ಅಂದು ಓಣಿಯ ಮಕ್ಕಳಿಗೆ ಹಿಗ್ಗೇ ಹಿಗ್ಗು. ಕಬ್ಬಿನ ಸುಗ್ಗಿಯೇ ಸುಗ್ಗಿ. ಹೊಲದಿಂದ ಮನೆಗೆ ಬರುವವರೆಗೂ ಕಬ್ಬಿನ ಜಲ್ಲೆಗಳನ್ನು ಓಣಿಯ ಮಕ್ಕಳಿಗೆಲ್ಲ ಒಂದೊಂದು ಹಂಚುತ್ತ ಉಳಿದ ಒಂದು ಕಬ್ಬನ್ನು ತೆಗೆದುಕೊಂಡು ಮನೆಗೆ ಬಂದರು. ಕೂಡಲೇ ಮಕ್ಕಳು, “ಅಪ್ಪಾಜಿ ಕಬ್ಬು ತಂದಿದ್ದಾರೆ. ಅಪ್ಪಾಜಿ ಕಬ್ಬು ತಂದಿದ್ದಾರೆ” ಎಂದು ಒಂದೇ ಸಮನೆ ಕೂಗುತ್ತ ಕುಣಿಯತೊಡಗಿದರು.

ನಿನ್ನ ಕರುಣೆಗೆ ಮೇರೆಯೇ ಇಲ್ಲ”

ಈ ಶಬ್ದ ಕೇಳಿ ಮನೆಯಲ್ಲಿದ್ದ ಮಡದಿಯೂ ಓಡಿ ಬಂದು “ಕಬ್ಬು ತಂದಿರಾ?” ಎಂದು ಆನಂದದಿಂದ ಕೇಳುತ್ತ ಕೈಯಲ್ಲಿದ್ದ ಕಬ್ಬನ್ನು ನೋಡಿ, “ಅಷ್ಟು ದೂರ ಹೊಲಕ್ಕೆ ಹೋಗಿ ಒಂದೇ ಗಳ ಕಬ್ಬು ತಂದಿರಾ?” ಎಂದಳು.

“ಇಲ್ಲ, ಆ ಹೊಲದ ಒಡೆಯ ಒಂದು ಹೊರೆ ಕಬ್ಬು ಕೊಟ್ಟಿದ್ದ. ಓಣಿಯ ಮಕ್ಕಳಿಗೆ ಒಂದೊಂದುಗಳ ಕೊಟ್ಟೆ. ಉಳಿದ ಒಂದು ಕಬ್ಬು ತಂದಿದ್ದೇನೆ.”

“ಏಳೆಂಟು ದಿನಗಳಿಂದ ಮನೆಯಲ್ಲಿ ಮಕ್ಕಳು ಕಬ್ಬು ಕಬ್ಬು ಎಂದು ಒಂದೇ ಸಮನೆ ಹಲುಬುತ್ತಿದ್ದರೂ ಯಾರೂ ನಮ್ಮ ಮಕ್ಕಳ ಕೈಯಲ್ಲಿ ಒಂದು ಗಣಿಕೆ ಕಬ್ಬನ್ನು ಸಹ ಕೊಡಲಿಲ್ಲ. ನೀವು ಮಾತ್ರ ಎಲ್ಲ ಕಬ್ಬುಗಳನ್ನು ಕೊಟ್ಟು ಒಂದೇ ಗಳ ಮನೆಗೆ ತಂದಿರುವಿರಿ. ಮಕ್ಕಳ ಪರಿವೆಯೂ ಸಹ ನಿಮಗಿಲ್ಲ” ಎಂದು ಮನೆಯಾಕೆ ಕನಲಿ ಕಿಡಿಕಿಡಿಯಾಗಿ, ಆ ಸಿಟ್ಟಿನ ಭರದಲ್ಲಿ ಕಬ್ಬನ್ನು ಸೆಳೆದು ಎದುರಿಗದ್ದ ಆ ವ್ಯಕ್ತಿಯ ಬೆನ್ನಿಗೆ ಬಾರಿಸಿಯೇ ಬಿಟ್ಟಳು. “ಹಾ! ಪಾಂಡುರಂಗ, ವಿಠ್ಠಲ, ಭಕ್ತವತ್ಸಲಾ! ದಯಾಘನ! ಭಕ್ತರನ್ನು ಕಾಪಾಡುವ ನಿನ್ನ ಕರುಣೆಗೆ ಮೇರೆಯೇ ಇಲ್ಲ. ನಾನು ಮನೆಗೆ ಒಂದೇ ಕಬ್ಬನ್ನು ತಂದರೆ ಅದನ್ನು ನೀನು ಸರಿಯಾಗಿ ನಾಲ್ಕು ತುಂಡುಗಳಾಗಿ ಕರುಣಿಸಿದಿ” ಎಂದು ಆತ ಸಂತೋಷದಿಂದ ನುಡಿದರು. ಇಬ್ಬರು ಮಕ್ಕಳಿಗೆ ಒಂದೊಂದು ತುಂಡನ್ನು ಕೊಟ್ಟು, ಮಡದಿಯ ಕೈಯಲ್ಲಿ ಒಂದನ್ನಿಟ್ಟು, ತಮ್ಮ ಕೈಯಲ್ಲಿ ಒಂದನ್ನು ಹಿಡಿದುಕೊಂಡು ಚಪ್ಪಾಳೆ ತಟ್ಟುತ್ತ ಹಾಡಿ ಕುಣಿಯತೊಡಗಿದರು.

ಸಿಟ್ಟನ್ನೇ ಮಾಡಿಕೊಳ್ಳದ ಈ ಶಾಂತಮೂರ್ತಿಯನ್ನು ನೋಡಿ ಹೊಡೆದ ಸತಿ ತಬ್ಬಿಬ್ಬಾದಳು.

ಆ ಸಹನಾಮೂರ್ತಿ ತುಕಾರಾಮ್ ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿಯೇ ಹೆಚ್ಚಿನ ಭಾಗ್ಯವಿದೆ, ಆನಂದವಿದೆ ಎಂದು ತಿಳಿದು ನಡೆಯುತ್ತಿದ್ದ ಸಂತ. ಕಬ್ಬಿನ ಜಲ್ಲೆಯಿಂದ ಬೆನ್ನಿಗೆ ಹೊಡೆದವಳು ಅವನ ಹೆಂಡತಿ ಜೀಜಾಬಾಯಿ. ಕಬ್ಬನ್ನು ಸವಿದವರು ಅವರ ಚಿಕ್ಕ ಮಕ್ಕಳು ಕಾಶಿ, ಮಹಾದೇವರು.

ಸಜ್ಜನರಾದ ತಂದೆತಾಯಿ

ಮಹಾರಾಷ್ಟ್ರದಲ್ಲಿ ಪುಣೆ ಒಂದು ದೊಡ್ಡ ಪಟ್ಟಣ. ಅದರ ಹತ್ತಿರದಲ್ಲಿಯೇ ದೇಹು ಎಂಬ ಚಿಕ್ಕ ಗ್ರಾಮ. ತುಸು ಮುಂದೆ ನಡೆದರೆ ಭಂಡಾರಿಯ ಬೆಟ್ಟ. ಪಕ್ಕದಲ್ಲಿಯೇ ಇಂದ್ರಾಯಣಿ ನದಿ. ಈ ನದಿಯ ದಂಡೆಯ ಮೇಲೆ ಪಂಢರಿನಾಥನ ದೇವಾಲಯ. ವಿಶ್ವಂಭರಬುವಾ ಮತ್ತು ಅಮೂಬಾಯಿ ಈ ದೇವಾಲಯದ ಅರ್ಚಕ ದಂಪತಿಗಳು. ಇವರ ವಂಶದಲ್ಲಿ ಬೋಲ್ಹೋಬಾ ಮತ್ತು ಕನಕಬಾಯಿ ಆದರ್ಶ ದಂಪತಿಗಳು. ದಯೆ, ಅಂತಃಕರಣ, ಅನುಕಂಪಗಳ ಆಗರವಾಗಿತ್ತು ಇವರ ಹೃದಯ. ಮೊದಲಿನಿಂದಲೂ ನಡೆದು ಬಂದ ವ್ಯಾಪಾರ ಉದ್ದಿಮೆಗಳು ಇನ್ನೂ ಭರದಿಂದ ಸಾಗಿದ್ದವು.

ಆದರೆ ಈ ದಂಪತಿಗಳಿಗೆ ಸಂತಾನ ಪ್ರಾಪ್ತಿಯೇ ಆಗಿರಲಿಲ್ಲ. ಮಕ್ಕಳು ಬೇಕೆಂದು ಹಂಬಲಿಸುತ್ತಿದ್ದರು.

ಕಡೆಗೂ ಈ ದಂಪತಿಗಳ ಹಂಬಲ ಈಡೇರಿತು. ಅವರಿಗೆ ಒಂದು ಗಂಡು ಮಗು ಜನಿಸಿತು. ಅವನ ಹೆಸರು ಶಹಾಜಿ. ಅನಂತರ ೧೬೦೮ರಲ್ಲಿ ಇನ್ನೊಬ್ಬ ಮಗ ಜನಿಸಿದ. ಅವನನ್ನು ತುಕಾರಾಮ್ ಎಂದು ಕರೆದರು. ತರುವಾಯ ಮತ್ತೊಬ್ಬ ಮಗಳು ಮತ್ತು ಕನ್ಹೋಜಿ ಎಂಬ ಮಗ ಜನಿಸಿದರು.

ಭಕ್ತ-ವ್ಯವಹಾರ ಕುಶಲ

ತುಕಾರಾಮ್ ಬಹು ಚುರುಕು, ಚಾಣಾಕ್ಷ ಬಾಲಕನಾಗಿದ್ದನು. ತನ್ನ ಅನಂತ ಚಟುವಟಿಕೆಗಳಿಂದ ತಂದೆ ತಾಯಿಗಳನ್ನು, ಮನೆಗೆ ಬರುವ ಸಾಧುಸಂತರನ್ನು ಸಂತೋಷಗೊಳಿಸುತ್ತಿದ್ದನು. ಅತಿಥಿ ಅಭಾಗ್ಯತರನ್ನು ಕರೆತರುವುದು, ಅವರ ಸೇವೆ ಮಾಡುವುದೆಂದರೆ ತುಕಾರಾಮನಿಗೆ ಎಲ್ಲಿಲ್ಲದ ಆನಂದ, ಆತುರ.

ತುಕಾರಾಮನ ಕಾಂತಿಯಿಂದೊಡಗೂಡಿದ ಕಣ್ಣುಗಳು, ನೀಳವಾದ ನಾಸಿಕ, ಪ್ರಶಾಂತವಾದ ಮುಖಮುದ್ರೆ, ನಯವಿನಯದ ಮಾತು ಎಲ್ಲರನ್ನೂ ಆಕರ್ಷಿಸುತ್ತಿದ್ದವು. ಮನೆಯಲ್ಲಿ ಭಜನೆ ನಡೆದಾಗ ಬಾಲಕ ತುಕಾರಾಮನು ಆ ಭಜನೆಯ ಮೇಳದಲ್ಲಿ ಭಾಗಿಯಾಗುತ್ತಿದ್ದನು. ಮಂಜುಳ ಕಂಠದಿಂದ ಸರಾಗವಾಗಿ ಹಾಡುತ್ತಿದ್ದನು. ಇದನ್ನು ಕಂಡು ಜನ ಬೆರಗಾಗುತ್ತಿದ್ದರು.

ತಂದೆಯೊಡನೆ ದೇವರ ಪೂಜೆ, ಪ್ರದಕ್ಷಿಣೆ, ಭಜನೆಗಳನ್ನು ಮಾಡುತ್ತಿದ್ದ ತುಕಾರಾಮನಿಗೆ ಲೋಕವ್ಯವಹಾರವೂ ತಿಳಿದಿತ್ತು. ದೇವರ ಚಿಂತನೆಯಲ್ಲಿ ಮನತೊಡಗಿಸಿದ್ದ ಇವನು ಬಾಳಿನ ಹಾದಿಯನ್ನೂ ಬಲ್ಲವನಾಗಿದ್ದನು. ತಂದೆ ತಾಯಿಯರಲ್ಲಿ ಅಪಾರ ಭಕ್ತಿ. ಬೋಲ್ಹೋಬಾ ಹುಟ್ಟು ವಿರಾಗಿಯಾಗಿ ಹಿರಿಯ ಮಗ ಶಹಾಜಿಗೂ ಅಥವಾ ಇನ್ನೂ ತೀರ ಚಿಕ್ಕವನಾದ ಕನ್ಹೋಜಿಗೂ ಸಂಸಾರದ ಭಾರವನ್ನು ಹೇರಲು ಬಯಸದೆ ವ್ಯವಹಾರ ಕುಶಲನಾದ ತುಕಾರಾಮನ ಹೆಗಲಿಗೆ ಏರಿಸಿ ತಾವು ನಿಶ್ಚಿಂತರಾದರು.

