ತಿರುನೀಲಕಂಠ :

ಪದ :

ನಿಷ್ಠುರ ನಿನಗ್ಯಾಕೆ, ಪತಿವ್ರತೆ ಬಿಡು ಸಾಕೆ
ಬಾ ಬೇಗ ರತಿಸುಖಕೆ ॥ಪಲ್ಲವಿ ॥

ಗಂಡಸರ ಕೂಡ ಛಲ ಮಾಡುವದು ಒಳಿತಲ್ಲ
ಪತಿ ಸುಖವೆ ಸತಿಯಳ ಸುಖ ಅದರಿಂಗಿತ ತಿಳಿದಿಲ್ಲ ॥

ಸತ್ಯವತಿ :

ಉಡುತಡಿಯ ಮಹಾದೇವಿಯಂತೆ ನಾನು
ವಿರಕ್ತಳಾಗುವೆ ತಿಳಿರಿನ್ನು ಹೇಳುವೆನು
ಸನ್ಯಾಸಿಯಾಗಿ ನಾನು ಜ್ಞಾನವ ಪಡೆವೆನು
ಬಿಡಿರಿಂಥ ವ್ಯಸನವನು ಹೇಳುವೆ ನಿಜವನು ॥

ತಿರುನೀಲಕಂಠ : ಎಲೆ ಕಂಜಾಕ್ಷಿ, ನನಗೆ ರತಿಸುಖದ ಹಂಬಲವನ್ನೆ ಬಿಟ್ಟುಬಿಡೆಂದು ಹೇಳುವಿಯಲ್ಲ ! ವಿರಕ್ತಳಾಗುವೆ ಎಂದು ಬಾಯಿಂದ ನುಡಿವುದು ಹಗುರು. ಅದರಂತೆ ವರ್ತಿಸುವದು ಮಾತ್ರ ಬಹು ಕಠಿಣ ತಿಳಿಯಿತೆ?

ಸತ್ಯವತಿ : ಅದು ಎಷ್ಟೆ ಅಸಾಧ್ಯವಿರಲಿ ನಾನು ಮಾತ್ರ ವಿರಕ್ತಳಾಗುವವಳೇ. ಉಡುತಡಿ ಮಹಾದೇವಿಯು ಸಂಸಾರವನ್ನು ತ್ಯಜಿಸಿ ಸಾಯುಜ್ಯ ಮುಕ್ತಿಯನ್ನು ಪಡೆದಳು.ಆಕೆಯಂತೆ ನಾನೂ ವಿರಕ್ತಳಾಗಿ ಮೋಕ್ಷ ಸಾಮ್ರಾಜ್ಯವನ್ನು ಅನುಭವಿಸುವೆನು.ಅದಕ್ಕೆ ನಾಥಾ, ನೀನು ಭೋಗಸುಖಕ್ಕಾಗಿ ನನ್ನನ್ನು ಆಗ್ರಹ ಮಾಡಬೇಡ.

ತಿರುನೀಲಕಂಠ : ಏನೆ, ಮಹಾದೇವಿಯಕ್ಕನಂತೆ ವಿರಕ್ತಳಾಗಬೇಕೆಂದಿದ್ದರೆ ನೀನು ನನ್ನನ್ನು ಏಕೆ ಲಗ್ನವಾದೆ? ಇಷ್ಟು ದಿವಸ ಪ್ರಪಂಚ ಮಾಡಿ ಈಗ ನೀನು ಒಲ್ಲೆನೆಂದರೆ ಹೇಗೆ ಬಿಟ್ಟೀತು ?ಅಂಥ ಸಾಮರ್ಥ್ಯ ನಿನ್ನಲ್ಲಿದ್ದರೆ :

ಪದ :

ತಿಲಕಾಂಬೆಯಂತೆ ನೀನು ಗಂಡಸಾಗು ಬಿಡುವೆನು
ಹೆಣ್ಣು ಜನ್ಮವ ಪಡೆದು ಬಂದಿರುವಿ
ದೇವಸಾಕ್ಷಿಯಾಗಿ ಎನ್ನ ಕೂಡಿರುವಿ
ಈಗ ವೈರಾಗ್ಯ ಪಡೆವೆನನ್ನುವಿ ಏನು ನುಡಿವಿ ?

ಸತ್ಯವತಿ :

ತಿಲಕಾಂಬೆಯಂತೆ ನಾನು ಗಂಡಸೆಂದು ತಿಳಿರಿನ್ನು
ರತಿಸುಖದ ಆಸೆಯನ್ನು ಇಂದು ನೀಗಿದೆನೆಲ್ಲ

ತಿರುನೀಲಕಂಠ : ಏನೆ, ನೀನು ನನಗೆ ಹೆಂಡತಿಯಾಗಿದ್ದು ಈಗ ವಿರಕ್ತಳಾಗುವೆನೆಂದರೆ ನಾನೆಂತು ಕೇಳುವೆ? ಅಂಥ ಶಕ್ತಿ ನಿನ್ನಲ್ಲಿದ್ದರೆ ಹಿಂದೆ ಆಗಿ ಹೋದ ತಿಲಕಾಂಬೆಯು ಈಶ್ವರನನ್ನು ಮೊರೆಹೊಕ್ಕು ಆತನಿಂದ ಗಂಡಸಾಗುವ ವರ ಪಡೆದು ಗಂಡಸಾದಂತೆ ನೀನೂ ಗಂಡಸಾಗು. ಆಗ ನಿನ್ನಾಸೆಯನ್ನೇ ಬಿಟ್ಟುಬಿಡುವೆನು.ಬರಿಯ ಮಾತುಗಳಿಂದ ಹಾಗೆ ಹೀಗೆ ಅಂದರೆ ನಾನು ಕೇಳುವದೇ ಇಲ್ಲ.ಏಕೆಂದರೆ :

ಪದ :

ತಪಮಾಡಿ ಶಿವನನು ವಲಿಸಬೇಕಿತ್ತು ನೀನು
ಚೋಳವ್ವೆ ಎಂಬುವ ಸತಿಯಂತೆ
ಸದಾಶಿವ ತಾನು ಲಗ್ನವಾದಂತೆ
ಮೊದಲು ನಡೆಯಬೇಕಿತ್ತು ಮತಿವಂತೆ
ಪರಿವ್ರತೆ ಅಲ್ಲದ ಮಾತಿಗಾಗಿ ಸೊರಗದೆ
ಲಗುಬಗೆ ರತಿಸುಖವ ಕೊಡು ಕಾಂತೆ
ಬಿಡು ಒಣ ಭ್ರಾಂತಿ ॥

