ಮೇಳ : ಗೊತ್ತಾಯಿತೇ ವಿಷಯ? ಪಟ್ಟಣಕೆ ಹೋಗಿದ್ದ
ತುಕ್ರ ಬಂದೇ ಬಿಟ್ಟ ತಿರುಗಿ!
ಫಳ ಫಳನೆ ಹೊಳಿತಾವೆ ಪ್ಯಾಂಟು ಶರ್ಟೂ ಹ್ಯಾಟು
ಅವನ ಮುಖ ಬಿಂಬಿಸಿದೆ ಬೂಟಿನಲ್ಲಿ!

ಯಾರ್ಯೋರ್ದೊ ಕೈ ಕುಲುಕಿ ಸ್ನೇಹ ಪಡೆದಿದ್ದಾನೆ.
ಲೋಕ ಕಂಡಿದ್ದಾನೆ ತುಂಬ ತುಂಬಾ!
ಗಲ್ಲಿಗೇರಿಸುವುದನು ಕಣ್ಣಾರೆ ಕಂಡು ಕೈ
ಯಾರೆ ಮುಟ್ಟಿದ್ದಾನೆ ಗಲ್ಲುಗಂಬ!

ಶಿವನ ಕಣ್ಣಿಗು ಕಾಣದಂತೆ ಕದ್ದಿದ್ದಾನೆ
ಇಂಗ್ರೇಜಿ ಪೇದೆಗೂ ಹುಚ್ಚು ಹಿಡಿಸಿ,
ನರಿಯಾದ ಇವನಿಗೂ ಸಿಂಹಪಾಲಿತ್ತಂತೆ
ಮೊನ್ನೆ ಟ್ರೇನಿನ ಲೂಟಿ ಸೂರೆಯಲ್ಲಿ!

ಗಾಂಧಿಗೂ ಗೊತ್ತಿರದ ಚಳುವಳಿಯ ಟ್ರಿಕ್ಕುಗಳ
ಆಹಾ ಬಣ್ಣಿಸುತಾನೆ ಬಣ್ಣ ಹಚ್ಚಿ,
ಕ್ರಾಂತಿ ಚಳುವಳಿ ಅಂತ ಏನೇನೋ ಹೇಳ್ತಾನೆ
ಇದ್ದರೂ ಇರಬಹುದು ಮಹಾಬೆರಿಕಿ!
(ಹೆಂಡದಂಗಡಿ. ಮಲ್ಲ, ಸಿಂಗ್ರ, ಒಗ್ಗ, ಕುಳ್ಳೀರ, ಕೆಂಚ ಇತ್ಯಾದಿ ಜನ ಕುಡಿಯುತ್ತಿದ್ದಾರೆ.)

ಸಿಂಗ್ರ : ಹೇನ್ರಪಾ. ತುಕ್ರ ಬೆಂಗಳೂರಿಂದ ಬಂದವನಂತೆ, ಯಾರ ಬಾಯೊಳಗೆಲ್ಲ ಹಾತನದೇ ಮಾತು, ಹಾತನದೇ ಕತೆ.

ಮಲ್ಲ : ಭಾರೀ ದಿಲ್ದಾರ ಆಗವನಪೊ. ವೊಳೆಯೋ ದಿರಸೇನು! ಜೇಬಲ್ಲಿ ಅಣದ ಚೀಲಯೇನು; ಹವನು ನಡೆದಾಡ್ತಿದ್ದರೆ ನೋಡಿಕೊಂಡು ಅಂಗೆ ನಿಂತಿರೋಣ ಹನ್ನಸುತ್ತೆ. ಪಟೇಲರಿಗೆ ಶ್ರೀಮಂತಿಕೆ ಅದೆ. ಹಿವನಂಥಾ ದಿಲ್‌ದಾರಿಕೆಯಿಲ್ಲ ಲಬುಡು.

ಕುಳ್ಳೀರ : ಫಾರಿನ್‌ ಲಂಗ ಬಾಡಿ ತಂದಾನಂತಪೋ, ಹದೆಂಥದೋ ರಾಣಿ ಸೋಪು ಬೂದಿಯಂಥಾ ಪೌಡರ್ ತಂದವನಂತೆ. ಎಂಗಸರಿಗೆ ಯಿಷ್ಟಾದರೆ ಸಾಲದಾ? ಹದನ್ನ ಮುಖಕ್ಕೆ ಬಳಿದುಕೊಂಡರೆ ತಾವೂ ಇಂಗ್ಲಿಷ್‌ ಲಡಾಸ್‌ ಥರ ಬಿಳಿಚಿಕೊಳ್ತೀವಿ ಅಂತ ಭ್ರಮೆ ಬಂದದೆ ಅವಕ್ಕೆ.

