ಅದು ಐವತ್ತರ ದಶಕದ ಕಾಲ. ನಾನು ಮೈಸೂರಿನ ನೂರಡಿ ರಸ್ತೆಯ ಒಂದು ಅಂಚಿನಲ್ಲಿ ಆ ಸಂಜೆ ನಡೆದು ಬರುತ್ತಾ ಇದ್ದೆ. ಇದ್ದಕ್ಕಿದ್ದ ಹಾಗೆ ರಸ್ತೆಯ ಇನ್ನೊಂದು ಬದಿಯಿಂದ ಯಾರೋ ನನ್ನ ಹೆಸರು ಹಿಡಿದು ಕೂಗಿದ ಹಾಗಾಯಿತು. ಕರೆದವರು ಯಾರೆಂದು ನೋಡುತ್ತೇನೆ-ಸಾಕ್ಷಾತ್ ತೀ.ನಂ. ಶ್ರೀಕಂಠಯ್ಯನವರು. ನನಗೆ ಆಶ್ಚರ್ಯವಾಯಿತು. ಗಾಬರಿಯೂ ಆಯಿತು. ನೋಡುತ್ತಿದ್ದ ಹಾಗೇ ಸರಸರನೆ ರಸ್ತೆಯನ್ನು ದಾಟಿ  ಅವರೇ ನನ್ನ ಬಳಿಗೆ ಬಂದೇಬಿಟ್ಟರು. ಪ್ರೀತಿಯಿಂದ ಹೆಗಲ ಮೇಲೆ ಕೈ ಹಾಕಿದರು. “ಇವತ್ತು ಬೆಳಿಗ್ಗೆ ‘ಜೀವನ’ ಪತ್ರಿಕೆಯಲ್ಲಿ ನಿಮ್ಮ ಪದ್ಯ ‘ಕ್ರಾಂತಿಕಾರಿ’ -ಓದಿದೆ. ತುಂಬ ಚೆನ್ನಾಗಿದೆ. ಚೆನ್ನಾಗಿ ಬರೆಯುತ್ತೀರಿ” ಎಂದರು. ಆಗತಾನೇ ಕಾವ್ಯರಂಗಕ್ಕೆ ಕಾಲಿಟ್ಟ ನನಗೆ ಅವರ ಮಾತಿನಿಂದ ಎಂಥ ಆನಂದವಾಯಿತೆಂಬುದನ್ನು ಹೇಳಲಾರೆ.

ಇದು ನಾನು ತೀ.ನಂ.ಶ್ರೀ. ಯವರನ್ನು ತೀರ ಹತ್ತಿರದಿಂದ ಕಂಡ, ಅಲ್ಲ, ತೀ.ನಂ. ಶ್ರೀಯವರು ತೀರಾ ಹತ್ತಿರದಿಂದ ಕಾಣಿಸಿಕೊಂಡ ಮೊದಲ ಪ್ರಸಂಗ. ಈ ಪ್ರಸಂಗವೊಂದರಿಂದ ತೀ.ನಂ. ಶ್ರೀಯವರು ನನ್ನ ಮನಸ್ಸನ್ನು ಆಕ್ರಮಿಸಿಬಿಟ್ಟರು. ತೀ.ನಂ. ಶ್ರೀಯವರ ಸರಳತೆ, ಉದಾರತೆ, ಎಲ್ಲಿ ಬೆಳೆಯುವ ಗುಣವಿದ್ದರೂ ತಟಕ್ಕನೆ ಅದನ್ನು ಗುರುತಿಸುವ ವಾತ್ಸಲ್ಯ ಇವುಗಳ ಪರಿಚಯವಾದದ್ದು ಅಷ್ಟೇ ಅಲ್ಲ, ಅವರು ನಾನು ಅದುವರೆಗೂ ತಿಳಿದುಕೊಂಡಂತೆ ಕೇವಲ ಘನವಿದ್ವಾಂಸರು ಮಾತ್ರವಲ್ಲ ಎಂಬ ಜ್ಞಾನೋದಯ ಕೂಡಾ ನನಗಾಯಿತು.

ತೀ.ನಂ. ಶ್ರೀಯವರದು ತುಂಬ ಆಕರ್ಷಕವಾದ ವ್ಯಕ್ತಿತ್ವ. ನೋಡಿದರೆ ನೋಡಿದಷ್ಟೂ ಇಷ್ಟವಾಗುವ, ನಿಷ್ಕೃಷ್ಟವಾದ ಆದರೆ ಮಿತವಾಗಿ ಮಾತನಾಡುವ, ಉತ್ಸಾಹದ ಚಿಲುಮೆ ಪುಟಿಯುವ, ಹಸನ್ಮುಖದ ವ್ಯಕ್ತಿತ್ವ ಅವರದು. ಎಂದೂ ಯಾವಾಗಲೂ ಅವರು ಹುಬ್ಬುಗಂಟು ಹಾಕಿದ್ದನ್ನು ನಾನು ಕಂಡ ನೆನಪಿಲ್ಲ. ಅವರೊಂದು ಮಂದಹಾಸದ ನಂದಾದೀಪ.