ಏನೆ, ನನಗೆ ಅನುಕೂಲ ಆಗುವದಿಲ್ಲವೆಂದು ಹೇಳುವಿಯಲ್ಲ ! ಪೂರ್ವದಲ್ಲಿ ಚೋಳವ್ವೆ ಎಂಬ ಶರಣೆಯು ಇಹಲೋಕದ ಗಂಡಂದಿರನ್ನು ಬಿಟ್ಟು ಪರಮಾತ್ಮನನ್ನೇ ಲಗ್ನವಾಗಬೇಕೆಂದು ತಪಸ್ಸನ್ನಾಚರಿಸಿ, ಶಿವನನ್ನೊಲಿಸಿಕೊಂಡು ಆತನನ್ನು ಲಗ್ನವಾಗಿ ಜಗತ್ತಿಗೆ ತಾಯಿಯೆಂದು ಮೆರೆದಳು.ಅದರಂತೆ ನೀನೂ ಶಿವನನ್ನು ಲಗ್ನವಾಗಿದ್ದರೆ ನಾನೆಲ್ಲಿ ಕೇಳುತ್ತಿದ್ದೆ ? ಇಷ್ಟು ದಿನ ನನಗೆ ಸತಿಯಾಗಿದ್ದು ಈಗ ಒಲ್ಲೆನೆಂದರೆ ನಿನ್ನನ್ನು ಬಿಡುವದಿಲ್ಲ.ನಿನ್ನನ್ನು ಬಿಡುವುದಿಲ್ಲ.ಮಂಚಕ್ಕೆಳೆದೊಯ್ಯುವೆ ನೋಡು !

ಸತ್ಯವತಿ : ನನ್ನನ್ನು ಮುಟ್ಟಬೇಡಿರಿ, ದೂರ ಸರಿದು ನಿಲ್ಲಿರಿ, ಹೇಳುತ್ತೇನೆ ಕೇಳ್ರಿ,

ಪದ :

ಮುಟ್ಟುವದು ತರವಲ್ಲ ಬರಬ್ಯಾಡ್ರಿ ಮೈಮೇಲ
ಬಿಡಿರೆನ್ನ ಹಂಬಲ ಹತ್ತು ದಿಕ್ಕುಗಳಲ್ಲಿ ನಿಮ್ಮ ಬೆಳಕ
ಬಾಯಿಂದ ಹೇಳತೀರಿ ನೀತಿಶಾಸ್ತ್ರದ ಝಳಕ
ಮತ್ತೆ ಮನೊಯೊಳಗ್ಯಾಕ್ರಿ ಇಂಥ ಲೆಕ್ಕ ಬಹು ಹುಳಕ
ಪಾಪಿಗಳು ನೀವು ಇನ್ನು ಮುಟ್ಟಬ್ಯಾಡ್ರಿ ನಮ್ಮನ್ನು
ಎಷ್ಟು ಹೇಳಿ ಫಲವೇನು ಬಿಡಿರೆನ್ನಾಸೆಯನ್ನು

ಸ್ವಾಮಿ, ಇದರಲ್ಲಿ ಜೋರು ಯಾಕೆ ? ನಿಮ್ಮ ಸತಿಯಾಗಿ ನಾನು ಬಂದಂದಿನಿಂದ ತಾವು ಹೇಳಿದಂತೆ ನಡೆದುಕೊಂಡು ಬಂದೆ ಆದರೆ ಇವತ್ತಿನಿಂದ ನಿಮ್ಮ ಸತ್ಯತನ ನಾಶವಾಗಿ ಹೋಯಿತು.ನೀವು ಏನು ಹೇಳಿದರೂ ನಾನು ನಿಮ್ಮನ್ನು ಮುಟ್ಟುವದಿಲ್ಲ.ಒಂದು ವೇಳೆ ನೀವು ನನ್ನನ್ನು ಮುಟ್ಟಿದರೆ, ನಿಮಗೆ ಪಾಪ ತಟ್ಟೀತು.ಆದ್ದರಿಂದ ನೀವು ನನ್ನನ್ನು ಖಂಡಿತವಾಗಿಯೂ ಮುಟ್ಟಬಾರದು.

ತಿರುನೀಲಕಂಠ : ಏನೆ ಹುಚ್ಚಿ, ಯಾಕೆ ಕುಚೇಷ್ಟೆ ಮಾಡುವಿ ?ನನ್ನ ಸತ್ಯತನ ನಾಶವಾದದ್ದು ಹೇಗೆ ? ನನಗೆ ಪಾಪ ತಟ್ಟಿದ್ದು ಹೇಗೆ ? ಅದನ್ನಷ್ಟು ಬಿಡಿಸಿ ಹೇಳು.

ಸತ್ಯವತಿ : ಹಾಗಾದರೆ ಬಿಡಿಸಿ ಹೇಳುತ್ತೇನೆ ಕೇಳಿರಿ

ಪದ :

ಪಾತರದ ಹೆಣ್ಣಕೂಡ ರತಿಸುಖ ಸೂರೆಗೊಂಡ
ಎದ್ದಾಗ ಆಯ್ತು ಭಂಡ
ಪಾತರದವರ ಹೆಣ್ಣು ಕಣ್ಣಿಗೆ ಮಾವಿನ ಹಣ್ಣು
ಬಾಯಿಗೆ ತಂತು ಮಣ್ಣು
ಕೆಟ್ಟ ವ್ಯಸನ ನಿಮಗೆಲ್ಲಿ ಸೇರಿತು ?
ಸಾಧುತನವೆಲ್ಲಿ ಓಡಿ ಹೋಯಿತು ?
ಜ್ಞಾನಸೂರ್ಯನಿರೆ ತಿಮಿರ ಹೇಗೆ ಬಂತು, ಗತಿಯೆಂತು
ಸಕ್ಕರೆ ಉಣ್ಣುದು ಬಿಟ್ಟು ಮಣ್ಣು ತಿನ್ನುದು ಸ್ಪಷ್ಟ
ನಿಮಗೆಲ್ಲಿ ಇಂಥ ವ್ಯಸನ ಸೇರಿಹೋತ್ರಿ ರಮಣ ! ॥

ಏನ್ರಿ, ತಾವು ತರದವರ ಮನೆಗೆ ಹೋಗಿ ಅವಳ ಅಧರಾಮೃತ ಸೇವಿಸಿದಾಗಲೇ ನಿಮ್ಮ ಸತ್ಯಧರ್ಮ ಹಾಳಾಗಿ ಹೋಯಿತು.ನಾನು ಹೆಚ್ಚಿಗೆ ಮಾತಾಡಲಾರೆ ; ನೀವೇ ತಿಳಿದು ನೋಡಿರಿ.

