಕಂಠ :

ಪದ :

ಕಿರಾತ ವೇಷ ತೊಟ್ಟು ಶಿವನು
ವಾಣಿಯ ಬೆನ್ನು ಹತ್ತಿ ಬಂದ
ಜಿಂಕೆಯ ರೂಪದ ಬ್ರಹ್ಮನನ್ನು ಹೊಡೆದ
ಬಿಲ್ಲ ಗುರಿ ಹೂಡಿ ಬೇಟೆಯಾಡಿದನು
ಗಂಡು ಜಿಂಕೆಯನ್ನು ಕೊಂದು
ಹೆಣ್ಣು ಜಿಂಕೆಯನ್ನು ಪಿಡಿದು
ಮೃಗಧರನೆಂಬ ನಾಮ ಧರಿಸಿದ
ಶಿವ ತಾನೆ ಎಂದ
ಬೇಡರ ವೇಷ ತಾಳಿದನು
ಶಿವ ತಾನು ಬೇರೊಂದು ನಾಯಿ ಮಾಡಿ
ಬೆನ್ನು ಹಚ್ಚಿಕೊಂಡು ಮುಂದೆ ನಡೆದನು
ಅರ್ಜುನನಿಗೆ ಪಾಶುಪತಾಸ್ತ್ರವನ್ನು ಕೊಟ್ಟನು
ಸಾಂಬನ ಲೀಲೆಯನ್ನು ಕೇಳ ಚಿತ್ತವಿಟ್ಟು ನೀ
ಹೇಳುವೆನೆಲ್ಲಾ ನಾನು ವೇದಶಾಸ್ತ್ರವನ್ನು

ಏನೆ, ಶಿವನು ಸರಸ್ವತಿಯ ಮೇಲೆ ಮೋಹಗೊಂಡಾಗ ಸರಸ್ವತಿ ಅವನ ಅಂತರಂಗ ತಿಳಿದು ಹೆಣ್ಣುಚಿಗರೆಯಾಗಿ ಓಡಿಹೋದಳು.ಆಗ ಬ್ರಹ್ಮನು ಗಂಡು ಚಿಗರೆಯಾಗಿ ಹೆಣ್ಣು ಚಿಗರೆಯ ಬೆನ್ನು ಹತ್ತಿದ.ಹೆಣ್ಣು ಚಿಗರೆಯಾದ ಸರಸ್ವತಿಯು ಅಂಜಿ ಪರಮಾತ್ಮನನ್ನು ಮೊರೆಹೊಕ್ಕಳು.ಆಗ ಶಿವನು ಮೃಗಧರನೆಂಬ ಹೆಸರು ಪಡೆದ.ಇಷ್ಟೇ ಅಲ್ಲದೆ ಅರ್ಜುನನ ಭಕ್ತಿಗೆ ಮೆಚ್ಚಿ ಕಿರಾತ ರೂಪದಿಂದ ಅವನಿಗೆ ಪಾಶುಪತಾಸ್ತ್ರವನ್ನು ಕೊಟ್ಟನು.ಹೀಗೆ ಶಿವನು ಅನೇಕ ಲೀಲೆಗಳನ್ನು ಮಾಡಿದ್ದಾನೆ.

ಸತ್ಯವತಿ : ಏನ್ರಿ ಸ್ವಾಮಿ, ಹೆಣ್ಣು ಚಿಗರೆಯಾದ ಸರಸ್ವತಿಯ ಬೆನ್ನು ಹತ್ತಿ ಗಂಡು ಚಿಗರೆಯಾದ ಬ್ರಹ್ಮನು ನಡೆದಾಗ ಶಿವನು ಗಂಡುಚಿಗರೆಯನ್ನು ಕೊಂದು ಬಿಟ್ಟನೆ ?

ತಿರುನೀಲಕಂಠ : ಹೌದು, ಗಂಡುಚಿಗರೆಯನ್ನು ಕೊಂದುಬಿಟ್ಟನು

ಸತ್ಯವತಿ :

ಪದ :

