ಸಣ್ಣಾಟದ ಎರಡನೆ ಘಟ್ಟದ ಮಹತ್ವದ ರಚನೆ ಈ ತಿರುನೀಲಕಂಠ ಇದಕ್ಕೆ ರೂಢಿಯಲ್ಲಿ ನೀಲಕಂಠನ ಆಟ ಕೊದ್ರೊಳ್ಳಿ ಆಟ ಎಂಬ ಹೆಸರುಗಳೂ ಇವೆ

ತಿರು ನೀಲಕಂಠ ಪೊನ್ನಾಂಬಲೇಶನ ಪರಮಭಕ್ತ.ದೇವಾಲಯದಲ್ಲಿ ಪೂಜೆ ಮುಗಿಸಿಕೊಂಡು ಬೀದಿಯಲ್ಲಿ ಬರುವಾಗ ರಂಭಾ ಎಂಬ ವೇಶ್ಯೆ ಮಹಡಿಯ ಮೇಲಿಂದ ತಾಂಬೂಲ ಉಗುಳುತ್ತಾಳೆ. ಅದು ತಿರುನೀಲಕಂಠನ ಮೈಮೇಲೆ ಬಿದ್ದಿತು. ತನ್ನ ಮೇಲೆ ಹೀಗೆ ಯಾರು ತಾಂಬೂಲ ಉಗುಳಿದರೆಂದು ದಿಗಿಲಾಗಿ ನಿಂತ ತಿರುನೀಲಕಂಠನನ್ನುರಂಭಾ ಬಂದು ಮಾತನಾಡಿಸುವಳು.ಅಂಥಾ ದೊಡ್ಡ ಶಿವಭಕ್ತನ ಮೇಲೆ ಉಗುಳಿ ಪಾಪ ಮಾಡಿರುವ ತನಗೆ ಏನೇನು ಶಿಕ್ಷೆ ಕಾದಿದೆಯೋ ಎಂಬ ಭೀತಿ ಅವಳಿಗೆ. ತಿರುನೀಲಕಂಠನ ಸೇವೆ ಮಾಡಿ ಪಾಪ ಪರಿಮಾರ್ಜನೆ ಮಾಡಿಕೊಳ್ಳುವ ಇಚ್ಛೆಯಿಂದ ತಿರುನೀಲಕಂಠನನ್ನು ತನ್ನ ಮನೆಗೆ ಆಹ್ವಾನಿಸುತ್ತಾಳೆ.ನೀನು ವೇಶ್ಯೆ ನಿನ್ನಂಥವಳ ಮನೆಗೆ ನಾನು ಬರಲಾರನೆಂದು ತಿರುನೀಲಕಂಠ ನಿರಾಕರಿಸುತ್ತಾಳೆ.ವೇಶ್ಯಾಕುಲದ ಬಗ್ಗೆ ವೇಶ್ಯೆಯರಾಗಿ ಶಿವನನ್ನು ಒಲಿಸಿಕೊಂಡ ಮಹಾನಂದೆ ವೀರಸಂಗವ್ವೆಯರ ಬಗ್ಗೆ ತಿಳಿಸಿ ತಿರುನೀಲಕಂಠನ ಮನಸ್ಸು ಒಲಿಸಿಕೊಂಡು ಮನೆಗೆ ಕರೆದೊಯ್ಯುತ್ತಾಳೆ.ಸ್ನಾನ ಪೂಜೆಗಳ ನಂತರ ಬೆಲೆಯುಳ್ಳ ಬಟ್ಟೆ ಉಡಲುಕೊಟ್ಟು ಪೂಸಿಕೊಳ್ಳಲು ಸುಗಂಧಗಳನ್ನು ಕೊಟ್ಟು ಆದರದಿಂದ ಬೀಳ್ಕೊಡುತ್ತಾಳೆ.

ತಿರುನೀಲಕಂಠ ಮನೆಗೆ ಬಂದಾಗ ಸತ್ಯವತಿ ಗಂಡನಿಗೆ ಊಟಕ್ಕೆ ನೀಡಿದ ಮೇಲೆ ತಾನೂ ಉಂಡು ಮಲಗುವಳು.ಕಾಮಾತುರನಾದ ತಿರುನೀಲಕಂಠನು ಅವಳನ್ನು ಕಾಮಕ್ರೀಡೆಗೆ ಆಹ್ವಾನಿಸುವನು.ಗಂಡನ ಮೇಲೆ ಸಂಶಯಗೊಂಡಿದ್ದ ಅವಳು ಅವನ ಇಚ್ಛೆಯನ್ನು ನಿರಾಕರಿಸುತ್ತಾಳೆ.ಅವರಿಬ್ಬರ ಪರಸ್ಪರ ವಾದ ವಿವಾದ ಗಂಡು : ಹೆಣ್ಣುಗಳ ಶ್ರೇಷ್ಠತೆಯ ಪ್ರತಿಪಾದನೆಯಾಗಿ ಪರಿವರ್ತನೆಗೊಳ್ಳುವುದು.ಉದಾಹರಣೆಗಾಗಿ ದೇವಾನುದೇವತೆಗಳ ಪುರಾಣ ಪ್ರಸಂಗಗಳು ಪ್ರಸ್ತಾಪಿಸಲ್ಪಡುವವು.ಇದೆಲ್ಲ ಮುಗಿದ ಮೇಲೆ ತಿರುನೀಲಕಂಠನು ಕಾಮದ ಉನ್ಮಾದದಲ್ಲಿ ಸತ್ಯವತಿಯನ್ನು ಬಲಾತ್ಕರಿಸಲು ಮುಂದಾದಾಗ ಅವಳು ಮುಟ್ಟಿದರೆ ಶಿವನಾಣೆ ಎಂದು ಆಣೆ ಹಾಕುವಳು.ನೀಲಕಂಠ ಜರ‌್ರನೆಜರಿದು ಸುಮ್ಮನಾಗುವನು.ಒಬ್ಬರನ್ನೊಬ್ಬರು ಮುಟ್ಟದೆ ಮುಪ್ಪಾವಸ್ಥೆಗೆ ಬರುವರು. ಶಿವನು ಇವರ ಭಕ್ತಿಯನ್ನು ಪರೀಕ್ಷಿಸಲು ಸನ್ಯಾಸಿಯಾಗಿ ಬರುವನು.ತನ್ನದೊಂದು ಬಟ್ಟಲನ್ನು ಅವರಲ್ಲಿ ಜೋಪಾನವಾಗಿ ಇಟ್ಟುಕೊಳ್ಳಲು ಕೊಟ್ಟು ಹೋಗುತ್ತಾನೆ.ತಿರು ನೀಲಕಂಠ ಅದನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕುವನು.ಮರುದಿನ ಸನ್ಯಾಸಿ ಬಂದು ಕೇಳಿದಾಗ ಪೆಟ್ಟಿಗೆ ತೆರೆದು ನೋಡಿದರೆ ಅದರಲ್ಲಿ ಬಟ್ಟಲವಿಲ್ಲ.ತಿರುನೀಲಕಂಠ ದಂಪತಿಗಳು ಗಾಬರಿಯಾದರು.ಬಟ್ಟಲ ನೀವೇ ತೆಗೆದುಕೊಂಡಿದ್ದೀರಿ ಎಂದು ಸನ್ಯಾಸಿ ಆರೋಪಿಸಿದರೆ ಇವರು ನಾವು ಅಪಹರಿಸಿಲ್ಲವೆಂದು ಗೋಗರೆದು ಹೇಳಿದರು.ಕೊನೆಗೆ ಸನ್ಯಾಸಿ ಹೋಗಲಿ, ನೀವು ಪರಸ್ಪರ ಕೈ ಕೈ ಹಿಡಿದು ಪೊನ್ನಾಂಬಲೇಶನ ಕಲ್ಯಾಣಿಯಲ್ಲಿ ಮುಳುಗಿ ಹೇಳಿದರೆ ನಾನು ನಂಬುತ್ತೀನಿ.ಅಂದ. ಕೈ ಕೈ ಹಿಡಿದುಕೊಳ್ಳಲು ಅವರು ಒಪ್ಪಲಿಲ್ಲ.ಕೋಲಿನ ತುದಿ ಹಿಡಿದುಕೊಂಡು ಮುಳುಗಲು ಒಪ್ಪಿದರು.ಹಾಗೆ ಮುಳುಗಿ ಏಳುವಷ್ಟರಲ್ಲಿ ಸನ್ಯಾಸಿ ಶಿವನಾಗಿ ಪ್ರತ್ಯಕ್ಷನಾಗಿದ್ದನು.ತಿರುನೀಲಕಂಠ ಸತ್ಯವತಿಯರು ತರುಣ ದಂಪತಿಗಳಾಗಿದ್ದರು.

