ರಂಭಾ : ಸ್ವಾಮಿ, ಶಿವನು ಭಕ್ತರ ಪರೀಕ್ಷೆಗಾಗಿ ಲೀಲೆ ಮಾಡಿದಂತೆ ಎರಡನೆಯವರು ಮಾಡಿದರೆ ಪಾಪಹತ್ತುವದಿಲ್ಲೇನ್ರಿ ?

ತಿರುನೀಲಕಂಠ : ಏನವ್ವಾ, ಕ್ಷಣಿಕ ಸುಖಕ್ಕಾಗಿ ಸೂಳೆಯ ಸಹವಾಸ ಮಾಡಿದವರಿಗೆ ಪಾಪ ಹತ್ತದೆ ಬಿಟ್ಟೀತೆ ? ಅದರಿಂದ ಕೆಡಕು ಕಟ್ಟಿಟ್ಟದ್ದು.

ರಂಭಾ : ಏನ್ರಿ, ಸಾಮಾನ್ಯ ಜನರು ನಮ್ಮಂಥ ಸೂಳೆಯರ ಸಹವಾಸಕ್ಕೆ ಬಿದ್ದು ಕಾಲ ಕಳೆಯುತ್ತಾರೆ.ಆದರೆ ಶಿವಶರಣರು ಇಂಥ ಕೆಟ್ಟ ವ್ಯಸನದೊಳು ಬೀಳುವದಿಲ್ಲೇನ್ರಿ?

ತಿರುನೀಲಕಂಠ : ತಾಯಿ, ಶಿವಶರಣರು ಮಹಾಜ್ಞಾನಿಗಳು ! ಅಂಥವರು ಇಂಥ ಕೆಟ್ಟ ವ್ಯಸವಕ್ಕೆ ಹೇಗೆ ಬಿದ್ದಾರು ? ಅವರು ಇಂಥ ಹವ್ಯಾಸಕ್ಕೆ ಬೀಳಲಾರರು.

ರಂಭಾ : ಏನ್ರಿ ಸ್ವಾಮಿ, ಶಿವಶರಣರು ಇಂಥ ಕೆಟ್ಟ ಕೆಲಸಕ್ಕೆ ಬೀಳುವದಿಲ್ಲವೆ ? ಸೂಳೆಯರ ಸಹವಾಸ ಮಾಡುವದಿಲ್ಲವೆ ?

ತಿರುನೀಲಕಂಠ : ಇಲ್ಲ, ಅವರೆಂದೂ ಮಾಡಿಲ್ಲ.

ರಂಭಾ :

ಪದ :

ಯಾರು ಮಾಡದಿದ್ದರೆ ಮತ್ತೆ ಸೌಂದರನಂಬಿ ಎನ್ನುವಂಥ
ಶರಣ ಯಾಕೆ ಮಾಡಿದ ಹೇಳ್ರಿ ನೀವಿನ್ನ
ಯಾವಾಗಲು ಬಿಡಲಿಲ್ಲ ಅವರನ್ನ
ಪರವೆ ಎಂಬವವಳನ್ನು ಮೊದಲು ಮಾಡಿದ ತಾನು
ಕಡೆಗೆ ಸಂಕಿಲೆಯನ್ನು ಹೊಂದಿಕೊಂಡಿರಲಿಲ್ಲವೇನು ?
ಮದುವೆ ಮಾಡಿಕೊಂಡಂಥ ಸತಿಯರೊಡನೆ ಇದ್ದಂತೆ
ಅವರಗೂಡ ಇದ್ದ ತುಸು ಅಗಲದಲೆ
ಪಾತರದವರ ಜಾತಿಯವರು ಅವರಲ್ಲಿ
ಅವಗೇನು ಬುದ್ಧಿ ಇಲ್ಲೆ ಪ್ರಖ್ಯಾತ ಶರಣನಲ್ಲೆ
ಇಂಥವನು ನಾನು ಬಲ್ಲೆ ನೋಡಿ ಮಾತಾಡಿರಿನ್ನು
ಮೇಲೆ ವೇಶ್ಯೆಯರೆಲ್ಲ ಪಾಪಿಷ್ಟರು ಆದರೆ ಅಂಥ
ದೊಡ್ಡ ಶರಣರು ಅವರ ಗೂಡ ಸದಾ ಇರುತ್ತಿದ್ದರು
ಅವರೊಳು ಭೋಗಸುಖವ ಸೂರೆಗೊಂಡರು
ಪುರಾಣ ಹೇಳುವವರು, ಹೀಗೆ ಹೇಳಿರುವರು ಅವರಿಗೆ
ಪಾಪದ ದೂರು, ಬರಲಿಲ್ಯ್‌ಕ್ಹೇಳ್ರಿ ಮಜಕೂರ.

ಮಹಾತ್ಮರೆ, ಹಾಲು ನೀರಾಗುವದಿಲ್ಲ.ನೀರು ಹಾಲಾಗುವದಿಲ್ಲ.ಈ ಮಾತು ಅನುಭವಿಸಿದ್ದ, ವೇಶ್ಯೆಯರು ಮಹಾಪಾಪಿಷ್ಟರೆ? ಆದರೆ ಸೌಂದರನಂಬಿಯೆಂಬ ಮಹಾಶರಣರು ಪರವೆ ಹಾಗೂ ಸಂಕಿಲೆಯರೆಂಬ ವೇಶ್ಯೆಯರೊಡನೆ ಸುಖದಿಂದ ಕಾಲಕಳೆಯಲಿಲ್ಲವೆ? ಹಾಗಿದ್ದಲ್ಲಿ ಶಿವಶರಣರು ಪಾತರದವರ ಸಹವಾಸವನ್ನು ಎಂದೂ ಮಾಡಿಲ್ಲವೆಂದು ಹೇಗೆ ಅನ್ನುವಿರಿ ?ಇದಕ್ಕೆ ತಮ್ಮ ಉತ್ತರವೇನು?