ತಿರುನೀಲಕಂಠ : ಹೇಳುತ್ತೇನೆ ಕೇಳು.

ಪದ :

ನೋಡದೆ ನನ್ನ ಮೇಲೆ ಉಗುಳಿದಳಾ ಬಾಲೆ
ಕೇಳ್ ನೀನು ಗುಣಶೀಲೆ ॥ಪಲ್ಲವಿ ॥

ಉಗುಳಿದ ಮೇಲೆ ರಂಭೆ ಎನ್ನ
ಆಕೆಗೆ ಭಯಹುಟ್ಟಿ ಓಡಿ ಬಂದೆನ್ನ
ಪಾದದ ಮೇಲೆ ಬಿದ್ದಳು ಕ್ಷಮಿಸೆನ್ನ :
ನೆಂದು ಬಹು ಹಂಬಲಿಸಿ ಆ ಕ್ಷಣ ಗೈದೆ ಕರುಣಾ
ಗ್ರಹದಿಂದ ಎನ್ನ ಮನೆಗೆ ಕರೆದೊಯ್ದು ತಾನು
ಮಾಡಿದಳು ಸೇವೆಯನ್ನು ಅರ್ಪಿಸಿ ತನು ಮನ ॥

ಏನೆ, ಪಾತರದವಳ ಮನೆಗೆ ಯಾತಕ್ಕೆ ಹೋಗಿದ್ದೆನೆಂಬುದನ್ನು ಕೇಳು : ನಾನು ಪೊನ್ನಾಂಬಲೇಶ್ವರನ ಪೂಜೆ ಮುಗಿಸಿ ಆ ಓಣಿಯಲ್ಲಿ ಹಾಯ್ದು ಬರುವಾಗ, ಆಕೆಯು ತನ್ನ ಮಹಡಿಯ ಮೇಲೆ ಕುಳಿತ ಉಗುಳಿದಳು. ತಿರುಗಿ ನೋಡುವಷ್ಟರಲ್ಲಿ ಆ ಉಗುಳು ನನ್ನ ಮೇಲೆ ಬಿದ್ದಿತು.ಆಕೆ ಅಂಜಿ ಗಾಬರಿಯಾಗಿ ಆಹಾ ! ಎಂಥ ಪಾಪಿ ನಾನು ; ನೋಡದಲೆ ಶಿವಶರಣರ ಮೇಲೆ ಉಗುಳಿ ಮಹಾಪಾಪಕ್ಕೆ ಗುರಿಯಾದೆನೆಂದು ತಿಳಿದು ಓಡಿ ಬಂದು ನನ್ನ ಪಾದದ ಮೇಲೆ ಬಿದ್ದು ಹೊರಳ್ಯಾಡಲಿಕ್ಕೆ ಹತ್ತಿದಳು.ಅಂಜಬೇಡವೆಂದು ನಾನು ಪರಿಪರಿಯಿಂದ ಹೇಳಿದರೂ ಕೇಳದೆ ಮನೆಗೆ ಕರೆದುಕೊಂಡು ಹೋಗಿ ನನ್ನನ್ನು ಅಷ್ಟವಿಧಾರ್ಚನೆಯಿಂದ ಪೂಜೆ ಮಾಡಿ ಕಳಿಸಿದಳು.ಇದು ನಿಜಸಂಗತಿ.ಆಕೆಯ ಮನೆಗೆ ಹೋಗಿದ್ದಕ್ಕೆ ಇಂಥ ಅಪವಾದ ಕೊಟ್ಟೆಯೆಂದ ಮೇಲೆ ನೀನು ನನ್ನ ಸತಿಯಲ್ಲ !

ಸತ್ಯವತಿ : ಸ್ವಾಮಿ, ನಾನು ಆಡಿದ ಮಾತು ತಮಗೆ ಸಿಟ್ಟು ಬರುವಂತೆ ಮಾಡಿತು. ಬಂದರೆ ಬರಲಿ. ಪಾತರದವರೆಂದರೆ ಎರಡನೆಯವರ ಕೊರಳನ್ನು ಕೊರೆಯುವ ಕೀಟಕಗಳು.ಈ ಮಾತು ಸತ್ಯವೊ ಸುಳ್ಳೊ ? ಅವರು ಮಹಾಪಾಪಿಗಳು !

ತಿರುನೀಲಕಂಠ : ಹೌದು, ಅವರು ಪಾಪಕ್ಕೆ ಅಂಜುವುದಿಲ್ಲ ನಿಜ.

ಸತ್ಯವತಿ : ಅಂದಮೇಲೆ ನಿಮ್ಮ ಮೇಲೆ ಉಗುಳಿದ ಸಣ್ಣ ಪಾಪಕ್ಕೆ ಅವಳು ಅಂಜುವದೆ ?ಅಂಥ ದೊಡ್ಡ ಪಾಪಕ್ಕೆ ಅಂಜದಾಕಿ ಹುಲ್ಲಿನ ಸಮಾನವಾದ ಒಂದು ಸಣ್ಣ ಪಾಪಕ್ಕೆ ಅಂಜುವಳೆ ? ಸಾಧ್ಯವಿಲ್ಲ.ತಾವು ಆಕೆಯ ಹತ್ತಿರ ಹೋಗಿ, ಆಕೆಯ ವೈಯಾರಕ್ಕೆ ಮರುಳಾಗಿ ಬಂದಿರಿ.ಅದನ್ನು ಮುಚ್ಚಿಕೊಳ್ಳುವದಕ್ಕೆ ಹಾಗೆ ಹೀಗೆ ಸುಳ್ಳು ಹೇಳಿದರೆ ಕೇಳಬಲ್ಲ ಹುಚ್ಚಿ ನಾನಲ್ಲ ! ಹೇಳುತ್ತೇನೆ ಲಾಲಿಸಿರಿ.