ಕನ್ನಡಿಗರಿಗೆ ತಿರು ನೀಲಕಂಠನಕಥೆ ಗೊತ್ತಿರುವುದು ಹರಿಹರನ ರಗಳೆಯ ಮೂಲಕ. ಪ್ರಸ್ತುತ ಕತೆ ಪೂರ್ವಾರ್ಧದಲ್ಲಿ ರಗಳೆಯ ಕತೆಗಿಂತ ಅಲ್ಲಲ್ಲಿ ಭಿನ್ನವಾಗಿದೆ. ಜನಸಾಮಾನ್ಯರಿಗೆ ನೀತಿಬೋಧೆ ಮಾಡುವ ಉದ್ದೇಶ ಹೊಂದಿದ್ದ ಕವಿಗೆ ಇಂಥ ಬದಲಾವಣೆಗಳು ಅನಿವಾರ‌್ಯವಾಗಿದ್ದವು.ಅಲ್ಲದೆ ತಿರುನೀಲಕಂಠ ಸತ್ಯವತಿಯರ ಸಂವಾದದಲ್ಲಿ ಈ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿರುವ ಕಲ್ಗಿ : ತುರಾಲಾವಣಿಯ ದಟ್ಟ ಪ್ರಭಾವವಿರುವುದು ಸ್ಪಷ್ಟ.

ತಿರುನೀಲಕಂಠ ಸಣ್ಣಾಟ ರಚಿಸಿದ ಕವಿ ಬೆಳಗಾಂವಿ ಜಿಲ್ಲೆಯ ಕಾದ್ರೊಳ್ಳಿ ಗ್ರಾಮದ ನೀಲಕಂಠಪ್ಪ ಪತ್ತಾರ. 1920ರಲ್ಲಿ ಇದು ರಚನೆಗೊಂಡಿದೆ.ಪ್ರಸ್ತುತ ಪಠ್ಯವನ್ನು ಮೂರು ಬೇರೆ ಬೇರೆ ಹಸ್ತ ಪ್ರತಿಗಳನ್ನಾಧರಿಸಿ ಸಿದ್ಧಗೊಳಿಸಲಾಗಿದೆ*.

ಪ್ರವೇಶ : 1

ಗಣಸ್ತುತಿ

ಶ್ರೀ ಶಿವ ಶಂಕರ ಈಶ ಮಹೇಶ್ವರ
ಕಾಯೋ ಅಂಬರ ಪೂಜಿಪ ತರಳರ ॥ಪಲ್ಲವಿ ॥

ಗಿರಿಜಾಕಾಂತನೆ ಮುರಹರ ಪೂಜ್ಯನೆ
ಸ್ಮರಿಸುವೆನನುದಿನ ಸುರಚಿರಗಾತ್ರನೆ ॥

ವ್ಯಾಲಭೂಷಣನೆ ನೀಲಕಂಧರನೆ
ಫಾಲನೇತ್ರನೆ ಸುರಚಿರಗಾತ್ರನೆ ॥

(ತಿರುನೀಲಕಂಠರ ಆಗಮನ)

ತಿರುನೀಲಕಂಠ : (ಪೊನ್ನಾಂಬಲೇಶ್ವರನ ಪೂಜೆಗಾಗಿ ಪೂಜಾಸಾಮಗ್ರಿ ಸಹಿತ ಹೊರಟಿರುವರು).

ಪದ :