ತುಕಾರಾಮರಲ್ಲಿ ಔದಾರ್ಯ, ಸರಳತೆ ಮುಂತಾದ ಸದ್ಗುಣಗಳು ತಂದೆ ತಾಯಿಗಳಿಂದ ಬಳುವಳಿಯಾಗಿ ಬಂದಿದ್ದವು. ಬಡವರನ್ನು ಕಂಡರೆ ಅವರಿಗೆ ಬಹು ಕನಿಕರ. ಇಂತಹ ಸಿರಿಮನದ ತುಕಾರಾಮರ ಕೈಯಲ್ಲಿ ಮನೆಯ ಹೊಣೆಗಾರಿಕೆ ಬರುವುದೊಂದೇ ತಡ ಧರ್ಮದ ಬಾಗಿಲಿಗೆ ದಯೆಯ ತೋರಣ ಕಟ್ಟಿದಂತಾಯಿತು.

ತುಕಾರಾಮರು ದಕ್ಷತೆಯಿಂದ, ಸಾಮರ್ಥ್ಯದಿಂದ ತಮ್ಮ ವ್ಯವಹಾರ ಉದ್ಯಮವನ್ನು ಬೆಳೆಸಿ, ಗಿರಾಕಿಗಳ ಹಿತೈಷಿಗಳಾದರು. ಚಿಕ್ಕಂದಿನಲ್ಲಿಯೇ ಹಿರಿಯ ವ್ಯಾಪಾರಿಗಳ ಸಾಲಿನಲ್ಲಿ ಸ್ಥಾನ ಪಡೆದರು.

ತುಕಾರಾಮರಿಗೆ ಹದಿಮೂರು ವರ್ಷವಾಗಿದ್ದಾಗ ರಖಮಾಯಿ ಎಂಬ ಹುಡುಗಿಯೊಡನೆ ಒಳ್ಳೆಯ ವಿಜೃಂಭಣೆಯಿಂದ ಮದುವೆ ನೆರವೇರಿತು. ರಖಮಾಯಿಗೆ ಉಬ್ಬಸ ರೋಗವಿದ್ದುದರಿಂದ ಮುಂದೆ ಕೆಲದಿನಗಳ ಮೇಲೆ ಜೀಜಾಬಾಯಿ ಎಂಬ ಶ್ರೀಮಂತ ಮನೆತನದ ಹುಡುಗಿಯೊಡನೆ ಎರಡನೇ ಮದುವೆ ನೆರವೇರಿತು.

ತುಕಾರಾಮರಿಗೆ ಜನಜೀವನದ ಸ್ಥಿತಿಗತಿಗಳ ಅರಿವಾಗಿತ್ತು. ಜನಸಾಮಾನ್ಯರು ಪಡುತ್ತಿದ್ದ ಬವಣೆಯನ್ನು ಕಂಡು ಮಮ್ಮಲ ಮರುಗತೊಡಗಿದರು. ಜನಜೀವನದ ಓರೆಕೋರೆಗಳನ್ನು ತಿದ್ದಲು ತಮ್ಮ ಜೀವನವನ್ನು ಮೀಸಲಾಗಿಡಲು ಹವಣಿಸುತ್ತಿದ್ದರು.

ಕಷ್ಟ ಪರಂಪರೆ

ಅನುರೂಪಳಾದ ಸತಿ, ಉತ್ತಮ ಸಂಪಾದನೆ, ಎಡಬಿಡದೆ ಕಾರ್ಯಕಲಾಪ, ಜನರೊಳಗೆ ಮನ್ನಣೆ ಹೀಗೆ ಯಾವುದಕ್ಕೂ ಕೊರತೆಯಿಲ್ಲ ತುಕಾರಾಮರ ಜೀವನದೊಳಗೆ. ಆದರೆ ತುಕಾರಾಮರು ತಮ್ಮ ಕಾರ್ಯಗೌರದ ಮಧ್ಯದಲ್ಲಿ ಪರಮಾತ್ಮನ ನಾಮಸ್ಮರಣೆಯನ್ನು ಎಂದೂ ಮರೆತವರಲ್ಲ.

ಅಷ್ಟರಲ್ಲಿ ಅವರ ಜೀವನದಲ್ಲಿ ದೊಡ್ಡ ಬಿರುಗಾಳಿ ಎದ್ದಿತು. ತಂದೆತಾಯಿಗಳು ಅಕಸ್ಮಾತ್ತಾಗಿ ಸ್ವರ್ಗಸ್ಥರಾದರು. ಇದೇ ಸಮಯದಲ್ಲಿ ಅಣ್ಣ ಶಹಾಜಿ ಸಂನ್ಯಾಸಿಯಾಗಿ ತೀರ್ಥಯಾತ್ರೆಗೆ ಹೊರಟು ಹೋದರು. ಅತ್ತಿಗೆ ಮಡಿದಳು. ಆಗ ತುಕಾರಾಮರಿಗೆ ಹುಣ್ಣಿನ ಮೇಲೆ ಬರೆ ಎಳೆದಂತಾಯಿತು. ಅದೇ ವರ್ಷ ಭೀಕರ ಬರಗಾಲ ತಲೆದೋರಿತು. ಇದರಿಂದ ವ್ಯವಹಾರ ಉದ್ಯಮಗಳು ಕುಂಠಿತವಾದವು. ಭೂಮಿ ಬಂಜರಾಯಿತು. ದನಕರುಗಳು ಸತ್ತು ಹೋದವು. ಎಲ್ಲಿ ನೋಡಿದರಲ್ಲಿ ಹಾಹಾಕಾರವೆದ್ದಿತು. ತುಕಾರಾಮರ ಜೀವನದಲ್ಲಿ ನಿರಾಸೆ ನಿಟ್ಟುಸಿರುಗಳೇ ಕಾಣತೊಡಗಿದವು. ತಮಗೆ ಬರಬೇಕಾದ ಬಾಕಿ ಹಣ ಬರಲಿಲ್ಲ. ತಾವು ಕೊಡತಕ್ಕ ಹಣಕ್ಕೆ ಹೆಚ್ಚಿನ ತಗಾದೆ ನಡೆಯಿತು. ಇದರಿಂದ ಮನೆಯಲ್ಲಿ ಚಾರುಚೂರು ವಸ್ತುಗಳು ಕರಗಿಹೋದವು. ಇದೇ ಸಮಯದಲ್ಲಿ ಮೊದಲನೆಯ ಹೆಂಡತಿ ರಖಮಾಯಿ, ಅವಳ ಮಗು ಈರ್ವರೂ ಅನ್ನ ಅನ್ನವೆಂದು ಒದ್ದಾಡಿ ಸತ್ತುಹೋದರು.

ಹೀಗೆ ಅಪಾರವಾದ ಕಷ್ಟನಷ್ಟಗಳು ಬೆಟ್ಟಗಳ ಸಾಲಿನಂತೆ ಒಂದರ ಹಿಂದೊಂದು ಅವರ ಮೇಲೆ ಎರಗಿದವು. ಇದರಿಂದ ಅವರ ಮನಸ್ಸು ಅಲ್ಲೋಲ ಕಲ್ಲೋಲವಾಯಿತು. ಸಂಸಾರದಲ್ಲಿ ಅವರ ಆಸಕ್ತಿ ಕಡಿಮೆಯಾಯಿತು. ಅವರು ತಮ್ಮ ಆರಾಧ್ಯ ದೇವತೆಯಾದ ವಿಠ್ಠಲಸ್ವಾಮಿಗೆ ಶರಣುಹೋದರು. ಅವರ ಅಂತರಂಗದಲ್ಲಿ ವಿಠ್ಠಲಸ್ವಾಮಿಯ ಚೆಲುವು-ಒಲವುಗಳು ಅರಳಿ ಘಮಘಮಿಸತೊಡಗಿದವು.

ಮನೆಗೆ ಬಂದ ಕಡಗ

ಆಗರ್ಭ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳೆದು ಬಂದಿದ್ದ ಜೀಜಾಬಾಯಿಗೆ ಈ ಯಾತನೆಯಿಂದ ದಿಗ್ಭ್ರಮೆಯಾಯಿತು. ಆದರೂ ಮನಸ್ಸುಗಟ್ಟಿ ಮಾಡಿ ಸಮೀಪದ ಬಂಧುಗಳ ಸಹಾಯ ಸಹಕಾರ ಪಡೆದಳು. ವ್ಯವಹಾರ ಕುಶಲರಾದ ತುಕಾರಾಮರಿಗೆ ಪುನಃ ವ್ಯಾಪಾರ ಮಾಡಿಕೊಂಡು ಹೋಗುವಂತೆ ಪ್ರೇರಣೆ ನೀಡಿದಳು.

ಒಮ್ಮೆ ಸ್ವತಃ ಜೀಜಾಬಾಯಿಯೇ ಮೆಣಸಿನಕಾಯಿಯನ್ನು ಕೊಂಡು ಎತ್ತಿನ ಮೇಲೆ ಹೇರಿ ನೆರೆ ಹಳ್ಳಿಗೆ ವ್ಯಾಪಾರಕ್ಕೆ ಕಳುಹಿಸಿದಳು. ತುಕಾರಾಮರು ಊರ ಮುಂದಿನ ಮಾರುಕಟ್ಟೆಯಲ್ಲಿ ಗಂಟನ್ನು ಇಳಿಸಿ ಎತ್ತನ್ನು ಸಮೀಪದ ಗಿಡಕ್ಕೆ ಕಟ್ಟಿ ಪಾಂಡುರಂಗನ ಧ್ಯಾನದಲ್ಲಿ ಮಗ್ನರಾದರು. ಅಷ್ಟರಲ್ಲಿಯೇ ಗಿರಾಕಿಗಳು ಬಂದು ಮೆಣಸಿನಕಾಯಿ ಧಾರಣೆ ಕೇಳಿದರು. “ಊರಲ್ಲಿ ನಡೆದ ಧಾರಣೆ ನಿಮಗೆ ಗೊತ್ತಿರಬಹುದಲ್ಲ. ನಡೆದ ಧಾರಣೆಯಂತೆ ತೆಗೆದುಕೊಂಡು ಹೋಗಿರಿ” ಎಂದು ಹೇಳಿದರು. ಈ ಸಾಧುವಿನ ಮನವನ್ನು ಅರಿತು ಜನರು ನನಗೆ ತನಗೆ ಎಂದು ಕಚ್ಚಾಡತೊಡಗಿದರು. ಮನಸ್ಸಿಗೆ ಬಂದಂತೆ ತಾವೇ ತೂಕ ಮಾಡಿಕೊಂಡು ಮೆಣಸಿನಕಾಯಿಯನ್ನು ಒಯ್ಯತೊಡಗಿದರು. ಮೆಣಸಿನಕಾಯಿಯನ್ನು ತೆಗೆದುಕೊಂಡು ಹೋದವರು ಕೆಲವರು ಹಣ ಕೊಟ್ಟರು. ಕೆಲವರು ಕೊಡಲೇ ಇಲ್ಲ. ಈ ಸಂಗತಿಯನ್ನು ಕೇಳಿದ ಆ ಹಳ್ಳಿಯ ಕೆಲ ಸಾತ್ವಿಕರು ಮುಂದೆ ಬಂದು ಹಣ ವಸೂಲು ಮಾಡಿ ಆ ಸಂತ ವ್ಯಾಪಾರಿಗೆ ಕೊಟ್ಟರು.

 

"ನಿಮ್ಮ ಮಗನ ಉಪನಯನ ನಡೆಸಿರಿ."

ಅಂದಿನ ವ್ಯಾಪಾರವನ್ನು ಮುಗಿಸಿಕೊಂಡು ಬರುತ್ತಿರುವಾಗ ದಾರಿಯಲ್ಲಿ ವಂಚಕರು ಇವರ ಬಳಿ ಹಣವಿದ್ದುದು ಕಂಡು ಚಿನ್ನದ ಕಡಗವೆಂದು ಹೇಳಿ ಹಿತ್ತಾಳೆಯ ಕಡಗವನ್ನು ಕೊಟ್ಟು ಇದ್ದಷ್ಟು ಹಣ ದೋಚಿಕೊಂಡು ಹೋದರು.