ಸಂಖ್ಯೆಯ ದೃಷ್ಟಿಯಿಂದ ಶ್ರೀಕಂಠಯ್ಯನವರು ಹೆಚ್ಚಾಗಿ ಬರೆಯಲಿಲ್ಲ. ಇಷ್ಟೊಂದು ವಿದ್ವಾಂಸರಾದ ಇವರು ಬರೆವಣಿಗೆಯ ವಿಚಾರದಲ್ಲಿ ಯಾಕಿಷ್ಟು ಜಿಪುಣರಾಗಿದ್ದಾರೆ ಎಂದು ನನ್ನಂಥ ಹಲವರ ಆಕ್ಷೇಪ. ಆದರೆ ಏನು ಬರೆದರೋ ಅದು ಮಾತ್ರ ಗಟ್ಟಿಯಾದದ್ದು ನಿಜ. ತೀ.ನಂ. ಶ್ರೀಯವರು ತಿಪಟೂರಿನ ತೆಂಗಿನ ಸೀಮೆಯವರು. ತೀರ್ಥಪುರ ಅವರ ಊರು. ಬಹುಶಃ ತೆಂಗಿನ ಮರ ಅವರಿಗೆ ಮೆಚ್ಚು. ಅಂದಂದಿನ ಉಚಿತಕ್ಕೆ ಸಲ್ಲುವ ತರಕಾರಿ ಸಾಹಿತ್ಯಕ್ಕಿಂತ, ತೆಂಗಿನ ಮರದಂಥ ಸಾಹಿತ್ಯ ನಿರ್ಮಿತಿಯ ಬಗೆಗೆ ಅವರಿಗೆ ಆಸಕ್ತಿ ಹೆಚ್ಚು. ನೆಟ್ಟದ್ದು ಬೇರೂರಬೇಕು. ನೆಟ್ಟನೆ ಬೆಳೆದು ಎಲ್ಲ ಕಾಲಕ್ಕೂ ಫಸಲು ಕೊಡುವಂತಾಗಬೇಕು ಅನ್ನುವುದರ ಕಡೆಗೆ ಅವರಿಗೆ ಗಮನ ಹೆಚ್ಚು. ಮಾಡುವ ಕೆಲಸ ಅಚ್ಚುಕಟ್ಟಾಗಬೇಕು. ಸಾಧ್ಯವಾದಷ್ಟು ನಿಷ್ಕೃಷ್ಟವಾಗಬೇಕು, ತೂಕದ್ದಾಗಬೇಕು-ಅನ್ನುವುದು ಅವರು ಬರೆವಣಿಗೆಯ ಬಗ್ಗೆ ಇಟ್ಟುಕೊಂಡ ಧೋರಣೆಯಾಗಿತ್ತು. ಹೀಗಾದದ್ದರಿಂದ ಅವರು ಹೆಚ್ಚು ಬರೆಯಲಿಲ್ಲ.

ತೀ.ನಂ. ಶ್ರೀಕಂಠಯ್ಯನವರು ಸಾಹಿತ್ಯಕ್ಕೆ ಪ್ರವೇಶ ಮಾಡಿದ್ದೇ ೧೯೩೨ರಲ್ಲಿ, ‘ಒಲುಮೆ’ ಎಂಬ ಕವನ ಸಂಗ್ರಹದ ಮೂಲಕ. ಅಂದರೆ ಅವರು ಕವಿಯಾಗಿ ಕನ್ನಡ ಸಾಹಿತ್ಯಕ್ಕೆ ಕಾಲಿಟ್ಟರು ಅನ್ನುವುದು ಗುರುತಿಸಿಕೊಳ್ಳಬೇಕಾದ ಸಂಗತಿ. ಕನ್ನಡದಲ್ಲಿ,  ಕೆ.ಎಸ್. ನರಸಿಂಹಸ್ವಾಮಿಯವರಿಗಿಂತ ಮೊದಲೇ ಪ್ರೇಮಗೀತೆಗಳ ಸಂಗ್ರಹವನ್ನು ಪ್ರಕಟಿಸಿದವರು ತೀ.ನಂ. ಶ್ರೀಯವರು. ಮುಂದೆ ‘ಪ್ರೇಮಕಾವ್ಯ’ ಕೆ. ಎಸ್.ನ. ಅವರಿಂದ ಸಮೃದ್ಧಿಯನ್ನು ಪಡೆಯಿತೆಂಬುದು ಬೇರೆಯ ಮಾತು. ಆದರೆ ತೀ.ನಂ. ಶ್ರೀಯವರ ‘ಒಲುಮೆ’ ತುಂಬ ಸೊಗಸಾದ ಪ್ರೇಮಗೀತೆಗಳನ್ನು ಕನ್ನಡಕ್ಕೆ ಮೊದಲು ಪರಿಚಯ ಮಾಡಿಕೊಟ್ಟಿತು.

ಮುಂದೆ ಶ್ರೀಕಂಠಯ್ಯನವರು ಸಂಶೋಧನೆ, ವಿಮರ್ಶೆ, ಛಂದಸ್ಸು, ಭಾಷಾ ಶಾಸ್ತ್ರ ಮೊದಲಾದ ಹಲವು ಕ್ಷೇತ್ರಗಳಲ್ಲಿ ತಮ್ಮ ಕೃಷಿಯನ್ನು ಮುಂದುವರಿಸಿ, ಮುಖ್ಯವಾಗಿ ಬಹು ದೊಡ್ಡ ವಿದ್ವಾಂಸರೆಂದು ಹೆಸರು ಗಳಿಸಿದರು. ಆದರೆ, ಎಂದೂ ಅವರು ತಮ್ಮೊಳಗಿನ ‘ಕವಿ’ಯನ್ನು ಕಳೆದುಕೊಳ್ಳಲಿಲ್ಲ. ಇದು ಬಹಳ ವಿಶೇಷವಾದ ಸಂಗತಿ-ನನ್ನ ದೃಷ್ಟಿಯಲ್ಲಿ. ‘ಒಲುಮೆ’ಯ ನಂತರ, ಸ್ವತಂತ್ರವಾದ ಯಾವ ಕವಿತೆಯನ್ನೂ ಬರೆಯದೆ ಇದ್ದರೂ ಅವರು ಸಮಕಾಲೀನ ಕವಿಗಳ, ಕಾವ್ಯದ ಸಂಪರ್ಕವನ್ನೂ ಕಳೆದುಕೊಳ್ಳಲಿಲ್ಲ. ಸತ್ಕಾವ್ಯದ ಬಗೆಗಿನ ರುಚಿಯನ್ನು ಕಡಿಮೆ ಮಾಡಿಕೊಳ್ಳಲಿಲ್ಲ. ಸಮಕಾಲೀನವಾದ ಯಾವ  ಸಾಹಿತ್ಯ ಪ್ರಕಾರದ ಕಡೆಗೂ ಕಣ್ಣು ಮುಚ್ಚಿಕೊಳ್ಳಲಿಲ್ಲ. ಅವರು ಸಂಸ್ಕೃತದಿಂದ ಅನೇಕ ಸುಭಾಷಿತಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು. ವಿಶಾಖದತ್ತನ ‘ರಾಕ್ಷಸನ ಮುದ್ರಿಕೆ’ ಎಂಬ ನಾಟಕವನ್ನು ಕನ್ನಡಕ್ಕೆ ತಂದರು. ‘ನಂಟರು’ ಎಂಬ ಹೆಸರಿನಿಂದ ಪ್ರಕಟವಾದ ಪ್ರಬಂಧಗಳ ಸಂಕಲವನ್ನು ತಂದರು. ಜತೆಗೆ ಅವರು ಸಂಪಾದಿಸಿ ಪ್ರಕಟಿಸಿದ್ದು ರನ್ನನ-ಗದಾಯುದ್ಧ ಮತ್ತು ಹರಿಹರನ ನಂಬಿಯಣ್ಣನ ರಗಳೆ-ಇವೆರಡನ್ನೆ. ಆದರೆ ಈ ಎರಡೂ, ಗ್ರಂಥ ಸಂಪಾದನೆಯ ಕ್ಷೇತ್ರದಲ್ಲಿ ಅತ್ಯಂತ ಅಚ್ಚುಕಟ್ಟಾದ ಮಾದರಿಯ ಕೆಲಸಗಳೆಂದು ಪರಿಗಣಿತವಾಗಿವೆ. ಅದರಲ್ಲೂ ಗದಾಯುದ್ಧ ಸಂಗ್ರಹಕ್ಕೆ ಅವರು ಕೊನೆಯಲ್ಲಿ ಸಿದ್ಧಪಡಿಸಿರುವ ಟಿಪ್ಪಣಿಗಳಂತೂ, ವಿದ್ವತ್ ಪೂರ್ಣವಾದ ಸಂಶೋಧನಾತ್ಮಕ ವಿಮರ್ಶೆಯ ಹೆಜ್ಜೆಗಳೆಂಬುದನ್ನು ಯಾರಾದರೂ ಗುರುತಿಸಬಹುದಾಗಿದೆ.

ತೀ.ನಂ. ಶ್ರೀಕಂಠಯ್ಯನವರು ಬಹು ಭಾಷಾ ಪರಿಣಿತರಾದ ವಿದ್ವಾಂಸರು. ಇಂಗ್ಲಿಷಿನಲ್ಲಿ ಅವರು ಬರೆದ ಲೇಖನಗಳು ಇಪ್ಪತ್ತರಷ್ಟಿವೆ. ಸಂಸ್ಕೃತದಿಂದ ಅವರು ಅನುವಾದ ಮಾಡಿದ ಬಿಡಿ ಮುಕ್ತಕಗಳ ಸಂಖ್ಯೆ ೨೧೫ರಷ್ಟು. ಕಾಳಿದಾಸನನ್ನು ಕುರಿತು   ಧನಂಜಯನನ್ನು ಕುರಿತು ಭಾಸನನ್ನು ಕುರಿತು ಅವರು  ವಿಮರ್ಶೆಗಳನ್ನು ಬರೆದಿದ್ದಾರೆ. ಕಾವ್ಯ ಮೀಮಾಂಸೆಯನ್ನು ಕುರಿತು ಅವರು ಬರೆದಿರುವ ‘ಭಾರತೀಯ ಕಾವ್ಯಮೀಮಾಂಸೆ’ಯನ್ನು ಕವಿ ಕುವೆಂಪು ಅವರು, ಅದೊಂದು ಆಚಾರ್ಯ ಕೃತಿ-ಎಂದು ಪ್ರಶಂಸಿಸಿದ್ದಾರೆ. ಭಾರತೀಯ ಕಾವ್ಯ ಮೀಮಾಂಸೆ ತತ್ವಗಳನ್ನು ಕುರಿತು ಇಷ್ಟು ಪ್ರಮಾಣ ಭೂತವೂ, ಸ್ವಾದುವೂ ಆದ ಕೃತಿ ಬಹುಶಃ ಇತರ ಭಾರತೀಯ ಭಾಷೆಯಲ್ಲೂ ಇಲ್ಲ ಎಂಬುದಷ್ಟೇ ಅಲ್ಲ; ಇಂಗ್ಲಿಷ್ ಭಾಷೆಯಲ್ಲೂ ಕೂಡಾ ಈ ವಿಷಯವನ್ನು ಕುರಿತು ಇಂದಿಗೂ ಇಂಥ ಗ್ರಂಥ ಇಲ್ಲ ಎನ್ನುವುದನ್ನು ಗಮನಿಸಬೇಕು.

