ಆಗುಂಬೆ

ತಾಲ್ಲೂಕು: ತೀರ್ಥಹಳ್ಳಿ
ತಾಲ್ಲೂಕು ಕೇಂದ್ರದಿಂದ: ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೯೦ ಕಿ.ಮೀ

ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಹೆಸರಾದ ಆಗುಂಬೆಯ ಮಳೆಯನ್ನು ನೆನೆದರೆ ಮೈ ಜುಮ್ಮೆನುತ್ತದೆ. ಅಂತೆಯೇ ಅಲ್ಲಿನ ಸುಂದರ ಸೂರ್ಯಾಸ್ತ ಕೂಡ ಅನನ್ಯ ಅನುಭವ ನೀಡುವುದು. ಅದನ್ನು ನೋಡಿದಷ್ಟೂ ನೋಡಬೇಕೆನಿಸುವುದು. ನವೆಂಬರ್ ನಿಂದ ಜನವರಿವರೆಗೆ ಸೂರ್ಯಾಸ್ತಮಾನ ಸವಿಯಲು ಸಕಾಲ. ಸಮುದ್ರ ಮಟ್ಟದಿಂದ ೮೨೬ ಮೀಟರ್ ಎತ್ತರವಿದ್ದು ವಾರ್ಷಿಕ ೬೫೦ ಮಿ.ಮೀ ಮಳೆ ಬೀಳುತ್ತದೆ. ಆಗುಂಬೆಯ ಘಾಟಿ ರಸ್ತೆಯು ಪ್ರಯಾಣಿಕರಿಗೆ ಮೈ ಜುಮ್ಮೆನಿಸುವ ಅನುಭವವನ್ನು ನೀಡುತ್ತದೆ. ಆಗುಂಬೆಯ ಗೋಪಾಲಕೃಷ್ಣ ಸ್ವಾಮಿ ದೇವಾಲಯ, ಸನಿಹದ ಒನಕೆ ಅಬ್ಬಿ ಜಲಪಾತ, ಜೋಗಿಗುಂಡಿ, ಇವೆಲ್ಲ ಪ್ರಕೃತಿಯ ಅನುಪಮ ಸುಂದರ ತಾಣಗಳು. ಒಂದು ದಿನದ ಪ್ರವಾಸಕ್ಕೆ ಆಗುಂಬೆ ಹೇಳಿ ಮಾಡಿದ ಸ್ಥಳ. ಗದ್ದಲ ರಹಿತ ಪ್ರಕೃತಿಯ ಒಡನಾಟ ಚಿತ್ತಕ್ಕೆ ಮುದ ನೀಡುವುದರ ಜೊತೆಗೆ ನಾಳಿನ ಬದುಕಿನೊಂದಿಗೆ ಹೋರಾಡಲು ಹೊಸ ಚೈತನ್ಯವನ್ನು ನೀಡುತ್ತದೆ.

ಸಹ್ಯಾದ್ರಿ ಗಿರಿ ಶೃಂಗಗಳಿಂದ ಹಚ್ಚಹಸುರಿನಿಂದ ನಿತ್ಯ ಹರಿದ್ವರ್ಣ ಕಾನನದಿಂದ ಆವರಿಸಿರುವ ಈ ಸ್ಥಳವು ಬೆಂಗಳೂರು ಕೇಂದ್ರದಿಂದ ೩೬೪ ಕಿ.ಮೀ. ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ೯೦ ಕಿ.ಮೀ ಮತ್ತು ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಿಂದ ೩೦ ಕಿ.ಮೀ ದೂರದಲ್ಲಿದೆ. ಶಿವಮೊಗ್ಗದಿಂದ ಉಡುಪಿಗೆ ಹೋಗುವ ಮಾರ್ಗದಲ್ಲಿ ಈ ಸ್ಥಳ ಸಿಗುತ್ತದೆ.

