ಬಾಲಕ ರಾಜನಿಗೆ ತಾನು ರಾಜಗುರು ಮನೆತನದಲ್ಲಿ ಹುಟ್ಟಿದವನೆಂದು ಹೆಮ್ಮೆ. ಅವನ ಮನೆತನದ ಹಿರಿಯರುಗಳಲ್ಲಿ ಒಬ್ಬರಾದ ನಲ್ಲ ತಾತಾಚಾರ್ಯರು ತುಳು ನರಸಿಂಹನಿಗೆ ರಾಜಗುರುಗಳಾಗಿದ್ದರು. ಇನ್ನೊಬ್ಬ ಹಿರಿಯರಾದ ವೆಂಕಟ ತಾತಾಚಾರ್ಯರು ವಿಜಯನಗರ ಸಾಮ್ರಾಜ್ಯದ ಮಹಾಸಾರ್ವಭೌಮ ಕೃಷ್ಣದೇವರಾಯನ ರಾಜಗುರುಗಳು. ಲಕ್ಷ್ಮೀಕುಮಾರ ತಾತಾಚಾರ್ಯರು ವೆಂಕಟಪತಿ ದೇವರಾಯನ ರಾಜಗುರುಗಳು. ಅವರ ಹೆಸರನ್ನೇ ರಾಜನಿಗೆ ತೊಟ್ಟಿಲ ಕೂಸಾಗಿದ್ದಾಗ ಇಟ್ಟು ನಾಮಕರಣವಾಯಿತು.

ಮನೆಯ ದೀಪ

ರಾಜನದು ವಿದ್ವಾಂಸರ ಮನೆತನ. ಅದು ಅವನ ಹೆಮ್ಮೆಗೆ ಇನ್ನೊಂದು ಕಾರಣ. ಮನೆತನದ ಪೂರ್ವಿಕರಲ್ಲಿ ಒಬ್ಬರು ಕಾಳಿದಾಸ ಮಹಾಕವಿಯ ವಿಷಯದಲ್ಲಿ ಘನಪಂಡಿತರು. ಇನ್ನೊಬ್ಬರು ವಾಲ್ಮೀಕಿ ರಾಮಾಯಣವನ್ನು ಲೆಕ್ಕವಿಲ್ಲದಷ್ಟು ಸಲ ಪಾರಾಯಣ ಮಾಡಿದ್ದರು; ಲೆಕ್ಕವಿಲ್ಲದಷ್ಟು ಪ್ರತಿ ಮಾಡಿ ದಾನ ಮಾಡಿದ್ದರು. ರಾಜನ ಮುತ್ತಾತ ಅಣ್ಣಮಾಚಾರ್ಯರು ಯೋಗಾಭ್ಯಾಸ ಸಾಧಕರು.

ರಾಜ ಮನ್ಮಥನಾಮ ಸಂವತ್ಸರದಲ್ಲಿ (೧೮೯೭ರಲ್ಲಿ) ಹುಟ್ಟಿದ. ಚಿಕ್ಕತಾತ ವಿದ್ವಾನ್‌ರಾಜಗೋಪಾಲಾಚಾರ್ಯರು ಕೂಸನ್ನು ನೋಡಲು ದಯಮಾಡಿಸಿದರು. ತಮ್ಮ ಕಡೆಯ ತಮ್ಮನಾದ ಶ್ರೀರಂಗಾಚಾರ್ಯರನ್ನು ಕರೆದರು. “ಶ್ರೀರಂಗ, ನೋಡೋ! ಚಂದ್ರನಂತೆ ಹುಟ್ಟಿರುವ ಈ ಮಗುವನ್ನು ದತ್ತು ಮಾಡಿಕೋ. ಮಕ್ಕಳಿಲ್ಲವೆಂಬ ದುಃಖವನ್ನು ಬಿಡು. ‘ರಾಜಾ’ ಎಂದು ಹೆಸರಿಡು. ಇದೇ ನಿನ್ನ ಮನೆಯ ದೀಪ ಅಂದುಕೋ” ಅಂದರು.

ರಾಜ ದೊಡ್ಡವನಾದ ಮೇಲೆ ತಿರುಮಲೆ ತಾತಾಚಾರ್ಯ ಶರ್ಮ ಆದ; ತಿ. ತಾ. ಶರ್ಮ ಆದ. ನಾಮಕರಣ ಸಮಯದಲ್ಲಿಟ್ಟ ಹೆಸರು ‘ಲಕ್ಷ್ಮೀಕುಮಾರ ತಾತಾಚಾರ್ಯ’ ರೂಢಿಗೆ ಬರದೆ ಉಳಿಯಿತು.

ಮಾತೃಭಕ್ತ, ದೈವಭಕ್ತ

ಶರ್ಮರ ನಿತ್ಯಜೀವನದಲ್ಲಿ ನಡೆನುಡಿಗಳಲ್ಲಿ ಕಂಡು ಬಂದ ಆದರ್ಶ ಅವರ ಬಾಲ್ಯಜೀವನದಲ್ಲಿಯೇ ಮೊಳಕೆಯೊಡೆದಿತ್ತು. ಅವರು ಚಿಕ್ಕಬಳ್ಳಾಪುರದಲ್ಲಿ ಹುಟ್ಟಿ ಬೆಳೆದ ‘ಪೆದ್ದಿಲ್ಲು’ ತಿರುಮಾಳಿಗೆ (ದೊಡ್ಡ ಮನೆ) ಅವರಿಗೆ ಮೊಟ್ಟ ಮೊದಲ ಪಾಠಶಾಲೆಯಾಯಿತು. ಅಲ್ಲಿ ಅವರು ತಮ್ಮ ಹಿರಿಯರ ಆಚರಣೆಯನ್ನು ಗಮನಿಸಿ ತಮ್ಮ ಜೀವನವನ್ನು ರೂಪಿಸಿಕೊಂಡರು.

ದೊಡ್ಡ ತಾತ ಪುರಾಣಂ ರಾಮಾಚಾರ್ಯರು ತಮ್ಮ ತಾಯಿಯಲ್ಲಿ ಅಪಾರ ಭಕ್ತಿಯುಳ್ಳವರು; ಮಾತೃಭಕ್ತರು, ಬಾಲಕ ಶರ್ಮ ಅವರಂತೆ ಮಾತೃಭಕ್ತನಾದ.

ಬಾಲಕ ಶರ್ಮ ದೈವಭಕ್ತ. ಆಚಾರ ವಿಚಾರಗಳಲ್ಲಿ ಶ್ರದ್ಧೆ, ನಿಷ್ಠೆಗಳುಳ್ಳವನು. ಎಂಟು ವರ್ಷಕ್ಕೆಲ್ಲ ಉಪನಯನವಾಯಿತು. ದೇವರ ಸೇವೆಯನ್ನು ಹತ್ತಿರದಿಂದ ಮಾಡುವ ಅವಕಾಶ ಉಂಟಾಯಿತು.

ಚಿಕ್ಕಬಳ್ಳಾಪುರದ ಹತ್ತಿರವಿರುವ ರಂಗಸ್ಥಳವೆಂಬುದು ಒಂದು ಪುಣ್ಯಕ್ಷೇತ್ರ. ಆ ಪುಣ್ಯಕ್ಷೇತ್ರದ ಸ್ವಾಮಿ ರಂಗಧಾಮ. ತಿ. ತಾ. ಶರ್ಮ ಬ್ರಹ್ಮಚಾರಿಯಾಗಿದ್ದುದರಿಂದ ದೇವರ ಘಂಟೆ ಬಾರಿಸುವ, ದೇವರ ಮುಂದೆ ಬೆಳ್ಳಿಯ ಕೋಲು ಹಿಡಿದು ಹೋಗುವ ಅವಕಾಶ ಪಡೆದುಕೊಂಡ. ಶನಿವಾರ, ಭಾನುವಾರಗಳಲ್ಲಿ ತಪ್ಪದೆ ರಂಗಸ್ಥಳಕ್ಕೆ ಹೋಗಿ ಸೇವೆ ಸಲ್ಲಿಸುತ್ತಿದ್ದ. ಆ ಸಮಯದಲ್ಲಿ ಕಲ್ಯಾಣಿಯಲ್ಲಿ ಬಟ್ಟೆ ಒಗೆದು ಒಣಗಿ ಹಾಕಿ, ಸ್ನಾನ ಮಾಡಿ ಮಡಿಯುಟ್ಟು, ನಾಮಧಾರಣೆ ಮಾಡಿ, ‘ಘುಷ್ಯತೇ ಯಸ್ಯ ನಗರೇ ರಂಗಯಾತ್ರಾ ದಿನೇ ದಿನೇ’ ಅಂದರೆ ‘ಪ್ರತಿದಿನವೂ ರಂಗಯಾತ್ರೆಯನ್ನು ಮಾಡುತ್ತೇನೆ’ ಎಂದು, ‘ಮುಕುಂದ ಮಾಲಾ’ ಶ್ಲೋಕವನ್ನು ಹೇಳುತ್ತ ದೇವರ ದರ್ಶನ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ.

ಪ್ರತಿಭಾವಂತ ಬಾಲಕ

ಶರ್ಮ ಹುಟ್ಟಿ ಬೆಳೆದ ‘ಪೆದ್ದಿಲ್ಲು’ ಪ್ರಾಚೀನ ಕಾಲದ ಗುರುಕುಲವಿದ್ದಂತೆ. ಅಲ್ಲಿ ಯಾವಾಗಲೂ ಸಂಸ್ಕೃತದ ಪುರಾಣ, ಕಾವ್ಯ, ಶಾಸ್ತ್ರ ಪಾಠಗಳು ನಡೆಯುತ್ತಿರುವುವು. ವಿದ್ವಾಂಸರುಗಳು ಶಾಸ್ತ್ರಾರ್ಥ ಮಾಡುತ್ತಿರುವವರು. ಪುರಾಣಂ ರಾಮಾಚಾರ್ಯರು ಚಿಕ್ಕಬಳ್ಳಾಪುರದ ಪೇಟೆ ಚೌಕದಲ್ಲಿ ಪುರಾಣ ಪೀಠದಲ್ಲಿ ಕುಳಿತು ರಾಮಾಯಣ ಪುರಾಣ ಹೇಳುತ್ತಿರುವವರು. ಬಾಲಕ ಶರ್ಮನ ತೀಕ್ಷ್ಣ ಕಣ್ಣುಗಳು ಇವುಗಳನ್ನೆಲ್ಲ ನೋಡುತ್ತಿರುವುವು; ಚುರುಕು ಕಿವಿಗಳು ಕೇಳುತ್ತಿರುವುವು; ಸೂಕ್ಷ್ಮ ಬುದ್ಧಿ ಗ್ರಹಿಸುತ್ತಿರುವುದು. ಆಗಲೆ ಅವನಿಗೆ ಬಾಲರಾಮಾಯಣ ಬಾಯಿಪಾಠವಾಗಿತ್ತು. ಬೇಕಾದಷ್ಟು ಸಂಸ್ಕೃತ ಶ್ಲೋಕಗಳು, ತೆಲುಗು ಶತಕಗಳು ನಾಲಗೆಯ ಮೇಲೆ ಲೀಲಾಜಾಲವಾಗಿ ನಲಿದಾಡುತ್ತಿದ್ದವು.

ಬಾಲಕ ಶರ್ಮನಿಗೆ ತನ್ನ ಪ್ರತಿಭೆಯನ್ನು ತೋರಿಸುವ ಅವಕಾಶ ತಾನಾಗಿಯೇ ಒದಗಿ ಬಂತು. ಅವನು ತನ್ನ ದತ್ತು ತಾಯಿ-ತಂದೆಗಳೊಡನೆ ಗೌರೀಬಿದನೂರಿನಿಂದ ಬೆಂಗಳೂರಿಗೆ ರೈಲು ಪ್ರಯಾಣ ಮಾಡುತ್ತಿದ್ದ. ಕಿಟಕಿಯ ಬಳಿ ಕುಳಿತು ಪ್ರಕೃತಿ ಸೌಂದರ್ಯವನ್ನು ನೋಡಿ ಆನಂದಿಸುತ್ತ ನೆನಪಿಗೆ ಬಂದ ಸಂಸ್ಕೃತ, ತೆಲುಗು ಪದ್ಯಗಳನ್ನು ಹೇಳಿಕೊಳ್ಳುತ್ತಿದ್ದ. ಪೋತನಾಮಾತ್ಯನೆಂಬ ತೆಲುಗು ಕವಿಯ ಭಾಗವತದಿಂದ ಅವನು ಹೇಳಿದ ಪದ್ಯಗಳನ್ನು ಕೇಳಿ ಅಲ್ಲಿದ್ದ ಶೆಟ್ಟರೊಬ್ಬರಿಗೆ ತುಂಬ ಸಂತೋಷವಾಯಿತು. ಅವನಿಂದ ಅನೇಕ ಪದ್ಯಗಳನ್ನು ಹೇಳಿಸಿ ಕೇಳಿ “ಇಂತಹ ಮಗನನ್ನು ಪಡೆದ ತಂದೆ ತಾಯಿ ಧನ್ಯರು” ಎಂದರು. ಒಂದು ಜೊತೆ ಜರತಾರಿ ಪಂಚೆ, ಜರತಾರಿ ಶಲ್ಯ, ಬೆಳ್ಳಿಯ ಪಂಚಪಾತ್ರೆ ಉದ್ಧರಣೆಗಳನ್ನು ಹಣ್ಣುಗಳೊಡನೆ ಇಟ್ಟು ಒಪ್ಪಿಸಿದರು.