ಇಂಥ ಬಹು ಭಾಷೆಯ ಬಹು ಅಪಾರವಾದ ವಿದ್ವತ್ತಿನ ಹಿನ್ನೆಲೆಯಿದ್ದರೂ; ತೀ.ನಂ. ಶ್ರೀಕಂಠಯ್ಯನವರು ಎಂದೂ ತಮ್ಮ ಸಮಕಾಲೀನತೆಯಿಂದ ತಾವು ದೂರ ಸರಿದು, ತಮ್ಮದೇ ಆದ ವಿದ್ವತ್ತಿನ ದುರ್ಗದಲ್ಲಿ ಹುದುಗಿಕೊಳ್ಳಲಿಲ್ಲ. ನನಗೆ ತೋರುವ ಮಟ್ಟಿಗೆ ಶ್ರೀಕಂಠಯ್ಯನವರದು ಸುರಂಗ ಮಾರ್ಗವಲ್ಲ. ತರಂಗ ಮಾರ್ಗ. ಕೆಲವರು ವಿದ್ವತ್ತಿನ ಹೆಸರಿನಲ್ಲಿ ಸಂಶೋಧನೆ ಮಾಡುತ್ತಾ ಗಣಿಯೊಳಕ್ಕೇ ಹೋಗಿ ಬಿಡುತ್ತಾರೆ. ಅವರಿಗೆ ಸಮಕಾಲೀನವಾದ ಹಾಗೂ ಜೀವಂತವಾದ ಸೃಜನ ಸಾಹಿತ್ಯದ ಕಡೆ ನೋಡಲು ವ್ಯವಧಾನವಾಗಲಿ, ಆಸಕ್ತಿಯಾಗಲಿ ಇರುವುದಿಲ್ಲ. ಅಂಥವರು ಅಗೆದು ತೆಗೆದು ತಂದದ್ದು ಚಿನ್ನವೇ ಇರಬಹುದು. ಆದರೆ ಅವರು  ಸಮಕಾಲೀನತೆಯೊಂದಿಗೆ ಜೀವಂತ ಸಂಪರ್ಕವನ್ನೇ ಕಳೆದುಕೊಂಡು ಗತಕಾಲದ ಬೆಳಕಿನಲ್ಲೆ ಬದುಕುತ್ತಾರೆ. ಆದರೆ ನಿಜವಾದ ವ್ಯಕ್ತಿತ್ವದ ವಿಕಾಸಕ್ಕೆ ಗತಕಾಲದ ಅನುಭವದೊಂದಿಗೆ ವರ್ತಮಾನದ ಜೀವಂತಿಕೆಯ ಸ್ಪರ್ಶವೂ ಅಗತ್ಯ ಅನ್ನುವುದನ್ನು ತೀ.ನಂ. ಶ್ರೀಕಂಠಯ್ಯನವರು ಕಂಡುಕೊಳ್ಳುತ್ತಾರೆ. ಈ ಅರ್ಥದಲ್ಲೇ ನಾನು ಹೇಳಿದ್ದು, ಅವರದು  ಸುರಂಗ ಮಾರ್ಗವಲ್ಲ, ತರಂಗ ಮಾರ್ಗ ಎಂದು. ಎಂದರೆ, ಅದೊಂದು ರೀತಿಯಲ್ಲಿ ವಿಸ್ತಾರವಾದ ಕಡಲಿನ ಮೇಲೆ ಪಟ ಬಿಚ್ಚಿಕೊಂಡ ದೋಣಿಯಲ್ಲಿ ಕುಳಿತು ಹೊಸ ದಿಗಂತಗಳನ್ನು ಕಾಣುವ ಹಂಬಲದಿಂದ ಹೊರಟ ನಾವಿಕನ ಮನೋಧರ್ಮಕ್ಕೆ ಸಂವಾದಿಯಾದದ್ದು. ಈ ಮನೋಧರ್ಮ-ದಿಂದಾಗಿ ತೀ.ನಂ. ಶ್ರೀಕಂಠಯ್ಯನವರು ಉದ್ದಕ್ಕೂ ಹೊಸಗನ್ನಡ ಸಾಹಿತ್ಯದ ಬಗೆಗೆ ತಮ್ಮ ಪ್ರತಿಕ್ರಿಯೆಗಳನ್ನು ದಾಖಲು ಮಾಡುತ್ತಾ ನವೋದಯ ಸಾಹಿತ್ಯ ವಿಮರ್ಶೆಯ ರೂಪು-ರೇಖೆಗಳನ್ನು ಹಾಕಿಕೊಟ್ಟಿದ್ದಾರೆ.ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತೆಗಳು’ ಕೃತಿಗೆ ೧೯೫೩ರಲ್ಲಿ ಅವರು ಬರೆದ ಪ್ರಸ್ತಾವನೆ ಇಂದಿಗೂ ಮಹತ್ವದ್ದಾಗಿದೆ. ಪು.