ಈಗ್ಗೆ ಸುಮಾರು ಎರಡುಸಾವಿರ ವರ್ಷಗಳ ಮಾತು! ಆಗ ಇಂದಿನ ಮೈಲಾರಪುರಕ್ಕೆ “ಮೈ ಲೈ” ಎಂದೇ ಹೆಸರು. ಅದೊಂದು ಪುಟ್ಟಗ್ರಾಮ. ಗಿಡ ಮರ ತೋಟಗಳ ತೌರೂರು. ಅಲ್ಲಿ ನವಿಲುಗಳೇ ಹೆಚ್ಚು. ಮಯೂರನೃತ್ಯ ಇಲ್ಲಿ ದಿನಬೆಳಗಿನ ನೋಟ. ಇದನ್ನು ಕಾಣಲು ಅನೇಕ ಸಾಧು ಸಂತರು ಇಲ್ಲಿಗೆ ಬರುತ್ತಿದ್ದರು.

ಮುದ್ದು ಮಗುವನ್ನು ಬಿಡಬೇಕು!

ಒಮ್ಮೆ ಈ ತಾಣಕ್ಕೆ ಇಬ್ಬರು ಅತಿಥಿಗಳು ಬಂದರು, ಅವರ ಹೆಸರು ಆದಿ ಮತ್ತು ಭಗವಾನ್. ಭಗವಾನ್ ನೋಡಲು ಪರಮೇಶ್ವರನಂತೆ! ಮಹಾಜ್ಞಾನಿ. ಪೂಜೆ ಪಾರಾಯಣ ಎಲ್ಲ ಬಲ್ಲ. ಆದಿ ರೂಪವತಿ. ಪತಿಪರಾಯಣೆ. ಈಕೆಗೆ ನವಮಾಸ ತುಂಬಿತ್ತು. ಊರ ಪಕ್ಕದಲ್ಲಿ ಬಿದಿರಿನ ಮಳೆ! ಅದು ಸೊಂಪಾಗಿ ಬೆಳೆದಿತ್ತು. ಆದಿ ಅದರ ಬುಡದಲ್ಲಿ ಗಂಡು ಶಿಶು ಹಡೆದಳು.

ಮುದ್ದಾದ ಮಗು. ನೋಡಿ ನಲಿಯುವ ಬದಲು ಅತ್ತಳು! ಕಾರಣ ಮಕ್ಕಳಾದರೆ ಆ ಊರೇ ಬಿಡಬೇಕು. ಜತೆಗೆ ಮಗುವನ್ನೂ ಒಯ್ಯಬಾರದು. ಇದು ಆ ದಂಪತಿಗಳು ಮದುವೆಗೆ ಮುನ್ನ ಮಾಡಿಕೊಂಡಿದ್ದ ಕರಾರು. ಇದನ್ನು ತನ್ನ ಗೆಳತಿಯರಲ್ಲಿ ಆದಿ ತೋಡಿಕೊಂಡಿದ್ದಳು. ಈಗ ಆ ವೇದನೆ ಹತ್ತಿತು. ಎವೆಯಿಕ್ಕದೆ ಮುದ್ದು ಕೂಸನ್ನು ನೋಡುತ್ತಿದ್ದಳು. ತಾಯಿಯ ವೇದನೆ ಮಗುವಿಗೆ ಅರಿವಾಗಿರಬೇಕು. ಅದು ಕಣ್ಣನ್ನು ಮಿಟುಕಿಸಿತು. ಬಾಯನ್ನು ಅಲುಗಿಸಿತು.

“ಅಮ್ಮಾ, ಅಳಬೇಡ, ದೇವರು ಕರುಣಾಳು. ಅವ ಎಲ್ಲರಿಗಿಂತ ಹೆಚ್ಚು ಪ್ರೀತಿಸಬಲ್ಲ. ಅವನೇ ನಿನ್ನ ನೋವನ್ನೂ ಗುಣಪಡಿಸುವನು. ನಿನ್ನ ಆಶೀರ್ವಾದ ಇರಲಿ. ನನಗೆ ಅದೇ ಶ್ರೀರಕ್ಷೆಯಾಗುವುದು. ನೀನು ಹೋಗಿ ಬಾ! ನನಗಾಗಿ ಚಿಂತಿಸಬೇಡ” ಎಂದಂತಾಯಿತು.

ಊರಲ್ಲಿ ಸುದ್ದಿ ಹಬ್ಬಿತು! ಆದಿ-ಭಗವಾನ್ ಊರು ಬಿಟ್ಟರು. ರಾತ್ರಿ ಇದ್ದವರು ಬೆಳಗಾದರಿಲ್ಲ. ಮಗು ಏಕಾಂಗಿಯಾಗಿ ಅಳುತ್ತಿದೆ. ಹಾಲು ಕುಡಿಸುವವರಿಲ್ಲ. ಎತ್ತಿ ಆಡಿಸುವವರಿಲ್ಲ.

ಕೈ ಹಿಡಿದರು

ಮೈಲಾಪುರದಲ್ಲಿ ಒಬ್ಬ ನೇಯ್ಗೆಯವರಿದ್ದರು. ಶ್ರೀಮಂತರು. ಅವರಿಗೆ ಮಕ್ಕಳಿಲ್ಲ. ಬೇಕಾದಷ್ಟು ಆಸ್ತಿ. ಅನುಭವಿಸುವವರು ಬೇಕಲ್ಲ? ಈ ಸಮಾಚಾರ ಅವರಿಗೆ ತಿಳಿಯಿತು. ಗಂಡ ಆ ಮಗುವನ್ನು ಸಾಕಲು ಆಸೆಪಟ್ಟ. ಮಡದಿ ಆ ಮಗುವಿನ ಸಮೀಪ ಓಡಿ ಬಂದಳು. ಮುದ್ದು ಮಗುವನ್ನು ನೋಡಿದಳು. ಮನಸ್ಸು ಹಿಗ್ಗಿತು. ಕೈಚಾಚಿದಳು. ಮಗುವು ಕೈಚಾಚಿದಂತೆ ಎನ್ನಿಸಿತು ಅವಳಿಗೆ. ಒಡನೆ ಎತ್ತಿಕೊಂಡು ಮನೆಗೆ ಒಯ್ದಳು. ಆ ಎಂಪತಿಗಳ ಹರ್ಷ ಹೇಳತೀರದು – ಕತ್ತಲೆಮನೆ ಬೆಳಕಾಯಿತು.

ತಮಿಳಿನಲ್ಲಿ ನೇಯ್ಗೆಯವರಿಗೆ ವಳ್ಳುವರ್ ಅನ್ನುತ್ತಾರೆ. ಮಗು ಅವರ ಮನೆ ಸೇರಿದ್ದರಿಂದ ಮುಂದೆ ಜನ ಅವನನ್ನು “ವಳ್ಳುವರ್” ಎಂದೇ ಕರೆದಿರಬೇಕು.

ಹುಡುಗನ ಗುರುಗಳು

ವಳ್ಳುವರ್ ಒಳ್ಳೆಯ ಮನೆಯನ್ನೆ ಸೇರಿದಂತಾಯಿತು. ಮುದ್ದಿಸುವ ತಂದೆ ತಾಯಿ, ಸಿರಿ ತುಂಬಿದ ಮನೆ. ಬೇಕಾದಷ್ಟು ಆಸ್ತಿ. ಇದಾವುದೂ ಒಲ್ಲ. ಓದಲು ಶಾಲೆಗೆ ಕಳಿಸಿದರೆ, ಈತ ತೋಟದಿಂದ ಬರುತ್ತಿದ್ದ. ಪಾಠವನ್ನು ಕೇಳಿದರೆ, ಜನರ ಸಂಕಟವನ್ನು ಒಪ್ಪಿಸುವ. ಈತನ ರೀರಿ ನೀತಿಯೇ ಬೇರೆ. ಅಂದಮೇಲೆ ಈತ ಕಲಿತದ್ದು ಎಲ್ಲಿ? ಶಾಲೆಯಲ್ಲೊ? ಮಠದಲ್ಲೋ? ಗುರುಗಳಲ್ಲೋ? ಗೃಹಸ್ಥನಲ್ಲೋ? ಈ ಪ್ರಶ್ನೆ ಇನ್ನೂ ಜೀವಂತವಾಗಿದೆ. ಆದರೆ ವಳ್ಳುವರ್ ಪ್ರಕೃತಿಪ್ರೇಮಿ. ಗಿಡಮರಗಳನ್ನು ಕಂಡರೆ ಆನಂದ: ನಿಂತು ನಿಂತಲೇ ನೋಡುತ್ತ ನಿಲ್ಲುವ ಗುಣ. ಹಗಲು ರಾತ್ರಿ ಅರಿವಿಲ್ಲ. ಚಳಿ ಗಾಳಿಯ ಪರಿವೆ ಇಲ್ಲ. ನರ್ತಿಸುವ ನವಿಲು ಇವನ ಗೆಳೆಯ. ಹಾಡುವ ಹಕ್ಕಿ ಇವನ ನಂಟ. ಬಣ್ಣ ಬಣ್ಣದ ಹೂಗಳೇ ಇವನ ದೇವರು. ಕಾಡಿನ ಕಾಯಿ ಹಣ್ಣೇ ಇವನ ಆಹಾರ.ಹುಡುಗ ವಳ್ಳುವರ್ ಅನೇಕ ಗುರುಗಳಲ್ಲಿ ಕಲಿತ. ಗುರುಗಳು ಅಸಾಮಾನ್ಯರು. ಪಾಠಗಳೂ ಅಷ್ಟೆ. ನಿಸರ್ಗವೇ ಅವನ ಶಾಲೆ. ಬೆಳಗಿನಿಂದ ಸಂಜೆಯವರೆಗೂ ಪಾಠದ ವೇಳೆ. ಮೊದಲ ಪಾಠಕ್ಕೆ ಸೂರ್ಯದೇವ ಬರುತ್ತಿದ್ದ. ದುಡಿಮೆಯ ಬೋಧೆ ಅವನದು. ದುಡಿ….ದುಡಿ….ದುಡಿ….ಕಷ್ಟಪಟ್ಟು ದುಡಿ. ಕಾಯಕವೇ ಕೈಲಾಸ. ಇದು ಸೂರ್ಯದೇವನ ಪಾಠ. ಎರಡನೆಯ ಪಾಠಕ್ಕೆ ಸಮುದ್ರರಾಜ ಗುರು…. ಗಂಭೀರ ಜೀವನದಲ್ಲಿ ಬಹಳ ಮುಖ್ಯ. ರಾಮನನ್ನು ನೋಡು. ತಾಯಿ ಕಾಡಿಗೆ ಹೋಗೆಂದಳು. ರಾಮ ಗಂಭೀರವಾಗೇ ಇದ್ದ. ರಾವಣ ಅಕ್ಷೋಹಿಣಿ ಸೈನ್ಯವನ್ನೇ ತಂದ! ಆಗಲೂ ರಾಮ ಗಂಭೀರವಾಗೇ ಇದ್ದ. ಇದನ್ನು ನಿನ್ನ ಜೀವಿತದಲ್ಲಿ ಅಡಗಿಸಿಕೋ ಎಂದು ಸಮುದ್ರರಾಜ ಕಲಿಸಿದ.

ಮತ್ತೊಬ್ಬ ಉಪಾಧ್ಯಾಯಿನಿ ಭೂತಾಯಿ. ಅವಳು ಹೇಳಿದಳು – ಕ್ಷಮೆ ಬಹಳ ದೊಡ್ಡ ಗುಣ. ಶಕ್ತಿ ಗಳಿಸಬೇಕು. ಸೇಡು ತೀರಿಸಬಾರದು. ವಸಿಷ್ಠರನ್ನು ನೋಡು; ಆತ ಕೀರ್ತಿಗಳಿಸಿದ್ದು ತನ್ನ ಕ್ಷಮಾ ಗುಣದಿಂದ.