ಬಾಲಕ ಶರ್ಮನ ಶಾಲಾ ವಿದ್ಯಾಭ್ಯಾಸ ಗೌರೀಬಿದನೂರು ತಾಲ್ಲೂಕಿನಲ್ಲಿರುವ ವಾಟದ ಹೊಸಹಳ್ಳಿಯ ಪಾಠಶಾಲೆಯಲ್ಲಿ ಪ್ರಾರಂಭವಾಯಿತು. ದತ್ತು ತಂದೆಯೇ ಅವನ ಮೊದಲ ಶಾಲಾ ಗುರು. ಊರುನಲ್ಲಿದ್ದ ಬಸವನಗುಡಿಯೇ ಪಾಠಶಾಲಾ ಕಟ್ಟಡ. ಪಾಠಶಾಲೆಯಲ್ಲಿ ನಾಲ್ಕೇ ತರಗತಿಗಳು. ಒಟ್ಟು ಹದಿನೈದು ವಿದ್ಯಾರ್ಥಿಗಳು. ನಾಲ್ಕನೆಯ ತರಗತಿಗೆ ಒಬ್ಬನೇ ಒಬ್ಬ ವಿದ್ಯಾರ್ಥಿ. ಆ ವಿದ್ಯಾರ್ಥಿ ತಿ. ತಾ. ಶರ್ಮ. ಮರಳಲ್ಲಿ ಅಕ್ಷರ ತಿದ್ದಿಸುವ ಕನಿಷ್ಠ ತರಗತಿಗಳಿಗೆ ಶರ್ಮನೇ ಗುರು. ಬಾಲಕನಿಗೆ ಇಂಗ್ಲಿಷ್‌ಕಲಿಯಬೇಕೆಂದು ಬಯಕೆ ಹುಟ್ಟಿತು. ಚಿಕ್ಕಬಳ್ಳಾಪುರದ ಹೈಸ್ಕೂಲು ವಿದ್ಯಾರ್ಥಿಯಾಗಿದ್ದ ನಾರಾಯಣರಾಯರನ್ನು ಕೇಳಿಕೊಂಡ. ‘ನೀವು ನನಗೆ ಸ್ವಲ್ಪ ಇಂಗ್ಲಿಷ್‌ಹೇಳಿಕೊಡಬೇಕು’ ಎಂದು. ನಾರಾಯಣರಾಯರು ಇಂಗ್ಲಿಷ್‌ಅಕ್ಷರಾಭ್ಯಾಸವನ್ನು ಕೂಡಲೆ ಪ್ರಾರಂಭಿಸಿಯೇ ಬಿಟ್ಟರು. ಬಾಲಕನ ಚುರುಕುತನ ನಾರಾಯಣರಾಯರನ್ನು ಬೆರಗುಗೊಳಿಸಿತು. ಆತನ ಸಲಹೆಯಂತೆ ಶರ್ಮನ ದತ್ತು ತಂದೆ ಹುಡುಗನನ್ನು ಚಿಕ್ಕಬಳ್ಳಾಪುರದ ಎ.ವಿ. ಸ್ಕೂಲಿಗೆ ಸೇರಿಸಿದರು.

ಆತ್ಮಾಭಿಮಾನಿ

ಶರ್ಮ ಇನ್ನುಳಿದ ಎರಡು ವರ್ಷಗಳ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಹಾಸನದಲ್ಲಿ ಮುಂದುವರಿಸಿ ಓದು ಮುಗಿಸಿದ. ಆ ಸಮಯದಲ್ಲಿ ಒಂದು ಸ್ವಾರಸ್ಯ ಘಟನೆ ನಡೆಯಿತು. ಒಂದು ದಿನ ಸಂಸ್ಕೃತ ಪಂಡಿತರು ಶರ್ಮನನ್ನು ‘ದಡ್ಡ’ ಎಂದರು. ಹುಡುಗ ಅವಮಾನವನ್ನು ತಡೆಯಲಾರದೆ ಹೋದ. ಮುಖ ಕೆಂಪಾಯಿತು. ಕಣ್ಣುಗಳು ಉರಿಗೆಂಡಗಳಾದವು. ಆತ್ಮಾಭಿಮಾನ ಕೆರಳಿತು. ತರಗತಿಯಿಂದ ಹೊರಟು ಕೋಪದಿಂದ ಬುಸುಗುಟ್ಟುತ್ತ ಮನೆ ಸೇರಿದ. “ಇವರು ಹೇಳುವ ಪಾಠಗಳನ್ನೆಲ್ಲ ನಾನು ಹಿಂದೆಯೇ ಓದಿದ್ದೇನೆ. ಇನ್ನು ತರಗತಿಗೆ ಕಾಲಿಡುವುದಿಲ್ಲ. ದೊಡ್ಡ ನಮಸ್ಕಾರ ಹಾಕಿ ಬಂದೆ!” ಎಂದ. ಶರ್ಮ ನುಡಿಯಂತೆ ನಡೆದುಕೊಳ್ಳುವ ಛಲಗಾರ. ಆತ ಮತ್ತೆ ಆ ತರಗತಿಗೆ ಕಾಲಿಡಲಿಲ್ಲ.

ಶರ್ಮ ಹಾಸನದಲ್ಲಿ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯನ್ನು ಮುಗಿಸಿ ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾದರು. ಅಲ್ಲಿ ಅವರು ಮಹಾಮೇಧಾವಿ ಪ್ರಾಧ್ಯಾಪಕರುಗಳಾದ ಎನ್‌.ಎಸ್‌. ಸುಬ್ಬರಾವ್‌ಮತ್ತು ಸಿ. ಆರ್. ರೆಡ್ಡಿ ಅವರುಗಳ ಅಚ್ಚುಮೆಚ್ಚಿನ ಶಿಷ್ಯರಾದರು. ಸುಬ್ಬರಾಯರು ಕನ್ನಡದ ಅಭಿಮಾನಿ, ರೆಡ್ಡಿಯವರು ತೆಲುಗು ಅಭಿಮಾನಿ. ಶರ್ಮರು ನಾಟಕದಲ್ಲಿ ಅಭಿನಯಿಸುವುದನ್ನು ಕಂಡು ಇಬ್ಬರೂ ಮೆಚ್ಚಿದರು. ಇವರಿಬ್ಬರ ಶಿಷ್ಯ ವಾತ್ಸಲ್ಯ ಅಪಾರವಾದದ್ದು ಸಿ.ಆರ್. ರೆಡ್ಡಿಯವರು ಶರ್ಮರನ್ನು ಮಕ್ಕಳಿಗಾಗಿ ನಡೆಸುವ ಪತ್ರಿಕಾವೃತ್ತಿಯಲ್ಲಿ ಶಿಕ್ಷಣ ಪಡೆದು ಬರಲು ಜಪಾನಿಗೆ ಕಳಿಸಬೇಕೆಂದು ಪ್ರಯತ್ನ ಪಟ್ಟರು. ಸಾಧ್ಯವಾಗಲಿಲ್ಲ.

ಪತ್ರಿಕಾಲೇಖಕನೆಂಬ ಪ್ರಜ್ಞೆ

ಶರ್ಮರು ಕಾಲೇಜಿನಲ್ಲಿರುವಾಗಲೇ ಪತ್ರಿಕಾಲೇಖಕರಾಗುವ ಪ್ರತಿಭೆ ಪಡೆದಿದ್ದರು. ಅದು ಪ್ರದರ್ಶಿತವಾಗಲು ತಾನಾಗಿ ಒಂದು ಅವಕಾಶ ಒದಗಿ ಬಂತು. ಒಂದು ದಿನ ಶರ್ಮರ ಕೈಗೆ ‘ಆಕಿಂಡ್ರೇನ್‌’ ಎಂಬ ಹೆಸರಿನ ಒಂದು ಕನ್ನಡ ಪುಸ್ತಕ ಸಿಕ್ಕಿತು. ಅದನ್ನು ಬರೆದವರ ಹೆಸರು ಅಯ್ಯಾಟ್ನಾಕಿರ್ಸ್‌. ಎರಡೂ ವಿಚಿತ್ರವೇ. ಲೇಖಕರು ಬೇರೆ ಭಾಷಣಗಳಿಂದ ಕನ್ನಡಕ್ಕೆ ಇಳಿಸುಗವಾಗ ಭಾಷಾಂತರ ಹೇಗಿರಬೇಕು ಎಂಬ ವಿಷಯದಲ್ಲಿ ಕನ್ನಡ ಲೇಖಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹುಚ್ಚಾಪಟ್ಟೆ ಲೇವಡಿ ಮಾಡಿದ್ದರು. ಶರ್ಮರ ಚುರುಕು ಬುದ್ಧಿಗೆ ಕಸರತ್ತು ಸಿಕ್ಕಿತು. ಲೇಖಕ ಕಿಲಾಡಿ ಅನ್ನಿಸಿತು. ಲೇಖಕರ ಹೆಸರಿನ ಇಂಗ್ಲಿಷ್‌ಅಕ್ಷರಗಳನ್ನು ಹಿಂದು ಮುಂದಾಗಿ ಓದಿದರು. ಅದು ಶ್ರೀಕಂಠಯ್ಯ ಎಂದು ಗೊತ್ತಾಯಿತು. ಶರ್ಮ ‘ಆಕಿಂಡ್ರೇನ್‌’ ಪುಸ್ತಕದ ದೃಷ್ಟಿ, ಟೀಕೆಯ ಧಾಟಿ ಕುರಿತ ಒಂದು ಪ್ರಬಂಧವನ್ನು ಬರೆದರು. ‘ಮೈಸೂರಿನ ತಾತಯ್ಯ’ ಎಂದು ಪ್ರಸಿದ್ಧರಾದ ಪತ್ರಿಕಾಕರ್ತ ಎಂ. ವೆಂಕಟಕೃಷ್ಣಯ್ಯನವರಲ್ಲಿಗೆ ಓಡಿದರು. ತಮ್ಮ ಪ್ರಬಂಧವನ್ನು ‘ಸಂಪದಭ್ಯುದಯ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಅವರನ್ನು ಪ್ರಾರ್ಥಿಸಿದರು. ತಾತಯ್ಯ ಓದಿಸಿ ಕೇಳಿ ಸಂತೋಷಪಟ್ಟರು. ಶರ್ಮರಲ್ಲಿ ಪತ್ರಿಕಾ ಲೇಖಕನಾಗುವ ಚೇತನವಿರುವುದನ್ನು ಕಂಡುಕೊಂಡರು. ಪ್ರಬಂಧವನ್ನು ಪ್ರಕಟಿಸಿದರು. ಶರ್ಮರ ಮುಖ ಊರಗಲ ಹಿಗ್ಗಿತು. ಪ್ರಬಂಧವನ್ನು ಎನ್‌.ಎಸ್‌. ಸುಬ್ಬರಾಯರು ಓದಿದರು. “ನಮ್ಮ ಕಾಲೇಜಿನಲ್ಲಿ ನಿನ್ನಂತಹ ಪತ್ರಿಕಾ ಲೇಖಕನಿರುವುದು ನಮ್ಮ ಹೆಮ್ಮೆ. ಕಾಲೇಜಿನ ಓದನ್ನೆಲ್ಲ ಮುಗಿಸಿದ ಮೇಲೆ ನೀನೇನು ಬೇಕಾದರೂ ಬರೆ. ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವವರೆಗೂ ಇನ್ನು ಮೇಲೆ ಇಂತಹ ಕೆಲಸ ಮಾಡಬೇಡ. ಎಚ್ಚರಿಕೆ; ಹೋಗು” ಎಂದು ಕಿವಿ ಹಿಂಡಿ ಬುದ್ಧಿ ಹೇಳಿ ಕಳಿಸಿದರು. ಶರ್ಮರಿಗೆ ತಾವು ಪತ್ರಿಕಾ ಲೇಖಕರಾಗುವ ಶಕ್ತಿಯಿದೆಯೆಂದು ಮನದಟ್ಟಾಯಿತು.