ಪದ :

ಇರುಹೋಗಿರಿ ಆಕೆಯಗೂಡ ಇಬ್ಬರೂ ಆಗಿರಿ ಜೋಡ
ಆಗುವದು ನಿಮಗೆ ಸವುಡ ॥ಪಲ್ಲವಿ ॥

ಸೂಳೆಯ ಮನೆಯಲ್ಲಿ ಬೇಕಾದ್ದು ಸಿಗುವದಲ್ಲಿ
ಪಾತರದವರ ಮನೆಯಲ್ಲಿ ವಿಲಾಸ
ರಾತ್ರಿ ಹಗಲು ನಡೆಯುವದು ಬಹು ಸರಸ
ಚೈನಿ ನಡೆಯುವದು ಅತಿ ಉಲ್ಹಾವ ಸಂತೋಷ
ನಮ್ಮ ಮನೆಯೊಳಗೇನು ಹುರುಳಿಲ್ಲ ತಿಳಿರಿನ್ನು
ಆಕಿ ಮಾರಿ ನೋಡಿಕೊಂತ ಇರುಹೋಗ್ರಿ ಸ್ವಸ್ಥ ॥

ಸ್ವಾಮಿ, ನೀವು ಪಾತರದವರ ಕೂಡ ವಿಲಾಸ ಮಾಡಿದ್ದು ನಿಜವಾಗಿದೆ, ಪಾತರದವರೇ ನಿಮಗೆ ಗತಿ.ಅವಳ ಮನೆಯಲ್ಲಿಯೆ ಇದ್ದು ಸಂತುಷ್ಟರಾಗಿರಿ.ಒಣ ಹುಡುಗಾಟ ಮಾತ್ರ ಇಲ್ಲಿ ನಡೆಯುವುದಿಲ್ಲ ತಿಳಿದುಬಿಡಿರಿ.

ತಿರುನೀಲಕಂಠ : ಏನೆ, ನಾನೊಬ್ಬ ಫಟಿಂಗನೆಂದು ಭಾವಿಸಿದೆಯಾ ? ಆ ಪಾತರದವರ ಮನೆಗೆ ಹೋಗಿ ಬಂದದ್ದಕ್ಕಾಗಿ ಹೀಗೆ ಹಿಯಾಳಿಸಿ ಮಾತನಾಡುತ್ತಿರುವೆಯಲ್ಲ! ಆಕೆಯೊಡನೆ ಸಮಾಗಮವಾಗಿದ್ದರಂತೂ ಇನ್ನೂ ಏನು ಮಾಡುತ್ತಿದೆಯೊ ಏನೊ? ವಿನಾಶಕಾಲಕ್ಕೆ ವಿಪರೀತ ಬುದ್ಧಿ.ಎಂಥ ಬಲ್ಲವರಿಗಾದರೂ ವಿನಾಶಕಾಲಕ್ಕೆ ವಿಪರೀತ ಬುದ್ಧಿ ಹುಟ್ಟುತ್ತದೆ.ಅಂತೆಯೆ ಹೀಗೆ ಮಾತಾಡುತ್ತಿರುವಿ.ನನ್ನ ದುರ್ದೈವ !

ಸತ್ಯವತಿ : ಸ್ವಾಮಿ, ನಾನೇನು ಬುದ್ಧಿಪೂರ್ವಕವಾಗಿ ಮಾತಾಡಿಲ್ಲ.ಇದಕ್ಕೆ ನೀವು ತೊಟ್ಟಿರುವ ವೇಷವೆ ಸಾಕ್ಷಿ.ಅವು ಎಲ್ಲಿಂದ ಬಂದವು ?

ತಿರುನೀಲಕಂಠ : ನನ್ನ ವೇಷ ವಿಟನ ವೇಷವೆ ?

ಸತ್ಯವತಿ : ಹೇಳುತ್ತೇನೆ ಕೇಳಿರಿ.

ಪದ :

ಜರತಾರಿ ಈ ಅಂಗಿ ಮುತ್ತಿನ ಟೊಪ್ಪಿಗೆ
ಎಲ್ಲಿವ್ರಿ ಹೊಸದಾಗಿ ॥ಪಲ್ಲವಿ ॥

ಕಪನಿಯ ಬಿಟ್ಟು ಇಂಥ ಡೌಲು ಯಾತಕೆ ಕಾಂತ
ಶಿವಶರಣರಿಗಿವು ಸಲ್ಲುವವೆ
ಪೂತವಸ್ತ್ರಕೆ ಇವು ಸರಿಯಹವೆ,
ಶಿವಲಾಂಛನಕಿವು ಒಪ್ಪುವವೇ ನೋಡ್ರಿ ನೀವೆ ॥

ತಿರುನೀಲಕಂಠ :

ಗುರುವೆಂದು ನನ್ನ ನಂಬಿ ಕೊಟ್ಟಳು ಆ ರಂಭೆ
ಬೇಡೆಂದ್ರೂ ಕೇಳಲಿಲ್ಲ ತಿಳಿ ಇದರ ಮೂಲ ॥

ಏನೆ, ಆ ರಂಭೆ ನನ್ನನ್ನು ಗುರುವೆಂದು ಬಗೆದು ಜರತಾರಿ ಅಂಗಿ ಟೊಪ್ಪಿಗೆಗಳನ್ನು ಗುರುದಕ್ಷಿಣೆಯಾಗಿ ಕೊಟ್ಟಳು.ಇದರಲ್ಲಿ ನನ್ನದೇನು ತಪ್ಪು ? ಭಕ್ತಿಯಿಂದ ಕೊಟ್ಟಿದ್ದನ್ನು ಸ್ವೀಕರಿಸಿದರೆ ತಪ್ಪೆ ?

ಸತ್ಯವತಿ : ಏನ್ರಿ, ಆ ಪಾತರದಾಕಿ ನಿಮ್ಮ ಶ್ರೇಷ್ಠ ಶಿಷ್ಯಳು.ಅಂತೆಯೆ ಅವಳು ಕೊಟ್ಟ ಪೋಷಾಕ ಹಾಕಿಕೊಂಡು ಬಂದೀರೇನ್ರಿ ?

