ಸತ್ಯವತಿ : ಸ್ವಾಮಿ, ತಾವು ಹೀಗೆ ಸಿಟ್ಟಿಗೆದ್ದರೆ ನಾವು ಹೇಗೆಉಳಿಯಬೇಕು ?

ಪದ :

ಮಾಡಿರಿ ದಯಪೂರ್ಣ ಮಾಡುವೆ ನಿಮಗೆ ಶರಣ
ನೋಡಿರಿ ಗುಣವನ್ನು ॥ಪಲ್ಲವಿ ॥
ತುಡುಗು ಮಾಡುವರಲ್ಲ, ಒಡವೆ ಬೇಡುವರಲ್ಲ
ಎಂದೆಂದೂ ಮಾಡಿಲ್ಲ ನಮ್ಮಂತ ಶಿವನೆ ಬಲ್ಲ ॥
ಸಂತರೆ ನಿಮ್ಮನು ಬಹುಪರಿ ಬೇಡುವೆನು

ಮಾಡದೆ ಕ್ರೋಧವನು ಶಾಂತರಾಗಿರಿನ್ನು ॥

ಸ್ವಾಮಿ.ನಮ್ಮನ್ನು ತುಡುಗರೆನ್ನಿಸಿ, ನಮ್ಮ ಸತ್ವ ಪರೀಕ್ಷೆ ಮಾಡುವದಕ್ಕಾಗಿ ಪರಮಾತ್ಮನೆ ನಿಮ್ಮ ಬಟ್ಟಲವನ್ನು ಮಾಯ ಮಾಡಿರುವನೆಂದು ನನಗೆ ಅನ್ನಿಸುತ್ತಿದೆ.ನಾನು ನಿಜವನ್ನೆ ಹೇಳುವೆ ನಾವು ಎಂದೆಂದೂ ಇನ್ನೊಬ್ಬರ ವಸ್ತುವನ್ನು ಅಪಹರಿಸಿಲ್ಲ.ಶಿವಶರಣರೆನ್ನಿಸಿಕೊಂಡು ಶಿವನನ್ನೆ ಮೊರೆಹೊಕ್ಕು, ಲೌಕಿಕ ಆಸಕ್ತಿಯನ್ನೆತೊರೆದ ನಾವು ನಮ್ಮ ಬಟ್ಟಲನ್ನು ಕದಿಯುವೆವೆ?

ಸನ್ಯಾಸಿ : ನೀವೇ ಸಾರಾಸಾರ ವಿಚಾರ ಮಾಡಬೇಕು.ಬಟ್ಟಲನ್ನು ನಿಮ್ಮ ಪೆಟ್ಟಿಗೆಯೆ ನುಂಗಿತೇನು? ಏನು ದೊಡ್ಡಪೌರುಷ ಹೇಳುವಿರಿ ?ನನ್ನ ಬಟ್ಟಲವನ್ನು ಎಬ್ಬಿಸಿಬಿಟ್ಟು ನೀವು ತುಡುಗರಲ್ಲವೆಂದು ಹೇಳುವಿರೋ ? ನೀನಲ್ಲ ನಿಮ್ಮಪ್ಪ ಬಂದು ಕೊಟ್ಟಾನು ನನ್ನ ಬಟ್ಟಲವನ್ನು !ಎಲ್ಲಿ ಮುಚ್ಚಿಟ್ಟಿರುವಿರಿ ?ಸುಮ್ಮನೆ ತಂದು ಕೊಡುವಿರೊ ಇಲ್ಲವೊ ? ಕೊಡದಿದ್ದರೆ ಈಗಲೇ ನಿಮ್ಮಿಬ್ಬರನ್ನು ನನ್ನ ಶಾಪಾಗ್ನಿಗೆ ಆಹುತಿ ಮಾಡುವೆ.

ಸತ್ಯವತಿ :

ಪದ :

ಶಿರಬಾಗಿ ಬೇಡುವೆ ಪರಿಪರಿ ಹಲುಬುವೆ
ಕರುಣಿಸಿರಿ ಮಹಾಪ್ರಭುವೆ ನಿಮಗೆ ಮೊರೆಹೊಕ್ಕಿರುವೆ ॥

ಚಂದ್ರಶೇಖರನಿಂದು ಹೀಗೆ ಮಾಡಿದನೆಂದು
ಎನಗೆ ತಿಳಿದಿರುವದು ಸುಳ್ಳಾಡೆನೆಂದೆಂದು ॥

ಕರುಣಾಸಾಗರನೇ, ನೀವು ಹೀಗೆ ಸಿಟ್ಟಿಗೆದ್ದರೆ ನಾವು ಪಾರಾಗುವ ಬಗೆಯೆಂತು ?ನಮ್ಮ ತನು ಮನ ಪ್ರಾಣಗಳನ್ನೇ ನಿಮಗರ್ಪಿಸಿರುವೆವು. ಇನ್ನು ಬೇಕಾದ ಹಾಗೆ ಮಾಡಿರಿ.ಈ ವಿಷಯದ ಬಗ್ಗೆ ವಿಚಾರಿಸಿದರೆ, ಇದೆಲ್ಲ ಪರಮಾತ್ಮನ ಲೀಲೆಯೆಂದೇ ಎನಗೆ ವೇದ್ಯವಾಗಿದೆ.ಮಹಾತ್ಮರೆ, ನಮ್ಮ ಗುಣಶೀಲಾದಿಗಳನ್ನು ಅಂತರ್ ದೃಷ್ಟಿಯಿಂದಲಾದರೂ ಕಂಡು ಆ ಮೇಲೆ ಕೋಪಿಸಿಕೊಳ್ಳಬಹುದು.

ಸನ್ಯಾಸಿ : ಶಹಬ್ಬಾಸ್, ಇಂಥ ಅಲ್ಲದ, ಅಸಂಗತ ಬಣ್ಣದ ಮಾತನಾಡು ಯಾರ ಹತ್ತಿರ ಕಲಿತುಕೊಂಡು ಬಂದಿರುವಿ ? ಪರಮಾತ್ಮನು ಬಟ್ಟಲವನ್ನು ಮಾಯ ಮಾಡಲಿಕ್ಕ ಅವನಿಗೂ ನಿಮಗೂ ಏನಾದರೂ ಸಾಮೀಲ ಇರಬೇಕು.ನೀನು ಮೆತ್ತಗೆ ಮಾತನಾಡುತ್ತ ಕೂದಲೆಳೆಯಿಂದಲೆ ಕುತ್ತಿಗೆ ಕೊಯ್ಯುವವಳಿರುವಿ ?ಈಗ ಮೊದಲು ಬಟ್ಟಲವನ್ನು ಕೊಡುವಿಯೊ ಇಲ್ಲವೊ ? (ಶರಣನಿಗೆ) ಎಲೋ ಮಹಾಕಳ್ಳಾ ಯಾಕೆ ಸುಮ್ಮನೆ ಕೂತೆ ?ನನ್ನ ಬಟ್ಟಲವನ್ನು ಎಲ್ಲಿ ಇಟ್ಟಿರುವಿ? ಕೊಡುವ ವರೆಗೆ ನಿನ್ನನ್ನು ಬಿಡುವುದೇ ಇಲ್ಲ.(ಎಂದು ಹೊಡೆಯಹೋಗುವನು.ಒಬ್ಬ ಗೃಹಸ್ಥ ಬರುತ್ತಾನೆ).