ಕುಂದಾದ್ರಿ

ತಾಲ್ಲೂಕು: ತೀರ್ಥಹಳ್ಳಿ
ತಾಲ್ಲೂಕು ಕೇಂದ್ರದಿಂದ: ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೦ ಕಿ.ಮೀ

ಇದು ಒಂದು ಜೈನ ತೀರ್ಥಯಾತ್ರಾ ಸ್ಥಾಳ. ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿ ಗುಡ್ಡಕೇರಿಯಿಂದ ಎಡಕ್ಕೆ ತಿರುಗಿದರೆ ಕುಂದಾದ್ರಿ ಪರ್ವತದ ದರ್ಶನವಾಗುತ್ತದೆ. ಕೊಂದ ಕುಂದಾಚಾರ್ಯರೆಂಬ ಮುನಿಗಳು ನೆಲಸಿದ ಆದ್ರಿ, ಕುಂದಾದ್ರಿ, ತಲೆ ಎತ್ತಿ ನೋಡಿದರೂ ತುದಿಕಾಣದ ಕುಂದಾದ್ರಿ ಚಾರಣಕ್ಕೆ ಹೇಳಿ ಮಾಡಿಸಿದ ಜಾಗ. ಸುತ್ತೆಲ್ಲಾ ಅಡಿಕೆ ತೋಟಗಳು ಹಸಿರು ಚಾಪೆಯಂತೆ ಹರಡಿದೆ. ಕುಂದಾದ್ರಿಯ ತುದಿಯವರೆಗೂ ಇತ್ತೀಚೆಗೆ ವಾಹನ ಮಾರ್ಗವಿದ್ದರೂ ಬೆಟ್ಟವನ್ನು ಕಾಲುದಾರಿಯಲ್ಲಿ ಹತ್ತುವುದೇ ಒಂದು ಮಜ. ಜೊತೆಗೆ ಹೊಟ್ಟೆ ತುಂಬಾ ಏನಾದರೂ ತಿನ್ನಲು ತರದಿದ್ದರೆ ಈ ಪ್ರವಾಸ ಪ್ರಯಾಸವಾಗಿ ಮಜ-ಸಜವಾದೀತು ಜೋಕೆ. ಮೆಟ್ಟಿಲುಗಳನ್ನು ಏರಿ ಕುಂದಾದ್ರಿ ತುದಿಯನ್ನು ತಲುಪಿದಾಗ ಪಾರ್ಶ್ವನಾಥ ಚೈತ್ಯಾಲಯದ ಎಡಭಾಗದಲ್ಲಿ ಸಿಹಿನೀರಿನ ಕೊಳವೆ ಇದೆ. ಎಂತಹ ಬೇಸಿಗೆಯಲ್ಲೂ ಬತ್ತದ ನೀರು ಇಲ್ಲಿಗೊಂದು ವರ. ಕಡಲ ತಡಿಯ ಕನ್ಯಾಕುಮಾರಿಯಂತೆ ಸೂರ್ಯೋದಯ ಸೂರ್ಯಾಸ್ತಗಳ ವೀಕ್ಷಣೆಗೆ ಹೇಳಿ ಮಾಡಿಸಿದ ಜಾಗ.

 

ಮಂಡಗದ್ದೆ

ತಾಲ್ಲೂಕು: ತೀರ್ಥಹಳ್ಳಿ
ತಾಲ್ಲೂಕು ಕೇಂದ್ರದಿಂದ: ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೩೦ ಕಿ.ಮೀ