ತಿರುನೀಲಕಂಠ : ಹೌದು ; ಆಕೆ ಭಕ್ತಿಯಿಂದ ಕೊಟ್ಟದ್ದು

ಸತ್ಯವತಿ : ಹಾಗಾದರೆ ಭಕ್ತರು ಹೇಳಿದಂತೆ ನೀವು ಕೇಳುವಿರೆಂದ ಹಾಗಾಯಿತು !

ತಿರುನೀಲಕಂಠ : ಹುಚ್ಚಿ, ಭಕ್ತರ ಇಚ್ಛೆಯನ್ನು ತುಚ್ಛೀಕರಿಸಲಿಕ್ಕೆ ಬರುವದಿಲ್ಲ.ಪೂರ್ಣ ಮಾಡಲಿಕ್ಕೇ ಬೇಕು.

ಸತ್ಯವತಿ : ಆ ಪಾತರದಾಕಿ ಕೇವಲ ಶಿಷ್ಯಳು.ಅವಳ ಇಚ್ಛೆಯನ್ನು ಮೀರುವಂತಿಲ್ಲ.ಹೀಗಿರಲು ಅವಳು ತಮ್ಮನ್ನು ಕಾಮವಿಲಾಸಕ್ಕೆ ಕರೆದರೆ ಅದನ್ನೂ ಪೂರ್ಣ ಮಾಡಬೇಕಾದುದು ನಿಮ್ಮ ಕರ್ತವ್ಯ.ಅಂದಮೇಲೆ ಉಳಿಯಿತೇನು ?ನಿಮ್ಮ ಪರಿಣಾಮ ತಿಳಿದಂತಾಯಿತು.

ತಿರುನೀಲಕಂಠ : ಛೀ ಮೂಢಳೇ, ನಾನು ಎಷ್ಟು ಸ್ಪಷ್ಟವಾಗಿ ಹೇಳಿದರೂ ನಿನ್ನ ಕುಚೇಷ್ಟೆಯನ್ನೆ ಬಿಡಲೊಲ್ಲಿ.ಮನೆಯ ಸತಿಯೇ ಇಂಥ ಅಪವಾದ ಕೊಡ ಹತ್ತಿದರೆ ಯಾತಕ್ಕೆ ಬೇಕು ಈ ಬಾಳ್ವೆ.ಒಳ್ಳೆಯತನದಿಂದ ಮನೆಬಿಟ್ಟು ಹೋಗುವದೇ ಲೇಸು.

ಸತ್ಯವತಿ : ಪಾತರದವಳ ಬೆಡಗಿನ ಮನೆ ಇರಲಿಕ್ಕೆ ಸ್ವಂತ ಮನೆ ಬೇಸರವಾಗುವದು ಸ್ವಾಭಾವಿಕ.

ತಿರುನೀಲಕಂಠ : ಏನೆ, ನಾನು ಫಟಿಂಗ ಅಂದಂತಾಯಿತು !

ಸತ್ಯವತಿ : ಹೌದು, ಥೇಟ ಫಟಿಂಗ !

ತಿರುನೀಲಕಂಠ : ನಿನ್ನಂಥ ಬಲ್ಲವಳ ಕಡೆಯಿಂದ ಅಲ್ಲದ ಮಾತು ಅನಿಸಿಕೊಂಡ ನನಗೆ ಶಿವನು ಹ್ಯಾಗೆ ಮಚ್ಚ್ಯಾನು ?

ಸತ್ಯವತಿ : ಏನ್ರೀ, ಆ ಕಂಬುಕಂದರನು ಸಂಭಾವಿತನಾದರೆ ನೀವು ಸಂಭಾವಿತರಾದೀರಿ.ಶಿವನೊಬ್ಬ ಅಂಬುಜಾಕ್ಷಿಯ ಗಂಡ ನೀವು ಪಾತರದಾಕಿಯ ಮಿಂಡ.ಅಂದಲ್ಲೆ ಅವನ ಸಾಮ್ಯ ಕೊಡುತ್ತೀರಿ.

ತಿರುನೀಲಕಂಠ : ಏನೆ, ಸತ್ಯವತಿ, ಶಿವನು ಸಂಭಾವಿತನಲ್ಲವೆ ?

ಸತ್ಯವತಿ : ಅವನೊಬ್ಬ ಮಹಾಸಂಭಾವಿತ ! ಥೇಟ ಫಟಿಂಗ !!

ತಿರುನೀಲಕಂಠ : ನೀನು ಫಟಿಂಗ ಎಂದರೆ ಶಿವನು ಫಟಿಂಗ ಆಗಲಾರ !

ಸತ್ಯವತಿ : ಹಾಗಾದರೆ ಕೇಳಿರಿ.

ಪದ :

ಫಟಿಂಗನಲ್ಲದಿದ್ದರೆ ಮತ್ತ ಬತ್ತಲೆಯಾಕ ಹೋಗಿದ್ದ
ಋಷಿಗಳ ಹೆಂಡರ ಬಳಿಗೆ,
ಶಿವನು ಪೂರ್ವದಲ್ಲಿ ಭಿಕ್ಷೆ ಬೇಡುವ ನೆವ ಮಾಡಿ
ಹೆಂಗಸರಲ್ಲಿ ಸುಂದರ ರೂಪನಾಗಿ
ಬತ್ತಲೆಯಿಂದ ಹೋಗಿ ಭಿಕ್ಷೆ ಬೇಡಿದ
ದ್ವಾರಕಾನಗರದಲ್ಲಿ ಹೋಗಿ
ಆಗ ಶಿವನ ಚಲ್ವಿಕೆ ನೋಡಿ ಹೆಂಗಸರೆಲ್ಲ ಕಾಮಗೂಡಿ
ಶಿವನ ಬೆನ್ನ ಹತ್ತಿ ತಾವು ನಡೆದೋಡಿ
ತಮ್ಮ ಬದುಕು ಬಾಳ್ವೆ ಎಲ್ಲಾ ಮರತಾರೊ
ಶಿವನನ್ನು ಮೋಹಿಸಿ ಚಂದದಿ ಭೋಗಿಸಿ
ಕೆಟ್ಟು ಹೋದರೊ ಒಂದು ಕ್ಷಣದಲ್ಲಿ
ನಿಜ ಆಶ್ರಮದಲ್ಲಿ !