ಗೃಹಸ್ಥ : ಸಾಧುವರ್ಯ ಇವರು ಶಿವಶರಣರು.ನಿಮ್ಮ ಬಟ್ಟಲನ್ನು ಕದಿಯುವವರೆಲ್ಲ ವಿಚಾರಿಸಿ ಕೆಲಸ ಮಾಡಿರಿ.ಇಂಥ ಮಹಾತ್ಮರನ್ನು ನೀವು ಹೀಗೆ ಹೊಡೆಯಬಾರದು.

ಸನ್ಯಾಸಿ : ಆ ಬಟ್ಟಲದೊಳಗೆ ನಿನಗೂ ಪಾಲು ಕೊಡುವರೇನು ?ಈಗ ನೀನು ಸುಮ್ಮನೆ ಹೋಗುವಿಯೊ ಇಲ್ಲವೊ ?

ಗೃಹಸ್ಥ : ಬುದ್ಧಿ, ಏನೆನ್ನುವಿರಿ ? ಅದೊಂದು ಬಟ್ಟಲ ಹೋಗಿದ್ದರೆ ಅಂಥ ಮೂರು ನಾಲ್ಕುಬಟ್ಟಲನ್ನು ನಾನು ಕೊಡಬಲ್ಲೆ ; ತೆಗೆದುಕೊಂಡು ಹೋಗಿರಿ.

ಸನ್ಯಾಸಿ : ಏನು ನೀನು ದೊಡ್ಡ ಸಾವುಕಾರನೆಂದು ನನ್ನ ಮುಂದೆ ಪೌರುಷ ಮಾಡಲು ಬಂದಿರುವಿಯಾ ?ನನ್ನ ಬಟ್ಟಲದಂಥ ವಸ್ತುವು, ಸತ್ತಂಥ ನಿಮ್ಮಪ್ಪ ಹುಟ್ಟಿ ಬಂದು ಪ್ರಯತ್ನ ಮಾಡಿದರೂ ಸಿಗುವ ಮಾತಲ್ಲ.ಸುಮ್ಮನೆ ಹೋಗು, (ಶರಣನಿಗೆ) ಯಾಕೊಚೋರ, ಸುಮ್ಮನೆ ಕುಳಿತೆ ?

ಪದ :

ಕೊಡು ಬೇಗ ನೀ ಎನ್ನ ಬಟ್ಟಲ
ಸುಳ್ಳೆ ಕೆಡಬೇಡ ಇದರೊಳು ಹುರುಳಿಲ್ಲ ॥ ಪದ ॥

ಬಿಟ್ಟು ಹೋಗುವದಿಲ್ಲ ಬಟ್ಟಲ
ವ್ಯರ್ಥ ಕೆಟ್ಟು ಹೋಗುವೆ ನೀನು ಸುಳ್ಳಲ್ಲ
ಬಹುಕೆಟ್ಟ ಇರುವೆ ನಾ ಕೇಳ್ ಮೊದಲು ॥

ಪ್ರಾಣ ಹೋದರೂ ನಿನ್ನ ನಾ ಬಿಡೆನು ಕಡೆಗೆ
ಮಣ್ಣುಗೂಡಿಸಿಯೆ ಹೋಗುವೆನು
ನಾ ಹುಸಿಮಾಡೆನೆನ್ನ ಪ್ರತಿಜ್ಞೆಯನು ॥

ಎಲೊ ಹಗಲುಗಳ್ಳನೆ, ಬೇಗನೆ ನನ್ನ ಬಟ್ಟಲವನ್ನು ಕೊಡುವಿಯೊ ಇಲ್ಲವೊ ?ನಾನು ಹಾಗೆಯೆ ಬಿಟ್ಟು ಹೋಗಬಹುದೆಂದು ತಿಳಿಯಬೇಡ.ನಾನೂ ಕೆಟ್ಟ ಹುಂಬನಿದ್ದೇನೆ.ನಿನ್ನ ಗಂಟಲ ಸೀಳಿ, ನಿನ್ನ ಮನೆಮಾರು ಸುಟ್ಟು, ನಿನ್ನ ಹೆಂಡತಿಯನ್ನು ಅನ್ನಾವಿನ್ನಿ ಮಾಡುವೆನು. ಮುಂದಿನ ಪರಿಣಾಮ ನೋಡಿಕೊ ! ನಾನು ನುಡಿದದ್ದನ್ನು ಎಂದೂ ಸುಳ್ಳು ಮಾಡುವವನಲ್ಲ.ಎಚ್ಚರ, ಬಹು ಎಚ್ಚರ ! ಬೇಗನೆ ನನ್ನ ಸಾಮಾನು ಕೊಡು.ವೇಳೆಯಾಯಿತು.ಬೇಗನೆ ಹೋಗಬೇಕಾಗಿದೆ ಹೂಂ ಏನಂದೆ ?

ತಿರುನೀಲಕಂಠ : ಸ್ವಾಮಿ, ನೀವು ಹೀಗೆಂದರೆ ನಾನೇನು ಮಾಡಬೇಕು ?ನಿಮ್ಮ ಬಟ್ಟಲವನ್ನು ನಾನು ತೆಗೆದುಕೊಂಡಿಲ್ಲ.ಬೇಕಾದರೆ ಆಣೆ ಮಾಡೆಂದರೆ ಮಾಡುವೆ !

ಸನ್ಯಾಸಿ : ನಿಮ್ಮಂಥ ಕೆಟ್ಟ ತುಡುಗರಿಗೆ ಎಂಥ ಆಣೆಯೊ ? ಆಣೆ ಮಾಡಿಸೆಂದು ಹೇಳಿ, ಗಂಟು ನುಂಗಬೇಕೆಂದು ಮಾಡಿರುವಿಯಾ ? ನಾನೇನು ಏಳರಲಿ ಹುಟ್ಟಿದವನಲ್ಲ.ನಿಮ್ಮಪ್ಪನ ಐದೆಸಿಯನ್ನೆಲ್ಲ ಬಲ್ಲೆ.ಬೇಗನೆ ಬಟ್ಟಲವನ್ನು ಕೊಡುವಿಯೊ ಇಲ್ಲವೊ ? ಗಂಡಸಾಗಿ ತುಡುಗು ಮಾಡಲಿಕ್ಕೆ ಕಲಿತಿರುವೆಯಾ ? ನಿಮ್ಮಪ್ಪನ ನಿನಗೆ ಇದನ್ನೇ ಕಲಿಸಿರುವನೇನು ? ಮುನ್ನೋಡಿ ಬಟ್ಟಲಾ ಕೊಡು.ಇಲ್ಲದಿದ್ದರೆ ನೋಡು ನಿನ್ನ ಫಜೀತಿ !