ಸಿಂಗ್ರ : ತಾರಾಮೇಷ್ಟ್ರು – ಹಾಕೇನೇ ತುಕ್ರನ ತಾವ ಓಗಿ, ಕೈ ಕಾಲು ಕಟ್ಟಿಕೊಂಡು, ಆ ಬೂದಿ ಡಬ್ಬ ಕೊಕಂಡಳಂತೆ! ಹಾವಾಗಿನಿಂದ ಪಟೇಲರೆಂಡ್ರು ತನಗೂ ಬೇಕಂತ ಒಂದೇ ಸಮ ಮನೇಲಿ ಚಂಡಿ ಯಿಡದವಳಂತೆ.

ಕೆಂಚ : ಗಿಡ್ಡನೆಂಡ್ತಿ ನೀಲಿ ಇಲ್ಲವಾ? ಹವಳು ತುಕ್ರನ್ನ ನಿಲ್ಲಿಸಿ-ತುಕ್ರಣ್ಣಾ ತುಕ್ರಣ್ಣಾ ಸೀಮೆ ಲಂಗ ಹಿದ್ದರೊಂದು ಕೊಟ್ಟಿರು, ಹದು ಕೊಡ್ತೇನೆ, ಹಿದು ಕೊಡ್ತೇನೆ- ಅಂತ ಗೋಗರಿತಿದ್ದಳು ಮಾರಾಯಾ. ಹದೇನು ಹೆಂಗಸರ ಮೇಲೆ ಮೋಡಿ ಮಾಡಿಬಿಟ್ಟಿದಾನೋ!

ಸಿಂಗ್ರ : ಅರೆ! ಹವನೇ ಬಂದಾ ನೋಢು!…………
(ತುಕ್ರ ಬರುತ್ತಾನೆ. ಪ್ಯಾಂಟು ಶರ್ಟು ಬೂಟು ಹಾಕಿಕೊಂಡು ತುಂಬ ಭಿನ್ನವಾಗಿದ್ದಾನೆ. ಎಲ್ಲರೂ ಸ್ತಬ್ಧರಾಗಿ ಅವನನ್ನೇ ಭಯ ಮತ್ತು ಗೌರವಗಳಿಂದ ನೋಡುತ್ತಾರೆ)

ತುಕ್ರ : ಓ ಮಲ್ಲಣ್ಣಾ, ಬೇಕಾದರೆ ಎರಡು ದುಡ್ಡು ಜಾಸ್ತಿ ತಗೋ, ಒಳ್ಳೆ ಸೇಂದಿ ಕೊಡು . ಸೇಂದಿ ಅಂತ ಹುಳಿಮಜ್ಜಿಗೆ ಕೊಡೋದನ್ನ ಇನ್ನಾದರೂ ನಿಲ್ಲಿಸಯ್ಯ. ತಗೊ ಒಂದಾಣೆ. ನನಗೊಂದು ಬಾಟ್ಲಿ ಕೊಡು. ಸಿಂಗ್ರ ಅವನಲ್ಲಾ, ಅವನಿಗೊಂದು ಕೊಡು. ಯಾಕೋ ಸಿಂಗ್ರಾ ಅಂಗ್‌ ನೋಡ್ತೀಯಾ? ಗುರುತು ಸಿಗಲಿಲ್ಲವ?

ಸಿಂಗ್ರ : ಹೆಹೆಹೆ ಹರಾಮಿದ್ದೀರಾ ತುಕ್ರಣ್ಣ?

ತುಕ್ರ : ಆ ದಿನ ನೀನು ಗೋರಿ ಗೋಡಿಕೊಟ್ಟೆಯಲ್ಲ, ಕೂಲಿ ಕೊಟ್ಟಿರಲಿಲ್ಲ, ನಲೆಪಿದೆಯೇನಯ್ಯಾ?

ಸಿಂಗ್ರ : ಹಯ್ಯೋ ಹದೇನು ಮಹಾ ಕೆಲಸ ಬುಡಣ್ಣ.

ತುಕ್ರ : ಬುಡಣ್ಣಾ ಅಂದರೆ ಬುಟ್ಟೇ ಬುಡೋದಾ? ಕೆಲಸದ ಬೆಲೆ ಸರಿಯಾಗಿ ಗೊತ್ತಿರೋನಯ್ಯಾ ನಾನು. ಅದಕ್ಕೇ ನಿನಗೆ ಕುಡಿಯೋದಕ್ಕೆ ಕೊಟ್ಟೆ. ಇಲ್ಲದಿದ್ದರೆ ಪಟೇಲ ಸಾನುಬೋಗರಿಗೂ ನನಗೂ ಏನು ಎತ್ವಾಸವುಳೀತು ಹೇಳು?

ಮಲ್ಲ : ಎಷ್ಟು ಹೊತ್ತು ಗುರುತು ಸಿಗದೆ ಒದ್ದಾಡಿದೆ. ಎಷ್ಟು ಬದಲಾಗಿದ್ದೀಯ ತುಕ್ರ? ನಮ್ಮೂರು ಬಿಟ್ಟು ಎಲ್ಲಿಗೆ ಹೋಗಿದ್ದೆ? ಯಾವೂರಲ್ಲಿದ್ದೆ? ಅಲ್ಲಿ ಜನ ಎಂಗೆ ಏಳಣ್ಣಾ……..