ಹಿತ್ತಾಳೆಯ ಕಡಗ ತೆಗೆದುಕೊಂಡು ಮನೆಗೆ ಬಂದ ಪತಿಯನ್ನು ನೋಡಿ ಜೀಜಾಬಾಯಿಗೆ ಸಂತಾಪವಾಯಿತು. ಚಿಂತೆಯಿಂದ ಒಂದೇ ಸಮನೆ ತಳಮಳಿಸತೊಡಗಿದಳು. ತೆಗೆದ ಸಾಲ ಹಾಗೇ ಉಳಿಯಿತು. ನಾಳಿನ ಉದ್ಯೋಗಕ್ಕೂ ಹಣವಿಲ್ಲದಂತೆ ಆಯಿತು. ಮುಂದೇನು ಗತಿಯೆಂದು ಮರುಗತೊಡಗಿದಳು.

ನೀವು ಮನಸ್ಸು ಮಾಡಿದರೆ-“

ಇಷ್ಟಾದರೂ ತುಕಾರಾಮರು ನಿಶ್ಚಿಂತರಾಗಿ ಭಜನೆ ಮಾಡುತ್ತ ಕುಳಿತಿದ್ದರು. ಅವರ ಬಳಿಗೆ ಹೋಗಿ ಜೀಜಾಬಾಯಿಯು, “ನಿನ್ನೆ ಕಷ್ಟಪಟ್ಟು ಹಣ ತಂದು ಕೊಟ್ಟಿದ್ದೆ. ಎಲ್ಲವನ್ನೂ ನಿರರ್ಥಕಗೊಳಿಸಿದಿರಿ. ಇನ್ನು ಮೇಲೆ ನಿಮ್ಮ ಕಡೆಯಿಂದ ಕೆಲಸ ಮಾಡುವುದಾಗುವುದಿಲ್ಲ. ಭಿಕ್ಷೆಗೆ ಹೋಗೋಣ ನಡೆಯಿರಿ. ಹೇಗೂ ನಿಮ್ಮ ಕೈಯಲ್ಲಿ ತಂಬೂರಿ ಇದೆ. ನಾನು ತಾಳ ಹಾಕುವೆ. ಕಾಶಿ, ಮಹಾದೇವರು ನಮ್ಮ ಜೊತೆಯಲ್ಲಿಯೇ ಇರಲಿ” ಎಂದು ಕಠೋರವಾಗಿ ಮಾತನಾಡಿದಳು. ತುಕಾರಾಮರು ಎಂತಹ ಪ್ರಸಂಗದಲ್ಲಿಯೂ ತಾಳ್ಮೆಯನ್ನು ಕಳೆದುಕೊಳ್ಳುತ್ತಿರಲಿಲ್ಲ. ಈಗಲೂ ಸಹ, “ಎಂತಹ ಮಾತನಾಡಿದಿ! ಭಿಕ್ಷೆ ಬೇಡಲಿಕ್ಕೆ ನಮಗೇನಾಗಿದೆ? ತುಸು ತಾಳು, ಎಲ್ಲವನ್ನೂ ಭಗವಂತ ಸರಿಪಡಿಸುತ್ತಾನೆ” ಎಂದು ಮೃದುವಾಗಿಯೇ ಹೇಳಿದರು.

“ಅದೇ ಭಗವಂತನೇ ನಿಮ್ಮನ್ನು ಮೋಸಗೊಳಿಸುತ್ತಿರುವನು. ನಿಮ್ಮ ವ್ಯವಹಾರ ಕೌಶಲ, ಜಾಣತನ, ಕೈತುಂಬ ಹಣ ಗಳಿಸುವ ನಿಮ್ಮ ಬುದ್ಧಿಶಕ್ತಿ, ವಿಚಾರವಾಹಿನಿಗೆ ನಿಮ್ಮ ವಿಠ್ಠಲನೇ ಬೆಂಕಿ ಇಡುತ್ತಿದ್ದಾನೆ. ಎಂಥ ಅನ್ಯಾಯ ಮಾಡುತ್ತಿದ್ದೀರಿ! ಒಮ್ಮೆ ವಿಚಾರಿಸಿ ನೋಡಿರಿ. ಮಕ್ಕಳ ಹೊಟ್ಟೆ ಹಸಿವಿನಿಂದ ಕಾದಿದೆ. ಮೊದಲು ಭೂಮಿಯ ಮೇಲೆ ಗಟ್ಟಿಯಾಗಿ ಕಾಲೂರಿ ನಿಂತು ಆಮೇಲೆ ಭಗವಂತನ ನಾಮಸ್ಮರಣೆ ಮಾಡಿರಿ. ನೀವು ಚೆನ್ನಾಗಿ ದುಡಿದರೆ ನಿಮ್ಮ ಊಟ, ಉಡುಗೆ, ಭಜನೆ, ಆರಾಧನೆ, ಅತಿಥಿ ಅಭಾಗ್ಯತರ ಸೇವೆ ಯಾವುದಕ್ಕೂ ಕೊರತೆಯಾಗುವುದಿಲ್ಲ. ನೀವು ಹೀಗೆ ಭಜನೆ ಮಾಡುತ್ತ ತಿರುಗಾಡುವಂತಿದ್ದರೆ ನನ್ನನ್ನೇಕೆ ಲಗ್ನವಾಗಬೇಕಿತ್ತು?”

“ಲಗ್ನವಾಗುವಾಗ ನನಗಿದು ತಿಳಿಯಲಿಲ್ಲ. ತಿಳಿದಿದ್ದರೆ ಲಗ್ನವನ್ನೇ ಮಾಡಿಕೊಳ್ಳುತ್ತಿರಲಿಲ್ಲ. ನಿಮ್ಮ ತಂದೆ ನನ್ನನ್ನು ನೋಡಿ ಕೊಟ್ಟಿಲ್ಲ. ನನ್ನ ಸಂಪತ್ತನ್ನು ನೋಡಿ ಕೊಟ್ಟಿದ್ದಾನೆ. ಈಗ ನನ್ನ ಸಂಪತ್ತು ಹೋಗಿ ಬಿಟ್ಟಿದೆ. ನೀನು ಹೋಗಬಹುದು” ಎಂದರು ತುಕಾರಾಮರು.

“ನಮ್ಮ ತಂದೆ ಸಿರಿ ಸಂಪತ್ತು ನೋಡಿ ಕೊಟ್ಟಿರಬೇಕು. ನಾನು ಹೋದ ಸಿರಿ ಸಂಪತ್ತಿಗೆ ಮರುಗುವುದಿಲ್ಲ. ನೀವು ಮನಸ್ಸು ತುಸು ಗಟ್ಟಿ ಮಾಡಿದರೆ ಎಲ್ಲವೂ ಸರಿಪಡುವುದು” ಎಂದಳು.

ಜೀಜಾಬಾಯಿಯ ಚಿಂತೆ

ಜೀಜಾಬಾಯಿ ಮತ್ತೆ ಶ್ರೀಮಂತರ ಬಳಿ ಸಾಲ ತಂದಳು. ಆ ಹಣದಿಂದ ಉಪ್ಪನ್ನು ಖರೀದಿ ಮಾಡಿ ಗಂಡನಿಗೆ ಒಳ್ಳೆಯ ದಕ್ಷ ವ್ಯಾಪಾರಿಗಳ ಜೊತೆಮಾಡಿ ಕಳುಹಿಸಿದಳು. ವ್ಯಾಪಾರಿಗಳ ಜೊತೆ ತುಕಾರಾಮರು ಎತ್ತಿನ ಮೇಲೆ ಉಪ್ಪನ್ನು ಹೇರಿಕೊಂಡು ವ್ಯಾಪಾರಕ್ಕೆ ಹೋದರು. ಆ ದಿನದ ವ್ಯಾಪಾರವು ಚೆನ್ನಾಗಿ ನಡೆಯಿತು. ಕೈತುಂಬ ಹಣವೂ ಬಂದಿತು. ಪುನಃ ಸಂತೆ ಮುಗಿಸಿಕೊಂಡು ಊರ ದಾರಿ ಹಿಡಿದರು. ದಾರಿಯಲ್ಲಿ ಸಾಲ ತೀರಿಸಲಾಗದೆ ರಾಜದೂತರ ಬಂಧನಕ್ಕೊಳಗಾಗಿ ಒದ್ದಾಡುತ್ತಲಿದ್ದ ಬಡ ಬ್ರಾಹ್ಮಣನನ್ನು ನೋಡಿ ತುಕಾರಾಮರ ಕರುಳು ಕರಗಿ ನೀರಾಯಿತು. ರಾಜದೂತರಿಗೆ ಕೊಡಬೇಕಾಗಿದ್ದ ಬಾಕಿ ಹಣವನ್ನು ಕೊಟ್ಟು ಆ ಬ್ರಾಹ್ಮಣನಿಗೆ ಸಮಾಧಾನ ಹೇಳಿ ಸಂತೈಸಿ ಕಳುಹಿಸಿದರು.

ಅದೇ ದಾರಿಯಲ್ಲಿ ಮತ್ತೊಬ್ಬ ಬ್ರಾಹಣನು ತುಕಾರಾಮರನ್ನು ಕಂಡು, “ಅಯ್ಯಾ ಸಾಧು ಶಿರೋಮಣಿಯೇ, ಮನೆಯಲ್ಲಿ ನನ್ನ ಮಗನ ಉಪನಯನವಿದೆ. ದಯಮಾಡಿ ತಾವು ಈ ಕಾರ್ಯಕ್ಕೆ ಸಹಾಯ ಮಾಡಬೇಕು” ಎಂದು ವಿನಯದಿಂದ ಕೇಳಿಕೊಂಡನು. ಕೂಡಲೇ ತುಕಾರಾಮರು ಉಳಿದ ದುಡ್ಡನ್ನು ಆ ಬ್ರಾಹ್ಮಣನ ಕೈಗೆ ಕೊಟ್ಟು, “ನಿಮ್ಮ ಮಗನ ಉಪನಯನ ನಡೆಸಿರಿ” ಎಂದು ಹೇಳಿದರು.

ಈ ಸಂಗತಿಯು ಜೀಜಾಬಾಯಿಗೆ ತಿಳಿಯಿತು. ಸಿಟ್ಟಿನಿಂದ ಗಂಡ ಬರುವ ದಾರಿಯನ್ನೇ ಕಾಯುತ್ತ ಕುಳಿತಳು.

ತುಕಾರಾಮರು ಮನೆಗೆ ಹೋಗದೆ ಭಾಮನಾಥ ಬೆಟ್ಟದಲ್ಲಿ ಭಗವಂತನ ಧ್ಯಾನಮಾಡುತ್ತ ಕುಳಿತರು.

ಅಣ್ಣನವರು ತಾವು ಗಳಿಸಿದ ಹಣವನ್ನು ಬ್ರಾಹ್ಮಣರಿಗೆ ದಾನಮಾಡಿ ಅತ್ತಿಗೆಗೆ ಅಂಜಿ ಅಡಗಿ ಕುಳಿತುಕೊಂಡಿದ್ದ ಸಂಗತಿ ಕನ್ಹೋಜಿ ಕೇಳಿ ಕಳವಳಕ್ಕೀಡಾದನು. “ನಿಜವಾಗಿಯೂ ನಮ್ಮ ಅಣ್ಣನವರು ಸಂಸಾರ ಜೀವಿಗಳಾಗಿ ಜನಿಸಿ ಬಂದವರಲ್ಲ. ಭುವಿಯ ಬಾಳನ್ನು ಹಸನುಗೊಳಿಸಲು ಅವತರಿಸಿ ಬಂದ ಮಹಾನುಭಾವರು. ನಾವು ಸುಮ್ಮನೆ ಅವರನ್ನು ಕಿರುಕುಳಕ್ಕೀಡುಮಾಡುತ್ತಿದ್ದೇವೆ. ಇನ್ನು ಅವರಿಗೆ ತೊಂದರೆಕೊಟ್ಟರೆ ಭಗವತ ಧರ್ಮಕ್ಕೆ ತೊಂದರೆ ಕೊಟ್ಟಂತಾಗುತ್ತದೆ” ಎಂದು ಯೋಚಿಸುತ್ತ ಅಣ್ಣನನ್ನು ಹುಡುಕಹತ್ತಿದನು. ತುಸು ದೂರದಲ್ಲಿದ್ದ ಭಾಮನಾಥ ಬೆಟ್ಟದಲ್ಲಿ ಧ್ಯಾನಾಸಕ್ತರಾಗಿ ಕುಳಿತಿದ್ದ ಅಣ್ಣನನ್ನು ಕಂಡು ಕನ್ಹೋಜಿಗೆ ಆನಂದವಾಯಿತು.