ತಿ. ನರಸಿಂಹಾಚಾರ್ಯರ  ಗೀತ ನಾಟಕ ‘ಅಹಲ್ಯೆಗೆ’ ಬರೆದ ವಿಸ್ತಾರವಾದ ಮುನ್ನುಡಿ, ಸೊಗಸಾದ ರಸವಿಮರ್ಶೆಯಾಗಿದೆ. ಬೇಂದ್ರೆಯವರ ‘ಗರಿ’ ‘ಸಖಿಗೀತ’, ಗೋಕಾಕರ ‘ಸಮುದ್ರದಾಚೆಯಿಂದ’, ರಾಜರತ್ನಂ ಅವರ ‘ರತ್ನನ ಪದಗಳು’ ‘ಕಡಲೆಪುರಿ’ ‘ತುತ್ತೂರಿ’, ‘ಕೆರೆಗೆ ಹಾರ’ ಎಂಬ ಜನಪದ ಗೀತೆಯನ್ನು ಕುರಿತ- ಇವರು ಬರೆದ ವಿಮರ್ಶೆ ಇವುಗಳನ್ನು ಗಮನಿಸಬೇಕು. ಅಷ್ಟೆ ಅಲ್ಲ ‘ಭಾರತೀಯ ಕಾವ್ಯಮೀಮಾಂಸೆ’ಯಂಥ ಕೃತಿಯಲ್ಲಿ ಅವರು ಕಾವ್ಯಮೀಮಾಂಸೆಯ ತತ್ವಗಳಿಗೆ ನಿದರ್ಶನವಾಗಿ ಸಮಕಾಲೀನ ಸಾಹಿತ್ಯದ ಪದ್ಯಗಳನ್ನು ಬಳಸಿರುವುದು ಅವರ ಅಭಿರುಚಿಗೆ ದಾಖಲೆಯಾಗಿದೆ. ಅಷ್ಟೇ ಅಲ್ಲ ಭಾರತೀಯ ಕಾವ್ಯ ಮೀಮಾಂಸೆಯ ತತ್ವಗಳು, ಎಂದೋ ಯಾವುದೋ ಕಾಲದ ಸಾಹಿತ್ಯವನ್ನು ಅನುಲಕ್ಷಿಸಿ ರೂಪಿತವಾದವುಗಳಲ್ಲ, ಅವುಗಳು ಎಲ್ಲ ಕಾಲದ ಸಾಹಿತ್ಯಕ್ಕೂ ಅನ್ವಯವಾಗುವ ಮೂಲ ಸಿದ್ಧಾಂತಗಳು ಎನ್ನುವುದು ಎತ್ತಿ ಹಿಡಿದಿದ್ದಾರೆ. ಅವರ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಹಳಗನ್ನಡದ, ಹೊಸಗನ್ನಡದ, ಜಾನಪದ ನಿದರ್ಶನಗಳನ್ನು ಕೊಟ್ಟು ಮಾಡಿರುವ ವಿಮರ್ಶೆ ಹೊಸಗನ್ನಡ ವಿಮರ್ಶೆಯ ಸಂದರ್ಭದಲ್ಲಿ ವಿಮರ್ಶೆಯ ಮೊದಲ ಮಾದರಿಗಳೂ ಆಗಿವೆ. ವರ್ಣನಾ ವಿಮರ್ಶೆ, ವ್ಯಾಖ್ಯಾನ ವಿಮರ್ಶೆ, ತೌಲನಿಕ ವಿಮರ್ಶೆ-ಇತ್ಯಾದಿ ವಿಮರ್ಶೆಯ ಹಲವು ಮಾದರಿಗಳನ್ನು ಅವರ ‘ಭಾರತೀಯ ಕಾವ್ಯ ಮೀಮಾಂಸೆಯಲ್ಲಿ’ ಅವರ ‘ಕಾವ್ಯ ಸಮೀಕ್ಷೆ’ ಮತ್ತು ‘ಸಮಾಲೋಕನ’ ಈ ಕೃತಿಯಲ್ಲಿ ಕಾಣಬಹುದು. ಅವುಗಳೆಲ್ಲಕ್ಕೂ ನಿದರ್ಶನಗಳನ್ನು ಕೊಡುವುದು ಇಲ್ಲಿ ಸಾಧ್ಯವಾಗದ ಮಾತು.

ಕನ್ನಡ ವಿಮರ್ಶೆಯ ಆರಂಭ ಕಾಲದಲ್ಲಿ ಸಾಮಾನ್ಯವಾಗಿ ಅಂದಿನ ವಿಮರ್ಶಕರಲ್ಲಿ ಕಂಡುಬರುತ್ತಿದ್ದುದು ಸಾಹಿತ್ಯದ ಬಗ್ಗೆ ರುಚಿ ಹುಟ್ಟಿಸುವ, ಹೆಚ್ಚೆಂದರೆ ಓದುಗರಿಗೆ ಮೆಚ್ಚುವುದನ್ನು ಕಲಿಸುವ ಉದಾರವಾದೀ ಧೋರಣೆ. ಆದರೆ ತೀ.ನಂ.ಶ್ರೀ ಯವರಲ್ಲಿ ವಿಮರ್ಶನ ದೃಷ್ಟಿ ಇದನ್ನೂ ಮೀರಿದ, ಒಂದು ನಿರ್ಭಯ ನಿಷ್ಪಕ್ಷಪಾತ ನಿಲುವನ್ನು ನೆಲೆಗೊಳಿಸುವುದಾಗಿತ್ತು. ವಿಮರ್ಶೆಯ ಹೆಸರಿನಲ್ಲಿ ಮನಸ್ಸು ವ್ಯಗ್ರವಾಗಬೇಕಾಗಿಲ್ಲ. ಮಾತು ಅನಗತ್ಯವಾಗಿ ಕಟುವಾಗಬೇಕಾಗಿಲ್ಲ. ಆದರೆ ಮೆಚ್ಚಬೇಕಾದ್ದನ್ನು ತುಂಬು ಮನಸ್ಸಿನಿಂದ ಮೆಚ್ಚುವುದರ ಜತೆಗೆ, ಮೆಚ್ಚಲಾಗದ್ದನ್ನು ಮೆಚ್ಚಬಾರದ್ದನ್ನು ನಿರ್ಭಯವಾಗಿ ಎತ್ತಿ ಹೇಳುವುದೂ ವಿಮರ್ಶಕನ ಜವಾಬ್ದಾರಿಗಳಲ್ಲಿ ಒಂದು ಎಂಬುದನ್ನು

