ಪ್ರವೇಶ : 2
ವೇಶ್ಯಾಗೃಹ

ರಂಭಾ :

ಗಂಡಸ ಜಾತಿಗೆ ಮಿಂಡಳು ನಾನು
ಹಿಂಡುವೆನೆಲ್ಲರನು ॥ಪಲ್ಲವಿ ॥

ಮಿಂಡಳು ನಾನು ಮರುಳು ಮಾಡುವೆನೆಲ್ಲರನು
ಈ ಪುರಜನರನು ॥ಅನು ಪಲ್ಲವಿ ॥

ವಾರಿನೋಟವ ಬೀರಿ ಚಾರು ಕುಚವ ತೋರಿ
ಮೀರಿದ ಬೇಟೆಯ ನಾರಿ ನಾ ಆಡುವೆ
ಧೀರಪುರುಷರನು ॥

ಚಲ್ವಿಕೆಯಿಂದ ನಾನು ಬಹುದೊಡ್ಡ ಮಾನ್ಯರನು
ಒಲಿಸಿಕೊಂಡಿರುವೆ ಬಲೆಗೆ ಹಾಕಿರುವೆ
ಸುಲಿದುಕೊಂಡಿರುವೆ ॥

ಅಂಗಜಶಾಸ್ತ್ರ ಕಲಿತು ಸಂಗೀತ ವಿದ್ಯೆಯರಿತು
ಹೆಂಗಸರೊಳೆಲ್ಲ ಪದ್ಮಿನಿ ಸ್ತ್ರೀಯೆಂದೆನಿಸಿ
ವಿಂಗಡಿಸಿರುವೆ ನಾನು ॥

ಏನೆ ದೂತಿ, ಇಷ್ಟೊತ್ತಿನವರೆಗೆ ಏನು ಮಾಡಿದಿ? ಎಲಿ ಹೋಗಿದ್ದೆ ? ಆ ಮಂಚವನ್ನು ನೆಟ್ಟಗೆ ಇಟ್ಟು ಹಾಸಿಗಿ ಝಾಡಿಸು ಅಂತ ಹೇಳಿದ್ದೆ.ನೀನು ಇದುವರೆಗೆ ಯಾವುದನ್ನೂ ಮಾಡಿಲ್ಲ. ಇವೊತ್ತು ಇನಾಮದಾರ ಬಾಬಾ ಸಾಹೇಬರು ನನ್ನ ಮಂಚಕ್ಕೆ ಬರುತ್ತಾರೆಂದು ಹೇಳಿರಲಿಲ್ಲವೆ ?ಕಾಶೀನಾಥ ಮತ್ತು ಸೀತಾರಾಮ ಶಾಸ್ತ್ರಿಗಳೂ ಬರುವವರಿದ್ದಾರೆ.ಅವರು ಬರುವದರೊಳಗೆ ಎಲ್ಲ ವ್ಯವಸ್ಥೆ ಆಗಿರಬೇಕು.ತಿಳಿಯುತೆ ?ಆ ಲಾಲ್ಯಾ ಎಲ್ಲಿಹೋದ ?

ದೂತಿ : ಇದೇ ಈಗ ಪ್ಯಾಟಿಗೆ ಹೋಗಿಬರತೀನಂತ ಹೋದ.

ತಿರುನೀಲಕಂಠ : ಅಲ್ಲೇನು ಮಾಡಲು ಹೋದ ? ಅವನೇನು ಪುಕ್ಕಟೆ ಬಂದಿಲ್ಲ ತಿಂಗಳಿಗೆ ಎಂಟು ರೂಪಾಯಿ ಸಂಬಳ ತೆಗೆದುಕೊಳ್ಳುತ್ತಾನೆ.ಹೀಗೆ ಅವನನ್ನು ಇನ್ನು ಮೇಲೆ, ಹೊರಗೆ ತಿರುಗಾಡಲಿಕ್ಕೆ ಬಿಡಬೇಡ, ಎಚ್ಚರಿಕೆ.

ದೂತಿ : ಹಂಗ ಆಗ್ಲಿ.

ಲಾಲ್ಯಾ : (ಬಂದು) ಸಲಾಂ ಬಾಯಿಸಾಬ ಸಲಾಂ

ರಂಭಾ : ಸಲಾಂ ಹೇಳಿ ರಮಸಾಕ ಬಂದೀದೇನು ? ಇಷ್ಟೊತ್ತನ ಎಲ್ಲಿ ಹೋಗಿದ್ದಿ ? ನಾನು ಎಲ್ಲಿಯಾದರೂ ಹೋದಕೂಡಲೆ ಮನೆಯೊಳಗೆ ಒಂದು ಅರಗಳಿಗೆ ಸಹ ಇರೂದಿಲ್ಲ.ಈಗ ಎಲ್ಲಿಗೆ ಹೋಗಿದ್ದಿ ?

ಲಾಲ್ಯಾ : ತಾಯವ್ವನಾರು ಒಂದ ಪೈಯಾ ಕೊಟ್ಟಿದ್ದರು ; ಅದ್ಯ ಪ್ಯಾಟಿಗೆ ಪುಠಾಣಿ ತರಾಕ ಹೋಗಿದ್ಯಾ.

ರಂಭಾ : ಏನೆ ದೂತಿ, ನೀನು ಇವನನ್ನು ಪ್ಯಾಟಿಗೆ ಕಳಿಸಿದ್ದೆಯಾ ?

ದೂತಿ : ಹೌದು ; ಮೊನ್ನೆ ಬಾಬಾಸಾಹೇಬ್ರು ನಮ್ಮ ಮನಿಗ ಬಂದಾಗ ಕುಸಿಯಂತ ಒಂದು ಪೈಯಾ ಕೊಟ್ಟ ಹೋಗಿದ್ರು ಅದನ್ನ ಕೊಟ್ಟು ಇಬ್ಬರೂ ಕೂಡಿ ತಿನ್ನಾನಂತ ಪುಠಾಣಿ ತರಾಕ ಕಳಿಸಿದ್ದೆ.

ರಂಭಾ : ಅದೆಲ್ಲ ಇರಲಿ ; ಲಾಲ್ಯಾ, ಒಂದ ತಾಸಿನ ಮುಂದೆ, ಸಮೆ ಬೆಳಗಿಕೊಂಡ ಬಾ ಅಂತ ಹೇಳಿದ್ದೆ.ಇನ್ನೂ ಯಾಕ ಬೆಳಗಿಕೊಂಡು ಬಂದಿಲ್ಲ.

ಲಾಲ್ಯಾ : ಈಗೇನಾಯ್ತಿ ತೊಗೊಳ್ರಿ ; ಒಂದ ನಿಮಿಷದಾಗ ಬೆಳಗಿಕೊಂಡ ಬರತೀನಿ.

ರಂಭಾ : ಹಾಗಾದ್ರೆ ಸರ‌್ರನೆ ಹೋಗಿ ಭರ‌್ರನೆ ಬಾ ತಡಮಾಡಿದ್ರೆ ಲತ್ತೀ ತಿಂತೀ ನೋಡು (ಆಟ ಹೋಗುವನು)

ದೂತಿ : ನಿನ್ನ ಗದ್ಲ ಬಾಳಾತಯವ್ವಾ.

ರಂಭಾ : ಏನೆ, ನಿನಗೂ ಲತ್ತಿ ಬೇಕೇನು ? ಬೇಗ ಹೋಗಿ ಕಪಾಟಿನೊಳಗ ಅತ್ತರದಾನಿ ತಬಕ ಇದೆ.ಅದನ್ನು ಸರ‌್ರನೆ ತೆಗೆದುಕೊಂಡು ಬಾ.

ಲಾಲ್ಯಾ : ಸಾನಿಯವರೆ ತೊಗೊಳ್ರಿ ಸಮೆ.

ರಂಭಾ : ಅಲ್ಲೆ ಇಡು ಹೊರಗೆ ಯಾರೊ ಬಂದಂಗಾತು ನೋಡು.

ಲಾಲ್ಯಾ : (ಓಡಿ ಹೋಗಿ ನೋಡು) ಅವ್ರ ಬಂದೇ ಬಿಟ್ರು

ರಂಭಾ : ಯಾರು ?

ಲಾಲ್ಯಾ : ಅವರೇ… ಅವರೇ…. ಕಾಸೀನಾಥ, ಸಿತಾರಾಮ! ಇವರೇ ನೋಡ್ರಿ.

