ತೀ.ನಂ.ಶ್ರೀಕಂಠಯ್ಯನವರು ೧೯೦೬ ರಲ್ಲಿ ತೀರ್ಥಪುರ ಎಂಬ ಹಳ್ಳಿಯಲ್ಲಿ ಜನಿಸಿದರು. ಪ್ರಸಿದ್ದ ವಿದ್ವಾಂಸರಾಗಿ, ಭಾಷಾವಿಜ್ಞಾನಿಗಳಾಗಿ, ಇವರು ಮಾಡಿರುವ ಕನ್ನಡ ಸೇವೆ ಗಣನೀಯವಾದುದು. ಶ್ರೀಕಂಠಯ್ಯನವರಿಗೆ ವಿಮರ್ಶೆ, ಭಾಷಾಶಾಸ್ತ್ರ, ಛಂದಸ್ಸು, ಕಾವ್ಯಮೀಮಾಂಸೆಯ ವಿಷಯಗಳುಪ್ರಿಯವಾಗಿದ್ದವು. ಜೊತೆಗೆ ಕವಿತ್ವದ ಒಲವೂ ಇತ್ತು. ಭಾರತೀಯ ಕಾವ್ಯ ಮೀಮಾಂಸೆ, ಕಾವ್ಯ ಸಮೀಕ್ಷೆ, ಕಾವ್ಯಾನುಭವ, ನಂಬಿಯಣ್ಣನ ರಗಳೆ, ರಾಕ್ಷಸನ ಮುದ್ರಿಕೆ, ನಂಟರು, ಗದಾಯುದ್ದಸಂಗ್ರಹ, ಕೃತಿಗಳು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.‘ಭಾರತೀಯ ಕಾವ್ಯ ಮೀಮಾಂಸೆ, ಕನ್ನಡದಲ್ಲಿ ಒಂದು ವಿಶಿಷ್ಟವಾದ ಕೃತಿ. ಶಬ್ದಾರ್ಥಗಳ ಸಂಭಂಧ, ಭಾವಗಳ ವ್ಯಾಪ್ತಿ, ಶಬ್ದಶಕ್ತಿ, ಧ್ವನಿವ್ಯಾಪಾರ, ಮೊದಲಾದವುಗಳ ಬಗ್ಗೆಯಷ್ಟೇ ಅಲ್ಲದೆ, ಪ್ರಾಚೀನ ವಿಮರ್ಷಕರು ಗುರ್ತಿಸಿದ ಮಹತ್ವದ ಮೌಲ್ಯಗಳಾದ ರಸ, ಭಾವ, ಧ್ವನಿ, ರೀತಿ, ಗುಣ, ಅಲಂಕಾರ, ಇವುಗಳ ಬಗ್ಗೆ ಅದಿಕಾರಯುತವಾದ ಚರ್ಚೆ ಇಲ್ಲಿ ದೊರೆಯುತ್ತದೆ. ‘ಕಾವ್ಯ ಸಮೀಕ್ಷೆ, ಯಲ್ಲಿ ಅವರ ವೈಯಕ್ತಿಕ ಪ್ರತಿಭೆಯನ್ನು ಕಾಣಬಹುದು.

ಪುರಾತನ ಸಂಸ್ಕೃತ ಹಾಗೂ ಕನ್ನಡದ ಕಾವ್ಯ ನಾಟಕಗಳಲ್ಲಿರುವ ವಿಷಮ ಪ್ರಣಯದ ಚಿತ್ರಗಳನ್ನು ಕುರಿತ ಲೇಖನಗಳಿವೆ. ಸಮಾಲೋಕನದಲ್ಲಿ ಬಿ.ಎಂ.ಶ್ರೀ, ಬೇಂದ್ರೆ, ರಾಜರತ್ನಂ, ಡಿ.ವಿ.ಜಿ, ಕವಿಗಳ ಕಾವ್ಯವನ್ನು ವಿಮರ್ಶಿಸಲಾಗಿದೆ. ಭಾಷಾವಿಜ್ಞಾನ ದೃಷ್ಟಿಯಿಂದ ನಿಘಂಟನ್ನು ನಿರ್ಮಿಸುವ ಪದ್ದತಿಯನ್ನು ಇವರು ರೂಡಿಸಿದರು. ಮಾದ್ಯಮಿಕ ಹಾಗೂ ಪ್ರೌಡ ಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಾಶಾಸ್ತ್ರದ ದೃಷ್ಟಿಯಿಂದ ಬರೆದ ಮಧ್ಯಮ ವ್ಯಾಕರಣ ಇಂದಿಗೂ ಒಂದು ಉತ್ತಮ ವ್ಯಾಕರಣ ಕೃತಿಯಾಗಿದೆ. ಇಂಗ್ಲಿಷ್, ಕನ್ನಡ, ಮತ್ತು, ಸಂಸ್ಕೃತ ಭಾಷೆಗಳಲ್ಲಿ ಪರಿಣತರಾಗಿದ್ದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ‘ಭಾರತೀಯ ಕಾವ್ಯ ಮೀಮಾಂಸೆ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ. ೧೯೬೬ ಸೆಪ್ಟೆಂಬರ್ ೧೭ ರಂದು ತೀರಿಕೊಂಡ ಇವರ ಸ್ಮರಣಾರ್ಥವಾಗಿ ‘ಶ್ರೀಕಂಠ ತೀರ್ಥ, ಎಂಬ ಸ್ಮರಣ ಗ್ರಂಥವನ್ನು ೧೯೭೩ ರಲ್ಲಿ ಪ್ರಕಟಿಸಲಾಗಿದೆ.