‘ನಮ್ಮ ಕಾಲೇಜಿನಲ್ಲಿ ನಿನ್ನಂತಹ ಪತ್ರಿಕಾ ಲೇಖಕನಿರುವುದು ನಮ್ಮ ಹೆಮ್ಮೆ’

ಶರ್ಮರು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸ್ವದೇಶಾಭಿಮಾನ ತಳೆದಿದ್ದರು. ಒಂದು ದಿನ ಗೆಳೆಯರು ಸೇರಿ ಮಾತನಾಡುತ್ತಿದ್ದಾಗ, ‘ನಮ್ಮ ದೇಶದವರು ಭಾಷೆ-ವೇಷ, ನೀತಿ-ನಡತೆ ಎಲ್ಲದರಲ್ಲಿಯೂ ಪಶ್ಚಿಮವನ್ನು ಅನುಕರಿಸುತ್ತಿದ್ದಾರೆ’ ಎಂದು ಒಬ್ಬರು ಹೇಳಿದರು. ಗೆಳೆಯರು ‘ಪೂರ್ವಮುಖಿ’ ಎಂಬ ಗುಂಪು ಕಟ್ಟಿದರು. ನಮ್ಮ ಸಂಸ್ಕೃತಿ, ಇತಿಹಾಸ, ಧರ್ಮ, ಕಲೆ, ಸಾಹಿತ್ಯ ಕುರಿತು ನಾನಾ ಗ್ರಂಥಗಳನ್ನು ಓದುವುದು, ಬರೆಯುವುದು, ವಾರವಾರವೂ ಒಂದು ಕಡೆ ಸೇರಿ ಚರ್ಚಿಸುವುದು ಪ್ರಾರಂಭವಾಯಿತು. ‘ಪೂರ್ವಮುಖಿ’ಗಾಗಿ ತಿ.ತಾ. ಶರ್ಮರು ತೆಲುಗು, ಕನ್ನಡ, ಇಂಗ್ಲಿಷ್‌ಗ್ರಂಥಗಳನ್ನು ಓದಿದರು. ಪಾಂಡಿತ್ಯ ಸಂಪಾದಿಸಿದರು. ಬೇರೆ ಭಾಷೆಗಳಿಂದ ಕನ್ನಡ ಭಾಷೆಗೆ ಭಾಷಾಂತರ ಮಾಡಿ ಉತ್ತಮ ಭಾಷಾಂತಕಾರರು ಅನ್ನಿಸಿಕೊಂಡರು. ಅಧ್ಯಯನ ವೇದಿಕೆಯನ್ನು ಏರ್ಪಾಡು ಮಾಡಿ ಜ್ಞಾನ ಸಂಪಾದನೆ ಮಾಡಿಕೊಂಡರು. ಈ ಅನುಭವ ಮುಂದೆ ಅವರು ‘ರಾಷ್ಟ್ರೋತ್ಥಾನ ಅಧ್ಯಯನ ಮತ್ತು ಸಂಶೋಧನಾ ವೇದಿ’ಯಂಥ ಅನೇಕ ಅಧ್ಯಯನ ವೇದಿಕೆಗಳನ್ನು ನಡೆಸುವುದಕ್ಕೆ ಪ್ರೇರಣೆ ನೀಡಿತು.

ಶರ್ಮರ ಕಾಲೇಜು ವಿದ್ಯಾಭ್ಯಾಸ ಮೊದಲನೆಯ ಬಿ.ಎ. ತರಗತಿಯ ವ್ಯಾಸಂಗಕ್ಕೆ ಮೊಟಕಾಯಿತು. ಮೈಸೂರಿನಿಂದ ಬೆಂಗಳೂರಿಗೆ ಹಿಂದಿರುಗಿದರು.

ಅಪರೂಪದ ಸತಿಪತಿಗಳು

ಶರ್ಮರು ೧೯೧೪ ರಲ್ಲಿ ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದರು. ಹೈಸ್ಕೂಲ್‌ವಿದ್ಯಾರ್ಥಿ. ಆಗಲೇ ಅವರಿಗೆ ಮದುವೆಯಾಗಿ ಹೋಯಿತು.

ತಿರುಮಲೆ ರಾಜಮ್ಮನವರು ತಮ್ಮ ಗಂಡನಂತೆಯೇ ಪ್ರಸಿದ್ಧರಾದರು. ‘ಭಾರತಿ’ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಿತರಾದರು. ‘ತಪಸ್ವಿನಿ’, ‘ಮಹಸತಿ’ಗಳಂಥ ಉತ್ತಮ ನಾಟಕಗಳನ್ನೂ ರಾಷ್ಟ್ರಭಕ್ತಿಯ ಕವಿತೆಗಳನ್ನೂ ರಚಿಸಿ ಒಳ್ಳೆಯ ಸಾಹಿತಿ ಎಂದು ಕೀರ್ತಿ ಪಡೆದರು. ಸೊಗಸಾಗಿ ವೀಣೆಯನ್ನೂ ನುಡಿಸುತ್ತಿದ್ದರು. ತಿ.ತಾ. ಶರ್ಮರು ಇತಿಹಾಸ ಪ್ರಾಚೀನ ಲಿಪಿ ಸಂಶೋಧನ ವಿದ್ವಾಂಸರು. ರಾಜಮ್ಮನವರು ಸಂಗೀತ-ಸಾಹಿತ್ಯಗಳಲ್ಲಿ ವಿದ್ವಾಂಸರು. ಜೊತೆ ಜೊತೆ ಸಾಹಿತ್ಯ ಸೇವೆ, ದೇಶಸೇವೆಗಳನ್ನು ಮಾಡಿ ನಾಡಿಗೆ ಮಾದರಿಯಾಗಿದ್ದಾರೆ ದಂಪತಿಗಳು. ಇಂತಹ ಜೋಡಿ ಕನ್ನಡನಾಡಿನಲ್ಲಿ ಅಪರೂಪ.

ಕನ್ನಡದ ಅಭಿಮಾನಿ

ರಾವ್‌ಬಹದ್ದೂರ್ ಹೊಸಕೋಟೆ ಕೃಷ್ಣಶಾಸ್ತ್ರಿಗಳು ಭಾರತ ಸರ್ಕಾರದ ಪ್ರಾಚ್ಯ ವಸ್ತು ವಿಮರ್ಶೆಯ ಶಾಖೆ, ಶಿಲಾಶಸನ ವಿಭಾಗಗಳಿಗೆ ಮುಖ್ಯಾಧಿಕಾರಿಗಳು. ಅವರು ಶರ್ಮರ ಮನೆತನದ ಆಪ್ತ ಸ್ನೇಹಿತರು. ಒಂದು ದಿನ ಅವರು “ಶರ್ಮ, ನನ್ನ ಕಚೇರಿಯಲ್ಲಿ ಸಾವಿರಾರು ಶಿಲಾಶಾಸನಗಳಿವೆ. ಅವುಗಳ ಸಾಹಿತ್ಯ ಪ್ರಕಟವಾಗಬೇಕಾಗಿದೆ. ನನಗೆ ಸಂಸ್ಕೃತ, ಕನ್ನಡ, ತೆಲುಗು ಭಾಷೆಗಳನ್ನು ಬಲ್ಲ ತರುಣನೊಬ್ಬ ಬೇಕಾಗಿದೆ. ನಿನ್ನ ಚಿಕ್ಕ ತಾತಂದಿರು ವಿದ್ವಾನ್‌ರಾಜ ಗೋಪಾಲಚಾರ್ಯರು ಲೂಯಿ ರೈಸಿಗೆ ಇಂತಹ ಕೆಲಸದಲ್ಲಿ ಅಪಾರ ಸಹಾಯ ಸಹಾಯ ಮಾಡಿದರು. ಅವರ ಮೊಮ್ಮಗ ನೀನು ನನಗೆ ಸಹಾಯ ಮಾಡಬೇಕು” ಎಂದರು. ಶರ್ಮ ‘ಆಗಲಿ’ ಎಂದು ಮದರಾಸಿಗೆ ಹೋಗಿ ಕೆಲಸಕ್ಕೆ ಸೇರಿಕೊಂಡರು.

ಶರ್ಮರು ಮದರಾಸಿನಲ್ಲಿರುವಾಗಲೆ ‘ಶಿಲಾ ಶಾಸನಗಳಲ್ಲಿ ಕಂಡುಬರುವ ಕೆಲವು ಕನ್ನಡ ಕವಿಗಳು’ ಎಂಬ ಪ್ರಬಂಧವನ್ನು ಬರೆದರು. ಅದಕ್ಕೆ ಕೃಷ್ಣಶಾಸ್ತ್ರಿಗಳೇ ಮುನ್ನುಡಿ ಬರೆದು ಪ್ರಕಟಿಸಬಹುದೆಂದು ಅಭಿಪ್ರಾಯ ಸೂಚಿಸಿ ದೆಹಲಿಗೆ ಕಳಿಸಿದರು. ಅಲ್ಲಿಯ ಮುಖ್ಯ ಅಧಿಕಾರಿಗಳಾದ ಸರ್ ಜಾನ್‌ಮಾರ್ಷಲ್‌ಸಾಹೇಬರು. ‘ಈ ಪ್ರಬಂಧ ಇಂಗ್ಲಿಷಿಗೆ ಭಾಷಾಂತರವಾದರೆ ಮಾತ್ರ ಪ್ರಕಟಣೆ ಸಾಧ್ಯ’ ಎಂದು ಹೇಳಿ ಹಿಂದಿರುಗಿಸಿದರು. ‘ಭಾರತ ಸರ್ಕಾರ ಈವರೆಗೆ ದೇಶಭಾಷೆಗಳಲ್ಲಿ ಇಂತಹ ಪ್ರಬಂಧಗಳನ್ನು ಪ್ರಕಟಿಸದೆ ಇದ್ದರೆ ಇನ್ನು ಮೇಲಾದರೂ ಪ್ರಕಟಿಸಲಿ. ಒಂದು ವೇಳೆ ಇದು ಸಾಧ್ಯವಿಲ್ಲವೆಂದು ಅವರು ಹೇಳಿದರೆ ನನಗೇನು ದುಃಖವಿಲ್ಲ’ ಎಂದು ಶರ್ಮ ತೆಪ್ಪಗಾದರು. ಭಾಷಾಂತರವಾದರೆ ಇಂತಹ ದೇಶಭಾಷೆಗಳ ಪ್ರಬಂಧಗಳು ಕೆದುವುದೆಂದು ಅವರ ಅಭಿಪ್ರಾಯ. ಮೂಲ ಪದ್ಯಗಳು ಅರ್ಥಹೀನವಾಗಬಹುದೆಂದು ಹೆದರಿಕೆ. ಕೆಲವು ತಿಂಗಳುಗಳ ಮೇಲೆ ಸರ್ ಜಾನ್‌ಮಾರ್ಷಲ್‌ಸಾಹೇಬರು ಅಭಿಪ್ರಾಯ ಬದಲಾಯಿಸಿದರು. ಶರ್ಮರ ಪ್ರಬಂಧ ಕನ್ನಡದಲ್ಲಿ ಪ್ರಕಟವಾಗಬಹುದೆಂದು ತೀರ್ಮಾನವಾಯಿತು. ದೇಶಭಾಷೆಗಳಲ್ಲಿಯೂ ಪ್ರಬಂಧಗಳು ಪ್ರಕಟವಾಗುವುದಕ್ಕೆ ಶರ್ಮರ ಪ್ರಬಂಧ ಮಾರ್ಗದರ್ಶನ ನೀಡಿತು. ಕನ್ನಡಕ್ಕೆ ದೊರೆತ ಗೌರವ, ಅನಂತರ ಮಿಕ್ಕ ದೇಶ ಭಾಷೆಗಳಿಗೂ ದೊರೆಯಿತು.

ಅಹಮದಾಬಾದ್‌ ಕಾಂಗ್ರೆಸ್‌ ಅಧಿವೇಶನ

ಬ್ರಿಟಿಷರು ಆಳುತ್ತಿದ್ದ ಭಾರತ ೧೯೨೧ರ ಹೊತ್ತಿಗೆ ಗಾಂಧೀ ದೇಶವಾಗಿ ಹೋಗಿತ್ತು. ಆ ವರ್ಷ ಅಹಮದಾಬಾದಿನಲ್ಲಿ ಕಾಂಗ್ರೆಸ್‌ಮಹಾ ಸಮ್ಮೇಳನ ಕೂಡುವುದಿತ್ತು. ಅದರ ಜೊತೆಗೆ ಅಖಿಲ ಭಾರತ ಸಂಗೀತ ಸಮ್ಮೇಳನವೂ ಆಗುವುದಿತ್ತು. ಒಂದು ದಿನ ತಿರುಮಲೆ ರಾಜಮ್ಮನವರು ಶರ್ಮರಿಗೆ ಒಂದು ಕಾಗದ ತೋರಿಸಿ ಅಂದರು, “ಅಹಮದಾಬಾದಿನಲ್ಲಿ ಅಖಿಲ ಭಾರತ ಸಂಗೀತ ಸಮ್ಮೇಳನವಂತೆ. ನನಗೆ ಆಹ್ವಾನ ಬಂದಿದೆ. ಇದೊಂದು ಮಹದವಕಾಶ. ಅಹಮದಾಬಾದಿಗೆ ಹೋಗೋಣ.” ಅದಕ್ಕೆ ಶರ್ಮ, ‘ಆಗಬಹುದು. ಯಾವ ಸಮ್ಮೇಳನವಾದರೂ ಅಲ್ಲಿ ನಡೆಯುವುದು ಕಾಂಗ್ರೆಸ್ಸೆ. ನಾನು ಸರ್ಕಾರಿ ಉದ್ಯೋಗಿ”ಎಂದರು. ತಾವು ಆ ಅಧಿವೇಶನಕ್ಕೆ ಹೋದರೆಂದು ಸರ್ಕಾರ ತಮ್ಮನ್ನು ಕೆಲಸದಿಂದ ತೆಗೆಯಬಹುದೆಂದೂ ಹೇಳಿದರು. ಅದಕ್ಕೆ ರಾಜಮ್ಮನವರು, ‘ಇಷ್ಟೇ ತಾನೆ; ಕೆಲಸ ಹೋದರೆ ಹೋಗಲಿ, ನಡೆಯಿರಿ” ಎಂದು  ಹೇಳಿದರು. ದಂಪತಿಗಳು ಅಹಮದಾಬಾದ್‌ಕಾಂಗ್ರೆಸ್‌ಸಮ್ಮೇಳನಕ್ಕೆ ಹೊರಟೇಬಿಟ್ಟರು.