ರಾಜರಾಜಸುಖನ ಪೂಜಿಸಲ್ಕೆ ಪೋಗುವೆ
ರಾಜಿಪ ಗಂಧಾಕ್ಷತೆಯನು ಸಜ್ಜು ಮಾಡಿಹೆ ॥ಪಲ್ಲ ॥

ಕುಸುಮ ಬಿಲ್ವದಳಗಳಿಂದ ಎಸೆವ ಧೂಪದಿ
ಹಸನ ಮನದೊಳರ್ಚಿಸುವೆನು ಶಶಿಧರ ಶಿವನ ॥

ಮಾರ ಸಂಹಾರ ಧೀರಭಕ್ತರ ಚಾರುತತ್ವವು
ತೋರುತಿಹುದು ದಾರುಣಿಯೊಳ್ ಮೀರಿದ ಕೃತಿಯ ॥

ಈ ಮಹಾಸಭೆಯಲ್ಲಿ ವಿರಾಜಿಸುತ್ತಿರುವ ಸದಸ್ಯ ಮಹಾಶಯರೆ, ಸಕಲ ಮಾನವರ ಹಿತಾರ್ಥವಾಗಿ ನಾನು ಹೇಳುವುದನ್ನು ಶ್ರದ್ಧೆಯಿಂದ ಅವಧರಿಸಬೇಕಾಗಿ ಪ್ರಾರ್ಥನೆ.ಈ ಮಾನವ ಜನ್ಮವು ಅತಿ ಶ್ರೇಷ್ಠವಾದುದು.ಹಿತಾಹಿತವನ್ನು ತಿಳಿಯತಕ್ಕದ್ದು. ಬುದ್ಧಿಶಕ್ತಿಯು ಮಾನವನಿಗಿದ್ದಂತೆ ಮಿಕ್ಕ ಜೀವಕೋಟಿಗಿಲ್ಲ.ಅದಕ್ಕಾಗಿಯೇ ಜ್ಞಾನಿಗಳು ಮಾನವ ಜನ್ಮವನ್ನು ಮೋಕ್ಷದ ದ್ವಾರವೆಂದು ಪ್ರಶಂಸಿಸಿದ್ದಾರೆ.ಇಂಥ ಶ್ರೇಯಸ್ಕರವಾದ ಜನ್ಮದಲ್ಲಿ ಪ್ರಾದುರ್ಭವಿಸಿದ ಪ್ರತಿಯೊಬ್ಬ ಮಾನವನ ಮುಖ್ಯ ಉದ್ದೇಶ ನಿತ್ಯವೂ ಶಾಶ್ವತವೂ ಪರಮಾನಂದ ಸ್ವರೂಪವೂ ಆದ ಮೋಕ್ಷವನ್ನು ಪಡೆಯುವುದೇ ಆಗಿದೆ.ಭವಸಾಗರದಿಂದ ಪಾರಾಗಲು ಮಾನವ ಜನ್ಮದಿಂದಲ್ಲದೆ ಮತ್ತಾವುದರಿಂದಲೂ ಸಾಧ್ಯವಿಲ್ಲ. ಮಹಾದುಃಖಮಯವಾದ ಸಂಸಾರಪಾಶದಿಂದ ಬಂಧಿಸಲ್ಪಟ್ಟು ಹುಟ್ಟು ಸಾವುಗಳೆಂಬ ಚಕ್ರದ ಭ್ರಮಣದಲ್ಲಿ ನೂಕಿ. ಸೃಷ್ಟಿಯಾರಂಭದಿಂದ ಸಂಕಟಕ್ಕೆ ಗುರಿ ಮಾಡಿ ನಮ್ಮನ್ನು ಅಧೋಗತಿಗೆ ಅಜಸ್ರ ತುಳಿಯುತ್ತಿರುವ ಭವಪಿಶಾಚಿಯ ಕೈಯೊಳಗಿಂದ ದಾಟಿಸಿ.ಶಾಶ್ವತವೂ ಪರಮಾನಂದವೂ ಆದ ಮೋಕ್ಷ ಸಾಮ್ರಾಜ್ಯವನ್ನು ಒದಗಿಸಿಕೊಡುವುದಕ್ಕಾಗಿ ಪರಮಾತ್ಮನು ಇಲ್ಲಿ ಸದ್ಗುರುನಾಥನಾಗಿ ಅವತರಿಸಿನಮ್ಮೆಲ್ಲರನ್ನು ಕರುಣಾವಲೋಕನದಿಂದ ನಿರೀಕ್ಷಿಸುತ್ತಿರುವನು.ನ ಗುರೋರಧಿಕಂ ನ ಗುರೋರಧಿಕಂಶಿವಶಾಸನತಃ ಶಿವಶಾಸನತಃ ॥ಗುರುವಿಗಿಂತಲೂ ಹೆಚ್ಚಿನವರು ಯಾರೂ ಇಲ್ಲ.ಅಂಥ ಸದ್ಗುರುವನ್ನು ಮನುಷ್ಯ ಮಾತ್ರನೆಂದು ತಿಳಿಯುವವನಿಗೆ ನರಕಯಾತನೆಯಾಗುವದು ನಿಶ್ಚಯ. ಬೇಡಿದ್ದನ್ನು ಕೊಡುವಂಥ ಕಲ್ಪವೃಕ್ಷದ ಯೋಗ್ಯತೆ ಕಾಡುಮರಕ್ಕೆ ಬಂದೀತೆ ? ಅಜ್ಞಾನದ ಪರಾಕಾಷ್ಠೆಯಿಂದ ವ್ಯಾಪ್ತನಾದ ಮೂಢಮಾನವನಿಗೆ ಇದೆಲ್ಲ ಹೇಗೆಗೊತ್ತಾಗಬೇಕು ?ಅಂಥವರು ಈ ಸಂಸಾರವೇ ಸುಖದ ಆಗರವೆಂದು ಭಾವಿಸಿ ಸದಾ ಸಂಸಾರಲುಬ್ಧರಾಗಿ ತಮ್ಮ ಜನ್ಮ ಸಾರ್ಥಕತೆಯನ್ನು ಮರೆತುಬಿಟ್ಟಿರುವರು. ಮನುಷ್ಯ ರೂಪೇಣ ಮೃತಯಾಶ್ಚರಂತಿ ಎಂಬ ಭರ್ತೃಹರಿಯ ವಿಚಾರದಂತೆ ಮಾನವನು ಆಕೃತಿಯಲ್ಲಿ ಮಾತ್ರ ಮನುಷ್ಯನಾಗಿದ್ದಾನೆ.ಸ್ವಭಾವದಲ್ಲಿ ಅವನಿಗೂ ಪಶುವಿಗೂ ಅಂತರವೇ ಇಲ್ಲ.ಅಜ್ಞಾನಿಯಾದ ಮಾನವನು ಪಶುಗಳಂತೆ ಹುಲ್ಲನ್ನು ತಿನ್ನದಿದ್ದರೂ ಪಾಪಾಚರಣೆಯಿಂದ ಧನವನ್ನು ಸಂಪಾದಿಸಿ ಅಧೋಗತಿಗೆ ಹೋಗುತ್ತಿರುವನು.ಆದ್ದರಿಂದ ಗುರುಸೇವೆ ಮಾಡಿ ಪರಮಾತ್ಮನ ಕೃಪೆಗೆ ಪಾತ್ರರಾಗಿ, ಅವನ ಸಾನಿಧ್ಯ ಪಡೆದು ಜನ್ಮ ಸಾರ್ಥಕ ಮಾಡಿಕೊಳ್ಳಬೇಕು.ಮನುಷ್ಯ ಜನ್ಮ ಮತ್ತೆ ಸಿಗುವುದು ದುರ್ಲಭ ಕಾರಣ. ಆಗ್ರಹಪೂರ್ವಕವಾಗಿ ಹೇಳುತ್ತೇನೆ.ಎಲ್ಲರೂ ಈ ಮಾತುಗಳನ್ನು ಮನ್ನಿಸಿ ನಡೆದು ಕೃತಾರ್ಥರಾಗು ವಂಥವರಾಗಿರಿ.

ದೂತಿ : (ಬಂದು ಅವರ ಮಾತು ಕೇಳುತ್ತ ನಿಂತು) ಏನು ? ನೀವ್ಯಾರು ? ಏನೇನೋ ಹೇಳುತ್ತಿರುವಿರಲ್ಲ ? ಯಾರಿಗೆ ಹೇಳುತ್ತಿರುವಿರಿ ? ಕೇಳುವವರೇ ಇಲ್ಲದೆ ಒಂದೇ ಸವನೆ ಹೇಳುತ್ತಿರುವಿರಿ ?ಇನ್ನೊಮ್ಮೆ ಹೇಳ್ರಿ ನಾನಷ್ಟು ಕೇಳತೀನಿ

ತಿರುನೀಲಕಂಠ : ಕೇಳು, ನಾನು ಹೇಳುವುದು ಇಷ್ಟೆ ! ಪ್ರತಿಯೊಬ್ಬ ಮಾನವನು ದುಃಖವ್ಯಾಪ್ತವಾದ ಈ ಭವಸಾಗರದಿಂದ ಪಾರಾಗಿ, ಶಾಶ್ವತವೂ ಪರಮಾನಂದವೂ ಆದ ಮೋಕ್ಷವನ್ನು ಹೊಂದಬೇಕು.ಅಂದರೆ ಮನುಷ್ಯ ಜನ್ಮದಲ್ಲಿ ಹುಟ್ಟಿದ್ದು ಸಾರ್ಥಕ.