ತಿರುನೀಲಕಂಠ : ರಂಭಾ, ಪರವೆ, ಸಂಕಿಲೆಯರು ಪಾತರದವರೆಂಬುದು ನಿಜ. ಆದರೆ ಅವರ ಪೂರ್ವಜನ್ಮದ ಇತಿಹಾಸ ನಿನಗೆ ಗೊತ್ತಿದ್ದರೆ ಹೀಗೆ ಕೇಳುತ್ತಿರಲಿಲ್ಲ.

ರಂಭಾ : ಅವರ ಪೂರ್ವದ ಇತಿಹಾಸ ನನಗೆ ಗೊತ್ತಿಲ್ಲ ; ತಿಳಿಸಿ ಹೇಳಿರಿ.

ತಿರುನೀಲಕಂಠ : ಕೈಲಾಸದಲ್ಲಿ ಪುಷ್ಪದತ್ತನೆಂಬುವನು ಶಿವನ ಪೂಜೆಗೆ ದಿನಾಲು ತೋಟದಿಂದ ಹೂಗಳನ್ನು ತರುತ್ತಿದ್ದ.ಪಾರ್ವತೀದೇವಿಯ ಪೂಜೆಗೆ ಕಮಲವಲ್ಲಿ ಅರುಂಧತಿ ಎಂಬ ದೇವಕನ್ಯೆಯರು ಹೂವು ತರುತ್ತಿದ್ದರು.ಒಂದು ದಿವಸ ಪುಷ್ಪದತ್ತನು ಹೂದೋಟಕ್ಕೆ ಹೋದ ಸಮಯದಲ್ಲಿ, ಆ ಕನ್ಯೆಯರಿಬ್ಬರೂ ಬಂದರು.ಚಿರಯುವಕನಾದ ಪುಷ್ಪದತ್ತನನ್ನು ಸುಂದರಿಯರಾದಆ ಕನ್ಯೆಯರು ನೋಡಿ ಸಮ್ಮೋಹಿತರಾದರು.ಅವರ ಹೃದಯಾನುರಾಗವನ್ನರಿತ ಶಿವನು ನೀವು ಮೂವರೂ ನರಲೋಕದಲ್ಲಿ ಜನಿಸಿ, ನಿಮ್ಮ ಅಪೇಕ್ಷೆಯನ್ನು ಪೂರೈಸಿ ಬನ್ನಿರೆಂದನು.ಅದರಂತೆಯೆ ದೇವಕನ್ನೆಯರು ಪರವೆಸಂಕಿಲೆಯಾಗಿ, ಪುಷ್ಟದತ್ತನು ಸೌಂದರನಂಬಿಯಾಗಿ ಭೂಲೋಕದಲ್ಲಿ ಜನಿಸಿದರು.ಮುಂದೆ ಅವರು ಬೆಳೆದು ದೊಡ್ಡವರಾಗಲು ಅವರ ಸಮಾಗಮವಾಯಿತು. ಇದೆಲ್ಲ ಈಶ್ವರಾಜ್ಞೆಯಂತೆಯೆ ನಡೆದುದು.ತಿಳಿಯಿತೆ ?

ರಂಭಾ : ಸ್ವಾಮಿ, ಇಂಥಾದ್ದೆಲ್ಲ ಯಾತಕ್ಕೆ ಹೇಳುತ್ತೀರಿ ? ಸಾಧು ಸತ್ಪುರುಷರು ನಿಮ್ಮ ಒಣ ಮಾತಿಗೆ ಹೌದು ಅಂದಾರೇನು ? ಶಿವನು ಮಹಾನಂದೆಯನ್ನು ಉದ್ಧಾರ ಮಾಡಿದಂತೆ ನೀನು ನನ್ನನ್ನು ಉದ್ಧಾರ ಮಾಡಿರಿ.

ತಿರುನೀಲಕಂಠ : ಏನೆ, ನಿನ್ನ ಮೇಲೆ ನನ್ನ ಅಂತಃಕರಣ ಪೂರ್ಣ ಅದೆ.ನೀನು ಅನ್ಯ ವಿಷಯಕ್ಕೆ ಎಳಸದೆ ಸುಮ್ಮನಿರು.ಬರಿ ಮಾತಿನಿಂದ ಪ್ರಯೋಜನವಿಲ್ಲ.

ರಂಭಾ : ಸ್ವಾಮಿ, ಬರಿ ಮಾತಿನಿಂದ ನಾನು ಕೇಳುವದಿಲ್ಲ ; ನಾನು ವೇಶ್ಯಾ ಸ್ತ್ರೀ.ಆದ್ದರಿಂದಲೇ ತಾವು ನನ್ನನ್ನು ತಿರಸ್ಕರಿಸಿ ಮಾತನಾಡುತ್ತಿರುವಿರಿ.ವೇಶ್ಯಾಂಗನೆಯರಿಂದ ಎಷ್ಟೋ ಜನರು ಉದ್ಧಾರವಾಗಿರುವರು.ಅದನ್ನು ತಿಳಿದು ನನ್ನ ಮಾತಿಗೆ ಅನುಕೂಲರಾಗಿರಿ.