ಸತ್ಯವತಿ :

ಪದ :

ಸಿಟ್ಟ ಮಾಡಬೇಡ್ರಿ ಅತಿಥಿ ಎನಗೆ ಚಿಂತಿ ಹತ್ತಿ
ಬಟ್ಟಲ ಸಲುವಾಗಿ ಭ್ರಾಂತಿ ಬಿಡದಂತಾತ್ರಿ ॥ಪಲ್ಲ ॥

ಕಳವು ಮಾಡುವಂಥ ಕೆಳದಿ ನಾನಲ್ಲಂತ
ತಿಳಿದೆನ್ನ ನೋಡಿರಿ ದಯದಿ ನೀವು ಮುದದಿ
ಎನ್ನ ಕಳಕಳಿಯನ್ನು ಕೇಳ್ರಿ, ಗತಿ ಹೇಳ್ರಿ ॥

ಶಿರಬಾಗಿ ನಿಮ್ಮನು ಪರಿಪರಿ ಬೇಡುವೆನು
ಜರಿದೆನ್ನ ಮಾತಾಡಬೇಡ್ರಿ ಕೊರಳ ಕೊಯ್ರಿ
ನಿಮಗೆ ಶರಣು ಬಂದಿರುವೆನು ನೋಡ್ರಿ ಕರುಣ ಮಾಡ್ರಿ ॥

ಸ್ವಾಮಿಗಳೆ, ಹತ್ತಿರದಲ್ಲಿಯೆ ಬಂಗಾರದ ರಾಶಿ ಬಿದ್ದಿದ್ದರೂ ನಾವು ಹೊರಳಿ ನೋಡುವವರಲ್ಲ. ಇಂಥ ನಮ್ಮ ಮೇಲೆ ನೀವು ಸಿಟ್ಟಗೆದ್ದರೆ ನಮ್ಮ ಗತಿಯೇನು ?ನಾನು ನಿಮ್ಮ ಮಗಳೆಂದು ತಿಳಿದು ಅಂತಃಕರಣ ತೋರಿರಿ !

ಸನ್ಯಾಸಿ : ಇಂಥ ನಿನ್ನ ಅಳಬರುಕುತನದ ಸೋಗು ನನ್ನ ಮುಂದೆ ನಡೆಯದು. ಸುಮ್ಮನೆ ಬಟ್ಟಲವನ್ನು ಕೊಡು.(ಶರಣನಿಗೆ) ಎಲೋ ಕಳ್ಳ.ನನಗೆ ವೇಳೆ ಬಹಳವಾಯಿತು.ಏನೆನ್ನುವಿ ?ಬೇಗ ಬಟ್ಟಲನ್ನು ಕೊಡುವಿಯೋ ?ಇಲ್ಲವೆ ಶಾಸನ ಮಾಡಬೇಕೊ ?

ತಿರುನೀಲಕಂಠ :  ಪ್ರಭೋ, ನಾನು ತೆಗೆದುಕೊಂಡಿಲ್ಲ.ನನಗೆ ಬೇಕಾದ ಶಾಸನವನ್ನು ಮಾಡಬಹುದು.ನಾನೇನು ಮಾಡಬಲ್ಲೆ ! ನಮ್ಮನ್ನು ಪರೀಕ್ಷೆ ಮಾಡಿ ನೋಡಿರಿ.ತಿಳಿಯಿತೇ !

ಸನ್ಯಾಸಿ : ನಿಮ್ಮನ್ನು ಪರೀಕ್ಷೆ ಮಾಡಬೇಕೆ ?

ತಿರುನೀಲಕಂಠ :  ಮಾಡಬಹುದು.

ಸನ್ಯಾಸಿ : ಹಾಗಾದರೆ ನೀನು ನಿನ್ನ ಹೆಂಡತಿಯ ಕೈಹಿಡಿದುಕೊಂಡು ಪೊನ್ನಾಂಬಲನಾಥನ ಗುಡಿಯ ಬಾವಿಗೆ ಬನ್ನಿರಿ.ಆ ಬಾವಿಯಲ್ಲಿ ನೀವಿಬ್ಬರೂ ಕೈ ಕೈ ಹಿಡಿದುಕೊಂಡು ಮುಳುಗು ಹಾಕಿರಿ. ನಿಮ್ಮಿಬ್ಬರೊಳಗೆ ತುಡುಗು ಮಾಡಿದ ಒಬ್ಬರು ಸತ್ತು ಹೋಗುವಿರಿ ತುಡುಗು ಮಾಡದವರು ಮೇಲಕ್ಕೆ ಬರುವಿರಿ.ಅಲ್ಲಿಯೇ ನಿಮ್ಮ ಪರೀಕ್ಷೆಯಾಗುವದು.ಮೊದಲು ಬಾವಿಗೆ ಕೈ ಕೈ ಹಿಡಿದುಕೊಂಡು ನಡೆಯಿರಿ.

ತಿರುನೀಲಕಂಠ :  ಛೇ ಛೇ, ಕೈ ಕೈ ಹಿಡಿದುಕೊಂಡು ನಡೆಯಿರಿ ಎಂಬ ಮಾತನ್ನು ಬಿಟ್ಟು ಮಾತಾಡಿರಿ.

ಸನ್ಯಾಸಿ : ಅದ್ಯಾಕೊ ?ಕೈ ಕೈ ಹಿಡಿದುಕೊಂಡು ನಡೆದರೆ ಸಾಯುವಿಯೇನು ? ಬಟ್ಟಲವನ್ನು ತೆಗೆದುಕೊಂಡಿದ್ದರೆ ಸತ್ತೇ ಸಾಯುವಿ.ನಾನು ಕೇಳುವವನಲ್ಲ.ನೀನು ನಿನ್ನ ಹೆಂಡತಿಯ ಕೈ ಹಿಡಿದುಕೊಂಡು ನಡೆಯಲಿಕ್ಕೇ ಬೇಕು.ಇಲ್ಲವಾದರೆ ನನ್ನ ಬಟ್ಟಲವನ್ನು ಕೊಟ್ಟು ಮಾತನಾಡು.ಇದಕ್ಕೇನೆನ್ನುವಿ ?

ತಿರುನೀಲಕಂಠ :  ಈಕೆಯನ್ನು ನಾನು ಮುಟ್ಟುವದಿಲ್ಲವೆಂದು ಸಾರಿ ಸಾರಿ ಹೇಳುವೆ.

ಸನ್ಯಾಸಿ : ಅದೇಕೆ ಮುಟ್ಟುವದಿಲ್ಲ ?

ತಿರುನೀಲಕಂಠ :  ಅದೇಕೆಂದರೆ

ಪದ :

ಮುಟ್ಟಬೇಡೆಂದು ಎನಗೆ ಶಿವನಾಣೆ
ಹಾಕಿಬಿಟ್ಟಿರುವಳೀ ಕರಿಗಮನೆ
ಅದರಿಂದ ಮುಟ್ಟುವದಿಲ್ಲ ನಾನು ಇವಳನ ॥

ಪಾತರದವರ ಮನೆಗೆ ಹೋಗಿ ಬಂದೆಯೆಂದು
ಅವಳ ಕೂಡ ಕೆಟ್ಟೆಯೆಂದು ತಾ ತಿಳಿದು
ಕಂಡಂತೆ ಆಡಿದಳಿವಳು ತಾನಂದು ॥

ನವಪ್ರಾಯದ ಭರದಲ್ಲಿ ಆದ ಮಾತು
ಅಂದಿನಿಂದ ಸಂಸಾರಸುಖವನ್ನೆಲ್ಲ ಮರೆತು
ಶಿವಧ್ಯಾನ ಮಗ್ನನಾಗಿ ನಿಂತೆ ಶಿವನೊಳು ಬೆರೆತು ॥