“ಅಣ್ಣಾ, ತಮ್ಮಿಂದಲೇ ಭಾಗವತ ಧರ್ಮದ ಏಳಿಗೆಯಾಗಬೇಕಾಗಿದೆ. ಧರ್ಮಕಾರ್ಯಕ್ಕಾಗಿಯೇ ತಾವು ಅವತರಿಸಿ ಬಂದಿರುವಿರಿ. ಇನ್ನುಮೇಲೆ ತಾವು ಧರ್ಮಕಾರ್ಯ ದುರಂಧುರರಾಗಬೇಕು. ಮನೆಯ ಸಂಸಾರ ಸಾಧ್ಯವಾದ ಮಟ್ಟಿಗೆ ನಾನು ನೋಡಿಕೊಳ್ಳುತ್ತೇನೆ. ನನ್ನ ಪಾಲಿಗೆ ಬರುವ ಅಂಗಡಿಯ ಲೆಕ್ಕಪತ್ರದ ಕಾಗದ ಹಂಚಿಕೊಡಿರಿ. ನಿಮ್ಮ ಪಾಲಿಗೆ ಬಂದ ಹಣದ ನಿರ್ವಹಣೆಯನ್ನೂ ನೋಡಿಕೊಳ್ಳುತ್ತೇನೆ” ಎಂದು ತನ್ನ ಮನದ ಅಭಿಲಾಷೆ ತೋಡಿಕೊಂಡನು.

ಅಣ್ಣ ತಮ್ಮ ಪಾಲು ಮಾಡಿಕೊಂಡರು. ತುಕಾರಾಮರು ಪಾಲಿಗೆ ಬಂದ ಲೆಕ್ಕಪತ್ರಗಳ ಕಾಗದಗಳನ್ನು ಗಟ್ಟಿಯಾಗಿ ಕಟ್ಟಿಕೊಂಡು ಇಂದ್ರಾಯಣಿ ನದಿಯಲ್ಲಿ ತೇಲಿಬಿಟ್ಟು, ಭಂಡಾರಿ ಬೆಟ್ಟ ಸೇರಿದರು.

ಗಂಡನನ್ನು ಹುಡುಕಿಕೊಂಡು-

ಎಷ್ಟು ಹುಡುಕಿದರೂ ತುಕಾರಾಮರ ಸುಳಿವೇ ಹತ್ತಲೊಲ್ಲದು. “ತಾನು ಪತಿಯೊಡನೆ ಅತ್ಯಂತ ಕಠೋರವಾಗಿ ಮಾತನಾಡಿ ಅವರ ಹೃದಯವನ್ನು ಘಾತಿಸಿದೆನು” ಎಂದು ಜೀಜಾಬಾಯಿ ಪಶ್ಚಾತ್ತಾಪಡಹತ್ತಿದಳು.

ಅಂದು ಪತಿಯನ್ನು ನೆನೆಯುತ್ತ ಅಡಿಗೆ ಮಾಡಿದಳು. ಕಾಶಿ ಮತ್ತು ಮಹಾದೇವರಿಗೆ ಊಟಕ್ಕೆ ಬಡಿಸಿದಳು. ಪತಿಗೆ ಬುತ್ತಿಯನ್ನು ಕಟ್ಟಿ ತತ್ರಾಣಿಯಲ್ಲಿ ನೀರು ತುಂಬಿಕೊಂಡು ಭಂಡಾರಿ ಬೆಟ್ಟದ ದಾರಿ ಹಿಡಿದಳು. ಕಲ್ಲುಮುಳ್ಳುಗಳ ಪರಿವೆ ಅವಳಿಗಿಲ್ಲ.

ಇನ್ನು ಮೇಲೆ ತಮಗೆ ಬದುಕುವ ದಾರಿ ಹೇಗೆ ಸಿಕ್ಕೀತು ಎಂದು ಚಿಂತಿಸುತ್ತ ನಡೆಯುತ್ತಿರುವಾಗ, ಜೀಜಾಬಾಯಿಯ ಕಾಲಿಗೆ ಒಮ್ಮೆಲೆ ಮುಳ್ಳು ಮುರಿಯಿತು. ಮುಳ್ಳು ಅಂಗಾಲಲ್ಲಿ ಸೇರಿಕೊಂಡಿತು. ಅಯ್ಯೊ! ಎಂದು ನೆಲಕ್ಕೆ ಕುಸಿದಳು. ಕಾಲಿನಲ್ಲಿ ನೆಟ್ಟ ಮುಳ್ಳಿಗಿಂತಲೂ ಪತಿಯು ಹಸಿದಿರುವನೆಂಬ ಮನದ ನೊವು ಹೆಚ್ಚಾಗಿತ್ತು. ಹಾಗೆಯೇ ಕುಂಟುತ್ತಾ ಕಾಲು ಎಳೆಯುತ್ತಾ ನಡೆಯತೊಡಗಿದಳು. ನೋವು ಇನ್ನೂ ಹೆಚ್ಚಾಯಿತು. ಮನಸ್ಸಿನ ಸಂತಾಪವು ಇಮ್ಮಡಿಯಾಯಿತು.

ದಾರಿಯಲ್ಲಿ ಒಬ್ಬ ಮುದುಕ ಎದುರಿಗೆ ಬಂದನು. ಮುಖ ಸಪ್ಪಗೆ ಮಾಡಿ ಕುಂಟುತ್ತಾ ನಡೆಯುತ್ತಿದ್ದ ಜೀಜಾಬಾಯಿಯನ್ನು ನೋಡಿ, “ಏನು ತಾಯಿ, ಕಾಲಿನಲ್ಲಿ ಮುಳ್ಳು ಮುರಿದಿದೆಯೇ?” ಎಂದು ಕೇಳಿದನು. “ಹೌದು ಅಪ್ಪಾ, ಮುಳ್ಳು ಮುರಿದಿದೆ” ಎಂದಳು. ಕೂಡಲೇ ಚಿರಪರಿತರಂತೆ ಜೀಜಾಬಾಯಿಯ ಕಾಲನ್ನು ತೊಡೆಯಮೇಲಿಟ್ಟುಕೊಂಡು “ಮುಳ್ಳು ಒಳಕ್ಕೆ ಹೋಗಿದೆಯಲ್ಲ!” ಎಂದು ಮುಳ್ಳಿನ ತುದಿಯನ್ನು ಹಿಡಿದು ಜಗ್ಗಿಯೇ ಬಿಟ್ಟ. ಜೀಜಾಬಾಯಿ, ಕಾಲಿನಿಂದ ದಳದಳ ರಕ್ತ ಸುರಿಯುವುದನ್ನು ಲೆಕ್ಕಿಸಲಿಲ್ಲ. ನಡೆಯಬೇಕೆನ್ನುವ ಅವಸರ. “ಅಪ್ಪಾ ನಿನ್ನ ಹೆಸರೇನು?” ಎಂದು ಕೇಳಿದಳು. ಆ ಮುದುಕ ’ವಿಠ್ಠೂ’ ಎಂದನು. ’ವಿಠ್ಠೂ’ ಎಂಬ ಶಬ್ದ ಕಿವಿಗೆ ಬಿದ್ದೊಡನೆ ಜೀಜಾಬಾಯಿಯ ಕಣ್ಣುಗಳು ಕೆಂಪಾದವು. ಒಂದು ಕ್ಷಣವೂ ನಿಲ್ಲದೆ ಅವನ ಮುಖವನ್ನೂ ನೋಡದೆ ಅಲ್ಲಿಂದ ಹೊರಟಳು. ’ಪಾಂಡುರಂಗ, ಪಾಂಡುರಂಗ’ ಎಂಬ ಶಬ್ದ ಬರುತ್ತಿದ್ದ ಭಂಡಾರಿ ಬೆಟ್ಟದ ಒಂದು ಓರೆಯಲ್ಲಿ ಹೋಗಿ ಪತಿಯನ್ನು ಕಂಡಳು. ಮುನಿದ ಮೊಗ್ಗೆಯಂತಿದ್ದ ಅವಳ ಮುಖ ಹೂವಿನಂತೆ ಅರಳಿತು.

 

ಒಂದು ಬಂಡೆಗಲ್ಲಿನ ಮೇಲೆ ಇನ್ನೊಂದು ಶಿಲೆಯನ್ನು ಇಟ್ಟಂತೆ ಏಕಾಗ್ರಚಿತ್ತರಾಗಿ ಧ್ಯಾನಮಾಡುತ್ತ ಕುಳಿತುಬಿಟ್ಟರು.

ಮರಳಿ ಮನೆಗೆ

 

“ದೇವಾ, ನಮ್ಮೆಲ್ಲರನ್ನು ಬಿಟ್ಟು ಈ ಗುಡ್ಡದಲ್ಲಿರುವುದು ಒಳಿತೆ?” ಎಂದು ದೈನ್ಯದಿಂದ ಕೇಳಿದಳು ಜೀಜಾಬಾಯಿ. ಧ್ಯಾನದಲ್ಲಿ ಮೈಮರೆತಿದ್ದ ತುಕಾರಾಮರು ಎಚ್ಚತ್ತು, “ನೀನು ಇಲ್ಲಿಗೆ ಹೇಗೆ ಬಂದೆ?” ಎಂದು ಆಶ್ಚರ್ಯದಿಂದ ಕೇಳಿದರು.

“ಪತಿಯನ್ನು ಹುಡುಕುವ ಹೃದಯ ಹೆಣ್ಣಿಗಷ್ಟೇ ಇರುವುದು? ಹೆಣ್ಣಿಗೆ ಮಾತ್ರ ಈ ಮಾತಿನ ಅರ್ಥವಾಗುತ್ತದೆ.”

“ಎಂತಹ ಮಾರ್ಮಿಕ ಮಾತಿದು! ನಿಜವಾಗಿ ಇಂದು ನೀನು ಗುರುಸ್ವರೂಪಳು. ಈ ಮಾತನ್ನು ಪಾಂಡುರಂಗನೇ ನಿನ್ನ ಬಾಯಿಂದ ಆಡಿಸಿರಬೇಕು. ಇನ್ನು ಮೇಲೆ ನಾನು ನನ್ನ ಅಂತರಂಗದ ಪತಿಯನ್ನು ಪತಿಯಭಾವ ಅಳವಡಿಸಿಕೊಂಡು ಹುಡುಕುತ್ತೇನೆ.”

“ಆ ಪಾಂಡುರಂಗನೇ ನಿಮ್ಮ ಸರಳ, ಸಾತ್ವಿಕ ಚಿತ್ತವನ್ನು ಕದಡಿ ಸಕಲ ಕಾರ್ಯ ಕಲಾಪಗಳಿಗೆ ಕಲ್ಲು ಹಾಕಿ ಸಂಸಾರವನ್ನು ಹಾಳುಮಾಡಿ ಬಡತನದ ಬವಣಿಗೆ ನೂಕಿದ್ದಾನೆ. ಎಲ್ಲವನ್ನೂ ಕಳೆದುಕೊಂಡು ತುಕಾರಾಮ ಹುಚ್ಚನಾಗಿದ್ದಾನೆಂದು ಜನರು ಆಡಿಕೊಳ್ಳುವಂತೆ ಮಾಡಿದ್ದಾನೆ. ಇಷ್ಟಾದರೂ ನೀವು ಆ ಹಾಳು ಪಾಂಡುರಂಗನನ್ನೆ ನೆನೆಸುತ್ತಿದ್ದೀರಿ.”

“ಸುಮ್ಮನೆ ನನ್ನ ಸ್ವಾಮಿಯನ್ನು ಶಪಿಸಬೇಡ.”

“ನನ್ನ ಸ್ವಾಮಿ ನೀವೇ. ಸರಳ ಸ್ವಭಾವದ ನಿಮ್ಮ ಮನವನ್ನು ಕೆಡಿಸಿ ನಮ್ಮನ್ನು ಅಗಲಿಸಿ ಕಷ್ಟಕ್ಕೆ ಈಡು ಮಾಡಿದ ಆ ಹಾಳು ವಿಠ್ಠಲನನ್ನು ಕಂಡರೆ ನನಗೆ ಎಳ್ಳಷ್ಟೂ ಆಗದು. ಅವನೇ ನಮ್ಮ ಹಾಲು ಹೊಳೆಯಂತಹ ಸಂಸಾರದಲ್ಲಿ ಹುಳಿ ಹಿಂಡಿದನು” ಎಂದು ಜೀಜಾಬಾಯಿ ಅಳತೊಡಗಿದಳು. ಒತ್ತೊತ್ತಿ ಬರುವ ದುಃಖವನ್ನು ತಡೆದುಕೊಂಡು,” ನಾಲ್ಕೈದು ದಿನಗಳಿಂದಲೂ ತಾವು ಊಟ ಮಾಡಿಲ್ಲ. ಕೈಕಾಲು ತೊಳೆಯಿರಿ. ಬುತ್ತಿ ತಂದಿದ್ದೇನೆ. ಊಟ ಮಾಡಿರಿ” ಎಂದು ಬುತ್ತಿಯ ಗಂಟನ್ನು ಬಿಚ್ಚಿ ಪತಿಗೆ ಊಟ ಬಡಿಸಿದಳು. ತಾನೂ ಊಟ ಬಡಿಸಿಕೊಂಡಳು. ಇಬ್ಬರೂ ಕೂಡಿ ಮನದಣಿಯೇ ಊಟ ಮಾಡಿದರು. ಇಬ್ಬರೂ ಸಂತೋಷದಿಂದ ಮನೆಯನ್ನು ಸೇರಿದರು.