ದೂತಿ : ಮೋಕ್ಷ ಹೊಂದಬೇಕು ಅಂತೀರಿ, ಮೋಕ್ಷ ಅಂದ್ರ ಅದು ಎಂಥಾದ್ರಿ ?ಈ ಸಂಸಾರ ಅಂದ್ರ ಗಂಡ ಹೇಣ್ತಿ ಮಕ್ಕಳು, ಹೂಲಾಮನಿ, ಬದುಕುಬಾಳ್ವೆ ಬೇಕಾದ್ಹಾಂಗ ಉಂಡುಟ್ಟು ಸುಖವಾಗಿ ಕಾಲಕಳಿಯೋದು ಇಂಥಾದನ್ನ ಬಿಟ್ಟು ಇದಕಿಂತ ಹೆಚ್ಚಿನದೈತೇನ್ರಿ ಆ ಮೋಕ್ಷ ?

ತಿರುನೀಲಕಂಠ : ಹೌದು, ಈ ಸಂಸಾರ ಸುಖವೆಂಬುದು ಆ ಮೋಕ್ಷ ಸುಖದ ಮುಂದೆ ಒಂದು ತೃಣಸಮಾನ.ಅದು ಸಮುದ್ರವನ್ನು ಕಂಡವನಿಗೆ ಒಂದು ಸಣ್ಣ ಹಳ್ಳವನ್ನು ಕಂಡಂತೆ ಎಂದು ತಿಳಿ.

ದೂತಿ : ಇದನ್ನೇನ ಹೇಳ್ತೀರಿ ನೀವು ?ಸಂಸಾರ ಸುಖದ ಮುಂದ ಯಾವದೂ ಹೆಚ್ಚಿಂದಲ್ಲ ಅಂತ ಈ ಲೋಕದ ಜನರೆಲ್ಲ ಹೆಂಡ್ರು ಮಕ್ಕಳ್ನ ಪಡೆದು, ಬದುಕುಗಳಿಸಿ ಉಂಡುಟ್ಟು ಸುಖವಾಗಿ ಕಾಲಕಳಿತಾರ.ನೀವು ಹೇಳೊ ಮೋಕ್ಷ ಇದಕಿಂತ ಹೆಚ್ಚಿಂದಾಗಿದ್ರ ಇವ್ರ ಪ್ರಯತ್ನ ಮಾಡದ ಬಿಡತಿದ್ದರೇನ್ರಿ ?ನಿಮ್ಮಷ್ಟ ಬುದ್ಧಿ ಇಲ್ಲಿ ಕುಂತವರಿಗೆ ಯಾರಿಗೂ ಇಲ್ಲಂತ ತಿಳದೀರೇನು ? ಹಂಗಾರ ನೀವ ಹೆಚ್ಚಿನ ಪರೀಕ್ಷೆ ಕೊಟ್ಟಾಂಗಾಯ್ತು.ಯಾವ ಪರೀಕ್ಷೆ ಕೊಟ್ಟಾಂಗಾಯ್ತು?ಯಾವ ಪರೀಕ್ಷೆ ಕೊಟ್ಟೀರಿ ಹೇಳ್ರಿ.ನೋಡೋಣ.

ತಿರುನೀಲಕಂಠ : ಏನೇ, ನೀನು ಹೆಂಗಸಾಗಿ ಎಷ್ಟೊಂದು ಮಾತನಾಡುವಿ ?ನಿನಗೇನು ತಿಳಿದಿದೆ ?ಸಂಸಾರ ಸುಖವೇ ಘನವೆಂದು ಭಾವಿಸಿದ ನಿನಗೆ ನಾನು ಹೇಳುವ ಪರಮಾರ್ಥ ವಿಚಾರವು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆಯೇ ಸರಿ.

ದೂತಿ : ಆಂ ? ಏನಂದೆ ? ನಾನು ನಿನಗೆ ಕೋಣನಂಗ ಕಂಡೆನೇನು ? ಸ್ವಲ್ಪ ನೋಡಿಕೊಂಡು ಎಚ್ಚರದಿಂದ ಮಾತಾಡು.ನಾನೇನು ಸಾಧಾರಣ ಹೆಂಗಸಲ್ಲ.ನಿಮ್ಮಂಥಾರ‌್ನ ಸಾಕಷ್ಟ ಮಂದಿ ನೋಡೀನಿ.ನಿನ್ನ ಪುಂಡಾಟಕಿ ನನ್ನ ಮುಂದನಡಿಯೂದಿಲ್ಲ.ಇಂಥಾದೆಲ್ಲ ಬಿಟ್ಟಬಿಡು.ಇರ‌್ಲಿ, ಮೊದಲ ನೀನ್ಯಾರ ಹೇಳು ?

ತಿರುನೀಲಕಂಠ : ನೀನಾರು ?

ದೂತಿ : ನೀನ್ಯಾರನ್ನೂದ್ನ ಮೊದಲ ಹೇಳು, ಆಮ್ಯಾಲೆ ನಾನು ಹೇಳತೀನಿ.

ತಿರುನೀಲಕಂಠ : ಇಲ್ಲ, ಮೊದಲು ನೀನು ಹೇಳು.

ದೂತಿ : ನಾನು ಹೇಳಿದಾಗ ಮಾತ್ರ ನೀನು ಹೇಳುವಿಯಾ ?

ತಿರುನೀಲಕಂಠ : ಹೌದು.

ದೂತಿ : ಹಾಗಾದ್ರ ನೀನು ಬಾಳ ಆಡಮುಟ್ಟ ಇದ್ದಹಾಂಗಾಯ್ತು. ನಾನ್ಯಾರ ಅನ್ನೂದ್ನ ಹೇಳ್ತೀನಿ ಕೇಳು.ದೇಸಾಯರ ಅಂತಃಪುರದ ಎಲ್ಲ ಕಾರಭಾರ ನಡಸೂವಂಥ ಶೀಲವಂತಿ ಶಿವಲಿಂಗವ್ವ ಅಂತ ನನ್ನ ಹೆಸರು.ಇನ್ನು ನೀನ್ಯಾರು ಅನ್ನೂದನ್ನ ಹೇಳು.

ತಿರುನೀಲಕಂಠ : ನಾನು ಸಾಧು, ಸತ್ಪುರುಷ, ಮಹಾ ಶಿವಶರಣನೆಂದು ತಿಳಿ.

ದೂತಿ : ಏನು ? ಸಾಧು ಸತ್ಪುರುಷ ಶಿವಶರಣ ?ಹೀಂಗ ಮೂರನಾಲ್ಕ ಹೆಸರ‌್ನ ದೆವ್ವ ಹೇಳತಾವು.ಅಂದಂಗ ನಿನಗ ದೆವ್ವಗಿವ್ವ ಬಡಕೊಂಡೈತೇನು ?ಇರ‌್ಲಿ ನಿಜವಾದ ನಿನ್ನ ಹೆಸರ ಹೇಳು.

ತಿರುನೀಲಕಂಠ : ದೂತೆ, ನಾವಾರೆಂದರೆ, ಹೇಳುತ್ತೇನೆ ಕೇಳು.