ಯತಿ ಶ್ರೇಷ್ಠನೆ, ನಮ್ಮ ನವಯೌವ್ವನ ಸಮಯದಲ್ಲಿ ನನ್ನ ಹೆಂಡತಿಯ ನನಗೆ ನೀವು ಪಾತರದವರ ಮನೆಗೆ ಹೋಗಿ ಕೆಟ್ಟು ಬಂದಿರಿ. ಅದಕ್ಕೆ ದೋಷಿಯಾದ ನೀವು ನನ್ನನ್ನು ಮುಟ್ಟಿದರೆ ಶಿವನಾಣೆಯಾಗಿವೆಯೆಂದು ಆಣೆ ಹಾಕಿದಳು.ಅಂದಿನಿಂದ ಅವಳನ್ನು ಮುಟ್ಟಲಿಲ್ಲ.ಇದು ಪ್ರತಿಜ್ಞೆ.ಈಗ ನಿಮ್ಮ ಮಾತಿನಂತೆ ಅವಳ ಕೈ ಹಿಡಿದರೆ ಆ ನನ್ನ ಪ್ರತಿಜ್ಞೆಗೆ ಭಂಗ ಬರುವದು.ಅದಕ್ಕಾಗಿ ಅವಳನ್ನು ಮುಟ್ಟಲಾರೆ.

ಸನ್ಯಾಸಿ : ಎಲೋ ಶರಣ, ನಿನ್ನ ಆಣೆಯನ್ನು ಕೇಳಲಿಕ್ಕೆ ನಾನು ಬಂದಿಲ್ಲ.ಸುಮ್ಮನೆ ನಿನ್ನ ಹೆಂಡತಿಯ ಕೈ ಹಿಡಿದುಕೊಂಡು ನಡೆದರೆ ನೆಟ್ಟಗೆ, ಇಲ್ಲದಿದ್ದರೆ ನಿನ್ನ ಪರಿಣಾಮವೇನಾಗುವದೋ ನೋಡು.

ತಿರುನೀಲಕಂಠ : ಸಾಧುವರ್ಯ, ಶಿವನಾಣೆ ಹಾಕಿಸಿಕೊಂಡು ಮುಟ್ಟುವ ಬಗೆ ಹೇಗೆ ?ನೀವು ನನ್ನನ್ನು ಕೊಂದರೂ ಇವಳನ್ನು ಮುಟ್ಟುವುದಿಲ್ಲ.ಇದೊಂದನ್ನು ಬಿಟ್ಟು ಬೇರೆ ಏನನ್ನಾದರೂ ಹೇಳಿರಿ.

ಸನ್ಯಾಸಿ : ಹಾಗಾದರೆ ಈ ಕೋಲನ್ನು ತೆಗೆದುಕೊ. ಇದರದೊಂದು ತುದಿಯನ್ನು ನೀನು ಹಿಡಿ.ಮತ್ತೊಂದು ತುದಿಯನ್ನು ನಿನ್ನ ಹೆಂಡರಿ ಹಿಡಿಯಲಿ. ಹೀಗಾದರೂ ಮಾಡುವಿಯೊ ಇಲ್ಲವೊ ?

ತಿರುನೀಲಕಂಠ :  ಹೀಗಾದರೆ ಅಡ್ಡೀ ಇಲ್ಲ.ನೀವು ಹೇಳಿದಂತೆ ಮಾಡುವೆನು.

ಸನ್ಯಾಸಿ : ಹಾಗಾದರೆ, ನಿನ್ನ ಹೆಂಡತಿಗೆ ಕೋಲಿನ ಮತ್ತೊಂದು ತುದಿಯನ್ನು ಹಿಡಿಯಲು ಹೇಳು.

ತಿರುನೀಲಕಂಠ :  ನೀವೇ ಹೇಳಿರಿ

ಸನ್ಯಾಸಿ : ನಾನೇ ಹೇಳಬೇಕೆ ?

ಪದ :

ಬಾ ಸತ್ಯವತಿ ನೀನು ಬಹು ತುಡುಗಿ
ಬಟ್ಟಲ ಹೋಯ್ತು ನನ್ನದು ನಿನ್ನ ಸಲುವಾಗಿ
ನಿಂತೆನೆ ಮಂಗನಾಗಿ ನಾ ನಿಜವಾಗಿ ॥

ನಿನ್ನ ತುಡುಗುತನ ಬೈಲಿಗ್ಹಾಕುವೆ ನಾ
ಹಿಡಿಯಬಾರೆ ಬೆತ್ತದ ಒಂದು ತುದಿಯನ್ನ
ಬಾ ಬೇಗ ನಿಮ್ಮನ್ನು ಪರೀಕ್ಷಿಸುವೆನಾ ॥

ನಿಮ್ಮಂಥ ತುಡುಗರನ್ನು ನೋಡಲಿಲ್ಲ
ಇನ್ನೂ ತನಕ ಎಲ್ಲೆಲ್ಲೂ ಧಾತ್ರಿಯ ಮೇಲ
ವಿಶ್ವಾಸ ಬೀರಿ ಎಸೆದಿರಿ ಎನಗೆ ಮೋಸದ ಜಾಲ ॥

ಏನೆ, ಕಟುಕರಂಥವಳೆ, ಸುಮ್ಮನೆ ಏಕೆ ನಿಂತೆ ?ನಿನ್ನ ತುಡುಗುತನವನ್ನೆಲ್ಲ ಬಯಲಿಗೆ ಹಾಕಿ ನಿನ್ನ ಸ್ವರೂಪವನ್ನೆಲ್ಲ ಕಳೆದುಬಿಡುವೆ.ಹಿಡಿ ಆ ಬೆತ್ತದ ತುದಿಯನ್ನು.

ಸತ್ಯವತಿ : ತರ‌್ರಿ, ಹಿಡಿಯುವೆನು.(ಹಿಡಿಯುವಳು)

ಸನ್ಯಾಸಿ : ನಡೆಯಿರಿ ಇನ್ನು ಪೊನ್ನಾಂಬಲೇಶ್ವರನ ಬಾವಿಗೆ.

ತಿರುನೀಲಕಂಠ :  ಆಗಲಿ (ಸಾಗುವಿರಿ).

ಸತ್ಯವತಿ : ಇದೇ ಈಶ್ವರನ ಗುಡಿ,ಇದೇ ಬಾವಿ, ಇನ್ನೇನು ಮಾಡಬೇಕು ಹೇಳ್ರಿ.

ಸನ್ಯಾಸಿ : ಇನ್ನೇನು ಮಾಡಬೇಕೆಂದರೆ, ಇದರೊಳಗೆ ನಿಂತು ಮುಳುಗು ಹಾಕಬೇಕು.ಬಟ್ಟಲವನ್ನು ಕದ್ದವರು ಸತ್ತು ಹೋಗುವಿರಿ.ಕದಿಯದಿದ್ದವರು ಮೇಲೆ ಬರುವಿರಿ.ನೋಡಿರಿ.ವ್ಯರ್ಥ ಪ್ರಾಣವನ್ನು ಕಳೆದುಕೊಳ್ಳಬೇಡಿರಿ.ಜೀವಕ್ಕಿಂತ ಬಟ್ಟಲು ಹೆಚ್ಚಿನದಲ್ಲ.ಸುಮ್ಮನೆ ಕೊಟ್ಟುಬಿಡಿರಿ.