ತಿರುನೀಲಕಂಠ : ಆಹಾ ! ನಿಮ್ಮಂಥ ವೇಶ್ಯಾಸ್ತ್ರೀಯರಿಂದ ಜನರು ಉದ್ಧಾರವಾಗುವಂತಿದ್ದರೆ ಶಿವಶರಣರು ಭೂಲೋಕದಲ್ಲಿ ಅವತಾರ ಮಾಡುವ ಅವಶ್ಯಕತೆಯೇ ಇರಲಿಲ್ಲ.ಸುಮ್ಮನೆ ತಿಳಿಯದೆ ವಾದ ಮಾಡಬೇಡ.

ರಂಭಾ : ಸ್ವಾಮಿ, ವೇಶ್ಯೆಯರಿಂದ ಯಾರೂ ಗತಿಗೆ ಹತ್ತಿಲ್ಲದೆ ?

ತಿರುನೀಲಕಂಠ : ಸುಮ್ಮನೆ ಏಕೆ ಬಡಬಡಿಸುವೆ ಮೊದಲು ನಿಮಗೇ ಗತಿ ಇಲ್ಲ.ಇನ್ನು ಎರಡನೆಯವರನ್ನೇನು ಗತಿಗೆ ಹಚ್ಚುತ್ತೀರಿ.ನಿಮ್ಮ ಉಪದೇಶಕ್ಕೆ ಯಾರು ಮರುಳಾಗುತ್ತಾರೆಯೋ ಅವರಿಗೆ ನರಕವಾಸ ಖಂಡಿತ ನೋಡು.

ರಂಭಾ : ಏನು ಅವರಿಗೆ ನರಕವಾಸ ಖಂಡಿತವೆ ?

ತಿರುನೀಲಕಂಠ : ಹೌದು, ಅವರಿಗೆ ನರಕವಾಸ ಖಂಡಿತ.

ರಂಭಾ :

ಪದ :

ನರಕವಾಸ ಆದರೆ ಮತ್ತ ಶ್ವೇತರಾಯನಿಗೆ
ನರಕ ಆಗಲಿಲ್ಲ ಹೇಳಿರಿ ನೀವು ನನ ಮುಂದ
ವೇಶ್ಯಾಸ್ತ್ರೀಯಿಂದ ಮುಕ್ತಿ ಹೊಂದಿದ
ರಂಭಾ ಎಂಬುವ ವೇಶ್ಯಾ ಅವಗ ತಿಳಿಹೇಳಿ
ಅದರಿಂದ ಆದೀತ ಸದ್ಗತಿ ಮುಂದೆ ನಿಜಮುಕ್ತಿ ॥

ಬಂದ ನರಕ ತಪ್ಪಿಹೋಗಿ ಮುಂದೆ ಮುಕ್ತಿ
ಪದವಿಗಾಗಿ ಹೊಂದಿಕೊಂಡು ಅಂದನರಸಾಗಿ
ಪಾತರದವರ ಪುಣ್ಯದಿಂದ ಸ್ವರ್ಗಕ್ಕೆ ಹೋಗಿ
ಇರುವ ಕೈಲಾಸದಲ್ಲಿ ಶರಣರ ಬದಿಯಲ್ಲಿ
ಶಿವಧ್ಯಾನ ಸುಖದಲ್ಲಿ ಬಂದ ಪ್ರೀತಿ

ಸ್ವಾಮಿ, ನಮ್ಮಂಥ ಪಾತರದವರ ಹೇಳಿಕೆಯ ಪ್ರಕಾರ ನಡೆದವರಿಗೆಲ್ಲ ನರಕವಾಸ ಅಂತೀರಿ.ಹಾಗಾದರೆ ಶ್ವೇತರಾಜ ಯಾರಿಂದ ಮುಕ್ತಿ ಹೊಂದಿದೆ ?ರಂಭಾ ಅನ್ನುವ ಸೂಳೆಯಿಂದ ಹೌದೊ ಅಲ್ಲವೊ ?ಆ ಶ್ವೇತರಾಜ ನರಲೋಕದಾಗ ಅನೇಕ ಪಾಪ ಮಾಡಿ ಯಮಲೋಕಕ್ಕೆ ಹೋದ.ಅಲ್ಲಿ ಪಾಪಪುಣ್ಯದ ವಿಚಾರ ಆಗಿ ಸ್ವರ್ಗದಲ್ಲಿ ಸುಖ ಪಡೆಯಬೇಕು.ಆಮೇಲೆ ಅನಂತಕಾಲ ನರಕವನ್ನು ಅನುಭೋಗಿಸಬೇಕು ಅಂತ ನಿರ್ಣಯ ಆಗಲು, ಶ್ವೇತರಾಜ ಸ್ವರ್ಗಕ್ಕೆ ಹೋಗಿ ರಂಭ ಅನ್ನುವ ವೇಶ್ಯಾಸ್ತ್ರೀಯಳನ್ನು ಭೋಗವಿಲಾಸಕ್ಕೆ ಕರೆದ.ಆಗ ಅವಳು ಅವನ ಅಂತರಂಗ ತಿಳಿದು. ಬೆಳಗಾಗುವರೆಗೆ ಜ್ಞಾನಮಾರ್ಗ ಬೋಧಿಸಿ, ಅವನಿಗೆ ಪೂಜೆ ಮಾಡಲು ಹಚ್ಚಿದಳು. ಅವನ ಪೂಜೆಗೆ ಈಶ್ವರನು ಮೆಚ್ಚಿ ಅವನನ್ನು ಕೈಲಾಸಕ್ಕೆ ಕರೆದುಕೊಂಡು ಹೋದನು.ಅಂದಮೇಲೆ ದೇವಲೋಕದೊಳಗಿನ ರಂಭೆ ಅನ್ನುವ ಸೂಳೆ ಶ್ವೇತರಾಜನೆಗೆ ಮೋಕ್ಷನೀಡಿದಂತಾಗಲಿಲ್ಲವೆ ?