ತುಕ್ರ : ಅಯ್ಯೋ ಬುಡಪ್ಪ, ನನ್ನ ಸಾಹಸ ಕೇಳಿದರೆ ನೀನು ತೆರೆದ ಬಾಯಿ ಮೂರು ದಿನ ಮುಚ್ಚೋದೇ ಇಲ್ಲ. ಬ್ಯಾಂಗಲೂರ್, ಬೆಳಗಾಂ, ಪೂಣ, ಬಾಂಬೆ, ಎಷ್ಟೆಷ್ಟೋ ಕಡೆ ಪ್ರವಾಸ ಮಾಡಿ ಬಂದೆ. ಹೋದಹೋದಲ್ಲೆಲ್ಲ ಜನ ನನ್ನ ತಬ್ಬಿಕೊಂಡು -“ತುಕ್ರಣ್ಣಾ

ತುಕ್ರಣ್ಣಾ ನೀನಿಲ್ಲೇ ನಮ್ಮ ಜೊತೆಗಿದ್ದು ಬುಡಣ್ಣ ನೀನು ನಮ್ಮಂಗೆ ದುಡೀಬೇಡ, ದುಃಖ ಪಡಬೇಡ, ನಮ್ಮ ಜೊತೆಗಿದ್ದರೆ ಸಾಕಣ್ಣಭಾ” – ಅಂತಾರೆ!

ಕುಳ್ಳೀರ : ಮತ್ತೆ ಯಾಕೆ ಬಂದೆ?

ತುಕ್ರ : ‘ಏನಪ್ಪಾ ಮಾಡಲಿ? ಈ ಹುಟ್ಟೂರಿನ ಚರಂಡಿಯಿದೆಯಲ್ಲಾ – ಇದರಂತ ಪರಿಮಕಳ ಇನ್ಯಾವ ಚರಂಡಿಯಲ್ಲೂ ಇಲ್ಲ! ನಿಜ ಹೇಳ್ತೀನಪಾ- ಈ ಊರಿನ ಚರಂಡಿಯ ಈ ಪರಿಮಳಕ್ಕಾಗೇ ಬಂದೆ ಕಣಯ್ಯಾ.

ಮಲ್ಲ : ಎಲ್ಲ ಪುಟ್‌ ಪೂರಾ ಮೊದಲಿಂದ ಕೊನೇತನಕ ಹಂದರೆ – ಈ ವೂರು ಬಿಟ್ಟಾಗಿಂದ ಪುನಾ ಯಿಲ್ಲಿ ಪ್ರತ್ಯಕ್ಷವಾದೆಯಲ್ಲ ಹಲ್ಲೀತನಕ ಏಳಣ್ಣಾ.

ತುಕ್ರ : ಈ ಊರು ಬಿಟ್ಟೆನಲ್ಲ : ಸೀದಾ ಬೆಂಗಳೂರಿಗೆ ಹೋದೆ. ಸ್ಟೇಶನ್ನಲ್ಲಿಳಿದು ಇನ್ನೆಲ್ಲಿಗಪ್ಪಾ ಓಗಾದು? ಅಂತ ಯೇಚ್ನೆ ಮಾಡ್ತಿರಬೇಕಾದರೆ-ಬಂದಾ ನೋಡು ಒಬ್ಬ ಇಂಗ್ರೇಜಿ ಆಸಾಮಿ-ಟಪ್‌ ಟಪ್‌ ಬೂಟ್‌ ಸಪ್ಪಳ ಮಾಡಿಕೊಂಡು! ಇವನ್ಯಾರಪ್ಪ? ಅಂತ ಪಕ್ಕದವನ್ನ ಕೇಳಿದೆ. ನಮ್ಮ ಪ್ರಾಂತ್ಯದ ಕಲೆಕ್ಟರು-ಅಂದ! ಅದೆಲ್ಲಿಂದ ವಿಚಾರ ಹೊಳೀತೋ ನನ್ಮಗನಿಗೆ-ಅಂದರೆ ನನಗೆ-ಚಕ್ಕಂತ ಅವನ ಮುಂದೆ ಹೋಗಿ, ಟಪ್ಪಂತ ಕಾಲು ಕೂಡಿಸಿ, ಹೋಹುಪ್ಪಂತ ಒಂದು ಸಲಾಮು ಹೊಡೆದೆ ನೋಡು-ಗಪ್ಪಂತ ನಿಂತು ನನ್ನ ಕಡೆ ನೋಡಿದ.

ಗಾಬರಿ ಆದೆ!
ಮೀಸೆ ನಿಗರಿಸಿ ನೋಡಿದ.
ನನ್ನ ಮೈ ಬೆವರೊಡೀತು.

ಬಾರೋ ಇಲ್ಲಿ-ಅಂದ.
ಹೋದೆ.
“ಇಂದಿನಿಂದ ನೀನು ನಮ್ಮ ಮನೆ ಕೆಲಸಕ್ಕಿರಬೇಕು, ಇಲ್ಲಾಂದರೆ ನಿನ್ನ ಮೂಳೆ ಮುರೀತೀನಿ”-ಅಂದನಪ!

