ಪ್ರವೇಶ : 3
(ತಿರುನೀಲಕಂಠ ಧರ್ಮಪತ್ನಿ ಸತ್ಯವತಿ ಮತ್ತು ದೂತಿಯರ ಆಗಮನ)

ಸತ್ಯವತಿ :

ಪದ :

ಪತಿವ್ರತೆಯ ಗುಣ, ಮುಕ್ತಿಯಾಭರಣ
ಪಾತಕ ದಹನ ನಿಜಸುಖ ಜನನ ॥ಪಲ್ಲವಿ ॥

ಸತಿಯರ ಸತ್ವವ, ಹರಿಹರರು ತಾವು
ಕಂಡರು ಮೂಲವ, ತಿಳಿಯದೆ ಮೋಸವ
ಹೊಂದುತ ಭಾವವ ಗೈದರು ಸೇವಾ
ಬೀರುತ ಮುದವ ॥

ಪತಿವ್ರತೆಯ ಧ್ಯಾನ, ಜನ್ಮವು ಪಾವನ
ಮಾಡಲು ತಾ ಮುನ್ನ, ಸುಖವು ಸಂಪೂರ್ಣ
ಭವಶರಧಿಯನು ದಹಿಸಿ ಸುಜ್ಞಾನ
ಕೊಡುವರು ಯಶವನು ॥

ಗಂಡನ ಪಾದವ ಪೂಜೆಯ ಮಾಡುವ
ಸಾಧ್ವಿಯಳ ಸೇವಾ ಮಾಡಲು ಮಾನವ
ಮುಕ್ತಿಯ ಸುಖವ ತಪ್ಪದೆ ಹೊಂದುವ
ಉಳಿದವರ ಕಾಯಯ್ಯ ॥

ಓಹೋ ಈ ಸಭಾಮಂಟಪಕ್ಕೆ ಆಗಮಿಸಿದಂಥ ಅಕ್ಕ ತಂಗಿ ತಾಯಿಗಳಿರಾ, ನಿಮಗೆಲ್ಲರಿಗೂ ಹೆಣ್ಣುಮಕ್ಕಳು ಹೇಗೆ ನಡೆದುಕೊಳ್ಳಬೇಕೆಂಬುದನ್ನು ತಿಳಿದಮಟ್ಟಿಗೆ ಹೇಳುತ್ತೇನೆ.ಸ್ತ್ರೀಯು ತನು ಮನ ಧನಗಳಿಂದ ಪತಿಸೇವೆ ಮಾಡಿದರೆ ಸದ್ಗತಿಯಾಗುತ್ತದೆ. ಪತಿಯೇ ಪರದೈವವೆಂದು ತಿಳಿದು ಮನಃಪೂರ್ವಕವಾಗಿ ಪತಿಸೇವೆ ಮಾಡುವವಳಿಗೆ ಸದ್ಗತಿಯಾಗುತ್ತದೆ.ಹೇಗೆಂದರೆ ಹಿಂದೆ ಮಾಹಿಷ್ಮತಿ ನಗರದಲ್ಲಿ ಶಾಂಡಿಲಿದೇವಿ ಎಂಬವಳು ಕಠೋರನಾದ ಪತಿಯ ಉಪಟಳವನ್ನು ಶಾಂತಿಯಿಂದ ಸೈರಿಸುತ್ತಿದ್ದಳು. ಆತ ಬಡಿಗೆಯಿಂದ ಬಡಿದರೂ ಸುಮ್ಮನಿದ್ದು ತನ್ನಮನೆಗೆಲಸದಲ್ಲಿ ನಿರತಳಾಗಿರುತ್ತಿದ್ದಳು. ಆತನಿಗೆ ವೇಶ್ಯೆಯರಸಂಗದಿಂದ ಹುಣ್ಣು ಹತ್ತಿ ಶರೀರವೆಲ್ಲ ಕೊಳೆತು ನಾರುತ್ತಿದ್ದರೂ, ಅವನ ಸೇವೆಯನ್ನು ಮನಃಪೂರ್ವಕವಾಗಿ ಮಾಡುತ್ತಿದ್ದಳು. ಹೀಗಿರಲು, ವೇಶ್ಯಾಲೋಲುಪನಾದ ಅವಳ ಪತಿ ಒಬ್ಬ ಹೊಸ ವೇಶ್ಯೆಯನ್ನು ಕಂಡು ಅವಳಲ್ಲಿ ಅನುರಕ್ತನಾಗಿ ಅವಳಿದ್ದೆಡೆಗೆ ತನ್ನನ್ನು ಕೊಂಡೊಯ್ಯಲು ಆಜ್ಞೆ ಮಾಡಿದನು.ರಾತ್ರಿಯ ಸಮಯದಲ್ಲಿ ಶಾಂಡಿಲಿಯು ಗಂಡನನ್ನು ಎತ್ತಿಕೊಂಡು ಆ ವೇಶ್ಯೆಯ ಮನೆಯತ್ತ ಸಾಗಿದಳು.ಆಗ ಶೂಲದ ಮೇಲೆ ನಿಂತು ತಪಸ್ಸು ಮಾಡುತ್ತಿದ್ದ ಮಾಂಡವ್ಯ ಋಷಿಗೆ ಈತನ ಕಾಲು ತಾಕಲು,ಆ ಋಷಿ ಕೋಪಿಷ್ಟನಾಗಿ, ನನ್ನನ್ನು ಒದ್ದವನು ಸೂರ್ಯೋದಯದೊಳಗಾಗಿ ಸತ್ತು ಹೋಗಲಿ! ಎಂದು ಶಪಿಸಿದನು.ಆಗ ಮಹಾಪತಿವ್ರತೆ ಶಾಂಡಿಲಿಯು, ಸೂರ್ಯೋದಯವೇ ಸಂಭವಿಸದಿರಲಿ! ಎಂದು ಸಂಕಲ್ಪಿಸಿದಳು.ಹತ್ತು ಹನ್ನೆರಡು ದಿವಸಗಳವರೆಗೆ ಸೂರ್ಯೋದಯವಾಗದೆ ಲೋಕಕಾರ್ಯಗಳೆಲ್ಲ ತೊಂದರೆಗೀಡಾಗಲು, ತ್ರಿಮೂರ್ತಿಗಳು ಸತಿ ಅನುಸೂಯಾದೇವಿಗೆ ಕೇಳಿಕೊಂಡರು.ಆಕೆ ಶಾಂಡಿಲಿದೇವಿಯ ಬಳಿಗೆ ಬಂದು, ಸೂರ್ಯೋದಯವಿಲ್ಲದೆ ಲೋಕ ಕಂಗಾಲಾಗಿದೆ ; ಸೂರ್ಯನಿಗೆ ಉದಯವಾಗಲು ಆಜ್ಞೆ ಕೊಡು ನಂತರ ನಿನ್ನ ಪತಿಯ ಪ್ರಾಣವನ್ನುಳಿಸಿ ನಿನ್ನಮಾಂಗಲ್ಯಭಾಗ್ಯವನ್ನು ಉಳಿಸುವೆನು ಎಂದಳು.ಸತಿ ಶಾಂಡಿಲಿಯು ಹಾಗೆಯೆ ಮಾಡಲು ಅನುಸೂಯಾದೇವಿಯ ಸಹಾಯದಿಂದ ಪತಿಯ ಪ್ರಾಣವನ್ನು ರಕ್ಷಿಸಿಕೊಂಡಳು. ಹೀಗಿದೆ ಪಾತಿವ್ರತ್ಯದ ಮಹಿಮೆ. ಹೆಣ್ಣುಮಕ್ಕಳೆಲ್ಲ ಈ ಕಥೆಯನ್ನು ನೆನಪಿನಲ್ಲಿಟ್ಟು ಸತ್ಪುರುಷರು ಮೆಚ್ಚುವಂತೆ ಪತಿಯ ಸೇವೆಯಲ್ಲಿ ತತ್ಪರರಾಗಿರಿ.