ಮುಂದೆ ಅವರು ಗಂಡ ಹೆಂಡಿರಾಗಿ
ಲಗ್ನವಾಗುವಾಗ ಶಿವ ಎತ್ತ ಹೋದ ಹೇಳ್ರಿ
ನೀವಿನ್ನು ಆತನ ದೊಡ್ಡಸ್ತನಕ ತುಸ
ಭಯಾನ ಬರಲಿಲ್ಲ ಎಳ್ಳಷ್ಟು !
ಬ್ರಹ್ಮಗ ಆದ ಕೆಟ್ಟ ಶಿವಗ ಯಾಕ ತಿಳಿಲಿಲ್ಲ
ಹಿಂದೊಮ್ಮೆ ಇಂದ್ರಕೀಲ ಪರ್ವತದಲ್ಲಿ
ತಪ ಮಾಡುತಿದ್ದ ಪಾರ್ಥನಲ್ಲಿಗೆ ಹೋಗಿ
ಕೆಣಕಿ ಯುದ್ಧ ಮಾಡಿದ್ದಕ್ಕೆ ಅವನ ಗುದ್ದಿ
ರಕ್ತ ಕಾರಿಸಿದ ಇದು ಎಂಥ ಶಿವನ ನೀತಿ
ಎಂಥ ಶಿವನ ನೀತಿ ಅವಗಿಲ್ಲ ತುಸು ನಡತಿ
ಹೇಳತೀರಿ ಯಾಕ ಈ ರೀತಿ

ಏನ್ರಿ, ಆ ಶಿವನ ಸಂಭಾವಿತಗಿರಿಯ ಗಂಭೀರತನವನ್ನು ಏಕೆ ಕೊಚ್ಚಿತ್ತೀರಿ ? ಮೊದಲು ಸರಸ್ವತಿ ಸಾಂಬನ ಮನದ ಇಂಗಿತ ತಿಳಿದು ಆಂಜಿ, ಹೆಣ್ಣು ಚಿಗರೆಯಾಗಿ ಓಡಿಹೋದಳು.ಬ್ರಹ್ಮನು ಗಂಡುಚಿಗರೆಯಾಗಿ ಅವಳ ಬೆನ್ನು ಹತ್ತಿದನು.ನಿಮ್ಮ ಶಿವನು ಹೆಣ್ಣು ಚಿಗರೆಯ ಮೇಲೆ ಮೋಹವಿಟ್ಟು ಗಂಡು ಚಿಗರೆಯನ್ನು ಕೊಲ್ಲುವದು ಸಂಭಾವಿತಗಿರಿಯೆ? ಮತ್ತು ಆಕೆಯ ಪಕ್ಷ ಹಿಡಿಯಲಿಕ್ಕೆ ತಿಳಿಯಲಿಲ್ಲವೇ ?

ತಿರುನೀಲಕಂಠ : ಏನೆ, ಅವರಿಬ್ಬರು ಮುಂದೆತಾವಾಗಿಯೇ ಕೂಡಿದರು.ಅದಕ್ಕೇನು ಮಾಡಬೇಕು ?ಆಗ ಶಿವನು ಸುಮ್ಮನಾದ.

ಸತ್ಯವತಿ : ಹೀಗೇನು ಸ್ವಾಮಿ ? ಪರಮಾತ್ಮನು ಮತ್ತ್ಯಾವ ಅವತಾರ ಮಾಡಿದ ಹೇಳ್ರಿ ?

ತಿರುನೀಲಕಂಠ :

ಪದ :

ಜ್ಯೋತಿರ್ಲಿಂಗ ಅವತಾರ ತಾಳಿ
ವಿಷ್ಣುಬ್ರಹ್ಮರ ನಡುವೆ ಜನಿಸಿ
ಕೆಳಗಿನ ಲೋಕ ಆಕಾಶದ ಮೇಲೆ ದಾಟಿ
ಅಳತಿ ಬಿಟ್ಟು ಬೆಳೆದು ನಿಂತಿತು
ಒಬ್ಬ ಉಪರಾಟಿ ಆಕಾಶವಾಣಿಯಿಂದ
ಹೇಳಿದ ತಾನೆಂದ ಕೊನೆಯ ಮೂಲಗಳೆರಡು
ದಂಡಕದಿಂದ ಹೊಡೆದ ಆಗ ವಿಷ್ಣುರೂಪ ತಾಳಿ
ಲೋಕಗಳನ್ನು ಬಗೆದು ದಾಟಿ ಹುಡುಕಿದರು
ಅವನಿಗೆ ತಳ ಕಾಣಲಿಲ್ಲ
ಹಂಸ ಬ್ರಹ್ಮಗೆ ನೆಲ ಸಿಗಲಿಲ್ಲ
ಇಬ್ಬರೂ ಬಹು ದಿವಸ ಸುತ್ತಿದರು ಲಿಂಗವನ್ನು
ಹೆಮ್ಮೆಯಿಂದ ಬಂದರು ಕೇಳಿನ್ನು