ತಿರುನೀಲಕಂಠ : ಹೌದು, ಹೌದು, ಆ ರಂಭಾನ ಉಪದೇಶದಿಂದ ಶ್ವೇತರಾಜನು ಮುಕ್ತಿ ಹೊಂದಿದ್ದು ನಿಜ.ಇದೆಲ್ಲ ದೇವಲೋಕದಲ್ಲಿ ನಡೆದ ಸಂಗತಿ.ಅದರಂತೆ ನರಲೋಕದೊಳಗೆ ಹಾಗೆ ಆದ ಉದಾಹರಣೆ ಇದೆಯೆ?

ರಂಭಾ : ನರಲೋಕದೊಳಗೆ ಸೂಳೆಯರಿಂದ ಮುಕ್ತಿ ಹೊಂದಿದವರನ್ನು ಹೇಳಬೇಕೆ ?

ತಿರುನೀಲಕಂಠ : ಹೌದು ; ನೀನು ಹೇಳಿದರೆ ನಿಮ್ಮ ಕುಲದಲ್ಲಿ ಧರ್ಮವಿದೆಯೆಂದು ತಿಳಿಯುತ್ತೇನೆ.

ರಂಭಾ : ಏನ್ರಿ ಸ್ವಾಮಿ, ನಮ್ಮಲ್ಲಿ ಧರ್ಮ ಇದೆಯೋ ಇಲ್ಲವೋ ಎಂಬುದನ್ನು ತಿಳಿದ ಬಳಿಕ ನಾನು ಹೇಳಿದಂತೆ ನೀವು ಕೇಳುವಿರಲ್ಲವೆ ?

ತಿರುನೀಲಕಂಠ : ಹೇಳಿದನಂತರ ಕೇಳಲು ಅಡ್ಡಿ ಇಲ್ಲ.

ರಂಭಾ : ನಾವು ಯಾರನ್ನೂ ಗತಿಗೆ ಹಚ್ಚೇ ಇಲ್ಲವೆ ?

ತಿರುನೀಲಕಂಠ : ಹೌದು, ನೀವು ನರಲೋಕದಲ್ಲಿ ಯಾರನ್ನೂ ಗತಿಗೆ ಹಚ್ಚಿಯೇ ಇಲ್ಲ.

ರಂಭಾ : ಹೇಳುತ್ತೇನೆ ಕೇಳಿರಿ.

ಪದ :

ಯಾರೂ ಆಗದಿದ್ದರೆ ಮತ್ತೆ ಮಲುಹಣ ಅನ್ನುವಂಥ ಕವಿ
ಯಾರಿಂದ ಮುಕ್ತಿ ಪಡೆದ ನೀವಿದನು
ಹೇಳಿರೀಗ ಆದ ಸಂಗತಿಯನು
ಮಲುಹಣಿ ಎಂಬುವಳನ್ನು, ಕೂಡಿಕೊಂಡಿದ್ದ ತಾನು
ತನ್ನ ಸಂಪತ್ತನ್ನು ಸೂರೆ ಮಾಡಿದ ಬಹುದಿನ ॥

ಗಂಡಹೆಂಡಿರಂತೆ ಅವರು ಅಟ್ಟಹಾಸದಿ ಇರುತಿರಲು
ಎಲ್ಲ ತೀರಿಹೋಯ್ತು ಅವನ ದುಡ್ಡಲ್ಲ
ರಿಕ್ತಹಸ್ತನಾಗಿ ನಿಂತ ಗತಿಯಿಲ್ಲದಾಗಲು ಅವಳಿ ಜನನಿ
ಕೋಪಿಸಿ ಹೋಗು ಕುನ್ನಿ, ಬರಬೇಡವಿಲ್ಲಿಗೆ ನೀ
ಎಂದು ಮಾಡಿದಳು ಕಟ್ಟಪ್ಪಣೆ ॥

ಆಗ ಮಲುಹಣ ರಾತ್ರಿಯಲಿ ಬಂದು ಮಲುಹಣಿ ಎಂದು
ಕರೆಯಲು, ಮಲುಹಣಿ ಆಗ ಹೊರಗೆ ಬಂದು ಅವನನ್ನು
ಶಿವಾಲಯಕ್ಕೆ ಕರಕೊಂಡ್ಹೋಗಿ ತನ್ನನ್ನು
ವರ್ಣಿಸೆನ್ನುತ ತಾನು,
ಲಿಂಗದ್ಹಿಂಭಾಗವನು ಸೇರಿ ತಾ ನಿಂತಳೆದುರಿಗಿನ್ನು ॥

ಸ್ವಾಮಿ, ನರಲೋಕದಲ್ಲಿ ಪಾತರದವರಿಂದ ಯಾರೂ ಮುಕ್ತಿ ಹೊಂದಿಲ್ಲ ಅನ್ನುತ್ತೀರಿ ಮಲುಹಣ ಎಂಬ ವಿಟಪುರುಷ ಯಾರಿಂದ ಮುಕ್ತಿ ಹೊಂದಿದ ?ಮಲುಹಣಿಯೆಂಬ ಪಾತರದವಳಿಂದ : ಹೌದೋ ಅಲ್ಲೊ !

ತಿರುನೀಲಕಂಠ : ಏನೆ, ಅವಳಿಂದ ಹ್ಯಾಗೆ ಮುಕ್ತಿ ಹೊಂದಿದ ?