ಕರ್ನಾಟಕ ರಾಜ್ಯದ ಪ್ರಸಿದ್ಧ ಪಕ್ಷಿಧಾಮಗಳಲ್ಲಿ ಇದು ಒಂದಾಗಿದೆ. ಪಕ್ಷಿ ಪ್ರಿಯರಿಗೆ ಇದು ನಿಸರ್ಗ ರಮಣೀಯ ಸ್ಥಳವಾಗಿದೆ. ಈ ಸ್ಥಳವು ತುಂಗಾ ನದಿಯ ಮಧ್ಯ ಭಾಗದಲ್ಲಿ ನಡುಗದ್ದೆಯಲ್ಲಿ ಇರುತ್ತದೆ. ಇಲ್ಲಿಗೆ ರಷ್ಯ ಮತ್ತು ಸೈಬೀರಿಯಾ ಪ್ರದೇಶದಿಂದ ಕೊಕ್ಕರೆ, ಬೆಳ್ಳಕ್ಕಿ, ನೀರು ಕಾಗೆ, ನೀರು ನವಿಲು, ಸ್ನೇಕ್ ಬರ್ಡ್, ಸ್ಪೂನ್ ಬರ್ಡ್ ಮುಂತಾದ ಪಕ್ಷಿಗಳು ಇಲ್ಲಿಗೆ ಆಗಮಿಸಿ ಗೂಡು ಕಟ್ಟಿ ಸಂತಾನ ಅಭಿವೃದ್ಧಿ ಮಾಡುತ್ತವೆ. ಮೇ ನಿಂದ ನವೆಂಬರ್ ವರೆಗೆ ವೀಕ್ಷಣೆ ಉತ್ತಮ ಸಮಯ.

 

ಕುಪ್ಪಳ್ಳಿ-ಕವಿಶೈಲ

ತಾಲ್ಲೂಕು: ತೀರ್ಥಹಳ್ಳಿ
ತಾಲ್ಲೂಕು ಕೇಂದ್ರದಿಂದ: ೨೧ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೫ ಕಿ.ಮೀ

ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ವಿಶ್ವಮಾನವರೆಂಬ ಹೆಸರಿನಿಂದ ಪ್ರಖ್ಯಾತರಾದ ಕುವೆಂಪು ಅವರ ಕವಿಹೃದಯಕ್ಕೆ ಚೇತನವಿತ್ತ ಮಲೆನಾಡಿನ ಒಂದು ಪುಟ್ಟಹಳ್ಳಿ. ಅದರ ಸನಿಹದ ಒಂದು ಎತ್ತರವಾದ ಬೆಟ್ಟ ಕವಿಶೈಲ ನೋಡಬೇಕಾದ ಸ್ಥಳ. ಕುವೆಂಪು ಅವರು ಆಡಿ ಬೆಳೆದ ಭವ್ಯ ಮನೆ. ನೋಡಲು ಲಭ್ಯ ಪ್ರಸ್ತುತ ಈ ಮನೆಯು ಕುವೆಂಪುರವರ ನೆನಪನ್ನು ಮರುಕಳಿಸಲು ಅವರ ಜೀವನಕ್ಕೆ ಸಂಬಂಧಿಸಿದ ವಸ್ತುಗಳು ಪುಸ್ತಕಗಳು ಮತ್ತು ಪ್ರಶಸ್ತಿಗಳನ್ನು ಸಂಗ್ರಹಿಸಿ ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಇಲ್ಲಿಯ ಪಕ್ಕದಲ್ಲಿ ಕವಿಶೈಲವಿದ್ದು ಕುವೆಂಪುರವರಿಗೆ ಸ್ಪೂರ್ತಿ ನೀಡಿದ ತಾಣ ಎಲ್ಲೆಲ್ಲಿ ನೋಡಿದರೂ ಸಾಲು ಸಾಲು ಗಿರಿಪಂಕ್ತಿ. ಈ ತಾಣದ ಪ್ರಕೃತಿಯ ಸೌಂದರ್ಯ ಆಸ್ವಾದಿಸಿದ ಕುವೆಂಪು, ಬಿ.ಎಂ.ಶ್ರೀ. ಮುಂತಾದ ಕನ್ನಡದ ಹೆಸರಾಂತ ಕವಿಗಳು ಕುಳಿತ ಜಾಗ ಇದಾಗಿದೆ. ಪ್ರಸ್ತುತ ಇಲ್ಲಿ ಕುವೆಂಪುರವರ ಸಮಾಧಿಯನ್ನು ನೋಡಬಹುದಾಗಿದೆ. ಹಂಪಿ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ ಇಲ್ಲಿ ಕಂಡು ಬರುತ್ತದೆ.