ಏನೆ, ಬ್ರಹ್ಮನಿಗೂ ವಿಷ್ಣುವಿಗೂ ಗರ್ವ ಬಂದು ನಾನು ಹೆಚ್ಚು ತಾನು ಹೆಚ್ಚೆಂದು ತಮ್ಮ ತಮ್ಮೊಳಗೆ ಭಯಂಕರ ಯುದ್ಧ ಮಾಡಹತ್ತಿದರು.ಆಗ ಆಕಾಶವಾಯಿತು.ಪರಮಾತ್ಮನು ಅವರಿಬ್ಬರ ನಡುವೆ ಜ್ಯೋತಿರ್ಲಿಂಗವಾಗಿ ನಿಂತು ನನ್ನ ಆದಿ ಅಂತ್ಯವನ್ನು ಯಾರು ಕಾಣುತ್ತೀರಿ ಅವರೇ ಜಗತ್ತಿಗೆ ಹೆಚ್ಚಿನವರೆಂದು ಹೇಳಿದ.ಆಗ ಬ್ರಹ್ಮನು ಹಂಸನಾಗಿ ಆಕಾಶಕ್ಕೆ ಹಾರಿದ ; ವಿಷ್ಣು ವರಾಹ ರೂಪ ತಾಳಿ ಭೂಮಿಗೆ ಇಳಿದ.ವಿಷ್ಣು ಆ ಲಿಂಗದ ಆದಿಯನ್ನು ಕಾಣದೆ ಮುಖಭಂಗಿತನಾಗಿ ತಿರುಗಿ ಬಂದ.ಬ್ರಹ್ಮನು ಸಹ ಶಿವನ ಮುಡಿಯನ್ನು ಕಾಣದೆ ಮರಳಿ ಹೊರಟ.ಆಗ ಒಂದು ಕ್ಯಾದಗಿ ಗರಿ ಶಿವನ ಮುಡಿಯಿಂದ ಜಾರಿ ಕೆಳಗೆ ಬೀಳುತ್ತಲಿತ್ತು.ಬ್ರಹ್ಮನು ಅದರ ಸಾಕ್ಷಿಯಿಟ್ಟು ಶಿವನಲ್ಲಿಗೆ ಬಂದನು.ಆಗ ಶಿವನು ಅವರಿಬ್ಬರನ್ನು ನೋಡಿ,ನೀವು ನನ್ನ ಆದಿ ಅಂತ್ಯವನ್ನು ಕಂಡುಬಂದಿರಾ ? ಎಂದು ಕೇಳಿದ.ವಿಷ್ಣು ತಾನು ನೋಡಲಿಲ್ಲವೆಂದು ನಿಜವನ್ನೇ ಹೇಳಿದ.ಬ್ರಹ್ಮನು ನಾನು ನೋಡಿ ಬಂದೆ ನೆಂದು ಸುಳ್ಳು ಹೇಳಿದನು.ಆಗ ಶಿವನು ಜ್ಞಾನದೃಷ್ಟಿಯಿಂದ ನೋಡಿ ಬ್ರಹ್ಮನ ಗರ್ವಭಂಗ ಮಾಡಿ ಕ್ಯಾದಗಿ ಪುಷ್ಪಕ್ಕೆ ಇವತ್ತಿನಿಂದ ನನ್ನ ಪೂಜೆಗೆ ನೀನು ಎರವಾಗು ಅಂತ ಶಾಪ ಕೊಟ್ಟನು.ಆದ್ದರಿಂದ ಇವತ್ತಿಗೂ ಕ್ಯಾದಿಗೆ ಶಿವನ ಪೂಜೆಗೆ ಸಲ್ಲುವದಿಲ್ಲ.ಪ್ರಾಣಕಾಂತೆ, ಶಿವನ ಲೀಲೆ ಅಗಾಧವಾದುದು.ಆದ್ದರಿಂದಲೇ ವಿಷ್ಣು ಬ್ರಹ್ಮರು ತಮ್ಮ ಗರ್ವಬಿಟ್ಟು ಶಿವನಿಗೆ ನಮಿಸಿ ಹೊರಟು ಹೋದರು.

ಸತ್ಯವತಿ : ಏನ್ರಿ, ಶಿವನಲ್ಲಿ ಕೆಟ್ಟ ಗುಣಗಳಿದ್ದರೂ ಅವನ್ನು ಒತ್ತಟ್ಟಿಗೆ ಇಟ್ಟು, ಅವನ ಶ್ರೇಷ್ಠ ಗುಣಗಳನ್ನೇ ನನ್ನ ಮುಂದೆ ಇಡುತ್ತ ಬಂದಿರಿ.ಅವನು ನಿಜವಾಗಿ ಕಳ್ಳ ಸುಳ್ಳ !

ತಿರುನೀಲಕಂಠ : ಛೀ ಹುಚ್ಚಿ, ಅವನು ಕಳ್ಳನಲ್ಲ ಸುಳ್ಳನಲ್ಲ ಅವನು ಬಹಳ ಒಳ್ಳೆಯವ ಅದಕ್ಕಾಗಿಯೇ ಅವನು ಪೂಜ್ಯನಾಗಿರುವನು.