ರಂಭಾ : ಸ್ವಾಮಿ, ಹ್ಯಾಗೆ ಮುಕ್ತಿ ಹೊಂದಿದನೆಂದರೆ ಮಲುಹಣಿ ಅನ್ನುವಂಥ ಪಾತರದವಳಿಗೆಮಲುಹಣನು ಆಕೆ ಬೇಡಿದಷ್ಟು ಹಣವನ್ನು ಕೊಟ್ಟು ಆಕೆಯ ಮನೆಯಲ್ಲಿ ಇದ್ದುಕೊಂಡಿದ್ದ.ಮುಂದೆ ಆತನ ಹಣವೆಲ್ಲ ತೀರಿದ ಮೇಲೆ ಮಲುಹಣಿಯ ತಾಯಿ ಅವನನ್ನು ಹೊರಗೆ ಹಾಕಿಬಿಟ್ಟಳು.ತನ್ನ ಮಗಳಾದ ಮಲುಹಣಿಗೆ ಮತ್ತೊಬ್ಬ ಪುರುಷನನ್ನು ದೊರಕಿಸಿದಳು.ಮಲುಹಣನು ಜಲ್ಲು ಹತ್ತಿ ಆಕೆಯ ಮನೆಯ ಕಿಡಿಕಿಯ ಹತ್ತಿರ ಇಡೀ ರಾತ್ರಿನಿಂತನು.ಆ ವೇಳೆಗೆ ಮಲುಹಣಿಯು ತಾಂಬೂಲ ಹಾಕಿಕೊಂಡು ಕಿಡಕಿಯೊಳಗಿಂದ ಹೊರಗೆ ಉಗುಳಿದಳು.ಆ ಉಗುಳು ಮಲುಹಣನ ಮೇಲೆ ಬಿತ್ತು.ಓಹೋ, ಮಲುಹಣಿಯ ಕೃಪೆಯಾಯಿತೆಂದು ಆತ ತಿಳಿದನು.ಆಗ ಆಕೆಯ ತನ್ನ ಪೂರ್ವದ ಸ್ನೇಹಿತ ಬಂದನೆಂದು ತಿಳಿದು ಹೊರಗೆ ಬಂದು, ಇಂತಹ ವಿರಹ ಪುನಃ ಆಗಬಾರದು.ಪರಮೇಶ್ವರನ ಧ್ಯಾನ ಮಾಡಿಸಬೇಕೆಂದು ಈಶ್ವರನ ಗುಡಿಗೆ ಆತನನ್ನು ಕರೆದುಕೊಂಡು ಹೋದಳು.ಮಲುಹಣನಿಗಿದ್ದುದು ಮಲುಹಣಿಯ ಧ್ಯಾನ. ಆಕೆಯು ಈಶ್ವರನ ಹಿಂದೆ ನಿಂತು ತನ್ನ ಧ್ಯಾನ ಮಾಡಲು ಹೇಳಿ ತಾನೊತ್ತಟ್ಟಿಗೆ ಸರಿದುಬಿಟ್ಟಳು.ಅವನು ಆಕೆಯ ಧ್ಯಾನ ಮಾಡುತ್ತಲೇ ಮರೆತು ತನ್ನ ಮುಂದಿದ್ದ ಈಶ್ವರನ ಧ್ಯಾನ ಮಾಡತೊಡಗಿದ. ಪರಮಾತ್ಮನು ಅವನ ಧ್ಯಾನಕ್ಕೆ ಮೆಚ್ಚಿ ಕೈಲಾಸಕ್ಕೆ ಕರೆದುಕೊಂಡು ಹೋದನು. ಮಲುಹಣಿ ಎಂಬ ಪಾತರದವಳಿಂದ ಅವನಿಗೆ ಮುಕ್ತಿ ಆಯಿತೊ ಇಲ್ಲವೊ ಹೇಳಿರಿ ?

ತಿರುನೀಲಕಂಠ : ಹೌದು ; ಆಕೆಯಿಂದ ಅವನಿಗೆ ಮುಕ್ತಿ ದೊರಕಿದಂತಾಯಿತು.

ರಂಭಾ : ಅಡ್ಡಿ ಇಲ್ಲ, ಮನುಹಣಿ ಪಾತರದವಳು, ಹೌದೊ ಅಲ್ಲವೊ ?

ತಿರುನೀಲಕಂಠ : ಹೌದು.

ರಂಭಾ : ಪಾತರದವರಿಂದ ಯಾರಿಗೂ ಸದ್ಗತಿ ಆಗಿಲ್ಲ ಅಂತೀರಿ.ಅಂದ ಮೇಲೆ ಮಲುಹಣನಿಗೆ ಮುಕ್ತಿ ಹ್ಯಾಗೆ ಆಯಿತು ?

ತಿರುನೀಲಕಂಠ : ಏನೆ ರಂಭಾ, ನೀನು ಎಂಥಾ ಜ್ಞಾನ ಚತುರಳಿದ್ದಿ ; ನನ್ನ ಪ್ರಶ್ನೆಗೆ ಸಮರ್ಪಕ ಉತ್ತರ ಕೊಟ್ಟೆಯಲ್ಲ ! ಇದನ್ನು ನೋಡಿ ನನ್ನ ಮನಸ್ಸಿಗೆ ಬಹಳ ಆನಂದವಾಯಿತು.

ರಂಭಾ : ಒಳ್ಳೆಯದು ಸ್ವಾಮಿ, ನಾನು ಮರುಳ ಮಾತಿಗೆ ಬಲೆ ಬೀಳುವವಳಲ್ಲ. ನಮ್ಮಲ್ಲಿ ಧರ್ಮ : ದಯೆ ಇದೆಯೊ ಇಲ್ಲವೊ ಹೇಳಿರಿ.