ಸ್ವಾಮಿ, ಶಿವನು ಫಟಿಂಗನಲ್ಲವೆಂದು ಅನ್ನುತ್ತೀರಿ.ಹಿಂದಕ್ಕೆ ದ್ವಾರಕಾನಗರದಲ್ಲಿದ್ದ ಋಷಿಗಳ ಹೆಂಡಿರ ಬಳಿಗೆ ಹೋಗಿ, ಪ್ರಾಯದ ಹುಡುಗನಾಗಿ, ಭಿಕ್ಷಾಪೇಕ್ಷೆಯ ನೆಪಮಾಡಿ ಅರಣ್ಯದಲ್ಲಿ ಬತ್ತಲೆಯಾಗಿ ಭೀಕ್ಷೆ ಬೇಡಲಿಕ್ಕೆ ಹತ್ತಿದ.ಹೆಂಗಸರು ಭಿಕ್ಷೆ ನೀಡಲು ಬಂದರು.ಅವರಿಗೆ ಸ್ವಪ್ನಕುಚೇಷ್ಟೆ ಮಾಡಿ, ಅವರ ಮನವನ್ನು ಒಲಿಸಿ ಮುಂದಕ್ಕೆ ನಡೆದ.ಆ ಸ್ತ್ರೀಯರು ತಮ್ಮಸೀರೆಯ ಪರವೆ ಇಲ್ಲದೆ ಶಿವನನ್ನು ಹಿಂಬಾಲಿಸಿದರು.ಆಗ ಋಷಿಗಳು ಬೆದರಿ ತಂತಮ್ಮ ಸ್ತ್ರೀಯರನ್ನು ಬಿಡಾರಕ್ಕೆ ಕರೆತರುವದೇ ಕಷ್ಟವಾಯಿತು. ಅಂತಹ ಪರಿವ್ರತಾ ಸ್ತ್ರೀಯರಿಗೆ ಅಪಮಾನ ಮಾಡುವದು ಶಿವನ ಸಂಭಾವಿತಗಿರಿಯೆ? ನೀವೆ ಹೇಳಿರಿ.

ತಿರುನೀಲಕಂಠ : ಏನೆ, ಶಿವನು ಬತ್ತಲೆಯಿದ್ದು ದ್ವಾರಕಾನಗರದೊಳಗಿದ್ದ ಋಷಿಗಳ ಹೆಂಡಂದಿರ ಮಾನಭಂಗ ಮಾಡಿದ್ದು ನಿಜ.ಹಾಗೆ ಮಾಡಿದ್ದಕ್ಕೆ ಕಾರಣವೂ ಇದೆ,ಅಲ್ಲಿದ್ದ ಋಷಿಗಳಿಗೆ ಸಾಕಷ್ಟುಅಹಂಕಾರ ಬಂದಿತ್ತು.ಅವರ ಅಹಂಕಾರ ಮುರಿಯಲೆಂದೇ ಶಿವನು ಈ ಪ್ರಕಾರ ಮಾಡಿದ.

ಸತ್ಯವತಿ : ಏನ್ರಿ, ಅವರಿಗೆ ಬುದ್ಧಿ ಕಲಿಸಬೇಕಾಗಿದ್ದರೆ ಬೇರೆ ಮಾರ್ಗ ಇದ್ದಿಲ್ಲವೆ ? ಬತ್ತಲೆ ತಿರುಗಾಡುವದು, ಅಂಜುವವರನ್ನು ಕಂಡು ಮೈಮೇಲೆ ಹೋಗುವದು, ಗಟ್ಟುಳ್ಳವರನ್ನು ಕಂಡು ಅಡಿಗೆಮನೆ ಸೇರುವದು.ಇಂಥ ಮಾತಿಗೆ ಯಾರರೆ ಹೌದು ಅಂದಾರೇನ್ರಿ ?ಶಿವನು ಮಹಾ ಫಟಿಂಗ !

ತಿರುನೀಲಕಂಠ : ಗಟ್ಟುಳ್ಳವರನ್ನು ಕಂಡು ಅಡಿಗೆಮನೆ ಸೇರುವದು ಅಂದೆಯಲ್ಲ ! ವಾಹವ್ವಾ ! ಶಿವನಿಗಿಂತ ಗಟ್ಟುಳ್ಳವರಾರು ?ಅದನ್ನಿಟ್ಟು ಸ್ವಷ್ಟವಾಗಿ ಹೇಳು.

ಸತ್ಯವತಿ : ಏನ್ರಿ, ಪರಮಾತ್ಮ ಅನೇಕರಿಗೆ ಅಂಜಿ ಅಡಿಗೆಮನೆ ಸೇರಿದ್ದು ನಿಮಗೆ ಗೊತ್ತಿಲ್ಲೇನ್ರಿ ?

ತಿರುನೀಲಕಂಠ : ಏನೆ, ಪರಮಾತ್ಮನು ಬ್ರಹ್ಮಾಂಡವನ್ನೇ ಹುಟ್ಟಿಸಬಲ್ಲ ; ಮರುಕ್ಷಣದಲ್ಲೆ ಅದನ್ನು ನಾಶಮಾಡಬಲ್ಲ ಅವನು ಯಾರಿಗೂ ಅಂಜುವವನಲ್ಲ.ಅವನು ಪುಕ್ಕನೆಂದು ತಿಳಿದೆಯಾ ?

ಸತ್ಯವತಿ : ಹಾಗಾದರೆ, ಶಿವ ಬಹಳ ಹೆಚ್ಚಿನವನೇನ್ರಿ ?

ತಿರುನೀಲಕಂಠ : ಶಿವನು ಎಲ್ಲರಿಗಿಂತಲೂ ಹೆಚ್ಚಿನವ !

ಸತ್ಯವತಿ : ಹಾಗಾದರೆ ಕೇಳ್ರಿ.