ಸತ್ಯವತಿ :

ಪದ :

ಆ ಶಿವನು ತಾನು ಮೊದಲು ಪಾರ್ವತಿಯ ಕೂಡ
ಪಗಡಿಯಾಟ ಆಡುವಾಗ ಹರಿಗೆ ಸುಳ್ಳು ಹೇಳು ಅಂತ
ಸುಳ್ಳು ಸಾಕ್ಷಿ ಹೇಳುತ ಕೂತ ಸುಳ್ಳು ಮಾತಾಡುವವರ
ತಳ್ಳಿ ತನ್ನವರ ಬಿಡುವದಿಲ್ಲಂತ ಮತ್ತೆ ಹೇಳುವದ್ಯಾಕ
ಆಗ ಪಗಡಿಯಾಟದಲ್ಲಿ ಶಿವನು ತಾನೆ
ಸೋಲತಾನಂತ ಕಣ್ಣಸನ್ನೆ ಮಾಡಿ ಹರಿಗೆ ಹೇಳಿಸಿದ
ತಾನು ದೊಡ್ಡಸ್ತನ ಮಾಡಿದ ತನ್ನಲ್ಲಿ ಇಂಥಾ ಗುಣ
ಅಳತಿಲ್ಲ ಸುಳ್ಳು ಹುಳಕು ಮತ್ತೊಬ್ಬರಲ್ಲಿ
ಹುಡುಕುವದೆಂಥ ಲೆಕ್ಕ !

ಸ್ವಾಮಿ, ಶಿವನು ಸುಳ್ಳು ಹೇಳುವರಿಗೆ ಸೇರುವದಿಲ್ಲವೆಂದು ಬಾರಿ ಬಾರಿಗೆ ಸಾರಿ ಹೇಳುತ್ತೀರಿ.ಪೂರ್ವದಲ್ಲೊಮ್ಮೆ ತಾನು ಪಾರ್ವತಿಯ ಕೂಡ ಪಗಡೆಯಾಡಿ ಸೋತು ಹೋದ.ಈ ವಿಷಯವನ್ನು ಹರಿಗೆ ಡಂಗುರ ಸಾರಿ ಎಲ್ಲರ ಮುಂದೆ ತಿಳಿಸಬೇಕೆಂದು ಕೇಳಿಕೊಂಡ.ಆಗ ಪಾರ್ವತಿಯು ಸಿಟ್ಟಾಗಿ ಹರಿಗೆ ಹಾವಾಗಿ ನರಲೋಕದಲ್ಲಿ ತಿರುಗಾಡೆಂದು ಶಾಪಕೊಟ್ಟಳು.ಆ ವೇಳೆಯಲ್ಲಿ ಶಿವನು ಹರಿಯನ್ನೇಕೆ ಉಳಿಸಿಕೊಳ್ಳಲಿಲ್ಲ ?

ತಿರುನೀಲಕಂಠ : ಆ ವೇಳೆಗೆ ಅವನನ್ನು ಉಳಿಸಿಕೊಳ್ಳಲು ಬರುವಂತೆ ಇದ್ದಿಲ್ಲ.

ಸತ್ಯವತಿ : ಅದ್ಯಾಕೆ ಬರುವಂತೆ ಇದ್ದಿಲ್ಲ ?

ತಿರುನೀಲಕಂಠ : ಏನೆ, ಪಾರ್ವತಿಯು ಶಾಪ ಕೊಟ್ಟ ಕೂಡಲೆ ಶಿವನು ಅಪ್ಪಣೆಯನ್ನು ಕೊಟ್ಟು ಕಳುಹಿದ.ಆ ಪ್ರಕಾರ ಹರಿಯು ಹಾವಾಗಿ ನರಲೋಕದಲ್ಲಿ ಸಂಚಾರ ಮಾಡತೊಡಗಿದ.ಆಗ ಶಿವನು ಗಣಪತಿಯನ್ನು ಕಳುಹಿಸಿ ಹರಿಯನ್ನು ಉದ್ಧಾರ ಮಾಡಿದ.ಸತ್ಯವತೀ ಒತ್ತಾಯದಿಂದ ಇತ್ತಂಡದ ಮಾತನ್ನು ಏಕೆ ಆಡುತ್ತೀ ?ಸರಿಯತ್ತ.

ಸತ್ಯವತಿ : ಇದೆಂಥ ಸುಡುಗಾಡ ಲೀಲೆ ! ಆ ಹರಿಯನ್ನು ಹಲುಬಿಸಿ ತಾನು ಜಗದ್ಗುರು ಆಗಿ ಮೆರೆಯವದು ಶಿವನ ಸಂಭಾವಿತಗಿರಿಯೇನ್ರಿ? ಈ ಮಾತ ಮತ್ತ್ಯಾರ ಮುಂದರ ಹೇಳ್ರಿ.