ಸದ್ಯ ಅಂದುಕೊಂಡು ಕೆಲಸಕ್ಕೆ ಸೇರಿಕೊಂಡರೆ ಬಂಗಲೆಯಲ್ಲಿ ಏನು ಕೇಳ್ತೀಯ-ಕಲೆಕ್ಟರನಿಗೊಬ್ಬಳು ಲಡಾಸು. ಅವಳಿಗೆ ಕೈಗೊಂದಾಳು, ಕಾಲಿಗೊಂದಾಳು. ಲಂಗ ಹಾಕೋದಕ್ಕೊಬ್ಬಳು ಬಿಚ್ಚೋದಕ್ಕೊಬ್ಬಳು. ಕೋಣಿಗೊಬ್ಬ ಕಸಗುಡಿಸೋ ಆಳು. ಇನ್ನು ಮನೇಲಂತೂ ಉಪ್ಪಿಗೊಂದಾಳು, ಮೆಣಸಿನಗೊಂದಾಳು-ಇವರೆಲ್ಲರ ಮೇಲೆ ನಾನು ಮೇಸ್ತ್ರಿ : ಉಸ್ತುವಾರಿ ಕೆಲಸ. ಯಾರ್ಯಾರೋ ಬರೋರು ಅವರ ಮನೆಗೆ, ಕೆಂಪು ಮೂತಿಯವರು. ಬಂದವರೆಲ್ಲಾ ಸಾಯೇಬರಿಗೆ ನಮಸ್ಕಾರ ಮಾಡಿದ ಮೇಲೆ ನನಗೂ ನಮಸ್ಕಾರ ಮಾಡೋರಪ್ಪ! ಇಂಗರೇಜಿಗಳಂತೂ ಬಂದು ಮೊದಲು ನನ್ನ ಕೈನೇ ಕುಲುಕೋರಿ ಅಂದರೆ! ನಮ್ಮ ಯಜಮಾನಿ, ನಮ್ಮ ಸಾಹೇಬರೆಂಡ್ರು-ಎಂಗಿದ್ದಳು ಅಂತೀಯ! ತಾರಾ ಮೇಷ್ಟ್ರಿಲ್ಲವೆ?-ಅದೇ ನನ್ನ ಮಗ ಪಟೇಲನ ಕೀಪು-ಅವಳು ನಮ್ಮ ಲಡಾಸನ ಅಂಗಾಲಿಗೂ ಸಮ ಅಲ್ಲಪೊ. ಆ ಲಡಾಸು ಗಾಜಿನ ಗೊಂಬೆ ಹಂಗೆ ಕಣ್ಲಾ! ಆಕೆ ಕುಡಿದ ನೀರು ಗಂಟಲಲ್ಲಿಳಿಯ ಓದು ಕೂಡ ಕಾಣತಿದ್ದಿತಪ೧

ಸಿಂಗ್ರ : ಆಕೇನೂ ನಿನ್ನ ಕೈ ಹಿಡಿದು ಕುಲುಕಿದಳ?

ತುಕ್ರ : ಮತ್ತೆ? ಒಂದು ಬಾರಿ ನನ್ನ ಕೈ ಹಿಡಕಂಡು ಕುಣಿದೂ ಬಿಟ್ಟಳು ಕಣ್ಲ೧

ಸಿಂಗ್ರ : ಹೌದಾ!!

ತುಕ್ರ : ಹೂ ಕಣ್ಲಾ
ಸಿಂಗ್ರ : ಲಡಾಸು ನಿನ್ನ ಇಡಕೊಂಡು ಕುಣದ್ಲಾ?ತುಕ್ರ : ಸತ್ತಗಿತ್ತೀಯೋ ಮಗನೆ. ಇವೆಲ್ಲ ಚಿಲ್ಲರೆ ಸಂಗತಿಗಳು. ದೊಡ್ಡೋವಿನ್ನೂ ಇದ್ದಾವೆ. ಆ ಪಟೇಲ ಸಾನುಬೋಗರಿಗೆ ಹೇಳೋಣಾಂತ ಇಟ್ಟೀನಿ.

ಮಲ್ಲ : ಕಲೆಕ್ಟರ ಮನೆ ಮೇಸ್ತ್ರಿ! -ಸುದೈವ ಅಂದರೆ ಇಂಗಿರಬೇಕಪ!

ತುಕ್ರ : ಅದೆಂಥಾ ಸುದೈವವೊ! ಆ ಕಲಕ್ಟರ್ ನಮ್ಮ ಜನರನ್ನ ಸಾಯಿಸೋದನ್ನ ನೋಡಿದ್ದರೆ ನಿನಗೇ ಗೊತ್ತಾಗಿತ್ತು-ಸುದೈವ ಅಂದರೇನು ಅಂತ.
(ಒಗ್ಗ ತನ್ನ ಪಾಡಿಗೆ ತಾನು ಕುಡಿಯುತ್ತ ನಿರ್ಲಕ್ಷದಿಂದ ಕುಳಿತಿದ್ದಾನೆ. ಅವನು ತನ್ನ ಮಾತುಗಳನ್ನ ನಂಬುತ್ತಿಲ್ಲ ಎಂದು ತುಕ್ರನಿಗೆ ಗೊತ್ತಾಗಿದೆ)

ಕುಳ್ಳೀರ : ಅದೇ ನೇಣು ಹಾಕಿ ಸಾಯಿಸೋದಲ್ಲವ?