ಮುಂದಿನ ಪಾಠ ಸೇವೆಯ ಬಗ್ಗೆ. ಇದನ್ನು ಬೋಧಿಸಲು ಬಂದವರು ಮುವ್ವರು. ಅಗ್ನಿ, ವಾಯು, ವರುಣ, — “ನಾನು ಜ್ವಲಿಸುತ್ತೇನೆ. ನನಗಾಗಿ ಅಲ್ಲ, ಇತರರಿಗಾಗಿ. ನಾನು ಸದಾ ಬೀಸುತ್ತೇನೆ. ನನಗಾಗಿ  ಅಲ್ಲ, ಎಲ್ಲರೂ ಜೀವಿಸಲೂ. ನಾನು ಹರಿಯುತ್ತೇನೆ. ಏತಕ್ಕಾಗಿ? ಎಲ್ಲರ ಬಾಳಿಗಾಗಿ. ನಮ್ಮೆಲ್ಲರ ಗುರಿ ಒಂದೆ, ಸೇವೆ….ಸೇವೆ….ಸೇವೆ” ಹೀಗೆಯೇ ಹಕ್ಕಿ ಹಾಡನ್ನು ಕಲಿಸಿತು. ನವಿಲು ನರ್ತಿಸಲು ಹೇಳಿತು.

ವಳ್ಳುವರ್ ಕಲಿತಿದ್ದು ಹೀಗೆ. ಪ್ರಕೃತಿಯೇ ಅವನ ನಿಜವಾದ ಗುರು-ಜನರೇ ಅವನ ಅನುಭವದ ಆಧಾರ. ಸಿರಿವಂತರಷ್ಟೆ ಬಡವರಲ್ಲೂ ಕನಿಕರ.

ಹುಡುಗ ಮನೆಬಿಟ್ಟ

ಒಮ್ಮೆ ಹೀಗೆ ನಡೆಯಿತು. “ಸ್ವಾಮೀ, ಸ್ವಾಮೀ” ಎಂದು ಕೂಗಿದ ತಿರುಕ. ಆ ಕೂಗಿನಲ್ಲಿ ಕೊಳಿಲ್ಲದ ನೋವಿತ್ತು. ಕುಳಿಬಿದ್ದ ಕಣ್ಣು. ಕುಗ್ಗಿದ ದೇಹ. ಬರಿದಾದ ಭಿಕ್ಷಾಪಾತ್ರೆ. ಹುಡುಗ ವಳ್ಳುವರ್ ತಡಮಾಡದೆ ಒಳಹೊಕ್ಕ. ಬಿಸಿ ಬಿಸಿ ಕೀರು, ಘಮ ಘಮಿಸುತ್ತದೆ. ತಾಯಿ ತನಗಾಗಿ ಮಾಡಿದ ಅಮೃತವದು. ಅಷ್ಟೊ ಎಂದು ಭಿಕ್ಷುಕನ ಪಾತ್ರೆ ತುಂಬಿಸಿದ.

ಇವ ಅತ್ತ ಹೋಗುವುದೇ ತಡ ಇತ್ತ ಬಂದಳು ಇನ್ನೊಬ್ಬಳು. ಕಂಕುಳಲ್ಲಿ ಮಗು ಬೇರೆ. ಚಿಂದಿಚಿಂದಿಯಾದ ಬಟ್ಟೆ. ಚಳಿ ಗಾಳಿಗೆ ಮೈ ನಡಗುತ್ತಿದೆ. ವಳ್ಳುವರ್ ಕಣ್ಣಲ್ಲಿ ಹನಿಗೂಡಿತು. ಭಿಕ್ಷುಕಿ ಕೂಗುವ ಮೊದಲೆ ಹೊದೆಸಿದ! ಏನು ಗೊತ್ತೆ? ಪೀತಾಂಬರ! ಅದೂ ದೇವರಿಗಾಗಿ ನೇಯ್ದದ್ದು. ಇದನ್ನು ಕಂಡು ಅನೇಕ ಜನ ಹಲುಬಿದರು. “ಇವನಿಗೇನು ಬಂದಿದೆ ದಾಡಿ. ಬಂದಬಂದವರಿಗೆಲ್ಲ ಹೀಗೆ ನೀಡುತ್ತಾನೆ. ಇದೇನು ಮನೆಯೋ – ಛತ್ರವೋ? ಇನವಿಗೇನು ಗೊತ್ತು ದುಡಿಮೆಯ ಕಷ್ಟ! ಹೆತ್ತ ಮಗನಾಗಿದ್ದರೆ ಹೀಗೆ ಮಾಡುತ್ತಿದ್ದನೆ? ಮೂರೇ ದಿನಗಳಲ್ಲಿ ಮನೆ ಮುಳುಗಿಸಿಬಿಡುತ್ತಾನೆ!” ಹೀಗೆಲ್ಲ ಹೇಳಿದರು.

ವಳ್ಳುವರನ ತಾಯಿ ಎಲ್ಲವನ್ನೂ ಕೇಳಿದಳು. ತುಟಿ ತೆರೆಯಲಿಲ್ಲ. ಅವಳಿಗೂ ದಾನ ಧರ್ಮ ಅಂದರೆ ಅಷ್ಟಕ್ಕೆ ಅಷ್ಟೆ. ತಂದೆಗೆ ನೀಡುವುದಕ್ಕಿಂತ ಕೂಡಿಡುವುದರಲ್ಲಿ ಆಸಕ್ತಿ. ವಳ್ಳುವರ್ ನಿರ್ಧರಿಸಿದ – “ಅಂದ ಮೇಲೆ ನಾನಿನ್ನು ಇಲ್ಲಿರುವುದು ಸರಿಯಲ್ಲ”. ರಾತ್ರಿ ನಿದ್ದೆ ಬರಲಿಲ್ಲ. ಅರ್ಧ ರಾತ್ರಿ ಮೀರಿತ್ತು. ಸದ್ದು ಗದ್ದಲಗಳಿಲ್ಲ. ತಂದೆ – ತಾಯಿಗೆ ಗಾಢನಿದ್ರೆ. ವಳ್ಳುವರ್ ಅವರ ಪಾದ ಮುಟ್ಟಿದ, “ನೀವು ನನ್ನನ್ನು ಸಲಹದಿರಿ. ಅನ್ನ ಆಹಾರವಿತ್ತು ಬೆಳೆಸಿದ್ದೂ ನೀವೆ. ನಿಮ್ಮ ಪ್ರೀತಿ ಆಗಾಧ. ನಿಮ್ಮ ಪ್ರೇಮಕ್ಕೆ ನಾನೇನು ಅರ್ಪಿಸಲಿ? ನನ್ನಿಂದ ನಿಮಗೆ ನಿಂದೆ ಬೇಡ. ಇದೋ ನಾನು ಹೊರಡುತ್ತಿರುವೆ. ನಿಮ್ಮ ಆಶೀರ್ವಾದ ನನಗಿರಲಿ” ಅಂದವನೆ ಹೊರಟ, ದೂರ…. ದೂರ…. ಬಹುದೂರ ಹೊರಟೇಬಿಟ್ಟ.

ಹೆಸರು ಕೇಳಿಬಂತು!

ಹುಡುಗ ಕಾಂಚೀಪುರಕ್ಕೆ ಬಂದ. ಕಾಸಿನಷ್ಟೂ ನೆಮ್ಮದಿ ಇಲ್ಲ. ತಿರುವಳ್ಳುವರ್ ಗೆ ಹೋದ. ಅಲ್ಲಿ ತಿರುಗಿ ಸಾಕಾಯಿತು. ಅಲ್ಲಿಂದ ಚಿದಂಬರಂ. ಅದು ಚಿಂತೆಯ ಬೀಡು. ನಾಡಿನ ಉದ್ದ ಅಗಲಕ್ಕೂ ಸುತ್ತಿದ್ದು ಆಯಿತು. ಎಲ್ಲಿಗೆ ಹೋದರೂ ನೆಮ್ಮದಿಯಿಲ್ಲ. ಏನೋ ಚಿಂತೆ. ಏತರದೋ ಕಾತರ. ಏನೋ ಕಾಣುವ ಚಪಲ. ಆಗ ಕೈ ಬೀಸಿ ಕರೆಯಿತು ಕಾವೇರಿ! ಸುಂದರವಾದ ನದಿ ತೀರ. ಒತ್ತಾತಿ ಬೆಳೆದ ಹೆಮ್ಮರಗಳು. ಅಲ್ಲಲ್ಲೇ ಬಿದಿರ ಮಳೆಗಳು. ಜಾಜಿ ಸಂಪಿಗೆಗಳ ಕಂಪು. ಪಕ್ಷಿಗಳ ಇಂಪು.

ವಳ್ಳುವರ್ ಅಲ್ಲೇ ನೆಲಸಿದ. ನದಿಯ ಸ್ನಾನ. ಬಂಡೆಯೇ ಆಸನ! ಹುಲ್ಲೇ ಹಾಸಿಗೆ! ಮರದ ತೊಗಟೆಯೇ ಹೊದ್ದಿಕೆ! ಅನ್ನ ಆಹಾರ ಒಲ್ಲ. ಅವನಿಗೆ ಬೇಕಿದ್ದುದು ಶಾಂತಿ. ಈ ನೆಲೆ ಈ ಪರಿಸರ ಹಿತವೆನಿಸಿತು. ಬಹುಕಾಲ ಅಲ್ಲೆ ನಿಂತು ತಪಸ್ಸು ಮಾಡಿದ. ಮನುಷ್ಯನು ಹಸಿವು – ಬಾಯಾರಿಕೆ, ನಿದ್ರೆ – ಆಯಾಸ, ದುಃಖ – ದುಮಮಾನ ಇವುಗಳಿಂದ ಕೂಡಿದವನೇ! ಇವನ್ನು ಮೆಟ್ಟಿ ನಿಂತು ದೇವರಲ್ಲಿ ಮನಸ್ಸನ್ನು ನಿಲ್ಲಿಸುವುದೇ ತಪಸ್ಸು.

ವಳ್ಳುವರ್ ಮಾಡಿದ್ದು ಇದನ್ನೇ. ಅನೇಕ ವರ್ಷ ತಪಸ್ಸು ಮಾಡಿ ಅದ್ಭುತ ಶಕ್ತಿ ಪಡೆದರು. ಅದನ್ನೇ ವಳ್ಳುವರ್ ಹೇಳುತ್ತಾರೆ – “ಶತ್ರುಗಳನ್ನು ಸದೆ ಬಡಿಯುವುದು, ಮಿತ್ರರನ್ನು ರಕ್ಷಿಸುವುದು, ಮುಂದಿನ ಜನ್ಮಕ್ಕೆ ಇದು ಸಾಧಕ. ತಪಸ್ಸಿನ ಬೆಂಕಿ ಪಾಪವನ್ನು ಸುಡುತ್ತದೆ. ಜ್ಞಾನವನ್ನು ಬೆಳಗಿಸುತ್ತದೆ. ತಪಸ್ಸಿನಿಂದ ಆತ್ಮ ಲಾಭ, ಸರ್ವಪೂಜ್ಯತೆ ತಪಸ್ವಿಗಳು ಮೃತ್ಯುವನ್ನೂ ಗೆಲ್ಲುತ್ತಾರೆ. ಆದ್ದರಿಂದ ನಿಜವಾದ ಸಂಪತ್ತು ಈ ತಪಸ್ಸೇ”.

ಈಗ ವಳ್ಳುವರ್ ಕೀರ್ತಿ ಹಬ್ಬಿದೆ. ಅವರನ್ನು ಜನ ಗೌರವಿಸುತ್ತಾರೆ. ಅನೇಕರು ಅವರ ಶಿಷ್ಯರಾದರು. ಮತ್ತೆ ಕೆಲವರು ಮಿತ್ರರಾದರು. ಅವರ ಸೇವೆ ಒಬ್ಬೊಬ್ಬರಿಗೆ ಒಂದೊಂದು ವಿಧದಲ್ಲಿ ಸಂದಿತು.

ಯುವಕನಿಗೆ ಕತ್ತಲಲ್ಲಿ ಬೆಳಕು

ಕಡಲ ಅಲೆ ರಪರಪನೆ ಬಡಿಯುತ್ತದೆ. ಒಮ್ಮೆ ಮರದಷ್ಟು ಎತ್ತರ. ಇನ್ನೊಮ್ಮೆ ಗಿರಿಯಷ್ಟು ಎತ್ತರ. ಆ ಅಲೆಯ ಹೊಡೆತಕ್ಕೆ ಅನೇಕ ದೋಣಿಗಳು ಮುಳುಗಿದವು. ಇದೆಲ್ಲ ನೋಡುತ್ತಿದ್ದಾನೆ ಒಬ್ಬ ಯುವಕ. ಇವನೊಬ್ಬ ಪುಟ್ಟ ದೋಣಿ ವ್ಯಾಪಾರಿ.