ತೀ.ನಂ. ಶ್ರೀ. ಎಂದೂ ಮರೆಯಲಿಲ್ಲ. ತಮ್ಮ ಗುರು ಸಮಾನರಾದ ಬಿ.ಎಂ. ಶ್ರೀ. ಯವರ ಇಂಗ್ಲೀಷ್ ಗೀತೆಗಳು ಕುರಿತು ‘ಇಂಗ್ಲೀಷ್ ಗೀತೆಗಳಲ್ಲಿ ಬಂದಿರುವ ಎಲ್ಲ ಮಾತೂ ರಸಮಯವೆಂದಾಗಲಿ, ಎಲ್ಲ ಅನುವಾದವೂ ಉತ್ಕೃಷ್ಟವೆಂದಾಗಲಿ ನನ್ನ ವಾದವಲ್ಲ’- ಎನ್ನುವುದನ್ನು ಹೇಳುತ್ತಲೇ ‘ಆದರೆ ಪಕ್ಷಪಾತವಿಲ್ಲದ ಕಿವಿಗಳಿಗೆ ಈ ಕೃತಿಯಲ್ಲಿ ಹೊಸಗನ್ನಡದ ವಿಜಯಘೋಷ ಸ್ಪಷ್ಟವಾಗಿ ಕೇಳಿಬರುತ್ತದೆ’-ಎಂದು ಹೇಳುವುದನ್ನು ಮರೆಯುವುದಿಲ್ಲ. ಇದು ತೀ.ನಂ.ಶ್ರೀ.ಯವರ ವಿಮರ್ಶೆಯಲ್ಲಿನ ಸಮತೂಕ. ‘ಬೇಂದ್ರೆಯವರ ಪದ್ಯಗಳು ಬೇಗ ಅರ್ಥವಾಗುವುದಿಲ್ಲ ಒಂದೊಂದು ಸಲ ಅವರು ಏನನ್ನು ಹೇಳ ಹೊರಟಿರುವರೆಂಬುದೇ ತಿಳಿಯುವುದಿಲ್ಲ’- ಎಂದು ತಮಗಾದ ಅನುಭವವನ್ನು ತೀ.ನಂ. ಶ್ರೀಯವರು ನಿಸ್ಸಂಕೋಚವಾಗಿ ಹೇಳಬಲ್ಲರು. ಒಮ್ಮೆ ಕಾಳಿದಾಸನನ್ನು, ಕುರಿತು ತೀ.ನಂ. ಶ್ರೀಅವರು ಬರೆದ ವಿಮರ್ಶೆಯ ಲೇಖನವನ್ನು, ಅವರ ನೆಚ್ಚಿನ ಗುರುಗಳಾದ ಪ್ರೊ. ಹಿರಿಯಣ್ಣನವರು ನೋಡಿದರು. ಹಿರಿಯಣ್ಣನವರಿಗೆ ಕಾಳಿದಾಸನ ಬಗೆಗೆ ಅಪಾರ ಗೌರವ. ತನ್ನ ಶಿಷ್ಯ ಕಾಳಿದಾಸನ ಬಗೆಗೆ ಮಾಡಿದ ಟೀಕೆಯಿಂದ ಅವರು ತೀರಾ ಅಸಮಾಧಾನಗೊಂಡರಂತೆ. ಅದೇ ವೇಳೆಗೆ ಹಿರಿಯಣ್ಣನವರ ಮನೆಗೆ ಬಂದ ತೀ.ನಂ. ಶ್ರೀಯವರನ್ನು ಕುರಿತು ಹಿರಿಯಣ್ಣನವರು ‘ಏನಪ್ಪ ಕಾಳಿದಾಸನಿಗಿಂತ ನೀನು ದೊಡ್ಡವನಾಗಿ ಬಿಟ್ಟೆಯೋ’- ಎಂದು ಗದರಿಕೊಂಡರಂತೆ. ಆಗ ಶ್ರೀಕಂಠಯ್ಯನವರು ಮರು ಮಾತಾಡದೆ ಹಿಂದಕ್ಕೆ ಬಂದರಂತೆ. ಆದರೆ ಕೆಲವು ದಿನಗಳ ನಂತರ ಮತ್ತೆ ಶ್ರೀಕಂಠಯ್ಯನವರು ಹಿರಿಯಣ್ಣನವರ ಮನೆಗೆ ಹೋದಾಗ ಹಿರಿಯಣ್ಣನವರು ‘ನೀನು ಕಾಳಿದಾಸನನ್ನು ಕುರಿತು ಬರೆದಿರುವುದು ಸರಿ; ಅವತ್ತು ನಾನು ಹಾಗೆಂದು ಬಿಟ್ಟೆ’-ಎಂದು ತೀ.ನಂ. ಶ್ರೀಯವರನ್ನು ತಬ್ಬಿಕೊಂಡು ಅತ್ತುಬಿಟ್ಟರಂತೆ. ಈ ದಿನ ಇಂತಹ ಸಾಹಿತ್ಯ ವಾತಾವರಣವನ್ನು ಎಲ್ಲಿಂದ ತರೋಣ? ಅಭಿಪ್ರಾಯ ಭೇದಗಳನ್ನು ಪರಸ್ಪರ ಗೌರವಿಸುತ್ತಾ ವ್ಯಕ್ತಿ ವ್ಯಕ್ತಿಗಳ ನಡುವಣ ಪ್ರೀತಿ ವಿಶ್ವಾಸಗಳು ಕದಡಾಗದೆ ಇರುವ ಹಾಗೆ ನೋಡಿಕೊಳ್ಳುವ ಆರೋಗ್ಯವಂತಿಕೆ ಎಲ್ಲಿದೆ ಈಗ?