ತುಕ್ರ : (ಅವನ ಅಜ್ಞಾನಕ್ಕೆ ನಗುತ್ತ) ಹ್ಹ ಹ್ಹ ಹ್ಹ ನೀನು ಹೇಳಯ್ಯಾ ಒಗ್ಗ.
(ಒಗ್ಗ ಈಗಲೂ ಅದೇ ನಿರ್ಲಕ್ಷದಿಂದ ಇರುವನು. ತುಕ್ರ ಈಗ ಹೆಚ್ಚು ಅಭಿನಯಿಸುವನು.)

ತುಕ್ರ : (ಜೋರಿನಿಂದ) ಹೇಳಯ್ಯಾ ಗೊತ್ತಿದ್ದರೆ….. (ಒಗ್ಗ ಸುಮ್ಮನಿರುವನು. ತುಸು ಹೊತ್ತು ಸುಮ್ಮನಿದ್ದು)  ನಾ ಹೇಳಲಾ? ಚಚ್ಚೌಕ ಆಕಾರದ ಮರದ ಮಂಟಪ, ನೀರು ಸೇದೋ ಬಾರಿ ಯಾತ ಇರುತ್ತಲ್ಲ-? ಹಂಗೆ ಸೇದೋ ಹಗ್ಗ ಇಳಿಬಿಡ್ತೀವಲ್ಲ-ಅಲ್ಲೂ ಒಂದು ಅಂಗೇ ಭಾರವಾದ ಕೊಡಲಿ ಅಂಥಾದ್ದು-ಇಳಿಬಿಟ್ಟಿರ್ತಾರೆ. ಅದೇ ಗಲ್ಲುಗಂಬ, ಊರ ಹೊರಗೆ ಗೋರಸ್ತಾನದಲ್ಲಿ ಇರ್ತದೆ. ಅಲ್ಲಿ ಹದ್ದು ನರಿ ಕಾಗೆ ಗೂಗೆ ಕಾದಕೊಂಡು ಕೂತಿರುತ್ವೆ. ಗಲ್ಲಿಗೆ ಹಾಕಬೇಕಾದವನನ್ನ ಕೈ ಕಾಲು ಕಟ್ಟಿ ಗಾಡೀಲಿ ನಿಲ್ಲಿಸಿಕೊಂಬರ್ತಾರೆ. ಅಲ್ಲಿಗೆ ಯಾರನ್ನೂ ಬಿಡೋದಿಲ್ಲ. ಕಲೆಕ್ಟರ್ ಸಾಹೇಬರು ಮಾತ್ರ ಹೋಗೋದು. ಆದರೆ ಸಾಹೇಬರು ನನ್ನನ್ನ ಮಾತ್ರ ಬಿಡ್ತಿದ್ದರು. ಗಲ್ಲಿಗೆ ಹಾಕಬೇಕಾದವನನ್ನು ಕರಕೊಂಬಂದು ಮಂಟಪದ ಚೌಕ ಇರುತ್ತಲ್ಲ, ಅದರಲ್ಲಿ ನಿಲ್ಲಿಸ್ತಾರೆ. ಹಿಂದಿಬ್ಬರು ಪೋಲೀಸರು, ಮುಂದಿಬ್ಬರು, ಯಮದೈತ್ಯನಂಥವರು. ಅವರ ಕಣ್ಣು, ಕೋರೇ ಹಲ್ಲು,-ನೋಡಿದರೆ ನಿಮ್ಮ ಚಡ್ಡಿ ಒದ್ದೆ ಆಗ್ತದೆ. ಆ ಮೀಸೆ ಅಬ್ಬ!-ನಮ್ಮ ಒಗ್ಗನ ಕಲ್ಲೀ ಮೀಸೆ ಆ ಮೀಸೆ ಮುಂದೆ ಶಪ್ಪ ಅಷ್ಟೆ. (ಆಳು ಬರುವನು)

ಆಳು : ತುಕ್ರ ಪಟೇಲರು ಕೂಗತಾರೆ.

ತುಕ್ರ : ಯಾಕಂತೆ?

ಆಳು : ಸೀಮೆ ಸಾಮಾನು ಬೇಕಂತೆ. ಕೈ ತುಂಬ ಅಣ ಕೊಡ್ತಾರಂತೆ.