ಪದ :

ಶಿವಶರಣರಲಿ ನಾವು ದೂತೆ
ಕೇಳೆ ಹೇಳುವೆನೆಲ್ಲ ವಾರ್ತೆ ॥ಪಲ್ಲ ॥

ಕಾಮಕ್ರೋಧಗಳ ಸುಟ್ಟು ಬಿಟ್ಟು
ಎಲ್ಲ ಸಂಸಾರದಾಸೆಯ ಬಿಟ್ಟುಕೊಟ್ಟು
ನಾವು ನಂಬಿರುವೆವು ಶಿವನ ಗಟ್ಟಿಮುಟ್ಟು ॥

ಸತಿಸುತರೆಂಬುವ ಒಣ ಭ್ರಾಂತಿ
ಇದು ಇರುವುದು ಮೂರುದಿನದ ಸಂತಿ
ಇದರಿಂದ ಮುಕ್ತಿಯಿಲ್ಲೆಂದು ನೀತಿ
ಹೇಳುವೆವು ನಾವು ಮಾಡಿ ಖಾತ್ರಿ ॥

ಜ್ಞಾನದ ಅಮೃತ ಸವಿದುಂಡು
ಈ ಸಂಸಾರ ಕೆಟ್ಟೆಂದು ಮನಗಂಡು
ಆತ್ಮಾರಾಮನ ಪಾದಕೆ ತನುಮನ
ಒಪ್ಪಿಸಿ ಕಂಡೆವು ಸುಖ ಘನ ॥

ದೂತೆ, ಸಂಸಾರವೆಂಬ ಘೋರಾರಣ್ಯಕ್ಕೆ ನಮ್ಮನ್ನು ಎಳೆದೊಯ್ದು.ನಮ್ಮ ದೈವೀ ಸಂಪತ್ತಾದ ಶಮೆ, ದಮೆ, ಶಾಂತಿ ವಿವೇಕಾದಿಗಳನ್ನು ಹಾಳುಮಾಡುವಂಥ ಕಾಮಕ್ರೋಧಾದಿಗಳೆಂಬ ವೈರಿಗಳನ್ನು ಗೆದ್ದು, ದಾರೇಷಣ, ಪುತ್ರೇಷಣ, ವಿತ್ತೇಷಣಗಳಿಗೆ ಅಧೀನರಾಗದೆ, ಆಣವ ಮಾಯಾ ಕಾರ್ಮಿಕಗಳೆಂಬ ಮಲತ್ರಯಗಳನ್ನು ನಿವಾರಿಸಿ ಅವಿದ್ಯಾ ಅಸ್ಮಿತ ರಾಗ ದ್ವೇಷ ಅಭಿನಿವೇಷಗಳೆಂಬ ಕ್ಲೇಶಗಳನ್ನು ಹರಿದೊಗೆದು ಲಿಂಗಮಧ್ಯೇ ಜಗತ್ ಸರ್ವಂ, ಲಿಂಗಬಾಹ್ಯಾತ್ ಪರಂ ನಾಸ್ತಿ ಇಲ್ಲವೆ ಸರ್ವಂ ಖಲ್ವಿದಂ ಬ್ರಹ್ಮಂ ಎಂಬ ವಾಕ್ಯಗಳಂತೆ ಎಲ್ಲೆಡೆಗೂ ಶಿವನೇ ವ್ಯಾಪಿಸಿರುವನೆಂಬ ದೃಢನಿರ್ಧಾರದಿಂದ ನಾವು ಆ ಶಿವನಲ್ಲಿಯೇ ಸಮರಸರಾಗಿ ವಿಹರಿಸುತ್ತಿರುವುದರಿಂದ ಎಲ್ಲರೂ ನಮಗೆ ಶಿವಶರಣ, ಶಿವಯೋಗಿ ಹಾಗೂ ಶಿವಜ್ಞಾನಿಗಳೆಂದು ಪೂಜ್ಯಭಾವದಿಂದ ಕಾಣುತ್ತಾರೆ. ತಿಳಿಯಿತೆ ?

ದೂತಿ : ಇದೇನ್ರಿ, ಮತ್ತೆ ಎರಡ ಮೂರ ಹೆಸರ ಹೇಳತೀರಿ.ಹೀಂಗ ಹ್ಯಾಂಗಿ ಅದು ; ನಿಮ್ಮವ್ವ ನಿಮ್ಮಪ್ಪ ಒಂದ ಹೆಸರು ಇಟ್ಟಿಲ್ಲೇನ್ರಿ ನಿಮಗ ?

ತಿರುನೀಲಕಂಠ : ಇಟ್ಟಿದ್ದಾರೆ. ಎಲ್ಲರೂ ನನಗೆ ತಿರುನೀಲಕಂಠ, ತಿರುನೀಲಕಂಠ ಎಂಬ ಹೆಸರಿನಿಂದ ಕರೆಯುವರು ನೋಡು.

ದೂತಿ : ಹೌದ್ರ್ಯಾ ? ಹೀಂಗ ಹೇಳ್ರಿ ನನಗ ತಿಳಿಯುವಂಗ, ಶಿವಜ್ಞಾನಿ, ಶಿವಯೋಗಿ, ಶಿವಶರಣ ಅಂತ ಏನೇನೋ ಹೇಳಿದ್ರ ನನಗ ಹ್ಯಾಂಗ ತಿಳಿಬೇಕು. ಇರಲಿ, ಅಂತೂ ನೀವು ತಿರುನೀಲಕಂಠ ಶರಣರು ಅನ್ನುವದು ಈಗ ಪಕ್ಕಾ ತಿಳಿದಂಗಾಯ್ತು. ಆದ್ರ, ಆಗ್ಲೆ ನೀವು ಸಂಸಾರದೊಳಗ ಇಲ್ಲ ಅಂತ ಹೇಳಿದ್ರೆಲ್ಲ.ನಿಮ್ಗ ಹೆಂಡತಿ ಮಕ್ಕಳು ಇಲ್ಲೇನ್ರಿ ?

ತಿರುನೀಲಕಂಠ : ದೂತೆ, ಹೆಂಡತಿ ಇರುವಳು, ಶ್ರೀ ಕೃಷ್ಣ ಪರಮಾತ್ಮನಿಗೆ ಹದಿನಾರು ಸಾವಿರ ಹೆಂಡರಿದ್ದರೆಂಬುದನ್ನು ನೀನು ಕೇಳಿರಬಹುದು.ಆದರೂ ಆತ ಬಾಲಬ್ರಹ್ಮಚಾರಿ ಎನಿಸಿಕೊಂಡಿದ್ದನು. ಅದರಂತೆ ನಾವೂ ಪ್ರಪಂಚ ಮಾಡಿಯೂ ಮಾಡದಂತಿದ್ದೇವೆ.ಸಂಸಾರದ ಹಂಗು ನಮಗಿಲ್ಲ.

ದೂತಿ : ಏನ್ರಿ, ಸಂಸಾರದ ಹಂಗು ಇಲ್ಲ ಅಂತೀರಿ.ಹಾಂಗಿದ್ದರ ಹೊಲಾ ಮನಿ ನಿಮಗ್ಯಾತಕ್ಕ ಬೇಕ ಹೇಳ್ರಿ ?