ತಿರುನೀಲಕಂಠ : ಆಯಿತು, ಆಯಿತು, ನಿಮ್ಮಲ್ಲಿ ಧರ್ಮವಿದೆ ಎಂಬುದು ಸ್ಪಷ್ಟವಾಯಿತು. ಇದರಲ್ಲಿ ಮತ್ತೇನು ಸಂದೇಹವಿಲ್ಲ.

ರಂಭಾ : ಸ್ವಾಮಿ, ತಾವು ಮೊದಲು ಏನೆಂದು ವಚನ ಕೊಟ್ಟಿದ್ದಿರಿ ?

ತಿರುನೀಲಕಂಠ : ಹೇ ತಾಯಿ, ಇಷ್ಟೇಕೆ ಕಳವಳದಿಂದ ಮನದೊಳಗೆ ಹಳಹಳಿಸುವಿ ? ನೀನು ಹೇಳಿದಂತೆ ಕೇಳುತ್ತೇನೆ.ವಚನ ಕೊಟ್ಟದ್ದು ನಿಜ.

ರಂಭಾ : ಹಾಗಾದರೆ ಕೇಳಿರಿ.

ಪದ :

ನಡೆಸಿರಿ ನಿಮ್ಮ ವಚನ, ಮಾಡಿರಿ ದಯಾಪೂರ್ಣ
ಮಾಡುವೆ ನಿಮಗೆ ಶರಣ ॥ಪಲ್ಲವಿ ॥

ಭಕ್ತಳ ಮಾಡಿಕೊಂಡು ಸೇವೆಯ ಕೈಕೊಂಡು
ಮಾಡಿರಿ ದೋಷನಾಶ ॥ಅನು ಪಲ್ಲವಿ ॥

ತಿರುನೀಲಕಂಠ :

ಚಿಂತೆಯ ಬಿಡು ನೀನು ಮಾಡವ್ವ ಸೇವೆಯನು
ಬರುವೆನು ಒಳಗಿನ್ನು
ಸನ್ಮಾರ್ಗ ಹಾದಿ ಹಿಡಿದು ನಡೆಯವ್ವ ಇನ್ನು ಮುಂದೆ
ಹೇಳುವೆ ಪ್ರೀತಿ ಬಂದು ॥

ರಂಭಾ :

ಬಂಧು ಬಳಗವೆಲ್ಲ ನೀವೆ, ಗುರು ಹಿರಿಯರೆಲ್ಲ ನೀವೆ.
ಎನ್ನನು ಕಾಪಾಡುವವರೂ ನೀವೆ

ತಿರುನೀಲಕಂಠ :

ಶರಣರ ಸೇವೆ ಮಾಡಿ, ಶಿವಶಿವ ಎಂದು ಹಾಡಿ
ಭಕ್ತಿಯಿಂದ ಕೊಂಡಾಡಿ,
ಶಿವನಿಗೆ ಪ್ರೀತಳಾಗು ಕಾದರೊಳ್ಳಿ ಶಿವನ ಕೂಡು
ಕೈವಲ್ಯ ರಾಜ್ಯದೊಳಾಡು
ಇದೇ ನಿತ್ಯ ಸೌಖ್ಯದ ಬೀಡು ॥

ತಂಗಿ ರಂಭಾ, ನಿನ್ನ ಅನನ್ಯ ಭಾವಕ್ಕೆ ಮೆಚ್ಚಿದೆ.ಇನ್ನು ಮೇಲೆ ನಿನ್ನ ಸೇವೆಯನ್ನು ಸ್ವೀಕರಿಸುತ್ತೇನೆ.ಆದರೆ ಪೂರ್ವದಲ್ಲಿ ಮಹಾನಂದೆಯು ಹೇಗೆ ಧರ್ಮದಿಂದ ನಡೆದಳೊ, ಅದರಂತೆ ನೀನು ಸಹ ಸನ್ಮಾರ್ಗದೊಳು ನಡೆಯಬೇಕು ತಿಳಿಯಿತೆ ?

ರಂಭಾ : ಶರಣರೆ, ಇನ್ನು ನನಗೆ ಯಾವ ಲೌಕಿಕ ಆಸೆಯೂ ಉಳಿದಿಲ್ಲ.ನನ್ನ ಸಕಲ ಸಂಪತ್ತೆಲ್ಲವೂ ಇಂದಿಗೆ ನಿಮ್ಮದು.ನನ್ನ ತನು : ಮನ : ಧನವನ್ನೆಲ್ಲ ನಿಮಗೆ ಅರ್ಪಿಸಿದ್ದೇನೆ. ಇನ್ನು ನೀವೇ ನನ್ನ ಗುರುಗಳು.ನಾನು ನಿಮ್ಮ ಪಾದಧೂಳಿಯಾಗಿ ಇರುವೆ.ಮುಂದೆ ನಾನು ಯಾವ ಆಚರಣೆಯಿಂದ ನಡೆಯಬೇಕೆಂಬುದನ್ನು ಉಪದೇಶಿಸಿರಿ.