ತುಕ್ರ : ಬಿಡುವಾದಾಗ ಬರ್ತೀನಂತ ಹೇಳು.
(ಆಳು ಹೋಗುವನು)

ಇದು ಗಲ್ಲುಗಂಬ. ಇವನನ್ನ (ಒಗ್ಗನನ್ನು ತೋರಿಸಿ) ಗಲ್ಲಿಗೆ ಹಾಕಬೇಕಂತಿಟ್ಟುಕೊ. ಕತ್ತಿನ ಮ್ಯಾಲೆ ಭಾರವಾದ ಕೊಡಲಿ ತೂಗ್ತ ಅದೆ, ಹಿಂದಿನಿಬ್ಬರು ದೈತ್ಯರು ಆ ಕೊಡಲಿ ಬಿಡೋದಕ್ಕೆ ಸಿದ್ಧವಾಗಿದಾರೆ. (ಮೊದಮೊದಲು ಆತಂಕ ಪಡುತ್ತಿದ್ದ ಒಗ್ಗ ಬರಬರುತ್ತ ಗಾಬರಿಯಾಗತೊಡಗುವನು.) ಮುಂದಿನವರು-ಅವರ ಕೈಯಲ್ಲೀಗ ಕರಿಬಟ್ಟೆ ಇದೆ. ಅದ್ಯಾಕೆ ಅಂತ ಆಮ್ಯಾಲೆ ತಿಳೀತದೆ-ಅವರು ಕೈಯಲ್ಲೀಗ ಕರಿಬಟ್ಟೆ ಇದೆ. ಅದ್ಯಾಕೆ ಅಂತ ಆಮ್ಯಾಲೆ ತಿಳೀತದೆ-ಅವರು ಕಣ್ಣು ಕಿಸಿದು, ಕುಣಿಯೋ ಮೀಸೆಯಲ್ಲಿ ಕೋರೇ ಹಲ್ಲು ತೂರಿಸಿ ಕೇಳ್ತಾರೆ (ಒಗ್ಗನಿಗೆ) : “ಲೇ ಸುವ್ವರ್ ನನಮಗನೇ, ನಿನ್ನ ಕೊನೇ ಆಸೆ ಏನು?” (ನಿಶ್ಯಬ್ದ) ಕೆಲವರ ಉ ಹೆದರಿ ಏನೂ ಕೇಳೋದಿಲ್ಲ. ಕೆಲವರು ಧೈರ್ಯಸ್ಥರು “ಅದು ಬೇಕು ಇದು ಬೇಕು” ಅಂತ ಕೇಳ್ತಾರೆ. ಒಬ್ಬ ಸೇಂದಿ ತರಿಸಿ ಕುಡಿದ. ಯಮ ಆಗಲೇ ಅವನ ರೆಪ್ಪೆ ಮೇಲೆ ಬೆರಳಾಡಿಸಿದ್ದ. ದೈತ್ಯರು ಅವನ ಮೇಲೆ ಕರಿಬಟ್ಟೆ ಹಾಕಿದರು. ಇನ್ನು ಮೂರೆಣಿಸಬೇಕು. ಸಾಹೇಬರು ಎಣಿಸೋದಕ್ಕೆ ನನಗೇ ಹೇಳಿದರಪ್ಪ! ಕೊಡಲಿ ಬಿಡೋದಕ್ಕೆ ಹಿಂದಿನ ದೈತ್ಯರು ಸಿದ್ಧವಾಗಿದ್ದಾರೆ. ಎಣಿಸಬೇಕೀಗ- ಒಂದು….ಸದ್ದು ಮಾಡಬೇಡಿ. ಒಂದು-ಎರಡೂ ಮೂರು!!

(ಎಂದು ವಿಚಿತ್ರ ಮತ್ತು ಭಯಂಕರ ಸದ್ದು ಮಾಡಿ ಅದು ಒಗ್ಗನ ಮೇಲೇ ಬಿದ್ದಂತೆ ಅಭಿನಯಿಸುತ್ತಾನೆ. ತನ್ನ ಮೇಲೇ ಬಿದ್ದ ಹಾಗೆ ಒಗ್ಗ ಕಿಟಾರನೇ ಕಿರುಚುತ್ತಾನೆ. ಕೊನೆಗೆ ತಾನು ಕಿರಿಚಿದ್ದು ಸುಮ್ಮನೆ ಹೆದರಿ ಅಂತ ಗೊತ್ತಾಗಿ ನಾಚಿಕೆಯಾಗಿ, ಅದನ್ನು ತೋರಗೊಡದೆ ಹೊರಕ್ಕೆ ಹೋಗುತ್ತಾನೆ, ಯಾರೂ ಮಾತಾಡುತ್ತಿಲ್ಲ)

ತುಕ್ರ : ಹ ಹ ಹ ಹ!

ಮಲ್ಲ : ನೀನೇ-ನೀವೇ ಹೆಣಸಿದಿರಾ ತುಕ್ರಣ್ಣಾ?

ತುಕ್ರ : ದಿನಾ ನಾನೇ ಎಣಿಸಬೇಕಿತ್ತಯ್ಯಾ.

ಸಿಂಗ್ರ : ಹದು ಬಿದ್ದ ಮ್ಯಾಲೇನಾಯ್ತು?