ದೂತಿ : ಏನವ್ವಾ ಏನಿದು ? ಬಹಳ ಹೊತ್ತಾಯಿತು. ಒಂದೇ ಸವನೆ ಏನೇನೊ ಹೇಳುತ್ತಿರುವಿ, ನೀನ್ಯಾರು ?

ಸತ್ಯವತಿ : ನಾನಾರೆಂಬುದು ನಿನಗೆ ಗೊತ್ತಿಲ್ಲವೇನೆ ?

ದೂತಿ : ನೀನು ಯಾವ ರಾಜನ ಮಗಳು ಎಲ್ಲರಿಗೂ ಗೊತ್ತಿರಲಿಕ್ಕೆ ?

ಸತ್ಯವತಿ : ಏನೆ, ನೀನು ನಮ್ಮ ಮನೆಗೆಎಷ್ಟೋ ಸಲ ಬಂದದ್ದುಂಟು.ನಾನು ನಿನಗೆ ಬೇಕಾದ್ದನ್ನು ಕೊಟ್ಟಿರುವೆ.ಇಷ್ಟರಲ್ಲಿ ಹೇಗೆ ಮರೆತೆಯೆ ?

ದೂತಿ : ಹೀಗೆಯೆ ? ಆದರೂ ಆಗಿದ್ದೀತು.ಮರೆತಿದ್ದೇನೆ. ನಿಮ್ಮ ಹೆಸರೇನು ?

ಸತ್ಯವತಿ : ನನಗೆ ಸತ್ಯವತಿ, ಸತ್ಯವತಿ ಅನ್ನುವರು.

ದೂತಿ : ನನಗೆ ಸತ್ತವರನ್ನು ಹೊತ್ತುಕೊಂಡು ಹೋಗುವಾಕಿ ಹೋಗುವಾಕಿ ಎನ್ನುವರು.

ಸತ್ಯವತಿ : ನನಗೆ ಪತಿವ್ರತೆ ಅನ್ನುವರು.

ದೂತಿ ; ನನಗೆ ಪತ್ರೋಳಿ ತರತೀಯಾ ? ಅನ್ನುವರು.

ಸತ್ಯವತಿ : ಛೀ, ಹುಚ್ಚಿ, ಎಚ್ಚರದಿಂದ ಮಾತಾಡು.