ಇನ್ನೊಂದು ವಿಶೇಷವೆಂದರೆ ಶ್ರೀಕಂಠಯ್ಯನವರು ವಿದ್ವತ್ತಿನ ಹೆಸರಿನಲ್ಲಿ ತಮ್ಮ ಬರವಣಿಗೆಯನ್ನು ಗಣಿತಾತ್ಮಕವಾಗಿ, ಕ್ಲಿಷ್ಟವಾಗಿ ಅಥವಾ ಶುಷ್ಕವನ್ನಾಗಿ ಮಾಡಿಕೊಳ್ಳಲಿಲ್ಲ. ಎಂಥ ಬರವಣಿಗೆಗೂ ಒಂದು ರಸಸ್ಪರ್ಶವನ್ನು ಕೊಡುವ ಸಾಮರ್ಥ್ಯ ಅವರಿಗಿತ್ತು. ಒಂದೇ ಒಂದು ನಿದರ್ಶನವನ್ನು ನಾನು ಕೊಡುತ್ತೇನೆ. ‘ಕುದುರೆ’  ಎಂಬ ವಿಷಯವನ್ನು ಕುರಿತು ಒಂದು ಲೇಖನ ಇದೆ, ಅವರ ‘ಸಮಾಲೋಕನ’ದಲ್ಲಿ. ಅದು ಭಾಷಾಶಾಸ್ತ್ರಕ್ಕೆ ಸಂಬಂಧಪಟ್ಟ ಲೇಖನ. ಈ ಲೇಖನ ಆರಂಭವಾಗುವುದು ಹೀಗೆ: “ವಾಲ್ಮೀಕಿ ಮುನಿಯ ಆಶ್ರಮದ ವಟುಗಳು ‘ಕುದುರೆ’ ಎಂಬ ಪ್ರಾಣಿಯನ್ನು ನೋಡಿಯೇ ಇರಲಿಲ್ಲವಂತೆ. ಅದರ ಹೆಸರನ್ನು ಮಾತ್ರ ಜನರ ಬಾಯಿಂದ ಕೇಳಿದ್ದರು. ಪಶುಗಳ ಪಟ್ಟಿ, ಚತುರಂಗ ಬಲದ ಪಟ್ಟಿ ಇವುಗಳಲ್ಲಿ ಪಠಿಸಿದ್ದರು. ಶ್ರೀರಾಮನ ಯಾಗದ ಕುದುರೆ ಆಶ್ರಮಕ್ಕೆ ಬಂದಾಗ ಈ ಜಾತಿಯ ಪ್ರಾಣಿಯನ್ನು ವಟುಗಳು ಮೊಟ್ಟ ಮೊದಲನೆಯ ಸಲ ಕಂಡು ಸಡಗರದಲ್ಲಿ ಲವನ ಬಳಿ ಬಂದು: ‘ಅದಕ್ಕೆ ಹಿಂದುಗಡೆ ತುಂಬು ಬಾಲ, ಅದನ್ನು ಸುಮ್ಮನೆ ಅಲ್ಲಾಡಿಸುತ್ತಿರುತ್ತದೆ. ಅದರ ಕತ್ತು ನೀಳ; ಗೊರಸುಗಳು ನಾಲ್ಕೇ ನಾಲ್ಕು; ಗರಿಕೆಯನ್ನು ಮೇಯುತ್ತದೆ. ಮಾವಿನಕಾಯಿ ಗಾತ್ರದ ಲದ್ದಿಯನ್ನು ಹಾಕುತ್ತದೆ. ವಿವರಿಸುವುದೇನು? ಅದು ದೂರ ಹೋಗಿಬಿಡುತ್ತದೆ, ಬಾಬಾ ನಾವೂ ಹೋಗುತ್ತೇವೆ’ ಎಂದು ಅದನ್ನು ನೋಡಲು ಅವನನ್ನು ಎಳೆದುಕೊಂಡು ಹೋದಂತೆ ಭವಭೂತಿ ಉತ್ತರರಾಮ ಚರಿತದಲ್ಲಿ ಚಿತ್ರಿಸಿದ್ದಾನೆ. ಹೀಗೆ ಆಶ್ರಮದ ವಟುಗಳಿಗೆ ಮಾತ್ರವಲ್ಲ, ಮಾನವ ಜಾತಿಗೇ ಹಿಂದೊಮ್ಮೆ-ಅಷ್ಟೇನೂ ದೂರವಲ್ಲದ ಕಾಲದಲ್ಲಿ-ಕುದುರೆ ಬೆರಗಿನ ವಸ್ತುವಾಗಿದ್ದಿತು. ಮನುಷ್ಯ ಕುದುರೆಯನ್ನು ಪಳಗಿಸಿದ್ದು ಇತ್ತೀಚೆಗೆ, ಹಸು ಕುರಿ ನಾಯಿ ಹಂದಿ ಮೊದಲಾದ ಪ್ರಾಣಿಗಳನ್ನು ಪಳಗಿಸಿ ಎಷ್ಟೋ ಕಾಲವಾದ ಮೇಲೆ. ಕುದುರೆಯ ಸವಾರಿಗೆ ಮನುಷ್ಯನು ಮೊದಲು ಮೊಟ್ಟಮೊದಲು ಪ್ರಾರಂಭಿಸಿದ್ದು ಬಹುಶಃ ಮಧ್ಯ ಏಷ್ಯಾದಲ್ಲೆಂದೂ, ಬೆಬಿಲೋನಿಯಾದಲ್ಲಿ ಅದು ಕಾಣಿಸಿಕೊಂಡಿದ್ದು ಕ್ರಿ.ಪೂ. ಎರಡು ಸಾವಿರದ ಸುಮಾರಿನಲ್ಲೆಂದೂ ತಿಳಿದು ಬರುತ್ತದೆ. ಅಂತೂ ಈಜಿಪ್ಟ್ ಮೊದಲಾದ ದೇಶಗಳ ನಾಗರಿಕತೆ ಪ್ರಬಲಿಸಿ ಎಷ್ಟೋ ಕಾಲವಾಗಿದ್ದಾಗಲೂ ಈ ಪ್ರಾಣಿ ಮಾತ್ರ ಕಡಿವಾಣಕ್ಕೆ ಸಿಕ್ಕದೆ ಜೀನಿನ ಭಾರವನ್ನರಿಯದ ಕಾಡು ಮೇಡುಗಳಲ್ಲಿ ವಿಹರಿಸುತ್ತ ಆಕಸ್ಮಿಕವಾಗಿ ಜನರ ಕಣ್ಣಿಗೆ ಕಾಣಿಸಿಕೊಂಡು ಮಿಂಚಿನಂತೆ ಮಾಯವಾಗುತ್ತಿದ್ದಿರಬೇಕು. ಇದರ ಹೆಸರಂತೂ ಕುತೂಹಲಕರವಾಗಿದೆ” ಇತ್ಯಾದಿ ಪೀಠಿಕೆಯೊಂದಿಗೆ ‘ಅಶ್ವ’ ಎಂಬ ಮೂಲ ಪದವನ್ನು ಮೂಲೆಗೆ ಒತ್ತಿ ಅದರ ಸ್ಥಾನವನ್ನು ಆಕ್ರಮಿಸಿದ ‘ಘೋಟ’ ಎಂಬುದರ ಬಾಂಧವ್ಯವೇನು – ಹೀಗೆ ‘ಕುದುರೆ’ ಪದದ ನಿಷ್ಪತ್ತಿಯ ಬಗೆಗೆ ವಿಚಾರ ಮಾಡುತ್ತಾರೆ. ಭಾಷಾಶಾಸ್ತ್ರದಂಥ ವಿಷಯವನ್ನು ಕುರಿತು ಬರೆಯುವಾಗಲೂ ತೀ.ನಂ. ಶ್ರೀಯವರಿಗೆ ಒಂದು ಜನಾಂಗದ ಇತಿಹಾಸ, ತತ್ಪರಿಣಾಮವಾದ ಸಾಹಿತ್ಯದ ಹಿನ್ನೆಲೆ ಮರೆಯಾಗುವುದಿಲ್ಲ. ಆದುದರಿಂದಲೇ ಅವರ ಬರೆವಣಿಗೆಗೆ ಒಂದು ಸಮಗ್ರತೆ ಆತ್ಮೀಯತೆ ಮತ್ತು ರಸಸ್ಪರ್ಶ ಪ್ರಾಪ್ತವಾಗುತ್ತದೆ.