ತಿರುನೀಲಕಂಠ :  ನಾವು ನಿಮ್ಮ ಬಟ್ಟಲನ್ನು ತೆಗೆದುಕೊಂಡಿಲ್ಲವೆಂದು ಎಷ್ಟು ಸಾರೆ ಹೇಳಬೇಕು.

ಸನ್ಯಾಸಿ : ನಿಮ್ಮ ಸೊಕ್ಕು ಬಹಳವಾಯಿತು ಬಾವಿಯೊಳಗೆ ಮುಳುಗಿ ಸಾಯಿರಿ.ನಮ್ಮಪ್ಪನದೇನು ಹೋಗುವದು ?ಜೀವ ಹೋಗುವಾಗಾದರೂ ಬುದ್ಧಿ ಬಂದೀತು,

ಸತ್ಯವತಿ : ನಾವು ಜೀವಕ್ಕಂಜುವದಿಲ್ಲ.ಪಾಪಕ್ಕಂಜುವೆವು.ನಿಮ್ಮ ಬಟ್ಟಲವನ್ನು ನಾವು ಅಪಹರಿಸಿದ್ದರೆ ಈ ಬಾವಿಯಲ್ಲಿಯೆ ಸತ್ತು ಹೋಗುವೆವು.ನಮ್ಮ ಕಾಳಜಿ ನಿಮಗೇಕೆ ಬೇಕು ?

ಸನ್ಯಾಸಿ : ಕಟುಕರಂಥವಳೆ, ನೀನಾದರೂ ಮಿತಿಮೀರದ ಸೊಕ್ಕಿನವಳೆ ಇರುವಿ.ಬಡಿದು ಕಾಲು ಮುರಿದೇನು ! ಮೊದಲು ಮುಳುಗು ಬಾವಿಯೊಳಗೆ.

ತಿರುನೀಲಕಂಠ :  ಸ್ವಾಮಿ, ಪೊನ್ನಾಂಬಲೇಶ್ವರನನ್ನು ಧ್ಯಾನಿಸಿ ಜಿಗಿಯುವೆವು. ಸ್ವಲ್ಪ ಶಾಂತರಾಗಿರಿ.

ಸನ್ಯಾಸಿ : ಎಲೊ, ತಡಮಾಡಿದರೆ ಕೇಳುವದಿಲ್ಲ.ಬೇಗ ಆಗಲಿ !

ಸನ್ಯಾಸಿ :

ಸ್ತೋತ್ರ ಪದ :

ಪಾಲಿಸೊ ದಯದಿಂದ ಪರಮಾತ್ಮ
ಜಯತು ಶಂಕರ ಜಯತು ಶಂಕರ
ಜಯಕೃಪಾಕರ ಮುಕ್ತಿದಾತಾ
ಭಯವಿವರ್ಜಿತ ಭಕ್ತಜನಹಿತ
ನಯದಿ ಭಜಿಪೆವು ನೀಲಕಂಠ ॥

ಹಾಲನು ಕುಡಿಸಿದ ಕೂಸನು ನುಂಗಿದಿ
ಬಾಲನ ಕೊಲ್ಲಿಸಿ ಮೋಜನು ನೋಡದಿ
ಬಾಲೆಯ ಬೇಡಿ ಭಕ್ತಗೆ ಒಲಿದಿ ?
ಲೀಲೆಯ ವರ್ಣಿಸಲೆನಗಳವೇ ॥

ಬಟ್ಟಲವನ್ನು ಮಾಯ ಮಾಡಿದಿ
ಕೆಟ್ಟ ಜನರಿಗೆ ಸರಿಯ ಮಾಡಿದಿ
ಕೆಟ್ಟ ತುಡುಗರು ಅನ್ನಿಸಿಬಿಟ್ಟಿ
ಸೃಷ್ಟಿಕರ್ತನು ನೀನೆ ಜಯಜಯ ॥

ಜಯ ಶಂಕರ ! (ಬಾವಿಗೆ ಇಳಿಯುವರು)

ಸನ್ಯಾಸಿ : (ಸ್ವಗತ) ಓಹೋ, ಇವರಿಬ್ಬರೂ ಬಾವಿಯಲ್ಲಿ ಹಾರಿಕೊಂಡರು.ಇನ್ನೇನಿದೆ ?ಇವರು ನೀರೊಳಗೆ ಮುಳುಗಿ ಏಳುವದರೊಳಗೆ ಇವರನ್ನು ಹೇಗೆ ಮಾಡುವೆನೆಂದರೆ :

ಪದ :

ಮುಪ್ಪಿನ ಮುದುಕರಾದಂಥ ಇವರನ್ನು
ಪ್ರಾಯದವರು ಆಗುವಂತೆ ಮಾಡುವೆನು
ಕರುಣದಿ ನೋಡುವೆನು ಇವರಿಬ್ಬರನು ॥

ಸತ್ಯವತಿ ಗಂಡಗೆ ಅಣೆ ಹಾಕಿದಾಗ್ಯೆ
ಯಾವ ಪ್ರಾಯದವರು ಇದ್ದರೊ ಹಾಗೆ
ಮಾಡುವೆ ಕ್ಷಣದೊಳಗೆ ಅವರಿಗೆ ತಿಳಿಯದ್ಹಾಗ ॥

ನನ್ನ ಜೀವದಕ್ಕಿಂತ ಹೆಚ್ಚಿನವರಿವರು
ಇವರು ಮಾಡಲಿ ಇನ್ನು ಮೇಲೆ ಸಂಸಾರ
ಇಹಲೋಕ ಸುಖವನುಂಡು ತಣಿಯಲಿವರು ॥

ಶರಣ ದಂಪತಿಗಳು ಈಗ ಮುಪ್ಪನವರಾಗಿರುವರು.ಇವರಮುದಿತನವು ಹೋಗಿ ನವಪ್ರಾಯದವರಾಗುವಂತೆ ಆಶೀರ್ವದಿಸುವೆನು.ಇಹಲೋಕದ ಸುಖತ್ಯಾಗವನ್ನು ಮಾಡಿದ ಇವರು ಮತ್ತೆ ನೂರು ವರ್ಷಗಳವರೆಗೆ ಸಂಸಾರಿಕ ಸುಖವನ್ನು ಮನದಣಿಯೆ ಸೂರೆಗೊಳ್ಳಲಿ.ನೀರಲ್ಲಿರುವ ಈ ದಂಪತಿಗಳನ್ನು ಮೇಲಕ್ಕೆ ಕರೆವೆ.(ಪ್ರಕಟವಾಗಿ) ಶರಣಾ, ನೀನು ನಿನ್ನ ಹೆಂಡತಿ ಜೀವಂತ ಇದ್ದೀರಾ ?