ಯುವಕನ ಹಡಗೂ ಮುಳುಗಿತು! ಆತ ದುಃಖದಿಂದ ಕುಸಿದುಬಿದ್ದ. ಇದ್ದ ಹಣವೆಲ್ಲ ನೀರ ಪಾಲಾಗಿದೆ. ಮುಂದೆ ಕಾದಿದೆ ಕರಾಳ ದಿನಗಳು. ಗೆಳೆಯರು ಎಷ್ಟೋ ಧೈರ್ಯ ಹೇಳಿದರು. ಅವನ ದುಃಖ ಇಂಗಲಿಲ್ಲ. ಜನರ ಸಂಚಾರ ನಿಂತಿದೆ. ಈಗ ಕತ್ತಲು. ಯುವಕನನ್ನು ಬಿಟ್ಟು ಅನ್ಯರಿಲ್ಲ. ಆತ ಸಮುದ್ರವನ್ನೇ ದಿಟ್ಟಿಸಿ ನೋಡುತ್ತಿದ್ದಾನೆ. ತನ್ನ ಭವಿಷ್ಯವನ್ನೇ ತಿಂದ ಸಮುದ್ರ ಈಗ ತಣ್ಣಗಿದೆ. ಆದರೆ ಯುವಕನ ಹೃದಯದಲ್ಲಿ ದಾವಾಗ್ನಿ ಎದ್ದಿದೆ! ಅದು ತಡೆಯದೆ ಮತ್ತೆ ಕಣ್ಣೀರ ಕೋಡಿ! 

ನಿಸರ್ಗವೇ ಅವನ ಶಾಲೆ

“ತಮ್ಮಾ, ತಮ್ಮಾ” ಕರುಣೆಯ ಧ್ವನಿ ಕೇಳಿಬಂತು. ಯುವಕ ಚಕಿತನಾದ! ಕತ್ತಲೆಯಲ್ಲಿ ಯಾರೂ ಕಾಣಲಿಲ್ಲ. ಆದರೆ ಮತ್ತೆ ಮತ್ತೆ ಧ್ವನಿ ಕೇಳಿಬಂತು. ಯಾರೋ ಕಾಣಲಿಲ್ಲ. ಆದರೆ ಚಕಿತನಾದ! ಕತ್ತಲೆಯಲ್ಲಿ ಯಾರೂ ಕಾಣಲಿಲ್ಲ. ಆದರೆ ಮತ್ತೆ ಮತ್ತೆ ಧ್ವನಿ ಕೇಳಿಬಂತು. ಯಾರೋ ತನ್ನ ಭುಜದ ಮೇಲೆ ಕೈ ಹಾಕಿದರು. ಅಬ್ಬ! ಎಷ್ಟೊಂದು ತಣ್ಣಗಿದೆ ಈತ್ ಕೈ! ಈಶನಾರು? ಯುವಕ ತಿರುಗಿದ. ಆತನೊಬ್ಬ ಸಾಧು! “ಯಾರು ನೀವು? ನನ್ನನ್ನೇಕೆ ಮುಟ್ಟುವಿರಿ?” ಗೆಳೆಯ! ನಿನ್ನ ದುಃಖ ನನಗೆ ಅರಿವಾಗಿದೆ. ನಾನು ಬೆಳಗಿನಿಂದಲೂ ಇಲ್ಲೇ ಇದ್ದೇನೆ. ನಿನ್ನ ಸಂಕಟ ನಾಮೆಲ್ಲ ಬಲ್ಲೆ”.

“ಕೇಳು, ಲೋಕದಲ್ಲಿ ಅದೃಷ್ಟವೆಂಬುದು ಬಹಳ ದೊಡ್ಡದು. ಅದೃಷ್ಟದಿಂದ ಒಳ್ಳಯದು ಕೆಟ್ಟದಾಗುತ್ತದೆ. ಕೆಟ್ಟದು ಒಳ್ಳೆಯದು ಆಗುತ್ತದೆ . ಬರುವುದು ಹೋಗುವುದೂ ಅದೃಷ್ಟದಿಂದಲೆ. ಏಳು…. ಮೇಲೇಳು …. ನಿನ್ನ ದೌರ್ಬಲ್ಯ ಕಿತ್ತೂಗೆ, ಧೈರ್ಯತಾಳು. ಮುಂದೆ ನುಗ್ಗು. ಖಂಡಿತ ನಿನಗೆ ಒಳ್ಳೆಯದಾಗುವುದು. ನೀನು ಅದೃಷ್ಟವಂತನಾಗುವೆ.”

ಯುವಕನ ಕಣ್ಣರಳಿತು. ಧೈರ್ಯ ಮಾಡಿದ. ಇದ್ದ ಒಂದು ಮನೆ ಮಾರಿದ, ಮತ್ತೆ ವ್ಯಾಪಾರ ಮಾಡಿದ. ಒಂದು ಎರಡಾಯಿತು. ಎರಡು ನಾಲ್ಕಾಯಿತು. ನಾಲ್ಕು ಸಾವಿರವಾಯಿತು. ಕೆಲವೇ ತಿಂಗಳಲ್ಲಿ ಭಿಕ್ಷುಕ ಲಕ್ಷಾಧಿಪತಿಯಾದ.

“ನೀನು ಅದೃಷ್ಟವಂತನಾಗುವೆ!” ಸಾಧು ಹೇಳಿದ್ದ ಮಾತು ಸತ್ಯವಾಗಿತ್ತು. “ಹೇಗಾದರೂ ಆ ಸಾಧುವನ್ನು ಕಾಣಬೇಕು. ಅವನು ಸಾಧಾರಣನಲ್ಲ. ನನ್ನ ಭಾಗದ ದೈವ. ಅದು ಸರಿ, ಆತನಾರು? ಅವನಿರುವುದಾದರೂ ಎಲ್ಲಿ? ಹುಡುಕುವುದೆಂತು?” ಯುವಕ ಚಿಂತೆಗೀಡಾದ. “ಸಾಧುವಿನ ಸುಳಿವು ತಿಳಿದೀತೆ?” ಎಂದು ಅಲ್ಲಿ – ಇಲ್ಲಿ ಅಲೆಯಹತ್ತಿದೆ.

ಗಂಡ ಹೆಂಡತಿಯರಿಗೆ ಮಾರ್ಗದರ್ಶನ

ಒಂದು ಮನೆಯಲ್ಲಿ ಗಂಡ – ಹೆಂಡತಿ. ಇಬ್ಬರದೂ ಸ್ವಲ್ಪ ಹಟದ ಸ್ವಬಾವ. ಒಮ್ಮೆ ಸಣ್ಣ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳ.ಇದರ ಫಲ ಆಕೆ ಓಡಿಹೋದಳು – ಪತ್ತೆಯಿಲ್ಲ. ಆತ ಕಾಡು ಮೇಡು ಹತ್ತಿದ. ಅಲ್ಲಿ ಅನಿರೀಕ್ಷಿತವಾಗಿ ಸಾಧುವಿನ ಭೇಟಿಯಾಯಿತು! ಅಲ್ಲಿ ಅನಿರೀಕ್ಷಿತವಾಗಿ ಸಾಧುವಿನ ಭೇಟಿಯಾಯಿತು! ಸಾಧು ಹೇಳಿದ – “ನೋಡು! ಆ ಹಾಳು ಗುಡಿಯಲ್ಲಿ ಯಾರೋ ಇದ್ದಾಳೆ. ಆಕೆ ಇಲ್ಲಿಗೆ ಬಂದು ಮೂರು ನಾಲ್ಕು ದಿನ ಆಗಿದೆ. ಯಾರ ಸಂಗಡವೂ ಮಾತಿಲ್ಲ. ಸುಮ್ಮನೆ ಅಳುವಳು. ಹೋಗಿ ನೋಡು. ಅವಳೇ ನಿನ್ನ ಮಡೆಇ ಆಗಿದ್ದಲ್ಲಿ ನಿನ್ನ ಶ್ರಮ ಸಾರ್ಥಕ”.

ಸಾಧುವಿನ ಮಾತು ಸತ್ಯವಾಗಿತ್ತು! ಆಕೆ ಆತನನ್ನು ನೋಡಿ ಬೆಚ್ಚಿದಳು! ಆತ ಪಶ್ಚಾತಾಪ ಪಟ್ಟು ಮನೆಗೆ ಬರಲು ಕೇಳಿಕೊಂಡ. ಆಕೆ ಗಡುಸಿನಿಂದಲೇ ಇದ್ದಳು. ಆತನಿಗೆ ಹೇಳಿ ಹೇಳಿ ಸಾಕಯಿತು. ಸಾಧು ಗಮನಿಸಿದ. ಮತ್ತೆ ಅವರನ್ನು ಕೂಡಿಸುವ ಆಸೆ ಈತನದು. ಅವರ ಸಮೀಪ ಬಂದ. “ಛಲ – ಹಟ ಗೃಹಿಣಿ ಧರ್ಮವಲ್ಲ, ಗೃಹಕ್ಕೆ ಗೃಹಿಣಿಯೇ ಸರ್ವಸ್ವ. ಮಡದಿಯಿಂದಲೇ ಮನೆ. ಗೃಹಿಣಿ ತನ್ನನ್ನು ಕಾಪಾಡಿಕೊಳ್ಳುವಳು. ಕೈ ಹಿಡಿದವನನ್ನು ಕಾಪಾಡುವುದೊ ಅವಳೇ! ಏಳು, ಪತಿಯ ಜೊಗೆ ಹೋಗು. ಆತ ನಿನ್ನನ್ನು ಇನ್ನು ನೋಯಿಸಲಾರ.

ಸಾಧುವಿನ ಮಾತು ಹಿಡಿಸಿತು. ಆಕೆ ಮನೆಗೆ ಬಂದಳು! ಆ ಸಾಧು ಇವರಿಗೆ ದೊಡ್ಡ ಗುರುವಾದ.

ಕುಡುಕನನ್ನು ಉದ್ಧಾರ ಮಾಡಿದರು

ಮತ್ತೊಬ್ಬನಿಗೆ ಕುಡಿತದ ಚಟವಿತ್ತು. ಸಂಜೆ ಆದರೆ ಸಾಕು, ಕುಡಿದೇ ಕುಡಿಯಬೇಕು. ಕುಡಿಯದ ದಿನ ಹುಚ್ಚನೋ ಹುಚ್ಚ! ಇದರಿಂದ ಹೆಂಡತಿಗೆ ಕಷ್ಟ. ಅವಳು ಅವನಿಗೆ ಹಣತೆತ್ತು ಬರಿದಾಗಿದ್ದಳು. ಕೂಲಿಹಣ ಕುಡಿತದ ಪಾಲು, ಕೊಳಿಗೆ ಕಾಸಿಲ್ಲ.

ಒಮ್ಮ ಕುಡಿತಕ್ಕೆ ಹಣ ಸಿಗಲಿಲ್ಲ. ಹುಚ್ಚೆದ್ದ ಮಗ. “ಅಪ್ಪಾ ನೀನು ಕುಡಿದು ಕುಡಿದು ನಮ್ಮನ್ನು ಬಡಿಯಬೇಡ. ಅನ್ನ ತಿಂದು ಮೂರು ದಿನ ಆಯಿತು!” ಆಕೆಯೂ ದನಿಗೂಡಿಸಿದಳು, “ಅದೆಲ್ಲದರ ಚಿಂತೆ ಅವರಿಗೆಲ್ಲ? ಇವರ ಕೈಹಿಡಿದು ನಾನು ಕೆಟ್ಟೆ”. ಅವರ ಮಾತು ಇನ್ನೂ ಮುಗಿದಿರಲಿಲ್ಲ. ಅವಳ ಗಂಡ ಕಟ್ಟಿಗೆ ತುಂಡು ತೆಗೆದ – ಇಬ್ಬರ ಮೇಲೂ ಒಗೆದ -ಇಬ್ಬರಿಗೂ ರಕ್ತ ಬಂತು! ಆಗಲೂ ಅವನಿಗೆ ಕುಡಿತದ್ದೇ ಚಿಂತೆ. ಇಬ್ಬರೂ ಹೆಣದಂತೆ ಬಿದ್ದಿದ್ದರು. ಈಕೆಗೆ ಕಟ್ಟಿದ ತಾಳಿ ನೆನಪು ಬಂತು. ಸರಿ ಹೇಳುವುದೇನು? ಅದು ಕಿತ್ತ, ಕುಡಿತಕ್ಕೆ ತೆತ್ತ.