ಡಿಸೆಂಬರ್ ತಿಂಗಳ ಕಡೆಯ ವಾರದಲ್ಲಿ ಸಮ್ಮೇಳನ ನಡೆಯಿತು. ಗಾಂಧಿಜೀ ಮೊದಲುಗೊಂಡು ಭಾರತದ ಮಹಾನಾಯಕರೆಲ್ಲರೂ ಅಲ್ಲಿದ್ದರು. ಒಂದು ಮಧ್ಯಾಹ್ನ ಸಂಗೀತ ಸಮ್ಮೇಳನ ಮುಗಿಸಿಕೊಂಡು ಕಾಂಗ್ರೆಸ್‌ಸಮ್ಮೇಳನಕ್ಕೆ ಶರ್ಮ ದಂಪತಿಗಳು ಹೋಗುತ್ತಿದ್ದಾರೆ. ಹಿಂದಿನಿಂದ ಒಂದು ದೆವ್ವದಂತಹ ಮೋಟಾರು ಅತಿ ವೇಗವಾಗಿ ಬರುತ್ತಿದೆ. ಇನ್ನೇನು, ಅದು ಶರ್ಮ ದಂಪತಿಗಳ ಮೇಲೆ ಹರಿಯಬೇಕು ! ಅಷ್ಟರಲ್ಲಿ ಎದುರಿಗೆ ಬರುತ್ತಿದ್ದ ಅಜಾನುಬಾಹು ಸಂನ್ಯಾಸಿಯೊಬ್ಬರು ಶರ್ಮ ದಂಪತಿಗಳನ್ನು ಬಾಚಿ ಕೂಡಲೇ ರಸ್ತೆಯ ಪಕ್ಕಕ್ಕೆ ನಿಲ್ಲಿಸಿದರು. ಸ್ವಾಮೀಜಿ, ‘ನೀವು ಯಾರು? ಈ ತಂಗಿ ಯಾರು?’ ಎಂದು ಮಮಜತೆಯಿಂದ ಕೇಳಿದರು. ಶರ್ಮ, ‘ಈಕೆ ನನ್ನ ಪತ್ನಿ. ನಾವು ಮೈಸೂರಿನವರು. ಬೆಂಗಳೂರು ನಿವಾಸಿಗಳು’ ಎಂದರು. ಸ್ವಾಮೀಜಿ ಅವರಿಬ್ಬರನ್ನು ಹರಸಿದರು. ಶರ್ಮ ದಂಪತಿಗಳನ್ನು ಕಾಪಾಡಿದ ಸಂನ್ಯಾಸಿ ಹಿಂದುಗಳ ಸಂಘಟನೆಗಾಗಿ ಜೀವ ತೇಯ್ದ ಸ್ವಾಮಿ ಶ್ರದ್ಧಾನಂದರು. ಶರ್ಮರು ಮತ್ತು ರಾಜಮ್ಮನವರು ಗಾಂಧಿಜೀಯ ದರ್ಶನ ಮಾಡಿದರು. ಗಾಂಧಿಜೀ ರಾಜಮ್ಮನವರ ವೀಣಾವಾದನ ಕೇಳಿ ಸಂತೋಷಪಟ್ಟರು.

ಸರ್ಕಾರಿ ನೌಕರಿ ಬಿಟ್ಟರು

ಸತಿಪತಿಗಳ ಮೇಲೆ ಗಾಂಧೀ ಪ್ರಭಾವ ಬಹಳವಾಗಿತ್ತು. ತಾವು ಕೆಲಸದಲ್ಲಿರಬೇಕೋ ಅಥವಾ ಕೆಲಸ ಬಿಟ್ಟು ದೇಶಭಕ್ತರಾಗಿ ಸ್ವತಂತ್ರವಾಗಿ ಕೆಲಸ ಮಾಡಬೇಕೋ ಎಂದು ಶರ್ಮ ಹಗಲೂ ರಾತ್ರಿ ಯೋಚಿಸುತ್ತಿದ್ದರು. ಶರ್ಮ ದಂಪತಿಗಳು ಉದಕಮಂಡಲದಲ್ಲಿದ್ದಾಗ ಮಹಾ ದೇಶಭಕ್ತರಾದ ತಂಗಟೂರು ಪ್ರಕಾಶಂರವರ ದರ್ಶನವನ್ನು ಪದೇ ಪದೇ ಮಾಡುತ್ತಿದ್ದರು. ಪ್ರಕಾಶಂ ಆಂಧ್ರದವರು, ಶ್ರೀಮಂತರು, ಪ್ರಸಿದ್ಧ ವಕೀಲರು. ಗಾಂಧಿಜೀಯ ಶಿಷ್ಯರಾಗಿ ವಕೀಲ ವೃತ್ತಿ ಬಿಟ್ಟುಬಿಟ್ಟರು. ಶರ್ಮ ದಂಪತಿಗಳು ಗಾಂಧೀ ಚಳವಳಿಯಲ್ಲಿ ಸೇರಬೇಕೆಂದಿರುವ ಅಭಿಪ್ರಾಯ ಪ್ರಕಾಶಂರವರಿಗೆ ತಿಳಿಯದು. ಅವರು ರಾಜಮ್ಮನವರಿಗೆ, ‘ಅಮ್ಮಾಮಿ, ನಿನಗೆ ಸತ್ಯಾಗ್ರಹ ಕಾರ್ಯರಂಗ ಅಗತ್ಯವಿಲ್ಲ. ನೀನು ಸುಕುಮಾರಿ. ಕಲೆ ಸಾಹಿತ್ಯಗಳ ಕ್ಷೇತ್ರ ನಿನಗೆ ತಕ್ಕದ್ದು. ಅಲ್ಲಿ ನೀನು ಸಾಧನೆ ಮಾಡು. ಶರ್ಮ ನನ್ನೊಂದಿಗೆ ಬರಲಿ’ ಎಂದರು. ಪ್ರಕಾಶಂರವರ ಅಭಿಪ್ರಾಯವನ್ನು ಶರ್ಮ ದಂಪತಿಗಳು ಒಪ್ಪಿದರು. ಶರ್ಮ ಸರ್ಕಾರದ ಕೆಲಸಕ್ಕೆ ರಾಜೀನಾಮೆ ಕೊಟ್ಟರು.

‘ಶರ್ಮರು ಬರೆಯುತ್ತಿರುವುದು’.

ವಿಶ್ವ ಕರ್ಣಾಟಕ ಸಂಪಾದಕರಾಗಿ

 

೧೯೨೪ರಲ್ಲಿ ಬೆಳಗಾಂನಲ್ಲಿ ಗಾಂಧೀಜಿಯ ಅಧ್ಯಕ್ಷತೆಯಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್‌ಮಹಾಧಿವೇಶನ ಊಡಿತು. ಈ ಮಹಾಧಿವೇಶನ ಮೊತ್ತಮೊದಲು ಕರ್ನಾಟಕದಲ್ಲಿ, ಅದೂ ಗಾಂಧೀಜಿಯ ಅಧ್ಯಕ್ಷತೆಯಲ್ಲಿ, ನಡೆಯುವುದು ಮಹಾಭಾಗ್ಯವೆಂದು ಕನ್ನಡಿಗರು ಎಣಿಸಿದರು. ಕರ್ನಾಟಕದ ಮಹಾದೇಶಭಕ್ತರೂ ಪ್ರಚಂಡ ಭಾಷಣಕಾರರೂ ಆದ ಮುದವೀಡು ಕೃಷ್ಣರಾಯರು ಶರ್ಮರ ಸಹಕಾರವನ್ನು ಕೇಳಿದರು. ಶರ್ಮರು ಮುದವೀಡು ಕೃಷ್ಣರಾಯರೊಂದಿಗೆ ಕನ್ನಡ ನಾಡಿನಲ್ಲೆಲ್ಲ ಸಂಚಾರ ಮಾಡಿದರು. ಹಣ ಸಂಗ್ರಹ ಮಾಡಿಕೊಟ್ಟರು. ‘ಕರ್ಣಾಟ ಕೈಪಿಡಿ’ಯನ್ನು ದ. ಕೃ. ಭಾರದ್ವಾಜರೊಂದಿಗೆ ಸಂಪಾದಿಸಿ ಕಾಂಗ್ರೆಸ್‌ಅಧಿವೇಶನದ ಹೊತ್ತಿಗೆ ಪ್ರಕಟಿಸಿದರು. ಅದರಲ್ಲಿ ಶರ್ಮರು ಬರೆದ ‘ಕರ್ನಾಟಕದ ಇತಿಹಾಸ’ ತುಂಬ ಜನ ಮೆಚ್ಚಿಗೆ ಪಡೆಯಿತು. ಗಾಂಧೀಜಿಯ ಕರ್ನಾಟಕ ಪ್ರವಾಸದಲ್ಲಿ ಶರ್ಮ ಅವರಿಗೆ ಭಾಷಾಂತರಕಾರರಾಗಿ ‘ಗಾಂಧೀ ಭಾಷಾಂತರಕಾರ’ರೆಂದು ಕೀರ್ತಿ ಗಳಿಸಿದರು. ಅವರು ರಾಜಾಜಿ ಭಾಷಾಂತರಕಾರರೂ ಹೌದು.

ಕೆ. ರಂಗಯ್ಯಂಗಾರ್ಯರು ತುಮಕೂರಿನಿಂದ ‘ಮೈಸೂರ್ ಕ್ರಾನಿಕಲ್‌’ ಎಂಬ ಇಂಗ್ಲಿಷ್‌ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಅವರು ಶರ್ಮರಿಗೆ ‘ಮೈಸೂರ್ ಕ್ರಾನಿಕಲ್‌’ ಪತ್ರಿಕೆಯನ್ನು, ನೀವು ನೋಡಿಕೊಳ್ಳಿ” ಎಂದರು. ಶರ್ಮರು ಹಿಂದುಮುಂದು ನೋಡದೆ ಪತ್ರಿಕೆಯ ಕಷ್ಟಸುಖಗಳನ್ನು ಆಲೋಚಿಸದೆ ತಟ್ಟನೆ “ಆಗಬಹುದು” ಎಂದು ಬಿಟ್ಟರು. ಮುನ್ನೂರು ನಾನೂರು ರೂಪಾಯಿಗಳ ಸಾಲ ಹೊತ್ತು ‘ಮೈಸೂರು ಕ್ರಾನಿಕಲ್‌’ ಪತ್ರಿಕೆಯ ಸಂಪಾದಕರಾದರು. ಅದು ಇಂಗ್ಲಿಷ್‌, ಕನ್ನಡ ಭಾಷೆಗಳಲ್ಲಿ ಪ್ರಕಟವಾಗತೊಡಗಿತು. ‘ಮೈಸೂರ್ ಕ್ರಾನಿಕಲ್‌’ ಪತ್ರಿಕೆ ಒಂದು ವರ್ಷ ನಡೆಯಿತು. ಸಾಲ ತೀರಲಿಲ್ಲ. ೧೯೨೫ ರಲ್ಲಿ ‘ವಿಶ್ವ ಕರ್ಣಾಟಕ’ ವಾರಪತ್ರಿಕೆಯಾಗಿ ಪ್ರಾರಂಭವಾಯಿತು. ಶರ್ಮರಿಗೆ ಗಾಂಧೀಜಿಯ ಆಶೀರ್ವಾದ ದೊರೆಯಿತು. ‘ವಿಶ್ವಕರ್ಣಾಟಕ’ ಗಾಂಧಿ ಪತ್ರಿಕೆಯೆಂದು ಪ್ರಾರಂಭದಿಂದಲೇ ಜನಪ್ರಿಯವಾಯಿತು. ಶರ್ಮರೆಂದರೆ ವಿಶ್ವಕರ್ಣಾಟಕ, ವಿಶ್ವಕರ್ಣಾಟಕ ಎಂದರೆ ಶರ್ಮ. ಅವರು “ನನಗೆ ಗಂಡುಮಗು ವಿಶ್ವಕರ್ಣಾಟಕ, ಹೆಣ್ಣುಮಗು ಜಯಲಕ್ಷ್ಮೀ” ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು.

‘ವಿಶ್ವಕರ್ಣಾಟಕ’ ಗಾಂಧಿ ಪತ್ರಿಕೆಯೇನೋ ಸರಿ. ಆದರೆ ಶರ್ಮರಿಗೆ ಅದರಿಂದ ಸಂಪಾದನೆ ಅಷ್ಟಕ್ಕಷ್ಟೆ. ‘ಮೈಸೂರ್ ಕ್ರಾನಿಕಲ್‌’ ಪತ್ರಿಕೆಯ ಜೊತೆಗೆ ಬಂದ ಸಾಲ ನಾನೂರು ರೂಪಾಯಿ ತೀರಿಸುವುದಕ್ಕೆ ನಾಲ್ಕು ವರ್ಷಗಳು ಬೇಕಾದವಂತೆ.ಸಾಲದ ಕಂತು, ಪತ್ರಿಕೆಯ ವೆಚ್ಚ ಕಳೆದು ತಿಂಗಳಿಗೆ ಹತ್ತು ರೂಪಾಯಿ ಮಿಗುತ್ತಿದ್ದರೆ ಹೆಚ್ಚು. ಶರ್ಮ ದಂಪತಿಗಳು ಗಾಳಿ ನೀರುಗಳನ್ನು ನಂಬಿಕೊಂಡು ಬದುಕಬೇಕಷ್ಟೆ ! ಹೀಗೆ ಕಷ್ಟಪಟ್ಟು ಶರ್ಮ ದಂಪತಿಗಳು ‘ವಿಶ್ವಕರ್ಣಾಟಕ’ವನ್ನು ಗಂಡು ಮಗುವಿನಂತೆ ಸಾಕಿದರು. ಮೂರು ವರ್ಷಗಳ ಕಾಲ. ಆ ಸಮಯದಲ್ಲಿ ಒಂದು ಸಲ ರಾಜಮ್ಮನವರು ಶರ್ಮರ ಹತ್ತಿರ, “ಪತ್ರಿಕೆಯು ಸಂಪಾದನೆ ಕೊಡುತ್ತಿಲ್ಲವಲ್ಲ! ಪತ್ರಿಕೆಯ ಸಾಲ ತೀರುತ್ತಿಲ್ಲವಲ್ಲ! ಸಂಸಾರ ಹೇಗೆ ನಡೆಯಬೇಕು?” ಎಂದರಂತೆ. ಅದಕ್ಕೆ ಶರ್ಮರು ಕೊಟ್ಟ ಉತ್ತರವನ್ನು ಅವರ ಬಾಯಲ್ಲೆ ಕೇಳೋಣ.