ತಿರುನೀಲಕಂಠ :  ಏನೆ, ಮುಕ್ಕಣ್ಣನ ಲೀಲೆ ಹೊರಗಣ್ಣಿಗೆ ಹಾಗೆ ತೋರಿದರೂ ಅಂತರಂಗದಲ್ಲಿ ದಿವ್ಯವಾದುದು ಬಾಳೆಹಣ್ಣು ಕಣ್ಣಿಗೆ ಕಪ್ಪಾಗಿ ಕಂಡರೂ ಒಳಗಿನ ಸವಿ ರುಚಿಕಟ್ಟೆಂಬುದು ಗೊತ್ತಿಲ್ಲವೆ ?

ಸತ್ಯವತಿ : ಅದರೊಳಗೆ ಎಂಥ ರುಚಿ ಇರುತ್ತದೆ ?

ತಿರುನೀಲಕಂಠ :  ಅದರೊಳಗಿನ ರುಚಿ ಅಮೃತಪ್ರಾಯವಾಗಿರುತ್ತದೆ.

ಸತ್ಯವತಿ : ಹೌದ್ರಿ, ಬಾಳೆಹಣ್ಣು ಹೊರಗೆ ಕೊಳೆತಿದ್ದು ನಾಲಿಗೆಗೆ ರುಚಿಯಾದರೇನು? ರುಚಿಯ ಮೇಲೆ ಹೊದಿಕೆ ಇದ್ದರೆ ಸರಿಯಾದೀತೆ ?

ತಿರುನೀಲಕಂಠ :  ಹಾಗಲ್ಲ ಹುಚ್ಚೀ, ಪರಮಾತ್ಮನ ಲೀಲೆ ಕಣ್ಣಿಗೆ ಕುರೂಪವೆನಿಸಿದರೂ ಜಗತ್ತಿಗೆ ಹಿತವನ್ನು ಮಾಡುವಂಥಾದ್ದು.ಶಿವನು ಯಾರಿಗೂ ಕೆಟ್ಟ ಮಾಡುವವನಲ್ಲ.ಸರ್ವರನ್ನೂ ಸಮದೃಷ್ಟಿಯಿಂದ ನೋಡುವ ಮಹಾನುಭಾವನಾತ.ಅವನಿಗೆ ಅಂಥವ ಇಂಥವ ಎಂದು ಹೀಯಾಳಿಸುವದು ತರವಲ್ಲ.

ಸತ್ಯವತಿ : ಏನ್ರಿ, ಶಿವನು ಸರ್ವರನ್ನೂ ಸಮದೃಷ್ಟಿಯಿಂದ ನೋಡುವನೆಂದು ಹೇಳುತ್ತೀರಿ.ಅವನು ಸಜ್ಜನರ ಮೇಲೆ ಪ್ರೀತಿ ಇದ್ದಷ್ಟು ಕೆಟ್ಟ ಜನರ ಮೇಲೆ ಅದಾನೇನ್ರಿ ?

ತಿರುನೀಲಕಂಠ :  ಏನೆ, ಸಜ್ಜನರ ಮೇಲೆ ಪ್ರೀತಿ ಇದ್ದಂತೆ ದುಷ್ಟರ ಮೇಲೆ ಪ್ರೀತಿ ಇಟ್ಟಾನ ? ಕೆಟ್ಟ ಮಾಡುವವರೆಲ್ಲ ಪಾಪಿಷ್ಟರು.ಅಂಥ ಪಾಪಿಷ್ಟರಿಗೆ ಅವನು ಶಿಕ್ಷೆ ಮಾಡುತ್ತಾನೆ.

ಸತ್ಯವತಿ : ಪಾಪಿಷ್ಟರಿಗೆ ಶಿವನು ಶಿಕ್ಷಿಸುವದು ನಿಜವೆ ?

ತಿರುನೀಲಕಂಠ :  ಹೌದು.

ಸತ್ಯವತಿ : ಹಾಗಾದರೆ ಕೇಳಿರಿ.