ಮರುದಿನ ಮನೆಗೆ ಹೋದ. ಈಕೆ ನರಳುತ್ತಿದ್ದಳು. ಯಾರೋ ಗಾಯಕ್ಕೆ ಸೊಪ್ಪು ಕಟ್ಟಿದ್ದರು. ಮಗ ಅಲ್ಲಿರಲಿಲ್ಲ. ಅವನಿಗೆ ಭಯವಾಯಿತು. ಆಕೆ ಉತ್ತರಿಸಲಿಲ್ಲ. ಪಕ್ಕದಚರು ತಿಳಿಸಿದರು. ಊರ ಹೊರಗೆ ಒಬ್ಬ ಸಾಧು ಇದ್ದಾನೆ. ಆತ ಭಿಕ್ಷಕ್ಕೆ ಬಂದಾಗ ಹುಡುಗನನ್ನು ಕಂಡ. ಹುಡುಗ ಅಪಾಯ ಸ್ಥಿತಿಯಲ್ಲಿದ್ದ. ಇದು ಅವನಿಗೆ ಅರಿವಾಯಿತು. ಕೂಡಲೆ ಎತ್ತಿಕೊಂಡು ಹೋದ. ತನ್ನ ಗುಡಿಸಿಲಿನಲ್ಲಿ ಚಿಕಿತ್ಸೆ ನೀಡುತ್ತಿದ್ದಾನೆ. ಸದ್ಯ! ಸಾಧು ಬಂದ. ಹುಡುಗ ಬದುಕಿದ.

ಮಗನನ್ನು ಕಾಣಲು ಬಂದ. ಸಾಧು ಎದುರಾದರು, ಹೇಳಿದರು, “ನಾನು ನಿನ್ನನ್ನು ಬಲ್ಲೆ” ಆದರೆ ಕುಡಿದವರಿಗೆ ಕಣ್ಣೇ ಕುರುಡಲ್ಲ! ಜತೆಗೆ ಬುದ್ಧಯೂ ಶೂನ್ಯ! ಕುಡಿತದ ಫಲವೇ ಈ ಮಗನ ಸ್ಥಿತಿ. ಇದೋ ನೋಡು, ನಿನ್ನ ಮಗ ಇನ್ನೂ ಅಪಾಯದ ಸ್ಥಿತಿಯಲ್ಲೇ ಇದ್ದಾನೆ”.

ಅವನು ಗುಡಿಸಲ ಒಳಗೆ ಹೋದ. ಮಗ ಚಾಪೆಯ ಮೇಲೆ ಮಲಗಿದ್ದಾನೆ. ಆತ ಜ್ವರದಿಂದ ತತ್ತರಿಸುತ್ತಿದ್ದಾನೆ. “ಅಪ್ಪಾ ಹೊಡೀಬೇಡ….ಅಮ್ಮಾ ತಾಳಿ ಜೋಕೆ, ಅಪ್ಪ ಕತ್ಕೋತ್ತಾನೆ….ಅಯ್ಯೋ ಅಪ್ಪಾ ಕುಡಿದು ಕುಡಿದು ನಮ್ಮನ್ನು ಸಾಯಿಸ್ತಾನೆ.”

ಮಗ ಹಲುಬುತ್ತಿದ್ದುದು ಅವನೇ ಕೇಳಿದ. ಆತನ ಒಂದೊಂದು ಮಾತೂ ಚೂರಿಯಲ್ಲಿ ಇರದಂತಾಯಿತು. ಸಾಧು ಹೇಳಿದರು, “ದೇಹಕ್ಕೆ ಬಿದ್ದ ಏಟಿಗೆ ಔಷಧಿಯುಂಟು. ಅದನ್ನು ವಾಸಿಯೂ ಮಾಡಬಹುದು. ಆದರೆ ಈ ಮಗುವಿಗೆ ಬಿದ್ದಿರುವ ಏಟು ಮನಸ್ಸಿಗೆ! ಆ ಗಾಯಕ್ಕೆ ಔಷಧಿ ನನ್ನಲಿಲ್ಲ”.

“ಅಯ್ಯಾ, ನಿಮ್ಮ ದಮ್ಮಯ್ಯ, ಹೇಗಾದರೂ ಮಾಡಿ ಮಗನನ್ನು ಕಾಪಾಡಿ” ಎಂದು ಬೇಡಿದ ತಂದೆ. ಸಾಧು ಕೇಳಿದರು. “ಹಾಗಾದಲ್ಲಿ ನೀನು ಒಂದು ವಾರ ಇಲ್ಲೇ ಇರುವೆಯಾ?” “ಸತ್ಯವಾಗಿ ಇರುವೆ”. ಅವನ ಮಾತು ಸಾಧುವಿಗೆ ತೃಪ್ತಿ ತಂದಿತು. ಜತೆಗೆ ಮಗನ ಮೇಲೆ ಆಣೆಯನ್ನು ಇಟ್ಟ. ಇದು ಸಾಧುವಿನ ಮನಸ್ಸನ್ನೇ ಕರಗಿಸಿತು.

ಆಮೇ;ಎ ನಡೆದಿದ್ದು ಪವಾಡ ಅನ್ನಬೇಕು! ಸಾಧುವಿನ ಪ್ರೇಮಕ್ಕೆ ಆ ಮನುಷ್ಯ ಮಾರುಹೋದ. ಹಗಲು ರಾತ್ರಿಗಳ ಅರಿವಿಲ್ಲದೆ ರೋಗಿಗಳ ಉಪಚಾರ. ಅದರ ಸಂಗಡ ಅವನಿಗೆ ಪಾಠ. ಕೋಪ ಬೆಂಕಿಗಿಂತ ಕ್ರೂರ. ಕೋಪವನ್ನು ತಡೆಯಬೇಕು. ಅದು ತನ್ನನ್ನೇ ಕೊಲ್ಲುವುದು. ಹಿಂಸೆಯಿಂದ ಕ್ಷಣ ಸುಖ; ತಾಳ್ಮೆಯಿಂದ ಚಿರ ಸುಖ! ನಿನ್ನ  ಇನ್ನೊಬ್ಬ ಶತ್ರು ಕುಡಿತ. ಇವನಿಗೆ ನೀನಯ ಎಡೆಕೊಟ್ಟರೆ ಸಾಕು, ನೀನೂ ಹಾಳು – ಸಂಸಾರವೂ ಹೋಳು! ಕುಡಿತಕ್ಕೆ ಬಲಿಯಾದವನು ಅವನು ಮಾಥ್ರ ಸಾಯುವುದಿಲ್ಲ. ಅವನ ಸರ್ವಸ್ವವು ಸಾಯುವುದು.

ಸಾಧೂವಿನ ಪಾಠ ಹುಡುಗನ ತಂದೆಗೆ ಬಹಳವಾಗಿ ಹಿಡಿಸಿತು. ಸಾಧು ಶಿಷ್ಯನ ಕೈಗಳಿಂದಲೇ ಮಾಡಿಸಿದ, ರೋಗಿಗಳ ಸೇವೆ. ಔಷಧಿಗಳ ತಯಾರಿಕೆ, ಗಿಡ ಮೂಲಿಕೆಗಳ ಸೇವನೆ – ಎಲ್ಲವೂ ಅವನಿಂದಲೇ. ಇದರಿಂದ ಮಡದಿ ಮಕ್ಕಳೂ ಬದುಕಿದರು. ಜೊತೆಗೆ ಅವನನ್ನೂ ಸಾಧು ಬದುಕಿಸಿದರು. ನಿಜಕ್ಕೂ ಆ ಸಾಧು – ಭೂಮಿಗೆ ಬಂದ ಭಗವಂತ ಎನ್ನಿಸಿತು ಅವನಿಗೆ.

ದೋಣಿಯನ್ನು ಕಳೆದುಕೊಂಡು ಎದೆಯೊಡೆದಿದ್ದ ಒಬ್ಬ ಯುವಕನಿಗೆ ಸಾಧು ಧೈರ್ಯ ಕೊಟ್ಟಿದ್ದರು. ಅಲ್ಲವೆ? ಆತ ಮತ್ತೆ ಶ್ರೀಮಂತನಾದ. ಆ ಸಾಧುವನ್ನು ಹುಡುಕಿಕೊಂಡು ಹೊರಬಿದ್ದ. ಕುಡುಕನಾಗಿದ್ದು ಸಾಧುವಿನ ಮಾರ್ಗದರ್ಶನದಿಂದ ಬುದ್ಧಿ ಕಲಿತ ಯುವಕ. ಇತರರು ಒಂದು ದಿನ ಕುಳಿತು ಸಾಧುವಿನ ವಿಷಯ ಮಾತನಾಡುತ್ತಿದ್ದರು. ಸಾಧುವನ್ನು ಹುಡುಕುತ್ತಿದ್ದ ಯುವಕ ಅತ್ತ ಬಂದ, ಅವರ ಮಾತುಗಳನ್ನು ಕೇಳಿದ.

ಕೋಪ, ಕುಡಿತ ಮನುಷ್ಯನ ಶತ್ರುಗಳು, ಕ್ಷಮೆ ಎಲ್ಲಕ್ಕೂ ದೊಡ್ಡದು

ಯುವಕನಿಗೆ ಸಾಧುವಿಗೆ ಅಡ್ಡ ಬಿದ್ದ. ಕಣ್ಮಲ್ಲಿ ಕರುಣೆಯ ಕೋಡಿಯೇ ಹರಿದಿತ್ತು. ಆ ಯುವಕನ ಹೆಸರು ಏಲಾಲ ಸಂಗಂ. ದೀನರ ಸೇವೆ, ದಲಿತರ ಉದ್ಧಾರ, ಮಕ್ಕಳ ಕಲ್ಯಾಣ, ಅನ್ನಸತ್ರಗಳನ್ನು ತೆರೆದು ಮದುವೆ ಮುಂಜಿಗಳನ್ನು ಮಾಡಿಸಿದ, ಏಲಾಲಸಿಂಗಂ. ಸಾಧುವಿನ ಸೇವೆಗೆ ಊರೆಗೋಲಾದ ಆ ಸಾಧುವೇ ಈ ವುಳ್ಳುವರ್.

ಪರೀಕ್ಷಕ ಸೋತ

ಅಂಗಡಿಗಳ ಸಾಲು, ಒಂದು ಅಂಗಡಿಯಲ್ಲಿ ಯುವಕನೊಬ್ಬ ಅಂಗಡಿಯವನನ್ನು ಕೇಳುತ್ತಿದ್ದಾನೆ.

“ನೀನೇನೋ ವಳ್ಳುವರ?”

“ಹೌದು ಹಾಗೆಂದು ಕರೆಯುತ್ತಾರೆ”

“ಈ ಲುಂಗಿಯನ್ನು ಯಾರು ನೇಯ್ದರು?”

“ನಾನೇ ನೇಯ್ದೆ.:”

ಎಲ್ಲಿ ಅದನ್ನು ಬಿಚ್ಚು ನೋಡೋಣ”.

“ವಳ್ಳುವರ್ ಪದರಗಳನ್ನು ಬಿಚ್ಚಿ ತೋರಿಸಿದ”.

“ಉಹುಂ” ಇದು ಜಾಳು. ಎಲ್ಲಿ ಅದು ತೆಗೆ”

“ಸ್ವಾಮಿ, ಅದು ಜಾಳಾಗಿದೆ. ಈಗ ನಿಮಗೆ ತೋರಿಸಿದ್ದೇ ಒಳ್ಳೆಯದು”.

“ಲೇ, ಆ ತಲೆಹರಟೆ ನಿನಗೆ ಬೇಡ. ಹೇಳಿದಷ್ಟುಮಾಡು.”