ರಂಭಾ : ಒಳಗೆ ಬನ್ನಿ.(ಒಳಗೆ ಹೋಗುವರು)

ತಿರುನೀಲಕಂಠ : (ಪ್ರವೇಶಿಸಿ) ಭಕ್ತಿಯಿಂದ ಶಿವಪೂಜೆ ಮಾಡಿದರರೆ ಮನುಷ್ಯ ಜನ್ಮದ ಅನೇಕ ಪಾಪಗಳು ನಾಶವಾಗುವವು.ಆದ್ದರಿಂದ ಎಲ್ಲರೂ ಈಶ್ವರನ ಪೂಜೆ ಮಾಡಿ ಸದ್ಗತಿಯನ್ನು ಹೊಂದಬೇಕು. ಈ ಮಾಯಾಪ್ರಪಂಚಕ್ಕೆ ಮನೆಸೋತು ಪಾಪ ಕೆಲಸಕ್ಕೆ ಕೈಹಾಕಿ. ಜನರು ಪಾಪಕೂಪದಲ್ಲಿ ಬಿದ್ದು ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ.ಅದರಂತೆ ನೀವೆಲ್ಲ ಸಂಸಾರದಲ್ಲಿಯೇ ನಿರತರಾಗದೆ ಪರಮಾತ್ಮನ ಪಾದಾಸಕ್ತರಾಗಿ ಮೋಕ್ಷಪಡೆದು ಕೃತಾರ್ಥರಾಗಿರಿ. (ಎಂದು ಹೇಳುತ್ತ ಪೊನ್ನಾಂಬಲೇಶ್ವರನನ್ನು ಅರ್ಚಿಸಲೆಂದು ರಸ್ತೆಯ ಮೇಲೆ ಹೊರಟಿರುತ್ತಾರೆ.ಉಪ್ಪರಿಗೆಯ ಮೇಲೆ ವಿಟರೊಡನೆ ಹಾಸ್ಯ ಮಾಡುತ್ತ ತಾಂಬೂಲ ಸೇವಿಸುತ್ತಿದ್ದ ರಂಭಾ ಕೆಳಗೆ ಹೊರಟಿರುವವರನ್ನು ನೋಡದೆ ಉಗುಳುತ್ತಾಳೆ.ಅದು ತಿರುನೀಲಕಂಠರ ಮೇಲೆ ಬೀಳುತ್ತದೆ.ಆಗ ಅವರು ಚಕಿತರಾಗಿ) ಆಂ, ಇದೇನು ನನ್ನ ಮೈಮೇಲೆ ಬಿದ್ದುದು ?(ಅಂಗಿಯನ್ನು ಕೊಡವಿ ನೋಡಿ) ಕೆಂಪುವರ್ಣ ಇದೆಯಲ್ಲ.ಇದು ತಾಂಬೂಲದ ರಸವೆಂದು ಕಾಣುತ್ತದೆ.ಇದರೊಳಗೆ ಎಲೆ ಅಡಿಕೆಯ ಸಣ್ಣ ಸಣ್ಣ ಚೂರುಗಳು ಕಾಣಿಸುತ್ತವೆ ಅಂದಮೇಲೆ, ಯಾರೋ ತಾಂಬೂಲ ಹಾಕಿಕೊಂಡು ನೋಡದೆ ನನ್ನ ಮೇಲೆ ಉಗುಳಿದಂತಿದೆ (ಮೇಲೆ ನೋಡಿ) ಓ ಇದು ಪಾತರದವರ ಮನೆ, ಹೊರಗಂತೂ ಯಾರೂ ಕಾಣಿಸುವುದಿಲ್ಲ.ಅಂತಸ್ತಿನ ಮೇಲಿಂದ ಯಾರಾದರೂ ನನ್ನನ್ನು ನೋಡದೆ ಉಗುಳಿರಬೇಕು.ಇದೇನು ಪ್ರಮಾದವಾಯಿತು ?ನಾನು ಸ್ನಾನಮಾಡಿ ಶುಚಿರ್ಭೂತನಾಗಿ ಮಡಿಬಟ್ಟೆಧರಿಸಿಕೊಂಡು ಪೊನ್ನಾಂಬಲೇಶ್ವರನ ಪೂಜೆಗೋಸುಗ ಸಕಲ ಪೂಜಾಸಾಮಗ್ರಿ ಸಿದ್ಧಪಡಿಸಿಕೊಂಡು ಹೊರಟಿರಲು ಇದೇನಾಯಿತು? ಇದು ಅಶುಭ ಸೂಚನೆ ; ಈಶ್ವರಿಚ್ಛೆ ಏನು ಸಂಭವಿಸುವುದೋ ಸಂಭವಿಸಲಿ ಮತ್ತೆ ಸ್ನಾನ ಮಾಡಿ ಹೋದರಾಯಿತು ( ಬಟ್ಟೆಯನ್ನು ಕೊಡವಿಕೊಳ್ಳುತ್ತಾನೆ).

ರಂಭಾ : (ಮೇಲುಪ್ಪರಿಗೆಯ ಕಿಟಕಿಯಿಂದ ದಾರಿಯ ಕಡೆಗೆ ನೋಡುತ್ತ) ಇದೇನು ? ತಿರುನೀಲಕಂಠಶರಣರು ತಮ್ಮ ಮೈಮೇಲಿನ ಅರಿವೆಗಳನ್ನು ಬಹು ಚಿಕಿತ್ಸಕ ಬುದ್ಧಿಯಿಂದನಿರೀಕ್ಷಿಸುತ್ತಿದ್ದಾರಲ್ಲ ? ಏಕಿರಬಹುದು ?ನಾನು ಇದೇ ಈಗ ತಾಂಬೂಲ ಹಾಕಿಕೊಂಡು ಉಗುಳಲಿಕ್ಕೆ ಹೊರಗೆ ಬಂದಿದ್ದೆ.ಆಗ ಅದು ಅವರ ಮೇಲೆ ಬಿದ್ದಿತೊ ಏನೋ ?ಅಹುದು, ಅದು ಅವರ ಮೇಲೆ ಬಿದ್ದದ್ದೇ ನಿಜ. ಅಂತೆಯೆ ಅವರು ಹೀಗೆ ತಮ್ಮ ಅಂಗಿ ಧೋತರವನ್ನು ಜಾಡಿಸಿಕೊಳ್ಳುತ್ತಿದ್ದಾರೆ.ಅಕಟಕಟಾ ಇದೇನಾಯಿತು ! ವಿಟಪುರುಷರೊಡನೆ ಹರಟೆಯಾಡುವ ಲಹರಿಯಲ್ಲಿ ಎಂಥ ದೊಡ್ಡ ಪಾಪ ಸಂಭವಿಸಿತಲ್ಲ ! ಕೆಟ್ಟೆನು ಕಟ್ಟೆನು !! ಶಿವ ಶಿವ ತಿರುನೀಲಕಂಠಶರಣರು ಮಹಾಸಾಧುಗಳು.ಅಂಥವರನ್ನು ನೋಡದೆ ಮೈಸೊಕ್ಕಿನಿಂದ ಉಗುಳಿಬಿಟ್ಟೆ.ಈ ಪಾಪ ಏಳೇಳು ಜನ್ಮಕ್ಕೂ ನನ್ನನ್ನು ಬಿಡುವದಿಲ್ಲ.ಇನ್ನೇನು ಮಾಡಲಿ ? ನಾನು ಉಗುಳಿದ್ದಕ್ಕೆ ಅವರು ಸಿಟ್ಟಿಗೆದ್ದರೆ ಬಾಯಲ್ಲಿ ಹುಳಬಿದ್ದು ಕೊಳೆತು ಸತ್ತು ಹೋಗುತ್ತೇನೆ.ನನ್ನ ವಂಶವೂ ನಷ್ಟವಾಗಿ ಹೋಗುತ್ತದೆ.ಇನ್ನೇನು ಮಾಡಲಿ ? ನನ್ನನ್ನು ಯಾರು ಉಳಿಸಿಕೊಳ್ಳಬಲ್ಲರು.ಹಾ ದೂತಿ, ಎತ್ತ ಹೋದಿ ?ನಾನು ಸಾಯುತ್ತೇನೆ.ಸಾಯುತ್ತೇನೆ (ಎಂದು ಚೀರಿ ಮೂರ್ಛೆ ಹೋಗುವಳು.ದೂತಿಯು ಬಂದು ನೋಡಿ).