ಪದ :

ಚಂದ್ರನ ತಲೆಯ ಮೇಲೆ ಧರಿಸಿದ ತನ್ಹ್ಯಾಂಗ
ಶೂಲಿ ಪಾಪಿಷ್ಟ ನಿಜದಿಂದ ॥ಪಲ್ಲವಿ ॥

ಗುರುವಿನ ಸತಿಯನ್ನು ಅಪಹರಿಸಿದನು ತಾನು
ಮುಂದೆ ಆಕಿ ಕೂಡ ಭೋಗ ಮಾಡಿ ಸುತನ
ಪಡೆದ ನೋಡಿರಿ ಇಂಥಾದ ಮುನ್ನ
ಹೇಸಲಿಲ್ಲ ಪಾಪಕ್ಕೆ ಅವ ತಾನ ಮನ್ನಿಸಿದ್ಯಾಕ
ತಾನು ಹೇಳಿಕೆ ಕೊಟ್ಟು ಅದನ್ನ ಮಾತ್ರ ಮುಂದ ॥

ಏನ್ರಿ, ಪರಮಾತ್ಮನು ಪಾಪಿಷ್ಟರನ್ನು ಕಂಡರೆ ಸಿಟ್ಟು ಆಗುತ್ತಾನೆ ಅಂತೀರಿ, ಹಾಗಾದರೆ ಚಂದ್ರನು ಗುರುವಿನ ಹೆಂಡತಿಯ ಮೇಲೆ ಮನಸ್ಸು ಮಾಡಿ ಆಕೆಯೊಡನೆ ಬಲಾತ್ಕಾರದಿಂದ ಭೋಗ ಮಾಡಿದ,ಭದ್ರನೆಂಬ ಮಗನನ್ನು ಹಡೆದ, ಹೀಗೆ ಗುರುವಿನ ಹೆಂಡತಿಯ ಮೇಲೆ ಮನಸ್ಸು ಮಾಡಿದ್ದು ಸರಿಯೆ ?

ತಿರುನೀಲಕಂಠ : ಬಹಳ ಪಾಪ ! ಅಂಥಾದ್ದನ್ನು ಕಿವಿಯಿಂದ ಕೂಡ ಕೇಳಬಾರದು.

ಸತ್ಯವತಿ : ಅಂಥ ಪಾಪಿಯಾದ ಚಂದ್ರನನ್ನು ಶಿವನು ವಿಚಾರ ಮಾಡದೆ ತನ್ನ ತಲೆಯೊಳಗೇಕೆ ಧರಿಸಿದ ?ಇದನ್ನು ನೋಡಿದರೆ ಶಿವನು ಕೆಟ್ಟ ಜನರ ಮೇಲೆ ಹೆಚ್ಚು ಪ್ರೀತಿವಂತನೆಂಬುದು ಸ್ಪಷ್ಟವಾಗುತ್ತದೆ.ಇದರ ಇಂಗಿತವೇನು ?

ತಿರುನೀಲಕಂಠ :  ಏನೆ, ಪರಮಾತ್ಮನು ಸಜ್ಜನರ ಮೇಲೆ ಹೆಚ್ಚು ಪ್ರೀತಿ ಇರುವದೇ ಸರಿ.

ಸತ್ಯವತಿ : ಹಾಗಿದ್ದರೆ ಹೇಳುತ್ತೇನೆ ಕೇಳಿರಿ.

ಪದ :

ಮಾಡದೆ ಶಿವಕರುಣ
ಬಲು ಚೆಲ್ವ ಕಾಮಗ
ಮಾಡಿದ ಯಾಕ ದಹನ ?
ದಿವಿಜರ ಮಾತ ಕೇಳಿ ಹೋದನು ಶಿವನಲ್ಲಿ
ಹೋಗಿ ಹರಗ ಹೂಬಾಣ ಗುರಿ ಹೂಡಿ
ಸ್ಮರಬಾಧೆಯಾಗುವಂತೆ ಮಾಡಿ
ಕಡೆಗೆ ಹರನಿಂದ ನೋಡಿಕೊಂಡು
ಬೂದಿ ತಾನಾಗೆ ಹೆಸರು ಉಳಿಯದಂತೆ
ಲೋಪ ಅದನು ಸುಮಚಾಪ
ಸ್ಮರನಲ್ಲಿ ಯಾಕ ಮನಸ್ಸು ಮಾಡಿದ ಈಶ

ಏನ್ರಿ, ಶಿವನು ಸಜ್ಜನರ ಮೇಲೆ ಹೆಚ್ಚು ಪ್ರೀತಿ ಇದ್ದರೆ ತಾರಕಾಸುರನ ಹಾವಳಿಗೆ ಏಕೆ ಅನುಕೂಲಮಾಡಿಕೊಟ್ಟ ? ತಾರಕಾಸುರನ ವಧೆ ಆಗ ಬೇಕಾದುದು ಪಾರ್ವತೀ ಪರಮೇಶ್ವರರ ಹೊಟ್ಟೆಯಲ್ಲಿ ಹುಟ್ಟುವ ಕುಮಾರ ಸ್ವಾಮಿಯಿಂದ.ಇದನ್ನರಿತ ಕಾಮನು ಸಮಾಧಿಯಲ್ಲಿದ್ದ ಪರಮಾತ್ಮನಿಗೆ ಪುಷ್ಪಬಾಣದಿಂದ ಹೊಡೆದ.ಆಗ ಶಿವನು ಸಿಟ್ಟಿಗೆದ್ದು ಉರಿಗಣ್ಣು ತೆಗೆದ. ಕೂಡಲೆ ಕಾಮನು ಸುಟ್ಟು ಬೂದಿಯಾದನು.ಜಗತ್ತಿಗೆ ಹಿತವಾಗುವಂತಿದ್ದರೆ ಕಾಮನನ್ನು ತಾನೇಕೆ ಸುಡಬೇಕಾಗಿತ್ತು? ಶಿವನು ಅನರ್ಥಕಾರಿ, ಅವಿಚಾರಿ, ನಾಚಿಕೆಗೇಡಿ : ತಿಳಿಯಿತೆ ?