ದೂತಿ : ಅವ್ವಾ ತಪ್ಪಾಯ್ತು, ಕ್ಷಮಾ ಮಾಡಿರಿ, ಇನ್ನೊಮ್ಮೆ ಹೀಗೆ ಮಾತಾಡುವದಿಲ್ಲ.ಈಗ ನಿಮ್ಮ ಗುರುತು ಹತ್ತಿದಂಗಾಯಿತು.ಆ ತಿರುನೀಲಕಂಠ ಶಿವಶರಣರ ಅರ್ಧಾಂಗಿಯಲ್ಲವೆ ತಾವು ?

ಸತ್ಯವತಿ : ಹೌದು.

ದೂತಿ : ತಾಯಿ, ಮನೆಬಿಟ್ಟು ಹೊರಬೀಳುವವರಲ್ಲ ನೀವು.ಈಗ ಇಲ್ಲಿಯವರೆಗೆ ಯಾಕೆ ಬಂದಿರಿ?

ಸತ್ಯವತಿ : ಯಾಕೆಂದರೆ :

ಪದ :

ಪತಿದೇವ ಬರಲಿಲ್ಲವ್ಯಾಕೆಂದು ಮನದಂದು
ಈಗ ಎನಗೆ ಬಹುಚಿಂತೆಯಾದುದು
ಬಹುವೇಳೆ ಸಂದುದು ॥ಪಲ್ಲವಿ ॥

ಈಗೆರಡು ಗಳಿಗೆಯ ಹಿಂದೆ ಆರೋಗಿಸಿ ಸಂತಸದಿ
ವಿಶ್ರಾಂತಿಯನು ಪಡೆದೆ, ಹೋಗುವರು ಮತ್ತೆ ಎದ್ದು
ಶರಣರ ಸಂಗ ಮಾಡಿ ತತ್ವಭಾಗ
ಶಿಷ್ಯರಿಗುಪದೇಶಿಸಲು ವಿವರ ॥

ಇಂದಿಂದು ತಡೆದಂಥ, ಕಾರಣದ ಆದ್ಯಂತ
ಅರಿಯದೆ ಆದೆ ಭ್ರಾಂತೆ ಇದು ಏನು ವಿಚಿತ್ರ
ಕೇಳೇ ನೀನು ದಿಟಿ ಹೇಳುವೆ ನಾ
ಇಲ್ಲಿಗೈತಂದ ಕಾರಣ ॥

ದೂತೆ, ಎನ್ನ ಪ್ರಾಣನಾಥರು ದಿನನಿತ್ಯದಂತೆ ಇಂದು ಸ್ನಾನಾದಿಗಳಿಂದ ಶುಚಿರ್ಭೂತರಾಗಿ ಪೂಜಾಸಾಮಾಗ್ರಿ ಸಹಿತವಾಗಿ ಪೊನ್ನಾಂಬಲೇಶ್ವರನ ಪೂಜೆಗೆ ಹೋದವರು ಇನ್ನೂ ಬಂದಿಲ್ಲ.ಏಕೆ ತಡವಾಗಿರಬಹುದು ? ಅವರ ಮಾರ್ಗ ನಿರೀಕ್ಷಣೆಗೋಸುಗ ಇಲ್ಲಿಯವರೆಗೆ ಬಂದೆ.

ದೂತಿ : ಅವ್ವಾ, ಗಂಡನ ಮೇಲೆ ಎಷ್ಟು ಕಾಳಜಿ ಇದ್ದೀರಿ, ಇವತ್ತ ನಿಮ್ಮವರು ಬರದ ಹೋದರೆ ಏನು ಮಾಡುವಿರಿ ?

ಸತ್ಯವತಿ : ಪತಿದೇವರು ಬರದೇ ಹೋದರೆ ಉಪವಾಸ ಇರುತ್ತೇನೆ.

ದೂತಿ : ಇಷ್ಟ ಕಾಳಜಿ ಇರಬೇಕಾದರೆ ನೀವೂ ಶ್ಯಾಣೇರು ಇದ್ದಂಗಾತು.

ಸತ್ಯವತಿ : ಹೆಂಗಸರಿಗೆ ಗಂಡನೇ ದೇವರು.ಪ್ರತಿನಿತ್ಯ ಭಕ್ತಿಪುರಸ್ಸರವಾಗಿ ಆತನ ಪಾದಪೂಜೆ ಮಾಡಿ ಪಾದೋದಕ ಸ್ವೀಕರಿಸಿ ಅವರು ಒಕ್ಕುಮಿಕ್ಕ ಪ್ರಸಾದವನ್ನು ಸೇವಿಸಬೇಕು.

ದೂತಿ : ತಾಯಿ, ಇಂಥ ರೀತಿ ನಡತೆ ನಿಮ್ಮಂಥ ತಿಳಿದವರಿಗೇ ಗೊತ್ತು.ಹೇಸರಗತ್ತೆಯಂತಿದ್ದ ನಮಗೆ ಹ್ಯಾಗೆ ತಿಳಿಯಬೇಕು ತಾಯಿ ?

ಸತ್ಯವತಿ : ಇರಲಿ, ಪತಿವ್ರತೆಯರು ಪತಿಯೊಡನೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಹೇಳುತ್ತೇನೆ ಕೇಳು.