ದೂತಿ : ತಾಯಿ ರಂಭಾಸಾನಿ, ನಿನಗ ಏನಾಯ್ತವ್ವಾ ? ಯಾಕೆ ಬಿದ್ದೆ ? ನಿನಗ ಯಾರು ಏನು ಮಾಡಿದರು ?(ಮೈಮೇಲೆ ಕೈಯಾಡಿಸಿ) ಶಿವಶಿವಾ, ಇವಳಿಗೆ ಮೈಮೇಲೆ ಎಚ್ಚರವೇ ಇಲ್ಲವಲ್ಲ ! ಇನ್ನೇನು ಗತಿ ? (ಗಾಳಿ ಬೀಸಿ) ಅವ್ವಾ ರಂಭಾ, ರಂಭಾ, ಏಳವ್ವಾ ಏಳು.

ರಂಭಾ : (ಎಚ್ಚರಾಗಿ) ಅವ್ವಾ ನಾನು ಸಾಯುವೆ ! ಇನ್ನು ಬದುಕಲಾರೆ. ಬದುಕಿ ಪ್ರಯೋಜನವೂ ಇಲ್ಲ.ಈಗಲೆ ಪ್ರಾಣ ಬಿಡುವೆ.ಈ ಉಪ್ಪರಿಗೆಯ ಮೇಲಿಂದ ಹಾರಿಕೊಳ್ಳುವೆ ! (ಎಂದು ಮುಂದೆ ಸಾಗಲು ದೂತಿ ಅವಳನ್ನು ತಡೆಯುವಳು).

ದೂತಿ : ಎಲ್ಲಿ ಹೋಗುವಿ ? ನಿನ್ನನ್ನು ಬಿಡುವದಿಲ್ಲ.ಜೀವಾ ಕೊಡುವಂಥ ಸಂಕಟ ನಿನಗೇನು ಬಂತು : ಹೇಳ ತಾಯಿ !

ರಂಭಾ :

ಕೇಳವ್ವ ದೂತೆ, ಅಲ್ಲದಂಥಾ ಕೃತ್ಯ
ಆದೀತೆ ಜೋಲಿ ಹೋಯಿತೆ ॥ಪಲ್ಲವಿ ॥

ಶಿವಶರಣರ ನಾ ಮಾಡಿದೆನಪಮಾನಾ ನಾ
ಅದರಿಂದ ನನ್ನ ಪ್ರಾಣ ಉಳೀದವ್ವಾ ಇನ್ನಾ
ಆಯಿತೆ, ಜೋಲಿ ಹೋಯಿತೆ ॥

ಎಚ್ಚರಿಲ್ಲದ ಜಾತಿ ನಮಗ ಇಲ್ಲವ್ವ ಗತಿ
ಸುಡಲೆವ್ವ ನಮ್ಮ ಕೃತಿ ಕಡು ಪಾಪಮಯ ನಡತಿ
ಆದೀತೆ ಜೋಲಿ ಹೋಯಿತೆ ॥

ಭೂಮಿಗೆ ಬೇಸರ ಆಯಿತೆ ಸಂಸಾರ
ಬಂತವ್ವ ದುಸ್ತರ, ಆಗಲಿನ್ಹ್ಯಾಂಗ ಪಾರ
ಆದೀತೆ ಜೋಲಿ ಹೋಯಿತೆ ॥

ಸಾಧು ಸತ್ಪುರುಷರನ್ನು ಅವಮಾನಗೊಳಿಸಿ ಭೂಮಿಗೆ ಭಾರವಾದೆನು.ಇಂದಿಗೆ ನನ್ನ ಬಾಳ್ವೆ ನಾಯಿಗಿಂತಲೂ ಬೇಡಾಗಿ ಹೋಯಿತು.ಆ ಪಾಪದ ಫಲವನ್ನು ನಾನು ಅನುಭವಿಸಲೇಬೇಕು.ಇನ್ನು ಜೀವ ಇಡಲಾರೆ.ಶಿವ ಶರಣರ ಮನಸ್ಸಿಗೆ ನೋವು ಮಾಡಿದ್ದಕ್ಕಾಗಿ ನನ್ನ ಪರಿಣಾಮ ನೆಟ್ಟಗಾಗುವದಿಲ್ಲ.ಎಲ್ಲಿಯಾದರೂ ಹೋಗಿ ಜೀವ ಬಿಡುತ್ತೇನೆ.

ದೂತಿ : ಅವಗೇನು ಕಟ್ಟ ಆಗುವಾಂಗ ಮಾಡಿದಿ ?ಅವನ ಉಸಾಬರಿ ಯಾಕ ತಗದಿ ? ಊರಾಗ ಮತ್ಯಾರೂ ಸಿಗಲಿಲ್ಲೇನು ?ಅವ ಯಾವಾಗಲೂ ಬಾವಾನಂಗ ಮೈಗೆ ಬೂದಿ ಬಡಕೊಂಡು ದೆವ್ವನಾಂಗ ಕೂತಿರತಾನ, ಅದರ ಹೆಸರ ಯಾಕ ತಗೀಲಿಕ್ಕೆ ಹೋಗಿದ್ದಿ ?

ರಂಭಾ : ತಿರುನೀಲಕಂಠರು ಸಾಮಾನ್ಯರೆ ? ನಮ್ಮ ಪ್ರಾಂತದಲ್ಲಿ ಅವರ ಕೀರ್ತಿ ಬೆಳಗುತ್ತಿದೆ.ಅಂಥ ಮಹಾತ್ಮರ ಮೇಲೆ ನಾನು ಉಗುಳಿದೆ.ಪಾಪಿಯಾದ ನನ್ನಿಂದ ಅವರ ಮನಸ್ಸಿಗೆ ವಿಷಾದವಾಯಿತು.ಆ ದ್ರೋಹ ನನ್ನನ್ನು ಹೇಗೆ ಬಿಟ್ಟೀತು ?ಮೊದಲೆ ನಾನು ಘೋರ ಪಾಪಿ, ಮಹಾತ್ಮರ ದ್ರೋಹಕ್ಕೆ ಕಾರಣವಾಗುವ ಹೊತ್ತು ಸಂಭವಿಸಿದೆ.ಬೇಗ ಹತ್ತಿದ ಬೆಟ್ಟಕ್ಕೆ ಆಕಾಶದಿಂದ ಸಿಡಿಲೆರಗಿದಂತಾಗಲಿಲ್ಲವೆ ?ಅಂದ ಮೇಲೆ ಭೂಮಿಗೆ ಭಾರವಾದ ಈ ಜನ್ಮವನ್ನಿಟ್ಟು ಫಲವೇನು ?

ದೂತಿ : ರಂಭಾ, ನೀನು ಅವರನ್ನು ನೋಡಿ ಬೇಕೆಂದೇ ಅವರ ಮೇಲೆ ಉಗುಳಿದೆಯೊ? ಅಥವಾ ನೋಡದೆ ಉಗುಳಿದೆಯೊ ?

ರಂಭಾ : ಅವರನ್ನು ನೋಡದೆ ಉಗುಳಿದೆ ನಿಜ.ನಾನು ಉಗುಳುವಾಗ ಅವರು ಕೆಳಗೆ ಹಾದು ಹೋಗುತ್ತಿದ್ದರೋ ಏನೊ? ಉಗುಳಿದ್ದು ಅವರ ಮೇಲೆಯೇ ಬಿದ್ದಂತೆ ತೋರುತ್ತದೆ.ಏಕೆಂದರೆ ತಮ್ಮ ಮೇಲೆ ಯಾರು ಉಗುಳಿರಬಹುದೆಂಬ ಚಿಕಿತ್ಸಕ ಬುದ್ಧಿಯಿಂದಲೇ ಅವರು ತಮ್ಮ ಅರಿವೆಗಳನ್ನು ನೋಡಿಕೊಳ್ಳುತ್ತನಿಂತಿದ್ದರು. ನಾನು ಮತ್ತೊಮ್ಮೆ ಉಗುಳಲು ಹೋದಾಗ ಈ ದೃಶ್ಯವನ್ನು ನೋಡಿದೆ.ನಾನು ಉಗುಳಿದ್ದು ಅವರ ಮೇಲೆಯೇ ಇರಬೇಕೆಂದು ಮನಗಂಡೆ.ನನ್ನ ಈ ಪಾಪಕಾರ್ಯಕ್ಕೆ ಈಗ ಅಂಜುತ್ತಿದ್ದೇನೆ! ಹಳಹಳಿಸುತ್ತಿದ್ದೇನೆ !! ಮಹಾತ್ಮರ ಮನಸ್ಸನ್ನು ಖಿನ್ನಗೊಳಿಸಿದ ಈ ನನ್ನ ದ್ರೋಹ ಸಣ್ಣದೆ ?ಈ ದ್ರೋಹದಿಂದ ನಾನು ಮೈತುಂಬ ಹುಳಬಿದ್ದು ಸತ್ತುಹೋಗುವದೇ ನಿಶ್ಚಯ.ಅದಕ್ಕಾಗಿ ಸಂಕಟಪಡುತ್ತಿದ್ದೇನೆ.