ತಿರುನೀಲಕಂಠ : ಪರಮಾತ್ಮ ಹೇಗೆ ನಾಚಿಕೆಗೇಡಿ ?

ಸತ್ಯವತಿ : ಅವನಂತೂ ಶುದ್ಧ ನಾಚಿಕೆಗೇಡಿ ; ಅವನ ಭಕ್ತರಾದ ನೀವೂ ನಾಚಿಕೆಗೇಡಿಗಳು.

ತಿರುನೀಲಕಂಠ :  ನಾನೇಕೆ ನಾಚಿಕೆಗೇಡಿ ?

ಸತ್ಯವತಿ : ನಾಚಿಕೆಯಿಲ್ಲದೆ ಹೋಗಿ ಪಾತರದವರ ಹುಡುಗಿಯ ಕೂಡ ಹಸಗೆಟ್ಟು ಬಂದಿರಿ.ಅಂದ ಮೇಲೆ ತಾವು ನಾಚಿಕೆಗೇಡಿಗಳೆಂಬುದು ನಿಜವಾಗಿದೆ.ಕೈಯಲ್ಲಿರುವ ಹಣ್ಣು ಕಾಣಲು ಬೇರೆ ಕನ್ನಡಿ ಬೇಕೆ ?

ತಿರುನೀಲಕಂಠ :  ಏನೆ, ನಾನು ಆಕೆಯ ಕೂಡ ಭೋಗ ಮಾಡಿಲ್ಲ.

ಸತ್ಯವತಿ : ಮೀಸೆ ಹೊತ್ತ ಗಂಡಸರು ಹೀಗೆ ಸುಳ್ಳು ಹೇಳುವುದೆ ?

ತಿರುನೀಲಕಂಠ :  ನಾನು ನಿಜವನ್ನೇ ಹೇಳುತ್ತೇನೆ.

ಸತ್ಯವತಿ : ತಾವು ಪಾತರದವರ ಮನೆಗೆ ಹೋಗೇ ಇಲ್ಲವೆ ?

ತಿರುನೀಲಕಂಠ :  ಮನೆಗೆ ಹೋದದ್ದು ನಿಜ.

ಸತ್ಯವತಿ : ಮುಂದೆ

ತಿರುನೀಲಕಂಠ :  ಮುಂದೇನು ?

ಸತ್ಯವತಿ : ಯಮನೂರ ಜಾತ್ರಿ.

ತಿರುನೀಲಕಂಠ :  ಸತ್ಯವತೀ, ನೀನು ನೋಡಿದೆಯಾ ?

ಸತ್ಯವತಿ : ನಾನು ಕಣ್ಣಮುಟ್ಟ ನೋಡಿರುವೆನು.

ತಿರುನೀಲಕಂಠ :  ನೀನು ಸುಳ್ಳು ಹೇಳುತ್ತಿ, ಸುಳ್ಳು ಹೇಳುವದು ಗಂಡಸರ ಸ್ವಭಾವ ?

ಸತ್ಯವತಿ : ಹೌದು. ಎಲ್ಲ ಗಂಡಸರು ಸುಳ್ಳು ಹೇಳುತ್ತಾರೆ.

ತಿರುನೀಲಕಂಠ :  ಏನೆ, ಸುಳ್ಳು ಹೇಳುವದಕ್ಕೆ ಅಂಥಾದ್ದೇನು ಅವರಿಗೆ ಬಂದಿದೆ ?ಹೆಂಗಸು ಮಾತ್ರ ತನ್ನ ಗಂಡನ ಅಂಜಿಕೆಯ ಸಲುವಾಗಿ ಏನಾದರೂ ಸುಳ್ಳು ಹೇಳುವಳು.

ಸತ್ಯವತಿ : ಏನ್ರಿ, ಹೆಂಗಸರೆಲ್ಲ ಕೆಟ್ಟವರು.ಗಂಡಸರು ಮಾತ್ರ ಹಸನೇನ್ರಿ ?