ಹೊಲ ಕಾಯಲು ಬನ್ನಿ

ಅಂದು ಸಾಧು ತುಕಾರಾಮರು ಬೆಳಗ್ಗೆ ಬೇಗನೆ ಎದ್ದು ಸ್ನಾನ, ಪೂಜೆ-ಭಜನೆಗಳನ್ನು ಮುಗಿಸಿದರು. ಕಾಶಿ, ಮಹಾದೇರರಿಗೆ ಪ್ರಸಾದ ಹಂಚಿದರು. “ನಾನು ಇಂದು ಎಲ್ಲಿಯಾದರೂ ಕೆಲಸಕ್ಕೆ ಹೋಗುತ್ತೇನೆ” ಎಂದು ಹೇಳಿದರು. ಪತಿಯ ಬಾಯಿಯಿಂದ ಬಂದ ಈ ಮುತ್ತಿನಂತಹ ಮಾತು ಕೇಳಿ ಬೇಜಾಬಾಯಿಗೆ ತುಂಬಾ ಸಂತೋಷವಾಯಿತು.

ತುಕಾರಾಮರು ಬೀದಿಯಲ್ಲಿ ಹೋಗುತ್ತಿದ್ದಾಗ ಸಾಲೋಮಾಲೋ ಎಂಬ ಹರಿ ಕೀರ್ತನಕಾರ ನೋಡಿ, ’ಏನು ತುಕಾಜಿಯವರೆ, ಮನೆ ಹಾಳುಮಾಡಿದಿರಿ. ಕೊಳುಗೇಡಿಯಾದಿರಿ. ಹೆಂಡರ ಮಕ್ಕಳ ಕೈಯಲ್ಲಿ ಬೋಕಿ ಕೊಟ್ಟಿರಿ. ಈಗ ಸಂತನ ಸೋಗು ಹಾಕಿಕೊಂಡು ಎಲ್ಲಿಗೆ ಹೊರಟಿರುವಿರಿ?’ ಎಂದು ಕರುಳಿಗೆ ಮುಳ್ಳು ಚುಚ್ಚಿದಂತೆ ಕೇಳಿದ. ಈ ಮಾತು ಕೇಳಿ ತುಕಾರಾಮರು ಮನಸ್ಸಿಗೆ ಹಚ್ಚಿಕೊಳ್ಳದೆ, “ಎಲ್ಲಿಗೂ ಇಲ್ಲ. ಕೆಲಸ ಹುಡುಕುತ್ತಿದ್ದೇನೆ” ಎಂದರು.

“ನಿಮ್ಮ ತುಂಬಿದ ಮನೆ ಹಾಳುಮಾಡಿದಿರಿ. ಮಕ್ಕಳು ವಿಲಿವಿಲಿ ಒದ್ದಾಡಿದರೂ ನೋಡದಂತಾದಿರಿ. ಕಂಡವರ ಕೈಕಾಲು ಹಿಡಿದು ಸಾಲ ತಂದು ಸಂಸಾರ ಸಾಗಿಸುವ ಜೀಜಾಬಾಯಿಯನ್ನು ಕಡೆಗಣಿಸಿದಿರಿ. ನಿಮ್ಮ ಸಂಸಾರವೇ ನಿಮಗೆ ಗೊತ್ತಿಲ್ಲ. ನಿಮ್ಮಂಥವರಿಗೆ ಯಾರು ಕೆಲಸ ಹಚ್ಚಬೇಕು? ಭಿಕ್ಷೆ ಬೇಡಿರಿ, ಭಿಕ್ಷೆ. ಭಿಕ್ಷೆಯೊಂದೇ ನಿಮಗೆ ತಕ್ಕ ಉದ್ಯೋಗ.”

’ಭಿಕ್ಷೆ’ ಎಂಬ ಶಬ್ದ ಕಿವಿಗೆ ಬಿದ್ದೊಡನೆ ತುಕಾರಾಮರಿಗೆ ಎಂದೂ ಇಲ್ಲದ ಸಿಟ್ಟು ಸರ‍್ರನೆಬಂದಿತು. ಥಟ್ಟನೆ ಕಣ್ಣು ಹನಿಗೂಡಿದವು. ’ಪಾಂಡುರಂಗ, ಪಾಂಡುರಂಗ’ಎಂದು ಕಿವಿ ಮುಚ್ಚಿಕೊಂಡರು.

ಜ್ಞಾನಬಾ ಎಂಬಾತನು ಈ ಮಾತು ಕೇಳಿ, “ಬನ್ನಿರಿ ತುಕಾರಾಮರೆ, ಎಲ್ಲರನ್ನೂ ಜೋಪಾನ ಮಾಡುವ ದೇವರು ದೊಡ್ಡವನಿದ್ದಾನೆ. ನಾಳೆ ನಾನು ಆಳಂಧಿ ಗ್ರಾಮಕ್ಕೆ ಹೋಗುತ್ತೇನೆ. ನಾನು ಬರುವವರೆಗೆ ಹೊಲ ಕಾಯಿರಿ” ಎಂದು ತುಕಾರಾಮರಿಗೆ ಹೇಳಿ, ಅವರನ್ನು ಕರೆದುಕೊಂಡು ಹೋಗಿ ಹೊಲ ತೋರಿಸಿದನು. ಹಾಗೆಯೇ ರಸಭರಿತವಾದ ಕಬ್ಬುಗಳನ್ನು ಕಿತ್ತು, “ಮಕ್ಕಳಿಗೆ ಕೊಡಿರಿ. ಮಧ್ಯಾಹ್ನ ಹೊಲ ಕಾಯಲು ಬನ್ನಿರಿ” ಎಂದು ಹೇಳಿ ಕಳುಹಿಸಿದ.

ಹೊಲ ಕಾದ ಫಲ

ಅಂದು ಮಧ್ಯಾಹ್ನ ಸಂತ ತುಕಾರಾಮರು ಜ್ಞಾನಭಾನ ಹೊಲ ಕಾಯಲು ಬಂದರು. ಹೊಲದ ತುಂಬೆಲ್ಲ ಒಮ್ಮೆ ಕಣ್ಣಾಡಿಸಿ ನೋಡಿದರು. ಹೊಲದ ತುಂಬ ಬೆಳೆಭರದಿಂದ ಬೆಳೆದು ನಿಂತಿತ್ತು. ಎತ್ತ ನೋಡಿದರತ್ತ ಒಂದೇ ಸಮನೆ ಹಸಿರು ಮುರಿಯುತ್ತಿತ್ತು. ತೆನೆ ಸುಂಕುಗಟ್ಟಿ ಕಾಳು ತುಂಬುವುದರಲ್ಲಿತ್ತು. ಇದನ್ನು ನೋಡಿ ತುಕಾರಾಮರು, “ಎಲ್ಲವೂ ಪಾಂಡುರಂಗನ ಕೃಪೆ. ಒಂದು ಬೀಜಕ್ಕೆ ಎಷ್ಟೊಂದು ಧಾನ್ಯ ಬೆಳೆದಿದೆ! ಎಲ್ಲದರಲ್ಲಿಯೂ ಪಾಂಡುರಂಗನೇ ತುಂಬಿದ್ದಾಣೆ. ಎಲ್ಲವೂ ಅವನ ಅಗಾಧವಾದ ಲೀಲೆ” ಎನ್ನುತ್ತ ಧ್ಯಾನ ಮಗ್ನರಾದರು.

ಪಾಂಡುರಂಗನ ಧಾನ್ಯದಲ್ಲಿ ತಲ್ಲೀನರಾಗಿಹೋದ ಸಂತ ತುಕಾರಾಮರನ್ನು ಸಾಲೋಮಾಲೋ ನೋಡಿದನು. ಇವರಿಗೆ ತೊಂದರೆ ಕೊಡಲು ಇದೇ ಪಕ್ವ ಕಾಲವೆಂದು ಊರಲ್ಲಿ ಅಡ್ಡಾಡುವ ದನಗಳನ್ನು ಹೊಲದಲ್ಲಿ ಹೋಗಿಸಿ ತಾನು ಅಲ್ಲಿಂದ ಪಾರಾದನು. ಸಂತ ತುಕಾರಾಮರಿಗೆ ಎಚ್ಚರವೇ ಇಲ್ಲ. ಹೊಲ ಸಂಪೂರ್ಣ ಹಾಳಾಗಿಹೋಯಿತು.

ಊರಿಗೆ ಹೋಗಿದ್ದ ಜ್ಞಾನಬಾ ಬಂದನು. ತನ್ನ ಹೊಲ ಹಾಳಾದ ಸುದ್ದಿ ಕೇಳಿಕಂಗಾಲಾದನು. ತುಕಾರಾಮರ ಮೇಲೆ ಭಯಂಕರ ಸಿಟ್ಟು ಬಂದಿತು. ಅದೇ ಹೊತ್ತಿನಲ್ಲಿ ಸಾಲೋಮಾಲೋ ಬಂದು, “ಏನು ಜ್ಞಾನಬಾ, ಹೊಲದ ಕಡೆಗೆ ಹೋಗಿ ನೋಡಿದ್ದೀಯಾ?” ಎಂದ. ಜ್ಞಾನಬಾ ಚಿಂತೆಯಿಂದ ತಲೆ ಕೆಳಗೆ ಹಾಕಿ ಸುಮ್ಮನೆ ಕುಳಿತಿದ್ದ. ಮತ್ತೆ ಸಾಲೋಮಾಲೇ, “ಮೊದಲೇ ನಾನು ಹೇಳಿದ್ದೆ. ಅಂತಹ ದರಿದ್ರರಿಗೆ ಹೊಲಕಾಯಲು ಹಚ್ಚಬೇಡವೆಂದು. ಈಗ ಅದರ ಪ್ರತಿಫಲ ಉಣ್ಣು. ಇಷ್ಟೇ ಅಲ್ಲ, ನನ್ನ ಪಾಲಿಗೆ ಬರಬೇಕಾದ ಒಂದು ಕಾಳು ಧಾನ್ಯವನ್ನೂ ನಾನು ಬಿಡತಕ್ಕವನಲ್ಲ. ಇನ್ನು ನೀನು ಎಲ್ಲಿಂದ ತಂದುಕೊಡುತ್ತಿ? ನೋಡೋಣ ಹೇಳು” ಎಂದು ನಾನಾ ರೀತಿ ಅಂಜಿಕೆ ಹಾಕಿ ಮಾತಾಡಿದ.

ಸಾಲೋಮಾಲೋ ತುಕಾರಾಮರನ್ನು ಬಯ್ದು ಅವರನ್ನು ಗೌಡರ ಹತ್ತಿರ ತೀರ್ಮಾನಕ್ಕೆ ಕರೆದೊಯ್ದ. ಜ್ಞಾನಬಾನ ಹೊಲ ಹಾಳುಮಾಡಿದ ತಪ್ಪಿಗೆ ತುಕಾರಾಮರ ಮನೆಯನ್ನು ಜ್ಞಾನಬಾನಿಗೆ ಬರೆದುಕೊಡಬೇಕೆಂದು ಗೊತ್ತು ಮಾಡಿದರು.ಅದರಂತೆ ಕಾಗದ ಪತ್ರಗಳು ಆದವು.