ತುಕ್ರ : ಬಿದ್ದ ಮ್ಯಾಲೆಂಥದೋ? ರುಂಡ ಒಂದು ಕಡೆ ಬಿದ್ದು ಕರೀಚೀಲದಲ್ಲಿ ತುಸು ಹೊತ್ತು ಕುಣೀತದೆ. ಮುಂಡ ಒಂದೆರಡು ಬಾರಿ ನೆಗೆದಾಡ್ತದೆ, ಅಷ್ಟೆ.

ಮಲ್ಲ : ಇಂಥಾ ಭರ್ಜರಿ ಕೆಲಸ ಯಾಕಣ್ಣ ಬಿಟ್ಟೆ?

ತುಕ್ರ : ಅದು ಕಣ್ಲ ಸ್ವಾರಸ್ಯ! ಇಂಗೆ ಗಲ್ಲಿಗೇರಿಸುತ್ತಿದ್ದೆನಲ್ಲ-ಬೆಳಿಗ್ಗೆ ಸತ್ತವರು-ಸಾಯಂಕಾಲ ನೋಡು ನೋಡ್ತಿರೋ ಹಾಗೆ ಪ್ರೇತವಾಗೋರು! ಒಂದು ದಿನ ನೋಡ್ತೇನೆ : ನಾನು ಸಾಯಿಸಿದವರೆಲ್ಲ ಪ್ರೇತಗಳಾಗಿ ಹುಲ್ಲಿನ ಮ್ಯಾಲೆ ಕುಣೀತಿದಾರೆ! ಹುಲ್ಲು  ನಾಶವಾಗಿ ಹೋಗ್ತಿದೆ! ಕಿರುಚುತ್ತಿದೆ! ಆದರೂ ಕುಣೀತಾ ಇದ್ದಾರೆ. ಓಡೋಣ ಅಂದರೆ ಅದಕ್ಕೂ ಬಿಡ್ತಾ ಇಲ್ಲ! ಕೊನೆಗೊಂದು ಪ್ರೇತ ಮುಂದೆ ಬಂದು ಹೇಳಿತು : “ಅಲ್ಲಯ್ಯ ತುಕ್ರ, ನೀನು ಗಲ್ಲಿಗೇರಿಸೋದು ಯಾರನ್ನ? ಕಂತ್ರೀ ಕಳ್ಳರು, ಸುಳ್ಳರು ಅಲ್ಲವೇನಯ್ಯಾ?”

“ಹೌದು”

“ನಾವು ಕದೀತೇವೆ, ದರೋಡೆ ಮಾಡ್ತೇವೆ – ಅನ್ನೋಣ. ಏನು ಮಾಡಿದರೂ ನಮ್ಮ ದೇಶದಲ್ಲಿ ಮಾಡ್ತಿವಪ್ಪ. ನಾವೇನಾದರೂ ನಿನ್ನ ಸಾಹೇಬನಾಸ್ತಿ ದೋಚಿದಿವ? ನಮ್ಮ ಅಣ್ಣತಮ್ಮರ ಮನೇಲಿ ನಾವು ಕದ್ದರೆ ಗಲ್ಲಿಗೇರಿಸೋದಕ್ಕೆ ನಿನ್ನ ಸಾಹೇಬ ಯಾರು?” ಪ್ರೇತ – ಹೀಗೆ ಹೇಳಿದ್ದೇ ಕೊನೆ. ಅಂದಿನಿಂದ ನಮ್ಮ ಕಲೆಕ್ಟರ್ ಸಾಹೇಬನ್ನ ಕಂಡರಾಗ್ತಿರಲಿಲ್ಲ ನನಗೆ! ಆಳುಗಳಿಗೆ ಅವನ ಬಗ್ಗೆ ಚಾಡಿ ಹೇಳು ಆನಂದ ಪಡ್ತಿದ್ದೆ. ನಗುನಗುತ್ತ ಅವನನ್ನು ಕನ್ನಡದಲ್ಲಿ ಹೀನಾ ಮಾನ ಬೈದಾಗ ಅವನೂ ಅವನ ಹೆಂಡ್ತಿ ಇಬ್ಬರೂ ನಗೋರು. ಒಂದು ಸಾರಿ “ಸ್ವಾಮೀ. ನಿನ್ನೆ ರಾತ್ರಿ ನಿಮ್ಮೆಂಡ್ರು ನನ್ನ ತಾವ ಬಂದು ಹೋದ್ರು” ಅಂದೆ. ಇಬ್ಬರೂ ಬಿದ್ದು ಬಿದ್ದು ನಕ್ಕರಪ! ಆಕೆ ಎಸ್ಸೆಸ್ಸೆಂತ ನಕ್ಕಳು. ಅವನು ಗುಡ್‌ ಗುಡ್ಡಂತ ನಕ್ಕ. ಒಂದು ದಿನ ನಾನವನ ಬಂದೂಕಿನ ಲಳಿಗೆಯಲ್ಲಿ ಉಚ್ಚೆ ಹುಯ್ದಾಗ ಮರಣಾನಂದವಾಯಿತಯ್ಯಾ ನನಗೆ! ಅವನಿಗೆ ಅನುಮಾನ ಬಂತೋ ಏನೊ ಆ ದಿನ ನನ್ನನ್ನ ನಾಯೀ ಹಾಗೇ ಎರಡು ಬಾರಿ ದುರುಗುಟ್ಟಿ ನೋಡಿದ. ಅಂದೇ ತೀರ್ಮಾನಿಸಿ ಬಿಟ್ಟೆ-ಈ ಮನೆ ಋಣ ತೀರಿತು ಅಂತ. ಕೂಡಲೇ ಒಂದು ಒಳ್ಳೆ ಮುಹೂರ್ತ ನೋಡಿ ಕಾಲಿಗೆ ಬುದ್ದಿ ಹೇಳಿದೆ.
(ಆಳು ಬರುವನು)