“ತಮ್ಮ ಚಿತ್ತ” ಎಂದವನೆ ಆತ ಬೇಡಿದ್ದು ಬಿಚ್ಚಿ ತೋರಿಸಿದ. ಅದು ನಿಜವಾಗೇ ಜಾಳಾಗಿತ್ತು.

“ಛೇ ಛೇ” ಇಷ್ಟೊಂದು ಜಾಳು. ಇದು ಮೈಯೆಲ್ಲಾ ಕಾಣುವುದಿಲ್ಲಾ. ಎಲ್ಲಿ ಆ ಕೆಂಪಂಚಿನ ಪಂಚೆ ತೆಗೆ?

“ಅಯ್ಯಾ! ಅದು ರೇಷ್ಮೆ ಅಂಚಿನದು. ನನ್ನಲ್ಲಿ ಒಂಟಿ ಪಂಚೆ ಇದೆ.

ಅಲ್ಲವೋ, ಒಂಟಿ ಪಂಚೆ ವ್ಯಾಪಾರಕ್ಕೆ ತರುವಿಯ?

ನಿಜ! ತರಬಾರದು, ಆದರೇನು ಮಾಡಲಿ? ಇದ್ದ ಹಣ ಕೊಂಚ. ಅದಕ್ಕೆ ನೂಲು ಕೊಂಡೆ ಪಂಚೆ ನೇಯ್ದು ತಂದೆ.”

“ಹಾಗಾದರೆ ಅದರ ಬೆಲೆ ಏನು?”

“ಇದಕ್ಕೆ ಒಂದು ಪಣ”.

ಫಟಿಂಗ ಯುವಕ ಬಟ್ಟೆ ಎರಡು ಮಾಡಿ ಕೇಳಿದ.

ಮಾರುವವ ರೇಗಲಿಲ್ಲ. ಸಹಜವಾಗಿಯೇ ಉತ್ತರಿಸಿದ:

“ಒಂದೊಂದು ಅರ್ಧ ಪಣ ಸ್ವಾಮಿ”.

ಯುವಕ ತನ್ನ ಮೊಂಡುತನ ಮತ್ತೂ ಬಿಡಲಿಲ್ಲ. ಎರಡು ನಾಲ್ಕು ಮಾಡಿದ.

“ಸರಿಯೇ, ಈಗ ಹೇಳು, ಇವಕ್ಕಷ್ಟು?:.

“ಚಿಂದಿಯೊಂದಕ್ಕೆ ಕಾಲು ಪಣ ಅಷ್ಟೇ!”

ಫಟಿಂಗ ದುರು ದುರು ನೋಡಿ. ಸಂತ ತುಟಿ ತೆರೆಯಲಿಲ್ಲ. ಮತ್ತೆ ಯುವಕ ಲೆಕ್ಕವಿಲ್ಲದಷ್ಟು ಚಿಂದಿ ಮಾಡಿ ಕೇಳೀದ.

“ಈಗ ಇವುಗಳ ಬೆಲೆ ಹೇಳು”.

“ಸ್ವಾಮಿ ಇದಕ್ಕೇ ಬೆಲೆಯೇ ಇಲ್ಲ! ಈ ತುಂಡುಗಳು ಯಾವ ಕೆಲಸಕ್ಕೂ ಬಾರವು. ಇದೆಲ್ಲವನ್ನೂ ನೀವೇ ತೆಗೆದುಕೊಂಡು ಹೋಗಿ” ಅಂದವನೆ ಎಲ್ಲ ಸೇರಿಸಿದ. ಪುಟ್ಟ ಗಂಟಾಯಿತು. ಆ ಯುವಕನ ಕೈಗಿತ್ತು ಕೈ ಮುಗಿದ.

ಯುವಕನಿಗೆ ದಿಕ್ಕೇ ತೋಚದಂತಾಯಿತು! ಬಿಕ್ಕಿ ಬಿಕ್ಕಿ ಅಳತೊಡಗಿದ. ಸಂತನ ಕಾಲು ಹಿಡಿದು – “ನಾನು ಮಹಾ ಪಾಪಿ. ತಮ್ಮನ್ನು ಬೇಕೆಂದೇ ಪರೀಕ್ಷಿಸಿದೆ. ತಾವು ಏನಾದರೂ ಸಿಟ್ಟಿಗೇಳಲೇ ಇಲ್ಲ. ನಾನು ಸೋತೆ. ನನ್ನ ತಪ್ಪು ಮನ್ನಿಸಿ. ತಾವು ಸಾಮಾನ್ಯರಲ್ಲ. ನಿಜವಾಗಿಯೂ ತಾವು ಮಹಾತ್ಮರೇ ಸರಿ” ಎಂದ. ತಿರುವಳ್ಳುವರ್ ಕಾಲಿಗೆ ಮತ್ತೆ ಮತ್ತೆ ಬಿದ್ದ. ಅವನ ಕಣ್ಣಲ್ಲಿ ಇನ್ನೂ ನೀರು ಹರಿಯುತ್ತಲೇ ಇತ್ತು.

ದರೋಡೆಕಾರರು ಶರಣಾದರು

ಮದುವೆಯಾದಾಗ ಹೊಸ ದಂಪತಿಗಳುಹಿರಿಯರಿಗೆ ನಮಸ್ಕರಿಸುವುದು, ಅವರು “ನಿಮಗೆ ಮಂಗಳವಾಗಲಿ” ಎಂದು ಆಶೀರ್ವದಿಸುವುದು ಇವನ್ನು ಎಲ್ಲ ಕಡೆ ಕಾಣುತ್ತೇವೆ. ತಮಿಳುನಾಡಿನಲ್ಲಿ ಹೀಗೆ ನಮಸ್ಕರಿಸಿದಾಗ ಹಿರಿಯರು “ಆದಿ – ಭಗವಾನ್ ಪೋಲ್ ವಾಳ್ಹ” ಎಂದು, “ವಾಸುಕಿ – ವಳ್ಳುವರ್ ಪೋಲ್ ವಾಳ್ಹ” ಎಂದು ಹರಸುವುದು ಸಾಮಾನ್ಯ. (“ಪೋಲ್ ವಾಳ್ಹ” ಎಂದರೆ “ಹಾಗೆ ಬದುಕಿ” ಎಂದರ್ಥ).

ಅದಕ್ಕೆ ಕಾರಣ ವಾಸುಕಿಯ ಚರಿತ್ರೆ. ಆಕೆ ಮಹಾ ಸಾಧ್ವಿ. ನಮ್ಮ ಪುರಾಣಕಾಲದ ಸೀತಾ – ಸಾವಿತ್ರಿಯರ ಹಾಗೆ ಈ ವಾಸುಕಿ.

ಮಾರ್ಗಸಹಾಯಂ ಅವಳ ತಂದೆ. ಆತ ಆಗರ್ಭ ಶ್ರೀಮಂತ. ಅವನಿಗಿದ್ದ ಆಸ್ತಿಯ ಅರಿವು ಅವನಿಗೇ ತಿಳಿಯದು! ಪುಂಪುಟ್ಟನಂ ಅವನ ಗ್ರಾಮ. ಮಾರ್ಗ ಸಹಾಯಂ ಮಹಾ ದೈವಭಕ್ತ.

ಒಮ್ಮೆ ಊರಿಗೆ ಊರೇ ತಲ್ಲಣಿಸಿತು; ಕಾರಣ ದರೋಡೆಕಾರರ ದಾಳಿ೧ ದಿನವೂ ರಾತ್ರಿ ಆದರೆ ಸಾಕು, ಅಲ್ಲಿ ಇಲ್ಲಿ ಕೊಳ್ಳೆ ಹೊಡೆಯುತ್ತಿದ್ದರು. ರೈತರು ಬಂದು ದಣಿಯ ಹತ್ತಿರ ಕಷ್ಟ ತೋಡಿಕೊಳ್ಳಹತ್ತಿದರು. ದಣಿಗೆ ದಿಕ್ಕೇ ತೋಚಲಿಲ್ಲ. ಊರಜನಕ್ಕೆ ಇದನರನು ತಡೆಯಲು ಶಕ್ತಿ ಇರಲಿಲ್ಲ. ಇದೇ ವೇಳೆಯಲ್ಲಿ ವಳ್ಳುವರ್ ಅವರ ಕೀರ್ತಿಯನ್ನು ಕೇಳಿದ್ದ ದಣಿ, ಕೆಲವು ಮಿತ್ರರೊಡನೆ ಹೊರಟ. ಅನೇಕ ಗ್ರಾಮಗಳಿಗೆ ಬಂದು ಅನೇಕ ಜನರನ್ನು ಸಂಧಿಸಿದ. ಅವರ ಶ್ರಮ ಸಾರ್ಥಕವಾಯಿತು.

ವಳ್ಳುವರ ಅವರ ದರ್ಶನವಾಯಿತು. ಈತ ಏಕಾಂಗಿ. ಮನೆ – ಮಠ ತನ್ನದೆಂದು ಏನೂ ಇಲ್ಲದ ಬೈರಾಗಿ ಈತ. ಊರು ಬಿಟ್ಟು ಕಾಡು ಸೇರಿದ್ದ ವಳ್ಳುವರ್ ಮಾರ್ಗಸಹಾಯಂ ತನ್ನ ಊರಕಥೆ ಹೇಳಿದ. ಬಂದವರೂ ತಮ್ಮ ಕಷ್ಟ ತೋಡಿಕೊಂಡರು – “ದಯವಿಟ್ಟು ಬನ್ನಿ, ನಮ್ಮನ್ನು ರಕ್ಷಿಸಿ ನೀವು ಬಂದರೆ ಸಾಕು, ದುಷ್ಟರು ತಾವಾಗೇ ಓಡುವರು. ನಿಮ್ಮ ಮಹಿಮೆ ನಮಗೆ ಗೊತ್ತು. ದಮ್ಮಯ್ಯಾ, ಒಲ್ಲೆ ಅನ್ನಬೇಡಿ”.

ವಳ್ಳುವರ್ ಊರು ಬಿಟ್ಟು ಕಾಡು ಸೇರಿದವರು. “ಈಗ ಮತ್ತೆ ಊರಿಗೆ ಹೋಗುವುದೇ?”, ಈ ಶಾಂತೆ ಈ ನೆಮ್ಮದಿ ಈ ಸುಖ ಈ ಆನಂದ ಅಲ್ಲೆಲ್ಲಿ ದೊರಕಬೇಕು?” ಚಿಂತಿಸಿದರು. ಆಗ ಹರಿಯುವ ನದಿ ಕೇಳಿತಯ: “ನಾನು ಯಾರಿಗಾಗಿ ಹರಿಯುತ್ತೇನೆ” ಮಾವಿನಮರ ಕೇಳಿತು: “ನನ್ನ ಹಣ್ಣು ಯಾರು ತಿನ್ನುತ್ತಾರೆ?” ಗಾಳಿಯೆಂದಿತು “ನಾನು ಬೀಸುವುದು ನನಗಾಗಿ ಅಲ್ಲ.” ಸೂರ್ಯ ಹೇಳಿದ: “ಸ್ವಾರ್ಥಿಯಾಗಬೇಡ. ನಾವೆಲ್ಲ ಪರರ ಸುಖಕ್ಕಾಗಿ ದುಡಿಯುತ್ತೇವೆ”. ವಳ್ಳುವರ್ ಎಲ್ಲವನ್ನೂ ಕೇಳೀದರು. ಕೊನೆಗೆ ಅವರ ಮನಸ್ಸು ಹೇಳಿತು – “ಹೌದು! ನೀನು ಸ್ವಾರ್ಥಿಯಾಗಬೇಡ. ನಿನಗೆ ಶಕ್ತಿ ಇರಲಿ, ಇಲ್ಲದಿರಲಿ ಅದರ ಚಿಂತೆ ಬೇಡ. ಅವರಿಗೆ ನೀನು ಬೇಕಿದೆ. ಸುಮ್ಮನೆ ಹೋಗು. ಅವರ ಮನ ತಣಿಸು”.