ಪದ :

ಹೆಚ್ಚು ಆದರೆ ಶಿವನು ಯಾಕ ಭಸ್ಮಾಸುರನಿಗೆ ಅಂಜಿ
ಓಡಿ ಹೋಗಿ ಮನಿಯೊಳಗೆ ಅಡಗಿಕೊಂಡು ಯಾಕ
ಜಲ್ಲ ಎನಿಸಿದನು ಹರಿಯನ್ನು ಲಗುಬಗೆ ನುತಿಸಿ
ಬಗಿಬಗಿ ಆ ಶಿವನು ಅಂಜಿಕೀಲಿ ಆಗ ವಿಷ್ಣು ಗರುಡ
ವಾಹನವಾಗಿ ಬಂದನು ಶಿವಗ ಬಂದ ಸಂಕಟ
ಕಣ್ಬಿಟ್ಟು ನೋಡಿದನು ಭಸ್ಮಾಸುರನ ಕೊಲ್ಲುವ ಬೇತ
ಮಾಡಿದನು ಹರಿಯು ಆ ಹೆಂಗಸಾಗಿ ದೈತ್ಯನ
ಮುಂದೆ ಹೋಗಿ ಸುಳಿದಾಡಿದನು ನರ್ತನ ಮಾಡುತ
ಮೋಹ ಮಾಡುತ !

ಸ್ವಾಮಿ, ಶಿವಾ ಹೆಚ್ಚಿನವ ಅನ್ನುತ್ತೀರಿ, ಹಾಗಿದ್ದರೆ ಭಸ್ಮಾಸುರಗ ಅಂಜಿ ಓಡಿ ಹೋಗಿ ಅಡಗಿಮನಿಯನ್ನೇಕೆ ಸೇರಿದ ? ಮೊದಲು ಆ ಭಸ್ಮಾಸುರನಿಗೆ ಮೆಚ್ಚಿ ಉರಿಹಸ್ತವನ್ನು ದಾನ ಮಾಡಿದವನಾರು? ವರವನ್ನು ಪಡೆದ ಕೂಡಲೆ ಭಸ್ಮಾಸುರನು ಪರಮಾತ್ಮನ ತಲೆಯ ಮೇಲೆ ಉರಿಹಸ್ತ ಇಡಲಿಕ್ಕೆ ಹೋದ.ಆಗ ಶಿವನು ಅಡಗಿಮನೆ ಸೇರಿ ವಿಷ್ಣುವಿನ ಸ್ತೋತ್ರ ಮಾಡಿ ಕೈಲಾಸಕ್ಕೆ ಬರಮಾಡಿಕೊಂಡದ್ದು ನಿಜವೊ ಸುಳ್ಳೊ ?ನೀವೇ ಹೇಳಿರಿ.

ತಿರುನೀಲಕಂಠ : ಏನೆ, ಆ ಭಸ್ಮಾಸುರನು ಪರಮಾತ್ಮನೊಡನೆ ವೈರ ಸಾಧಿಸಿ, ತನ್ನಷ್ಟಕ್ಕೆ ತಾನೇ ಸುಟ್ಟುಕೊಂಡು ಸಾಯಲಿಲ್ಲವೆ ?

ಸತ್ಯವತಿ : ತಾನೇಕೆ ಸುಟ್ಟುಕೊಂಡಾನು ; ವಿಷ್ಣುವಿನ ಮೋಸಕೃತ್ಯ ತಿಳಿಯದೆ ಹಸ್ತವನ್ನು ತಾನೆ ತನ್ನ ತಲೆಯಮೇಲೆ ಇಟ್ಟುಕೊಂಡು ಸುಟ್ಟುಹೋದ ವಿಷ್ಣು ಇಲ್ಲದಿದ್ದರೆ ಶಿವನೆಲ್ಲಿ ಉರಿಯುತ್ತಿದ್ದ? ಇದೆ ಏನ್ರಿ ಶಿವನ ಬಂಟತನ !

ತಿರುನೀಲಕಂಠ : ಏನೆ, ಶಿವನು ಸಾಯುವವನಾಗಿದ್ದರೆ ಅವನಿಗೆ ಮೃತ್ಯುಂಜಯನೆಂಬ ಬಿರುದು ಯಾಕೆ ಬರುತ್ತಿತ್ತು ?ಶಿವನು ಕಾಲಾಂತಕ ; ಕಾಲನನ್ನೇ ಮೆಟ್ಟಿ ನಿಂತವ.ಇಷ್ಟೆಲ್ಲ ತಿಳಿದಿದ್ದರೂ ಶಿವನಿಗೆ ನಿಂದೆ ಮಾಡುತ್ತಿ ಪಾಪಿಷ್ಟಳೆ ನಡೆಯುತ್ತ ನನಗೆ ನಿನ್ನ ಮುಖ ಸಹಿತ ತೋರಬೇಡ.

ಸತ್ಯವತಿ : ಹೌದು, ನಾನು ಪಾಪಿಷ್ಟೆ ! ಆದ್ದರಿಂದಲೇ ಆ ಪುಣ್ಯವತಿ ರಂಭಾಸಾನಿಯ ಮುಖ ನೋಡುವದಕ್ಕೆ ಹೋಗಿ ಬಂದಿರುವಿರಿ.

ತಿರುನೀಲಕಂಠ : ಏನೆ, ಸುಮ್ಮನೆ ನನ್ನನ್ನು ಸಿಟ್ಟಿಗೆ ಎಬ್ಬಿಸಬೇಡ, ನೀನು ಎಷ್ಟು ತಿಳಿದವಳಾದರೂ ಹೆಂಗಸರ ಬುದ್ಧಿ ಮಣಕಾಲ ಕೆಳಗೆ ಎನ್ನುವ ಮಾತು ಸುಳ್ಳಲ್ಲ.ಅರಿಷ್ಟಳೆ, ಸುಮ್ಮನಾಗು.

ಸತ್ಯವತಿ : ಸ್ವಾಮಿ, ತಮಗೆ ಸಿಟ್ಟು ಬಂತೇನು ?ಬರಲಿ, ಅಲ್ಲದ ಕೆಲಸ ಮಾಡಿದ ಶಿವನಿಗೆ ಅಲ್ಲ ಅಂದರೆ ಸಿಟ್ಟು ; ಏನ್ರಿ, ನಿಮ್ಮ ಶಿವನು ಹಾಗೆ ಮಾಡಿದ್ದು ಸಂಭಾವಿತಗಿರಿಯೇನ್ರಿ?

ತಿರುನೀಲಕಂಠ : ಏನೇ, ಪರಮಾತ್ಮನು ಎಂದೆಂದೂ ಅಲ್ಲದ ಕೆಲಸ ಮಾಡುವವನಲ್ಲ.ಅವನು ಮಾಡಿದ ಅಲ್ಲದ ಕೆಲಸ ಯಾವುದು ಸರಿಯಾಗಿ ಹೇಳು ?