ಈ ಸ್ಥಳವು ಬೆಂಗಳೂರು ಕೇಂದ್ರದಿಂದ ೩೪೯ ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ಮಾರ್ಗದಲ್ಲಿ ಈ ಸ್ಥಳ ಸಿಗುತ್ತದೆ.

 

ಸಿಬ್ಬಲು ಗುಡ್ಡೆ

ತಾಲ್ಲೂಕು: ತೀರ್ಥಹಳ್ಳಿ
ತಾಲ್ಲೂಕು ಕೇಂದ್ರದಿಂದ: ೧೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೭೫ ಕಿ.ಮೀ

ಸಿದ್ಧಋಷಿ ತಪಸ್ಸಿನ ಈ ಸ್ಥಳಕ್ಕೆ ೩೦೦ ವರ್ಷದ ಇತಿಹಾಸವಿದ್ದು ಚಿಬ್ಬಲುಗುಡ್ಡೆ ಎಂದು ಕರೆಯಲ್ಪಡುತ್ತದೆ. ಈ ಸ್ಥಳವು ಬೆಂಗಳೂರು ಕೇಂದ್ರದಿಂದ ೩೮೬ ಕಿ.ಮೀ ತೀರ್ಥಹಳ್ಳಿಯಿಂದ ಕಟ್ಟೆಹಕ್ಕಲಿಗೆ ಹೋಗುವ ಮಾರ್ಗದಲ್ಲಿ ಈ ಸ್ಥಳ ಸಿಗುತ್ತದೆ. ಶ್ರೀ ಸಿದ್ಧಿವಿನಾಯಕನ ದಿವ್ಯ ಸನ್ನಿಧಿಯಾದ ಇಲ್ಲಿ ವಿನಾಯಕನನ್ನು ಬೇಡಿಕೊಂಡರೆ ಚಿಬ್ಬು(ಸಿಬ್ಬು) ಹೋಗುತ್ತದೆ ಎಂಬ ಕಾರಣದಿಂದ ಸಿಬ್ಬಲುಗುಡ್ಡೆ ಎಂಬ ಹೆಸರು ಬಂದಿದೆ ಎನ್ನುವ ಐತಿಹ್ಯವಿದೆ. ತುಂಗಾನದಿಯ ಈ ತೀರದ ಈ ಸ್ಥಳದಲ್ಲಿ ನದಿಯಲ್ಲಿ ದೊಡ್ಡ ದೊಡ್ಡ ಮೀನುಗಳು ಗುಂಪು ಕಂಡುಬರುತ್ತದೆ. ಇವುಗಳಿಗೆ ಮಂಡಕ್ಕಿ(ಪೂರಿ) ಹಾಕುವುದೇ ಒಂದು ಖುಷಿ. “ರಾಷ್ಟ್ರಕವಿ ಕುವೆಂಪುರವರು ದೇವರು ರುಜು ಮಾಡಿದನು” ಎಂಬ ಕವಿತೆಯನ್ನು ಈ ಪರಿಸರದ ಪ್ರೇರಣೆಯಿಂದ ಬರೆದಿರುತ್ತಾರೆ.

 

ಮೃಗವಧೆ

ತಾಲ್ಲೂಕು: ತೀರ್ಥಹಳ್ಳಿ
ತಾಲ್ಲೂಕು ಕೇಂದ್ರದಿಂದ: ೨೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೫ ಕಿ.ಮೀ