ಬರೆವಣಿಗೆಯಲ್ಲಿ ಹೇಗೋ ಮಾತಿನಲ್ಲಿಯೂ ಶ್ರೀಕಂಠಯ್ಯನವರು ಅದೇ ರಸ ಸ್ಪರ್ಶವನ್ನು ತರಬಲ್ಲವರಾಗಿದ್ದರು. ಅವರು ಯಾವ ವಿಷಯವನ್ನು ಕುರಿತು ಉಪನ್ಯಾಸ ಮಾಡಿದರೂ, ಅದಕ್ಕೆ ಒಂದು ಅಪೂರ್ವವಾದ ಶಿಲ್ಪವಿರುತ್ತಿತ್ತು. ಯಾವ ಒಂದು ಮಾತನ್ನೂ ವ್ಯರ್ಥ ಮಾಡದೆ, ಅತ್ಯಂತ ಅಚ್ಚುಕಟ್ಟಾಗಿ, ಆದರೆ ಅತ್ಯಂತ ಸ್ವಾರಸ್ಯವಾಗಿ ಮಾತನಾಡಬಲ್ಲವರಾಗಿದ್ದರು. ಅನೇಕ ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದ ಶ್ರೀಕಂಠಯ್ಯನವರ ತರಗತಿಯ ಬೋಧನೆ ವಿದ್ಯಾರ್ಥಿಗಳಿಗೆ ಒಂದು ರಸದೌತಣ. ಎಂತಹ ಶಾಸ್ತ್ರ ವಿಷಯವನ್ನೂ ಅತ್ಯಂತ ಸ್ವಾರಸ್ಯವನ್ನಾಗಿ ಮಾಡುವ ಕೌಶಲ ಅವರದು. ಇನ್ನು ಸಾಹಿತ್ಯದ ವಿಷಯಕ್ಕೆ ಬಂದಾಗ ಅವರು ಅದರಲ್ಲಿ ಕರಗಿಬಿಡುತ್ತಿದ್ದರು. ಪರಂಪರಾಗತವಾದ ವಿದ್ವತ್ತಿನ ಖಚಿತವಾದ ಹಿನ್ನೆಲೆ, ಆಧುನಿಕ ವೈಚಾರಿಕ ದೃಷ್ಟಿ, ಮತ್ತು ರಸವಂತಿಕೆ ಈ ಮೂರೂ ತೀ.ನಂ.ಶ್ರೀಕಂಠಯ್ಯನವರ ಬದುಕು ಬರೆಹಗಳಲ್ಲಿ ಸಂಗಮಿಸಿದ್ದವು.

ಬರೆವಣಿಗೆ ಎನ್ನುವುದು ತೀ.ನಂ.ಶ್ರೀಯವರ ಪಾಲಿಗೆ ಒಂದು ಹವ್ಯಾಸ-ವಾಗಿರಲಿಲ್ಲ; ಅದೊಂದು ಶಿಸ್ತು ಆಗಿತ್ತು. ಪ್ರತಿಯೊಂದನ್ನು ತಲಸ್ಪರ್ಶಿಯಾಗಿ ನೋಡದೆ ಅವರು ಏನನ್ನೂ ಬರೆಯಲು ತೊಡಗುತ್ತಲೇ ಇರಲಿಲ್ಲ. ಅಲ್ಲದೆ ಅವರು ಕೇವಲ ಏನನ್ನಾದರೂ ಬರೆಯುವುದಕ್ಕೆಂದು ಮಾತ್ರ ಓದುತ್ತಿದ್ದವರಲ್ಲ. ತಾವು ಬೆಳೆಯುವುದಕ್ಕೆಂದು ಓದುತ್ತಿದ್ದವರು. ಹೀಗಾಗಿ ಬಹುಭಾಷೆಯ ಬಹುಪ್ರಕಾರದ ತಿಳಿವನ್ನು ಮೈಗೂಡಿಸಿಕೊಂಡ ಮುಕ್ತ ಪ್ರಜ್ಞೆಯ ವ್ಯಕ್ತಿತ್ವ ತೀ.ನಂ.ಶ್ರೀಕಂಠಯ್ಯನವರದು. ಈ ವ್ಯಕ್ತಿತ್ವ ತನ್ನ ಪ್ರಭಾವವನ್ನು ದಟ್ಟವಾಗಿ ಹರಡಿಕೊಂಡು ಹೊಸಗನ್ನಡ ಸಾಹಿತ್ಯ ಹಾಗೂ ಸಂಶೋಧನೆಯ ಚರಿತ್ರೆಯಲ್ಲಿ ಮರೆಯಲಾಗದ ಸ್ಥಾನವನ್ನು ಗಳಿಸಿಕೊಂಡಿದೆ.

ಚದುರಿದ ಚಿಂತನೆಗಳು : ೨೦೦೦