ವಳ್ಳುವರ್ ಊರಿಗೆ ಬಂದರು, ಜನರ ಆನಂದಕ್ಕೆ ಪಾರವೇ ಇಲ್ಲ. ವಳ್ಳುವರ್ ತೇರು ಊರ ಸುತ್ತ ಹರಿಯಿತು. ಆ ಜನಸ್ತೋಮ ತಮಟೆ ಬಡಿದು ಕಹಳೆ ಊದಿತು. ಕೊಂಬು ಕೂಗಿ ಶಂಖ ಮೊಳಗಿತು. ಧ್ವನಿ ಗಗನಕ್ಕೆ ಮುಟ್ಟಿತು. ಜನಜಾಗೃತಿ ಕಂಡು ದರೋಡೆಕಾರರು ನಡುಗಿದರು. ಪ್ರಶಾಮತವಾದುದು ವಳ್ಳುವರ್ ಮುಖ. ದರೋಡೆಕಾರರು ಬೆರಗಾದರು. ಮನ ಕರಗಿತು. ವಳ್ಳುವರ್ ಶರನಾದರು! ಗೌತಮನನ್ನು ಕಂಡ ಡಾಕುಗಳಂತಾಯಿತು ಇವರ ಕಥೆ.

ವಾಸುಕಿ

ವಳ್ಳುವರ್ ಬಂದ ಕೆಲಸ ಆಯಿತು. ಊರಲ್ಲಿ ನೆಮ್ಮದಿ ನೆಲೆಸಿತು. ಜನರಲ್ಲಿ ಶಾಂತಿ ಮೂಡಿತು. ಆದರೆ ಇವರ ಸೇವೆ ಮಾಡುತ್ತಿದ್ದಳು ವಾಸುಕಿ. ಅವಳಿಗೆ ಮಾತ್ರ ಈಗ ಅಶಾಂತಿ ವಾಸುಕಿಯ ತಂದೆಗೂ ಅಷ್ಟ. ಕಾರಣ ಇಬ್ಬರಿಗೂ ವಳ್ಳುವರ್ ಬೇಕು. ಆತ ಇಲ್ಲೇ ನೆಲೆಸಬೇಕು. ಆತನ ಅಗಳಿಕೆ ಆಗದು.

ತಮ್ಮ ಇಚ್ಚೆ ತಿಳಿಸಿಯೇ ಬಿಟ್ಟರು. ತಂದೆ ಹೇಳಿದರು, “ಸ್ವಾಮಿ, ನನಗೆ ಒಬ್ಬಳೇ ಮಗಳು. ಅವಳೇ ನನ್ನ ಸರ್ವಸ್ವ. ತಾವು ದಯಮಾಡಿ ಅವಳನ್ನು ಮದುವೆಯಾಗಬೇಕು. ಆಕೆ ನಿಮ್ಮನ್ನು ಬಿಟ್ಟು ಅನ್ಯರನ್ನು ಒಲ್ಲಳು.” ವಳ್ಳುವರಗ ಮತ್ತೆ ಗೊಂದಲಕ್ಕೆ ಬಿದ್ದರು – ಸಂನ್ಯಾಸ ಧರ್ಮ ದೊಡ್ಡದೋ? ಗೃಹಸ್ಥ ಧರ್ಮ ಸರಿಯೋ? ಈಗ ಇದರ ಬಗ್ಗೆ ಚಿಂತಿಸಿದರು.

ಗೃಹಸ್ಥಧರ್ಮ ದೊಡ್ಡದು. ಪಾಲನೆ, ಪೋಷಣೆ ಈ ಧರ್ಮದ ಕೈ ಕಾಲುಗಳು. ಅತಿಥಿ ಸತ್ಕಾರವೇ ಈತನ ದೇಹ. ಪರೋಪಕಾರವೇ ತಲೆ. ಕರುಣೆ – ದಯೆ ಕಣ್ಣುಗಳು. ಶಾಂತಿ ಸಮಾಧಾನ ಕಿವಿಗಳು. ನಿರಸೂಯವೇ ಹೊಟ್ಟೆ. ದಾನವೇ ಮುಖ. ಗೃಹಿಣಿಯೇ ಮನಸ್ಸು – ಇದು ಗೃಹಸ್ಥನ ಸ್ವರೂಪ. ಅರುಂಧತಿ – ವಸಿಷ್ಠ, ಅಹಲ್ಯೆ – ಗೌತಮರು ಗೃಹಸ್ಥರೆ. ಅಷ್ಟೇಕೆ, ನಮ್ಮ ತಂದೆ? ಆದಿ – ಭಗವಾನ್ ಅವರಿಗಿಂತ ನಿದರ್ಶನ ಬೇಕೇ?

ವಳ್ಳುವರ್ ಮದುವೆಯಾದರು. ಈಗ ಇವರ ಬಿಡಾರ ಊರ ಆಚೆ. ಪುಟ್ಟ ಜೋಪಡಿಯಲ್ಲಿ ಸಂಸಾರ. ವಾಸುಕಿ ತಂದೆಯ ಅರಮನೆ ಬಿಟ್ಟಳು. ಪತಿಯ ಜೋಪಡಿ ತನ್ನ ವೈಕುಂಠ. ಸಾರಿಸುವುದ, ಗುಡಿಸುವುದು, ಪತಿಗೆ ಮುನ್ನ ಏಳುವಳು. ವಳ್ಳುವರ್ ಮಲಗಿದ ನಂತರ ಮಲಗುವಳು.

ನೇಯ್ಗೆ ವಳ್ಳುವರ್ ಗೆ ಪ್ರೀಯವಾದ ವೃತ್ತಿ, ಕಾರಣವೆಂದರೆ ಇದರಿಂದ ಇನ್ನೊಬ್ಬರಿಗೆ ನೋವಿಲ್ಲ. ಯಾವ ಪ್ರಾಣಿಗೂ ಹಿಂಸಿಯಿಲ್ಲದ ಕಸುಬು. ಇದರಲ್ಲಿ ಆತ್ಮಾನಂದ ಉಂಟು. ಪರೋಪಕಾರಕ್ಕೆ ಇದು ಉತ್ತಮ ವೃತ್ತಿ. ಈ ವೃತ್ತಿ ಇಬ್ಬರಿಗೂ ಹಿಡಿಸಿತು. ಗಂಡ ನೂಲು ತಂದರೆ ವಾಸುಕಿ ಅದನ್ನು ಮಗ್ಗಕ್ಕೆ ಹಾಸುವಳು. ಈಕೆ ಬಟ್ಟೆ ಮಡಿಸಿದರೆ ಆತ ಹೊತ್ತು ಮಾರುವನು. ಅಂದಿನದು ಅಂದಿಗೆ ಸಾಕು, ಹೆಚ್ಚಿನದು ನಮ್ಮದಲ್ಲ ಅದು ದೇವರ ಸೊತ್ತು. ಇದು ಆ ದಂಪತಿಗಳ ನಿಲವು.

ವಾಸುಕಿ ವಳ್ಳುವರರನ್ನು ತುಂಬಾ ಪ್ರೀತಿ – ಭಕ್ತಿಗಳಿಂದ ನೋಡಿಕೊಂಡಳು. ಅವರ ಅಭಿಪ್ರಾಯವೇ ಸರಿ, ಅವರ ಮಾತೇ ಆಜ್ಞೆ.

ವಳ್ಳುವರ್ ವಾಸುಕಿ ಇದ್ದದ್ದು ಹೀಗೆ. ವಾಸುಕಿಗೆ ಗಂಡನ ಸೇವೆ ಶಿವನ ಸೇವೆ. ಅವನ ಆಜ್ಞೆ ಶಿವನ ಆಜ್ಞೆ. ಅವನ ಹಿತ ತನ್ನ ಹಿತ. ಇವಳ ನೋವು ಅವನ ಅಳುವು. ಗಂಡನ ನೆರಳೇ ವಾಸುಕಿ. ವಾಸುಕಿಯ ಜೀವನವೇ ವಳ್ಳುವರ್.

ಗಂಡ – ಹೆಂಡಿರ ಜಗಳ ಕಂಡವರೇ ಇಲ್ಲ. ಕೋಪ – ತಾಪ ಇವರಿಂದ ಬಹುದೂರ ಉಳಿದಿತ್ತು. ಜಗತ್ತಿನಲ್ಲಿ ಇದೊಂದು ಅಪರೂಪ ದಾಂಪತ್ಯ. ಬಾಳಿದರೆ ಹೀಗೆ ಬಾಳಬೇಕು; ಇದ್ದರೆ ಹೀಗಿರಬೇಕು.

ನೀರುಸೂಜಿ ಬೇಕಾಗಲಿಲ್ಲ

ಹೌದು! ಎಷ್ಟು ದಿನ ಇರಲು ಸಾಧ್ಯ? ಜನರ ಕಣ್ಣೇ ತಾಕಿರಬೇಕು! ಇಲ್ಲ ಶಿವನೇ ಮುನಿಸಿಕೊಂಡನೋ? ವಾಸುಕಿ ಹಾಸಿಗೆ ಹಿಡಿದಳು. ವಳ್ಳುವರ್ ದಿಕ್ಕೇ ತೋಚಲಿಲ್ಲ! ಬೇನೆ ಬೇಗ ಬೇಗ ಬೆಳೆಯಿತು. ಯಾವ ಔಷಧವು ಕೆಲಸ ಮಾಡಲಿಲ್ಲ. ಕೊನೆಯ ದಿನವೂ ಬಂತು. ವಳ್ಳುವರ್ ಕಣ್ಣಲ್ಲಿ ನೀರು! ವಾಸುಕಿ ಬೆರಳಿನಿಂದ ತೊಡೆದುಹಾಕಿದಳು. ದೈನ್ಯದಿಂದ ಹೇಳಿದಳು – “ನಾನು ಹೋಗಿಬರುವೆ. ನನಗೆ ಅನುಮತಿ ನೀಡಿ. ಅದಕ್ಕೆ ಮುನ್ನ ಒಂದು ಕೋರಿಕೆ”. ವಳ್ಳುವರ್ ತಬ್ಬಿಬ್ಬಾದರು. ಎಂದೂ ಏನೂ ಕೇಳಿದವಳಲ್ಲ. ಅವಳು ಏನು ಕೇಳುವಳೋ? “ಅಗತ್ಯವಾಗಿ ಕೇಳು, ಸಂತೋಷದಿಂದ ನಡೆಸಿಕೊಡುವೆ”. ವಾಸುಕಿ ಕೇಳಿದಳು – “ನಾನು ನಿಮ್ಮ ಮನೆಗೆ ಬಂದೆ. ಅಂದು ಒಂದು ಮಾತು ಹೇಳಿದಿರಿ, “ವಾಸುಕಿ! ನಾನು ಊಟಕ್ಕೆ ಕೂರುವಾಗ ಶಂಕದಲ್ಲಿ ನೀರು, ಪಕ್ಕದಲ್ಲೊಂದು ಸೂಜಿ ಬಡಿಸುವ ಮುನ್ನ ಮರೆಯದೆ ಇಡು”, ಅಂದಿರಿ, ಅದು ಏಕೆ? ನಾನಂತೂ ದಿನವೂ ಹಾಗೇ ಮಾಡಿದೆ. ಆದರೆ ನೀವು ಒಂದು ದಿನವೂ ಅದನ್ನು ಉಪಯೋಗಿಸಲೇ ಇಲ್ಲ. ಇದರ ಮರ್ಮವೇನು?”.

ವಳ್ಳುವರ್ ಹೇಳಿದರು – “ವಾಸುಕಿ ಅದರ ಅರ್ಥವಿಷ್ಟೆ! ಅನ್ನ ದೇವರು. ಅನ್ನದಿಂದಲೇ ಜಗತ್ತಿನ ಸೃಷ್ಟಿ. ಅನ್ನವೇ ಜೀವಿತದ ಮೂಲಾಧಾರ. ಅನ್ನವನ್ನು ನಿಂದಿಸಬಾರದು. ಇದು ವ್ರತ. ಇದನ್ನು ತಿಳಿಯದೆ ನೀನು ಬಡಿಸುವಾಗ ಅಗಳು ಕೆಳಗೆ ಬೀಳಬಹುದು ಅದು ಬಿದ್ದರೆ ಮಹಾಪಾಪ. ಅದನ್ನು ಹಾಗೇ ಬಿಡಬಾರದು. ಬಿದ್ದ ಅನ್ನದಗಳನ್ನು ಸೂಜಿಯಲ್ಲಿ ಚುಚ್ಚಿ ಶಂಖದ ನೀರಿನಲ್ಲಿ ಅದ್ದಿ ಮತ್ತೆ ತಿನ್ನಬೇಕು. ವಾಸುಕಿ, ಆದರೆ ಏನು ಹೇಳಲಿ, ನಿನ್ನ ಜೀವನಪರ್ಯಂತ ಅದರ ಅವಶ್ಯಕತೆಯೇ ನನಗೆ ಬರಲಿಲ್ಲ! ನಿಜಕ್ಕೂ ನೀನು ಮಹಾ ಸಾಧ್ವಿ. ನಿನ್ನನ್ನು ಕೈಹಿಡಿದ ನಾನೇ ಧನ್ಯ!