ಶ್ರೀರಾಮ ಲಕ್ಷ್ಮಣ ಸೀತೆ ಇವರು ವನವಾಸದಲ್ಲಿದ್ದಾಗ ಮಾಯಾ ಜಿಂಕೆಯೊಂದು ಕಾಣಿಸಿಕೊಂಡಾಗ ಆ ಜಿಂಕೆಯೇ ಬೇಕೆಂದು ಸೀತೆ ಹಠ ಹಿಡಿದಾಗ ಬೆನ್ನಟ್ಟಿ ಹೋದ ರಾಮ ಮಾಯಾಮೃಗ ಮಾರೀಚನನ್ನು ಬಾಣದಿಂದ ಕೊಂದ ಸ್ಥಳವೇ ಮೃಗವಧೆ. ಈ ಸ್ಥಳವು ಬ್ರಾಹ್ಮೀ ನದಿಯ ( ಹಳ್ಳ) ದಂಡೆಯಲ್ಲಿದೆ. ಈ ಸ್ಥಳವು ಬೆಂಗಳೂರು ಕೇಂದ್ರದಿಂದ ೩೫೯ ಕಿ.ಮೀ ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ೮೫ ಕಿ.ಮೀ ಮತ್ತು ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಿಂದ ೨೫ ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿಯ ಕೊನೆಯ ಗಡಿ ಗ್ರಾಮವಾದ ಇದು ಕೊಪ್ಪದಿಂದ ೨೩ ಕಿ.ಮೀ ದೂರದಲ್ಲಿದ್ದು ಇಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಾಲಯವನ್ನು ಶ್ರೀ ರಾಮನು ಪ್ರತಿಷ್ಠಾಪಿಸಿದ ಎಂಬ ಪ್ರತೀತಿ ಇದೆ. ಇಲ್ಲಿನ ಕಳಸದಲ್ಲಿನ ಶಾಸನದಲ್ಲಿ ಹೀಗೆ ಬರೆದಿದೆ.

“ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರುಷ ೧೬೫ ಕೀಲಿಕೆ ಸಂವತ್ಸರದ ಕಾರ್ತಿಕಾ ೧೫ ಉಮೃಗವಸೆ ಮಲ್ಲಿಕಾರುನ ಸ್ವಾಮಿಯವರಿಗೆ ಶ್ರೀಮತ್ ಕೆಳದಿ ಸೋಮಶೇಖರ ನಾಯಕರ ಭಕ್ತಿಯಲ್ಲಿ ಸಮರ್ಪಿಸಿದ ಸುವರ್ಣ ಕಳಸ”. ಈ ಶಾಸನದ ಕಾಲ ಕ್ರಿ.ಶ. ೧೭೨೮

 

ಅಂಬುತೀರ್ಥ

ತಾಲ್ಲೂಕು: ತೀರ್ಥಹಳ್ಳಿ
ತಾಲ್ಲೂಕು ಕೇಂದ್ರದಿಂದ: ೪೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೦೦ ಕಿ.ಮೀ

 

ವನವಾಸದಲ್ಲಿದ್ದ ಸೀತಾಮಾತೆ ತೀವ್ರ ಬಾಯಾರಿಕೆಯಾದಾಗ ಶ್ರೀರಾಮನು ಅಂಬನ್ನು (ಬಾಣ) ಭೂಮಿಗೆ ಬಿಟ್ಟಾಗ ತೀರ್ಥ ಚಿಮ್ಮಿತು. ಅದುವೇ ಅಂಬುತೀರ್ಥವಾಗಿ ಪರಿಣಮಿಸಿದೆ. ಈ ತೀರ್ಥವೇ ಶರಾವತಿ ನದಿಯ ಉಗಮ ಸ್ಥಳವಾಗಿದೆ. ಇಲ್ಲಿ  ವರ್ಷವಿಡೀ ನೀರು ಬರುತ್ತಿರುತ್ತದೆ. ಇದುವರೆಗೂ ಬತ್ತಿದ ಇತಿಹಾಸವಿಲ್ಲ. ಈ ಸ್ಥಳವು ಬೆಂಗಳೂರು ಕೇಂದ್ರದಿಂದ ೩೫೨ ಕಿ.ಮೀ ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ೧೦೦ ಕಿ.ಮೀ ಮತ್ತು ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಿಂದ ೪೦ ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿಯಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಈ ಸ್ಥಳ ಸಿಗುತ್ತದೆ.