ದೂತಿ : ಎಷ್ಟು ಅಂಜೀದಿ ಬಿಡ ನಮ್ಮವ್ವ ! ಕಣ್ಣು ತಪ್ಪಿ ಉಗುಳೀದಿ ಅಂದ ಮ್ಯಾಲೆ ಇದ್ಯಾವ ದೊಡ್ಡ ಮಾತು.ಅವ ಯಾಕ ಸಿಟ್ಟಿಗೇಳಿತಾನ.ಒಂದ ವ್ಯಾಳೆ ಸಿಟ್ಟಿಗೆದ್ದರ ಮೂಗು ಹಿಡಿದು ಕಪಾಳಕ ಹೊಡಿತೀನಿ ಅವಗ್ಯಾಕ ಅಂಜತಿ ಸುಮ್ಮನಿರು. ಸುಮ್ಮನ ಹಳಹಳಿಸಬ್ಯಾಡ.

ರಂಭಾ :

ಸುಮ್ಮನ್ಹ್ಯಾಂಗ ಇರಬೇಕು ಹೇಳ ಜೀವ
ನನ್ನ ಕಡಿಯಿತು ಪಾಪವೆಂಬ ಹಾವ ॥

ಶಿವಶರಣರ ಸಿಟ್ಟು ಉರಿಜ್ವಾಲಿ
ಅಂಥ ಉರಿಯೊಳಗೆ ಬಿದ್ದೆನವ್ವ ಹೋಗಿ ಜೋಲಿ ॥
ಮಲಗಿದ ಹುಲಿಯ ಕೆಣಕಿದ ಪರಿ ಫಜೀತಿ
ಮಾಡಿಕೊಂಡೆನು ತೀರಿತವ್ವ ನನ್ನ ಸಂತಿ ॥

ಏನೆ, ನಮ್ಮ ನಿಮ್ಮಂಥವರ ಮಾತು ಬೇರೆ.ಅಂಥ ಮಹಾತ್ಮರ ಮನಸ್ಸನ್ನು ವಿಹ್ವಲಗೊಳಿಸಿದ ನಾನು ಪರಮಪಾತಕಿಯಲ್ಲವೆ ? ಮಲಗಿದ ಹುಲಿಯನ್ನು ಕೆಣಕಿ ಎಬ್ಬಿಸಿದವನ ಗತಿ ಏನಾಗಬಹುದು? ನನ್ನದೂ ಹಾಗೆಯೇ ಆಗಿದೆ.ಅದಕ್ಕಾಗಿ ಅಂಜಿದ್ದೇನೆ ನೋಡವ್ವ !

ದೂತಿ : ಹಗಲೆಲ್ಲಾ ಏನ ಹಚ್ಚೀರಿ ! ಕಬ್ಬಿಣ ಕಾಸಿದ ನೀರ ಕುಡಿಸಲೇನು ?ಅಂದರ ನಿನ್ನ ಅಂಜಿಕೆ ಹಾಳಾಗಿ ಹೋಗತೈತಿ.

ರಂಭಾ : ನೀನು ಬಲ್ಲಾಕಿ ಅಂತ ನಿನ್ನ ಮುಂದ ನನ್ನ ದುಃಖ ತೋಡಿಕೊಂಡೆ.ನೀನೇ ಹೀಗೆ ಮಾತಾಡಿದರೆ ನನಗಿನ್ಯಾರು ಗತಿ !

ದೂತಿ : ರಂಭಾ ನೀನು ಹೆದರಬ್ಯಾಡ, ಆ ತಿರುನೀಲಕಂಠ ಮಹಾತ್ಮರು ಶಾಂತ ಸ್ವಭಾವದವರೆಂದು ಕೇಳಿದ್ದೇನೆ. ಅಂಥ ಸತ್ಪುರುಷರು ತಿಳಿಯದೆ ಮಾಡಿದ ತಪ್ಪಿಗೆ ಸಿಟ್ಟಿಗೇಳಾಕ್ಕಿಲ್ಲ.

ರಂಭಾ : ಅವ್ವಾ ಅವರಿಗೆ ನನ್ನಿಂದ ಇಂಥದು ಆಗಬಾರದಾಗಿತ್ತು.ಅವರು ಸಹನ ಮಾಡಿಕೊಂಡಾರು ನಿಜ.ಆದರೆ ನನಗೆ ಸಮಾಧಾನ ಇಲ್ಲ.ಅದಕ್ಕೆ ಏನು ಮಾಡಬೇಕು?

ದೂತಿ : ಮಿಂಚಿ ಹೋದ ಮಾತಿಗೆ ಚಿಂತಿಸಿ ಫಲವೇನು ? ಆಗಿದ್ದಾಗಿ ಹೋಗೈತಿ.ಇನ್ನೇನು ಅವರ ಪಾದಕ್ಕೆ ಬಿದ್ದು, ಸ್ವಾಮಿ, ನನ್ನಿಂದ ತಿಳಿಯದೇ ದೊಡ್ಡ ತಪ್ಪಾಯಿತು.ತಾವು ಕ್ಷಮಿಸಬೇಕೆಂದು ಅವರ ಹತ್ರ ಹೋಗಿ ಬೇಡೊಕೊಳ್ಳೋಣ ನಡಿ.

ರಂಭಾ : ಹೌದವ್ವ ಹೌದು, ನೀನು ಹೇಳಿದಂತೆ ಮಾಡುವದೇ ಸರಿ. ಹೋಗಿ ಅವರ ಪಾದಕ್ಕೆ ಬಿದ್ದು ಬೇಡಿಕೊಂಡಾಗಲೇ ನನಗೆ ಸಮಾಧಾನವಾಗುತ್ತದೆ.ಅದಕ್ಕೆ ಬೇಗನೆ ಹೋಗೋಣ ನಡೆ.

ದೂತಿ : ನಡಿಯವ್ವ, ದೌಡ ಹೋಗೋಣ.

(ಹೋಗುವರು, ದೂತಿಯು ತಿರುನೀಲಕಂಠವನ್ನು ಕಂಡು)

ಮಹಾತ್ಮರೇ, ಮಹಾತ್ಮರೇ ಸ್ವಲ್ಪ ನಿಲ್ಲಿರಿ ನಿಲ್ಲಿರಿ.

ತಿರುನೀಲಕಂಠ : ತಾವಾರು ತಾಯಿ ?

ರಂಭಾ : (ಪಾದಕ್ಕೆ ಬಿದ್ದು)

ಪದ :

ಮಾಡಿದೆ ನಾನು ತಪ್ಪ ಹಿಡಬ್ಯಾಡ್ರಿ ನೀವು ಕೋಪ
ಮಾಡಿರಿ ಎನ್ನ ಮಾಪ ॥ಪಲ್ಲವಿ ॥

ನಿಮ್ಮನು ನೋಡದೆ, ನಿಮ್ಮ ಮೇಲೆ ಉಗುಳಿದೆ
ಅವಮಾನ ಮಾಡಿದೆ ಸ್ವಾಮಿ ನಿಮಗೆ ಇಂದೆ ॥

ಕೋಪ ಮಾಡಲು ನೀವು ತಾಳಲಾರೆವು ನಾವು
ಶಿರಬಾಗಿ ಬೇಡುವೆವು ಇದನು ಕ್ಷಮಿಸಿರಿ ತಾವು ॥

ಸ್ವಾಮಿ ನಾನು ನಿಮಗೆ ಶರಣು ಬಂದಿರುವೆ
ಪಾಪಿಯಾದೆನ್ನನು ನೀವು ಕರುಣಿಸಿರಿನ್ನು ॥

ಮಹಾತ್ಮರೆ, ನಾನು ನಿಮ್ಮನ್ನು ನೋಡದೆ ನಿಮ್ಮ ಮೇಲೆ ಉಗುಳಿ ಮಹಾ ಪಾಪಕ್ಕೆ ಗುರಿಯಾದೆ.ಕೃಪಾಸಾಗರರಾದ ತಾವು ನನ್ನನ್ನು ಕ್ಷಮಿಸಬೇಕೆಂದು ತಮ್ಮ ಪಾದಕ್ಕೆ ಮೊರೆಹೊಕ್ಕಿದ್ದೇನೆ.ನನ್ನನ್ನು ಪಾಪಕೂಪದಿಂದ ಪಾರು ಮಾಡಿರಿ. (ಎಂದು ಪಾದಕ್ಕೆರಗುವಳು)