ಮಾತು ಮುಗಿಯಿತು. ಜೊತೆಗೆ ವಾಸುಕಿಯ ಜೀವಿತವೂ ಮುಗಿಯಿತು.

ಈಗ ಅವರು ವಿಶ್ವವ್ಯಾಪ್ತಿ!

ಹೆಂಡತಿ ಸತ್ತ ವಳ್ಳುವರ್ ಏಕಾಂಗಿ! ಭಾರವಾದ ಹೃದಯದಿಂದ ಊರು ಬಿಟ್ಟರು. ರಾತ್ರಿಗೊಂದು ಹಳ್ಳಿಯಂತೆ ತಿರುಗಾಡಿದರು. ನಾಡಿನ ಉದ್ದಗಲಕ್ಕೂ ಇವರ ಪ್ರಯಾಣ. ಹೋದ ಹೋದ ಕಡೆಗಳಲ್ಲಿ ಇವರ ಸೇವೆ. ತಮ್ಮ ಸರಳವಾದ ಮಾತುಗಳಿಂದ ಜನರ ಕಣ್ಣು ತೆರೆಸುವರು. ಇವರ ನೀತಿಯ ನುಡಿಕಟ್ಟಿಗೆ ಬಹಳ ಗೌರವ! ಅವರ ತರ್ಕಬದ್ಧ ನುಡಿ ಜಾಣರನ್ನು ತಲೆತೂಗಿಸಿರು. ಪಾಮರರ ಪಂಚಕಜ್ಜಾಯ ಅದು. ಇರುವ ಸಕ್ಕರೆಗೆ ಮುತ್ತುವಂತೆ ಜನ ಮುತ್ತಿದರು.

ಈಗ ನಾಡಿನ ತುಂಗ ವಳ್ಳುವರ್ ಮಾತು! ಕೆಲವರಿಗೆ ಅವರೊಬ್ಬ ಸಂತ! ಮತ್ತೆ ಕೆಲವರು ಸುಧಾರಕ ಅಂದರು. ಇನ್ನಷ್ಟು ಜನಕ್ಕೆ ಇವರೊಬ್ಬ ಮಹಾಕವಿ! ಜಾತಿ ಮತಗಳ ಭೇದ ಇವರಿಗೆ ಬೇಡ. ಅದರ ನೀತಿ ಬೇಕು. ಅದರ ಫಲವೇ ವಳ್ಳುವರ್ ಮಹಾತ್ಮರಾದರು.

ವಳ್ಳುವರ್ ಸನ್ಯಾಸಿ ಅಲ್ಲ! ಆದರೆ ಸಾವಿರ ಗಟ್ಟಲೆ ಶಿಷ್ಯರಿದ್ದರು. ವಳ್ಳುವರ್ ಅರಸರಲ್ಲ! ಆದರೆ ನಾಡು ನಾಡೇ ಅವರ ಮಾತು ಕೇಳುತ್ತಿತ್ತು. ಅವರೊಬ್ಬ ಮಹಾಪುರುಷ. ಆದರೆ ಮಠ ಮಂದಿರ ಕೇಳಬೇಡಿ. ವಿಶ್ವವನ್ನು ವಳ್ಳುವರ್ ಪ್ರೀತಿಸಿದರು. ಅದರ ಫಲ ವಳ್ಳುವರ್ ವಿಶ್ವವ್ಯಾಪಿ. 

ಅರಸನು ಚಿನ್ನದ ಕಡಗ ಅರ್ಪಿಸಿದ

ಸ್ನೇಹ ಸಂದೇಶ

ವಳ್ಳುವರ್ ಬಗ್ಗೆ ಒಂದು ಕಥೆ ಇದೆ. ಒಮ್ಮೆ ಅವರು ಮಧುರೆಗೆ ಬಂದರು. ಅದೊಂದು ರಾಜಧಾನಿ. ಮಧುರೆ ಅರಸನಿಗೂ ಪಕ್ಕದ ಅರಸನಿಗೂ ಜಗಳ. ಬಹುದಿನಗಳ ಮತ್ಸರ. ಇದರಿಂದ ಬಡಿದಾಟ ಆಗುತ್ತಲೇ ಇತ್ತು. ಯುದ್ಧ ಆದರೆ ಕೇಳಬೇಕೆ? ಅನೇಕರ ಸಾವು – ಅನೇಕರು ನಿರ್ಗತಿಕರಾಗಿ ಬೀದಿಪಾಲು! ಕೈಕಾಲು ಕಳೆದುಕೊಂಡವರ ಸಂಖ್ಯೆ ಕೇಳಲೇಬೇಡಿ. ಆಸ್ತಿಪಾಸ್ತಿಗಳ ನಷ್ಟ ಹೇಳುವದೇ ಕಷ್ಟ. ಅವರ ಹೃದಯ ಮಿಡಿಯಿತು. ನೇರಾಗಿ ಬಂದು ಅರಸರನ್ನು ಕಂಡರು – ಸಂಪತ್ತು ಸ್ಥಿರಲ್ಲ. ಹೇಗೀ ಬಂದು ಬಂದ ಹಾಗೇ ಹೋಗುತ್ತದೆ. ಶರೀರವು ಅಷ್ಟೇ. ಅದನ್ನು ದಿನವೆಂಬ ಗರಗಸ ಸೀಳುತ್ತಲೇ ಇರುತ್ತದೆ. ಅರಸ, ಯುದ್ಧಬಿಡು. ಪ್ರೀತಿಯಿಂದ ಕೂಡಿಕೋ. ತಾಳಿದವ ಬಾಳಿಯಾನು? – ರಾಜ ಸಂತನ ನುಡಿ ಆಲಿಸಿದ. ಇದರಲ್ಲಿ ಸತ್ಯವಿತ್ತು. ಆದರೆ ಸಂಧಿ ಆಗುವುದು ಹೇಗೆ? ಇದು ಅವನ ಚಿಂತೆ.

ಅವ ಚಿಂತಿಸುತ್ತಲೇ ಇದ್ದ – ವಳ್ಳುವರ್ ಶತ್ರು ರಾಜನ ಬಳೀಗೆ ಹೋದರು; ಅವನಿಗೆ ಹೇಳೀದರು – ಕೆಟ್ಟತನವನ್ನು ಒಳ್ಳೆಯತನದಿಂದ ಗೆಲ್ಲಬೇಕು. ಹಿಂಸೆಯಿಂದ ಕ್ಷಣ ಸುಖ; ತಾಳ್ಮೆಯಿಂದ ಚಿರಸುಖ. ಅರಸ, ಕರುಬಿ ಹೆಚ್ಚಿದವರಿಲಗಲ; ಕರುಬದೆ ಕೆಟ್ಟವರಿಲ್ಲ. ಅರಸನಾಗಿ ಹುಟ್ಟುವದೇ ದುರ್ಲಭ ಹುಟ್ಟಿದ ಮೇಲೆ ಕೀರ್ತಿಹೊಂದಿ ಬಾಳಬೇಕು. ಕೀರ್ತಿ ತ್ಯಾಗದಿಂದ ಸಾಧ್ಯ. ಕ್ಷಮೆ ಎಲ್ಲಕ್ಕೂ ದೊಡ್ಡದು.

ವಳ್ಳುವರ್ ಪ್ರಯತ್ನ ಫಲಿಸುತು. ಇಬ್ಬರೂ ಒಂದಾದರೂ! ಕತ್ತಿಗಳನ್ನು ಹಿಡಿಯುವ ಕೈ ಹೂಗಳನ್ನು ಹಿಡಿಯಿತು. ಒಬ್ಬರಿಗೊಬ್ಬರು ಹೂವನ್ನು ಕೊಟ್ಟರು. ಅರಸರ ಮನಸ್ಸು ಒಂದಾಯಿತು. ಜನ ಜಯಘೋಷ ಹಾಕಿದರು.

ತಿರುಕ್ಕುರಳ್

ತಮಿಳುನಾಡಿನಲ್ಲಿ ಮಧುರೈ ಇಂದೂ ಪ್ರಸಿದ್ಧಿ. ಅದು ಅಂದೂ ಸುಪ್ರಸಿದ್ಧಿ! ಕವಿಗಳಿಗೆ ಅರಸರಿಗೆ ಇಬ್ಬರಿಗೂ ಅದು ರಾಜಧಾನಿ. ಅಲ್ಲೊಂದು “ಫೋನ್ ತಾಮರೈಕೊಳಂ” (ಚಿನ್ನದಂತಹ ತಾವರೆ ಕೊಳ). ಅದರ ಮಧ್ಯದಲ್ಲೇ “ಶಂಘ ಪಲಹೈ” ಇತ್ತು. ಇದೊಂದು ತೇಲುವ ಮರದ ಪೀಠ! ಕಾವ್ಯಗಳ ಪರೀಕ್ಷೆ ಮಾಡುವುದು ಈ ” ಪಲಹೈ”! ಇದರ ಅಂತಿಮ ತೀರ್ಮಾನವೇ ತೀರ್ಮಾನ.

ಕವಿಗಳು ತಮ್ಮ ಕೃತಿಗಳನ್ನು ಅಲ್ಲಿಗೆ ತರಬೇಕು. ವಿದ್ವಾಂಸರ ಸಭೆ ಆ ವೇಳೆಗೆ ಸೇರುವುದು. ಅವರ ಮುಂದೆ ಕೃತಿಯ ಪರಿಚಯವಾಗುವುದು. ಆಮೇಲೆ ವಾದವಿವಾದ. ಕೊನೆಗೆ ಕೃತಿ “ಶಂಘ ಪಲಹೈ” ಮೇಲೆ ಇಡೋಣ. ಪಲಹೈ ಸ್ಥಳವಿತ್ತರೆ ಕವಿಗೆದ್ದ, ಇಲ್ಲದಲ್ಲಿ ಬಿದ್ದ? ಅದು ಬಿದ್ದರೆ ಅದರ ಫಲ ಕವಿಗೆ ಮರಣದಂಡನೆ ಶಿಕ್ಷೆ.

ಈ “ಶಂಘ ಪಲಹೈ” ವಿಚಿತ್ರವಾದುದು! ಅದರ ಮೇಲೆ ಹತ್ತಕ್ಕೂ ಸ್ಥಳವುಂಟು – ಕೆಲವೊಮ್ಮೆ ಒಂದಕ್ಕೆ ಮಾತ್ರ? ಬೇಕಾದ ಪುಸ್ತಕ ಅದರ ಮೇಲೆ. ಬೇಡದ್ದು ನೀರುಪಾಲು. ಇದು ಅದಕ್ಕೆ ಇದ್ದ ವಿಚಿತ್ರ ಶಕ್ತಿ.

ಕವಿ ಆದವನಿಗೆ ಈ ಪರೀಕ್ಷೆ ಅನಿವಾರ್ಯ. ಇಂದು ವಳ್ಳುವರರ ಸರದಿ! ಜನ ಗಾಡಿ ಕಟ್ಟಿ ಬಂದಿದ್ದಾರೆ. ಸಾವಿರಗಟ್ಟಲೆ ಜನ. ಕೊಳದ ಸುತ್ತ ಇವರ ಸಾಲು. ಅರಸನೂ ಬಂದಿದ್ದಾನೆ. ಕವಿ ವಿಮರ್ಶಕ – ಪಂಡಿತರೂ ತುಂಬಿದ್ದಾರೆ. ವಾದ – ವಿವಾದ ಮುಗಿದಿದೆ. ಕವಿ ತನ್ನ ಕಾವ್ಯವನ್ನು ಎರಡೂ ಕೈಯಲ್ಲಿ ಹಿಡಿದು ತಂದ! ಎಲ್ಲರಿಗೂ ತವಕ! ಏನಾಗುವುದೋ….ಏನಾಗುವುದೋ…. ಎಂದು.