ತಿರುನೀಲಕಂಠ : ರಂಭಾ, ಇಂದಿಗೆ ನೀನು ಶಿವಭಕ್ತಳಾದೆ.ಶಿವಪೂಜೆ ಶಿವನಾಮ ಸ್ಮರಣೆಯಲ್ಲಿಯೆ ನಿರತಳಾಗು.ಶಿವಶರಣರನ್ನು ಸೇವಿಸು, ಸತ್ಪುರುಷರನ್ನು ಭಯಭಕ್ತಿಯಿಂದ ಸತ್ಕರಿಸು.ಸಾತ್ವಿಕ ಆಹಾರವನ್ನು ಸೇವನೆಮಾಡು, ಅಂದರೆ ದಶೇಂದ್ರಿಯಗಳು ನಿನ್ನ ಸ್ವಾಧೀನವಾಗುವವು. ಮಲತ್ರಯಗಳಿಂದ ದೂರವಾಗುವಿ.ಮಾನವಜನ್ಮಕ್ಕೆ ಬಂದವರೆಲ್ಲ ಧರ್ಮವನ್ನೆ ಗಳಿಸಬೇಕು.ಕಾರಣ, ನೀನು ಏನು ಮಾಡಿದರೂ ಧರ್ಮಕಾರ್ಯವನ್ನೇ ಮಾಡು. ಅಂದರೆ ಮಲಪ್ರಭಾ ನದಿಯ ದಡದಲ್ಲಿರುವ ಕಾದರೊಳ್ಳಿಯ ಶ್ರೀವೀರಭದ್ರದೇವರು ನಿನಗೆ ಸಾಕ್ಷಾತ್ಕಾರವನ್ನಿತ್ತು ಸಾಯುಜ್ಯವನ್ನೀಯುವನು ; ತಿಳಿಯಿತೇ ?

ರಂಭಾ : ಸ್ವಾಮಿ, ನನ್ನನ್ನು ಉದ್ಧರಿಸಿದಿರಿ, ನಿಮ್ಮ ಆಜ್ಞೆಯಂತೆಯೆ ನಡೆದುಕೊಳ್ಳುತ್ತೇನೆ.ಇನ್ನು ನಿಮಗೆ ಗಂಧ ಕಸ್ತೂರು ಎಣ್ಣೆ ಪನ್ನೀರಿನಿಂದ ಸ್ನಾನ ಮಾಡಿಸುವೆ.ಆದ್ದರಿಂದ ನನ್ನ ನಿವಾಸದೊಳಗೆ ನಡೆಯಿರಿ.

ತಿರುನೀಲಕಂಠ : ಒಳ್ಳೆಯದು ರಂಭಾ, ಹೋಗೋಣ ನಡೆ.

ರಂಭಾ : ಆಹಾ ! ದೂತೆ ಎಲ್ಲಿರುವಿ ? ಬೇಗ ಬಾ, ಜರತಾರಿ ಅಂಗಿ, ಅಂಗ ವಸ್ತ್ರ ಮೊದಲಾದ ಸಾಮಗ್ರಿಗಳನ್ನು ಬೇಗ ತಾ.

ದೂತಿ : ಅವ್ವಾ,ಈಗ ನಿನ್ನ ಮನಸ್ಸಿನಂತೆ ಆಯಿತೆ ?ಅವಸರದಿಂದ ಹೋಗಿ ಎಲ್ಲವನ್ನೂ ತೆಗೆದುಕೊಂಡು ಬರುತ್ತೇನೆ.

ರಂಭಾ : ಗುರುಗಳೆ,ಈ ಪೋಷಾಕನ್ನು ಹಾಕಿಕೊಳ್ಳಬೇಕು.

ತಿರುನೀಲಕಂಠ : ಏನೆ, ರಂಭಾ, ರಾಜರಿಗೆ ಸಲ್ಲತಕ್ಕ ಈ ಪೋಷಾಕು ನಮಗೇಕೆ ? ನಾವೆಲ್ಲ ಬೂದಿಬಡಕ ಶರಣರು. ಇವೆಲ್ಲ ನಮಗೆ ಬೇಕಾಗಿಲ್ಲ.

ರಂಭಾ : ಶರಣರೆ, ನೀವು ರಾಜರಿಗೆ ರಾಜರು ; ರಾಜ ಗುರುಗಳು ! ನಾನು ಭಕ್ತಿಯಿಂದ ಮಾಡುವ ಸೇವೆಯನ್ನು ತಾವು ಅಲ್ಲಗೆಳೆಯುವದೆ ? ಬೇಗನೆ ತೊಟ್ಟುಕೊಳ್ಳಬೇಕು.

ತಿರುನೀಲಕಂಠ : ತಾಯಿ, ಈ ಪೋಷಾಕನ್ನು ನೋಡಿ ನನ್ನ ಮನ ದಡಬಡಿಸ ತೊಡಗಿತು. ಅವನ್ನು ಆ ಕಡೆಗೆ ತೆಗೆದಿಡು.

ರಂಭಾ : ಶರಣರೆ, ನಿಮ್ಮ ಮನದ ಗಡಿಬಿಡಿಯೇನು ?

ತಿರುನೀಲಕಂಠ : ತಾಯಿ, ಈ ಪೋಷಾಕಿನೊಡನೆ ನಾನು ಮನೆಗೆ ಹೋದರೆ ನನ್ನ ಸತಿ ಸತ್ಯವತಿ ಸುಮ್ಮನಿರುವಳೆ ? ನನ್ನ ಗತಿ ಏನಾದೀತು? ಅಷ್ಟೆ ಅಲ್ಲ, ಮನೆ ಬಿಟ್ಟು ಹೊರಗೆ ಹಾಕಿ, ನಮ್ಮ ಶಿವಶರಣರಿಗೆ ಅರುಹಿ ಅಬರುಗೇಡು ಮಡ್ಯಾಳು.ಆದ್ದರಿಂದ ಇವು ನನಗೆ ಬೇಡ.