ತಿರುನೀಲಕಂಠ : ತಂಗಿ ಏಳು ನನಗೇಕೆ ಇಷ್ಟು ಹೇಳಿಕೊಳ್ಳುವಿ? ನಾನು ಮಾಡುವದಾದರೂ ಏನು ? ಮಾನವಜನ್ಮಕ್ಕೆ ಬಂದ ಮೇಲೆ ಎಚ್ಚರದಿಂದ ನಡೆಯಬೇಕು.ತನ್ನಂತೆಯೇ ಇನ್ನೊಬ್ಬರೆಂದು ತಿಳಿಯಬೇಕು.ಸೊಕ್ಕಿನಿಂದ ಏನೇನೊ ಮಾಡಿ ನಂತರ ತಪ್ಪಾಯಿತೆನ್ನುವದು ನಿನಗೆ ಸರಿಯಾಗಿ ಕಾಣುವುದೇ ? ಕೆಸರೊಳಗೇ ಹೋಗದಿದ್ದರೆ ಕಾಲಿಗೆ ಕೆಸರೆಲ್ಲಿ ಹತ್ತುವದು ? ಬೇಕೆಂದೇ ಕೆಸರೊಳಗೆ ಹೊಕ್ಕು ಹೊರಬಿದ್ದ ಮೇಲೆ ನೀರು ತಂದು ಕಾಲು ತೊಳೆದುಕೊಳ್ಳುವಂಥ ಪ್ರಸಂಗ ತಂದುಕೊಳ್ಳುವದು ಹುಚ್ಚುತನವಲ್ಲವೆ ? ಹೋಗು ನಿನ್ನ ಮೇಲೆ ನನ್ನದು ಎಳ್ಳಷ್ಟೂ ಸಿಟ್ಟಿಲ್ಲ.ಸಮಾಧಾನದಿಂದ ಇರು.

ರಂಭಾ : ಸ್ವಾಮಿ, ತಾವೇ ಹೀಗೆಂದರೆ ನನ್ನ ಗತಿಯೇನು ?

ಪದ :

ನಂಬಿದೆ ನಿಮ್ಮನು, ಹಂಬಲಿಸುವೆ ನಾನು
ಪಾದಕೆರಗಿರುವೆನು, ಭಕ್ತಳ ಕರುಣಿಪುದಿನ್ನು ॥

ಹೀನರ ಸಂಗತಿಯಿಂದಲಿ ಈ ಗತಿ
ಆಗುವದೆಂಬ ಮತಿ ಈಗ ಎನಗಾಯ್ತು ಖಾತ್ರಿ ॥

ಮಹಾತ್ಮರೆ, ಹೀಗೆ ನನ್ನನ್ನು ಉದಾಸೀನ ಮಾಡಿ ಒಕ್ಕೊಟ್ಟರೆ ನನ್ನ ಗತಿಯೇನು ?ವೇಶ್ಯೆಯರೆಂದರೆ ನಾವು ಮೊದಲೆ ಪಾಪಿಗಳು.ಈಗ ಮಹಾ ಶಿವಶರಣರಾದ ನಿಮ್ಮ ಮೇಲೆ ಉಗುಳಿ ಭಯಂಕರವಾದ ಪಾಪ ಮಾಡಿದ್ದೇನೆ.ಅದಕ್ಕಾಗಿ ಮಿತಿಮೀರಿದ ಅಂಜಿಕೆ ಹುಟ್ಟಿ ನಿಮ್ಮ ಪಾದಕ್ಕೆ ಬಂದು ಬಿದ್ದಿದ್ದೇನೆ.ನನ್ನನ್ನು ಕೊಲ್ಲಿರಿ ಇಲ್ಲವೆ ಉದ್ಧಾರ ಮಾಡಿರಿ.

ತಿರುನೀಲಕಂಠ : ತಂಗಿ, ಇದೆಂಥ ಮಾತು ! ಕೊಲ್ಲಿರಿ ಇಲ್ಲವೆ ಉದ್ಧಾರ ಮಾಡಿರಿ !! ಉದ್ಧಾರ ಮಾಡಿರಿ ಎನ್ನಲು ನಾನಾರು ?ಹೇಳುತ್ತೇನೆ ಕೇಳು.

ಪದ :

ನಿನ್ನಲ್ಲಿ ಇರುವದು, ಉದ್ಧಾರ ಆಗುವದು ॥ಪಲ್ಲವಿ ॥

ಕೆಟ್ಟ ಹಾದಿ ಹಿಡಿದರೆ ಕಲ್ಲು ಮುಳ್ಳು
ರಾಜಮಾರ್ಗ ಹಿಡಿದರೆ ಇಲ್ಲ ಗೋಳು
ಇದರೊಳ್ಯಾವದು ಹಿತ ನಿನಗ್ಹೇಳು ॥

ತಿಳಿದು ನೋಡು ಕರುಣದೊಳು ನೀನು
ಕಣ್ಣಿಗೆ ಕಾಣುವದಕ್ಕೆ ಕನ್ನಡಿಯಾತಕೆ
ಬಿಡು ನಿನ್ನ ಚಿಂತೆಯನ್ನು ತಾಳು ಧೈರ್ಯವನು ॥

ರಂಭಾ, ನೀನು ನಿನ್ನ ಹೇಯ ಗುಣಗಳನ್ನೆಲ್ಲ ಬಿಟ್ಟು ಶಿವಶರಣರ ಸೇವೆ ಮಾಡಿ ಅವರು ಬೋಧಿಸಿದ ಮಾರ್ಗದಂತೆ ನಡೆದರೆ ಪರಮಾತ್ಮನು ನಿನಗೊಲಿದು ಉದ್ಧಾರ ಮಾಡುವನು.ಇದು ನಿಶ್ಚಯ. ಒಳ್ಳೆಯದು – ಕೆಟ್ಟದ್ದೆಲ್ಲ ನಿನ್ನ ನಡೆನುಡಿಯನ್ನೇ ಅವಲಂಬಿಸಿದೆ.ನೀನು ನನ್ನ ಮೇಲೆ ಉಗುಳಿದ್ದಕ್ಕೆ ನಾನು ಸಿಟ್ಟಿಗೆದ್ದಿರುವೆನೆಂದು ತಿಳಿದೆಯಾ ? ಎಳ್ಳಷ್ಟೂ ಇಲ್ಲ.ತಿಳಿಯಿತೆ ?

ರಂಭಾ : ಸ್ವಾಮಿ, ದಯಾಳುಗಳಾದ ನೀವು ಸಿಟ್ಟು ಹಿಡಿದಿಲ್ಲ.ಆದರೆ ನನ್ನ ಮನಸ್ಸಿಗೆ ಸಮಾಧಾನವೇ ಇಲ್ಲ.ನಾನು ಮಾಡಿದ ಅಪರಾಧಕ್ಕಾಗಿ ಬಹಳ ಹಳಹಳಿಯಾಗಿದೆ ಏನು ಮಾಡಲಿ?

ತಿರುನೀಲಕಂಠ : ರಂಭಾ, ಸಮ್ಮನೆ ಹಳಹಳಿಸಿಕೊಂಡರೆ ಏನಾಗುವದು ?ಅದಕ್ಕೇನು ಮಾಡಬೇಕು?

ರಂಭಾ : ಚಿತ್ತವಿಟ್ಟು ಲಾಲಿಸಿರಿ.