ವಳ್ಳುವರ್ ಗಂಭೀರ ಸ್ವರದಲ್ಲಿ ಹೇಳಿದರು – “ಆಕಾರ ಮೊದಲು ಅಕ್ಷರಂಗಳಿಗೆಲ್ಲ. ಆದಿ ಭಗವಂತ ಮೊದಲು ಲೋಕಕ್ಕೆಲ್ಲ. ವಿಧಿಯಂತೆ ಬಲು ಬಲ್ಮೆಯುಳ್ಳವು ಯಾವುವಿವೆ: ಮತ್ತೊಂದು ನೆನೆದರೂ ತಾ ಬಂದು ನಿಲ್ಲುವುದು ಮುಂದೆ. ಇದೇ ನನ್ನ ಕರುಳಿನ ಸಾವಿರದ ಮುನ್ನೂರ ಮೂವತ್ತರ ಸಾರ. ಇದು ಜಗತ್ತಿಗೆ ಬೇಕೆ? ಬೇಡವೇ? ಇದು ನಿನಗೆ ಬಿಟ್ಟಿದ್ದು”. ಕೃತಿಯನ್ನು ಪಲಹೈ ಮೇಲೆ ಇಟ್ಟರು. ಅದರ ಸಂಗಡ ಅನೇಕ ಕೃತಿಗಳಿದ್ದವು. ಅರೆಕ್ಷಣದಲ್ಲಿ ಫಲಿತಾಂಶ ಹೊರಬಿತ್ತು. ಹೋರಿ ಮೈ ಕೊಡಹುವಂತೆ ಪಲಹೈ ಅದುರಿತು! ಆಪಲಹೈ ಕೃತಿಗಳ ಜರಡಿಯನ್ನೇ ಆಡಿತು! ಅದರ ಫಲ, ಜೊಳ್ಳು ಜಲಪಾಲು. ಗಟ್ಟಿ ಜನರ ಪಾಲು.

ಗಟ್ಟಿ ಯಾವುದು? ಅದೇ ವಳ್ಳುವರ್ ರಚಿಸಿದ “ಕುರಳ್:! ಅರಸ ಧಾವಿಸಿ ಬಂದ. ಕವಿಗೆ ಚಿನ್ನದ ಖಡ್ಗ ಅರ್ಪಿಸಿದ. ವಿದ್ವಾಂಸರು ಸುತ್ತುಗಟ್ಟಿದರು. “ಪೊನ್ನಡಿ” (ಬೆಲೆ ಬಾಳುವ ಹೊದಿಗೆ) ಕವಿಯನ್ನು ಅಲಂಕರಿಸಿತು! ಛತ್ರಿ ಚಾಮರ ಎಲ್ಲ ಬಂತು. ಸಿಂಗರಿಸಿದ ಆನೆಯೂ ಸಿದ್ಧ! ಅದರ ಮೇಲೆ ಅಂಬಾರಿ. ಕವಿಯನ್ನು ಕಾವ್ಯದೊಡನೆ ಕೂರಿಸಿದರು! ಜನರ ಆನಂದ ಹೇಳತೀರದು. “ವಳ್ಳುವರ್ ವಾಳ್ಹ….ತಿರುವಳ್ಳುವರ್ ವಾಳ್ಹ…. ಅಮರ ಕವಿಯೇ ವಾಳ್ಹ….”

ನಾಡು – ನುಡಿಗೂ ಜಯಕಾರ ಬಿತ್ತು. ಅಲ್ಲಿಯ ಗಾಳಿ ತುಂಗ ಜಯಕಾರದ ಅಲೆಯ! ನಾಡಿನಿಂದ ನಾಡಿಗೆ ದೇಶದಿಂದ ವಿದೇಶಕ್ಕೆ ಹಬ್ಬಿತು. ಆ ಜಯಕಾರದ ಅಲೆ!

ವಳ್ಳುವರ್ ಕೊಟ್ಟಂ

ವಳ್ಳುವರ್ ಮಹಾಕವಿ ಹುಟ್ಟಿ, ನಾಡನ್ನು ವಿಖ್ಯಾತ ಗೊಳಿಸಿದ. ಈ ಮಾತು ಸತ್ಯ. ಅದಕ್ಕಾಗಿ ನಾಡಿನ ಜನ ಕವಿಯ ಬಗ್ಗೆ ಅನೇಕ ರೀತಿ ಗೌರವಿಸುತ್ತಾರೆ. ಕುರಳ್ ಗ್ರಂಥವನ್ನು ಲಕ್ಷಗಟ್ಟಲೆ ಅಚ್ಚು ಹಾಕಿಸಿದರು. ನೂರಾರು ಜನ ಗ್ರಂಥಕ್ಕೆ ಭಾಷ್ಯ ಬರೆದಿದ್ದಾರೆ. ವಳ್ಳುವರರ ಪ್ರತಿಮೆಗಳ ನಿರ್ಮಾಣ ದೆಹಲಿಯಿಂದ ಹಳ್ಳಿಯವರೆಗಿದೆ. ವಳ್ಳುವರ್ ಹುಟ್ಟಿದ ಆ ಮೈಲಾಪುರದಲ್ಲಿ ಗುಡಿಯೊಂದು ಕಟ್ಟಿದೆ. ಅದು ಕಟ್ಟಿ ಮುನ್ನೂರು ವರ್ಷಕ್ಕೂ ಮೀರಿರಬೇಕು. ಇವೆಲ್ಲಕ್ಕೂ ಮೀರಿದ ಗೌರವ ಈ “ವಳ್ಳುವರ ಕೊಟ್ಟಂ”; ಇದು ಕವಿಯ ನೆನಪಿಗೆ ಕಟ್ಟಿದ ಅತಿದೊಡ್ಡ ಕಟ್ಟಡ. ಏಷ್ಯಾ ಖಂಡದಲ್ಲೇ ದೊಡ್ಡದು. ಸುಮಾರು ಎಂಭತ್ತಮೂರು ಲಕ್ಷ ರೂಪಾಯಿ ತಗಲಿದೆ. ಸಾವಿರಗಟ್ಟಲೆ ಜನರು ದುಡಿದಿದ್ದಾರೆ. ದ್ರಾವಿಡಕಲೆ ಇಲ್ಲಿ ಮೈಗೂಡಿ ನಿಂತಿದೆ. ವಳ್ಳುವರ್ ತೇರು ನೂರ ಆರು ಅಡಿ ಎತ್ತರವಿದೆ.

ವಳ್ಳುವರ್ ಪ್ರತಿಮೆ! ಅವರು ಕುಳಿತಿರುವ ಪೀಠವೆ ಎರಡು ಅಡಿಗಳಿವೆ. ಅಂದವಾದ ವಿಗ್ರಹ. ಏಳು ಅಡಿಗಳ ಎತ್ತರಕ್ಕೂ ಮೀರಿದ್ದು! ಕವಿಯ ಜಡೆ ಎತ್ತಿ ಕಟ್ಟಿದೆ. ಬೆಳೆದ ಗಡ್ಡ ಮೀಸೆಗಳು, ವಿಶಾಲವಾದ ಎದೆ, ದೀರ್ಘವಾದ ಕಿವಿಗಳು, ಕವಿ ಪದ್ಮಾಸನ ಹಾಕಿ ಕುಳಿತಿರುವನು.

ಕಟ್ಟಡದ ಇನ್ನೊಂದು ವಿಶೇಷ ರಂಗಮಂಟಪ; ಬಹಳ ವಿಶಾಲವಾದುದು. ೨೨೦ ಅಡಿ ಉದ್ದ, ೧೦೦ ಅಡಿ ಅಗಲವಿದೆ. ಸುಮಾರು ನಾಲ್ಕು ಸಾವಿರ ಜನ ಕೂರಬಹುದು. ಕಂಬಗಳೇ ಇಲ್ಲದ ಅಂಗಳವಿದು. ಸುಖವಾಗಿ ಕೂರಲು ಆಸನಗಳು, ಗಾಳಿ ಬೆಳಕು ಸಾಕಷ್ಟು ಸುಪ್ರಸಿದ್‌ಏ ಕಾರ್ಯಕ್ರಮಕ್ಕೆ ಇದು ನಗರದಲ್ಲೇ ಸುಪ್ರಸಿದ್ಧ. ಈ ಹಿಂದೆ ಇದೊಂದು ದೊಡ್ಡ ಕೆರೆ. ಆದರೆ ಇಂದು ಇದೊಂದು ಭವ್ಯ ಸ್ಮಾರಕ.

ತಿರುಕ್ಕುರಳ್ ಸುಧೆ

“ತಿರುಕ್ಕುರಳ್” ನ ಮೊದಲ ಪದ್ಯವನ್ನು ಆಗಲೇ ಕೇಳಿದ್ದೇವೆ. “ಆಕಾರ ಮೊದಲು ಅಕ್ಷರಂಗಳಿಗೆಲ್ಲ, ಆದಿ ಭಗವಂತ ಮೊದಲು ಲೋಕಕ್ಕೆಲ್ಲ.” “ಕುರುಳ್” ಎಂದರೆ “ಚಿಕ್ಕದು” ಎಂದು ಅರ್ಥ. ಒಂದೊಂದು ಪದ್ಯದಲ್ಲಿ ಒಂದೂವರೆ ಪಂಕ್ತಿ ಅಷ್ಟೆ. ಇಷ್ಟರಲ್ಲಿ ನಾವು ಆಳವಾಗಿ ಚಿಂತಿಸಬೇಕಾದ ವಿಷಯಗಳನ್ನು ಸರಳವಾದ ಭಾಷೆಯಲ್ಲಿ ಕವಿ ಹೇಳಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದೆ.

ಧರ್ಮಕ್ಕಿಂತಲು ಹಿರಿದು ಭಾಗ್ಯವಿಲ್ಲ, ಅದ ಮರೆಯುವುದಕ್ಕಿಂತ ಕೇಡೂ ಇಲ್ಲ.

ಅಸೂಯೆ ಆಸೆ ಸಿಟ್ಟು ಮನನೋಯಿಸುವ ಮಾತು. ಇವ ಬಿಟ್ಟು ನಡೆಯುವುದೆ ಧರ್ಮ.

ಸನ್ಮಾರ್ಗದಲ್ಲಿ ಇತರರ ನಡೆಸಿ ತಾ ಧರ್ಮದಲ್ಲಿ ಬಾಳ್ವ ಗೃಹಸ್ಥನ ತಾಳ್ಮೆ ತಾಪಸರ ತಾಳ್ಮೆ ಗೀಂ ಮಿಗಿಲು.

ಒಲವು ಗೂಡಿರುವುದೇ ಉಸಿರು ನೆಲೆ, ಒಲವಿಲ್ಲದಿರೆ ಎಲುವಿಗೆ ಚರ್ಮ ಹೊದಿಸಿದೂಡಲು.

(ಪ್ರೀತಿಯುಳ್ಳ ಒಡಲೇ ಪ್ರಾಣ ಉಳ್ಳದು; ಅದಿಲ್ಲದಿದ್ದರೆ ಹೆಣದಂತೆ)

ಬರುವ ಲಾಭವ ಚಿಂತಿಸಿದೆ ಮಾಡಿದುಪಕಾರ ಕಡಲಿಗಿಂತಲು ಬಹು ಹಿರಿದು.

ನಡತೆಯೇ ಮೇಲ್ಮೆಯದರಿಂದ ಪ್ರಾಣಕ್ಕೂ ಮಿಗಿಲೆಂದು ಕಾಪಾಡುವುದು ನಡತೆಯನು.

ನೋಯಿಸಿದವನಿಗೊಂದು ದಿನದ ಸುಖ, ತಾಳ್ದವಗೆ ಸಾಯುವವರೆಗೂ ಕೀರ್ತಿ.

ಆಸೆ ಇಲ್ಲದುದೆ ಪರಿಶುದ್ಧಿ, ಸತ್ಯವನೆ ಸದಾ ನೆನೆವುದೇ ಅದಕೆ ಹಾದಿ.