ಪದ :

ಹೇಳುವೆನೆಲ್ಲ ರೀತಿ ಪತಿವ್ರತೆಯರ ನಡತಿ
ಕೇಳವ್ವ ನೀನು ಸುದತಿ ॥ಪಲ್ಲವಿ ॥

ಗಂಡನೆ ದೇವರೆಂದು ಗಂಡನೆ ಗತಿಯೆಂದು
ಸೇವೆಯ ಮಾಡುವದು ಸತಿಯ ಲಕ್ಷಣವಿದು ॥

ಗಂಡನ ಪೂಜಿಸಿ ಪಾದಕೆ ವಂದಿಸಿ
ಸವಿಯೂಟ ಮಾಡಿಸಿ ಇರಬೇಕು ಸುಖವಾಸಿ ॥

ಗಂಡನುಣ್ಣದ ಮುನ್ನ ಊಟ ಮಾಡಲು ತಾನು
ಗಂಡಗೆ ತನ್ನ ಪ್ರಾಣ ಒಪ್ಪಿಸಿರುವಳಾ ಹೆಣ್ಣು ॥

ಏನವ್ವ ದಾಸಿ, ಸತಿಯಾದವಳು ತನ್ನ ಪತಿಯ ಕೂಡ ಹ್ಯಾಗೆ ಭಕ್ತಿಯಿಂದ ನಡೆಯಬೇಕೆಂದರೆ ಮುಂಜಾನೆ ಎದ್ದ ಕೂಡಲೆ ಮುಖ ತೊಳೆದುಕೊಂಡು, ತನ್ನ ಪತಿಯ ಪಾದಕ್ಕೆ ನಮಸ್ಕಾರ ಮಾಡಬೇಕು.ಮನೆಯ ಕೆಲಸ ತೀರಿಸಿ ತನ್ನ ಪತಿಗೆ ಪನ್ನೀರಿನಿಂದ ಸ್ನಾನ ಮಾಡಿಸಿ ಅವರ ಪಾದವನ್ನು ಗಂಧ ಪುಷ್ಪ ಧೂಪ ದೀಪಗಳಿಂದ ಪೂಜಿಸಿಸಾಷ್ಟಾಂಗ ನಮಸ್ಕಾರ ಮಾಡಬೇಕು. ಅವರಿಗೆ ಊಟ ಮಾಡಿಸಿ ನಂತರ ತಾನು ಊಟ ಮಾಡಬೇಕು.ಮನೆಗೆಲಸವನ್ನು ಸರಿಯಾಗಿನಡೆಸುತ್ತ ಪತಿಯ ಕೂಡ ಸುಖದಿಂದ ಬಾಳಬೇಕು.

ದೂತಿ : ಏನವ್ವಾ, ಗಂಡ ಉಂಡ ಮ್ಯಾಲೆ ಹೆಂಡತಿ ಉಣಬೇಕಂದ್ರೆ ಕಣ್ಣಗುಡ್ಡಿ ಬೆಳ್ಳಗಾದಾವು ತಾಯಿ. ಮುಂಜಾನೆದ್ದು ಮೂರು ಸಲ ಹೊಡೆದು ಕೈತೊಳಕೊಂಡರ ಜಳಜಳ ಆಗತೈತಿ ಬಿಡ್ರಿ.

ಸತ್ಯವತಿ : ಏನೆ, ಪತಿಯು ಊಟ ಮಾಡುವುದಕ್ಕಿಂತ ಮೊದಲು ಸತಿ ಎಂದೆಂದೂ ಊಟ ಮಾಡಬಾರದು.ಪತಿಯು ಪರವೂರಿಗೆ ಹೋದರೆ ಅವರು ಬರುವ ತನಕ ಅಲಂಕಾರಕ್ಕೆ ಎಳಸದೆ ಸವಿಯೂಟಕ್ಕೆ ಆಶಿಸದೆ ಇರಬೇಕು.ಪತಿಗೆ ಪ್ರತ್ಯುತ್ತರ ಕೊಡಬಾರದು ಅವರ ಕೂಡ ಯಾವಾಗಲೂ ಪ್ರೀತಿಯಿಂದ ನಡೆದುಕೊಳ್ಳಬೇಕು.

ದೂತಿ : ತಾಯಿ, ನೀವು ದಿನಾಲು ಹೀಗೆಯೆ ಮಾಡುವಿರಾ ?

ಸತ್ಯವತಿ : ಹೌದು ; ದಿನಂಪ್ರತಿ ನಾನು ಹೀಗೆಯೇ ಮಾಡುತ್ತೇನೆ.

ದೂತಿ : ಇಷ್ಟೆಲ್ಲ ಮಾಡಿ ಹೊಲದ ಕೆಲಸಕ್ಕೆ ಯಾವಾಗ ಹೋಗುತ್ತೀರಿ ?

ಸತ್ಯವತಿ : ಏನೆ, ನಮ್ಮ ಉಪಜೀವನವನ್ನು ದೇವನೆ ಸಾಗಿಸುತ್ತಾನೆ ?

ದೂತಿ : ಹಾಗಾದರೆ, ನಮ್ಮದ್ಯಾಕ ಅವ ಸಾಗಿಸುದಿಲ್ಲರಿ ?

ಸತ್ಯವತಿ : ಭಕ್ತಿಯಿಂದನಡೆದರೆ ನಿನ್ನ ಸಂಸಾರವನ್ನೂ ಸಾಗಿಸುತ್ತಾನೆ.ಇರಲಿ ; ಹೇಳುತ್ತೇನೆ ಕೇಳು.