ತಿರುನೀಲಕಂಠ : ಏನೆ, ಹೊಲಾ ಮನೆ ಬೇಕು.ಆದರೆ ಅದೆಲ್ಲ ನನ್ನದು ಎಂಬ ವಾಸನೆ ಬೇಡ.ನನ್ನದು ಎನ್ನುವ ಭಾವನೆಯನ್ನು ಕನಸು ಮನಸಿನಲ್ಲಿಯೂ ತಾರದೆ, ಎಲ್ಲದೂ ಪರಮಾತ್ಮನದೆಂದು ನಂಬಿದರೆ ತೀರಿತು.ಅಂಥವನು ಸಂಸಾರದೊಳಗಿದ್ದೂ ನಿರ್ಲಿಪ್ತನು.ಅವನು ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ.ಇಂಥ ಗುಣ ಶಿವಜ್ಞಾನಿಗಳಿಗಲ್ಲದೆ ಅನ್ಯರಿಗೆ ಸಾಧ್ಯವಿಲ್ಲ.ಬಲ್ಲೆಯಾ ?

ದೂತಿ : ಅಲ್ರಿ, ಜ್ಞಾನ ಜ್ಞಾನ ಅಂತ ಬಾಳ ಹೇಳಾಕ ಹತ್ತೀರಿ, ಆ ಜ್ಞಾನಂದ್ರೇನು ಅನ್ನೂದನ್ನ ಅಷ್ಟ ಹೇಳ್ರಿ.

ತಿರುನೀಲಕಂಠ : ಕೇಳು ಹಾಗಾದರೆ, ಯಾವುದರಿಂದ ಪುನರ್ಜನ್ಮವಿಲ್ಲವೊ, ಯಾವುದರಿಂದ ಮೋಕ್ಷ ದೊರೆಯುವುದೋ ಅದೇ ಜ್ಞಾನವೆಂದು ತಿಳಿ. ಜ್ಞಾನಿಯು ಜಾಗ್ರತಾವಸ್ಥೆಯಲ್ಲಿದ್ದರೂ ಗಾಢನಿದ್ರೆಯಲ್ಲಿದ್ದವನಂತೆ ಇರುತ್ತಾನೆ.ಇದೇ ಜೀವನ್ಮುಕ್ತಿಯ ಸ್ಥಿತಿ. ವಿರಕ್ತನ ರೀತಿ.

ದೂತಿ : ಶರಣರೆ, ತಾವು ವಿರಕ್ತರೆನ್ನುವದು ತಿಳಿಯಿತು.ಈಗ ಕೈಯಲ್ಲಿ ಹೂಪತ್ರಿ ಹಿಡಿದುಕೊಂಡು ಎಲ್ಲಿಗೆ ಹೊರಟಿರುವಿರಿ?

ತಿರುನೀಲಕಂಠ : ಏನೆ, ಈಗ ನಾನು ಪೊನ್ನಾಂಬಲೇಶ್ವರನನ್ನು ಪೂಜಿಸಲು ದೇವಸ್ಥಾನಕ್ಕೆ ಹೊರಟಿದ್ದೇನೆ. ನೋಡು.

ದೂತಿ : ಪೂಜಾಮಾಡಲಿಕ್ಕೆ ನೀವೇನು ಪೂಜಾರಿಗಳೇನ್ರಿ ?

ತಿರುನೀಲಕಂಠ : ಪೂಜಾರಿಗಳಷ್ಟೇ ಪೂಜೆ ಮಾಡಬೇಕೇನು ? ಬೇರೆಯವರು ಮಾಡಬಾರದೆ ?

ದೂತಿ : ಬೇರೆಯವರು ಮಾಡಬೇಕಾದರೆ ತಮ್ಮ ಮನೆಯಲ್ಲಿ ದೇವರಿಲ್ಲವೆ ?

ತಿರುನೀಲಕಂಠ : ಇದ್ದಾನೆ, ಸರ್ವವ್ಯಾಪ್ತಿಯಾದ ಆ ಭಗವಂತನು ಮನೆಯಲ್ಲಿ ಅಷ್ಟೆ ಏಕೆ ?ನಮ್ಮ ನಿಮ್ಮೆಲ್ಲರ ದೇಹದಲ್ಲಿಯೂ ಇದ್ದಾನೆ.

ದೂತಿ : ಎಲ್ಲರ ದೇಹದಾಗ ಆ ಪರಮಾತ್ಮ ಇರಬೇಕಾದ್ರ, ಈ ದೇಹದೊಳಗೂ ದೇವರ ಗುಡಿ ಇದ್ದಂಗಾತು ?

ತಿರುನೀಲಕಂಠ : ಹೌದು ; ಕಲ್ಲಗುಡಿಗಿಂತಲೂ ನಮ್ಮೆಲ್ಲರ ಅಂತರಂಗದಲ್ಲಿರುವ ಗುಡಿ ಬಹಳ ಅಪರೂಪವಾದುದು.

ದೂತಿ : ಅದು ಹ್ಯಾಗ ಐತಿ ಹೇಳ್ರಿ ?

ತಿರುನೀಲಕಂಠ : ಕೇಳು ಹೇಳುತ್ತೇನೆ.

ಕೇಳ ದೂತೆ ಹೇಳುವೆ ವಿಸ್ತಾರ
ಅಂತರಂಗದ ಗುಡಿಯ ಮಜಕೂರ ॥ಪಲ್ಲವಿ ॥

ಪದ :

ಪಂಚತತ್ವವೆಂಬ ಮೂಲಾಧಾರದಿ
ಪಂಚವಿಂಶತಿ ಸರಿಸಾಲ್ಗೊಳಿಸಿ
ಪಂಚಜ್ಞಾನೇಂದ್ರಿಯ ಪಂಚಕರ್ಮೇಂದ್ರಿಯ
ಹಂಚಿಕೆಯಿಂದಾದ ದೇಹವು ಇದು ಗುಡಿ ॥

ಪಾರಮಾರ್ಥ ಧ್ವಜವನೆ ಕಟ್ಟಿಸಿ
ಪ್ರಣವನಾದವೆಂಬ ಭೇರಿಯ ನುಡಿಸಿ
ಮೀರಿದ ಸಂಭ್ರಮ ದೇವಾಲಯದೊಳು
ತೋರುವ ಕೌತುಕ ಎಷ್ಟೆಂದು ಹೇಳಲಿ ॥

ಏನೆ, ಅಂತರಂಗದ ಗುಡಿ ಹೇಗಿದೆಯೆಂದರೆ, ಪೃಥ್ವಿ ಅಪ್ ತೇಜ ವಾಯು ಆಕಾಶವೆಂಬ ಪಂಚತತ್ವಗಳನ್ನು ಮೂಲಾಧಾರವಾಗಿಟ್ಟುಕೊಂಡು.ಅವನ್ನೆ ತಾರತಮ್ಯವಾಗಿ ಇಪ್ಪತ್ತೈದು ತತ್ವಗಳನ್ನಾಗಿ ನಿರ್ಮಾಣ ಮಾಡಿ. ಪಂಚ ಜ್ಞಾನೇಂದ್ರಿಯ, ಪಂಚಪ್ರಾಣ, ಪಂಚಕರ್ಮೆಂದ್ರಿಯ, ಮನ : ಬುದ್ಧಿ : ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಗಳನ್ನು ತೋರ್ಪಡಿಸಿ ಮೆರೆಯುವ ಈ ದೇಹವೇ ದೇವಾಲಯ!ಈ ದೇವಾಲಯಕ್ಕೆ ಪರಮಾರ್ಥ ಜ್ಞಾನವೆಂಬ ಧ್ವಜವನ್ನು ಕಟ್ಟಿದೆ ಮತ್ತು ಪ್ರಣವನಾದವೆಂಬ ಭೇರಿಯು ಸದಾ ಢಣ ಢಣ ನುಡಿಯುತ್ತಿರುವುದು.