ಪದ :

ನಿಮ್ಮ ಸೇವೆಯ ಮಾಡುವೆ ನಾನು
ಸ್ವಾಮಿ ಪೂಜಿಸಿ ನಿಮ್ಮ ಪಾದಯುಗಳವನು ॥ಪಲ್ಲವಿ ॥

ಚಿಂತೆಯ ಬಿಡುವೆನು ನಿಮ್ಮ ಸೇವೆ ಮಾಡಿ
ಮಹಾಪಾಪಿ ಜಗದೊಳಗೆ ಕಡಮೋಡಿ
ಕೈಕೊಳ್ಳಿರಿ ಕರುಣದೊಳು ನೋಡಿ
ಎನ್ನ ಮನೆಗೆ ಬರ‌್ರಿ ಮನಶುದ್ಧಮಾಡಿ ॥

ಗಂಧ ಕಸ್ತೂರಿ ಎಣ್ಣೆ ಹಚ್ಚುವೆನು
ಬಿಸಿನೀರು ಹಣಿಸಿ ನಿಮ್ಮನ್ನೆರೆಯುವೆನು
ಪೀತಾಂಬರವನು, ಜರದ ಅಂಗಿಯನು
ಉಡಿಸಿ ತೊಡಿಸಿ ನಿಮಗೆ ಇಂದು ನಾನು ॥

ಶಾವಿಗೆ ಪಾಯಸ ಮಾಡಿಸುವೆನು
ನಿಮಗೆ ಪ್ರೀತಿಯಿಂದಲಿ ಉಣಬಡಿಸುವೆನು
ಎನ್ನ ತನುಮನವನು ಮೇಣೆಲ್ಲ ಧನವನು
ನಿಮಗರ್ಪಿಸಿ ಭಕ್ತಳಾಗುವೆನು ॥

ಮಹಾತ್ಮರೆ, ತಮಗೆ ಗಂಧ ಕಸ್ತೂರಿ ಎಣ್ಣೆ ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡಿಸಿ, ಜರತಾರಿ ಅಂಗಿ ಸೆಲ್ಲೆ ಮುಂಡಾಸ ಹೊಲಿಸುವೆ. ಹೊದ್ದುಕೊಳ್ಳಲು ಶಾಲು ಸಕಲಾತಿಗಳನ್ನು ತರಸಿ ಕೊಡುವೆ.ನಿಮಗೆ ಶಾವಿಗೆ ಸಕ್ಕರೆ ಹಾಲು ತುಪ್ಪವನ್ನು ಉಣಿಸಿಕಳಿಸಿಕೊಡುತ್ತೇನೆ.ಆಗ ಮಾತ್ರ ನನಗೆ ಸಮಾಧಾನವಾಗುವದು.ತಾನು ಸಂತೋಷದಿಂದ ಅನುಮತಿ ಕೊಡಬೇಕೆಂದು ಶಿರಸಾವಂದಿಸಿ ಪ್ರಾರ್ಥಿಸುವೆ ಪ್ರಭೋ !

ತಿರುನೀಲಕಂಠ : ಹೇ ತಂಗಿ, ನೀನು ಪಾತರದವಳು.ನಿನ್ನ ಮನೆಗೆ ಬಂದು ನಾನು ಉಪಚಾರಕ್ಕೊಳಗಾದರೆ ನಮ್ಮ ಶರಣರು ಮೆಚ್ಚರು.ಅದಕ್ಕಾಗಿ, ನಿನ್ನ ಸೇವೆ ನಮಗೆ ಬೇಕಾಗಿಲ್ಲ.

ರಂಭಾ : ಸ್ವಾಮಿ, ನೀವೇ ಹೀಗೆಂದ ಮೇಲೆ ನನ್ನ ಗತಿಯೇನು ?ದಯಾಮಯರಾದ ನೀವು ನನ್ನನ್ನು ಹೀಗೆ ಅಲ್ಲಗಳೆಯಬಾರದು.ದೀನರನ್ನು ಕಾಪಾಡುವದು ಸತ್ಪುರುಷರ ಕಾರ್ಯವಲ್ಲವೆ ?ಅಂತಃಕರಣಪೂರ್ವಕವಾಗಿ ನಿಮ್ಮ ಪಾದವೇ ಗತಿಯೆಂದು ನೆರೆನಂಬಿದ ನನ್ನನ್ನು ಉದ್ಧಾರ ಮಾಡಿರಿ ಇದೊ ಮೊರೆಹೊಕ್ಕಿದ್ದೇನೆ. (ಕಾಲಿಗೆರಗುವಳು)

ತಿರುನೀಲಕಂಠ : ರಂಭಾ, ನಿನ್ನ ಮೇಲೆ ಅಂತಃಕರಣ ತೋರುವದು ಒತ್ತಟ್ಟಿಗಿರಲಿ, ಇಷ್ಟೊತ್ತು ನೀನು ನನ್ನೊಡನೆ ಮಾಡಾಡಿದುದನ್ನು ನಮ್ಮ ಶರಣರು ಕೇಳಿದರೆ ನನಗೆ ಶಾಪಕೊಟ್ಟಾರು.ಅದಕ್ಕಾಗಿ :

ಪದ :

ಯಾತರ ನಿನ್ನ ಮಾತು, ಭೀತಿಯು ಬಂದಿತು
ಸುಧೆಯು ಹುಟ್ಟುವದೆಂದು ಬಹು ಬಯಸಿ

ಕ್ಷೀರಶರಧಿಯ ಸುರರೆಲ್ಲ ಮಥಿಸಿ
ಕಾಲಕೂಟ ವಿಷಜ್ವಾಲೆಯಿಂದ ಘಾಸಿ

ಕಸಿವಿಸಿ ಹೊಂದಿದ ಪರಿ ನಾನು
ಅಂಥ ಘನ ಪಾಪವನು
ಹೊಂದುವದೇ ದಿಟವಚನ
ಬಿಡು ನಿನ್ನ ಛಲವನು ॥

ಏನೆ, ನಾನು ನಿನ್ನೊಡನೆ ಇಷ್ಟು ಸಹ ಮಾತಾಡಕೂಡದು.ನಿನ್ನಿಚ್ಛೆಯಂತೆ ನಾನು ನಡೆಯುವೆನೆಂದು ತಿಳಿದಿರುವೆಯಾ? ಇದು ಎಂದಿಗೂ ಸಾಧ್ಯವಿಲ್ಲ.ಸುಮ್ಮನೆ ನನ್ನ ಗೂಡವೆಯನ್ನು ಬಿಟ್ಟು ಮನೆಗೆ ತೆರಳು.

ರಂಭಾ : ಪಾತರದವರೆಂದರೆ ಪಾಪಿಷ್ಠರು ! ಅವರೊಡನೆ ಮಾತನಾಡುವುದೂ ಮಹಾಪಾಪವಲ್ಲವೆ ?ಪಾತರದವರ ಕುಲದಲ್ಲಿ ಹುಟ್ಟಿದವರು ಉದ್ಧಾರವಾಗಲಾರರೆ?

ತಿರುನೀಲಕಂಠ : ನಿಮ್ಮ ಉದ್ಧಾರ ಒತ್ತಟ್ಟಿಗಿರಲಿ ನಿಮ್ಮ ಬೆನ್ನು ಹತ್ತಿ ತಿರುಗುವ ಮೂರ್ಖರಿಗೂ ಸದ್ಗತಿ ಇಲ್ಲವೆಂದು ತಿಳಿ.

ರಂಭಾ : ಮಹಾತ್ಮರೆ ನೀವೆ ಹೀಗೆಂದರೆ ಹೇಗೆ? ಸ್ವರ್ಗದಲ್ಲಿರುವ ಮೇನಕೆ, ರಂಭಾ, ಊರ್ವಶಿ ಮೊದಲಾದ ಅಪ್ಸರೆಯರೆಲ್ಲರೂ ನಮ್ಮಂತೆ ಸುಖಭೋಗ ಕೊಡುವವರೇ ಅಲ್ಲವೆ? ಅಂದಮೇಲೆ ಅವರಾದರೂ ಪಾಪಿಗಳೇ ಆದಂತಾಯಿತು. ಸ್ವರ್ಗವೆಂದರೆ ಪುಣ್ಯಲೋಕ. ಅಂದಮೇಲೆ ಅಲ್ಲಿ ಪಾಪಿಗಳಿಗೆ ಇರಲು ಆಶ್ರಯವೇಕೆ ದೊರಕಬೇಕು?ದೇವೇಂದ್ರನ ಸಭೆಯಲ್ಲಿ ಅವರೇ ನಾಯಕಿಯರು, ನರ್ತಕಿಯರು ! ಅವರೂ ನಮ್ಮಂತೆ ಪಾಪಿಗಳಾದ ಮೇಲೆ ದೇವೇಂದ್ರನು ಅವರಿಗೆ ಅಲ್ಲಿ ಆಶ್ರಯ ಕೊಡಬಾರದಿತ್ತು.ಪುಣ್ಯವಂತನಾದ ದೇವೇಂದ್ರನು ಬ್ರಹ್ಮನಿಂದ ಉಪದೇಶ ಪಡೆದುಕೊಂಡು ಮಹಾದಾನಿ ಅನಿಸಿದವನು. ಅಂಥವನು ವೇಶ್ಯೆಯರೊಡನೆ ಸರಸವಾಡುತ್ತಿರುವಾಗ ಅನ್ಯರ ಪಾಡೇನು?

ತಿರುನೀಲಕಂಠ : ಏನೆ, ದೇವೇಂದ್ರನು ಯಾವ ಸಂಭಾವಿತ ? ಕೇಳು.