“ಬ್ರಹ್ಮ ನನ್ನನ್ನು ಹುಟ್ಟಿಸಿರುವುದು ಪತ್ರಿಕಾಕರ್ತನನ್ನಾಗಿ. ಅದು ಸುಲಭ ವೃತ್ತಿಯಲ್ಲ. ಆದರೂ ಅದನ್ನೇ ಹಿಡಿದಿದ್ದೇನೆ. ನನ್ನ ಆಸೆಗಳು ದೊಡ್ಡವು. ಮಾನವರೆಲ್ಲರ ವಿಶ್ವಾಸ ನನಗೆ ಬೇಕು. ನ್ಯಾಯಕ್ಕಾಗಿ ದುಡಿಯುತ್ತೇನೆ. ಸಮಯ ಬಂದರೆ ಅದಕ್ಕಾಗಿ ಹೋರಾಡುತ್ತೇನೆ. ಬರಿಗೈಯಲ್ಲಿ ಪತ್ರಿಕೆ ಆರಂಭಿಸಿದ್ದೇನೆ. ಸ್ವಲ್ಪ ಸಾಲವನ್ನು ತೀರಿಸಲೂ ಒಪ್ಪಿಕೊಂಡಿದ್ದೇನೆ.”

“ಸಾಲ ಹೇಗೆ ತೀರಿಸುತ್ತೀರಿ? ಸಾಲ ಯಾರು ಕೊಡುತ್ತಾರೆ?” ಎಂದು ರಾಜಮ್ಮ ಪ್ರಶ್ನಿಸಿದರು. ಅದಕ್ಕೆ ಶರ್ಮ ಹೇಳಿದರು: “ನಾನು ಧೀರ ಗಂಭೀರ ವೃತ್ತಿಯನ್ನು ಆಶ್ರಯಿಸಿದ್ದೇನೆ. ಸರಳ ಸೌಜನ್ಯ ಸುಂದರ ಜೀವನದ ಕನಸು ಕಾಣುತ್ತಿದ್ದೇನೆ. ಮುದ್ರಣಾಲಯವನ್ನು ಸ್ಥಾಪಿಸುತ್ತೇನೆ. ಧೈರ್ಯ, ನಂಬಿಕೆ, ಗಟ್ಟಿಮುಟ್ಟುತನ, ಕಾಲಾವಕಾಶಗಳು ನನ್ನ ಬಂಡವಾಳ.”

ಶರ್ಮರು ಚಂಡಿ ಹಟದವರು. ಮನಸ್ಸು ಮಾಡಿದರೆ ಸಾಧಿಸಿಯೇ ತೀರುವ ದೃಢ ಮನಸ್ಸಿನವರು. ಊರೂರು ಅಲೆದಾಡಿ ಮುದ್ರಾಯಂತ್ರವನ್ನು ತಂದರು, ಮುದ್ರಾಕ್ಷರ ಮೊಳೆಗಳನ್ನು ತಂದರು. ಸಿಬ್ಬಂದಿಯನ್ನು ಕೂಡಿಸಿದರು. ವಿಶ್ವೇಶ್ವರಪುರದಲ್ಲಿ ಮಾವನವರ ಮನೆಯಲ್ಲಿ ಹಿಂಭಾಗವನ್ನು ಬಿಡಿಸಿಕೊಂಡರು. ‘ವಿಶ್ವಕರ್ಣಾಟಕ ಮುದ್ರಣಾಲಯ’ವನ್ನು ಸ್ಥಾಪಿಸಿಯೇ ಬಿಟ್ಟರು. ಶರ್ಮರ ಮಾವ ರಾಘವಾಚಾರ್. ಅತ್ತೆ ಸೀತಮ್ಮನವರು ಅಳಿಯ-ಮಗಳಿಗೆ ಕೊಟ್ಟ ಸಹಕಾರ ಬೆಂಬಲಗಳು ಅಷ್ಟಿಷ್ಟಲ್ಲ. ಅಷ್ಟಾದರೂ ಶರ್ಮರು ‘ವಿಶ್ವ ಕರ್ಣಾಟಕ’ ಸಾಕುವುದಕ್ಕೆ ತೆತ್ತ ಹಣ, ಹತ್ತಲ್ಲ, ನೂರಲ್ಲ, ಸಾವಿರಾರು ರೂಪಾಯಿಗಳು. ತಲೆ ತಲಾಂತರಗಳಿಂದ ಬಂದ ಚಿಕ್ಕಬಳ್ಳಾಪುರದ ದೊಡ್ಡ ಮನೆ ಮಾರಾಟವಾಯಿತು. ಹಿರಿಯರ ಕಾಲದಿಂದ ಬಂದಿದ್ದ ಗದ್ದೆ ಹೊಲಗಳೆಲ್ಲ ಮಾರಾಟವಾಗಿ ಹೋದವು. ಇಷ್ಟಾದರೂ ‘ವಿಶ್ವಕರ್ಣಾಟಕ’ ಮುದ್ರಾರಾಕ್ಷಸ ಬಕಾಸುರನ ಹೊಟ್ಟೆ ತುಂಬಲಿಲ್ಲ. ಶರ್ಮ ದಂಪತಿಗಳಿಗೆ ಒಂದೊಂದು ದಿವಸ ಕೈಯಲ್ಲಿ ನಾಲ್ಕಾಣೆಯೂ (ಈಗಿನ ಇಪ್ಪತ್ತೈದು ಪೈಸೆಗಳು) ಇರುತ್ತಿರಲಿಲ್ಲವಂತೆ.


ವಿಶ್ವಕರ್ಣಾಟಕದ ವೈಶಿಷ್ಟ್ಯ

 

‘ವಿಶ್ವ ಕರ್ಣಾಟಕ’ ವಾರಪತ್ರಿಕೆ ಜನಪ್ರಿಯವಾಯಿತಲ್ಲ! ಅದರ ಗುಟ್ಟೇನು? ಶರ್ಮರ ಗಂಡುಗದ್ಯ ಶೈಲಿಯ ಸಂಪಾದಕೀಯ ಲೇಖನ, ‘ಚಾಣಕ್ಯನ ಚಿಟಿಕೆ’ಗಳು, ‘ಯೋಚನಾ ತರಂಗ’ ಇತ್ಯಾದಿ ಬರಹಗಳನ್ನು ಜನ ತಪ್ಪದೆ ಓದುತ್ತಿದ್ದರು. ಶರ್ಮರು ತಮ್ಮ ಲೇಖನಗಳಲ್ಲಿ ಬಳಸುತ್ತಿದ್ದ ಶಬ್ದ ಜಾಲಕ್ಕೆ ತಲೆದೂಗುತ್ತಿದ್ದರು. ಚಾಣಕ್ಯನ ಚಿಟಿಕೆಗಳಲ್ಲಿ ಶರ್ಮರು ಸರ್ಕಾರವನ್ನು ಮಾಡುತ್ತಿದ್ದ ಲೇವಡಿ, ಸರ್ಕಾರವನ್ನು ಹುಚ್ಚುಬೆಪ್ಪು ಮಾಡುತ್ತಿತ್ತು. ಜನರನ್ನು ನಗೆಕಡಲಿನಲ್ಲಿ ಮುಳುಗಿಸುತ್ತಿತ್ತು. ‘ವಿಶ್ವ ಕರ್ಣಾಟಕ’ದ ‘ಯೋಚನಾ ತರಂಗ’ ಹೇಗಿರುತ್ತಿತ್ತು ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಎತ್ತಿ ಕೊಟ್ಟಿದೆ. ಓದಿ ನೋಡಿ, ಎಷ್ಟು ಚೆನ್ನಾಗಿದೆ:

“‘ಎಲ್ಲರೂ ಬದಲಾವಣೆಯಾಗಬೇಕು’ ಎಂದು ಎಲ್ಲರೂ ಹೇಳುವರು. ಒಬ್ಬರೂ ಬದಲಾವಣೆಗೆ ಅಣಿಯಾಗಿಲ್ಲ.”

“ಹಳ್ಳಿಗಾಡಿನವರ ಬಡತನವು ಶ್ರೀಮಂತರ ನಾಚಿಕೆ. ಅದಕ್ಕೇ ಅವರು ಹಳ್ಳಿಗಳನ್ನು ಸೇರರು.”

“ಹಣವೆಂದರೇನಯ್ಯ ಗೊಬ್ಬರದಂತಹದು; ಗೊಬ್ಬರ ಚೆಲ್ಲಿದರಲ್ಲವೆ ದವಸ ಭಾಗ್ಯವನೀವುದು? ಹಣವೂ ಅಂತೆ. ಹಣವ ಚೆಲ್ಲಿದರಲ್ಲವೇ ಸುಖ ಸಂಪದವ ಹಂಚಿದಂತಹುದು?”

ಶರ್ಮರು ‘ವಿಶ್ವ ಕರ್ಣಾಟಕ’ ಪತ್ರಿಕೆಯಲ್ಲಿ ಬಳಸುತ್ತಿದ್ದ ಪದಗಳು, ಪದ ಸಮುದಾಯ ತುಂಬ ಅರ್ಥ ಕೊಡುತ್ತಿದ್ದವು. ಅದಕ್ಕಾಗಿ ಅವರು ಕೆಲವು ಸಲ ತಮ್ಮದೇ ಆದ ರೀತಿಯಲ್ಲಿ ಪದಪ್ರಯೋಗ ಮಾಡುತ್ತಿದ್ದರು. ಶರ್ಮರ ಟಂಕಸಾಲೆಯಿಂದ ಚಲಾವಣೆಗೆ ಬಂದಿರುವ ಪದನಾಣ್ಯಗಳು ಎಷ್ಟೋ ಲೆಕ್ಕವಿಲ್ಲ. ಇಲ್ಲಿ ಶರ್ಮ ಟಂಕಸಾಲೆಯಿಂದ ಚಲಾವಣೆಗೆ ಬಂದ ನೂರಾರು ಪದಗಳಲ್ಲಿ ಕೆಲವನ್ನು ಎತ್ತಿ ಕೊಟ್ಟಿದೆ; ಅಗ್ನಿಭಕ್ಷಕ, ಅಭಯಹಸ್ತ, ಅಂಗೀಕಾರ ಮುದ್ರೆ, ಉಪ್ಪಿನ ಕರ, ಕಪಿಮುಷ್ಠಿ, ಕತ್ತರಿ ಪ್ರಯೋಗ, ಕರಾಳ ಶಾಸನ, ಕರನಿರಾಕರಣೆ, ಕಾಲಚಕ್ರ, ಕ್ರಿಯಾಲೋಪ, ಗೊತ್ತುವಳಿ, ಚಕ್ರಗೋಷ್ಠಿ, ಚಿತ್ತದಾಸ್ಯ, ಚಿದಂಬರ ರಹಸ್ಯ, ಜ್ಞಾನದಾಹ, ಜ್ಞಾನಲೋಪ, ತಿದ್ದುಪಡಿ, ದರಿದ್ರ ನಾರಾಯಣ, ದುಷ್ಟ ಗ್ರಹಗಳು, ನಗೆವಾದ, ನರಕಯಾತನೆ, ನಿಶೀಶಾಸನ, ನೇಪಥ್ಯ, ರಾಜನೀತಿ, ಪರದೆಯ ಹಿಂದೆ, ಪ್ರತಿಧ್ವನಿ, ಪುಂಡು ಗಂದಾಯ, ಪೌರನೀತಿ, ಪೊಲೀಸು ರಾಜ್ಯ, ಬಿಗಿದಾರ, ಬಿನ್ನವತ್ತಳೆ, ಬೋರೇಗಭಡ, ಭರತವಾಕ್ಯ, ಮಸೂದೆ, ಮತದಾನ, ಮುದ್ರಾರಾಕ್ಷಸ, ರಕ್ತಬೀಜಾಂಕುರ, ರಾಜನೀತಿ, ರಾಜಶಾಸನ, ವಾದಸರಣಿ, ವಿಡಂಬನವಾದ, ವಿರಾಮ ಕುರ್ಚಿ, ವೀರಪತ್ರ, ಶಸ್ತ್ರಪಾಣಿ, ಶಸ್ತ್ರ ಸಂನ್ಯಾಸ, ಶಾಸನ ಬಾಣ, ಶೂನ್ಯ ಹಸ್ತ, ಸೈಮನ್‌ಸಪ್ತರ್ಷಿಗಳು,ಹಕ್ಕಿನ ಕಡತ, ಹುಟ್ಟು ಗುಲಾಮ. ಹೀಗೆ ಇನ್ನೆಷ್ಟೋ. ರೌಂಡ್‌ಟೇಬಲ್‌ಕಾನ್ಫರೆನ್ಸ್‌ಶರ್ಮರ ಭಾಷೆಯಲ್ಲಿ ಚಕ್ರಗೋಷ್ಠಿಯಾಯಿತು. ಹೀಗೆ ಅವರು, ತಮ್ಮ ಟಂಕಸಾಲೆಯಲ್ಲಿ ಮುದ್ರಿಸಿ ಚಲಾವಣೆಗೆ ತಂದ ಪದಗಳಿಗೆ ‘ರಾಜ ನಿಘಂಟು’ ಎಂದು ಹೆಸರಿಟ್ಟರು.