ಪದ :

ಬಾರದ ಬಗೆಯೇನ ಎನ್ನಯ ಪ್ರಾಣಪ್ರಿಯನು
ತಡವ್ಯಾಕೆ ಮಾಡಿದನ ॥ಪಲ್ಲವಿ ॥

ಯೋಗನಿದ್ರಿಲಿ ತಾನು ಮಗ್ನವಾದಾನೇನ
ಜನರಿಗೆ ಜ್ಞಾನವನ್ನು ಬೋಧಿಸುತ್ತಿದ್ದಾನೇನ ? ॥

ಶರಣರ ಕೂಡ ತಾನು ತರ್ಕ ಮಾಡುವರೇನ ?
ಬಗೆಯದೆ ಬಹಳ ಅಂಜಿರುವೆನು ನಾನ ॥

ಏನೆ, ಎನ್ನ ಪ್ರಾಣಕಾಂತನು ಇನ್ನೂಯಾಕೆ ಬಂದಿರಲಿಕ್ಕಿಲ್ಲ ? ಹೊತ್ತು ಮೀರಿತು, ಏಕೆ ತಡಮಾಡಿರಬೇಕು ?

ದೂತಿ : ತಾಯಿ, ನಿಮ್ಮ ಪತಿದೇವರ ಸುದ್ದಿಯನ್ನು ಕೇಳೀರೇನ್ರಿ ?

ಸತ್ಯವತಿ : ದೂತೆ, ನಾನೇನು ಕೇಳಿಲ್ಲ ಬಿಡು

ದೂತಿ : ನಿಮ್ಮ ಪತಿದೇವರು ಇದ್ದಾರಲ್ಲರಿ……

ಸತ್ಯವತಿ : ಇದ್ದಾರೆ, ಏನಾಯಿತು ?

ದೂತಿ : ಯಾಕೊ ಅಲ್ಲಿ ಪಾತರದವರ ಬಾಗಿಲದಾಗ ಕೂತಂಗಾಗಿತ್ರಿ.

ಸತ್ಯವತಿ : ಛೀ ಹುಚ್ಚಿ, ಎಚ್ಚರದಪ್ಪಿ ಇಂಥ ಮಾತನ್ನಾಡಬೇಡ.

ದೂತಿ : ತಾಯಿ, ಈ ಮಾತು ಸುಳ್ಳಲ್ಲ, ಜನರೂ ಹಾಗೆಯೆ ಹೇಳತಾರ‌್ರಿ.

ಸತ್ಯವತಿ : ಅವರೆಲ್ಲ ಸುಳ್ಳು ಹೇಳಿರಬಹುದು.ಅವರಂತೆ ನೀನೂ ಸುಳ್ಳು ಹೇಳುತ್ತೀಯೇನು?

ದೂತಿ : ಅಲ್ಲರಿ ಹಾಂಗ ಅಂದೆ.

ಸತ್ಯವತಿ : ಹುಚ್ಚಿ, ಕೆಟ್ಟ ನುಡಿಯಬೇಡ, ಶಿವಶರಣರು ಅಂತಹ ಹೊಲಸು ಕೆಲಸಕ್ಕೆ ಕೈಹಾಕರು.

 

(ತಿರುನೀಲಕಂಠ ಬರುವನು)

ತಿರುನೀಲಕಂಠ : ದೂತೆ, ಕದಾ ತಗಿಯುವಂಥವಳಾಗು.

ದೂತಿ : ಯಾರು ನೀವು ? ಬಂದ ದಾರಿ ಹಿಡಿದು ಹೋಗಿರಿ.

ತಿರುನೀಲಕಂಠ : ಯಾಕೆ ದೂತೆ, ನನ್ನ ಗುರುತು ಹತ್ತಲಿಲ್ಲವೆ ?

ದೂತಿ : ಎಂಥ ಗುರುತು ? ನಡೆ ಆಚೆಗೆ.

ತಿರುನೀಲಕಂಠ : ಹಾ ! ಸತ್ಯವತಿ, ಬೇಗನೆ ಬಾಗಿಲು ತೆರೆ.

ದೂತಿ : ತಾಯಿ, ಇವ ಕಂಟಪ್ಪ ನಾಯಕ ! ತಾಯಿ, ಬಾಗಿಲಲ್ಲಿ ತಿರುನೀಲಕಂಠರು ಬಂದಂತಿದೆ.ಬೇಗನೆ ಕದಾ ತೆಗೆಯಿರಿ.

ಸತ್ಯವತಿ : ಏನೆ ದೂತೆ, ಯಜಮಾನರೊಡನೆ ಏನೋ ಮಾತ ನಡಸಿದೆಲ್ಲ ? (ಗಂಡನನ್ನು ನೋಡಿ) ಅವ್ವಯ್ಯ, ಇದೇನು ಸೋಜಿಗ !