ದೂತಿ : ಸ್ವಾಮಿ, ಇಷ್ಟೆಲ್ಲ ತಿಳಿದುಕೊಂಡಾಯ್ತು. ಇನ್ನು ದೇವರು ಅಲ್ಲಿ ಹ್ಯಾಗೆ ಇದ್ದಾನೆ ?

ತಿರುನೀಲಕಂಠ : ಏನೆ, ದೇವರು ಅಲ್ಲಿ ಹೇಗೆ ಇರುವನೆಂದರೆ ಹೇಳುತ್ತೇನೆ ಕೇಳು.

ಪದ :

ಹೃತ್ಕಮಲೆಂಬುವ ಸಿಂಹಾಸನದಿ
ಚಿತ್ಕಳೆಯೆಂಬುವ ಜ್ಯೋತಿಯ ಬೆಳಕಲಿ
ಮತ್ಕುಲಗುರು ಶಿವ ಅರಸಾಗಿಹನೆ
ಉತ್ಕಟಮಾಯೆಯ ಲೀಲೆಯ ಕಾಣುತ ॥

ದೂತೆ, ಈ ದೇಹವೆಂಬ ದೇವಾಲಯದಲ್ಲಿ ಹೃದಯಕಮಲ ಎನ್ನುವದನ್ನೇ ಸಿಂಹಾಸನ ಮಾಡಿಕೊಂಡು ಚಿತ್ಕಳೆಯೆಂಬ ಜ್ಯೋತಿಯ ಬೆಳಕಿನಲ್ಲಿ, ಸಚ್ಚಿದಾನಂದ ಸ್ವರೂಪನಾದ ಆ ಪರಮಶಿವನು ಸಹಜಾನಂದಮಯನಾಗಿದ್ದು ಚೇತನನೆನಿಸಿ ಪ್ರಕಾಶ ಬೀರುತ್ತ ವಿರಾಜಮಾನನಾಗಿದ್ದಾನೆ.ತಿಳಿಯಿತೆ ?

ದೂತಿ : ಏನ್ರಿ, ಈ ಶರೀರ ಅನ್ನುವಂಥ ಗುಡಿಯೊಳಗ ದೇವರು ಅದಾನಂತ ಹೇಳ್ತೀರಿ.ಆದ್ರ ಆ ಗುಡಿಯೊಳಗೆ ಹೋಗಾಕ ದಾರಿ ಎಲ್ಲೈತ್ರಿ ?

ತಿರುನೀಲಕಂಠ : ಏನೆ, ಮಾರ್ಗವಿಲ್ಲದೆ ಹೋಗಿ ಬರಲು ಸಾಧ್ಯವೆ ?ಈ ಗುಡಿಯೊಳಗೆ ಹೋಗಲು ಯೋಗವೆಂಬುವ ಒಂದು ರಾಜಮಾರ್ಗವಿದೆ.ಅದನ್ನು ಹಿಡಿದು ನಾನು ನಿತ್ಯ ಹೋಗಿ ಪೂಜೆ ಮಾಡಿ ಬರುತ್ತೇನೆ.

ದೂತಿ : ಸ್ವಾಮಿ, ಆ ಹಾದಿಯನ್ನು ನನಗಷ್ಟು ತೋರಸ್ತೀರಾ ?

ತಿರುನೀಲಕಂಠ : ಏನೆ, ಆ ಹಾದಿ ಎಲ್ಲರಿಗೂ ಸುಲಭವಲ್ಲ, ಯೋಗಿಗಳಿಗೆ ಮಾತ್ರ ಸಾಧ್ಯ.ಪರಮಾತ್ಮ ಅವರಿಗಷ್ಟೆ ಗೋಚರಿಸುತ್ತಾನೆ.ನಿನ್ನಂಥವರಿಗೆ ಕಾಣಲಾರನು.

ದೂತಿ : ಅದ್ಯಾಕ ಕಾಣೂದಿಲ್ಲ ?ನಮ್ಮನ್ನ ಬಿಟ್ಟು ನಿಮಗಷ್ಟs ಕಾಣಬೇಕಾದ್ರ ನಿಮ್ಮ ತೆಲಿಯಾಗ ಕೋಡು ಮೂಡ್ಯಾವೇನು?

ತಿರುನೀಲಕಂಠ : ಏನೆ, ತಲೆಯಲ್ಲಿ ಕೋಡು ಮೂಡಲು ನಾನೇನು ಪಶುವೆ ?

ದೂತಿ : ಅಲ್ರಿ ಶರಣರೆ, ಆ ಪರಮಾತ್ಮ ನಿಮಗಷ್ಟೆ ಕಾಣಿಸಿ, ನಮಗ ಕಾಣಿಸದೇ ಇರಾಕ ಕಾರಣೇನು ಅಂತ ? ನಮ್ಮಕಣ್ಣಿಗೇನಾದ್ರೂ ಪರಿಗಿರಿ ಬಂದಾವೇನ್ರಿ ?

ತಿರುನೀಲಕಂಠ : ದೂತೆ, ಹೆಳವನು ಮರದ ಮೇಲಿನ ಹಣ್ಣಿಗೆ ಆಸೆ ಮಾಡಿದರೆ, ಆ ಹಣ್ಣು ಅವನಿಗೆ ಸಿಗಬಲ್ಲುದೆ ?

ದೂತಿ : ಸಿಗದೇನ ಮಾಡತ್ತ ? ಒಂದ ಕಲ್ಲ ತೊಗೊಂಡು ಹೊಡದ್ರ ಧೊಪ್ಪನ ತೆಳಗ ಬೀಳತ್ತ.

ತಿರುನೀಲಕಂಠ : ಏನೆ, ಅವನು ಹೊಡೆದ ಕಲ್ಲು ಆ ಹೆಣ್ಣಿಗೆ ಬಡಿದೇ ತೀರುವುದೆಂದು ಹೇಗೆ ಹೇಳುವದು.ಮರವನ್ನೇರಿ ಹರಿದುಕೊಂಡಲ್ಲದೆ ಹಣ್ಣು ಅವನಿಗೆ ದೊರಕದು.ಅದನ್ನು ಏರಲು ಅವನಿಗೆ ಕಾಲಿಲ್ಲ.ಅದರಂತೆ ದೇವದರ್ಶನವನ್ನು ಪಡೆಯಬೇಕಾದ ಯೋಗಮಾರ್ಗ ಬಹು ಕಠಿಣವಾದುದು ; ಅದು ನಿನ್ನಂಥವಳಿಗೆ ಸಾಧ್ಯವಿಲ್ಲ.

ದೂತಿ : ಕಠಿಣ ಇದ್ದದ್ದೆಲ್ಲ ನಿಮಗ ಇರ‌್ಲಿ.ಕೈಯಾಗ ಹೂ ಪತ್ರಿ ಹಿಡಕೊಂಡು ಕಲ್ಲದೇವರ ಪೂಜೆ ಮಾಡುವಾಂಗ, ಒಳಗಿನ ದೇವ್ರ ಪೂಜೀನೂ ಮಾಡತೀರೇನ್ರಿ ?