ವಿಶ್ವ ಕರ್ಣಾಟಕದ ದಿಟ್ಟ ನಿಲುವು

ಶರ್ಮರು ‘ವಿಶ್ವಕರ್ಣಾಟಕ’ದಲ್ಲಿ ಬರೆಯುತ್ತಿದ್ದ ಸಂಪಾದಕೀಯ ಲೇಖನ ಬಹಳ ಉಗ್ರವಾಗಿರುತ್ತಿತ್ತು. ವಿದೇಶೀ ಸರ್ಕಾರವನ್ನೂ ಆಗಿನ ಮೈಸೂರು ಸರ್ಕಾರವನ್ನೂ ಟೀಕಿಸುವುದರಲ್ಲಿ ಅವರದು ಗಂಡೆದೆ, ಸಿಂಹಧೈರ್ಯ. ೧೯೨೯ರಲ್ಲಿ ಆಗಿನ ಮೈಸೂರು ಸರ್ಕಾರ ಪತ್ರಿಕಾ ಶಾಸನವನ್ನು ಜಾರಿಗೆ ತಂದು ಪತ್ರಿಕೆಗಳ ಸ್ವಾತಂತ್ಯ್ರವನ್ನು ಅಪಹರಿಸಿತು. ಶರ್ಮರು ಉಗ್ರಸಿಂಹದಂತಾದರು. “ಮೈಸೂರು ವೃತ್ತಿಪತ್ರಿಕೆಗಳ ಕರಾಳ ಶಾಸನವನ್ನು ಶಾಸನ ಕಡತದಿಂದ ತೊಡೆದು ಹಾಕುವವರೆಗೂ ನಾವು ಪ್ರಧಾನ ಲೇಖನವನ್ನು ಬರೆಯುವುದೇ ಇಲ್ಲವೆಂದು ನಮ್ಮ ಸತ್ಯ ಸಂಕಲ್ಪ” ಎಂದು ವೀರ ಪ್ರತಿಜ್ಞೆ ಮಾಡಿದರು. ಕವಿಗಳು, ಸಾಹಿತಿಗಳು, ದೇಶನಾಯಕರುಗಳು ನುಡಿದ ವಚನಗಳನ್ನು ಅವರುಗಳ ಹೆಸರುಗಳೊಂದಿಗೆ ಪ್ರಕಟಿಸುತ್ತಿದ್ದರು. ಅಂತಹ ವಚನಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ಕೊಟ್ಟಿದೆ:

“ನನಗೆ ಸ್ವರಾಜ್ಯ ಬೇಡ, ಸತ್ಯ ಬೇಕು” – ಗಾಂಧಿ.

“ಪ್ರಜೆಗಳಿಗೆ ಎದೆಯಿದೆ, ಪ್ರಭುತ್ವದವರಿಗೆ ಪಶು ಬಲವಿದೆ, ಆದರೆ ಆ ಬಲವೆಲ್ಲ ಸಂಬಳ ಕೊಟ್ಟು ಕೊಂಡದ್ದು. ಪ್ರಜೆಗಳ ಎದೆಯೆಲ್ಲ ಅವರದೆ” -ತಿಲಕ್‌.

“ಸ್ವಾತಂತ್ಯ್ರವೆಂದರೆ ಆತ್ಮನ ಬಲಿದಾನ. ಅದು ಆತ್ಮ ಶುದ್ದಿಯಿಂದಲೂ ಸ್ವಾರ್ಥ ತ್ಯಾಗದಿಂದಲೂ ಲಭಿಸುವುದು” – ಸಿ.ಎಫ್‌. ಆಯಂಡ್ರೂಸ್‌.

“ಬೇಕು; ಸ್ವಾತಂತ್ಯ್ರ ಬೇಕು. ಅದು ನನ್ನ ಉಸಿರು”- ಅನಾಮಿಕ.

‘ವಿಶ್ವ ಕರ್ಣಾಟಕ’ ಒಂದು ಸಣ್ಣ ವಿಶ್ವಕೋಶದಂತಿತ್ತು. ಅದರಲ್ಲಿ ಬರೆಯದ ವಿಷಯಗಳೇ ಇಲ್ಲ. ವಿದೇಶ ವಿಚಾರ ತರಂಗ, ಲೋಕಾಭಿಪ್ರಾಯ, ಅಂಕಿ-ಅಂಶಗಳು, ವಿಶಾಲ ಕರ್ಣಾಟಕದ ಪುಟಗಳು, ಕಲೆ-ಸಂಗೀತ-ನಾಟಕ-ಸಾಹಿತ್ಯ ಸಂಬಂಧವಾದ ವಿಚಾರಪೂರಿತ ಲೇಖನಗಳು, ವಿಶ್ವವಿಖ್ಯಾತ ಮಹಾಪುರುಷರ ಪರಿಚಯ, ವಾಚಕ ವರ್ಗದ ಪತ್ರಗಳು; ಏನು ಬೇಕು? ಏನು ಬೇಡ? ಎಲ್ಲ ವಿಷಯಗಳು ದೊರೆಯುತ್ತಿದ್ದವು. ಮಹಿಳಾ ಪುಟ, ಶಿಶುಲೋಕ, ಸಾಹಿತ್ಯ ಸಂಚಿಕೆಗಳು ಹದಿನೈದು ದಿವಸಗಳಿಗೊಂದು ಸಂಚಿಕೆಯಂತೆ ವಾರಪತ್ರಿಕೆಯಲ್ಲಿ ಬಿಡಿ ಸಂಚಿಕೆಯಾಗಿ ಪ್ರಕಟವಾಗುತ್ತಿದ್ದವು.

ಧೀರ ಪತ್ರಿಕಾ ಸಂಪಾದಕ

ಶರ್ಮರು ‘ವಿಶ್ವಕರ್ಣಾಟಕ’ವನ್ನು ಆದರ್ಶ ಪತ್ರಿಕೆಯನ್ನಾಗಿ ಮಾಡಬೇಕೆಂದು ಸಂಕಲ್ಪ ಮಾಡಿದ ಧ್ಯೇಯವಾದಿ. ತಮ್ಮ ಧ್ಯೇಯಸಾಧನೆಗಾಗಿ ಅವರು ಪಟ್ಟ ಕಷ್ಟನಷ್ಟಗಳು ಅಪಾರ. ಬ್ರಿಟಿಷ್‌ಸರ್ಕಾರವಂತೂ ‘ವಿಶ್ವಕರ್ಣಾಟಕ’ದಲ್ಲಿ ಬರುವ ಕನ್ನಡ ಲೇಖನಗಳನ್ನೆಲ್ಲ ಮದರಾಸಿನ ಭಾಷಾಂತರ ಇಲಾಖೆಯಿಂದ ಇಂಗ್ಲಿಷ್‌ಭಾಷೆಗೆ ಭಾಷಾಂತರ ಮಾಡಿಸಿ ತರಿಸಿಕೊಳ್ಳುತ್ತಿತ್ತಂತೆ. ‘ಇನ್ನಾವ ಪತ್ರಿಕೆಗೆ ಉಂಟು ಈ ಭಾಗ್ಯ?’ ಎಂದು ಶರ್ಮ ಹೆಮ್ಮೆ ಪಟ್ಟುಕೊಂಡರು. ‘ವಿಶ್ವಕರ್ಣಾಟಕ’ ದಿನದಿನಕ್ಕೆ ಜನಪ್ರಿಯವಾಗುತ್ತ ಬೆಳೆದರೆ ಬ್ರಿಟಿಷ್‌ಮತ್ತು ಮೈಸೂರು ಸರ್ಕಾರಗಳು ದಿನದಿನವೂ ‘ವಿಶ್ವಕರ್ಣಾಟಕ’ಕ್ಕೆ ಹೇಗೆ ಕಿರುಕುಳ ಕೊಡುವುದೆಂದು ಯೋಚಿಸತೊಡಗಿದವು. ಪರಸ್ಥಳಗಳಿಗೆ ಪತ್ರಿಕೆ ಕಳಿಸುವುದಕ್ಕೆ ಮೂರು ಕಾಸಿನ ಅಂಚೆ ಚೀಟಿಯನ್ನು ಅಂಟಿಸುವ ಸೌಲಭ್ಯವಿತ್ತು. ಸರ್ಕಾರ ಆ ಸೌಲಭ್ಯವನ್ನು ತಪ್ಪಿಸಿ ಬಿಟ್ಟಿತು. ಹಣದ ಅಭಾವದಿಂದ ಮೊದಲೇ ಕೊರಗುತ್ತಿದ್ದ ಶರ್ಮರಿಗೆ ಇದು ಬಲು ದೊಡ್ಡ ಪೆಟ್ಟು. ಒಂದಕ್ಕೆ ನಾಲ್ಕರಷ್ಟು ಖರ್ಚು ಮಾಡಿ ಒಂದಾಣೆ ಅಂಚೆ ಚೀಟಿ ಅಂಟಿಸಿ, ಪತ್ರಿಕೆಯನ್ನು ಒಂದು ವರ್ಷ ಪರಸ್ಥಳಗಳಿಗೆ ರವಾನಿಸಬೇಕಾಯಿತು. ಸರ್ಕಾರ ಪತ್ರಿಕೆ ನಡೆಸಬಾರದೆಂದು ಒಂದು ಸಲ ಆರು ತಿಂಗಳು ನಿಲ್ಲಿಸಿ ಬಿಟ್ಟಿತು. ಆಗ ಶರ್ಮ ದಂಪತಿಗಳು ಅನುಭವಿಸಿದ ಕಷ್ಟ ನಷ್ಟಗಳಿಗೆ ಮಿತಿಯೇ ಇಲ್ಲ. ಶರ್ಮರು ಕುಣಿಗಲು ಅಮಲ್ದಾರರನ್ನು ಟೀಕಿಸಿ ಒಂದು ಕಟುವಾದ ಲೇಖನ ಬರೆದರು. ಅಮಲ್ದಾರರು ಮಾನನಷ್ಟಕ್ಕೆ ಶರ್ಮರನ್ನು ಕೋರ್ಟಿಗೆ ಎಳೆದರು. ಮೂರು ವರ್ಷ ವಿಚಾರಣೆ ನಡೆಯಿತು. ಆ ಸಮಯದಲ್ಲಿ ಶರ್ಮರು ತುಂಬ ತಾಪತ್ರಯಕ್ಕೆ ಸಿಕ್ಕರು. ಕೇಸು ವಜಾ ಆಯಿತು. ಇನ್ನೊಂದು ಜೈಮುತ್ತುರಾಜು ಮೊಕದ್ದಮೆ. ಜೈ ಮುತ್ತುರಾಜರವರ ಮೇಲೆ ಒಂದು ಉಗ್ರ ಲೇಖನ ಪ್ರಕಟವಾಯಿತು. ಕೋರ್ಟಿನಲ್ಲಿ ವ್ಯವಹಾರ ಪ್ರಾರಂಭವಾಯಿತು. ‘ಹಾವು ಸಾಯಲಿಲ್ಲ ಕೋಲು ಮುರಿಯಲಿಲ್ಲ’ ಎಂಬಂತೆ ವ್ಯವಹಾರ ಎಳೆದಾಟಕ್ಕೆ ಸಿಕ್ಕಿಕೊಂಡಿತು. ಕಡೆಗೆ ಶರ್ಮರು ಇಟ್ಟಿದ್ದ ಮುನ್ನೂರು ರೂಪಾಯಿ, ಐನೂರು ರೂಪಾಯಿ ಠೇವಣಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿತು.