ತಿರುನೀಲಕಂಠ : (ಇಬ್ಬರೂ ಮೇಲೆ ಬಂದು) ತುಡುಗು ಮಾಡಿದ್ದರೆ ಸಾಯುತ್ತಿದ್ದೆವು.ಹಾಗೆಯೆ ಹೇಗೆ ಸಾಯುವೆವು ? ನೋಡಿರಿ ಮೇಲಕ್ಕೆ ಬಂದೇ ಬಿಟ್ಟೆವು.(ಅಷ್ಟರಲ್ಲಿ ಸನ್ಯಾಸಿಯು ಮಾಯವಾಗುವನು)

ತಿರುನೀಲಕಂಠ : ಓಹೋ, ನಾವು ಬಾವಿಯೊಳಗೆ ಜಿಗಿದು ಮೇಲೆ ಬರುವಷ್ಟರಲ್ಲಿ ಆ ಸನ್ಯಾಸಿಯು ಎಲ್ಲಿಗೊ ಹೋಗಿಬಿಟ್ಟಿರುವನಲ್ಲ ! ಎಲ್ಲಿ ಹೋಗಿರಬಹುದು ? ನಮ್ಮ ಸತ್ವ ಪರೀಕ್ಷೆಗಾಗಿ ಆ ಪರಮಾತ್ಮನೇ ಸನ್ಯಾಸಿಯಾಗಿ ಬಂದು, ಆ ಬಟ್ಟಲವನ್ನು ತಾನೇ ಮಾಯಮಾಡಿ ಇಷ್ಟೆಲ್ಲ ತಂತ್ರ ನಡೆಸಿದನೆ ?ಪರಮಾತ್ಮನ ಈ ಲೀಲೆಯ ಉದ್ದೇಶವೇನಿರ ಬಹುದು ?(ತನ್ನ ಮೈಮೇಲಿನ ಅಂಗಿಯನ್ನು ನೋಡಿಕೊಂಡ) ಇದೇನು ನನ್ನ ಮೈಮೇಲಿನ ಕಪನಿ ಹೋಗಿ ಜರತಾರಿ ಅಂಗಿ, ತಲೆಯ ಮೇಲೆ ಮುತ್ತಿನ ಟೊಪ್ಪಿಗೆ ! ಎಂಥ ಸೋಜಿಗ ! (ಸತ್ಯವತಿಯನ್ನು ಕಂಡು) ಓಹೋ, ಮುಪ್ಪಿನ ಮುದುಕಿಯಾದ ಸತ್ಯವತಿಯು ಈಗ ಹದಿನಾರು ವರ್ಷದ ಪ್ರಾಯದವಳಾಗಿ ನಿಂತಿರುವಳು.(ತನ್ನನ್ನೆ ನೋಡಿಕೊಂಡು) ಶಿವಶಿವಾ,ನಾನೂ ಈಗ ಪ್ರಾಯದವರನ್ನಾಗಿ ಮಾಡಲೆಂದೇ, ಬಟ್ಟಲ ನೆವದಿಂದ ಬಾವಿಯೊಳಗೆ ಜಿಗಿಸಿ ಇಷ್ಟೆಲ್ಲ ಲೀಲೆ ಮಾಡಿದೆಯಾ ? ನಮ್ಮನ್ನು ನವಯೌವನಿಗರನ್ನಾಗಿ ಮಾಡಲು ಎಂದಾದರೂ ನಾವು ನಿನ್ನಲ್ಲಿ ಕೇಳಿಕೊಂಡಿದ್ದೆವೆ ? ಅಸ್ಥಿರ ಸಂಸಾರದ ಆಸೆಯೆ ಇಲ್ಲದ ನಮಗೆ ಈ ಯೌವನಾವಸ್ಥೆಯನ್ನು ಏಕೆ ಕೊಟ್ಟೆ ?ಇದೇನು ನಿನ್ನ ಲೀಲೆ ?(ಆಲೋಚಿಸುತ್ತ) ಈ ಜರತಾರಿ ಪೋಷಾಕು ನನಗೆ ಬೇಡ.ಹಿಂದೆ ಇಂಥ ಪೋಷಾಕು ಧರಿಸಿಕೊಂಡು ಬಂದಾಗ ಸತ್ಯವತಿಯು ಭ್ರಾಂತಿಗೊಳಗಾಗಿ ನನ್ನೊಡನೆ ಜಗಳವಾಡಿದಳಲ್ಲವೆ ?ತನ್ನನ್ನು ಮುಟ್ಟಬೇಡವೆಂದು ಶಿವನಾಣೆ ಹಾಕಿದಳಲ್ಲವೆ? ಅದಕ್ಕಾಗಿ ಸಂಸಾರ ಸುಖ ವರ್ಜ್ಯವಾಗಿ ಮುದುಕರಾಗಿ ಹೋದೆವು.ಇಂಥ ನಮಗೆ ಯೌವನ ಬರಲು ಕಾರಣವೇನು? ನಮಗೆ ಇದಾವುದೂ ಬೇಕಾಗಿಲ್ಲ.

ಪದ :

ನಾ ಕಳೆಯುವೆನೆಲ್ಲ ಈ ವೇಷ ಎನಗೆ
ಬರುವದು ಇದರಿಂದ ಬಹು ದೋಷ ॥ಪಲ್ಲವಿ ॥

ಶಿವಭಕ್ತರಿಗಿವು ತರವಲ್ಲ ಬರಿದೆ
ಅಪವಾದ ಬರುವದು ಹಗಲೆಲ್ಲ
ಎನಗೆ ಯಾತಕೆ ಬೇಕು ಇಂಥ ಒಣಡೌಲ ॥

ಸತ್ಯವತಿಯು ಹಿಂದೆ ತಾ ಸಿಟ್ಟಾಗಿ
ನಿಂದಿಸಿ ನುಡಿದಳು ಬಗಿ ಬಗಿ
ತನಗೆ ಬೇರೆ ತರದ ಸಂಶಯವಾಗಿ ॥

(ಜರತಾರಿ ಅಂಗಿಟೊಪ್ಪಿಗೆಗಳನ್ನೆಲ್ಲ ತೆಗೆದಿಡುವನು)

ಸನ್ಯಾಸಿ : ಏನು ಶರಣ, ಪರಮಾತ್ಮನು ಕೊಟ್ಟಂಥ ಜರತಾರಿ ಪೋಷಾಕನ್ನು ಏಕೆ ಚಲ್ಲಿದೆ ?ಈ ಹರಕು ಸನ್ಯಾಸಿನ ಮಾತು ಕೇಳಿ ಈ ಪೋಷಾಕನ್ನು ಧರಿಸು. ತಿಳಿಯಿತೆ ?

ತಿರುನೀಲಕಂಠ : ನೀವು ಹರಕು ಸನ್ಯಾಸಿಯಲ್ಲ.ಸಾಕ್ಷಾತ್ ಪರಮಾತ್ಮ.ಬಟ್ಟಲ ನೆವದಿಂದ ನಮ್ಮನ್ನು ಬಾವಿಯೊಳಗೆ ಹೊಗಿಸಿ ಮುದುಕರಾದ ನಮ್ಮನ್ನು ಪ್ರಾಯದವರನ್ನಾಗಿ ಮಾಡಿದಿರಿ.ನಮಗೆ ಯೌವನ ಬರಲೆಂದು ಹಾರೈಸಿದೆವೆ? ಈ ಪ್ರಾಯದಿಂದ ನಮಗೆ ಪ್ರಯೋಜನವೇನು ?ಇಹಲೋಕದ ಯಾತ್ರೆ ಮುಗಿದಿರಲು ನಮಗೆ ಅದರ ಅವಶ್ಯಕತೆ ಇದೆಯೆ? ಬೇಡ ಬೇಡ.ಈ ಮರ್ತ್ಯಲೋಕದಲ್ಲಿಇರುವದೇ ಬೇಡ.ನಮಗೆ ಮುಕ್ತಿಯನ್ನು ಕೊಡಿರಿ.