ಆಳು : ತುಕ್ರಣ್ಣಾ ಪಟೇಲರು ಕೂಗ್ತಾರೆ : ಈಗಲೇ ಬರಬೇಕಂತೆ.

ಮಲ್ಲ : ಅದ್ಯಾಕೋ ಕೂಗ್ತಾರಂತೆ. ದೊಡ್ಡಮನಸ್ಸು ಮಾಡಿ ಹೋಗಿ ಬಾರಣ್ಣಾ.

ತುಕ್ರ : ನೀನು ಹೇಳ್ತೀಯಾಂತ ಹೋಗಿಬರ್ತೀನಿ (ಆಳಿಗೆ) ನೀನು ಮುಂದೆ ಹೋಗಿರು, ಬರ್ತೀದೇನೆ ಅಂತ ಹೇಳು.
(ಆಳಲು ಹೋಗುವನು. ಸಿಂಗ್ರನ ಕೈ ಹಿಡಿದು ಒಂದು ಬದಿಗೆ ಕರೆದೊಯ್ದು ಯಾರಿಗೂ ಕೇಳಿಸದಂತೆ ಮಾತನಾಡಿಸುವನು)

ತುಕ್ರ : ಏ ಸಿಂಗ್ರ ನನ್ನ ಮಗನೆ, ಪಟೇಲ ಕಂಡಾಗೆಲ್ಲ ಹಸ್ತ ಹೊಸೆದು ಡೊಗ್ಗು ಸಲಾಮು ಹೊಡೀತಿಯಲ್ಲ. ನಿನಗೇನೂ ಕೊಡ್ತಾನವನು?

ಸಿಂಗ್ರ : ಹವನೇನು ಕೊಡ್ತಾನೆ? ಒಂದು ಬಿಲ್ಲಿ ಕೊಟ್ಟು ಯೆಂಟು ದಿನ ಕೆಲಸ ತಗೀತಾನೆ.

ತುಕ್ರ : ನೋಡೋ, ನಿನಗೆ ವಾರಕ್ಕೊಂದು ಬಿಲ್ಲಿ ಕೂಲಿ. ನನ್ನಲ್ಲಿ ಕೆಲಸಕ್ಕಿರ್ತೀಯಾ?

ಸಿಂಗ್ರ : ಕೆಲಸ ಏನು?

ತುಕ್ರ : ಏನೂ ಇಲ್ಲ. ಆ ಪಟೇಲ ನನ್ನ ಅಕ್ಕಪಕ್ಕ ಇದ್ದಾಗ “ಅಡ್ಡ ಬಿದ್ದೆ ತುಕ್ರಣ್ಣಾ” ಅಂತ ನನಗೊಂದು ಸಲಾಮು ಮಾಡಬೇಕು, ಅಷ್ಟೆ.

ಸಿಂಗ್ರ : ನಿಜವಾಗ್ಲೂ ಇಷ್ಟೇನಾ?

ತುಕ್ರ : ಅಷ್ಟೇ ಅಲ್ಲ, ಆ ಪಟೇಲನಿಗೆ ನಮಸ್ಕಾರ ಮಾಡಕೂಡದು.

ಸಿಂಗ್ರ : ಇಷ್ಟೇನಾ?

ತುಕ್ರ : ಇಷ್ಟೇ ಕಣಪ್ಪ. ತಗೋ ಒಂದು ವಾರದ ಕೂಲಿ. ನಾನೀಗ ಅವನ ಮನೆ ಹತ್ತಿರ ಹೋಗ್ತೀನಿ. ನನಗಿಂತ ಮುಂಚೆ ನೀನಲ್ಲಿ ಇರಬೇಕು.

ಸಿಂಗ್ರ : ಆಯ್ತು ಬುಡಣ್ಣಾ.
(ದುಡ್ಡು ತಗೊಂಡುಬರ್ತೀನಣ್ಣಾಎಂದೊಂದು ಡೊಗ್ಗು ಸಲಾಮು ಹೊಡೆದು ಮುಂದೆ ಹೋಗುತ್ತಾನೆ. ಆಮೇಲೆ ತುಕ್ರ ಹೊರಡುತ್ತಾನೆ)