ಗಾಂಧೀ ಚಳವಳಿ ದೇಶದಲ್ಲಿ ಪ್ರಬಲವಾದ ಮೇಲೆ ಅದರ ಬಿಸಿ ಮೈಸೂರನ್ನು ತಟ್ಟಿತು. ೧೯೩೮ರ ಹೊತ್ತಿಗೆ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರ್ಕಾರ ಬೇಕೆಂದು ಚಳವಳಿ ಪ್ರಾರಂಭವಾಗಿ ಸತ್ಯಾಗ್ರಹ ನಡೆಯುತ್ತಿತ್ತು. ವಿದುರಾಶ್ವತ್ಥ ಎಂಬಲ್ಲಿ ಒಂದು ಭಾರಿ ಸಭೆ ಸೇರಿತು. ಸರ್ಕಾರ ಕಣ್ಣು ಕೆಂಪಗೆ ಮಾಡಿಕೊಂಡಿತು. ಶಾಂತ ಚಿತ್ತದಿಂದ ಸಭೆ ಮಾಡುತ್ತಿದ್ದ ಜನರ ಮೇಲೆ ಗುಂಡಿನ ಮಳೆ ಸುರಿಸಿತು. ಅನೇಕ ಜನ ಸತ್ತರು. ‘ವಿಶ್ವ ಕರ್ಣಾಟಕ’, ‘ತಾಯಿನಾಡು’ ಪತ್ರಿಕೆಗಳು ಉಗ್ರವಾಗಿ ಲೇಖನಗಳನ್ನು ಬರೆದವು. ಸರ್ಕಾರವನ್ನು ಕಟುವಾಗಿ ಟೀಕಿಸಿದವು. ಸರ್ಕಾರ ಕೋಪ ತಾಳಿತು. ಗುಡುಗಿನಂತೆ ಆರ್ಭಟಿಸಿತು. ಎರಡೂ ಪತ್ರಿಕೆಗಳನ್ನೂ ಪ್ರಕಟಿಸಬಾರದೆಂದು ಸುಗ್ರೀವಾಜ್ಞೆ ಹೊರಡಿಸಿ, ನಿಲ್ಲಿಸಿಬಿಟ್ಟಿತು. ಸಂಪಾದಕರು ಕ್ಷಮೆ ಬೇಡಿದರೆ ಮಾತ್ರ ಪತ್ರಿಕೆಗಳನ್ನು ನಡೆಸುವುದಕ್ಕೆ ಅಪ್ಪಣೆ ಕೊಡಲಾಗುವುದೆಂದು ಆಜ್ಞೆ ಹೊರಡಿಸಿತು. ತಿ.ತಾ. ಶರ್ಮ, ಪಿ.ಆರ್. ರಾಮಯ್ಯ ಮುಂತಾದವರು ಜಗ್ಗಲಿಲ್ಲ. ವಾರವಾಯಿತು, ಹದಿನೈದು ದಿವಸಗಳಾದವು. ಒಂದು ತಿಂಗಳು ಉರುಳಿತು. ಕಡೆಗೆ ಸರ್ಕಾರವೇ ಸೋತು ತನ್ನ ಸುಗ್ರೀವಾಜ್ಞೆಯನ್ನು ಹಿಂದಕ್ಕೆ ತೆಗೆದುಕೊಂಡಿತು. ಆದರೆ ಒಂದು ತಿಂಗಳು ಶರ್ಮರು ಪಟ್ಟ ಕಷ್ಟ, ಕಳೆದುಕೊಂಡ ಹಣ ಬಾಯಿ ಮಾತಲ್ಲಿ ಹೇಳಲು ಸಾಧ್ಯವಿಲ್ಲ. “ಪತ್ರಿಕೆ ಸತ್ತರೂ ಚಿಂತೆಯಿಲ್ಲ. ನಾನು ಸರ್ಕಾರಕ್ಕೆ ‘ಜೀಯ, ಹಸಾದ’ ಎನ್ನುವುದಿಲ್ಲ” ಎಂದು ವೀರಪ್ರತಿಜ್ಞೆ ಮಾಡಿದ್ದರಂತೆ ಶರ್ಮರು.

ಕಷ್ಟದ ಮೇಲೆ ಕಷ್ಟ

೧೯೪೨ರಲ್ಲಿ ಭಾರತದ ಸ್ವಾತಂತ್ಯ್ರ ಬಳವಳಿ ನಡೆದಾಗ ತಿ.ತಾ.ಶರ್ಮ, ಪಿ.ಆರ್. ರಾಮಯ್ಯ, ಸಿದ್ಧವನಹಳ್ಳಿ ಕೃಷ್ಣಶರ್ಮ ಮೊದಲಾದವರು ‘ವಿಶ್ವಕರ್ಣಾಟಕ’, ‘ತಾಯಿ ನಾಡು’ ಪತ್ರಿಕೆಗಳಲ್ಲಿ ವಿದೇಶ ಸರ್ಕಾರದ ವಿರೋಧವಾಗಿ ಲೇಖನಗಳನ್ನು ಬರೆದರೆಂದು ಆರೋಪಿಸಿ ಪೋಲೀಸಿನವರು ಬಂಧಿಸಿದರು. ರಾತ್ರೋರಾತ್ರಿ ಇವರೆಲ್ಲದರ ಬಂಧನವಾಗಿ ಹೋಯಿತು. ಆ ಸಮಯದಲ್ಲಿ ತಿರುಮಲೆ ರಾಜಮ್ಮನವರು ನಡೆದುಕೊಂಡ ರೀತಿಯನ್ನು ತಿ. ತಾ. ಶರ್ಮ ಬಹಳ ಸ್ವಾರಸ್ಯವಾಗಿ ವರ್ಣಿಸಿದ್ದಾರೆ. ಅದನ್ನು ಅವರ ಬಾಯಿಂದಲೇ ಕೇಳೋಣ:

“ಸ್ವಾತಂತ್ರ್ಯದ ಹೋರಾಟ ಕಾಲದಲ್ಲಿ ನನ್ನ ವಾಸದ ಮನೆಯೆ ಒಂದು ‘ಕುರುಕ್ಷೇತ್ರ’. ಆ ಕ್ಷೇತ್ರಪಾಲಕರು ಶ್ರೀಮತಿಯವರು. ಆ ಮನೆ ರಾಜಕೀಯ ಅಪರಾಧಿಗಳ ರಹಸ್ಯ ಸ್ಥಾನವೆಂದು ಪೊಲೀಸರು ಭಾವಿಸಿ, ಮೇಲಿಂದ ಮೇಲೆ ಧಾವಿಸಿ ಬರುವರು. ಯಾವ ಹೊತ್ತಿನಲ್ಲೆಂದರೆ ಆ ಹೊತ್ತಿನಲ್ಲಿ ಬರುವರು. ಅವರಿಗೆಲ್ಲ, ‘ಹುಷಾರ್! ಕಾಂಪೌಂಡಿನೊಳಕ್ಕೆ ಕಾಲಿಟ್ಟೀರಿ’ ಎಂದು ಶ್ರೀಮತಿಯವರ ಸವಾಲು! ರಾತ್ರಿ, ‘ಒಂದು ವಾರಂಟಿದೆ’ ಅಂದರೆ ಕೂಡಲೇ ಅವರು, ‘ಬೆಳಗಾದ ಮೇಲೆ ಬಂದು ಬೇಕಾದ್ದನ್ನು ಮಾಡಿ’ ಎಂದು ಎಚ್ಚರಿಸುವರು! ಪೋಲೀಸ್‌ಅಧಿಕಾರಿಗಳಿಗೂ ಸಹ ಚೆನ್ನಾಗಿ ಗೊತ್ತು. ಈ ಅಸಾಮಿ ಹತ್ತಿರ ತಮ್ಮ ಬೇಳೆಕಾಳು ಬೇಯುವುದಿಲ್ಲವೆಂಬುದು.”

ಸರ್ಕಾರ ಈ ನಾಲ್ವರನ್ನು ಜಾಮೀನಿನ ಮೇಲೆ ಬಿಟ್ಟಿತು. ಸರ್ಕಾರ ಪತ್ರಿಕೆಗಳಿಗೆ ನ್ಯೂಸ್‌ಪ್ರಿಂಟ್‌ಕಾಗದವನ್ನು ಸರಬರಾಜು ಮಾಡುತ್ತಿದ್ದು, ‘ವಿಶ್ವಕರ್ಣಾಟಕ’ ‘ತಾಯಿನಾಡು’ ಪತ್ರಿಕೆಗಳಿಗೆ ಕಾಗದದ ಸರಬರಾಜನ್ನು ನಿಲ್ಲಿಸಿಬಿಟ್ಟಿತು. ತಿ. ತಾ. ಶರ್ಮ, ಪಿ.ಆರ್. ರಾಮಯ್ಯ ಮೊದಲಾದವರು ಉಪವಾಸ ಸತ್ಯಾಗ್ರಹ ಹೂಡಿದರು. ಇದು ಮರಣಾಂತ ಉಪವಾಸ. ಸರ್ಕಾರ ಬೆಚ್ಚಿತು. ಕೊಡಬೇಕಾದ ಕಾಗದವನ್ನು ಕೊಟ್ಟಿತು.

‘ವಿಶ್ವಕರ್ಣಾಟಕ’ಕ್ಕೆ ಸರ್ಕಾರ ಸರಬರಾಜು ಮಾಡುತ್ತಿದ್ದ ಕಾಗದ ಏನೇನೂ ಸಾಲದು. ಅಲ್ಪಸ್ವಲ್ಪ ಕೊಡುತ್ತಿತ್ತು. ತಮಗೆ ಬೇಕಾದಷ್ಟು ಕಾಗದ ಭರ್ತಿ ಮಾಡುವುದಕ್ಕೆ ಶರ್ಮರು ಮೂರು ನಾಲ್ಕರಷ್ಟು ಹಣ ಜೊತೆ ಮಾಡಿ ಕಪ್ಪು ಮಾರುಕಟ್ಟೆಯಲ್ಲಿ ಕಾಗದ ಕೊಳ್ಳಬೇಕಾಗಿತ್ತು. ಕಾಗದ ಬರುವುದು ತಡವಾದರೆ ಪತ್ರಿಕೆ ಸಕಾಲದಲ್ಲಿ ಹೊರಬರುತ್ತಿರಲಿಲ್ಲ. ಒಂದು ಸಲ ಮುದ್ರಣಕ್ಕೆ ಸಿದ್ಧವಾಗಿದ್ದ ಪತ್ರಿಕೆ ಕಾಗದದ ಅಭಾವದಿಂದ ಸಂಜೆಯಾದರೂ ಪ್ರಕಟವಾಗದೆ ನಿಂತಿತು. ಶರ್ಮರು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ. ರಾಜಮ್ಮನವರು ತಮ್ಮ ಕೈಯಲ್ಲಿದ್ದ ಬಂಗಾರದ ಬಳೆಗಳನ್ನು ಅಡವಿಟ್ಟೋ ಮಾರಿಯೋ ಹಣ ಒದಗಿಸಿ ಸಕಾಲದಲ್ಲಿ ಪತ್ರಿಕೆ ಪ್ರಕಟವಾಗುವಂತೆ ಮಾಡಿದರು.

೧೯೪೪-೪೫ ಇರಬಹುದು. ‘ವಿಶ್ವಕರ್ಣಾಟಕ’ ‘ಮಾಡಿದ್ದುಣ್ಣೋ ಮಹಾರಾಯ!’ ಎಂಬ ಲೇಖನವನ್ನು ಪ್ರಕಟಿಸಿತು. ಸರ್ಕಾರ ಕೆರಳಿತು. ಪತ್ರಿಕೆ ಹೊರಡಕೂಡದೆಂದು ಸುಗ್ರೀವಾಜ್ಞೆ ಹೊರಡಿಸಿತು. ‘ವಿಶ್ವಕರ್ಣಾಟಕ’ ನಿಂತು ಹೋಯಿತು. ಶರ್ಮರು ‘ವಿಶ್ವಕರ್ಣಾಟಕ’ ವಾರಪತ್ರಿಕೆಯೊಡನೆ ದಿನಪತ್ರಿಕೆಯನ್ನೂ ನಡೆಸಿ ಕೈ ಸುಟ್ಟುಕೊಂಡರು.

ಸರ್ಕಾರದ ಹಂಗು ಬೇಡ

ಶರ್ಮರು ೧೯೪೨-೪೩ ರಲ್ಲಿ ನರ ದೌರ್ಬಲ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದರು. ಗುರುಗಳಾದ ಎನ್‌.ಎಸ್‌. ಸುಬ್ಬರಾಯರು ಶಿಷ್ಯನನ್ನು ನೋಡಲು ಬಂದರು. ಶರ್ಮರ ಯೋಗಕ್ಷೇಮವನ್ನು ವಿಚಾರಿಸಿದ್ದಾಯಿತು. ಹೋಗುವಾಗ ತಲೆದಿಂಬಿನ ಕೆಳಗೆ ನೂರು ರೂಪಾಯಿ ನೋಟಿಟ್ಟರು. ಶರ್ಮ ಗುರುಗಳನ್ನು ಬೇಡವೆಂದು ಗೋಗರೆದರು. ಸುಬ್ಬರಾಯರು ತೆಗೆದುಕೊಳ್ಳಬೇಕೆಂದು ಬಲವಂತ ಪಡಿಸಿದರು. ಗುರುಗಳ ಒತ್ತಾಯಕ್ಕೆ ಶರ್ಮರು ತಲೆ ಬಾಗಿದರು. ಅದೇ ಶರ್ಮರು ಸರ್ಕಾರದ ಹಂಗಿಗೆ ಬೀಳಲಿಲ್ಲ. ಅವರು ಹುಬ್ಬು ಹಾರಿಸಿ ಸೂಚನೆ ಮಾಡಿದ್ದರೆ ಸಾಕಾಗಿತ್ತು. ಯಾವ ರೀತಿಯಲ್ಲಾದರೂ ಸಹಾಯ ಮಾಡಲು ಸರ್ಕಾರ ಸಿದ್ಧವಾಗಿತ್ತು. “ದೇಶಕ್ಕೆ ಸ್ವಾತಂತ್ಯ್ರವಿಲ್ಲ. ಸರ್ಕಾರದ ಋಣ ನನಗೆ ಬೇಡ. ಅದರ ಋಣದಲ್ಲಿ ನಾನು ಬಿದ್ದರೆ ನನ್ನ ಜೀವ ಪರ್ಯಂತ ಸರ್ಕಾರದ ಗುಲಾಮನಾಗಿ ‘ನಿಮ್ಮ ಚಿತ್ತ’ವೆಂದು ನಡೆದುಕೊಳ್ಳಬೇಕಾದೀತು’ ಎಂದು ತಿರಸ್ಕಾರ ಭಾವದಿಂದ ಇದ್ದರು.