ಪದ :

ಗೌತಮ ಮುನಿ ಸತಿ ಭೂಮಿಯ ಮೇಲೆ ಪತಿವ್ರತಿ
ಅಂಥ ಸಾಧ್ವಿ ನೋಡಲಿಲ್ಲ ಅವನ
ಮೋಸ ಮಾಡಿ ಅವಳನ್ನು ಕೆಡಿಸಿದನು
ಕಡೆಗೆ ಋಷಿಶಾಪದಿಂದ ಬಳಲಿದನು ಸೋಸಿದನು
ನಾಚಿಕೆಯಿಲ್ಲದೆ ಅಂದು ಕೋಣೆಯ ಸೇರಿದ
ಅವನೆಂಥ ಮತಿವಂತ, ಅವನಿಗಿಲ್ಲ ಕಿಮ್ಮತ್ತ ॥

ಏನೆ ದೇವೇಂದ್ರನೇನು ಮಹಾಸಂಪನ್ನ ? ಅವನೊಬ್ಬ ಮಹಾಸ್ತ್ರೀಲೋಲುಪ ಅವನು ನಿಮ್ಮಂಥ. ಸ್ತ್ರೀಯರೊಡನೆ ಸರಸವಾಡಿದ್ದಲ್ಲದೆ ಮಹಾಪತಿವ್ರತೆಯಾದ ಅಹಲ್ಯಾದೇವಿಯ ಮೇಲೆ ಮನಸ್ಸು ಮಾಡಿದ.ಅವಳ ಪತಿಯಾದ ಗೌತಮನ ಈ ವಿಷಯವನ್ನರಿತು ಮಹಾಕೋಪದಿಂದ ಶಾಪಕೊಟ್ಟನು.ಆ ಶಾಪದ ಫಲವಾಗಿ ಅವನ ಮೈತುಂಬ ಯೋನಿ ಮೂಡಿದವು.ಅಂಥ ಲಜ್ಜಾಹೀನನ ಬಡಿವಾರವನ್ನು ಏನು ಹೇಳುತ್ತಿ ಬಿಡು.

ರಂಭಾ : ನಿಮ್ಮ ಮಾತಿನಿಂದ ದೇವೇಂದ್ರನು ಫಟಿಂಗ ಅಂದಾಂತಾಯಿತು.ಆದರೆ ನಿಮ್ಮ ಶಿವನು ಅದೆಂಥ ಸಂಭಾವಿತ ?

ತಿರುನೀಲಕಂಠ : ಅವನು ಸಂಭಾವಿತ ಹೌದು. ಅವನು ಜಗದ್ಗುರು !

ರಂಭಾ : ಜಗದ್ಗುರುವಾದ ಆ ಪರಮಾತ್ಮನು ತನ್ನ ಮಾತಿನಂತೆ ಏಕೆ ನಡೆಯಲಿಲ್ಲ ?

ತಿರುನೀಲಕಂಠ : ಏನು ? ಪರಮಾತ್ಮನು ರೀತಿ ತಪ್ಪಿ ನಡೆದಿರುವನೆ ?

ರಂಭಾ : ಹೌದು.

ತಿರುನೀಲಕಂಠ : ಜಗದ್ಗುರುವಿನಲ್ಲಿ ತಪ್ಪು ಹೊರಡುವದೆ ?

ರಂಭಾ : ಆತನು ತಪ್ಪು ಮಾಡಿಯೇ ಇಲ್ಲವೆ ?

ತಿರುನೀಲಕಂಠ : ಮಾಡಿಲ್ಲ, ಎಂದೂ ಮಾಡಿಲ್ಲ.

ರಂಭಾ :

ಪದ :

ಮಾಡದಿದ್ದರೆ ಶಂಭವು ತಾನು ಮಹಾನಂದೆ
ಎನ್ನುವಂಥ ವೇಶ್ಯೆಯ ಮನೆಗೆ ಯಾಕೆ ಹೋಗಿದ್ದ ತಾನು
ಜಗದ್ಗುರುವಾದ ಅವಗೆ ತರವೇನು ?
ಮೂರು ದಿವಸ ರಾತ್ರಿ ಇದ್ದು ದಿನಂಪ್ರತಿ
ಆಕೆಯೊಳು ಭೋಗಾಸಕ್ತಿ ಮಾಡಿ ಆಗಿದ್ದ ಅಲ್ಲಿ ತೃಪ್ತಿ
ಶಿವನೇ ಹೀಗೆ ಸದ್ಧರ್ಮವ
ಮೀರಿ ನಡೆದರೆ ಈ ಮಾನವ
ಒಳ್ಳೇದಾರಿ ಹಿಡಿಯುವನೆ ಇದಕೇನ
ಹೇಳುವಿರಿ ಹೇಳಿರಿ ಎಲ್ಲ ಬಗೆಯನ್ನು
ಸರಿಯಾಗಿ ಇದನ್ನು
ವಿಸ್ತರಿಸಿ ಪೇಳಿರಿನ್ನು, ಪಾಪಿಯಾದಾಕೆಯನ್ನು
ಶಿವ ಹ್ಯಾಗೆ ಮೋಹಿಸಿದನು ತಾನು

ಈ ಮಾತಿನಿಂದ ನಿಮಗೆ ಸಿಟ್ಟು ಬರಬಹುದು – ಚಿಂತೆಯಿಲ್ಲ. ಹೀಗೇಕೆ ಆ ಶೂಲಿ ಮಾಡಿದ ? ಇದರಲ್ಲಿ ಏನು ಸ್ವಾರಸ್ಯವಿದೆ? ಹೇಳ್ರಿ.ಮಹಾನಂದೆ ಎಂಬ ವೇಶ್ಯೆಯ ಮನೆಗೆ ಯಾಕೆ ಹೋಗಿದ್ದ ?

ತಿರುನೀಲಕಂಠ : ಏನೆ, ಪರಮಾತ್ಮನು ವೇಶ್ಯಾಸ್ತ್ರೀಯಾದ ಮಹಾನಂದೆಯ ಹತ್ತಿರ ವಿಲಾಸಕ್ಕೆ ಹೋಗಿದ್ದನೆಂದು ತಿಳಿದಿರುವೆಯಾ ? ಇಲ್ಲ.ಅವಳ ಸತ್ವಪರೀಕ್ಷೆ ಮಾಡುವದಕ್ಕಾಗಿ ಹೋಗಿದ್ದ.

ರಂಭಾ : ಪಾತರದವರು ಪಾಪಿಷ್ಟರಲ್ಲವೆ ? ಅಂದ ಮೇಲೆ ಅವಳ ಹತ್ತಿರ ಸತ್ಯವೆಲ್ಲಿಂದ ಬರಬೇಕು?