ಮನೆಗೆ ಬಂದ ಧಾನ್ಯ

ಈ ಸಮಯದಲ್ಲಿ ಒಂದು ಅಸಾಧಾರಣ ಸಂಗತಿ ನಡೆಯಿತು ಎಂದು ಹೇಳುತ್ತಾರೆ ಭಕ್ತರು:

ಹೊಲದಲ್ಲಿ ಇದ್ದಬಿದ್ದ ದಂಟನ್ನು ಜೋಡಿಸಿ ತೆನೆಗಳನ್ನು ಕೂಡಿಸಿ ಜೋಪಾನ ಮಾಡುತ್ತ ಕಣ್ಣೀರು ಹಾಕತೊಡಗಿದ ಜ್ಞಾನಬಾ. ;ಎಲ್ಲವೂ ಪಾಂಡುರಂಗನ ಲೀಲೆ, ಅವನೇ ನಮ್ಮೆಲ್ಲರನ್ನು ರಕ್ಷಿಸುವವನು’ ಎಂದು ತನ್ನನ್ನು ತಾನೇ ಸಾವರಿಸಿಕೊಳ್ಳುತ್ತಿದ್ದ. ಹೀಗೆ ಧೈರ್ಯ-ಅಧೈರ್ಯಗಳ ಮಧ್ಯದಲ್ಲಿ ಹೊಲದಲ್ಲಿಯ ಜೋಳ ಕೊಯ್ದು ಸೂಡು ಕಟ್ಟಿದ, ಗೂಡು ಒಟ್ಟಿದ, ಕಣಮಾಡಿ ತೆನೆ ಮುರಿಸಿದ. ಪಾಂಡುರಂಗನನ್ನು ನೆನೆಯುತ್ತ ರಾಶಿ! ಜ್ಞಾನಬಾನ ಸಂತೋಷಕ್ಕೆ ಮೇರೆಯೇ ಇಲ್ಲ. ಸಾಲೋಮಾಲೋನ ಪಾಲನ್ನು ತೆಗೆದು ತನ್ನ ಪಾಲನ್ನು ಇಟ್ಟುಕೊಂಡು, ಉಳಿದ ಜೋಳದ ರಾಶಿಯನ್ನು ಬಂಡಿಯ ಮೇಲೆ ಹೇರಿಸಿ ತುಕಾರಾಮರ ಮನೆಗೆ ಸಾಗಿಸಿದ. ತುಕಾರಾಮರ ಪಾದಕ್ಕೆ ನಮಸ್ಕರಿಸಿ, “ತಮ್ಮ ಮಹಿಮೆಯು ಅಗಾಧವಾದುದು. ತಮ್ಮ ಪರೋಪಕಾರ ಗುಣವನ್ನು ಅರಿಯದೆ ತಿಳಿಗೇಡಿಯಾದ ನಾನು ಮನೆ ಬರೆಸಿಕೊಂಡು ಮನ ನೋಯಿಸಿದೆ. ನನ್ನ ಅಪರಾಧವನ್ನು ಕ್ಷಮಿಸಿರಿ. ನನ್ನ ಲೆಕ್ಕಕ್ಕೆ ಮೀರಿ ಬೆಳೆದ ಈ ಚೋಳದ ರಾಶಿ ತಮಗೆ ಸಲ್ಲತಕ್ಕದ್ದು” ಎಂದು ವಿನಯದಿಂದ ಪ್ರಾರ್ಥಿಸಿದ.

“ಜ್ಞಾನಬಾ, ವಿಠ್ಠಲಸ್ವಾಮಿಯು ನಿನ್ನ ಭಕ್ತಿಗೆ ಮೆಚ್ಚಿ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿದ್ದಾನೆ. ಅದರಲ್ಲಿ ನನ್ನದೇನೂ ಇಲ್ಲ. ಬಂಡಿಗಳನ್ನು ತಿರುಗಿಸು, ಮನೆಗೆ ಸಾಗಿಸು.”

“ತುಕಾರಾಮಜಿಯವರೆ, ಒಮ್ಮೆ ಯಾದರೂ ನೋಡಿರಿ ಈ ಬಂಡಿಗಳ ಸಾಲು. ಇದು ನಿಮ್ಮ ಜೋಳದ ರಾಶಿ. ನಿಮ್ಮದನ್ನು ನಿಮಗೆ ಅರ್ಪಿಸಲು ಬಂದಿರುವೆ.”

“ಹೆಚ್ಚಿಗೆ ಬೆಳೆದ ಜೋಳದ ರಾಶಿ ಹೇಗೆ ನಿನ್ನದಲ್ಲವೋ ಹಾಗೇ ನನ್ನದೂ ಅಲ್ಲ” ಎಂದರು ತುಕಾರಾಮ್.

ಜ್ಞಾನಬಾನಿಗೆ ಥಟ್ಟನೆ ಒಂದು ವಿಚಾರ ಹೊಳೆಯಿತು. ಎಂಟು ತಲೆಮಾರಿನ ಹಿಂದೆ ಕಟ್ಟಿಸಿದ ಪಾಂಡುರಂಗಸ್ವಾಮಿಯ ಗುಡಿಯ ಜೀರ್ಣೋದ್ಧಾರಕ್ಕೆ ಈ ರಾಶಿ ಮೀಸಲಿರಿಸಿ, ಒಂದು ಚೀಲ ಧಾನ್ಯ ತುಕಾರಾಮರ ಮನೆಯಲ್ಲಿ ಇಟ್ಟು, ಉಳಿದ ಜೋಳದ ಚೀಲಗಳನ್ನು ಗುಡಿಗೆ ಸಾಗಿಸಿದ.

ತುಕಾರಾಮರು ತಮ್ಮ ಮನೆಯಲ್ಲಿ ಇಟ್ಟ ಜೋಳದ ಒಂದು ಕಾಳೂ ಉಳಿಯದಂತೆ ದಾನ ಮಾಡಿದರು. ಬಡಬಗ್ಗರು, ಪರದೇಶಿಗಳು, ಕುರುಡರು, ಕುಂಟರು ದಾನ ಪಡೆದು ’ಪುಂಡರೀಕ ವರದಾ ಹರಿ ವಿಠ್ಠಲ’ ಎಂದು ಜಯಘೋಷ ಮಾಡ ತೊಡಗಿದರು.

ಗುರು ಕರುಣೆ, ಅಭಂಗ ರಚನೆ

ಸಂತ ತುಕಾರಾಮರಿಗೆ ಈಗ ಜನರ ಮಧ್ಯದಲ್ಲಿರುವುದು ಬೇಡವೆನಿಸಿತು. ಊರ ಸಮೀಪದ ಭಂಡಾರಿ ಬೆಟ್ಟದ ಪಶ್ಚಿಮ ದಿಕ್ಕಿನಲ್ಲಿದ್ದ ಗವಿಯಲ್ಲಿ ಕುಳಿತು ಧ್ಯಾನ ಮಾಡತೊಡಗಿದರು. ಜೊತೆಗೆ ಜ್ಞಾನೇಶ್ವರ, ನಾಮದೇವ, ಏಕನಾಥ ಮುಂತಾದ ಸಂತಶ್ರೇಷ್ಠರು ರಚಿಸಿದ ಅಭಂಗಗಳ ಅಧ್ಯಯನ ನಡೆಸಿದರು. ಈ ಅಧ್ಯಯನದಿಂದ ಅವರ ಆತ್ಮ ಸಮಾಧಾನಗೊಳ್ಳ ತೊಡಗಿತು. ಮನಸ್ಸು ಹೂವಿನಂತೆ ಅರಳತೊಡಗಿತು. ಅಭಂಗಗಳು ಅವರ ನಾಲಗೆಯ ಮೇಲೆ ಕುಣಿಯತೊಡಗಿದವು.

ಇಷ್ಟಿದ್ದರೂ ತುಕಾರಾಮರ ಅಂತರಂದಲ್ಲಿದ್ದ ಚಿಂತೆ ಅವರ ಹೃದಯವನ್ನು ಒಂದೇ ಸಮನೆ ಕೊರೆದು ತಿನ್ನುತ್ತಿತ್ತು. ಅವರಿಗೆ ಇನ್ನೂ ಗುರು ಕರುಣೆ ದೊರೆತಿದ್ದಿಲ್ಲ. ಇದರಿಂದ ಸಂತ ತುಕಾರಾಮರ ಹೃದಯ ಒಂದೇ ಸಮನೆ ಕುದಿಯುತ್ತಿತ್ತು.

ಹೀಗೆ ತಳಮಳಿಸುತ್ತ, ಕನವರಿಸುತ್ತ ಒಂದು ರಾತ್ರಿ ಮಲಗಿ ನಿದ್ರೆ ಹೋದರು. ನಿದ್ರೆಯಲ್ಲಿ ಸಾಕ್ಷಾತ್ ಪಂಢರಿನಾಥನು ಬಂದು ಮೈದಡವಿ, ’ತುಕಾರಾಮ, ನೀನು ಚಿಂತಿಸಬೇಡ. ನಿನಗೆ ಬಾಬಾ ಚೈತನ್ಯದಿಂದ ಗುರೂಪದೇಶವಾಗುವುದು’ ಎಂದು ಹೇಳಿದಂತಾಯಿತು. ಅದೇ ರೀತಿ ಮಾಘ ಶುದ್ಧ ದಶಮಿ ಗುರುವಾರ ಶುಭ ಮುಹೂರ್ತದಲ್ಲಿ ಬಾಬಾ ಚೈತನ್ಯರು ಸಂತ ತುಕಾರಾಮರಿಗೆ ಅನುಗ್ರಹವಿತ್ತರು. ಅಂದೇ ಅವರ ಅಂತರಂಗದಿಂದ ಭಕ್ತಿಯು ಅಭಂಗವಾಗಿ ಹೊರಹೊಮ್ಮಿತು. ಮರಾಠಿ ಭಾಷೆಯ ಸರಸ್ವತಿ ಭಂಡಾರಿ ತುಂಬಿತು.

ಮತ್ಸರದ ಕಿಡಿ

ಛೂ ಮಂತ್ರ ಹಾಕಿ, ಚೀಟಿ ಕಟ್ಟಿ, ಗಾಳಿ ಬಿಡಿಸಿ, ಉಪಜೀವನದ ಹಾದಿ ಮಾಡಿಕೊಂಡು ಸಾಧು ಎನ್ನಿಸಿಕೊಳ್ಳುತ್ತಿದ್ದನು ಮುಂಬಾಜಿ. ಕೀರ್ತನೆ ಹೇಳಿ, ಅಭಂಗಗಳನ್ನು ಹಾಡಿ ಕೈತುಂಬ ಸಂಭಾವನೆ ಪಡೆದು ಹೊಟ್ಟೆ ಬೆಳೆಸಿಕೊಂಡಿದ್ದ ಇನ್ನೊಬ್ಬ ಅಂತಹ ಸಾಧು ತುಕಾರಾಮಜಿ ಅವರನ್ನು ಕಂಡರೆ ಎಳ್ಳಷ್ಟೂ ಆಗುತ್ತಿರಲಿಲ್ಲ. ಇವರಿಬ್ಬರೂ ಕೂಡಿ ಧರ್ಮಾಧಿಕಾರಿ ರಾಮೇಶ್ವ ಭಟ್ಟರ ಹತ್ತಿರ ದೂರು ಒಯ್ದರು. ರಾಮೇಶ್ವರ ಭಟ್ಟರು ಇವರ ಪ್ರಚೋದನೆಯಿಂದ ಮೂರ್ಖರಾಗಿ ತುಕಾರಾಮರ ಜೀವನದಲ್ಲಿ ಬಿರುಗಾಳಿ ಎಬ್ಬಿಸಲು ಎದ್ದು ನಿಂತರು.

ಮರುದಿನ ಮುಂಜಾನೆ ಅರುಣೋದಯ ಸಮಯಕ್ಕೆ ರಾಮೇಶ್ವರ ಭಟ್ಟರು ದೇಹು ಗ್ರಾಮಕ್ಕೆ ಬಂದರು. ಕೂಡಲೇ ಗ್ರಾಮಾಧಿಕಾರಿಗಳನ್ನು ಕರೆಸಿ, “ತುಕಾರಾಮರ ಬಗ್ಗೆ ವಿಚಾರಿಸಲು ಬಂದಿದ್ದೇವೆ” ಎಂದರು.

“ಯಾವ ವಿಷಯಕ್ಕೆ?” ಎಂದು ಕೇಳಿದರು ಗೌಡ ಕುಲಕರ್ಣಿಯವರು.

“ಏನು ಗ್ರಾಮಾಧಿಕಾರಿಗಳೇ, ಶೂದ್ರರು ವೇದಾಗಮಗಳನ್ನು ಓದುವುದು, ಅಭಂಗಗಳನ್ನು ರಚಿಸುವುದು, ಧರ್ಮಜಾಗ್ರತೆ ಮಾಡುವುದು- ಇವೆಲ್ಲ ಲೋಕ ಪ್ರಳಯದ ಮುನ್ಸೂಚನೆಯಲ್ಲವೆ? ತುಕಾರಾಮರ ಈ ಚಟುವಟಿಕೆಗಳು ಹೀಗೆಯೇ ಮುಂದುವರಿದರೆ ನಾನೇ ಕುಳಿತು ಧರ್ಮಕ್ಕೆ ಅಪಚಾರ ಬಗೆದಂತಾಗುತ್ತದೆ. ಧರ್ಮಜಾಗ್ರತೆಯ ಸಲುವಾಗಿಯೇ ನಾನು ಇಲ್ಲಿಗೆ ಬರಬೇಕಾಯಿತು. ಆ ಶೂದ್ರ ತುಕಾರಾಮನನ್ನು ಕರೆಸಿರಿ.”