ಸತ್ಯವತಿ : ಒಂದೇ ಎರಡೆ ! ಸಾವಿರಗಟ್ಟಲೆ ಅಲ್ಲದ ಕೆಲಸ ಮಾಡಿದ್ದಾನೆ.

ತಿರುನೀಲಕಂಠ : ಸಾವಿರಗಟ್ಟಲೆ ಅಂದರೆ ನಾನು ಕೇಳುವದಿಲ್ಲ.ಶಿವನು ಯಾವ ಅಲ್ಲದ ಕೆಲಸ ಮಾಡಿದ್ದಾನೆ.ವಿವರಿಸಿ ಹೇಳು.

ಸತ್ಯವತಿ : ಹಾಗಾದರೆ ಕೇಳ್ರಿ.

ಪದ :

ಕೇಳೊ ಜಾಣ ಹೇಳುವೆ ಮಜಕೂರ
ಶೀಲೊಂದು ಬಾಳ ಹೆಚ್ಚಿಂದು ॥ಪಲ್ಲವಿ ॥

ಹುಲಿಯ ಚರ್ಮ ಉಟ್ಟು
ಆನೆಯ ತೊಗಲು ತೊಟ್ಟು
ಸುಡಗಾಡದೊಳು ಆಡುವ
ಎಲುಬಿನ ಸರದಾವ
ಅವನ ಹ್ಯಾವ ಹೇಳಬ್ಯಾಡ್ರಿ
ಕಂಡಲ್ಲೆ ಉಂಬ ಸುಡುಗಾಡದಿ ಮಲಕೊಂಬ
ಇವ ಯಾವ ದೊಡ್ಡ ಸಾಂಬ
ಏನು ಹೇಳುವಿರಿ ಅವನ ಇಂಬ
ಕುಲಜಾತಿ ಅರಿಯದ ಹುಂಬ ॥

ಏನ್ರಿ, ಈ ಲೋಕಕ್ಕೆಲ್ಲ ಪರಮಾತ್ಮ ಎನಿಸಿಕೊಂಡವನು ಶೀಲದಿಂದ ಇರಬೇಕು.ತೊಗಲು ಹಾಸುವದು, ತೊಗಲು ಹೊರುವದು, ಕಂಡಕಂಡಲ್ಲೆ ಉಣ್ಣುವದು, ಸುಡುಗಾಡದಲ್ಲಿ ಮಲಗುವದು, ಇಂಥ ಕೆಟ್ಟ ನಡತೆ ಮಾಡಿ ಎಲ್ಲರನ್ನು ಕುಲಗೆಡಿಸಿಬಿಟ್ಟ ಇದಕ್ಕಿಂತಲೂ ಹೆಚ್ಚಿನದು ಇನ್ನೇನು ಬೇಕು ?

ತಿರುನೀಲಕಂಠ : ಏನೆ, ಪರಮಾತ್ಮನು ಕುಲಭ್ರಷ್ಟನಾದರೆ ಎಲ್ಲ ಜನರು ಅವನನ್ನು ಯಾಕೆ ಪೂಜೆ ಮಾಡ್ಯಾರು ? ತಿಳಿಯದೆ ಸುಳ್ಳು ಹೇಳಬೇಡ

ಸತ್ಯವತಿ : ಸ್ವಾಮಿ, ಶಿವನು ಅಲ್ಲದ ಕೆಲಸ ಮಾಡಿ ಎಲ್ಲಿಯೂ ಕುಲಗೆಟ್ಟಿಲ್ಲೇನ್ರಿ ?

ತಿರುನೀಲಕಂಠ : ಹೌದು ; ಅವನು ಕುಲಗೆಟ್ಟಿಲ್ಲ ; ಮೇಲಾದ ಶೀಲವಂತ !

ಸತ್ಯವತಿ : ಶಿವನು ಬಹಳ ಶೀಲವಂತನೇನ್ರಿ ?

ತಿರುನೀಲಕಂಠ : ಹೌದು ; ಮಹಾಶೀಲವಂತ

ಸತ್ಯವತಿ :

ಪದ :

ಶೀಲವಂತ ಅದರ ಮತ್ತ ಹೊಲೆಯರ ಮನಿಯಾಗ
ಯಾಕ ಇದ್ದ ಮಾದರ ಚೆನ್ನಯ್ಯನ ಕೂಡ ತಾನು ಕುಲಗೆಟ್ಟ
ನಾಚಿಕೆಯಿಲ್ಲ ಕೇಳಿರಿ ಶಿವಗಾ ಎಳ್ಳಷ್ಟಾ !
ಮಾದರ ಮನಿಯೊಳು ಉಂಡಂಥಾ ಶಿವನಿಗೆ
ಶೀಲವಂತನು ಹ್ಯಾಗೆ ಅಂದಿರಿ, ಭ್ರಾಂತಿ ಆಗಿದ್ದಿರಿ ॥

ಊಟದ ಆಸೆಗಾಗಿ ತಾನು ಕರೆದಂಥವರ ಬೆನ್ನಹತ್ತಿ
ಕೀಳ ಜನರ ಕೂಡ ತಾನು ಉಂಡನು
ತಾನು ಉಂಡು ಜಗವೆಲ್ಲ ಕೆಡಿಸಿದನು
ಶಿವ ಸದ್ಗುರು ಅಂತ ಹೇಳತೀರಿ ದೊಡ್ಡ ಮಾತ
ನಡಿಯದು ನಿಮ್ಮ ಪಂಥ ಇದು ಸುಳ್ಳಲ್ಲ ಅನರ್ಥ ॥

ಏನ್ರಿ, ಶಿವನು ಶೀಲವಂತ ಅನ್ನುವಿರಿ, ಹಾಗಿದ್ದರೆ ಹೊಲೆಯರ ಚೆನ್ನಯ್ಯನ ಮನೆಯಲ್ಲಿ ಹಂಬಲಿಸಿ ಅಂಬಲಿ ಉಂಡು ಬಂದಂಥವನಿಗೆ ಎಂಥ ಶೀಲವಂತ ಅನ್ನಬೇಕು ! ಶಿವನ ಹಾಗೆ ನೀವು ಉಂಡ ಬಂದಿರೇನ್ರಿ ?