ಸದಾ ಕಾರ್ಯನಿರತ

ತಾತಾಚಾರ್ಯ ಶರ್ಮರು ಎತ್ತರದ ಆಳಲ್ಲ. ಕುಳ್ಳೆಂದೇ ಹೇಳಬೇಕು. ಮುಖದಲ್ಲಿ ದರ್ಪದ ಠೀವಿ ಎದ್ದು ಕಾಣುತ್ತಿತ್ತು. ಕಣ್ಣುಗಳು ಚುರುಕು. ಅವರ ಮಾತುಗಳೋ ಅರಳು ಹುರಿದಂತೆ. ಯಾರ ಮುಖವನ್ನೂ ನೋಡದೆ ತಮ್ಮ ಮನಸ್ಸಿನಲ್ಲಿದ್ದುದನ್ನು ಹೇಳಿಬಿಡುವ ಸ್ವಭಾವ. ಶರ್ಮರನ್ನು ಮೊದಲ ಸಲ ನೋಡಿದವರಿಗೆ, ‘ಇದೇನು ಇವರು ಇಷ್ಟುಸ ಖಡಾಖಂಡಿತ! ಇವರ ಜೊತೆಯಲ್ಲಿ ಹೇಗೆ ಕೆಲಸ ಮಾಡುವುದು!’ ಎನ್ನಿಸುವುದು. ಆದರೆ ಅವರಲ್ಲಿ ಬಳಕೆಯಾದ ಮೇಲೆ ಅವರ ವಿಶ್ವಾಸ, ಅಂತಃಕರಣ ಮನಸ್ಸನ್ನು ಗೆಲ್ಲುತ್ತಿದ್ದವು. ಯುವ ಲೇಖಕರನ್ನು ಅವರು ಪ್ರೋತ್ಸಾಹಿಸಿ ಮುಂದೆ ತಂದಿದ್ದಾರೆ. ಅವರ ಮನೆಯಲ್ಲಿ ಯಾವ ಕಾಲದಲ್ಲಿ ನೋಡಿದರೂ ಜನ ಗಿಜಗಿಜ ತುಂಬಿರುತ್ತಿದ್ದರು. ಶರ್ಮರಿಗೆ ವಯಸ್ಸು ಎಪ್ಪತ್ತಕ್ಕೆ ಮೀರಿದ್ದರೂ ಇಪ್ಪತ್ತು ವರ್ಷ ವಯಸ್ಸಿನ ಯುವಕರಂತೆ ಕೆಲಸ ಮಾಡುತ್ತಿದ್ದರು.

ಪ್ರಶಸ್ತಿ, ಗೌರವಗಳು

ತಿ.ತಾ. ಶರ್ಮರು ಪತ್ರಿಕಾ ಸಂಪಾದಕರಾಗಿ ಹೆಸರು ಗಳಿಸಿದಂತೆ ಕನ್ನಡ ಸಾಹಿತ್ಯದಲ್ಲೂ ಹೆಸರುಗಳಿಸಿದ್ದಾರೆ. ಅವರ ಶೈಲಿ ಗಂಡು ಶೈಲಿ, ಗದ್ಯ ಶೈಲಿಗೆ ಒಂದು ಮೆರುಗು ಕೊಟ್ಟರು. ಅವರ ಪತ್ರಿಕಾ ಬರವಣಿಗೆಯೂ ಸಾಹಿತ್ಯವಾಗಿ ಪರಿಣಮಿಸಿತು. ‘ವಿದುರಾಶ್ವತ್ಥದಿಂದ ಜಗನ್ಮೋಹನ ಬಂಗಲೆಗೆ’, ‘ಮೋಕ್ಷಗುಂಡಂ’ (ಎಂ. ವಿಶ್ವೇಶ್ವರಯ್ಯನವರನ್ನು ಕುರಿತು), ‘ವಿಕ್ರಾಂತ ಭಾರತ’ ಕೃತಿಗಳು ಶರ್ಮರ ಗದ್ಯ ಶೈಲಿಗೆ ಅತ್ಯುತ್ತಮ ಉದಾಹರಣೆಗಳಾಗಿವೆ. ಅವರು ಮಕ್ಕಳಿಗಾಗಿ ‘ಭಾರತ-ಭಾರತಿ ಪುಸ್ತಕ ಸಂಪದ’ಕ್ಕೆ ‘ಸುಭಾಷ್‌ಚಂದ್ರ ಬೋಸ್‌ಮತ್ತು ‘ರಾಸ್‌ಬಿಹಾರಿ ಬೋಸ್‌’ ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಅವರ ಸಾಹಿತ್ಯ ಸೇವೆಯನ್ನು ಮರೆಯಲಿಲ್ಲ. ೧೯೪೭ರಲ್ಲಿ ಅವರನ್ನು ಕಾಸರಗೋಡಿನ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ ಗೌರವಿಸಿತು.

೧೯೪೭ರ ಆಗಸ್ಟ್‌೧೫ ರಂದು ನಮ್ಮ ಭಾರತ ದೇಶ ಬ್ರಿಟಿಷರಿಂದ ಬಂಧನ ಬಿಡಿಸಿಕೊಂಡು ಸ್ವಾತಂತ್ಯ್ರ ಪಡೆಯಿತಷ್ಟೆ. ಆಗ ಮೈಸೂರು ಪ್ರಜೆಗಳು ಮಹಾರಾಜರ ಆಶ್ರಯದಲ್ಲಿ ಪ್ರಜಾ ಸರ್ಕಾರವನ್ನು ಅಪೇಕ್ಷಿಸಿದರು. ‘ಮೈಸೂರು ಚಲೋ’ ಚಳವಳಿಯನ್ನು ಪ್ರಾರಂಭಿಸಿದರು. ಗಂಡುಗಲಿ ಶರ್ಮರು ಸುಮ್ಮನಿದ್ದಾರೇ? ಅವರೂ ಚಳವಳಿಯಲ್ಲಿ ಭಾಗವಹಿಸಿದರು. ಸರ್ಕಾರದ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿದುದಕ್ಕಾಗಿ ಎರಡು ತಿಂಗಳ ಕಾರಾಗೃಹ ಶಿಕ್ಷೆಯಾಯಿತು.

ಶರ್ಮರು ಇತಿಹಾಸ ಸಂಶೋಧಕರೆಂದು ಪ್ರಸಿದ್ಧರಷ್ಟೆ. ಅವರು ‘ರಾಮರಾಯನ ಬಖೈರು’, ‘ಹೈದರ ನಾಮೆ’, ‘ವೀರ ರಾಜೇಂದ್ರ ಪತ್ರ’ ಎಂಬ ಮೂರು ಇತಿಹಾಸ ಸಂಶೋಧನ ದಾಖಲೆಗಳನ್ನು ಸಂಪಾದಿಸಿ ‘ಚಾರಿತ್ರಿಕ ದಾಖಲೆಗಳು’ ಎಂಬ ಹೆಸರಿನಿಂದ ಪ್ರಕಟಿಸಿದ್ದಾರೆ. ಅವರು ಮಿಥಿಕ್‌ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶರ್ಮರ ಕಾಲದಲ್ಲಿ ಮಿಥಿಕ್‌ಸೊಸೈಟಿಯ ಹಣಕಾಸಿನ ದಾರಿದ್ಯ್ರ ತಪ್ಪಿ ಅದು ತನ್ನ ಕಾಲ ಮೇಲೆ ತಾನು ನಿಲ್ಲುವಂತಾಯಿತು. ಆ ಸಂಸ್ಥೆಯ ವಜ್ರಮಹೋತ್ಸವ ವೈಭವದಿಂದ ನಡೆಯಿತು. ಅದೇ ವಜ್ರಮಹೋತ್ಸವ ಸಮಯದಲ್ಲಿ ಶರ್ಮರಿಗೆ ಇತಿಹಾಸ ಸಂಶೋಧಕ ಪ್ರಶಸ್ತಿ ಗೌರವ ದೊರೆಯಿತು.

ಆತ್ಮಕಥೆ ಬರೆಯುತ್ತೇನೆ

ರಾಷ್ಟ್ರೋತ್ಥಾನ ಪರಿಷತ್ತಿನ ‘ಉತ್ಥಾನ’ ಮಾಸಪತ್ರಿಕೆ ಸಂಪಾದಕರು. ‘ಶರ್ಮಾಜಿ, ನೀವು ಆತ್ಮಕಥೆ ಬರೆಯಬೇಕು’ ಎಂದರು. ‘ಇಲ್ಲ, ನಾನು ಅಷ್ಟು ದೊಡ್ಡವನಲ್ಲ’ ಅಂದರು ಶರ್ಮ. ಕಡೆಗೆ ಸಂಪಾದಕರ ಆತ್ಮೀಯ ಒತ್ತಾಯಕ್ಕೆ ಸೋತರು. ೧೯೬೯ರ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಯಿತು. ಉತ್ಥಾನದಲ್ಲಿ ಅವರ ಆತ್ಮಕಥೆ ‘ನನ್ನ ಜೀವನ ಮತ್ತು ಧ್ಯೇಯ’. ಧಾರಾವಾಹಿಯಾಗಿ ೧೯೭೩ರ ನವೆಂಬರ್ ತಿಂಗಳವರೆಗೆ ಮುಂದುವರಿಯಿತು. ಒಂದು ಅಮೂಲ್ಯ ಕೃತಿ ಪೂರ್ಣವಾಗದೆ ಉಳಿಯಿತು.

ದೀಪವಾಗಿ ಉಳಿದಿದ್ದಾರೆ

ಭಾರತದ ಸ್ವಾತಂತ್ಯ್ರ ಹೋರಾಟಗಾರರೂ ಹೊಸಗನ್ನಡ ಗದ್ಯ ಶಿಲ್ಪಿಗಳೂ ಗಾಂಧೀ ಸಾಹಿತ್ಯ ಸಂಘದ ಸ್ಥಾಪಕರೂ ಆದ ಸಿದ್ದವನಹಳ್ಳಿ ಕೃಷ್ಣಶರ್ಮರು ೧೯೭೩ರ ಅಕ್ಟೋಬರ್ ೧೪ ರಂದು ನಿಧನರಾದರು. ಅವರು ತಾತಾಚಾರ್ಯ ಶರ್ಮರ ಬಂಧುಗಳು. ‘ವಿಶ್ವಕರ್ಣಾಟಕ’ ಪತ್ರಿಕೆಯನ್ನು ಕೆಲವು ಕಾಲ ನೋಡಿಕೊಂಡ ಆಪ್ತರು. ಅವರು ತೀರಿಕೊಂಡ ದಿನ ತಾತಾಚಾರ್ಯ ಶರ್ಮರು ಅವರ ಸ್ಮಶಾನಯಾತ್ರೆಗೆ ಇದ್ದು ಹಿಂದಿರುಗಿದಾಗ ಮಧ್ಯಾಹ್ನವಾಗಿತ್ತು. ಆಯಾಸ ದೇಹಕ್ಕೆ, ದುಃಖ ಮನಸ್ಸಿಗೆ, ಮನೆಗೆ ಹಿಂದಿರುಗಿದರು. ಹೃದಯದಲ್ಲಿ ನೋವು ಕಾಣಿಸಿಕೊಂಡಿತು. ಕೂಡಲೇ ವಿಕ್ಟೋರಿಯಾ ಆಸ್ಪತ್ರೆ ಸೇರಿದರು. ಒಂದು ವಾರವೂ ಕಳೆದಿರಲಿಲ್ಲ. ೧೯೭೩ರ ಅಕ್ಟೋಬರ್ ೨೦ ರಂದು ತಾತಾಚಾರ್ಯ ಶರ್ಮರು ತೀರಿಕೊಂಡರು. ಅವರ ‘ಜೀವನ ಮತ್ತು ಧ್ಯೇಯ’ ಆತ್ಮಕಥೆ ಪೂರ್ತಿಯಾಗದೇ ಅರ್ಧಕ್ಕೇ ನಿಂತಿತು.

ತಿ.ತಾ. ಶರ್ಮರ ಚಿಕ್ಕ ತಾತ ವಿದ್ವಾನ್‌ರಾಜ ಗೋಪಾಲಚಾರ್ಯರು ಹಿಂದೆ ಅಮೃತ ಘಳಿಗೆಯಲ್ಲಿ ಹೇಳಿದ್ದ ಮಾತು ಸತ್ಯವಾಯಿತು. ಅವರು, ಶರ್ಮರು ತೊಟ್ಟಿಲ ಕೂಸಾಗಿದ್ದಾಗ, ತಮ್ಮ ತಮ್ಮನನ್ನು ಕರೆದು, “ಶ್ರೀರಂಗ, ಇದೇ ನಿನ್ನ ಮನೆಯ ದೀಪ ಅಂದುಕೋ” ಅಂದಿದ್ದರಲ್ಲ! ತಿ.ತಾ. ಶರ್ಮ ತಿರುಮಲೆ ಮನೆತನದ ಮನೆದೀಪ ಮಾತ್ರವಲ್ಲ, ದೇಶಕ್ಕೇ ಪ್ರಕಾಶಮಾನ ದೀಪವಾಗಿ ಚಿಕ್ಕತಾತನ ಮಾತನ್ನು ನಿಜ ಮಾಡಿದರು. ಪತ್ರಿಕಾಕರ್ತ, ಸಂಶೋಧಕ, ಸಾಹಿತಿ, ದೇಶಭಕ್ತ ಹೀಗೆ ಬಹುಮುಖವಾಗಿ ಜನರ ಕತ್ತಲನ್ನು ಹೋಗಲಾಡಿಸುವ ಪ್ರಕಾಶಮಾನ ದೀಪವಾಗಿ ದೇಶ ಭೂಷಣರಾಗಿದ್ದಾರೆ.