ತಿರುನೀಲಕಂಠ : ಹೌದು, ಅಂತರಾತ್ಮನ ಪೂಜೆಯನ್ನು ಮಾಡುತ್ತೇವೆ.

ದೂತಿ : ಅದನ್ನ ಹ್ಯಾಂಗ ಮಾಡತೀರಿ ?

ತಿರುನೀಲಕಂಠ : ಹಾಗಾದರೆ ಕೇಳು.

ಪದ :

ಹಸನ ಮನದಿಂದ ಶಿವನನ್ನು ಪೂಜಿಸುವೆ
ಕೇಳು ದೂತೆ ಪೂಜಿಸುವೆ ॥ಪಲ್ಲವಿ ॥

ವರ ಭಕ್ತಿಯಭಿಷೇಕ ಮಾಡಿ, ವಿರತಿಗಂಧವನ್ಹಚ್ಚಿ
ಕರಣೇಂದ್ರಿಯಕ್ಷತೆಯನೇರಿಸಿ ಧ್ಯಾನಿಸಿ ಪೂಜಿಸುವೆ ॥

ಸತ್ಯವೆಂಬ ಹೂವು ಏರಿಸಿ ತತ್ವಜ್ಞಾನ ಧೂಪವ ಬೆಳಗಿ
ಆತ್ಮಜ್ಯೋತಿಯ ಆರತಿಯ ಬೆಳಗುವೆ ಶಿವನಿಗೆ ಅರ್ಪಿಸುವೆ ॥

ಕೈವಲ್ಯ ಆನಂದವ ನೈವೇದ್ಯ ಮಾಡುವನು ದೈವೀ
ಸಂಪತ್ತ ತಾಂಬೂಲವ ಕೊಡುವೆನು ನಮಸ್ಕಾರ ಮಾಡುವೆನು ॥

ದೂತೆ, ಅಂತರಂಗದಲ್ಲಿ ಪರಮಾತ್ಮನನ್ನು ಪೂಜಿಸುವ ವಿಧಾನ ಬಹು ವಿಲಕ್ಷಣವಾದುದು.ಭಕ್ತಿಯೆಂಬ ನೀರಿನಿಂದ ಅಭಿಷೇಕ ಮಾಡಿ.ವಿರತಿಯೆಂಬ ಗಂಧವ ಹಚ್ಚಿ, ಅರಿವೆಂಬ ಅಕ್ಷತೆಯನಿಟ್ಟು, ಸತ್ಯವೆಂಬ ಹೂವನೇರಿಸಿ, ತತ್ವ ಜ್ಞಾನವೆಂಬ ಧೂಪದ ಬೆಳಗಿ, ನಿಜಾನಂದ ನೈವೇದ್ಯವ ಮಾಡಿ, ಸತ್ವ ರಜ ತಮೋಗುಣಗಳೆಂಬ ತಾಂಬೂಲ ಕೊಟ್ಟು ಮನದುಂಬಿ ಕೊಂಡಾಡುತ್ತ, ನಾನು ದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.

ದೂತಿ : ನೀವು ಆತ್ಮಲಿಂಗನ ಪೂಜೆ ಮಾಡೂದು ಕಲ್ಲದೇವರಿಗೆ ಹ್ಯಾಂಗ ಗೊತ್ತಾಗಬೇಕ್ರಿ ?

ತಿರುನೀಲಕಂಠ : ಏನೆ, ಪರಮಾತ್ಮನು ಎಲ್ಲೆಲ್ಲಿಯೂ ಇದ್ದಾನೆ.ಕಲ್ಲಿನಲ್ಲಿಯೂ ಅಡಗಿ ಕುಳಿತಿದ್ದಾನೆ.ನಿರ್ಮಲ ಮನಸ್ಸಿನಿಂದ ಕಲ್ಲುಮೂರ್ತಿ ಪೂಜಿಸಿದರೂ ಅವನು ದರ್ಶನ ಕೊಡುತ್ತಾನೆ.ಅಜ್ಞಾನಿಗಳಿಗೆ ಆತನನ್ನು ಕಾಣುವದು ಸಾಧ್ಯವಿಲ್ಲ.

ದೂತಿ : ಸ್ವಾಮಿ, ಆ ಕಲ್ಲ ದೇವರು ವರ ಕೊಡಬಲ್ಲನೆ ?

ತಿರುನೀಲಕಂಠ : ಕೊಡದೇನು ಮಾಡುತ್ತಾನೆ.ಅವನನ್ನು ನಂಬಿದವರಿಗೆ ಬೇಡಿದ ವರಗಳನ್ನು ನೀಡುತ್ತಾನೆ.

ದೂತಿ : ನಿಮಗ ನೀಡಬಹುದು ಬಿಡ್ರಿ.ಇರ‌್ಲಿ ಸುಮ್ನ ಗುಡಿಗ್ಯಾಕ ಹೊಕ್ಕೀರಿ, ಇಲ್ಲೆ ಒಂದ ಗಳಿಗ್ಹೊತ್ತು ಕೂಡಾಣ ಬರ‌್ರಿ.

ತಿರುನೀಲಕಂಠ : ಹುಚ್ಚಿ ಪರಮಾತ್ಮನಿಗೆ ನಿಂದೆ ಮಾಡಬಾರದು.ಇದರಿಂದ ನಿನಗೆ ದೋಷ ತಟ್ಟದೆ ಬಿಡದು.ವೇಳೆಯಾಯಿತು ಇನ್ನು ನಾನು ಪೊನ್ನಾಂಬಲೇಶ್ವರನ ಪೂಜೆಗೆ ಹೋಗುತ್ತೇನೆ.

ದೂತಿ : ಅಲ್ಲೇನದ ಬಿಡ್ರಿ ; ಹಗಲೆಲ್ಲ ಏನ ಹೋಗತೀನಿ ಹೋಗತೀನಿ ಅಂತ ಹಚ್ಚೀರಿ.

ತಿರುನೀಲಕಂಠ : ಛೆ, ಛೆ, ವೇಳೆ ಬಹಳವಾಯಿತು ನಾನಿನ್ನು ಹೋಗುತ್ತೇನೆ.

ಪದ :

ಪೋಗುವೆ ಕೇಳ ದೂತೆಶಿವನಿಗೆ ಬಹುಪ್ರೀತಿ
ಯಾಗಲು ಪೂಜಿಸುವೆ ನಾ ॥ಪಲ್ಲ ॥

ವೃಷಭಾರೂಢಗೆ ಶಶಿಧರಚೂಡಗೆ
ಖುಷಿಯಿಂದ ತನುಮನ ಹಸನ ಭಾವದಿ ನೀಡಿ ॥

ಶರಣರ ನೋಡುವ ಪರಿ ಪರಿ ಕಾಡುವ
ಕರುಣಿಸಿ ಕಾಯುವ ಹರನಿಗೆ ಇಂದು ನಾನು ॥

ಮೇದಿನಿಯೊಳು ಖ್ಯಾತ ಕಾದರೊಳ್ಳಿ ಗ್ರಾಮದಾತ
ಸಾಧುಪ್ರೀತ ವೀರಭದ್ರದೇವರ ದಯೆಯಿಂದ ಸಧ್ಯ ॥

(ತಿರುನೀಲಕಂಠರು ಹೋಗುವರು, ಆಮೇಲೆ ದೂತಿಯೂ ಹೋಗುವಳು)