ತಿರುನೀಲಕಂಠ : ತಾಯಿ, ನೀನು ತಪ್ಪು ತಿಳಿದುಕೊಂಡಿರುವಿ, ಮಹಾನಂದೆಯೆಂಬ ಪಾತರದವಳು ನಿಜವಾಗಿಯೂ ದೊಡ್ಡ ಪತಿವ್ರತೆ.ಹ್ಯಾಗೆಂದರೆ ತನ್ನ ಹತ್ತಿರ ಯಾರಾದರೂ ಬಂದು, ಎಷ್ಟು ದಿವಸ ಇದ್ದರೂ ಅಷ್ಟು ದಿವಸಗಳವರೆಗೆ ಅವರನ್ನು ತನ್ನ ಪತಿಯೆಂದು ಭಾವಿಸಿ ಅವರ ಸೇವೆ ಮಾಡುತ್ತಿದ್ದಳು.ಇದು ಅವಳ ವ್ರತ.ಈ ವ್ರತ ಪರೀಕ್ಷೆ ಮಾಡಿವದಕ್ಕಾಗಿ ಪರಮಾತ್ಮನು ಆಕೆಯ ಬಳಿಗೆ ಬಂದು, ತನ್ನ ಇಷ್ಟಲಿಂಗವನ್ನು ಆಕೆಯ ಕೈಯಲ್ಲಿ ಕೊಟ್ಟು ತಾನು ಹೋಗುವವರೆಗೆ ಅದನ್ನು ಜೋಪಾನ ಮಾಡೆಂದು ಹೇಳಿ.ಆಕೆಯ ಮನೆಯಲ್ಲಿಮೂರು ದಿನ ವಸ್ತಿ ಮಾಡಿದ.ನಾಲ್ಕನೆಯ ದಿವಸ ರಾತ್ರಿ ಅವಳ ಮನೆಗೆಒಮ್ಮಿಂದೊಮ್ಮೆಲೆ ಬೆಂಕಿ ಬೀಳುವಂತೆ ನೋಡಿಕೊಂಡ.ಆಗ ಅವಳು ಬೆರಗಾಗಿಎದ್ದು ನೋಡುವಷ್ಟರಲ್ಲಿ ಮನೆಯೆಲ್ಲಾ ಸುಟ್ಟು ಬೂದಿಯಾಗಿತ್ತು.ಆಗಪರಮಾತ್ಮನು ತಾನು ಕೊಟ್ಟ ಲಿಂಗವನ್ನು ತಿರುಗಿಕೊಡು ಎಂದು ಕೇಳಿದನು. ಆಗ ಆಕೆಯ ಅಂಜಿ ಮನೆಯಲ್ಲಿಟ್ಟ ಲಿಂಗ ಸುಟ್ಟು ಹೋಯಿತೆಂದು ಹೇಳಿದಳು.ಆಗ ಪರಮಾತ್ಮನು ಲಿಂಗ ಹೋದಮೇಲೆ ಪ್ರಾಣವಿಡಲಾಗದೆಂದುತನ್ನ ವ್ರತವನ್ನು ತಿಳಿಸಿ, ಮನೆಸುಟ್ಟ ಬೆಂಕಿಯಲ್ಲಿ ಹಾರಿಕೊಂಡ.ಆಗ ಆಪತಿವ್ರತೆ ಮಹಾನಂದೆಯು ಅದನ್ನು ಕಂಡು ತನ್ನ ಗಂಡನು ಸತ್ತಮೇಲೆ ತಾನುಪ್ರಾಣ ಇಡುವದು ಉಚಿತವಲ್ಲೆಂದು ಅದೇ ಬೆಂಕಿಯೊಳಗೆ ಹಾರಿಕೊಂಡಳು. ಆಗ ಪರಮಾತ್ಮನು ಅವಳ ಪತಿಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಕೈಲಾಸಕ್ಕೆ ಕರೆದುಕೊಂಡು ಹೋದ.ಅವಳ ಭಕ್ತಿ ಪರೀಕ್ಷೆ ಮಾಡಲೆಂದೇ ಈ ಲೀಲೆ ಆಡಿದ.ಅವನೇನು ಜಾರನಲ್ಲ : ತಿಳಿಯಿತೆ ?ಮಹಾದೇವನು ಭಕ್ತರ ದೃಢತೆಯನ್ನುಪರೀಕ್ಷೆ ಮಾಡುವ ಸಲುವಾಗಿ ಇಂತಹ ಲೀಲೆಗಳನ್ನು ಮಾಡಿದ್ದಾನೆ.ಅವರಕೀರ್ತಿ ಜಗದಲ್ಲಿ ಹಬ್ಬುವಂತೆ ನೋಡಿಕೊಂಡಿದ್ದಾನೆ.ಆತನು ಏನು ಮಾಡಿದರೂ ನಿರಂಜನನಾಗಿಯೇ ಇರುವನು.

ರಂಭಾ : ಸ್ವಾಮಿ, ಪರಮಾತ್ಮನು ಇದರಂತೆಯೆ ವೀರಸಂಗಮೆ ಎಂಬ ವೇಶ್ಯೆಯಳ ಮನೆಗೆ ಹೋಗಿದ್ದನಂತೆ, ಅವಳಲ್ಲಿ ಯಾವ ವ್ರತವಿತ್ತು.ಅದನ್ನಷ್ಟು ತಿಳಿಸುವಿರಾ ?

ತಿರುನೀಲಕಂಠ :

ಪದ :

ವೀರಸಂಗಮೆಯೆಂಬ ವೇಶ್ಯೆಯು ದಿನಂಪ್ರತಿ
ಬಹುಜಂಗಮ ದಾಸೋಹವ ನಡೆಸಿದಳು ಮೊದಲಿಂದ
ಆಕೆಯ ನಿಷ್ಠೆ ಜಂಗಮರಲ್ಲಿ ಅಗಾಧ
ಆಗಿತ್ತು ಅದರಿಂದ ; ಅವಳ ಆ ನಿಷ್ಠೆಯಿಂದ
ಪರೀಕ್ಷಿಸಬೇಕೆಂದ ಶಿವನಾಗ ಅವಳ ಹತ್ತಿರ ಹೋದ ॥

ವೀರಸಂಗಮೆ ಇಂದ್ರಿಯ ಸೌಖ್ಯ ಆಯಾಯ ಲಿಂಗಕ್ಕೆ ಅರ್ಪಿಸಿ
ಆರು ಲಿಂಗಗಳನ್ನು ಸದಾತೃಪ್ತಿಗೊಳಿಸಿ
ಅದರಿಂದ ತಾನು ಆಗುತ್ತಿರ್ದಳು ಬಹು ಖುಷಿ
ಆಗಿದ್ದಳು ನಿರ್ದೊಷಿ, ನಿಜವಾದ ಸನ್ಯಾಸಿ
ಅದನ್ನು ಶಿವ ಪರೀಕ್ಷಿಸಿ, ನಿಂತ ನಿಜರೂಪ ತೋರಿಸಿ ॥

ಆಕೆಯನ್ನು ತನ್ನ ಸನ್ನಿಧಿಗೆ ಕರೆದುಕೊಂಡು ಹೋದ
ಎಂಥ ಸತ್ಯಶೀಲನಿರುವನು ನೋಡಿ ಪರಶಿವನು
ಆಕೆಗೂ ಸಹ ಸಾಲೋಕ್ಯವಿತ್ತನು
ಅವರಂಥ ಸತ್ವವನು ನೀನು ಕಾದಿರುವೆಯೇನು ?
ಹಾಗಿದ್ದರೆ ನಿನ್ನನು ನಾನೀಗ ಮನ್ನಿಸುವೆನು ॥

ಏನೆ, ವೀರಸಂಗಮೆ ಎಂಬ ವೇಶ್ಯೆ ಜಂಗಮ ದಾಸೋಹವನ್ನು ಮನಮುಟ್ಟಿ ಮಾಡುತ್ತಿದ್ದಳು. ತನಗೆ ಬಂದ ಹಣವನ್ನೆಲ್ಲ ನೂರಾರು ಜಂಗಮರಿಗೆ ಉಣಬಡಿಸಿ ಅವರು ಬೇಡಿದುದನ್ನು ಕೊಟ್ಟು ಸಂತೃಪ್ತಿಗೊಳಿಸುತ್ತಿದ್ದಳು.ತನ್ನ ಇಂದ್ರಿಯ ಸುಖವನ್ನೆಲ್ಲ ಷಡ್ ಲಿಂಗಗಳಿಗೆ ಸಮರ್ಪಿಸುತ್ತಿದ್ದಳು.ಮಹಾಲಿಂಗ ಸ್ವರೂಪದಲ್ಲಿಯೇ ಸದಾ ತನ್ಮಯಗಳಾಗಿರುತ್ತಿದ್ದಳು. ಹೀಗೆ ವ್ರತದಲ್ಲಿರುವ ವೀರಸಂಗಮೆಯ ಪರೀಕ್ಷೆಗಾಗಿ ಸಾಕ್ಷಾತ್ ಶಿವನೇ ವಿಟಜಂಗಮನಾಗಿ ಅವಳ ಬಳಿಗೆ ಬಂದ.ಆತ ತನ್ನ ಲಿಂಗಕ್ಕೆ ಅಂಗವಸ್ತ್ರವನ್ನು ಕೊಡು ಎಂದು ಕೇಳಲು ಅವಳು ತನ್ನನ್ನೇ ಅವನಿಗೆ ಸಮರ್ಪಿಸಿದಳು.ಅವಳ ಈ ಕಡುನಿಷ್ಠೆಯನ್ನು ಕಂಡು ಮಹಾದೇವನು ಪ್ರತ್ಯಕ್ಷನಾಗಿ ಸಾಲೋಕ್ಯ ಪದವಿಯನ್ನಿತ್ತನು.ಹೀಗೆ ಆ ಭಗವಂತನು ಹೀನವೃತ್ತಿಯಲ್ಲಿದ್ದರೂ ಭಕ್ತರಾಗಿದ್ದ ಮಹಾನಂದೆ, ವೀರ ಸಂಗಮೆಯಂಥವರ ಕೀರ್ತಿಯನ್ನು ಮೆರೆಯುವದಕ್ಕಾಗಿ ಪ್ರಸಂಗಾನುಸಾರ ಮರ್ತ್ಯಕ್ಕೆ ಬಂದು ಲೀಲೆಗೈಯುವನು. ತಿಳಿಯಿತೆ ?