ಪದ :

ಇದು ಏನು ಸೋಜಿಗ ಮಮಕಾಂತ ನಿನಗೆ ನೀತಿ
ಪರವೆಯು ಎತ್ತ ಹೋಯಿತು ನಿನ್ನ ಅನುಭವವು ॥ಪಲ್ಲ ॥

ಜನರೇನೆಂದಾರೆಂಬುದನ್ನು ತುಸು ಯೋಚಿಸದಿರುವುದು ಸರಿಯೇನು
ಲಜ್ಜೆಯನ್ನು ಬಿಟ್ಟಿರೇನು ಮನವನು ಕಲ್ಮಷಗೊಳಿಸಿದಿರೇನು
ಕಡುಭಯ ಬರುತಿದೆ ಎನ್ನಂತರಂಗದಿ
ಹೀಗೇಕಾದೀತು ಇಂದೆ ನಿಮ್ಮ ಬುದ್ಧಿ ಭ್ರಮಣವಾಗಿದೆ ॥

ತಿರುನೀಲಕಂಠ :

      ಪದ :

ಮಮ ಬುದ್ಧಿಯು ಭ್ರಮಿಸಲು ನಾನೆಂಥವನು
ಇರುವೆನೆಂಬುದು ಗೊತ್ತಿಲ್ಲವೇನು ?
ಅರಿಯದವಳೆ ನೀನು ಹಾಸ್ಯ ಮಾಡುವಿಯೇನು ?
ಸಂಶಯ ಬಂದುದೆ ನಿನಗಿನ್ನು ॥

ಸತ್ಯವತಿ : ಈ ಪೋಷಾಕಿನಿಂದ ಶ್ರೇಯಸ್ಸು ಬಂದದೆ.

ತಿರುನೀಲಕಂಠ : ಮೇಲಿನಾಡಂಬರಕೆ ಹೇಗೆ ಬರುವದು ?

ಸತ್ಯವತಿ : ಇದೇ ಅನುಭಾವ ! ಇವಕ್ಕೆ ಹೇಗೆ ಮೆಚ್ಚಿದಿರಿ ?

ತಿರುನೀಲಕಂಠ : ಭಕ್ತರ ಆಗ್ರಹಕ್ಕಾಗಿ ಧರಿಸಿದೆ.

ಸತ್ಯವತಿ : ಸಲ್ಲದ ನುಡಿಗಳಿಗೆ ಶಿವಜ್ಞಾನಿಗಳು ಒಪ್ಪುವರೆ ?

ತಿರುನೀಲಕಂಠ : ನಿನಗೇಕೆ ಅದಲುಬದಲು ತೋರುತ್ತಿದೆ !

ಸತ್ಯವತಿ : ನಾಥಾ, ಬಾಹ್ಯ ಆಡಂಬರಕೆ ನಿಮ್ಮ ಮನವೆಂತು ತಿರುಗಿತು ?ಜನರು ಏನೆಂಬರೆಂದು ವಿಚಾರಿಸಬಾರದೆ ? ಹೀಗೆ ಅಸಹ್ಯ ರೀತಿಯಿಂದ ವರ್ತಿಸಬಹುದೆ ?ಏನೆ ಆಗಲಿ, ಈ ಜರತಾರಿ ಪೋಷಾಕನ್ನು ಬೀಸಾಡಿ ಒಳಗೆ ಬಂದು ಸ್ನಾನ ಮಾಡಲು ಸಿದ್ಧರಾಗಿರಿ.

ತಿರುನೀಲಕಂಠ : ಏನೆ, ಈ ಪೋಷಾಕು ನಿನ್ನ ಮನಸ್ಸಿಗೆ ಬರಲಿಲ್ಲವೆ ? ಭಕ್ತರ ಆಗ್ರಹಕ್ಕಾಗಿ ಇವುಗಳನ್ನು ಧರಿಸಿದೆನೆ ಹೊರತು, ಸ್ವಂತ ಅಪೇಕ್ಷೆಯಿಂದ ಧರಿಸಲಿಲ್ಲ.

ಸತ್ಯವತಿ : ಅದೇನೆ ಇರಲಿ ಮೊದಲು ಅವನ್ನು ಕಳಚಿಟ್ಟು ಮಾತನಾಡಿರಿ.

ತಿರುನೀಲಕಂಠ :  ಪ್ರಮದೆ, ಇವು ನಿನಗೆ ಪ್ರಿಯವಾಗದಿದ್ದರೆ ಬೇಡವೇ ಬೇಡ.

ಪದ :

ತ್ರಿಕಾಲಜ್ಞಾನಿಯು ಎಂಬಂತೆ ನಾ
ಕಳೆದು ಚೆಲ್ಲುವೆನೀ ವೇಷ
ನಿನ್ನ ಮನಕಾಗಲಿ ಸಂತೋಷ ॥ಪಲ್ಲವಿ ॥

ನಿನಗಾಗಲಿಲ್ಲ ತುಸು ಸಹನ
ಅಂಥ ಪವಿತ್ರಳಿರುವೆ ನೀನು
ನನಗೆ ತಿಳಿಯಲಿಲ್ಲವು ಈ ಹವಣ
ನಿನಗಾದರೂ ಅನ್ನುವದೇನು ॥

ಬೇಡೆಂದರೂ ಕೇಳಲಿಲ್ಲವರು
ಇಂಥ ಶಿಷ್ಯರೆ ಗಂಟುಬಿದ್ದರು
ನನಗೆ ಹೇಳದೆ ಮುನ್ನ ತಂದರು
ಇವಕೆ ಕೊಟ್ಟ ಹಣ ಎಂಟುನೂರು ॥

ಇಷ್ಟ ವ್ಯಯ ಮಾಡಿದವರ ಮನವ
ಖಿನ್ನಗೊಳಿಸಲಾಗದು ಕೇಳ್ ನಿಜವ
ಅಂತೆ ಧರಿಸಿದೆ ತಿಳಿ ಅನುಭವದ ॥

(ಬಟ್ಟೆಯನ್ನು ಕಳೆದು ಒತ್ತಟ್ಟಿಗಿಟ್ಟು)

ಸುಶೀಲೆ, ನಿನಗಿನ್ನು ಸಮ್ಮತವಾಯಿತಲ್ಲವೆ ?