ಸನ್ಯಾಸಿ : ಏನು ಶರಣ, ನೀನು ಮುಕ್ತನೆ ಇದ್ದು, ಮುಕ್ತಿಯನ್ನು ಬೇಡುತ್ತಿರುವೆ.ಆಶ್ಚರ್ಯ ! ಈದೃಶ್ಯ ಪ್ರಪಂಚದಲ್ಲಿ, ಸ್ಥಾವರ : ಜಂಗಮ ಪ್ರಾಣಿಗಳಾಗಿ ವಿಹರಿಸುವವನು ಶಿವನೇ ಅಲ್ಲದೆ ಮತ್ತಾರು? ಅದ್ವಯನಾದ ಆತನೆ ಆ ಜಗತ್ತಿನಲ್ಲಿ ಓತಪ್ರೋತವಾಗಿ ವ್ಯಾಪಿಸಿರಲು ಈ ಜಗತ್ತು ಆ ಪರಶಿವನಿಂದಭಿನ್ನ ಹೇಗೆ? ಅದರಂತೆಯೆ ನೀನು ಕೂಡ ಶಿವಮಯನು.ಸಮುದ್ರದಲ್ಲಿ ತೋರುವ ತರಂಗಗಳು.ಅಲ್ಲಿಯೇ ಹುಟ್ಟಿ ಅಲ್ಲಿಯೇ ಅಡಗುವಂತೆ ನೀನಾದರೂ ಶಿವನಿಂದಲೆ ಹುಟ್ಟಿ ಶಿವನಲ್ಲಿಯೆ ವರ್ಧಿಸಿ ಅವನಲ್ಲಿಯೆ ಲೀನವಾಗುವಿ. ಅಂದಮೇಲೆ ಮುಕ್ತಸ್ವರೂಪನಾದ ಶಿವನೆ ನೀನಿರುವೆ.ಈಗ ನೀನು ನಿನ್ನ ಹೆಂಡತಿಯೊಡನೆ ಮನೆಗೆ ಹೋಗು, ಸುಖವಾಗಿ ಬಾಳು.ನಿನ್ನ ಆಯುಷ್ಯ ಮತ್ತೆ ನೂರು ವರ್ಷಗಳವರೆಗೆ ಬೆಳೆದಿದೆ. ಸಂಸಾರಸುಕವನ್ನು ಮನದಣಿಯೆ ಸವಿ.ಅದಕ್ಕೆ ನನ್ನ ಸಮಕ್ಷಮದಲ್ಲಿಯೆ ಈ ಸತ್ಯವತಿಯ ಕೈ ಹಿಡಿ.

ತಿರುನೀಲಕಂಠ :  ಸತ್ಯವತಿಯು ಮುಟ್ಟಬೇಡವೆಂದು ಶಿವನಾಣೆ ಹಾಕಿದ್ದಾಳೆ.ಅವಳನ್ನು ನಾನು ಮುಟ್ಟಲಾರೆ.ಸಾಕ್ಷಾತ್ ಪರಶಿವನೆ ತನ್ನ ನಿಜರೂಪದಿಂದ ಬಂದು ಅವಳನ್ನು ಮುಟ್ಟಲು ಆಜ್ಞೆಯನ್ನಿತ್ತರೆ ಮುಟ್ಟಬಹುದು.ಇಲ್ಲದಿದ್ದರೆ ಇಲ್ಲ.

ಸನ್ಯಾಸಿ : ಹಾಗಾದರೆ, ನಿನಗೆ ಆ ಪರಶಿವನೆ ಬಂದು ಹೇಳಬೇಕೆ ?

ತಿರುನೀಲಕಂಠ :  ಹೌದು.ಅವನಿಚ್ಛೆಯಿದ್ದಂತಾಗಲಿ !

ಸನ್ಯಾಸಿ : ಅವನೇ ಬರುವನು ನೋಡು (ಸನ್ಯಾಸಿಯ ವೇಷ ಕಳಚಿ, ಶಿವನು ತನ್ನ ನಿಜರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ).

ಶಿವ : ಶಿವಶರಣನೆ, ನಿನ್ನ ದೃಢವ್ರತಕ್ಕೆ ಮೆಚ್ಚಿ ಪ್ರಸನ್ನನಾಗಿದ್ದೇನೆ.ಇನ್ನಾದರೂ ನನ್ನ ಆಜ್ಞೆಯನ್ನು ಪಾಲಿಸು.

ತಿರುನೀಲಕಂಠ :  ಭೋ ಜಗದೀಶ್ವರ, ಗೌರೀಧರ, ನಿನ್ನ ಪಾದಾರವಿಂದಕ್ಕೆ ಪೊಡಮಡುತ್ತೇನೆ. (ನಮಸ್ಕರಿಸುವನು)

ಶಿವ : ಶರಣಶ್ರೇಷ್ಠನೆ, ನಿನಗೆ ಕಲ್ಯಾಣವಾಗಲಿ !

ಸತ್ಯವತಿ : ಭೋ ಸಾಂಬಸದಾಶಿವ, ನಿನ್ನ ಪಾದಕಮಲಕ್ಕೆ ಈ ಬಡದಾಸಿಯ ಅಭಿವಂದನೆ.(ನಮಿಸುವಳು)

ಶಿವ : ಮಗಳೆ, ಇಂದಿನಿಂದ ಸರ್ವಸುಖ ಸಮೃದ್ಧಿಯುಳ್ಳವಳಾಗಿ ಬಾಳು ! ಏಳು ! ತಿರುನೀಲಕಂಠ, ಇನ್ನು ಮೇಲೆ ಈ ನಿನ್ನ ಪತ್ನಿಯಾದ ಸತ್ಯವತಿಯನ್ನು ಆದರಿಸು ; ಅವಳೊಡನೆ ಸಂಸಾರಸುಖವನ್ನನುಭವಿಸು. ತಿಳಿಯಿತೆ ? ಈಗಲೆ ಈ ಶುಭಗಳಿಗೆಯಲ್ಲಿ ನಾನು ಕಣ್ಣಾರೆ ನೋಡುವಂತೆ ಸತ್ಯವತಿಯ ಪಾಣಿ ಗ್ರಹಣಮಾಡು.

ತಿರುನೀಲಕಂಠ :

 ಪದ :

ಮುಟ್ಟಬೇಡೆಂದು ಎನಗೆ ನಿನ್ನಾಣೆ
ಹಾಕಿರುವಳು ಮುನ್‌ನ ಇವಳು ; ಅಂಧನೆ ?
ಮರೆತೆಯಾ ಹ್ಯಾಗೆ ನೀನೆ, ಮುಟ್ಟಲೆಂತು ನಾನೇ ॥

ಅಂದಿನಿಂದ ಇವಳ ಸ್ಪರ್ಶ ಮಾಡಲಿಲ್ಲ
ಅದು ನಿನಗೆ ತಿಳಿಯದ ಮಾತಲ್ಲ
ವಿಚಿತ್ರ ನಿನ್ನ ಲೀಲಾ, ತಿಳಿಯೆನದನೆಲ್ಲ ॥

ಮತ್ತೇನಾದರೂ ಘೋರ ಪ್ರಸಂಗವನು
ನನಗೆ ತಂದರೆ ಮಾಡಬೇಕು ನಾನೇನು
ಎನಗೆ ಇಲ್ಲ ಇಹದ ಆಶೆ ನಿಜವನ್ನು ಹೇಳುವೆ ॥

ಶಂಭೋ,ಇದೇನು ನಿನ್ನ ವಿಚಿತ್ರ ಲೀಲೆ ! ನಿನ್ನಾಟವು ನನಗೆ ತಿಳಿಯುವಂಥದಲ್ಲ.ಸತ್ಯವತಿಯು ನನಗೆ ಮುಟ್ಟಬೇಡವೆಂದು ಆಣೆ ಹಾಕಿದ್ದಾಳೆ.ಅದು ನಿನಗರಿಯದ ಮಾತಲ್ಲ.ಈಗ ಇವಳ ಕೈ ಹಿಡಿಯೆಂದು ನೀನು ಹೇಳಿದರೆ ನಾನು ಹಿಡಿಯಲೆಂತು ?