ತಿರುನೀಲಕಂಠ :  ಹೌದು, ಗಂಡಸರು ಚೊಕ್ಕ ಬಂಗಾರ ಇದ್ದಾಂಗ.

ಸತ್ಯವತಿ : ಹೆಂಗಸರು ಮಾತ್ರ ಕೆಟ್ಟವರೇನ್ರಿ ?

ತಿರುನೀಲಕಂಠ :  ಹೌದು, ಹೆಂಗಸರು ಕೆಟ್ಟವರು.

ಸತ್ಯವತಿ : ಪದ :

ಕೆಟ್ಟ ಆದರೆ ಪೂರ್ವದಿಂದ ಗಂಡಸರೆಲ್ಲಾ
ಹೆಂಗಸರನ್ನು ಕೂಡಿಕೊಂಡು ಸಂಸಾರ ಮಾಡುದ್ಯಾಕೆ ?
ನೀವು ಗಂಡಸರು ಬಹಳ ಚೊಕ್ಕ ಹೆಂಗಸರು ಹೊಲಸ್ಯಾಕ
ಹೇಳು ಈ ಕ್ಷಣಕೆ ಬಿಡಿರಿನ್ನು ನಿಮ್ಮ ಧಿಮಾಕ ॥

ಹೆಂಗಸರಿಂದ ಸಂಸಾರ ಸುಖ, ಹೆಂಗಸರಿಂದ ಎಲ್ಲಾ ಸುಖ
ಕಡೆಗೆ ಮುಕ್ತವಾಗುವದು ಕೇಳೊ ನಮ್ಮಿಂದ
ಹೆಂಡತಿ ಇಲ್ಲದಂಥ ಪುರುಷನ ಬಾಳ್ವೆ ವ್ಯರ್ಥ
ಅವಗೆಲ್ಲ ತಾ ಸುರಳಿತ, ಕೇಳ್ರಿ ಇದು ಸಿದ್ಧಾಂತ ॥

ಏನ್ರಿ, ಹೆಂಗಸರು ಕೆಟ್ಟ ಅನ್ನುತ್ತೀರಿ, ಕೆಟ್ಟ ಆಗಿದ್ದರೆ ಭೂಮಿಯ ಮೇಲಿನ ಗಂಡಸರೆಲ್ಲ ಅವರ ಕೂಡ ಸಂಸಾರ ಯಾಕೆ ಮಾಡುತ್ತಾರೆ ?ಇವರಷ್ಟೇ ಅಲ್ಲ ; ಹರಿಹರ ಬ್ರಹ್ಮಾದಿಗಳು ಸಹಿತ ಹೆಂಗಸರ ಕೂಡ ಸಂಸಾರ ಮಾಡುತ್ತಾರೆ.ಆದರೆ ಅವರೆಲ್ಲರಿಗೂ ನಿಮ್ಮಷ್ಟು ಬುದ್ಧಿಯಿಲ್ಲ ಅಂದಂತಾಯಿತು.ಈ ಸಂಸಾರದೊಳಗೆ ಹೆಂಗಸರಿಂದ ಸಂಸಾರ ; ಹೆಂಗಸರಿಂದಲೇ ಬದುಕು ಬಾಳ್ವೆ.ಕೊನೆಗೆ ಹೆಂಗಸರಿಂದಲೇ ಗಂಡಸರಿಗೆ ಮುಕ್ತಿ.

ತಿರುನೀಲಕಂಠ : ಏನೆ, ಹೆಂಗಸರೆಂದರೆ ಕಸಬರಿಗೆ ಇದ್ದ ಹಾಗೆ. ನಿಮ್ಮಂಥ ಕಸ ಬರಿಗೆಗಳಿಂದ ಎಲ್ಲಿ ಮುಕ್ತಿ ಆಗುತ್ತದೆ ? ಕಾಗಿ ತಮ್ಮ ಮಕ್ಕಳಿಗೆ ಕೋಗಿಲ ಅಂತ ಕರೆದ ಹಾಗೆ ಕಸಬರಿಗೆಯಂತಿರುವ ಹೆಂಗಸರೆಲ್ಲ ತಾವೇ ಹೆಚ್ಚು ಅಂದರೆ ಯಾರು ಕೇಳಬೇಕು ?ನಿಮ್ಮನ್ನು ನೋಡಬಾರದೆಂದು ಸನ್ಯಾಸಿಗಳು ಅರಣ್ಯದೊಳಗೆ ವಾಸ ಮಾಡುತ್ತಾರೆ.ಹೆಂಗಸರು ಯಾವಾಗಲೂ ಕೆಟ್ಟವರು.