ಸತ್ಯವತಿ : ನನಗೀಗ ಸಮಾಧಾನವಾಯಿತು. ಸ್ನಾನ ಮಾಡಲಿಕ್ಕೆ ಒಳಗೆ ನಡೆಯಿರಿ.

ತಿರುನೀಲಕಂಠ : ನಡೆ ಹೋಗೋಣ ! (ಹೋಗುವರು)
(ಸ್ನಾನ ಮಾಡಿ ತಿರುನೀಲಕಂಠರು ಊಟ ಮಾಡುವರು)

ಸತ್ಯವತಿ : ದೂತೆ, ಪ್ರಾಣನಾಥರ ಊಟವಾಯಿತು. ಇನ್ನು ನಾವೂ ಊಟ ಮಾಡೋಣ ನಡೆ.

ದೂತಿ : ನಡೆಯಿರಿ ಹೋಗೋಣ.

ತಿರುನೀಲಕಂಠ : (ಶಯ್ಯಗೃಹಕ್ಕೆ ಬಂದು) ಆಹಾ ! ಸತ್ಯವತಿ, ಹೀಗೇಕೆ ಮೌನದಿಂದ ನಿಂತಿರುವಿ ? ಬೇಗನೆ ಮಾತಾಡು.

ಪದ :

ಜಾಣಿ ಮೋಹದ ಅರಗಿಣಿ ಮಾತಾಡೇ
ಈಗ ಮಣಿಮಂಚದ ಮ್ಯಾಲೆ ರತಿಗೂಡೆ ॥ಪಲ್ಲವಿ ॥

ಸುಂದರಿ ಸೊಬಗಿನ ವೈಯಾರಿ
ಸುಖಪಡುವೆನು ಅಧರಾಮೃತ ಹೀರಿ
ಇಂದು ಮಾಡುವೆ ಕಾಮಸುಖ ಬಹುಸೂರಿ ॥

ಅಮೃತದಂಥ ಎರಡು ಸವಿಮಾತ ಕೂತು
ಆಡಿ ಚುಂಬನ ಕೊಡು ಈಗ ತುರ್ತು
ಕಾಮಬಾಧೆಯಿಂದಾಗಿರುವೆ ನಾನು ಭ್ರಾಂತ ॥

ಹೇ ಕೋಮಲಾಂಗಿಯಾದ ಸತ್ಯವತಿ, ಯಾಕೆ ಮಾತನಾಡಲೊಲ್ಲಿ ? ಇಂದು ನಾನು ತಡಮಾಡಿ ಮನೆಗೆ ಬಂದೆನೆಂದು ಸಿಟ್ಟಾಗಿರುವೆಯಾ ? ಹೇ ಕಾಂತೆ, ವಿಪರೀತ ತಿಳಿಯಬೇಡ, ಪ್ರಸಂಗಶಾತ್ ತಡವಾಯಿತು.ಇಷ್ಟಕ್ಕೆ ನೀನು ಸಿಟ್ಟು ಹಿಡಿಯುವದೆ ? ಪ್ರೀತಿಯಿಂದ ಮಾತನಾಡಿ ಹರುಷಗೊಳಿಸೆ ಸತ್ಯವತಿ.

ಸತ್ಯವತಿ : (ಸುಮ್ಮನೆ ನಿಲ್ಲುವಳು)

ತಿರುನೀಲಕಂಠ : ಇಷ್ಟೊಂದು ಸಿಟ್ಟಿಗೇಳುವ ಕಾರಣವಿಲ್ಲ.ದಾರಿಯಲ್ಲಿ ತಡವಾಯಿತು.ಹೀಗೇಕೆ ಕಂಗಾಲು ಆಗಿರುತ್ತಿ ? ಕೋಮಲಾಂಗಿ ಮಾತನಾಡು. ಹೇಳುತ್ತೇನೆ ಕೇಳು.