 

ಅಚ್ಚಕನ್ನೆ ಜಲಪಾತ

ತಾಲ್ಲೂಕು: ತೀರ್ಥಹಳ್ಳಿ
ತಾಲ್ಲೂಕು ಕೇಂದ್ರದಿಂದ: ೨೧ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೨ ಕಿ.ಮೀ

ಅಂಬುತೀರ್ಥದಲ್ಲಿ ಉದಯಿಸಿದ ಶರಾವತಿ ಇಲ್ಲಿಂದ ೫ ಕಿ.ಮೀ ದೂರದಲ್ಲಿದೆ. ಪ್ರಥಮ ಬಾರಿಗೆ ಏಳು ಅಡಿ ಎತ್ತರದಿಂದ ಜಲಪಾತವಾಗಿ ಶರಾವತಿ ನದಿ ಇಲ್ಲಿ ಧುಮುಕುತ್ತದೆ. ಇದೇ ಅಚ್ಚಕನ್ಯೆ ಜಲಪಾತ. ನೋಡಲು ನಯನ ಮನೋಹರವಾಗಿದೆ. ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ೮೨ ಕಿ.ಮೀ ಮತ್ತು ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಿಂದ ೨೧ ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿಯಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಈ ಸ್ಥಳ ಸಿಗುತ್ತದೆ. ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೂ ನೋಡುವ ಸಮಯ.

 

ಕವಲೇದುರ್ಗ

ತಾಲ್ಲೂಕು: ತೀರ್ಥಹಳ್ಳಿ
ತಾಲ್ಲೂಕು ಕೇಂದ್ರದಿಂದ: ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೦ ಕಿ.ಮೀ

ಮಲ್ಲವ ಸಾಮ್ರಾಜ್ಯದ ರಾಜ ವೆಂಕಟಪ್ಪ ನಾಯಕ ಆಳಿದ ಪ್ರದೇಶ ಇದಾಗಿದೆ. ಪಶ್ಚಿಮ ಘಟ್ಟದ ಗಿರಿಕಂದರಗಳಿಂದ ಆವೃತವಾದ ಈ ಪ್ರದೇಶ ದ್ಯೂಮ್ನ ಋಷಿಗಳು ತಪಸ್ಸು ಮಾಡಿದ ಸ್ಥಳವಾಗಿದೆ. ಪಾಂಡವರು ವನವಾಸ ಮಾಡಿದ ಈ ಸ್ಥಳವನ್ನು ಕವಲೇದುರ್ಗ, ಕಪಿಲೇದುರ್ಗ, ಕಾವಲುದುರ್ಗ, ಭುವನಗಿರಿದುರ್ಗ ಎಂಬ ಹೆಸರುಗಳಿಂದ ಕರೆಯುತ್ತಾರೆ. ತೀರ್ಥಹಳ್ಳಿಯಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಈ ಸ್ಥಳ ಸಿಗುತ್ತದೆ.

ಇಲ್ಲಿ ನೋಡತಕ್ಕ ಸ್ಥಳಗಳೆಂದರೆ ಶ್ರೀ ಲಕ್ಷ್ಮೀನಾರಾಯಣ ದೇವಾಲಯ, ಬಯಲು ಬಸವ, ಗದಾತೀರ್ಥ ಶಿಖರೇಶ್ವರ ದೇವಾಲಯ, ತಿಮ್ಮಣ್ಣ ನಾಯಕ ಕೆರೆ, ಬಹು ಸುಂದರ ಕಲ್ಯಾಣ ಮಹಲ್, ಮಾರಿಕಾಂಬ ದೇವಾಲಯ ಎಣ್ಣೆ ಮತ್ತು ತುಪ್ಪದ ಬಾವಿ, ಹಾಗೂ ಐತಿಹಾಸಿಕ ಕೋಟೆ.