ಗೌಡರು ತುಕಾರಾಮರನ್ನು ಕರೆಸಿದರು. ಧರ್ಮಾವತಾರಿ ರಾಮೇಶ್ವರ ಭಟ್ಟರಿಗೆ ರಾಮ್ ರಾಮ್ ಮಾಡಿದರು ತುಕಾರಾಮರು.

“ನಿನ್ನ ರಾಮ್ ರಾಮ್‌ಗೂ ಹಾಗೂ ನಿನ್ನ ಅಭಂಗಕ್ಕೂ ಧಿಕ್ಕಾರವಿರಲಿ! ಎಲ್ಲಿಯಾದರೂ ಉಂಟೆ ಶೂದ್ರರು ವೇದಗಾಮಗಳನ್ನು ಓದುವುದು, ಅಭಂಗಗಳನ್ನು ರಚಿಸುವುದು, ಜನರಿಗೆ ಉಪದೇಶ ನೀಡುವುದು! ಇಲ್ಲಿಯವರೆಗೆ ನೀನು ಅರಿಯದೇ ಮಾಡಿರುವ ತಪ್ಪನ್ನು ಕ್ಷಮಿಸಿದ್ದೇವೆ. ಇನ್ನು ಮುಂದೆ ಇಂಥ ಕಾರ್ಯ ಮಾಡಬಾರದು” ಎಂದು ಗುಡುಗಿದರು ಧರ್ಮಾಧಿಕಾರಿ.

“ಸಂತ ನಾಮದೇವರಿಂದ ಅಪೂರ್ತಿಯಾದ ಅಭಂಗ ರಚನೆಯ ಕಾರ್ಯ ಪೂರ್ಣಗೊಳಿಸಲು ಪಾಂಡುರಂಗನೇ ಅನುಗ್ರಹಿಸಿದ್ದಾನೆ. ತಾವು ಬೇಡವೆಂದರೆ ನಿಲ್ಲಿಸಿ ಬಿಡುತ್ತೇನೆ.”

“ನಿಲ್ಲಿಸು, ನಿಲ್ಲಿಸು”

“ಹಾಗಾದರೆ ಇಲ್ಲಿಯವರೆಗೆ ರಚಿಸಿದ ಅಭಂಗಗಳನ್ನು ಏನು ಮಾಡಲಿ?”

“ಅವುಗಳನ್ನು ಗಂಟು ಕಟ್ಟಿಕೊಂಡು ಇಂದ್ರಾಯಣಿ ನದಿಯಲ್ಲಿ ಹಾಕಿಬಿಡು” ರಾಮೇಶ್ವರ ಭಟ್ಟರ ಕಠೋರ ಆಜ್ಞೆ.

 

‘ಬಡ ಸಾಧುಗಳಿಗೆ ಒಜ್ರ ವೈಡೂರ್ಯಗಳಿಂದ ಏನು ಪ್ರಯೋಜನ?’

ಅವನ ಸ್ವತ್ತು ಅವನಿಗೆ ಅರ್ಪಿಸುವೆ

 

ಧರ್ಮಾಧಿಕಾರಿಯ ಅಪ್ಪಣೆಯ ಮೇರೆಗೆ, ತಾವು ರಚಿಸಿದ ಅಭಂಗಗಳನ್ನು ಬರೆದಿದ್ದ ಓಲೆ ಗರಿಗಳನ್ನು ಗಂಟು ಕಟ್ಟಿ ತುಕಾರಾಮರು ಇಂದ್ರಾಯಣಿ ನದಿಯಲ್ಲಿ ಮುಳುಗಿಸಿದರು. ಅವರ ಹೃದಯಲ್ಲಿ ಒಂದೇ ಸಮನೆ ತಳಮಳ. ಏನು ಮಾಡಿದರೂ ಸಮಾಧಾನವಾಗಲೊಲ್ಲದು. ’ಇಂತಹ ನಿರರ್ಥಕವಾದ ಸೇವೆಯನ್ನು ಭಗವಂತ ನನ್ನಿಂದ ಏಕೆ ತೆಗೆದುಕೊಂಡನೋ ಏನೋ! ಅವನು ಏನೇ ಮಾಡಿಸಲಿ ಅವನ ಸ್ವತ್ತು ಅವನಿಗೆ ಅರ್ಪಿಸಿರುವೆ. ಇನ್ನು ನಾನು ನಿಶ್ಚಿಂತ’ ಎಂದು ಇಂದ್ರಾಯಣಿ ನದಿ ದಂಡೆಯ ಮೇಲಿದ್ದ ಒಂದು ಬಂಡೆಗಲ್ಲಿನ ಮೇಲೆ ಇನ್ನೊಂದು ಶಿಲೆಯನ್ನು ಇಟ್ಟಂತೆ ಏಕಾಗ್ರಚಿತ್ತವಾಗಿ ಧ್ಯಾನಮಾಡುತ್ತ ಕುಳಿತುಬಿಟ್ಟರು.

ಆಗ ಒಂದು ಅದ್ಭುತ ನಡೆಯಿತು ಎಂದು ಭಕ್ತರು ಹೇಳುತ್ತಾರೆ. ಹೀಗೆ ಹನ್ನೆರಡು ದಿನಗಳು ಕಳೆಯಲು ರಾತ್ರಿ ಸ್ವಪ್ನದಲ್ಲಿ ಪಾಂಡುರಂಗಸ್ವಾಮಿಯು ದರ್ಶನ ನೀಡಿ, “ನಾಳೆ ಬೆಳಗಾಗುತ್ತಲೇ ಇಂದ್ರಾಯಣಿ ನದಿಯಲ್ಲಿ ನೀನು ಮುಳುಗಿಸಿದ ಅಭಂಗಗಳು ತೇಲಿ ಮೇಲೆ ಬರುತ್ತವೆ. ಚಿಂತಿಸಬೇಡ” ಎಂದು ಹೇಳಿದಂತಾಯಿತು. ಹದಿಮೂರನೆಯ ದಿವಸ ಸೂರ್ಯೋದಯ ಸಮಯದಲ್ಲಿ ಅಲೆಗಳ ಬೆನ್ನೇರಿ ಒಂದರ ಮೇಲೋಂದು ಅಭಂಗಗಳ ಪ್ರತಿ ತೇಲಾಡುತ್ತಿದ್ದವು ಎಂದು ಹೇಳುತ್ತಾರೆ.

ಕರ್ತವ್ಯ ಮುಖ್ಯ

ತನ್ನ ರಾಜ್ಯದಲ್ಲಿ ಪರಮ ವೈರಾಗ್ಯಮೂರ್ತಿ ಸಂತಶಿರೋಮಣಿ ಇದ್ದುದು ಛತ್ರಪತಿ ಶಿವಾಜಿ ಮಹಾರಾಜರಿಗೆ ತಿಳಿಯಿತು. ಕೂಡಲೇ ಛತ್ರ, ಚಾಮರ, ಪಲ್ಲಕ್ಕಿಗಳ ಸಂಭ್ರಮದೊಡನೆ ಅವರನ್ನು ಕರೆದುಕೊಂಡು ಬರಲು ಮಂತ್ರಿಮಾನ್ಯರನ್ನು, ರಾಜ ಪರಿವಾರವನ್ನು ಕೊಟ್ಟು ಕಳುಹಿಸಿದರು.

ಊರಿಗೆ ಊರೇ ಆನಂದ ಸಾಗರದಲ್ಲಿ ತೇಲಿ ಹೋಯಿತು. ಜೀಜಾಬಾಯಿ ಹಿರಿಹಿರಿ ಹಿಗ್ಗಿದಳು. “ಇನ್ನು ನಮಗೇನು ಕೊರತೆ! ಛತ್ರಪತಿ ಶಿವಾಜಿ ಮಹಾರಾಜರ ಆಶ್ರಯ ದೊರಕಿತು. ತಾಯಿ ಸರ್ವಮಂಗಳೆಯು ಕೊನೆಗೆ ನಮ್ಮ ಕೈ ಬಿಡಲಿಲ್ಲ” ಎಂದು ಒಳಗೆ ಹೋಗಿ ದೀಪ ಹಚ್ಚಿ ನಮಸ್ಕರಿಸಿದಳು.

ಇದ್ದಕ್ಕಿದ್ದ ಹಾಗೆ ಮಹಾರಾಜರ ಪರಿವಾರ ತಮ್ಮ ಮನೆಗೆ ಬಂದುದು ತುಕಾರಾಮರಿಗೆ ಆಶ್ಚರ್ಯವಾಯಿತು. ’ನಮ್ಮಂತಹ ಸಂತರ ಮನೆಗೆ ಮಹಾರಾಜರು ತಮ್ಮ ಪರಿವಾರ ಕಳುಹಿಸಿ ಎಷ್ಟೊಂದು ಗೌರವ ಮಾಡಿದರು! ಮಹಾರಾಜರ ಔದಾರ್ಯ, ದೈವಬುದ್ಧಿ, ಪರೋಪಕಾರ ಗುಣಗಳು ಬಹು ದೊಡ್ಡವು’ ಎಂದೆನ್ನುತ್ತಿರುವಾಗ ಮಂತ್ರಿಗಳು ಬಂದು ಅಮೂಲ್ಯ ಉಡುಗೊರೆಗಳನ್ನು ಸಂತರ ಪಾದಗಳಲ್ಲಿರಿಸಿ ರಾಜವಾಡೆಗೆ ಬರಲು ವಿನಂತಿಸಿಕೊಂಡರು.

ಸಂತರು ಮುಗುಳುನಗೆ ನಗುತ್ತ, “ಸಂತನಿಗೆ ರಾಜವಾಡೆಗಳೇಕೆ, ಈ ಉಡುಗೊರೆಗಳೇಕೆ? ಇವುಗಳನ್ನು ಮಹಾರಾಜರಿಗೆ ಒಯ್ದು ಕೊಡಿರಿ” ಎಂದರು.

“ತಡೆಯಿರಿ, ತಡೆಯಿರಿ, ಮನೆಗೆ ಬಂದ ಭಾಗ್ಯವನ್ನು ಬೇಡವೆಂದು ನಿರಾಕರಿಸಬಾರದು. ಮಾನ್ಯ ಮಂತ್ರಿಗಳೆ ಆ ಉಡುಗೊರೆಗಳನ್ನು ಇಲ್ಲಿ ಕೊಡಿರಿ” ಎಂದುಮುಂದೆ ಬಂದಳು. ಜೀಜಾಬಾಯಿ.

“ಬೇಡಿ ತುರುವುದರಿಂದಾಗಲೀ, ಇಲ್ಲವೆ ಜನರುಕೊಡುವುದರಿಂದಾಗಲೀ ನಮ್ಮಬಡತನ ದೂರಾಗುವುದಿಲ್ಲ. ಸಾಕ್ಷಾತ್‌ವಿಠ್ಠಲಸ್ವಾಮಿ ಕೊಟ್ಟರೆ ಮಾತ್ರ ನಮಗೆ ನೆಮ್ಮದಿ ದೊರಕುತ್ತದೆ. ಇದಕ್ಕೆ ಆಸೆ ಪಡಬೇಡ” ಎಂದರು. ಸಂತರು, “ಮಾನ್ಯರೆ, ಈ ಉಡುಗೊರೆ ಮತ್ತು ಈ ಅಭಂಗಗಳನ್ನು ಮಹಾರಾಜರಿಗೆ ಮರಳಿಸಿ ಕೃತಜ್ಞತೆಗಳನ್ನು ಹೇಳಿರಿ” ಎಂದು ಹರಿಸಿದರು.

ತುಕಾರಾಮರ ಆಶೀರ್ವಾದರೂಪದ ಅಭಂಗಗಳನ್ನು ಛತ್ರಪತಿ ಶಿವಾಜಿ ಮಹಾರಾಜರು ಓದಿ ಹರ್ಷಭರಿತರಾಗಿ ಅವುಗಳನ್ನು ತಲೆಯ ಮೇಲಿರಿಸಿಕೊಂಡು ಕುಣಿಯತೊಡಗಿದರು. “ಇಂದು ನಾನು ಧನ್ಯ, ನನ್ನ ನಾಡು ಧನ್ಯವಾಯಿತು” ಎಂದು ಬಗೆದು ಆ ಸಂತ್ರಶ್ರೇಷ್ಠನ ದರ್ಶನಕ್ಕೆ ಬಂದರು. ಮಹಾತ್ಯಾಗಿ, ನಿಷ್ಠಾವಂತ, ಪರೋಪಕಾರಿ ತುಕಾರಾಮರ ಪಾಕಮಲಗಳಿಗೆ ನಮಿಸಿ, “ಈ ಭಕ್ತನ ಅಲ್ಪ ಕಾಣಿಕೆ ಸ್ವೀಕರಿಸಿ ಪುನೀತನನ್ನಾಗಿ ಮಾಡಬೇಕು.” ಎಂದು ಬೇಡಿಕೊಂಡರು.