ರಂಭಾ : ಶಿವಶರಣರು ನಿಮ್ಮನ್ನೇಕೆ ಬಯ್ಯುತ್ತಾರೆ? ಸೌಂದರನಂಬಿ ಪಗಲ್ಚೋಳ ಅನ್ನುವ ಶಿವಶರಣರು ಮಹಾ ರಾಜವೈಭವದಲ್ಲಿ ಇದ್ದಿರಲಿಲ್ಲವೆ ? ಹಾಗಿದ್ದರೂ ಅವರನ್ನು ಯಾರೂ ಬೈಯುವದಿಲ್ಲ.ಆದರೆ ನಿಮ್ಮನ್ನೇಕೆ ಬೈಯುತ್ತಾರೆ ?

ತಿರುನೀಲಕಂಠ : ರಂಭಾ, ನಿನ್ನ ಕೈಯಲ್ಲಿ ಪಾರಾಗುವದು ಬಹಳ ಕಠಿಣ. ನಿನ್ನ ಮನಸ್ಸಿಗೆ ಬಂದಂತೆ ಮಾಡು, ತೀರಿತೆ ?

ರಂಭಾ : ಹಾಗಾದರೆ ಇವನ್ನು ತೊಟ್ಟುಕೊಳ್ಳಿರಿ.

ತಿರುನೀಲಕಂಠ : ಒಳ್ಳೆಯದು. (ತೊಟ್ಟುಕೊಳ್ಳುವನು)

ರಂಭಾ : ಹೇ ದೂತೆ, ಆ ಕಲಾಯದ ಪಾತ್ರೆಯಲ್ಲಿ ಹಾಲು ಇವೆ.ಅದರಲ್ಲಿ ಸಕ್ಕರಿ ಕಲಿಸಿಕೊಂಡು ಬಾ.

ದೂತಿ : ಈಗಲೇ ಹೋಗಿ ಹಾಲು ಸಕ್ಕರೆ ತರುತ್ತೇನೆ.

ರಂಭಾ : ಸ್ವಾಮಿ, ಈ ಹಾಲನ್ನು ಸ್ವೀಕಾರ ಮಾಡಬೇಕು.

ತಿರುನೀಲಕಂಠ : ರಂಭಾ, ಇನ್ನೇನು ನಿನ್ನ ಇಚ್ಛೆ ಪೂರ್ಣವಾಯಿತೆ ?

ರಂಭಾ : ಸ್ವಾಮಿ, ನಿಮ್ಮ ಪೂಜೆ ಮಾಡುವೆನು.

ಪದ :

ಇಂದಿಗೆ ಧನ್ಯಳಾದೆ ಪಾಪವ ನೀಗಿದೆ
ಮುಕ್ತಿಯ ಹೊಂದಿದೆ ಗುರುಭಕ್ತಳಾಗಿ ನಾ
ಗುರುಸೇವೆ ಮಾಡಿದೆ ಭವಶರಧಿ ದಾಟಿದೆ ॥

ಪರುಷ ರತ್ನ ಮುಟ್ಟಿ ಕಬ್ಬಿಣ ಗುಣ ಪುಟ್ಟಿ
ಬಂಗಾರ ದೋರಿ ಪಟ್ಟಿಯಾದಂತೆ ನಾನಾದೆ
ಗುರುಕರುಣವೆಂಬ ಚಿಂತೆ ಸುಟ್ಟಿತು
ಪಾಪಕ್ಕೆ ತಾಗಿ ಓಡಿತೋ ಅಂಜಿಕೆ ॥

ಹಿಂದಿನ ಪುಣ್ಯದಿಂದ ಕಂಡೆನೊ ಇಂಥ ಚಂದ್ರ
ಗುರುವಿನ ದಯದಿಂದ ಶರಣರ ಸ್ಥಳದಲ್ಲಿ
ಮಲಪ್ರಭಾ ದಡದಲ್ಲಿ ಕಾದರೊಳ್ಳಿ ಗ್ರಾಮದಲ್ಲಿ
ನೆನಿಸಿ ಪರಮಾತ್ಮ ವೀರಭದ್ರದೇವರ
ದಯ ನನ್ನ ಮೇಲೆ ಪೂರಾ ಮಾಡಿದ, ಶುಭಕಾರ್ಯ ॥

ಸ್ವಾಮಿ, ಇಂದಿಗೆ ನಮ್ಮ ಜನ್ಮ ಉದ್ಧಾರವಾಯಿತು.ನಿಮ್ಮ ಉಪದೇಶವನ್ನು ಎಂದಿಗೂ ಮರೆಯುವದಿಲ್ಲ.ಈ ಬಡದಾಸಿಯ ಮೇಲೆ ತಮ್ಮಅಂತಃಕರಣ ನಿರಂತರ ಇರಬೇಕೆಂದು ಬೇಡಿಕೊಳ್ಳುತ್ತೇನೆ.

ತಿರುನೀಲಕಂಠ : ರಂಭಾ, ಪರುಷ ಮುಟ್ಟಿದ ಕಬ್ಬಿಣವು ತಿರುಗಿ ಕಬ್ಬಿಣವಾದೀತೆ ? ಎಂದಿಗೂ ಆಗಲಾರದು. ಅದರಂತೆ ನಿನ್ನ ಪಾಪವೆಲ್ಲ ನಾಶವಾಗಿ ಹೋಗಿ ಪವಿತ್ರಳಾದೆ.ಇನ್ಯಾತರ ಭಯ ?ನಿನ್ನ ಮೇಲೆನನ್ನ ಅಂತಃಕರುಣೆ ಸಂಪೂರ್ಣ ಇದೆ.ತಡಮಾಡದೆ ಅಪ್ಪಣೆ ಕೊಡು.ಹೋಗಿ ಬರುತ್ತೇನೆ.

ರಂಭಾ : ಸ್ವಾಮಿ, ಹೋಗಿಬರುವಂಥವರಾಗಿರಿ.