ಪದ :

ಪ್ರಿಯೆ ಮಾತನಾಡದ ಬಗೆ ಇದು ಏನೇ
ಎನ್ನ ನೋಡಿ ಹಿಂದಕೆ ಸರಿಯುವ ಬಗೆಯೇನೆ॥ಪಲ್ಲವಿ ॥

ಹೆದರಿದ ಎರಳೆಯಂತೆ ಬೆದರುವಿಯಾಕೆ ?
ಚುಂಬನ ಕೊಡು ಬಂದು ಈ ಕ್ಷಣಕೆ
ನಿನ್ನ ಕೂಡಿ ಸುಖವನು ಪಡೆವೆ ಈ ಕ್ಷಣಕೆ ॥

ಸತ್ಯವತಿ :

ಸರಿ ನೀ ದೂರ ಸರಿ ಕಾಂತಾ, ಎನ್ನ
ಮುಟ್ಟುವದು ತರವಲ್ಲ ಮತಿವಂತ ॥ಪಲ್ಲವಿ ॥

ಚುಂಬನ ಕೊಡು ಎಂದು ರಮಿಸುವ ನಿನ್ನ
ಸೋಗು ಬಲ್ಲೆನು ಎಲ್ಲ ಸರಿ ಇನ್ನು
ಎನ್ನ ಹತ್ತಿರ ಬರಬೇಡ ಹೇಳುವೆ ಬಾ ॥

ತಿರುನೀಲಕಂಠ :

ಮುಟ್ಟಬೇಡೆಂದರೆ ಹ್ಯಾಗೆ ಬಿಡಲಿ ನಿನ್ನ
ಪತಿದೇವನ ಬಯಕೆ ಈ ಕ್ಷಣ
ನೆರವೇರಿಸುವದು ನಿನ್ನ ಲಕ್ಷಣ ॥

ಸತ್ಯವತಿ :

ಮೈಮುಟ್ಟ ಬರುವದು ಸರಿಯಲ್ಲ
ನಿಮಗೆ ಎಷ್ಟು ಹೇಳಿದರೂ ದಾದೇ ಇಲ್ಲ
ಬಹು ಎಚ್ಚರದಿ ನಡೆಯಿರಿನ್ನು ಮೇಲೆ

ಸ್ವಾಮಿ, ತಾವು ನನ್ನನ್ನು ಮುಟ್ಟಬಾರದು.

ತಿರುನೀಲಕಂಠ : ಅದೇಕೆ ? ನೀನು ನನ್ನ ಸತಿಯಲ್ಲವೆ ? ಕಕಲಾತಿಯಿಲ್ಲದೆ ನನ್ನೊಡನೆ ಮಾತನಾಡುವದಿಲ್ಲವೆನ್ನುವದು ತರವೇನೆ ?ಕಾಮಪೀಡಿತನಾದ ನನ್ನ ಮನಸ್ಸನ್ನು ಸಮಾಧಾನ ಮಾಡಲಾರೆಯಾ ? ಇಂದು ನಿನ್ನನ್ನು ಮುಟ್ಟದೆ ಬಿಡಲಾರೆ.

ಸತ್ಯವತಿ : ಏನಿದು ? ನಿಮಗೆ ಎಳ್ಳಷ್ಟೂ ನಾಚಿಕೆ ಇಲ್ಲ. ಇಷ್ಟು ದೊಡ್ಡವರಾದರೂ ನಿಮ್ಮ ಹುಡುಗಾಟ ತಪ್ಪಿಲ್ಲ.ನೀವೀಗ ನನ್ನನ್ನು ಮುಟ್ಟಬಂದರೆ ನಿಮ್ಮ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ ನೋಡು.

ತಿರುನೀಲಕಂಠ : ವೈಯಾರಿ, ನನಗೆ ಬಾಯಿ ಬೆದರಿಕೆ ಹಾಕುವೆಯಾ ? ಇಲ್ಲವೆ ಬೇಕಂತಲೇ ಹೀಗೆ ವರ್ತಿಸುವೆಯಾ ?ಈ ಹಟವನ್ನು ಬಿಟ್ಟು ಕಾಮಸುಖಕ್ಕೆ ಅನುಕೂಲಳಾಗು.

ಸತ್ಯವತಿ : ಆ ವಿಲಾಸಕ್ಕೆ ನಾನಾಗಲೇ ನೀರು ಬಿಟ್ಟಿದ್ದೇನೆ ಅದರ ಉಸಾಬರಿಯನ್ನು ತೆಗೆಯಬೇಡಿರಿ.

ತಿರುನೀಲಕಂಠ : ಏನೆ, ಕಾಮಶಾಸ್ತ್ರಕ್ಕೆ ಎದುರಾಗಿ ಜಲಾಸ್ತ್ರ ಬಿಡುವದು ಉಚಿತವಲ್ಲ.ಸುಮ್ಮನೆ ಕುಚೇಷ್ಟೆ ಮಾಡಬೇಡ.ಬೇಗನೆ ಅನುಕೂಲಳಾಗು.

ಸತ್ಯವತಿ : ಛೇ ಸರಿ ಅತ್ತ, ಎಷ್ಟು ಹೇಳಿದರೂ ನಾಚಿಕೆಯಿಲ್ಲ ನಿಮಗೆ, ದೂರ ಸರಿದು ನಿಂತು ಮಾತನಾಡಿರಿ.

ತಿರುನೀಲಕಂಠ : ಏನೆ, ನೀನು ರತಿಕ್ರೀಡೆಗೆ ಅನುಕೂಲಳಾಗುವಿಯೋ ಇಲ್ಲವೋ ?

ಸತ್ಯವತಿ : ಆಗಲಾರೆ.

ತಿರುನೀಲಕಂಠ : ಹಾಗಾದರೆ, ನಾನು ನಿನ್ನನ್ನು ಬಿಡುವದಿಲ್ಲ.

ಸತ್ಯವತಿ : ಅನುಕೂಲಳಾಗದಿದ್ದರೆಏನು ಮಾಡುವಿರಿ ?