ವಜ್ರ ವೈಡೂರ್ಯ ಮುತ್ತು ರತ್ನ ತರಹತರಹದ ಉಡುಗೊರೆಗಳಿಂದ ತುಂಬಿದ ಬಂಗಾರದ ಪಾತ್ರೆಗಳನ್ನು ಕಂಡು ಜೀಜಾಬಾಯಿಯ ಮನ ಒಂದೇ ಸಮನೆ ಮಿಡುಕತೊಡಗಿತು. ಥಟ್ಟನೆ ಓಡಿ ಬಂದು ತೆಗೆದುಕೊಳ್ಳಬೇಕೆಂದೆನಿಸಿತು. ಅಷ್ಟರಲ್ಲಿಯೇ ತುಕಾರಾಮರು, “ಮಹಾರಾಜರೆ, ಬಡ ಸಾಧುಗಳಿಗೆ ಈ ವಜ್ರ ವೈಡೂರ್ಯಗಳಿಂದ ಏನು ಪ್ರಯೋಜನ? ಮಹಾರಾಜರ ಬೊಕ್ಕಸದಲ್ಲಿದ್ದರೆ ಬಡಬಗ್ಗರ ಉದ್ಧಾರವಾಗುವುದು.ರಾಷ್ಟ್ರದ ಏಳಿಗೆಯಾಗುವುದು. ಧರ್ಮಜಾಗ್ರತೆಯಾಗುವುದು.” ಎಂದು ಉತ್ತರಿಸಿದರು.

ಶಿವಾಜಿ ಮಹಾರಾಜರು ಅನನ್ಯ ಭಕ್ತಿಯಿಂದ ಪ್ರಾರ್ಥಿಸುತ್ತ, “ತಮ್ಮ ದೈವೋಪಾಸನೆಗೆ ನಾಲ್ಕು ಗ್ರಾಮಗಳನ್ನಾದರೂ ಉಂಬಳಿಯಾಗಿ ಸ್ವೀಕರಿಸಿರಿ. ಇದು ನನ್ನ ಅಲ್ಪ ಕಾಣಿಕೆ” ಎಂದರು.

“ಮಹಾರಾಜರೇ, ನನ್ನ ಚಿಂತೆ ಮಾಡಬೇಡಿರಿ. ಬಡ ಬೈರಾಗಿಗಳು ಹೇಗಾದರೂ ಜೀವಿಸಬಲ್ಲರು. ನಶಿಸಿಹೋಗುತ್ತಿರುವ ಹಿಂದುಧರ್ಮ, ಹಿಂದು ದೇಶದ ಏಳಿಗೆ, ಉದ್ಧಾರ ಇವು ನಿಮ್ಮಿಂದ ನಡೆಯಬೇಕಾಗಿದೆ. ಇದು ವಿಠ್ಠಲಸ್ವಾಮಿಯ ಆಸೆಯೂ ಹೌದು. ಇದನ್ನು ಈಡೇರಿಸಿಕೊಡಿರಿ. ಇದೇ ನಾನು ಬೇಡುವ ಕಾಣಿಕೆ!”

ತುಕಾರಾಮರ ಈ ಮಾತುಗಳನ್ನು ಕೇಳಿ, ಶಿವಾಜಿ ಮಹಾರಾಜರ ಹೃದಯದಲ್ಲಿ ಗುಪ್ತಗಾಮಿನಿಯಾಗಿದ್ದ ಭಕ್ತಿ, ವೈರಾಗ್ಯ ಪ್ರಜ್ವಲಿಸಿದವು. ರಾಜ್ಯದ ಕಾರಭಾರ ಬೇಡವೆಂದೆನಿಸಿತು. ಸಂತರ ಸೇವೆ ಮಾಡುತ್ತ ಕೃತಾರ್ಥರಾಗಬೇಕೆಂದು ಬಯಸಿದರು.

ಶಿವಾಜಿ ಮಹಾರಾಜರ ಮನದ ಇಂಗಿತವನ್ನರಿತು ತುಕಾರಾಮರು, “ತಪಸ್ಸಿಗಿಂತಲೂ ಕರ್ತವ್ಯಚ್ಯುತರಾದರೆ ಇಹಪರಗಳೆರಡೂ ಇಲ್ಲ. ಅದಕ್ಕಾಗಿ ತಮ್ಮ ರಾಜ್ಯನಿರ್ವಹಣೆಯ ಕೆಲಸವನ್ನು ಇನ್ನೂ ಚುರುಕಾಗಿ ಸಾಗಿಸಿರಿ” ಎಂದು ಗಂಭೀರವಾಗಿ ಹೇಳಿದರು.

ಕರ್ತವ್ಯಜಾಗ್ರತೆಯ ಅರಿವು ತಂದುಕೊಟ್ಟ ತುಕಾರಾಮರಿಗೆ ಶಿವಾಜಿಯು, “ಕೃಪಾಶೀರ್ವಾದಗಳು ಇರಲಿ, ನಾನು ಇಂದು ರಾಜವಾಡೆಗೆ ಹೊರಡುವೆ. ರಾಜನಾಗಿ ಅಲ್ಲ; ನನ್ನ ದೇಶದ ಜನತೆಯ ಸೇವಕನಾಗಿ” ಎಂದು ನಮಸ್ಕರಿಸಿದನು.

ವೈಕುಂಠ ಯಾತ್ರೆ

ಸಂತ ತುಕಾರಾಮರು ಜೀವನದುದ್ದಕ್ಕೂ ಅನಂತ ಕಷ್ಟನಷ್ಟಗಳನ್ನು ಸಹಿಸಿ ಎಡರು ತೊಡರುಗಳನ್ನು ಎದುರಿಸಿ ತಮ್ಮಸ್ವಂತ ಸುಖವನ್ನು ಕನಸಿನಲ್ಲಿಯೂ ಬಯಸದೆ ಜನತೆಯ ಕಲ್ಯಾಣಕ್ಕಾಗಿ ದುಡಿದರು. ತಮ್ಮ ಅಮೃತವಾಣಿಯಿಂದ ಜನರ ಹೃದಯದಲ್ಲಿ ಭಕ್ತಿಯ ಬೀಜವನ್ನು ಬಿತ್ತಿದರು, ಧಾರ್ಮಿಕ ನೆಲೆಯನ್ನು ತಿಳಿಮಾಡಿ ತಿಳಿಸಿದರು. ಸಮಾಜದ ಓರೆಕೋರೆಗಳನ್ನು ತಿದ್ದಿದರು. ಎಲ್ಲರಿಗೂ ನಮ್ಮವರೆಂದೆನಿಸಿದರು. ಇವರು ರಚಿಸಿದ ಅಭಂಗಗಳಿಗೆ ಮನಸೋತು ಎಷ್ಟೋ ಜನರು ಇವರ ಶಿಷ್ಯರಾದರು. ಪಂಡಿತ ಪಾಮರರ ನಾಲಿಗೆಯ ಮೇಲೆ ವರು ರಚಿಸಿದ ಅಭಂಗಗಳು ನಾಟ್ಯವಾಡತೊಗಿದವು; ಶಿಷ್ಯ ಸಂಪತ್ತಿಗೆ ಹಿರಿಯ ಆಸ್ತಿಯಾಗಿ ಪರಿಣಮಿಸಿದವು.

ತುಕಾರಾಮರಿಗೆ ತಮ್ಮ ಇಹಲೋಕ ವ್ಯಾಪಾರ ಮುಗಿಸಬೇಕೆಂದು ಬಯಕೆಯಾಯಿತು. ಒಂದು ದಿನ ತುಕಾರಾಮರು ತಮ್ಮ ಶಿಷ್ಯಕೋಟಿಗೆ, “ನನ್ನ ಇಹಲೋಕ ಯಾತ್ರೆ ಮುಗಿಯಿತು. ನಾನು ಹೋಗುತ್ತೇನೆ. ಸುಖವಾಗಿ ಬಾಳಿರಿ. ಪರೋಪಕಾರ ಮಾಡಿರಿ. ಏನೂ ಅರಿಯದ ಜೀಜಾಬಾಯಿಯನ್ನು ನೋಡಿಕೊಂಡು ಹೋಗಿರಿ” ಎಂದು ಹರಸಿದರು. ಮನೆಗೆ ಬಂದು ಜೀಜಾಬಾಯಿಗೆ, “ನಾನು ವೈಕುಂಠಕ್ಕೆ ಹೊರಟಿರುವೆ. ನಿನ್ನನ್ನೂ ಕರೆದುಕೊಂಡು ಹೋಗುತ್ತೇನೆ ಬರುವೆಯಾ?” ಎಂದು ಕೇಳಿದರು. ಆಕೆ, “ಮಕ್ಕಳು ಮರಿಗಳು, ದನಕರುಗಳನ್ನು ಬಿಟ್ಟು ಹೇಗೆ ಬರಲಿ?” ಎಂದಳು.

ತುಕಾರಾಮರು ಎಂದಿನಂತೆ ಇಂದ್ರಾಯಣಿ ನದಿಯಲ್ಲಿ ಸ್ನಾನ ಮಾಡುವವರಂತೆ ಇಳಿದು ಮುಂದಕ್ಕೆ ಹೋದರು. ನೀರಿನಲ್ಲಿ ಇಳಿದವರು ಕಾಣಲೇ ಇಲ್ಲ. ಕೆಲ ನಿಮಿಷಗಳಲ್ಲಿ ಆಕಾಶದಿಂದ ಅವರು ಹೊದ್ದುಕೊಂಡ ಕಂಬಳಿ, ಕೈಯಲ್ಲಿಯ ತಾಳ, ತಂಬೂರಿ ಕೆಳಗೆ ಬಿದ್ದವು ಎಂದು ಹೇಳುತ್ತಾರೆ. ಊರ ಜನರು, ತುಕಾರಾಮರು ಸಶರೀರವಾಗಿ ವೈಕುಂಠಕ್ಕೆ ಹೋದರು ಎಂದು ಭಕ್ತಿಯಿಂದ ತಲೆಬಾಗಿದರು.

ತುಕಾರಾಮರು ೧೬೫೦ರಲ್ಲಿ ಈ ಜಗತ್ತನ್ನು ಬಿಟ್ಟಿರಬೇಕು. ಆಗ ಅವರಿಗೆ ೪೨ವರ್ಷ ವಯಸ್ಸು.

ತುಕಾರಾಮರ ಒಂದು ಅಭಂಗ ಇದು:

ಕೃಷ್ಣ ಮಾಝೀ ಮಾತಾ ಕೃಷ್ಣ ಮಾಝಾ ಪಿತಾ
ತುಕಾಮ್ಹಣೇ ಮಾಝಾ ಶ್ರೀಕೃಷ್ಣ ವಿಸಾವಾ

(ಕೃಷ್ಣನೇ ನನ್ನ ತಾಯಿ, ಕೃಷ್ಣನೇ ನನ್ನ ತಂದೆ, ಕೃಷ್ಣನೇ ನನ್ ವಿಶ್ರಾಂತಿ-ಹೀಗೆನ್ನುತ್ತಾರೆ ತುಕಾ.)

ಇನ್ನೊಂದರ ಅರ್ಥ ಹೀಗೆ: ’ಇಂದು ವಿಠ್ಠಲನ ಪಾದಗಳನ್ನು ಕಂಡೆ. ಎಷ್ಟು ಪುಣ್ಯದ ಫಲವೋ! ಸಂತರು ನನ್ನನ್ನು ಕಾಪಾಡಿದರು. ಯಾವುದೋ ಲಾಭದ ವೇಳೆ ಇದು, ಮಂಗಳ ದಿನ ಎಷ್ಟು ಲಾಭವೋ: ಹೀಗೆಂದರು ತುಕಾ.’

ಎಲ್ಲ ಆಸೆ ಗೆದ್ದು ವಿಠ್ಠಲನಿಗೆ ಮುಡಿಪಾಗಿ ನಿರ್ಮಲ ಜೀವನ ನಡೆಸಿದ ಮಹಾಪುರುಷರು ತುಕಾರಾಮರು.