ಶಿವ : ಆ ಆಣೆಯ ಅವಧಿಗೆ ಇಲ್ಲಿಗೆ ಮುಗಿಯಿತು.ಅಂತೆಯೆ ನಾನೀಗ ಪ್ರಸನ್ನನಾಗಿ ಹೇಳುತ್ತಿರುವೆ.ಇನ್ನು ಸಂಶಯವನ್ನು ಬಿಡು.ಅಂದು ಜರತಾರಿ ಪೋಷಾಕನ್ನು ಕಂಡು ಸಂದೇಹಗೊಂಡು ತನ್ನ ಶೀಲವನ್ನು ಕಾಯ್ದುಕೊಳ್ಳುವದಕ್ಕಾಗಿ ನಿನಗೆ ಆಣೆ ಹಾಕಿದಳು.ಅದು ಸಮಂಜಸವೇ ಆಗಿದೆ.ಅದರಲ್ಲಿ ಅವಳದೂ ತಪ್ಪಿಲ್ಲ.ನಿನ್ನದೂತಪ್ಪಿಲ್ಲ.ಆ ಪಾತರದ ರಂಭೆಯದೂ ತಪ್ಪಿಲ್ಲ.ನಿಮ್ಮ ಸತ್ವಾತಿಶಯದ ಕೀರ್ತಿ ಜಗದಲ್ಲಿ ಬೆಳಗಲೆಂದು ನಾನೇ ಲೀಲಾಜಾಲವನ್ನೊಡ್ಡಿ ನಿಮ್ಮ ಪರಿಶುದ್ಧತೆಯನ್ನು ಭುವಿಯೇ ಪ್ರಶಂಸಿಸುವಂತೆ ಮಾಡಿರುವೆ.ಮಗುವೆ, ನಿನ್ನ ಸಂದೇಹವನ್ನು ಬಿಟ್ಟು ಪರಮಪಾವನೆಯಾದ ಈ ನಿನ್ನ ಧರ್ಮ ಪತ್ನಿಯ ಪಾಣಿಗ್ರಹಣ ಮಾಡು ; ಇನ್ನೂ ನೂರು ವರ್ಷಗಳವರೆಗೆ ಸಂಸಾರಸುಖವನ್ನನುಭಸು.ಕಡೆಗೆ ನಿನಗೂ ನಿನ್ನ ಸತಿಗೂ ಆ ರಂಭೆಗೂ ಸಾಯುಜ್ಯವನ್ನೀಯುವೆನು ತಿಳಿಯಿತೆ ?ಇನ್ನಾದರೂ ನನ್ನಾಜ್ಞೆಯಂತೆ ಈ ಸಾಧ್ವಿಯ ಕೈ ಹಿಡಿದು ಸಂತೋಷಗೊಳಿಸು.

ತಿರುನೀಲಕಂಠ :  ಚಂದ್ರಶೇಖರ, ನಿನ್ನ ಆಜ್ಞೆಯನ್ನು ಶಿರಸಾಮನ್ನಿಸುವೆ.(ಸತ್ಯವತಿಗೆ)

ಪದ :

ಸದ್ಗುಣಸಂಪನ್ನೆ ಕೈತಾರ ನಳಿನವದನೆ
ಆದೆವು ಇಂದು ಧನ್ಯ ॥ಪಲ್ಲವಿ ॥

ನೀನೆನ್ನ ಪಂಚಪ್ರಾಣ ನಿನ್ನಿಂದ ಈಶನ
ಆದುದು ದರ್ಶನ ನಿನ್ನನಾದರಿಪೆನಿನ್ನ ॥

ಶಂಭುವಿನಪ್ಪಣೆಗೈವುದು ಮನ್ನಣೆ
ಇವನೆ ನಿಮಗಿಹ ಹೊಣೆ, ಸರ್ವಸುಖವೀವ ತಾನೆ ॥

ಕಾದರೊಳ್ಳಿ ಶ್ರೀವೀರಭದ್ರದೇವನು ಪೂರ
ಕರುಣವಾಯ್ತೆಮಗೆ ಪುರಹರ ಕೊಟ್ಟನೆಮಗೆ ವರ ॥

ಪ್ರಾಣಕಾಸಾರಹಂಸೆ, ಬಹುದಿವಸ ನಿನ್ನನ್ನುಮುಟ್ಟದಂತೆ ನನ್ನನ್ನು ಶಿವನಾಣೆಯಿಂದ ದೂರೀಕರಿಸಿದೆ. ಇನ್ನು ಮುಂದೆ ನಿನ್ನೊಡನೆ ಅತ್ಯಂತ ಪ್ರೇಮದಿಂದ ವಿಹರಿಸುವೆ.ನಳಿನಮುಖಿ, ನಿನ್ನ ಕರಕಮಲವನ್ನು ತಾ. (ಸತ್ಯವತಿಯು ಕೈ ಚಾಚುವಳು ; ತಿರುನೀಲಕಂಠ ಆಕೆಯ ಕೈ ಹಿಡಿಯುವನು).ಪುರಹರ, ನಿನ್ನಭಿಲಾಷೆಯಂತೆ ಸತ್ಯವತಿಯ ಪಾಣಿಗ್ರಹಣ ಮಾಡಿದೆ.ನಿನಗೆಪರಮಾನಂದವಾಯಿತೆ ?

ಶೀವ : ಪರಮಾನಂದವಾಯಿತು ! ಮಹದಾನಂದವಾಯಿತು !

(ಜಯಘೋಷ ಮಾಡಿ ಪೊನ್ನಾಂಬಲೇಶ್ವರನಿಗೆ ಆರತಿ ಎತ್ತುವರು).

ಮಂಗಳಾರತಿ

ಜಯ ಶಂಕರ ! ಜಯ ಶಂಕರ !!
ಜಯಮಂಗಲವಿರಲಿ ದೇವಗೆ ॥ಪಲ್ಲ ॥

ಹರನಿಗೆ ಗಂಗಾಧರನಿಗೆ ಗಿರಿಜಾ
ವರನಿಗೆ ವಿಮಲವಿಗೆ ॥

ಮುಪ್ಪುರಹರಗೆ ಸರ್ವಭೂಷಣನಿಗೆ
ತಪ್ಪದೆ ಭಕ್ತರ ಪೊರೆವವಗೆ ॥

ರಾಜರಾಜ ಸಖಗೆ ಮೂಜಗ ತಾತಗೆ
ಸೋಜಿಗವಹ ಲೀಲಾಜಾಲ ಮಹಿಮನಿಗೆ ॥

***